Tag: audio

  • ಚಿಂಚೋಳಿ ಉಪಚುನಾವಣೆ ಕುರುಡು ಕಾಂಚಾಣ – ವೋಟಿಗಾಗಿ ನೋಟು ಆಡಿಯೋ ವೈರಲ್!

    ಚಿಂಚೋಳಿ ಉಪಚುನಾವಣೆ ಕುರುಡು ಕಾಂಚಾಣ – ವೋಟಿಗಾಗಿ ನೋಟು ಆಡಿಯೋ ವೈರಲ್!

    ಕಲಬುರಗಿ: ಭಾನುವಾರ ನಡೆಯಲಿರುವ ಚಿಂಚೋಳಿ ಉಪಚುನಾವಣೆಯಲ್ಲಿ ಕುರುಡು ಕಾಂಚಾಣ ಕುಣಿಯುತ್ತಲಿದೆ. ಎರಡೂ ಪಕ್ಷಗಳು ತೆರೆಮರೆಯಲ್ಲಿ ಕಾರ್ಯಕರ್ತರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎನ್ನಲಾದ ಆಡಿಯೋ ಒಂದು ಬಿಡುಗಡೆಯಾಗಿದ್ದು, ಸ್ಥಳೀಯ ಮಟ್ಟದಲ್ಲಿ ಸಖತ್ ವೈರಲ್ ಆಗಿದೆ.

    ಚಿಂಚೋಳಿ ಬಿಜೆಪಿ ಮುಖಂಡ ಮತ್ತು ಗ್ರಾಮ ಪಂಚಾಯತಿಯ ಅಧ್ಯಕ್ಷರೊಬ್ಬರು ನಡೆಸಿದ್ದಾರೆ ಎನ್ನಲಾಗುವ ಆಡಿಯೋ ಸಂಭಾಷಣೆಯಲ್ಲಿ ಈ ಬಾರಿಯ ಉಪಚುನಾವಣೆಯಲ್ಲಿ ಎರಡು ಪಕ್ಷಗಳು ಹಣದ ಹೊಳೆಯನ್ನೇ ಹರಿಸುತ್ತಿವೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಯಾರು ಯಾರಿಗೇ ಹಣ ಕೊಟ್ಟಿದ್ದೇವೆ. ಎಷ್ಟು ಎಷ್ಟು ಹಣ ಕೊಡಲಾಗುತ್ತಿದೆ?. ಯಾರಿಗೆ ಹಣ ನೀಡಲಾಗುತ್ತಿಲ್ಲ ಎನ್ನುವುದರ ಬಗ್ಗೆ ಸ್ವತಃ ಸ್ಥಳೀಯ ಬಿಜೆಪಿ ಮುಖಂಡ ಆಡಿಯೋ ನಲ್ಲಿ ಬಿಚ್ಚಿಟ್ಟಿದ್ದಾರೆ. ಈ ಆಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಚರ್ಚೆಗೆ ಒಳಪಟ್ಟಿದೆ. ಆದ್ರೆ ಈ ಕುರಿತು ಯಾವುದೇ ನಾಯಕರು ಪ್ರತಿಕ್ರಿಯೆಯನ್ನ ನೀಡಿಲ್ಲ.

    ಈ ಉಪಚುನಾವಣೆ ಎರಡು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ನಿಂದ ಸುಭಾಷ್ ರಾಥೋಡ್ ಸ್ಪರ್ಧೆ ಮಾಡಿದರೆ, ಬಿಜೆಪಿಯಿಂದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧಾವ್ ಸ್ಪರ್ಧೆಯಲ್ಲಿದ್ದಾರೆ.

  • ಹಾಸನದಲ್ಲಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್!- ಆಡಿಯೋ ವೈರಲ್

    ಹಾಸನದಲ್ಲಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್!- ಆಡಿಯೋ ವೈರಲ್

    ಹಾಸನ: ಬಿಜೆಪಿ ಅಭ್ಯರ್ಥಿ ಸೋಲಿಗೆ ಕಮಲ ನಾಯಕರೇ ಸ್ಕೆಚ್ ಹಾಕುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ. ಯಾಕಂದ್ರೆ ಶಾಸಕ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಮಾತಾಡಿದ್ದಾರೆ ಎನ್ನಲಾದ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಆಡಿಯೋದಲ್ಲಿ ಮತನಾಡಿದ ಪ್ರಕಾರ ಹಾಸನ ಬಿಜೆಪಿ ಅಭ್ಯರ್ಥಿ ಎ ಮಂಜು ಪುಕ್ಸಟ್ಟೆ ಲೀಡ್ರಾ ಅನ್ನೋ ಪ್ರಶ್ನೆಯೂ ಮೂಡಿದೆ. ಏಳು ತಿಂಗಳ ಹಿಂದೆ ಎ.ಮಂಜು ಹಾಕಿಸಿದ ಪೊಲೀಸ್ ಕೇಸನ್ನು ಬಿಜೆಪಿ ಮರೆತಿಲ್ಲ ಎಂದು ಸಂಭಾಷಣೆ ನಡೆದಿದ್ದು, ಈ ಮೂಲಕ ಬಿಜೆಪಿ ಕಾರ್ಯಕರ್ತರೇ ಎ ಮಂಜು ವಿರುದ್ಧ ಮತ ಹಾಕ್ತಾರಾ ಅನ್ನೋ ಅನುಮಾನ ಬಿಜೆಪಿ ವಲಯದಲ್ಲಿ ಮೂಡಿದೆ.

    ಎ ಮಂಜು ಎರಡು ಲಕ್ಷ ಎಂಬತ್ತು ಸಾವಿರ ಲೀಡ್‍ನಲ್ಲಿ ಸೋತ ಬಳಿಕ ಮತ್ತೆ ಸಿದ್ದರಾಮಯ್ಯನ ಹತ್ತಿರ ಹೋಗ್ತಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಹೀಗಾಗಿ ಹಾಸನ ಬಿಜೆಪಿ ಅಭ್ಯರ್ಥಿ ಸೋಲಿಗೆ ಶಾಸಕ ಪ್ರೀತಂಗೌಡ ಸ್ಕೆಚ್ ಹಾಕಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಆದ್ರೆ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಮಾತಾಡಿದ್ದಾರೆ ಎನ್ನಲಾದ ಈ ಆಡಿಯೋ ಅಸಲಿಯೋ ನಕಲಿಯೋ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

    ಆಡಿಯೋದಲ್ಲೇನಿದೆ?
    ಬಿಜೆಪಿ ಕಾರ್ಯಕರ್ತ: ಅಲ್ಲ ಹೋಗ್ಲಿ ಅವನಿಗೇನು ದರ್ದು.. ನಮ್ ಪಾರ್ಟಿಗೆ ಬಂದು ಕ್ಯಾಂಡಿಡೇಟ್ ಆಗೋಕೆ?
    ಪ್ರೀತಂಗೌಡ: ಪುಕ್ಸಟ್ಟೆ ಲೀಡರ್ ಆಗ್ತಾನಲ್ಲ…
    ಬಿಜೆಪಿ ಕಾರ್ಯಕರ್ತ: ಹೌದಣ್ಣ ಹೌದು..
    ಪ್ರೀತಂಗೌಡ: ಇಲ್ಲೇನಾಗಿದೆ.. ಈಗ ಬಿಜೆಪಿ ಡೆವಲಪ್ ಆಗಿದೆ.. ಬೇಲೂರು ಸೆಕೆಂಡ್ ಪ್ಲೇಸು.. ಸಕಲೇಶಪುರ ಸೆಕೆಂಡ್ ಪ್ಲೇಸು.. ಇಲ್ಲಿ ಗೆದ್ದಿದ್ದಿವಿ.. ಅರಸೀಕೆರೆಲಿ ವೋಟ್ ಬ್ಯಾಂಕ್ ಇದೆ.. ಕಡೂರಲ್ಲೂ ಇದೆ..
    ಬಿಜೆಪಿ ಕಾರ್ಯಕರ್ತ: ಒಂದ್ ನಿಮಿಷ ಅಣ್ಣ.. ನೀವು ಹೇಳಿದಂಗೆ ಪುಕ್ಸಟ್ಟೆ ಲೀಡರ್ ಆಗ್ತಾನೆ ನಿಜ.. ಆದರೆ ಕಾಂಗ್ರೆಸ್ ನಲ್ಲಿದ್ದುಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ಹಾಕ್ಸಿದ್ದಾನಲ್ಲ.. ಜನ ಮರೆತು ಬಿಡ್ತಾರಾ..?

    ಪ್ರೀತಂಗೌಡ: ಹಾ.. ನೆಗೆಟಿವಿಟಿ ಹತ್ತು ವರ್ಷದ ಹಿಂದೆ ಆಗಿದ್ದರೆ ಜನ ಮರೆತು ಬಿಡ್ತಾರೆ ಅನ್ಕೊಬಹುದು. ಅದರೆ ಏಳು ತಿಂಗಳ ಹಿಂದೆ ಮಂಜು ಮಾಡಿರುವ ಅವಾಂತರ ಮರಿಯೋಕೆ ಆಗಲ್ಲ.
    ಬಿಜೆಪಿ ಕಾರ್ಯಕರ್ತ: ಹೌದಣ್ಣ.. ನಿಜ ನಿಜ..
    ಪ್ರೀತಂಗೌಡ: ಹಂಗಾಗಿ ಜೆಡಿಎಸ್‍ಗೆ ವೋಟು ಹೋಗುತ್ತೆ.
    ಬಿಜೆಪಿ ಕಾರ್ಯಕರ್ತ: ಅಲ್ಲಾ ಅಣ್ಣ.. ಜೆಡಿಎಸ್ ಗೆಲ್ಲುತ್ತೆ ಅಂತ ನೀವೇ ಹೇಳ್ತೀರಿ… ಹಾಗಾದ್ರೆ ನೀವು ಮಾಡುತ್ತಿರುವ ಶ್ರಮ ಎಲ್ಲ ವೇಸ್ಟ್ ಅಲ್ವೇನಣ್ಣ..?

    ಪ್ರೀತಂ ಗೌಡ: ಹಾಂ… ನಾನು 20 ಗಂಟೆ ಕೆಲಸ ಮಾಡ್ತೀನಿ.. ಬಿಜೆಪಿಯವರು-ಸಂಘದವರು ಇವರಿಗೆ ಮಾಡಲ್ಲ. ಬಳ್ಳಾರಿ ಶ್ರೀರಾಮುಲು ಎಲೆಕ್ಷನ್ ರಿಪೀಟ್ ಆಗುತ್ತೆ. ಹೆಸರಿಗೆ ಮಾತ್ರ ಮಂಜು ಬಿಗ್ ಸ್ಟಾರ್.. ಬೂತ್ ತೆಗೆದು ನೋಡಿದರೆ ಎರಡು ಲಕ್ಷ ಎಂಬತ್ತು ಸಾವಿರ ವೋಟಿನಲ್ಲಿ ಜೆಡಿಎಸ್‍ನವರು ಗೆದ್ದರು ಅಂತಾರೆ… ಓಹ್… ದುಡ್ಡು ಹಂಚಿದ್ರು ಜೆಡಿಎಸ್‍ನವರು ಅಂತಾರೆ.
    ಬಿಜೆಪಿ ಕಾರ್ಯಕರ್ತ: ಆಯ್ತು ಅಣ್ಣ.. ನೀವು ಹೇಳಿದ್ದನ್ನು ಒಪ್ಪಿಕೊಳ್ತಿನಿ ನಾನು.. ಒಕೆ.. ನೀವು ಹೇಳಿದಂಗೆ ಸೋಲ್ತಾನೆ.. ಒಂದು ಪಕ್ಷ ಗೆದ್ದರೆ ಅವನು, ಬಂದಿರುವ ವೋಟುಗಳನ್ನೆಲ್ಲ ಪ್ರೀತಂಗೌಡರಿಂದ ಬಂತು ಅಂತ ಹೇಳ್ತಾನಾ?

    ಪ್ರೀತಂಗೌಡ: ವೋಟು ಬಂದ್ರೆ ಮಂಜಣ್ಣ ನಾನು ತಂದಿದ್ದೆ ಅಂತಾರೆ. ಸೋತು ಬಿಟ್ಟರೆ ಆಮೇಲೆ ಓಡೋಗಿ ಬಿಡ್ತಾರೆ… ಸೋತರೆ ಮತ್ತೆ ಸಿದ್ದರಾಮಯ್ಯ ಅಂತ ಹೊರಟು ಬಿಡ್ತಾರೆ. ಅವರೇನು ಪಾರ್ಟಿಯಲ್ಲಿ ಇರೋರಲ್ಲ.. ಎರಡು ಸಾರಿ ಬಿಜೆಪಿಗೆ ಕೈಕೊಟ್ಟು ಹೋಗಿದ್ದಾರೆ.. ಆಪರೇಷನ್ ಕಮಲ ಲಾಸ್ಟ್ ಟೈಮ್ 2008ರಲ್ಲಿ ಬಂದು ಹೋದ್ರು.. ಅದಕ್ಕೂ ಮುಂಚೆ 99ರಲ್ಲಿ ಗೆದ್ದು ವಾಪಸ್ ಹೋದ್ರು… ಅವರು ಬಂದಾಗ ಏನೋ ಮಾಡ್ತಾರೆ.. ಆಮೇಲೆ ಏನ್ ಗೊತ್ತಾ ಈಗ ನಾವು ಸೆಕಂಡ್ ಪ್ಲೇಸಲ್ಲಿ ಇದ್ದೀವಿ. ಥರ್ಡ್ ಪ್ಲೇಸ್ ಇದ್ದೀವಿ.. ಅವರು ಬಂದು ಪಾರ್ಟಿನಾ ಗುಡಿಸಿಕೊಂಡು ಹೋದರೆ… ಮತ್ತೆ ನಾವು ಥರ್ಡ್ ಪ್ಲೇಸಿಗೆ ಹೋಗ್ಬೇಕಾಗುತ್ತೆ..
    ಬಿಜೆಪಿ ಕಾರ್ಯಕರ್ತ: ಆಯ್ತು ಬಿಡಣ್ಣ.. ಅರ್ಥ ಆಯ್ತು.. ವಾಪಸ್ ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಕಳಿಸ್ತೀವಿ..

  • ಹೊಲಸೆದ್ದು ಹೋದ ಮಂಡ್ಯ ರಾಜಕೀಯ – ದರ್ಶನ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್

    ಹೊಲಸೆದ್ದು ಹೋದ ಮಂಡ್ಯ ರಾಜಕೀಯ – ದರ್ಶನ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್

    ಮಂಡ್ಯ: ಜಿಲ್ಲೆಯಲ್ಲಿ ರಾಜಕೀಯ ತೀರಾ ಕೆಳಮಟ್ಟಕ್ಕೆ ಇಳಿದಿದ್ದು, 2009ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅಂಬರೀಶ್ ಸೋತಾಗ ನಟ ದರ್ಶನ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.

    ನಟ ಅಂಬರೀಶ್ ಮಂಡ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು. ಆಗ ದರ್ಶನ್ ಅವರು ಮಂಡ್ಯ ಜನತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಡಿಯೋ ದರ್ಶನ್ ಅವರದ್ದ ಅಥವಾ ಅವರಂತೆ ಬೇರೆಯವರು ಧ್ವನಿ ನೀಡಿದ್ದಾರಾ ಎನ್ನುವುದು ತಿಳಿದು ಬಂದಿಲ್ಲ.

    ಆಡಿಯೋದಲ್ಲಿ ಏನಿದೆ?
    ದರ್ಶನ್: ಮಂಡ್ಯದವರು ನೀವು, ಎಷ್ಟೇ ಆದರೂ ಇವತ್ತು ಈ ಕಡೆಗೆ ಜೈ, ನಾಳೆ ಆ ಕಡೆಗೂ ಜೈ
    ಅಭಿಮಾನಿ-1: ಓ…..ಅಣ್ಣಾ ನೀವ್ ಯಾಕೋ ಈಗ ರೂಟ್‍ಗೆ ಬರ್ತಾ ಇದ್ದೀರಿ.
    ಅಭಿಮಾನಿ-2: ಅಣ್ಣ ಯಾಕಣ್ಣ, ಕುಮಾರಣ್ಣನಿಗೂ ಜೈ, ಎಸ್‍ಎಂ ಕೃಷ್ಣನಿಗೂ ಜೈ
    ದರ್ಶನ್: ಹೂ ಕಣಪ್ಪ ಈ ಸರಿ ಹೋಗಿಬಿಟ್ಟು ಎಲ್ಲಾ ಕುಮಾರಣ್ಣನಿಗೆ ಮಾಡಿಬಿಟ್ರಿ
    ಅಭಿಮಾನಿ-2: ಅದಿಕ್ಕೆ ಕಳಿಸಿದ್ರ ಅಣ್ಣನ್ನ ಕುಮಾರಣ್ಣನಿಗೆ ಮಾಡೋಕೆ.
    ದರ್ಶನ್: ಪಾಪ ಇದ್ರು ಬಗ್ಗೆ ಯಾರೋ ಸಿಕ್ಕಿದ್ನಪ್ಪ ಎಲ್ಲಿ
    ದರ್ಶನ್: ಮಂಡ್ಯ ಅಣ್ಣ, ಅಂಬರೀಶ್ ಅಣ್ಣನ ನಿಲ್ಲಿಸಿಬಿಟ್ಟು ಸೋಲಿಸಿಬಿಟ್ರಿ

  • ಸಿದ್ದು ಆಪ್ತನಿಂದ್ಲೇ ನಿಖಿಲ್‍ಗೆ ಒಳಗೊಳಗೆ ಗುನ್ನಾ – ಆಮಿಷದ ಆಡಿಯೋ ವೈರಲ್

    ಸಿದ್ದು ಆಪ್ತನಿಂದ್ಲೇ ನಿಖಿಲ್‍ಗೆ ಒಳಗೊಳಗೆ ಗುನ್ನಾ – ಆಮಿಷದ ಆಡಿಯೋ ವೈರಲ್

    ಬೆಂಗಳೂರು: ಮಂಡ್ಯದಲ್ಲಿ ಲೋಕಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈಗ ಮಂಡ್ಯದ ರಾಜಕೀಯದ ಸ್ಫೋಟಕ ಸುದ್ದಿ ಒಂದು ಆಡಿಯೋದಿಂದ ದೋಸ್ತಿಗಳಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ.

    ಮೈತ್ರಿ ಸರ್ಕಾರದ ಜೆಡಿಎಸ್ ಅಭ್ಯರ್ಥಿ ನಿಖಿಲ್‍ಗೆ ಒಳಗೊಳಗೆ ಗುನ್ನಾ ಹೊಡೆಯಲು ತಯಾರಿ ನಡೆಯುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತನಿಂದಲೇ ನಿಖಿಲ್ ಸೋಲಿಗೆ ಮಸಲತ್ತು ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಬೆನ್ನಿಗೆ ನಿಲ್ಲುವಂತೆ ಸಿದ್ದರಾಮಯ್ಯ ಆಪ್ತ ಚೆಲುವರಾಯಸ್ವಾಮಿ ಕೆಲವರಿಗೆ ಆಮಿಷದ ಕಸರತ್ತು ನಡೆಸುತ್ತಿದ್ದಾರೆ. ಅವರಿಬ್ಬರ ಫೋನ್ ಸಂಭಾಷಣೆ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಂಭಾಷಣೆಯಲ್ಲಿ ಏನಿದೆ?
    ಗನ್ ಮ್ಯಾನ್ : ಸರ್ ಶಿವಪ್ರಕಾಶ್ ಬಾಬು ಅವರ ಮಾತನಾಡ್ತಿರೋದು
    ಶಿವಪ್ರಕಾಶ್ ಬಾಬು : ಹಾ, ಹೌದು ಹೇಳಿ
    ಗನ್ ಮ್ಯಾನ್ : ಚೆಲುವರಾಯ ಸ್ವಾಮಿ ಸಾಹೇಬ್ರು ಮಾತನಾಡುತ್ತಾರೆ
    ಶಿವಪ್ರಕಾಶ್ ಬಾಬು : ಹಾ ಕೊಡಿ
    ಚೆಲುವರಾಯಸ್ವಾಮಿ : ಈ ಸಾರಿ ಎಲ್ಲ ನೀವೇ ನಿಂತುಕೊಂಡು ಮಾಡಬೇಕು

    ಶಿವಪ್ರಕಾಶ್ ಬಾಬು : ಮಂಡ್ಯದಲ್ಲಿ ಯಾರಣ್ಣ ಲೀಡರ್? ಯಾರ್ ಬರುತ್ತಾರೆ ಅಣ್ಣಾ?
    ಚೆಲುವರಾಯಸ್ವಾಮಿ : ಮಂಡ್ಯದಲ್ಲಿ ನೀವೇ ಲಿಡರ್, ಮಂಡ್ಯದಲ್ಲಿ ಮರ್ಯಾದೆ ಉಳಿಸಿಕೊಳ್ಳಬೇಕು ಅಷ್ಟೇ, ಮುಂದೆ ಏನಾದರೂ ಸ್ವಾಭಿಮಾನಿಯಾಗಿ ನಿಂತುಕೊಳ್ಳಬೇಕು ಎಂದರೆ ನೀವೇ ಲೀಡರ್ ಆಗಬೇಕು. ಇವತ್ತು ಕುಮಾರಸ್ವಾಮಿ ವಿರುದ್ಧ ಅಲಯನ್ಸ್ ಮಾಡಿಕೊಂಡು ಯಾರ್ ಬಂದಿದ್ದಾರೆ ಹೇಳಿ, ನೀವೇ ಅರ್ಥ ಮಾಡಕೋಬೇಕು ಲೀಡರ್ ಗಳು
    ಶಿವಪ್ರಕಾಶ್ ಬಾಬು : ಅಲ್ಲಾ ಅಣ್ಣ ಮಾಡುತ್ತೀವಿ, ಇಷ್ಟು ದಿನ ನೀವು ನೋಡಿದಹಾಗೆನೇ ಅಣ್ಣ ಇವತ್ತು
    ಚೆಲುವರಾಯಸ್ವಾಮಿ : ನೀನ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ. ಇದು ನನ್ ಗನ್ ಮ್ಯಾನ್‍ದೇನೆ ನಂಬರ್, ಏನೇ ಆದರೂ ಸಿಕ್ಕು ಈ ನಂಬರ್ ಗೆ ಕಾಲ್ ಮಾಡು

    ಶಿವಪ್ರಕಾಶ್ ಬಾಬು : ಅಣ್ಣ ನಾವು ನೀವ್ ಹೇಳಿದ ಹಾಗೇನೆ ಬರುತ್ತೀವಿ. ಆದರೆ ಮಂಡ್ಯದಲ್ಲಿ ಯಾರು ಲೀಡರ್ ಇಲ್ವಲ್ಲ. ಅಣ್ಣ, ನಾವು ನಿಮ್ಮನ್ನ ನಂಬಿಕೊಂಡು ಇರುತ್ತೀವಿ, ಆದರೆ ಯಾವ ರೀತಿ ರೆಸ್ಪಾನ್ಸ್ ಮಾಡೋದು ಅಣ್ಣ
    ಚೆಲುವರಾಯಸ್ವಾಮಿ : ಮಂಡ್ಯದಲ್ಲಿ ಯಾವ ಲೀಡರ್ ಬೇಳೆಕಾಳ್ ಮಾಡಲ್ಲ. ನಾನ್ ಇದ್ದೀನಿ ಬಾರಯ್ಯ ತಲೆ ಕೆಡಿಸಿಕೊಳ್ಳಬೇಡ. ನನಗೆ ಗೊತ್ತಿದೆ ಮಾಡುತ್ತೀನಿ
    ಶಿವಪ್ರಕಾಶ್ ಬಾಬು : ಈಗ ಮೊನ್ನೆ ಹೋಗಿ ಕುಮಾರಣ್ಣನ ಮಾತನಾಡಿಸಿಕೊಂಡು ಬಂದಿದ್ದೇವೆ ಅಣ್ಣ, ನಾಡಿದ್ದು ಮನೆಗೆ ಬರುತ್ತೀನಿ ಅಂದಿದ್ದಾರೆ ಅಣ್ಣ

    ಚೆಲುವರಾಯಸ್ವಾಮಿ : ನೋಡುಗುರು ನಿನ್ ಇಷ್ಟ, ನನ್ ಮಾತಿಗೆ ಬೆಲೆ ಕೊಡುವುದಾದರೆ ಕೊಡು ಇಲ್ವಾ ನಿನ್ ಇಷ್ಟ. ಅರ್ಥಮಾಡಕೊಳ್ಳಿ ಬೇಳೆಕಾಳು ಯಾವ ಕುಮಾರಣ್ಣನು ಬರಲ್ಲಾ ನಿನ್ ಸತ್ತರೆ ನಾನ್ ಬರಬೇಕು ನಾನ್ ಸತ್ತರೆ ನೀನ್ ಬರಬೇಕು.
    ಶಿವಪ್ರಕಾಶ್ ಬಾಬು : ಸರಿ ಅಣ್ಣ ನಿವ್ ಇವತ್ತು ಹೇಳುತ್ತೀರಾ ಅಣ್ಣ, ಆದರೆ ಮಂಡ್ಯದಲ್ಲಿ ಯಾರು ಲೀಡರ್ ಇಲ್ವಾಲ್ಲ ಅಣ್ಣ ನಾನ್ ಯಾರನ್ನ ಲೀಡರ್ ಮಾಡಲಿ ಅಣ್ಣ
    ಚೆಲುವರಾಯಸ್ವಾಮಿ : ಅಲ್ಲಾ ನಿನಗೆ ನನಗಿಂತ ಯಾವ ಲೀಡರ್ ಬೇಕಾಯ್ಯ?
    ಶಿವಪ್ರಕಾಶ್ ಬಾಬು : ಹೂಂ ಅಣ್ಣ ಮಾತಾಡುದ್ರಿ ಅವತ್ತು, ನಿನ್ನೆ ಮೊನ್ನೆ ಒಂದು ವಾರದಲ್ಲಿ ಸತೀಶ್ ಕೊಟ್ಟಾಗ ಮಾತಾಡುದ್ರಿ, ಮಾಡಬೇಕಪ್ಪ ನೀನ್ ಈ ಸಾರಿ ಸುಮಲತಾ ಅವರಿಗೆ ಅಂತ ಅದದ್ಮೇಲೆ ಇವತ್ತಿನ ವರೆಗೆ ಒಂದ್ ರೆಸ್ಪಾನ್ಸ್ ಇಲ್ಲಾ ಏನು ಇಲ್ಲಾ ನಾನು ಯಾರನ್ನ ಅಂತಾ ಮಾಡಲಿ

    ಚೆಲುವರಾಯಸ್ವಾಮಿ : ಅಲ್ಲಾ ಅಲ್ಲಿ ಅಪ್ಪಾಜಿಗೆ, ಪುಟ್ಟಸ್ವಾಮಿಗೆ, ರಾಮಣ್ಣಗೆ ಹೇಳುತ್ತೀನಿ, ನಿಂತುಕೊಂಡು ಮಾಡು ತಲೆ ಕೆಡಿಸಿಕೊಳ್ಳ ಬೇಡ, ಬೇರೆ ಯಾವುದೇ ಕಾರಣಕ್ಕೂ ಹೋಗಬೇಡ
    ಶಿವಪ್ರಕಾಶ್ ಬಾಬು : ಅಲ್ಲ ಅಣ್ಣ ನಾಡಿದ್ದು ಕುಮಾರಣ್ಣ ಬರುತ್ತೀನಿ ಅಂತಾ ಹೇಳಿದ್ದಾರಣ್ಣ ನಾನೇನ್ ಮಾಡಲಿ ಹೇಳಿ ಅಣ್ಣ
    ಚೆಲುವರಾಯಸ್ವಾಮಿ : ನೀನ್ 2 ದಿನ ಮನೆಯಲ್ಲಿ ಇರಬೇಡ ಎಲ್ಲದರೂ ಹೊರಗಡೆ ಹೋಗಿ ಬಾ
    ಶಿವಪ್ರಕಾಶ್ ಬಾಬು : ಅಲ್ಲ ಅಣ್ಣ ನಾನ್ ಮಾತು ಕೊಟ್ಟಿದ್ದಿನಿ, ನೀವ್ ಬೇಕಾದರೆ ನೆಕ್ಸ್ಟ್ ಬನ್ನಿ ಅಣ್ಣ ನಾನ್ ಮಂಡ್ಯದಲ್ಲಿ ನಿಂತು ನಿಮಗೊಸ್ಕರ ಮಾಡುತ್ತೀನಿ ಅಣ್ಣ, ಈಗ ಅಪ್ಪಾಜಿ ಅಣ್ಣನೂ ಹೇಳಿದ್ರು ನನಗೆ 1 ಕೋಟಿ ಕೊಡುತ್ತೀನಿ ಎಂದು. ಆದರೆ ನಾನೇ ದುಡ್ಡು ಬೇಡ ಅಂದೆ ಅಣ್ಣ
    ಚೆಲುವರಾಯಸ್ವಾಮಿ : ಏ ಬಾಬು ಆಯ್ತು ಹೋಗಪ್ಪ ಸುಮ್ಮನೆ ನನ್ ಹತ್ರ ವಾದ ಮಾಡಬೇಡ ಒಳ್ಳೆದಾಗಲಿ ಮಾಡೋಗೂ

  • ಪ್ರೀತಿ ನಿರಾಕರಿಸಿದಕ್ಕೆ ಯೂಟ್ಯೂಬ್‍ನಲ್ಲಿ ಆಡಿಯೋ ಹಾಕಿ ಯುವಕ ಆತ್ಮಹತ್ಯೆ!

    ಪ್ರೀತಿ ನಿರಾಕರಿಸಿದಕ್ಕೆ ಯೂಟ್ಯೂಬ್‍ನಲ್ಲಿ ಆಡಿಯೋ ಹಾಕಿ ಯುವಕ ಆತ್ಮಹತ್ಯೆ!

    ಹೈದರಾಬಾದ್: ಪ್ರೀತಿ ನಿರಾಕರಿಸಿದಕ್ಕೆ ಯುವಕನೊಬ್ಬ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ತೆಲಂಗಾಣದ ಯಾದಾದ್ರಿ ಜಿಲ್ಲೆಯ ಅತ್ಮಕುರ್ ಮಂದಲ್‍ನಲ್ಲಿ ನಡೆದಿದೆ.

    ಕಿರಣ್ ಕುಮಾರ್ ಗವಡ್(25) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಿರಣ್ ಕುಮಾರ್ ಮೂಲತಃ ಅರೇಪಲ್ಲಿ ಜಿಲ್ಲೆಯವನಾಗಿದ್ದು, ಹೈದರಾಬಾದ್‍ನ ಮೆದಿಪಟ್ನಂನ ಕನ್ ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು.

    ಕಿರಣ್ ತನ್ನದೇ ಗ್ರಾಮದ ಯುವತಿಯನ್ನು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದನು. ಆದರೆ ಯುವತಿ ಕಿರಣ್ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಖಿನ್ನತೆಕ್ಕೊಳಗಾದ ಕಿರಣ್ ತನ್ನ ಸಾವಿಗೆ ಕಾರಣವನ್ನು ಡೆತ್‍ನೋಟ್‍ನಲ್ಲಿ ಬರೆದಿದ್ದ. ಅಲ್ಲದೆ ಆಡಿಯೋವನ್ನು ರೆಕಾರ್ಡ್ ಮಾಡಿ ಯೂಟ್ಯೂಬ್ ಹಾಗೂ ವಾಟ್ಸಾಪ್ ಗ್ರೂಪಿನಲ್ಲಿ ಕಳುಹಿಸಿದ್ದನು.

    ಕಿರಣ್ ಬೆಳಗಿನ ಜಾವ ಸುಮಾರು 2.25ಕ್ಕೆ ಶ್ರೀರಾಮನಗರ ರೈಲ್ವೆ ಸ್ಟೇಷನ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳೀಯರು ಆತನ ಮೃತದೇಹ ನೋಡಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಿರಣ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಆಪರೇಷನ್ ಆಡಿಯೋ ಕೇಸ್: ಬಿ.ಎಸ್.ವೈಗೆ ರಿಲೀಫ್

    ಆಪರೇಷನ್ ಆಡಿಯೋ ಕೇಸ್: ಬಿ.ಎಸ್.ವೈಗೆ ರಿಲೀಫ್

    ಬೆಂಗಳೂರು: ಆಪರೇಷನ್ ಕಮಲ ಆಡಿಯೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ದೇವದುರ್ಗ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಎಫ್‍ಐಆರ್ ಗೆ ಕಲಬುರಗಿ ಹೈಕೋರ್ಟ್ ಪೀಠ ಮಧ್ಯಂತರ ತಡೆ ನೀಡಿದೆ.

    ದೇವದುರ್ಗ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್ ವಿಚಾರಣೆಗೆ ತಡೆ ಕೋರಿ ಬಿಎಸ್‍ವೈ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಕಲಬುರಗಿ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ತೀರ್ಪು ಕಾಯ್ದಿರಿಸಿದ್ದರು. ಇಂದು ಹೈಕೋರ್ಟ್ ನ್ಯಾಯಮೂರ್ತಿ ಪಿಜಿಎಂ ಪಾಟೀಲ್ ಅವರು ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ಬಿ.ಎಸ್.ವೈ ಸೇರಿದಂತೆ ನಾಲ್ವರ ವಿರುದ್ಧ ದೇವದುರ್ಗ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು. ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ದೇವದುರ್ಗ ಠಾಣೆಯಲ್ಲಿ ದೂರು ನೀಡಿದ್ದರು.

    1992 ಮತ್ತು 2004ರ ಹಾಗೂ ಇತ್ತೀಚಿಗಿನ ಕೆಲವು ಆಡಿಯೋ ಪ್ರಕರಣ ಆಧರಿಸಿ ಬಿಎಸ್‍ವೈ ಪರ ವಕೀಲರು ಭ್ರಷ್ಟಾಚಾರ ಪ್ರಕರಣದಡಿಯಲ್ಲಿ ಈ ಪ್ರಕರಣ ಬರುವುದಿಲ್ಲ. ಆಡಿಯೋ ಪ್ರಕರಣದಲ್ಲಿ ದೂರು ನೀಡಿದ ಶರಣಗೌಡ ಅವರು ಸಾಂವಿಧಾನಿಕ ಹುದ್ದೆಯಲ್ಲಿಲ್ಲ. ಮುಂದಿನ ದಿನಗಳಲ್ಲಿ ಸಹಾಯ ಮಾಡವುದಾಗಿ ಹೇಳಿದ್ರು. ಹೀಗಾಗಿ ಸೆಕ್ಷನ್ 8ರ ಅ ಭ್ರಷ್ಟಾಚಾರ ಪ್ರಕರಣದಡಿಯಲ್ಲಿ ಆಡಿಯೋ ಪ್ರಕರಣ ಬರುವುದಿಲ್ಲ ಎಂದು ಬಿಎಸ್ ವೈ ಪರ ವಕೀಲರು ಪ್ರಬಲವಾಗಿ ವಾದ ಮಂಡಿಸಿದ್ದರು. ಹೀಗಾಗಿ ಇಂದು ಕೋರ್ಟ್ ನಿಂದ ಮಧ್ಯಂತರ ತೀರ್ಪು ಹೊರ ಬಿದ್ದಿದ್ದು, ವಿಚಾರಣೆ ತಡೆ ಕೋರಿ ಆದೇಶಿಸಲಾಗಿದೆ.

    ಫೆಬ್ರವರಿ 13ರಂದು ಪುತ್ರ ಶರಣಗೌಡ ಮೂಲಕ ಗುರುಮಿಟ್ಕಲ್ ಜೆಡಿಎಸ್ ಶಾಸಕ ನಾಗನಗೌಡಗೆ ಆಫರ್ ಕೊಟ್ಟಿದ್ದ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಭ್ರಷ್ಟಾಚಾರ ತಡೆಗಟ್ಟುವಿಕೆ ಕಾಯ್ದೆಯಡಿ ಎಫ್.ಐ.ಆರ್ ದಾಖಲಾಗಿತ್ತು. ಐಪಿಸಿ- 1860, ಯು/ಎಸ್- 120ಬಿ, 504, 34 ಕಲಂ ಅಡಿ ಪ್ರಕರಣ ದಾಖಲಾಗಿತ್ತು. ಕೇಸ್‍ನಲ್ಲಿ ಯಡಿಯೂರಪ್ಪ ಮೊದಲ ಆರೋಪಿಯಾಗಿದ್ದು, ಬಿಜೆಪಿ ಶಾಸಕರಾದ ಶಿವನಗೌಡ ನಾಯಕ್, ಪ್ರೀತಂಗೌಡ 2 ಮತ್ತು 3ನೇ ಆರೋಪಿಯಾಗಿದ್ದರು. ಸದ್ಯ ಬಿಎಸ್ ವೈ ಜೊತೆ ಶಾಸಕ ಶಿವನಗೌಡ ನಾಯಕ್, ಪ್ರೀತಂ ಗೌಡ ಸೇರಿ ನಾಲ್ವರಿಗೂ ರಿಲೀಫ್ ದೊರೆತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಫ್‍ಐಆರ್ ರದ್ದು ಕೋರಿ ಬಿಎಸ್‍ವೈ ಹೈಕೋರ್ಟ್ ಮೊರೆ..!

    ಎಫ್‍ಐಆರ್ ರದ್ದು ಕೋರಿ ಬಿಎಸ್‍ವೈ ಹೈಕೋರ್ಟ್ ಮೊರೆ..!

    ಬೆಂಗಳೂರು: ಆಪರೇಷನ್ ಕಮಲ ಮಾಡಿದ್ದಾರೆ ಎನ್ನಲಾದ ಆಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ರಾಯಚೂರಿನಲ್ಲಿ ಎಫ್‍ಐಆರ್ ದಾಖಲಾಗಿದೆ. ಇದೀಗ ಈ ಎಫ್‍ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್  ಗೆ ಅರ್ಜಿ ಸಲ್ಲಿಸಲು ಬಿಎಸ್‍ವೈ ನಿರ್ಧರಿಸಿದ್ದಾರೆ.

    ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾದ ಎಫ್‍ಐಆರ್ ರದ್ದು ಕೋರಿ ಅರ್ಜಿ ಸಲ್ಲಿಕೆಗೆ ಸಿದ್ಧತೆ ನಡೆಯುತ್ತಿದ್ದು, ಇಂದು ಮಧ್ಯಾಹ್ನ ಬಿಎಸ್‍ವೈ ಪರ ವಕೀಲರು ಎಫ್‍ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ. ಈ ಪ್ರಕರಣ ಸಂಬಂಧ ಸೋಮವಾರದಂದು ಹೈಕೋರ್ಟ್ ಮುಂದೆ ಬಿಎಸ್‍ವೈ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: ಆಪರೇಷನ್ ಆಡಿಯೋ ಪ್ರಕರಣ – ಬಿಎಸ್‍ವೈ ಎ1 ಆರೋಪಿ

    ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠಕ್ಕೆ ಅರ್ಜಿ ಸಲ್ಲಿಸಲು ಬಿಎಸ್‍ವೈ ಪರ ವಕೀಲರ ಸಿದ್ಧತೆ ಮಾಡಿಕೊಂಡಿದ್ದು, ಆಡಿಯೋ ಪ್ರಕರಣ ಹಿನ್ನೆಲೆ ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಪುತ್ರ ಶರಣಗೌಡ ನೀಡಿದ್ದ ದೂರಿನ ಮೇರೆಗೆ ರಾಯಚೂರು ಜಿಲ್ಲೆಯ ದೇವದುರ್ಗ ಠಾಣೆಯಲ್ಲಿ ಬಿಎಸ್‍ವೈ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.

    ಕಲಬುರಗಿ ಹೈಕೋರ್ಟ್ ಪೀಠದ ವ್ಯಾಪ್ತಿಗೆ ದೇವದುರ್ಗ ಪೊಲೀಸ್ ಠಾಣೆ ಬರುತ್ತದೆ. ಆದ್ದರಿಂದ ಗುರುವಾರ ಪ್ರಕರಣವೊಂದರ ವಾದ ಮಂಡನೆಗೆ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಆಗಮಿಸಿದ್ದ ಹಿರಿಯ ನ್ಯಾಯವಾದಿ ಹಾಗೂ ಬಿಎಸ್‍ವೈ ಪರ ವಕೀಲರಾದ ಸಿ.ವಿ.ನಾಗೇಶ್, ಎಫ್‍ಐಆರ್ ರದ್ದು ಕೋರಿ ಅರ್ಜಿ ಸಲ್ಲಿಕೆಗೆ ಪೂರಕ ತಯಾರಿ ನಡೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪರಂ ವಿಷ ಹೇಳಿಕೆಯನ್ನು ರಿಲೀಸ್ ಮಾಡಿ ಜೆಡಿಎಸ್‍ಗೆ ಬಿಜೆಪಿ ಪ್ರಶ್ನೆ

    ಪರಂ ವಿಷ ಹೇಳಿಕೆಯನ್ನು ರಿಲೀಸ್ ಮಾಡಿ ಜೆಡಿಎಸ್‍ಗೆ ಬಿಜೆಪಿ ಪ್ರಶ್ನೆ

    ಬೆಂಗಳೂರು: ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ಹಾಸನದಲ್ಲಿ ಜೆಡಿಎಸ್ ನವರು ಶಾಸಕರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದರು. ಈ ಬೆನ್ನಲ್ಲೇ ಬಿಜೆಪಿಯವರು ಕೂಡ ಹಳೆಯ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ದೋಸ್ತಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    2014ರಲ್ಲಿ ಜಿ. ಪಮೇಶ್ವರ್ ಅವರು ಕೊಟ್ಟಿರುವ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಇದನ್ನೇ ಬಿಜೆಪಿಯವರು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

    ವಿಡಿಯೋದಲ್ಲೇನಿದೆ..?
    ಕಾರ್ಯಕ್ರಮವೊಂದರಲ್ಲಿ ಜಿ. ಪರಮೇಶ್ವರ್ ಅವರು ಮಾತನಾಡುತ್ತಾ, 2013ರ ಚುನಾವಣೆಯ ಸಂದರ್ಭದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ಒಂದು ಮಾತು ಹೇಳಿದ್ದರು. ಅದರ ಪೇಪರ್ ಕಟ್ಟಿಂಗ್ ಕೂಡ ಇಟ್ಟುಕೊಂಡಿದ್ದೀನಿ. ಕರ್ನಾಟಕದಲ್ಲಿ ಜನತಾ ದಳ ಅಧಿಕಾರಕ್ಕೆ ಬರುತ್ತದೆ. ನಾವೇ ಅಧಿಕಾರಕ್ಕೆ ಬರುತ್ತೇವೆ. ಒಂದು ವೇಳೆ ಬರದೇ ಇದ್ದರೆ, ವಿಷ ತೆಗೆದುಕೊಂಡು ಸಾಯುತ್ತೇವೆ ಎನ್ನುವ ಹೇಳಿಕೆಯನ್ನು ಕೊಟ್ಟಿದ್ದರು. ಇವತ್ತು, ನಾಳೆ ವಿಷ ತೆಗೆದುಕೊಳ್ಳುತ್ತಾರೆ ಎಂದು ನಾನು ಕಾಯುತ್ತಲೇ ಇದ್ದೇನೆ. ತೆಗೆದುಕೊಳ್ಳುತ್ತಾನೆ ಇಲ್ಲ ಅವರು. ಏನ್ ಮಾಡಬೇಕು ಹೇಳಿ ಎಂದು ಪರಂ ಹೇಳಿದಾಗ ಕಾರ್ಯಕ್ರಮದಲ್ಲಿದ್ದವರು ನಕ್ಕಿದ್ದರು.

    ಬಿಜೆಪಿ ಟ್ವೀಟ್‍ನಲ್ಲಿ ಏನಿದೆ?
    ಪರಂ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಿಜೆಪಿ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿಕೊಂಡು ಆಗಿಲ್ಲದ ಸಾವಿನ ರಾಜಕೀಯ ಈಗ್ಯಾಕೆ? ಪರಮೇಶ್ವರ್ ಮನೆ ಮೇಲೆ ಕಲ್ಲು ತೂರ್ತಾರಾ ಎಂದು ಪ್ರಶ್ನಿಸಿದೆ.

    ಪ್ರೀತಂಗೌಡ ಹೇಳಿದ್ದೇನು?
    ಬಿಎಸ್‍ವೈ ಆಪರೇಷನ್ ಕಮಲ ಮಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ `ಸೂರ್ಯ ಚಂದ್ರ ಇರೋವರೆಗೂ ಈ ರಾಷ್ಟ್ರೀಯ ಪಕ್ಷ ಇರುತ್ತದೆ. ದೇವೇಗೌಡರ ವಿಕೆಟ್ ಹೋಗಿ. ಕುಮಾರಣ್ಣನ ಹೆಲ್ತ್ ಇಲ್ಲ. ಹೋದತಕ್ಷಣ ಪಾರ್ಟಿ ಬರ್ಖಾಸ್ತು ಆಗುತ್ತದೆ ಎಂದು ಹೇಳಿದ್ದರು.

    ರಾಜ್ಯ ರಾಜಕರಾಣದಲ್ಲಿ ನಡೆಯುತ್ತಿರೋ ಬೆಳವಣಿಗೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ಆಡಿಯೋ’ ಪ್ರಕರಣ- ಬಿಎಸ್‍ವೈಗೆ ಮತ್ತೆ ಹೈಕಮಾಂಡ್‍ನಿಂದ ಫುಲ್ ಕ್ಲಾಸ್..!

    `ಆಡಿಯೋ’ ಪ್ರಕರಣ- ಬಿಎಸ್‍ವೈಗೆ ಮತ್ತೆ ಹೈಕಮಾಂಡ್‍ನಿಂದ ಫುಲ್ ಕ್ಲಾಸ್..!

    ಬೆಂಗಳೂರು: ಆಡಿಯೋ ಸ್ಫೋಟದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಭಾರೀ ಮುಜುಗರ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಯಡಿಯೂರಪ್ಪ ಅವರಿಗೆ ಮತ್ತೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ದೋಸ್ತಿಗಳ ಕಿತ್ತಾಟ ಎಲ್ಲೆಡೆ ಕಂಡುಬರ್ತಿದೆ. ಜಗಜ್ಜಾಹೀರಾಗಿದೆ. ಇದನ್ನು ಎನ್‍ಕ್ಯಾಶ್ ಮಾಡ್ಕೊಳ್ಳೋದು ಬಿಟ್ಟು ನೀವು ಮಾಡ್ತಿರೋದೇನು..? ನೀವು ಬಿರುಕು ದೊಡ್ಡದು ಮಾಡೋದು ಬಿಟ್ಟು ತೇಪೆ ಹಚ್ತಿದ್ದೀರಿ. ಏಯ್ ಕ್ಯಾ ಹೈ ಆಡಿಯೋ ಗದ್ದಲ. ಹುಷಾರಾಗಿ ಮಾಡ್ಬೇಕು ತಾನೆ. ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರ ತರ್ತಾ ಇದ್ದೀರಿ. ಇದು ಸರೀನಾ ಎಂದು ಬಿಜೆಪಿ ಹೈಕಮಾಂಡ್ ಬಿಎಸ್‍ವೈ ಗೆ ಕ್ಲಾಸ್ ತೆಗೆದುಕೊಂಡಿದೆ.

    ಬರೀ ಇದ್ರಲ್ಲೇ ಮುಳುಗಿದ್ರೆ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಯಾವಾಗ ಮಾಡೋದು. ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸೀಟು ಗೆಲ್ತೀರಾ ಎಂದು ಪ್ರಶ್ನಸಿದಿ ಅವರು ಈ ಬೆಳವಣಿಗೆಗಳಿಂದ ಪಕ್ಷಕ್ಕೆ ಹಿನ್ನಡೆ ಆಗುತ್ತದೆ. ಡ್ಯಾಮೇಜ್ ಕಂಟ್ರೋಲ್‍ಗೆ ಹಾಸನ ಗದ್ದಲ ಪ್ರಕರಣವನ್ನು ಹೈಪ್ ಮಾಡಿ. ಈ ಕೂಡಲೇ ಎಲ್ಲೆಡೆ ಪ್ರೊಟೆಸ್ಟ್ ಮಾಡಿ. ಸರ್ಕಾರದ ವಿರುದ್ಧ ಮುಗಿಬೀಳುವಂತೆ ಗರಂ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹುಡುಗಾಟಿಕೆ ಆಡ್ಬಿಟ್ರಿ ನೀವು- ಬಿಎಸ್‍ವೈ ಆಡಿಯೋಗೆ ಹೈಕಮಾಂಡ್ ಕೆಂಡಾಮಂಡಲ

    ಇತ್ತ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಂದು ಮಧ್ಯಾಹ್ನ ರಾಜ್ಯಕ್ಕೆ ಆಗಮಿಸಲಿದ್ದು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಶಾಗೆ ಬಿಎಸ್‍ವೈ ಅವರು ವಿವರಣೆ ಕೊಡಬೇಕಿದ್ದರು. ಆದ್ರೆ ರಾಜ್ಯಕ್ಕೆ ಬಂದ್ರೂ ಅವರನ್ನು ಭೇಟಿ ಮಾಡದಿರಲು ಬಿಎಸ್‍ವೈ ಪ್ಲಾನ್ ಮಾಡಿದ್ದಾರೆ. ಅಧಿವೇಶನದ ನೆಪ ಒಡ್ಡಿ ಅಮಿತ್ ಶಾರಿಂದ ದೂರ ಉಳಿಯಲು ಬಿಎಸ್‍ವೈ ಯತ್ನಿಸಿದ್ದು, ಅಧಿವೇಶನ ಇದೆ. ಸಾಧ್ಯವಾದ್ರೆ ಮಾತ್ರ ಬರ್ತೀನಿ, ಇಲ್ಲದಿದ್ದರೆ ಆಗಲ್ಲ ಎಂದಿದ್ದಾರೆ. ಈ ಮೂಲಕ ಅಮಿತ್ ಶಾ ಭೇಟಿ ಕಷ್ಟ ಎಂಬ ಸಂದೇಶವನ್ನು ಬಿಎಸ್‍ವೈ ರವಾನಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದರಾಮಯ್ಯ ಒತ್ತಡಕ್ಕೆ ಮಣಿದ ಸಿಎಂ ಎಚ್‍ಡಿಕೆ!

    ಸಿದ್ದರಾಮಯ್ಯ ಒತ್ತಡಕ್ಕೆ ಮಣಿದ ಸಿಎಂ ಎಚ್‍ಡಿಕೆ!

    – ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಮಾಜಿ ಸಿಎಂ
    – ಸದನ ಸಮಿತಿ ತನಿಖೆಗೆ ಬೇಡವೆಂದ ಸಿದ್ದರಾಮಯ್ಯ

    ಬೆಂಗಳೂರು: ಆಪರೇಷನ್ ಕಮಲ ಆಡಿಯೋ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಮಣಿದು ಸಿಎಂ ಕುಮಾರಸ್ವಾಮಿ ಅವರು ವಿಶೇಷ ತನಿಖಾ ತಂಡಕ್ಕೆ ಪ್ರಕರಣವನ್ನು ವಹಿಸಿದ್ದಾರೆ.

    ಹೌದು. ಎಸ್‍ಐಟಿ ಮುಖ್ಯಮಂತ್ರಿಗಳ ಕೈಕೆಳಗಡೆ ಕೆಲಸ ಮಾಡುತ್ತದೆ. ಇದರಿಂದ ತನಿಖೆ ಸರಿಯಾಗಿ ನಡೆಯುವುದು ಅನುಮಾನ ಹೀಗಾಗಿ ಸದನ ಸಮಿತಿಗೆ ನೀಡಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದರು. ಈ ವಿಚಾರದಲ್ಲಿ ಇಂದು ಕುಮಾರಸ್ವಾಮಿ ಅವರು ತಮ್ಮ ನಿಲುವು ಬದಲಿಸಿದರೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಒತ್ತಡಕ್ಕೆ ಮಣಿದು ಎಸ್‍ಐಟಿಗೆ ಪ್ರಕರಣವನ್ನು ನೀಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಈ ಪ್ರಕರಣದ ತನಿಖೆಯನ್ನು ಯಾರು ನಡೆಸಬೇಕು ಎನ್ನುವ ಬಗ್ಗೆ ಇಂದು ಸ್ಪೀಕರ್ ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಡಳಿತ ಮತ್ತು ಬಿಜೆಪಿಯ ನಾಯಕರು ಭಾಗವಹಿಸಿ ಚರ್ಚೆ ನಡೆಸಿದ್ದರು. ಈ ವೇಳೆ ಸಿಎಂ ಎಸ್‍ಐಟಿ ಬದಲಾಗಿ ಸದನ ಸಮಿತಿ ರಚನೆ ಮಾಡಲು ಒಪ್ಪಿಗೆ ಸೂಚಿಸಿದ್ದರು. ಆದರೆ ಮಾಜಿ ಸಿಎಂ ಮಾತ್ರ ಹಠಕ್ಕೆ ಬಿದ್ದು ಎಸ್‍ಐಟಿ ತನಿಖೆಯೇ ನಡೆಸಬೇಕೆಂದು ಪಟ್ಟು ಹಿಡಿದಿದ್ದರು.

    ಒಂದು ಹಂತದಲ್ಲಿ ಸಭೆಯಿಂದ 10 ನಿಮಿಷ ಹೊರ ಬಂದ ವೇಳೆಯೂ ಸಿದ್ದರಾಮಯ್ಯ ಪಟ್ಟು ಸಡಿಲಿಸದ ಕಾರಣ ಸ್ವತಃ ಸಿಎಂ ಕುಮಾರಸ್ವಾಮಿ ಅವರು ಮನಸ್ಸು ಬದಲಿಸಿ ವಿಧಿ ಇಲ್ಲದೆ ಎಸ್‍ಐಟಿ ತನಿಖೆಗೆ ನೀಡಲು ಮುಂದಾದರು ಎಂದು ಮೂಲಗಳು ತಿಳಿಸಿವೆ.

    ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ಶಾಸಕರನ್ನು ಸೆಳೆದು ತಮಗೇ ತಲೆ ನೋವು ತಂದಿದ್ದ ಬಿಎಸ್‍ವೈ ಅವರ ವಿರುದ್ಧದ ಸೇಡಿಗೆ ಸಿದ್ದರಾಮಯ್ಯ ಅವರು ಎಸ್‍ಐಟಿ ತನಿಖೆಯೇ ನಡೆಯಬೇಕಂಬ ಹಠ ಹಿಡಿದಿದ್ದರು ಎನ್ನಲಾಗಿದೆ. ಸಿಎಂ ಕುಮಾರಸ್ವಾಮಿ ಅವರು ಈಗ ಬಿಜೆಪಿ ಅವರ ಮೇಲೆ ಸಾಫ್ಟ್ ಕರ್ನರ್ ಮೂಡಿದರೆ ಅದು ಮುಂದೇ ಸಮ್ಮಿಶ್ರ ಸರ್ಕಾರಕ್ಕೆ ಮುಳವಾಗಬಹುದು ಎಂಬ ಚಿಂತನೆಯೂ ಇತ್ತು ಎನ್ನಲಾಗಿದೆ. ಈ ಮೂಲಕ ಎಸ್‍ಐಟಿ ತನಿಖೆ ವಹಿಸಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರವನ್ನು ಪ್ರಯೋಗಿಸಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎನ್ನುವ ವಿಶ್ಲೇಷಣೆ ಈಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv