Tag: auction

  • ಐಪಿಎಲ್‌ ಬಿಡ್‌ –  ಬಿಕರಿಯಾಗದ ಟಾಪ್‌ ಆಟಗಾರರು

    ಐಪಿಎಲ್‌ ಬಿಡ್‌ – ಬಿಕರಿಯಾಗದ ಟಾಪ್‌ ಆಟಗಾರರು

    ವಚೆನ್ನೈ: ಐಪಿಎಲ್‌ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಕ್ರಿಸ್‌ ಮೋರಿಸ್‌ ದುಬಾರಿ ಬೆಲೆಗೆ ಬಿಡ್‌ ಆಗಿದ್ದರೆ ಹಲವು ತಾರಾ ಆಟಗಾರರು ಬಿಕರಿ ಆಗಲಿಲ್ಲ.

    ಇಂಗ್ಲೆಂಡಿನ ಜೇಸನ್‌ ರಾಯ್, ಅಲೆಕ್ಸ್‌ ಹೇಲ್ಸ್‌, ಆದಿಲ್‌ ರಶೀದ್‌,  ಆಸ್ಟ್ರೇಲಿಯಾ ಆರೋನ್‌ ಫಿಂಚ್‌, ನ್ಯೂಜಿಲೆಂಡಿನ ಆಟಗಾರರಾದ ಕೋರೆ ಆಂಡರ್‌ಸನ್‌, ಮಾರ್ಟಿ ಗಪ್ಟಿಲ್‌, ಟಿಮ್‌ ಸೌಥಿ, ವೆಸ್ಟ್‌ ಇಂಡೀಸಿನ ಎವಿನ್‌ ಲೆವಿಸ್‌ ಅವರನ್ನು ಯಾರೂ ಖರೀದಿಸುವ ಮನಸ್ಸು ಮಾಡಲಿಲ್ಲ. ಕಳೆದ ಐಪಿಎಲ್‌ನಲ್ಲಿ ಆರೋನ್‌ ಫಿಂಚ್‌ ಬೆಂಗಳೂರು ಪರ ಆಡಿದ್ದರು. ಆದರೆ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ.

    ಕನ್ನಡಿಗರ ಪೈಕಿ ಕೆ. ಗೌತಮ್‌ 9.25 ಕೋಟಿಗೆ ಚೆನ್ನೈ ತಂಡದ ಪಾಲಾಗಿದ್ದರೆ, ಕರಣ್‌ ನಾಯರ್‌ 50 ಲಕ್ಷಕ್ಕೆ ಕೆಕೆಆರ್‌, ಜೆ. ಸುಚಿತ್‌ 30 ಲಕ್ಷಕ್ಕೆ ಹೈದರಬಾದ್‌, ಕರಿಯಪ್ಪ 20 ಲಕ್ಷಕ್ಕೆ ರಾಜಸ್ಥಾನಕ್ಕೆ ಮಾರಾಟವಾಗಿದ್ದಾರೆ.

    ಈ ಬಾರಿ ಬಿಡ್‌ನಲ್ಲಿ ಆಲ್‌ರೌಂಡರ್‌ ಮತ್ತು ವೇಗದ ಬೌಲರ್‌ಗಳಿಗೆ ಬೇಡಿಕೆ ಇತ್ತು. 2020-21 ಬಿಗ್‌ ಬ್ಯಾಶ್‌ ಲೀಗ್‌ನಲ್ಲಿ ಗರಿಷ್ಟ ವಿಕೆಟ್‌ ಪಡೆದಿದ್ದ ಜಾಯ್‌ ರಿಚರ್ಡ್‌ಸನ್‌ ಅವರನ್ನು ಪಂಜಾಬ್‌ ಕಿಂಗ್ಸ್‌ ಖರೀದಿ ಮಾಡಿದೆ.

    ಕಳೆದ ವರ್ಷ 10 ಕೋಟಿ ರೂ. ನೀಡಿ ಆರ್‌ಸಿಬಿ ಮೋರಿಸ್‌ ಅವರನ್ನು ಖರೀದಿಸಿತ್ತು. ಈ ಬಾರಿ 75 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿಗೆ ನೊಂದಾಯಿಸಿಕೊಂಡಿದ್ದ ಮೋರಿಸ್‌ ಅವರನ್ನು ಖರೀದಿಸಲು ರಾಜಸ್ಥಾನ, ಮುಂಬೈ, ಪಂಜಾಬ್‌ ಪೈಪೋಟಿ ನಡೆಸಿದ್ದವು. ಕೊನೆಗೆ ಮೋರಿಸ್‌ ಅವರನ್ನು 16.25 ಕೋಟಿ ರೂ.ಗೆ ಬಿಡ್‌ ಮಾಡಿ ರಾಜಸ್ಥಾನ ಖರೀದಿಸಿತು.

  • ಸಂಸದರನ್ನ ಹುಬ್ಬಳ್ಳಿಯಲ್ಲಿ  ಹರಾಜು ಹಾಕ್ತೀವಿ ಕೊಳ್ಳುವವರು ಕೊಳ್ಳಬಹುದು: ವಾಟಾಳ್

    ಸಂಸದರನ್ನ ಹುಬ್ಬಳ್ಳಿಯಲ್ಲಿ ಹರಾಜು ಹಾಕ್ತೀವಿ ಕೊಳ್ಳುವವರು ಕೊಳ್ಳಬಹುದು: ವಾಟಾಳ್

    – ಕೋವಿಡ್‍ನಿಂದ ವಿದ್ಯಾರ್ಥಿ, ಶಿಕ್ಷಕ ಸತ್ತರೆ ಒಂದು ಕೋಟಿ ಕೊಡಬೇಕು
    – ಇತ್ತೀಚೆಗೆ ಎಲ್ಲರೂ ಹೆಲಿಕಾಪ್ಟರ್ ರಾಜಕಾರಣಿಗಳಾಗಿದ್ದಾರೆ

    ರಾಯಚೂರು: ಸರ್ಕಾರ ಪ್ರವಾಹ ಪರಸ್ಥಿತಿಯನ್ನು ವೈಮಾನಿಕ ಸಮೀಕ್ಷೆ ಮಾಡಿ ಕೈತೊಳೆದುಕೊಂಡಿದೆ. ಉತ್ತರ ಕರ್ನಾಟಕದ ಜನ ಸಂಕಷ್ಟದಲ್ಲಿದ್ದಾರೆ. ಸರ್ಕಾರಕ್ಕೆ ಮಾನವೀಯತೆಯಿಲ್ಲ ಅಂತ ರಾಯಚೂರಿನಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

    ರಾಯಚೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ವಾಟಾಳ್ ನಾಗರಾಜ್ ಸರ್ಕಾರ ಹಾಗೂ ವಿವಿಧ ಪಕ್ಷಗಳ ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚೆಗೆ ಎಲ್ಲರೂ ಹೆಲಿಕಾಪ್ಟರ್ ರಾಜಕಾರಣಿಗಳಾಗಿದ್ದಾರೆ. ಯಡಿಯೂರಪ್ಪನವರ ಬಳಿ ಹೆಲಿಕಾಪ್ಟರ್ ಇದೆ. ಜೆಡಿಎಸ್, ಕಾಂಗ್ರೆಸ್ಸಿನವರು ಹೆಲಿಕಾಪ್ಟರಿನಲ್ಲೇ ಬರುತ್ತಾರೆ. ಇನ್ನು ಮುಂದೆ ಕಾರಲ್ಲಿ ಕೆಳಗಡೆ ಓಡಾಡಲು ಆಗದ ರೋಗ ಬಂದಿದೆ ಅಂತ ವೈದ್ಯರು ಸರ್ಟಿಫಿಕೇಟ್ ಕೊಡಬೇಕು. ಹೆಲಿಕಾಪ್ಟರಿನಲ್ಲಿ ಓಡಾಡುವವರಿಗಾಗಿ ಈ ಹೊಸ ನಿರ್ಣಯವಾಗಬೇಕಿದೆ ಎಂದರು.

    ಕರ್ನಾಟಕವನ್ನು ಕೇಂದ್ರ ಸರ್ಕಾರ ಗುಲಾಮರ ರೀತಿ ನೋಡುತ್ತಿದೆ. ಪ್ರಧಾನಿ ಮೋದಿ ಎಲ್ಲಾ ಕಡೆ ಹೋಗುತ್ತಾರೆ ಕರ್ನಾಟಕಕ್ಕೆ ಬರಲ್ಲ. ನಮ್ಮ ಎಂಪಿಗಳು ದನಕಾಯುತ್ತಿದ್ದಾರಾ? ಯಾಕೆ ಪ್ರಧಾನಿಯನ್ನು ಕರೆದುಕೊಂಡು ಬರುತ್ತಿಲ್ಲ ಅಂತ ಪ್ರಶ್ನಿಸಿದರು. ಸದಾನಂದಗೌಡ ಸತ್ತರೂ ನಗ್ತಾರೆ, ಬದುಕಿದರೂ ನಗ್ತಾರೆ ಅವರ ನಗುವೆ ಒಂದು ವಿಚಿತ್ರ ಎಂದರು. ಪ್ರವಾಹ ಪೀಡಿತ ಜಿಲ್ಲೆಗಳಿಗೆ 50 ಸಾವಿರ ಕೋಟಿ ಪರಿಹಾರ ನೀಡಬೇಕು ಅಂತ ಆಗ್ರಹಿಸಿದರು. ಅ.29 ರಂದು ಎಂಪಿಗಳನ್ನ ಹುಬ್ಬಳ್ಳಿ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಮುಂದೆ ಹರಾಜು ಹಾಕಿ ಪ್ರತಿಭಟನೆ ಮಾಡುತ್ತೇವೆ. ಕೊಳ್ಳುವವರು ಬಂದು ಕೊಳ್ಳಬಹುದು, ವಿನೂತನ ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸುತ್ತೇವೆ ಎಂದು ತಿಳಿಸಿದರು.

    ಚುನಾವಣೆಯಲ್ಲಿ ನಾನು ಗೆಲ್ಲಲೇ ಬೇಕು ಗೆದ್ದರೆ ವಿಧಾನಪರಿಷತ್ತಿನಲ್ಲಿ ಧ್ವನಿ ಭಾರೀ ಜೋರಾಗುತ್ತೆ ಅಂತ ಶಿಕ್ಷಕರ ಮತಯಾಚಿಸಿದರು. ಪ್ರೌಢಶಾಲಾ ಶಿಕ್ಷಕರಿಗೆ, ಪಿಯು ಉಪನ್ಯಾಸಕರಿಗೆ ಬಡ್ತಿ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಇಟ್ಟುಕೊಂಡು ನವೆಂಬರ್ 1 ರಿಂದ ಒಂದು ವರ್ಷದವರೆಗೆ ಹೋರಾಟ ಮಾಡುವುದಾಗಿ ಹೇಳಿದರು. ಕೊರೊನಾ ಸಮಯದಲ್ಲಿ ಕಾಲೇಜು ತೆರೆಯಲು ನನ್ನ ವಿರೋಧವಿದೆ. ಆನ್‍ಲೈನ್ ಒಂದು ಬೋಗಸ್, ಖಾಸಗಿ ಸಂಸ್ಥೆಗಳ ಹಣ ವಸೂಲಿ ವಿರುದ್ಧ ಹೋರಾಟ ಮಾಡುತ್ತೇವೆ. ಕಾಲೇಜು ಆರಂಭಿಸುವುದು ಬೇಡ ಶೂನ್ಯ ವರ್ಷ ಅಂತ ತೀರ್ಮಾನ ಮಾಡಬೇಕು. ಕೋವಿಡ್‍ನಿಂದ ವಿದ್ಯಾರ್ಥಿ, ಶಿಕ್ಷಕ ಸತ್ತರೆ ಒಂದು ಕೋಟಿ ಕೊಡಬೇಕು ಅಂತ ವಾಟಾಳ್ ನಾಗರಾಜ್ ಒತ್ತಾಯಿಸಿದರು.

  • 2.55 ಕೋಟಿಗೆ ಮಾರಾಟವಾಯ್ತು ಗಾಂಧಿ ಕನ್ನಡಕ – ಏನಿದರ ವಿಶೇಷತೆ?

    2.55 ಕೋಟಿಗೆ ಮಾರಾಟವಾಯ್ತು ಗಾಂಧಿ ಕನ್ನಡಕ – ಏನಿದರ ವಿಶೇಷತೆ?

    ಲಂಡನ್: ಮಹಾತ್ಮ ಗಾಂಧಿಜೀ ಅವರು ಧರಿಸುತ್ತಿದ್ದರು ಎಂದು ಹೇಳಲಾದ ಚಿನ್ನ ಲೇಪಿತ ಕನ್ನಡಕವನ್ನು ಬ್ರಿಟನ್‍ನಲ್ಲಿ 2.55 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ.

    ಕಳೆದ ನಾಲ್ಕು ವಾರದ ಹಿಂದೆ ಈ ಕನ್ನಡ ನಮಗೆ ಸಿಕ್ಕಿದೆ. ಇದನ್ನು ಮಾರಾಟ ಮಾಡಿದವರು, ನಮ್ಮ ತಂದೆಯ ಚಿಕ್ಕಪ್ಪನಿಗೆ ಸ್ವತಃ ಗಾಂಧಿಜೀಯರೆ ಈ ಕನ್ನಡಕವನ್ನು ಗಿಫ್ಟ್ ಆಗಿ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಅಸಾಮಾನ್ಯ ವಸ್ತುವಿಗಾಗಿ ಬಿಡ್ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಈಸ್ಟ್ ಬ್ರಿಸ್ಟಲ್ ಬಿಡ್ ಹೌಸ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದೆ.

    https://www.instagram.com/p/CEKTZfgnCwt/

    ಈ ಕನ್ನಡಕವನ್ನು ಮಾರಾಟ ಮಾಡುವವರು ಕೇವಲ 14 ಲಕ್ಷ ಮೂಲ ಬೆಲೆಯನ್ನು ಇಟ್ಟಿದ್ದರು. ಆದರೆ ಈ ಕನ್ನಡಕ ಹಾರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 2.55 ಕೋಟಿ ರೂ.ಗೆ ಮಾರಾಟವಾಗಿದೆ. ನೈಋತ್ಯ ಇಂಗ್ಲೆಂಡ್‍ನ ದಕ್ಷಿಣ ಗ್ಲೌಸೆಸ್ಟರ್‍ಶೈರ್ ನಲ್ಲಿರುವ ಮ್ಯಾಂಗೋಟ್ಸ್ ಫೀಲ್ಡ್ ನ ಅನಾಮಾಧೇಯ ವೃದ್ಧರೊಬ್ಬರು ಈ ಕನ್ನಡಕವನ್ನು ಖರೀದಿ ಮಾಡಿದ್ದಾರೆ. ಜೊತೆಗೆ ಅವರ ಮಗಳ ಕೈಯಿಂದ ಹಣವನ್ನು ಕೊಡಿಸಿದ್ದಾರೆ ಎಂದು ವರದಿಯಾಗಿದೆ.

    https://www.instagram.com/p/CEKBgSinGtc/

    ಈ ಕನ್ನಡಕವು ಇಂಗ್ಲೆಂಡ್‍ನ ಉದ್ಯಮಿಯೊಬ್ಬರ ಮನೆಯಲ್ಲಿ ಸಿಕ್ಕಿದ್ದು, ಅವರು ಹೇಳಿರುವ ಮಾಹಿತಿ ಪ್ರಕಾರ 1910 ಮತ್ತು 1930ರ ನಡುವೆ ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷ್ ಪೆಟ್ರೋಲಿಯಂನಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಚಿಕ್ಕಪ್ಪನಿಗೆ ಈ ಕನ್ನಡಕವನ್ನು ಸ್ವತಃ ಗಾಂಧಿಜೀಯವರೆ ಕೊಟ್ಟಿದ್ದರು ಎಂದು ಅವರ ತಂದೆ ಉದ್ಯಮಿಗೆ ಹೇಳಿದ್ದರಂತೆ. ಹೀಗಾಗಿ ಇದನ್ನು ಅವರು ಮಾರಾಟ ಮಾಡಿದ್ದಾರೆ ಎಂದು ಈಸ್ಟ್ ಬ್ರಿಸ್ಟಲ್ ಬಿಡ್ ಹೌಸ್ ತಿಳಿಸಿದೆ.

    ಕನ್ನಡಕದ ವಿಶೇಷತೆ:
    ಈ ಕನ್ನಡಕವನ್ನು ಗಾಂಧಿಜೀಯವರು 1920ರಲ್ಲಿ ಬಳಸಿದ್ದು ಎನ್ನಲಾಗಿದೆ. ಇದು ಚಿನ್ನ ಲೇಪಿತ ವೃತ್ತಾಕಾರದ ರಿಮ್ಡ್ ಕನ್ನಡಕವಾಗಿದೆ. ಇದರಲ್ಲಿರುವ ಲೇನ್ಸ್ ದುಬಾರಿ ಬೆಲೆಯಾದ್ದಗಿದ್ದು, ಇದರ ಸುತ್ತ ಚಿನ್ನದ ಲೇಪನದ ತಂತಿಯನ್ನು ಅಳವಡಿಸಲಾಗಿದೆ. ಜೊತೆಗೆ ಇದರಿಲ್ಲಿರುವ ನೋಸ್ ಬಾರ್ ಗಳಲ್ಲೂ ಕೂಡ ಚಿನ್ನದ ಲೇಪಿನವಿದೆ ಎಂದು ಈಸ್ಟ್ ಬ್ರಿಸ್ಟಲ್ ಬಿಡ್ ಹೌಸ್ ಮಾಹಿತಿ ನೀಡಿದೆ.

    ಗಾಂಧಿಜೀಯವರು ಸೌತ್ ಆಫ್ರಿಕಾದಲ್ಲಿ ಇದ್ದ ಸಮಯದಲ್ಲಿ ಇದನ್ನು ಉಡುಗೊರೆಯಾಗಿ ಕೊಟ್ಟಿರಬಹುದು. ಗಾಂಧಿಜೀಯವರು ತಾವು ಉಪಯೋಗಿಸಿದ ಮತ್ತು ತಮಗೆ ಬೇಡವಾದ ವಸ್ತುಗಳನ್ನು ಹಾಳು ಮಾಡದೆ. ಅವುಗಳನ್ನು ತಮ್ಮ ಆಪ್ತರಿಗೆ ಮತ್ತು ತಮಗೆ ಸಹಾಯ ಮಾಡಿದವರೆಗೆ ಉಡುಗೊರೆಯಾಗಿ ನೀಡುತ್ತಿದ್ದರು ಎಂದು ಈಸ್ಟ್ ಬ್ರಿಸ್ಟಲ್ ಬಿಡ್ ಹೌಸ್ ವಿವರಣೆಯಲ್ಲಿ ತಿಳಿಸಿದೆ.

  • ಪುರಾತನ ಕಾಲದ 2 ಲಕ್ಷ ನಾಣ್ಯ ಹರಾಜು ಮಾಡಲು ಮುಂದಾದ ನಾಣ್ಯಶಾಸ್ತ್ರಜ್ಞ

    ಪುರಾತನ ಕಾಲದ 2 ಲಕ್ಷ ನಾಣ್ಯ ಹರಾಜು ಮಾಡಲು ಮುಂದಾದ ನಾಣ್ಯಶಾಸ್ತ್ರಜ್ಞ

    – 20 ವರ್ಷದಿಂದ 8 ಲಕ್ಷ ನಾಣ್ಯ ಸಂಗ್ರಹ
    – ಕೊರೊನಾ ಪರಿಹಾರ ನಿಧಿಗಾಗಿ ಮಾರಾಟ

    ಭುನವೇಶ್ವರ: ಇಡೀ ದೇಶವೇ ಕೊರೊನಾದಿಂದ ತತ್ತರಿಸಿ ಹೋಗಿದೆ. ಇದರಿಂದ ಬಡವರು, ನಿರ್ಗತಿಕರು ಮತ್ತು ಕೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ. ಈಗಾಗಲೇ ಅನೇಕರು ಕೊರೊನಾ ವಿರುದ್ಧ ಹೋರಾಟಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದೀಗ ಒಡಿಶಾದ ಪ್ರಸಿದ್ಧ ನಾಣ್ಯಶಾಸ್ತ್ರಜ್ಞ ಕೊರೊನಾ ಪರಿಹಾರ ನಿಧಿಗೆ ಸಹಾಯ ಮಾಡಲು ತಾವು ಸಂಗ್ರಹಿಸಿರುವ ಪುರಾತನ ನಾಣ್ಯಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ.

    27 ವರ್ಷದ ನಾಣ್ಯಶಾಸ್ತ್ರಜ್ಞ ಡೆಬಿ ಪ್ರಸಾದ್ ಮಂಗರಾಜ್ ನಾಣ್ಯ ಮಾರಾಟ ಮಾಡಲು ಮುಂದಾಗಿದ್ದಾರೆ. ಇವರು ಒಡಿಶಾದಲ್ಲಿ ನಾಣ್ಯಗಳ ಸಂಗ್ರಹದ ಮೂಲಕ ಖ್ಯಾತಿ ಗಳಿಸಿದ್ದಾರೆ. ಚಕ್ರವರ್ತಿಗಳಾದ ಅಶೋಕ, ಚಂದ್ರಗುಪ್ತ ಮೌರ್ಯ ಮತ್ತು ಮರಾಠ ರಾಜ ಶಿವಾಜಿ ಅವರ ಕಾಲಕ್ಕೆ ಸೇರಿದ 8 ಲಕ್ಷಕ್ಕೂ ಹೆಚ್ಚು ಹಳೆಯ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಅದರಲ್ಲಿ ಕನಿಷ್ಠ 2 ಲಕ್ಷ ನಾಣ್ಯವನ್ನು ಹರಾಜು ಮಾಡಲು ನಿರ್ಧರಿಸಿದ್ದಾರೆ.

    ಮಂಗರಾಜ್ ಸುಮಾರು 20 ವರ್ಷಗಳಿಂದ ಪುರಾತನ ನ್ಯಾಣಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದರು. ಆದರೆ ಇದೀಗ ಕೊರೊನಾ ವಿರುದ್ಧ ಹೋರಾಡಲು ಪಿಎಂ ಕೇರ್ಸ್ ನಿಧಿಗೆ ಮತ್ತು ಒಡಿಶಾ ಸರ್ಕಾರದ ಸಿಎಂ ಪರಿಹಾರ ನಿಧಿಗೆ ಹಣ ನೀಡಲು ಮುಂದಾಗಿದ್ದಾರೆ.

    ಈ ಬಗ್ಗೆ ಮಾತನಾಡಿದ ನಾಣ್ಯಶಾಸ್ತ್ರಜ್ಞ, ಪ್ರತಿದಿನ ನಾನು ಮಾಧ್ಯಮಗಳಲ್ಲಿ ಕೊರೊನಾದಿಂದ ಭಾರತ ಮತ್ತು ಇತರ ದೇಶಗಳಲ್ಲಿ ಹೆಚ್ಚುತ್ತಿರುವ ಸಾವುಗಳು ಬಗ್ಗೆ ನೋಡಿದ್ದೇನೆ. ಈಗ ದೇಶ ತುಂಬಾ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಆದ್ದರಿಂದ ನಾನು ಇಂತಹ ಸಮಯದಲ್ಲಿ ಏನಾದರೂ ಮಾಡಬೇಕು ಎಂದು ಯೋಚಿಸಿದೆ. ನಾಣ್ಯಗಳನ್ನು ಮಾರಾಟ ಮಾಡುವ ಆಲೋಚನೆ ನನಗೆ ಎಂದಿಗೂ ಬಂದಿರಲಿಲ್ಲ. ಎಲ್ಲಾ ವರ್ಷಗಳಲ್ಲಿ ನಾಣ್ಯಗಳನ್ನು ನಾನೇ ಖರೀದಿಸಿ ಸಂಗ್ರಹಿಸುತ್ತಿದ್ದೆ. ಆದರೆ ಈಗ ಜನರಿಗೆ ಸಹಾಯ ಮಾಡುವುದಕ್ಕಾಗಿ ನಾನು ಅದನ್ನು ಹರಾಜು ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

    ಮಂಗರಾಜ್ ಈಗ ಮುಂಬೈನಲ್ಲಿರುವ ತಮ್ಮ ಸಹೋದರಿಯೊಂದಿಗೆ ವಾಸಿಸುತ್ತಿದ್ದಾರೆ. ಅವರನ್ನು ನಾಣ್ಯಗಳನ್ನು ಮಾರಾಟ ಮಾಡಲು ಸಂಪರ್ಕಿಸಿದ್ದಾರೆ. ಈಗಾಗಲೇ ನಾಣ್ಯಗಳಿಗೆ ಕೋಟ್ಯಂತರ ರೂಪಾಯಿ ನೀಡಲು ಕೆಲವರು ಮುಂದಾಗಿದ್ದಾರೆ. ಮುಂದಿನ ತಿಂಗಳು ಭುವನೇಶ್ವರದಲ್ಲಿ ಹರಾಜನ್ನು ನಿಗದಿ ಮಾಡಲಾಗಿದೆ. ಆಫ್‍ಲೈನ್‍ನಲ್ಲಿ ಹರಾಜು ನಡೆಯಲಿದೆ.

    ನಾಣ್ಯಗಳು:
    ಚಕ್ರವರ್ತಿಗಳಾದ ಅಶೋಕ, ಚಂದ್ರಗುಪ್ತ ಮೌರ್ಯ, ಗುಪ್ತಾ ರಾಜವಂಶ ಮತ್ತು ಮರಾಠ ರಾಜ ಶಿವಾಜಿಯ ಕಾಲದಿಂದ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೇ ಬ್ರಿಟಿಷ್ ನಾಣ್ಯಗಳ ಪೈಕಿ, ಕಿಂಗ್ ಜಾರ್ಜ್ 5, ಕಿಂಗ್ ಜಾರ್ಜ್ 6 ಮತ್ತು ರಾಣಿ ವಿಕ್ಟೋರಿಯಾ ಆಳ್ವಿಕೆಯಲ್ಲಿ ಹಲವಾರು ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಜೊತೆಗೆ ಅಮೆರಿಕ, ಇಂಗ್ಲೆಂಡ್, ಹಾಂಗ್‍ಕಾಂಗ್, ಬೆಲ್ಜಿಯಂ, ಫ್ರಾನ್ಸ್, ಆಸ್ಟ್ರೇಲಿಯಾ, ಇಟಲಿ, ನೇಪಾಳದ ಲೋಹ ಮತ್ತು ಕಾಗದದ ಕರೆನ್ಸಿಗಳನ್ನು ಸಂಗ್ರಹಿಸಿದ್ದಾರೆ.

    ಸುಮಾರು 20 ವಿವಿಧ ದೇಶಗಳ ನಾಣ್ಯಗಳು ಮತ್ತು ಪ್ಲಾಸ್ಟಿಕ್, ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳಿಂದ ಮಾಡಿದ ನಾಣ್ಯಗಳು ಸಹ ಇವೆ ಎಂದು ಮಂಗರಾಜ್ ತಿಳಿಸಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ಸಹಾಯ ಮಾಡಲು ನಾಣ್ಯಶಾಸ್ತ್ರಜ್ಞ ತಾವು ಸಂಗ್ರಹಿಸಿದ್ದ ಪುರಾತನ ಕಾಲದ ನಾಣ್ಯಗಳನ್ನು ಹರಾಜು ಮಾಡಲು ನಿರ್ಧರಿಸಿದ್ದಾರೆ.

  • ಶಿರಸಿ ಮಾರಿಕಾಂಬ ಜಾತ್ರೆಗೆ ಪೊಲೀಸ್ ಬಿಗಿ ಬಂದೋಬಸ್ತ್ – 1 ಕೋಟಿಗೂ ಹೆಚ್ಚು ಮೊತ್ತಕ್ಕೆ ಹರಾಜಾಯ್ತು ಮಳಿಗೆಗಳು

    ಶಿರಸಿ ಮಾರಿಕಾಂಬ ಜಾತ್ರೆಗೆ ಪೊಲೀಸ್ ಬಿಗಿ ಬಂದೋಬಸ್ತ್ – 1 ಕೋಟಿಗೂ ಹೆಚ್ಚು ಮೊತ್ತಕ್ಕೆ ಹರಾಜಾಯ್ತು ಮಳಿಗೆಗಳು

    ಕಾರವಾರ: ರಾಜ್ಯದ ಶಕ್ತಿ ಪೀಠಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬ ಜಾತ್ರೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಮಾರ್ಚ್ 3ರಿಂದ 11ರ ವರೆಗೆ ಜಾತ್ರೆ ನಡೆಯಲಿದೆ.

    ಪ್ರತಿ ದಿನ ಜಾತ್ರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕಲ್ಪಿಸಲು ಎಲ್ಲಾ ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಶಿರಸಿಯಲ್ಲಿ 400 ಪೊಲೀಸರು, 10 ಸಿಪಿಐ, 3 ಮಂದಿ ಡಿವೈಎಸ್‍ಪಿ, 30 ಪಿಎಸ್‍ಐ, 8 ಡಿಎಆರ್ ತುಕಡಿ, 2 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಿದೆ.

    ಈ ಬಾರಿ ವಾಹನ ಸಂಚಾರ ಸುಗಮವಾಗಲು ಹಾಗೂ ಬರುವ ಭಕ್ತರಿಗೆ ಟ್ರಾಫಿಕ್ ಬಗ್ಗೆ ಮಾಹಿತಿ ನೀಡಲು ಶಿರಸಿ ಪೊಲೀಸ್ ಎಂಬ ವೆಬ್ ಸೈಟ್ ಸಹ ಮಾಡಲಾಗಿದ್ದು, ಇದರ ಮೂಲಕ ಎಲ್ಲಾ ಮಾಹಿತಿಯನ್ನು ಜನರು ಪಡೆಯಬಹುದಾಗಿದೆ. ಜಾತ್ರೆಯಲ್ಲಿ ಮಹಿಳೆಯರ ರಕ್ಷಣೆಗೆ ಒಬವ್ವ ಪಡೆ ಕೂಡ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದು, ಪುಂಡ ಪೋಕರಿಗಳ ಹೆಡೆಮುರಿ ಕಟ್ಟಲು ಸಜ್ಜಾಗಿದೆ. ಜಾತ್ರೆಯಲ್ಲಿ ದ್ರೋಣ್ ಕ್ಯಾಮೆರಾದ ಮೂಲಕವೂ ಹದ್ದಿನ ಕಣ್ಣು ಇಡಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್.ಡಿ ಅವರು ಮಾಧ್ಯಮಗಳಿಗೆ ತಿಳಿಸಿದರು.

    ಹರಾಜಿನಲ್ಲಿ 1 ಕೋಟಿ ರೂ. ದಾಟಿದ ಜಾತ್ರಾ ಹಂಗಾಮಿ ಮಳಿಗೆ
    ರಾಜ್ಯದ ಅತೀ ದೊಡ್ಡ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮಾರಿಕಾಂಬ ದೇವಸ್ಥಾನದಿಂದ ಸುತ್ತಮುತ್ತಲೂ ಹಂಗಾಮಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಿದ್ದು, ಈ ಬಾರಿ ಹಂಗಾಮಿ ವಾಣಿಜ್ಯ ಮಳಿಗೆಗಳು ಒಂದೇ ದಿನದಲ್ಲಿ 1.9 ಕೋಟಿ ರೂ.ಗೆ ಹರಾಜಾಗುವ ಮೂಲಕ ದಾಖಲೆ ನಿರ್ಮಿಸಿದೆ. ಇದಲ್ಲದೇ ಇನ್ನೂ ಮಳಿಗೆಗಳ ಹರಾಜು ಪ್ರಕ್ರಿಯೆಗಳಿದ್ದು, ಕನಿಷ್ಟ ಎರಡು ಕೋಟಿ ರೂ. ದಾಟುವ ನಿರೀಕ್ಷೆಯಿದೆ.

  • ಐಪಿಎಲ್‍ನಲ್ಲಿ ಕೋಟಿ ಬೆಲೆಗೆ ಚಾಲಕ, ಪಾನಿಪುರಿ ಮಾರುವವರ ಮಕ್ಕಳು ಸೇಲ್

    ಐಪಿಎಲ್‍ನಲ್ಲಿ ಕೋಟಿ ಬೆಲೆಗೆ ಚಾಲಕ, ಪಾನಿಪುರಿ ಮಾರುವವರ ಮಕ್ಕಳು ಸೇಲ್

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಹರಾಜು ಪ್ರಕ್ರಿಯೆಯಲ್ಲಿ 17 ವರ್ಷದ ಬ್ಯಾಟ್ಸ್ ಮ್ಯಾನ್ ಯಶಸ್ವಿ ಜಸ್ವಾಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ 2.40 ಕೋಟಿ ಕೊಟ್ಟು ಖರೀದಿ ಮಾಡಿದರೆ ಪ್ರಿಯಮ್ ಗಾರ್ಗ್ ಅವರನ್ನು ಹೈದರಾಬಾದ್ ತಂಡ 1.9 ಕೋಟಿ ರೂ. ನೀಡಿ ಖರೀದಿ ಮಾಡಿದೆ.

    ಗುರುವಾರ ಐಪಿಎಲ್ 13 ನೇ ಆವೃತ್ತಿ ಆಟಗಾರರ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ಆರಂಭವಾಗಿದ್ದು, ತಂಡಗಳು ತಮಗೆ ಬೇಕಾದ ಆಟಗಾರರನ್ನು ಬಿಡ್ ಮಾಡುತ್ತಿವೆ. ಗುರುವಾರ ನಡೆದ ಹರಾಜಿನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ 15.50 ಕೋಟಿಗೆ ಕೆಕೆಆರ್ ತಂಡದ ಪಾಲಾಗಿ ದುಬಾರಿ ಆಟಗಾರನಾಗಿದ್ದಾರೆ. ಈ ಹರಾಜಿನಲ್ಲಿ ನಮ್ಮ ದೇಶೀಯ ಪ್ರತಿಭೆಗಳಿಗೂ ಉತ್ತಮ ಬೆಲೆ ಸಿಕ್ಕಿದ್ದು, ಮಹಾರಾಷ್ಟ್ರದ ಆಟಗಾರ ಯಶಸ್ವಿ ಜಸ್ವಾಲ್ ಮತ್ತು ಭಾರತದ ಅಂಡರ್-19 ತಂಡದ ನಾಯಕ ಪ್ರಿಯಮ್ ಗಾರ್ಗ್ ಹರಾಜಿನಲ್ಲಿ ಮಿಂಚಿದ್ದಾರೆ.

    ಇತ್ತೀಚೆಗೆ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಮಹಾರಾಷ್ಟ್ರದ ಆಟಗಾರ ಯಶಸ್ವಿ ಜಸ್ವಾಲ್ ಅವರನ್ನು ಶಿಲ್ಪ ಶೆಟ್ಟಿ ಮಾಲೀಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಬರೋಬ್ಬರಿ 2.40 ಕೋಟಿ ಕೊಟ್ಟು ಖರೀದಿ ಮಾಡಿದೆ. ಜಸ್ವಾಲ್ ಬಡಕುಟಂಬದ ಹುಡುಗನಾಗಿದ್ದು ಈ ಮೂಲಕ ಮುಂಬೈನ ರಸ್ತೆಬದಿಯಲ್ಲಿ ಪಾನಿಪುರಿ ಮಾರಿ ಮಗನನ್ನು ಕ್ರಿಕೆಟರ್ ಆಗಿ ಮಾಡಿದ ತಂದೆಯ ಪರಿಶ್ರಮಕ್ಕೆ ಬೆಲೆ ಸಿಕ್ಕಂತೆ ಆಗಿದೆ. ಇದನ್ನು ಓದಿ: ಫಿಂಚ್, ಮೋರಿಸ್ ಆರ್‌ಸಿಬಿಗೆ- ದಾಖಲೆ ಬೆಲೆಗೆ ಪ್ಯಾಟ್ ಕಮಿನ್ಸ್ ಸೇಲ್

    ಚಾಲಕನ ಮಗನಿಗೆ ಕೋಟಿ ಬೆಲೆ
    ಭಾರತದ ಅಂಡರ್-19 ತಂಡದ ಕ್ಯಾಪ್ಟನ್ ಆಗಿರುವ ಪ್ರಿಯಮ್ ಗಾರ್ಗ್ ಮೂಲತಃ ಉತ್ತರ ಪ್ರದೇಶದವರು. ಗಾರ್ಗ್ ಅವರ ತಂದೆ ಉತ್ತರ ಪ್ರದೇಶದ ಪರೀಕ್ಷಿತ್ ನಗರದಲ್ಲಿ ಶಾಲಾ ವಾಹನವನ್ನು ಚಾಲಯಿಸುತ್ತಾರೆ. ಆದರೆ ತುಂಬಾ ಕಠಿಣ ಪರಿಸ್ಥಿತಿಯಲ್ಲೂ ಕ್ರಿಕೆಟ್ ಅಭ್ಯಾಸ ಬಿಡದ ಗಾರ್ಗ್ ಭಾರತದ ಅಂಡರ್-19 ತಂಡದ ನಾಯಕನಾಗಿ ಮಿಂಚಿದ್ದರು. ಈಗ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 1.9 ಕೋಟಿ ನೀಡಿ ಖರೀದಿ ಮಾಡಿದೆ.

    ಆರೋನ್ ಪಿಂಚ್, ಮೋರಿಸ್  ಆರ್‌ಸಿಬಿಗೆ
    ಆರ್‌ಸಿಬಿ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮ್ಯಾನ್ ಆರೋನ್ ಫಿಂಚ್ ಅವರನ್ನು 4.40 ಕೋಟಿ ನೀಡಿ ಖರೀದಿ ಮಾಡಿತು. ನಂತರ ಸೌಥ್ ಆಫ್ರಿಕಾದ ಆಲ್‍ರೌಂಡರ್ ಕ್ರಿಸ್ ಮೋರಿಸ್ ಅವರನ್ನು 10 ಕೋಟಿಗೆ ಖರೀದಿ ಮಾಡಿದೆ. ನಂತರ ಕೇನ್ ರಿಚಡ್ರ್ಸನ್ 4.40 ಕೋಟಿ, ಜೊಶುವಾ ಫಲಿಪ್ 20 ಲಕ್ಷ, ಪವನ್ ದೇಶಪಾಂಡೆ 20 ಲಕ್ಷಕ್ಕೆ ಖರೀದಿ ಮಾಡಿದೆ.

  • ಉತ್ತಮ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟುತ್ತೇವೆ – ಕೊಹ್ಲಿ

    ಉತ್ತಮ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟುತ್ತೇವೆ – ಕೊಹ್ಲಿ

    ನವದೆಹಲಿ: ನಾಳೆ ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟುತ್ತೇವೆ ಎಂದು ಆರ್.ಸಿ.ಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

    ನಾಳೆ ಕೋಲ್ಕತ್ತಾದಲ್ಲಿ ಐಪಿಎಲ್ 2020 ರ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ತಂಡಗಳು ತಮಗೆ ಬೇಕಾದ ಆಟಗಾರರು ಬಿಡ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ನಡೆಸಿವೆ. 971 ಮಂದಿಯ ಪಟ್ಟಿಯನ್ನು 332ಕ್ಕೆ ಇಳಿಕೆ ಮಾಡಿ ಐಪಿಎಲ್ ಆಡಳಿತ ಮಂಡಳಿ ಪಟ್ಟಿಯನ್ನು ತಂಡದ ಫ್ರಾಂಚೈಸಿಗಳಿಗೆ ನೀಡಿದೆ. ಈ ಪಟ್ಟಿಯಲ್ಲಿ ಭಾರತದ 19 ಮಂದಿ ಆಟಗಾರರು ಹಾಗೂ ಫ್ರಾಂಚೈಸಿಗಳು ಮನವಿ ಮಾಡಿದ 24 ಮಂದಿ ಕ್ರಿಕೆಟಿಗರು ಸೇರಿದ್ದಾರೆ.

    ಈಗ ಈ ಹರಾಜು ಪ್ರಕ್ರಿಯೆ ವಿಚಾರವಾಗಿ ವಿಡಿಯೋವೊಂದನ್ನು ಮಾಡಿರುವ ವಿರಾಟ್ ಕೊಹ್ಲಿ, ವಿಡಿಯೋದಲ್ಲಿ ಎಲ್ಲಾ ನನ್ನ ಆರ್‍ಸಿಬಿ ಅಭಿಮಾನಿಗಳಿಗೂ ನಮಸ್ಕಾರ ಮುಂಬರುವ ಐಪಿಎಲ್ ಆವೃತ್ತಿಗಾಗಿ ಹರಾಜು ಪ್ರಕ್ರಿಯೆ ನಡೆಯುತ್ತಿರುವುದು ನಿಮಗೆ ಗೊತ್ತಿದೆ. ನೀವು ನಮ್ಮ ತಂಡದ ಜೊತೆ ಸದಾ ಇರುತ್ತೀರಿ ಎಂಬುದು ನನಗೆ ಗೊತ್ತಿದೆ. ತಂಡದ ಆಡಳಿತ ಮಂಡಳಿ ಮತ್ತು ಕೋಚ್‍ಗಳಾದ ಮೈಕ್ ಹೆಸ್ಸನ್ ಮತ್ತು ಸೈಮನ್ ಕ್ಯಾಟಿಚ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹರಾಜು ಪ್ರಕ್ರಿಯೆ ವಿಚಾರವಾಗಿ ನಾವು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಮುಂಬರುವ ಆವೃತ್ತಿಗಾಗಿ ಬೇಕಾಗಿರುವ ಆಟಗಾರರನ್ನು ಹರಾಜಿನಲ್ಲಿ ತೆಗೆದುಕೊಂಡು ಉತ್ತಮ ಮತ್ತು ಬಲಿಷ್ಠ ತಂಡ ಕಟ್ಟುತ್ತೇವೆ. ನಿಮ್ಮ ಪ್ರೀತಿಗೆ ನಾವು ಬೆಲೆ ಕಟ್ಟಲು ಆಗಲ್ಲ. ಇದೇ ರೀತಿ ಮುಂಬರುವ 2020 ರ ಆವೃತ್ತಿಯಲ್ಲೂ ನಮಗೆ ನೀವು ಬೆಂಬಲಿಸಬೇಕು ಎಂದು ಕೊಹ್ಲಿ ವಿಡಿಯೋದಲ್ಲಿ ಹೇಳಿದ್ದಾರೆ. ಕೊಹ್ಲಿ ಅವರ ಈ ವಿಡಿಯೋವನ್ನು ಆರ್.ಸಿ.ಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ.

    ವಿರಾಟ್ ಕೊಹ್ಲಿ 2013 ರಿಂದ ಆರ್.ಸಿ.ಬಿ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದು, ಇಲ್ಲಿಯವರಿಗೆ ಕಪ್ ಗೆಲ್ಲುವಲ್ಲಿ ವಿಫಲವಾಗಿದ್ದಾರೆ. ಕಳೆದ ಕೆಲ ಆವೃತ್ತಿಗಳಲ್ಲಿ ನಿರಾಶದಾಯಕ ಆಟ ಪ್ರದರ್ಶನ ನೀಡಿರುವ ಬೆಂಗಳೂರು ತಂಡ 2016 ಫೈನಲಿಗೆ ಹೋಗಿ ಹೈದರಾಬಾದ್ ವಿರುದ್ಧ ಸೋತ ನಂತರ ಅಂಕಪಟ್ಟಿಯಲ್ಲಿ 2017 ರಲ್ಲಿ ಕೊನೆಯ ಸ್ಥಾನ, 2018 ರಲ್ಲಿ ಆರನೇ ಸ್ಥಾನ ಮತ್ತು 2019 ರಲ್ಲಿ ಮತ್ತೆ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಇದನ್ನು ಓದಿ: ಯುವಿಗೆ 16 ಕೋಟಿ, ಬೆನ್‌ ಸ್ಟೋಕ್ಸ್‌ಗೆ 14.50 ಕೋಟಿ – 2014 ರಿಂದ 2019 ರವರಗಿನ ದುಬಾರಿ ಆಟಗಾರರ ಪಟ್ಟಿ

  • ಯುವಿಗೆ 16 ಕೋಟಿ, ಬೆನ್‌ ಸ್ಟೋಕ್ಸ್‌ಗೆ 14.50 ಕೋಟಿ – 2014 ರಿಂದ 2019 ರವರಗಿನ ದುಬಾರಿ ಆಟಗಾರರ ಪಟ್ಟಿ

    ಯುವಿಗೆ 16 ಕೋಟಿ, ಬೆನ್‌ ಸ್ಟೋಕ್ಸ್‌ಗೆ 14.50 ಕೋಟಿ – 2014 ರಿಂದ 2019 ರವರಗಿನ ದುಬಾರಿ ಆಟಗಾರರ ಪಟ್ಟಿ

    ಬೆಂಗಳೂರು: ಕ್ರಿಕೆಟ್ ಜಗತ್ತಿನ ದುಬಾರಿ ಟೂರ್ನಿ ಎಂದೇ ಹೆಸರುವಾಸಿ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿದೆ.

    ಇದೇ ತಿಂಗಳ 19 ರಂದು ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಲಿದ್ದು, 971 ಮಂದಿಯ ಪಟ್ಟಿಯನ್ನು 332ಕ್ಕೆ ಇಳಿಕೆ ಮಾಡಿ ಐಪಿಎಲ್ ಆಡಳಿತ ಮಂಡಳಿ ಪಟ್ಟಿಯನ್ನು ತಂಡದ ಫ್ರಾಂಚೈಸಿಗಳಿಗೆ ನೀಡಿದೆ. ಈ ಪಟ್ಟಿಯಲ್ಲಿ ಭಾರತದ 19 ಮಂದಿ ಆಟಗಾರರು ಹಾಗೂ ಫ್ರಾಂಚೈಸಿಗಳು ಮನವಿ ಮಾಡಿದ 24 ಮಂದಿ ಕ್ರಿಕೆಟಿಗರು ಸೇರಿದ್ದಾರೆ.

    ಇಲ್ಲಿಯವರೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ನಮ್ಮ ದೇಶಿಯ ಆಟಗಾರರೇ ಹೆಚ್ಚು ದುಬಾರಿ ಹಣಕ್ಕೆ ಬಿಡ್ ಆಗಿದ್ದು, 2015 ರಲ್ಲಿ 16 ಕೋಟಿಗೆ ಬಿಡ್ ಆಗಿದ್ದ ಭಾರತದ ಮಾಜಿ ಆಟಗಾರರು ಯುವರಾಜ್ ಸಿಂಗ್ ಅತೀ ಹೆಚ್ಚು ದುಬಾರಿ ಆಟಗಾರ ಆಗಿದ್ದಾರೆ. ಕಳೆದ ವರ್ಷ ನಡೆದ ಹರಾಜು ಪ್ರಕ್ರಿಯೆಯಲ್ಲಿ ಭಾರತದ ವೇಗಿ ಜಯದೇವ್ ಉನಾದ್ಕಟ್ ಅವರು 8.40 ಕೋಟಿಗೆ ಬಿಡ್ ಆಗಿದ್ದು, 2019 ರ ದುಬಾರಿ ಆಟಗಾರ ಆಗಿದ್ದರು.

    2014 ರಿಂದ 2019 ರವರಗಿನ ಅತೀ ಹೆಚ್ಚು ದುಬಾರಿ ಆಟಗಾರರ ಪಟ್ಟಿ

    2019 ಟಾಪ್ ಫೈವ್ ದುಬಾರಿ ಆಟಗಾರರು
    8.40 ಕೋಟಿ – ಜಯದೇವ್ ಉನಾದ್ಕಟ್ (ಆರ್.ಆರ್)
    8.40 ಕೋಟಿ – ವರುಣ್ ಚಕ್ರವರ್ತಿ (ಕಿಂಗ್ಸ್ ಇಲೆವನ್)
    7.20 ಕೋಟಿ – ಸ್ಯಾಮ್ ಕರ್ರನ್ (ಕಿಂಗ್ಸ್ ಇಲೆವನ್)
    6.40 ಕೋಟಿ – ಕಾಲಿನ್ ಇಂಗ್ರಾಮ್ (ಡಿಸಿ)
    5.00 ಕೋಟಿ – ಮೋಹಿತ್ ಶರ್ಮಾ (ಸಿಎಸ್‍ಕೆ), ಅಕ್ಷರ್ ಪಟೇಲ್ (ಡಿಸಿ), ಕಾರ್ಲೋಸ್ ಬ್ರಾಥ್‍ವೈಟ್ (ಕೆಕೆಆರ್), ಶಿವಂ ದುಬೆ (ಆರ್. ಸಿ.ಬಿ)

    2018 ಟಾಪ್ ಫೈವ್ ದುಬಾರಿ ಆಟಗಾರರು
    12.50 ಕೋಟಿ – ಬೆನ್ ಸ್ಟೋಕ್ಸ್ (ಆರ್.ಆರ್)
    11.50 ಕೋಟಿ – ಜಯದೇವ್ ಉನಾದ್ಕಟ್ (ಆರ್.ಆರ್)
    11.00 ಕೋಟಿ – ಕೆಎಲ್ ರಾಹುಲ್ (ಕಿಂಗ್ಸ್ ಇಲೆವನ್)
    11.00 ಕೋಟಿ – ಮನೀಶ್ ಪಾಂಡೆ (ಎಸ್.ಆರ್.ಹೆಚ್)
    9.60 ಕೋಟಿ – ಕ್ರಿಸ್ ಲಿನ್ (ಕೆಕೆಆರ್)

    2017 ಟಾಪ್ ಫೈವ್ ದುಬಾರಿ ಆಟಗಾರರು
    14.50 ಕೋಟಿ – ಬೆನ್ ಸ್ಟೋಕ್ಸ್ (ಆರ್.ಪಿ.ಎಸ್)
    12.00 ಕೋಟಿ – ಟೈಮಲ್ ಮಿಲ್ಸ್ (ಆರ್.ಸಿ.ಬಿ)
    5.00 ಕೋಟಿ – ಕಗಿಸೊ ರಬಾಡಾ (ಡಿಡಿ)
    5.00 ಕೋಟಿ – ಟ್ರೆಂಟ್ ಬೌಲ್ಟ್ (ಕೆಕೆಆರ್)
    4.50 ಕೋಟಿ – ಪ್ಯಾಟ್ ಕಮ್ಮಿನ್ಸ್ (ಡಿಡಿ)

    2016 ಟಾಪ್ ಫೈವ್ ದುಬಾರಿ ಆಟಗಾರರು
    9.50 ಕೋಟಿ – ಶೇನ್ ವ್ಯಾಟ್ಸನ್ (ಆರ್.ಸಿ.ಬಿ)
    8.50 ಕೋಟಿ – ಪವನ್ ನೇಗಿ (ಡಿಡಿ)
    7.00 ಕೋಟಿ – ಯುವರಾಜ್ ಸಿಂಗ್ (ಎಸ್.ಆರ್.ಹೆಚ್)
    7.00 ಕೋಟಿ – ಕ್ರಿಸ್ ಮೋರಿಸ್ (ಡಿಡಿ)
    6.50 ಕೋಟಿ – ಮೋಹಿತ್ ಶರ್ಮಾ (ಕಿಂಗ್ಸ್ ಇಲೆವನ್)

    2015 ಟಾಪ್ ಫೈವ್ ದುಬಾರಿ ಆಟಗಾರರು
    16.0 ಕೋಟಿ – ಯುವರಾಜ್ ಸಿಂಗ್ (ಡಿಡಿ)
    10.5 ಕೋಟಿ – ದಿನೇಶ್ ಕಾರ್ತಿಕ್ (ಆರ್.ಸಿಬಿ)
    7.50 ಕೋಟಿ – ಏಂಜೆಲೊ ಮ್ಯಾಥ್ಯೂಸ್ (ಡಿಡಿ)
    4.00 ಕೋಟಿ – ಜಹೀರ್ ಖಾನ್ (ಡಿಡಿ)
    3.80 ಕೋಟಿ – ಟ್ರೆಂಟ್ ಬೌಲ್ಟ್ (ಎಸ್.ಆರ್.ಹೆಚ್)

    2014 ಟಾಪ್ ಫೈವ್ ದುಬಾರಿ ಆಟಗಾರರು
    14.0 ಕೋಟಿ – ಯುವರಾಜ್ ಸಿಂಗ್ (ಆರ್.ಸಿ.ಬಿ)
    12.5 ಕೋಟಿ – ದಿನೇಶ್ ಕಾರ್ತಿಕ್ (ಡಿಡಿ)
    9.00 ಕೋಟಿ – ಕೆವಿನ್ ಪೀಟರ್ಸನ್ (ಡಿಡಿ)
    6.50 ಕೋಟಿ – ಮಿಚೆಲ್ ಜಾನ್ಸನ್ (ಕಿಂಗ್ಸ್ ಇಲೆವನ್)
    6.00 ಕೋಟಿ – ಗ್ಲೆನ್ ಮ್ಯಾಕ್ಸ್ ವೆಲ್ (ಕಿಂಗ್ಸ್ ಇಲೆವನ್)

  • ಡಿ.19 ರಂದು ಐಪಿಎಲ್ ಹರಾಜು- ಮೊದ್ಲ ಪಟ್ಟಿಯಲ್ಲಿ 332 ಆಟಗಾರರು

    ಡಿ.19 ರಂದು ಐಪಿಎಲ್ ಹರಾಜು- ಮೊದ್ಲ ಪಟ್ಟಿಯಲ್ಲಿ 332 ಆಟಗಾರರು

    – ಕೋಟಿ ವೀರರ ಪಟ್ಟಿ ಇಂತಿದೆ

    ಕೋಲ್ಕತ್ತಾ: ಐಪಿಎಲ್ 2020ರ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಸಿದ್ಧತೆ ನಡೆದಿದ್ದು, ಎಲ್ಲಾ ತಂಡದ ಮಾಲೀಕರು ಆಲ್‍ರೌಂಡರ್ ಗಳನ್ನು ಕೋಟಿ ಕೋಟಿ ನೀಡಿ ಖರೀದಿ ಮಾಡಲು ತಯಾರಿ ನಡೆಸಿದ್ದಾರೆ. ಆಸೀಸ್‍ನ ಮ್ಯಾಕ್ಸ್ ವೆಲ್, ಪ್ಯಾಟ್ ಕಮ್ಮಿನ್ಸ್, ದಕ್ಷಿಣ ಆಫ್ರಿಕಾ ತಂಡದ ಕ್ರಿಸ್ ಮೋರಿಸ್ ರಂತಹ ವಿದೇಶಿ ಆಟಗಾರರು ಭಾರೀ ಮೊತ್ತ ಪಡೆಯಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ಡಿ.19 ರಂದು ಕೋಲ್ಕತ್ತಾದಲ್ಲಿ ಐಪಿಎಲ್ 2020 ಆವೃತ್ತಿಯ ಹರಾಜು ಪ್ರಕ್ರಿಯೆ ನಡೆಯಲಿದ್ದು, 971 ಮಂದಿಯ ಪಟ್ಟಿಯನ್ನು 332ಕ್ಕೆ ಇಳಿಕೆ ಮಾಡಿ ಐಪಿಎಲ್ ಆಡಳಿತ ಮಂಡಳಿ ಪಟ್ಟಿಯನ್ನು ತಂಡದ ಫ್ರಾಂಚೈಸಿಗಳಿಗೆ ನೀಡಿದೆ. ಈ ಪಟ್ಟಿಯಲ್ಲಿ ಭಾರತದ 19 ಮಂದಿ ಆಟಗಾರರು ಹಾಗೂ ಫ್ರಾಂಚೈಸಿಗಳು ಮನವಿ ಮಾಡಿದ 24 ಮಂದಿ ಕ್ರಿಕೆಟಿಗರು ಸೇರಿದ್ದಾರೆ. ಪ್ರಮುಖವಾಗಿ ವಿಂಡೀಸ್ ಬೌಲರ್ ಕೆಸ್ರಿಕ್ ವಿಲಿಯಮ್ಸ್, ಆಲ್‍ರೌಂಡರ್ ಕ್ರಿಸ್ಟಿಯನ್, ಲೆಗ್ ಸ್ಪಿನ್ನರ್ ಜಂಪಾ, ಮುಶ್ಫಿಕರ್ ರಹೀಂ, ಯುವ ಆಟಗಾರ ವಿಲ್ ಜಾಕ್ಸ್ ರಂತಹ ಆಟಗಾರರಿದ್ದಾರೆ.

    ಹರಾಜು ಪ್ರಕ್ರಿಯೆಯಲ್ಲಿ ಮೊದಲು ಬ್ಯಾಟ್ಸ್ ಮನ್‍ಗಳು ಆ ಬಳಿಕ ಆಲ್‍ರೌಂಡರ್, ವಿಕೆಟ್ ಕೀಪರ್, ವೇಗದ ಬೌಲರ್, ಸ್ಪಿನ್ ಬೌಲರ್ ಗಳನ್ನು ಹರಾಜು ಮಾಡಲಾಗುತ್ತದೆ. ಪ್ಯಾಟ್ ಕಮ್ಮಿನ್ಸ್, ಮ್ಯಾಕ್ಸ್ ವೆಲ್, ಕೆಸ್ರಿಕ್ ವಿಲಿಯಮ್ಸ್, ಆ್ಯಡಂ ಜಾಂಪಾ, ಜೋಶ್ ಹೇಜಲ್‍ವುಡ್, ಕ್ರಿಸ್ ಲಿನ್, ಮಿಚೆಲ್ ಮಾರ್ಷ್, ಡೇಲ್ ಸ್ಟೇನ್, ಏಂಜೆಲೊ ಮ್ಯಾಥ್ಯೂಸ್ 2 ಕೋಟಿ ರೂ. ಮೂಲ ಬೆಲೆಯನ್ನು ಹೊಂದಿದ್ದಾರೆ. ಉಳಿದಂತೆ ರಾಬಿನ್ ಉತ್ತಪ್ಪ, ಇಂಗ್ಲೆಂಡ್ ವಿಶ್ವಕಪ್ ಗೆದ್ದ ತಂಡದ ನಾಯಕ ಇಯಾನ್ ಮಾರ್ಗನ್, ಕ್ರಿಸ್ ವೋಕ್ಸ್ ಸೇರಿದಂತೆ ಇತರ ಕೆಲ ಆಟಗಾರರು 1.5 ಕೋಟಿ ರೂ. ಮೂಲ ಬೆಲೆಯನ್ನು ಪಡೆದಿದ್ದಾರೆ.

  • ಪೈಸೆ ಲೆಕ್ಕದಲ್ಲಿ ಶಾಸಕರನ್ನು ಹರಾಜು ಹಾಕಿದ ರೈತರು

    ಪೈಸೆ ಲೆಕ್ಕದಲ್ಲಿ ಶಾಸಕರನ್ನು ಹರಾಜು ಹಾಕಿದ ರೈತರು

    ಚಾಮರಾಜನಗರ: ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಶಾಸಕರನ್ನು ಪೈಸೆ ಲೆಕ್ಕದಲ್ಲಿ ಹರಾಜು ಹಾಕಲಾಗಿದೆ. ಜನರ ಹಿತಾಸಕ್ತಿ ಮರೆತು ರಾಜಕೀಯ ದೊಂಬರಾಟದಲ್ಲಿ ಮುಳುಗಿರುವ ರಾಜಕೀಯ ಪಕ್ಷಗಳ ನಾಯಕರಿಗೆ ಜನ ಥೂ ಎಂದು ಕ್ಯಾಕರಿಸಿ ಉಗಿಯುತ್ತಿದ್ದಾರೆ. ಅವರ ಭಾವಚಿತ್ರಗಳಿಗೆ ಚಪ್ಪಲಿ, ಪೊರಕೆಗಳಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ರಾಜ್ಯದಲ್ಲಿ ನಡೆಯುತ್ತಿರುವ ಅಸಹ್ಯ ರಾಜಕೀಯ ಬೆಳವಣಿಗೆಯ ಬಗ್ಗೆ ಚಾಮರಾಜನಗರದಲ್ಲಿ ರೈತರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಭೀಕರ ಬರ ಇದ್ದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅಧಿಕಾರಕ್ಕಾಗಿ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸಿ ನಗರದ ಭುವನೇಶ್ವರಿ ವೃತ್ತದಲ್ಲಿ ಶಾಸಕರನ್ನು ಪೈಸೆ ಲೆಕ್ಕದಲ್ಲಿ ಹರಾಜು ಹಾಕುವ ಅಣುಕು ಪ್ರದರ್ಶನ ನಡೆಸಿದರು.

    ಮುಖ್ಯಮಂತ್ರಿ, ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರ ಭಾವಚಿತ್ರಗಳಿಗೆ ಕ್ಯಾಕರಿಸಿ ಉಗಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಚಪ್ಪಲಿ ಹಾಗೂ ಪೊರಕೆಗಳಿಂದ ಹೊಡೆದು, ನಗರದ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.