Tag: atm

  • ಎಟಿಎಂ ತೆರೆಯದೇ, ಒಡೆಯದೇ 20 ಲಕ್ಷ ರೂ. ಕದ್ದ ಖದೀಮರು!

    ಎಟಿಎಂ ತೆರೆಯದೇ, ಒಡೆಯದೇ 20 ಲಕ್ಷ ರೂ. ಕದ್ದ ಖದೀಮರು!

    ಮುಂಬೈ: ಎಟಿಎಂಗೆ ನುಗ್ಗಿ ಯಂತ್ರವನ್ನ ತೆರೆದು ಅಥವಾ ಒಡೆದು ಕಳ್ಳತನ ಮಾಡಿರೋ ಬಗ್ಗೆ ಈ ಹಿಂದೆ ಸುದ್ದಿಯಾಗಿದೆ. ಆದ್ರೆ ಖದೀಮರು ಎಟಿಎಂ ತೆರೆಯದೇ, ಯಂತ್ರವನ್ನ ಒಡೆಯದೇ ಬರೋಬ್ಬರಿ 20.8 ಲಕ್ಷ ರೂ. ಕಳ್ಳತನ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಫೆಬ್ರವರಿಯಲ್ಲಿ ಇಬ್ಬರು ಮುಸುಕುಧಾರಿಗಳು ಈ ಕೃತ್ಯವೆಸಗಿದ್ದಾರೆ. ಘಟನೆ ನಡೆದು ತಿಂಗಳುಗಳೇ ಕಳೆದಿದ್ದು ಕಳೆದ ಶುಕ್ರವಾರ ಈ ಬಗ್ಗೆ ಎಫ್‍ಐಆರ್ ದಾಖಲಾಗಿದೆ. ನಾಗಪಾದಾ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    ಇಲ್ಲಿನ ಸಾಂಟಾಕ್ರೂಸ್ ನಿವಾಸಿಯಾದ 35 ವರ್ಷದ ನಿಖಿಲ್ ಸಾಹು ಎಂಬವರು ಎಲೆಕ್ಟ್ರಾನಿಕ್ ಪೇಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ಮೇಲ್ವಿಚಾರಕರಾಗಿದ್ದು ಕಳೆದ ಶುಕ್ರವಾರ ಇಬ್ಬರು ಅಪರಿಚಿತ ವ್ಯಕ್ತಿಗಳ ಮೇಲೆ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ನಿಖಿಲ್ ಸಾಹು ಕೆಲಸ ಮಾಡುವ ಸಂಸ್ಥೆಯ ಮಾಲೀಕರು ಬ್ಯಾಂಕ್‍ಗಳಿಗೆ ಎಟಿಎಂಗಳನ್ನ ಒದಗಿಸ್ತಾರೆ ಹಾಗೂ ಎಟಿಎಂಗಳಿಗೆ ಹಣವನ್ನು ತುಂಬುವ ವ್ಯವಸ್ಥೆಯನ್ನೂ ಮಾಡ್ತಾರೆ.

    ದೂರಿನಲ್ಲಿ ಏನಿದೆ?: ಫೆಬ್ರವರಿ 11ರಂದು ನಸುಕಿನ ಜಾವ ಸುಮಾರು 3.21 ರಿಂದ 4.31ರ ಸಮಯದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಮುಂಬೈ ಸೆಂಟ್ರಲ್‍ನ ಮರಾಠಾ ಮಂದಿರದ ಬಳಿ ಇರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂಗೆ ನುಗ್ಗಿದ್ದಾರೆ. ಈ ಇಬ್ಬರು ಮಾಲ್‍ವೇರ್ ಬಳಸಿ ಲ್ಯಾಪ್‍ಟಾಪ್ ಮೂಲಕ ಸಿಸ್ಟಮ್ ಅಪ್ಲಿಕೇಷನನ್ನು ಎಟಿಎಂ ಡಿಸ್ಪೆನ್ಸರ್‍ಗೆ ಹಾಕಿ ಹ್ಯಾಕ್ ಮಾಡಿದ್ದಾರೆ. ನಂತರ 2 ಸಾವಿರ ರೂ. ಮುಖಬೆಲೆಯ 1,040 ನೋಟುಗಳನ್ನ(20.8 ಲಕ್ಷ ರೂ.) ವಿತ್‍ಡ್ರಾ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

    ಎಟಿಎಂ ತೆರೆಯದೆಯೇ ಹ್ಯಾಕ್ ಮಾಡುವ ಮೂಲಕ ಈ ಕಳ್ಳರು ಇಷ್ಟೊಂದು ದೊಡ್ಡ ಮೊತ್ತದ ಹಣವನ್ನ ಕದ್ದಿದ್ದಾರೆ ಎಂದು ನಾಗಪಾದಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಸಂಜಯ್ ಬಸ್ವತ್ ಹೇಳಿದ್ದಾರೆ.

    ಕಂಪೆನಿಯ ಉಸ್ತುವಾರಿ ಘಟಕ ಎಟಿಎಂ ಸ್ಥಗಿತವಾಗಿದ್ದನ್ನು ಗಮನಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಎಟಿಎಂ ಉತ್ಪಾದಕ ಸಂಸ್ಥೆ ಹಾರ್ಡ್ ಡಿಸ್ಕ್ ಪರಿಶೀಲಿಸಿದ ನಂತರ ಈ ಎಟಿಎಂ ಹ್ಯಾಕ್ ಆಗಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಈ ಬಗ್ಗೆ ಆಂತರಿಕ ತನಿಖೆ ನಡೆಸಿದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

    ಎಟಿಎಂ ಯಂತ್ರವನ್ನ ಈ ರೀತಿ ಹೈಟೆಕ್ ಆಗಿ ದೋಚಿರುವುದು ಮಹಾರಾಷ್ಟ್ರದಲ್ಲಿ ಇದೇ ಮೊದಲು ಹಾಗೂ ಭಾರತದಲ್ಲಿ ಎರಡನೆಯದು ಎಂದು ದೂರುದಾರ ಸಂಸ್ಥೆ ಹೇಳಿದೆ. ಕಳ್ಳತನ ಮಾಡಿರುವವರು ತಾಂತ್ರಿಕ ಜ್ಞಾನ ಹೊಂದಿದ್ದು, ಎಟಿಎಂ ಹೇಗೆ ಕೆಲಸ ಮಾಡುತ್ತದೆ ಎಂದು ಚೆನ್ನಾಗಿ ಬಲ್ಲವರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಕಳ್ಳತನಕ್ಕೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಎಟಿಎಂಗೆ ಹಣ ತುಂಬಲು ಕಾಂಟ್ರಾಕ್ಟ್ ನೀಡಲಾಗಿರೋ ಪ್ರಸ್ತುತ ಸಂಸ್ಥೆ ಹಾಗೂ ಈ ಹಿಂದೆ ಇದ್ದ ಸಂಸ್ಥೆ ಎರಡನ್ನೂ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಸಂಸ್ಥೆಯ ಹಾಲಿ ಹಾಗೂ ಮಾಜಿ ನೌಕರರ ಮಾಹಿತಿಯನ್ನ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

  • ಮೈಸೂರು: ಎಟಿಎಂನಲ್ಲಿ ಅಗ್ನಿ ಅವಘಡ- ಪೊಲೀಸ್ ವಿಶ್ರಾಂತಿ ಗೃಹ ಬೆಂಕಿಗಾಹುತಿ

    ಮೈಸೂರು: ಎಟಿಎಂನಲ್ಲಿ ಅಗ್ನಿ ಅವಘಡ- ಪೊಲೀಸ್ ವಿಶ್ರಾಂತಿ ಗೃಹ ಬೆಂಕಿಗಾಹುತಿ

    ಮೈಸೂರು: ಇಲ್ಲಿನ ಅರಮನೆಯ ಟಿಕೆಟ್ ಕೌಂಟರ್ ಪಕ್ಕದ ಎಟಿಎಂ ಕೇಂದ್ರದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ಎಟಿಎಂ ಕೇಂದ್ರ, ಟಿಕೆಟ್ ಕೌಂಟರ್ ಹಾಗೂ ಪೊಲೀಸ್ ವಿಶ್ರಾಂತಿ ಗೃಹ ಬೆಂಕಿಗೆ ಅಹುತಿಯಾಗಿವೆ.

    ಅರಮನೆಯ ವರಾಹ ಗೇಟ್ ಬಳಿಯ ಎಟಿಎಂ ಯಂತ್ರವನ್ನು ದುರಸ್ಥಿಗಾಗಿ ಗುರುವಾರ ಬ್ಯಾಂಕ್ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದರು. ಇದರಿಂದ ಎಟಿಎಂ ಯಂತ್ರ ಸುಟ್ಟು ಹೋಗುವುದು ತಪ್ಪಿದಂತಾಗಿದೆ.

    ಬೆಂಕಿಯ ಪರಿಣಾಮ ಅರಮನೆಯ ಗೋಡೆಗಳು ಕೂಡ ಹಾಳಾಗಿವೆ. ಆದರೆ ಅಚ್ಚರಿ ಎಂಬಂತೆ ಎಟಿಎಂ ಪಕ್ಕದ ಗಣಪತಿ ದೇವಸ್ಥಾನಕ್ಕೆ ಯಾವುದೇ ಹಾನಿ ಆಗಿಲ್ಲ. ಬಹು ವರ್ಷಗಳ ಹಿಂದೆ ಮರದ ಅರಮನೆಗೆ ಬೆಂಕಿ ಬಿದ್ದಿದ್ದ ಸಂದರ್ಭದಲ್ಲೂ ಈ ಆತ್ಮವಿಲಾಸ ಗಣಪತಿ ದೇಗುಲಕ್ಕೆ ಹಾನಿಯಾಗಿರಲಿಲ್ಲ. ಹೀಗಾಗಿ, ಅವತ್ತು ದೇಗುಲವನ್ನು ಸೇರಿಸಿಕೊಂಡೆ ಅರಮನೆ ನಿರ್ಮಿಸಲಾಗಿತ್ತು. ಇಂದು ಕೂಡ ಬೆಂಕಿ ಅವಘಡ ಸಂಭವಿಸಿದ್ದು, ದೇಗುಲಕ್ಕೆ ಯಾವ ಧಕ್ಕೆ ಆಗದಿರುವುದು ಆಸ್ತಿಕರಲ್ಲಿ ಅಚ್ಚರಿ ಮೂಡಿಸಿದೆ.

  • ಗಮನಿಸಿ, ಎಸ್‍ಬಿಐ ಎಟಿಎಂನಿಂದ ಹಣ ಡ್ರಾ ಮಾಡಿದ್ರೆ 25 ರೂ. ಶುಲ್ಕ ಇಲ್ಲ

    ಗಮನಿಸಿ, ಎಸ್‍ಬಿಐ ಎಟಿಎಂನಿಂದ ಹಣ ಡ್ರಾ ಮಾಡಿದ್ರೆ 25 ರೂ. ಶುಲ್ಕ ಇಲ್ಲ

    – ಸುತ್ತೋಲೆ ಬಳಿಕ ಸ್ಪಷ್ಟನೆ ನೀಡಿದ ಎಸ್‍ಬಿಐ

    ನವದೆಹಲಿ: ಎಟಿಎಂನಿಂದ ಹಣವನ್ನು ಡ್ರಾ ಮಾಡಿದ್ರೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದು ಎಸ್‍ಬಿಐ ಸ್ಪಷ್ಟನೆ ನೀಡಿದೆ.

    ಎಸ್‍ಬಿಐ ಬಡ್ಡಿ  ಮತ್ತು ಮೊಬೈಲ್ ವ್ಯಾಲೆಟ್ ಬಳಸಿ ಎಟಿಎಂನಿಂದ ಹಣ ವನ್ನು ತೆಗೆಯುವ ಗ್ರಾಹಕರಿಗೆ ಮಾತ್ರ 25 ರೂ. ಶುಲ್ಕ ಅನ್ವಯವಾಗಲಿದೆ. ಇದು ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಅನ್ವಯವಾಗುವುದಿಲ್ಲ ಎಂದು  ಎಂದು ಎಸ್‍ಬಿಐ ತಿಳಿಸಿದೆ.

    ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾದ ಬಳಿಕ, ಎಸ್‍ಬಿಐ ಆಡಳಿತ ನಿರ್ದೇಶಕ ರಜನೀಶ್ ಕುಮಾರ್ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದು, ಶೀಘ್ರವೇ ಮತ್ತೊಂದು ಸುತ್ತೋಲೆ ಹೊರಡಿಸಲಾಗುವುದು. ಅಷ್ಟೇ ಅಲ್ಲದೇ ನೂತನ ಸೇವಾ ಶುಲ್ಕ ಜೂನ್ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

    ಹೀಗಾಗಿ ಬುಧವಾರ ಎಸ್‍ಬಿಐ ಹೊರಡಿಸಿದ ಸುತ್ತೋಲೆಯಲ್ಲಿ ಏನಿತ್ತು ಎನ್ನುವುದಕ್ಕೆ ಅದರ ಪ್ರತಿಯನ್ನು ಇಲ್ಲಿ ನೀಡಲಾಗಿದೆ.

    ಯಾವುದಕ್ಕೆ ಎಷ್ಟು ಶುಲ್ಕ?
    ಐಎಂಪಿಎಸ್ ಹಣ ವರ್ಗಾವಣೆ:
    1 ಲಕ್ಷ ರೂ.ವರೆಗಿನ ಹಣಕ್ಕೆ 5 ರೂ. ಮತ್ತು ಸೇವಾ ಶುಲ್ಕ ವಿಧಿಸಿದರೆ, 1 ಲಕ್ಷ ದಿಂದ ಮೇಲ್ಪಟ್ಟು 2 ಲಕ್ಷರೂ ವರೆಗಿನ ವ್ಯವಹಾರಕ್ಕೆ  15 ರೂ. ಮತ್ತು ಸೇವಾ ಶುಲ್ಕ ವಿಧಿಸಲಿದೆ. 2 ಲಕ್ಷದಿಂದ ಮೇಲ್ಪಟ್ಟು 5 ಲಕ್ಷ ರೂ.ವರೆಗಿನ ವ್ಯವಹಾರಕ್ಕೆ 25 ರೂ.

    ಚೆನ್ನಾಗಿಲ್ಲದ ನೋಟ್‍ಗಳ ಬದಲಾವಣೆಗೆ:
    5 ಸಾವಿರ ರೂ. ವರೆಗೆ ಅಥವಾ 20 ನೋಟ್‍ಗಳ ಬದಲಾವಣೆಗೆ ಯಾವುದೇ ಶುಲ್ಕ ಇಲ್ಲ. ಆದ್ರೆ 20ಕ್ಕಿಂತ ಹೆಚ್ಚು ನೋಟ್‍ಗಳಿದ್ರೆ ಒಂದು ನೋಟ್‍ಗೆ 2 ರೂ. ಜೊತೆಗೆ ಸೇವಾ ಶುಲ್ಕ ಕೊಡಬೇಕಾಗುತ್ತದೆ. ಇನ್ನು 5 ಸಾವಿರ ರೂ. ಗಿಂತ ಹೆಚ್ಚಿನ ಮೊತ್ತವಿದ್ರೆ ಪ್ರತಿ ನೋಟ್‍ಗೆ 2 ರೂ. ಅಥವಾ ಪ್ರತಿ 1000 ರೂಪಾಯಿಗೆ 5 ರೂ. ಯಾವುದು ಅಧಿಕವೋ ಆ ಮೊತ್ತ ಜೊತೆಗೆ ಸೇವಾ ಶುಲ್ಕ ತೆರಬೇಕಾಗುತ್ತದೆ.

    ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಖಾತೆಗಳ ಸೇವಾ ಶುಲ್ಕ
    10 ಹಾಳೆಗಳ ಚೆಕ್ ಬುಕ್ ಪಡೆಯಲು 30 ರೂ. ಜೊತೆಗೆ ಸೇವಾ ಶುಲ್ಕ ಕೊಡಬೇಕು. ಹಾಗೆ 25 ಹಾಳೆಗಳ ಚೆಕ್‍ಬುಕ್‍ಗೆ 75 ರೂ. ಜೊತೆಗೆ ಸೇವಾ ಶುಲ್ಕ, 50 ಹಾಳೆಗಳ ಚೆಕ್ ಬುಕ್‍ಗೆ 150 ರೂ. ಜೊತೆಗೆ ಸೇವಾ ಶುಲ್ಕ ತೆರಬೇಕಾಗುತ್ತದೆ.

    ಎಟಿಎಂ ಕಾರ್ಡ್‍ಗಾಗಿ
    ಕೇವಲ ರುಪೇ ಕಾರ್ಡ್‍ಗಳನ್ನ ಮಾತ್ರ ಉಚಿತವಾಗಿ ನೀಡಲಾಗುತ್ತದೆ. ಎಟಿಎಂನಿಂದ ಹಣ ವಿತ್‍ಡ್ರಾ ಮಾಡಲು ತಿಂಗಳ ಮೊದಲ 4 ವಿತ್‍ಡ್ರಾವಲ್‍ಗೆ ಯಾವುದೇ ಶುಲ್ಕ ಇರುವುದಿಲ್ಲ. 4 ಕ್ಕಿಂತ ಹೆಚ್ಚಿನ ವಿತ್‍ಡ್ರಾವಲ್ ಮಾಡಿದ ಬಳಿಕ ಎಸ್‍ಬಿಐ ಶಾಖೆಯಲ್ಲೇ ಮತ್ತೆ ವಿತ್‍ಡ್ರಾ ಮಾಡಿದ್ರೆ ಪ್ರತಿ ವಿತ್‍ಡ್ರಾವಲ್‍ಗೆ 50 ರೂ. ಜೊತೆಗೆ ಸೇವಾ ಶುಲ್ಕ, ಬೇರೆ ಬ್ಯಾಂಕ್‍ಗಳ ಎಟಿಎಂನಲ್ಲಿ ವಿತ್‍ಡ್ರಾ ಮಾಡಿದ್ರೆ ಪ್ರತಿ ವಿತ್‍ಡ್ರಾವಲ್‍ಗೆ 20 ರೂ. ಜೊತೆಗೆ ಸೇವಾ ಶುಲ್ಕ ಕೊಡಬೇಕು. ಹಾಗೆ ಎಸ್‍ಬಿಐ ಎಟಿಎಂಗಳಲ್ಲಿ ವಿತ್‍ಡ್ರಾ ಮಾಡಿದ್ರೆ 10 ರೂ. ಜೊತೆಗೆ ಸೇವಾ ಶುಲ್ಕ ವಿಧಿಸಲಾಗುತ್ತದೆ.

  • ಈ ಆಟೋ ಚಾಲಕನ ಹೃದಯವಂತಿಕೆಗೆ ನೀವೂ ಮನಸೋಲಬಹುದು!

    ಈ ಆಟೋ ಚಾಲಕನ ಹೃದಯವಂತಿಕೆಗೆ ನೀವೂ ಮನಸೋಲಬಹುದು!

    ಹೈದರಾಬಾದ್: ಜಗತ್ತಿನಲ್ಲಿ ಒಳ್ಳೆಯ ವ್ಯಕ್ತಿಗಳಿಗೇನೂ ಕೊರತೆಯಿಲ್ಲ ಅನ್ನೋದಕ್ಕೆ ಈ ಘಟನೆಯೇ ಒಂದು ನೈಜ ಉದಾಹರಣೆ.

    ಹೌದು. ವಾರಿಜಶ್ರೀ ವೇಣುಗೋಪಾಲ್ ಎಂಬ ಯುವತಿಯೊಬ್ಬರು ಹೈದರಾಬಾದ್‍ನಲ್ಲಿ ವೀಸಾ ಸಂದರ್ಶನಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ಆಕೆಗೆ ಹಣದ ಕೊರೆತೆಯಾಗಿತ್ತು. ಈ ವೇಳೆ ಅಲ್ಲಿನ ಆಟೋ ಚಾಲಕರೊಬ್ಬರು ತನಗೆ ಸಹಾಯ ಮಾಡಿದ ಬಗ್ಗೆ ವಾರಿಜಶ್ರೀ ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದು, ಇದೀಗ ಈ ಪೋಸ್ಟ್ ವೈರಲ್ ಆಗಿದೆ.

    ಫೇಸ್ಬುಕ್ ಪೋಸ್ಟ್ ನಲ್ಲೇನಿದೆ?: ಇವರ ಹೆಸರು ಬಾಬಾ. ಆಟೋ ಚಾಲಕರಾಗಿರುವ ಬಾಬಾ ಅವರು ಇಂದು ನನ್ನನ್ನ ರಕ್ಷಿಸಿದ್ರು. ನಾನು ಹೈದರಾಬಾದ್‍ಗೆ ನನ್ನ ವೀಸಾ ಸಂದರ್ಶನಕ್ಕೆಂದು ಬಂದಿದ್ದೆ. ಈ ವೇಳೆ ಅಲ್ಲಿ ನನಗೆ ಹಣದ ಕೊರತೆಯಾಗಿತ್ತು. ವೀಸಾ ಶುಲ್ಕಕ್ಕಾಗಿ 5,000 ರೂ ಬೇಕಿತ್ತು. ಆದ್ರೆ ನನ್ನ ಬಳಿ ಇದ್ದಿದ್ದು ಸುಮಾರು 2000 ರೂ. ಮಾತ್ರ. ನಾವು ಸುಮಾರು 10-15 ಎಟಿಎಂಗಳಿಗೆ ಅಲೆದಾಡಿದೆವು. ಆದ್ರೆ ಎಲ್ಲೂ ಹಣ ಸಿಗಲಿಲ್ಲ. ಹೈದರಾಬಾದ್‍ನಲ್ಲಿ ಅನೇಕ ಕಡೆ ಎಟಿಎಂಗಳಲ್ಲಿ ಸಮಸ್ಯೆ ಇತ್ತು.

    ಈ ವೇಳೆ ನನ್ನ ಪರಿಸ್ಥಿತಿಯನ್ನು ಅರಿತ ಆಟೋ ಚಾಲಕ ಅವರು  ಕೂಡಿಟ್ಟ 3 ಸಾವಿರ ರೂ. ಕೊಟ್ಟರು. “ಮೇಡಂ ಅದನ್ನು ತೆಗೆದುಕೊಳ್ಳಿ. ಬಳಿಕ ಹೊಟೇಲ್ ಹತ್ರ ಬಂದು ವಾಪಾಸ್ ಮಾಡಿ ಪರವಾಗಿಲ್ಲ” ಅಂತಾ ಹೇಳಿದ್ರು.

    ಆಟೋ ಚಾಲಕನ ಈ ಮಾನವೀಯತೆ ನೋಡಿ ನನಗೆ ತುಂಬಾ ಖುಷಿಯಾಯಿತು. ಇವರ ಸಹಾಯ ಮನೋಭಾವಕ್ಕೆ ಕೃತಜ್ಞತೆ ಹೇಳಬೇಕು. ಇಂತಹ ವ್ಯಕ್ತಿಯನ್ನು ಈ ಹಿಂದೆ ಯಾವತ್ತೂ ಭೇಟಿಯಾಗಿಲ್ಲ. ಅಪರಿಚಿತರೊಬ್ಬರಿಗೆ ಅವರು ನಿಸ್ವಾರ್ಥತೆಯಿಂದ ಸಹಾಯ ಮಾಡಿದ್ದು ನನ್ನ ಮನಸ್ಸು ತಟ್ಟಿತು.

    ಹೌದು, ಕೆಲವೊಂದು ಬಾರಿ ದೇವರು ಅತ್ಯಂತ ಚಿತ್ರ ಹಾಗೂ ಸುಂದರ ಸನ್ನಿವೇಶಗಳಲ್ಲಿ ನಮಗೆ ಗೋಚರಿಸುತ್ತಾನೆ. ಪ್ರತಿದಿನವೂ ಹೊಸ ಪಾಠಗಳನ್ನು ಕಲಿಯುತ್ತೇವೆ. ನಿಮ್ಮಂತಹ ಸ್ನೇಹಿತನನ್ನು ಪಡೆದಿದ್ದಕ್ಕೆ ನಾನು ನಿಜಕ್ಕೂ ಧನ್ಯ. ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂಬುದನ್ನು ನೆನಪಿಸಿದ್ದಕ್ಕೆ ಧನ್ಯವಾದ ಅಂತಾ ವಾರಿಜಾಶ್ರೀ ಆಟೋ ಚಾಲಕ ಬಾಬ ಅವರ ಫೋಟೋದೊಂದಿಗೆ ಫೇಸ್ಬುಕ್‍ನಲ್ಲಿ ಈ ಪೋಸ್ಟ್ ಹಾಕಿದ್ದಾರೆ.

    ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಟೋ ಚಾಲಕನ ಸಹಾಯ ಮನೋಭಾವವನ್ನು ಎಲ್ಲರು ಕೊಂಡಾಡುತ್ತಿದ್ದಾರೆ. ಏಪ್ರಿಲ್ 11ರಂದು ಹಾಕಿರೋ ಈ ಪೋಸ್ಟ್ ಗೆ 31 ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿದ್ದು, ಇಲ್ಲಿಯವರೆಗೆ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

    https://www.facebook.com/varijashree/posts/10212441979669404

  • ಎಟಿಎಂನಿಂದ ಹಣ ಡ್ರಾ ಮಾಡಿ ಹೊರಬಂದ ವ್ಯಕ್ತಿ ಅಪಹರಣ!

    ಎಟಿಎಂನಿಂದ ಹಣ ಡ್ರಾ ಮಾಡಿ ಹೊರಬಂದ ವ್ಯಕ್ತಿ ಅಪಹರಣ!

    ಬೆಂಗಳೂರು: ಪೊಲೀಸ್ ಸ್ಟೇಷನ್ ಕೂಗಳತೆ ದೂರದಲ್ಲೇ ವ್ಯಕ್ತಿಯನ್ನು ಅಪಹರಣ ಮಾಡಿರೋ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

    ಮಾರುತಿ ಅಪಹರಣಕ್ಕೊಳಗಾದ ವ್ಯಕ್ತಿ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಮೆಕ್ಯಾನಿಕ್ ಆಗಿ ಮಾರುತಿ ಕೆಲಸ ಮಾಡ್ತಾ ಇದ್ದರು. ಸ್ನೇಹಿತ ಹಣ ಕೇಳಿದ್ದರಿಂದ ಹಣ ಡ್ರಾ ಮಾಡಲೆಂದು ಎಟಿಎಂಗೆ ಹೋಗಿದ್ದರು. ಅಂತೆಯೇ ಹಣ ಡ್ರಾ ಮಾಡಿ ಹೊರ ಬರುತ್ತಿದ್ದಂತೆಯೇ ಕಾರಲ್ಲಿ ಬಂದ ದುಷ್ಕರ್ಮಿಗಳು ಮಾರುತಿ ಅವರನ್ನು ಅಪಹರಣ ಮಾಡಿದ್ದಾರೆ.

    ಕಾರಿನಲ್ಲಿ ನಾಲ್ವರು ಅಪಹರಣಕಾರರು ಇದ್ದರು ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 1 ಮೆಸೇಜ್‍ನಿಂದ 6 ಜಿಲ್ಲೆಯ ಪೊಲೀಸರು ಹುಡುಕ್ತಿದ್ದ ಬಾಲಕಿ ಬೆಂಗಳೂರಿನಲ್ಲಿ ಪತ್ತೆಯಾದಳು!

    1 ಮೆಸೇಜ್‍ನಿಂದ 6 ಜಿಲ್ಲೆಯ ಪೊಲೀಸರು ಹುಡುಕ್ತಿದ್ದ ಬಾಲಕಿ ಬೆಂಗಳೂರಿನಲ್ಲಿ ಪತ್ತೆಯಾದಳು!

    ಬೆಂಗಳೂರು: ಕೊಡಗಿನ ವಿರಾಜಪೇಟೆಯಿಂದ ಮನೆಬಿಟ್ಟು ತೆರಳಿದ್ದ ಬಾಲಕಿ ದೀಕ್ಷಿತಾ ಬೆಂಗಳೂರಿನ ಬಾಗಲಕುಂಟೆಯ ಪಿಜಿಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ.

    ಎಟಿಎಂ  ಮತ್ತು ಮೊಬೈಲ್ ನಂಬರ್ ಆಧಾರಿಸಿ ವಿರಾಜಪೇಟೆ ಪೊಲೀಸರು ಮತ್ತು ಮಾವ ಹರೀಶ್ ದೀಕ್ಷಿತಾಳನ್ನು ಪತ್ತೆ ಮಾಡಿದ್ದಾರೆ.

    ಸಿಕ್ಕಿದ್ದು ಹೇಗೆ?
    ಪ್ರಥಮ ಪಿಯುಸಿ ಫೇಲ್ ಆದ ಹಿನ್ನೆಲೆ ಮನೆ ಬಿಟ್ಟು ತೆರಳಿದ್ದ ಬಾಲಕಿ ಆಲ್ಟೋ ಕಾರ್‍ನಲ್ಲಿ ಮೂರು ದಿನಗಳಿಂದ ಮೈಸೂರು, ಮಂಡ್ಯ, ತುಮಕೂರು, ಶಿರಾ ಸುತ್ತಾಡಿ ಬೆಂಗಳೂರು ತಲುಪಿದ್ದಳು. ಬುಧವಾರ ಜಾಲಹಳ್ಳಿ ಕ್ರಾಸ್‍ನ ಐಸಿಐಸಿಐ ಬ್ಯಾಂಕ್‍ನ ಎಟಿಎಂನಲ್ಲಿ ಹಣವನ್ನು ದೀಕ್ಷಿತಾ ಡ್ರಾ ಮಾಡಿದ್ದಳು. ಎಟಿಎಂನಲ್ಲಿ ಹಣ ಡ್ರಾ ಮಾಡಿದ ಮೆಸೇಜ್ ಬ್ಯಾಂಕ್‍ಗೆ ಹೋಗಿತ್ತು. ಅಷ್ಟೇ ಅಲ್ಲದೇ ಬುಧವಾರ ದೀಕ್ಷಿತಾ ತಂದೆಯಾಗಿರುವ ಸುರೇಶ್ ಅವರ ಮೊಬೈಲ್‍ಗೆ ಬಾಗಲಕುಂಟೆ ವ್ಯಾಪ್ತಿಯಿಂದ ಮಿಸ್ ಕಾಲ್ ಬಂದಿತ್ತು. ಈ ಕರೆ ಬಂದ ಜಾಗದಲ್ಲಿ ಎಲ್ಲ ಜಡೆ ಹುಡುಕಾಡಿದಾಗ ಒಂದು ಕಡೆ ಕಾರು ನಿಂತುಕೊಂಡಿರುವುದು ಕಾಣಿಸಿತ್ತು. ಕಾರು ನಿಂತಿರುವುದನ್ನು ನೋಡಿದ ಹಿನ್ನೆಲೆಯಲ್ಲಿ ಸಮೀಪದ ನಿವಾಸಿಗಳಲ್ಲಿ ಸುರೇಶ್ ವಿಚಾರಿಸಿದಾಗ ಇಲ್ಲಿ ಒಬ್ಬಳು ಹುಡುಗಿ ನಿನ್ನೆ ಬಂದಿದ್ದಾಳೆ. ಮೇಲುಗಡೆ ಇರುವ ಪಿಜಿಯಲ್ಲಿ ಇದ್ದಾಳೆ ಎಂದು ತಿಳಿಸಿದ್ದಾರೆ.

    ಇದಾದ ಬಳಿಕ ಮಾವ ಮತ್ತು ಪೊಲೀಸರು ಪಿಜಿ ಮಾಲೀಕರಿಗೆ ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ತೋರಿಸಿ ಮನವರಿಕೆ ಮಾಡಿಕೊಟ್ಟ ಬಳಿಕ ದೀಕ್ಷಿತಾ ಪತ್ತೆಯಾಗಿದ್ದಾಳೆ. ಮಾವ ಹರೀಶ್ ಅವರನ್ನು ನೋಡಿದ ದೀಕ್ಷಿತಾ ಗಾಬರಿಯಾಗಿದ್ದು ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಹೋಗಲು ಈಗ ಸಿದ್ಧತೆಗಳು ನಡೆದಿದೆ.

    ಏನಿದು ಪ್ರಕರಣ?
    ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದ ಸುರೇಶ್ ಎಂಬುವವರ ಮಗಳು ದೀಕ್ಷಿತಾ(17) 4 ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ತಂದೆ ಮಗಳನ್ನು ಹೋಟೆಲ್ ಹೋಗೋಣ ಬಾ ಎಂದು ಕರೆದಿದ್ದರು. ಆದ್ರೆ ತಂದೆಯೊಂದಿಗೆ ಹೋಗದ ದೀಕ್ಷಿತಾ, ‘ನೀನು ಬೈಕ್ ನಲ್ಲಿ ಹೋಗು ನಾನು ಮತ್ತೆ ಬರುತ್ತೇನೆ’ ಎಂದು ಹೇಳಿದ್ದಳು.

    ಮಗಳ ಮಾತು ಕೇಳಿ ಸುರೇಶ್ ಬೈಕ್ ನಲ್ಲಿ ಹೋಟೆಲ್‍ಗೆ ತೆರಳಿದ್ದಾರೆ. ಆದರೆ ಈಕೆ ಮನೆಯಲ್ಲಿದ್ದ ತಂದೆಯ ಎಟಿಎಂ ಕಾರ್ಡ್ ತೆಗೆದುಕೊಂಡು ಕೆ.ಎ.02 ಝೆಡ್ 3394 ನೋಂದಣಿಯ ಆಲ್ಟೊ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಳು.

    ಇತ್ತ ದೀಕ್ಷಿತಾ ಮನೆ ಬಿಟ್ಟು ಹೋಗಿದ್ದಾಳೆಂದು ತಿಳಿದ ಪೋಷಕರು ಹುಡುಕಾಟಕ್ಕೆ ಆರಂಭಿಸಿದ್ದರು. ಪೋಷಕರು ಗೋಣಿಕೊಪ್ಪ ಮಾರ್ಗವಾಗಿ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದಾರೆ. ಆದರೆ ದೀಕ್ಷಿತಾ ಬಗ್ಗೆ ಸುಳಿವು ಸಿಕ್ಕದ ಹಿನ್ನೆಲೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ದೀಕ್ಷಿತಾಳ ಪತ್ತೆ ಕಾರ್ಯ ಆರಂಭಿಸಿದ್ದರು.

    ಬುಧವಾರ ಬೆಳಗ್ಗೆ ಮಂಡ್ಯ ರಾಮನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯಾರ್ಥಿನಿ ಕಾರ್ ಡ್ರೈವ್ ಮಾಡಿಕೊಂಡು ಹೋಗಿದ್ದ  ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯ ಆಧರಿಸಿ ದೀಕ್ಷಿತಾ ಪತ್ತೆಗಾಗಿ 6 ಜಿಲ್ಲೆಯ ಪೋಲಿಸರು ಹುಡುಕಾಟ ನಡೆಸುತ್ತಿದ್ದರು.

  • ಮಹಿಳೆಯರೇ, ದೇವಸ್ಥಾನಗಳಲ್ಲಿ ಭಕ್ತಿಯಲ್ಲಿ ಮೈಮರೆಯುವ ಮುನ್ನ ಈ ಸುದ್ದಿ ಓದಿ

    ಮಹಿಳೆಯರೇ, ದೇವಸ್ಥಾನಗಳಲ್ಲಿ ಭಕ್ತಿಯಲ್ಲಿ ಮೈಮರೆಯುವ ಮುನ್ನ ಈ ಸುದ್ದಿ ಓದಿ

    ಹಾಸನ: ದೇವಸ್ಥಾನಗಳಲ್ಲಿ ಭಕ್ತಿ ಭಾವದಲ್ಲಿರುವ ಭಕ್ತರು ಮೈಮರೆಯುವ ಮುನ್ನ ಸ್ವಲ್ಪ ಎಚ್ಚರವಾಗಿರಬೇಕು. ದೇವಸ್ಥಾನದಲ್ಲಿ ಬರುವ ಮಹಿಳೆಯರು ಭಕ್ತಿಯಲ್ಲಿ ಮೈಮರೆತ್ರೆ, ಇತ್ತ ಕಳ್ಳಿಯರು ತಮ್ಮ ಕೈಚಳಕ ತೋರುತ್ತಾರೆ. ಶ್ರೀರಂಗಪಟ್ಟಣದ ಪ್ರಸಿದ್ಧ ನಿಮಿಷಾಂಭ ದೇವಸ್ಥಾನದಲ್ಲಿ ನಡೆದಿರುವ ಕಳ್ಳಿಯರ ಕೈಚಳಕದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಹಾಸನ ಮೂಲದ ಭವ್ಯ ಎಂಬವರು ನಿಮಿಷಾಂಭ ದೇವಸ್ಥಾನದಲ್ಲಿ ದರ್ಶನ ಪಡೆದು ಕುಂಕುಮ ನೀಡುವ ಸರದಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಕಳ್ಳಿಯರು ತಮ್ಮ ಕರಾಮತ್ ತೋರಿಸಿದ್ದಾರೆ. ಸರದಿ ಸಾಲಿನಲ್ಲಿ ಬರುವಂತೆ ನಟಿಸಿರುವ ಕಳ್ಳಿಯರು ಭವ್ಯರನ್ನು ಹಿಂಬಾಲಿಸಿದ್ದಾರೆ. ಅರ್ಚಕರಿಂದ ಕುಂಕುಮ ಪಡೆಯುವ ನೆಪದಲ್ಲಿ ಬ್ಯಾಗ್‍ನಿಂದ ಪರ್ಸ್‍ನ್ನು ಕದ್ದು, ತನ್ನ ಸಹವರ್ತಿ ಕಳ್ಳಿಗೆ ನೀಡುತ್ತಾಳೆ. ಆ ಕಳ್ಳಿ ಕ್ಷಣಾರ್ಧದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

    ಭವ್ಯ-ಪರ್ಸ್ ಕಳೆದುಕೊಂಡವರು

    ಮನೆಗೆ ಬಂಬ ಬಳಿಕ ಭವ್ಯ ತಮ್ಮ ಬ್ಯಾಗ್‍ನಲ್ಲಿ ಪರ್ಸ್ ಇಲ್ಲದೇ ಇರೋದನ್ನು ಗಮನಿಸಿದ್ದಾರೆ. ಪರ್ಸ್ ನಲ್ಲಿ ಮೂರು ಸಾವಿರ ರೂಪಾಯಿ ಹಣವಿದ್ದಿದ್ದು ಎಂದು ಸುಮ್ಮನಾಗುವಷ್ಟರಲ್ಲಿ ಅವರ ಬ್ಯಾಂಕ್ ಖಾತೆಯಿಂದ 40 ಸಾವಿರ ಹಣ ಡ್ರಾ ಆಗಿದೆ ಅಂತಾ ಮೆಸೇಜ್ ಬಂತು.

    ಇದನ್ನೂ ಓದಿ: ಪೋಷಕರೇ, ಮಕ್ಕಳನ್ನು ಕಾರಿನಲ್ಲಿ ಬಿಟ್ಟು ಹೋಗುವ ಮುನ್ನ ಈ ಸುದ್ದಿ ಓದಿ

    ಸದ್ಯ ಎರಡು ಎಟಿಎಂ ಕಾರ್ಡ್‍ಗಳು ವೋಟರ್ ಐಡಿ ಜೊತೆಗೆ ಮೂರು ಸಾವಿರ ನಗದು ಕಳೆದುಕೊಂಡಿರುವ ಭವ್ಯ ಶ್ರೀರಂಗಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳಿಯರ ಕೈಚಳಕ ಸ್ಪಷ್ಟವಾಗಿ ಕಾಣುತ್ತಿದೆ. ಪೊಲೀಸರು ಕ್ರಮ ಕೈಗೊಂಡ್ರೆ ನಮ್ಮ ಹಣ ನಮಗೆ ಸಿಗುತ್ತೆ. ನಮಗೆ ನ್ಯಾಯ ಕೊಡಿಸಿ ಎಂದು ಭವ್ಯ ತಮ್ಮ ಅಳಲು ತೋಡಿಕೊಂಡಿದ್ದಾರೆ.

    https://youtu.be/EYaWW-Nl2Bw

     

  • ಆ ಕ್ಷಣಕ್ಕೆ ಏನೋ ಆಗೋಯ್ತು, ಅದ್ರ ಬಗ್ಗೆ ನನಗೆ ಪಶ್ಚಾತ್ತಾಪವಿಲ್ಲ- ಎಟಿಎಂ ಹಲ್ಲೆಕೋರ!

    ಆ ಕ್ಷಣಕ್ಕೆ ಏನೋ ಆಗೋಯ್ತು, ಅದ್ರ ಬಗ್ಗೆ ನನಗೆ ಪಶ್ಚಾತ್ತಾಪವಿಲ್ಲ- ಎಟಿಎಂ ಹಲ್ಲೆಕೋರ!

    ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ನಗರದ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿ ಆಂಧ್ರದಲ್ಲಿ ಸೆರೆಸಿಕ್ಕಿದ್ದ ಮಧುಕರ್ ರೆಡ್ಡಿಯನ್ನು ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.

    ಕರ್ನಾಟಕದಲ್ಲಿ ಬರೀ ಹಲ್ಲೆ ಮಾಡದೆ ಆಂಧ್ರದಲ್ಲಿಯೂ ಮಹಿಳೆಯರ ರುಂಡ ಚೆಂಡಾಡಿದ್ದ ಕ್ರೂರಿ ಮಧುಕರ್ ರೆಡ್ಡಿಯನ್ನು ಸದ್ಯ ಪೊಲೀಸರು ಬಾಡಿ ವಾರೆಂಟ್ ಮೇಲೆ ನಗರಕ್ಕೆ ಕರೆತಂದಿದ್ದಾರೆ.

    ಆಂಧ್ರದಲ್ಲೂ ಈತ ಮಹಿಳೆಯರನ್ನು ಕೊಲೆ ಮಾಡಿದ್ದರ ಹಿನ್ನೆಲೆಯಲ್ಲಿ ಆಂಧ್ರ ಪೊಲೀಸ್ರು ನಮ್ ಕೇಸ್ ಮುಗಿಸ್ತಿವಿ ಅಂತ ಪೈಪೋಟಿಗೆ ಬಿದ್ದಿದ್ದರು. ಇದೀಗ ಅಲ್ಲಿ ತನಿಖೆ ಪೂರ್ಣಗೊಂಡಿದ್ದು, ಬಳಿಕ ಪೊಲೀಸ್ರು ಬೆಂಗಳೂರಿಗೆ ಕರೆತಂದ್ರು.

    ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ, ಸೋಮವಾರ ಇಡೀ ರಾತ್ರಿ ಆರೋಪಿಯನ್ನು ವಿಚಾರಣೆ ಮಾಡಿದ್ರು. ಬೆಂಗಳೂರಿನ ಎಸ್.ಜೆ ಪಾರ್ಕ್ ಪೊಲೀಸರೇ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ವಿಚಾರಣೆ ವೇಳೆ ಆ ಕ್ಷಣಕ್ಕೆ ಏನೋ ಆಗೋಯ್ತು. ಅದ್ರ ಬಗ್ಗೆ ನನಗೆ ಯಾವುದೇ ಬೇಜಾರ್ ಆಗ್ಲಿ. ಪಶ್ಚಾತ್ತಾಪವಾಗ್ಲಿ ಇಲ್ಲ ಅಂತ ಪೊಲೀಸರ ಮುಂದೆ ನಗುನಗುತ್ತಲೇ ಆರೋಪಿ ಹೇಳಿಕೆ ನೀಡಿದ್ದಾನೆ.

  • ಶಾಕಿಂಗ್: ಎಟಿಎಂನಲ್ಲೇ ಸಿಕ್ತು ನೋಟುಗಳ ಕಂತೆ ನಡುವೆ ಖೋಟಾನೋಟು!

    ಶಾಕಿಂಗ್: ಎಟಿಎಂನಲ್ಲೇ ಸಿಕ್ತು ನೋಟುಗಳ ಕಂತೆ ನಡುವೆ ಖೋಟಾನೋಟು!

    ನವದೆಹಲಿ: ನೋಟು ನಿಷೇಧದಿಂದ ಖೋಟಾನೋಟಿಗೆ ಕಡಿವಾಣ ಬೀಳಲಿದೆ ಎಂದು ಪ್ರಧಾನಿ ಮೋದಿ ಹೋದಲ್ಲೆಲ್ಲಾ ಹೇಳುತ್ತಿದ್ದರು. ಆದರೆ ಪ್ರತಿಷ್ಠಿತ ಬ್ಯಾಂಕ್‍ಗಳ ಎಟಿಎಂನಿಂದಲೇ ಖೋಟಾನೋಟುಗಳು ಹೊರಬರ್ತಿವೆ.

    ಹೌದು. ನೋಟಿನ ಕಂತೆಗಳ ನಡುವೆ ಖೋಟಾನೋಟು ಇಟ್ಟು ಚಲಾವಣೆಗೆ ಯತ್ನ ನಡೆಯುತ್ತಿದೆ. ದಕ್ಷಿಣ ದೆಹಲಿಯ ಸಂಗಮ್ ವಿಹಾರ್‍ನಲ್ಲಿರುವ ಎಸ್‍ಬಿಐ ಎಟಿಎಂನಲ್ಲಿ ಗ್ರಾಹಕರೊಬ್ಬರು ಡ್ರಾ ಮಾಡಿದಾಗ 2 ಸಾವಿರ ರೂಪಾಯಿ ಮುಖಬೆಲೆಯ ನಾಲ್ಕೈದು ಖೋಟಾನೋಟು ಪತ್ತೆಯಾಗಿದೆ.

    ಮೊದಲ ನೋಟಕ್ಕೆ ಇದು ಅಸಲಿ ನೋಟಿನಂತೆ ಕಾಣುತ್ತದೆ. ಅಸಲಿ ನೋಟಿನಂತೆ ಬಹುತೇಕ ಎಲ್ಲಾ ಲಕ್ಷಣಗಳು ಖೋಟಾ ನೋಟಿನಲ್ಲಿವೆ. ಆದರೆ ಅಸಲಿ ನೋಟಲ್ಲ. ಭಾರತೀಯ ಮನೋರಂಜನ್ ಬ್ಯಾಂಕ್ ಹೆಸರಲ್ಲಿರುವ ನೋಟುಗಳಲ್ಲಿ `ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಜಾಗದಲ್ಲಿ `ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಅಚ್ಚೊತ್ತಲಾಗಿದೆ.

    ಚಿಲ್ಡ್ರನ್ ಗೌರ್ಮೆಂಟ್ ಗ್ಯಾರಂಟಿ ಎಂದು ನೋಟಿನ ಮೇಲೆ ನಮೂದಾಗಿದೆ. ಬ್ಯಾಂಕ್ ಸೀಲ್ ಬದಲು ನೋಟಿನ ಮೇಲೆ ಪಿಕೆ ಸಿನಿಮಾದ ಇಮೇಜ್ ಇದೆ. ಇನ್ನು ತನಿಖೆ ಮಾಡಲು ಹೋದ ಸಬ್‍ಇನ್ಸ್ ಪೆಕ್ಟರ್‍ಗೂ ಖೋಟಾನೋಟುಗಳೇ ಸಿಕ್ಕಿವೆ.

    ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಎಸ್‍ಬಿಐ ವಕ್ತಾರರೊಬ್ಬರು ಪ್ರತಿಕ್ರಿಯಿಸಿ ಖೋಟಾ ನೋಟು ಬಂದ ಹಿನ್ನೆಲೆಯಲ್ಲಿ ತಂಡವನ್ನು ಕಳುಹಿಸಿ ತನಿಖೆ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.

    ಈ ನೋಟುಗಳು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಪ್ಲಾನ್ ಮೂರೇ ತಿಂಗಳಿಗೆ ಠುಸ್ ಆಯ್ತಾ? ನೋಟು ನಿಷೇಧದ ಉದ್ದೇಶವೇ ಬುಡಮೇಲಾಯ್ತಾ ಎನ್ನುವ ಪ್ರಶ್ನೆಯನ್ನು ಜನ ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿದ್ದಾರೆ.

    ಸಂಜೆ ಎಸ್‍ಬಿಐ ಬ್ಯಾಂಕ್ ನಮ್ಮ ಶಾಖೆಯ ಎಟಿಎಂನಲ್ಲಿ ಯಾವುದೇ ನಕಲಿ ನೋಟು ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದೆ.

     

  • 1000 ರೂ. ನೋಟು ಮತ್ತೆ ಬರುತ್ತಾ?: ಎಲ್ಲ ವದಂತಿಗೆ ತೆರೆ ಎಳೆದ ಸರ್ಕಾರ

    1000 ರೂ. ನೋಟು ಮತ್ತೆ ಬರುತ್ತಾ?: ಎಲ್ಲ ವದಂತಿಗೆ ತೆರೆ ಎಳೆದ ಸರ್ಕಾರ

    ನವದೆಹಲಿ: 2016ರ ನವೆಂಬರ್ 8ರಂದು ನಿಷೇಧಿಸಲಾದ 1 ಸಾವಿರ ರೂ. ನೋಟನ್ನು ಮತ್ತೆ ಚಲಾವಣೆಗೆ ತರುವ ಬಗ್ಗೆ ಸರ್ಕಾರ ಚಿಂತಿಸಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಸ್ಪಷ್ಟಪಡಿಸಿದ್ದಾರೆ.

    1 ಸಾವಿರ ರೂ. ನೋಟನ್ನು ಹೊಸ ರೂಪದಲ್ಲಿ ಶೀಘ್ರದಲ್ಲೇ ಚಲಾವಣೆಗೆ ತರಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ನೋಟು ಮುದ್ರಣಾಲಯಗಳಲ್ಲಿ ಮುದ್ರಣಾ ಕಾರ್ಯ ಆರಂಭವಾಗಿದೆ ಎಂಬ ವದಂತಿಗೆ ಈ ಮೂಲಕ ಬ್ರೇಕ್ ಬಿದ್ದಿದೆ.

    ಈ ಬಗ್ಗೆ ಟ್ವೀಟ್ ಮಾಡಿರೋ ಶಕ್ತಿಕಾಂತ್ ದಾಸ್, ಹೊಸ 1 ಸಾವಿರ ರೂ. ನೋಟನ್ನು ಪರಿಚಯಿಸುವ ಬಗ್ಗೆ ಸರ್ಕಾರ ಚಿಂತಿಸಿಲ್ಲ. ಅದರ ಬದಲು 500ರೂ. ಹಾಗೂ ಇತರೆ ಕಡಿಮೆ ಮುಖಬೆಲೆಯ ನೋಟುಗಳ ಮುದ್ರಣ ಮತ್ತು ಪೂರೈಕೆಗೆ ಒತ್ತು ನೀಡಲಾಗಿದೆ ಎಂದಿದ್ದಾರೆ.

    ಅಲ್ಲದೆ ಎಟಿಎಂಗಳಲ್ಲಿ ಹಣದ ಕೊರತೆ ಬಗ್ಗೆ ಬಂದಿರುವ ದೂರುಗಳಿಗೆ ಸ್ಪಂದಿಸಲಾಗುತ್ತಿದೆ. ಗ್ರಾಹಕರು ತಮಗೆ ಬೇಕಿರುವಷ್ಟು ಮಾತ್ರ ಹಣವನ್ನು ಡ್ರಾ ಮಾಡಿಕೊಳ್ಳಲು ಮನವಿ ಮಾಡುತ್ತೇವೆ. ಅಗತ್ಯಕ್ಕಿಂತ ಹೆಚ್ಚಿನ ಹಣ ಡ್ರಾ ಮಾಡೋದ್ರಿಂದ ಇತರರಿಗೆ ಹಣ ಸಿಗುವುದಿಲ್ಲ ಎಂದು ಹೇಳಿದ್ದಾರೆ.

    ಪ್ರಧಾನಿ ಮೋದಿ ಸರ್ಕಾರ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನ ನಿಷೇಧಿಸಿದ ನಂತರ ಹೊಸ ರೂಪದಲ್ಲಿ 500 ರೂ. ನೋಟು ಹಾಗೂ ಗುಲಾಬಿ ಬಣ್ಣದ 2 ಸಾವಿರ ರೂ. ನೋಟನ್ನು ಪರಿಚಯಿಸಲಾಗಿದೆ.