Tag: australia

  • ರಾಷ್ಟ್ರಗೀತೆ ಹಾಡುವ ವೇಳೆ ಕಣ್ಣೀರು ಹಾಕಿದ ಮೊಹಮ್ಮದ್ ಸಿರಾಜ್

    ರಾಷ್ಟ್ರಗೀತೆ ಹಾಡುವ ವೇಳೆ ಕಣ್ಣೀರು ಹಾಕಿದ ಮೊಹಮ್ಮದ್ ಸಿರಾಜ್

    ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕಣ್ಣೀರು ಹಾಕಿದ್ದಾರೆ.

    ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಮಳೆ ಕಾರಣ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದ ಆಟ ಕೊಂಚ ತಡವಾಗಿ ಆರಂಭವಾದರೂ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದೀಗ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 55 ಓವರ್ ಗಳಲ್ಲಿ 2 ವಿಕೆಟ್‍ಗಳ ನಷ್ಟಕ್ಕೆ 166 ರನ್‍ಗಳನ್ನು ಗಳಿಸಿದೆ.

    ಇದಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವ ವೇಳೆ ಮೊಹಮ್ಮದ್ ಸಿರಾಜ್ ಕ್ರೀಡಾಂಗಣದಲ್ಲಿ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಈ ಬಗ್ಗೆ ಪಂದ್ಯದ ಮೊದಲ ದಿನದಾಟದ ಅಂತ್ಯದ ಬಳಿಕ ಮಾತನಾಡಿದ ಸಿರಾಜ್, ರಾಷ್ಟ್ರಗೀತೆ ಮೊಳಗುತ್ತಿದ್ದ ಸಮಯದಲ್ಲಿ ಅಗಲಿದ ತಂದೆಯ ನೆನಪಾಗಿ ಕಣ್ಣೀರು ಹರಿಯಿತು ಎಂದಿದ್ದಾರೆ.

    ಹೈದರಾಬಾದ್ ಮೂಲದ 26 ವರ್ಷದ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ರಾಷ್ಟ್ರಗೀತೆ ಹಾಡುವ ವೇಳೆ ಕಣ್ಣೀರಿಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಹೀಗಾಗಿ ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ಪರ ಆನ್‍ಲೈನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲು ಸಿರಾಜ್ ಅವರನ್ನೇ ಕಳುಹಿಸಲಾಗಿತ್ತು.

    ರಾಷ್ಟ್ರಗೀತೆ ಹಾಡುವಾಗ ನನ್ನ ತಂದೆಯ ನೆನಪಾಯಿತು. ಹೀಗಾಗಿ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನಾನು ಟೆಸ್ಟ್ ಕ್ರಿಕೆಟ್ ಆಡಬೇಕು ಎಂಬುದು ನನ್ನ ತಂದೆಯ ಆಸೆಯಾಗಿತ್ತು. ಇಂದು ಅವರು ಬದುಕಿದ್ದರೆ ನಾನು ಟೆಸ್ಟ್ ಆಡುವುದನ್ನು ಕಣ್ತುಂಬಿಕೊಳ್ಳುತ್ತಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

    ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದ ಸಲುವಾಗಿ ಕಾಂಗರೂ ನಾಡಿಗೆ ತೆರಳಿದ್ದ ವೇಳೆ ಸಿರಾಜ್ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ನವೆಂಬರ್ 20ರಂದು ಸಿರಾಜ್ ಅವರ ತಂದೆ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದ್ದರು. ಆಸೀಸ್‍ಗೆ ಬಂದು ಕ್ವಾರಂಟೈನ್‍ನಲ್ಲಿ ಇದ್ದ ಕಾರಣ ಸಿರಾಜ್ ತಮ್ಮ ತಂದೆಯ ಅಂತ್ಯಕ್ರಿಯೆಗೆ ತಾಯ್ನಾಡಿಗೆ ಹಿಂದಿರುಗಲು ಸಾಧ್ಯವಾಗಿರಲಿಲ್ಲ.

    ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹಿಂದಿರುಗುವಂತೆ ಸಿರಾಜ್‍ಗೆ ತಿಳಿಸಿತ್ತು. ಆದರೂ ಅವರು ಭಾರತಕ್ಕೆ ಮರಳದೆ ತಂಡದಲ್ಲೇ ಉಳಿಯುವ ನಿರ್ಧಾರ ಮಾಡಿದ್ದರು.

  • ಸಿಡ್ನಿಯಲ್ಲಿ ಹೊಸ ವರ್ಷದ ಸಂಭ್ರಮ – ನ್ಯೂಜಿಲೆಂಡ್‍ನಲ್ಲಿ ಯಾವುದೇ ನಿಬಂಧನೆಗಳಿಲ್ಲದೇ ಸೆಲೆಬ್ರೇಷನ್

    ಸಿಡ್ನಿಯಲ್ಲಿ ಹೊಸ ವರ್ಷದ ಸಂಭ್ರಮ – ನ್ಯೂಜಿಲೆಂಡ್‍ನಲ್ಲಿ ಯಾವುದೇ ನಿಬಂಧನೆಗಳಿಲ್ಲದೇ ಸೆಲೆಬ್ರೇಷನ್

    ನವದೆಹಲಿ: ನ್ಯೂಜಿಲೆಂಡ್ ಮತ್ತು ಆಸ್ಟೇಲಿಯಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಆರಂಭಗೊಂಡಿದ್ದು, ಬಣ್ಣ ಬಣ್ಣದ ಪಟಾಕಿ, ಲೈಟ್ ಗಳಿಂದ 2021ನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಭಾರತದಲ್ಲಿ ಹೊಸ ವರ್ಷದ ಆಗಮನಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ.

    ಆಕಾಲೆಂಡ್ ಜನತೆ ಯಾವುದೇ ನಿಬಂಧನೆ, ಷರತ್ತುಗಳಿಲ್ಲದೇ ಹೊಸ ವರ್ಷ ಆಚರಿಸಿದ್ದಾರೆ. ಸಿಡ್ನಿಯ ಹಾರ್ಬರ್ ಬ್ರಿಡ್ಜ್ ಅತ್ಯಂತ ವೈಭೋಗದಿಂದ ಅಲಂಕರಿಸಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಡಿಸೆಂಬರ್ 31ರ ಮಧ್ಯಾಹ್ನದಿಂದಲೇ ಹೊಸ ವರ್ಷಕ್ಕೆ ಸಿದ್ಧತೆ ನಡೆಸಿಕೊಂಡಿತ್ತು. ಗಲ್ಲಿ ಗಲ್ಲಿಗಳಲ್ಲಿ ಮ್ಯೂಸಿಕಲ್ ಇವೆಂಟ್ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ಮಧ್ಯಾಹ್ನದಿಂದಲೇ ಆರಂಭಗೊಂಡಿವೆ. ಆದ್ರೆ ಕೊರೊನಾದಿಂದಾಗಿ ಜನರು ಒಟ್ಟಾಗಿ ಸೇರುವುದನ್ನ ನಿಷೇಧಿಸಲಾಗಿತ್ತು. ಎಲ್ಲ ಕಾರ್ಯಕ್ರಮಗಳ ನೇರಪ್ರಸಾರ ಮಾಡಲಾಗುತ್ತಿದೆ. ಬ್ರಿಡ್ಜ್ ಬಳಿ ಸೇರಿದ ಕೆಲ ಜನ ಕುಣಿದು ಕುಪ್ಪಳಿಸಿ 2020ಕ್ಕೆ ವಿದಾಯ ಹೇಳಿದರು.

    ಭಾರತದಲ್ಲಿ ಸಂಜೆ 4.30 ಆದಾಗ ನ್ಯೂಜಿಲೆಂಡ್ ನಲ್ಲಿ ರಾತ್ರಿ 12ರ ಗಂಟೆ ಬಾರಿಸಿತ್ತು. ಆಕಾಲೆಂಡ್ ನಲ್ಲಿ ಹೊಸ ವರ್ಷದ ಆಚರಣೆಗಾಗಿ ದೊಡ್ಡ ಇವೆಂಟ್ ಆಯೋಜಿಸಲಾಗಿತ್ತು. ಇಲ್ಲಿಯ ಸ್ಕೈ ಟವರ್ ಬಳಿ ಐದು ನಿಮಿಷ ಝಗಮಗಿಸುವ, ಬಣ್ಣದ ಚಿತ್ತಾರಗಳಿಂದ ಹೊಸ ವರ್ಷವನ್ನ ಸ್ವಾಗತಿಸಿಕೊಳ್ಳಲಾಯ್ತು.

    ದುಬೈನ ಬುರ್ಜ್ ಖಲೀಫಾದಲ್ಲಿ ಲೈಟ್, ಲೇಸರ್ ಶೋ ಮಾಡಲಾಯ್ತು. ಕೊರೊನಾ ಹಿನ್ನೆಲೆ ಸರ್ಕಾರ ಕಠಿಣ ನಿಯಮಗಳನ್ನ ಹೇರಿದೆ. ಇನ್ನುಳಿದಂತೆ ಸಿಂಗಪುರ, ಪ್ಯಾರೀಸ್ , ಲಂಡನ್, ಮಾಸ್ಕೋ, ಬರ್ಲಿನ್, ಪಟಾಯ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ.

  • ಆಸೀಸ್‌ ನೆಲದಲ್ಲೇ ತಿರುಗೇಟು – ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

    ಆಸೀಸ್‌ ನೆಲದಲ್ಲೇ ತಿರುಗೇಟು – ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

    – ರಹಾನೆಗೆ ಪಂದ್ಯಶ್ರೇಷ್ಠ ಗೌರವ
    – ಸರಣಿ ಸಮಬಲಗೊಳಿಸಿದ ಭಾರತ

    ಮೆಲ್ಬರ್ನ್‌: ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವನ್ನು ಭಾರತ 8 ವಿಕೆಟ್‌ಗಳಿಂದ ಗೆದ್ದುಕೊಳ್ಳುವ ಮೂಲಕ 4 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

    ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 200 ರನ್‌ಗಳಿಗೆ ಆಲೌಟ್‌ ಆಯ್ತು. 70 ರನ್‌ಗಳ ಟಾರ್ಗೆಟ್‌ ಪಡೆದ ಭಾರತ 2 ವಿಕೆಟ್‌ ಕಳೆದುಕೊಂಡು ಗುರಿಯನ್ನು ತಲುಪಿತು.

    ಶುಭಮನ್‌ ಗಿಲ್‌ ಔಟಾಗದೇ 35 ರನ್‌, ಅಜಿಂಕ್ಯ ರಹಾನೆ ಔಟಾಗದೇ 27 ರನ್‌ ಹೊಡೆದರು. ಭಾರತದ ಪರ ಸಿರಾಜ್‌ 3 ವಿಕೆಟ್‌, ಬುಮ್ರಾ, ಅಶ್ವಿನ್‌, ಜಡೇಜಾ ತಲಾ 2 ವಿಕೆಟ್‌ ಕಿತ್ತರು. ಉಮೇಶ್‌ ಯಾದವ್‌ 1 ವಿಕೆಟ್‌ ಕಿತ್ತರು. ಮೊದಲ ಇನ್ನಿಂಗ್ಸ್‌ನಲ್ಲಿ 112 ರನ್‌ ಸಿಡಿಸಿ ತಂಡವನ್ನು ಪಾರು ಮಾಡಿದ ನಾಯಕ ರಹಾನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

    ಆಡಿಲೇಡ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಸೋತಿತ್ತು. ಈಗ ಸಂಘಟಿತ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಪ್ರದರ್ಶನದಿಂದ ತವರು ನೆಲದಲ್ಲೇ ಆಸ್ಟ್ರೇಲಿಯಾಗೆ ತಿರುಗೇಟು ನೀಡಿದೆ. ಮೂರನೇ ಟೆಸ್ಟ್‌ ಪಂದ್ಯ ಜ.7 ರಿಂದ ಸಿಡ್ನಿಯಲ್ಲಿ ನಡೆಯಲಿದೆ.

    ಸಂಕ್ಷಿಪ್ತ ಸ್ಕೋರ್‌
    ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 195 ರನ್‌
    ಭಾರತ ಮೊದಲನೇ ಇನ್ನಿಂಗ್ಸ್‌ 326
    ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ 200 ರನ್‌
    ಭಾರತ ಎರಡನೇ ಇನ್ನಿಂಗ್ಸ್‌ 2ವಿಕೆಟ್‌ ನಷ್ಟಕ್ಕೆ 70 ರನ್‌

  • ಅರ್ಧದಲ್ಲೇ ಮೈದಾನ ತೊರೆದ ಉಮೇಶ್ ಯಾದವ್

    ಅರ್ಧದಲ್ಲೇ ಮೈದಾನ ತೊರೆದ ಉಮೇಶ್ ಯಾದವ್

    ಮೆಲ್ಬರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಇದೀಗ ಮತ್ತೊಂದು ಅಘಾತ ಎದುರಾಗಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಭಾರತದ ಬಲಗೈ ವೇಗದ ಬೌಲರ್ ಉಮೇಶ್ ಯಾದವ್ ಗಾಯಕ್ಕೆ ತುತ್ತಾಗಿ ಮೈದಾನ ತೊರೆದಿದ್ದಾರೆ.

    ಮೂರನೇ ದಿನದಾಟದ ಆರಂಭದಲ್ಲಿ ಬೌಲಿಂಗ್‍ಗಿಳಿದ ಉಮೇಶ್ ಯಾದವ್ ತಮ್ಮ 4ನೇ ಓವರ್ ಪೂರ್ಣಗೊಳಿಸಲಾಗದೆ ಪೆವಿಲಿಯನ್ ಸೇರಿಕೊಂಡರು. ಮೀನಖಂಡದ ನೋವಿಗೆ ಒಳಗಾದ ಉಮೇಶ್ ಫಿಸಿಯೋ ನಿತೀನ್ ಪಟೇಲ್ ಅವರ ಸಲಹೆಯ ಮೆರೆಗೆ ತಕ್ಷಣ ಮೈದಾನ ತೊರೆಯಬೇಕಾಯಿತು.

    ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ, ಉಮೇಶ್ ಯಾದವ್ ತಮ್ಮ ನಾಲ್ಕನೇ ಓವರ್ ಬೌಲಿಂಗ್ ಮಾಡುತ್ತಿದ್ದಾಗ ಮೀನಖಂಡದ ನೋವಿಗೊಳಗಾಗಿದ್ದಾರೆ. ತಕ್ಷಣ ಬಿಸಿಸಿಐ ವೈದ್ಯಕೀಯ ತಂಡವು ಅವರನ್ನು ಪರೀಕ್ಷಿಸಿದ್ದು, ಸ್ಕ್ಯಾನ್ ಮಾಡಲು ಕರೆದೊಯ್ಯಲಾಗಿದೆ ಎಂದು ಹೇಳಿಕೆ ನೀಡಿದೆ.  ಇದನ್ನೂ ಓದಿ: ಒಂದೇ ದಿನದಲ್ಲಿ 11 ವಿಕೆಟ್‌ ಪತನ – ಆಸ್ಟ್ರೇಲಿಯಾಗೆ 2 ರನ್‌ ಮುನ್ನಡೆ

    ದ್ವಿತಿಯ ಇನ್ನಿಂಗ್ಸ್ ಬ್ಯಾಟಿಂಗ್‍ಗಿಳಿದ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಜೋ ಬ‌ರ್ನ್ಸ್‌ ವಿಕೆಟ್ ಪಡೆದು ಭಾರತಕ್ಕೆ ಆರಂಭಿಕ ಯಶಸ್ಸು ತಂದು ಕೊಟ್ಟ ಯಾದವ್, 3.3 ಓವರ್‍ಗಳಲ್ಲಿ 5 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ತಮ್ಮ ನಾಲ್ಕನೇ ಓವರ್‍ನ ಮೂರು ಬಾಲ್ ಬಾಕಿ ಇರುವಂತೆ ಮೈದಾನದಿಂದ ಹೊರ ನಡೆದ ಉಮೇಶ್ ಯಾದವ್ ಅವರ ಓವರ್‍ನ ಮುಂದಿನ ಮೂರು ಎಸೆತವನ್ನು ಮೊದಲ ಪಂದ್ಯವಾಡುತ್ತಿರುವ ವೇಗಿ ಸಿರಾಜ್ ಪೂರ್ಣಗೊಳಿಸಿದರು.

    ಆಸ್ಟ್ರೇಲಿಯಾ ಸರಣಿಯ ಆರಂಭದಲ್ಲಿ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಇಶಾಂತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಹೊರಗುಳಿದಿದ್ದರೆ, ಟೂರ್ನಿಯ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡ ಶಮಿ ತಂಡದಿಂದ ಈಗಾಗಲೇ ಬೇರ್ಪಟ್ಟಿದ್ದಾರೆ. ಇದೀಗ ಉಮೇಶ್ ಯಾದವ್ ಅವರ ಗಾಯದಿಂದಾಗಿ ಟೀ ಇಂಡಿಯಾದ ಗಾಯದ ಮೇಲೆ ಬರೆ ಎಳೆದಂತಾಗಿದೆ.

  • ಒಂದೇ ದಿನದಲ್ಲಿ 11 ವಿಕೆಟ್‌ ಪತನ – ಆಸ್ಟ್ರೇಲಿಯಾಗೆ 2 ರನ್‌ ಮುನ್ನಡೆ

    ಒಂದೇ ದಿನದಲ್ಲಿ 11 ವಿಕೆಟ್‌ ಪತನ – ಆಸ್ಟ್ರೇಲಿಯಾಗೆ 2 ರನ್‌ ಮುನ್ನಡೆ

    – ಜಡೇಜಾ ಆಲ್‌ರೌಂಡರ್‌ ಆಟ

    ಮೆಲ್ಬರ್ನ್‌: ಎರಡನೇ ಟೆಸ್ಟ್‌ ಪಂದ್ಯದಲ್ಲೂ ಬೌಲರ್‌ಗಳು ಆಟ ಮುಂದುವರಿದಿದ್ದು ಇಂದು 11 ವಿಕೆಟ್‌ಗಳು ಪತನಗೊಂಡಿದೆ. ಆಸ್ಟ್ರೇಲಿಯಾ 2 ರನ್‌ಗಳ ಅಲ್ಪ ಮುನ್ನಡೆ ಪಡೆದುಕೊಂಡಿದೆ.

    277 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದ ಭಾರತ ಇಂದು 326 ರನ್‌ಗಳಿಗೆ ಆಲೌಟ್‌ ಆಯ್ತು. ನಿನ್ನೆ 104 ರನ್‌ ಗಳಿಸಿದ್ದ ಅಜಿಂಕ್ಯಾ ರಹಾನೆ ಇಂದು 112 ರನ್‌ ಗಳಿಸಿ ಔಟಾದರು. 40 ರನ್‌ ಗಳಿಸಿದ್ದ ಜಡೇಜಾ ಅವರು 57 ರನ್‌ಗಳಿಸಿ ಔಟಾದರು.

    131 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾಗೆ ಟೀಂ ಇಂಡಿಯಾ ಬೌಲರ್‌ಗಳು ಕಾಡಿದರು. ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ಆಸ್ಟ್ರೇಲಿಯಾ ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 133 ರನ್‌ ಗಳಿಸಿದೆ.

    ಮ್ಯಾಥ್ಯು ವೇಡ್‌ 40 ರನ್‌, ಮಾರ್ನಸ್‌ ಲಬುಶೇನ್ 28 ರನ್‌, ಟ್ರಾವಿಸ್‌ ಹೆಡ್‌ 17 ರನ್‌ ಗಳಿಸಿ ಔಟಾದರು. ಕ್ಯಾಮೆರಾನ್‌ ಗ್ರೀನ್‌ 17 ರನ್‌, ಪ್ಯಾಟ್‌ ಕಮಿನ್ಸ್‌ 15 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

    ಜಡೇಜಾ 25 ರನ್‌ ನೀಡಿ 2 ವಿಕೆಟ್‌ ಕಿತ್ತಿದ್ದಾರೆ. ಜಸ್‌ ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌, ಮೊಹಮ್ಮದ್‌ ಸಿರಾಜ್‌ , ಅಶ್ವಿನ್‌ ತಲಾ ಒಂದು ವಿಕೆಟ್‌ ಕಿತ್ತಿದ್ದಾರೆ.

    ಸಂಕ್ಷಿಪ್ತ ಸ್ಕೋರ್‌
    ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 195/10
    ಭಾರತ ಮೊದಲ ಇನ್ನಿಂಗ್ಸ್‌ 326/10
    ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ 133/6

  • ಭಾರತಕ್ಕೆ 82 ರನ್‌ಗಳ ಮುನ್ನಡೆ – ರಹಾನೆಯ ಶತಕದಾಟಕ್ಕೆ ಜೈಹೋ ಎಂದ ಕೊಹ್ಲಿ, ಸೆಹ್ವಾಗ್‌

    ಭಾರತಕ್ಕೆ 82 ರನ್‌ಗಳ ಮುನ್ನಡೆ – ರಹಾನೆಯ ಶತಕದಾಟಕ್ಕೆ ಜೈಹೋ ಎಂದ ಕೊಹ್ಲಿ, ಸೆಹ್ವಾಗ್‌

    ಮೆಲ್ಬರ್ನ್: ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆಯ ಅಜೇಯ ಶತಕದ ಆಟವಾಡಿ ಟೀಂ ಇಂಡಿಯಾಗೆ ಮುನ್ನಡೆ ತಂದುಕೊಟ್ಟಿದ್ದಾರೆ.

    ಎರಡನೇ ದಿನದಾಟಕ್ಕೆ 5 ವಿಕೆಟ್‌ ಕಳೆದುಕೊಂಡು ಭಾರತ 277 ರನ್‌ ಹೊಡೆಯುವ ಮೂಲಕ 82 ರನ್‌ಗಳ ಮುನ್ನಡೆಯಲ್ಲಿದೆ.

    ನಿನ್ನೆ 28 ರನ್‌ ಗಳಿಸಿದ್ದ ಶುಭ್‌ಮನ್‌ ಗಿಲ್‌ ಇಂದು 45 ರನ್‌(65 ಎಸೆತ, 8 ಬೌಂಡರಿ) ಹೊಡೆದು ಔಟಾದರು. ಚೇತೇಶ್ವರ ಪೂಜಾರ 17 ರನ್‌, ಹನುಮ ವಿಹಾರಿ 21 ರನ್‌, ರಿಷಭ್‌ ಪಂತ್‌ 29 ರನ್‌ ಹೊಡೆದು ಔಟಾದರು.

    ವಿಕೆಟ್‌ ಉರುಳುತ್ತಿದ್ದಾಗ ಮುರಿಯದ 6ನೇ ವಿಕೆಟ್‌ಗೆ ಜೊತೆಯಾದ ಜಡೇಜಾ ಜೊತೆ ಸೇರಿ ರಹಾನೆ 179 ಎಸೆತದಲ್ಲಿ 100 ರನ್‌ ಜೊತೆಯಾಟವಾಡಿದರು. ರಹಾನೆ 104 ರನ್‌(200 ಎಸೆತ, 12 ಬೌಂಡರಿ) ಹೊಡೆದರೆ ಜಡೇಜಾ 40 ರನ್‌(104 ಎಸೆತ, 1 ಬೌಂಡರಿ) ಹೊಡೆದಿದ್ದಾರೆ.

    ಟ್ವೀಟ್‌ ಮಾಡಿ ರಹನೆಯ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೊಹ್ಲಿ, ನಮಗೆ ಮತ್ತೊಂದು ಉತ್ತಮ ದಿನ. ಸರಿಯಾದ ಟೆಸ್ಟ್ ಕ್ರಿಕೆಟ್. ಜಿಂಕ್ಸ್‌ನಿಂದ ಮತ್ತೊಂದು ಶತಕ ಎಂದು ಶ್ಲಾಘಿಸಿದ್ದಾರೆ.

    ವೀರೇಂದ್ರ ಸೆಹ್ವಾಗ್‌ ಬ್ರಿಲಿಯಂಟ್‌ ಸೆಂಚೂರಿ ಎಂದು ಹೇಳಿದರೆ, ನಾಯಕನ ಶತಕದಾಟ, ಗಿಲ್, ಪಂತ್ ಮತ್ತು ಜಡೇಜಾ ಅವರಿಂದ ಉಪಯುಕ್ತ ಕೊಡುಗೆಗಳು ಎಂದು ವಿವಿಎಸ್‌ ಲಕ್ಷ್ಮಣ್‌ ಟ್ವೀಟ್‌ ಮಾಡಿದ್ದಾರೆ.

  • ಬಾಕ್ಸಿಂಗ್‌ ಡೇ ಟೆಸ್ಟ್‌ – 11 ವಿಕೆಟ್‌ ಪತನ, ಚರ್ಚೆಗೆ ಗ್ರಾಸವಾದ ರನೌಟ್‌ ನಿರ್ಧಾರ

    ಬಾಕ್ಸಿಂಗ್‌ ಡೇ ಟೆಸ್ಟ್‌ – 11 ವಿಕೆಟ್‌ ಪತನ, ಚರ್ಚೆಗೆ ಗ್ರಾಸವಾದ ರನೌಟ್‌ ನಿರ್ಧಾರ

    – ಆಸ್ಟ್ರೇಲಿಯಾ 195 ರನ್‌ಗಳಿಗೆ ಆಲೌಟ್‌
    – ಭಾರತ 1 ವಿಕೆಟ್‌ ನಷ್ಟಕ್ಕೆ 36 ರನ್‌

    ಮೆಲ್ಬರ್ನ್‌: ಬಾಕ್ಸಿಂಗ್‌ ಡೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ಮೊದಲ ದಿನವೇ 11 ವಿಕೆಟ್‌ಗಳು ಪತನಗೊಂಡಿದೆ. ಈ ಮೂಲಕ ಎರಡನೇ ಟೆಸ್ಟ್‌ ಪಂದ್ಯದಲ್ಲೂ ಬೌಲರ್‌ಗಳ ಆರ್ಭಟ ಮುಂದುವರಿದಿದೆ.

    ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಟಿಮ್ ಪೈನೆ ರನೌಟ್‌ ನೀಡದಿರುವ ನಿರ್ಧಾರ ಚರ್ಚೆಗೆ ಗ್ರಾಸವಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ 72.3 ಓವರ್‌ಗಳಲ್ಲಿ 195 ರನ್‌ಗಳಿಗೆ ಆಲೌಟ್‌ ಆಯ್ತು.

    ಬುಮ್ರಾ 56 ರನ್‌ ನೀಡಿ 4 ವಿಕೆಟ್‌ ಕಿತ್ತರೆ ಅಶ್ವಿನ್‌ 35 ರನ್‌ ನೀಡಿ 3 ವಿಕೆಟ್‌ ಕಿತ್ತರು. ಮೊದಲ ಟೆಸ್ಟ್‌ ಪಂದ್ಯವಾಡಿದ ಮೊಹಮ್ಮದ್‌ ಸಿರಾಜ್‌ 40 ರನ್‌ ನೀಡಿ 2 ವಿಕೆಟ್‌ ಕಿತ್ತರು. ಇದನ್ನೂ ಓದಿ: ಬಾಕ್ಸಿಂಗ್‌ ಡೇ ಟೆಸ್ಟ್‌ ಎಂದರೇನು? ಯಾಕೆ ಈ ಹೆಸರು ಬಂತು?

    ಆಸ್ಟ್ರೇಲಿಯಾದ ಪರವಾಗಿ ಮ್ಯಾಥ್ಯೂ ವೇಡ್‌ 30 ರನ್‌, ಮಾರ್ನಸ್‌ ಲಬುಶೇನ್‌ 48 ರನ್‌, ಟ್ರಾವಿಸ್‌ ಹೆಡ್‌ 38 ರನ್‌, ನಥನ್‌ ಲಿಯಾನ್‌ 20 ರನ್‌ ಹೊಡೆದರು.

    ಅಶ್ವಿನ್‌ ಎಸೆದ 55ನೇ ಓವರಿನ ಕೊನೆಯ ಎಸೆತವನ್ನು ಕ್ಯಾಮರಾನ್‌ ಗ್ರೀನ್‌ ಆಫ್‌ ಸೈಡಿಗೆ ಹೊಡೆದು ಓಡಿದರು. ಈ ವೇಳೆ ಬಾಲ್‌ ಉಮೇಶ್‌ ಯಾದವ್‌ ಕೈ ಸೇರಿತ್ತು. ಯಾದವ್‌ ನೇರವಾಗಿ ಕೀಪರ್‌ ರಿಷಬ್‌ಪಂತ್‌ಗೆ ಎಸೆದರು. ಮೂರನೇ ಅಂಪೈರ್‌ ಔಟ್‌ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹೇಳಿ ನಾಟೌಟ್‌ ತೀರ್ಪು ನೀಡಿದರು.

    ರಿಪ್ಲೇಯಲ್ಲಿ ಬೇಲ್ಸ್‌ ಹಾರುವ ಸಮಯದಲ್ಲಿ ಬ್ಯಾಟ್‌ ಗೆರೆಯಿಂದ ಹಿಂದೆ ಇರುವುದು ಸ್ಪಷ್ಟವಾಗಿತ್ತು. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆ ನಡೆಯುತ್ತಿದೆ.

    ಆರಂಭದಲ್ಲೇ ಕುಸಿತ:
    ಮೊದಲ ಇನ್ನಿಂಗ್ಸ್‌ ಆರಂಭಿಸಿದ ಭಾರತ ಆರಂಭದಲ್ಲೇ ಕುಸಿತ ಕಂಡಿದ್ದು 11 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 36 ರನ್‌ ಗಳಿಸಿದೆ. ಆರಂಭಿಕ ಆಟಗಾರ ಮಾಯಂಕ್‌ ಅಗರವ್‌ವಾಲ್‌ ಮೊದಲ ಓವರಿನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಮೊದಲ ಪಂದ್ಯ ಆಡುತ್ತಿರುವ ಶುಭಮನ್‌ ಗಿಲ್‌ 28 ರನ್‌ ಚೇತೇಶ್ವರ ಪೂಜಾರ 7 ರನ್‌ಗಳಿಸಿ ನಾಳೆ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

  • ಕೆಟ್ಟ ದಾಖಲೆಯೊಂದಿಗೆ ಹೀನಾಯವಾಗಿ ಸೋತ ಟೀಂ ಇಂಡಿಯಾ

    ಕೆಟ್ಟ ದಾಖಲೆಯೊಂದಿಗೆ ಹೀನಾಯವಾಗಿ ಸೋತ ಟೀಂ ಇಂಡಿಯಾ

    ಆಡಿಲೇಡ್‌: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ ಪಂದ್ಯವನ್ನು ಸೋಲುವುದರೊಂದಿಗೆ ಭಾರತ ಕೆಟ್ಟ ದಾಖಲೆ ಬರೆದಿದೆ.

    ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಇನ್ನಿಂಗ್ಸ್‌ ಮುಗಿಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನ ಇನ್ನಿಂಗ್ಸ್‌ ನಲ್ಲಿ ಕಡಿಮೆ ರನ್‌ ಹೊಡೆದ ತಂಡಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ಈಗ ಸೇರ್ಪಡೆಯಾಗಿದೆ.

    ಈ ಹಿಂದೆ 1974ರಲ್ಲಿ ಇಂಗ್ಲೆಂಡ್‌ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 42 ರನ್‌ ಗಳಿಸಿತ್ತು. ಇದು ಇಲ್ಲಿಯವರೆಗಿನ ಕೆಟ್ಟ ದಾಖಲೆಯಾಗಿತ್ತು. ಇನ್ನಿಂಗ್ಸ್‌ ಒಂದರಲ್ಲಿ ಕಡಿಮೆ ರನ್‌ ಹೊಡೆದ ಪಟ್ಟಿಯಲ್ಲಿ ಭಾರತಕ್ಕೆ ಈಗ 7ನೇ ಸ್ಥಾನ ಸಿಕ್ಕಿದೆ.

    ಈ ಪಟ್ಟಿಯಲ್ಲಿ ನ್ಯೂಜಿಲೆಂಡ್‌ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 1955 ರಲ್ಲಿ ಇಂಗ್ಲೆಂಡ್‌ ವಿರುದ್ಧ ಅಕ್ಲೆಂಡ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌26 ರನ್‌ಗಳಿಗೆ ಆಲೌಟ್‌ ಆಗಿತ್ತು.

    ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಯಾವೊಬ್ಬ ಆಟಗಾರ ಎರಂಡಕಿ ದಾಟಲೇ ಇಲ್ಲ.  90 ರನ್‌ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ 21 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 93 ರನ್‌ ಹೊಡೆಯುವ ಮೂಲಕ 8 ವಿಕೆಟ್‌ಗಳ ಜಯವನ್ನು ಸಂಪಾದಿಸಿತು.

    ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕನ ಆಟವಾಡಿ ಔಟಾಗದೇ 73 ರನ್‌ ಹೊಡೆದಿದ್ದ ಟಿಮ್‌ ಪೈನೆ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು.

    ಸಂಕ್ಷಿಪ್ತ ಸ್ಕೋರ್‌
    ಭಾರತ ಮೊದಲ ಇನ್ನಿಂಗ್ಸ್‌ – 244/10
    ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ – 191/10
    ಭಾರತ ಎರಡನೇ ಇನ್ನಿಂಗ್ಸ್‌ – 36/9
    ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ – 93/2

  • ಒಂದೇ ದಿನ 15 ವಿಕೆಟ್‌ ಪತನ- ಕುತೂಹಲ ಘಟ್ಟದಲ್ಲಿ ಟೆಸ್ಟ್‌

    ಒಂದೇ ದಿನ 15 ವಿಕೆಟ್‌ ಪತನ- ಕುತೂಹಲ ಘಟ್ಟದಲ್ಲಿ ಟೆಸ್ಟ್‌

    – 62 ರನ್‌ಗಳ ಮುನ್ನಡೆಯಲ್ಲಿ ಭಾರತ
    – ನಾಯಕನ ಆಟವಾಡಿದ ಪೈನೆ
    – ನೈಟ್‌ ವಾಚ್‌ಮ್ಯಾನ್‌ ಆಗಿ ಬುಮ್ರಾ ಕಣಕ್ಕೆ

    ಆಡಿಲೇಡ್‌: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಿಂಕ್‌ ಬಾಲ್‌ ಟೆಸ್ಟ್‌ನ ಎರಡನೇ ದಿನವೇ 15 ವಿಕೆಟ್‌ಗಳು ಪತನಗೊಂಡಿದೆ. ಶುಕ್ರವಾರ ಒಂದೇ ದಿನವೇ ಭಾರತದ 5 ವಿಕೆಟ್‌ಗಳು ಪತನಗೊಂಡರೆ ಆಸ್ಟ್ರೇಲಿಯಾದ 10 ವಿಕೆಟ್‌ಗಳು ಉರುಳಿವೆ. ಭಾರತ ಸದ್ಯಕ್ಕೆ 62 ರನ್‌ಗಳ ಮುನ್ನಡೆಯಲ್ಲಿದೆ.

    233 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ಇಂದು 4 ವಿಕೆಟ್‌ಗಳ ಸಹಾಯದಿಂದ ಕೇವಲ 11 ರನ್‌ಗಳಿಸಿತು. ಇಂದು 4.1 ಓವರ್‌ ಆಡಿದ ಭಾರತ ಅಂತಿಮವಾಗಿ 93.1 ಓವರ್‌ಗಳಲ್ಲಿ 244 ರನ್‌ಗಳಿಗೆ ಆಲೌಟ್‌ ಆಯ್ತು.

    ಮಿಚೆಲ್‌ ಸ್ಟ್ರಾಕ್‌ 4 ವಿಕೆಟ್‌ ಪ್ಯಾಟ್‌ ಕಮಿನ್ಸ್‌ 3, ಜೋಶ್‌ ಹ್ಯಾಝಲ್‌ವುಡ್‌ ಮತ್ತು ನಥನ್‌ ಲಿಯಾನ್‌ ತಲಾ ಒಂದು ವಿಕೆಟ್‌ ಕಿತ್ತರು.

    ಆಸೀಸ್‌ಗೆ ಆರಂಭದಲ್ಲೇ ಶಾಕ್‌ ನೀಡಿದ ಬುಮ್ರಾ ತಂಡದ ಮೊತ್ತ 29 ಆಗುಷ್ಟರಲ್ಲೇ ಇಬ್ಬರು ಆರಂಭಿಕ ಆಟಗಾರರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಒಂದು ಹಂತದಲ್ಲಿ 111 ರನ್‌ ಗಳಿಸಿದ್ದಾಗ 7 ವಿಕೆಟ್‌ ಕಳೆದುಕೊಂಡು ಪರದಾಡುತ್ತಿದ್ದ ಆಸ್ಟ್ರೇಲಿಯಾ ನಾಯಕ ಟಿಮ್‌ ಪೈನೆ ಅವರ ಸಾಹಸದಿಂದ 72.1 ಓವರ್‌ಗಳಲ್ಲಿ 191 ರನ್‌ಗಳಿಸಿ ಆಲೌಟ್‌ ಆಯ್ತು.

    ಲಬುಶೇನ್‌ 47 ರನ್‌(119 ಎಸೆತ, 7 ಬೌಂಡರಿ) ರನ್‌ ಗಳಿಸಿ ಔಟಾದರೆ ಟಿಮ್‌ ಪೈನೆ ಔಟಾಗದೇ 73 ರನ್‌(99 ಎಸೆತ, 10 ಬೌಂಡರಿ) ಹೊಡೆದರು. 18 ಓವರ್‌ ಬೌಲ್‌ ಮಾಡಿದ ಅಶ್ವಿನ್‌ 55 ರನ್‌ ನೀಡಿ 4 ವಿಕೆಟ್‌ ಕಿತ್ತರೆ ಉಮೇಶ್‌ ಯಾದವ್‌ 3 ವಿಕೆಟ್‌, ಬುಮ್ರಾ 2 ವಿಕೆಟ್‌ ಕಿತ್ತರು.

    53 ರನ್‌ಗಳ ಮುನ್ನಡೆ ಪಡೆದು ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ಈಗಾಲೇ ಪೃಥ್ವಿ ಶಾ ವಿಕೆಟ್‌ ಕಳೆದುಕೊಂಡು 6 ಓವರ್‌ ನಷ್ಟಕ್ಕೆ 9 ರನ್‌ ಗಳಿಸಿದೆ. 4 ರನ್‌ ಗಳಿಸಿ ಪೃಥ್ವಿ ಶಾ ಔಟಾಗಿದ್ದಾರೆ. 5 ರನ್‌ ಗಳಿಸಿದ ಮಯಾಂಕ್‌ ಅಗರ್‌ವಾಲ್‌ ಮತ್ತು ನೈಟ್‌ ವಾಚ್‌ಮ್ಯಾನ್‌ ಆಗಿ ಬಂದಿರುವ ಬುಮ್ರಾ 0 ರನ್‌ ಗಳಿಸಿ ನಾಳೆ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

  • ನಿತ್ಯಾನಂದನ ಕೈಲಾಸಕ್ಕೆ ಮೂರು ದಿನದ ವೀಸಾ ಆಫರ್

    ನಿತ್ಯಾನಂದನ ಕೈಲಾಸಕ್ಕೆ ಮೂರು ದಿನದ ವೀಸಾ ಆಫರ್

    ನವದೆಹಲಿ: ಸ್ವಯಂಘೋಷಿತ ದೇವಮಾನದ ನಿತ್ಯಾನಂದನ ಸ್ವಯಂ ಕೈಲಾಸ ದೇಶಕ್ಕೆ ವೀಸಾ ಆಫರ್ ನೀಡಿದ್ದಾನೆ. ಈ ಕುರಿತ ನಿತ್ಯಾನಂದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾನೆ.

    ಮೂರು ದಿನದ ವೀಸಾ: ಕೈಲಾಸಕ್ಕೆ ಮೂರು ದಿನದ ವೀಸಾ ನೀಡಲಾಗುವುದು. ನಿಮ್ಮ ಸ್ವಂತ ಹಣದಲ್ಲಿ ಮೊದಲು ಆಸ್ಟ್ರೇಲಿಯಾಗೆ ಬರಬೇಕು. ಅಲ್ಲಿಂದ ಕೈಲಾಸ ದೇಶದ ಚಾರ್ಟೆಡ್ ಫ್ಲೈಟ್ ಗರುಡ ನಿಮ್ಮನ್ನ ಇಲ್ಲಿಗೆ ಕರೆತರಲಾಗುವುದು. ಮೂರು ದಿನದಲ್ಲಿ ಒಂದು ಬಾರಿ ಅಂದ್ರೆ 10 ನಿಮಿಷ ನನ್ನ ದರ್ಶನ ನಿಮಗೆ ಸಿಗಲಿದೆ. ಈ ವೇಳೆ ನಿಮ್ಮ ಕಷ್ಟಗಳನ್ನ ನನ್ನ ಬಳಿ ಹೇಳಿಕೊಳ್ಳಬಹುದು. ಮೂರು ದಿನಕ್ಕಿಂತ ಹೆಚ್ಚು ಇಲ್ಲಿರಲು ಯಾರಿಗೂ ಅವಕಾಶವಿಲ್ಲ ಎಂದು ನಿತ್ಯಾನಂದ ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ.

    ಕೈಲಾಸಕ್ಕೆ ಭೇಟಿ ನೀಡುವವರು ವೀಸಾ ಅಪ್ಲೈ ಮಾಡಲು ಲಿಂಕ್ (shrikailasa.org/e-passport) ಸಹ ನೀಡಿದ್ದಾನೆ. ಇಲ್ಲಿಗೆ ಬಂದ ಮೇಲೆ ಇನ್ನಷ್ಟು ದಿನ ಇರುತ್ತೇನೆ ಎಂದು ಹಠ ಹಿಡಿಯುವಂತಿಲ್ಲ. ಕೈಲಾಸದಲ್ಲಿ ನಿಮಗೆ ಆಹಾರ, ವಸತಿ ವ್ಯವಸ್ಥೆಯನ್ನ ಉಚಿತವಾಗಿ ಕಲ್ಪಿಸಲಾಗುವುದು ಎಂದು ನಿತ್ಯಾನಂದ ಹೇಳಿದ್ದಾರೆ.

    ಗಣೇಶ ಚತುರ್ಥಿಯಂದು ನಿತ್ಯಾನಂದ ತನ್ನ ಕೈಲಾಸ ದೇಶದ ರಿಸರ್ವ್ ಬ್ಯಾಂಕ್ ಘೋಷಿಸಿದ್ದನು. ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಈಕ್ವೆಡಾರ್ ನ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪದಲ್ಲಿ ಅತ್ಯಾಚಾರ ಆರೋಪಿ ನಿತ್ಯಾನಂದ ತನ್ನದೇ ಕೈಲಾಸ ದೇಶದ ರಿಸರ್ವ್ ಬ್ಯಾಂಕ್‍ನ್ನು ತನ್ನ ಸಹಚರರೊಂದಿಗೆ ಲಾಂಚ್ ಮಾಡಿದ್ದನು.

    ನಾನು ಹಿಂದೂ ಧರ್ಮದ ಸುಧಾರಕನಲ್ಲ, ನಾನು ಪುನರುಜ್ಜೀವನಗೊಳಿಸುವವನು ಎಂದು ಹೇಳಿಕೊಂಡಿದ್ದನು. ಅಲ್ಲದೆ ಕರೆನ್ಸಿ ಬಿಡುಗಡೆ ಮಾಡಿದ ಕುರಿತ ಫೋಟೋಗಳನ್ನು ಫೇಸ್ಬುಕ್‍ನಲ್ಲಿ ಹಂಚಿಕೊಂಡಿರುವ ನಿತ್ಯಾನಂದ, ಗಣೇಶ ಚತುರ್ಥಿಯ ಅಂಗವಾಗಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸದ ಕರೆನ್ಸಿಯನ್ನು ಗಣೇಶನ ಹಾಗೂ ಪರಮಶಿವ ಮತ್ತು ಗುರು ಹಿಂದೂ ಧರ್ಮದ ಪ್ರಮುಖ, ಜಗದ್ಗುರು ಮಹಾಸನ್ನಿಧಾನಂ, ದೇವರ ಪ್ರತೀಕವಾಗಿರುವ ಭಗವಾನ್ ನಿತ್ಯಾನಂದ ಪರಮ ಶಿವಂ ಪಾದಗಳಿಗೆ ಅರ್ಪಿಸಲಾಗುತ್ತಿದೆ ಎಂದು ಪೋಸ್ಟ್ ಮಾಡಿದ್ದನು.

    ಕೈಲಾಸ ಹಾಗೂ ಅದರ ಸನ್ಯಾಸಿಗಳ ತಂಡ 100ಕ್ಕೂ ಹೆಚ್ಚು ಪುಸ್ತಕ, 360 ಲೇಖನಗಳು ಹಾಗೂ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡ ಹಿಂದೂ ಆರ್ಥಿಕ ನೀತಿಗಳ ಬಗ್ಗೆ ವ್ಯಾಪಕ ಸಂಶೋಧನೆ ಮತ್ತು ಅಧ್ಯಯನ ನಡೆಸಿ, ಕರೆನ್ಸಿ ತಯಾರಿಸಲಾಗಿದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿತ್ತು. ಅಲ್ಲದೆ ನಿತ್ಯಾನಂದ ದೈವಿಕ ಪಾವಿತ್ರ್ಯತೆ ಹಾಗೂ ನೇರ ಭಾಷಣಗಳ ಮೂಲಕ ಕರೆನ್ಸಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದನು.

    ಈ ಆರ್ಥಿಕ ನೀತಿಯು ಆಂತರಿಕ ಕರೆನ್ಸಿ ವಿನಿಮಯ ಹಾಗೂ ಬಾಹ್ಯ ವಿಶ್ವ ಕರೆನ್ಸಿ ವಿನಿಮಯವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸುತ್ತದೆ. ಅಲ್ಲದೆ ಕೈಲಾಸ ದೇಶವು ಮತ್ತೊಂದು ರಾಷ್ಟ್ರದೊಂದಿಗೆ ಎಂಒಯುಗೆ ಸಹಿ ಹಾಕಿದ್ದು, ನಮ್ಮ ರಿಸರ್ವ್ ಬ್ಯಾಂಕ್‍ಗೆ ಆತಿಥ್ಯವಹಿಸಲಿದೆ ಎಂದು ತಿಳಿಸಿದ್ದಾನೆ. ಆದರೆ ಯಾವ ದೇಶ ಎಂಬುದನ್ನು ನಿತ್ಯಾನಂದ ಹೇಳಿಲ್ಲ.

    ನಿತ್ಯಾನಂದ ತನ್ನ ದೇಶಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದು, ಇದಕ್ಕೆ ತನ್ನನ್ನೇ ಪ್ರಧಾನಿಯಾಗಿ ಘೋಷಿಸಿಕೊಂಡಿದ್ದಾನೆ. ಕಳೆದ ವರ್ಷ ನವೆಂಬರ್ ನಲ್ಲಿ ಇಂತಹದ್ದೊಂದು ದೇಶ ಕಟ್ಟುತ್ತಿರುವ ಕುರಿತು ನಿತ್ಯಾನಂದ ಮಾಹಿತಿ ನೀಡಿದ್ದ. ನಿತ್ಯಾನಂದನ ವಿರುದ್ಧ 50 ಕ್ಕೂ ಹೆಚ್ಚು ನ್ಯಾಯಾಲಯಗಳಲ್ಲಿ ಪ್ರಕರಣಗಳಿದ್ದು, ವಿಚಾರಣೆಗೆ ಹಾಜರಾಗದೆ ಇಕ್ವಿಡಾರ್ ಗೆ ಪರಾರಿಯಾಗಿದ್ದಾನೆ.

    ಕೈಲಾಸ ಎಲ್ಲಿದೆ ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿದ್ದು, ಈಕ್ವೆಡಾರ್ ನ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪವನ್ನು ನಿತ್ಯಾನಂದ ಖರೀದಿಸಿ ಅದಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದಾನೆ ಎನ್ನಲಾಗುತ್ತಿದೆ. ಆದರೆ ಈಕ್ವೆಡಾರ್ ಇದನ್ನು ಅಲ್ಲಗಳೆದಿದ್ದು, ಅಂತಹ ಯಾವುದೇ ವ್ಯಕ್ತಿಗೆ ದ್ವೀಪವನ್ನು ನೀಡಿಲ್ಲ ಎಂದು ಹೇಳಿದೆ.