Tag: Aurangzeb

  • ಮಥುರಾದಲ್ಲಿ ಕೃಷ್ಣ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ – ಭಾರತೀಯ ಪುರಾತತ್ವ ಇಲಾಖೆ

    ಮಥುರಾದಲ್ಲಿ ಕೃಷ್ಣ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ – ಭಾರತೀಯ ಪುರಾತತ್ವ ಇಲಾಖೆ

    ನವದೆಹಲಿ: ಮಥುರಾದಲ್ಲಿ ಕೃಷ್ಣ ದೇವಸ್ಥಾನವನ್ನು (Krishna Janmabhoomi in Mathura) ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮಾಹಿತಿ ನೀಡಿದೆ.

    ಉತ್ತರ ಪ್ರದೇಶದ ಮೈನ್‌ಪುರಿ ನಿವಾಸಿ ಅಜಯ್ ಪ್ರತಾಪ್ ಸಿಂಗ್ ಅವರು ಮಾಹಿತಿ ಹಕ್ಕು ಕಾಯ್ದೆ (RTI) ಅಡಿ ಕೇಳಿದ ಪ್ರಶ್ನೆಗೆ ಎಎಸ್‌ಐ ಉತ್ತರ ನೀಡಿದೆ.

    ಪ್ರಶ್ನೆ ಏನಿತ್ತು?
    1670ರಲ್ಲಿ ಕೇಶವದೇವ ದೇವಸ್ಥಾನವನ್ನು ಕೆಡವಿ ಶಾಹಿ ಈದ್ಗಾ ನಿರ್ಮಾಣವಾದ ಬಗ್ಗೆ 1920ರ ನವೆಂಬರ್‌ನಲ್ಲಿ ಬ್ರಿಟಿಷರು (British) ನಡೆಸಿದ ಸರ್ವೆ ಮಾಹಿತಿ ನೀಡುವಂತೆ ಪ್ರಶ್ನೆ ಕೇಳಲಾಗಿತ್ತು.

    ಎಎಸ್‌ಐ ಉತ್ತರ ಏನಿತ್ತು?
    1920 ರಲ್ಲಿ ಅಲಹಾಬಾದ್‌ನಿಂದ ಬ್ರಿಟಿಷರು ಪ್ರಕಟಿಸಿದ ಗೆಜೆಟ್‌ನಲ್ಲಿ (ರಾಜ್ಯಪತ್ರ) ಲೋಕೋಪಯೋಗಿ ಇಲಾಖೆಯು ಉತ್ತರ ಪ್ರದೇಶದ (Uttar Pradesh) ವಿವಿಧೆಡೆ 39 ಸ್ಮಾರಕಗಳ ಪಟ್ಟಿಯನ್ನು ನೀಡಿದೆ. ಈ ಪಟ್ಟಿಯಲ್ಲಿ ಕತ್ರಾ ಕೇಶವ ದೇವ್ ಭೂಮಿಯಲ್ಲಿರುವ ಶ್ರೀ ಕೃಷ್ಣ ಭೂಮಿಯನ್ನು 37ನೇ ಸ್ಥಾನದಲ್ಲಿ ಉಲ್ಲೇಖಿಸಲಾಗಿದೆ. ಹಿಂದೆ ಕತ್ರಾ ದಿಬ್ಬದ ಮೇಲೆ ಕೇಶವದೇವ್‌ ದೇವಸ್ಥಾನವಿತ್ತು. ಅದನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಉತ್ತರ ನೀಡಿದೆ.

    ಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸ್ ಅಧ್ಯಕ್ಷ ವಕೀಲ ಮಹೇಂದ್ರ ಪ್ರತಾಪ್ ಪ್ರತಿಕ್ರಿಯಿಸಿ, ರಾಜ್ಯಪತ್ರದಲ್ಲಿ ಉಲ್ಲೇಖವಾದ ಹಾಗೂ ಈಗ ಆರ್‌ಟಿಐ ಅಡಿ ನೀಡಿದ ಪ್ರಶ್ನೆಗೆ ಎಎಸ್‌ಐ ನೀಡಿದ ಮಾಹಿತಿಯನ್ನೇ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ಸಾಕ್ಷ್ಯವಾಗಿ ಸೇರಿಸುತ್ತೇವೆ ಎಂದು ಹೇಳಿದ್ದಾರೆ.

    ಮಥುರಾದ ಕೇಶವದೇವ ದೇವಾಲಯವನ್ನು ಸುಮಾರು 5000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾಗುತ್ತಿದೆ. ಮಥುರಾ ಶ್ರೀಕೃಷ್ಣನ ಜನ್ಮಸ್ಥಳ. ಶ್ರೀಕೃಷ್ಣನ ಮೊಮ್ಮಕ್ಕಳಾದ ವ್ರಜ ಮತ್ತು ವ್ರಜನಾಭ ರಾಜ ಪರೀಕ್ಷಿತನ ಸಹಾಯದಿಂದ ಮಥುರಾದಲ್ಲಿ ಕೇಶದೇವ ದೇವಾಲಯವನ್ನು ನಿರ್ಮಿಸಿದರು ಎಂಬ ಕಥೆಯಿದೆ.

    ಮೊಘಲ್ ರಾಜ ಔರಂಗಜೇಬ್‌ (Aurangzeb) 1670ರಲ್ಲಿ ಕೇಶವದೇವನ ದೇವಾಲಯವನ್ನು ಕೆಡವಲು ಆದೇಶಿಸಿದ್ದ. ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ನಂತರ ನಿರ್ಮಿಸಲಾದ ಮಸೀದಿಯಲ್ಲಿ ಔರಂಗಜೇಬ ಸ್ವತಃ ನಮಾಜ್ ಮಾಡಿದ್ದ.

    ಏನಿದು ವಿವಾದ?
    ಮಥುರಾದ ವಿವಾದವು 13.37 ಎಕರೆ ಭೂಮಿಯ ಮಾಲೀಕತ್ವದ ಹಕ್ಕುಗಳಿಗೆ ಸಂಬಂಧಿಸಿದೆ. ಶ್ರೀ ಕೃಷ್ಣ ಜನ್ಮಭೂಮಿ 10.9 ಎಕರೆ ಜಮೀನು ಹೊಂದಿದ್ದರೆ, ಶಾಹಿ ಈದ್ಗಾ ಮಸೀದಿ ಎರಡೂವರೆ ಎಕರೆ ಜಮೀನು ಹೊಂದಿದೆ. ಪ್ರಸ್ತುತ ಈಗ ಇರುವ ಶಾಹಿ ಈದ್ಗಾ ಮಸೀದಿಯನ್ನು ಅಕ್ರಮ ಎಂದು ಘೋಷಿಸಿ ಅದನ್ನು ನೆಲಸಮಗೊಳಿಸಬೇಕು ಮತ್ತು 13.37 ಎಕರೆ ಸಂಪೂರ್ಣ ಭೂಮಿಯನ್ನು ಡಿ-ಫಾಕ್ಟೋ ಮಾಲೀಕ ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ಹಸ್ತಾಂತರಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.

    ವಕೀಲರಾದ ರಂಜನಾ ಅಗ್ನಿಹೋತ್ರಿ ಸೇರಿ ಇತರ ಆರು ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಇನ್ನೂ ಅನೇಕ ಮಂದಿ ಅರ್ಜಿ ಸಲ್ಲಿಸಿದ್ದರು. ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್, ಶಾಹಿ ಈದ್ಗಾ ಮಸೀದಿ, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಮತ್ತು ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನವನ್ನು ಪ್ರಕರಣದಲ್ಲಿ ಭಾಗಿ ಮಾಡಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ತ್ತರ ಪ್ರದೇಶದ ಮಥುರಾ ನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು.

    ಅರ್ಜಿಯಲ್ಲಿ ಏನಿತ್ತು?
    ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1669-70ರಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕತ್ರಾ ಕೇಶವ್ ದೇವ್ ದೇವಸ್ಥಾನದ ಬಳಿ ನಿರ್ಮಿಸಲಾಗಿದೆ. 13.37 ಎಕರೆ ಜಾಗದಲ್ಲಿ ಹರಡಿರುವ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಜಾಗದ ಸಂಪೂರ್ಣ ಹಕ್ಕು ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ನೀಡಬೇಕು. ಹೀಗಾಗಿ ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡಿ ಮಂದಿರಕ್ಕೆ ಭೂಮಿಯನ್ನು ವಾಪಸ್ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.

  • ವಾಟ್ಸಾಪ್‍ನಲ್ಲಿ ಔರಂಗಜೇಬ್ ಡಿಪಿ ಹಾಕಿದ್ದ ವ್ಯಕ್ತಿಯ ಬಂಧನ

    ವಾಟ್ಸಾಪ್‍ನಲ್ಲಿ ಔರಂಗಜೇಬ್ ಡಿಪಿ ಹಾಕಿದ್ದ ವ್ಯಕ್ತಿಯ ಬಂಧನ

    ಮುಂಬೈ: ಮೊಘಲ್ ಚಕ್ರವರ್ತಿ ಔರಂಗಜೇಬ್ (Aurangzeb) ಚಿತ್ರವನ್ನು ತನ್ನ ವಾಟ್ಸಾಪ್ (Whatsapp) ಪ್ರೊಫೈಲ್ ಫೋಟೋವನ್ನಾಗಿ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಮುಂಬೈ (Mumbai) ಪೊಲೀಸರು ಬಂಧಿಸಿದ್ದಾರೆ.

    ಬಂಧನಕ್ಕೊಳಗಾದ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 298 ಅಡಿಯಲ್ಲಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಮತ್ತು 153 ಎ ಅಡಿಯಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಪ್ರಕರಣ ದಾಖಲಿಸಲಾಗಿದೆ. ಬಂಧನದ ಬಳಿಕ ಆತನನ್ನು ವಿಚಾರಣೆ ನಡೆಸಿ, ಸೂಕ್ತ ಉತ್ತರ ನೀಡುವಂತೆ ನೋಟಿಸ್ ಜಾರಿಗೊಳಿಸಿ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ನಿಧನ

    ಹಿಂದೂ ಪರ ಸಂಘಟನೆಗಳು ಔರಂಗಜೇಬ್ ಚಿತ್ರ ಹಾಕಿರುವ ಸ್ಕ್ರೀನ್‍ಶಾಟ್‍ನ್ನು ಪೊಲೀಸರಿಗೆ ಸಲ್ಲಿಸಿ, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದವು. ಇತ್ತೀಚೆಗೆ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ವಿಚಾರವಾಗಿ ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ಕೋಮು ಉದ್ವಿಗ್ನ ಘಟನೆಗಳು ನಡೆದಿದ್ದವು.

    ಕೊಲ್ಹಾಪುರದಲ್ಲಿ (Kolhapur) ಟಿಪ್ಪು ಸುಲ್ತಾನ್ (Tipu Sultan) ಚಿತ್ರವನ್ನು ಆಕ್ಷೇಪಾರ್ಹ ಆಡಿಯೋದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ಇದರಿಂದಾಗಿ ಕಲ್ಲು ತೂರಾಟ ನಡೆದಿತ್ತು. ಅಲ್ಲದೇ ಮೆರವಣಿಗೆಯೊಂದರಲ್ಲಿ ಔರಂಗಜೇಬ್ ಫೋಟೋಗಳನ್ನು ಪ್ರದರ್ಶಿಸಲಾಗಿತ್ತು. ಇದರಿಂದಾಗಿ ನಡೆದ ಗಲಭೆಯಲ್ಲಿ ಹಲವರು ಗಾಯಗೊಂಡಿದ್ದರು. ಇದನ್ನೂ ಓದಿ: ವಿಧಾನಸೌಧದಲ್ಲಿ ಕಚೇರಿ ಪೂಜೆ ನೆರವೇರಿಸಿದ ಸಚಿವ ಎಂ.ಬಿ ಪಾಟೀಲ್

  • ಔರಂಗಜೇಬ ಅನೇಕರನ್ನು ಕೊಂದಿರ್ಬೋದು ಆದರೆ ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ: ಮೋದಿ

    ಔರಂಗಜೇಬ ಅನೇಕರನ್ನು ಕೊಂದಿರ್ಬೋದು ಆದರೆ ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ: ಮೋದಿ

    ನವದೆಹಲಿ: ಸಿಖ್ ಗುರು ತೇಗ್ ಬಹುದ್ದೂರ್ 400ನೇ ಜನ್ಮದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಕೆಂಪುಕೋಟೆಯಲ್ಲಿ ಸ್ಮರಣಾರ್ಥ ನಾಣ್ಯ, ಅಂಚೆ ಚೀಟಿ ಬಿಡುಗಡೆ ಮಾಡಿದರು. ನಂತರ ಗುರುಗಳ ತ್ಯಾಗದಿಂದ ಭಾರತ ಸಂಪ್ರದಾಯಗಳ ಬೀಡಾಗಿದೆ ಎಂದು ಜನರಿಗೆ ಹೇಳುತ್ತಾ, ಭಾರತವನ್ನು ಕಟ್ಟುವುದಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಕರೆಕೊಟ್ಟರು.

    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುರುಗಳ ಆರ್ಶೀವಾದದಿಂದ ಅವರ ಆದರ್ಶನವನ್ನು ದೇಶದ ಜನರು ಮುಂದುವರಿಸುತ್ತಿರುವುದು ತುಂಬಾ ಸಂತೋಷ ತರುತ್ತಿದೆ. ಈ ಶುಭ ಸಮಯದಲ್ಲಿ ನಾನು ಎಲ್ಲ 10 ಗುರುಗಳ ಪಾದಕ್ಕೆ ನಮನವನ್ನು ಸಲ್ಲಿಸುತ್ತಿದ್ದೇನೆ. ಈ ಪ್ರಕಾಶ್ ಪರ್ವ್ ಸಂದರ್ಭದಲ್ಲಿ ನಾನು ನಿಮ್ಮೆಲ್ಲರನ್ನು ಹೃದಯ ತುಂಬಿ ಅಭಿನಂದಿಸುತ್ತಿದ್ದೇನೆ ಎಂದರು. ಇದನ್ನೂ ಓದಿ:  ಧ್ವಂಸಗೊಂಡ ಅಪ್ಪನ ಅಂಗಡಿಯಲ್ಲಿ ಕಾಯಿನ್ ಸಂಗ್ರಸುತ್ತಿದ್ದ ಬಾಲಕ – ಫೋಟೋ ವೈರಲ್ 

    ಮೊಘಲ್ ದೊರೆ ಔರಂಗಜೇಬ್‍ನ ನಿರಂಕುಶ ಚಿಂತೆನೆಗಳಿಗೆ ಎದೆಯೊಡ್ಡಿದ ಗುರು ತೇಜ್ ಬಹಾದ್ದೂರ್, ಭಾರತದ ಆದರ್ಶಗಳ ರಕ್ಷಣೆಗೆ ಬಂಡೆಯಂತೆ ನಿಂತರು. ಔರಂಗಜೇಬ್ ನೂರಾರು ತಲೆಗಳನ್ನು ಕತ್ತರಿಸಿದರೂ, ಗುರು ತೇಜ್ ಬಹಾದ್ದೂರ್ ಅವರ ನಂಬಿಕೆಯನ್ನು ಆತನಿಂದ ಅಲುಗಾಡಿಲು ಸಾಧ್ಯವಾಗಲಿಲ್ಲ. ಆಧುನಿಕ ಭಾರತ ಕೂಡ ಗುರುಗಳ ಆಶೀರ್ವಾದದಿಂದ ಇಂತದ್ದೇ ಛಾತಿಯನ್ನು ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಅನೇಕ ಹೋರಾಟಗಾರರ ಬಲಿದಾನದಿಂದ ನಾವು ಇಲ್ಲಿದ್ದೇವೆ. ಈಗಿರುವ ನಮ್ಮ ಭಾರತ ಎಲ್ಲ ನಿರ್ಧಾರಗಳನ್ನು ಸ್ವತಃ ತೆಗೆದುಕೊಳ್ಳುತ್ತೆ. ರಾಜತಂತ್ರಗಳ ಬಗ್ಗೆ ಎಲ್ಲಾ ರೀತಿಯ ಮಾಹಿತಿಗಳ ಬಗ್ಗೆ ಭಾರತವೇ ನಿರ್ಧಾರ ಮಾಡುತ್ತೆ. ಪರೋಪಕಾರವನ್ನು ಹೇಳಿಕೊಟ್ಟಿರುವುದು ನಮ್ಮ ಹಿಂದೂಸ್ತಾನ್. ಭಾರತಕ್ಕೆ ಗೌರವ ತಂದುಕೊಂಡಲು ಎಷ್ಟೋ ಜನರು ತಮ್ಮ ಜೀವವನ್ನು ಬಲಿಕೊಟ್ಟಿದ್ದಾರೆ. ಈ ಭಾರತೀಯ ಭೂಮಿ ಕೇವಲ ದೇಶವಲ್ಲ. ಇದು ಶ್ರೇಷ್ಠವಾದ ಸಂಪ್ರದಾಯವನ್ನು ಹೊಂದಿದೆ. ಇದಕ್ಕಾಗಿ ನಮ್ಮ ಹಲವು ಖುಷಿಗಳು, ಸನ್ಯಾಸಿಗಳು ಹಲವು ವರ್ಷಗಳ ತಪಸ್ಸು ಮಾಡಿದ್ದಾರೆ. ಅವರ ವಿಚಾರವನ್ನು ಎಲ್ಲಕಡೆ ತಿಳಿಸಿದ್ದಾರೆ ಎಂದರು.

    ಈ ಕಾರ್ಯಕ್ರಮಕ್ಕೆ ಬಂದು ನನಗೆ ಯಾವ ರೀತಿಯ ಶಾಂತಿ ಸಿಕ್ಕಿದೆ ಎಂದು ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೊಸ ಚಿಂತನೆ, ನಿರಂತರ ಶ್ರಮ ನಮ್ಮ ಸಿಖ್ ಧರ್ಮದ ಗುರುತು. ಇಂದು ಭಾರತವು ತನ್ನ ಗುರುಗಳ ಆದರ್ಶಗಳೊಂದಿಗೆ ಮುಂದೆ ನಡೆಯುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಕೆಂಪು ಕೋಟೆ ವಿಶೇಷ, ಶ್ರೇಷ್ಠ ದಿನಗಳ ಆಚರಣೆಗೆ ಸಾಕ್ಷಿಯಾಗಿದೆ. ಇಂದು ಗುರು ತೇಜ್ ಬಹುದ್ದೂರ್ ಅವರ ಹುತಾತ್ಮತೆಯ ಕಾರ್ಯಕ್ರಮ ಮಾಡುತ್ತಿರುವುದು ನಮಗೆ ಹೆಮ್ಮೆ ತರುತ್ತಿದೆ ಎಂದರು.

    ಭಾರತ ಯಾವತ್ತೂ ಬೇರೆ ದೇಶಕ್ಕೆ ತೊಂದರೆ ಕೊಡಲು ಇಷ್ಟಪಡುವುದಿಲ್ಲ. ಬೇರೆ ದೇಶಗಳಿಗೆ ಸಹಾಯ ಮಾಡುತ್ತೇವೆ. ಭಾರತ ವಿಶ್ವದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದೆ. ನಮ್ಮ ರಾಷ್ಟ್ರ ಶಾಂತಿಯಿಂದ ಎಲ್ಲವನ್ನು ಎದುರಿಸುತ್ತೆ. ನಾವು ತಮ್ಮ ಗುರುತಿನ ಬಗ್ಗೆ ಹೆಮ್ಮೆ ಪಡಬೇಕು. ನಾವು ನಮ್ಮ ಭಾರತವನ್ನು ಮೇಲೆ ತೆಗೆದುಕೊಂಡು ಹೋಗಬೇಕು. ಅದಕ್ಕೆ ಎಲ್ಲರೂ ಕೆಲಸ ಮಾಡಬೇಕು. ಇದಕ್ಕೆ ಗುರುಗಳ ಆರ್ಶೀವಾದಿಂದ ನಮ್ಮ ದೇಶ ಮೇಲೆ ಬರುತ್ತೆ ಎಂದು ಹೇಳಿದರು. ಇದನ್ನೂ ಓದಿ: ಕರ್ಮಭೂಮಿಯಿಂದ ಪುಣ್ಯ ಭೂಮಿವರೆಗೂ ಅಮರ ಜ್ಯೋತಿ ಯಾತ್ರೆ: ಡಾ.ರಾಜ್ ಸಹೋದರಿ ನಾಗಮ್ಮರಿಂದ ಚಾಲನೆ

    ನಮ್ಮ ಪ್ರತಿ ಕ್ಷಣವನ್ನು ದೇಶಕ್ಕಾಗಿ ಮೀಸಲಿಡಬೇಕು. ನಮ್ಮ ಪ್ರತಿಯೊಂದು ಯೋಚನೆಯನ್ನು ದೇಶಕ್ಕಾಗಿ ಮೀಸಲಿಡಬೇಕು. ಈ ಶುಭದಿನದಂದು ನಾನು ನಿಮ್ಮೆಲ್ಲರಲ್ಲೂ ಕೇಳಿಕೊಳ್ಳುವುದು ಒಂದೇ ನಾವು ದೇಶಕ್ಕಾಗಿ ಹೋರಾಟ ಮಾಡೋಣ. ದೇಶಕ್ಕಾಗಿ ಒಟ್ಟಿಗೆ ಸೇರಿ ಕೆಲಸ ಮಾಡೋಣ. ಎಲ್ಲರೂ ಸರಿಸಮಾನರು ಎಂದು ಕರೆ ಕೊಟ್ಟರು. ಇದೇ ವೇಳೆ ಭಾರತ ನಮ್ಮ ಗುರುಗಳು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ಮುನ್ನಡೆಯಲಿದೆ. ನಾವು ಭಾರತವನ್ನು ವಿಶ್ವ ಭೂಪಟದಲ್ಲಿ ಅತ್ಯಂತ ಬಲಿಷ್ಠ ಹಾಗೂ ಸಮರ್ಥ ರಾಷ್ಟ್ರವನ್ನಾಗಿ ಮಾಡುತ್ತೇವೆ. ಆಧುನಿಕ ಭಾರತದ ನಾಗಾಲೋಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದರು.

  • ಔರಂಗಜೇಬ್ ಹೆಸರು, ಪಠ್ಯವನ್ನು ತೆಗೆಯಿರಿ- ಶಿರೋಮಣಿ ಅಕಾಲಿದಳ ಒತ್ತಾಯ

    ಔರಂಗಜೇಬ್ ಹೆಸರು, ಪಠ್ಯವನ್ನು ತೆಗೆಯಿರಿ- ಶಿರೋಮಣಿ ಅಕಾಲಿದಳ ಒತ್ತಾಯ

    ನವದೆಹಲಿ: ರಾಜ್ಯದಲ್ಲಿ ಬಿಜೆಪಿ ಟಿಪ್ಪು ಪಠ್ಯವನ್ನು ತೆಗೆಯುವಂತೆ ಒತ್ತಾಯಿಸಿದ ನಂತರ ಇದೀಗ ಮೊಘಲ್ ದೊರೆ ಔರಂಗಜೇಬನ ಹೆಸರನ್ನು ಸಹ ತೆಗೆದು ಹಾಕಬೇಕು ಎಂದು ಶಿರೋಮಣಿ ಅಕಾಲಿ ದಳ ಒತ್ತಾಯಿಸಿದೆ.

    ದೆಹಲಿಯ ಔರಂಗಜೇಬ್ ರಸ್ತೆ ಎಂಬ ಹೆಸರಿನ ನಾಮಫಲಕಕ್ಕೆ ಶಿರೋಮಣಿ ಅಕಾಲಿದಳ ಕಪ್ಪು ಬಣ್ಣ ಬಳಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. ಮೊಘಲ್ ದೊರೆ ಔರಂಗಜೇಬ್ ಹೆಸರಿನ ರಸ್ತೆಯ ನಾಮಫಲಕಗಳು ಹಾಗೂ ವಿದ್ಯಾರ್ಥಿಗಳ ಇತಿಹಾಸದ ಪುಸ್ತಕಗಳಲ್ಲಿನ ಔರಂಗಜೇಬನ ಪಠ್ಯವನ್ನು ತೆಗೆಯಬೇಕು ಎಂದು ಶಿರೋಮಣಿ ಅಕಾಲಿ ದಳದ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಹಾಗೂ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ(ಡಿಎಸ್‍ಜಿಎಂಸಿ) ಸದಸ್ಯರು ಒತ್ತಾಯಿಸಿದ್ದಾರೆ. ಅಲ್ಲದೆ ಔರಂಗಜೇಬ್ ಹೆಸರಿನ ರಸ್ತೆಗಳ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ.

    ಔರಂಗಜೇಬ್ ಒಬ್ಬ ಹಂತಕ, ಅವನ ಒತ್ತಾಯಪೂರ್ವಕ ಮತಾಂತರದಿಂದ ಗುರು ತೇಜ್ ಬಹದ್ದೂರ್ ಅವರು ತಮ್ಮ ಪ್ರಾಣವನ್ನೇ ತ್ಯಜಿಸಿದರು. ಹೀಗಾಗಿ ನಾವು ರಸ್ತೆಗಳಿಗೆ ಔರಂಗಜೇಬನ ಹೆಸರಿಡುವುದು ಹಾಗೂ ವಿದ್ಯಾರ್ಥಿಗಳ ಇತಿಹಾಸ ಪುಸ್ತಕದಲ್ಲಿ ಆತನ ಪಠ್ಯ ಇರುವುದನ್ನು ವಿರೋಧಿಸುತ್ತೇವೆ. ಆತ ಒಬ್ಬ ಹಂತಕ, ಆತನ ಹೆಸರನ್ನು ರಸ್ತೆಗಳಿಗೆ ಇಡುವುದರಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೆಲ ದಿನಗಳ ಹಿಂದೆ ಬೆಂಗಾಳಿ ಮಾರುಕಟ್ಟೆಯ ಬಾಬರ್ ರಸ್ತೆಯ ಹೆಸರಿಗೆ ಹಿಂದೂ ಸೇನೆಯವರು ಕಪ್ಪು ಬಣ್ಣ ಬಳಿದಿದ್ದರು. ರಸ್ತೆಯ ಹೆಸರನ್ನು ಬದಲಿಸುವಂತೆ ಸಂಘಟನೆಯು ಒತ್ತಾಯಿಸಿತ್ತು.

    ದಕ್ಷಿಣ ಭಾರತದ ಕರ್ನಾಟಕದಲ್ಲಿ ಟಿಪ್ಪು ವಿರುದ್ಧ ಹೋರಾಟ ನಡೆಯುತ್ತಿದ್ದರೆ, ಉತ್ತರ ಭಾರತದಲ್ಲಿ ಔರಂಗಜೇಬನ ಕುರಿತು ಅಸಮಾಧಾನ ಎದ್ದಿದೆ. ಟಿಪ್ಪು ಜಯಂತಿಯನ್ನು ಸರ್ಕಾರ ನಿಲ್ಲಿಸಿದ್ದು, ಆತನ ಬಗ್ಗೆ ಇರುವ ಪಠ್ಯವನ್ನೂ ಪುಸ್ತಕದಿಂದ ತೆಗೆಯಬೇಕು ಎಂದು ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ.

  • ಮೋದಿ ಆಧುನಿಕ ಔರಂಗಜೇಬ್: ಸಂಜಯ್ ನಿರುಪಮ್

    ಮೋದಿ ಆಧುನಿಕ ಔರಂಗಜೇಬ್: ಸಂಜಯ್ ನಿರುಪಮ್

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಆಧುನಿಕ ಔರಂಗಜೇಬ್ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸಂಜಯ್ ನಿರುಪಮ್ ಹೇಳಿದ್ದಾರೆ.

    ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಕಾರಿಡಾರ್ ಯೋಜನೆಗಾಗಿ ನಗರದಲ್ಲಿದ್ದ ನೂರಾರು ದೇವಸ್ಥಾನಗಳನ್ನು ನಾಶ ಮಾಡಿದ್ದಾರೆ. ಮೊಘಲ್ ಚಕ್ರವರ್ತಿ ಔರಂಗಜೇಬ್ ಕೂಡ ಅನೇಕ ಹಿಂದೂ ದೇವಸ್ಥಾನಗಳನ್ನು ನಾಶ ಮಾಡಿದ್ದ. ಈ ಹಿಂದೆ ಔರಂಗಜೇಬ್ ಮಾಡಿದ್ದನ್ನು ಮೋದಿ ಈಗ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಬಾಬಾ ವಿಶ್ವನಾಥ ದೇವಸ್ಥಾನ ಪ್ರವೇಶಕ್ಕೆ ಹಾಗೂ ದೇವರ ದರ್ಶನ ಪಡೆಯಲು 500 ರೂ. ಶುಲ್ಕ ನಿಗದಿ ಮಾಡಿದ್ದಾರೆ. ಔರಂಗಜೇಬ್ ಮಾಡದೇ ಇರುವುದನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ. ಹಿಂದೂಗಳ ಮೇಲೆ ಔರಂಗಜೇಬ್ ದರ್ಪ ಮೆರೆದ, ಶೋಷಣೆ ಮಾಡಿದ. ಈಗ ಅದನ್ನು ಮೋದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಪ್ರಧಾನಿ ಮೋದಿ ದುರ್ಯೋಧನ ಇದ್ದಂತೆ ಎಂದು ಉತ್ತರ ಪ್ರದೇಶ ಪೂರ್ವದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ನಿನ್ನೆಯಷ್ಟೇ ಹೇಳಿದ್ದರು. ಹರ್ಯಾಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ್ದ ಅವರು, ಭಾರತದ ನೆಲದಲ್ಲಿ ಅಹಂಕಾರದಿಂದ ನಡೆದುಕೊಳ್ಳುವ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯಾಗಿದೆ. ಮಹಾಭಾರತದಲ್ಲಿ ದುರ್ಯೋಧನ ಅಹಂಕಾರದಿಂದ ನಡೆದುಕೊಂಡ. ಕೃಷ್ಣ ಸಂಧಾನಕ್ಕೆ ಬಂದರೂ ಒಪ್ಪಲಿಲ್ಲ. ಕೊನೆಗೆ ದುರ್ಯೋಧನ ನಾಶವಾಗಿ ಹೋದ. ದುರ್ಯೋಧನ ರೀತಿಯಲ್ಲಿಯೇ ಮೋದಿಯವರು ಕೂಡ ಅಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.