Tag: Auradkar committee report

  • ತೆಲಂಗಾಣದಂತೆ ವೇತನ ನೀಡಿ, ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ತನ್ನಿ: ಶಶಿಧರ್ ವೇಣುಗೋಪಾಲ್

    ತೆಲಂಗಾಣದಂತೆ ವೇತನ ನೀಡಿ, ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ತನ್ನಿ: ಶಶಿಧರ್ ವೇಣುಗೋಪಾಲ್

    ಹಾವೇರಿ: ಪೊಲೀಸ್ ಇಲಾಖೆಯ ಸಿಬ್ಬಂದಿಗೆ ತೆಲಂಗಾಣದಂತೆ ವೇತನ ನೀಡಿ. ಮುಂದಿನ ಒಂದು ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ತನ್ನಿ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾ ಸಂಘದ ರಾಜ್ಯಾಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಕದ ರಾಜ್ಯ ತೆಲಂಗಾಣದಲ್ಲಿ ಒಬ್ಬ ಸಿವಿಲ್ ಪೊಲೀಸ್ 45 ಸಾವಿರ ರೂ. ಸಂಬಳ ಪಡೆಯುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ 30 ಸಾವಿರ ರೂ. ಪಡೆಯುತ್ತಾರೆ. ಈ ವೇತನ ತಾರತಮ್ಯ ನಾವು ಖಂಡಿಸುತ್ತೇವೆ. ಜೊತೆಗೆ ಒಂದು ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ಮಾಡದಿದ್ದರೆ, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಗಳ ಸಹಭಾಗಿತ್ವದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದರು.

    ಪೊಲೀಸ್ ಇಲಾಖೆ ನಿತ್ಯ ಆಡಳಿತದಲ್ಲಿ ರಾಜಕಾರಣಿ ಕಪಿಮುಷ್ಠಿಯಲ್ಲಿ ಸಿಲುಕಿದೆ. ಇಲಾಖೆಯು ರಾಜಕಾರಣಿಗಳ ಅಣತಿ ಮೇಲೆ ಕಾರ್ಯನಿರ್ವಹಿಸುವ ಕೇಂದ್ರಗಳಾಗಿವೆ. ರಾಜಕೀಯ ನಾಯಕರ ಹಸ್ತಕ್ಷೇಪದಿಂದ ಇಲಾಖೆ ನಲುಗಿ ಹೋಗಿದೆ. ಸರಕಾರಗಳು ಬದಲಾದ ಸಮಯದಲ್ಲಿ ಪೊಲೀಸ್ ವರ್ಗಾವಣೆಯು ಒಂದು ರೀತಿಯಲ್ಲಿ ಹಣಗಳಿಸುವ ದಂಧೆಗಳಾಗಿ ಮಾರ್ಪಾಡು ಆಗಿವೆ. ಇಲಾಖೆಯಲ್ಲಿ ಕಾನೂನಿಗೆ ಅವಕಾಶ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಪೊಲೀಸರಲ್ಲಿ ರಾಜಕೀಯ ವ್ಯವಸ್ಥೆಯಿಂದ ಅಸಹಾಯಕತೆ ಹೆಚ್ಚಾಗಿದೆ. ಇಲಾಖೆಯ ಸಿಬ್ಬಂದಿಗಳು ವೇತನ ತಾರತಮ್ಯ ಖಂಡಿಸಿ ಹೋರಾಟ ಮಾಡಿದ್ದು ನಿಜ. ಹೋರಾಟದ ಫಲವಾಗಿ ಔರಾದ್ಕರ್ ವರದಿ ಬಂದಿದೆ. ಈ ವರದಿ ತುಲನಾತ್ಮಕವಾಗಿ ವಾಸ್ತವಿಕ ವಿಚಾರಗಳನ್ನು ಹೊಂದಿದೆ. ಆದರೆ ವರದಿಯಂತೆ ಪೊಲೀಸ್ ಇಲಾಖೆಯಲ್ಲಿ ವೇತನ ಹೆಚ್ಚಳವಾಗಿಲ್ಲ ಎಂದರು. ಇದನ್ನು ಓದಿ: ಔರಾದ್ಕರ್ ವರದಿ ಜಾರಿಗೆ ಮತ್ತೆ ಕಣ್ಣಾಮುಚ್ಚಾಲೆ

    2018 ರಲ್ಲಿ ನೇಮಕಗೊಂಡ ಪೊಲೀಸ್ ಕಾನ್ಸಸ್ಟೆಬಲ್ 23,500 ರೂ. ವೇತನ ಪಡೆಯುತ್ತಾರೆ. ಆದರೆ 2012 ರಲ್ಲಿ ನೇಮಕಗೊಂಡವರು ಅಷ್ಟೇ ಪ್ರಮಾಣದಲ್ಲಿ ವೇತನ ಪಡೆಯುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ? ನಾವು ಸೇವಾ ಹಿರಿತನವನ್ನು ಪ್ರಶ್ನೆ ಮಾಡುತ್ತಿದ್ದೇವೆ. ವೇತನ ಪರಿಷ್ಕರಣೆ ಮಾಡಿ ಎನ್ನುತ್ತಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿಕೊಂಡ ಸಾಮಾಜಿಕ ಜಾಲತಾಣದ ಮೂಲಕ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಕುಮಾರಸ್ವಾಮಿ ಸರ್ಕಾರ ನಾನು 420 ಸರ್ಕಾರ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಬಂಧಿಸಿದರು. ಆಡಳಿತ ನಡೆಸುವರು ನನ್ನ ಧ್ವನಿ ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

    ನಿರ್ಲಕ್ಷ್ಯ ಸರಿಯಲ್ಲ: ಔರಾದ್ಕರ್ ವರದಿ ಜಾರಿ ವಿಚಾರದಲ್ಲಿ ಸರಕಾರ ನಿರ್ಲಕ್ಷ್ಯ ಮಾಡಬಾರದು. ಈ ವಿಚಾರದಲ್ಲಿ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಅದನ್ನು ಗೃಹ ಸಚಿವರು ಸರಿಯಾಗಿ ನಿಭಾಯಿಸಬೇಕು. ಇನ್ನು ಒಂದು ತಿಂಗಳೊಳಗೆ ವರದಿಯನ್ನು ಜಾರಿಗೆ ತರದಿದ್ದರೆ 3 ಹಂತದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಮೊದಲ ಹಂತದಲ್ಲಿ 35 ಸಾವಿರ ಸಿಬ್ಬಂದಿಗಳು, ಡಿಜಿಪಿ ಮನವಿ ಸಲ್ಲಿಸುವುದು. 2ನೇ ಹಂತದಲ್ಲಿ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಹೋರಾಟ ಮಾಡುವುದು. 3ನೇ ಹಂತವಾಗಿ ಹೈ ಕೋರ್ಟ್, ಸುಪ್ರೀಂ ಕೋರ್ಟಿನಲ್ಲಿ ಕಾನೂನ ಸಮರ ಮಾಡುತ್ತೇವೆ. ಈ ದೇಶ ನಮ್ಮದು, ಈ ಮಣ್ಣು ನಮ್ಮದು, ಇದನ್ನು ಹಾಳು ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

  • ರಾಜ್ಯ ಪೊಲೀಸರಿಗೆ ಗುಡ್ ನ್ಯೂಸ್- ಎಷ್ಟು ಸಂಬಳ ಏರಿಕೆ ಆಗುತ್ತೆ?

    ರಾಜ್ಯ ಪೊಲೀಸರಿಗೆ ಗುಡ್ ನ್ಯೂಸ್- ಎಷ್ಟು ಸಂಬಳ ಏರಿಕೆ ಆಗುತ್ತೆ?

    ಬೆಂಗಳೂರು: ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ಸಲ್ಲಿಸಿರುವ ಶಿಫಾರಸ್ಸು ವರದಿಗೆ ಸಹಿ ಹಾಕುವ ಮೂಲಕ ರಾಜ್ಯ ಪೊಲೀಸರಿಗೆ ಸಿಎಂ ಸಿಹಿ ಸುದ್ದಿ ಕೊಟ್ಟಿದ್ದಾರೆ.

    ಸಿಎಂ ಔರಾದ್ಕರ್ ವರದಿಗೆ ಸಹಿ ಇಂದು ಸಹಿ ಹಾಕಿದ್ದು, ಪೊಲೀಸರ ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಔರಾದ್ಕರ್ ವರದಿಯ ಫೈಲ್ ಈಗಾಗಲೇ ಆರ್ಥಿಕ ಇಲಾಖೆಯ ಕಚೇರಿ ತಲುಪಿದ್ದು, ಇಲಾಖೆಯ ಒಪ್ಪಿಗೆಯೊಂದೇ ಬಾಕಿ ಇದೆ. ಇಂದು ಅಥವಾ ನಾಳೆಯ ಒಳಗಾಗಿ ಪೊಲೀಸರ ಬಹುದಿನದ ಬೇಡಿಕೆ ಈಡೇರಲಿದೆ.

    ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರವು ಗುರುವಾರ ವಿಶ್ವಾಸಯಾಚನೆ ಮಾಡಲಿದೆ. ಇದಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗಲೇ ಔರಾದ್ಕರ್ ವರದಿಗೆ ಸಹಿ ಹಾಕಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಗೃಹಸಚಿವ ಎಂ.ಬಿ.ಪಾಟೀಲ್ ಅವರು, ರಾಜ್ಯ ಪೊಲೀಸರ ದಶಕದ ಬೇಡಿಕೆಯಾಗಿದ್ದ ಔರಾದ್ಕರ್ ಸಮಿತಿಯನ್ನು ಪ್ರಸ್ತುತ ಸರ್ಕಾರದಲ್ಲಿ ನಾವು ಜಾರಿ ಮಾಡಿದ್ದೇವೆ. ಇದು ಸಿಬ್ಬಂದಿಯ ಕಲ್ಯಾಣಕ್ಕೆ ನಮಗಿರುವ ಬದ್ಧತೆಯನ್ನು ತೋರಿಸುತ್ತದೆ. ಸಮಸ್ತ ಪೊಲೀಸ್ ಸಿಬ್ಬಂದಿಗೆ ನನ್ನ ಅಭಿನಂದನೆಗಳು. ನಾನು ಎಂದೆಂದೂ ಈ ವರದಿಯ ಅನುಷ್ಠಾನಕ್ಕೆ ಬದ್ಧನಾಗಿದ್ದೆ, ವರದಿಯ ಜಾರಿ ನನಗೆ ಅತ್ಯಂತ ಹರ್ಷ ತಂದಿದೆ ಎಂದು ತಿಳಿಸಿದ್ದಾರೆ.

    ಎಷ್ಟು ಏರಿಕೆಯಾಗಬಹುದು?
    ಔರಾದ್ಕರ್ ವರದಿ ಅನ್ವಯ ನೂತನ ವೇತನ ಪರಿಷ್ಕಣೆಯಿಂದ ಪೊಲೀಸ್ ರಿಸರ್ವ್ ಕಾನ್‍ಸ್ಟೆಬಲ್ 23,500ರಿಂದ 47,650 ರೂ. ಆಗಲಿದೆ. ಹೆಡ್ ಕಾನ್‍ಸ್ಟೇಬಲ್‍ಗೆ 27,650ದಿಂದ 52,650 ರೂ. ಏರಿಕೆಯಾಗಲಿದೆ. ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ ಅವರಿಗೆ 30,350 ದಿಂದ 58,250 ರೂ. ವೇತನ ಹೆಚ್ಚಲಿದೆ. ಇನ್ಸ್‍ಪೆಕ್ಟರ್‍ಗೆ 43,100ರಿಂದ 83,900 ರೂ., ಎಸ್‍ಪಿ (ಐಪಿಎಸ್ ಹೊರತು ಪಡಿಸಿ) 70,850ದಿಂದ 1,07,100 ರೂ. ಏರಿಕೆ ಆಗಲಿದೆ. ಈ ನೂತನ ವೇತನವು ಆಗಸ್ಟ್ 1 ರಿಂದ ಅನ್ವಯವಾಗಲಿದೆ ಎನ್ನಲಾಗಿದೆ.

    ಈಗೀನ ಪೇ ಸ್ಕೇಲ್ ಪ್ರಕಾರ ಪೊಲೀಸ್ ಕಾನ್‍ಸ್ಟೇಬಲ್, ರಿಸರ್ವ್ ಕಾನ್ಸ್ ಟೇಬಲ್‍ಗೆ 12,500ದಿಂದ 24,000 ರೂ., ಹೆಡ್ ಕಾನ್ಸ್‍ಸ್ಟೇಬಲ್‍ಗೆ 14,559ರಿಂದ 26,700 ರೂ., ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ 16,000ದಿಂದ 29,600 ರೂ., ಇನ್ಸ್‍ಪೆಕ್ಟರ್ 22,800ರಿಂದ 43,200 ರೂ., ಹಾಗೂ ಎಸ್‍ಪಿ (ಐಪಿಎಸ್ ಹೊರತು ಪಡಿಸಿ) 38,100-55,200 ರೂ. ಇದೆ.

    ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ವೇಳೆ ಸಾವಿರಾರು ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಆಗ ಪೊಲೀಸರು ಭಾರೀ ಭದ್ರತೆ ಒದಿಸುವ ಜೊತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದ್ದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಸಿಎಂ ಬಜೆಟ್ ನಲ್ಲಿ ಔರಾದ್ಕರ್ ವರದಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಇದಾದ ಬಳಿಕ ಗೃಹ ಸಚಿವ ಎಂಬಿ ಪಾಟೀಲ್ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು.

    ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ಪೊಲೀಸರ ವೇತನವನ್ನು ಶೇ.30 ಏರಿಕೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.