Tag: auction

  • ರಸ್ತೆ ತಡೆ ನಡೆಸಿ ರಾಮನಗರ ರೇಷ್ಮೆ ಬೆಳೆಗಾರರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

    ರಸ್ತೆ ತಡೆ ನಡೆಸಿ ರಾಮನಗರ ರೇಷ್ಮೆ ಬೆಳೆಗಾರರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

    ರಾಮನಗರ: ಯಾವುದೇ ಸರ್ಕಾರ ಬಂದರೂ ರೈತರಿಗೆ ನೆರವಾಗುತ್ತಿಲ್ಲ ಎಂದು ರಾಮನಗರ ರೇಷ್ಮೆ ಬೆಳೆಗಾರರು ಹೆದ್ದಾರಿ ತಡೆ ಹಿಡಿದು ಪ್ರತಿಭಟನೆ ಮಾಡಿದ್ದಾರೆ.

    ರೇಷ್ಮೆ ಗೂಡಿನ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹರಾಜು ಪ್ರಕ್ರಿಯೆನ್ನು ಸ್ಥಗಿತಗೊಳಿಸಿ ರೇಷ್ಮೆ ಬೆಳೆಗಾರರು ಬೆಂಗಳೂರು-ಮೈಸೂರು ಹೆದ್ದಾರಿ ತಡೆಹಿಡಿದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು.

    ಇಂದು ಹರಾಜು ಪ್ರಕ್ರಿಯೆಯ ವೇಳೆ ರೇಷ್ಮೆಗೂಡಿನ ಬೆಲೆ ಪ್ರತಿ ಕೆಜಿಗೆ ಸರಾಸರಿ 220 ರೂ ರಿಂದ 240 ರೂ ಕ್ಕೆ ನಿಂತಿದೆ. ಯಾವುದೇ ಸರ್ಕಾರ ಬಂದರೂ ರೈತರ ನೆರವಿಗೆ ನಿಲ್ಲುವಂತಹ ಕೆಲಸವಾಗುತ್ತಿಲ್ಲ. ರೈತರ ರೇಷ್ಮೆಯನ್ನು ಸರ್ಕಾರ ತೆಗೆದುಕೊಳ್ಳದಿರುವುದರಿಂದ ಮಧ್ಯವರ್ತಿಗಳು ತಮಗಿಷ್ಟ ಬಂದಂತೆ ಹರಾಜು ಕೂಗುತ್ತಿದ್ದಾರೆ ಎಂದು ರಸ್ತೆ ತಡೆದು ಆಕ್ರೋಶ ಹೊರ ಹಾಕಿದರು.

    ನಂತರ ಸ್ಥಳಕ್ಕೆ ಬಂದ ಪೊಲೀಸರು ರೈತರನ್ನು ಮನವೊಲಿಸಿ ಪ್ರತಿಭಟನೆಯನ್ನು ನಿಲ್ಲಿಸಿದರು. ಈ ನಡುವೆ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತುಕತೆ ನಡೆದು ಅಧಿಕಾರಿಗಳು ಮತ್ತೆ ಉತ್ತಮ ಬೆಲೆಗೆ ಹರಾಜು ನಡೆಸುವ ಭರವಸೆ ನೀಡಿದರು.

  • 8 ನಿಮಿಷಕ್ಕೆ 778 ಕೋಟಿಗೆ ಮಾರಾಟವಾಯ್ತು ವಿಶ್ವದ ಅತೀ ದುಬಾರಿ ಪೇಂಟಿಂಗ್!

    8 ನಿಮಿಷಕ್ಕೆ 778 ಕೋಟಿಗೆ ಮಾರಾಟವಾಯ್ತು ವಿಶ್ವದ ಅತೀ ದುಬಾರಿ ಪೇಂಟಿಂಗ್!

    ನ್ಯೂಯಾರ್ಕ್: ಫ್ರೆಂಚ್ ಮೂಲದ ಚಿತ್ರಕಾರ ಮೋನೆಟ್ ಅವರ ಪೇಂಟಿಂಗ್‍ಗಳು ಸಾಮಾನ್ಯವಾಗಿ ಕೋಟಿಗಟ್ಟೆಲೆ ರೂ. ಬೆಲೆ ಬಾಳುತ್ತದೆ. ಆದರೆ ಸೋಥೆಬಿ ಮಾಡರ್ನ್ ಆರ್ಟ್ ಆಯೋಜಿಸಿದ್ದ ಸೇಲ್‍ನಲ್ಲಿ ಒಂದು ಪೇಂಟಿಂಗ್ ಬರೋಬ್ಬರಿ 778 ಕೋಟಿ ರೂಪಾಯಿಗೆ ಹರಾಜಾಗಿದ್ದು, ಎಲ್ಲರನ್ನು ಅಚ್ಚರಿಗೊಳಿಸಿದೆ.

    ಹೌದು. ಸೋಥೆಬಿ ಮಾಡರ್ನ್ ಆರ್ಟ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಚಿತ್ರಕಾರ ಮೋನೆಟ್ ಅವರ ಖಾಸಗಿ ಕಲೆಕ್ಷನ್‍ನಲ್ಲಿದ್ದ `ಮಿಯೂಲ್ಸ್’ ಪೇಂಟಿಂಗ್ ಸುಮಾರು 110.7 ಮಿಲಿಯನ್ ಡಾಲರ್ (ಅಂದಾಜು 778 ಕೋಟಿ ರೂ.) ಮಾರಾಟವಾಗಿದೆ. ಈ ಮೂಲಕ ಇದು ವಿಶ್ವದಲ್ಲಿಯೇ ಅತಿಹೆಚ್ಚು ಮೊತ್ತಕ್ಕೆ ಮಾರಾಟವಾದ ಪೇಂಟಿಂಗ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

    ಮೋನೆಟ್ ಫ್ರೆಂಚ್ ವರ್ಣಚಿತ್ರಕಾರ ಮತ್ತು ಫ್ರೆಂಚ್ ಇಮ್‍ಪ್ರಿಸನಿಸ್ಟ್ ಪೇಟಿಂಗ್ ಸ್ಥಾಪಕರಾಗಿದ್ದು, 1926 ರಲ್ಲಿ ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರ ಚಿತ್ರಕಲೆ ಮಾತ್ರ ಇಂದಿಗೂ ಜೀವಂತವಾಗಿದೆ. ಈ ಹಿಂದೆ ಈ ಪೇಂಟಿಂಗ್ ಅನ್ನು ಖರೀದಿಸುವಾಗ ಮಾಲೀಕ 1986ರಲ್ಲಿ 2.53 ಮಿಲಿಯನ್ ಡಾಲರ್ ಕೊಟ್ಟಿದ್ದನು. ಆದರೆ ಇದೀಗ ಎಂಟು ನಿಮಿಷದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ಎಂಟು ಮಂದಿ ಈ ಪೇಂಟಿಂಗ್‍ಗಾಗಿ ಹರಾಜು ಕೂಗಿ, ಕೊನೆಗೆ ಬರೋಬ್ಬರಿ 778 ಕೋಟಿ ರೂ.ಗೆ ಪೇಂಟಿಂಗ್ ಹರಾಜಾಗಿದೆ.

    ಈ ದುಬಾರಿ ಪೇಂಟಿಂಗ್‍ನಲ್ಲಿ ಅಂತಹದ್ದೇನಿದೆ ಎಂದು ಇದೀಗ ನೆಟ್ಟಿಗರಲ್ಲಿ ಪ್ರಶ್ನೇ ಹುಟ್ಟುಕೊಂಡಿದೆ. ಬೆಳಗಿನ ಜಾವ ಸೂರ್ಯ ಉದಯ ಆಗುವ ದೃಶ್ಯವನ್ನು ಚಿತ್ರಕಾರ ಈ ಪೇಂಟಿಂಗ್‍ನಲ್ಲಿ ಚಿತ್ರಿಸಿದ್ದಾರೆ. ಈ ಅಮೋಘ ಪೇಂಟಿಂಗ್ ಕಂಡ ಕಲಾ ಅಭಿಮಾನಿಯೊಬ್ಬರು ಇದನ್ನು ದುಬಾರಿ ಮೊತ್ತ ಕೊಟ್ಟು ಖರೀದಿಸಿದ್ದಾರೆ.

  • ಐಪಿಎಲ್ ಕಿರಿಯ ಆಟಗಾರ – ಆರ್‌ಸಿಬಿ ಪರ ಪ್ರಯಾಸ್ ಪಾದಾರ್ಪಣೆ

    ಐಪಿಎಲ್ ಕಿರಿಯ ಆಟಗಾರ – ಆರ್‌ಸಿಬಿ ಪರ ಪ್ರಯಾಸ್ ಪಾದಾರ್ಪಣೆ

    ಜೈಪುರ: 2019ರ ಐಪಿಎಲ್ ಆವೃತ್ತಿಯಲ್ಲಿ ಆರ್ ಸಿಬಿ ತಂಡದ ಪ್ರಯಾಸ್ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ್ದು, ಆ ಮೂಲಕ ಐಪಿಎಲ್ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಪ್ರಯಾಸ್ ಪಾದಾರ್ಪಣೆ ಮಾಡಿದ್ದಾರೆ. 16 ವರ್ಷ 157 ದಿನಗಳ ವಯಸ್ಸಿಗೆ ಪ್ರಯಾಸ್ ಐಪಿಎಲ್ ಆಡುವ ಅವಕಾಶ ಪಡೆದಿದ್ದು, ಇದಕ್ಕೂ ಮುನ್ನ ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ರೆಹಮಾನ್ ಯಂಗೆಸ್ಟ್ ಪ್ಲೇಯರ್ ಎಂಬ ಹೆಗ್ಗಳಿಕೆ ಪಡೆದಿದ್ದರು.

    ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಾರಿ ತಂಡದಲ್ಲಿ ಬದಲಾವಣೆ ಮಾಡುವ ಮೂಲಕ ಪ್ರಯಾಸ್‍ಗೆ ಅವಕಾಶ ನೀಡಿ, ಉತ್ತಮ ಆಟಗಾರ ಎಂದು ಹೇಳಿದ್ದಾರೆ. ಅಂದಹಾಗೇ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಪ್ರಯಾಸ್ ರೇ ಬರ್ಮನ್‍ರನ್ನ ಬರೋಬ್ಬರಿ 1.5 ಕೋಟಿ ರೂ ನೀಡಿ ಆರ್ ಸಿಬಿ ಖರೀದಿ ಮಾಡಿತ್ತು.

    ಬೆಂಗಾಲ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ಪ್ರಯಾಸ್ 16 ವರ್ಷಕ್ಕೆ ಕೋಟಿ ರೂ. ಮೊತ್ತಕ್ಕೆ ಹರಾಜದ ಹೆಗ್ಗಳಿಕೆಯನ್ನು ಪಡೆದಿದ್ದರು. ‘ಮಿಸ್ಟರಿ’ ಸ್ಪಿನ್ನರ್ ಎಂಬ ಹೆಸರು ಪಡೆದಿರುವ ಪ್ರಯಾಸ್ 20 ರನ್ ನೀಡಿ 4 ವಿಕೆಟ್ ಪಡೆದಿರುವುದು ಇದೂವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ. 2002 ರಲ್ಲಿ ಜನಿಸಿರುವ ಪ್ರಯಾಸ್ ಬೌಲರ್ ಮಾತ್ರವಲ್ಲದೇ ಉತ್ತಮ ಆಲ್‍ರೌಂಡರ್ ಆಗಿದ್ದು, ಬಲಗೈ ಬ್ಯಾಟ್ಸ್ ಮನ್ ಕೂಡ ಆಗಿದ್ದಾರೆ.

    ಇದುವರೆಗೂ 9 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಪ್ರಯಾಸ್ 6 ಇನ್ನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ನಡೆಸಿ 47 ರನ್ ಗಳಿಸಿದ್ದರೆ ಹಾಗೂ ಬೌಲಿಂಗ್‍ನಲ್ಲಿ 11 ವಿಕೆಟ್ ಪಡೆದಿದ್ದಾರೆ. ಉಳಿದಂತೆ ವಿಜಯ್ ಹಜಾರೆ ಟೂರ್ನಿಯಲ್ಲಿ ಉತ್ತಮ ಎಕಾನಮಿಯೊಂದಿಗೆ 11 ವಿಕೆಟ್ ಪಡೆದುಕೊಂಡಿದ್ದಾರೆ. ಮೊದಲು ದೆಹಲಿ ತಂಡದ ಪರ ಆಡಿದ್ದ ಪ್ರಯಾಸ್ ಬಳಿಕ ಬೆಂಗಾಲ್ ತಂಡವನ್ನು ಸೇರಿಕೊಂಡಿದ್ದರು. ಮೊದಲ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿರುವ ಪ್ರಯಾಸ್ ಯಾವುದೇ ವಿಕೆಟ್ ಪಡೆಯದೆ 56 ರನ್ ನೀಡಿದ್ದರು.

  • 2019 ಐಪಿಎಲ್ ಹರಾಜು: ಹೆಚ್ಚು ಮೊತ್ತಕ್ಕೆ ಹರಾಜದ ಟಾಪ್ 5 ಯುವ ಆಟಗಾರರು

    2019 ಐಪಿಎಲ್ ಹರಾಜು: ಹೆಚ್ಚು ಮೊತ್ತಕ್ಕೆ ಹರಾಜದ ಟಾಪ್ 5 ಯುವ ಆಟಗಾರರು

    ಜೈಪುರ: 2019ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ಭಾರತೀಯ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಲಭಿಸಿದ್ದು, ಟೂರ್ನಿಯ 8 ತಂಡಗಳು ಹೊಸ ಮುಖಗಳನ್ನು ಖರೀದಿ ಮಾಡುವ ಮೂಲಕ ತಂಡದ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡಿವೆ.

    ಹರಾಜು ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾ ಪರ ಇದುವರೆಗೂ ಆಡದ ಆಟಗಾರರು ಕೂಡ ಹೆಚ್ಚಿನ ಮೊತ್ತವನ್ನು ಪಡೆದಿದ್ದಾರೆ. ಇದರಲ್ಲಿ ತಮಿಳುನಾಡಿನ ವರುಣ್ ಚಕ್ರವರ್ತಿ ಮೊದಲ ಸ್ಥಾನದಲ್ಲಿದ್ದು, ಪಂಜಾಬ್ ತಂಡ 8.4 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಉಳಿದಂತೆ ಟಾಪ್ 5 ಆಟಗಾರರ ಪಟ್ಟಿ ಇಂತಿದೆ.

    ವರುಣ್ ಚಕ್ರವರ್ತಿ – 8.4 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
    ತಮಿಳುನಾಡಿನ ಸ್ಪಿನ್ನರ್ ವರುಣ್ ಚಕ್ರವರ್ತಿ ಈ ಬಾರಿ ಹೆಚ್ಚು ಮೊತ್ತ ಗಳಿಸಿದ ಆಟಗಾರರಾಗಿದ್ದು, ಈ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಪಂಜಾಬ್, ಕೋಲ್ಕತ್ತಾ ಹಾಗೂ ಚೆನ್ನೈ ತಂಡಗಳ ನಡುವೆ ಉಂಟಾದ ಪೈಪೋಟಿಯಿಂದ ವರುಣ್ ಹೆಚ್ಚಿನ ಮೊತ್ತಕ್ಕೆ  ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ  ಖರೀದಿ ಮಾಡಿದೆ.

    ಶಿವಂ ದುಬೆ – 5 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
    ಮಹಾರಾಷ್ಟ್ರ ತಂಡದ ಆಲ್‍ರೌಂಡರ್ ಆಗಿರುವ ಶಿವಂ ದುವೆ ಹರಾಜು ಪ್ರಕ್ರಿಯೆ ಮುನ್ನವೇ ಚರ್ಚೆಗೆ ಕಾರಣರಾಗಿದ್ದರು. ಏಕೆಂದರೆ ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ದುಬೆ, 489 ರನ್ ಗಳಿಸಿ 17 ವಿಕೆಟ್ ಕೂಡ ಪಡೆದಿದ್ದರು. ಅಲ್ಲದೇ ಎಲ್ಲಾ ಐಪಿಎಲ್ ತಂಡಗಳು ದುಬೆರನ್ನು ಖರೀದಿ ಮಾಡಲು ಉತ್ಸಾಹ ತೋರಿತ್ತು. ಅಂತಿಮವಾಗಿ ಆರ್‌ಸಿಬಿ ತಂಡ 5 ಕೋಟಿ ರೂ. ನೀಡಿ ಅವರನ್ನು ಖರೀದಿ ಮಾಡಿದೆ.

    ಪ್ರಭಾಸಿಮ್ರನ್ ಸಿಂಗ್ – 4.8 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
    ಪೂರ್ವ ನಿಗದಿ ಎಂಬಂತೆ ಹರಾಜು ಪ್ರಕ್ರಿಯೆ ವೇಳೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರಭಾಸಿಮ್ರನ್ ಸಿಂಗ್‍ರನ್ನು ಖರೀದಿ ಮಾಡಿದೆ. 4.8 ಕೋಟಿ ರೂ. ಮೊತ್ತಕ್ಕೆ ಪಂಜಾಬ್ ತಂಡ ಪ್ರಭಾಸಿಮ್ರನ್‍ರನ್ನು ಖರೀದಿ ಮಾಡಿದ್ದು, ಈ ಮೂಲಕ ಎಲ್ಲ ಫ್ರಾಂಚೈಸಿಗಳಿಗೂ ಹೆಚ್ಚು ಪೈಪೋಟಿ ನೀಡಿತು. ವಿಕೆಟ್ ಕೀಪರ್ ಹಾಗು ಬ್ಯಾಟ್ಸ್ ಮನ್ ಆಗಿರುವ ಪ್ರಭಾಸಿಮ್ರನ್ ಅಂಡರ್ 23 ಟೂರ್ನಿಯ ಪಂದ್ಯದಲ್ಲಿ ಇತ್ತೀಚೆಗಷ್ಟೇ 298 ರನ್ ಸಿಡಿಸಿ ಮಿಂಚಿದ್ದರು. ಅಲ್ಲದೇ 2017-18ರ ಕೂಚ್ ಬಿಹಾರ್ ಟ್ರೋಫಿಯಲ್ಲಿ ಪಂಜಾಬ್ ಪರ 547 ರನ್ ಗಳಿಸಿದ್ದರು.

    ಅಕ್ಷದೀಪ್ ನಾಥ್ – 3.6 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
    ಉತ್ತರ ಪ್ರದೇಶದ ಆಲ್‍ರೌಂಡರ್ ಆಗಿರುವ ಅಕ್ಷದೀಪ್ ನಾಥ್ ಯುಪಿಯ ಅಂಡರ್ 19 ತಂಡದ ನಾಯಕರಾಗಿ 2011-12ರಲ್ಲಿ ವಿನೂ ಮಕಂಡ್ ಟ್ರೋಫಿಯಲ್ಲಿ ತಂಡದವನ್ನು ಚಾಂಪಿಯನ್ ಆಗಿಸಿದ್ದರು. 2016 ರಿಂದಲೂ ಐಪಿಎಲ್ ಭಾಗವಾಗಿದ್ದರೂ ಸರಿಯಾದ ಅವಕಾಶಗಳನ್ನು ಪಡೆದಿಲ್ಲ. ಆದರೆ ಈ ಬಾರಿ ಆರ್‌ಸಿಬಿ ತಂಡ ಈ ಬಾರಿ 3.6 ಕೋಟಿ ರೂ ನೀಡಿ ಅಕ್ಷದೀಪ್ ನಾಥ್ ರನ್ನು ಖರೀದಿ ಮಾಡಿದೆ. ಬಲಗೈ ಮಧ್ಯಮ ವೇಗಿಯಾಗಿರುವ ಅಕ್ಷದೀಪ್ ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕ ಬ್ಯಾಟಿಂಗ್‍ಗೆ ಶಕ್ತಿ ತುಂಬವ ಸಾಮಥ್ರ್ಯ ಹೊಂದಿದ್ದಾರೆ. ಇತ್ತೀಚೆಗೆ ಅಂತ್ಯವಾದ ರಣಜಿ ಟ್ರೋಫಿಯಲ್ಲಿ ಅಕ್ಷದೀಪ್ ಹ್ಯಾಟ್ರಿಕ್ ಶತಕ ಸಿಡಿಸಿ ಮಿಂಚಿದ್ದರು.

    ಪ್ರಯಾಸ್ ರೇ ಬರ್ಮನ್ – 1.5 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
    ಬೆಂಗಾಲ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ಪ್ರಯಾಸ್ ಕೇವಲ 16 ವರ್ಷದ ವಯಸ್ಸಿನವರಾಗಿದ್ದು, ವಿಜಯ್ ಹಜಾರೆ ಟ್ರೋಪಿಯಲ್ಲಿ 11 ವಿಕೆಟ್ ಪಡೆದು ಮಿಂಚಿದ್ದರು. ಅಲ್ಲದೇ ಜಮ್ಮು ಕಾಶ್ಮೀರದ ವಿರುದ್ಧ 4 ವಿಕೆಟ್ ಪಡೆದು ಶ್ರೇಷ್ಠ ಸಾಧನೆ ಮಾಡಿದ್ದಾರೆ. ಆದರೆ ಈ ಬಾರಿ ಅಚ್ಚರಿ ಎಂಬಂತೆ ಆರ್‌ಸಿಬಿ 1.5 ಕೋಟಿ ರೂ. ನೀಡಿ ಪ್ರಯಾಸ್‍ರನ್ನು ಖರೀದಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಪಿಎಲ್ ಅಚ್ಚರಿ: ಮಿಲಿಯನ್ ಡಾಲರ್ ಬೇಬಿ ವರುಣ್ ಚಕ್ರವರ್ತಿ!

    ಐಪಿಎಲ್ ಅಚ್ಚರಿ: ಮಿಲಿಯನ್ ಡಾಲರ್ ಬೇಬಿ ವರುಣ್ ಚಕ್ರವರ್ತಿ!

    ಜೈಪುರ: 2019ರ ಐಪಿಎಲ್ ಭಾರತೀಯ ಕ್ರಿಕೆಟರ್‍ಗಳ ಪಾಲಿನ ಅತ್ಯುತ್ತಮ ಅವಕಾಶಗಳನ್ನು ತೆರೆದಿಟ್ಟಿದೆ ಎಂದು ಕರೆಯಬಹುದಾಗಿದ್ದು, ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ಹೆಚ್ಚು ಯುವ ಆಟಗಾರು ಕೋಟಿ ಕೋಟಿ ರೂ. ಮೊತ್ತಕ್ಕೆ ಹರಾಜು ಆಗುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

    ಐಪಿಎಲ್ ಅಚ್ಚರಿಯ ಸಾಲಿಗೆ ಸೇರಿದ ಮತ್ತೊಬ್ಬ ಯುವ ಆಟಗಾರ ವರುಣ್ ಚಕ್ರವರ್ತಿ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬರೋಬ್ಬರಿ 8.4 ಕೋಟಿ ರೂ.ಗೆ ಖರೀದಿ ಮಾಡಿದೆ. 27 ವರ್ಷದ ವರುಣ್ ತಮಿಳುನಾಡು ತಂಡದ ಆಟಗಾರರಾಗಿದ್ದು, ಕಳೆದ ವರ್ಷದ ವಿಜಯ್ ಹಜರೆ ಟ್ರೋಫಿ ಹಾಗೂ ಈ ವರ್ಷದ ತಮಿಳುನಾಡು ಪ್ರೀಮಿಯರ್ ಲೀಗ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿ ಸಂತಸ ವ್ಯಕ್ತಪಡಿಸಿರುವ ವರುಣ್ ಚಕ್ರವರ್ತಿ, ಪ್ರೀಮಿಯರ್ ಲೀಗ್ ಬಳಿಕ ನನಗೆ ಹೆಚ್ಚಿನ ಅವಕಾಶಗಳು ಲಭಿಸುವ ಬಗ್ಗೆ ಆತ್ಮವಿಶ್ವಾಸ ಇತ್ತು. ಆದರೆ ಪಂಜಾಬ್ ತಂಡ ಇಷ್ಟು ಮೊತ್ತಕ್ಕೆ ನನ್ನನ್ನು ಪಡೆದುಕೊಳ್ಳುತ್ತದೆ ಎಂಬುವುದನ್ನು ನಾನು ಊಹೆ ಕೂಡ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.

    ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯುತ್ತಮ ಬೌಲರ್ ಎಂದು ಗುರುತಿಸಿಕೊಂಡಿದ್ದ ವರುಣ್, 22 ವಿಕೆಟ್ ಪಡೆಯುವ ಮೂಲಕ 4.23 ಎಕಾನಮಿಯಲ್ಲಿ ಟೂರ್ನಿಯ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದರು. ಅಲ್ಲದೇ ವರುಣ್ 8 ಶೈಲಿಯಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

    ಸದ್ಯ ನಾನು ಐದು ಶೈಲಿಗಳನ್ನು ಮಾತ್ರ ಇದುವರೆಗೂ ಆಟದಲ್ಲಿ ಪ್ರಯೋಗ ಮಾಡಿದ್ದು, ಸ್ಟ್ರೈಟ್, ಇನ್ ಸ್ವಿಂಗ್, ಔಟ್ ಸ್ವಿಂಗ್, ಫ್ಲಿಪರ್, ಝೂಟರ್ ಶೈಲಿಗಳಲ್ಲಿ ಎಸೆದಿದ್ದೇನೆ. ಮತ್ತು ಕೆಲ ಬದಲಾವಣೆಗಳನ್ನು ನನ್ನ ಬೌಲಿಂಗ್‍ನಲ್ಲಿ ಕಾಣಬಹುದು. ಕಳೆದ 2 ವರ್ಷಗಳಲ್ಲಿ ನನ್ನ ಬೌಲಿಂಗ್‍ನಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಸಿಕ್ಕ ಎಲ್ಲಾ ಜವಾಬ್ದಾರಿಗಳನ್ನು ಸಾಮರ್ಥವಾಗಿ ನಿಭಾಯಿಸಿದ್ದಾಗಿ ವರುಣ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪರ ನೆಟ್ ಬೌಲರ್ ಆಗಿಯೂ ವರುಣ್ ಕಾರ್ಯನಿರ್ವಹಿಸಿದ್ದರು. ಹರಾಜು ಪ್ರಕ್ರಿಯೆ ವೇಳೆ ಇತ್ತಂಡಗಳು ಪಂಜಾಬ್ ತಂಡಕ್ಕೆ ಪೈಪೋಟಿ ನೀಡಿದ ಕಾರಣ ವರುಣ್ ಕೋಟಿ ಕೋಟಿ ರೂ. ಹಣಗಳಿಸಲು ಕಾರಣವಾಯಿತು.

    ಆರ್ ಅಶ್ವಿನ್ ಮುಂದಾಳತ್ವದ ಪಂಜಾಬ್ ಅಂತಿಮವಾಗಿ ವರುಣ್‍ರನ್ನು ಪಡೆಯಲು ಸಫಲವಾಯಿತು. 1991 ರಲ್ಲಿ ಜನಿಸಿರುವ ವರುಣ್ 9 ಲಿಸ್ಟ್ `ಎ’ ಪಂದ್ಯಗಳನ್ನು ಆಡಿದ್ದು, 22 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಏಕೈಕ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ 1 ವಿಕೆಟ್ ಪಡೆದಿದ್ದಾರೆ. ಅಂದಹಾಗೇ ಈ ಬಾರಿ ಪಂಜಾಬ್ ಪರ ದುಬಾರಿ ಪ್ಲೇಯರ್ ಕೂಡ ಆಗಿದ್ದಾರೆ.

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 16ನೇ ವರ್ಷಕ್ಕೆ ಕೋಟ್ಯಾಧಿಪತಿಯಾದ ಪ್ರಯಾಸ್ – ಆರ್‌ಸಿಬಿ ಖರೀದಿ ಮಾಡಿದ್ದು ಯಾಕೆ?

    16ನೇ ವರ್ಷಕ್ಕೆ ಕೋಟ್ಯಾಧಿಪತಿಯಾದ ಪ್ರಯಾಸ್ – ಆರ್‌ಸಿಬಿ ಖರೀದಿ ಮಾಡಿದ್ದು ಯಾಕೆ?

    ಜೈಪುರ: 2019ರ ಐಪಿಎಲ್ ಆವೃತ್ತಿಯಲ್ಲಿ ಭಾರತದ ಯುವ ಆಟಗಾರರು ಹೆಚ್ಚಿನ ಅವಕಾಶಗಳನ್ನು ಪಡೆದಿದ್ದು, 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ 16 ವರ್ಷದ ಪ್ರಯಾಸ್ ರೇ ಬರ್ಮನ್ ಬರೋಬ್ಬರಿ 1.5 ಕೋಟಿ ರೂ.ಗೆ ಹರಾಜು ಆಗುವ ಮೂಲಕ ದಾಖಲೆ ಬರೆದಿದ್ದಾರೆ.

    ಬೆಂಗಾಲ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ಪ್ರಯಾಸ್ 16 ವರ್ಷಕ್ಕೆ ಕೋಟಿ ರೂ. ಮೊತ್ತಕ್ಕೆ ಹರಾಜದ ಹೆಗ್ಗಳಿಕೆಯನ್ನು ಪಡೆದಿದ್ದು, ಆರ್‌ಸಿಬಿ ತಂಡ ಪ್ರಯಾಸ್ ಅವರನ್ನು ಖರೀದಿಸಿದೆ. ಕೇವಲ ಪ್ರಯಾಸ್ ಮಾತ್ರವಲ್ಲದೇ ಹಲವು ಯುವ ಭಾರತೀಯ ಆಟಗಾರರಿಗೆ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಹಲವು ಅಚ್ಚರಿ ಫಲಿತಾಂಶಗಳನ್ನು ನೀಡಿದೆ.

    ಯುವ ಆಟಗಾರ ಕೊಹ್ಲಿ ನಾಯಕತ್ವದ ತಂಡಕ್ಕೆ ಆಗುವ ಮೂಲಕ ತನ್ನ ಸಾಮರ್ಥ್ಯವನ್ನ ಸಾಬೀತು ಪಡಿಸಲು ಉತ್ತಮ ಅವಕಾಶವನ್ನು ಪಡೆದಿದ್ದು, `ಮಿಸ್ಟರಿ’ ಸ್ಪಿನ್ನರ್ ಎಂಬ ಹೆಸರು ಪಡೆದಿರುವ ಪ್ರಯಾಸ್ 20 ರನ್ ನೀಡಿ 4 ವಿಕೆಟ್ ಪಡೆದಿರುವುದು ಇದೂವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ. 2002 ರಲ್ಲಿ ಜನಿಸಿರುವ ಪ್ರಯಾಸ್ ಬೌಲರ್ ಮಾತ್ರವಲ್ಲದೇ ಉತ್ತಮ ಆಲ್‍ರೌಂಡರ್ ಆಗಿದ್ದು, ಬಲಗೈ ಬ್ಯಾಟ್ಸ್ ಮನ್ ಕೂಡ ಆಗಿದ್ದಾರೆ.

    ಇದುವರೆಗೂ ಆಡಿರುವ 9 ಲಿಸ್ಟ್ ಪಂದ್ಯಗಳನ್ನು ಆಡಿರುವ ಪ್ರಯಾಸ್ 6 ಇನ್ನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ನಡೆಸಿ 47 ರನ್ ಗಳಿಸಿದ್ದರೆ ಹಾಗೂ ಬೌಲಿಂಗ್‍ನಲ್ಲಿ 11 ವಿಕೆಟ್ ಪಡೆದಿದ್ದಾರೆ. ಉಳಿದಂತೆ ವಿಜಯ್ ಹಜಾರೆ ಟೂರ್ನಿಯಲ್ಲಿ ಉತ್ತಮ ಎಕಾನಮಿಯೊಂದಿಗೆ 11 ವಿಕೆಟ್ ಪಡೆದುಕೊಂಡಿದ್ದಾರೆ. ಮೊದಲು ದೆಹಲಿ ತಂಡದ ಪರ ಆಡಿದ್ದ ಪ್ರಯಾಸ್ ಬಳಿಕ ಬೆಂಗಾಲ್ ತಂಡವನ್ನು ಸೇರಿಕೊಂಡಿದ್ದರು.

    ರಾತ್ರೋರಾತ್ರಿ ದೇಶಾದ್ಯಂತ ಸುದ್ದಿಯಾಗಿರುವ ಪ್ರಯಾಸ್ ಕೆಲ ದಿನಗಳ ಹಿಂದೆ ಟೀಂ ಇಂಡಿಯಾ ನಾಯಕ ಕೊಹ್ಲಿ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹವಣಿಸುತ್ತದ್ದರು. ಆದರೆ ಇಂದು ಕೊಹ್ಲಿ ನಾಯಕತ್ವದ ತಂಡದಲ್ಲಿ ಸ್ಥಾನಗಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಯಾಸ್ ಆಯ್ಕೆಯ ಕುರಿತು ಭಾರೀ ಚರ್ಚೆ ಕೂಡ ನಡೆದಿದ್ದು, ಪ್ರಯಾಸ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಪಿಎಲ್ ಹರಾಜು: ಯುವರಾಜ್ ಸಿಂಗ್ ಹಿಂದಿಕ್ಕಿದ ಜಯದೇವ್ ಉನದ್ಕತ್!

    ಐಪಿಎಲ್ ಹರಾಜು: ಯುವರಾಜ್ ಸಿಂಗ್ ಹಿಂದಿಕ್ಕಿದ ಜಯದೇವ್ ಉನದ್ಕತ್!

    ಜೈಪುರ: ಐಪಿಎಲ್ 12ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಕೆಲ ದಿನಗಳಷ್ಟೇ ಬಾಕಿ ಇದ್ದು, 2018ರ ಟೂರ್ನಿಯ ಬಳಿಕ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ಯುವರಾಜ್ ಸಿಂಗ್ 1 ಕೋಟಿ ರೂ. ಮೂಲ ಬೆಲೆ ಹೊಂದಿದ್ದು, ಟೀಂ ಇಂಡಿಯಾದ ಯುವ ಆಟಗಾರ ಜಯದೇವ್ ಉನದ್ಕತ್ 1.5 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    2018ರ ಹರಾಜಿನಲ್ಲಿ 11.5 ಕೋಟಿ ರೂ. ಗೆ ಹರಾಜು ಆಗುವ ಮೂಲಕ ಅಚ್ಚರಿ ಮೂಡಿಸಿದ್ದ ಜಯದೇವ್‍ರನ್ನು ರಾಜಸ್ಥಾನ್ ರಾಯಲ್ಸ್ ತಂಡ ಖರೀದಿ ಮಾಡಿತ್ತು. ಮೂಲಗಳ ಪ್ರಕಾರ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಜಯದೇವ್ ಅವರ ಮೂಲ ಬೆಲೆ 2 ಕೋಟಿ ರೂ.ಗೆ ಹೆಚ್ಚಳವಾಗುವ ನಿರೀಕ್ಷೆ ಇದೆ.

    ಇತ್ತ ಫಿಟ್‍ನೆಸ್ ಹಾಗೂ ಬ್ಯಾಟಿಂಗ್ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಯುವರಾಜ್ ರೊಂದಿಗೆ ಬೌಲರ್ ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ವೃದ್ಧಿಮಾನ್ ಸಹಾ ಕೂಡ 1 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ. ಇದರೊಂದಿಗೆ ವಿದೇಶಿ ಆಟಗಾರರಾದ ಸ್ಯಾಮ್ ಕರ್ರನ್, ಕೋರೆ ಆ್ಯಂಡರ್ ಸನ್, ಕಾಲಿನ್ ಇಂಗ್ರಾಮ್, ಲಸಿತ್ ಮಾಲಿಂಗ, ಶಾನ್ ಮಾರ್ಷ್, ಏಂಜೆಲೋ ಮ್ಯಾಥ್ಯೂಸ್, ಬ್ರೆಂಡನ್ ಮೆಕಲಮ್, ಡಾರ್ಚಿ ಶಾರ್ಟ್, ಕ್ರಿಸ್ ವೋಕ್ಸ್ 2 ಕೋಟಿ ರೂ. ಕ್ಲಬ್ ನಲ್ಲಿ ಕಾಣಿಸಿಕೊಂಡಿದ್ದಾರೆ.

    ಐಪಿಎಲ್ ಆಟಗಾರರ ಹರಾಜಿನ ಕುರಿತು ಈಗಾಗಲೇ ಬಿಸಿಸಿಐ ಮಾಹಿತಿ ನೀಡಿದ್ದು, ಈ ಬಾರಿಯ ಹರಾಜಿಗೆ ಇದುವರೆಗೂ 1 ಸಾವಿರ ನೋಂದಣಿಗಳಾಗಿದೆ ಎಂದು ತಿಳಿಸಿದೆ. ಐಪಿಎಲ್ ಅಧಿಕೃತ ಟ್ವಿಟ್ಟರಿನಲ್ಲಿ ನೀಡಿರುವ ಮಾಹಿತಿಯಂತೆ ಈ ಬಾರಿ 1,003 ಆಟಗಾರರು ಹರಾಜಿನಲ್ಲಿ ಭಾಗವಹಿಸಿಲಿದ್ದಾರೆ. ಇದರಲ್ಲಿ 232 ವಿದೇಶಿ ಆಟಗಾರರು ಒಳಗೊಂಡಿದ್ದು, 8 ತಂಡಗಳ ಫ್ರಾಂಚೈಸಿಗಳು ಒಟ್ಟು 145.25 ಕೋಟಿ ರೂ. ಮೊತ್ತದಲ್ಲಿ ಆಟಗಾರರನ್ನು ಖರೀದಿ ಮಾಡಲಿದ್ದಾರೆ.

    ಉಳಿದಂತೆ ಈ ಬಾರಿಯ ಐಪಿಎಲ್ ನಲ್ಲಿ ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್ ವೆಲ್, ಆರೋನ್ ಫಿಂಚ್ ಭಾಗವಹಿಸುವುದು ಅನುಮಾನವಾಗಿದೆ. ಈಗಾಗಲೇ ಬಿಡುವಿಲ್ಲದ ಕ್ರಿಕೆಟ್ ಸರಣಿಗಳಲ್ಲಿ ಆಸ್ಟ್ರೇಲಿಯಾ ತಂಡ ಭಾಗವಹಿಸುತ್ತಿದ್ದು, ಮುಂದಿನ ವಿಶ್ವಕಪ್ ಟೂರ್ನಿಯ ಉದ್ದೇಶದಿಂದ ಐಪಿಎಲ್‍ನಲ್ಲಿ ಭಾಗವಹಿಸಿದಿರಲು ಕ್ರಿಕೆಟ್ ಆಸ್ಟ್ರೇಲಿಯಾ ಆಟಗಾರರಿಗೆ ಸಲಹೆ ನೀಡಿದೆ.

    ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲ್ ನಲ್ಲಿ ನಡೆಯುತ್ತಿದ್ದ ಐಪಿಎಲ್ ಹರಾಜು ಈ ಬಾರಿ ಡಿಸೆಂಬರ್ 18 ರಂದು ಜೈಪುರದಲ್ಲಿ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2019 ಐಪಿಎಲ್: ಅಂತ್ಯವಾಗುತ್ತಾ ಈ ಐದು ಆಟಗಾರರ ಐಪಿಎಲ್ ಭವಿಷ್ಯ?

    2019 ಐಪಿಎಲ್: ಅಂತ್ಯವಾಗುತ್ತಾ ಈ ಐದು ಆಟಗಾರರ ಐಪಿಎಲ್ ಭವಿಷ್ಯ?

    ಮುಂಬೈ: 2019ರ ಐಪಿಎಲ್ ಟೂರ್ನಿಗೆ ಸಿದ್ಧತೆ ನಡೆಸಿರುವ ತಂಡದ ಫ್ರಾಂಚೈಸಿಗಳು ತಮ್ಮ ತಂಡಗಳಲ್ಲಿ ಉಳಿಸಿಕೊಂಡಿರುವ 10 ಆಟಗಾರರ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೆಲ ಸ್ಟಾರ್ ಆಟಗಾರರು ಇದ್ದು, 2019ನೇ ಆವೃತ್ತಿಯೊಂದಿಗೆ ಅವರ ಐಪಿಎಲ್ ಕ್ರಿಕೆಟ್ ಭವಿಷ್ಯ ಅಂತ್ಯವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    ತಂಡಗಳ ಮ್ಯಾನೇಜ್‍ಮೆಂಟ್ ಉತ್ತಮ ತಂಡದ ಕಾಂಬಿನೇಷನ್ ಆಯ್ಕೆ ಮಾಡಿಕೊಳ್ಳಲು ಇನ್ನು 1 ತಿಂಗಳು ಕಾಲ ಸಮಯಾವಕಾಶವಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡ ಹೆಚ್ಚಿನ ಬದಲಾವಣೆ ಮಾಡದೇ ತಂಡವನ್ನು ಉಳಿಸಿಕೊಂಡಿದೆ.

    ಇತ್ತ ಕಳೆದ ಬಾರಿ ರಾಜಸ್ಥಾನ ತಂಡದ ಪರ 11.9 ಕೋಟಿ ರೂ.ಗೆ ಹರಾಜು ಆಗಿದ್ದ ಜಯದೇವ್ ಉನದ್ಕತ್, ಅನುಭವಿ ಆಟಗಾರ ಗೌತಮ್ ಗಂಭೀರ್, ಮ್ಯಾಕ್ಸ್‍ವೆಲ್, ವೃದ್ಧಿಮಾನ್ ಸಹಾ, ಮೆಕಲಮ್, ಅರೋನ್ ಫಿಂಚ್, ಅಕ್ಷರ್ ಪಟೇಲ್, ಯುವರಾಜ್ ಸಿಂಗ್, ವಿನಯ್ ಕುಮಾರ್, ಕ್ರಿಸ್ ವೋಕ್ಸ್ ಸೇರಿ 50 ಆಟಗಾರರನ್ನು ತಂಡಗಳು ಕೈಬಿಟ್ಟಿದೆ.

    ಪ್ರಮುಖವಾಗಿ 36 ವರ್ಷದ ಯುವರಾಜ್ ಸಿಂಗ್ ಅವರಿಗೆ ಈ ಐಪಿಎಲ್ ಮಹತ್ವದಾಗಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಿಂಚಿದ್ದ ಯುವಿ ಐಪಿಎಲ್‍ನಲ್ಲಿ ವಿಫಲರಾಗಿದ್ದಾರೆ. ಇದುವರೆಗೂ 128 ಐಪಿಎಲ್ ಪಂದ್ಯವಾಡಿರುವ ಯುವಿ 24.78 ಸರಾಸರಿಯಲ್ಲಿ 2,652 ರನ್ ಗಳಿಸಿದ್ದಾರೆ. ಸದ್ಯ ಯುವಿ ಅವರಿಂದ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ನಿರೀಕ್ಷೆ ಮಾಡುವುದು ಕಷ್ಟಸಾಧ್ಯವಾಗಿದೆ. ಇದುವರೆಗೂ ಯುವಿ ಪಂಜಾಬ್, ಪುಣೆ, ಆರ್‍ಸಿಬಿ, ಡೆಲ್ಲಿ, ಹಾಗೂ ಹೈದರಾಬಾದ್ ತಂಡಗಳಲ್ಲಿ ಆಡಿದ್ದಾರೆ.

    ಉಳಿದಂತೆ ಕನ್ನಡಿಗ ವಿನಯ್ ಕುಮಾರ್ ದೇಶಿಯ ಕ್ರಿಕೆಟ್‍ನಲ್ಲಿ ಮಿಂಚಿದ್ದರು, ಅಂತರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿಲು ವಿಫಲರಾಗಿದ್ದಾರೆ. 34 ವರ್ಷದ ವಿನಯ್ ಕಳೆದ ಐಪಿಎಲ್ ನಲ್ಲಿ ಕೇವಲ 6 ಪಂದ್ಯಗಳನ್ನು ಆಡಿದ್ದು, 10.5 ಓವರ್ ಗಳನ್ನು ಬೌಲ್ ಮಾಡಿದ್ದಾರೆ. ವಿನಯ್ ಇದುವರೆಗೂ ಆರ್‍ಸಿಬಿ, ಕೇರಳ, ಕೆಕೆಆರ್ ಹಾಗೂ ಮುಂಬೈ ಪರ ಆಡಿದ್ದು, 105 ಪಂದ್ಯಗಳಿಂದ 105 ವಿಕೆಟ್ ಪಡೆದಿದ್ದಾರೆ.

    ಇತ್ತ ವಿದೇಶಿ ಆಟಗಾರರಲ್ಲಿ ಜೆಪಿ ಡುಮಿನಿ, ಮಿಚೆಲ್ ಜಾನ್ಸನ್ ಹಾಗೂ ಡೇನಿಯಲ್ ಕ್ರಿಶ್ಚಿಯನ್ ಅವರನ್ನು ಮುಂದಿನ ಆವೃತ್ತಿಗಳಲ್ಲಿ ಕಾಣುವುದು ಕಷ್ಟಸಾಧ್ಯ ಎನ್ನಬಹುದು. ಮಿಚೆಲ್ ಜಾನ್ಸನ್ ಆರಂಭಿಕ ಆವೃತ್ತಿಗಳಲ್ಲಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು, ಆದರೆ ಕಳೆದ ಆವೃತ್ತಿಯಲ್ಲಿ ಕೆಕೆಆರ್ ಪರ 6 ಪಂದ್ಯಗಳಿಂದ ಕೇವಲ 2 ವಿಕೆಟ್ ಪಡೆದಿದ್ದು, ಪ್ರತಿ ಓವರಿನಲ್ಲಿ ಸರಾಸರಿ 10 ರನ್ ನೀಡಿ ದುಬಾರಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬೆಂಗ್ಳೂರಿನಿಂದ ಐಪಿಎಲ್ ಹರಾಜು ಪ್ರಕ್ರಿಯೆ ಶಿಫ್ಟ್

    ಬೆಂಗ್ಳೂರಿನಿಂದ ಐಪಿಎಲ್ ಹರಾಜು ಪ್ರಕ್ರಿಯೆ ಶಿಫ್ಟ್

    ಮುಂಬೈ: ಐಪಿಎಲ್ 12ನೇ ಆವೃತ್ತಿಗೆ ಬಿಸಿಸಿಐ ಸಿದ್ಧತೆ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಟೂರ್ನಿಯ ದಿನಾಂಕ ನಿಗದಿ ಮುನ್ನವೇ ಆಟಗಾರರ ಹರಾಜು ದಿನಾಂಕವನ್ನು ಬಿಸಿಸಿಐ ಘೋಷಣೆ ಮಾಡಿದೆ.

    ಡಿ.17 ಮತ್ತು 18 ರಂದು ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲಿನಲ್ಲಿ ನಡೆಯುತ್ತಿದ್ದ ಹರಾಜು ಪ್ರಕ್ರಿಯೆಯನ್ನು ಜೈಪುರಕ್ಕೆ ಶಿಫ್ಟ್ ಮಾಡಲಾಗಿದೆ. 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಬಿಸಿಸಿಐ ಐಪಿಎಲ್ ಆವೃತ್ತಿಯನ್ನು ಯುಎಇ ಅಥವಾ ದಕ್ಷಿಣ ಆಫ್ರಿಕಾದಲ್ಲಿ ನಡೆಸುವ ಚಿಂತನೆ ಮಾಡಲಾಗಿದೆ. ಈ ಕಾರಣದಿಂದಲೇ ಮೊದಲು ಹರಾಜು ದಿನಾಂಕವನ್ನು ಪ್ರಕಟ ಮಾಡಿದೆ ಎನ್ನಲಾಗಿದೆ.

    ಬಿಸಿಸಿಐ ಈ ತೀರ್ಮಾನಕ್ಕೆ ಕೆಲ ಫ್ರಾಂಚೈಸಿಗಳು ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದ್ದು, ಐಪಿಎಲ್ ಆವೃತ್ತಿ ದಿನಾಂಕ ಪ್ರಕಟಿಸಿದ ಬಳಿಕ ಆಟಗಾರರ ಹರಾಜು ಪ್ರಕ್ರಿಯೆ ನಡೆದರೆ ಉತ್ತಮ. ಇದರಿಂದ ಆಟಗಾರರ ಆಯ್ಕೆಗೆ ಅನುಕೂಲ ಆಗಲಿದೆ ಎಂದು ಕೆಲ ಫ್ರಾಂಚೈಸಿಗಳು ತಿಳಿಸಿದ್ದಾಗಿ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

    ಈ ಹಿಂದೆ 2014ರ ಲೋಕಸಭಾ ಚುನಾವಣೆಯ ವೇಳೆಯೂ ಭಾರತದಿಂದ ದಕ್ಷಿಣ ಆಫ್ರಿಕಾಗೆ ಐಪಿಎಲ್ ಶಿಫ್ಟ್ ಮಾಡಲಾಗಿತ್ತು. ಚುನಾವಣೆಯ ವೇಳೆ ಕ್ರೀಡಾಂಗಣದ ಬಳಿ ಹೆಚ್ಚಿನ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಬಿಸಿಸಿಐ ಸಮಿತಿಗೆ ತಿಳಿಸಿತ್ತು. ಕಳೆದ ಬಾರಿ ಚಾಂಪಿಯನ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದು, 2016 ಮತ್ತು 2017 ಆವೃತ್ತಿಗಳ ವೇಳೆ ವಿಧಿಸಲಾಗಿದ್ದ ನಿಷೇಧದ ಬಳಿಕವೂ ಚೆನ್ನೈ ಭರ್ಜರಿ ಕಮ್ ಬ್ಯಾಕ್ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ರೈತರು ಅಡವಿಟ್ಟ ಒಡವೆ ಹರಾಜು – ಕೆನರಾ ಬ್ಯಾಂಕ್‍ನಿಂದ ಬಹಿರಂಗ ನೋಟಿಸ್

    ರೈತರು ಅಡವಿಟ್ಟ ಒಡವೆ ಹರಾಜು – ಕೆನರಾ ಬ್ಯಾಂಕ್‍ನಿಂದ ಬಹಿರಂಗ ನೋಟಿಸ್

    ಮಂಡ್ಯ: ಜಿಲ್ಲೆಯ ತಳಗವಾದಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ನಿಂದ ರೈತರಿಗೆ ಅಡವಿಟ್ಟ ಒಡವೆಗಳನ್ನು ಹರಾಜು ಹಾಕಲಾಗುವುದು ಎಂದು ನೋಟಿಸ್ ಕಳುಹಿಸಲಾಗಿದೆ.

    2011 ರಿಂದ 2016 ರವರೆಗೆ ಒಡವೆ ಅಡವಿಟ್ಟ ಗ್ರಾಹಕರು ಅಸಲು, ಬಡ್ಡಿ ಪಾವತಿಸದೆ ಸುಸ್ತಿದಾರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 28-08-18 ರಂದು ಒಡವೆಗಳನ್ನು ಹರಾಜು ಹಾಕಲಾಗುತ್ತದೆ ಎಂದು ಕೆನರಾ ಬ್ಯಾಂಕ್ ತನ್ನ ನೋಟಿಸ್ ನಲ್ಲಿ ತಿಳಿಸಿದೆ. ಈ ಸಂಬಂಧ ತಳಗವಾದಿ ಗ್ರಾಮದ ಹಲವೆಡೆ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಅಂಟಿಸಿದ್ದಾರೆ.

    ಸತತ ಬರಗಾಲದಿಂದ ಬಿತ್ತನೆ ಕಾರ್ಯಕ್ಕಾಗಿ ಒಡವೆಗಳನ್ನು ಅಡವಿಟ್ಟು ಸಾಲ ಪಡೆಯಲಾಗಿತ್ತು. ಈ ವರ್ಷ ಚೆನ್ನಾಗಿ ಮಳೆಯಾಗಿದ್ದು, ಸಾಲ ತೀರಿಸಿ ಒಡವೆ ಬಿಡಿಸಿಕೊಳ್ಳೋಣ ಎಂದು ಯೋಚಿಸಲಾಗಿತ್ತು. ಒಂದು ಬ್ಯಾಂಕ್ ನಮ್ಮ ಒಡವೆಗಳನ್ನು ಹರಾಜು ಹಾಕಿದ್ರೆ ವಿಷ ಕುಡಿಯದೇ ಬೇರೆ ಮಾರ್ಗ ನಮ್ಮ ಮುಂದಿಲ್ಲ ಎಂದು ನೋಟಿಸ್ ಪಡೆದಿರುವ ರೈತರು ಅಳಲು ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv