Tag: australia

  • ಮೊಹಮ್ಮದ್ ಸಿರಾಜ್ ತಂದೆ ನಿಧನ – ಕೊನೆಯ ಬಾರಿ ಅಪ್ಪನನ್ನು ನೋಡಲಾಗದ ಸ್ಥಿತಿಯಲ್ಲಿ ವೇಗಿ

    ಮೊಹಮ್ಮದ್ ಸಿರಾಜ್ ತಂದೆ ನಿಧನ – ಕೊನೆಯ ಬಾರಿ ಅಪ್ಪನನ್ನು ನೋಡಲಾಗದ ಸ್ಥಿತಿಯಲ್ಲಿ ವೇಗಿ

    – ಆಟೋ ಓಡಿಸಿ ಮಗನನ್ನು ಟೀಂ ಇಂಡಿಯಾಗೆ ಕಳುಹಿಸಿದ್ದ ಅಪ್ಪ

    ನವದೆಹಲಿ: ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರ 53 ವರ್ಷದ ತಂದೆ ಮೊಹಮ್ಮದ್ ಗೌಸ್ ಅವರು ಹೈದರಾಬಾದಿನಲ್ಲಿ ವಿಧವಶರಾಗಿದ್ದಾರೆ.

    ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಮೊಹಮ್ಮದ್ ಗೌಸ್ ಅವರು ಹಲವಾರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸದ್ಯ ಸಿರಾಜ್ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ತಂದೆಯ ಅಂತ್ಯಕ್ರಿಯೆಗೂ ಬಾರದ ಸ್ಥಿತಿಯಲ್ಲಿ ಇದ್ದಾರೆ. ಕ್ವಾರಂಟೈನ್ ನಿಯಮದ ಪ್ರಕಾರ ಸಿರಾಜ್ ಆಸ್ಟ್ರೇಲಿಯಾದಿಂದ ಬರಲು ಸಾಧ್ಯವಾಗುತ್ತಿಲ್ಲ.

    ಈ ವಿಚಾರವಾಗಿ ಕ್ರೀಡಾವಾಹಿನಿಯ ಜೊತೆ ಮಾತನಾಡಿರುವ ಸಿರಾಜ್, ಸಿಡ್ನಿಯಲ್ಲಿ ಅಭ್ಯಾಸ ಮುಗಿಸಿ ಬಂದ ನನಗೆ ತಂದೆಯ ವಿಚಾರವನ್ನು ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿಯವರು ತಿಳಿಸಿದರು. ನಮ್ಮ ತಂದೆ ಯಾವಾಗಲೂ ಹೇಳುತ್ತಿದ್ದರು, ನನ್ನ ಮಗ ನನ್ನ ದೇಶವನ್ನು ಹೆಮ್ಮೆ ಪಡುವಂತೆ ಮಾಡುತ್ತಾನೆ ಎಂದು ಅವರಿಗಾಗಿ ನಾನು ಖಂಡಿತವಾಗಿಯೂ ಅದನ್ನು ಮಾಡೇ ಮಾಡುತ್ತೇನೆ ಎಂದು ಹೇಳಿದ್ದಾರೆ.

    ನನಗಾಗಿ ಮತ್ತು ನನ್ನ ಕನಸಿಗಾಗಿ ನನ್ನಪ್ಪ ಆಟೋ ಓಡಿಸಿಕೊಂಡು ಬಹಳ ಕಷ್ಟಪಟ್ಟಿದ್ದಾರೆ. ನಾನು ನನ್ನ ಜೀವನದ ಪ್ರಮುಖ ಬೆಂಬಲವೊಂದನ್ನು ಕಳೆದುಕೊಂಡಿದ್ದೇನೆ. ನಾನು ದೇಶಕ್ಕಾಗಿ ಆಡಬೇಕು ಎಂದು ಅವರು ಕನಸು ಕಂಡಿದ್ದರು. ಎಲ್ಲೋ ಒಂದು ಕಡೆ ಅವರ ಕನಸ್ಸನ್ನು ನನಸು ಮಾಡಿದ್ದೇನೆ ಎಂಬ ಸಂತೋಷವಿದೆ. ಕೊಹ್ಲಿಯವರು ಮತ್ತು ರವಿಶಾಸ್ತ್ರಿಯವರು ಬಂದು ವಿಷಯ ಹೇಳಿದಾಗ ಶಾಕ್ ಆಯ್ತು ಎಂದು ಸಿರಾಜ್ ಹೇಳಿಕೊಂಡಿದ್ದಾರೆ.

    ಅಕ್ಟೋಬರ್ 21ರಂದು ಕೋಲ್ಕತ್ತಾ ವಿರುದ್ಧ ಸಿರಾಜ್ ನಾಲ್ಕು ಓವರ್ ಬೌಲ್ ಮಾಡಿ ಕೇವಲ ಎಂಟು ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಅಂದು ಅವರ ತಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಅಂದು ಮ್ಯಾಚ್ ಮುಗಿಸಿ ಮನೆಗೆ ಕಾಲ್ ಮಾಡಿದಾಗ ತಂದೆ ಆಸ್ಪತ್ರೆಯಿಂದ ಮನೆಗೆ ಬಂದಿದ್ದರು. ಆಗ ನಾನು ಇಂದು ಎರಡು ಗುಡ್ ನ್ಯೂಸ್, ಮ್ಯಾಚ್ ಗೆದ್ದಿದ್ದೇವೆ ಜೊತೆಗೆ ಅಪ್ಪ ವಾಪಸ್ ಮನೆಗೆ ಬಂದಿದ್ದಾರೆ ಎಂದು ಖುಷಿಪಟ್ಟಿದೆ ಎಂದು ಸಿರಾಜ್ ತಿಳಿಸಿದ್ದಾರೆ.

    ಐಪಿಎಲ್‍ನಲ್ಲಿ ನಾನು ಚೆನ್ನಾಗಿ ಆಡಿದ್ದ ದಿನ ನನ್ನ ತಂದೆ ನನಗೆ ಕರೆ ಮಾಡಿ ನಿನ್ನ ಫೋಟೋ ಪೇಪರಿನಲ್ಲಿ ಬಂದಿದೆ. ದಿನ ಪೂರ್ತಿ ಜನ ನನ್ನ ಕರೆದು ನಿನ್ನ ಮಗ ಐಪಿಎಲ್ ಚೆನ್ನಾಗಿ ಆಡುತ್ತಿದ್ದಾನೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದರು ಎಂದು ತಂದೆಯ ನೆನಪನ್ನು ಸಿರಾಜ್ ಹಂಚಿಕೊಂಡಿದ್ದಾರೆ. ಸದ್ಯ ಸಿರಾಜ್ ಈಗ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದು, ಆಸ್ಟ್ರೇಲಿಯಾದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

  • ಶರ್ಟ್ ಬಿಚ್ಚಿಟ್ಟು ಪೃಥ್ವಿ ಶಾ ಹಿಂದೆ ಹೊರಟ ಶಿಖರ್ ಧವನ್

    ಶರ್ಟ್ ಬಿಚ್ಚಿಟ್ಟು ಪೃಥ್ವಿ ಶಾ ಹಿಂದೆ ಹೊರಟ ಶಿಖರ್ ಧವನ್

    ಸಿಡ್ನಿ: ಭಾರತ ತಂಡದ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್, ಯುವ ಆಟಗಾರ ಪೃಥ್ವಿ ಶಾ ಜೊತೆ ಫನ್ನಿಯಾಗಿ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸದ್ಯ ಭಾರತ ತಂಡದ ಆಟಗಾರರು ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟಿದ್ದು, ಮುಂದಿನ ವಾರದಿಂದ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಗಾಗಿ ಐಪಿಎಲ್ ಮುಗಿದ ಬಳಿಕ ಯುಎಇಯಿಂದಲೇ ಆಸ್ಟ್ರೇಲಿಯಾಗೆ ಹಾರಿದ ಭಾರತ ತಂಡ ಕ್ವಾರಂಟೈನ್ ಅವಧಿ ಮುಗಿಸಿ ಅಭ್ಯಾಸದಲ್ಲಿ ತೊಡಗಿಕೊಂಡಿದೆ.

     

    View this post on Instagram

     

    A post shared by Shikhar Dhawan (@shikhardofficial)

    ಅಭ್ಯಾಸದಲ್ಲಿ ತೊಡಗಿರುವ ಭಾರತದ ತಂಡದ ಶಿಖರ್ ಧವನ್ ಮತ್ತು ಪೃಥ್ವಿ ಶಾ, ಜಿಮ್‍ನಲ್ಲಿ ಬಾಲಿವುಡ್‍ನ ಹಳೆಯ ಗೀತೆಗೆ ಡ್ಯಾನ್ಸ್ ಮಾಡಿದ್ದಾರೆ. 90ರ ದಶಕದ ಹಿಟ್ ಹಿಂದಿ ಗೀತೆಗೆ ಶಿಖರ್ ಧವನ್ ಅವರು ಪೃಥ್ವಿ ಶಾ ಅವರ ಜೊತೆ ಶರ್ಟ್ ಬಿಚ್ಚಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಶಿಖರ್, ಈ ಲೈಲಾ ಇನ್ನು ನನ್ನನ್ನು ಹುಚ್ಚನನ್ನು ಮಾಡುತ್ತಾಳೆ ಎಂದು ಫನ್ನಿ ಆಗಿ ಬರೆದುಕೊಂಡಿದ್ದಾರೆ.

    ಈ ಬಾರಿಯ ಐಪಿಎಲ್‍ನಲ್ಲಿ ಭರ್ಜರಿ ಫಾರ್ಮ್‍ನಲ್ಲಿ ಇದ್ದ ಶಿಖರ್ ಧವನ್ ಅವರು, 17 ಪಂದ್ಯಗಳನ್ನಾಡಿ ಎರಡು ಭರ್ಜರಿ ಶತಕ ಮತ್ತು ನಾಲ್ಕು ಅರ್ಧಶತಕದ ನೆರವಿನಿಂದ 618 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಜೊತೆಗೆ ಶಿಖರ್ ಅವರ ಜೊತೆ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲೇ ಆಡಿದ್ದ ಪೃಥ್ವಿ ಶಾ, 13 ಪಂದ್ಯಗಳನ್ನಾಡಿ ಎರಡು ಅರ್ಧಶತಕದ ನೆರವಿನಿಂದ 228 ರನ್ ಸಿಡಿಸಿದ್ದರು.

    ಭಾರತ-ಆಸ್ಟ್ರೇಲಿಯಾ ಪ್ರವಾಸ ನವೆಂಬರ್ 27ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಏಕದಿನ ಪಂದ್ಯದ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಟಿ-20 ಸರಣಿ ಆಡಲಿವೆ. ನಂತರ ಡಿಸೆಂಬರ್ 17ರಿಂದ ಇಂಡಿಯಾ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಾರಂಭವಾಗಲಿದೆ.

  • ಟೀಂ ಇಂಡಿಯಾ ಆಟಗಾರರು ತಂಗಿರುವ ಹೋಟೆಲ್ ಬಳಿ ವಿಮಾನ ಪತನ

    ಟೀಂ ಇಂಡಿಯಾ ಆಟಗಾರರು ತಂಗಿರುವ ಹೋಟೆಲ್ ಬಳಿ ವಿಮಾನ ಪತನ

    – ಮೈದಾನದಿಂದ ಒಳಗೆ ಓಡಿದ ಕ್ರಿಕೆಟ್, ಫುಟ್‍ಬಾಲ್ ಆಟಗಾರರು

    ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಆಟಗಾರು ತಂಗಿರುವ ಹೋಟಿಲಿನಿಂದ 30 ಕಿಲೋ ಮೀಟರ್ ದೂರದಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿದೆ.

    ಸದ್ಯ ಭಾರತ ಕ್ರಿಕೆಟ್ ತಂಡ ಮೂರು ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡಲು ಆಸ್ಟ್ರೇಲಿಯಾಗೆ ಹೋಗಿದೆ. ಟೀಂ ಇಂಡಿಯಾ ಆಟಗಾರರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಸದ್ಯ ಅಭ್ಯಾಸ ಮಾಡುತ್ತಿದ್ದಾರೆ. ಇಂಡಿಯಾ ಆಟಗಾರರು ತಂಗಿರುವ ಸಿಡ್ನಿ ಒಲಿಂಪಿಕ್ ಪಾರ್ಕಿನಿಂದ 30 ಕಿಲೋ ಮೀಟರ್ ದೂರದ ಮೈದಾನವೊಂದರಲ್ಲಿ ವಿಮಾನ ಪತನವಾಗಿದೆ.

    ಕ್ರೋಮರ್ ಪಾರ್ಕ್ ಮೈದಾನದಲ್ಲಿ ಲಘು ವಿಮಾನವೊಂದು ನೆಲಕ್ಕಪ್ಪಳಿಸಿದ್ದು, ಆ ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದ ಸ್ಥಳೀಯ ಕ್ರಿಕೆಟ್ ಆಟಗಾರರು ಮತ್ತು ಫುಟ್‍ಬಾಲ್ ಪ್ಲೇಯರ್ಸ್ ವಿಮಾನ ಬಿದ್ದ ರಭಸಕ್ಕೆ ಹೆದರಿ ಮೈದಾನದಿಂದ ಓಡಿ ಹೋಗಿದ್ದಾರೆ. ಲಘು ವಿಮಾನವಾದ ಕಾರಣ ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿಮಾನದಲ್ಲಿ ಇದ್ದ ಇಬ್ಬರು ತರಬೇತಿ ಪೈಲೆಟ್‍ಗಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ.

    ವಿಮಾನ ಪತನವಾದಾಗ ಸ್ಥಳದಲ್ಲಿ ಫುಟ್‍ಬಾಲ್ ಮ್ಯಾಚ್ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ವಿಮಾನ ಬೀಳುವುದನ್ನು ಗಮನಿಸಿದ ಆಟಗಾರರು ಒಳಗೆ ಓಡಿ ಹೋಗಿದ್ದಾರೆ. ಈ ಕಾರಣದಿಂದ ಯಾವುದೇ ಸಾವು ಸಂಭವಿಸಿಲ್ಲ. ಅಪಘಾತವಾದ ವಿಮಾನ ಟ್ರೈನಿಂಗ್ ಸ್ಕೂಲ್‍ಗೆ ಸೇರಿದ್ದಾಗಿದ್ದು, ವಿದ್ಯಾರ್ಥಿಗಳಿಗೆ ಟ್ರೈನಿಂಗ್ ನೀಡುವಾಗ ವಿಮಾನ ಎಂಜಿನ್ ಕೈಕೊಟ್ಟು ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

    ಭಾರತ-ಆಸ್ಟ್ರೇಲಿಯಾ ಸರಣಿಯು ನವೆಂಬರ್ 27ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಏಕದಿನ ಪಂದ್ಯದ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಟಿ-20 ಸರಣಿ ಆಡಲಿವೆ. ನಂತರ ಡಿಸೆಂಬರ್ 17ರಿಂದ ಇಂಡಿಯಾ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಾರಂಭವಾಗಲಿದೆ.

  • ದೀಪಾವಳಿಗೆ ಆಸ್ಟ್ರೇಲಿಯಾದಿಂದ ವಿಶೇಷ ಸಂದೇಶ ಕಳುಹಿಸಿದ ಕೊಹ್ಲಿ

    ದೀಪಾವಳಿಗೆ ಆಸ್ಟ್ರೇಲಿಯಾದಿಂದ ವಿಶೇಷ ಸಂದೇಶ ಕಳುಹಿಸಿದ ಕೊಹ್ಲಿ

    ನವದೆಹಲಿ: ದೀಪಾವಳಿ ಹಿನ್ನೆಲೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ.

    ಕೊರೊನಾ ಸೋಂಕಿನ ನಡುವೆಯೂ ಭಾರತ ಸರಳವಾಗಿ ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತಿದೆ. ಸದ್ಯ ಆಸ್ಟ್ರೇಲಿಯಾದಲ್ಲಿರುವ ಕೊಹ್ಲಿ, ಟ್ವಿಟ್ಟರಿನಲ್ಲಿ ವೀಡಿಯೋ ಹಂಚಿಕೊಳ್ಳುವ ಮೂಲಕ ಪಟಾಕಿ ಹೊಡೆಯದೆ ಶಾಂತಿ ರೀತಿಯಲ್ಲಿ ದೀಪಾವಳಿ ಆಚರಿಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

    ತಮ್ಮ ಟ್ವಿಟ್ಟರಿನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿರುವ ವಿರಾಟ್ ಕೊಹ್ಲಿ, ನನ್ನ ಕಡೆಯಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ನಾನು ಕೇಳಿಕೊಳ್ಳುತ್ತೇನೆ. ಜೊತೆಗೆ ಈ ಬಾರಿ ದೀಪಾವಳಿಯಲ್ಲಿ ಪಟಾಕಿಯನ್ನು ಸಿಡಿಸಬೇಡಿ. ಪರಿಸರವನ್ನು ಸಂರಕ್ಷಿಸಿ ಜೊತೆಗೆ ನಿಮ್ಮ ಪ್ರೀತಿ ಪಾತ್ರರ ಜೊತೆ ಮನೆಯಲ್ಲೇ ದೀಪಾವಳಿಯನ್ನು ಆಚರಿಸಿ ಎಂದು ಕೇಳಿಕೊಂಡಿದ್ದಾರೆ.

    ಸದ್ಯ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾಗೆ ಪ್ರವಾಸ ಕೈಗೊಂಡಿದೆ. ಐಪಿಎಲ್ ಮುಗಿದ ಬಳಿಕ ಇಂಡಿಯಾದ ಆಟಗಾರರು ಯುಎಇಯಿಂದ ನೇರವಾಗಿ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಈ ನಡುವೆ ಆಸೀಸ್ ತಲುಪಿದ ಅವರನ್ನು ಕ್ವಾರಂಟೈನ್ ಮಾಡಲಾಗಿದ್ದು, ದೀಪಾವಳಿ ಹಬ್ಬದಲ್ಲೂ ಆಟಗಾರರು ರೂಮಿನಿಂದ ಹೊರಬರುವಂತಿಲ್ಲ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಅವರು ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕಿದೆ.

    ಭಾರತ-ಆಸ್ಟ್ರೇಲಿಯಾ ಸರಣಿಯು ನವೆಂಬರ್ 27ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಏಕದಿನ ಪಂದ್ಯದ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಟಿ-20 ಸರಣಿ ಆಡಲಿವೆ. ನಂತರ ಡಿಸೆಂಬರ್ 17ರಿಂದ ಇಂಡಿಯಾ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಾರಂಭವಾಗಲಿದೆ. ಅಡಿಲೇಡ್‍ನಲ್ಲಿ ಆಡಲಿರುವ ಡೇ/ನೈಟ್ ಪಂದ್ಯದ ನಂತರ ಕೊಹ್ಲಿ ಭಾರತಕ್ಕೆ ಮರಳಲಿದ್ದಾರೆ.

  • ಕೊಹ್ಲಿ ಸೇನೆಯ ನ್ಯೂಲುಕ್- ರೆಟ್ರೋ ಥೀಮ್ ಜೆರ್ಸಿಯಲ್ಲಿ ಟೀಂ ಇಂಡಿಯಾ

    ಕೊಹ್ಲಿ ಸೇನೆಯ ನ್ಯೂಲುಕ್- ರೆಟ್ರೋ ಥೀಮ್ ಜೆರ್ಸಿಯಲ್ಲಿ ಟೀಂ ಇಂಡಿಯಾ

    ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಸುದೀರ್ಘ ಟೂರ್ನಿ ನವೆಂಬರ್ ಅಂತ್ಯದಲ್ಲಿ ಆರಂಭವಾಗಲಿದ್ದು, ಟೀಂ ಇಂಡಿಯಾ ಆಟಗಾರರು ಟೂರ್ನಿಯಲ್ಲಿ ರೆಟ್ರೋ ಥೀಮ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ ಸ್ಪೋರ್ಟ್ಸ್ ಔಟ್ ಲುಕ್ ವರದಿ ಮಾಡಿದೆ.

    ಆಸೀಸ್ ವಿರುದ್ಧ ಟೂರ್ನಿಗಾಗಿ ಈಗಾಗಲೇ ದುಬೈನಿಂದ ಹೋರಾಟಿರುವ ಟೀಂ ಇಂಡಿಯಾ ಆಟಗಾರರು ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಬಳಿಕ ನೆಟ್ ತರಬೇತಿ ಆರಂಭಿಸಲಿದ್ದಾರೆ. ಆಸೀಸ್ ಪ್ರವಾಸ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಹೊಸ ಪಿಪಿಇ ಕಿಟ್ ಧರಿಸಿ ಆಟಗಾರರು ಆಸೀಸ್ ಗೆ ಪ್ರಯಾಣಿಸಿದ ಫೋಟೋಗಳನ್ನು ಬಿಸಿಸಿಐ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇತ್ತ ಹೊಸ ಜೆರ್ಸಿ ರೆಟ್ರೋ ಥೀಮ್‍ನಲ್ಲಿ ಸಿದ್ಧಪಡಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರರು ಧರಿಸಿದ್ದ ಜೆರ್ಸಿಯ ಲುಕ್‍ಗೆ ಮೆರುಗು ನೀಡಿ 70 ದಶಕದ ಸ್ಫೂರ್ತಿಯೊಂದಿಗೆ ಹೊಸ ಜೆರ್ಸಿಯನ್ನು ಸಿದ್ಧಪಡಿಸಲಾಗಿದೆ. ನೀಲಿ ಬಣ್ಣದಲ್ಲಿದ್ದ ಜೆರ್ಸಿ ಕಡು ನೀಲಿಬಣ್ಣಕ್ಕೆ ಬದಲಾಗಿದ್ದು, ಭುಜದ ಭಾಗದಲ್ಲಿ ಮೊದಲು ಬಿಳಿ, ಕೆಂಪು, ಹಸಿರು, ನೀಲಿ ಬಣ್ಣಗಳ ಪಟ್ಟಿಗಳನ್ನು ಕಾಣಬಹುದಾಗಿದೆ. ಜೆರ್ಸಿಯ ಮೇಲೆ ಎಂಪಿಎಲ್ ಸ್ಪೋರ್ಟ್ಸ್ ಹೆಸರನ್ನು ಮುದ್ರಿಸಲಾಗಿದೆ. ಟೀಂ ಇಂಡಿಯಾ ಆಟಗಾರರಿಗೆ ಹೊಸ ಪ್ರಯೋಜಕತ್ವ ನೀಡುತ್ತಿರುವ ಎಂಪಿಎಲ್ ಸ್ಪೋರ್ಟ್ಸ್ ಹೊಸ ಕಿಟ್‍ಗಳನ್ನು ನೀಡುತ್ತಿದೆ.

    ಇದೇ ಟೂರ್ನಿಯಲ್ಲಿ ಆಸೀಸ್ ತಂಡ ಕೂಡ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯುತ್ತಿದೆ. ಆಸೀಸ್‍ನ ಸ್ಥಳೀಯ ಅಂಶಗಳನ್ನು ಸಾರಿ ಹೇಳುವಂತೆ ಹೊಸ  ಜೆರ್ಸಿಯನ್ನು ವಿನ್ಯಾಸ ಮಾಡಲಾಗಿದೆ. ಅಲ್ಲದೇ 1868ರ ಕ್ರಿಕೆಟ್ ತಂಡದ ಕಥೆಯನ್ನು ಈ ಸಮವಸ್ತ್ರ ಹೇಳುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಟಿ20 ಸರಣಿಯಲ್ಲಿ ಆಸೀಸ್ ಪಡೆ ಹೊಸ ಜೆರ್ಸಿಯನ್ನು ಧರಿಸಲಿದೆ.

    ಐಪಿಎಲ್ ಟೂರ್ನಿಯಂತೆ ಸಂಪೂರ್ಣ ಬಯೋಸೆಕ್ಯೂರ್ ವಾತಾವರಣದಲ್ಲೇ ಟೂರ್ನಿ ನಡೆಯಲಿದೆ. ನ.27 ರಿಂದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಆ ಬಳಿಕ ಟಿ20 ಹಾಗೂ ಟೆಸ್ಟ್ ಪಂದ್ಯಗಳು ನಡೆಯಲಿದೆ. ಟೂರ್ನಿಯ ವಿಶೇಷವಾಗಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳ ನಡುವೆ ಡಿಸೆಂಬರ್ 17 ರಂದು ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ನಡೆಯಲಿದೆ. ಇತ್ತಂಡಗಳ ನಡುವೆ ನಡೆಯುತ್ತಿರುವ ಮೊದಲ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಇದಾಗಿದೆ.

    ಟಿ20 ತಂಡ: ಕೊಹ್ಲಿ, ಧವನ್, ಮಯಾಂಕ್, ಕೆಎಲ್ ರಾಹುಲ್, ಶ್ರೇಯಾಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಜಡೇಜಾ, ವಾಷಿಂಗ್ಟನ್ ಸುಂದರ್, ಚಹಲ್, ಬುಮ್ರಾ, ಶಮಿ, ಶೈನಿ, ದೀಪಕ್ ಚಹರ್, ನಟರಾಜನ್.

    ಏಕದಿನ ತಂಡ: ವಿರಾಟ್ ಕೊಹ್ಲಿ, ಧವನ್, ಶುಭ್‍ಮನ್ ಗಿಲ್, ಕೆಎಲ್ ರಾಹುಲ್, ಶ್ರೇಯಾಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಂಕ್, ಜಡೇಜಾ, ಚಹಲ್, ಕುಲ್ದೀಪ್ ಯಾದವ್, ಬುಮ್ರಾ, ಶಮಿ, ಶೈನಿ, ಶಾರ್ದೂಲ್ ಠಾಕೂರ್, ಸಂಜು ಸ್ಯಾಮ್ಸನ್.

    ಟೆಸ್ಟ್ ತಂಡ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಯಾಂಕ್, ಪೃಥ್ವಿ ಶಾ, ಕೆಎಲ್ ರಾಹುಲ್, ಚೇತೇಸ್ವರ ಪೂಜಾರಾ, ರಹಾನೆ, ಹನುಮ ವಿಹಾರಿ, ಶುಭ್‍ಮನ್ ಗೀಲ್, ವೃದ್ಧಿಮಾನ್ ಸಹಾ, ರಿಷಬ್ ಪಂತ್, ಬುಮ್ರಾ, ಶಮಿ, ಉಮೇಶ್ ಯಾದವ್, ಶೈನಿ, ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್.

  • ಆಸೀಸ್ ಟೂರ್ನಿ: ರೋಹಿತ್ ಶರ್ಮಾ ಲಭ್ಯತೆ ಬಗ್ಗೆ ಸೌರವ್ ಗಂಗೂಲಿ ಪ್ರತಿಕ್ರಿಯೆ

    ಆಸೀಸ್ ಟೂರ್ನಿ: ರೋಹಿತ್ ಶರ್ಮಾ ಲಭ್ಯತೆ ಬಗ್ಗೆ ಸೌರವ್ ಗಂಗೂಲಿ ಪ್ರತಿಕ್ರಿಯೆ

    ಮುಂಬೈ: ರೋಹಿತ್ ಶರ್ಮಾ ಪೂರ್ಣ ಪ್ರಮಾಣದಲ್ಲಿ ಫಿಟ್ನೆಸ್ ಸಾಧಿಸಿದರೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಸಮಿತಿ ಪರಿಗಣಿಸಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

    ಕೊರೊನಾ ಬ್ರೇಕ್ ಬಳಿಕ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಮೊದಲ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸಲಿದೆ. ಆದರೆ ಈ ಟೂರ್ನಿಗೆ ರೋಹಿತ್ ಶರ್ಮಾರನ್ನು ಆಯ್ಕೆ ಮಾಡದಿರುವ ಬಗ್ಗೆ ಭಾರೀ ಚರ್ಚೆ ನಡೆದಿತ್ತು. 2 ತಿಂಗಳ ಕಾಲ ನಡೆಯುವ ಟೂರ್ನಿಗೆ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಹಿಟ್‍ಮ್ಯಾನ್ ರೋಹಿತ್ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಪರಿಗಣಸಿರಲಿಲ್ಲ.

    2020ರ ಐಪಿಎಲ್ ಟೂರ್ನಿಯ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡಬಲ್ ಸೂಪರ್ ಓವರ್ ಪಂದ್ಯದಲ್ಲಿ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಸೀಸ್ ಟೂರ್ನಿಗೆ ರೋಹಿತ್ ಶರ್ಮಾ ಆಸೀಸ್ ಟೂರ್ನಿಗೆ ಲಭ್ಯರಾಗುತ್ತಾರಾ ಎಂಬ ಬಗ್ಗೆ ಗಂಗೂಲಿ ಮಾಧ್ಯಮವೊಂದರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ರೋಹಿತ್ ಶರ್ಮಾರೊಂದಿಗೆ ಇಶಾಂತ್ ಶರ್ಮಾ ಅವರು ಪೂರ್ಣ ಪ್ರಮಾಣದಲ್ಲಿ ಫಿಟ್ನೆಸ್ ಸಾಧಿಸಿದರೆ ಆಸೀಸ್ ಟೂರ್ನಿಗೆ ಬಿಸಿಸಿಐ ಆಯ್ಕೆ ಸಮಿತಿ ಪರಿಗಣಿಸುತ್ತದೆ. ಇಬ್ಬರ ಗಾಯದ ಸಮಸ್ಯೆ ಸ್ವತಃ ಮಾಹಿತಿ ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಆಸ್ಟ್ರೇಲಿಯಾ ತಂಡವನ್ನು ತವರಿನಲ್ಲಿ ಎದುರಿಸುವುದು ಅಷ್ಟು ಸುಲಭವಲ್ಲ. ಆಸೀಸ್ ತಂಡಕ್ಕೆ ವಾರ್ನರ್, ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ ಕಮ್‍ಬ್ಯಾಕ್ ಮಾಡಿದ್ದು ಹೆಚ್ಚಿನ ಬಲ ನೀಡಿದೆ. ಅವರನ್ನು ಎದುರಿಸುವ ಶಕ್ತಿ ಭಾರತದ ಆಟಗಾರರಿಗೆ ಇದೆ. ಆಸೀಸ್ ಬ್ಯಾಟಿಂಗ್ ಲೈನ್‍ಅಪ್‍ಗೆ ಸವಾಲು ನೀಡಲು ಬುಮ್ರಾ, ಶಮಿ, ಸೈನಿರೊಂದಿಗೆ ವೇಗದ ಬೌಲರ್‌ಗಳು ಸಮರ್ಥರಾಗಿದ್ದಾರೆ.

    ಟೂರ್ನಿಯಲ್ಲಿ ಎರಡು ತಂಡಗಳ ಗೆಲುವಿಗೂ 50-50 ಅವಕಾಶವಿದೆ. ಆಸೀಸ್ ಟೂರ್ನಿಯಲ್ಲಿ ಇತ್ತಂಡಗಳು ಹೆಚ್ಚು ರನ್ ಗಳಿಸುವುದು ಮುಖ್ಯ. ಯಾರು ಹೆಚ್ಚು ರನ್ ಗಳಿಸುತ್ತಾರೋ ಅವರಿಗೆ ಗೆಲುವು ಲಭ್ಯವಾಗಲಿದೆ ಎಂದು ಗಂಗೂಲಿ ಹೇಳಿದ್ದಾರೆ.

    ಐಪಿಎಲ್ 2020ರ ಟೂರ್ನಿ ಮುಕ್ತಾಯವಾದ ಬಳಿಕ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ನ.12 ರಂದು ಆಸ್ಟ್ರೇಲಿಯಾಗೆ ಪ್ರವಾಸ ಕೈಗೊಳ್ಳಲಿದೆ. ಟೂರ್ನಿಯಲ್ಲಿ ಇತ್ತಂಡಗಳ ನಡುವೆ ನಾಲ್ಕು ಟೆಸ್ಟ್ ಪಂದ್ಯ, ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳು ನಡೆಯಲಿದೆ.

  • ಇಂಡೋ, ಆಸೀಸ್‌ ಮ್ಯಾಚ್‌ – ಬಾಕ್ಸಿಂಗ್‌ ಡೇ ಟೆಸ್ಟ್‌ ಎಂದು ಯಾಕೆ ಕರೆಯುತ್ತಾರೆ?

    ಇಂಡೋ, ಆಸೀಸ್‌ ಮ್ಯಾಚ್‌ – ಬಾಕ್ಸಿಂಗ್‌ ಡೇ ಟೆಸ್ಟ್‌ ಎಂದು ಯಾಕೆ ಕರೆಯುತ್ತಾರೆ?

    ಮೆಲ್ಬರ್ನ್‌:  ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.
    ಆಸ್ಟ್ರೇಲಿಯಾದಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೇರಲಾಗಿರುವ ನಿರ್ಬಂಧಗಳನ್ನು ತೆಗೆಯಲಾಗುತ್ತಿದೆ. ವಿಕ್ಟೋರಿಯಾ ರಾಜ್ಯದ ಪ್ರೀಮಿಯರ್‌ ಡೇನಿಯಲ್‌ ಆಂಡ್ರ್ಯೂಸ್‌ ಪ್ರತಿಕ್ರಿಯಿಸಿ, ಮೆಲ್ಬರ್ನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ವೀಕ್ಷಕರು ಇರುತ್ತಾರೆ ಎಂದು ನಾನು ವಿಶ್ವಾಸದಿಂದ ಹೇಳುತ್ತೇನೆ ಎಂದು ಹೇಳಿದ್ದಾರೆ.
    ಬಾಕ್ಸಿಂಗ್‌ ಡೇ ಯಾಕೆ?
    ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಟೆಸ್ಟ್‌ ಪಂದ್ಯಕ್ಕೆ ಬಾಕ್ಸಿಂಗ್‌ ಡೇ ಎಂದು ಕರೆಯಲು ಕಾರಣವಿದೆ.  ಇಂಗ್ಲೆಂಡ್ ಹಾಗೂ ಹಲವು ದೇಶಗಳಲ್ಲಿ ಕ್ರಿಸ್‌ಮಸ್ ಮರುದಿನ ಅಂದರೆ ಡಿಸೆಂಬರ್ 26ರ ರಜಾದಿನವನ್ನೂ ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ.  ಜರ್ಮನಿ, ಪೊಲೆಂಡ್,  ರೋಮೆನಿಯಾ, ಹಂಗೇರಿ, ನೆದರ್ಲೆಂಡ್ಸ್ ಸೇರಿದಂತೆ ಕೆಲ ದೇಶಗಳಲ್ಲಿ ಡಿಸೆಂಬರ್ 26ರನ್ನು ಸೆಕೆಂಡ್ ಕ್ರಿಸ್‌ಮಸ್ ಡೇ ಎಂದು ಆಚರಿಸಲಾಗುತ್ತಿದೆ.  ಈ ದಿನ ಸಾರ್ವಜನಿಕ ರಜಾ ದಿನವಾಗಿದ್ದು, ಐರ್ಲೆಂಡ್‌ ಹಾಗೂ ಸ್ಪೇನ್‌ನ ಕ್ಯಾಟಲೋನಿಯಾ ರೀಜನ್‌ನಲ್ಲಿ ʼಸೈಂಟ್ ಸ್ಟೀಫನ್ ಡೇʼ ಎಂದು ಕರೆಯಲಾಗುತ್ತದೆ.
    ಈ ಹಿಂದೆ ಆಸ್ಟ್ರೇಲಿಯಾ ಬ್ರಿಟಿಷರ ವಸಹತು ಆಗಿತ್ತು. ಈ ಸಮಯದಲ್ಲಿ ಇಂಗ್ಲೆಂಡ್‌ ರಾಜಮನೆತನದವರು ಕ್ರಿಸ್ಮಸ್‌ ಸಮಯದಲ್ಲಿ ಕೆಲಸ ಮಾಡಿದ ನೌಕರರಿಗೆ ಡಿ.26 ರಂದು ಬಾಕ್ಸ್‌ ಮೂಲಕ ಉಡುಗೊರೆ ನೀಡುತ್ತಿದ್ದರು. ಬಾಕ್ಸ್‌ಗಳಲ್ಲಿ ಸಿಹಿ ತಿಂಡಿ ಸೇರಿದಂತೆ ಹಲವು ಉಡುಗೊರೆ ಡಿ.26 ರಂದು ಸಿಗುತ್ತಿದ್ದ ಕಾರಣ ಈ ದಿನಕ್ಕೆ ‘ಬಾಕ್ಸಿಂಗ್‌ ಡೇ’ ಎಂಬ ಹೆಸರು ಬಂತು. ಹೀಗಾಗಿ ಈ ದಿನ ನಡೆಯುವ ಟೆಸ್ಟ್ ಪಂದ್ಯಕ್ಕೆ ‘ಬಾಕ್ಸಿಂಗ್ ಡೇ ಟೆಸ್ಟ್’ ಪಂದ್ಯ ಎಂಬ ಹೆಸರು ಬಂದಿದೆ.
    ಮೆಲ್ಬರ್ನ್‌ನಲ್ಲೇ ಯಾಕೆ?
    ಬಹಳ ಹಿಂದೆ ಕ್ರಿಸ್ಮಸ್‌ ಸಮಯದಲ್ಲಿ ಶೆಫೀಲ್ಡ್ ಶೀಲ್ಡ್ (ಆಸ್ಟ್ರೇಲಿಯಾದ ಪ್ರಥಮ ದರ್ಜೆ ಕ್ರಿಕೆಟ್‌) ಕ್ರಿಕೆಟ್‌ ಟೂರ್ನಿ ವಿಕ್ಟೋರಿಯಾ  ಮತ್ತು ನ್ಯೂ ಸೌತ್‌ ವೇಲ್ಸ್‌  ತಂಡಗಳ ನಡುವೆ ಮೆಲ್ಬರ್ನ್‌ನಲ್ಲಿ ನಡೆಯುತ್ತಿತ್ತು. 1950-51 ರಲ್ಲಿ ಆಶಸ್‌ ಸರಣಿ ಡಿ.22 ರಿಂದ 27 ರವರೆಗೆ ಮೆಲ್ಬರ್ನ್‌ ಅಂಗಳದಲ್ಲಿ ನಡೆದಿತ್ತು. ಈ ಪಂದ್ಯದ ನಾಲ್ಕನೇ ದಿನವನ್ನು(ಡಿ.26) ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತಿತ್ತು.  ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮೊದಲ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆಡಿತ್ತು. ಪಂದ್ಯದ ನಾಲ್ಕನೇ ದಿನವಾದ ಬಾಕ್ಸಿಂಗ್ ಡೆ ದಿನ ಬರೋಬ್ಬರಿ 60,486 ಮಂದಿ ಕ್ರಿಕೆಟ್‌  ವೀಕ್ಷಿಸಿದ್ದರು.
    1980ರಲ್ಲಿ ಡಿಸೆಂಬರ್ 22 ರಿಂದ 27 ರವರೆಗೆ ನಡೆಯತ್ತಿದ್ದ ಟೆಸ್ಟ್ ಪಂದ್ಯದ ದಿನಾಂಕವನ್ನು ಬದಲಾಯಿಸಿ ಡಿ.26 ರಂದು ಟೆಸ್ಟ್ ಕ್ರಿಕೆಟ್ ಆಯೋಜಿಸಲು ಮೆಲ್ಬರ್ನ್‌ ಕ್ರಿಕೆಟ್ ಕ್ಲಬ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿತು. ಬಳಿಕ ಪ್ರತಿ ವರ್ಷ ಡಿಸೆಂಬರ್ 26 ರಂದು ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯ ಆಯೋಜಿಸುತ್ತಿದೆ.  ಇಂಗ್ಲೆಂಡ್, ಭಾರತ, ದಕ್ಷಿಣ  ಆಫ್ರಿಕಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಪಾಕಿಸ್ತಾನ ತಂಡಗಳು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಡಿದೆ. 1985ರಲ್ಲಿ  ಭಾರತ ಮೊದಲ ಬಾಕ್ಸಿಂಗ್‌ ಡೇ ಟೆಸ್ಟ್‌ ಆಡಿತ್ತು. ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು.
    ಭಾರತದ ಸಾಧನೆ ಏನು?
    ಭಾರತ ಮೊದಲು ಬಾಕ್ಸಿಂಗ್ ಡೆ ಟೆಸ್ಟ್ ಪಂದ್ಯ ಆಡಿದ್ದು 1985ರಲ್ಲಿ. 1985, 1991, 1999, 2003, 2007, 2011, 2014, 2018 ರಲ್ಲಿ ಭಾರತ ಬಾಕ್ಸಿಂಗ್‌ ಡೇ ಟೆಸ್ಟ್‌ ಆಡಿದೆ. ಈ ಪೈಕಿ 1985 ಮತ್ತು 2014ರ ಪಂದ್ಯ ಡ್ರಾ ಗೊಂಡಿತ್ತು. 2018ರ ಪಂದ್ಯವನ್ನು 137 ರನ್‌ಗಳಿಂದ ಗೆದ್ದುಕೊಂಡಿತ್ತು.  ಉಳಿದ 5 ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ.
    2018ರಲ್ಲಿ ಕೊಹ್ಲಿ ನೇತೃತ್ವದ ಭಾರತ ಮೊದಲ ಇನ್ನಿಂಗ್ಸ್‌ ಅನ್ನು  443 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿತ್ತು.  ಆಸ್ಟ್ರೇಲಿಯಾ 151 ರನ್‌ಗಳಿಗೆ ಆಲೌಟ್‌ ಆಗಿತ್ತು. ಭಾರತ ಎರಡನೇ ಇನ್ನಿಂಗ್ಸ್‌ ಅನ್ನು 106 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿದ್ದರೆ  ಆಸ್ಟ್ರೇಲಿಯಾ 261 ರನ್‌ಗಳಿಗೆ ಆಲೌಟ್‌ ಆಗಿತ್ತು.  ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಪಡೆದಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌  ಪಡೆದು ಮಿಂಚಿದ್ದರು. 9 ವಿಕೆಟ್‌ ಪಡೆದು ಆಸ್ಟ್ರೇಲಿಯಾ ಸೋಲಿಗೆ ಕಾರಣವಾಗಿದ್ದ ಬುಮ್ರಾಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
  • ಆಸೀಸ್ ಪ್ರವಾಸದಿಂದ ರೋಹಿತ್ ಔಟ್- ಗೊಂದಲಕ್ಕೀಡು ಮಾಡಿದ ಬಿಸಿಸಿಐ ನಡೆ

    ಆಸೀಸ್ ಪ್ರವಾಸದಿಂದ ರೋಹಿತ್ ಔಟ್- ಗೊಂದಲಕ್ಕೀಡು ಮಾಡಿದ ಬಿಸಿಸಿಐ ನಡೆ

    ಮುಂಬೈ: ಆಸ್ಟ್ರೇಲಿಯಾ ಸರಣಿಗೆ ಸೋಮವಾರ ಬಿಸಿಸಿಐ ಪ್ರಕಟ್ಟಿಸಿದ್ದ ತಂಡದಲ್ಲಿ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅವರಿಗೆ ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಹಲವು ಅನುಮಾನಗಳು ಮೂಡಿದ್ದು, ರೋಹಿತ್ ಶರ್ಮಾ ಕೈಬಿಡಲು ಕಾರಣವೇನು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

    ಐಪಿಎಲ್ 2020ರ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಆ ಬಳಿಕ ಪಂದ್ಯದಲ್ಲಿಯೂ ರೋಹಿತ್ ಶರ್ಮಾ ಫೀಲ್ಡಿಂಗ್ ನಡೆಸಿರಲಿಲ್ಲ. ಬಳಿಕ ಸೂಪರ್ ಓವರಿನಲ್ಲಿ ಪೋಲಾರ್ಡ್ ಅವರು ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಪಂದ್ಯದಲ್ಲಿ ಮುಂಬೈ ಸೋಲುಂಡಿತ್ತು.

    ಪಂಜಾಬ್ ವಿರುದ್ಧದ ಬಳಿಕ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ತಂಡ ವಿರುದ್ಧ ಆಡಿದ್ದ ಪಂದ್ಯಗಳಲ್ಲಿ ರೋಹಿತ್ ಶರ್ಮಾ ತಂಡದಿಂದ ಹೊರಗುಳಿದಿದ್ದರು. ಸದ್ಯ ಬಿಸಿಸಿಐ ಪ್ರಕಟಿಸಿರುವ ಆಸ್ಟ್ರೇಲಿಯಾ ವಿರುದ್ಧ ಟಿ20, ಏಕದಿನ ಮತ್ತು ಟೆಸ್ಟ್ ಟೂರ್ನಿಗೆ ಪ್ರಕಟಿಸಿರುವ ತಂಡದಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಗಾಯದ ತೀವ್ರತೆ ಮೇಲೆ ಅಭಿಮಾನಿಗಳಲ್ಲಿ ಸಂದೇಹ ವ್ಯಕ್ತವಾಗಿದೆ.

    ಸದ್ಯ ಈ ಕುರಿತು ಪ್ರಶ್ನೆ ಮಾಡಿರುವ ಟೀಂ ಇಂಡಿಯಾ ದಿಗ್ಗಜ ಆಟಗಾರ, ಐಪಿಎಲ್ ಕ್ರಿಕೆಟ್ ವಿಶ್ಲೇಷಕ ಸುನಿಲ್ ಗವಾಸ್ಕರ್, ಮುಂಬೈ ಇಂಡಿಯನ್ಸ್ ಹಾಗೂ ಟೀಂ ಇಂಡಿಯಾ ಆಯ್ಕೆ ಸಮಿತಿ ರೋಹಿತ್ ಶರ್ಮಾರ ಗಾಯದ ಕುರಿತು ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ.

    ರೋಹಿತ್ ಶರ್ಮಾ ಭಾನುವಾರ ಮುಂಬೈ ಇಂಡಿಯನ್ಸ್ ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಾ ಕಾಣಿಸಿಕೊಂಡಿದ್ದರು. ಆದರೆ ಅವರ ಯಾವ ತೀವ್ರತೆಯಲ್ಲಿ ಗಾಯವಾಗಿದೆ ಎಂಬುವುದು ನನಗೆ ಅರ್ಥವಾಗುತ್ತಿಲ್ಲ. ಒಂದೊಮ್ಮೆ ಗಾಯಗೊಂಡಿದ್ರು ಪ್ಯಾಡ್ಸ್ ಕಟ್ಟಿಕೊಂಡು ಹೇಗೆ ಅಭ್ಯಾಸ ನಡೆಸಲು ಸಾಧ್ಯ. ಒಂದೊಮ್ಮೆ ಇದನ್ನು ಚಿಕ್ಕಗಾಯ ಎಂದುಕೊಂಡರೆ, ಆಸ್ಟ್ರೇಲಿಯಾ ಟೂರ್ನಿಯಲ್ಲಿ ಟಿ20 ಮತ್ತು ಏಕದಿನ ಮಾದರಿ ಪಂದ್ಯಗಳಲ್ಲಿ ಕೈಬಿಟ್ಟು, ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಬಹುದಿತ್ತು. ಏಕೆಂದರೆ ಆತ ಚೇತರಿಸಿಕೊಂಡು ಮತ್ತೆ ಫಿಟ್ನೆಸ್ ಪಡೆಯಲು ಒಂದೂವರೆ ತಿಂಗಳ ಸಮಯ ಲಭಿಸುತ್ತಿತ್ತು. ಈಗಲಾದರೂ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾಗೆ ಆಗಿರುವ ಗಾಯದ ಬಗ್ಗೆ ಸ್ಪಷ್ಟನೆ ನೀಡಬೇಕಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

  • ಬಾತ್‍ರೂಮಿನಲ್ಲಿ ಕುಸಿದು ಬಿದ್ದು ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿ ಸಾವು

    ಬಾತ್‍ರೂಮಿನಲ್ಲಿ ಕುಸಿದು ಬಿದ್ದು ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿ ಸಾವು

    – ಸಾವಿಗೂ ಒಂದು ದಿನ ಮುನ್ನ ಪೋಷಕರಿಗೆ ಫೋನ್

    ಹೈದರಾಬಾದ್: ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡುತ್ತಿದ್ದ ತೆಲಂಗಾಣದ ವಿಕರಾಬಾದ್ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಸೋಮವಾರ ರಾತ್ರಿ ಅನುಮಾನಾಸ್ಪದವಾಗಿ ಬಾತ್‍ರೂಮಿನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

    ಮೃತ ವಿದ್ಯಾರ್ಥಿಯನ್ನು ಧಾರೂರು ಮಂಡಲದ ಹರಿದಾಸ್ಪಲ್ಲಿ ಗ್ರಾಮದ ನಿವಾಸಿ ಹರಿ ಶಿವಶಂಕರ್ ರೆಡ್ಡಿ (22) ಎಂದು ಗುರುತಿಸಲಾಗಿದೆ. ಹರಿ ಬಾತ್‍ರೂಮಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಅದನ್ನು ನೋಡಿದ ಆತನ ಸಹಪಾಠಿಗಳು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಹರಿ ಮೃತಪಟ್ಟಿದ್ದನು.

    ಹರಿ ಲಿಸ್ಮೋರ್‌ನ ದಕ್ಷಿಣದ ಕ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದನು. ನಾಗೇಂದ್ರಮ್ಮ ಮತ್ತು ಸಾಯಿ ರೆಡ್ಡಿಯ ಪುತ್ರನಾಗಿದ್ದು, ಒಬ್ಬನೇ ಮಗ ಎಂದು ತಿಳಿದುಬಂದಿದೆ.

    ಹರಿ ಸ್ನೇಹಿತರು ಸೋಮವಾರ ರಾತ್ರಿ 10.45ಕ್ಕೆ ಫೋನ್ ಮಾಡಿದ್ದರು. ಆಗ ಹರಿ ಬಾತ್‍ರೂಮಿನಲ್ಲಿ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಅಂತ ಹೇಳಿದ್ದರು. ಆದರೆ ಸ್ವಲ್ಪ ಸಮಯದ ನಂತರ ಆಸ್ಪತ್ರೆಯ ಅಧಿಕಾರಿಗಳು ಫೋನ್ ಮಾಡಿ ಹರಿ ಮೃತಪಟ್ಟಿದ್ದಾನೆ ಅಂತ ಹೇಳಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.

    ನಮ್ಮ ಮಗನ ಸ್ನೇಹಿತರು ಫೋನ್ ಮಾಡಿ ಸಾವಿನ ಬಗ್ಗೆ ನಮಗೆ ಮಾಹಿತಿ ನೀಡಿದರು. ಬೆಳಗ್ಗೆಯಿಂದ ಹರಿ ತಲೆನೋವಿನಿಂದ ಬಳಲುತ್ತಿದ್ದನು. ಆದರೆ ಸ್ನಾನ ಮಾಡಲು ಹೋದಾಗ ಕುಸಿದು ಬಿದ್ದಿದ್ದಾನೆ ಎಂದು ಹೇಳಿದರು. ನಂತರ ಅವರು ಅಂಬುಲೆನ್ಸ್‌ಗೆ ಫೋನ್ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಎಂದು ಹರಿ ತಂದೆ ಸಾಯಿ ರೆಡ್ಡಿ ತಿಳಿಸಿದರು.

    ಹರಿ ಸಾವಿಗೂ ಒಂದು ದಿನ ಮುಂಚಿತವಾಗಿ ನಮಗೆ ಫೋನ್ ಮಾಡಿ ಮಾತನಾಡಿದ್ದನು. ಈ ವೇಳೆ ನಮ್ಮ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದನು. ಆದರೆ ತನ್ನ ಆರೋಗ್ಯದ ಬಗ್ಗೆ ಏನನ್ನೂ ಹೇಳಿಕೊಂಡಿಲ್ಲ ಎಂದು ತಾಯಿ ನಾಗೇಂದ್ರಮ್ಮ ಹೇಳಿದರು. ಸದ್ಯಕ್ಕೆ ಹರಿ ಮೃತದೇಹವನ್ನು ತಮ್ಮ ನಿವಾಸಕ್ಕೆ ತರಲು ಸಹಾಯ ಮಾಡಬೇಕೆಂದು ಕುಟುಂಬದವರು ತೆಲಂಗಾಣ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ.

  • ಬಿಗ್ ಬ್ಯಾಶ್ ಆಡಲು ಆಸ್ಟ್ರೇಲಿಯಾಗೆ ಹೋಗ್ತಾರಾ ಯುವಿ?

    ಬಿಗ್ ಬ್ಯಾಶ್ ಆಡಲು ಆಸ್ಟ್ರೇಲಿಯಾಗೆ ಹೋಗ್ತಾರಾ ಯುವಿ?

    ನವದೆಹಲಿ: ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ (ಬಿಬಿಎಲ್) ಆಡಲು ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಆಸ್ಟ್ರೇಲಿಯಾಗೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ನಿವೃತ್ತಿ ನಂತರ ಕಳೆದ ವರ್ಷ ಬಿಸಿಸಿಐನಿಂದ ಅನುಮತಿ ಪಡೆದುಕೊಂಡಿದ್ದ ಯುವರಾಜ್, ಗ್ಲೋಬಲ್ ಟಿ-20 ಲೀಗ್ ಕೆನಡಾ ಮತ್ತು ಟಿ-10 ಲೀಗ್ ಅಬುಧಾಬಿ ಎಂಬ ಎರಡು ವಿದೇಶಿ ಟೂರ್ನಿಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಅವರು ಮುಂದಿನ ಡಿಸೆಂಬರ್ 3ರಂದು ಆರಂಭವಾಗುವ ಬಿಗ್ ಬ್ಯಾಶ್ ಲೀಗ್‍ನಲ್ಲೂ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್‍ಗೆ ವಿದಾಯ ಹೇಳಿದ್ದ ಯುವರಾಜ್ ಅವರು, ನಂತರ ವಿದೇಶಿ ಟೂರ್ನಿಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಬಿಗ್ ಬ್ಯಾಶ್ ಲೀಗ್‍ನಲ್ಲೂ ಭಾಗವಹಿಸುವಂತೆ ಅವರಿಗೆ ಕರೆಗಳು ಬಂದಿವೆ ಎನ್ನಲಾಗಿದೆ. ಇದರ ಬಗ್ಗೆ ಮಾತನಾಡಿರುವ ಯುವರಾಜ್ ಸಿಂಗ್ ಅವರ ಮ್ಯಾನೇಜರ್ ಜೇಸನ್ ವಾರ್ನೆ, ನಾವು ಇದರ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ ಎಂದಿದ್ದಾರೆ. ಬಿಬಿಎಲ್ ಆಡಳಿತ ಮಂಡಳಿ ಕೂಡ ಯುವರಾಜ್‍ಗಾಗಿ ತಂಡವನ್ನು ಆಯ್ಕೆ ಮಾಡುತ್ತಿದೆ ಎನ್ನಲಾಗಿದೆ.

    ಈವರೆಗೂ ಇಂಡಿಯಾದ ಯಾವುದೇ ಆಟಗಾರ ಬಿಗ್ ಬ್ಯಾಶ್ ಲೀಗ್ ಆಡಿಲ್ಲ. 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಸಚಿನ್ ಅವರನ್ನು ಸಿಡ್ನಿ ಥಂಡರ್ ತಂಡ ಬಿಗ್ ಬ್ಯಾಶ್ ಆಡುವಂತೆ 2014ರಲ್ಲಿ ಕೇಳಿತ್ತು. ಆದರೆ ಸಚಿನ್ ಅವರು ಆಡಿರಲಿಲ್ಲ. ಇದಾದ ನಂತರ ಸದ್ಯ ಎರಡು ವಿದೇಶಿ ಟೂರ್ನಿ ಆಡಿರುವ ಯುವರಾಜ್ ಅವರನ್ನು ಬಿಬಿಎಲ್ ಆಡುವಂತೆ ಕೇಳಿಕೊಂಡಿದೆ. ಆದರೆ ಯುವರಾಜ್ ಬಿಬಿಎಲ್‍ನಲ್ಲಿ ಭಾಗವಹಿಸುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

    ಬಿಸಿಸಿಐ ನಿಯಮದ ಪ್ರಕಾರ ಪ್ರಸ್ತುತ ಇಂಡಿಯಾ ಟೀಂನಲ್ಲಿ ಆಡುತ್ತಿರುವ ಯಾವುದೇ ಆಟಗಾರ ಕೂಡ ವಿದೇಶಿ ಟೂರ್ನಿಯಲ್ಲಿ ಭಾಗವಹಿಸುವಂತಿಲ್ಲ. ನಿವೃತ್ತಿ ಹೊಂದಿದ ಬಳಿಕ ಬಿಸಿಸಿಐಯಿಂದ ಅನುಮತಿ ಪಡೆದು ವಿದೇಶಿ ಟೂರ್ನಿಗಳಲ್ಲಿ ಮಾಜಿ ಆಟಗಾರರು ಭಾಗಹಿಸಬಹುದು. ಅಂತೆಯೇ ಯುವರಾಜ್ ಸಿಂಗ್, ವಿರೇಂದ್ರ ಸೆಹ್ವಾಗ್, ಜಾಹಿರ್ ಖಾನ್, ಪ್ರವೀಣ್ ತಾಂಬೆ ಮತ್ತಿತರು ವಿದೇಶಿ ಟೂರ್ನಿಯಲ್ಲಿ ಭಾಗಹಿಸಿದ್ದಾರೆ.