Tag: australia

  • ಮಾನ್ಸೂನ್ ಬಳಿಕ ಭಾರತದಲ್ಲಿ ಐಪಿಎಲ್: ಬಿಸಿಸಿಐ ಸಿಇಒ

    ಮಾನ್ಸೂನ್ ಬಳಿಕ ಭಾರತದಲ್ಲಿ ಐಪಿಎಲ್: ಬಿಸಿಸಿಐ ಸಿಇಒ

    ನವದೆಹಲಿ: ಮಾನ್ಸೂನ್ ಬಳಿಕ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಆವೃತ್ತಿ ಆಯೋಜಿಸುವ ಸಾಧ್ಯತೆ ಇದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿಇಒ ರಾಹುಲ್ ಜೋಹ್ರಿ ಹೇಳಿದ್ದಾರೆ.

    ವಿಶ್ವ ಕ್ರಿಕೆಟಿನ ಅತ್ಯುತ್ತಮ ಆಟಗಾರರು ಐಪಿಎಲ್ ಆಡುತ್ತಾರೆ. ಈ ಲೀಗ್ ಅಭಿಮಾನಿಗಳನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಣಯದ ಮೇಲೆ ನಮ್ಮ ನಿರ್ಧಾರ ತೀರ್ಮಾನವಾಗುತ್ತದೆ. ಕ್ರಮಬದ್ಧ ವಿಧಾನದಲ್ಲಿ ಲೀಗ್ ಆಯೋಜಿಸುವ ಅಗತ್ಯ ದೇಶದಲ್ಲಿ ನಿರ್ಮಾಣವಾಗಿದೆ. ಲಾಕ್‍ಡೌನ್ ಮುಗಿಯುತ್ತಿದಂತೆ ಮಾನ್ಸೂನ್ ಆರಂಭವಾಗುತ್ತದೆ. ಆ ಬಳಿಕವೇ ಐಪಿಎಲ್ ಕುರಿತು ಯೋಚಿಸಬೇಕಿದೆ. ಪ್ರೇಕ್ಷಕರಿಲ್ಲದೇ ಐಪಿಎಲ್ ನಿರ್ವಹಿಸುವುದರಿಂದ ಉಂಟಾಗುವ ನಷ್ಟ ಕಡಿಮೆ ಎಂದು ಮಾಧ್ಯಮಗಳೊಂದಿಗೆ ಜೋಹ್ರಿ ಹೇಳಿದ್ದಾರೆ.

    ಮಾರ್ಚ್ 29ರಂದು ಪ್ರಾರಂಭವಾಬೇಕಿದ್ದ ಐಪಿಎಲ್ 2020 ಆವೃತ್ತಿ ಕೊರೊನಾ ಕಾರಣದಿಂದ ಮುಂದೂಡಲಾಗಿತ್ತು. ಐಪಿಎಲ್ ಆವೃತ್ತಿ ಆಯೋಜಿಸಲು ಕನಿಷ್ಠ 2 ತಿಂಗಳ ಅವಧಿ ಅಗತ್ಯವಿದ್ದು, ದೇಶದಲ್ಲಿ ವಿಧಿಸಲಾಗಿರುವ ಲಾಕ್‍ಡೌನ್ ಮೇ 31ಕ್ಕೆ ಮುಕ್ತಾಯವಾಗಲಿದೆ. ಆ ಬಳಿಕ ಮತ್ತೆ ಲಾಕ್‍ಡೌನ್ ಅವಧಿ ಹೆಚ್ಚಿಸಲಾಗುತ್ತಾ? ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಲಭಿಸಿಲ್ಲ. ಇತ್ತ ಭಾರತದಲ್ಲಿ ಜೂನ್‍ನಿಂದಲೇ ಮಳೆ ಆರಂಭವಾಗುವ ಸೂಚನೆ ಲಭಿಸುತ್ತಿದ್ದು, ಸೆಪ್ಟೆಂಬರ್ ವರೆಗೂ ಮಳೆ ಬೀಳುವ ಸಾಧ್ಯತೆ ಇದೆ. ಪರಿಣಾಮ ಅಕ್ಟೋಬರ್-ನವೆಂಬರ್ ನಡುವಿನ ಅವಧಿಯಲ್ಲಿ ಮಾತ್ರ ಐಪಿಎಲ್ 2020ರ ಆವೃತ್ತಿ ನಿರ್ವಹಿಸಲು ಅವಕಾಶವಿದೆ. ಇದೇ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 15ರ ವರೆಗೂ ಟಿ20 ವಿಶ್ವಕಪ್ ನಡೆಯಲಿದೆ. ಆದ್ದರಿಂದ ಟಿ20 ವಿಶ್ವಕಪ್ ಮುಂದೂಡಿದರೆ ಮಾತ್ರ ಐಪಿಎಲ್ ನಿರ್ವಹಿಸುವ ಅವಕಾಶವಿದೆ. ಮೇ28ಕ್ಕೆ ಟಿ20 ವಿಶ್ವಕಪ್ ಆಯೋಜಿಸುವ ಕುರಿತು ಐಸಿಸಿ ಪ್ರಮುಖ ನಿರ್ಣಯ ಕೈಗೊಳ್ಳಲಿದೆ.

  • ಆಸೀಸ್‍ಗೆ ನಂ.1 ರ‍್ಯಾಂಕ್ ಹೇಗೆ ಕೊಟ್ರಿ?- ಐಸಿಸಿ ವಿರುದ್ಧ ಗೌತಮ್ ಗಂಭೀರ್ ಕಿಡಿ

    ಆಸೀಸ್‍ಗೆ ನಂ.1 ರ‍್ಯಾಂಕ್ ಹೇಗೆ ಕೊಟ್ರಿ?- ಐಸಿಸಿ ವಿರುದ್ಧ ಗೌತಮ್ ಗಂಭೀರ್ ಕಿಡಿ

    ನವದೆಹಲಿ: ಇತ್ತೀಚೆಗೆ ಆಸ್ಟ್ರೇಲಿಯಾ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾವನ್ನು ಹಿಂದಿಕ್ಕಿ ಟಾಪ್ ಸ್ಥಾನವನ್ನು ಪಡೆದುಕೊಂಡಿತ್ತು. ಐಸಿಸಿಯ ಸದಸ್ಯ ರಾಷ್ಟ್ರಗಳ ತಂಡಗಳ ಪ್ರದರ್ಶನದ ಆಧಾರದ ಮೇಲೆ ಶ್ರೇಯಾಂಕ ಪಟ್ಟಿಯಲ್ಲಿ ಆಸೀಸ್ ಮೊದಲ ಸ್ಥಾನ ಪಡೆದಿತ್ತು. ಪರಿಣಾಮ 2016 ಅಕ್ಟೋಬರ್ ನಿಂದ ಸತತ 42 ತಿಂಗಳು ನಂ.1 ಟೆಸ್ಟ್ ಶ್ರೇಯಾಂಕ ಸ್ಥಾನದಲ್ಲಿದ್ದ ಟೀಂ ಇಂಡಿಯಾ ತನ್ನ ರ‍್ಯಾಂಕಿಂಗ್ ಕಳೆದುಕೊಂಡಿತ್ತು. ಅಲ್ಲದೇ ಮೂರನೇ ಸ್ಥಾನಕ್ಕೆ ಇಳಿದಿತ್ತು.

    ಈ ಕುರಿತಂತೆ ಟೀಂ ಮಾಜಿ ಆಟಗಾರ, ಸಂಸದ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಯಾವ ಆಧಾರದ ಮೇಲೆ ಆಸ್ಟ್ರೇಲಿಯಾ ತಂಡಕ್ಕೆ ನಂ.1 ಸ್ಥಾನ ನೀಡಿದ್ದೀರಿ ಎಂದು ಪ್ರಶ್ನೆ ಮಾಡಿ ಶ್ರೇಯಾಂಕ ಪಟ್ಟಿಯ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

    ಸಾಕಷ್ಟು ಸಮಯದಿಂದ ಟೀಂ ಇಂಡಿಯಾ ನಿರಂತರವಾಗಿ ವಿಜಯಗಳನ್ನು ಪಡೆದುಕೊಳ್ಳುತ್ತಿದೆ. ಆದರೆ ಆಸೀಸ್ ಟಾಪ್ ಪಟ್ಟವನ್ನು ಹೇಗೆ ಪಡೆಯಿತು ಎಂದು ಅರ್ಥವಾಗುತ್ತಿಲ್ಲ. ಅಲ್ಲದೇ ಟೀಂ ಇಂಡಿಯಾ 3ನೇ ಸ್ಥಾನಕ್ಕೆ ಇಳಿದಿರುವುದು ಅಚ್ಚರಿ ತಂದಿದೆ. ಐಸಿಸಿ ನೀಡುವ ಅಂಕಗಳು, ಶ್ರೇಯಾಂಕ ವಿಧಾನ ಸರಿ ಇಲ್ಲ. ಪ್ರದರ್ಶನ ಆಧಾರದ ಮೇಲೆ ನೋಡುವುದಾದರೆ ಟೀಂ ಇಂಡಿಯಾ ಇಂದಿಗೂ ಮೊದಲ ಸ್ಥಾನದಲ್ಲಿರಬೇಕಾಗಿತ್ತು. ಟೆಸ್ಟ್ ಚಾಂಪಿಯನ್‍ಶಿಪ್ ಆರಂಭವಾದ ಬಳಿಕ ತವರು ನೆಲದಲ್ಲಿ ಹಾಗೂ ವಿದೇಶಿ ನೆಲದಲ್ಲಿ ಪಂದ್ಯ ಗೆದ್ದರು ಒಂದೇ ಅಂಕಗಳನ್ನು ನೀಡುವುದು ಸರಿಯಲ್ಲ. ವಿದೇಶದಲ್ಲಿ ಹಾಗೂ ತವರು ನೆಲದಲ್ಲಿಯೂ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ ಎಂದು ಗಂಭೀರ್ ಹೇಳಿದ್ದಾರೆ. ಇದನ್ನು ಓದಿ: ಐಸಿಸಿ ರ‍್ಯಾಂಕಿಂಗ್ – ಪಂದ್ಯ ಆಡದೇ ಇದ್ದರೂ ಟೆಸ್ಟ್ ಶ್ರೇಯಾಂಕದಲ್ಲಿ ಇಳಿದ ಭಾರತ

    ಮೇ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗಿದ್ದ ಐಸಿಸಿ ಶ್ರೇಯಾಂಕ ಪಟ್ಟಿಯ ಅನ್ವಯ 116 ಅಂಕ ಪಡೆದಿದ್ದ ಆಸ್ಟ್ರೇಲಿಯಾ ತಂಡ ಮೊದಲ ಪಡೆದಿತ್ತು. ಆ ಬಳಿಕ 115 ಅಂಕ ಪಡೆದಿದ್ದ ನ್ಯೂಜಿಲೆಂಡ್, 114 ಅಂಕ ಪಡೆದಿದ್ದ ಟೀಂ ಇಂಡಿಯಾ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ. 2003 ರಲ್ಲಿ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಆರಂಭಿಸಿದ ಬಳಿಕ ಮೊದಲ ಬಾರಿಗೆ ಕಡಿಮೆ ಅಂತರದಲ್ಲಿ ಟಾಪ್ ಮೂರು ತಂಡಗಳು ಸ್ಥಾನ ಪಡೆದಿವೆ. ಕೊಹ್ಲಿ ನಾಯಕತ್ವದ ತಂಡದ 2016-17ರಿಂದ ಉತ್ತಮ ಪ್ರದರ್ಶನ ನೀಡಿತ್ತಾ ನಂ.1 ಸ್ಥಾನದಲ್ಲಿ ಮುಂದುವರಿದಿತ್ತು. ಐಸಿಸಿ ನಿಯಮಗಳ ಅನ್ವಯ ಮೇ 2009 ರಿಂದ ಲಭಿಸಿದ ಫಲಿತಾಂಶಗಳ ಅನ್ವಯ ಆಸೀಸ್ ನಂ.1 ಪಟ್ಟ ಪಡೆದುಕೊಂಡಿದೆ. ಉಳಿದಂತೆ ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

  • 51 ಬಾಲ್, 9 ಬೌಂಡರಿ, 2 ಸಿಕ್ಸರ್, 82 ರನ್ – ಸ್ಮರಣೀಯ ಪಂದ್ಯದ ಬಗ್ಗೆ ಕೊಹ್ಲಿ ಮಾತು

    51 ಬಾಲ್, 9 ಬೌಂಡರಿ, 2 ಸಿಕ್ಸರ್, 82 ರನ್ – ಸ್ಮರಣೀಯ ಪಂದ್ಯದ ಬಗ್ಗೆ ಕೊಹ್ಲಿ ಮಾತು

    ಮುಂಬೈ: ಕ್ರಿಕೆಟ್ ವೃತ್ತಿ ಜೀವನ ಅತ್ಯುತ್ತಮ ಪಂದ್ಯ ಯಾವುದು ಎಂಬುದನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಹಿರಂಗ ಪಡಿಸಿದ್ದಾರೆ.

    ಮಾಧ್ಯಮಕ್ಕೆ ಸಂದರ್ಶನ ನೀಡುತ್ತಿದ್ದ ವೇಳೆ ಅಭಿಮಾನಿಯೊಬ್ಬರು 2011ರ ವಿಶ್ವಕಪ್ ಬಳಿಕ ನೆನಪಿನಲ್ಲಿ ಉಳಿಯುವ ಪಂದ್ಯ ಯಾವುದು ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ, ಹಲವು ಪಂದ್ಯಗಳನ್ನು ಆಡಿದ್ದೇನೆ. ಈ ಪೈಕಿ 2016ರ ಟಿ 20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯ ಸದಾ ನೆನಪಿನಲ್ಲಿ ಇರುತ್ತದೆ ಎಂಬುದಾಗಿ ಕೊಹ್ಲಿ ಉತ್ತರಿಸಿದ್ದಾರೆ.

    ಈ ವೇಳೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ, ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಎಲ್ಲರೂ ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಗೊತ್ತಿಲ್ಲ. ಅಭಿಮಾನಿಗಳ ಮುಂದೆ ಕ್ರಿಕೆಟ್ ಆಟುವಾಗ ನಮ್ಮಲ್ಲೂ ಜೋಶ್ ಇರುತ್ತದೆ. ಅಭಿಮಾನಿಗಳು ಚಿಯರ್ಸ್ ಮಾಡುವ ಮೂಲಕ ನಮ್ಮನ್ನು ಹುರಿದುಂಬಿಸುತ್ತಾರೆ. ಖಾಲಿ ಸ್ಟೇಡಿಯಂನಲ್ಲಿ ಈ ರೀತಿಯ ಯಾವುದೇ ಭಾವನೆ ಇರುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

    ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ನೆನಪಿನಲ್ಲಿಟ್ಟುಕೊಳ್ಳಲು ಕಾರಣವಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಹೊಡೆದಿತ್ತು.

    ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಹಿನ್ನಡೆಯಾಗಿತ್ತು. 37 ರನ್ ಗಳಿಸುವಷ್ಟರಲ್ಲಿ ಶಿಖರ್ ಧವನ್, ರೋಹಿತ್ ಶರ್ಮಾ ಔಟಾಗಿದ್ದರು. ರೈನಾ ಔಟಾದಾಗ ತಂಡದ ಮೊತ್ತ ಮೂರು ವಿಕೆಟ್ ನಷ್ಟಕ್ಕೆ 49 ರನ್.

    ಒಂದು ಕಡೆ ಜಯಗಳಿಸಬೇಕಾದ ಒತ್ತಡ. ಇನ್ನೊಂದು ಕಡೆ ವಿಕೆಟ್ ಉಳಿಸಬೇಕಾದ ಅನಿವಾರ್ಯತೆ. ಈ ವೇಳೆ ತಂಡವನ್ನು ಮುನ್ನಡೆಸಿದ್ದು ಕೊಹ್ಲಿ. 51 ಎಸೆತಗಳಲ್ಲಿ 82 ರನ್ ಚಚ್ಚಿ ಭಾರತಕ್ಕೆ ಗೆಲುವನ್ನು ತಂದುಕೊಟ್ಟರು. ಈ ಅಮೋಘ ಇನ್ನಿಂಗ್ಸ್ 9 ಬೌಂಡರಿ, 2 ಸಿಕ್ಸರ್ ಒಳಗೊಂಡಿತ್ತು. ಕೊಹ್ಲಿಗೆ ಯುವರಾಜ್ ಮತ್ತು ಧೋನಿ ಸಹಕಾರ ನೀಡಿದ್ದರು. ಪರಿಣಾಮ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ ಭಾರತ 6 ವಿಕೆಟ್ ಗಳ ಜಯವನ್ನು ಸಾಧಿಸಿತ್ತು. ವಿಜಯ ತಂದುಕೊಟ್ಟ ಹೀರೋ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

  • ಗರಿಗೆದರಿದ ಕ್ರಿಕೆಟ್ ರಣರಂಗ- ಟೀಂ ಇಂಡಿಯಾ ಆಟಗಾರರಿಗೆ 2 ವಾರ ಕ್ವಾರಂಟೈನ್

    ಗರಿಗೆದರಿದ ಕ್ರಿಕೆಟ್ ರಣರಂಗ- ಟೀಂ ಇಂಡಿಯಾ ಆಟಗಾರರಿಗೆ 2 ವಾರ ಕ್ವಾರಂಟೈನ್

    ಮುಂಬೈ: ಕೊರೊನಾ ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿ ಕಾಲ ಕಳೆಯುತ್ತಿದ್ದ ಟೀಂ ಇಂಡಿಯಾ ಆಟಗಾರರು ಮೈದಾನಕ್ಕೆ ಇಳಿದು ನೆಟ್ ಅಭ್ಯಾಸಕ್ಕೆ ಮುಂದಾಗಲಿದ್ದಾರೆ. ಹೀಗಾಗಿ ಅವರು ಎರಡು ವಾರ ಕ್ವಾರಂಟೈನ್‍ನಲ್ಲಿ ಇರಲಿದ್ದಾರೆ.

    ಈ ವರ್ಷಾಂತ್ಯಕ್ಕೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಎರಡು ವಾರಗಳ ಕಡ್ಡಾಯ ಕ್ವಾರಂಟೈನ್‍ಗೊಳಗಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಈ ಬಗ್ಗೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಿಸಿಸಿಐ ಮೂಲಗಳ ಪ್ರಕಾರ, ನೆಟ್ ಪ್ರಾಕ್ಟೀಸ್, ಇಂಡೋರ್ ಅಭ್ಯಾಸಕ್ಕೆ ಸೌಲಭ್ಯವುಳ್ಳ ಹೋಟೆಲ್ ಒಂದರಲ್ಲಿ ಭಾರತೀಯ ಕ್ರಿಕೆಟಿಗರು ಎರಡು ವಾರಗಳ ಕಾಲ ಕ್ವಾರಂಟೈನ್‍ನಲ್ಲಿರಲಿದ್ದಾರೆ.

    ಯಾವುದೇ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವುದಾದರೆ ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಪಡಲೇ ಬೇಕಿದೆ. ಏಕೆಂದರೆ ಐಸಿಸಿ ಟಿ20 ವಿಶ್ವಕಪ್ ಆಸೀಸ್ ನೆಲದಲ್ಲಿ ನಡೆಯಲಿದೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಈ ನಿಮಯ ಜಾರಿಗೆ ತರಲಾಗಿದೆ. ಹೀಗಾಗಿ ನಿಯಮದ ಪ್ರಕಾರ ಟೀಂ ಇಂಡಿಯಾ ಕಡ್ಡಾಯವಾಗಿ ಎರಡು ವಾರ ಕ್ವಾರಂಟೈನ್‍ಗೆ ಒಳಪಡಲಿದೆ. ಈ ಮೂಲಕ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಬಹುನಿರೀಕ್ಷಿತ ಟೆಸ್ಟ್ ಸರಣಿಯನ್ನು ಆಡಲು ಸಿದ್ಧತೆ ನಡೆಸಿದೆ ಎಂದು ತೋರುತ್ತಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಖಜಾಂಜಿ ಅರುಣ್ ಧುಮಾಲ್, “ಕೊರೊನಾ ಸೃಷ್ಟಿಸಿದ ಆತಂಕದಿಂದಾಗಿ ನಮ್ಮಲ್ಲಿ ಈಗ ಯಾವುದೇ ಆಯ್ಕೆ ಇಲ್ಲ. ಪ್ರತಿಯೊಬ್ಬರೂ ಕ್ವಾರಂಟೈನ್‍ಗೆ ಒಳಪಡುವುದು ಮುಖ್ಯವಾಗಿದೆ. ಏಕೆಂದರೆ ಇಷ್ಟು ದೀರ್ಘಾವಧಿಯವರೆಗೆ ಸೋಂಕಿನಿಂದ ದೂರವಿದ್ದು, ವಿದೇಶಕ್ಕೆ ಹೋಗಿ ಎರಡು ವಾರಗಳ ಕಾಲ ಕ್ವಾರಂಟೈನ್‍ಗೆ ಒಳಗಾಗುವುದು ಸೂಕ್ತವಲ್ಲ. ಕ್ವಾರಂಟೈನ್‍ನಲ್ಲಿ ಯಾವ ಮಾನದಂಡಗಳಿವೆ ಎಂಬುದನ್ನು ನಾವು ನೋಡಬೇಕಾಗಿದೆ” ಎಂದು ತಿಳಿಸಿದ್ದಾರೆ.

    ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೂ ಎರಡು ವಾರಗಳ ಅವಧಿಗೆ ಟೀಂ ಇಂಡಿಯಾವನ್ನು ಹೋಟೆಲ್‍ನಲ್ಲಿ ಲಾಕ್ ಮಾಡಬಹುದು. ಇತ್ತ ಐಷಾರಾಮಿ ಹೋಟೆಲ್‍ಗಳು ಸೆಪ್ಟೆಂಬರ್ ನಲ್ಲಿ ತೆರೆಯುವ ಸಾಧ್ಯತೆ ಇದ್ದು, ಅಲ್ಲಿಯೇ ಎಲ್ಲಾ ತರಬೇತಿ ಸೌಲಭ್ಯ ಮತ್ತು ನೆಟ್ ವ್ಯವಸ್ಥೆಯನ್ನು ಬಿಸಿಸಿಐ ಮಾಡಿಕೊಡಲಿದೆ. ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಪಂದ್ಯಗಳು ಪ್ರಾರಂಭವಾಗುವ ಮೊದಲು ಭಾರತೀಯ ಆಟಗಾರರಿಗೆ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಅವಕಾಶ ನೀಡುವಂತೆ ಪಂದ್ಯವನ್ನು ಸಹ ಆಯೋಜಿಸಲು ಚಿಂತನೆ ನಡೆದಿದೆ ಎಂದು ವರದಿಯಾಗಿದೆ.

    ಜಗತ್ತಿನಾದ್ಯಂತ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರದಿದ್ದರೆ ಪ್ರವಾಸಗಳನ್ನು ಬಿಸಿಸಿಐ ಮುಂದೂಡುವ ಸಾಧ್ಯತೆಗಳಿವೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ ನಡುವೆ ನಿಗಧಿಯಾಗಿರುವ ಟಿ20 ವಿಶ್ವಕಪ್ ಕೂಡ ಕೊರೊನಾ ಆತಂಕದ ಮೇಲೆ ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ.

  • ವಿಜಯ್ ಜೊತೆ ಡಿನ್ನರ್‌ಗೆ ‘ಓಕೆ’, ಆದ್ರೆ ಕಂಡಿಷನ್ಸ್ ಅಪ್ಲೈ ಎಂದ ಎಲ್ಲಿಸ್ ಪೆರ್ರಿ

    ವಿಜಯ್ ಜೊತೆ ಡಿನ್ನರ್‌ಗೆ ‘ಓಕೆ’, ಆದ್ರೆ ಕಂಡಿಷನ್ಸ್ ಅಪ್ಲೈ ಎಂದ ಎಲ್ಲಿಸ್ ಪೆರ್ರಿ

    ನವದೆಹಲಿ: ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ಆಲ್‍ರೌಂಡರ್ ಎಲ್ಲಿಸ್ ಪೆರ್ರಿ ಅವರೊಂದಿಗೆ ಡಿನ್ನರ್ ಮಾಡಬೇಕು ಎಂದು ಟೀಂ ಇಂಡಿಯಾ ಆಟಗಾರ ಮುರಳಿ ವಿಜಯ್ ತಮ್ಮ ಮನಸ್ಸಿನ ಮಾತನ್ನು ಬಿಚ್ಚಿಟ್ಟಿದ್ದರು. ಸದ್ಯ ಮುರಳಿ ಮಾತಿಗೆ ಪ್ರತಿಕ್ರಿಯೆ ನೀಡಿರುವ ಎಲ್ಲಿಸ್ ಪೆರ್ರಿ, ಡಿನ್ನರ್‌ಗೆ ಸಮ್ಮತಿ ಸೂಚಿಸಿದ್ದಾರೆ.

    ಖಾಸಗಿ ಮಾಧ್ಯಮವೊಂದಕ್ಕೆ ಎಲ್ಲಿಸ್ ಪೆರಿ ಸಂದರ್ಶನದಲ್ಲಿ ಮುರಳಿ ವಿಜಯ್ ಡಿನ್ನರ್ ಪ್ರಶ್ನೆ ಅವರಿಗೆ ಎದುರಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿರುವ ಪೆರ್ರಿ, ವಿಜಯ್ ಜೊತೆ ಡಿನ್ನರ್ ಮಾಡಲು ಯಾವುದೇ ಅಭ್ಯಂತರವಿಲ್ಲ. ಆದರೆ ಡಿನ್ನರ್ ಬಿಲ್ ಮಾತ್ರ ಅವರೇ ಕಟ್ಟಬೇಕು ಎಂಬ ಷರತ್ತನ್ನು ವಿಧಿಸಿದ್ದಾರೆ.

    ಕೊರೊನಾ ಲಾಕ್‍ಡೌನ್ ಸಮಸ್ಯೆಯಿಂದ 60 ವರ್ಷಗಳ ಬಳಿಕ ವಿಶ್ವ ಕ್ರಿಕೆಟ್ ತನ್ನೆಲ್ಲ ಚುಟುವಟಿಗಳನ್ನು ನಿಲ್ಲಿಸಿದೆ. ಹೀಗಾಗಿ ಮನೆಯಲ್ಲೇ ಉಳಿದಿರುವ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇದ್ದು, ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇನ್ನೂ ಕೆಲವರು ಇನ್‍ಸ್ಟಾ, ಫೇಸ್‍ಬುಕ್‍ಗಳಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ. ಮುರಳಿ ವಿಜಯ್ ಕೂಡ ಸಾಮಾಜಿಕ ಜಾಲತಾನದಲ್ಲಿ ಲೈವ್ ಆಗಮಿಸಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದರು. ಈ ವೇಳೆ ನೀವು ಯಾರಿಬ್ಬರ ಜೊತೆ ಡಿನ್ನರ್ ಹೋಗಲು ಇಷ್ಟಪಡುತ್ತೀರಾ ಎಂದು ಅಭಿಮಾನಿಗೆ ಉತ್ತರಿಸಿ, ನಾನು ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ ಮತ್ತು ಭಾರತದ ಆಟಗಾರ ಶಿಖರ್ ಧವನ್ ಅವರ ಜೊತೆ ಊಟಕ್ಕೆ ಹೋಗಲು ಬಯಸುತ್ತೇನೆ. ಎಲ್ಲಿಸ್ ಪೆರ್ರಿ ಅವರು ನೋಡಲು ಬಹಳ ಸುಂದರವಾಗಿ ಇದ್ದಾರೆ ಅವರ ಜೊತೆ ಡಿನ್ನರ್ ಗೆ ಹೋಗಲು ಬಯಸುತ್ತೇನೆ. ಧವನ್ ಅವರೊಂದಿಗೆ ಡಿನ್ನರ್ ಗೆ ಹೋಗುವುದು ಇಷ್ಟ. ಏಕೆಂದರೆ ನನಗೆ ಧವನ್ ಒಳ್ಳೆಯ ಸ್ನೇಹಿತ ಹಾಗೂ ಬಹಳ ತಮಾಷೆ ಮಾಡುತ್ತಾರೆ. ಈ ಕಾರಣಕ್ಕೆ ಈ ಇಬ್ಬರ ಜೊತೆ ಡಿನ್ನರ್ ಗೆ ಹೋಗಲು ಇಷ್ಟ ಪಡುವುದಾಗಿ ಹೇಳಿದ್ದರು.

    ಉಳಿದಂತೆ 2018 ಡಿಸೆಂಬರ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿಗೆ ಭಾರತದ ಪರ ಆಡಿದ್ದ ಮುರಳಿ ವಿಜಯ್, ಆ ಬಳಿಕ ತಂಡದ ರೆಗ್ಯುಲರ್ ಆಟಗಾರರಾಗಿ ಸ್ಥಾನ ಪಡೆದಿಲ್ಲ. ಟೆಸ್ಟ್ ಆರಂಭಿಕರಾಗಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಅವರೊಂದಿಗೆ ರೋಹಿತ್ ಶರ್ಮಾ ಕೂಡ ತಂಡಕ್ಕೆ ಲಭ್ಯವಿರುವುದರಿಂದ ಮುರಳಿ ವಿಜಯ್ ಆಯ್ಕೆಯ ಅವಕಾಶಗಳು ಇಲ್ಲ ಎನ್ನಬಹುದು. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಜಯ್, ನಾನು ಕ್ರಿಕೆಟ್ ಮೇಲಿರುವ ಫ್ಯಾಷನ್ ಕಾರಣದಿಂದ ಮಾತ್ರ ಆಡುತ್ತಿದ್ದು, ದೇಶದ ಪರ ಆಡಬೇಕೆಂದಿಲ್ಲ ಎಂದು ತಮ್ಮ ಮನಸ್ಸಿನ ಮಾತನ್ನು ಹೇಳಿದ್ದರು. ಐಪಿಎಲ್‍ನಲ್ಲಿ ಕಳೆದ ಎರಡು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಪರ ಮುರಳಿ ವಿಜಯ್ ಆಡುತ್ತಿದ್ದಾರೆ.

  • ಐಸಿಸಿ ರ‍್ಯಾಂಕಿಂಗ್ ಬಿಡುಗಡೆ – ಪಂದ್ಯ ಆಡದೇ ಇದ್ದರೂ ಟೆಸ್ಟ್ ಶ್ರೇಯಾಂಕದಲ್ಲಿ ಇಳಿದ ಭಾರತ

    ಐಸಿಸಿ ರ‍್ಯಾಂಕಿಂಗ್ ಬಿಡುಗಡೆ – ಪಂದ್ಯ ಆಡದೇ ಇದ್ದರೂ ಟೆಸ್ಟ್ ಶ್ರೇಯಾಂಕದಲ್ಲಿ ಇಳಿದ ಭಾರತ

    – 3 ಮಾದರಿಯಲ್ಲೂ ಭಾರತಕ್ಕಿಲ್ಲ ಅಗ್ರಸ್ಥಾನ
    – ಇಂಡಿಯಾವನ್ನು ಹಿಂದಿಕ್ಕಿದ ಆಸೀಸ್, ಕಿವೀಸ್

    ದುಬೈ: ಐಸಿಸಿ ಮೇ 1ರಂದು ತನ್ನ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟೆಸ್ಟ್, ಏಕದಿನ ಮತ್ತು ಟಿ-20 ಈ ಮೂರು ಮಾದರಿಯಲ್ಲೂ ಭಾರತ ತಂಡ ಅಗ್ರಸ್ಥಾನ ಪಡೆಯಲು ವಿಫಲವಾಗಿದೆ.

    ಐಸಿಸಿ ಬಿಡುಗಡೆ ಮಾಡಿದ ನೂತನ ಪಟ್ಟಿಯಲ್ಲಿ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ, ಏಕದಿನದಲ್ಲಿ ಇಂಗ್ಲೆಂಡ್ ಮತ್ತು ಮೊದಲ ಬಾರಿಗೆ ಟಿ-20ಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನಕ್ಕೇರಿದೆ. ಈ ಮೂಲಕ ಭಾರತ ಟೆಸ್ಟ್ ನಲ್ಲಿ ಮೂರನೇ ಸ್ಥಾನ, ಏಕದಿನದಲ್ಲಿ ಎರಡನೇ ಸ್ಥಾನ ಮತ್ತು ಟಿ-20ಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.

    2016 ರಿಂದ 2017ರ ಸಮಯದಲ್ಲಿ ಆಡಿದ ಪಂದ್ಯಗಳನ್ನು ಪರಿಗಣಿಸದೆ ಈ ರ‍್ಯಾಂಕಿಂಗ್ ಅನ್ನು ಐಸಿಸಿ ಸಿದ್ಧಗೊಳಿಸಿದೆ. ಈಗ ಐಸಿಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 2019ರಲ್ಲಿ ನಡೆದ ಟೆಸ್ಟ್ ಪಂದ್ಯಗಳ ಶೇ. 100ರಷ್ಟು ಅಂಕಗಳು. ಜೊತೆಗೆ 2017 ಮತ್ತು 2018ರಲ್ಲಿ ನಡೆದ ಟೆಸ್ಟ್ ಪಂದ್ಯಗಳ ಶೇ 50ರಷ್ಟು ಅಂಕಗಳನ್ನು ತೆಗೆದುಕೊಂಡು ಈ ಪಟ್ಟಿಯನ್ನು ಸಿದ್ಧ ಮಾಡಿದೆ.

    ಈ ಮೊದಲು ಭಾರತ ಟೆಸ್ಟ್ ನಲ್ಲಿ 2016 ಅಕ್ಟೋಬರ್ ತಿಂಗಳಿನಿಂದ ಮೊದಲ ಸ್ಥಾನದಲ್ಲಿ ಇತ್ತು. ಏಕೆಂದರೆ 2016 ಮತ್ತು 2017ರ ಅವಧಿಯಲ್ಲಿ ಭಾರತ ಆಡಿದ 13 ಟೆಸ್ಟ್ ಪಂದ್ಯಗಳಲ್ಲಿ ಒಂದರಲ್ಲಿ ಸೋತು ಬರೋಬ್ಬರಿ 12 ಟೆಸ್ಟ್ ಗಳನ್ನು ಗೆದ್ದಿತ್ತು. ಈ ಅವಧಿಯಲ್ಲಿ ನಡೆದ 5 ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧವೂ ಕೂಡ ಭಾರತ ಗೆದ್ದಿತ್ತು. ಆದರೆ ಈ ಪಂದ್ಯಗಳ ಅಂಕವನ್ನು ಐಸಿಸಿ ರ‍್ಯಾಂಕಿಂಗ್ ವೇಳೆ ಪರಿಗಣಿಸಿಲ್ಲ. ಆದ್ದರಿಂದ ಪಂದ್ಯಗಳನ್ನು ಆಡದೇ ಇದ್ದರೂ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ.

    ಆದರೆ ಇಂದು ಬಿಡುಗಡೆ ಮಾಡಿರುವ ರ‍್ಯಾಂಕಿಂಗ್ ನಲ್ಲಿ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ. ಆದರೆ ಅಂಕಿ-ಅಂಶಗಳಲ್ಲಿ ಹೆಚ್ಚಿನ ಅಂತರವಿಲ್ಲ. ಆಸ್ಟ್ರೇಲಿಯಾ ತಂಡ 116 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಇದ್ದರೆ, ನ್ಯೂಜಿಲೆಂಡ್ ತಂಡ 115 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಇದೆ. ಹಾಗೇ ಭಾರತ ಕೂಡ 114 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.

    ಮೊಟ್ಟಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡ ಏಕದಿನ ರ‍್ಯಾಂಕಿಂಗ್ ನಲ್ಲಿ 127 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಈ ತಂಡ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ 50 ಓವರ್ ಗಳ ವಿಶ್ವಕಪ್ ಅನ್ನು ಎತ್ತಿಹಿಡಿದಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತ ಪ್ರಸ್ತುತ 119 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ 116 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

    2011ರಲ್ಲಿ ಐಸಿಸಿ ಟಿ-20 ರ‍್ಯಾಂಕಿಂಗ್ ಅನ್ನು ಪರಿಚಯಿಸಿದ ನಂತರ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಟಿ-20ಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ. ಆದರೆ 2018ರಿಂದ ಟಿ-20ಯಲ್ಲಿ ಮೊದಲ ಸ್ಥಾನದಲ್ಲಿ ಇದ್ದ ಪಾಕಿಸ್ತಾನ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಟಿ-20ಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನ ಇಂಗ್ಲೆಂಡ್ ಎರಡನೇ ಸ್ಥಾನ ಮತ್ತು ಭಾರತ ಮೂರನೇ ಸ್ಥಾನದಲ್ಲಿ ಇದೆ.

  • ದೇವರಿಗಿಂತ ಯಾರಾದರೂ ಉತ್ತಮವಾಗಬಹುದೇ?- ಬ್ರೆಟ್ ಲೀ

    ದೇವರಿಗಿಂತ ಯಾರಾದರೂ ಉತ್ತಮವಾಗಬಹುದೇ?- ಬ್ರೆಟ್ ಲೀ

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಸಾಮಥ್ರ್ಯ ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಹೇಳಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಬ್ರೆಟ್ ಲೀ, ”ಲಿಟಲ್ ಮಾಸ್ಟರ್ ಸಚಿನ್ ಅವರ ದಾಖಲೆಯನ್ನು ಮುರಿಯುವುದು ಸುಲಭದ ವಿಷಯವಲ್ಲ. ಸಚಿನ್ ಕ್ರಿಕೆಟ್ ದೇವರು. ಹೀಗಾಗಿ ದೇವರಿಗಿಂತ ಯಾರಾದರೂ ಉತ್ತಮವಾಗಬಹುದೇ? ಇದಕ್ಕಾಗಿ ನಾವು ಕಾಯುತ್ತಿದ್ದೇವೆ ಮತ್ತು ನೋಡುತ್ತಿದ್ದೇವೆ. ಎಲ್ಲವನ್ನೂ ಕಾದು ನೋಡೋಣ” ಎಂದು ಹೇಳಿದ್ದಾರೆ.

    ಅಂಕಿಅಂಶಗಳನ್ನ ಗಮನಿಸಿದರೆ ವಿರಾಟ್ ಕೊಹ್ಲಿ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಏಳರಿಂದ ಎಂಟು ವರ್ಷಗಳ ಕ್ರಿಕೆಟ್‍ನಲ್ಲಿ ಅವರು ಗಳಿಸಿದ ರನ್ ಖಂಡಿತವಾಗಿಯೂ ಸಚಿನ್ ಅವರ ದಾಖಲೆಯನ್ನು ಮುರಿಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ವಿರಾಟ್ ಕೊಹ್ಲಿ ಅವರನ್ನ ಸಚಿನ್‍ಗೆ ಹೋಲಿಕೆಯಾಗಬಹುದೆಂದು ನಾನು ಭಾವಿಸಲು ಮೂರು ಕಾರಣಗಳಿವೆ ಎಂದು ಬ್ರೆಟ್ ಲೀ ಹೇಳಿದರು. ಮೊದಲ ಮತ್ತು ಪ್ರಮುಖ ಕಾರಣವೆಂದರೆ ವಿರಾಟ್ ಖಂಡಿತವಾಗಿಯೂ ಪ್ರತಿಭಾವಂತ ಬ್ಯಾಟ್ಸ್‍ಮನ್. ಎರಡನೆಯ ಕಾರಣ ಅವರ ಫಿಟ್‍ನೆಸ್. ಕೊಹ್ಲಿ 30ನೇ ವಯಸ್ಸಿನಲ್ಲಿಯೂ ಸಾಕಷ್ಟು ಫಿಟ್ ಆಗಿದ್ದಾರೆ. ಮೂರನೆಯ ಕಾರಣವೆಂದರೆ ದೊಡ್ಡ ಗುರಿಗಳನ್ನು ಸಾಧಿಸಲು ಅವರಿಗೆ ಮಾನಸಿಕ ಶಕ್ತಿ ಇದೆ. ಅವರು ತಮ್ಮ ಪ್ರತಿಭೆಯಿಂದ ಸುಲಭವಾಗಿ ಸಾಧನೆ ಮಾಡುತ್ತಾರೆ. ವಿರಾಟ್ ಸದೃಢರಾಗಿದ್ದರೆ ಇದು ಅವರ ಮಾನಸಿಕ ಶಕ್ತಿ ಎಂದು ಹೇಳಬಹುದು ಎಂದು ಬ್ರೆಟ್ ಲೀ ತಿಳಿಸಿದ್ದಾರೆ.

    ಸಚಿನ್ ತೆಂಡೂಲ್ಕರ್ ಅವರ 47ನೇ ಹುಟ್ಟುಹಬ್ಬಕ್ಕೆ ಬ್ರೆಟ್ ಲೀ ಶುಭಕೋರಿದ್ದರು. ”ಜನ್ಮದಿನದ ಶುಭಾಶಯಗಳು ಲೆಜೆಂಡ್. ಈಗ ಮೈದಾನದಲ್ಲಿ ಯುದ್ಧಗಳು ಮುಗಿದಿವೆ. ನಮ್ಮ ಸ್ನೇಹ ಯಾವಾಗಲೂ ಉಳಿಯುತ್ತದೆ. ಸುರಕ್ಷಿತವಾಗಿರಿ ಮತ್ತು ಜನ್ಮದಿನವನ್ನು ಉತ್ತಮವಾಗಿ ಆಚರಿಸಿ” ಎಂದು ಶುಕ್ರವಾರ ಟ್ವೀಟ್ ಮಾಡಿದ್ದರು.

    ಮಾಸ್ಟರ್ ಬ್ಲಾಸ್ಟರ್ ಸಚಿನ್ 49 ಏಕದಿನ ಮತ್ತು 51 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ 100 ಶತಕಗಳನ್ನು ಗಳಿಸಿದ ಏಕೈಕ ಆಟಗಾರ ಸಚಿನ್ ಆಗಿದ್ದಾರೆ. ತೆಂಡೂಲ್ಕರ್ ಅವರು 463 ಏಕದಿನ ಇನ್ನಿಂಗ್ಸ್ ಗಳಲ್ಲಿ 18,426 ರನ್ ಗಳಿಸಿ ಏಕದಿನ ಕ್ರಿಕೆಟ್‍ನಲ್ಲಿ ಅತ್ಯಧಿಕ ರನ್‍ಗಳಿಸಿದ ವಿಶ್ವದ ಸರ್ವಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದಾರೆ.

    ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 44 ಏಕದಿನ ಮತ್ತು 27 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಸಚಿನ್ ಅವರನ್ನು ಹಿಂದಿಕ್ಕಲು ವಿರಾಟ್‍ಗೆ ಇನ್ನೂ 29 ಶತಕಗಳ ಅಗತ್ಯವಿದೆ.

  • ಯುವಿ 6,6,6,6,6,6 ಬಳಿಕ ಬ್ಯಾಟ್ ಪರಿಶೀಲಿಸಿದ್ದ ರೆಫರಿ

    ಯುವಿ 6,6,6,6,6,6 ಬಳಿಕ ಬ್ಯಾಟ್ ಪರಿಶೀಲಿಸಿದ್ದ ರೆಫರಿ

    ಮುಂಬೈ: ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಸ್ಫೋಟಕ ಆಟಗಾರರಲ್ಲಿ ಒಬ್ಬರು. ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿದ್ದ ಯುವಿ, ಟೀಂ ಇಂಡಿಯಾ 2007 ಟಿ20 ಮತ್ತು 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದು. ಸದ್ಯ ಲಾಕ್‍ಡೌನ್‍ನಿಂದ ಮನೆಯಲ್ಲೇ ಉಳಿದಿರುವ ಯುವಿ, ಕ್ರಿಕೆಟ್ ವೃತ್ತಿ ಜೀವನದ ಕುರಿತು ಕೆಲ ವಿಶೇಷ ಮಾಹಿತಿಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಸದಾ ಇತರೇ ಆಟಗಾರರೊಂದಿಗೆ ಹಾಸ್ಯಮಯವಾಗಿ ಕಾಣಿಸಿಕೊಳ್ಳುತ್ತಿದ್ದ ಯುವರಾಜ್ ಸಿಂಗ್, ಎದುರಾಳಿ ಬೌಲರ್ ಗಳನ್ನು ಅಷ್ಟೇ ಸುಲಲಿತಾಗಿ ದಂಡಿಸುತ್ತಿದ್ದರು. 2007ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಆಂಡ್ರ್ಯೂ ಫ್ಲಿಂಟಾಫ್ ಮಾತಿಗೆ ತಿರುಗೇಟು ನೀಡಿದ್ದ ಯುವರಾಜ್ ಸಿಂಗ್, ಸ್ಟುವರ್ಟ್ ಬ್ರಾಡ್ ಓವರಿನ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಅಂದು ನಡೆದ ಘಟನೆ ಬಳಿಕ ನಡೆದ ಕೆಲ ಆಸ್ತಕಿಕಾರ ಮಾಹಿತಿಯನ್ನು ಯುವಿ ತಿಳಿಸಿದ್ದಾರೆ.

    2007ರ ಸೆ.10 ರಂದು ನಡೆದಿದ್ದ ಪಂದ್ಯದ ಇನ್ನಿಂಗ್ಸ್ ನ 18 ಓವರ್ ಎಸೆದ ಫ್ಲಿಂಟಾಫ್ ಬೌಲಿಂಗ್‍ನಲ್ಲಿ ಯುವಿ 2 ಬೌಂಡರಿ ಸಿಡಿಸಿದ್ದರು. ಆದರೆ ಓವರಿನ ಅಂತಿಮ ಎಸೆತದಲ್ಲಿ ನಾನ್ ಸ್ಟ್ರೈಕ್‍ನಲ್ಲಿದ್ದ ಯುವರಾಜ್ ಸಿಂಗ್ ಅವರನ್ನು ಫ್ಲಿಂಟಾಫ್ ಮಾತಿನ ಚಾಟಿ ಬೀಸಿ ಕೆರಳಿಸಿದ್ದರು. ಆನ್‍ಫೀಲ್ಡ್ ನಲ್ಲೇ ಫ್ಲಿಂಟಾಫ್ ವಿರುದ್ಧ ತಿರುಗಿಬಿದಿದ್ದ ಯುವಿ ಬ್ಯಾಟ್ ತೋರಿಸಿ ಮುನ್ನುಗಿದ್ದರು. ಆದರೆ ಈ ವೇಳೆಗೆ ಇತರೇ ಆಟಗಾರರು, ಅಂಪೈರ್ ನಡುವೆ ಬಂದು ಇಬ್ಬರ ಜಗಳ ಬಿಡಿಸುವ ಕಾರ್ಯ ಮಾಡಿದರು.

    ಫ್ಲಿಂಟಾಫ್ ಮಾತಿನ ಚಾಟಿಯಿಂದ ಸಿಟ್ಟಿಗೆದ್ದ ಯುವಿ 19ನೇ ಓವರ್ ಎಸೆದ ಸ್ಟುವರ್ಟ್ ಬ್ರಾಡ್ ಬೌಲಿಂಗ್‍ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಅಂದು ತಮಗೆ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಯೋಚನೆ ಇರಲಿಲ್ಲ. ಆದರೆ ಫ್ಲಿಂಟಾಪ್ ತೋರಿದ ವರ್ತನೆಯಿಂದ ಕೋಪಗೊಂಡು ಎಲ್ಲಾ ಎಸೆತಗಳನ್ನು ಬೌಂಡರಿ ಗೆರೆದಾಡಿ ಹೊಡೆಯಲು ಯತ್ನಿಸಿದೆ. ಅಲ್ಲದೇ 6 ಸಿಕ್ಸರ್ ಸಿಡಿಸಿದ ಬಳಿಕ ಪಂದ್ಯದ ಹಲವು ಅಚ್ಚರಿಯ ಘಟನೆಗಳು ನಡೆದವು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 30 ಎಸೆತಗಳಲ್ಲಿ 70 ರನ್ ಸಿಡಿಸಿದ ಬಳಿಕ ವಿಕೆಟ್ ಕೀಪರ್ ಆಡಮ್ ಗಿಲ್‍ಕ್ರಿಸ್ಟ್ ಬ್ಯಾಟ್ ಕುರಿತು ಸಂಶಯ ವ್ಯಕ್ತಪಡಿಸಿದ್ದರು ಎಂದು ಯುವಿ ಹೇಳಿದ್ದಾರೆ.

    ಅಂದು ತಮ್ಮ ಬಳಿಗೆ ಆಗಮಿಸಿದ್ದ ಆಸ್ಟ್ರೇಲಿಯಾ ತಂಡದ ಕೋಚ್, ನಿಮ್ಮ ಬ್ಯಾಟ್ ಹಿಂದೆ ಫೈಬರ್ ಇದೆಯೇ? ಅಲ್ಲದೇ ಅದು ಕಾನೂನು ಬದ್ಧವಾಗಿದೆಯಾ ಎಂದು ಪ್ರಶ್ನಿಸಿದ್ದರು. ಆಗ ಪಂದ್ಯದ ರೆಫರಿಗೆ ಬ್ಯಾಟ್ ಪರೀಕ್ಷಿಸಲು ತಿಳಿಸಿದ್ದೆ. ಗಿಲ್‍ಕ್ರಿಸ್ಟ್ ಕೂಡ ಘಟನೆ ಬಳಿಕ ಇಂತಹ ಬ್ಯಾಟ್‍ಗಳನ್ನು ಎಲ್ಲಿ? ಯಾರು? ತಯಾರಿಸಿಕೊಡುತ್ತಾರೆ ಎಂದು ತಮ್ಮ ಬಳಿ ಕೇಳಿದ್ದರು ಎಂದು ತಿಳಿಸಿದ್ದಾರೆ. 2007 ಹಾಗೂ 2011ರ ವಿಶ್ವಕಪ್‍ನಲ್ಲಿ ನಾನು ಆಡಿದ್ದ ಎರಡು ಬ್ಯಾಟ್‍ಗಳು ನನಗೆ ವಿಶೇಷ ಎಂದು ಯುವರಾಜ್ ತಿಳಿಸಿದ್ದಾರೆ.

  • ವಿದೇಶಿ ನೆಲದಲ್ಲಿ ಐಪಿಎಲ್ 2020- ಆರ್‌ಸಿಬಿ ಹ್ಯಾಪಿ ಎಂದ ಕೋಚ್

    ವಿದೇಶಿ ನೆಲದಲ್ಲಿ ಐಪಿಎಲ್ 2020- ಆರ್‌ಸಿಬಿ ಹ್ಯಾಪಿ ಎಂದ ಕೋಚ್

    ಮುಂಬೈ: ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಐಪಿಎಲ್ 2020 ಟೂರ್ನಿಯನ್ನು ಬಿಸಿಸಿಐ ಅಧಿಕೃತವಾಗಿ ಮುಂದೂಡಿದೆ. ಶೆಡ್ಯೂಲ್ ಅನ್ವಯ ಮಾರ್ಚ್ 29 ರಿಂದ ಐಪಿಎಲ್ ಆರಂಭವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಏ.15ಕ್ಕೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ ದೇಶಾದ್ಯಂತ ಲಾಕ್‍ಡೌನ್ ಮೇ 3ರ ವರೆಗೂ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಮತ್ತೆ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ.

    ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಕಾರಣ ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಆದರೂ ದೇಶ ಸಹಜ ಸ್ಥಿತಿಗೆ ಮರಳುವ ಕುರಿತು ಖಚಿತತೆ ಇಲ್ಲ. ಈ ಹಿನ್ನೆಲೆಯಲ್ಲಿ ಐಪಿಎಲ್ ಆರಂಭವಾಗುವ ಕುರಿತು ಬಿಸಿಸಿಐ ಸ್ಪಷ್ಟನೆಯನ್ನು ನೀಡಿಲ್ಲ. ಇತ್ತ ಟೂರ್ನಿ ಆಯೋಜಿಸಲು ಬೇರೆ ಬೇರೆ ಮಾರ್ಗಗಳತ್ತ ಚಿಂತನೆ ನಡೆಸಿರುವ ಬಿಸಿಸಿಐ, ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ ಆಯೋಜಿಸುವ ಚಿಂತನೆಯಲ್ಲಿದೆ ಎನ್ನಲಾಗಿದೆ.

    ವಿದೇಶಿ ನೆಲದಲ್ಲಿ ಐಪಿಎಲ್ ಆಯೋಜಿಸುವ ಕುರಿತು ಪ್ರತಿಕ್ರಿಯೆ ನೀಡಿರುವ ಆರ್‌ಸಿಬಿ ಕೋಚ್ ಸೈಮನ್ ಕ್ಯಾಟಿಚ್, ಟೂರ್ನಿ ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಿದರೆ ಅದು ಆರ್ ಸಿಬಿಗೆ ನೆರವಾಗಲಿದೆ. ಒಂದೊಮ್ಮೆ ಐಪಿಎಲ್ ವಿದೇಶಿ ನೆಲದಲ್ಲಿ ನಡೆದರೆ ತಂಡಕ್ಕೆ ತುಂಬಾ ಸಂತೋಷವಾಗುತ್ತದೆ. ಆರ್‌ಸಿಬಿ ಮಾತ್ರವಲ್ಲದೇ ಇದು ಹಲವು ತಂಡಗಳಿಗೆ ಸಹಕಾರಿ ಆಗಲಿದೆ. ಏಕೆಂದರೆ ನಮ್ಮ ತಂಡದಲ್ಲಿ ಎರಡು ದೇಶದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ತಮ್ಮ ತವರು ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವ ಅವಕಾಶ ಹೆಚ್ಚಿಸುತ್ತದೆ ಎಂದಿದ್ದಾರೆ. ಅಲ್ಲದೇ 2020ರ ಐಪಿಎಲ್ ಟೂರ್ನಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ತಂಡದಲ್ಲಿ ಎಬಿ ಡಿಲಿಯರ್ಸ್ (ದಕ್ಷಿಣ ಆಫ್ರಿಕಾ), ಅರೋನ್ ಫಿಂಚ್ (ಆಸ್ಟ್ರೇಲಿಯಾ), ಕ್ರಿಸ್ ಮೋರಿಸ್ (ದಕ್ಷಿಣ ಆಫ್ರಿಕಾ), ಕೇನ್ ರಿಚರ್ಡ್ಸನ್ (ಆಸ್ಟ್ರೇಲಿಯಾ), ಡೇಲ್ ಸ್ಟೈನ್ (ದಕ್ಷಿಣ ಆಫ್ರಿಕಾ)ದ ವಿದೇಶಿ ಆಟಗಾರರು ಇದ್ದಾರೆ. ಈಗಾಗಲೇ 2020ರ ಐಪಿಎಲ್ ಟೂರ್ನಿ ಆಯೋಜಿಸಲು ತಾವು ಸಿದ್ಧರಾಗಿರುವುದಾಗಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ. ವಿಶ್ವದ ಶ್ರೀಮಂತ ಕ್ರಿಕೆಟ್‍ ಟೂರ್ನಿ ಐಪಿಎಲ್ ಆಯೋಜಿಸುವ ಅವಕಾಶವನ್ನು ಯಾವುದೇ ದೇಶ ಬಿಟ್ಟುಕೊಡುವುದಿಲ್ಲ. ಆದ್ದರಿಂದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಕೂಡ ಈ ರೇಸ್‍ನಲ್ಲಿದೆ ಎನ್ನಲಾಗಿದೆ. 2009ರಲ್ಲಿ ದೇಶದಲ್ಲಿ ಚುನಾವಣೆ ನಡೆಯುತ್ತಿದ್ದ ಕಾರಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಏರ್ಪಡಿಸಲಾಗಿತ್ತು. ಅಲ್ಲದೇ 2014ರ ಟೂರ್ನಿಯ ಕೆಲ ಪಂದ್ಯಗಳು ಯುಎಇನಲ್ಲಿ ನಡೆಸಲಾಗಿತ್ತು.

  • ಆಸೀಸ್ ಆಟಗಾರರು ವಿರಾಟ್ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಹೆದರುತ್ತಾರೆ: ಕ್ಲಾರ್ಕ್

    ಆಸೀಸ್ ಆಟಗಾರರು ವಿರಾಟ್ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಹೆದರುತ್ತಾರೆ: ಕ್ಲಾರ್ಕ್

    ಸಿಡ್ನಿ: ನಮ್ಮ ಆಟಗಾರರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಹೆದರುತ್ತಾರೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.

    ಆಸ್ಟ್ರೇಲಿಯಾದ ಕ್ರಿಕೆಟಿಗರು ಮೈದಾನದಲ್ಲಿ ಅತ್ಯುತ್ತಮ ಸ್ಲೆಡ್ಜರ್‍ಗಳು. ಟೀಂ ಇಂಡಿಯಾ ಮಾಜಿ ಆಟಗಾರರಾದ ರಾಹುಲ್ ದ್ರಾವಿಡ್ ಅಥವಾ ಸಚಿನ್ ತೆಂಡೂಲ್ಕರ್ ಅವರಂತಹ ಶಾಂತ ಸ್ವಭಾವದ ಅನೇಕ ಕ್ರಿಕೆಟಿಗರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಆಟಗಾರರ ಸ್ಲೆಡ್ಜಿಂಗ್‍ಗೆ ತಮ್ಮ ಶಾಂತತೆಯನ್ನು ಕಳೆದುಕೊಂಡ ಪ್ರಸಂಗಗಳಿವೆ. ಆದರೆ ಈಗ ಆಸ್ಟ್ರೇಲಿಯಾ ಆಟಗಾರರು ಟೀಂ ಇಂಡಿಯಾ ಆಟಗಾರರ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಹಿಂದೇಟು ಆಗುತ್ತಿದ್ದಾರೆ ಎಂದು ಮೈಕಲ್ ಕ್ಲಾರ್ಕ್ ಅಭಿಪ್ರಾಯ ಪಟ್ಟಿದ್ದಾರೆ.

    ಸಂದರ್ಶವೊಂದರಲ್ಲಿ ಮಾತನಾಡಿದ ಅವರು, ಕ್ರಿಕೆಟ್ ಆರ್ಥಿಕ ವಿಷಯಗಳಲ್ಲಿ ಭಾರತ (ಬಿಸಿಸಿಐ) ಎಷ್ಟು ಪ್ರಬಲವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅದು ಅಂತರರಾಷ್ಟ್ರೀಯ ಕ್ರಿಕೆಟ್ ಆಗಿರಲಿ ಅಥವಾ ಐಪಿಎಲ್ ಆಗಿರಲಿ. ಎಲ್ಲ ಕ್ಷೇತ್ರದಲ್ಲೂ ಭಾರತ ಪ್ರಬಲವಾಗಿದೆ. ಹೀಗಾಗಿ ಐಪಿಎಲ್ ಒಪ್ಪಂದವನ್ನು ಉಳಿಸಿಕೊಳ್ಳಲು ಆಸ್ಟ್ರೇಲಿಯಾದ ಆಟಗಾರರು ಭಾರತೀಯ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಭಯಪಡುತ್ತಿದ್ದಾರೆ ಎಂದು ದೂರಿದ್ದಾರೆ.

    2018-19ರಲ್ಲಿ ನಡೆದ ಸರಣಿಯನ್ನು ಉಲ್ಲೇಖಿಸಿದ ಕ್ಲಾರ್ಕ್, ನಮ್ಮ ಆಟಗಾರರು ಕೊಹ್ಲಿ ಮತ್ತು ಉಳಿದ ಭಾರತೀಯ ಆಟಗಾರರಿಗೆ ಸ್ವಲ್ಪ ಭಯಭೀತರಾಗಿದ್ದರು. ಏಕೆಂದರೆ ಅವರು 2019ರ ಏಪ್ರಿಲ್‍ನಲ್ಲಿ ಅವರೊಂದಿಗೆ ಐಪಿಎಲ್ ಆಡಬೇಕಾಗಿತ್ತು. ಆದ್ದರಿಂದ ನಮ್ಮ ಕ್ರಿಕೆಟಿಗರು ಸ್ಲೆಡ್ಜಿಂಗ್‍ಗೆ ಹೆದರುತ್ತಿದ್ದರು. ಭಾರತದ ಆಟಗಾರರ ವಿರುದ್ಧ ಹೆಚ್ಚು ಸ್ಲೆಡ್ಜಿಂಗ್ ಮಾಡಿದರೆ ಐಪಿಎಲ್‍ನಲ್ಲಿ ಕೋಟ್ಯಂತರ ರೂಪಾಯಿಗಳ ಒಪ್ಪಂದವನ್ನು ಕಳೆದುಕೊಳ್ಳಬಹುದು ಅಂತ ಆಸ್ಟ್ರೇಲಿಯಾದ ಆಟಗಾರರು ಆತಂಕದಲ್ಲಿದ್ದರು ಎಂದು ಕ್ಲಾರ್ಕ್ ಹೇಳಿದ್ದಾರೆ.

    ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕ್ರಮವಾಗಿ ಐಪಿಎಲ್‍ನಲ್ಲಿ ಬೆಂಗಳೂರು ಮತ್ತು ಮುಂಬೈ ತಂಡಗಳ ನಾಯಕರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ತಂಡವನ್ನು ಆಯ್ಕೆ ಮಾಡುವಲ್ಲಿ ಅವರಿಗೆ ಪ್ರಮುಖ ಪಾತ್ರ ಇರುತ್ತದೆ. ಅದಕ್ಕಾಗಿಯೇ ಆಸೀಸ್ ಆಟಗಾರರು ಕೊಹ್ಲಿಯನ್ನು ಸ್ಲೆಡ್ಜಿಂಗ್ ಮಾಡುವುದಿಲ್ಲ ಅಂತ ನಾನು ಭಾವಿಸುತ್ತೇನೆ ಎಂದು ಕ್ಲಾರ್ಕ್ ತಿಳಿಸಿದ್ದಾರೆ.

    2018-19ರಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದ ಕೈಗೊಂಡಿತ್ತು. ಈ ವೇಳೆ ಭಾರತೀಯ ತಂಡವು 4 ಟೆಸ್ಟ್ ಸರಣಿಯಲ್ಲಿ ಆತಿಥೇಯರನ್ನು 2-1ರಿಂದ ಸೋಲಿಸಿತ್ತು. ಇದು ಆಸ್ಟ್ರೇಲಿಯಾದ ನೆಲದಲ್ಲಿ ಏಷ್ಯಾದ ದೇಶಗಳ ಮೊದಲ ಟೆಸ್ಟ್ ಸರಣಿಯ ಗೆಲುವು ಆಗಿದೆ.

    2008ರಲ್ಲಿ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರತಿವರ್ಷ ಮಾರ್ಚ್- ಮೇ ತಿಂಗಳ ಮಧ್ಯದಲ್ಲಿ ಟೂರ್ನಿ ನಡೆಯುತ್ತದೆ. ಎಂಟು ತಂಡಗಳು ಭಾರತದ ಎಂಟು ವಿವಿಧ ನಗರಗಳನ್ನು ಪ್ರತಿನಿಧಿಸುತ್ತವೆ.

    ಭಾರತ ಮತ್ತು ಆಸ್ಟ್ರೇಲಿಯಾ ಈ ಹಿಂದೆ ಅನೇಕ ಆನ್-ಫೀಲ್ಡ್ ಸ್ಲೆಡ್ಜಿಂಗ್ ಜಗಳಗಳಿಗೆ ಸಾಕ್ಷಿಯಾಗಿವೆ. 2008ರಲ್ಲಿ ‘ಮಂಕಿ ಗೇಟ್’ ಘಟನೆಯನ್ನು ಮರೆಯುವಂತಿಲ್ಲ. ಸಿಡ್ನಿಯಲ್ಲಿ ನಡೆಸಿದ್ದ ಟೆಸ್ಟ್ ಪಂದ್ಯವೊಂದರಲ್ಲಿ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಆಸ್ಟ್ರೇಲಿಯಾದ ಆಲ್‍ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಅವರನ್ನು ಹಲವು ಬಾರಿ ಮಂಕಿ ಎಂದು ಕರೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದಕ್ಕಾಗಿ ಹರ್ಭಜನ್ ಸಿಂಗ್ ವಿರುದ್ಧ ಐಸಿಸಿ ಮೂರು ಪಂದ್ಯಗಳ ನಿಷೇಧ ಹೇರಿತ್ತು.