Tag: Atishi

  • ಎಎಪಿ ಸಚಿವೆ ಅತಿಶಿಗೆ ಕೋರ್ಟ್ ಸಮನ್ಸ್

    ಎಎಪಿ ಸಚಿವೆ ಅತಿಶಿಗೆ ಕೋರ್ಟ್ ಸಮನ್ಸ್

    ನವದೆಹಲಿ: ಬಿಜೆಪಿಯ ಮಾಧ್ಯಮ ಮುಖ್ಯಸ್ಥ ಪ್ರವೀಣ್ ಶಂಕರ್ ಕಪೂರ್ (Praveen Shankar Kapoor) ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಸಚಿವೆ, ಎಎಪಿ ನಾಯಕಿ ಅತಿಶಿಗೆ ಸಮನ್ಸ್ ನೀಡಿದೆ. ಜೂನ್ 29 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದೆ.

     ಆಪ್ ಶಾಸಕರಿಗೆ ಬಿಜೆಪಿ ಲಂಚ ನೀಡಿ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಅತಿಶಿ (AAP Minister Atishi) ಆರೋಪಿಸಿದ್ದರು. ಈ ಹೇಳಿಕೆ ವಿರುದ್ಧ ಪ್ರವೀಣ್ ಶಂಕರ್ ಕಪೂರ್ ಮಾನನಷ್ಟ ಮೊಕದಮ್ಮೆ ದಾಖಲಿಸಿದ್ದರು. ಅತಿಶಿ ಹೇಳಿಕೆಯಿಂದ ಬಿಜೆಪಿ ಪಕ್ಷದ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ಅವರು ದೂರಿದ್ದರು. ಈ ಆರೋಪಗಳನ್ನು ಪರಿಗಣಿಸಿದ ಕೋರ್ಟ್‌, ಅತಿಶಿಯನ್ನು ಆರೋಪಿ ಎಂದು ಗುರುತಿಸಿ ಜೂನ್ 29 ರಂದು ಹಾಜರಾಗುವಂತೆ ಆದೇಶಿಸಿದೆ.

    ಈ ಬಗ್ಗೆ ವಾದ ಮಂಡಿಸಿದ್ದ ಕಪೂರ್ ಪರ ವಕೀಲರು, ಬಿಜೆಪಿಯು 7 ಮಂದಿ ಎಎಪಿ ಶಾಸಕರನ್ನು ಸಂಪರ್ಕಿಸಿದೆ ಮತ್ತು ಪಕ್ಷವನ್ನು ಬದಲಾಯಿಸಲು ಅವರಿಗೆ 25 ಕೋಟಿ ರೂಪಾಯಿಗಳನ್ನು ನೀಡುತ್ತಿದೆ ಎಂದು ಎಎಪಿ ಮುಖ್ಯಸ್ಥ ಕೇಜ್ರಿವಾಲ್ ಆರೋಪಿಸಿದ್ದಾರೆ. ಎಎಪಿ ನಾಯಕರು ತಮ್ಮ ಆರೋಪಗಳನ್ನು ರುಜುವಾತುಪಡಿಸಲು ಮತ್ತು ಸಾಕ್ಷ್ಯಗಳನ್ನು ಒದಗಿಸಲು ವಿಫಲರಾಗಿದ್ದಾರೆ. ಇದನ್ನೂ ಓದಿ: ಆರೋಗ್ಯ ಸಮಸ್ಯೆ ಹಿನ್ನೆಲೆ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್ ಅರ್ಜಿ; ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

    ಪಕ್ಷದ ಸಹೋದ್ಯೋಗಿಗಳಾದ ಸೌರಭ್ ಭಾರದ್ವಾಜ್, ರಾಘವ್ ಚಡ್ಡಾ ಮತ್ತು ದುರ್ಗೇಶ್ ಪಾಠಕ್ ಅವರನ್ನು ಮುಂದಿನ ಎರಡು ತಿಂಗಳಲ್ಲಿ ಬಂಧಿಸಲಾಗುವುದು ಎಂದು ಎಎಪಿ ನಾಯಕಿ ಹೇಳಿದ್ದಾರೆ. ತನ್ನ ಅರ್ಜಿಯಲ್ಲಿ ಅತಿಶಿ ಮಾಡಿದ ಟೀಕೆಗಳನ್ನು ಹಿಂಪಡೆಯಬೇಕು ಮತ್ತು ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದರು.

  • ಕೇಜ್ರಿವಾಲ್‌ಗೆ ಕ್ಯಾನ್ಸರ್ ಗಂಭೀರ ಹಂತದಲ್ಲಿಯೇ?- ಜಾಮೀನು ವಿಸ್ತರಣೆ ಅರ್ಜಿಯ ಕುರಿತು ಅತಿಶಿ ಹೇಳಿದ್ದೇನು?

    ಕೇಜ್ರಿವಾಲ್‌ಗೆ ಕ್ಯಾನ್ಸರ್ ಗಂಭೀರ ಹಂತದಲ್ಲಿಯೇ?- ಜಾಮೀನು ವಿಸ್ತರಣೆ ಅರ್ಜಿಯ ಕುರಿತು ಅತಿಶಿ ಹೇಳಿದ್ದೇನು?

    ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮಧ್ಯಂತರ ಜಾಮೀನನ್ನು ಇನ್ನೂ 7 ದಿನಗಳವರೆಗೆ ವಿಸ್ತರಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿದ್ದಾರೆ. ತನ್ನ ಹೊಸ ಮನವಿಯಲ್ಲಿ, ಆರೋಗ್ಯ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ವಿಸ್ತರಿಸುವಂತೆ ಕೋರಿದ್ದಾರೆ. ಮಾರ್ಚ್‌ನಲ್ಲಿ ಬಂಧಿಸಿದಾಗಿನಿಂದ ಅವರು 7 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಎಎಪಿ ಸಚಿವೆ ಅತಿಶಿ (Atishi), ದೆಹಲಿ ಮುಖ್ಯಮಂತ್ರಿಯ ಹಠಾತ್ ತೂಕ ಇಳಿಕೆ ಹಾಗೂ ಕೀಟೋನ್ ಮಟ್ಟ (Ketone Level) ಹೆಚ್ಚಾಗಿರುವುದು ವೈದ್ಯರಿಗೆ ಕಳವಳಕಾರಿಯಾಗಿದೆ.‌ ಅವರ ಹಠಾತ್ ತೂಕ ನಷ್ಟ ಮತ್ತು ಹೆಚ್ಚಿನ ಕೀಟೋನ್ ಮಟ್ಟಗಳು ಮೂತ್ರಪಿಂಡದ ಹಾನಿ ಮತ್ತು ಕ್ಯಾನ್ಸರ್ ಸೇರಿದಂತೆ ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಇಂದು ಜವಾಹರಲಾಲ್ ನೆಹರು 60ನೇ ಪುಣ್ಯತಿಥಿ- ಪ್ರಧಾನಿ ಮೋದಿ ಗೌರವ ನಮನ

    ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಪಿಇಟಿ-ಸಿಟಿ ಸ್ಕ್ಯಾನ್ ಮತ್ತು ಇತರ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವುದು ಅತ್ಯಗತ್ಯ. ಇವುಗಳು ಶೀಘ್ರವಾಗಿ ಪ್ರಗತಿ ಹೊಂದುತ್ತಿರುವ ರೋಗಗಳಾಗಿರುವುದರಿಂದ ಅವುಗಳನ್ನು ಮೊದಲೇ ಪತ್ತೆಹಚ್ಚುವುದು ಬಹಳ ಮುಖ್ಯ. ಅದಕ್ಕಾಗಿಯೇ ನಾವು 7 ದಿನಗಳ ವಿಸ್ತರಣೆಯನ್ನು ಕೇಳಿದ್ದೇವೆ. ವಿಸ್ತರಣೆ ಮಾಡಿದ್ದಲ್ಲಿ ಅವರು ಈ ಪರೀಕ್ಷೆಗಳನ್ನು ಮಾಡಬಹುದಾಗಿದೆ ಮತ್ತು ಔಷಧಿಗಳನ್ನು ಪ್ರಾರಂಭಿಸಬಹುದಾಗಿದೆ. ಹೀಗಾಗಿ ಅವರು ಜೂನ್ 2 ರ ಬದಲಾಗಿ ಜೂನ್ 9 ರಂದು ಒಂದು ವಾರದ ನಂತರ ಶರಣಾಗುತ್ತಾರೆ ಎಎಪಿ ಸಚಿವೆ ಹೇಳಿದರು.

    ಲೋಕಸಭಾ ಚುನಾವಣೆಗೆ (Loksabha Elections 2024) ಪ್ರಚಾರ ಮಾಡಲು ಅನುಕೂಲವಾಗುವಂತೆ ಮೇ 10 ರಂದು ಸುಪ್ರೀಂ ಕೋರ್ಟ್ ಅವರಿಗೆ 21 ದಿನಗಳ ಅವಧಿಗೆ ಮಧ್ಯಂತರ ಜಾಮೀನು ನೀಡಿತ್ತು. ಜೂನ್ 2 ರಂದು ಶರಣಾಗಲು ಮತ್ತು ಜೈಲಿಗೆ ಮರಳಲು ಸೂಚಿಸಿದೆ. ಈಗ ಅರವಿಂದ್ ಕೇಜ್ರಿವಾಲ್ ಇನ್ನೂ ಏಳು ದಿನಗಳ ಕಾಲ ಜಾಮೀನು ವಿಸ್ತರಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

  • ಹರಿಯಾಣದಿಂದ ದೆಹಲಿಗೆ ಬರುವ ನೀರನ್ನು ಬಿಜೆಪಿ ತಡೆಯುತ್ತಿದೆ: ಅತಿಶಿ ಆರೋಪ

    ಹರಿಯಾಣದಿಂದ ದೆಹಲಿಗೆ ಬರುವ ನೀರನ್ನು ಬಿಜೆಪಿ ತಡೆಯುತ್ತಿದೆ: ಅತಿಶಿ ಆರೋಪ

    ನವದೆಹಲಿ: ಹರಿಯಾಣದಿಂದ ದೆಹಲಿಗೆ ಹರಿದು ಬರುವ ಯಮುನಾ ನದಿಯ (Yamuna Water) ನೀರನ್ನು ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ತಡೆದಿದ್ದು, ಚುನಾವಣಾ ಸಂದರ್ಭದಲ್ಲಿ ರಾಷ್ಟ್ರರಾಜಧಾನಿಯಲ್ಲಿ ನೀರಿನ ಸಮಸ್ಯೆ ಹೆಚ್ಚಿಸುವ ಸಂಚು ಮಾಡಿದೆ ಎಂದು ಆಪ್ (AAP) ಸರ್ಕಾರದ ಸಚಿವೆ ಅತಿಶಿ ಆರೋಪಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾನಕ್ಕೂ ಮುನ್ನ ಆಪ್ ಪಕ್ಷವನ್ನು ಟಾರ್ಗೆಟ್ ಮಾಡಲು ನೀರು ತಡೆಯುವ ಈ ಮೂಲಕ ಜನರಿಗೆ ತೊಂದರೆ ನೀಡುತ್ತಿದೆ. ದೆಹಲಿ ಬಿಜೆಪಿಯ (BJP) ಈ ಸಂಚಿಗೆ ಹರಿಯಾಣ ಸರ್ಕಾರ ಬೆಂಬಲ ನೀಡಿದ್ದು, ದೆಹಲಿಯ ಹಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ ಎಂದರು.

    ನೀರಿನ ಸಮಸ್ಯೆಯ ದೂರುಗಳೇ ಬರದ ಕೆಲವು ಪ್ರದೇಶಗಳಿಂದ ನೀರಿನ ಕೊರತೆಯ ಸಮಸ್ಯೆ ಬಂದ ಬಳಿಕ ಈ ಬಗ್ಗೆ ತನಿಖೆ ನಡೆಸಲಾಯಿತು. ತನಿಖೆಯಲ್ಲಿ ಹರಿಯಾಣದಿಂದ ನೀರಿನ ಹರಿವು ಕಡಿಮೆಯಾಗಿರುವುದು ಗೊತ್ತಾಗಿದೆ. ದೆಹಲಿಯ ಯಮುನೆಯ ಇತಿಹಾಸದಲ್ಲೇ ಮೊದಲ ಬಾರಿಗೆ ನೀರಿನ ಮಟ್ಟ 671 ಅಡಿಗಿಂತ ಕೆಳಗಿಳಿದಿದೆ. ನಮ್ಮ ಸರ್ಕಾರವು ಶೀಘ್ರದಲ್ಲೇ ಹರಿಯಾಣ ಸರ್ಕಾರಕ್ಕೆ ಪತ್ರ ಬರೆಯಲಿದೆ ಮತ್ತು ಅಗತ್ಯವಿದ್ದರೆ ನ್ಯಾಯಾಲಯಕ್ಕೆ ತುರ್ತು ಅರ್ಜಿಯನ್ನು ಸಲ್ಲಿಸುತ್ತೇವೆ ಎಂದು ಅತಿಶಿ (Atishi) ಹೇಳಿದರು.

    ನೀರಿನ ಸಮಸ್ಯೆ ಪರಿಹರಿಸಲು ಟ್ಯಾಂಕರ್ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ವೇಗವಾಗಿ ನೀರು ಪೂರೈಸಲು ನಿರ್ದೇಶನ ನೀಡಿದೆ ಎಂದ ಅತಿಶಿ, ನೀವು ದೆಹಲಿಯ ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ. ನೀವು ಏನೇ ಮಾಡಿದರು ಜನರು ದೆಹಲಿ ಎಲ್ಲಾ 7 ಸ್ಥಾನಗಳನ್ನು ಇಂಡಿಯಾ ಒಕ್ಕೂಟಕ್ಕೆ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

  • ಸ್ವಾತಿ ಆರೋಪ ಸುಳ್ಳು – ಮಲಿವಾಲ್‌ ಸಿಎಂ ಮನೆಗೆ ಕಳುಹಿಸಿದ್ದೇ ಬಿಜೆಪಿ: ಸಚಿವೆ ಅತಿಶಿ ತಿರುಗೇಟು!

    ಸ್ವಾತಿ ಆರೋಪ ಸುಳ್ಳು – ಮಲಿವಾಲ್‌ ಸಿಎಂ ಮನೆಗೆ ಕಳುಹಿಸಿದ್ದೇ ಬಿಜೆಪಿ: ಸಚಿವೆ ಅತಿಶಿ ತಿರುಗೇಟು!

    ನವದೆಹಲಿ: ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ನಿವಾಸದಲ್ಲಿ ತನ್ನ ಮೇಲೆ ಹಲ್ಲೆ ನಡೆದಿದೆ ಎನ್ನುವ ಸ್ವಾತಿ ಮಲಿವಾಲ್‌ ಅವರ ಆರೋಪ ಸುಳ್ಳು. ಇದು ಬಿಜೆಪಿಯ ಒಳಸಂಚು, ಆ ದಿನ ಸ್ವಾತಿ ಮಲಿವಾಲ್‌ರನ್ನ ಸಿಎಂ ಮನೆಗೆ ಕಳುಹಿಸಿದ್ದೇ ಬಿಜೆಪಿ ಎಂದು ಸಚಿವೆ ಅತಿಶಿ (Atishi) ತಿರುಗೇಟು ನೀಡಿದ್ದಾರೆ.

    ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ವಿರುದ್ಧ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ (Swati Maliwal) ಮಾಡುತ್ತಿರುವ ಆರೋಪಗಳೆಲ್ಲವೂ ಆಧಾರ ರಹಿತ ಮತ್ತು ಸುಳ್ಳು. ಇದು ಬಿಜೆಪಿಯ ಸಂಚು ಎಂದು ಅಲ್ಲಗಳೆದಿದ್ದಾರೆ.

    ಈ ಆರೋಪವು ಬಿಜೆಪಿ (BJP) ಒಳಸಂಚು, ಸ್ವಾತಿ ಮಲಿವಾಲ್‌ ಅದರ ಮುಖವಾಡ. ಮೇ 13ರಂದು ಬೆಳಗ್ಗೆ ಕೇಜ್ರಿವಾಲ್‌ ನಿವಾಸಕ್ಕೆ ಮಲಿವಾಲ್‌ರನ್ನ ಕಳುಹಿಸಿದ್ದೇ ಬಿಜೆಪಿ. ಮುಖ್ಯವಾಗಿ ಸ್ವಾತಿಗೆ ಸಿಎಂ ಮೇಲೆಯೇ ಆರೋಪ ಮಾಡುವ ಉದ್ದೇಶವಿತ್ತು. ಆ ಸಂದರ್ಭದಲ್ಲಿ ಸಿಎಂ ಇಲ್ಲದಿದ್ದ ಕಾರಣ ಬಚಾವ್‌ ಆಗಿದ್ದಾರೆ. ಸಿಎಂ ಇಲ್ಲದಿದ್ದರಿಂದ ಅವರ ಆಪ್ತ ಸಹಾಯಕನ ವಿರುದ್ಧ ದೂರು ನೀಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಮುಂದುವರಿದು ಮಾತನಾಡಿ, ಸ್ವಾತಿ ಮಲಿವಾಲ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದ್ರೆ ಸಿಸಿಟಿವಿ ವೀಡಿಯೋದಲ್ಲಿ, ಮಲಿವಾಲ್‌ ಸಿಎಂ ಮನೆ ಡ್ರಾಯಿಂಗ್‌ ರೂಮಿನಲ್ಲಿ ಆರಾಮಾಗಿ ಕುಳಿತಿರುವುದು ಕಂಡುಬಂದಿದೆ. ಅವರೇ ಅಲ್ಲಿದ್ದ ಪೊಲೀಸರಿಗೆ ಮತ್ತು ಬಿಭವ್‌ ಕುಮಾರ್‌ಗೆ ಬೆದರಿಕೆ ಹಾಕಿದ್ದಾರೆ. ಇದಕ್ಕಿಂತ ಸಾಕ್ಷಿ ಇನ್ನೇನು ಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

    ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ರಾಜ್ಯಸಭೆ ಆಪ್‌ ಸಂಸದೆ ಸ್ವಾತಿ ಮಾಲಿವಾಲ್‌ ಅವರು ಆರೋಪಿಸಿರುವುದು ದೇಶಾದ್ಯಂತ ಸುದ್ದಿಯಾಗಿದೆ. ಅರವಿಂದ್‌ ಕೇಜ್ರಿವಾಲ್‌ ಅವರ ಆಪ್ತ ಸಹಾಯಕ ವಿಭವ್‌ ಕುಮಾರ್‌ ಅವರೇ ಹಲ್ಲೆ ಮಾಡಿದ್ದಾರೆ ಎಂದು ಸ್ವಾತಿ ಮಾಲಿವಾಲ್‌ ಅವರು ಆರೋಪಿಸಿ ಎಫ್‌ಐಆರ್‌ ಕೂಡ ದಾಖಲಿಸಿದ್ದಾರೆ. ಆದರೆ, ಈ ಪ್ರಕರಣಕ್ಕೀಗ ಟ್ವಿಸ್ಟ್‌ ಸಿಕ್ಕಿದ್ದು, ಸ್ವಾತಿ ಮಾಲಿವಾಲ್‌ ಆರೋಪ ಸುಳ್ಳು ಎಂದು ಆಪ್‌ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ದೆಹಲಿ ಸಿಎಂ ಕಚೇರಿಯಲ್ಲಿ ಗಲಾಟೆ ನಡೆದಿದೆ ಎನ್ನಲಾದ ವೀಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ.

  • ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು: ಆಪ್ ಸಚಿವೆ ಅತಿಶಿ ಗಂಭೀರ ಆರೋಪ

    ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು: ಆಪ್ ಸಚಿವೆ ಅತಿಶಿ ಗಂಭೀರ ಆರೋಪ

    ನವದೆಹಲಿ: ಬಂಧನದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಜೈಲಿನಲ್ಲಿ ಬಿಜೆಪಿ (BJP) ಹತ್ಯೆಯ ಸಂಚು ರೂಪಿಸಿದೆ ಎಂದು ಆಪ್‍ನ (AAP) ಸಚಿವೆ ಅತಿಶಿ (Atishi) ಗಂಭೀರ ಆರೋಪ ಮಾಡಿದ್ದಾರೆ.

    ನ್ಯಾಯಾಲಯದ ಮುಂದೆ ಇಡಿ ಅಧಿಕಾರಿಗಳು ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ ಸಕ್ಕರೆ ಪ್ರಮಾಣವನ್ನು (Sugar Level) ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ ಬಳಿಕ ಅತಿಶಿ ಈ ಆರೋಪ ಮಾಡಿದ್ದಾರೆ. ಕೇಜ್ರಿವಾಲ್ ಟೈಪ್ 2 ಡಯಾಬಿಟಿಸ್ ರೋಗಿಯಾಗಿದ್ದಾರೆ. ಪದೇ ಪದೇ ಮನವಿ ಮಾಡಿದರೂ ಅವರಿಗೆ ಇನ್ಸುಲಿನ್ ನೀಡುತ್ತಿಲ್ಲ. ವೈದ್ಯರೊಂದಿಗೆ ವಿಡಿಯೋ ಸಮಾಲೋಚನೆಗೆ ಮಾಡಲಾದ ವಿನಂತಿಯನ್ನು ತಿರಸ್ಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮಾವಿನಹಣ್ಣು, ಸಿಹಿತಿಂಡಿ ಸೇವಿಸಿ ಕೇಜ್ರಿವಾಲ್ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ತಿದ್ದಾರೆ- ಇಡಿ ಆರೋಪ

    ಚುನಾವಣೆಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಅವರನ್ನು ಜೈಲಿನಲ್ಲಿಟ್ಟು ಕೊಲ್ಲಲು ಯೋಜನೆ ರೂಪಿಸಲಾಗುತ್ತಿದೆ. ಕೇಜ್ರಿವಾಲ್ ಅವರು ತೀವ್ರ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಅವರು ಕಳೆದ 30 ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಅವರು ಪ್ರತಿದಿನ 54 ಯೂನಿಟ್ ಇನ್ಸುಲಿನ್ ತೆಗೆದುಕೊಳ್ಳುತ್ತಾರೆ ಎಂದರು.

    ಯಾವುದೇ ವೈದ್ಯರಲ್ಲಿ ಕೇಳಿ, ಅಂತಹ ತೀವ್ರ ಮಧುಮೇಹ ಇರುವವರು ಮಾತ್ರ ಇಷ್ಟು ಇನ್ಸುಲಿನ್ ತೆಗೆದುಕೊಳ್ಳುತ್ತಾರೆ. ಅದಕ್ಕಾಗಿಯೇ ನ್ಯಾಯಾಲಯ ಅರವಿಂದ್ ಕೇಜ್ರಿವಾಲ್ ಅವರಿಗೆ ಮನೆಯಲ್ಲಿ ಬೇಯಿಸಿದ ಆಹಾರ ಮತ್ತು ವೈದ್ಯರು ಹೇಳಿದ ಆಹಾರವನ್ನು ತಿನ್ನಲು ಸೂಚಿಸಿದೆ ಎಂದರು.

    ಇಂದು ಭಾರತೀಯ ಜನತಾ ಪಕ್ಷವು ತನ್ನ ಅಂಗಸಂಸ್ಥೆ ಇಡಿ ಮೂಲಕ ಕೇಜ್ರಿವಾಲ್ ಆರೋಗ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ. ಇಂದು ಇಡಿ ಪದೇ ಪದೇ ಸುಳ್ಳು ಹೇಳುತ್ತಿದೆ ಎಂದು ಇಡಿಯ ವಾದಗಳಿಗೆ ಅವರು ತಿರುಗೇಟು ನೀಡಿದರು. ಇದನ್ನೂ ಓದಿ: ಅಣಕು ಮತ ಎಣಿಕೆ ವೇಳೆ ಬಿಜೆಪಿಗೆ ಹೆಚ್ಚುವರಿ ಮತ – ವರದಿ ಸುಳ್ಳೆಂದ ಚುನಾವಣಾ ಆಯೋಗ

  • ದೆಹಲಿ ಸರ್ಕಾರ ಉರುಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ಸಂಚು – ಆಪ್‌ ಸಚಿವೆ ಆರೋಪ

    ದೆಹಲಿ ಸರ್ಕಾರ ಉರುಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ಸಂಚು – ಆಪ್‌ ಸಚಿವೆ ಆರೋಪ

    ನವದೆಹಲಿ: ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರನ್ನು ಅಸ್ಥಿರಗೊಳಿಸಲು ರಾಜಕೀಯ ಪಿತೂರಿ ನಡೆಸುತ್ತಿರುವ ಬಿಜಪಿ, ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಪ್ರಯತ್ನಿಸುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿರುವುದಾಗಿ ದೆಹಲಿ ಸಚಿವೆ ಅತಿಶಿ (Atishi) ಆರೋಪಿಸಿದ್ದಾರೆ.

    ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಅವರನ್ನು ಸುಳ್ಳು ಪ್ರಕರಣದಲ್ಲಿ (Liquor Policy Scam) ಬಂಧಿಸಲಾಗಿದೆ. ಅವರ ವಿರುದ್ಧ ಅಪರಾಧ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ. ಆದ್ದರಿಂದ ದೆಹಲಿಯ ಚುನಾಯಿತ ಸರ್ಕಾರ ಉರುಳಿಸಲು ಸಂಚು ನಡೆಯುತ್ತಿದೆ. ಈ ಹಿಂದೆ ನಡೆದ ಕೆಲವು ಬೆಳವಣಿಗೆಗಳನ್ನು ನೋಡಿದಾಗ ಪೂರ್ವನಿಯೋಜಿತವಾಗಿಯೇ ಪ್ಲ್ಯಾನ್‌ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತಿದೆ ಎಂದು ಅತಿಶಿ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸ್ವತಂತ್ರ ಭಾರತದ 2ನೇ ಲೋಕಸಭಾ ಚುನಾವಣೆ ಬಗ್ಗೆ ನಿಮಗೆಷ್ಟು ಗೊತ್ತು?

    ಬಿಜೆಪಿ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಂಚು ರೂಪಿಸುತ್ತಿದೆ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತಿದೆ. ಅದರ ಸೂಚನೆಗಳು ನಮಗೆ ಸಿಕ್ಕಿವೆ. ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ದೆಹಲಿಯಲ್ಲಿ ಯಾವುದೇ ಅಧಿಕಾರಿಯ ನೇಮಕಾತಿ, ವರ್ಗಾವಣೆ ಆಗಿಲ್ಲ. ಅಧಿಕಾರಿಗಳು ಸರ್ಕಾರದ ಸಭೆಗಳಿಗೆ ಬರುತ್ತಿಲ್ಲ. ಕಳೆದ ವಾರ, ಲೆಫ್ಟಿನೆಂಟ್ ಗವರ್ನರ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಆಧಾರರಹಿತ ಪತ್ರ ಬರೆದು, ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯನ್ನೂ ವಜಾ ಮಾಡಿಸಿದ್ದಾರೆ. ಇವೆಲ್ಲವೂ ದೆಹಲಿ ಸರ್ಕಾರವನ್ನು ಮುಗಿಸಲು ಮಾಡಿರುವ ಸಂಚು ಎಂದು ಅತಿಶಿ ಆರೋಪಿಸಿದ್ದಾರೆ.

    ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರುವುದು ಕಾನೂನು ಬಾಹಿರ, ಅಸಾಂವಿಧಾನಿಕ ಮತ್ತು ಜನರ ತೀರ್ಪಿಗೆ ವಿರುದ್ಧವಾದದ್ದು ಎಂದು ಬಿಜೆಪಿಯನ್ನು ಎಚ್ಚರಿಸಲು ಬಯಸುತ್ತೇನೆ. ದೆಹಲಿಯ ಜನರು ಅರವಿಂದ್‌ ಕೇಜ್ರವಾಲ್ ಮತ್ತು ಆಪ್‌ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರಾಮನಗರಲ್ಲಿ 30 ಕೆಜಿಗೂ ಅಧಿಕ ಪ್ರಮಾಣದ ಚಿನ್ನ; ದಾವಣಗೆರೆಯಲ್ಲಿ 12.50 ಕೋಟಿ ರೂ. ಮೌಲ್ಯದ ಚಿನ್ನಾಭರಣ, ವಜ್ರ ಜಪ್ತಿ!

  • ಜೈಲು ಸೇರಿದ ಕೇಜ್ರಿವಾಲ್‌ 4.5 ಕೆಜಿ ಕಳೆದುಕೊಂಡಿದ್ದಾರೆ: ಆಪ್‌ ಗಂಭೀರ ಆರೋಪ

    ಜೈಲು ಸೇರಿದ ಕೇಜ್ರಿವಾಲ್‌ 4.5 ಕೆಜಿ ಕಳೆದುಕೊಂಡಿದ್ದಾರೆ: ಆಪ್‌ ಗಂಭೀರ ಆರೋಪ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಮಾರ್ಚ್ 21 ರಂದು ಬಂಧಿಸಿದಾಗಿನಿಂದ 4.5 ಕೆಜಿ ಕಳೆದುಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (AAP) ನಾಯಕಿ ಮತ್ತು ಸಚಿವ ಅತಿಶಿ (Atishi) ಇಂದು ಹೇಳಿದ್ದಾರೆ.

    ಇಂದು ಬೆಳಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅತಿಶಿ, ಕೇಜ್ರಿವಾಲ್ ಅವರು ಮಧುಮೇಹದಿಂದ ಬಳಲುತ್ತಿದ್ದಾರೆ. ಆರೋಗ್ಯ ಸಮಸ್ಯೆ ಇದ್ದರೂ ಅವರು ರಾಷ್ಟ್ರದ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಬಂಧನಗೊಂಡ ದಿನದಿಂದ ಕೇಜ್ರಿವಾಲ್ ಅವರು 4.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಇದು ತುಂಬಾ ಕಳವಳಕಾರಿಯಾಗಿದೆ. ಬಿಜೆಪಿ ಅವರ ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಏನಾದರೂ ಸಂಭವಿಸಿದರೆ, ದೇಶವೇ ಅಲ್ಲ, ದೇವರು ಕೂಡ ಅವರನ್ನು ಕ್ಷಮಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಯಾರೇ ಹೇಳಲಿ, ಬಿಡಲಿ ನಮ್ಮ ಕ್ಷೇತ್ರದಲ್ಲಿ ಸುಧಾಕರ್‌ಗೆ ಬಹುಮತ ಕೊಡುತ್ತೇವೆ: ಎಸ್‌ಆರ್‌ ವಿಶ್ವನಾಥ್‌

    ಮದ್ಯ ಹಗರಣಕ್ಕೆ (Liquor Scam) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೊಳಗಾದ ಕೇಜ್ರಿವಾಲ್‌ ಅವರನ್ನು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಸೋಮವಾರ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಯಿತು.

    ಮುಖ್ಯಮಂತ್ರಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮನೆಯ ಆಹಾರವನ್ನು ನೀಡಲಾಗುತ್ತದೆ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಗಾಗಿ ಅವರ ಸೆಲ್ ಬಳಿ ಕ್ವಿಕ್‌ ರೆಸ್ಪಾನ್ಸ್‌ ತಂಡವನ್ನು ನಿಯೋಜಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

  • ಬಿಜೆಪಿ ಸೇರಿ ಇಲ್ಲವೇ ಬಂಧನಕ್ಕೆ ಸಿದ್ಧರಾಗಿ – ಆಪ್ ಸಚಿವೆ ಅತಿಶಿ ಗಂಭೀರ ಆರೋಪ

    ಬಿಜೆಪಿ ಸೇರಿ ಇಲ್ಲವೇ ಬಂಧನಕ್ಕೆ ಸಿದ್ಧರಾಗಿ – ಆಪ್ ಸಚಿವೆ ಅತಿಶಿ ಗಂಭೀರ ಆರೋಪ

    ನವದೆಹಲಿ: ತಮ್ಮ ಆಪ್ತ ಸಹಾಯಕರೊಬ್ಬರ ಮೂಲಕ ಪಕ್ಷ ಸೇರುವಂತೆ ನನ್ನನ್ನು ಬಿಜೆಪಿ ಸಂಪರ್ಕಿಸಿದೆ. ಬಿಜೆಪಿ (BJP) ಸೇರದಿದ್ದರೆ ಮುಂಬರುವ ಒಂದು ತಿಂಗಳಲ್ಲಿ ಇಡಿ (Enforcement Directorate) ನಿಮ್ಮನ್ನು ಬಂಧಿಸಲಿದೆ ಎಂದು ಬೆದರಿಸುವ ಪ್ರಯತ್ನ ಮಾಡಿದ್ದಾರೆ ಎಂದು ದೆಹಲಿ ಸಚಿವೆ ಅತಿಶಿ  (Atishi) ಗಂಭೀರ ಆರೋಪ ಮಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸಂಜಯ್ ಸಿಂಗ್ ಮತ್ತು ಸತ್ಯೇಂದ್ರ ಜೈನ್ ಜೈಲು ಸೇರಿದರೂ, ಆಮ್ ಆದ್ಮಿ ಪಕ್ಷವು (Aam Aadmi Party) ಇನ್ನೂ ಒಗ್ಗಟ್ಟಿನಿಂದ ಪ್ರಬಲವಾಗಿದೆ. ಆಮ್ ಆದ್ಮಿ ಪಕ್ಷ ಮತ್ತು ಅದರ ಮುಂದಿನ ಎಲ್ಲಾ ನಾಯಕರನ್ನು ಹತ್ತಿಕ್ಕಲು ಮತ್ತು ಅವರನ್ನು ತೊಡೆದುಹಾಕಲು ಬಿಜೆಪಿ ಬಯಸಿದೆ. ಲೋಕಸಭಾ ಚುನಾವಣೆಗೂ ಮುನ್ನ ನನ್ನನ್ನೂ ಸೇರಿದಂತೆ ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾರ ಬಂಧನವಾಗಲಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಆಯುರ್ವೇದ ಉತ್ಪನ್ನ ಉತ್ತೇಜಿಸಲು ದಾರಿತಪ್ಪಿಸುವ ಜಾಹೀರಾತು ಪ್ರಸಾರ; ಬಾಬಾ ರಾಮದೇವ್ ಕ್ಷಮೆ ಒಪ್ಪದ ಸುಪ್ರೀಂ

    ಒಂದೂವರೆ ವರ್ಷಗಳಿಂದ ಇಡಿ ಮತ್ತು ಸಿಬಿಐ ಬಳಿ ಇರುವ ಹೇಳಿಕೆಯ ಆಧಾರದ ಮೇಲೆ ಇಡಿ ಅಧಿಕಾರಿಗಳ ಸೋಮವಾರ ಸೌರಭ್ ಭಾರದ್ವಾಜ್ ಮತ್ತು ನನ್ನ ಹೆಸರನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದ್ದಾರೆ. ಈ ಮೂಲಕ ಅವರು ಆಮ್ ಆದ್ಮಿ ಪಕ್ಷದ ಮುಂದಿನ ನಾಯಕತ್ವವನ್ನು ಜೈಲಿಗೆ ಹಾಕಲು ಯೋಜಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

    ಅರವಿಂದ್ ಕೇಜ್ರಿವಾಲ್ (Arvind Kejriwal) ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಇದಕ್ಕೆ ಸಂಬಂಧಿಸಿದಂತೆ ಎರಡು ಸಾಂವಿಧಾನಿಕ ಮತ್ತು ಕಾನೂನು ನಿಬಂಧನೆಗಳಿವೆ. ಪ್ರಜಾಪ್ರತಿನಿಧಿ ಕಾಯಿದೆಯು ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರೆ ಸಾರ್ವಜನಿಕ ಪ್ರತಿನಿಧಿಯಾಗಿ ಉಳಿಯಲು ಸಾಧ್ಯವಿಲ್ಲ ಎನ್ನುತ್ತದೆ. ಅರವಿಂದ್ ಕೇಜ್ರಿವಾಲ್ ದೋಷಿ ಎಂದು ಸಾಬೀತಾಗಿಲ್ಲ. ಕೇಜ್ರಿವಾಲ್‍ಗೆ ದೆಹಲಿ ವಿಧಾನಸಭೆಯ ಅಗಾಧ ಬಹುಮತವನ್ನು ಹೊಂದಿದ್ದಾರೆ. ಆದ್ದರಿಂದ ಅವರು ರಾಜೀನಾಮೆ ನೀಡಲು ಯಾವುದೇ ಕಾರಣವಿಲ್ಲ. ಅವರೇನಾದ್ರೂ ರಾಜೀನಾಮೆ ನೀಡಿದರೆ ಅದು ವಿರೋಧ ಪಕ್ಷಗಳ ಸರ್ಕಾರಗಳನ್ನು ಉರುಳಿಸಲು ಬಿಜೆಪಿಗೆ ಅತ್ಯಂತ ಸರಳ ಮಾರ್ಗವಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೊಸ ಮಧ್ಯ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ – ಎಎಪಿ ಸಂಸದ ಸಂಜಯ್ ಸಿಂಗ್‌ಗೆ ಸುಪ್ರೀಂ ಜಾಮೀನು

  • ಅಬಕಾರಿ ನೀತಿ ಹಗರಣದ ಹಣ ಎಲ್ಲಿದೆ? – ಕೇಜ್ರಿವಾಲ್ ಬಹಿರಂಗಪಡಿಸ್ತಾರೆ – ಸುನೀತಾ ಕೇಜ್ರಿವಾಲ್

    ಅಬಕಾರಿ ನೀತಿ ಹಗರಣದ ಹಣ ಎಲ್ಲಿದೆ? – ಕೇಜ್ರಿವಾಲ್ ಬಹಿರಂಗಪಡಿಸ್ತಾರೆ – ಸುನೀತಾ ಕೇಜ್ರಿವಾಲ್

    – ದೆಹಲಿಯನ್ನ ನಾಶ ಮಾಡಲು ಬಯಸಿದ್ದಾರೆ – ಕೇಂದ್ರದ ವಿರುದ್ಧ ಕೇಜ್ರಿವಾಲ್‌ ಪತ್ನಿ ಕೆಂಡ

    ನವದೆಹಲಿ: ಹೊಸ ಅಬಕಾರಿ ನೀತಿ ಹಗರಣದ ಹಣ ಎಲ್ಲಿದೆ? ಎಂದು ಮಾರ್ಚ್ 28ರಂದು ಕೋರ್ಟ್‌‌ಗೆ ಹಾಜರಾಗಲಿರುವ ಅರವಿಂದ್ ಕೇಜ್ರಿವಾಲ್ (Arvind Kejriwal) ಬಹಿರಂಗ ಪಡಿಸಲಿದ್ದಾರೆ. ಮದ್ಯ ಹಗರಣದ ಹಣ ಎಲ್ಲಿದೆ ಎಂಬುದನ್ನು ಸಾಕ್ಷ್ಯ ಸಮೇತ ದೇಶದ ಜನರ ಮುಂದೆ ತಿಳಿಸುತ್ತೇನೆ ಎಂದು ನನಗೆ ಹೇಳಿದ್ದಾರೆ ಎಂದು ಅವರ ಪತ್ನಿ ಸುನೀತಾ ಕೇಜ್ರಿವಾಲ್ (Sunita Kejriwal) ತಿಳಿಸಿದ್ದಾರೆ.

    ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಅವರನ್ನು ಭೇಟಿಯಾದ ವೇಳೆ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ನಮ್ಮ‌ ನಿವಾಸದ ಮೇಲೆ ದಾಳಿ ನಡೆಸಿದಾಗ ಇಡಿ ಅಧಿಕಾರಿಗಳಿಗೆ ಕೇವಲ 75,000 ರೂ. ಲಭಿಸಿದೆ. ಇಡಿ (ED Raid) ಈವರೆಗೆ 250ಕ್ಕೂ ಹೆಚ್ಚು ದಾಳಿಗಳನ್ನ ನಡೆಸಿದೆ ಹಣಕ್ಕಾಗಿ ಹುಡುಕುತ್ತಿದ್ದಾರೆ ಅವರಿಗೆ ಈವರೆಗೂ ಏನೂ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

    ಎರಡು ದಿನಗಳ ಹಿಂದೆ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ನೀರು ಮತ್ತು ಒಳಚರಂಡಿ ಸಮಸ್ಯೆಗಳ ಬಗ್ಗೆ ಜಲಸಚಿವ ಅತಿಶಿ ಅವರಿಗೆ ಪತ್ರ ಕಳುಹಿಸಿದ್ದಾರೆ. ಈಗ ಕೇಂದ್ರ ಸರ್ಕಾರ ಅವರ ವಿರುದ್ಧ ಕೇಸ್ ದಾಖಲಿಸಿದೆ. ಒಟ್ಟಿನಲ್ಲಿ ಅವರು ದೆಹಲಿಯನ್ನ ನಾಶಮಾಡಲು ಬಯಸುತ್ತಾರೆ? ಜನರು ನರಳುತ್ತಲೇ ಇರಬೇಕೆಂದು ಅವರು ಬಯಸುತ್ತಾರೆಯೇ? ಅರವಿಂದ್ ಕೇಜ್ರಿವಾಲ್‌ಗೆ ಈ ಘಟನೆಯಿಂದ ತುಂಬಾ ನೋವಾಗಿದೆ ಎಂದು ಭಾವುಕರಾಗಿದ್ದಾರೆ.

    ನನ್ನ ಪತಿ ನಿಜವಾದ ದೇಶಭಕ್ತ, ನಿರ್ಭೀತ ಮತ್ತು ಧೈರ್ಯಶಾಲಿ ವ್ಯಕ್ತಿ ಅವರಿಗೆ ದೀರ್ಘಾಯುಷ್ಯ, ಆರೋಗ್ಯ ಮತ್ತು ಯಶಸ್ಸು ಸಿಗಲಿ ಎಂದು ಜನ ಬಯಸುತ್ತಾರೆ. ಅವರು ದೈಹಿಕವಾಗಿ ಜೈಲಿನಲ್ಲಿದ್ದರೂ, ಅವರ ಆತ್ಮವು ಜನರ ನಡುವೆ ಇದೆ ಎಂದು ಸುನೀತಾ ಕೇಜ್ರಿವಾಲ್ ಹೇಳಿದ್ದಾರೆ. ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಿರುವ ಇಡಿ ಮಾರ್ಚ್ 28 ವರೆಗೂ ಕಸ್ಟಡಿಗೆ ಪಡೆದುಕೊಂಡಿದೆ.

  • ಇಡಿ ಕಸ್ಟಡಿಯಲ್ಲಿದ್ದುಕೊಂಡೇ ಮೊದಲ ಸರ್ಕಾರಿ ಆದೇಶ ಹೊರಡಿಸಿದ ಕೇಜ್ರಿವಾಲ್‌ – ಆದೇಶದಲ್ಲಿ ಏನಿದೆ?

    ಇಡಿ ಕಸ್ಟಡಿಯಲ್ಲಿದ್ದುಕೊಂಡೇ ಮೊದಲ ಸರ್ಕಾರಿ ಆದೇಶ ಹೊರಡಿಸಿದ ಕೇಜ್ರಿವಾಲ್‌ – ಆದೇಶದಲ್ಲಿ ಏನಿದೆ?

    – ಜೈಲಿನಲ್ಲಿದ್ದರೂ ದೆಹಲಿ ಜನರದ್ದೇ ಚಿಂತೆ – ಸಚಿವೆ ಅತಿಶಿ ಭಾವುಕ

    ನವದೆಹಲಿ: ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ (Delhi Liquor Policy Case) ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಇಡಿ ಕಸ್ಟಡಿಯಲ್ಲಿದ್ದುಕೊಂಡೇ ಮೊದಲ ಸರ್ಕಾರಿ ಆದೇಶ ಹೊರಡಿಸಿದ್ದಾರೆ ಎಂದು ಎಎಪಿ ಪಕ್ಷದ ಮೂಲಗಳು ತಿಳಿಸಿವೆ.

    ಈ ಮೂಲಕ ಅರವಿಂದ್‌ ಕೇಜ್ರಿವಾಲ್‌ ಇ.ಡಿ ಬಂಧನದಲ್ಲಿದ್ದುಕೊಂಡೇ ಆಡಳಿತ ನಡೆಸುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಿದೆ. ಇದು ರಾಷ್ಟ್ರ ರಾಜಧಾನಿಯ ನೀರು ಸರಬರಾಜಿಗೆ ಸಂಬಂಧಿಸಿದ ಆದೇಶವಾಗಿದೆ. ಜಲ ಸಂಪನ್ಮೂಲ ಸಚಿವೆಯೂ ಆಗಿರುವ ಅತಿಶಿ ಅವರಿಗೆ ಟಿಪ್ಪಣಿ ಮೂಲಕ ತಿಳಿಸಿದ್ದಾರೆ. ಅತಿಶಿ (Atishi) ಅವರಿಂದು ಆದೇಶವನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

    ನನ್ನ ಕಣ್ಣಲ್ಲಿ ನೀರು ತರಿಸಿದೆ:
    ಇಡಿ ಬಂಧನದಲ್ಲಿರುವ ಸಿಎಂ ಜೈಲಿನಲ್ಲಿದ್ದುಕೊಂಡೇ ಸರ್ಕಾರಿ ಆದೇಶ ಹೊರಡಿಸುವ ಬಗ್ಗೆ ಸಚಿವೆ ಅತಿಶಿ ಮಾಹಿತಿ ನೀಡಿದ್ದಾರೆ. ಇದು ನನ್ನ ಕಣ್ಣಲ್ಲಿ ನೀರು ತರಿಸಿದೆ. ಬಂಧನಕ್ಕೊಳಗಾದ ವ್ಯಕ್ತಿ ಈ ಕಷ್ಟದ ಸಮಯದಲ್ಲೂ ತಮ್ಮ ಕುರಿತು ಆಲೋಚಿಸದೇ, ದೆಹಲಿ ಜನರು ಮತ್ತು ಅವರ ಸಮಸ್ಯೆಗಳ ಬಗ್ಗೆ ಮಾತ್ರ ಯೋಚಿಸುತ್ತಿದ್ದಾರೆ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಅಜಯ್ ರೈ ಸ್ಪರ್ಧೆ – ಕಾಂಗ್ರೆಸ್‌ನ ನಾಲ್ಕನೇ ಪಟ್ಟಿ ರಿಲೀಸ್ 

    ದೆಹಲಿಯ ಕೆಲವು ಭಾಗಗಳಲ್ಲಿ ಜನರು ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ನಾನು ಚಿಂತಿತನಾಗಿದ್ದೇನೆ. ನಾನು ಜೈಲಿನಲ್ಲಿದ್ದೇನೆ ಎಂಬ ಕಾರಣಕ್ಕೆ ಜನರಿಗೆ ತೊಂದರೆ ಆಗಬಾರದು. ನೀರಿನ ಕೊರತೆ ಇರುವ ಸ್ಥಳಗಳಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಿ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಅಗತ್ಯವಿದ್ದರೆ ರಾಜ್ಯಪಾಲರಾದ ವಿ.ಕೆ ಸಕ್ಷೇನಾ ಅವರ ಸಹಾಯ ಪಡೆಯುವಂತೆ ತಮ್ಮ ನಿರ್ದೇಶನದಲ್ಲಿ ತಿಳಿಸಿರುವುದಾಗಿ ಅತಿಶಿ ಹೇಳಿದ್ದಾರೆ.

    ದೆಹಲಿ ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಮಾರ್ಚ್‌ 21 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಮಾರ್ಚ್‌ 22 ರಂದು ನ್ಯಾಯಾಲಯವು ಕೇಜ್ರಿವಾಲ್‌ ಅವರಿಗೆ ಮಾ.28ರ ವರೆಗೆ ಇ.ಡಿ ವಶಕ್ಕೆ ನೀಡಿದೆ.

    ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್‌ ಅವರು ಶನಿವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಹೋಳಿ ರಜೆಯ ಕಾರಣ ನ್ಯಾಯಾಲಯವು 27ಕ್ಕೂ ಈ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಬಂಧನ – ಅಪಾರ ಶಸ್ತ್ರಾಸ್ತ್ರ ವಶ