Tag: australia

  • ರಸ್ತೆ ಸುರಕ್ಷೆ ಕ್ರಿಕೆಟ್ ಸರಣಿಗೆ ಸಜ್ಜಾದ ಲೆಜೆಂಡ್ ಕ್ರಿಕೆಟರ್ಸ್

    ರಸ್ತೆ ಸುರಕ್ಷೆ ಕ್ರಿಕೆಟ್ ಸರಣಿಗೆ ಸಜ್ಜಾದ ಲೆಜೆಂಡ್ ಕ್ರಿಕೆಟರ್ಸ್

    ಭೋಪಾಲ್: ರಸ್ತೆ ಸುರಕ್ಷೆಗಾಗಿ ನಡೆಯುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಕ್ರಿಕೆಟ್ ಸರಣಿಗಾಗಿ ಇದೀಗ ವಿಶ್ವದ ಲೆಜೆಂಡ್ ಕ್ರಿಕೆಟರ್ಸ್ ಸಜ್ಜಾಗುತ್ತಿದ್ದಾರೆ.

    ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದ ಘಟಾನುಘಟಿ ಕ್ರಿಕೆಟ್ ತಂಡಗಳಲ್ಲಿ ದಶಕಗಳ ಕಾಲ ಆಡಿ ನಿವೃತ್ತಿ ಹೊಂದಿರುವ ಮಾಜಿ ಆಟಗಾರರು ಮತ್ತೊಮ್ಮೆ ಇದೀಗ ಬ್ಯಾಟ್, ಬಾಲ್ ಹಿಡಿದು ತಮ್ಮ ತಮ್ಮ ದೇಶದ ಪರವಾಗಿ ಕ್ರಿಕೆಟ್ ಆಡಲು ಅಂಗಳಕ್ಕೆ ಇಳಿಯುತ್ತಿದ್ದಾರೆ.

    ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಪಂದ್ಯವು ವಿಶ್ವಾದ್ಯಂತ ರಸ್ತೆಗಳಲ್ಲಿ ಸಂಚರಿಸುವ ಜನರಿಗೆ ಸಂಚಾರದ ಕುರಿತು ಜಾಗರೂಕತೆ ಮತ್ತು ಅವರು ರಸ್ತೆಗಳಲ್ಲಿ ನಡೆಸುವ ವರ್ತನೆಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ವಿಶ್ವದ ಎಲ್ಲಾ ಕ್ರಿಕೆಟಿಗರು ಸೇರಿ ಆಡುವ ಮೂಲಕ ಜನರಿಗೆ ಸುರಕ್ಷತೆಯ ಪಾಠ ಮಾಡಲು ಹೊರಡುತ್ತಿದ್ದಾರೆ.

    ಕಳೆದ ವರ್ಷ ಈ ಸರಣಿಯಲ್ಲಿ ಭಾಗವಹಿಸಲು ಹಲವು ದೇಶದ ಲೆಜೆಂಡ್ ಕ್ರಿಕೆಟರ್ಸ್ ಸಿದ್ಧವಾಗಿದ್ದರು. ಆದರೆ ಕೊರೊನಾದಿಂದಾಗಿ ಸರಣಿ ನಡೆಯಲಿಲ್ಲ. ಇದೀಗ 2021ರ ಮಾರ್ಚ್ 5 ರಿಂದ ಮಾರ್ಚ್ 21ರವರೆಗೆ ಭಾರತದ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂ ರಾಯ್‍ಪುರ್ ನಲ್ಲಿ ನಡೆಯಲಿದೆ.

    ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ಹಲವು ವರ್ಷಗಳಿಂದ ಕ್ರಿಕೆಟ್ ನಿಂದ ದೂರ ಉಳಿದಿರುವ ಹಿರಿಯ ಆಟಗಾರರು ಮತ್ತೆ ಪ್ಯಾಡ್ ಕಟ್ಟಿ ಬ್ಯಾಟ್ ಬೀಸಲು ಮುಂದಾದರೆ, ವೇಗಿಗಳು ತಮ್ಮ ಉರಿ ಚೆಂಡಿನ ದಾಳಿಗೆ ಸಿದ್ಧವಾಗುತ್ತಿದ್ದಾರೆ.

    ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಪಂದ್ಯದಲ್ಲಿ ಭಾರತ ಲೆಜೆಂಡ್ಸ್, ದಕ್ಷಿಣ ಆಫ್ರಿಕಾ ಲೆಜೆಂಡ್ಸ್, ಇಂಗ್ಲೆಂಡ್ ಲೆಜೆಂಡ್ಸ್, ಬಾಂಗ್ಲಾದೇಶ ಲೆಂಜೆಡ್ಸ್, ಶ್ರೀಲಂಕಾ ಲೆಜೆಂಡ್ಸ್, ಮತ್ತು ವೆಸ್ಟ್ ಇಂಡೀಸ್ ಲೆಜೆಂಡ್ಸ್ ಸೇರಿ ಒಟ್ಟು 6 ತಂಡಗಳು ಭಾಗವಹಿಸಲಿದೆ.

    ನಿವೃತ್ತಿ ಹೊಂದಿರುವ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಾಂಟಿ ರೋಡ್ಸ್, ಕೆವಿನ್ ಪೀಟರ್ಸನ್, ಜೋನಾಥನ್ ಟ್ರಾಟ್, ಬ್ರಿಯಾನ್ ಲಾರಾ, ಸನತ್ ಜಯಸೂರ್ಯ, ತಿಲಕರತ್ನೆ ದಿಲ್ಶನ್ ಸೇರಿದಂತೆ ಖ್ಯಾತ ನಾಮ ಆಟಗಾರರು ಮತ್ತೆ ಕ್ರಿಕೆಟ್ ಅಂಕಣದಲ್ಲಿ ಎದುರು ಬದುರಾಗಲಿದ್ದಾರೆ.

    ಈ ಮೂಲಕ ನಿವೃತ್ತಿಯಾದ ಬಳಿಕ ತಮ್ಮ ನೆಚ್ಚಿನ ಆಟಗಾರನ ಆಟವನ್ನು ಮಿಸ್ ಮಾಡಿಕೊಂಡಿರುವ ಅಭಿಮಾನಿಗಳಿಗೆ ಮತ್ತೆ ರಂಜಿಸಲು ಈ ಹಿರಿಯ ಆಟಗಾರರು ತಯಾರಾಗಿದ್ದಾರೆ.

  • ಟೆಸ್ಟ್‌ ಚಾಂಪಿಯನ್‌ ಶಿಪ್‌ ಭಾರತ Vs ಆಸ್ಟ್ರೇಲಿಯಾ – ಫೈನಲ್‌ಗೆ ಯಾರು ಹೋಗ್ತಾರೆ?

    ಟೆಸ್ಟ್‌ ಚಾಂಪಿಯನ್‌ ಶಿಪ್‌ ಭಾರತ Vs ಆಸ್ಟ್ರೇಲಿಯಾ – ಫೈನಲ್‌ಗೆ ಯಾರು ಹೋಗ್ತಾರೆ?

    ಅಹಮದಾಬಾದ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ರೇಸ್‍ನಿಂದ ಇಂಗ್ಲೆಂಡ್ ಔಟ್ ಆಗಿದ್ದರೂ ಭಾರತ ಮತ್ತು ಆಸ್ಟ್ರೇಲಿಯಾದ ಪೈಕಿ ಯಾರು ಅರ್ಹತೆ ಪಡೆಯಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

    ಮೂರನೇ ಪಂದ್ಯವನ್ನು 10 ವಿಕೆಟ್‌ಗಳಿಂದ ಭಾರತ ಜಯಸಿ 490 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ. 442 ಅಂಕ ಪಡೆದಿರುವ ಇಂಗ್ಲೆಂಡ್‌ 4ನೇ ಸ್ಥಾನದಲ್ಲಿದೆ. 420 ಅಂಕ ಪಡೆದಿರುವ ನ್ಯೂಜಿಲೆಂಡ್‌ 2ನೇ ಸ್ಥಾನ, 332 ಅಂಕ ಹೊಂದಿರುವ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.

    ಇಂದಿನ ಪಂದ್ಯವನ್ನು ಭಾರತ ಗೆದ್ದಿದ್ದರೂ ಟೆಸ್ಟ್‌ ಚಾಂಪಿಯನ್‌ ಶಿಪ್‌ಗೆ ಅರ್ಹತೆ ಪಡೆಯುತ್ತಾ ಇಲ್ಲವೋ ಇನ್ನುವುದು 4ನೇ ಟೆಸ್ಟ್‌ ಫಲಿತಾಂಶದ ಮೇಲೆ ನಿಂತಿದೆ. ಇದನ್ನೂ ಓದಿ: ಟೆಸ್ಟ್‌ ಚಾಂಪಿಯನ್‌ ಶಿಪ್‌ – ಐಸಿಸಿ ನಿಯಮದ ವಿರುದ್ಧ ಕೊಹ್ಲಿ ಕಿಡಿ ಕಾರಿದ್ದು ಯಾಕೆ?

    ನರೇಂದ್ರಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ 4ನೇ ಟೆಸ್ಟ್‌ ಪಂದ್ಯವನ್ನು ಭಾರತ ಗೆದ್ದರೆ ಸುಲಭವಾಗಿ ಅರ್ಹತೆ ಪಡೆಯಲಿದೆ. ಒಂದು ವೇಳೆ ಗೆಲ್ಲದೇ ಇದ್ದರೂ ಕನಿಷ್ಠ ಡ್ರಾ ಮಾಡಿಕೊಂಡರೂ ಭಾರತಕ್ಕೆ ಅವಕಾಶವಿದೆ.

    ಕೊನೆಯ ಪಂದ್ಯವನ್ನು ಭಾರತ ಸೋತರೆ ಇಂಗ್ಲೆಂಡ್‌ ಅರ್ಹತೆ ಪಡೆಯುವುದಿಲ್ಲ ಬದಲಾಗಿ ಆಸ್ಟ್ರೇಲಿಯಾ ಅರ್ಹತೆ ಪಡೆಯಲಿದೆ. ಆಸ್ಟ್ರೇಲಿಯಾ 332 ಅಂಕ ಪಡೆದರೂ ಅರ್ಹತೆ ಪಡೆಯಲು ಕಾರಣವಾಗಿರುವುದು ಪರ್ಸಟೇಜ್‌ ಆಫ್‌ ಪಾಯಿಂಟ್‌.

    ಎರಡನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ 70 ಪಿಸಿಟಿಯೊಂದಿಗೆ ಈಗಾಗಲೇ ಫೈನಲ್‌ ಪ್ರವೇಶಿಸಿದೆ. ಭಾರತ 490 ಅಂಕ ಪಡೆದರೂ 71.0 ಪಿಸಿಟಿ ಹೊಂದಿದೆ. ಅದೇ ಆಸ್ಟ್ರೇಲಿಯಾ 332 ಅಂಕದೊಂದಿಗೆ 69.2 ಪಿಸಿಟಿ ಹೊಂದಿದೆ. ಕೊನೆಯ ಟೆಸ್ಟ್‌ ಪಂದ್ಯವನ್ನು ಭಾರತ ಸೋತರೆ ಪಿಸಿಟಿ ಆಧಾರದ ಮೇಲೆ ಆಸ್ಟ್ರೇಲಿಯಾ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಈ ಕಾರಣಕ್ಕೆ ಭಾರತಕ್ಕೆ ಕೊನೆಯ ಟೆಸ್ಟ್‌ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆಲ್ಲದೇ ಇದ್ದರೂ ಡ್ರಾ ಮಾಡಿಕೊಂಡರೂ ಕಪ್‌ ಜಯಿಸುವುದರ ಜೊತೆಗೆ ಐಸಿಸಿ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ಗೆ ಅವಕಾಶ ಪಡೆಯಲಿದೆ.

  • ದೇವರಿಗೆ ಮುಡಿ ಕೊಟ್ಟು ಹರಕೆ ತೀರಿಸಿದ ಕ್ರಿಕೆಟಿಗ ನಟರಾಜನ್

    ದೇವರಿಗೆ ಮುಡಿ ಕೊಟ್ಟು ಹರಕೆ ತೀರಿಸಿದ ಕ್ರಿಕೆಟಿಗ ನಟರಾಜನ್

    ಚೆನ್ನೈ: ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಆಸ್ಟ್ರೇಲಿಯಾ ಸರಣಿಯಲ್ಲಿ ತನ್ನ ಬೌಲಿಂಗ್ ದಾಳಿಯಿಂದ ಆಸ್ಟ್ರೇಲಿಯದ  ಬ್ಯಾಟ್ಸ್‌ಮ್ಯಾನ್ ಗಳಿಗೆ ಸಿಂಹ ಸ್ವಪ್ನವಾಗಿ ಕಾಡಿದ ಭಾರತದ ಭವಿಷ್ಯದ ಭರವಸೆಯ ವೇಗಿ ಟಿ. ನಟರಾಜನ್ ತನ್ನ ಮುಡಿಯನ್ನು ದೇವರಿಗೆ ಕೊಟ್ಟು ಹರಕೆ ತಿರಿಸಿಕೊಂಡಿದ್ದಾರೆ.

    ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‍ನಲ್ಲಿ ನಟರಾಜನ್ ತನ್ನ ಯಾರ್ಕರ್ ಬೌಲಿಂಗ್ ಮೂಲಕ ಆಸ್ಟ್ರೇಲಿಯಾದಲ್ಲಿ ಟಿ20 ಮತ್ತು ಟೆಸ್ಟ್ ಕ್ರಿಕೆಟ್ ಸರಣಿಯನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

    ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಗೂ ಮುಂಚೆ ತಾನು ಭಾರತ ತಂಡಕ್ಕೆ ಆಯ್ಕೆಯಾದರೆ ಮುರುಗಸ್ವಾಮಿಗೆ ತಲೆಯ ಮುಡಿ ಕೊಡುವುದಾಗಿ ಹರಕೆ ಹೇಳಿಕೊಂಡಿದ್ದರು. ಇದರಂತೆ ನಟರಾಜನ್ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ನಟರಾಜನ್ ಮಧುರೈ ಜಿಲ್ಲೆಯ ಪಳನಿಯ ದಂಡಾಯುಧಪಾಣಿ ದೇವಸ್ಥಾನದಲ್ಲಿರುವ ಮುರುಗಸ್ವಾಮಿಯ ದರ್ಶನ ಮಾಡಿ ಹರಕೆಯ ಪ್ರಕಾರ ತಲೆ ಬೋಳಿಸಿ ಮುಡಿಕೊಟ್ಟಿದ್ದಾರೆ.

    ನಟರಾಜನ್ ಶಿವಗಿರಿ ಪರ್ವತದಲ್ಲಿರುವ ರೋಪ್ ಕಾರ್ ಮೂಲಕ ದೇವಸ್ಥಾನ ಪ್ರವೇಶಿಸಿದರು. ದೇವಾಲಯಕ್ಕೆ ಬರುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿ ಸ್ವಾಗತಿಸಿ ಆತ್ಮೀಯವಾಗಿ ಬರಮಾಡಿಕೊಂಡಿತ್ತು. ನಟರಾಜನ್ ಬರುತ್ತಿದ್ದಂತೆ ಅಭಿಮಾನಿಗಳು ದೇವಸ್ಥಾನದಲ್ಲಿ ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇತ್ತ ನಟರಾಜನ್ ಭಕ್ತಿಯಿಂದ ದೇವರಿಗೆ ಹರಕೆ ಪೂರೈಸಿ ಸಂತಸ ಪಟ್ಟರು.

  • ದೆಹಲಿ ಪ್ರತಿಭಟನೆ – ಟ್ರ್ಯಾಕ್ಟರ್ ಪಲ್ಟಿಯಾಗಿ ಮೃತಪಟ್ಟವನು ಆಸ್ಟ್ರೇಲಿಯಾದಲ್ಲಿ ವಿದ್ಯಾರ್ಥಿ

    ದೆಹಲಿ ಪ್ರತಿಭಟನೆ – ಟ್ರ್ಯಾಕ್ಟರ್ ಪಲ್ಟಿಯಾಗಿ ಮೃತಪಟ್ಟವನು ಆಸ್ಟ್ರೇಲಿಯಾದಲ್ಲಿ ವಿದ್ಯಾರ್ಥಿ

    – ಪ್ರತಿಭಟನೆಯಲ್ಲಿ ಭಾಗಿಯಾದ ವಿಚಾರ ಮನೆಯವರಿಗೆ ಗೊತ್ತಿಲ್ಲ

    ನವದೆಹಲಿ: ಗಣರಾಜೋತ್ಸವ ದಿನದಂದು ದೆಹಲಿಯಲ್ಲಿ ರೈತ ಹೋರಾಟದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ವ್ಯಕ್ತಿ ಆಸ್ಟ್ರೇಲಿಯಾದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

     

    ಮೃತ ಯುವಕನನ್ನು ಉತ್ತರಪ್ರದೇಶ ರಾಂಪೂರಿನ ನರ್ವೀತ್ ಸಿಂಗ್(27) ಎಂದು ಗುರುತಿಸಲಾಗಿದೆ. ಈತ ಆಸ್ಟ್ರೇಲಿಯಾದ ಕಾಲೇಜು ಒಂದರಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದು 3 ದಿನಗಳ ಹಿಂದೆ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿದ್ದ.

    ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾದಿಂದ ಮನೆಗೆ ಬಂದಿದ್ದ ನರ್ವೀತ್ ಏಕಾಏಕಿ 3 ದಿನಗಳ ಹಿಂದೆ ರೈತರ ಪ್ರತಿಭಟನೆಗೆ ಪಾಲ್ಗೊಳ್ಳಲು ದೆಹಲಿಗೆ ಬಂದಿದ್ದ. ಮಂಗಳವಾರ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸಿದ ರ್ಯಾಲಿಯಲ್ಲಿ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಈತ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗುದ್ದಿ ಮುಂದಕ್ಕೆ ಹೋಗಲು ಯತ್ನಿಸುತ್ತಿದ್ದ. ಆದರೆ ಈ ವೇಳೆ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿ ಮೃತಪಟ್ಟಿದ್ದಾನೆ.

    ನರ್ವೀತ್ ದೆಹಲಿ ಪ್ರತಿಭಟನೆಯಲ್ಲಿ ಭಾಗಿಯಾದ ಮಾಹಿತಿ ಅವರ ಕುಟುಂಬದವರಿಗೆ ತಿಳಿದಿರಲಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ರೈತರು ಮಾತ್ರ ಪೊಲೀಸರು ಟಿಯರ್ ಗ್ಯಾಸ್ ಪ್ರಯೋಗಿಸಿದ ಕಾರಣ ಟ್ರ್ಯಾಕ್ಟರ್ ನ  ನಿಯಂತ್ರಣ ಕಳೆದುಕೊಂಡು ನರ್ವೀತ್ ಸಿಂಗ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ

  • ಮೈದಾನ ಮಾತ್ರವಲ್ಲ ಹೊರಗಡೆಯೂ ಟೀಂ ಇಂಡಿಯಾವನ್ನು ಕೆಣಕಿದ್ದ ಆಸ್ಟ್ರೇಲಿಯಾ

    ಮೈದಾನ ಮಾತ್ರವಲ್ಲ ಹೊರಗಡೆಯೂ ಟೀಂ ಇಂಡಿಯಾವನ್ನು ಕೆಣಕಿದ್ದ ಆಸ್ಟ್ರೇಲಿಯಾ

    – ಕಹಿ ಘಟನೆಯನ್ನು ಹಂಚಿಕೊಂಡ ಅಶ್ವಿನ್
    – ಬಯೋ ಬಬಲ್‍ನಲ್ಲಿದ್ದರೂ ದೂರವಿಟ್ಟಿದ್ದ ಆಸೀಸ್

    ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದ ವೇಳೆ ಆಸಿಸ್ ಆಟಗಾರರೊಂದಿಗೆ ಲಿಫ್ಟ್‍ನಲ್ಲೂ ಕೂಡ ಜೊತೆಯಾಗಿ ಪ್ರಯಾಣಿಸಲು ಅವಕಾಶ ಇರಲಿಲ್ಲ ಎಂಬ ಕಹಿ ಘಟನೆಯೊಂದನ್ನು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಿಚ್ಚಿಟ್ಟಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಭಾರತದ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಜೊತೆ ಈ ಮಾತನ್ನು ಅಶ್ವಿನ್ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಆಸ್ಟ್ರೇಲಿಯಾ ಆಟಗಾರರೂ ಮತ್ತು ಅಲ್ಲಿನ ಅಭಿಮಾನಿಗಳು ಪದೇ ಪದೇ ಭಾರತದ ಆಟಗಾರೊಂದಿಗೆ ಒಂದಲ್ಲ ಒಂದು ಕಾರಣಗಳಿಂದ ಕೆಣಕುತ್ತಿದ್ದರು. ಇದೇ ರೀತಿ ಆಸ್ಟ್ರೇಲಿಯಾ ಮತ್ತು ಭಾರತ ತಂಡದ ಎಲ್ಲಾ ಸದಸ್ಯರು ಸರಣಿಯಲ್ಲಿ ಭಾಗವಹಿಸುವಾಗ ಕೊರೊನಾ ಮುನ್ನೆಚ್ಚರಿಕೆಯಾಗಿ ಬಯೋ ಬಬಲ್‍ನಲ್ಲಿದ್ದರು. ಆದರೂ ಕೂಡ ಆಸ್ಟ್ರೇಲಿಯಾ ತಂಡ ಭಾರತೀಯ ಆಟಗಾರರನ್ನು ತುಂಬಾ ದೂರವಿಟ್ಟಿತ್ತು. ನಾವು ಅವರೊಂದಿಗೆ ಲಿಫ್ಟ್‍ನಲ್ಲಿ ಕೂಡ ಜೊತೆಯಾಗಿ ಹೊಗಲು ಅವಕಾಶ ಕೊಡುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಇದಕ್ಕೆ ಉತ್ತರಿಸಿದ ಆರ್ ಶ್ರೀಧರ್ ನಾವು ಒಂದೇ ಬಯೋ ಬಬಲ್‍ನಲ್ಲಿದ್ದರೂ ಕೂಡ ಅವರು ನಮ್ಮಿಂದ ಆ ರೀತಿಯ ಅಂತರ ಕಾಯ್ದುಕೊಂಡಿರುವುದು ಅರಗಿಸಿಕೊಳ್ಳಲು ಆಗಿರಲಿಲ್ಲ. ಅವರು ಆ ರೀತಿ ನಮ್ಮನ್ನು ನೋಡಿಕೊಳ್ಳಬಾರದಿತ್ತು ಎಂದು ಅಭಿಪ್ರಾಯಪಟ್ಟರು.

    ಬ್ರಿಸ್ಬೇನ್‍ನಲ್ಲಿ ಕೊನೆಯ ಪಂದ್ಯವಾಡಲು ಭಾರತ ಹಾಗೂ ಆಸ್ಟ್ರೇಲಿಯಾ ತಂಡ ಹೊಟೇಲ್ ಒಂದರಲ್ಲಿ ಉಳಿದುಕೊಂಡಿತ್ತು. ಈ ವೇಳೆ ಈ ಕಹಿ ಘಟನೆ ನಡೆದಿದೆ. ಆದರೂ ಈ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು 2-1 ಅಂತರದಲ್ಲಿ ಸರಣಿ ಗೆದ್ದು ಐತಿಹಾಸಿಕ ಸಾಧನೆಯೊಂದಿಗೆ ಟೀಂ ಇಂಡಿಯಾ ತವರಿಗೆ ಮರಳಿದೆ.

  • ಬ್ರಿಸ್ಪೇನ್‌ ಟೆಸ್ಟ್‌ – ವಾಷಿಂಗ್ಟನ್‌ ಸುಂದರ್‌ ಬಳಿ ಇರಲಿಲ್ಲ ಪ್ಯಾಡ್ಸ್‌

    ಬ್ರಿಸ್ಪೇನ್‌ ಟೆಸ್ಟ್‌ – ವಾಷಿಂಗ್ಟನ್‌ ಸುಂದರ್‌ ಬಳಿ ಇರಲಿಲ್ಲ ಪ್ಯಾಡ್ಸ್‌

    – ಪಂದ್ಯ ಆರಂಭವಾದ ಬಳಿಕ ಖರೀದಿ
    – ಪ್ಯಾಡ್ಸ್‌ ಹೊಂದಿಸಲು ಶ್ರಮ ಪಟ್ಟಿದ್ದ ತಂಡ

    ಹೈದರಾಬಾದ್‌:  ಆಸ್ಟ್ರೇಲಿಯಾ ವಿರುದ್ಧದ ಬ್ರಿಸ್ಪೇನ್‌ ‌ ಟೆಸ್ಟ್‌  ವೇಳೆ ಭಾರತದ ಐತಿಹಾಸಿಕ ಸಾಧನೆಯಲ್ಲಿ ಪಾತ್ರ ವಹಿಸಿದ್ದ ವಾಷಿಂಗ್ಟನ್‌ ಸುಂದರ್‌ ಬಳಿ ಬ್ಯಾಟಿಂಗ್‌ ಪ್ಯಾಡ್ಸ್‌ ಇರಲಿಲ್ಲ ಎಂಬ ವಿಚಾರ ಈಗ ಬಹಿರಂಗವಾಗಿದೆ..

    ಹೌದು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಆಯ್ಕೆಯಾಗಿದ್ದ ಅಶ್ವಿನ್‌ ಗಾಯಗೊಂಡ ಹಿನ್ನೆಲೆಯಲ್ಲಿ ವಾಷಿಂಗ್ಟನ್‌ ಸುಂದರ್‌ ಅವರು ಬ್ರಿಸ್ಪೇನ್‌ನಲ್ಲಿ ಮೊದಲ ಪಂದ್ಯವನ್ನು ಆಡಿದ್ದರು. ಈ ಸಂದರ್ಭದಲ್ಲಿ ಅವರ ಬಳಿ ಬ್ಯಾಟಿಂಗ್‌ ಪ್ಯಾಡ್ಸ್‌ ಇರಲಿಲ್ಲ ಎಂದು ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ವಾಷಿಂಗ್ಟನ್‌ ಸುಂದರ್‌ ಅವರಿಗೆ ಸರಿಯಾದ ಪ್ಯಾಡ್ಸ್‌ ಸಿಗಲು ಟೀಂ ಬಹಳ ಶ್ರಮ ಪಟ್ಟಿತ್ತು. ಟೆಸ್ಟ್‌ ಪಂದ್ಯ ಆರಂಭವಾದ ಬಳಿಕ ಅವರಿಗಾಗಿ ಹೊರಗಡೆ ಕ್ರಿಕೆಟ್‌ ಮಳಿಗೆಗೆ ತೆರಳಿ ಬಿಳಿ ಪ್ಯಾಡ್ಸ್‌ ಖರೀದಿಸಲಾಯಿತು ಎಂದು ಹೇಳಿದರು.

    ನಮ್ಮ ಆಟಗಾರರ ಕೆಲ ಪ್ಯಾಡ್ಸ್‌ಗಳನ್ನು ಅವರಿಗೆ ನೀಡಲಾಯಿತು. ಆದರೆ ವಾಷಿಂಗ್ಟನ್‌ ಸುಂದರ್‌ ಎತ್ತರವಾಗಿರುವ ಕಾರಣ ಆ ಪ್ಯಾಡ್‌ಗಳು ಸರಿ ಹೊಂದಲಿಲ್ಲ. ಕೋವಿಡ್‌ ಭೀತಿಯಿಂದ ಆಸ್ಟ್ರೇಲಿಯಾದವರ ಬಳಿ ಕೇಳಲು ಹೋಗಲಿಲ್ಲ. ಹೀಗಾಗಿ ಪಂದ್ಯ ಆರಂಭವಾದ ಬಳಿಕ ತಂಡದ ಸಿಬ್ಬಂದಿ ಕ್ರಿಕೆಟ್‌ ಅಂಗಡಿಗೆ ತೆರಳಿ ಪ್ಯಾಡ್ಸ್‌ ಖರೀದಿ ಮಾಡಿದ್ದರು ಎಂದು ವಿವರಿಸಿದರು.

     

    ವಾಷಿಂಗ್ಟನ್‌ ಸುಂದರ್‌ ಮೊದಲ ಇನ್ನಿಂಗ್ಸ್‌ನಲ್ಲಿ 62ರನ್‌(144 ಎಸೆತ, 7 ಬೌಂಡರಿ, 1 ಸಿಕ್ಸರ್) ಹೊಡೆದಿದ್ದರು. ವಾಷಿಂಗ್ಟನ್‌ ಸುಂದರ್‌ ಮತ್ತು ಶಾರ್ದೂಲ್‌ ಠಾಕೂರ್‌ 7ನೇ ವಿಕೆಟ್‌ಗೆ 123 ರನ್‌ಗಳ ಜೊತೆಯಾಟವಾಡಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ವಾಷಿಂಗ್ಟನ್‌ ಸುಂದರ್‌ 22 ರನ್‌(29 ಎಸೆತ, 2 ಬೌಂಡರಿ, 1 ಸಿಕ್ಸರ್‌) ಹೊಡೆದಿದ್ದರು. ಈ ವೇಳೆ ಪಂದ್ಯಶ್ರೇಷ್ಠ ಪುರಸ್ಕೃತ ರಿಷಭ್‌ ಪಂತ್‌ ಜೊತೆ ಸೇರಿ 6ನೇ ವಿಕೆಟ್‌ಗೆ 55 ಎಸೆತಗಳಲ್ಲಿ 53 ರನ್‌ ಜೊತೆಯಾಟವಾಡಿ ಪಂದ್ಯ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು.

  • ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಸರಣಿ ಜಯ

    ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಸರಣಿ ಜಯ

    ಬ್ರಿಸ್ಬೇನ್‍ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 3 ವಿಕೆಟ್ ಗಳಿಂದ ಮಣಿಸಿ ಭಾರತ ತಂಡವು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

    ರಿಷಬ್ ಪಂತ್, ಚೇತೇಶ್ವರ್ ಪೂಜಾರ, ಶುಬ್‍ಮಾನ್ ಗಿಲ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಅಮೋಘ ಆಟದಿಂದ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ನಲ್ಲಿ ನೀಡಿದ್ದ 336 ರನ್ ಗುರಿಯನ್ನು 7 ವಿಕೆಟ್ ಕಳೆದುಕೊಂಡು ಭಾರತ ಗೆಲುವಿನ ನಗೆ ಬೀರಿತು.

    ಶುಬ್‍ಮಾನ್ ಗಿಲ್ 91, ರಿಷಬ್ ಪಂತ್ ಅಜೇಯ 89, ಚೇತೇಶ್ವರ್ ಪೂಜಾರ 56 ಮತ್ತು ವಾಷಿಂಗ್ಟನ್ ಸುಂದರ್ ಅಜೇಯ 22 ರನ್ ಗಳಿಸಿ ಭಾರತಕ್ಕೆ ಗೆಲುವಿನ ಕಾಣಿಕೆ ನೀಡಿದರು.

    ಬ್ರಿಸ್ಬೇನ್‍ನಲ್ಲಿ ಅತ್ಯಧಿಕ ಟಾರ್ಗೆಟ್ ಚೇಸ್ ಮಾಡಿ ಗೆಲುವು ಸಾಧಿಸಿದ ಕೀರ್ತಿಯೂ ಭಾರತದ ಪಾಲಾಯಿತು.

  • 5 ವಿಕೆಟ್ ಪಡೆದು ಮಿಂಚಿದ ಸಿರಾಜ್- ಭಾರತಕ್ಕೆ 328 ರನ್‍ಗಳ ಗುರಿ

    5 ವಿಕೆಟ್ ಪಡೆದು ಮಿಂಚಿದ ಸಿರಾಜ್- ಭಾರತಕ್ಕೆ 328 ರನ್‍ಗಳ ಗುರಿ

    ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯಾಟದ ಎರಡನೇ ಇನ್ನಿಂಗ್ಸ್‍ನಲ್ಲಿ 5 ವಿಕೆಟ್ ಕಿತ್ತು ಸಿರಾಜ್ ಆಸ್ಟ್ರೇಲಿಯಾ ತಂಡಕ್ಕೆ ಕಡಿವಾಣ ಹಾಕಿದ್ದು, ಭಾರತಕ್ಕೆ 328 ರನ್‍ಗಳ ಗುರಿಯನ್ನು ಆಸೀಸ್ ನೀಡಿದೆ.

    ಭಾರತದ ಪರ ತನ್ನ ಮೊದಲ ಸರಣಿಯನ್ನು ಆಡಲು ಆಸ್ಟ್ರೇಲಿಯಾಗೆ ಬಂದಿದ್ದ ಸಿರಾಜ್‍ಗೆ ಆಸ್ಟ್ರೇಲಿಯಾ ಅಭಿಮಾನಿಗಳು ಜನಾಂಗೀಯ ನಿಂದನೆ ಮಾಡಿ ಅವಮಾನಿಸಿದ್ದರು. ಆದರೆ ಅದನ್ನೆಲ್ಲ ಬದಿಗೊತ್ತಿ ತನ್ನ ಆಟದ ಮೂಲಕ ಇದೀಗ ಸಿರಾಜ್ ಆಸ್ಟ್ರೇಲಿಯಾ ತಂಡಕ್ಕೆ ಮತ್ತು ಅಲ್ಲಿನ ಪ್ರೇಕ್ಷಕರಿಗೆ ದಿಟ್ಟ ಉತ್ತರ ನೀಡಿದ್ದಾರೆ.

    ಕೊನೆಯ ಟೆಸ್ಟ್ ಪಂದ್ಯದ 4ನೇ ದಿನ ಬ್ಯಾಟಿಂಗ್ ಮುಂದುವರೆಸಿದ ಆಸ್ಟ್ರೇಲಿಯಾ ಭಾರತದ ನಿಖರ ದಾಳಿಯ ಎದುರು 75.5 ಓವರ್‍ಗಳಲ್ಲಿ 294 ರನ್‍ಗಳಿಗೆ ಆಲೌಟ್ ಆಯಿತು. ಭಾರತದ ಪರ ಮೊಹಮ್ಮದ್ ಸಿರಾಜ್ 73ರನ್ ನೀಡಿ 5 ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ ಸಿರಾಜ್ ತನ್ನ ಜೀವನ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ್ದಾರೆ. ಇವರಿಗೆ ಉತ್ತಮ ಸಾತ್ ನೀಡಿದ ಶಾರ್ದೂಲ್ ಠಾಕೂರ್ 61ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಇನ್ನೊಂದು ವಿಕೆಟ್ ಡೆಬ್ಯು ಪ್ಲೇಯರ್ ವಾಷಿಂಗ್ಟನ್ ಸುಂದರ್ ಪಾಲಾಯಿತು.

    ಗೆಲ್ಲಲು 328 ರನ್‍ಗಳ ಗುರಿ ಪಡದ ಭಾರತ ಬ್ಯಾಟಿಂಗ್ ಆರಂಭಿಸಿದಾಗ ಮಳೆ ಅಡ್ಡಿ ಪಡಿಸಿದೆ. ದಿನದಾಟದ ಮುಕ್ತಾಯದ ವೇಳೆಗೆ ಭಾರತದ ಪರ ರೋಹಿತ್ ಶರ್ಮಾ 4ರನ್ (6 ಎಸೆತ) ಮತ್ತು ಶುಭಮನ್ ಗಿಲ್ 5 ಎಸೆತ ಎದುರಿಸಿ ಯಾವುದೇ ರನ್‍ಗಳಿಸದೆ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನೂ ಭಾರತಕ್ಕೆ ಗೆಲ್ಲಲು 324 ರನ್‍ಗಳ ಅವಶ್ಯಕತೆ ಇದ್ದು ಐದನೇ ದಿನದಾಟದಲ್ಲೂ ಮಳೆಯ ಅಡಚಣೆಯ ಭೀತಿ ಕಾಡುತ್ತಿದೆ.

  • ಕೇಂದ್ರ ಸಚಿವ ಸುಪ್ರಿಯೊರನ್ನು ಟ್ರೋಲ್‌ ಮಾಡಿದ ಹನುಮ ವಿಹಾರಿ

    ಕೇಂದ್ರ ಸಚಿವ ಸುಪ್ರಿಯೊರನ್ನು ಟ್ರೋಲ್‌ ಮಾಡಿದ ಹನುಮ ವಿಹಾರಿ

    ನವದೆಹಲಿ: ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದರೂ ತನ್ನ ಆಟವನ್ನು ಟೀಕಿಸಿದ್ದ ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೊ ಅವರನ್ನು ಹನುಮ ವಿಹಾರಿ ಟ್ರೋಲ್‌ ಮಾಡಿದ್ದಾರೆ.

    ಸಿಡ್ನಿ ಟೆಸ್ಟ್ ನಲ್ಲಿ ಭಾರತ ತಂಡದ ಕ್ರಿಕೆಟಿಗ ಹನುಮ ವಿಹಾರಿ ಕ್ರಿಕೆಟ್‌ ಅನ್ನು ಕೊಲೆ ಮಾಡಿದ್ದಾರೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಮತ್ತು ಕೇಂದ್ರ ಪರಿಸರ ಖಾತೆಯ ರಾಜ್ಯ ಸಚಿವ ಬಾಬುಲ್ ಸುಪ್ರಿಯೊ ಟ್ವೀಟ್‌ ಮಾಡಿದ್ದರು.

    ಈ ಟ್ವೀಟ್‌ನಲ್ಲಿ ಹನುಮ ವಿಹಾರಿ ಪದವನ್ನು ಬರೆಯುವ ಸಂದರ್ಭದಲ್ಲಿ ಹನುಮ ಬಿಹಾರಿ ಎಂದು ಬರೆದಿದ್ದರು. ಇಂದು ಹನುಮ ವಿಹಾರಿ ಟ್ವೀಟ್‌ ಮಾಡಿ ನಕ್ಷತ್ರ ಗುರುತು ಹಾಕಿ ಹನುಮ ವಿಹಾರಿ ಎಂಬುದಾಗಿ ಟ್ರೋಲ್‌ ಮಾಡಿದ್ದಾರೆ. ಈ ಟ್ವೀಟ್‌ನ ಸ್ಕ್ರೀನ್‌ ಶಾಟ್‌ ತೆಗೆದು ಅಶ್ವಿನ್‌ ROFLMAX!! ಎಂದು ಬರೆದು ಮೂರು ನಗುವ ಇಮೋಜಿ ಹಾಕಿ ಟ್ವೀಟ್‌ ಮಾಡಿದ್ದಾರೆ.

    ಸುಪ್ರಿಯೊ ಟ್ವೀಟ್‌ನಲ್ಲಿ ಏನಿತ್ತು?
    ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯ ಮೂರನೇ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿದೆ. ಸಿಡ್ನಿಯಲ್ಲಿ ಸೋಮವಾರ ನಡೆದ ಐದನೇ ದಿನದಾಟದಲ್ಲಿ ಭಾರತ ತಂಡ ಟೆಸ್ಟ್ ಡ್ರಾ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಸುದೀರ್ಘ ಓವರ್ ಎದುರಿಸಿದ ಹನುಮ ವಿಹಾರಿ, ಕ್ರಿಕೆಟ್ ಅನ್ನು ಕೊಲೆ ಮಾಡಿದ್ದಾರೆ.

    ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವಿನ ಅವಕಾಶವಿದ್ದರೂ, 109 ಎಸೆತ ಎದುರಿಸಿದ ಹನುಮ ಬಿಹಾರಿ ಕೇವಲ 7 ರನ್ ಗಳಿಸಿ ಕ್ರಿಕೆಟ್‌ ಕೊಲೆ ಮಾಡಿದ್ದಾರೆ. ಕ್ರಿಕೆಟ್‌ ಬಗ್ಗೆ ನನಗೆ ಗೊತ್ತಿಲ್ಲ ಎಂದು ಟ್ವೀಟ್‌ ಮಾಡಿದ್ದರು.

    ಈ ಟ್ವೀಟ್‌ ನೋಡಿ ನೆಟ್ಟಿಗರು ಗರಂ ಆಗಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ಬಗ್ಗೆ ತಿಳಿಯದ ನೀವು ರಾಜಕೀಯದಲ್ಲೇ ಇರಿ. ಕ್ರಿಕೆಟ್‌ ಬಗ್ಗೆ ವಿಶ್ಲೇಷಣೆ ನೀಡಬೇಡಿ ಎಂದು ಗರಂ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ.

  • ಮತ್ತೆ ಜನಾಂಗೀಯ ನಿಂದನೆ – ಭಾರತಕ್ಕೆ 407 ರನ್‍ಗಳ ಬೃಹತ್ ಟಾರ್ಗೆಟ್

    ಮತ್ತೆ ಜನಾಂಗೀಯ ನಿಂದನೆ – ಭಾರತಕ್ಕೆ 407 ರನ್‍ಗಳ ಬೃಹತ್ ಟಾರ್ಗೆಟ್

    ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯಾಟದ ನಾಲ್ಕನೇ ದಿನದಾಟದಲ್ಲೂ ಆಸ್ಟ್ರೇಲಿಯಾ ಅಭಿಮಾನಿಯ ಹುಚ್ಚಾಟ ಮುಂದುವರಿದಿದೆ. ಭಾರತೀಯ ಆಟಗಾರರಿಗೆ ಮೂರನೇ ದಿನದಾಟದಲ್ಲಿ ಜನಾಂಗೀಯ ನಿಂದನೆ ಮಾಡಿದ್ದ ಪ್ರೇಕ್ಷಕವರ್ಗ ಇಂದು ಮತ್ತೆ ಸಿರಾಜ್‍ಗೆ ನಿಂದನೆ ಮಾಡಿ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದೆ.

    ಪ್ರೇಕ್ಷಕರಿಂದ ಮತ್ತೆ ನಿಂದನೆ ಕೇಳಿ ಬರುತ್ತಿದ್ದಂತೆ ಭಾರತೀಯ ಆಟಗಾರರೊಂದಿಗೆ ಸಿಡ್ನಿ ಕ್ರಿಕೆಟ್ ಮಂಡಳಿ ಕ್ಷಮೆ ಕೇಳಿದೆ ಮತ್ತು ಪ್ರೇಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

    ಮೂರನೇ ಟೆಸ್ಟ್‍ನ ನಾಲ್ಕನೇ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯಾ ಮಾರ್ನಸ್ ಲಬುಶೇನ್ 73ರನ್ (118 ಎಸೆತ, 4 ಬೌಂಡರಿ) ಸ್ಟೀವನ್ ಸ್ಮಿತ್ 81ರನ್ (167 ಎಸೆತ, 8 ಬೌಂಡರಿ, 1 ಸಿಕ್ಸರ್) ಮತ್ತು ಕ್ಯಾಮರಾನ್ ಗ್ರೀನ್ 84 ರನ್(132 ಎಸೆತ, 8 ಬೌಂಡರಿ, 4 ಸಿಕ್ಸರ್) ರನ್‍ಗಳ ನೆರವಿನಿಂದ ಎರಡನೇ ಇನ್ನಿಂಗ್ಸ್‍ನಲ್ಲಿ ಆಸ್ಟ್ರೇಲಿಯಾ ತಂಡ 406 ರನ್ ಮುನ್ನಡೆ ಸಾಧಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

    407 ರನ್‍ಗಳ ಗೆಲುವಿನ ಗುರಿ ಪಡೆದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ರೋಹಿತ್ ಶರ್ಮಾ ಅವರ 52 ರನ್(98 ಎಸೆತ, 4 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನೆರವಿನಿಂದ 98 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಗೆಲುವಿಗಾಗಿ ಇನ್ನೂ 309 ರನ್ ಬೇಕಾಗಿದ್ದು ಐದನೇ ದಿನದಾಟಕ್ಕಾಗಿ ಚೇತೇಶ್ವರ್ ಪೂಜಾರ 9 ರನ್ (29 ಎಸೆತ) ಮತ್ತು ಅಜಿಂಕ್ಯ ರಹಾನೆ 4 ರನ್(14 ಎಸೆತ) ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.