Tag: atm

  • ಎಟಿಎಂಗಳಲ್ಲಿ ಹರಿದ ನೋಟುಗಳು ಪತ್ತೆ!

    ಎಟಿಎಂಗಳಲ್ಲಿ ಹರಿದ ನೋಟುಗಳು ಪತ್ತೆ!

    ಬಳ್ಳಾರಿ: ಚುನಾವಣೆ ಘೋಷಣೆಯಾದ ದಿನದಿಂದ ಎಟಿಎಂಗಳಲ್ಲಿ ಹಣವೇ ಸಿಗುತ್ತಿರಲಿಲ್ಲ. ಆದರೆ ಈಗ ಎಟಿಎಂಗಳಲ್ಲಿ ಹರಿದ ನೋಟುಗಳು ಸಿಗುತ್ತಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

    ಹಡಗಲಿ ತಾಲೂಕಿನ ಹೊಳಲು ಗ್ರಾಮದ ಎಸ್.ಬಿ.ಐ ಬ್ಯಾಂಕ್ ನ ಎಟಿಎಂ ನಲ್ಲಿ ಗ್ರಾಹಕರೊಬ್ಬರಿಗೆ ಹರಿದು ನೋಟುಗಳು ಬಂದಿರುವುದು ಪತ್ತೆಯಾಗಿದೆ. ಐದು ನೂರು ಮುಖಬೆಲೆಯ ಹತ್ತಾರು ಹರಿದ ನೋಟುಗಳು ಕಂಡುಬಂದಿದ್ದು, ಸಾರ್ವಜನಿಕರನ್ನು ತಲ್ಲಣಗೊಳಿಸಿವೆ.

    ಗ್ರಾಮಸ್ಥರಾದ ರಾಮಾಚಾರಿ ಎಟಿಎಂ ನಲ್ಲಿ ಎರಡು ಸಾವಿರ ಹಣ ಡ್ರಾ ಮಾಡಿದ್ದಾರೆ. ಆದರೆ ಈ ವೇಳೆ ಮೂರು ಹರಿದ ಐದು ನೂರು ರೂಪಾಯಿಯ ನೋಟುಗಳು ಎಟಿಎಂನಲ್ಲಿ ದೊರೆತಿವೆ. ನಂತರ ಮತ್ತೊಬ್ಬ ಗ್ರಾಹಕರು ಐದುಸಾವಿರ ಹಣವನ್ನು ಡ್ರಾ ಮಾಡಿದ್ದಾರೆ. ಅವರಿಗೂ ಕೂಡ ನಾಲ್ಕೈದು ಹರಿದ ಹಾಗೂ ತೇಪೆ ಹಚ್ಚಿದ ನೋಟುಗಳು ಬಂದಿವೆ.

    ಇದರಿಂದ ಆತಂಕಗೊಂಡ ಗ್ರಾಹಕರು ಬ್ಯಾಂಕಿಗೆ ತೆರಳಿ ನೋಟು ಬದಲಾವಣೆ ಮಾಡಿಕೊಡುವಂತೆ ಕೇಳಿದ್ದಾರೆ. ಬ್ಯಾಂಕ್ ವ್ಯವಹಾರ ರಹಿತ ದಿನವಾಗಿರುವುದರಿಂದ ನಾಳೆ ಬದಲಾವಣೆ ಮಾಡಿಕೊಡುವುದಾಗಿ ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.

    ಹೀಗಾಗಿ ನಮ್ಮ ಹಣವನ್ನು ತಾವೂ ತೆಗೆದುಕೊಳ್ಳುವ ವೇಳೆ ಈ ರೀತಿಯಾದರೆ ಹೇಗೆ ಅಂತಾ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಎಟಿಎಂಗೆ ತುಂಬ ಬೇಕಿದ್ದ 52 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿ ದನದ ಕೊಟ್ಟಿಗೆಯಲ್ಲಿ ಬಚ್ಚಿಟ್ಟ!

    ಎಟಿಎಂಗೆ ತುಂಬ ಬೇಕಿದ್ದ 52 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿ ದನದ ಕೊಟ್ಟಿಗೆಯಲ್ಲಿ ಬಚ್ಚಿಟ್ಟ!

    ಬೆಂಗಳೂರು: ದೂರ ದೂರಿಂದ ಬೆಂಗಳೂರಿಗೆ ಕೆಲಸ ಅರಿಸಿಕೊಂಡು ಬಂದು ಎಟಿಎಂಗೆ ಹಣ ತುಂಬುವ ಕೆಲಸ ಪಡೆದ ಯುವಕನೊಬ್ಬ ನಗರದ ಹೈಫೈ ಜೀವನಕ್ಕೆ ಮರಳಾದ ಪರಿಣಾಮ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ.

    ಮೂಲತಃ ಕೊಡಗು ನಿವಾಸಿಯಾಗಿರುವ ಪರಮೇಶ್ ತಾನು ಮಾಡಿದ ಕೃತ್ಯಕ್ಕೆ ಜೈಲು ಸೇರಿದ ಯುವಕ. ಈತ ಎಲ್‍ಎಲ್‍ಬಿ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಬೆಂಗಳೂರಿಗೆ ಕೆಲಸ ಅರಿಸಿಕೊಂಡು ಬಂದಿದ್ದ. ನಗರದ ಗಾರೆಪಾಳ್ಯದಲ್ಲಿ ವಾಸವಿದ್ದು ಕೊಂಡು ಸಿಎಂಎಸ್ ಏಜನ್ಸಿಯಲ್ಲಿ ಎಟಿಎಂಗೆ ಹಣ ತುಂಬುವ ಕೆಲಸ ಮಾಡುತ್ತಿದ್ದ. ಆದರೆ ಮಾರ್ಚ್ 3 ರಂದು 28 ಎಟಿಎಂಗೆ ತುಂಬ ಬೇಕಿದ್ದ ಸುಮಾರು 1.30 ಕೋಟಿ ಹಣದಲ್ಲಿ ಅರ್ಧ ಹಣ ಹಾಕಿ ವಾಪಸ್ ಬಂದು ಉಳಿದ 52 ಲಕ್ಷ ರೂ. ಹಣದೊಂದಿಗೆ ಕೂಡ್ಲೂಗೇಟ್ ಬಳಿಯ ಆಫೀಸಿಗೆ ವಾಪಸು ಬಂದು ಬಳಿಕ ಹಣದೊಂದಿಗೆ ತನ್ನೂರಿಗೆ ಪರಾರಿಯಾಗಿದ್ದ.

    ಕೊಡಗಿನ ಸೋಮಾರಪೇಟೆಗೆ ತೆರಳಿದ ಪರಮೇಶ್ ಬಳಿಕ ಆ ಹಣವನ್ನು ದನದ ಕೊಟ್ಟಿಗೆಯಲ್ಲಿ ಬಚ್ಚಿಟ್ಟಿದ್ದ. ಇತ್ತ ಎಟಿಎಂ ನಲ್ಲಿ ಹಣ ಬಾರದ ಹಿನ್ನೆಲೆ ಏಜೆನ್ಸಿಗೆ ದೂರುಗಳು ಬಂದಿತ್ತು. ಈ ಕುರಿತು ವಿಚಾರಣೆ ನಡೆಸಿದ ವೇಳೆ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಈ ಕುರಿತು ದೂರು ಪಡೆದ ಪೊಲೀಸರು ತನಿಖೆ ಆರಂಭಿಸಿದ್ದರು. ಅಂದು ಎಟಿಎಂ ಗೆ ಹಣ ತುಂಬಲು ಕಳುಹಿಸಿದ್ದ ಪರಮೇಶ್ ಕೃತ್ಯ ನಡೆಸಿದ ಕುರಿತು ಅನುಮಾನಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಬಳಿಕ ಆತ ಕದ್ದ ಹಣವನ್ನು ದನದ ಕೊಟ್ಟಿಗೆಯಲ್ಲಿ ಬಚ್ಚಿಟ್ಟ ಮಾಹಿತಿ ತಿಳಿದ ಪೊಲೀಸರು 52 ಲಕ್ಷ ರೂ. ಹಣ ವಶಕ್ಕೆ ಪಡೆದಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತರು ಸಾರ್ವಜನಿಕ ಹಣದ ಬಗ್ಗೆ ಬೇಜಾವಾಬ್ದಾರಿತನ ವರ್ತನೆ ತೋರಿದ ಸಿಎಂಎಸ್ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

  • ಅಟೆಂಪ್ಟ್ ಟು ಮರ್ಡರ್ ಹವಾ ಜೋರು!

    ಅಟೆಂಪ್ಟ್ ಟು ಮರ್ಡರ್ ಹವಾ ಜೋರು!

    ಬೆಂಗಳೂರು: ಕನ್ನಡದಲ್ಲಿ ಸತ್ಯಕಥೆಗಳನ್ನಾಧರಿಸಿದ ಸಿನಿಮಾಗಳು ಆಗಾಗ ತೆರೆ ಕಾಣುತ್ತಿರುತ್ತವೆ. ಇದೀಗ ಅದೇ ಸಾಲಿನಲ್ಲಿ ಸೇರ್ಪಡೆಯಾಗುವ ಎಟಿಎಂ (ಅಟೆಂಪ್ಟ್ ಟು ಮರ್ಡರ್) ಚಿತ್ರ ಬಿಡುಗಡೆಯಾಗುವ ಸನ್ನಾಹದಲ್ಲಿದೆ.

    ಅಮರ್ ನಿರ್ದೇಶನದ ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ಜನರನ್ನು ಸೆಳೆದಿವೆ. ಈಗಾಗಲೇ ರವಿ ದೇವ್ ಸಂಗೀತ ನಿರ್ದೇಶನದ ಮೂರು ಹಾಡುಗಳು ಟ್ರೆಂಡ್ ಸೆಟ್ ಮಾಡಿವೆ. ಅಂದಹಾಗೆ ಈ ಕಥೆಯಲ್ಲಿ ವಿಲನ್ ಪಾತ್ರದತ್ತಲೇ ಫೋಕಸ್ ಇರೋದರಿಂದ ವಿಲನ್ ಎಂಟ್ರಿಗೆಂದೇ ವಿಶೇಷವಾದೊಂದು ಹಾಡು ಮಾಡಲಾಗಿದೆಯಂತೆ. ಅದೂ ಕೂಡಾ ಜನರಿಗಿಷ್ಟವಾಗಿದೆ. ಆನಂದ್ ಆಡಿಯೋ ಹೊರ ತಂದಿರೋ ಈ ಹಾಡುಗಳೇ ಚಿತ್ರದ ಬಗ್ಗೆ ಪ್ರೇಕ್ಷಕರನ್ನು ಕಾತರರನ್ನಾಗಿಸುವಲ್ಲಿ ಯಶಸ್ವಿಯಾಗಿವೆ.

    ಇದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಘಟನೆಯೊಂದನ್ನು ಆಧರಿಸಿದ ಚಿತ್ರ. ಕಾಪೋರೇಷನ್ ವೃತ್ತದಲ್ಲಿ ಎಟಿಎಂ ಒಂದರಲ್ಲಿ ಮಹಿಳೆಯ ಮೇಲೆ ಮಾರಣಾಂತಿಕವಾದ ಹಲ್ಲೆ ನಡೆದಿತ್ತಲ್ಲಾ? ಅದೇ ಘಟನೆಯನ್ನಾಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ಕಮರ್ಷಿಯಲ್ ಅಂಶಗಳಾಚೆಗೆ ಈ ಚಿತ್ರವನ್ನು ಭಿನ್ನ ಬಗೆಯಲ್ಲಿ ರೂಪಿಸಲಾಗಿದೆಯಂತೆ.

    ಸದ್ಯ ಬಿಡುಗಡೆಯ ಸರದಿಯಲ್ಲಿ ನಿಂತಿರುವ ಚಿತ್ರಗಳಲ್ಲಿ ಅಟೆಂಪ್ಟ್ ಟು ಮರ್ಡರ್ (ಎಟಿಎಂ) ಪ್ರೇಕ್ಷಕರ ಗಮನ ಸೆಳೆದಿರುವ ಚಿತ್ರವಾಗಿ ಮುಖ್ಯವಾಗಿದೆ. ಬೆಂಗಳೂರಿನಲ್ಲಿ ವರ್ಷಾಂತರಗಳ ಹಿಂದೆ ನಡೆದು ದೇಶವನ್ನೇ ಬೆಚ್ಚಿಬೀಳಿಸಿದ್ದ ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದೆ ಅಂತ ನಿರ್ದೇಶಕ ಅಮರ್ ಆರಂಭದಲ್ಲಿ ಹೇಳಿಕೊಂಡಿದ್ದರು. ಹಾಗಾದರೆ ಅದು ಎಟಿಎಂಗೆ ನುಗ್ಗಿದ ದುಷ್ಕರ್ಮಿ ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣವಾ? ಎಂಬ ಪ್ರಶ್ನೆ ಕಾಡೋದು ಸಹಜ. ಆದರೆ ಈ ವಿಚಾರದ ನಿಗೂಢವನ್ನು ಈವರೆಗೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಅದೇ ಘಟನೆಯೇ ಆಗಿದ್ದರೂ ನಿರೀಕ್ಷೆ ಮಾಡದಂಥಾ ರೀತಿಯಲ್ಲಿ ಚಿತ್ರ ಮೂಡಿ ಬಂದಿದೆ ಎಂಬುದು ಚಿತ್ರತಂಡದ ಭರವಸೆ.

    ಇದು ಒಂದು ಕ್ರೈಂ ಓರಿಯಂಟೆಡ್ ಚಿತ್ರ ಎಂಬಂತೆ ಕಂಡರೂ ಈ ಚಿತ್ರದಲ್ಲೆಲ್ಲೂ ಕೊಲೆಗಳನ್ನು ವೈಭವೀಕರಿಸಿಲ್ಲವಂತೆ. ಅಸಲಿಗೆ ಕೊಲೆ ನಡೆಯುತ್ತದಾ ಎಂಬುದನ್ನೇ ಚಿತ್ರ ತಂಡ ಸಸ್ಪೆನ್ಸ್ ಆಗಿಟ್ಟಿದೆ. ಈ ನೈಜ ಘಟನೆಗೆ ಸಿನಿಮಾ ಟಚ್ ನೀಡಿರೋ ನಿರ್ದೇಶಕರು ಅದರ ಜೊತೆಗೆ ನವಿರಾದೊಂದು ಪ್ರೇಮ ಕಥೆಯನ್ನೂ ಹೇಳಿದ್ದಾರಂತೆ. ಈ ಕಾರಣದಿಂದಲೇ ಈ ಚಿತ್ರ ವಿಶೇಷವಾಗಿ ಮೂಡಿ ಬಂದಿದೆ ಎಂಬುದು ನಿರ್ದೇಶಕರ ಅಭಿಪ್ರಾಯ. ಇನ್ನುಳಿದಂತೆ ವಿನಯ್ ಈ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕ ನಟನಾಗಬೇಕೆಂಬ ಕನಸು ಹೊತ್ತು ಆ ನಿಟ್ಟಿನಲ್ಲಿ ವರ್ಷಾಂತರಗಳ ಕಾಲ ಶ್ರಮ ವಹಿಸಿರುವ ವಿನಯ್ ಎಟಿಎಂ ಚಿತ್ರದ ಮೂಲಕ ಅದು ಕೈಗೂಡಿದ ಖುಷಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಬಹು ಮುಖ್ಯವಾದ ಪಾತ್ರದಲ್ಲಿ ನಟಿಸಿರುವ ಧನ್ಯತೆ ವಿನಯ್ ಅವರಲ್ಲಿದೆ. ಈ ಚಿತ್ರದ ಮತ್ತೋರ್ವ ನಟ ಚಂದು ಗೌಡ. ಪ್ರಸ್ತುತ ಲಕ್ಷ್ಮೀಬಾರಮ್ಮ ಸೀರಿಯಲ್ ನಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಇವರ ಪಾತ್ರದ ಹೆಸರೂ ಚಂದು. ಈ ಪಾತ್ರದ ಮೂಲಕವೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರೋ ಇವರು ಎರಡು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಇವರಿಗಿಲ್ಲಿ ಶೋಭಿತಾ ಎಂಬಾಕೆ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಐಟಿ ಕಂಪೆನಿ ಹುಡುಗಿಯಾಗಿ ನಟಿಸಿರೋ ಶೋಭಿತಾಗೂ ಇದು ಮೊದಲ ಚಿತ್ರ.

  • ವಿಡಿಯೋ: ಕೆಟ್ಟು ಹೋದ ಎಟಿಎಂನಿಂದ ನೋಟುಗಳ ಸುರಿಮಳೆ- ಸಿಕ್ಕಿದ್ದು ಸೀರುಂಡೆ ಅಂತ ಬಾಚಿಕೊಂಡು ಹೋದ ಜೋಡಿ!

    ವಿಡಿಯೋ: ಕೆಟ್ಟು ಹೋದ ಎಟಿಎಂನಿಂದ ನೋಟುಗಳ ಸುರಿಮಳೆ- ಸಿಕ್ಕಿದ್ದು ಸೀರುಂಡೆ ಅಂತ ಬಾಚಿಕೊಂಡು ಹೋದ ಜೋಡಿ!

    ಬೀಜಿಂಗ್: ಎಟಿಎಂಗಳು ಸರಿಯಾಗಿ ಕಾರ್ಯನಿರ್ವಹಿಸಿದೆ ಕಾರ್ಡ್ ಸಿಲುಕಿಕೊಳ್ಳುವುದು ಅಥವಾ ಹಣ ಬರದೇ ಇರೋ ಬಗ್ಗೆ ಕೇಳಿರ್ತೀರ. ಆದ್ರೆ ಇಲ್ಲೊಂದು ಎಟಿಎಂ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ನೋಟುಗಳ ಸುರಿಮಳೆಯಾಗಿದ್ದು, ಅದೇ ಸಮಯಕ್ಕೆ ಅಲ್ಲಿಗೆ ಬಂದ ಇಬ್ಬರು ಹಣವನ್ನ ಬಾಚಿಕೊಂಡಿದ್ದಾರೆ.

    ಮಾರ್ಚ್ 6ರಂದು ಚೀನಾದ ಝೀಜಿಯಾಂಗ್ ಪ್ರಾಂತ್ಯದಲ್ಲಿ ಎಟಿಎಂ ನಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಎರಡೇ ಸೆಕೆಂಡ್‍ನಲ್ಲಿ 3 ಸಾವಿರ ಯುವಾನ್(ಅಂದಾಜು 30 ಸಾವಿರ ರೂ.) ಮೊತ್ತದ ನೋಟುಗಳನ್ನ ಹೊರಹಾಕಿದೆ. ಈ ದೃಶ್ಯ ಎಟಿಎಂ ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಲವೇ ಸೆಕೆಂಡ್‍ಗಳಲ್ಲಿ ಎಟಿಎಂ ನಿಂದ ಹಣ ಹೊರಬೀಳೋದನ್ನ ವಿಡಿಯೋದಲ್ಲಿ ಕಾಣಬಹುದು. ಆದ್ರೆ ಎಟಿಎಂ ದೋಷಕ್ಕೆ ಕಾರಣವೇನೆಂಬುದು ಸ್ಪಷ್ಟವಾಗಿಲ್ಲ.

    ಈ ವೇಳೆ ಎಟಿಎಂ ನಲ್ಲಿ ಯಾವುದೇ ಗ್ರಾಹಕರು ಇರಲಿಲ್ಲ. ಎಟಿಎಂ ನಿಂದ ಹೊರಬಿದ್ದ ನೋಟುಗಳು ನೆಲದ ಮೇಲೆ ಬಿದ್ದಿದ್ದು, ಇದೇ ಸಮಯಕ್ಕೆ ಅಲ್ಲಿಗೆ ಬಂದ ಇಬ್ಬರು ಸಿಕ್ಕಿದ್ದು ಸೀರುಂಡೆ ಅಂತ ಹಣವನ್ನ ಬಾಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.

    ಒಬ್ಬ ಹಣವನ್ನ ಕೈಗೆತ್ತಿಕೊಂಡು ಎಣಿಸಿ ಜೇಬಲ್ಲಿ ಇಟ್ಟುಕೊಂಡಿದ್ದಾನೆ. ಆದ್ರೆ ಆತ ಸಿಸಿಟಿವಿ ಯನ್ನ ನೇರವಾಗಿ ನೋಡಿಲ್ಲ. ಆದರೂ ಪೊಲೀಸರು ಆ ಇಬ್ಬರನ್ನ ಪತ್ತೆಹಚ್ಚಿದ್ದು, ಹಣ ವಾಪಸ್ ನೀಡುವಂತೆ ಮನವೊಲಿಸಿದ್ದಾರೆಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    ಆ ಇಬ್ಬರೂ ಹಣವನ್ನ ತೆಗೆದುಕೊಂಡ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧ ಚರ್ಚೆ ಎದ್ದಿದೆ. ಕೆಲವರು ಹಣ ತೆಗೆದುಕೊಂಡಿದ್ದು ತಪ್ಪು ಎಂದರೆ, ಇನ್ನೂ ಕೆಲವರು ಸಿಕ್ಕಿದ್ದನ್ನು ಇಟ್ಟುಕೊಂಡ್ರೆ ತಪ್ಪೇನು ಎಂದು ವಾದಿಸಿದ್ದಾರೆ.

  • ಎಟಿಎಂನಲ್ಲಿ ಹಣ ಡ್ರಾ ಮಾಡಲು ಆಗ್ಲಿಲ್ಲವೆಂದ್ರೆ ಟ್ರಾನ್ಸಾಕ್ಷನ್ ರದ್ದು ಮಾಡದೇ ಹೊರಬರಬೇಡಿ- ಈ ಸುದ್ದಿ ನೀವು ಓದ್ಲೇಬೇಕು

    ಎಟಿಎಂನಲ್ಲಿ ಹಣ ಡ್ರಾ ಮಾಡಲು ಆಗ್ಲಿಲ್ಲವೆಂದ್ರೆ ಟ್ರಾನ್ಸಾಕ್ಷನ್ ರದ್ದು ಮಾಡದೇ ಹೊರಬರಬೇಡಿ- ಈ ಸುದ್ದಿ ನೀವು ಓದ್ಲೇಬೇಕು

    ಮುಂಬೈ: ಕೇವಲ ಗ್ಲೂ ಹಾಗೂ ಲ್ಯಾಪ್‍ಟಾಪ್ ರೀತಿಯ ಕೀಪ್ಯಾಡ್ ಸಾಕಾಗಿತ್ತು ಆ ಇಬ್ಬರು ಖತರ್ನಾಕ್ ಖದೀಮರ ಹಣ ದೋಚೋ ಪ್ಲ್ಯಾನ್ ವಕೌರ್ಟ್ ಆಗಲು. ಗ್ರಾಹಕರಿಗೆ ಗೊತ್ತಾಗದಂತೆ ಅವರ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಇಬ್ಬರು ಯುವಕರು ಈಗ ಪೊಲೀಸರ ಅತಿಥಿಯಾಗಿದ್ದಾರೆ.

    ಸಾಹಿಲ್ ಶೇಕ್ ಹಾಗೂ ಸ್ವರೂಪ್ ಖಾಮ್ಕರ್ ಬಂಧಿತ ಆರೋಪಿಗಳು. ಇಬ್ಬರೂ 19 ವರ್ಷ ವಯಸ್ಸಿನವರಾಗಿದ್ದು ಕುರ್ಲಾ ಮೂಲದವರು ಎಂದು ವರದಿಯಾಗಿದೆ. ಮಾರ್ಚ್ 9ರಂದು ಡಿಎನ್ ನಗರ್ ಪೊಲೀಸರು ಇವರನ್ನ ಬಂಧಿಸಿದ್ದಾರೆ.

    ಅಂಧೇರಿಯ ಎಟಿಎಂ ಬಳಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಆರೋಪಿಗಳನ್ನ ನೋಡಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಈ ಇಬ್ಬರೂ ಮೂರು ತಿಂಗಳಿನಿಂದ ಸುಮಾರು 18 ಮಂದಿಗೆ ವಂಚಿಸಿದ್ದರು ಎಂದು ವರದಿಯಾಗಿದೆ.

    ಗ್ಲೂ ಬಳಸಿ ಹಣ ಕಳ್ಳತನ: ಆರೋಪಿಗಳು ಮೊದಲು ಲ್ಯಾಪ್‍ಟಾಪ್‍ನಂತಹ ಕೀಪ್ಯಾಡ್ ಇರೋ ಎಟಿಎಂ ಪತ್ತೆಹಚ್ಚುತ್ತಿದ್ರು. ಅಲ್ಲಿ ಕೆಲವು ಬಟನ್‍ಗಳನ್ನ ತೆಗೆದು, ಅದರ ಅಂಚಿಗೆ ಬಲಶಾಲಿಯಾದ ಗ್ಲೂ ಹಾಕುತ್ತಿದ್ರು. ಇದರಿಂದ ಆ ಬಟನ್‍ಗಳು ಕಾರ್ಯ ನಿರ್ವಹಿಸದಂತೆ ಮಾಡುತ್ತಿದ್ರು. ಅನಂತರ ಆ ಎಟಿಎಂಗೆ ಗ್ರಾಹಕರು ಬರೋದನ್ನೇ ಕಾದು ಕುಳಿತಿರುತ್ತಿದ್ದರು. ಯಾರಾದ್ರೂ ಗ್ರಾಹಕರು ಬಂದರೆ ಅವರು ಒಳಗೆ ಹೋಗಿ ಹಣ ಡ್ರಾ ಮಾಡಲು ಪ್ರಯತ್ನಿಸುವವರೆಗೂ ಕಾಯುತ್ತಿದ್ದರು. ಗ್ರಾಹಕರು ಕಾರ್ಡ್ ಉಜ್ಜಿ ಪಿನ್ ನಂಬರ್ ಒತ್ತಲು ಯತ್ನಿಸುವಾಗ ಬಟನ್‍ಗಳು ಕಾರ್ಯ ನಿರ್ವಹಿಸದೇ ವಿಫಲರಾಗ್ತಿದ್ರು.

    ಈ ವೇಳೆ ಆರೋಪಿಗಳಲ್ಲೊಬ್ಬ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಒಳಗೆ ಹೋಗ್ತಿದ್ದ. ಆ ಗ್ರಾಹಕರ ಪಿನ್ ನಂಬರ್ ಕೇಳಿ ಹಣ ಡ್ರಾ ಮಾಡಲು ಹಲವು ಬಾರಿ ಪ್ರಯತ್ನಿಸುತ್ತಿದ್ದ. ಈ ಇಬ್ಬರ ಖತರ್ನಾಕ್ ಕೆಲಸದ ಬಗ್ಗೆ ಅರಿವಿಲ್ಲದ ಗ್ರಾಹಕರು ಬೇಸತ್ತು ಟ್ರಾನ್ಸಾಕ್ಷನ್ ರದ್ದು ಮಾಡದೇ ಅಲ್ಲಿಂದ ಹೊರಟುಹೋಗ್ತಿದ್ರು. ಅವರು ಎಟಿಎಂನಿಂದ ಹೊರಗೆ ಕಾಲಿಡುವುದೇ ತಡ ಶೇಕ್ ಹಾಗೂ ಖಾಮ್ಕರ್ ಇಬ್ಬರೂ ಒಳಗೆ ಹೋಗಿ ಗ್ಲೂ ತೆಗೆದು, ಗ್ರಾಹಕರ ಪಿನ್ ನಂಬರ್ ಬಳಸಿ ಸಾವಿರಾರು ರೂ. ಹಣ ಲಪಟಾಯಿಸುತ್ತಿದ್ದರು.

    ಸಿಕ್ಕಿಬಿದ್ದಿದ್ದು ಹೇಗೆ?: ಹಲವಾರು ಗ್ರಾಹಕರು ಎಟಿಎಂ ನಿಂದ ಹಣ ಕಳೆದುಕೊಂಡ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಎಟಿಎಂ ಕೇಂದ್ರಗಳ ಮೇಲೆ ನಿಗಾ ವಹಿಸಿದ್ದರು. ಈ ಇಬ್ಬರು ಆರೋಪಿಗಳು ಸುಮಾರು 15 ನಿಮಿಷಗಳ ಕಾಲ ಎಟಿಎಂ ಬಳಿ ಇದ್ದಿದ್ದು, ಹಾಗೂ ಅವರ ವರ್ತನೆಯೂ ಅನುಮಾನಾಸ್ಪದವಾಗಿ ಇದ್ದ ಕಾರಣ ಇಬ್ಬರನ್ನೂ ವಶಕ್ಕೆ ಪಡೆದಿದ್ದರು. ಈವರೆಗೆ ತಲಾ 25 ಸಾವಿರ ರೂ. ಕಳೆದುಕೊಂಡಿದ್ದ ಮೂವರು ಗ್ರಾಹಕರು ಪೊಲೀಸರಿಗೆ ದೂರು ನೀಡಿದ್ದರು ಎಂದು ವರದಿಯಾಗಿದೆ.

    ಬೇಗ ಹಣ ಮಾಡಬೇಕು ಎಂಬ ಉದ್ದೇಶದಿಂದ ಯುವಕರು ಈ ಕೃತ್ಯವೆಸಗುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಯುವಕರು ಎರಡು ವರ್ಷಗಳ ಹಿಂದೆ ತನ್ನ ಸ್ನೇಹಿತನೊಬ್ಬನಿಂದ ಈ ಟ್ರಿಕ್ ಕಲಿತಿದ್ದಾಗಿ ಬಾಯ್ಬಿಟ್ಟಿದ್ದಾರೆ. ಇತ್ತೀಚೆಗೆ ಆರೋಪಿಗಳು ಬೈಕ್ ಖರೀದಿಸಿದ್ದು, ಅದನ್ನ ಕಳ್ಳತನ ಮಾಡಿದ ಹಣದಿಂದಲೇ ಕೊಂಡುಕೊಂಡಿದ್ದಾರಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಆರೋಪಿಗಳು ಬಹುತೇಕ ಕೋಟಕ್ ಮಹಿಂದ್ರಾ ಬ್ಯಾಂಕ್‍ನ ಎಟಿಎಂಗಳಲ್ಲೇ ಈ ಕೃತ್ಯವೆಸಗುತ್ತಿದ್ದರು. ಯಾಕಂದ್ರೆ ಅದರ ಎಟಿಎಂಗಳಲ್ಲಿ ಲ್ಯಾಪ್‍ಟಾಪ್ ನಂತಹ ಕೀಪ್ಯಾಡ್‍ಗಳಿರುತ್ತವೆ. ಈ ಬಗ್ಗೆ ಬ್ಯಾಂಕ್‍ನವರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ನೆರವಾಗುತ್ತೇವೆ ಎಂದು ತನಿಖಾಧಿಕಾರಿ ಶ್ರೀನಿವಾಸ್ ಚೇವಾಲೆ ಹೇಳಿದ್ದಾರೆ.

    ಐಪಿಸಿ ಸೆಕ್ಷನ್ 420(ವಂಚನೆ) ಹಾಗು ಐಟಿ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇಬ್ಬರನ್ನೂ ಪೊಲಿಸ್ ಕಸ್ಟಿಡಿಗೆ ಕಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪರಮೇಶ್ವರ್ ಗನಾಮೇ ಹೇಳಿದ್ದಾರೆ.

  • ಎಂಜಿನಿಯರ್ ವೇಷದಲ್ಲಿ ಬಂದು ಎಟಿಎಂ ನಲ್ಲಿ 18 ಲಕ್ಷ ರೂ. ಕದ್ದ

    ಎಂಜಿನಿಯರ್ ವೇಷದಲ್ಲಿ ಬಂದು ಎಟಿಎಂ ನಲ್ಲಿ 18 ಲಕ್ಷ ರೂ. ಕದ್ದ

    ಲಕ್ನೋ: ಖದೀಮನೊಬ್ಬ ತಾನು ಎಂಜಿನಿಯರ್ ಎಂದು ಹೇಳಿಕೊಂಡು ಎಟಿಎಂ ನಲ್ಲಿ 18 ಲಕ್ಷ ರೂ. ಗಿಂತ ಹೆಚ್ಚು ಹಣವನ್ನು ಕಳ್ಳತನ ಮಾಡಿರುವ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿನ ಇಂಡಿಯನ್ ಓವರ್‍ಸೀಸ್ ಬ್ಯಾಂಕ್ ಶಾಖೆಯ ಎಟಿಎಂ ನಲ್ಲಿ ನಡೆದಿದೆ.

    ಸಾದರ ಪೊಲೀಸ್ ಠಾಣೆಯ ಎಸ್‍ಎಚ್‍ಒ ಅವನಿತ್ ಗೌತಮ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಎಟಿಎಂ ರಿಪೇರಿಗೆಂದು ಮಂಗಳವಾರದಂದು ಬ್ಯಾಂಕ್ ಗೆ ಎಂಜಿನಿಯರ್ ವೇಷದಲ್ಲಿ ವ್ಯಕ್ತಿಯೊಬ್ಬ ಬಂದಿದ್ದ. ಅವನು ಬ್ಯಾಂಕ್ ನ ಸ್ಟ್ರಾಂಗ್ ರೂಮ್ ಗೆ ಹೋಗಿ ಎಟಿಎಮ್ ನ ಸೀಕ್ರೆಟ್ ಪಾಸ್‍ವರ್ಡ್ ಬಳಸಿ ಅಲ್ಲಿದ್ದ 18.37 ಲಕ್ಷ ರೂ. ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಗ್ರಾಹಕರು ಎಟಿಎಮ್ ನಲ್ಲಿ ಹಣವಿಲ್ಲವೆಂದು ಹೇಳಿದಾಗ ಹಣ ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆಂದು ತಿಳಿಸಿದರು.

     

    ಈ ಬಗ್ಗೆ ವಿಷಯ ತಿಳಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದು, ಬ್ಯಾಂಕ್ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದ್ದಾರೆ. ಕಳ್ಳನ ಪತ್ತೆಗಾಗಿ ಬಲೆ ಬೀಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ವಿಡಿಯೋ: ಎಟಿಎಂ ನಲ್ಲಿ ಬಾಲಕಿಯ ತಲೆಗೆ ಗನ್ ಇಟ್ಟು ತಂದೆಯಿಂದ ಹಣ ಡ್ರಾ ಮಾಡಿಸಿಕೊಂಡು ಕಳ್ಳ ಪರಾರಿ

    ವಿಡಿಯೋ: ಎಟಿಎಂ ನಲ್ಲಿ ಬಾಲಕಿಯ ತಲೆಗೆ ಗನ್ ಇಟ್ಟು ತಂದೆಯಿಂದ ಹಣ ಡ್ರಾ ಮಾಡಿಸಿಕೊಂಡು ಕಳ್ಳ ಪರಾರಿ

    ಇಂದೋರ್: ಕಳ್ಳನೊಬ್ಬ ಎಟಿಎಂ ನೊಳಗೆ ನುಗ್ಗಿ 2 ವರ್ಷದ ಬಾಲಕಿಯ ತಲೆಗೆ ಗನ್ ಇಟ್ಟು, ಮಗುವಿನ ತಂದೆಗೆ ಹಣ ಡ್ರಾ ಮಾಡಿ ಕೊಡುವಂತೆ ಬೆದರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಮಧ್ಯಪ್ರದೇಶದ ಇಂದೋರ್‍ನಲ್ಲಿ ಕಳೆದ ಡಿಸೆಂಬರ್ 24ರಂದು ಈ ಘಟನೆ ನಡೆದಿದ್ದು, ಒಂದು ತಿಂಗಳ ಬಳಿಕ ಸಿಸಿಟಿವಿ ದೃಶ್ಯಾವಳಿ ಹರಿದಾಡ್ತಿದೆ. ಇಲ್ಲಿನ ಕೇಸರ್ ಬಾಘ್ ರೋಡ್‍ನ ಎಟಿಎಂನಲ್ಲಿ ಪಟೇಲ್ ಎಂಬವರು ತನ್ನ ಹೆಂಡತಿ ಹಾಗೂ ಮಗುವಿನೊಂದಿಗೆ ಹಣ ಡ್ರಾ ಮಾಡಲೆಂದು ಹೋದಾಗ ಈ ಘಟನೆ ನಡೆದಿದೆ. ಪಟೇಲ್ ಅವರಿಂದ ಹಣ ತೆಗೆದುಕೊಂಡು ಕಳ್ಳ ಪರಾರಿಯಾಗಿದ್ದು, ಈ ಎಲ್ಲಾ ದೃಶ್ಯ ಎಟಿಎಂ ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

     

    ಪಟೇಲ್ 1500 ರೂ. ಡ್ರಾ ಮಡುತ್ತಿದ್ದಂತೆ ಮುಸುಕುಧಾರಿ ಕಳ್ಳ ಎಟಿಎಂ ಒಳಗೆ ನುಗ್ಗಿದ್ದಾನೆ. ಕೈಯ್ಯಲ್ಲಿ ಪಿಸ್ತೂಲ್ ಹಿಡಿದಿದ್ದ ಆ ಖದೀಮ ಮಗುವಿನ ತಲೆಗೆ ಗನ್ ಇಟ್ಟು, ಎಟಿಎಂನಿಂದ ಮತ್ತಷ್ಟು ಹಣ ಡ್ರಾ ಮಾಡಿಕೊಡುವಂತೆ ಬ್ಲಾಕ್‍ಮೇಲ್ ಮಾಡಿದ್ದಾನೆ. ಇದರಿಂದ ಭಯಗೊಂಡ ಪಟೇಲ್ 10 ಸಾವಿರ ರೂ. ಗೂ ಹೆಚ್ಚಿನ ಹಣವನ್ನ ಕಳ್ಳನಿಗೆ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.

  • 90 ಲಕ್ಷ ಹಣವಿದ್ದ ವಾಹನ ಸಮೇತ ಎಟಿಎಂ ಸಿಬ್ಬಂದಿ  ಪರಾರಿ

    90 ಲಕ್ಷ ಹಣವಿದ್ದ ವಾಹನ ಸಮೇತ ಎಟಿಎಂ ಸಿಬ್ಬಂದಿ ಪರಾರಿ

    ಬೆಂಗಳೂರು: ವಾಹನದ ಗನ್ ಮ್ಯಾನ್‍ಗೆ ಬಾಳೆಹಣ್ಣು ತರಲು ಹೇಳಿ ಕ್ಷಣಮಾತ್ರದಲ್ಲಿ 90 ಲಕ್ಷ ಹಣವಿದ್ದ ಎಟಿಎಂ ವಾಹನದ ಸಮೇತ ಸಿಬ್ಬಂದಿಯೇ ಪರಾರಿಯಾಗಿರುವ ಘಟನೆ ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಎಟಿಎಂ ಹಣ ತುಂಬುವ ಸಿಎಂಎಸ್ ಕಂಪನಿಯ ವಾಹನದಲ್ಲಿ 90 ಲಕ್ಷ ಹಣ ತುಂಬಿಕೊಂಡ ಗನ್ ಮ್ಯಾನ್ ನಟರಾಜ್, ಸಿಬ್ಬಂದಿ ನರಸಿಂಹಮೂರ್ತಿ, ಚಾಲಕ ನಾರಾಯಣಸ್ವಾಮಿ ವಿವಿಧ ಎಟಿಎಂಗಳಿಗೆ ಹಣ ತುಂಬಲು ಇಂದು ತೆರಳಿದ್ದರು. ಈ ವೇಳೆ ಜ್ಞಾನಭಾರತಿ ಸರ್ಕಲ್ ಬಳಿ ವಾಹನ ನಿಲ್ಲಿಸಿದ ಸಿಬ್ಬಂದಿ ನರಸಿಂಹಮೂರ್ತಿ, ಗನ್ ಮ್ಯಾನ್ ನಟರಾಜ್‍ಗೆ ಬಾಳೆಹಣ್ಣು ತರಲು ಸೂಚಿಸಿದ್ದಾನೆ. ಆದರೆ ಗನ್‍ಮ್ಯಾನ್ ಬಾಳೆಹಣ್ಣು ತರುವಷ್ಟರಲ್ಲಿ ಎಟಿಎಂ ವಾಹನದಲ್ಲಿದ್ದ 90 ಲಕ್ಷ ಹಣದ ಸಮೇತ ಇಬ್ಬರು ಸಿಬ್ಬಂದಿಗಳು ಪರಾರಿಯಾಗಿದ್ದಾರೆ.

    ನಂತರ ಜ್ಞಾನಭಾರತಿ ವೃತ್ತದಿಂದ ಹೊರಟ ವಾಹನದ ಚಾಲಕ ನಾರಾಯಣಸ್ವಾಮಿ ಮತ್ತು ನರಸಿಂಹ ಮೂರ್ತಿ, ವಾಹನವನ್ನು ಕಿತ್ತನಹಳ್ಳಿ ಬಳಿ ಬಿಟ್ಟು ಹಣದ ಸಮೇತ ಪರಾರಿಯಾಗಿದ್ದಾರೆ.

    ಹಣದ ಸಮೇತ ಪರಾರಿಯಾದ ಆರೋಪಿ ನರಸಿಂಹಮೂರ್ತಿ ತುಮಕೂರು ಮೂಲವನಾಗಿದ್ದು, ವಾಹನ ಚಾಲಕ ನಾರಾಯಣಸ್ವಾಮಿ ಬೆಂಗಳೂರಿನ ಉತ್ತರಹಳ್ಳಿಯ ನಿವಾಸಿಯಾಗಿದ್ದಾನೆ. ಅಲ್ಲದೇ ಇಬ್ಬರು ಮೈತುಂಬಾ ಸಾಲ ಮಾಡಿಕೊಂಡಿದ್ದರು ಎಂದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

    ಇತ್ತೀಚಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗ್ತಿದ್ದು, ಸಿಬ್ಬಂದಿಯೇ ಈ ರೀತಿ ಹಣ ದೋಚಿ ಪರಾರಿಯಾಗ್ತಿರೋದು ಬ್ಯಾಂಕ್ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಆತಂಕಕ್ಕೆ ದೂಡಿದೆ.

  • ತುಮಕೂರು ಯುವಕನ ಹಣ ಪ್ಯಾಲೆಸ್ಟೈನ್ ನಲ್ಲಿ ಡ್ರಾ!

    ತುಮಕೂರು ಯುವಕನ ಹಣ ಪ್ಯಾಲೆಸ್ಟೈನ್ ನಲ್ಲಿ ಡ್ರಾ!

    ಹಾಸನ: ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿ 13,721 ರೂ ಡ್ರಾ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

    ಮೂಲತಃ ತುಮಕೂರು ಮೂಲದ ಯುವಕ ಕಿರಣ್ ಕುಮಾರ್ ಹಣ ಕಳೆದು ಕೊಂಡ ಯುವಕ. ಕಿರಣ್ ಯಾರಿಗೂ ಎಟಿಎಂ ಪಾಸ್‍ವರ್ಡ್ ನೀಡದೇ ಇದ್ದರೂ ಅವರ ಐಡಿಬಿಐ ಬ್ಯಾಂಕ್ ಖಾತೆಯಿಂದ ಕಳೆದ ಡಿಸೆಂಬರ್ 12ರ ರಾತ್ರಿ, ಸುಮಾರು 13,721 ರೂ. ಹಣ ನಾಪತ್ತೆಯಾಗಿದೆ.

    ಹಾಸನದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಿರಣ್ ಪ್ರಸ್ತುತ ಖರ್ಚಿಗೂ ಹಣ ಇಲ್ಲದೇ ಪರದಾಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ನೋಡುಗರಿಗೆ ಇದು ಸಣ್ಣ ಪ್ರಮಾಣದ ಹಣ ಇರಬಹುದು. ಆದರೆ ನನಗಿದು ದೊಡ್ಡ ಮೊತ್ತ. ಅಷ್ಟಕ್ಕೂ ನಾನು ನನ್ನ ಅಕೌಂಟ್ ಹಾಗೂ ಎಟಿಎಂ ನಂಬರ್ ಕುರಿತು ಯಾರಿಗೂ ಮಾಹಿತಿ ನೀಡಿಲ್ಲ. ಆದರೂ ಹಣ ಡ್ರಾ ಆಗಿದೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

    ಹಣ ಡ್ರಾ ಆದ ಕುರಿತು ಬ್ಯಾಂಕ್‍ನ ಮಿನಿಸ್ಟೇಟ್ ಮೆಂಟ್ ತೆಗೆಸಿ ನೋಡಿದರೆ, ದೂರದ ಪ್ಯಾಲೆಸ್ಟೇನ್ ನಲ್ಲಿ ಹಣ ಡ್ರಾ ಮಾಡಲಾಗಿದೆ ಎಂದು ತೋರಿಸುತ್ತಿದೆ. ಈ ಬಗ್ಗೆ ಐಡಿಬಿಐ ಬ್ಯಾಂಗ್ ಗೆ ಹೋಗಿ ಕೇಳಿದರೆ, ಪೊಲೀಸ್ ದೂರು ಕೊಡಿ ಎಂದು ಹೇಳಿದ್ದಾರೆ. ಪೊಲೀಸ್ ಠಾಣೆಗೆ ಹೋದರೆ ಇಂಥ ಕೇಸ್ ಗಳು ಸಾಕಷ್ಟು ಬರುತ್ತವೆ ಎಂದು ಹೇಳುತ್ತಾರೆ. ಹೀಗೆ ಆದರೆ ಬಡವರು ಏನು ಮಾಡಬೇಕು ಎಂದು ಕಿರಣ್ ಅಸಹಾಯಕರಾಗಿ ಪ್ರಶ್ನಿಸಿದ್ದಾರೆ. ಅಲ್ಲದೇ ಇದರ ಹಿಂದೆ ಆನ್ ಲೈನ್ ವಂಚಕರ ಕೈವಾಡವಿದ್ದು, ಹೋದ ಹಣ ವಾಪಸ್ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.

     

  • ಎಟಿಎಂ ನಲ್ಲಿ ಬಂತು 2 ಸಾವಿರ ರೂ. ಮುಖಬೆಲೆಯ ನಕಲಿ ನೋಟು

    ಎಟಿಎಂ ನಲ್ಲಿ ಬಂತು 2 ಸಾವಿರ ರೂ. ಮುಖಬೆಲೆಯ ನಕಲಿ ನೋಟು

    ಬೆಂಗಳೂರು: ನಗರದ ಲಕ್ಕಸಂದ್ರದ ಬಳಿಯ ಆ್ಯಕ್ಸಿಸ್ ಬ್ಯಾಂಕ್ ಶಾಖೆಯ ಎಟಿಎಂ ನಲ್ಲಿ ಸಾರ್ವಜನಿಕರೊಬ್ಬರಿಗೆ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟು ದೊರೆತಿದೆ.

    ಲಕ್ಕಸಂದ್ರದ ಎರಡನೇ ಕ್ರಾಸ್‍ನಲ್ಲಿರುವ ಎಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ದಯಾನಂದ್ ರೆಡ್ಡಿ ಎಂಬ ಯುವಕ ಆರು ಸಾವಿರ ರೂಪಾಯಿ ಡ್ರಾ ಮಾಡಿದ್ದಾರೆ. ಬಳಿಕ ಪೆಟ್ರೋಲ್ ಹಾಕಿಸಲು ಬಂಕ್ ಗೆ ಹೋದಾಗ ಅಲ್ಲಿ ಖೋಟಾನೋಟು ಎಂಬುದು ಗೊತ್ತಾಗಿದೆ. ಈ ನೋಟಿನ ಮೇಲೆ ನಂಬರ್ ಇರುವ ಜಾಗದಲ್ಲಿ ಇಂಗ್ಲಿಷ್ ಅಕ್ಷರಗಳಿಂದ `ದಿಸ್ ಈಸ್ ಶೂಟಿಂಗ್ ಪರ್ಪಸ್ ಓನ್ಲಿ’ ಎಂದು ಪ್ರಿಂಟ್ ಆಗಿದೆ.

    ನಕಲಿ ನೋಟು ಹಿಡಿದು ದಯಾನಂದ್ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಆದರೆ ಪೊಲೀಸರು ಒಂದೇ ನೋಟು ಪತ್ತೆಯಾಗಿರೋದು ಎಂದು ಕೇಸ್ ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ. ಇನ್ನೂ ಬ್ಯಾಂಕ್ ಸಿಬ್ಬಂದಿ ಕೇಳಲು ಹೋದ್ರೆ ಯಾರೂ ಕೂಡ ಸರಿಯಾಗಿ ಪ್ರತಿಕ್ರಿಯಿಸಿಲ್ಲ ಎಂದು ದಯಾನಂದ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.