Tag: ATM machine

  • ಬುಸುಗುಡುತ್ತಾ ಎಟಿಎಂ ಒಳಗೆ ಸೇರಿದ ಹಾವು – ವಿಡಿಯೋ ವೈರಲ್

    ಬುಸುಗುಡುತ್ತಾ ಎಟಿಎಂ ಒಳಗೆ ಸೇರಿದ ಹಾವು – ವಿಡಿಯೋ ವೈರಲ್

    ಲಕ್ನೋ: ಮನೆಯಲ್ಲಿ, ಬೈಕ್-ಸ್ಕೂಟಿ, ಕಾರಿನಲ್ಲಿ ಹಾವುಗಳು ಸೇರಿಕೊಂಡ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಉತ್ತರ ಪ್ರದೇಶದಲ್ಲಿ ಹಾವೊಂದು ಸರಸರನೆ ಎಟಿಎಂ ಮಷಿನ್ ಒಳಗೆ ಸೇರಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಉತ್ತರ ಪ್ರದೇಶದ ಘಾಜಿಯಾಬಾದ್ ನ ಗೋವಿಂದಪುರಿಯಲ್ಲಿನ ಐಸಿಐಸಿಐ ಬ್ಯಾಂಕ್‍ನ ಎಟಿಎಂ ಸೆಂಟರ್‌ವೊಂದರಲ್ಲಿ ಈ ಘಟನೆ ನಡೆದಿದೆ. ಎಟಿಎಂ ಸೆಂಟರ್ ಗೆ ಹಾವೊಂದು ನುಗ್ಗಿತ್ತು. ಇದನ್ನು ನೋಡಿದ ಭದ್ರತಾ ಸಿಬ್ಬಂದಿ ಎಟಿಎಂ ಬಾಗಿಲನ್ನು ತಕ್ಷಣ ಮುಚ್ಚಿದ್ದಾರೆ. ಇದರಿಂದ ಹಾವು ಹೊರಗಡೆ ಬರಲಾಗದೆ ಜನರನ್ನು ಕಂಡು ಭಯಗೊಂಡು ಎಟಿಎಂ ಮಷಿನ್ ಒಳಗಡೆ ಸೇರಿಕೊಂಡಿದೆ.

    ಎಟಿಎಂ ಮಷಿನ್ ಒಳಗಡೆ ಹಾವು ಸೇರಿಕೊಳ್ಳುತ್ತಿರುವ ವಿಡಿಯೋವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಫೇಸ್‍ಬುಕ್, ಟ್ವಿಟರ್ ಹಾಗೂ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಎಲ್ಲೆಡೆ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ದಂಗಾಗಿದ್ದಾರೆ.

    ಕೆಲವರು ಇದು ಭಯಾನಕ ಎಂದು ವಿಡಿಯೋಗೆ ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು ಬಹುಶಃ ಹಾವು ಹಣ ಬಿಡಸಲು ಎಟಿಎಂಗೆ ಬಂದಿತ್ತೋ ಏನೋ? ಸುಮ್ಮನೆ ಅದನ್ನು ಜನ ಭಯ ಬೀಳಿಸಿದ್ದಾರೆ ಎಂದು ಹಾಸ್ಯಾಸ್ಪದವಾಗಿ ಕಮೆಂಟ್ ಮಾಡಿದ್ದಾರೆ.

    ಈ ಘಟನೆ ನಡೆದ ತಕ್ಷಣ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿ ಹಾವನ್ನು ರಕ್ಷಣೆ ಮಾಡಿದ್ದಾರೆ.

  • ಜೆಸಿಬಿ ನುಗ್ಗಿಸಿ ಗೋಡೆ ಒಡೆದು ಎಟಿಎಂ ಯಂತ್ರವನ್ನೇ ಕಾರಿಗೆ ತುಂಬಿಸಿದ್ರು

    ಜೆಸಿಬಿ ನುಗ್ಗಿಸಿ ಗೋಡೆ ಒಡೆದು ಎಟಿಎಂ ಯಂತ್ರವನ್ನೇ ಕಾರಿಗೆ ತುಂಬಿಸಿದ್ರು

    ಡಬ್ಲಿನ್: ಎಟಿಎಂಗೆ ಕಳ್ಳರು ನುಗ್ಗಿ ಯಂತ್ರವನ್ನು ಹೊತ್ತುಕೊಂಡು ಹೋಗಿರುವುದನ್ನು ನೀವು ಕೇಳಿರಬಹುದು. ಆದರೆ ಈಗ ಕಳ್ಳರು ಮತ್ತಷ್ಟು ಮುಂದುವರಿದಿದ್ದು ಜೆಸಿಬಿಯನ್ನೇ ಎಟಿಎಂಗೆ ನುಗ್ಗಿಸಿ ಕಳ್ಳತನ ಮಾಡಿದ್ದಾರೆ.

    ಐರ್ಲೆಂಡಿನ ಖತರ್ನಾಕ್ ಕಳ್ಳರು ಜೆಸಿಬಿ, ಕಾರು ಬಳಸಿಕೊಂಡು ಎಟಿಎಂ ಯಂತ್ರವನ್ನು ಕದ್ದಿದ್ದಾರೆ. ಎಟಿಎಂ ಯಂತ್ರವನ್ನು ಕದಿಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://twitter.com/RT_com/status/1183553004227706880

    ಕದ್ದಿದ್ದು ಹೇಗೆ?
    ಮುಸುಕುಧಾರಿ ಕಳ್ಳರ ಗುಂಪೊಂದು ಜೆಸಿಬಿ ಮೂಲಕ ಮೊದಲು ಗ್ಯಾಸ್ ಸ್ಟೇಷನ್ನಿನ ಗೋಡೆಯನ್ನು ಬೀಳಿಸಿದ್ದಾರೆ. ಬಳಿಕ ಅದರೊಳಗಿದ್ದ ಎಟಿಎಂ ಯಂತ್ರವನ್ನು ಜೆಸಿಬಿ ಮೂಲಕ ಎತ್ತಿದ್ದಾರೆ. ನಂತರ ಅಲ್ಲೇ ಸಿದ್ಧವಾಗಿ ನಿಂತುಕೊಂಡಿದ್ದ ಕಾರಿಗೆ ಯಂತ್ರವನ್ನು ತುಂಬಿಸಿದ್ದಾರೆ.

    ಕಳ್ಳರು ಎಟಿಎಂ ಯಂತ್ರ ತುಂಬಲೆಂದೇ ಕಾರನ್ನು ವಿಶೇಷವಾಗಿ ವಿನ್ಯಾಸ ಮಾಡಿಕೊಂಡು ಬಂದಿದ್ದರು. ಕಾರಿನ ಸನ್ ರೂಫ್ ಜಾಗವನ್ನು ಎಟಿಎಂ ಯಂತ್ರ ಒಳ ಹೋಗುವಷ್ಟು ದೊಡ್ಡದಾಗಿ ವಿನ್ಯಾಸ ಮಾಡಿದ್ದರು. ಫಿಲ್ಮಿ ಸ್ಟೈಲ್ ಕಳ್ಳತನದ ಸಂಪೂರ್ಣ ವಿಡಿಯೋ ಪಕ್ಕದ ಕಟ್ಟಡದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  • ಕಳ್ಳತನ ಮಾಡಿದ್ದ ಕಾರಿನಲ್ಲೇ ಎಟಿಎಂ ಮೆಷಿನ್ ಹೊತ್ತೊಯ್ದ ಖದೀಮರು

    ಕಳ್ಳತನ ಮಾಡಿದ್ದ ಕಾರಿನಲ್ಲೇ ಎಟಿಎಂ ಮೆಷಿನ್ ಹೊತ್ತೊಯ್ದ ಖದೀಮರು

    ಜೈಪುರ: ಸಾಮಾನ್ಯವಾಗಿ ಕಳ್ಳರು ಎಟಿಎಂಗೆ ಹೋಗಿ ಹಣವನ್ನು ಕದ್ದು ಪರಾರಿಯಾಗುತ್ತಾರೆ. ಆದರೆ ಇಲ್ಲಿ ಕಳ್ಳತನ ಮಾಡಲು ಬಂದು ಎಟಿಎಂ ಮೆಷಿನನ್ನೇ ಕದ್ದಿದ್ದಲ್ಲದೇ ಕಳ್ಳತನ ಮಾಡಿದ್ದ ಕಾರಿನಲ್ಲೇ ಅದನ್ನ ಇಟ್ಟುಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ರಾಜಸ್ಥಾನದ ಜೈಪುರ ಸಮೀಪದ ಬಂಡಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

    ಪೊಲೀಸರ ಪ್ರಕಾರ, ಮಾಸ್ಕ್ ಧರಿಸಿದ್ದ ಐವರು ಯುವಕರು ನೈನ್ವಾ ರಸ್ತೆಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಎಟಿಮ್ ಗೆ ಹೋಗಿದ್ದಾರೆ. ಮೊದಲು ಕರೆಂಟ್ ವೈರ್‍ಗಳನ್ನು ಕಟ್ ಮಾಡಿದ್ದಾರೆ. ನಂತರ ಎಟಿಎಂ ಮಷಿನ್ ಬೇರ್ಪಡಿಸಿ ಹೊರಗಡೆ ನಿಲ್ಲಿಸಿದ್ದ ವಾಹನದಲ್ಲಿ ಇಟ್ಟಿದ್ದಾರೆ. ಈ ವಾಹನವನ್ನ ಕೂಡ ಅದೇ ಪ್ರದೇಶದಲ್ಲಿ ಕಳ್ಳತನ ಮಾಡಿ ತಂದಿದ್ದರು. ನಂತರ ಎಟಿಎಂ ಮೆಷಿನ್ ಇಟ್ಟುಕೊಂಡು ವಾಹನದಲ್ಲಿ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕಳ್ಳರು ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದರಿಂದ ಯಾರೊಬ್ಬರ ಗುರುತು ಕೂಡ ಪತ್ತೆಯಾಗಲಿಲ್ಲ. ನೈನ್ವಾ ರಸ್ತೆಯ ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ ನಿಯೋಜಿಸಿರಲಿಲ್ಲ. ಆದ ಕಾರಣ ಕಳ್ಳರು ಇದೇ ಎಟಿಎಂ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬ್ಯಾಂಕ್ ಉದ್ಯಮಿಯೊಬ್ಬರು ಮುಂಜಾನೆ ವಾಕ್ ಮಾಡಲು ಬಂದಾಗ ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ. ತಕ್ಷಣ ಅವರು ಬ್ಯಾಂಕ್ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಎಟಿಎಂನಲ್ಲಿ ಸುಮಾರು 5 ಲಕ್ಷ ರೂ. ಹಣವಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

  • ಮಂಡ್ಯ: ಮೀನುಗಾರರ ಬಲೆಗೆ ಸಿಕ್ತು ಎಟಿಎಂ ಯಂತ್ರ

    ಮಂಡ್ಯ: ಮೀನುಗಾರರ ಬಲೆಗೆ ಸಿಕ್ತು ಎಟಿಎಂ ಯಂತ್ರ

    ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಮದಲಹಳ್ಳಿ ಕರೆಯಲ್ಲಿ ಮೀನುಗಾರರು ಬೀಸಿದ ಬಲೆಗೆ ಮೀನು ಸಿಗುವ ಬದಲು ಎಟಿಎಂ ಯಂತ್ರ ಸಿಕ್ಕಿದೆ.

    ದರೋಡೆಕೋರರು ಎಟಿಎಂ ಯಂತ್ರವನ್ನು ಕದ್ದು ತಂದು ಅದರಲ್ಲಿಯ ಹಣವನ್ನು ತೆಗೆದು ಕೊನೆಗೆ ಯಂತ್ರವನ್ನು ಕೆರೆಗೆ ಎಸೆದು ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಕೆರೆಯಲ್ಲಿ ನೀರು ಕಡಿಮೆಯಾಗಿದ್ದು, ಮೀನುಗಾರರು ಬೀಸಿದ್ದ ಬಲೆಗೆ ಎಟಿಎಂ ಯಂತ್ರ ಸಿಕ್ಕಿದೆ.

    ಇದನ್ನೂ ಓದಿ: ಎಸ್‍ಬಿಐ ಖಾತೆದಾರರಿಗೆ ಶಾಕ್- ಎಟಿಎಂಗಳಲ್ಲಿ ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ವಿತ್‍ಡ್ರಾ ಮಾಡಿದ್ರೆ ಶುಲ್ಕ 

    ಈ ಬಗ್ಗೆ ಕೂಡಲೇ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ನಾಗಮಂಗಲ ಪಟ್ಟಣ ಪೊಲೀಸರು ಕೆರೆಯಲ್ಲಿ ಪತ್ತೆಯಾದ ಎಟಿಎಂ ಯಂತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಎಟಿಎಂ ಯಂತ್ರ ಯಾವ ಬ್ಯಾಂಕಿಗೆ ಸೇರಿದ್ದು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

    ಇದನ್ನೂ ಓದಿ: ಹೊಸ ನೋಟುಗಳ ನಕಲು ತಡೆಗೆ ಸರ್ಕಾರ ಮಾಡಿರೋ ಪ್ಲಾನ್ ಏನು ಗೊತ್ತಾ?