Tag: atm

  • ಎಟಿಎಂನಲ್ಲಿ ಹಣ ಕದಿಯಲು ಯತ್ನ- ಪೊಲೀಸರ ಕರ್ತವ್ಯ ಪ್ರಜ್ಞೆಯಿಂದ ತಪ್ಪಿದ ಕಳ್ಳತನ!

    ಎಟಿಎಂನಲ್ಲಿ ಹಣ ಕದಿಯಲು ಯತ್ನ- ಪೊಲೀಸರ ಕರ್ತವ್ಯ ಪ್ರಜ್ಞೆಯಿಂದ ತಪ್ಪಿದ ಕಳ್ಳತನ!

    ವಿಜಯಪುರ: ಬೆಳಗಿನ ಜಾವ ಕಳ್ಳರು ಎಟಿಎಂನಲ್ಲಿ ಹಣ ಕದಿಯಲು ಯತ್ನಿಸಿ, ಪೊಲೀಸರನ್ನು ಕಂಡು ಪರಾರಿಯಾದ ಘಟನೆ ನಗರದ ಬಾಗಲಕೋಟೆ ರಸ್ತೆಯಲ್ಲಿ ನಡೆದಿದೆ.

    ಇಂದು ಬೆಳಗಿನ ಜಾವ ಸುಮಾರು 4ರ ಹೊತ್ತಿಗೆ ನಗರದ ಬಾಗಲಕೋಟೆ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕಿನ ಎಟಿಎಂನಲ್ಲಿ ಹಣ ಕದಿಯಲು ಕಳ್ಳರು ಪ್ರಯತ್ನಿಸಿದ್ದಾರೆ. ಗ್ಯಾಸ್ ಕಟ್ಟರ್ ಸಹಾಯದಿಂದ ಎಟಿಎಂ ಕತ್ತರಿಸುತ್ತಿದ್ದಾಗ, ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದ ಗಾಂಧಿಚೌಕ್ ಠಾಣೆಯ ಎಎಸೈ ಪ್ರೇಮಾ ಕೂಚಬಾಳ ಕಣ್ಣಿಗೆ ಕದೀಮರು ಬಿದ್ದಿದ್ದಾರೆ. ಕೂಡಲೇ ಜಾಗೃತರಾದ ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ.

    ಸ್ಥಳದಲ್ಲಿ ಗ್ಯಾಸ್ ಕಟರ್ ಹಾಗೂ ಇತರೆ ವಸ್ತುಗಳು ಸಿಕ್ಕಿದ್ದು, ಕಳ್ಳರು ಕೆಎ 32 ಎಂ 4527 ಕಾರಿನಲ್ಲಿ ಪರಾರಿಯಾಗಿದ್ದಾರೆ. ಕದೀಮರನ್ನು ಬೆನ್ನತ್ತಿದ ಎಎಸೈ ಪ್ರೇಮಾರವರ ಕೈಗೆ ಸಿಗದೇ ಪರಾರಿಯಾಗಿದ್ದಾರೆ. ಐಸಿಐಸಿಐ ಎಟಿಎಂನಲ್ಲಿ ಹಣ ಸೇಫಾಗಿದ್ದು, ಘಟನೆ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಎಟಿಎಂನಿಂದ ಡ್ರಾ ಮಾಡ್ದಾಗ ಸುಟ್ಟ, ಹರಿದ, ಮಸಿ ಮೆತ್ತಿಕೊಂಡ 6 ನೋಟುಗಳು ಬಂದ್ವು!

    ಎಟಿಎಂನಿಂದ ಡ್ರಾ ಮಾಡ್ದಾಗ ಸುಟ್ಟ, ಹರಿದ, ಮಸಿ ಮೆತ್ತಿಕೊಂಡ 6 ನೋಟುಗಳು ಬಂದ್ವು!

    ಬೆಳಗಾವಿ: ಎಸ್‍ಬಿಐ ಗೆ ಸೇರಿದ ಎಟಿಎಂ ಕೇಂದ್ರದಲ್ಲಿ ಸುಟ್ಟ ಹಾಗೂ ಹರಿದ ನೋಟುಗಳು ಗ್ರಾಹಕರಿಗೆ ದೊರೆತಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ನಡೆದಿದೆ.

    ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡ ಹಿಂದೂಸ್ತಾನ ಲೇಟೆಕ್ಸ್ ಕಂಪೆನಿ ನೌಕರ ರಫೀಕ್ ಭಾಗವಾನ, ಕಣಗಲಾ ಗ್ರಾಮದ ಎಟಿಎಂ ನಿಂದ ಹಣ ಡ್ರಾ ಮಾಡಿದಾಗ ಈ ನೋಟುಗಳು ಪತ್ತೆಯಾಗಿವೆ.

    ಹೆಚ್‍ಎಎಲ್ ಕಂಪನಿ ಬಳಿಯ ಎಸ್‍ಬಿಐ ಎಟಿಎಂನಲ್ಲಿ ಅವಾಂತರದಿಂದ ಕಂಪನಿ ನೌಕರರು ಹಾಗೂ ಗ್ರಾಹಕರು ಆತಂಕದಲ್ಲಿದ್ದಾರೆ. 2 ಸಾವಿರ ರೂ. ಮುಖಬೆಲೆಯ 6 ಡ್ಯಾಮೇಜ್ ಆಗಿದ್ದು, ಸುಟ್ಟ, ಹರಿದ ಮತ್ತು ಮಸಿ ಮೆತ್ತಿಕೊಂಡ ನೋಟುಗಳು ರಫೀಕ್ ಭಾಗವಾನ ಅವರಿಗೆ ಸಿಕ್ಕಿದೆ. ಇದರಿಂದ ಕಂಗಲಾದ ಅವರು ಸಂಬಂಧಿಸಿದ ಎಸ್‍ಬಿಐ ಬ್ಯಾಂಕ್ ಶಾಖೆಗೆ ದೂರು ನೀಡಿದ್ದಾರೆ.

    ಮೇಲಿಂದ ಮೇಲೆ ಇದೇ ಎಟಿಎಂ ನಲ್ಲಿ ಇಂತಹ ನೋಟುಗಳು ಸಿಗುತ್ತಿದ್ದು, ಈ ರೀತಿ ಆಗದಂತೆ ನೋಡಿಕೊಳ್ಳುವಂತೆ ಆಗ್ರಹಿಸಿದ್ದಾರೆ.

    ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ವಿಡಿಯೋ: ಎಚ್ಚರ, ಬೆಂಗಳೂರಿನಲ್ಲಿದೆ ಹಣ ನುಂಗೊ ಎಟಿಎಂ..!

    ವಿಡಿಯೋ: ಎಚ್ಚರ, ಬೆಂಗಳೂರಿನಲ್ಲಿದೆ ಹಣ ನುಂಗೊ ಎಟಿಎಂ..!

    ಬೆಂಗಳೂರು: ಎಟಿಎಂ ಅಂದ್ರೆ ಹಣವನ್ನು ನೀಡುವ ಯಂತ್ರ ಎನ್ನುವುದು ಎಲ್ಲರಿಗೂ ತಿಳಿದಿರೋ ವಿಚಾರ. ಆದರೆ ಈಗ ಹಣ ನುಂಗಿರುವ ಘಟನೆ ನಗರದ ಬೇಗೂರು ರಸ್ತೆಯಲ್ಲಿರುವ ಎಟಿಎಂವೊಂದರಲ್ಲಿ ನಡೆದಿದೆ.

    ಬೇಗೂರು ರಸ್ತೆಯಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಎಟಿಎಂ ಹಣ ನುಂಗುತ್ತಿದೆ. ನಗರದ ಮಹೇಶ್ ಎಂಬವರು ಈ ಎಟಿಎಂ ನಲ್ಲಿ 10 ಸಾವಿರ ರೂ. ಡ್ರಾ ಮಾಡಿದ್ದಾರೆ. ಆದರೆ ಅವರ ಕೈಗೆ ಸೇರಿರೋದು ಬರೀ ಒಂದು ಸಾವಿರ ರೂಪಾಯಿ ಮಾತ್ರ. ಆದರೆ ಅವರ ಬ್ಯಾಂಕ್ ಅಕೌಂಟ್ ನಲ್ಲಿ ಮಾತ್ರ 10 ಸಾವಿರ ರೂಪಾಯಿ ತೆಗೆದಿದ್ದೀರಿ ಎಂದು ತೋರಿಸುತ್ತಿದೆ.

    ಎಟಿಎಂ ಈ ರೀತಿ ಹಣ ನುಂಗುವ ವಿಚಾರವನ್ನು ಸ್ವತಃ ಮಹೇಶ್ ವೀಡಿಯೊ ಮಾಡಿದ್ದಾರೆ. ಈ ಕುರಿತಂತೆ ಎಚ್‍ಡಿಎಫ್‍ಸಿ ಬ್ಯಾಂಕಿಗೆ ದೂರನ್ನೂ ಕೂಡಾ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಈ ರೀತಿ ಗ್ರಾಹಕರಿಗೆ ಎಟಿಎಂ ಮೋಸ ಮಾಡುತ್ತಿದೆ. ಈ ವಿಚಾರ ಕುರಿತು ಮಹೇಶ್, ಬ್ಯಾಂಕ್ ಅಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ. ಆದರೆ ಬ್ಯಾಂಕ್ ನ ಸಿಬ್ಬಂದಿ ಮಾತ್ರ ಕ್ಯಾರೇ ಎನ್ನುತ್ತಿಲ್ಲ ಎಂದು ಹಣ ಕಳೆದುಕೊಂಡ ಗ್ರಾಹಕ ಮಹೇಶ್ ದೂರಿದ್ದಾರೆ.

    ಸಾರ್ವಜನಿಕರಲ್ಲಿ ಈ ಕುರಿತು ಭಯ ಕಾಡುತ್ತಿದೆ. ಬ್ಯಾಂಕುಗಳು ಹಣ ಇಡೋಕೆ ಹೆಚ್ಚು ಸೇಫ್. ಎಟಿಎಂ ಮೂಲಕ ಎಲ್ಲಿ ಬೇಕಾದ್ರೂ ಹಣ ಪಡೆಯಬಹುದು ಅಂತಾರೆ. ಆದರೆ ಈ ರೀತಿ ಬ್ಯಾಂಕ್ ಎಟಿಎಂಗಳೇ ಹಣ ನುಂಗಿದರೆ ನಮ್ಮ ಗತಿ ಏನು ಅಂತಾ ಗ್ರಾಹಕರು ಭಯಪಡುತ್ತಿದ್ದಾರೆ.

    https://www.youtube.com/watch?v=dGTTywDwZ8Y

  • ಗಮನಿಸಿ, ಇಲಿಗಳು 12 ಲಕ್ಷ ರೂ. ನೋಟು ತಿಂದಿದ್ದು ಅಸ್ಸಾಂ ಎಟಿಎಂನಲ್ಲಿ!

    ಗಮನಿಸಿ, ಇಲಿಗಳು 12 ಲಕ್ಷ ರೂ. ನೋಟು ತಿಂದಿದ್ದು ಅಸ್ಸಾಂ ಎಟಿಎಂನಲ್ಲಿ!

    ಗುವಾಹಟಿ: “ಬೆಂಗಳೂರಿನ ಮತ್ತಿಕೆರೆಯ ಎಟಿಎಂ ನಲ್ಲಿ ಇಲಿಗಳು 12.38 ಲಕ್ಷ ರೂ. ಮೌಲ್ಯದ ನೋಟುಗಳನ್ನು ತಿಂದುಹಾಕಿವೆ” ಹೀಗೊಂದು ಬರಹದೊಂದಿಗೆ ಎಟಿಎಂನಲ್ಲಿ ಹರಿದ ನೋಟುಗಳಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ನಿಜವಾಗಿ ಈ ಘಟನೆ ಮತ್ತಿಕೇರೆಯಲ್ಲಿ ನಡೆದಿಲ್ಲ. ಅಸ್ಸಾಂನ ತಿನ್ಸುಕೀಯಾ ಜಿಲ್ಲೆಯಲ್ಲಿರುವ ಎಟಿಎಂನಲ್ಲಿ ಘಟನೆ ನಡೆದಿದ್ದು ಬೆಂಗಳೂರು ಎಂದು ಬರೆದು ವೈರಲ್ ಆಗಿದೆ.

    ಗುವಾಹಟಿಯ ಗ್ಲೋಬಲ್ ಬಿಸನೆಸ್ ಸೊಲ್ಯುಶನ್ಸ್ ಕಂಪನಿ ಈ ಎಟಿಎಂನ್ನು ನಿರ್ವಹಣೆ ಮಾಡುತಿತ್ತು. ಮೇ 19 ರಂದು ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಸೇರಿದ ಈ ಎಟಿಎಂ ಮಶಿನ್ ಗೆ 29 ಲಕ್ಷ ರೂಪಾಯಿ ತುಂಬಿಸಿತ್ತು. ಆದರೆ ತಾಂತ್ರಿಕ ತೊಂದರೆಯಿಂದಾಗಿ ಎಟಿಎಂ ಮೇ 20 ರಂದು ಬಂದ್ ಆಗಿತ್ತು. ಈ ಸಮಯದಲ್ಲಿ ಇಲಿಗಳ ಗುಂಪೊಂದು ಅದು ಹೇಗೋ ಎಟಿಎಂ ಮಶಿನ್ ಒಳಗಡೆ ನುಗ್ಗಿದೆ. ಅದರಲ್ಲಿದ್ದ 29 ಲಕ್ಷ ರೂ ಗಳ ಪೈಕಿ 12.38 ಕ್ಷ ರೂ ಮೌಲ್ಯದ ನೋಟುಗಳನ್ನು ಹರಿದು ಚಿಂದಿ ಮಾಡಿವೆ.

     

    ಜೂನ್ 11ರಂದು ಮಶಿನ್ ರಿಪೇರಿ ಮಾಡಲು ಹೋದಾಗ ಇಲಿಗಳ ಈ ಕೃತ್ಯ ಬೆಳಕಿಗೆ ಬಂದಿದೆ. ರೂ. 500 ಹಾಗೂ 2000 ರೂ. ನೋಟುಗಳು ಚಿಂದಿಯಾಗಿ ಬಿದ್ದಿದ್ದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

    ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ ಅಧಿಕಾರಿಯೊಬ್ಬರು ಗುವಾಹಟಿ ಮೂಲದ ಗ್ಲೋಬಲ್ ಬಿಸಿನೆಸ್ ಸೊಲ್ಯುಶನ್ಸ್ ಕಂಪನಿ ಮೇ 19 ರಂದು ಎಟಿಎಂ ಗೆ 29 ಲಕ್ಷ ರೂ. ಮೌಲ್ಯದ 2000 ರೂ. ಹಾಗೂ 500 ರೂ. ಮೌಲ್ಯದ ನೋಟುಗಳನ್ನು ತುಂಬಿಸಿತ್ತು. ಅದರಲ್ಲಿ 12,38,000 ರೂ. ಮೌಲ್ಯದ ನೋಟುಗಳನ್ನು ಇಲಿಗಳು ಚಿಂದಿ ಮಾಡಿವೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಘಟನೆ ಕುರಿತಂತೆ ಹಲವರಲ್ಲಿ ಈ ಸಂಶಯ ವ್ಯಕ್ತವಾಗಿದೆ. ಈ ಕುರಿತಂತೆ ತನಿಖೆ ನಡೆಸುವಂತೆ ತಿನ್ಸುಕಿಯಾ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಮೇ 20 ರಿಂದ ಜೂನ್ 11 ರ ವರೆಗೆ ಸಾಕಷ್ಟು ಸಮಯಾವಕಾಶ ಇದ್ದು ಯಾಕೆ ಎಟಿಎಂ ರಿಪೇರಿಗೆ ಇಷ್ಟು ಕಾಲವಲಾಶ ಬೇಕಾಯಿತು ಎಂದು ಹಲವರು ಸಂಶಯ ವ್ಯಕ್ತಪಡಿಸಿದ್ದಾರೆ.

     

  • ಸಹಾಯ ಕೇಳಿದ ಮಹಿಳೆಯ ಎಟಿಎಂ ಬದಲಿಸಿ 1.90ಲಕ್ಷ ರೂ. ವಂಚನೆ!

    ಸಹಾಯ ಕೇಳಿದ ಮಹಿಳೆಯ ಎಟಿಎಂ ಬದಲಿಸಿ 1.90ಲಕ್ಷ ರೂ. ವಂಚನೆ!

    ಮಡಿಕೇರಿ: ಎಟಿಎಂನಲ್ಲಿ ಹಣ ತಗೆದುಕೊಡುವಂತೆ ಸಹಾಯ ಕೇಳಿದ ಮಹಿಳೆಯ ಎಟಿಎಂ ಕಾರ್ಡ್ ಬದಲಿಸಿ 1.90 ಲಕ್ಷ ರೂ. ವಂಚನೆ ಮಾಡಿದ ಘಟನೆ ಮಡಿಕೇರಿ ತಾಲೂಕು ಬಿಳಿಗೇರಿಯಲ್ಲಿ ನಡೆದಿದೆ.

    ಲೋಕೇಶ್ ಹಣ ದೋಚಿ ಪರಾರಿಯಾದ ಆರೋಪಿ. ಈತ ಮಡಿಕೇರಿ ತಾಲೂಕಿನ ಬಿಳಿಗೇರಿ ನಿವಾಸಿಯಾಗಿದ್ದು, ಕಾರ್ಡ್ ಬದಲಿಸಿ ಹಣ ಡ್ರಾಮಾಡಿದ ತಕ್ಷಣ ಲೋಕೇಶ್ ಪರಾರಿಯಾಗಿದ್ದಾರೆ.

    ಮಹಿಳೆಯೊಬ್ಬರು ತಮ್ಮ ಎಟಿಎಂನಿಂದ 10 ಸಾವಿರ ಹಣ ತೆಗೆದುಕೊಡುವಂತೆ ಲೋಕೇಶ್ ಬಳಿ ಸಹಾಯ ಕೋರಿದ್ದಾರೆ. ಸಹಾಯ ಮಾಡಲು ಒಪ್ಪಿಕೊಂಡ ಲೋಕೇಶ್ 10 ಸಾವಿರ ಹಣ ತೆಗೆದುಕೊಟ್ಟು, ತನ್ನ ಬಳಿ ಇದ್ದ ಎಟಿಎಂ ಅನ್ನು ಸಂತ್ರಸ್ತ ಮಹಿಳೆಗೆ ನೀಡಿ, ಅವರ ಎಟಿಎಂ ತನ್ನ ಬಳಿ ಇಟ್ಟುಕೊಂಡಿದ್ದಾನೆ. ಖಾತೆಯ ಹಣ ಪರಿಶೀಲನೆ ವೇಳೆ 1.90 ಲಕ್ಷ ರೂ. ವಂಚನೆ ಮಾಡಿರುವುದು ಗೊತ್ತಾಗಿದೆ.

    1.90 ಲಕ್ಷ ರೂ. ವಂಚನೆ ಆರೋಪದ ಕುರಿತು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ವಂಚಕ ಲೋಕೇಶ್ ಪತ್ತೆಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ.

  • ರಾಡ್ ನಿಂದ ATM ಲಾಕರ್ ಒಡೆದು 14.96 ಲಕ್ಷ ರೂ. ದರೋಡೆ

    ರಾಡ್ ನಿಂದ ATM ಲಾಕರ್ ಒಡೆದು 14.96 ಲಕ್ಷ ರೂ. ದರೋಡೆ

    ಕಲಬುರಗಿ: ಎಟಿಎಂ ಲಾಕರ್ ಒಡೆದು 14.96 ಲಕ್ಷ ರೂ. ದರೋಡೆ ಮಾಡಿದ ಘಟನೆ ಜಿಲ್ಲೆಯ ಚಿತ್ತಾಪುರದ ಕುಂಬಾರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಇಂಡಿಯಾ ಓನ್ ಸಂಸ್ಥೆಗೆ ಸೇರಿದ ಎಟಿಎಂನಲ್ಲಿ ಕಳ್ಳರು ದರೋಡೆ ಮಾಡಿದ್ದಾರೆ. ಈ ಘಟನೆ ಭಾನುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳ್ಳರು ರಾಡ್ ನಿಂದ ಲಾಕರ್ ಒಡೆದು ಕಳ್ಳತನ ನಡೆಸಿದ್ದಾರೆ.

    ನಾಲ್ಕು ಜನರ ತಂಡದ ಈ ದುಷ್ಕೃತ್ಯ ಎಸಗಿದ್ದು, ಸಿಸಿಟಿವಿ ಕ್ಯಾಮರದಲ್ಲಿ ಕಳ್ಳತನದ ದೃಶ್ಯ ರೆಕಾರ್ಡ್ ಆಗಿದೆ. ಸದ್ಯ ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

  • ಯುವತಿಯರನ್ನು ರೇಗಿಸಿ ಅಶ್ಲೀಲ ಕಾಮೆಂಟ್ ಮಾಡಿದ ಯುವಕರಿಗೆ ಬಿತ್ತು ಗೂಸಾ

    ಯುವತಿಯರನ್ನು ರೇಗಿಸಿ ಅಶ್ಲೀಲ ಕಾಮೆಂಟ್ ಮಾಡಿದ ಯುವಕರಿಗೆ ಬಿತ್ತು ಗೂಸಾ

    ಭುವನೇಶ್ವರ್: ಕಾಲೇಜು ಯುವತಿಯರನ್ನು ರೇಗಿಸಿ ಅಶ್ಲೀಲವಾಗಿ ಕಾಮೆಂಟ್ ಮಾಡಿದ ಮೂವರು ಯುವಕರನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ಒಡಿಶಾದ ಆಂಗಲ್‍ನಲ್ಲಿ ನಡೆದಿದೆ.

    ಕಾಲೇಜು ಯುವತಿಯರು ಛೆಂಡಿಪಾಡಾ ಎಟಿಎಂನಲ್ಲಿ ಹಣ ತೆಗೆಯುತ್ತಿದ್ದರು. ಈ ವೇಳೆ ಮೂವರು ಯುವಕರು ಬೈಕಿನಲ್ಲಿ ಬಂದು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಹೀಗೆ ಕಾಮೆಂಟ್ ಮಾಡುವುದನ್ನು ಮುಂದುವರಿಸಿದಾಗ ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್ ಪ್ರಶ್ನಿಸಿದ್ದಾರೆ.

    ಯುವತಿಯರಿಗೆ ಕಾಮೆಂಟ್ ಮಾಡುತ್ತಿರುವುದು ಹಾಗೂ ಸೆಕ್ಯೂರಿಟಿ ಗಾರ್ಡ್ ಅವರನ್ನು ತಡೆಯುತ್ತಿರುವ ಎಲ್ಲಾ ಘಟನೆಗಳನ್ನು ಗಮನಿಸುತ್ತಿದ್ದ ಸ್ಥಳೀಯರು, ಕೂಡಲೇ ಯುವಕರನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ.

    ಕೂಡಲೇ ಘಟನೆಯ ಮಾಹಿತಿ ಅರಿತ ಛೆಂಡಿಪಾಡಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಸ್ಥಳೀಯರಿಂದ ಯುವಕರನ್ನು ರಕ್ಷಿಸಿದ್ದಾರೆ. ನಂತರ ಆ ಮೂವರನ್ನು ವಶಕ್ಕೆ ಪಡೆದು ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ.

  • ಎಟಿಎಂ ಭರ್ಜರಿ ಪ್ರದರ್ಶನ!

    ಎಟಿಎಂ ಭರ್ಜರಿ ಪ್ರದರ್ಶನ!

    ಕನ್ನಡದಲ್ಲಿ ಸತ್ಯಕಥೆಗಳನ್ನಾಧರಿಸಿದ ಸಿನಿಮಾಗಳು ಆಗಾಗ ತೆರೆ ಕಾಣುತ್ತಿರುತ್ತವೆ. ಇದೀಗ ಅದೇ ಸಾಲಿನಲ್ಲಿ ಸೇರ್ಪಡೆಯಾಗಿರುವ ಚಿತ್ರ ಎಟಿಎಂ (ಅಟೆಂಪ್ಟ್ ಟು ಮರ್ಡರ್). 5 ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದಂಥ ಬೆಂಗಳೂರಿನ ಎಟಿಎಂವೊಂದರಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ಇದಾಗಿದ್ದು, ಕಳೆದ ವಾರ ರಾಜ್ಯಾದ್ಯಂತ ತೆರೆಗೆ ಬಂದಿತ್ತು. ನೈಜ ಘಟನೆ ಆಧರಿಸಿ ಅಚ್ಚುಕಟ್ಟಾಗಿ ಸಿನಿಮಾ ಮಾಡಿರುವ ಕಾರಣಕ್ಕೆ ವಿಮರ್ಶಕರು ಮಾತ್ರವಲ್ಲದೆ ಪ್ರೇಕ್ಷಕರೂ ಎಟಿಎಂಗೆ ಫುಲ್ ಮಾರ್ಕ್ ನೀಡಿದ್ದಾರೆ. ಇದರ ಪ್ರತಿಫಲವೆಂಬಂತೆ ಎಟಿಎಂ ಬಿಡುಗಡೆಯಾದ ಸ್ಥಳಗಳಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.

    ಈ ಚಿತ್ರಕ್ಕೆ ಅಮರ್ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ, ಎಸ್.ವಿ. ನಾರಾಯಣ್ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಅಮರ್ ಮಾಡಿಕೊಂಡಿದ್ದ ಈ ಕಥೆ ಕೇಳಿದಾಗ ಅದರಲ್ಲಿನ ವಿಶೇಷ ಅಂಶವನ್ನು ಗ್ರಹಿಸಿ, ಆ ಕಥೆಯಲ್ಲಿ ಏನೋ ಹೊಸತನವಿರುವುದನ್ನು ಕಂಡುಕೊಂಡು ಸಹೋದರ ಕೃಷ್ಣಮೂರ್ತಿ ಅವರ ಜೊತೆ ಚರ್ಚಿಸಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಟಿಎಂ ಚಿತ್ರದಲ್ಲಿ ಪ್ರಮುಖವಾಗಿ ಐದು ಜನ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೂ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳೂ ಅದರದೇ ಆದ ಪ್ರಾಮುಖ್ಯತೆ ಹೊಂದಿವೆ. ಚಿತ್ರದಲ್ಲಿರುವ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಂಟೆಂಟ್ ಪ್ರೇಕ್ಷಕರನ್ನು ಹಿಡಿದು ಕೂರಿಸುವಂತಿದೆ.

    ನಿರ್ದೇಶಕ ಅಮರ್ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದು, ಇದೇ ಮೊದಲ ಬಾರಿಗೆ ಕಮರ್ಷಿಯಲ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇನ್ನು ಈ ಚಿತ್ರದ ನಾಯಕನಟ ವಿನಯ್ ಒಬ್ಬ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಹೇಮಲತಾ ಅವರು ಒಬ್ಬ ಜರ್ನಲಿಸ್ಟ್ ಪಾತ್ರವನ್ನು ನಿರ್ವಹಿಸಿದ್ದಾರೆ.

  • ದೇಶಾದ್ಯಂತ ಎಟಿಎಂನಲ್ಲಿ ನೋ ಕ್ಯಾಶ್: ದಿಢೀರ್ ನೋಟುಗಳ ಬೇಡಿಕೆ ಹೆಚ್ಚಾಯ್ತು!

    ದೇಶಾದ್ಯಂತ ಎಟಿಎಂನಲ್ಲಿ ನೋ ಕ್ಯಾಶ್: ದಿಢೀರ್ ನೋಟುಗಳ ಬೇಡಿಕೆ ಹೆಚ್ಚಾಯ್ತು!

    ನವದೆಹಲಿ: ದೇಶದ ಬಹಳಷ್ಟು ರಾಜ್ಯಗಳಲ್ಲಿನ ಹಲವಾರು ಎಟಿಎಂ ಗಳಲ್ಲಿ ಹಣ ಇಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

    ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಬಹಳಷ್ಟು ಎಟಿಎಂ ಗಳಲ್ಲಿ ಹಣ ಇಲ್ಲ ಎಂಬ ಬೋರ್ಡ್ ಹಾಕಲಾಗಿದೆ.

    500, 1 ಸಾವಿರ ರೂ. ನೋಟು ನಿಷೇಧಗೊಳ್ಳುವ ಮೊದಲು 17.64 ಲಕ್ಷ ಕೋಟಿ ರೂ. ನಷ್ಟು ನಗದು ಚಲಾವಣೆಯಲ್ಲಿತ್ತು. ಅಪನಗದೀಕರಣದ ಬಳಿಕ 17.97 ಲಕ್ಷ ಕೋಟಿ ರೂ. ಅಷ್ಟು ನಗದು ಚಲಾವಣೆಯಲ್ಲಿದೆ. ಅಪನಗದೀಕರಣದ ಬಳಿಕ 2000 ರೂ ಮುಖಬೆಲೆಯ 5 ಲಕ್ಷ ಕೋಟಿ ನೋಟುಗಳು ಮುದ್ರಣಗೊಂಡಿದೆ ಎಂದು ಆರ್ ಬಿ ಐ ಸ್ಪಷ್ಟಪಡಿಸಿದೆ.

    ಸಾಕಷ್ಟು ನೋಟುಗಳು ಮುದ್ರಣವಾಗಿದ್ದರೂ ಎಟಿಎಂ ಗಳಲ್ಲಿ ಹಣ ಇಲ್ಲದಿರುವುದಕ್ಕೆ ಕಾರಣ 2000 ರೂ ನೋಟುಗಳ ಅಕ್ರಮ ಸಂಗ್ರಹಣೆ ಕಾರಣವಾಗಿರಬಹುದು ಎಂದು ಬ್ಯಾಂಕ್ ಗಳು ಶಂಕೆ ವ್ಯಕ್ತಪಡಿಸಿವೆ.

    ಚುನಾವಣಾ ಸಂಧರ್ಭದಲ್ಲಿ ಈ ರೀತಿ ನೋಟುಗಳ ಕೊರತೆ ಉಂಟಾಗುತ್ತದೆ. ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕಾರಣ ಕರ್ನಾಟಕ ಸೇರಿದಂತೆ ಹತ್ತಿರದ ರಾಜ್ಯಗಳಲ್ಲಿ ನೋಟುಗಳ ಬೇಡಿಕೆ ದಿಢೀರ್ ಏರಿಕೆಯಾಗಿರಬಹುದು ಎನ್ನುವ ಸಂದೇಹವನ್ನು ಬ್ಯಾಂಕ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

    ದೇಶದಲ್ಲಿನ ನಗದು ಚಲಾವಣೆಯ ಸ್ಥಿತಿಯನ್ನು ಗಮನಿಸಿದ್ದೇನೆ. ಸಾಕಷ್ಟು ನಗದು ಹಣ ಚಲಾವಣೆಯಲ್ಲಿ ಇದೆ ಹಾಗೂ ಬ್ಯಾಂಕ್ ಗಳಲ್ಲೂ ಲಭ್ಯವಿದೆ. ಕೆಲವು ಪ್ರದೇಶಗಳಲ್ಲಿ ಬೇಡಿಕೆ ದಿಢೀರ್ ಏರಿಕೆಯಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಮಸ್ಯೆ ಉಂಟಾಗಿದೆ. ತ್ವರಿತವಾಗಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ.

  • ಎಟಿಎಂನಿಂದ ಹೀರೋ ಆದರು ವಿನಯ್ ಗೌಡ!

    ಎಟಿಎಂನಿಂದ ಹೀರೋ ಆದರು ವಿನಯ್ ಗೌಡ!

    ಬೆಂಗಳೂರು: ವಿನಯ್ ಗೌಡ ಗೊತ್ತಲ್ಲ. ಕನ್ನಡದ ಅನೇಕ ಸೀರಿಯಲ್‍ಗಳಲ್ಲಿ ನಟಿಸಿ ಹೆಸರು ಮಾಡಿದವರು. ಬಹುಶಃ ವಿನಯ್ ಅಂದರೆ ತಕ್ಷಣಕ್ಕೆ ಗುರುತು ಹತ್ತೋದು ಕಷ್ಟ. ಯಾಕೆಂದರೆ, ಅವರು ಬೇರೆ ಬೇರೆ ಪಾತ್ರಗಳ ಮೂಲಕವೇ ಪ್ರೇಕ್ಷಕರ ಮನಸಲ್ಲಿ ನೆಲೆಯೂರಿದ್ದಾರೆ. ಇಂಥಾ ವಿನಯ್ ಗೌಡ ಎಟಿಎಂ ಸಿನಿಮಾದ ಮೂಲಕ ಹೀರೋ ಆಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಸನ ವಿನಯ್ ಅವರ ಊರು. ಅಲ್ಲಿನ ದುದ್ದ ಹೋಬಳಿಯ ಹೆರಗು ವಿನಯ್ ಅವರ ಸ್ವಂತ ಊರು. ಆದರೆ ಓದಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿಯೇ. ಓದಿಗೂ ಇವರ ಆಸಕ್ತಿಗೂ ಎತ್ತಣಿಂದೆತ್ತ ಸಂಬಂಧವೂ ಇಲ್ಲ. ಹೇಳಿಕೊಳ್ಳುವಂಥಾ ಕಲೆಯ ವಾತಾವರಣ ಇರದಿದ್ದ ಕುಟುಂಬವೊಂದರಿಂದ ಬಂದಿರುವ ವಿನಯ್ ನಟನಾಗಿ ರೂಪುಗೊಂಡಿದ್ದೇ ಒಂದು ಅಚ್ಚರಿ. ಕೆಎಲ್‍ಇ ಕಾಲೇಜಿನಲ್ಲಿ ಪದವಿ ಮುಗಿಸಿಕೊಂಡು, ದಯಾನಂದ ಸಾಗರ್ ಕಾಲೇಜಿನಲ್ಲಿ ಎಂಬಿಎ ಮುಗಿಸಿಕೊಂಡ ವಿನಯ್ ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್‍ನಲ್ಲಿ ಮಿಂಚಿದ್ದರು. ಓದೆಲ್ಲ ಮುಗಿಯುವ ಹೊತ್ತಿಗೆ ಅವರು ಆಕರ್ಷಿತರಾಗಿದ್ದು ರಂಗಭೂಮಿಯತ್ತ.

    ಜಯದೇವ್ ಅವರ ತ್ರಿಶಂಕು ತಂಡದ ಮೂಲಕ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ವಿನಯ್ ಅವರು ದುನಿಯಾ ವಿಜಯ್ ಮುಂತಾದ ನಟರೊಂದಿಗೇ ರಂಗ ತಾಲೀಮು ನಡೆಸಿದ್ದರು. ಹೀಗೆ ತರಬೇತಿ ಹೊಂದಿದ ವಿನಯ್ ಮೊದಲು ನಟಿಸಿದ ನಾಟಕ `ತ್ರಿಶಂಕು?. ಆ ಮೂಲಕ ನಟನೆಗೆ ಅಡಿಯಿರಿಸಿದ ವಿನಯ್ ಆ ನಂತರ ಹತ್ತಾರು ನಾಟಕಗಳಲ್ಲಿ ಅಭಿನಯಿಸಿದ್ದರು. ಅದರ ಬಲದಿಂದಲೇ ಮೊದಲ ಸಲ ವಿನು ಬಳಂಜ ನಿರ್ದೇಶನದ ಸೂಪರ್ ಹಿಟ್ ಧಾರಾವಾಹಿ ಜೋಗುಳದಲ್ಲಿಯೂ ಗಮನಾರ್ಹ ಪಾತ್ರದಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದರು. ಆ ನಂತರ ನಿನ್ನೊಲುಮೆಯಿಂದಲೇ, ಮುಕ್ತ ಮುಕ್ತ ಮುಂತಾದ ಧಾರಾವಾಹಿಗಳ ಮೂಲಕ ಕಿರುತೆರೆ ಜಗತ್ತಿನಲ್ಲಿ ನೆಲೆ ನಿಂತಿದ್ದರು. ಈ ನಡುವೆ ಮತ್ತೆ ಮುಂಗಾರು ಚಿತ್ರದಲ್ಲಿಯೂ ಗಮನಾರ್ಹ ಪಾತ್ರವೊಂದರಲ್ಲಿ ವಿನಯ್ ಕಾಣಿಸಿಕೊಂಡಿದ್ದರು. ತಾನೊಬ್ಬ ಪರಿಪೂರ್ಣ ನಟನಾಗಿ ರೂಪುಗೊಳ್ಳಬೇಕೆಂಬ ಹಂಬಲ ಹೊಂದಿದ್ದ ವಿನಯ್ ನಾಯಕ ನಟನಾಗಲು ಒಂದೊಳ್ಳೆ ಕಥೆಯ ತಲಾಷಿನಲ್ಲಿದ್ದರು. ಅದೀಗ ಎಟಿಎಂ ಚಿತ್ರದ ಮೂಲಕ ಸಾಕಾರಗೊಂಡಿದೆ.

    ಎಟಿಎಂ ಚಿತ್ರದಲ್ಲಿ ವಿನಯ್ ಬಯಸಿದ್ದಂಥಾದ್ದೇ ಖಡಕ್ ಪೊಲೀಸ್ ಅಧಿಕಾರಿಯ ನಾಯಕನ ಪಾತ್ರ ಸಿಕ್ಕಿದೆ. ಇದುವೇ ಚಿತ್ರರಂಗದಲ್ಲಿ ಮತ್ತಷ್ಟು ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬ ಭರವಸೆಯೂ ವಿನಯ್ ಅವರಿಗಿದೆ. ರಗಡ್ ಲುಕ್ಕಿನ ಖಡಕ್ ಪಾತ್ರಗಳನ್ನು ಮಾಡುವ ಇರಾದೆ ಹೊಂದಿರುವ ಅವರು ಪೌರಾಣಿಕ ಪಾತ್ರಗಳನ್ನು ಮಾಡುವ ಕನಸನ್ನೂ ಹೊಂದಿದ್ದಾರೆ. ಪಾತ್ರ ಯಾವುದಾದರೇನು ನಟಿಸುವ ಛಾತಿ ಇರುವ ವಿನಯ್ ಕನ್ನಡ ಚಿತ್ರರಂಗದ ಪಾಲಿಗೆ ಉತ್ತಮ ಕಲಾವಿದನಾಗೋದಂತೂ ನಿಜ.