Tag: atm

  • ಎಟಿಎಂ ಸ್ಥಗಿತ, ಫೋನ್ ಪೇ ಇಲ್ಲ, ವಿಥ್ ಡ್ರಾಗೆ ಮಿತಿ: ಯೆಸ್ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ್ದು ಯಾಕೆ?

    ಎಟಿಎಂ ಸ್ಥಗಿತ, ಫೋನ್ ಪೇ ಇಲ್ಲ, ವಿಥ್ ಡ್ರಾಗೆ ಮಿತಿ: ಯೆಸ್ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ್ದು ಯಾಕೆ?

    ಬೆಂಗಳೂರು/ಮುಂಬೈ: ಖಾಸಗಿ ರಂಗದ 5ನೇ ಅತಿ ದೊಡ್ಡ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಆರ್‌ಬಿಐ ಸೂಪರ್ ಸೀಡ್ ಮಾಡಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.

    ಇದೆ ವೇಳೆ ಮುಂದಿನ ಆದೇಶದವರೆಗೂ ಬ್ಯಾಂಕ್ ಗ್ರಾಹಕರು ಗರಿಷ್ಠ 50 ಸಾವಿರ ರೂ.ವರೆಗೆ ನಗದು ಹಣವನ್ನು ಡ್ರಾ ಮಾಡಲು ಅವಕಾಶವನ್ನು ನೀಡಿದೆ. ಈ ವಿಚಾರವನ್ನು ತಿಳಿದು ಗ್ರಾಹಕರು ಬ್ಯಾಂಕ್ ಕಚೇರಿಗೆ ದೌಡಾಯಿಸುತ್ತಿದ್ದು ಎಟಿಎಂ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.

    ಕೆಲವೊಂದು ಎಟಿಎಂಗಳು ಸಹ ಕಾರ್ಯನಿರ್ವಹಿಸದ ಪರಿಣಾಮ ಗ್ರಾಹಕರು ಶಾಪ ಹಾಕುತ್ತಿದ್ದಾರೆ. ಎಟಿಎಂ ಮುಂದೆ ಆರ್‌ಬಿಐ ನೋಟಿಸ್ ಅಂಟಿಸಲಾಗಿದ್ದು ಸಹಕರಿಸುವಂತೆ ಬ್ಯಾಂಕ್ ಕೇಳಿಕೊಂಡಿದೆ. ಭಾರೀ ಸಂಖ್ಯೆಯಲ್ಲಿ ಗ್ರಾಕರು ಇಂಟರ್ ನೆಟ್ ವ್ಯವಹಾರ ನಡೆಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗಿದೆ. ಶೀಘ್ರವೇ ಮರಳುತ್ತೇವೆ ಎಂದು ಯೆಸ್ ಬ್ಯಾಂಕ್ ಹೇಳಿದೆ.

    ಆರ್‌ಬಿಐ ಆದೇಶದಲ್ಲಿ ಏನಿದೆ?
    ಯೆಸ್ ಬ್ಯಾಂಕ್‍ನ ಎಲ್ಲಾ ಹಣಕಾಸು ಕಾರ್ಯ ಚಟುವಟಿಕೆಗಳ ಮೇಲೆ ತಡೆ ವಿಧಿಸಲಾಗಿದೆ. ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಲಾಗಿದ್ದು, ಗ್ರಾಹಕರು ಗರಿಷ್ಟ 50 ಸಾವಿರ ರೂ. ಹಣವನ್ನು ಡ್ರಾ ಮಾಡಬಹುದು ಎಂದು ತಿಳಿಸಿದೆ. ಮುಂದಿನ 30 ದಿನಗಳವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಬ್ಯಾಂಕಿನ ಹಣಕಾಸು ಪರಿಸ್ಥಿತಿ ಮತ್ತು ಗ್ರಾಹಕರ ಹಿತ ಕಾಪಾಡುತ್ತೇವೆ ಎಂದು ಆರ್‌ಬಿಐ ಹೇಳಿದೆ. ಎಸ್‍ಬಿಐನ ಮಾಜಿ ಸಿಎಫ್‍ಒ ಪ್ರಶಾಂತ್ ಕುಮಾರ್ ಅವರನ್ನು ಆಡಳಿತಗಾರರನ್ನಾಗಿ ನೇಮಕ ಮಾಡಲಾಗಿದೆ.

    ಫೋನ್ ಪೇ ಅಲಭ್ಯ: ಯೆಸ್ ಬ್ಯಾಂಕ್ ಜೊತೆ ಫೋನ್ ಪೇ ಹಣಕಾಸು ವ್ಯವಹಾರ ನಡೆಸುತಿತ್ತು. ಈಗ ವ್ಯವಹಾರಕ್ಕೆ ನಿರ್ಬಂಧ ಹೇರಿದ್ದರಿಂದ ಪೋನ್ ಪೇ ಸೇವೆ ಸಹ ಅಲಭ್ಯವಾಗಿದೆ. ಶೀಘ್ರವೇ ನಾವು ಸೇವೆ ನೀಡುತ್ತೇವೆ ಎಂದು ಫೋನ್ ಪೇ ಸಿಇಒ ಸಮೀರ್ ನಿಗಮ್ ತಿಳಿಸಿದ್ದಾರೆ.

    ಸಂಕಷ್ಟಕ್ಕೆ ಗುರಿಯಾಗಿದ್ದು ಯಾಕೆ?
    ವಸೂಲಾಗದ ಸಾಲದ ಪ್ರಮಾಣದಲ್ಲಿನ ಭಾರಿ ಹೆಚ್ಚಳದಿಂದಾಗಿ ಬ್ಯಾಂಕ್ ಹಣಕಾಸು ಬಿಕ್ಕಟ್ಟಿಗೆ ಗುರಿಯಾಗಿದೆ. 2003-04 ರಲ್ಲಿ ಆರಂಭಗೊಂಡ ಈ ಬ್ಯಾಂಕ್ 10 ವರ್ಷಗಳಲ್ಲಿ ದೇಶದ ಟಾಪ್ 5 ಖಾಸಗಿ ಬ್ಯಾಂಕ್ ಆಗಿ ಹೊರಹೊಮ್ಮಿತ್ತು. ರಾಣಾ ಕಪೂರ್ ಮಾಲೀಕತ್ವದ ಈ ಬ್ಯಾಂಕ್ ನಲ್ಲಿ ರಾಬೋ ಬ್ಯಾಂಕ್ ಸಹ ಪಾಲು ಹೊಂದಿತ್ತು. ರಾಣಾ ಕಪೂರ್ ಶೇ.26 ರಷ್ಟು ಷೇರು ಹೊಂದಿದ್ದರೆ, ರಾಬೋ ಬ್ಯಾಂಕ್ ಇಂಟರ್ನ್ಯಾಷನಲ್  ಶೇ.20 ರಷ್ಟು ಷೇರುಗಳನ್ನು ಹೊಂದಿತ್ತು.

    ವಿಜಯ್ ಮಲ್ಯ, ನೀರವ್ ಮೋದಿಯಂತಹ ವ್ಯಕ್ತಿಗಳು ಕೋಟ್ಯಂತರ ರೂ. ಸಾಲ ಮಾಡಿ ವಿದೇಶಕ್ಕೆ ಪರಾರಿಯಾದ ಬಳಿಕ ಕೇಂದ್ರ ಸರ್ಕಾರ ಭಾರೀ ಟೀಕೆಗೆ ಗುರಿಯಾಯಿತು. ಬಡವರ ಸಾಲ ಮನ್ನಾ ಮಾಡಲು ಹಿಂದೆ ಮುಂದೆ ನೋಡುವ ಸರ್ಕಾರಗಳು ಉದ್ಯಮಿಗಳ ಸಾಲ ಮನ್ನಾ ಮಾಡುವುದು ಸರಿಯೇ ಎನ್ನುವ ಪ್ರಶ್ನೆ ಎದ್ದಿತ್ತು. ಈ ಟೀಕೆಯ ನಂತರ ಎಚ್ಚೆತ್ತ ಆರ್‌ಬಿಐ ಸಾಲ ಮಾಡಿ ವಿದೇಶಕ್ಕೆ ಉದ್ಯಮಿಗಳು ಪರಾರಿ ಆಗದೇ ಇರಲು ಎಲ್ಲ ಬ್ಯಾಂಕ್ ಗಳು ಸಾಲದ ವಿವರಗಳನ್ನು ಕಡ್ಡಾಯವಾಗಿ ತನಗೆ ಸಲ್ಲಿಸಬೇಕು ಎಂದು ಸೂಚಿಸಿತ್ತು. ಅಷ್ಟೇ ಅಲ್ಲದೇ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿ ಅದನ್ನು ಮರಳಿ ಪಾವತಿಸದೆ ಇರುವವರನ್ನು ಆಯಾ ಬ್ಯಾಂಕುಗಳೇ ದಿವಾಳಿ ನ್ಯಾಯಾಲಯಕ್ಕೆ ಎಳೆಯಬೇಕು. ಈ ವಿಚಾರದಲ್ಲಿ ಬ್ಯಾಂಕ್ ಗಳು ಉದ್ಯಮಿಗಳ ಜೊತೆ ಸೇರಿ ಸಾಲವನ್ನು ಮುಚ್ಚಿಟ್ಟು ದಿವಾಳಿ ಪ್ರಕ್ರಿಯೆ ನಡೆಸದೇ ಇದ್ದರೆ ಬ್ಯಾಂಕ್ ಗಳ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.

    ಆರ್‌ಬಿಐ ಈ ಕಠಿಣ ನಿಯಮ ಯೆಸ್ ಬ್ಯಾಂಕಿಗೆ ಭಾರೀ ಹೊಡೆತ ನೀಡಿತ್ತು. ಕಠಿಣ ನಿಯಮ ಜಾರಿಯಾದ ನಂತರ ಯೆಸ್ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ನಲ್ಲಿ ವಸೂಲಾಗದ ಸಾಲದ ವಿಚಾರದಲ್ಲಿ ವ್ಯತ್ಯಾಸ ಇರುವುದು ಆರ್‌ಬಿಐ ಗಮನಕ್ಕೆ ಬಂದಿತ್ತು. 2019ರ ಸೆಪ್ಟೆಂಬರ್ ವೇಳೆ ವಸೂಲಾಗದ ಸಾಲದ ಪ್ರಮಾಣ ಶೇ.7.4ಕ್ಕೆ ಏರಿಕೆಯಾಗಿತ್ತು. ಈ ಸಮಸ್ಯೆಯ ಸುಳಿಯಿಂದ ಹೊರಬರಬೇಕಾದರೆ ಯೆಸ್ ಬ್ಯಾಂಕಿಗೆ 10 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯ ಅವಶ್ಯಕತೆಯಿತ್ತು.

    ವಿವಿಧ ಮೂಲಗಳನ್ನು ಹುಡುಕುತ್ತಿದ್ದಾಗ ಯೆಸ್ ಬ್ಯಾಂಕ್ ಕಳೆದ ನವೆಂಬರ್ ತಿಂಗಳಿನಲ್ಲಿ 2 ಶತಕೋಟಿ ಡಾಲರ್ ಹಣವನ್ನು ಷೇರುಗಳ ಮೂಲಕ ಸಂಗ್ರಹಿಸುವುದಾಗಿ ಘೋಷಣೆ ಮಾಡಿತ್ತು. ಘೋಷಣೆ ಮಾತ್ರ ಆಯ್ತ, ಆದರೆ ಮುಂದೆ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ.

    ಆರ್‌ಬಿಐನಿಂದ ಪ್ರಕ್ರಿಯೆ ತಡವಾಯ್ತೆ?
    ಕಳೆದ ವರ್ಷ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ(ಪಿಎಂಸಿ) ಬ್ಯಾಂಕ್ ಆಡಳಿತ ಮಂಡಳಿಯನ್ನು ಆರ್‌ಬಿಐ ಸೂಪರ್ ಸೀಡ್ ಮಾಡಿತ್ತು. ಈ ಪ್ರಕರಣ ನಡೆದ 6 ತಿಂಗಳ ಬಳಿಕ ಖಾಸಗಿ ರಂಗದ ದೊಡ್ಡ ಬ್ಯಾಂಕ್ ಆಗಿದ್ದ ಯೆಸ್ ಬ್ಯಾಂಕನ್ನು ಆರ್‌ಬಿಐ ಸೂಪರ್ ಸೀಡ್ ಮಾಡಿದೆ. ಹಾಗೆ ನೋಡಿದರೆ ಯೆಸ್ ಬ್ಯಾಂಕ್ ಸಂಕಷ್ಟದಲ್ಲಿ ಅಕ್ರಮ ನಡೆದಿರುವ ವಿಚಾರ ಆರ್‌ಬಿಐಗೆ 2018ರಲ್ಲೇ ಗೊತ್ತಾಗಿತ್ತು. ಸೆಬಿ ಸೂಚನೆಯ ಹಿನ್ನೆಲೆಯಲ್ಲಿ ಬ್ಯಾಂಕಿನ ಮುಖ್ಯಸ್ಥ ರಾಣಾ ಕಪೂರ್ 2019ರ ಜ.31ರಂದು ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ವೇಳೆ ತಮ್ಮ ಬಳಿಯಿದ್ದ ಅಷ್ಟು ಷೇರುಗಳನ್ನು ಮಾರಾಟ ಮಾಡಿದ್ದರು. ಸದ್ಯ ಈಗ ಶೇ.48ರಷ್ಟು ಷೇರು ಚಿಲ್ಲರೆ ಹೂಡಿಕೆದಾರರ ಬಳಿ ಇದೆ. 2019 ಹಣಕಾಸು ವರ್ಷದ ನಾಲ್ಕನೇಯ ತ್ರೈಮಾಸಿಕದಲ್ಲಿ ಯೆಸ್ ಬ್ಯಾಂಕ್ 1,507 ಕೋಟಿ ರೂ. ನಷ್ಟ ಅನುಭವಿಸಿತ್ತು.

    ಯಾರಿಗೆ ಸಾಲ ನೀಡಿದೆ?
    ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಗಳ ಪ್ರಕಾರ ಜೆಟ್ ಏರ್ ವೇಸ್, ಐಎಲ್ ಆಂಡ್ ಎಫ್‍ಎಸ್, ದಿವಾನ್ ಹೌಸಿಂಗ್, ಕಾಕ್ಸ್ ಆಂಡ್ ಕಿಂಗ್ಸ್, ಸಿಜಿ ಪವರ್, ಅಲ್ಟಿಕೋ ಕಂಪನಿಗಳಿಗೆ ಸಾಲ ನೀಡಿದೆ.

    ಬೇಕಾಬಿಟ್ಟಿ ಸಾಲ?
    ಸಾರ್ವಜನಿಕ ರಂಗದ ಬ್ಯಾಂಕ್ ಗಳಲ್ಲಿ ಸಾಲ ತೆಗೆದುಕೊಳ್ಳಬೇಕಾದರೆ ಹಲವು ಮಾನದಂಡಗಳು ಇರತ್ತದೆ ಮತ್ತು ಅಷ್ಟು ಸುಲಭವಾಗಿ ಸಾಲ ಸಿಗುವುದಿಲ್ಲ. ಆದರೆ ಖಾಸಗಿ ಬ್ಯಾಂಕ್ ಗಳು ಉದ್ಯಮಿಗಳಿಗೆ ಕಠಿಣ ನಿಯಮವನ್ನು ವಿಧಿಸುವುದಿಲ್ಲ. ಹೀಗಾಗಿ ಉದ್ಯಮಿಗಳು ಬಡ್ಡಿ ಜಾಸ್ತಿ ಇದ್ದರೂ ಖಾಸಗಿ ಬ್ಯಾಂಕುಗಳಿಂದ ಸಾಲವನ್ನು ಸುಲಭವಾಗಿ ಪಡೆಯುತ್ತಾರೆ. ಸರಿಯಾದ ಮಾನದಂಡಗಳನ್ನು ಅನುಸರಿಸದೇ ಸಾಲ ನೀಡಿರುವುದು ಮತ್ತು ಸಾಲ ಮರುಪಾವತಿ ವಿಳಂಬ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿದ್ದರೂ ಕಠಿಣ ಕ್ರಮಗಳನ್ನು ಕೈಗೊಳ್ಳದ ಕಾರಣ ಬ್ಯಾಂಕ್ ಗಳ ಅನುತ್ಪಾದಕ ಆಸ್ತಿ ಹೆಚ್ಚಾಗುತ್ತದೆ.

  • ಹಳೆ ನೋಟು, ಎಟಿಎಂಗಳಿಂದ ಕೊರೊನಾ ಹರಡುತ್ತೆ – ವಿಶ್ವಸಂಸ್ಥೆಯಿಂದಲೇ ಎಚ್ಚರಿಕೆ

    ಹಳೆ ನೋಟು, ಎಟಿಎಂಗಳಿಂದ ಕೊರೊನಾ ಹರಡುತ್ತೆ – ವಿಶ್ವಸಂಸ್ಥೆಯಿಂದಲೇ ಎಚ್ಚರಿಕೆ

    – ಚೀನಾದಲ್ಲಿ ಹಳೆಯ ನೋಟುಗಳಿಗೆ ಕ್ರಿಮಿನಾಶಕ ಸಿಂಪಡಣೆ

    ಬೆಂಗಳೂರು: ಹಳೆ ನೋಟು ಹಾಗೂ ಎಟಿಎಂಗಳಿಂದ ಮಾರಕ ಕೊರೊನಾ ಹರಡುತ್ತೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಚೀನಾದಲ್ಲಿ ಹಳೆಯ ನೋಟುಗಳಿಗೆ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ.

    ವಿಶ್ವಸಂಸ್ಥೆ ಮಾಹಿತಿ ನೀಡಿದ ಪ್ರಕಾರ, ಕೊರೊನಾ ಹಳೆಯ ನೋಟುಗಳಿಂದ, ಬ್ಯಾಂಕ್‍ನಿಂದ, ಚಿಲ್ಲರೆ ನಾಣ್ಯಗಳಿಂದ ಹಾಗೂ ಒಬ್ಬರ ಕೈಯಿಂದ ಪಡೆದರೆ ವೈರಸ್ ಬರಬಹುದು ಎಂದು ತಿಳಿಸಿದೆ. ಅಲ್ಲದೆ ಎಟಿಎಂನಿಂದ, ಎಟಿಎಂ ಹಣದಿಂದ ಹಾಗೂ ಟಿಕೆಟ್ ಮೆಷಿನ್‍ನಿಂದಲೂ ಮಾರಕ ಕಾಯಿಲೆ ಬರಬಹುದು ಎಂದು ಹೇಳಿದೆ.  ಇದನ್ನು ಓದಿ: ಈಗ ಅಧಿಕೃತ – ಭಾರತಕ್ಕೆ ಆಗಮಿಸಿದ 21 ಇಟಲಿ ಪ್ರವಾಸಿಗರ ಪೈಕಿ 15 ಮಂದಿಗೆ ಕೊರೊನಾ

    ಸೋಂಕು ಇದ್ದವರನ್ನು ಅಪ್ಪಿಕೊಂಡರೆ ಹಾಗೂ ಕೈ ಕುಲುಕಿದರೂ ಕೊರೊನಾ ಬರುವ ಸಾಧ್ಯತೆಗಳಿವೆ. ಜೊತೆಗೆ ಆಫೀಸ್‍ನಲ್ಲಿ ಡೋರ್ ಹ್ಯಾಂಡಲ್, ಕಾಫಿ ಮೆಷಿನ್, ಆಫೀಸ್ ಫೋನ್ ಹಾಗೂ ಸ್ಮಾರ್ಟ್‍ಫೋನ್‍ನಿಂದಲೂ ಕೊರೊನಾ ಹರಡುವ ಸಾಧ್ಯತೆಗಳಿವೆ. ವಿಮಾನದ ಸೀಟಿನಿಂದಲೂ ಹಾಗೂ ಸಾರ್ವಜನಿಕ ಶೌಚಾಲಯದಿಂದ ಕೂಡ ಕೊರೊನಾ ಹರಡುತ್ತದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಇದನ್ನೂ ಓದಿ: ಹೆಚ್ಚು ಜನ ಸೇರುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ – ಪ್ರಧಾನಿ ಮೋದಿ ಮನವಿ

    ಇತ್ತ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ವೈದ್ಯರು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಕೊರೊನಾ ತಡೆಯುವುದು ಹೇಗೆ ಎಂಬುದನ್ನು ತಿಳಿಸಿದ್ದಾರೆ. ಮಕ್ಕಳಿಗೆ ಮುತ್ತು ಕೊಡುವುದು, ಅಪ್ಪಿಕೊಳ್ಳುವುದನ್ನು ನಿಲ್ಲಸಬೇಕು. ಶೇಕ್ ಹ್ಯಾಂಡ್ ಮಾಡಿದಾಗ ಕೊರೊನಾ ಹೆಚ್ಚಾಗಿ ಹರಡಲಿದೆ. ಕೊರೊನಾ ರೋಗಿ ಜೊತೆ ಹ್ಯಾಂಡ್ ಶೇಕ್ ಮಾಡಿದರೆ ಅವರಿಗೂ ಆ ರೋಗ ಬರುತ್ತದೆ. ವಿದೇಶಗಳಿಗೆ ಹೋಗಿ ಬಂದವರು ಆದಷ್ಟೂ ಮಕ್ಕಳಿಂದ ದೂರವಿದ್ದರೆ ಒಳ್ಳೆಯದು. ಇನ್ನು ಗರ್ಭಿಣಿಯರು, ಮಕ್ಕಳು, ವೃದ್ಧರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಆದ್ದರಿಂದ ಕೊರೊನಾ ಬೇಗ ಇವರಲ್ಲಿ ಹರಡುತ್ತದೆ ಎಂದು ಬೌರಿಂಗ್ ಆಸ್ಪತ್ರೆ ಹಿರಿಯ ವೈದ್ಯ ರಮೇಶ್ ಹೇಳಿದ್ದಾರೆ. ಇದನ್ನೂ ಓದಿ: ಒಂದೇ ದಿನ ಬೆಂಗ್ಳೂರಿನ ನಾಲ್ಕು ಮಂದಿಗೆ ಕೊರೊನಾ ಸೋಂಕು ಶಂಕೆ – ಆಸ್ಪತ್ರೆಗೆ ದಾಖಲು

    ಮೊಬೈಲ್ ಫೋನ್, ವ್ಯಾಲೆಟ್ ಹಾಗೂ ಪರ್ಸ್‍ನಿಂದಲೂ ಕೊರೊನಾ ವೈರಸ್ ಹರಡುತ್ತದೆ. ಫಸ್ಟ್ ಶಿಫ್ಟ್ ಅಲ್ಲಿ ಸೊಂಕಿತ ಕಂಪ್ಯೂಟರ್ ಮುಟ್ಟಿದರೆ, ಸೆಕೆಂಡ್ ಶಿಫ್ಟ್ ಅವರಿಗೂ ಕೊರೊನಾ ಬರುತ್ತದೆ. ಮಾರಕ ಕೊರೊನಾ ವೈರಸ್ ಸುಮಾರು 6 ಗಂಟೆಗೂ ಹೆಚ್ಚು ಹೊತ್ತು ಜೀವಂತವಿರುತ್ತದೆ. ಹ್ಯಾಂಡ್ ವಾಶ್ ಇಲ್ಲದೇ ಮುಟ್ಟಿದರೆ ಕೊರೊನಾ ಹರಡುತ್ತೆ. ಜೊತೆಗೆ ರೋಗಿಯ ಮೊಬೈಲ್, ಪರ್ಸ್ ಮುಟ್ಟುವ ಮೊದಲು ಎಚ್ಚರವಾಗಿರಿ. ಏಕೆಂದರೆ ಕ್ಷಣದಲ್ಲಿ ಕೊರೊನಾ ಹರಡುತ್ತೆ ಎಂದು ವೈದ್ಯರಾದ ಡಾ.ರಮೇಶ್ ತಿಳಿಸಿದ್ದಾರೆ.

    ಸದ್ಯ ಕೊರೊನಾ ತಡೆಗೆ ಬೌರಿಂಗ್ ಆಸ್ಪತ್ರೆ ಸಂಪೂರ್ಣ ಸಜ್ಜಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಕೊಠಡಿ ನಿರ್ಮಾಣ ಮಾಡಲಾಗಿದೆ. ಕೊರೊನಾ ಶಂಕೆ ಕಂಡುಬಂದರೆ ಹಂತ ಹಂತವಾಗಿ ತಪಾಸಣೆಗೆ ವೈದ್ಯರು ತಯಾರಾಗಿದ್ದಾರೆ. ಹೊರರಾಜ್ಯದ ಜನ ಹೆಚ್ಚಿರುವ ಕಾರಣ ಸಂಪೂರ್ಣ ಸಜ್ಜಾಗಿರುವ ಬೌರಿಂಗ್ ಸಿಬ್ಬಂದಿ ಮೊದಲಿಗೆ ಅವರು ವಿಮಾನದಲ್ಲಿ ಪ್ರಯಾಣ ಮಾಡಿದ್ದಾರಾ ಇತ್ಯಾದಿ ಅವರ ಪೂರ್ವ ಮಾಹಿತಿಗಳನ್ನು ಸಹ ಕಲೆಹಾಕುತ್ತಿದ್ದಾರೆ. ಜೊತೆಗೆ ಕೊರೊನಾ ಭೀತಿ ಹಿನ್ನೆಲೆ ಬೆಳ್ಳಂಬೆಳಗ್ಗೆ ಬೌರಿಂಗ್ ಸಿಬ್ಬಂದಿ ಜೊತೆ ಸಭೆ ನಡೆಸಿ, ಯಾವ ರೀತಿ ಕೊರೊನಾವನ್ನು ತಡೆಗಟ್ಟಬೇಕು ಎನ್ನುವ ಬಗ್ಗೆ ಚರ್ಚೆ ಮಾಡಿದ್ದಾರೆ.

  • ಸ್ಕಿಮ್ಮಿಂಗ್ ಮಷೀನ್ ಬಳಸಿ ಎಟಿಎಂ ಕಾರ್ಡ್‌ಗಳ ಮಾಹಿತಿ ಕದ್ದರು – ನಕಲಿ ಕಾರ್ಡ್ ಮೂಲಕ ಹಣ ಪೀಕಿದರು

    ಸ್ಕಿಮ್ಮಿಂಗ್ ಮಷೀನ್ ಬಳಸಿ ಎಟಿಎಂ ಕಾರ್ಡ್‌ಗಳ ಮಾಹಿತಿ ಕದ್ದರು – ನಕಲಿ ಕಾರ್ಡ್ ಮೂಲಕ ಹಣ ಪೀಕಿದರು

    ರಾಮನಗರ: ಎಟಿಂಎ ಕೇಂದ್ರಗಳಲ್ಲಿ ಸ್ಕಿಮ್ಮಿಂಗ್ ಮಷೀನ್ ಅಳವಡಿಸಿ ಎಟಿಎಂ ಕಾರ್ಡ್‌ಗಳ ಮಾಹಿತಿ ಕದ್ದು, ನಕಲಿ ಕಾರ್ಡ್ ಮೂಲಕ ಹಣ ಕದಿಯುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ರಾಮನಗರ ಜಿಲ್ಲೆಯ ಕುದೂರು ಪೊಲೀಸರು ಬಂಧಿಸಿದ್ದಾರೆ.

    ಸಾರ್ವಜನಿಕರು ಎಟಿಎಂಗಳಲ್ಲಿ ಹಣ ಡ್ರಾ ಮಾಡುವ ವೇಳೆ ಎಟಿಎಂ ಕಾರ್ಡ್‌ಗಳ ಮಾಹಿತಿ ಕಳ್ಳತನ ಮಾಡಿ, ನಂತರ ನಕಲಿ ಎಟಿಎಂ ಕಾರ್ಡ್ ಮೂಲಕ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಇಬ್ಬರು ತಾಂಜೇನಿಯಾ ವಿದ್ಯಾರ್ಥಿಗಳನ್ನ ರಾಮನಗರ ಜಿಲ್ಲೆಯ ಕುದೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ತಾಂಜೇನಿಯಾ ದೇಶದ ಅಲೆಕ್ಸ್ ಮೆಂಡ್ರಾಡ್ ಮ್ಸೆಕೆ(24), ಜಾರ್ಜ್ ಜೆನೆಸ್ ಅಸ್ಸೆಯ್(24) ಎಂದು ಗುರುತಿಸಲಾಗಿದೆ.

    ಕಳ್ಳತನ ಮಾಡಿದ್ದು ಹೇಗೆ?
    ಬಂಧಿತ ಆರೋಪಿಗಳು ಸೆಕ್ಯೂರಿಟಿ ಗಾರ್ಡ್‌ಗಳಿಲ್ಲದ ಎಟಿಎಂ ಕೇಂದ್ರಗಳನ್ನ ಗುರಿಯಾಗಿಸಿಕೊಂಡು, ಎಟಿಎಂನಲ್ಲಿ ಸ್ಕಿಮ್ಮಿಂಗ್ ಮಷೀನ್ ಅಳವಡಿಸುತ್ತಿದ್ದರು. ನಂತರ ಎಟಿಎಂ ಕೇಂದ್ರಗಳಿಗೆ ಬಂದ ಸಾರ್ವಜನಿಕರು ಹಣ ಡ್ರಾ ಮಾಡುವ ವೇಳೆ ಎಟಿಎಂ ಮಾಹಿತಿ ಹಾಗೂ ಸೀಕ್ರೆಟ್ ಪಿನ್ ಎಲ್ಲವೂ ಸಹ ಸ್ಕಿಮ್ಮಿಂಗ್ ಮಷೀನಿನಲ್ಲಿ ರೆಕಾರ್ಡ್ ಆಗುತ್ತಿತ್ತು. ನಂತರ ನಕಲಿ ಎಟಿಎಂಗಳಿಗೆ ಮಾಹಿತಿಯನ್ನ ತುಂಬಿ ಬೇರೆ ಎಟಿಎಂಗಳಲ್ಲಿ ನಕಲಿ ಎಟಿಎಂ ಕಾರ್ಡ್‌ಗಳನ್ನು ಬಳಸಿ ಖದೀಮರು ಹಣ ಡ್ರಾ ಮಾಡಿಕೊಳ್ಳುತ್ತಿದ್ದರು.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
    ಹೀಗೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲಹಳಿ ಗ್ರಾಮದ ಶಿವಕುಮಾರ್ ಎಂಬವರ ಕೆನರಾ ಬ್ಯಾಂಕ್ ಎಟಿಎಂನ ಮಾಹಿತಿ ಕದ್ದು, ಆರೋಪಿಗಳು ಹಣ ಡ್ರಾ ಮಾಡುತ್ತಿದ್ದರು. ಎಟಿಎಂ ತಮ್ಮ ಬಳಿಯೇ ಇದ್ದರೂ ಹಣ ಡ್ರಾ ಆಗುತ್ತಿರುವ ಬಗ್ಗೆ ಮಾಹಿತಿ ತಿಳಿದ ಶಿವಕುಮಾರ್ ಅವರು ಕುದೂರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದ ಕುದೂರು ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

    ಅಲೆಕ್ಸ್ ಮೆಂಡ್ರಾಡ್ ಮ್ಸೆಕೆ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದು, ಯಲಹಂಕದ ಫ್ಲಾಟ್‍ವೊಂದರಲ್ಲಿ ವಾಸವಿದ್ದನು. ಇತ್ತ ಮತ್ತೊಬ್ಬ ಆರೋಪಿ ಜಾರ್ಜ್ ಕುಮಾರಸ್ವಾಮಿ ಲೇಔಟ್‍ನ ರಾಜ್ಯೋತ್ಸವ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು.

    ಬಂಧಿತರಿಂದ 1 ಕಾರು, 2 ಬೈಕ್, 1 ಲ್ಯಾಪ್ ಟಾಪ್, 4 ಮೊಬೈಲ್ ಫೋನ್‍ಗಳು, ನಕಲಿ ಎಟಿಎಂ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಎಟಿಎಂಗಳಲ್ಲಿ ಸಿಗ್ತಿಲ್ಲ 2 ಸಾವಿರ ರೂ. ನೋಟು- ಮೂರ್ನಾಲ್ಕು ತಿಂಗಳಿಂದ ಪಿಂಕ್ ನೋಟ್ ಮಾಯ

    ಎಟಿಎಂಗಳಲ್ಲಿ ಸಿಗ್ತಿಲ್ಲ 2 ಸಾವಿರ ರೂ. ನೋಟು- ಮೂರ್ನಾಲ್ಕು ತಿಂಗಳಿಂದ ಪಿಂಕ್ ನೋಟ್ ಮಾಯ

    ಬೆಂಗಳೂರು: ಇಷ್ಟು ದಿನ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬ್ಯಾನ್ ಆಗುತ್ತೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಈಗ ಅದಕ್ಕೆ ಪುಷ್ಠಿ ಎಂಬಂತೆ ಮಾರ್ಚ್ 1ರಿಂದ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಸಿಗಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂಬುದು ಜನರ ಮಾತಾಗಿದ್ದು, ಸಿಲಿಕಾನ್ ಸಿಟಿಯ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟ್ ಸಿಗುತ್ತಾ ಇದೆಯಾ? ಇಲ್ವ? ಎಂದು ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ಆತಂಕಕಾರಿ ವಿಚಾರ ಬಯಲಾಗಿದೆ.

    ಇಂಡಿಯನ್ ಬ್ಯಾಂಕ್ ಹೇಳಿದ್ದೇನು?
    ಫೆ. 17ರಂದು ಇಂಡಿಯನ್ ಬ್ಯಾಂಕಿನ ಲೆಂಡರ್ಸ್ ಡಿಜಿಟಲ್ ಬ್ಯಾಂಕಿಂಗ್ ವಿಭಾಗ ಸುತ್ತೋಲೆ ಹೊರಡಿಸಿದೆ. 2000 ರೂಪಾಯಿ ಮುಖಬೆಲೆಯ ನೋಟುಗಳು ಭಾರಿ ಮೊತ್ತದ್ದಾಗಿದ್ದು, ಇದರಿಂದ ಚಿಲ್ಲರೆ ವ್ಯಾಪಾರಿಗಳು ಹಾಗೂ ಗ್ರಾಹಕರು ಚೇಂಜ್ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಈ ನೋಟುಗಳ ವ್ಯವಹಾರವನ್ನು ನಮ್ಮ ಬಾಂಕಿನಲ್ಲಿ ಸ್ಥಗಿತಗೊಳಿಸಲಾಗಿದ್ದು, ಕೇವಲ 100, 200 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳು ಮಾತ್ರ ನಮ್ಮ ಎಟಿಎಂಗಳಲ್ಲಿ ಲಭ್ಯವಿರುತ್ತೆ ಎಂದು ತಿಳಿಸಿತ್ತು. ಅಲ್ಲದೇ ಮಾರ್ಚ್ 1ರಿಂದ 2000 ರೂಪಾಯಿ ನೋಟು ನಮ್ಮಲ್ಲಿ ಸಿಗಲ್ಲ ಎಂದು ಹೇಳಿತ್ತು.

    ಕಳೆದ ನಾಲ್ಕೈದು ತಿಂಗಳಿನಿಂದ ಎಟಿಎಂಗಳಲ್ಲಿ 2 ಸಾವಿರ ನೋಟು ಹೆಚ್ಚಾಗಿ ಸಿಗುತ್ತಿಲ್ಲ. 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂದು ಗ್ರಾಹಕರು ಮಾತಾಡಿಕೊಳ್ಳುತ್ತಿದ್ದರು. ಅದಕ್ಕೆ ಪುಷ್ಠಿ ಎಂಬಂತೆ ಇಂಡಿಯಾನ್ ಬ್ಯಾಂಕ್ ಆತಂಕಕಾರಿ ಮಾಹಿತಿ ನೀಡಿದೆ. ಇದರಿಂದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬೆಂಗಳೂರಿನ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟ್ ಸಿಗುತ್ತಾ ಇದೆಯಾ? ಇಲ್ವ ಎಂದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡಿದಾಗ ಎರಡು ಸಾವಿರ ನೋಟ್ ನಾಪತ್ತೆಯಾಗಿರೋದು ಪತ್ತೆಯಾಗಿದೆ.

    ಸ್ಥಳ- ಮತ್ತಿಕೆರೆ
    ಮತ್ತಿಕೆರೆ ಸರ್ಕಲ್‍ನಲ್ಲಿ ಇರುವ ಎಸ್‍ಬಿಐ ಎಟಿಎಂನಲ್ಲಿ 2 ಸಾವಿರ ನೋಟ್ ಸಿಗುತ್ತಿದೆಯಾ? ಇಲ್ವಾ ಎಂದು ಪಬ್ಲಿಕ್ ಟಿವಿ ತಂಡ ರಿಯಾಲಿಟಿ ಚೆಕ್ ಮಾಡೋದಕ್ಕೆ ಮುಂದಾಯಿತು. ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಗ್ರಾಹಕರನ್ನು ಕೂಡ ಮಾತಾಡಿಸಿದೇವು. ಈ ಎಟಿಎಂನಲ್ಲಿ 2 ಸಾವಿರ ರೂಪಾಯಿ ಡ್ರಾ ಮಾಡಿದಾಗ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬರಲಿಲ್ಲ. ಬದಲಿಗೆ ಬರೀ 500 ರೂಪಾಯಿ ನೋಟುಗಳು ಮಾತ್ರ ಬಂದವು. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರು ಕಳೆದ 20 ದಿನಗಳಿಂದಲೂ 2 ಸಾವಿರ ರೂಪಾಯಿ ನೋಟು ಸಿಗುತ್ತಿಲ್ಲ ಎಂದರು.

    ಸ್ಥಳ- ಯಲಹಂಕ
    ಇತ್ತ ಯಲಹಂಕ ಸರ್ಕಲ್‍ನಲ್ಲಿ ಕೂಡ ಕೊಟಕ್ ಮಹಿಂದ್ರಾ ಬ್ಯಾಂಕ್ ಎಟಿಎಂನಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬರುತ್ತಾ ಅಂತಾ ಚೆಕ್ ಮಾಡಿದ್ದೆವು. ಆದರೆ ಅಲ್ಲಿ ಕೂಡ ಬರೀ 500 ರೂಪಾಯಿ ನೋಟು ಬಂದವು. ಯಾಕೆ 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂದು ಸೆಕ್ಯೂರಿಟಿನಾ ಕೇಳುದರೆ, ಇಲ್ಲಿ ನಾಲ್ಕೈದು ತಿಂಗಳಿಂದ 2 ಸಾವಿರ ನೋಟು ಬರುತ್ತಿಲ್ಲ. ಮತ್ತೆ ಡೆಪಾಸಿಟ್ ಕೂಡ ಮಾಡ್ತಿಲ್ಲ ಎಂದು ತಿಳಿಸಿದರು.

    ಸ್ಥಳ- ಹೆಬ್ಬಾಳ
    ಮತ್ತಿಕೆರೆ ,ಯಲಹಂಕ ಎರಡು ಕಡೆ ಎಟಿಎಂನಲ್ಲೂ ಕೂಡ 2 ಸಾವಿರ ರೂಪಾಯಿ ನೋಟ್ ಬರಲಿಲ್ಲ. ಬಳಿಕ ಹೆಬ್ಬಾಳದ ಐಸಿಐಸಿಐ ಬ್ಯಾಂಕ್‍ನ ಎಟಿಎಂನಲ್ಲಿ ರಿಯಾಲಿಟಿ ಚೆಕ್ ಮಾಡಿದಾಗ, ಅಲ್ಲಿ ಕೂಡ 2 ಸಾವಿರ ರೂಪಾಯಿ ನೋಟು ಸಿಗಲಿಲ್ಲ.

    ಸ್ಥಳ-ಮಲ್ಲೇಶ್ವರಂ
    ಬಳಿಕ ಅಲ್ಲಿಂದ ಮಲ್ಲೇಶ್ವರ ಕಡೆ ಹೋಗಿ ಒಂದು ಎಟಿಎಂನಲ್ಲಿ ಎರಡು ಸಾವಿರ ನೋಟು ಡ್ರಾ ಮಾಡಿಕೊಳ್ಳಲು ಮುಂದಾದೆವು. ಆದರೆ ಇಲ್ಲಿಯೂ ಅದೇ ಪರಸ್ಥಿತಿ, ಕೇವಲ 100, 200 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳೇ ಎಂಟಿಎಂನಲ್ಲಿ ಸಿಕ್ಕಿತು.

    ಹೀಗೆ ಬೆಂಗಳೂರಿನ ಬಹುತೇಕ ಎಟಿಎಂಗಳಲ್ಲಿ 2 ಸಾವಿರ ನೋಟು ಸಿಗಲಿಲ್ಲ. ಬರೀ 500, 200, 100 ರೂಪಾಯಿ ಮುಖಬೆಲೆಯ ನೋಟುಗಳು ಸಿಗುತ್ತಿವೆ. ಈ ಪರಿಸ್ಥಿತಿ ನಾಲ್ಕೈದು ತಿಂಗಳಿಂದನೂ ಇದೆ. ನೋಟು ಸಿಗುತ್ತಿಲ್ಲ ಎಂಬ ಮಾಹಿತಿ ಸದ್ಯ ಗ್ರಾಹಕರಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟುಹಾಕಿದ್ದು, ಮುಂದಿನ ದಿನಗಳಲ್ಲಿ 2 ಸಾವಿರ ನೋಟ್ ಬ್ಯಾನ್ ಆಗುತ್ತಾ ಎಂಬ ಅನುಮಾನಗಳು ಕೂಡ ಗ್ರಾಹಕರಲ್ಲಿ ಕಾಡುತ್ತಿದೆ.

  • ಬ್ಯಾಂಕ್ ನೌಕರರ ಮುಷ್ಕರ – ಎಟಿಎಂಗಳ ಬಳಿ ಗ್ರಾಹಕರ ಪರದಾಟ

    ಬ್ಯಾಂಕ್ ನೌಕರರ ಮುಷ್ಕರ – ಎಟಿಎಂಗಳ ಬಳಿ ಗ್ರಾಹಕರ ಪರದಾಟ

    ಬೆಂಗಳೂರು: ವಿವಿಧ ಬೇಡಿಕೆ ಆಧರಿಸಿ ಬ್ಯಾಂಕ್‍ಗಳ ಮುಷ್ಕರಕ್ಕೆ ಕರೆ ನೀಡಲಾಗಿದೆ. ಪರಿಣಾಮ 2 ದಿನ ನೌಕರರ ಮುಷ್ಕರದ ಎಫೆಕ್ಟ್ ಜೊತೆ ಮಧ್ಯೆ ಭಾನುವಾರ ಹಿನ್ನೆಲೆಯಲ್ಲಿ ಇಂದಿನಿಂದ 3 ದಿನ ಬ್ಯಾಂಕ್ ವಹಿವಾಟು ಬಂದ್ ಆಗಿದೆ. ವೇತನ ಒಪ್ಪಂದ ಮಾತುಕತೆ ವಿಫಲ ಹಿನ್ನೆಲೆ ಎಲ್ಲಾ ಬ್ಯಾಂಕ್ ಗಳು ಬಂದ್ ಗೆ ಕರೆ ನೀಡಲಾಗಿದೆ.

    ಬ್ಯಾಂಕ್ ನೌಕರರ ಬೇಡಿಕೆಯಂತೆ 15% ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಬಂದ್ ನಡೆಯುತ್ತಿದ್ದು, ನಗರದ ಬಹುತೇಕ ಕಡೆ ಎಟಿಎಂಗಳಲ್ಲಿ ಹಣ ಖಾಲಿಯಾಗಿದೆ. ಮತ್ತೆ ಕೆಲವೆಡೆ ಎಟಿಎಂ ಸೆಂಟರ್ ಗಳು ಔಟ್ ಆಫ್ ಸರ್ವಿಸ್ ಆಗಿದೆ. ಪರಿಣಾಮ ನಗದಿಗಾಗಿ ಗ್ರಾಹಕರು ಅಲೆದಾಟ ಮಾಡುತ್ತಿರುವ ಸ್ಥಿತಿ ಎದುರಾಗಿದೆ.

    ಮಹಾಲಕ್ಷ್ಮೀ ಲೇಔಟ್, ಲಗ್ಗೆರೆ, ನಂದಿನಿ ಲೇಔಟ್ ಸೇರಿದಂತೆ ಹಲವೆಡೆ ಎಲ್ಲ ಬ್ಯಾಂಕ್‍ಗಳ ಎಟಿಎಂಗಳಲ್ಲಿ ಹಣದ ಲಭ್ಯತೆ ಕಡಿಮೆಯಾಗಿದೆ. ಅದರಲ್ಲೂ ಬ್ಯಾಂಕ್ ಅಸೋಸಿಯೇಷನ್ ಕರೆ ನೀಡಿರುವ ಬಂದ್‍ನಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳು ಪೂರ್ಣ ಸ್ಥಗಿತವಾಗಿದೆ. ಪರಿಣಾಮ ಖಾಸಗಿ ಬ್ಯಾಂಕ್ ಎಟಿಎಂಗಳ ಕಡೆ ಗ್ರಾಹಕರು ಮುಖ ಮಾಡಿದ್ದಾರೆ. ಪರಿಣಾಮ ಖಾಸಗಿ ಬ್ಯಾಂಕ್ ಎಟಿಎಂಗಳಲ್ಲೂ ಹಣ ಸಿಗುತ್ತಿಲ್ಲ.

    ಹಲವೆಡೆ 100 ರೂ. ಮುಖ ಬೆಲೆಯ ನಗದು ಮಾತ್ರ ಸಿಗುತ್ತಿಲ್ಲ. 500, 2000 ಸಾವಿರ ಮಾತ್ರ ಕೆಲ ಎಟಿಎಂಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸಿಗುತ್ತಿದೆ. ಬ್ಯಾಂಕ್ ಮುಷ್ಕರದ ಮೊದಲ ದಿನವೇ ಸ್ಥಿತಿ ಹೀಗಿದೆ.

  • ಸಿಸಿಟಿವಿ ಕ್ಯಾಮೆರಾಕ್ಕೆ ಚೂಯಿಂಗ್ ಗಮ್ ಅಂಟಿಸಿ ಎಟಿಎಂ ಕಳ್ಳತನಕ್ಕೆ ಯತ್ನ

    ಸಿಸಿಟಿವಿ ಕ್ಯಾಮೆರಾಕ್ಕೆ ಚೂಯಿಂಗ್ ಗಮ್ ಅಂಟಿಸಿ ಎಟಿಎಂ ಕಳ್ಳತನಕ್ಕೆ ಯತ್ನ

    – 15 ಲಕ್ಷ ರೂ. ಕದ್ದು ಎಸ್ಕೇಪ್ ಆಗುವಾಗ್ಲೆ ತಗ್ಲಾಕೊಂಡ್ರು
    – 100 ಕೆ.ಜಿ ತೂಕದ ಗ್ಯಾಸ್ ಕಟರ್‌ನಿಂದ ಎಟಿಎಂ ಒಡೆದ ಕಳ್ಳರು

    ಬೆಂಗಳೂರು: ಕಳ್ಳರು ಎಟಿಎಂನ ಸಿಸಿಟಿವಿ ಕ್ಯಾಮೆರಾಗೆ ಚೂಯಿಂಗ್ ಗಮ್ ಅಂಟಿಸಿ, ಬ್ಲಾಕ್ ಸ್ಪ್ರೇ ಹೊಡೆದು ಕಳ್ಳತನಕ್ಕೆ ಯತ್ನಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಬರೋಬ್ಬರಿ 15 ಲಕ್ಷ ರೂ. ಹಣ ಕದ್ದು ಪರಾರಿಯಾಗುವಷ್ಟರಲ್ಲಿ ಖದೀಮರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಬೆಂಗಳೂರಿನ ದೀಪಾಂಜಲಿನಗರದ ಎಸ್‍ಬಿಐ ಎಟಿಎಂನಲ್ಲಿ ಕಳ್ಳರು ಈ ಕೃತ್ಯವೆಸೆಗಿದ್ದಾರೆ. 100 ಕೆ.ಜಿ ತೂಕದ ಗ್ಯಾಸ್ ಕಟರ್‌ನಿಂದ ಎಟಿಎಂ ಮಿಷನ್ ಒಡೆದ ಕಳ್ಳರು ಅದರಲ್ಲಿದ್ದ 15 ಲಕ್ಷ ಹಣವನ್ನ ಬ್ಯಾಗ್‍ಗೆ ತುಂಬಿಕೊಂಡಿದ್ದರು. ಇನ್ನೇನು ಸ್ಥಳದಿಂದ ಹೊರಡಬೇಕು ಎನ್ನುವಷ್ಟರಲ್ಲಿ ಪೊಲೀಸರ ಕೈಗೆ ಖತರ್ನಾಕ್ ಕಳ್ಳರು ಸಿಕ್ಕಿಬಿದ್ದಿದ್ದಾರೆ.

    ಭಾನುವಾರ ಮಧ್ಯರಾತ್ರಿ 1:30ರ ವೇಳೆಗೆ ಎಟಿಎಂಗೆ ಎಂಟ್ರಿ ಕೊಟ್ಟ ಕಳ್ಳರು ಹೊರಗಿದ್ದ ಎರಡು ಸಿಸಿಟಿವಿ ಕ್ಯಾಮೆರಾಗಳಿಗೆ ಚೂಯಿಂಗ್ ಗಮ್ ಅಂಟಿಸಿದರು. ಬಳಿಕ ಒಳಗಿದ್ದ ಸಿಸಿಟಿವಿಗೆ ಬ್ಲಾಕ್ ಸ್ಪ್ರೇ ಹೊಡೆದಿದ್ದಾರೆ. ಯಾವಾಗ ಆರೋಪಿಗಳು ಸಿಸಿಟಿವಿಗೆ ಚೂಯಿಂಗ್ ಗಮ್ ಮತ್ತು ಬ್ಲ್ಯಾಕ್ ಸ್ಪ್ರೇ ಹೊಡೆದ್ರೊ, ಚಿತ್ರಣಗಳು ಸ್ಪಷ್ಟವಾಗಿ ಗೋಚರಿಸದಿರೋದನ್ನ ಗಮನಿಸಿದ ಮುಂಬೈ ಎಸ್‍ಬಿಐ ಪ್ರಧಾನ ಕಚೇರಿ ಕಂಟ್ರೋಲ್ ರೂಮ್ ಸಿಬ್ಬಂದಿ ಕೂಡಲೇ ಮುಂಬೈನಿಂದ ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಮ್ ಗೆ ಅಲರ್ಟ್ ಮೆಸೇಜ್ ರವಾನಿಸಿದರು.

    ತಕ್ಷ ಎಚ್ಚೆತ್ತ ಪೊಲೀಸರಿಗೆ ಯಾವ ಎಟಿಎಂ ಎಂಬ ನಿಖರ ಮಾಹಿತಿ ಇರಲಿಲ್ಲ. ಹೀಗಾಗಿ ದೀಪಾಂಜಲಿನಗರದ ಎಲ್ಲಾ ಎಸ್‍ಬಿಐ ಎಟಿಎಂಗಳನ್ನು ಪರಿಶೀಲಿಸುತ್ತ ಬಂದಿದ್ದಾರೆ. ಈ ವೇಳೆ ಶೆಟರ್ ಮುಚ್ಚಿದ್ದ ಎಂಟಿಎಂ ಒಂದರ ಒಳಗಿಂದ ಬೆಂಕಿಯ ಕಿಡಿಗಳು ಕಾಣಿಸಿದ್ದು, ಹೊರಗಿನಿಂದ ಲಾಕ್ ಮುರಿದು ಶೆಟರ್ ಓಪನ್ ಮಾಡಿದಾಗ ಇಬ್ಬರು ಕಳ್ಳರು ಸಿಕ್ಕಿಬಿದ್ದಿದ್ದಾರೆ. ಇಬ್ಬರು ಹೈ ಫೈ ಕಳ್ಳರನ್ನ ರೆಡ್ ಹ್ಯಾಂಡ್ ಆಗಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳನ್ನು ಹರ್ಷಾ ಆರೊ, ಸುರಬ್ಜಿತ್ ಎಂದು ಗುರುತಿಸಲಾಗಿದೆ. ಈ ಖತರ್ನಾಕ್ ಕಳ್ಳರು ಪಂಜಾಬ್ ಮೂಲದವರಾಗಿದ್ದು, 15 ಲಕ್ಷ ಹಣದ ಸಮೇತ ರೆಡ್ ಹ್ಯಾಂಡಾಗಿ ಕಳ್ಳರನ್ನ ಪೊಲೀಸರು ಹಿಡಿದಿದ್ದಾರೆ. ಬೆಂಗಳೂರಿನ ಎರಡು ಮೂರು ಎಟಿಎಂಗಳ ಕಳ್ಳತನದಲ್ಲೂ ಆರೋಪಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ವಿಚಾರಣೆಯನ್ನು ಬ್ಯಾಟರಾಯನಪುರ ಪೊಲೀಸರು ಮುಂದುವರಿಸಿದ್ದಾರೆ.

  • ಕಾರ್ಡ್ ಇಲ್ಲದಿದ್ರೂ ಎಟಿಎಂನಿಂದ ಬಂತು ಗರಿಗರಿ ನೋಟುಗಳು!

    ಕಾರ್ಡ್ ಇಲ್ಲದಿದ್ರೂ ಎಟಿಎಂನಿಂದ ಬಂತು ಗರಿಗರಿ ನೋಟುಗಳು!

    -ಬ್ಯಾಂಕಿಗೆ ವಾಪಸ್ ನೀಡಿ, ಪ್ರಾಮಾಣಿಕತೆ ಮೆರೆದ ಯುವಕರು

    ನೆಲಮಂಗಲ: ಹಣ ಡ್ರಾ ಮಾಡದಿದ್ದರೂ ಎಟಿಎಂ ಮೆಷಿನ್‍ನಿಂದ ಹಣ ಬಂದಿರುವ ವಿಚಿತ್ರ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಎಸ್‍ಬಿಐ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡದಿದ್ದರೂ ಎಟಿಎಂ ಮೆಷಿನ್‍ನಿಂದ ಹಣ ಬಂದಿದೆ. ನೆಲಮಂಗಲ ಟಿಬಿ ಬಸ್ ನಿಲ್ದಾಣದ ಸಮೀಪವಿರುವ ಎಸ್‍ಬಿಐ ಎಟಿಎಂನಲ್ಲಿ ಸೋಮವಾರ ಸಂಜೆ ಸ್ಟೇಟ್‍ಮೆಂಟ್ ಪಡೆಯಲು ತೆರಳಿದ್ದಾಗ, ಇದ್ದಕ್ಕಿದ್ದಂತೆ 100, 200 ಮುಖಬೆಲೆಯ ಗರಿಗರಿಯ ಸುಮಾರು 4900 ರೂ. ಹಣ ಮೆಷಿನ್ ನಿಂದ ಹೊರಬಂದಿದೆ.

    ಹಣವನ್ನು ನೋಡಿ ಬೆರಗಾಗಿದ್ದ ಯುವಕರು ಹಣವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಯಾಕೆಂದರೆ ಸೋಮವಾರ ಬ್ಯಾಂಕ್ ಸಮಯ ಮುಗಿದಿತ್ತು. ಸ್ನೇಹಿತರಾದ ಉಮಾಮಹೇಶ್, ಉಮೇಶ್, ಪ್ರದೀಪ್ ಬ್ಯಾಂಕ್‍ಗೆ ಹಣವನ್ನು ಹಿಂದಿರುಗಿಸಿದ್ದಾರೆ.

    ಒಟ್ಟಿನಲ್ಲಿ ಹಣವನ್ನು ಕಬಳಿಸುವವರ ಮಧ್ಯದಲ್ಲಿ ಈ ಯುವಕರ ತಂಡ ಹೊಸವರ್ಷಕ್ಕೆ ಉತ್ತಮ ಕೆಲಸ ಮಾಡಿದೆ. 4900 ರೂ.ಗಳನ್ನು ಹೊಸ ವರ್ಷದ ಗಿಫ್ಟ್ ಎಂದೇ ನೋಡುವ ಜನರ ಮಧ್ಯೆ ಈ ಯುವಕರು ಹಣವನ್ನು ಬ್ಯಾಂಕ್‍ಗೆ ಹಿಂದಿರುಗಿಸಿ ಪ್ರಾಮಾಣಿಕತೆಗೆ ನಿಜವಾದ ಅರ್ಥ ನೀಡಿದ್ದಾರೆ.

  • ಎಟಿಎಂನಲ್ಲಿ ಹಣ ಕದಿಯಲು ಯತ್ನ – ರೆಡ್ ಹ್ಯಾಂಡ್ ಆಗಿ ಕಳ್ಳನನ್ನು ಹಿಡಿದ ಪೊಲೀಸರು

    ಎಟಿಎಂನಲ್ಲಿ ಹಣ ಕದಿಯಲು ಯತ್ನ – ರೆಡ್ ಹ್ಯಾಂಡ್ ಆಗಿ ಕಳ್ಳನನ್ನು ಹಿಡಿದ ಪೊಲೀಸರು

    ಬೀದರ್: ಎಟಿಎಂ ಒಡೆದು ದರೋಡೆ ಮಾಡಲು ಯತ್ನಿಸಿದ ಕಳ್ಳನನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದು ಕಾರ್ಯಚರಣೆ ಯಶಸ್ವಿಗೊಳಿಸಿದ ಘಟನೆ ಇಂದು ನಸುಕಿನ ಜಾವ ನಡೆದಿದೆ.

    ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಶಹಾಪುರ ಮಸೀದಿ ಮುಖ್ಯ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್‍ನ ಎಟಿಎಂ ಒಡೆದು ದರೋಡೆ ಮಾಡಲು ಯತ್ನ ಮಾಡಿದ್ದಾನೆ. ಇಂದು ಬೆಳಗ್ಗಿನ ಜಾವ ಎಟಿಎಂಗೆ ನುಗ್ಗಿದ ಕಳ್ಳ ಯಂತ್ರ ಒಡೆಯಲು ತೊಡಿಗಿದ್ದನು. ಎಟಿಎಂ ಯಂತ್ರ ಒಡೆಯುವ ವೇಳೆ ಬ್ಯಾಂಕ್‍ನ ಮುಖ್ಯ ಕಚೇರಿಗೆ ಸಂದೇಶ ರವಾನೆಯಾಗಿದೆ.

    ಸಂದೇಶ ರವಾನೆ ಆಗುತ್ತಿದ್ದಂತೆ ತಕ್ಷಣ ಎಚ್ಚೆತ್ತ ಬ್ಯಾಂಕ್ ಸಿಬ್ಬಂದಿ ನಗರ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಬಂದ ಕೂಡಲೆ ಕಾರ್ಯಪ್ರವರ್ತರಾದ ಸಿಪಿಐ ಮಲ್ಲಿಕಾರ್ಜುನ ಯಾತನೂರ ಹಾಗೂ ಪಿಎಸ್‍ಐ ಸುನಿಲಕುಮಾರ ನೇತೃತ್ವದ ಪೊಲೀಸರ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬಸವಕಲ್ಯಾಣ ನಗರ ನಿವಾಸಿ ಶ್ರೀಕಾಂತ ಮಲ್ಲಿಕಾರ್ಜುನ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳವು ಮಾಡಲು ಯತ್ನಿಸಿದ ವ್ಯಕ್ತಿ ಮದ್ಯದ ಅಮಲಿನಲ್ಲಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಕೊಂಡಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ಎಟಿಎಂ ಒಡೆದು ಹಣ ದೋಚಲು ಖದೀಮರ ಸ್ಕೆಚ್ – ಹೈದರಾಬಾದಿನಲ್ಲಿ ಅಲರ್ಟ್

    ಚಿಕ್ಕಬಳ್ಳಾಪುರದಲ್ಲಿ ಎಟಿಎಂ ಒಡೆದು ಹಣ ದೋಚಲು ಖದೀಮರ ಸ್ಕೆಚ್ – ಹೈದರಾಬಾದಿನಲ್ಲಿ ಅಲರ್ಟ್

    – ಕಳ್ಳರನ್ನು ರೆಡ್ ಹ್ಯಾಂಡಾಗಿ ಹಿಡಿದ ಮ್ಯಾನೇಜರ್

    ಚಿಕ್ಕಬಳ್ಳಾಪುರ: ಎಟಿಎಂ ಒಡೆದು ಹಣ ದೋಚಲು ಯತ್ನಿಸಿದ ಇಬ್ಬರು ಖದೀಮರು ರೆಡ್ ಹ್ಯಾಂಡಾಗಿ ಮ್ಯಾನೇಜರ್ ಕೈಗೆ ಸಿಕ್ಕಿಬಿದ್ದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೊಟೆ ಕ್ರಾಸ್‍ನಲ್ಲಿ ನಡೆದಿದೆ.

    ಜಂಗಮಕೋಟೆ ಕ್ರಾಸ್‍ನಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂ ಸೆಂಟರ್‍ಗೆ ರಾತ್ರಿ 10.30ರ ವೇಳೆ ನುಗ್ಗಿದ ಖದೀಮರು, ಮೊದಲು ಸಿಸಿಟಿವಿ ಒಡೆದು ಹಾಕಿ, ತದನಂತರ ಎಟಿಎಂ ಒಡೆದು ಹಣ ದೋಚಲು ಪ್ರಯತ್ನಿಸಿದ್ದರು. ಆದರೆ ಖದೀಮರ ಕೃತ್ಯ ದೂರದ ಹೈದರಾಬಾದಿನಲ್ಲಿ ಮಾನಿಟರಿಂಗ್ ಮಾಡುತ್ತಿದ್ದ ಬ್ಯಾಂಕ್‍ನ ಮಾನಿಟಿರಿಂಗ್ ಡಿಪಾರ್ಟಮೆಂಟ್‍ಗೆ ತಿಳಿದಿದ್ದು, ಮಾಹಿತಿ ಸಿಕ್ಕಿ ಕೂಡಲೇ ಸ್ಥಳೀಯ ಬ್ಯಾಂಕಿನ ಮ್ಯಾನೇಜರ್ ಸೌರಬ್ ಸಿನ್ಹಾರಿಗೆ ತಿಳಿಸಲಾಯಿತು.

    ಕೂಡಲೇ ರಾತ್ರಿ 11 ಗಂಟೆ ಸುಮಾರಿಗೆ ಎಟಿಎಂ ಬಳಿ ಬಂದು ದೂರದಿಂದ ನೋಡಿದ ಮ್ಯಾನೇಜರಿಗೆ ಇಬ್ಬರು ಖದೀಮರು ಮುಖಕ್ಕೆ ಮಾಸ್ಕ್ ಧರಿಸಿ ಎಟಿಎಂ ಒಡೆಯುತ್ತಿರುವ ಶಬ್ದ ಕೇಳಿಬಂದಿದೆ. ಇದರಿಂದ ಎಚ್ಚೆತ್ತ ಮ್ಯಾನೇಜರ್ ಸ್ಥಳೀಯರ ಸಹಾಯ ಪಡೆದು ಇಬ್ಬರು ಖದೀಮರನ್ನ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

    ಬಂಧಿತರು ಬೆಂಗಳೂರು ಮೂಲದ ಮಹಮದ್ ಇರ್ಫಾನ್ ಖಾನ್ ಹಾಗೂ ಶಾಬಾಜ್ ಖಾನ್ ಎಂದು ಗುರುತಿಸಲಾಗಿದೆ. ಸದ್ಯ ಬಂಧಿತರನ್ನ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

  • ಬ್ಯಾಂಕ್‍ನಲ್ಲಿ ಇಲ್ಲ, ಎಟಿಎಂನಲ್ಲೂ ಸಿಗ್ತಿಲ್ಲ 2ಸಾವಿರ ರೂ. ನೋಟು

    ಬ್ಯಾಂಕ್‍ನಲ್ಲಿ ಇಲ್ಲ, ಎಟಿಎಂನಲ್ಲೂ ಸಿಗ್ತಿಲ್ಲ 2ಸಾವಿರ ರೂ. ನೋಟು

    ಬೆಂಗಳೂರು: ಸದ್ದಿಲ್ಲದೆ ಎರಡು ಸಾವಿರ ನೋಟು ಬ್ಯಾನ್ ಆಗ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿದೆ. ಯಾಕೆಂದರೆ ಎಟಿಎಂನಲ್ಲಿ 2 ಸಾವಿರ ಮುಖ ಬೆಲೆಯ ನೋಟು ಸಿಗ್ತಿಲ್ಲ ಎನ್ನುವ ಸುದ್ದಿಯ ಜೊತೆ, ಕೆಲವೆಡೆ 2 ಸಾವಿರ ನೋಟಿನ ಚಲಾವಣೆಯೂ ಸ್ಥಗಿತಗೊಂಡಿದೆ ಎನ್ನುವ ವಿಚಾರದ ಬಗ್ಗೆ ಆತಂಕ ಸೃಷ್ಟಿಯಾಗಿದೆ.

    ನೋಟು ಅಮಾನ್ಯೀಕರಣ ಆಗಿ 3 ವರ್ಷಗಳು ಕಳೆದಿದೆ. 500, 1 ಸಾವಿರ ಮುಖ ಬೆಲೆಯ ನೋಟ್ ಬ್ಯಾನ್ ಆದಾಗ ಜನಜೀವನ ಅಸ್ತವ್ಯಸ್ತವಾಗಿ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳೋದಕ್ಕೆ ತಿಂಗಳುಗಳೇ ಬೇಕಾಯ್ತು. ಇನ್ನೂ ನೋಟು ಅಮಾನ್ಯೀಕರಣ ಹೊಡೆತದಿಂದ ಹೊರ ಬರಲು ಸಾಧ್ಯವಾಗ್ತಿಲ್ಲ. ಇದರ ಬೆನ್ನಲ್ಲೇ ಈಗ ಇನ್ನೊಂದು ಶಾಕಿಂಗ್ ಸುದ್ದಿ ಹರಿದಾಡುತ್ತಿದ್ದು, 2 ಸಾವಿರ ರೂ. ನೋಟು ಕೂಡ ಬ್ಯಾನ್ ಆಗುವ ಮುನ್ಸೂಚನೆ, ಲಕ್ಷಣಗಳು ಕಾಣಸಿಗುತ್ತಿದೆ.

    ಈಗಾಗಲೇ ಬಹುತೇಕ ಎಟಿಎಂನಲ್ಲಿ ಎರಡು ಸಾವಿರ ನೋಟು ಸಿಗುತ್ತಿಲ್ಲ ಅನ್ನುವ ಸುದ್ದಿಗಳು ಹರಿದಾಡುತ್ತಿದ್ದು, ಇದರ ರಿಯಾಲಿಟಿ ಚೆಕ್ ಪಬ್ಲಿಕ್ ಟಿವಿ ನಡೆಸಿದೆ. ಬಸವೇಶ್ವರ ನಗರ ಸರ್ಕಲ್, ಲಗ್ಗೆರೆ ಕ್ರಾಸ್, ಮತ್ತಿಕೆರೆ, ಬಸವೇಶ್ವರ ನಗರ, ಮಲ್ಲೇಶ್ವರಂ ಸೇರಿದಂತೆ ಬೆಂಗಳೂರಿನ ಹಲವು ಕಡೆ ಎಂಟಿಎಂಗಳಲ್ಲಿ ಹಣ ತೆಗೆದು ಪರಿಶೀಲಿಸಿದಾಗ ಯಾವುದರಲ್ಲೂ 2 ಸಾವಿರ ಮುಖ ಬೆಲೆಯ ನೋಟು ಲಭ್ಯವಾಗಿಲ್ಲ.

    ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿಯೂ ಇದೇ ಪರಸ್ಥಿತಿಯಾಗಿದೆ. ಈ ಎಟಿಎಂನಲ್ಲಿ ಹಣ ಡ್ರಾ ಮಾಡಲು ಬರುವ ಗ್ರಾಹಕರ ಕೈಗೆ ಬರೀ 100, 500 ರೂ. ನೋಟುಗಳು ಮಾತ್ರ ಸಿಗುತ್ತಿವೆ. ಇದರಿಂದ ದೊಡ್ಡ ಮಟ್ಟದ ಹಣವನ್ನ ಡ್ರಾ ಮಾಡಿಕೊಂಡು ಹೋಗೋದಕ್ಕೆ ಸಮಸ್ಯೆಯಾಗುತ್ತಿದೆ ಅಂತ ಗ್ರಾಹಕರು ಹೇಳುತ್ತಿದ್ದಾರೆ.

    ನೋಟು ಪ್ರಿಂಟಿಂಗ್ ಏನಾದರು ಕಡಿಮೆಯಾಗಿದೆಯಾ? ಇಲ್ಲಾ 2 ಸಾವಿರ ನೋಟ್ ಏನಾದರು ಬ್ಯಾನ್ ಆಗುತ್ತಾ ಎಂದು ಜನರು ಗೊಂದಲದಲ್ಲಿದ್ದು, ಮತ್ತೆ ನೋಟ್ ಬ್ಯಾನ್ ಭಯ ಜನಸಾಮಾನ್ಯರನ್ನು ಕಾಡಲು ಆರಂಭಿಸಿದೆ.