Tag: Athletics

  • Paris Paralympics 2024 | ಭಾರತಕ್ಕೆ ಒಂದೇ ದಿನ 4 ಪದಕ – ಬೆಳ್ಳಿಗೆ ಮನೀಷ್ ನರ್ವಾಲ್‌ ಶೂಟ್‌

    Paris Paralympics 2024 | ಭಾರತಕ್ಕೆ ಒಂದೇ ದಿನ 4 ಪದಕ – ಬೆಳ್ಳಿಗೆ ಮನೀಷ್ ನರ್ವಾಲ್‌ ಶೂಟ್‌

    – ಪ್ರೀತಿ ಪಾಲ್‌ ಕಂಚಿನ ಓಟ

    ಪ್ಯಾರಿಸ್‌: ಪ್ರಸ್ತುತ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ (Paris Paralympics) ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಆರಂಭವಾಗಿದೆ. 2ನೇ ದಿನ ಭಾರತೀಯ (India) ಕ್ರೀಡಾಪಟುಗಳು ಪ್ರಾಬಲ್ಯ ಮೆರೆದಿದ್ದಾರೆ. ಶುಕ್ರವಾರ ಶೂಟಿಂಗ್‌ನಲ್ಲಿ ಮೂರು ಪದಕಗಳು ಹಾಗೂ 100 ಮೀಟರ್‌ ರಿಲೇ ವಿಭಾಗದಲ್ಲಿ 1 ಪದಕ ಭಾರತದ ಪಾಲಾಗಿದೆ.

    ಮಹಿಳೆಯರ 10 ಮೀಟರ್ ಏರ್ ರೈಫಲ್ SH1 ವಿಭಾಗದ ಫೈನಲ್‌ನಲ್ಲಿ ಶೂಟರ್ ಅವನಿ ಲೆಖರಾ ಮತ್ತು ಮೋನಾ ಅಹರ್ವಾಲ್ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗೆದ್ದು ಬೀಗಿದರು. ಈ ಬೆನ್ನಲ್ಲೇ ಚಟೌರೊಕ್ಸ್‌ನಲ್ಲಿ ನಡೆದ ಪುರುಷರ 10 ಮೀಟರ್ ಏರ್ ಪಿಸ್ತೂಲ್ (SH1) ವಿಭಾಗದಲ್ಲಿ ಶೂಟರ್ ಮನೀಷ್ ನರ್ವಾಲ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಕಠಿಣ ಪೈಪೋಟಿ ನೀಡಿದ್ದ ನರ್ವಾಲ್‌ 2+ ಪಾಯಿಂಟ್‌ಗಳ ಅಂತರದಲ್ಲಿ ಚಿನ್ನದ ಪದಕದಿಂದ ವಂಚಿತರಾದರು.

    22 ವರ್ಷ ವಯಸ್ಸಿನ ಮನೀಷ್ ನರ್ವಾಲ್ (Manish Narwal) ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಪ್ರಸಕ್ತ ಸ್ಪರ್ಧೆಯಲ್ಲೂ ಫೈನಲ್‌ ವರೆಗೆ ಕಠಿಣ ಪೈಪೋಟಿ ನೀಡಿದರು. ಆದ್ರೆ ದಕ್ಷಿಣ ಕೊರಿಯಾದ ಅನುಭವಿ ಶೂಟರ್‌ ಜೊ ಜಿಯೊಂಗ್ಡು 237.4 ಅಂಕಗಳನ್ನು ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ನರ್ವಾಲ್‌ 234.9 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

    ಪ್ರೀತಿ ಪಾಲ್ ಕಂಚಿನ ಓಟ:
    ಇನ್ನೂ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ನಡೆದ ಮಹಿಳೆಯರ 100 ಮೀ-ಟಿ 35 ಫೈನಲ್‌ನಲ್ಲಿ ಪ್ರೀತಿ ಪಾಲ್‌ (Preethi Pal) 3ನೇ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. 23 ವರ್ಷ ವಯಸ್ಸಿನ ಪ್ರೀತಿ ಪಾಲ್‌ 14.21 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ 3ನೇ ಸ್ಥಾನ ಗಳಿಸಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯೂ ಆಗಿದೆ ಎಂದು ತಿಳಿದುಬಂದಿದೆ.

    ಚೀನಾದ ವಿಶ್ವದಾಖಲೆ ಓಟಗಾರ್ತಿ ಝೌ ಕ್ಸಿಯಾ 13.58 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಗುವೊ ಕಿಯಾನ್ಕಿಯಾನ್ 13.74 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಪಡೆದುಕೊಂಡರು.

    ಪ್ರೀತಿ ಪಾಲ್‌ ಅವರು 2024ರಲ್ಲಿ ನಡೆದಿದ್ದ ವಿಶ್ವ ಪ್ಯಾರಾ-ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ, ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಇಂಟರ್ನ್ಯಾಷನಲ್ ಚಾಂಪಿಯನ್‌ಶಿಪ್‌ (2024) ಮತ್ತು ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ (2024) ಎರಡರಲ್ಲೂ ಚಿನ್ನದ ಪದಕ ವಿಜೇತರಾಗಿದ್ದಾರೆ. ಆದ್ರೆ ಕಳೆದ ವರ್ಷ ಹ್ಯಾಂಗ್‌ಝೌನಲ್ಲಿ ನಡೆದ 2022ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 4ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದರು.

  • Paris Olympics 2024 | ಕ್ರೀಡೆಗಳ ಮಹಾಸಂಗಮ; ಒಲಿಂಪಿಯಾ ಬೆಟ್ಟದಲ್ಲಿ ಹುಟ್ಟಿದ ಕ್ರೀಡೆ ವಿಶ್ವವಿಖ್ಯಾತಿಯಾಗಿದ್ದು ಹೇಗೆ?

    Paris Olympics 2024 | ಕ್ರೀಡೆಗಳ ಮಹಾಸಂಗಮ; ಒಲಿಂಪಿಯಾ ಬೆಟ್ಟದಲ್ಲಿ ಹುಟ್ಟಿದ ಕ್ರೀಡೆ ವಿಶ್ವವಿಖ್ಯಾತಿಯಾಗಿದ್ದು ಹೇಗೆ?

    ಪ್ರಯಣನಗರಿ ಪ್ಯಾರಿಸ್‌ನಲ್ಲೀಗ ಒಲಿಂಪಿಕ್ಸ್‌ ಕ್ರೀಡಾಕೂಟ (Olympics 2024) ಸಂಭ್ರಮ ಮನೆ ಮಾಡಿದೆ. ಅದ್ಧೂರಿ ಕ್ರೀಡೋತ್ಸವ ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದು ಕುಳಿತಿದೆ. ದಾಖಲೆ ಸಂಖ್ಯೆಯ ಕ್ರೀಡಾಪಟುಗಳು ಅಖಾಡದಲ್ಲಿ ಸೆಣಸಲು ತೊಡೆ ತಟ್ಟಿ ನಿಂತಿದ್ದಾರೆ. ಒಲಿಂಪಿಕ್ಸ್‌ ವೇದಿಕೆಯಲ್ಲಿ ವಿಶ್ವದ ಅಗ್ರ ಕ್ರೀಡಾಪಟುಗಳು ಒಬ್ಬರನ್ನೊಬ್ಬರು ಸೆಣಸುವುದನ್ನು ಇಡೀ ವಿಶ್ವವೇ ಉಸಿರು ಬಿಗಿಹಿಡಿದು ನೋಡುತ್ತಿರುತ್ತದೆ. ಇಲ್ಲಿ ಪದಕ ಗಳಿಸುವ ಹುರಿಯಾಳುಗಳ ಸಾಧನೆ, ಮಾನವೀಯತೆಗೆ ಸವಾಲೊಡ್ಡುವ ದೃಶ್ಯಗಳೂ ಹೆಮ್ಮೆಯಿಂದ ಎದೆ ಉಬ್ಬಿಸುವಂತೆ ಮಾಡುತ್ತದೆ. ಇದು ಕೇವಲ ಒಲಿಂಪಿಕ್ಸ್‌ ಅಲ್ಲ, ಇಡೀ ವಿಶ್ವವೇ ಆಚರಿಸುವ ಅದ್ಧೂರಿ ಕ್ರೀಡಾಜಾತ್ರೆ. ಕಣದಲ್ಲಿರುವ ವಿಶ್ವಚೇತನಗಳನ್ನ ತಟ್ಟಿ ಎಬ್ಬಿಸಿ, ದಾಖಲೆ ಮುಟ್ಟುವಂತೆ ಪ್ರೇರೇಪಿಸುವ ಅದ್ಬುತ ಅಂಗಳವೂ ಇದಾಗಿದೆ. ಅದರಲ್ಲೂ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಅತ್ಯಂತ ವಿಶೇಷವೆಂದೇ ಹೇಳಬಹುದು. ಏಕೆಂದರೆ 1900ರಲ್ಲಿ ಆಧುನಿಕ ಯುಗದ ಒಲಿಂಪಿಕ್ಸ್‌ ಕೂಟಕ್ಕೆ ನಾಂದಿ ಹಾಡಿದ್ದ ಪ್ಯಾರಿಸ್‌ನಲ್ಲಿ (Paris) ಈಗ 3ನೇ ಐತಿಹಾಸಿಕ ಒಲಿಂಪಿಕ್ಸ್‌ ಮೇಳ ನಡೆಯುತ್ತಿರುವುದು ಮತ್ತೊಂದು ವಿಶೇಷ.

    ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ವಿಶ್ವದ ಎಲ್ಲಾ ಕ್ರೀಡಾಪಟುಗಳು (Athletes) ಈಗಾಗಲೇ ಪ್ಯಾರಿಸ್‌ ಅಂಗಳ ತಲುಪಿದ್ದು, ಜುಲೈ 26ರಂದು (ಶುಕ್ರವಾರ) ಅಧಿಕೃತ ಚಾಲನೆ ದೊರೆಯಲಿದೆ. ಭಾರತದಿಂದ ಈ ಬಾರಿ 117 ಕ್ರೀಡಾಪಟುಗಳು ಹಾಗೂ 140 ಮಂದಿ ಕ್ರೀಡಾ ಸಿಬ್ಬಂದಿ ಪಾಲ್ಗೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಒಲಿಂಪಿಕ್ಸ್‌‌ ಜಾತ್ರೆಯ ಇತಿಹಾಸ ತಿಳಿಯುವುದು ಅತೀ ಮುಖ್ಯ. ಮೊದಲ ಒಲಿಂಪಿಕ್ಸ್‌ ಯಾವಾಗ ಶುರುವಾಯ್ತು ಅಂದ್ರೆ ಎಲ್ಲರೂ ಹೇಳೋದು 1896ರಲ್ಲಿ ಗ್ರೀಸ್‌ನ ರಾಜಧಾನಿ ಅಥೆನ್ಸ್‌ ನಗರದಲ್ಲಿ ಶುರುವಾಯಿತು ಎಂದು. ಆದ್ರೆ ಕ್ರೀಸ್ತಪೂರ್ವದಲ್ಲೇ ಒಲಿಂಪಿಕ್ಸ್‌ ಶುರುವಾಗಿತ್ತು ಎಂಬುದಕ್ಕೆ ಪುರಾವೆಗಳು ಇವೆ. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದೆಯೇ? ಹಾಗಿದ್ದರೆ ಮುಂದೆ ಓದಿ…

    ಕ್ರಿಸ್ತಪೂರ್ವದಲ್ಲಿ ಹುಟ್ಟಿದ ಒಲಿಂಪಿಕ್ಸ್‌

    ಹೌದು. ಕೆಲ ದಾಖಲೆಯ ಪ್ರಕಾರ ಮೊದಲ ಒಲಿಂಪಿಕ್ಸ್‌ ನಡೆದಿದ್ದು, ಕ್ರಿ.ಪೂರ್ವ 776ರಲ್ಲಿ, ಈ ಒಲಿಂಪಿಕ್ಸ್‌ ಸ್ಪರ್ಧೆಯಲ್ಲಿ ಗೆದ್ದುಕೊಂಡ ಮೊದಲ ಓಟಗಾರ ಒಬ್ಬಬಾಣಸಿಗ. ಅಚ್ಚರಿಯಾದರೂ ನೀವು ಇದನ್ನು ನಂಬಲೇಬೇಕು. ಎಲಿಸ್ ದ್ವೀಪದ ʻಕೊರೋಬಸ್ʼ ಎಂಬ ಹೆಸರಿನ ಈ ಬಾಣಸಿಗ, ʻಸ್ಟೇಡ್ʼ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ. ಆ ಕಾಲದಲ್ಲಿ ಮೊದಲು ಬಂದವರಿಗಷ್ಟೇ ಮನ್ನಣೆ ಸಿಗುತ್ತಿತ್ತು. ಹಾಗಾಗಿ ಬಹುಮಾನವಾಗಿ ಅವನ ತಲೆಯ ಮೇಲೆ ʻಕೋಟಿನೋಸ್ʼ (ಕಾಡು ಆಲಿವ್‌ ಮರದ ಎಲೆಗಳನ್ನು ಸೇರಿಸಿ ಮಾಡಿದ ವೃತ್ತಾಕಾರದ ಕಿರೀಟ) ಇಟ್ಟು ಗೌರವಿಸಲಾಗುತ್ತಿತ್ತು.

    ʻಒಲಿಂಪಿಯಾ ಬೆಟ್ಟʼದ ಕ್ರೀಡೆ

    ಹೌದು. ಕ್ರಿಸ್ತಪೂರ್ವದಲ್ಲಿ ಒಲಿಂಪಿಕ್ಸ್‌ ಕ್ರೀಡೆ ನಡೆಯುತ್ತಿದ್ದದ್ದು ʻಒಲಿಂಪಿಯಾ’ ಎಂಬ ಬೆಟ್ಟದಲ್ಲಿ. ಆ ಕಾಲದಲ್ಲಿ ಇದು ಗ್ರೀಸ್‌ನ ಧಾರ್ಮಿಕ ಕೇಂದ್ರವಾಗಿತ್ತು. ಬೆಟ್ಟದ ಮೇಲಿನ ಜೀಯಸ್‌ನ ಪ್ರಾರ್ಥನಾ ಮಂದಿರ, ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿತ್ತು ಎಂದೂ ಸಹ ಹೇಳಲಾಗಿದೆ. ಒಲಿಂಪಿಯಾದ ಕ್ರೀಡಾಂಗಣ 40 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವಷ್ಟು ವಿಶಾಲವಾಗಿತ್ತು. ಈ ಕ್ರೀಡಾಂಗಣದ ಸುತ್ತ ಕ್ರೀಡಾಳುಗಳ ತರಬೇತಿಗಾಗಿ ಭವ್ಯ ಕಟ್ಟಡಗಳಿದ್ದವು. ದಂತಕಥೆಗಳ ಪ್ರಕಾರ ಜೀಯಸ್‌ನ ಮಗ ಹರ್ಕ್ಯುಲಸ್‌ (ಹೆರಾಕ್ಲಿಸ್) ಈ ಕ್ರೀಡಾಕೂಟ ಆರಂಭಿಸಿದರು ಎಂದು ಹೇಳಲಾಗಿದೆ. ಹೆರಾಕ್ಲಿಸ್‌ ಈ ಕ್ರೀಡೋತ್ಸವಕ್ಕಾಗಿ ದೇವತೆ ಅಥೆನಾಳ ನೆರವಿನಲ್ಲಿ ಬೆಟ್ಟದ ಮೇಲೆ ಒಲಿಂಪಿಯಾ ದೇವಾಲಯ ಮತ್ತು ವಿಶಾಲ ಕ್ರೀಡಾಂಗಣ ನಿರ್ಮಿಸಿದ.

    ಒಲಿಂಪಿಕ್ಸ್‌ನಲ್ಲಿ ಒಂದೇ ಓಟ

    ಆರಂಭದ ಒಲಿಂಪಿಕ್ಸ್‌ನಲ್ಲಿ ʻಸ್ಟೇಡ್‌ʼ ಎಂಬ ಓಟದ ಸ್ಪರ್ಧೆ ಮಾತ್ರ ನಡೆಯಿತು. ಪುರುಷರು ಮತ್ತು ಹುಡುಗರಿಗೆ ಮಾತ್ರ ಮೀಸಲಾಗಿತ್ತು. ಈ ಓಟದ ದೂರವನ್ನು ಸ್ವತಃ ಹರ್ಕ್ಯುಲಸ್ ನಿಗದಿ ಮಾಡಿದ್ದ. ಮುಂದೆ ಪೆಂಟಾಥಾನ್ ಅಂದ್ರೆ ಜಾವೆಲಿನ್ ಎಸೆತ, ದೂರ ನೆಗೆತ, ಡಿಸ್ಕಸ್ ಎಸೆತ, ಓಟ ಮತ್ತು ಕುಸ್ತಿ ಐದು ಸ್ಪರ್ಧೆಗಳು, ಚಾರಿಯಟ್ ರೇಸ್ (ರಥಗಳ ಓಟ) ಮತ್ತು ಮುಷ್ಟಿಯುದ್ಧ ಸ್ಪರ್ಧೆಗಳನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸಲಾಗಿತ್ತು. ಗ್ರೀಸ್‌ನ ಹಲವು ರಾಜ್ಯಗಳ ನಡುವೆ ಆಗಾಗ್ಗೆ ಯುದ್ಧ ನಡೆಯುತ್ತಿತ್ತು. ಆದ್ರೆ ಒಲಿಂಪಿಕ್ಸ್‌ ಸಂದರ್ಭದಲ್ಲಿ ಶಾಂತಿ ಪಾಲನೆ ನಿಯಮವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಗ್ರೀಕ್ ಭಾಷೆ ಅರಿತ ಯಾವ ಸ್ವತಂತ್ರ ನಾಗರಿಕನೂ ಇಲ್ಲಿ ಭಾಗವಹಿಸಬಹುದಿತ್ತು. ಯಾವುದೇ ತಾರತಮ್ಯವೂ ಇರಲಿಲ್ಲ. ಕ್ರೀಡಾಂಗಣದಲ್ಲಿ ಸ್ಪರ್ಧಿಗಳು ಮೈಮೇಲೆ ಬಟ್ಟೆ ತೊಡುತ್ತಿರಲಿಲ್ಲ. ಹೀಗಾಗಿ ವಿವಾಹಿತ ಮಹಿಳೆಯರಿಗೆ ಈ ಕ್ರೀಡಾಂಗಣದೊಳಗೆ ಪ್ರವೇಶ ನಿಷಿದ್ಧವಾಗಿತ್ತು. ಆದ್ದರಿಂದ ರಾಜ ಪೆಲೋಪ್ಸ್ನ ಮಡದಿ ಹಿಪ್ಪೋಡಾಮಿಯಾ ಮಹಿಳೆಯರಿಗಾಗಿ ಪ್ರತ್ಯೇಕ ಹೇರಿಯಾ ಕ್ರೀಡೆಗಳನ್ನು ಆರಂಭಿಸಿದಳು. ಈ ಓಟಗಳಲ್ಲಿ ಮಹಿಳಾ ಸ್ಪರ್ಧಿಗಳಿಗೆ ಮಾತ್ರ ಅವಕಾಶ ಇತ್ತು.

    ಕಣ್ಮರೆಯಾಯ್ತು ಒಲಿಂಪಿಯಾ ಪಟ್ಟಣ

    ಕಾಲಕ್ರಮೇಣ ಗ್ರೀಕ್ ಯುವಕರು ಆಟೋಟಗಳಿಂದ ದೂರವಾದರು. ಕ್ರಿಸ್ತಪೂರ್ವ 146ರ ಸುಮಾರಿಗೆ ರೋಮನ್ನರು ಗ್ರೀಸ್ ದೇಶವನ್ನು ಕಬಳಿಸಿದ ಬಳಿಕ ಒಲಿಂಪಿಕ್ಸ್‌ನ ಸ್ವರೂಪವೇ ಬದಲಾಯಿತು. ಒಲಿಂಪಿಕ್ಸ್ ಜೊತೆ ಸೇರಿದ್ದ ಧಾರ್ಮಿಕ ಸಂಪ್ರದಾಯಗಳು ಕಾಣೆಯಾಗಿ ರೋಮನ್ನರ ವಿಕೃತ ಕ್ರೀಡೆಗಳು ಆರಂಭವಾದವು. ಗ್ಲಾಡಿಯೇಟರ್‌ಗಳು, ಗುಲಾಮರು ಮತ್ತು ಕ್ರೂರ ಪ್ರಾಣಿಗಳ ನಡುವೆ ರಕ್ತಪಾತದ ಕ್ರೀಡೆಗಳು ಸ್ಟೇಡಿಯಮ್‌ಗಳಲ್ಲಿ ನಡೆದವು. ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ್ದ ಥಿಯೋಡೋಸಿಯಸ್ ರೋಮ್‌ನ ಗದ್ದುಗೆ ಏರಿದ. ಬಳಿಕ ಕ್ರಿ.ಶ. 394ರಲ್ಲಿ ಈ ಕ್ರೀಡೆಗಳಿಗೆ ಶಾಶ್ವತ ಬಹಿಷ್ಕಾರ ಹಾಕಿದ. ಅಲ್ಲಿಗೆ ಸುಮಾರು 1,200 ವರ್ಷಗಳ ಇತಿಹಾಸದ ಒಲಿಂಪಿಕ್ಸ್‌ ಪರಿಸಮಾಪ್ತಿಯಾಯಿತು. ಕಾಲಾಂತರದಲ್ಲಿ ಒಲಿಂಪಿಕ್ಸ್ ಬರೀ ನೆನಪಾಗಿ ಉಳಿಯಿತು. ಮುಂದಿನ ಶತಮಾನಗಳಲ್ಲಿ ಒಲಿಂಪಿಯಾ ಪಟ್ಟಣವೇ ಕಣ್ಮರೆಯಾಯಿತು. ʻಒಲಿಂಪಿಯಾ’ ಎಂದರೆ, ಒಂದು ಕಾಲ್ಪನಿಕ ಸ್ಥಳ, ತಮ್ಮ ಪುರಾಣಗಳಲ್ಲಿ ಬರುವ ಒಂದು ದಂತಕಥೆ ಮಾತ್ರ ಎಂದು ಗ್ರೀಕರು ನಂಬತೊಡಗಿದರು.

    ಒಲಿಂಪಿಕ್ಸ್‌ಗೆ ಮರುಜೀವ

    18ನೇ ಶತಮಾನದ ವೇಳೆಗೆ ಗ್ರೀಸ್ ದೇಶ ಟರ್ಕಿಯ ಒಟ್ಟೋಮನ್ ಸಾಮ್ರಾಜ್ಯದ ಸಾಮಂತ ರಾಷ್ಟ್ರವಾಗಿತ್ತು. ಒಟ್ಟೋಮನ್‌ಗಳ ವಿರುದ್ಧ ಗ್ರೀಕರು ಸ್ವಾತಂತ್ರ್ಯ ಹೋರಾಟ ನಡೆಸಿದ್ದರು. ಆ ಕಾಲದಲ್ಲಿ ʻಪೆಲೋಪೊನೀಸ್’ ಎಂಬ ದ್ವೀಪದ ನಡುವೆ ಮರಳಿನಲ್ಲಿ ಒಂದು ಪುರಾತನ ಸ್ತಂಭದ ಅವಶೇಷ ಪತ್ತೆಯಾಗಿತ್ತು. ಜರ್ಮನಿಯ ಆರ್ನ್ಸ್ ಕರ್ಟಿಯಸ್ (1814-1896) ಎಂಬ ಪುರಾತತ್ತ್ವ ಶೋಧಕ, ಈ ಸ್ತಂಭದ ಕೆಳಗೆ ಗ್ರೀಸ್‌ನ ಗತಕಾಲದ ಇತಿಹಾಸ ಇರಬೇಕು ಎಂದು ಲೆಕ್ಕ ಹಾಕಿದ್ದ. ಅವನ ಸತತ ಪ್ರಯತ್ನದ ಫಲವಾಗಿ ಮಣ್ಣಿನ ಅಡಿಯಲ್ಲಿ ಹೂತು ಹೋಗಿದ್ದ ಒಲಿಂಪಿಯಾ ಪಟ್ಟಣ ಮೇಲೆದ್ದು ಬಂತು. ʻಒಲಿಂಪಿಯಾ’ ಎಂಬ ಜಾಗ ನಿಜಕ್ಕೂ ಇತ್ತು ಎಂದು ತಿಳಿದಾಗ ಜಗತ್ತೇ ಬೆರಗಾಗಿತ್ತು.

    ಒಲಿಂಪಿಕ್ಸ್‌ನ ಅವಶೇಷಗಳ ನಡುವೆ ʻಪಾನಥಿನಾಯ್ಯೋಸ್’ ಎಂಬ ಪ್ರಾಚೀನ ಕ್ರೀಡಾಂಗಣ ಬೆಳಕಿಗೆ ಬಂತು. ಇವಾಂಜೆಲೋಸ್ ಜಾಪ್ಪಾಸ್ ಎಂಬ ಧನಿಕ ಗ್ರೀಕ್ ವ್ಯಾಪಾರಿ 1859ರಲ್ಲಿ ಈ ಸ್ಟೇಡಿಯಮ್‌ನ ಪುನರುತ್ಥಾನ ಮಾಡಿ, ಅಲ್ಲಿ ಮೊಟ್ಟಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟ ನಡೆಸಿದ. ಈ ಬಗ್ಗೆ ಐರೋಪ್ಯ ಪತ್ರಿಕೆಗಳು ವರದಿ ಮಾಡಿದ್ದವು. ಈ ಕ್ರೀಡೋತ್ಸವದ ಯಶಸ್ಸಿನಿಂದ ಉತ್ತೇಜಿತನಾದ ಜಾಪ್ಪಾಸ್ 1870 ಮತ್ತು 1875ರಲ್ಲಿ ಒಲಿಂಪಿಕ್ಸ್‌ನಲ್ಲಿ ಇನ್ನೆರಡು ಅಂತಾರಾಷ್ಟ್ರೀಯ ಕ್ರೀಡಾಮೇಳಗಳನ್ನು ನಡೆಸಿದ. ಫ್ರಾನ್ಸ್‌ನ ಗಣ್ಯ ಬ್ಯಾರನ್ ಪಿಯರೆ ಡಿ ಕೂಬರ್ಟಿನ್ ಈ ಸುದ್ದಿಯಿಂದ ಪ್ರೇರಣೆ ಪಡೆದಿದ್ದ. ಯುವಕರ ಮನಸ್ಸನ್ನು ಕ್ರೀಡೆಯತ್ತ ತಿರುಗಿಸಿದರೆ ಮಾತ್ರ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯ, ಜಗತ್ತು ಒಂದುಗೂಡುತ್ತದೆ ಎಂಬುದನ್ನ ಮನಗಂಡ. ಹಾಗಾಗಿ ಕೂಬರ್ಟಿನ್ 1893ರಲ್ಲಿ ಒಂಬತ್ತು ದೇಶಗಳ 79 ಪ್ರತಿನಿಧಿಗಳನ್ನು ಸೇರಿಸಿ ಒಲಿಂಪಿಕ್ಸ್ ಮತ್ತೆ ಆರಂಭಿಸುವ ಬಗ್ಗೆ ತಿಳಿಸಿದ. ʻಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ’ (IOA) ಇಲ್ಲಿ ಹುಟ್ಟಿಕೊಂಡಿತು ಎನ್ನಲಾಗಿದೆ.

    ಗ್ರೀಸ್‌ನ ಐತಿಹಾಸಿಕ ರಾಜಧಾನಿ ಅಥೆನ್ಸ್‌ನಲ್ಲಿ ಮೊದಲ ಒಲಿಂಪಿಕ್ಸ್‌ ನಡೆಸಬೇಕೆಂಬ ತೀರ್ಮಾನ ಕೂಡ ಅಲ್ಲೇ ತೆಗೆದುಕೊಳ್ಳಲಾಗಿತ್ತು. ಅದರಂತೆ 1896ರಲ್ಲಿ ಗ್ರೀಸ್‌ನ ಅಥೆನ್ಸ್‌ ನಗರದಲ್ಲಿ ಆಧುನಿಕ ಯುಗದ ಮೊದಲ ಅದ್ಧೂರಿ ಕ್ರೀಡಾ ಜಾತ್ರೆ ನಡೆಯಿತು. ಇಂದಿಗೂ ಅದು ಮುಂದುವರಿದಿದೆ. 2024ರ ಕ್ರೀಡಾಕೂಟಕ್ಕೆ ವಿಶ್ಚ ವೇದಿಕೆ ಪ್ಯಾರಿಸ್‌ನಲ್ಲಿ ಸಜ್ಜಾಗಿದೆ.

  • Asian Games 2023: ಪಾರುಲ್‌ ಕಣ್ಣಲ್ಲಿ ಬೆಳ್ಳಿ ಬೆಳಕು – 9ನೇ ದಿನವೂ ಭಾರತ ಪದಕಗಳ ಬೇಟೆ

    Asian Games 2023: ಪಾರುಲ್‌ ಕಣ್ಣಲ್ಲಿ ಬೆಳ್ಳಿ ಬೆಳಕು – 9ನೇ ದಿನವೂ ಭಾರತ ಪದಕಗಳ ಬೇಟೆ

    ಹ್ಯಾಂಗ್‌ಝೌ: ಏಷ್ಯನ್‌ ಗೇಮ್ಸ್‌ನಲ್ಲಿ (Asian Games 2023) 9ನೇ ದಿನವಾದ ಸೋಮವಾರವೂ ಭಾರತೀಯರ ಕ್ರೀಡಾಪಟುಗಳ ಪಾರುಪತ್ಯ ಮುಂದುವರಿದಿದ್ದು, ಅಥ್ಲೆಟಿಕ್ಸ್‌ (Athletics) ವಿಭಾಗದಲ್ಲೂ ಪದಕಗಳ ಬೇಟೆಯಾಡಿದ್ದಾರೆ.

    ಮಹಿಳೆಯರ 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ಭಾರತದ ಅಥ್ಲಿಟ್‌ ಪಾರುಲ್‌ ಚೌಧರಿ (Parul Chaudhary) ಬೆಳ್ಳಿ ಪದಕ ಗೆದ್ದರೆ, ಪ್ರೀತಿ ಲಾಂಬಾ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಆದ್ರೆ ಟೇಬಲ್‌ ಟೆನ್ನಿಸ್‌ ಮಹಿಳೆಯರ ಡಬಲ್ಸ್‌ ಸೆಮಿ ಫೈನಲ್‌ನಲ್ಲಿ ಸುತೀರ್ಥ ಮುಖರ್ಜಿ-ಆಯ್ಹಿಕಾ ಮುಖರ್ಜಿ ಜೋಡಿ ಸೋತು ನಿರಾಸೆ ಮೂಡಿಸಿದೆ.

    ಇನ್ನೂ ಭಾರತ ಪುರುಷರ ಹಾಕಿ ತಂಡವು (Mend Hockey Team) ತನ್ನ ಕೊನೆಯ ಪೂಲ್‌ ಎ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 12-0 ಅಂತರದಲ್ಲಿ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿದ್ದು, ಚಿನ್ನ ಗೆಲ್ಲುವ ವಿಶ್ವಾಸ ಮೂಡಿಸಿದೆ. ಇದನ್ನೂ ಓದಿ: Asian Games 2023: 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ದಾಖಲೆಯೊಂದಿಗೆ ಬಂಗಾರಕ್ಕೆ ಮುತ್ತಿಟ್ಟ ಅವಿನಾಶ್‌

    ಈಗಾಗಲೇ ಒಟ್ಟು 261 ಪದಕಗಳನ್ನು (142 ಚಿನ್ನ, 79 ಬೆಳ್ಳಿ, 40 ಕಂಚು) ಗೆದ್ದಿರುವ ಚೀನಾ ಆರಂಭದಿಂದಲೂ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. 121 ಪದಕಗಳನ್ನು (32 ಚಿನ್ನ, 44 ಬೆಳ್ಳಿ, 45 ಕಂಚು) ಗೆದ್ದಿರುವ ಜಪಾನ್‌ 2ನೇ ಸ್ಥಾನದಲ್ಲಿದೆ. ರಿಪಬ್ಲಿಕ್‌ ಕೊರಿಯಾ 132 ಪದಕಗಳನ್ನ (31 ಚಿನ್ನ, 39 ಬೆಳ್ಳಿ, 62 ಕಂಚು) ಗೆದ್ದು 3ನೇ ಸ್ಥಾನದಲ್ಲಿದೆ. ಈವರೆಗೆ ಭಾರತ 13 ಚಿನ್ನ, 22 ಬೆಳ್ಳಿ ಹಾಗೂ 23 ಕಂಚು ಸೇರಿದಂತೆ ಒಟ್ಟು 58 ಪದಕಗಳನ್ನ ಬಾಚಿಕೊಂಡಿರುವ ಭಾರತ 4ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇನ್ನೂ 6 ದಿನಗಳು ಬಾಕಿ ಉಳಿದಿದ್ದು, ಎಷ್ಟು ಪದಕಗಳನ್ನು ಬಾಚಿಕೊಳ್ಳಲಿದೆ ಎಂಬುದನ್ನ ಕಾಡು ನೋಡಬೇಕಿದೆ. ಇದನ್ನೂ ಓದಿ: Asian Games 2023: ಕೊನೇ ಪ್ರಯತ್ನದಲ್ಲಿ ಗುಂಡು ಎಸೆದು ಚಿನ್ನ ಗೆದ್ದ ಗಂಡುಗಲಿ – ಭಾರತಕ್ಕೆ ಒಂದೇ ದಿನ 15 ಪದಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asian Games 2023: ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ – ಕಂಚು ಗೆದ್ದು ಕಿರಣ್‌ ಮಿಂಚು

    Asian Games 2023: ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ – ಕಂಚು ಗೆದ್ದು ಕಿರಣ್‌ ಮಿಂಚು

    ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ 2023ರಲ್ಲಿ (Asian Games 2023) ಭಾರತದ ಸ್ಪರ್ಧಿಗಳ ಪದಕದ ಬೇಟೆ 6ನೇ ದಿನವಾದ ಶುಕ್ರವಾರವೂ ಮುಂದುವರಿದೆ. ಏರ್ ಪಿಸ್ತೂಲ್ ಶೂಟಿಂಗ್‌, ಸ್ಕ್ವಾಷ್‌, ಟೆನ್ನಿಸ್‌ ಬಳಿಕ ಅಥ್ಲೆಟಿಕ್ಸ್‌ನಲ್ಲೂ (Athletics) ಭಾರತೀಯರ ಪದಕ ಬೇಟೆ ಶುರುವಾಗಿದೆ.

    ಶುಕ್ರವಾರ ಟೆನ್ನಿಸ್‌ನಲ್ಲಿ ಭಾರತ ಕಂಚು ಗೆದ್ದ ಬಳಿಕ ಮಹಿಳೆಯರ ಶಾಟ್‌ಪುಟ್‌ (Women’s Shot Put) ವಿಭಾಗದಲ್ಲಿ ಕಿರಣ್ ಬಲಿಯಾನ್ (Kiran Baliyan) ಕಂಚು ಗೆದ್ದು ಸಾಧನೆ ಮಾಡಿದ್ದಾರೆ. ಇದು ಈ ಬಾರಿ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಸಂದ ಮೊದಲ ಪದಕವಾಗಿದೆ. ಈ ಮೂಲಕ 8 ಚಿನ್ನ, 12 ಬೆಳ್ಳಿ, 13 ಕಂಚಿನ ಪದಕಗಳು ಸೇರಿ ಒಟ್ಟು 33 ಪದಕಗಳೊಂದಿಗೆ ಭಾರತ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ.

    ಇದಕ್ಕೂ ಮುನ್ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಶೂಟರ್​ ಪಲಕ್​ ಚಿನ್ನ ಗೆದ್ದರೆ, ಇಶಾ ಬೆಳ್ಳಿಯ ಪದಕ ಬಾಚಿಕೊಂಡಿದ್ದರು. ಇದನ್ನೂ ಓದಿ: Asian Games 2023: ಚಿನ್ನದ ಪದಕಕ್ಕೆ ಶಾರ್ಪ್‌ ಶೂಟ್‌ – 4ನೇ ಸ್ಥಾನಕ್ಕೆ ಜಿಗಿದ ಭಾರತ

    ಅಲ್ಲದೇ ಪುರುಷರ 50 ಮೀಟರ್ ರೈಫಲ್ 3ಪಿ ತಂಡ (ಮೂವರನ್ನೊಳಗೊಂಡ ತಂಡ) ಸ್ಪರ್ಧೆಯಲ್ಲಿ ಭಾರತ 1769 ಅಂಕಗಳೊಂದಿಗೆ ಚಿನ್ನ ಗೆದ್ದುಕೊಂಡಿತು. 1763 ಅಂಕಗಳಿಂದ ಬೆಳ್ಳಿ ಪದಕ ಹಾಗೂ 1748 ಅಂಕಗಳೊಂದಿಗೆ ಕಂಚಿನ ಪದಕ ದಕ್ಷಿಣ ಕೊರಿಯಾ ಪಾಲಾಯಿತು. ಇದನ್ನೂ ಓದಿ: ಹೈದರಾಬಾದ್‌ ಬಿರಿಯಾನಿ, ಬಟರ್‌ ಚಿಕನ್‌, ಲ್ಯಾಂಬ್‌ ಚಾಪ್ಸ್; ಭಾರತದಲ್ಲಿ ಪಾಕ್‌ ಕ್ರಿಕೆಟಿಗರಿಗೆ ಭರ್ಜರಿ ಬಾಡೂಟದ ಆತಿಥ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 400 ಮೀಟರ್ ರೇಸ್: ಹಿಮಾದಾಸ್, ಅನಾಸ್‍ಗೆ ಬೆಳ್ಳಿ

    400 ಮೀಟರ್ ರೇಸ್: ಹಿಮಾದಾಸ್, ಅನಾಸ್‍ಗೆ ಬೆಳ್ಳಿ

    ಜಕರ್ತಾ: ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ 400 ಮೀಟರ್ ಓಟದಲ್ಲಿ ಭಾರತದ ಹಿಮದಾಸ್ ಮತ್ತು ಮೊಹಮ್ಮದ್ ಅನಾಸ್ ಬೆಳ್ಳಿ ಪದಕ ಪಡೆದು ಮಿಂಚಿದ್ದಾರೆ.

    ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಹಿಮಾ ದಾಸ್ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದರು.

    ಹಿಮಾ ದಾಸ್ 50.79 ಸೆಕೆಂಡ್ ನಲ್ಲಿ ಗುರಿ ಮುಟ್ಟಿದರೆ, ಮೊಹಮ್ಮದ್ ಅನಾಸ್ 45.69 ಸೆಕೆಂಡ್ ನಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಗೆದ್ದಿದ್ದಾರೆ.

    ಶನಿವಾರ ನಡೆದ ಅರ್ಹತಾ ಸುತ್ತಿನ 400 ಮೀ ಓಟದ ಸ್ಪರ್ಧೆಯ ಹಿಮಾ ದಾಸ್ ರವರು 51.00 ಸೆಕೆಂಡುಗಳಲ್ಲಿ ಗುರಿ ತಲುಪಿ ಭಾರತದ ಪರ ದಾಖಲೆ ಬರೆದಿದ್ದರು. ಫೈನಲ್ ನಲ್ಲಿ ತಮ್ಮದೇ ದಾಖಲೆಯನ್ನು ಮುರಿದು 50.79 ಸೆಕೆಂಡಿನಲ್ಲಿ ಗುರಿ ಮುಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/col_banshtu/status/1033692823118213121

  • ನಟ ಪುನೀತ್, ಡಿಸಿಪಿ ಚನ್ನಣ್ಣನವರಿಂದ ಹಿಮಾದಾಸ್ ಗೆ ಅಭಿನಂದನೆ

    ನಟ ಪುನೀತ್, ಡಿಸಿಪಿ ಚನ್ನಣ್ಣನವರಿಂದ ಹಿಮಾದಾಸ್ ಗೆ ಅಭಿನಂದನೆ

    ಬೆಂಗಳೂರು: ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ಭಾರತದ ವಿಜಯ ಪತಾಕೆ ಹಾರಿಸಿದ್ದ ಹಿಮಾದಾಸ್ ಗೆ ಡಿಸಿಪಿ ರವಿ ಡಿ ಚನ್ನಣ್ಣನವರ್ ಮತ್ತು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

    ನಟ ಪುನೀತ್ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಗೂ ಡಿಸಿಪಿ ಚೆನ್ನಣ್ಣನವರ್ ಟ್ವಿಟ್ಟರ್ ಮೂಲಕ ಹಿಮಾದಾಸ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಪುನೀತ್ ಅವರು “ವಿಶ್ವ ಯು20 ಚಾಂಪಿನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಹಿಮಾದಾಸ್ ಗೆ ಅಭಿನಂದನೆಗಳು’ ಎಂದು ಹಿಮಾದಾಸ್ ಫೋಟೋ ಹಾಕಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಥ್ಲೀಟ್ ಹಿಮಾದಾಸ್ ಗೆ ಡಿಸಿಎಂ ಸಂಸ್ಥೆಯಿಂದ 10 ಲಕ್ಷ ಬಹುಮಾನ

    ಡಿಸಿಪಿ ಚನ್ನಣ್ಣನವರ್, “ಭಾರತ ಹೆಮ್ಮೆ ಪಡುವ ಕ್ಷಣಗಳಾಗಿದ್ದು, ಜಾಗತಿಕ ಸ್ಪರ್ಧೆಯಲ್ಲಿ ಮೊದಲ ಭಾರತೀಯ ಮಹಿಳೆ ಚಿನ್ನದ ಪದಕವನ್ನು ಹಿಮಾದಾಸ್ ಪಡೆದುಕೊಂಡಿದ್ದಾರೆ. ಹಿಮಾದಾಸ್ 400 ಮೀಟರ್ ಓಟವನ್ನು ಕೇವಲ 51.46 ಸೆಕೆಂಡ್ ಗಳಲ್ಲಿ ಪೂರ್ಣ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು” ಎಂದು ಹಿಮಾದಾಸ್ ಗೆದ್ದ ಫೋಟೋಗಳನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ಗುರುವಾರ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. 18 ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಹಿಮಾ ದಾಸ್ ಅವರು ಮೂಲತಃ ಅಸ್ಸಾಂನ ನಾಗೋನ್ ಜಿಲ್ಲೆಯವರಾಗಿದ್ದು, ಕೃಷಿ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಜನಿಸಿದ್ದಾರೆ. ಇದೀಗ ವಿಶ್ವದಾಖಲೆ ಮರೆದು ದೇಶದ ಮನೆಮಾತಾಗಿದ್ದಾರೆ.

    https://www.instagram.com/p/BlPsA-6ARqT/?hl=en&taken-by=puneethrajkumar.official

  • ಅಥ್ಲೀಟ್ ಹಿಮಾದಾಸ್ ಗೆ ಡಿಸಿಎಂ ಸಂಸ್ಥೆಯಿಂದ 10 ಲಕ್ಷ ಬಹುಮಾನ

    ಅಥ್ಲೀಟ್ ಹಿಮಾದಾಸ್ ಗೆ ಡಿಸಿಎಂ ಸಂಸ್ಥೆಯಿಂದ 10 ಲಕ್ಷ ಬಹುಮಾನ

    ಬೆಂಗಳೂರು: ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ಭಾರತದ ವಿಜಯ ಪತಾಕೆ ಹಾರಿಸಿದ್ದ ಹಿಮಾದಾಸ್ ಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಬಹುಮಾನ ನೀಡಿದ್ದಾರೆ.

    ಸಿದ್ದಾರ್ಥ್ ಅಕಾಡೆಮಿ ವತಿಯಿಂದ ಹಿಮಾದಾಸ್‍ ಗೆ 10 ಲಕ್ಷ ಬಹುಮಾನ ನೀಡಿದ್ದಾರೆ. ಈ ಹಣವನ್ನು ಹಿಮಾದಾಸ್ ಗೆ ನೀಡಲು ನನಗೆ ಹೆಮ್ಮೆಯಾಗುತ್ತಿದೆ ಅಂತ ಡಿಸಿಎಂ ಜಿ ಪರಮೇಶ್ವರ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್ ಚಿರತೆಯ ಓಟದ ವಿಡಿಯೋ ನೋಡಿ

    `ತಮ್ಮ ಪರಿಶ್ರಮ, ಸಾಧನೆಯಿಂದ ಭಾರತದಾದ್ಯಂತ ಸಾವಿರಾರು ಕ್ರೀಡಾಪಟುಗಳಿಗೆ ಹಿಮಾದಾಸ್ ಸ್ಫೂರ್ತಿಯಾಗಿದ್ದಾರೆ. ಅಂತಹವರನ್ನು ನಾನು ಅಭಿನಂದಿಸುತ್ತೇನೆ. ಜೊತೆಗೆ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪರವಾಗಿ 10 ಲಕ್ಷ ರೂ. ಬಹುಮಾನ ಕೊಡುತ್ತಿರುವುದು ನನಗೆ ಸಂತಸವಾಗಿದೆ” ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿಯಿಂದ ಹಿಮಾದಾಸ್ ಗೆ ಅಭಿನಂದನೆ

    ಗುರುವಾರ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. 18 ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಹಿಮಾ ದಾಸ್ ಅವರು ಮೂಲತಃ ಅಸ್ಸಾಂನ ನಾಗೋನ್ ಜಿಲ್ಲೆಯವರಾಗಿದ್ದು, ಕೃಷಿ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಜನಿಸಿದ್ದಾರೆ. ಇದೀಗ ವಿಶ್ವದಾಖಲೆ ಮರೆದು ಮನೆಮಾತಾಗಿದ್ದಾರೆ.

  • ಚಿನ್ನದ ಪದಕ ಗೆದ್ದು ಕೀರ್ತಿ ತಂದಿದ್ದ ಹಿಮಾದಾಸ್‍ಗೆ ಎಎಫ್‍ಐ ನಿಂದ ಅವಮಾನ!

    ಚಿನ್ನದ ಪದಕ ಗೆದ್ದು ಕೀರ್ತಿ ತಂದಿದ್ದ ಹಿಮಾದಾಸ್‍ಗೆ ಎಎಫ್‍ಐ ನಿಂದ ಅವಮಾನ!

    ನವದೆಹಲಿ: ಫಿನ್ ಲ್ಯಾಂಡ್ ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್‍ಗೆ ಭಾರತೀಯ ಅಥ್ಲೆಟಿಕ್ ಒಕ್ಕೂಟ (ಎಎಫ್‍ಐ) ಅವಮಾನ ಮಾಡಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ.

    ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಗುರುವಾರ ಭಾರತದ ಅಥ್ಲೀಟ್ ಹಿಮಾದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. ಆದರೆ ಹಿಮಾದಾಸ್ ಫೈನಲ್ ಗೆಲ್ಲುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ವಿಡಿಯೋವನ್ನು ಎಎಫ್‍ಐ ಟ್ವೀಟ್ ಮಾಡಿತ್ತು. ಈ ವೇಳೆ ಹಿಮಾದಾಸ್ ತನಗೆ ತಿಳಿಸಿದ ಇಂಗ್ಲಿಷ್ ನಲ್ಲಿ ಮಾತನಾಡಿದರು. ಆದರೆ ಹಿಮಾ ಅವರ ಭಾಷೆ ಸುಲಲಿತವಾಗಿಲ್ಲ ಎಂದು ಎಎಫ್‍ಐ ತನ್ನ ಪೋಸ್ಟ್ ನಲ್ಲಿ ಬರೆದುಕೊಂಡಿತ್ತು. ಅಲ್ಲದೇ ಫೈನಲ್ ಗೆ ಅರ್ಹತೆ ಪಡೆದಿರುವುದು ನಮಗೆ ಹೆಮ್ಮೆ ಎನಿಸುತ್ತಿದೆ. ಫೈನಲ್‍ನಲ್ಲಿಯೂ ಉತ್ತಮ ಸಾಧನೆ ಮಾಡಿ ಎಂದು ಶುಭ ಹಾರೈಸಿತ್ತು.

    ಸದ್ಯ ಎಎಫ್‍ಐ ಮಾಡಿದ ಈ ಟ್ವೀಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹಿಮಾ ಅವರ ಸಾಮರ್ಥ್ಯ ಪರಿಗಣಿಸದ ಎಎಫ್‍ಐ ಅವರ ಭಾಷೆಯ ಬಗ್ಗೆ ಮಾತನಾಡಿ ಅಗೌರವ ತೋರಿದೆ. ಈ ಮೂಲಕ ಅವರ ಸಾಧನೆಯನ್ನು ಮರೆಮಾಚಿದೆ ಎಂದು ಮರುಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ತಮ್ಮ ಟ್ವೀಟ್ ನಲ್ಲಿ ಎಎಫ್‍ಐ ಅನ್ನು ಸಮರ್ಥಿಸಿಕೊಂಡಿದ್ದು, ಅವರ ಟ್ವೀಟ್ ಅನ್ನು ತಪ್ಪಾಗಿ ಆರ್ಥೈಸಿಕೊಳ್ಳಲಾಗಿದೆ ಎಂದು ಬರೆದುಕೊಂಡಿದ್ದಾರೆ. ಅಂದಹಾಗೇ ಹಿಮಾ ಅವರ ಭಾಷೆ ಬಗ್ಗೆ ತಿಳಿಸಿ ಟ್ವೀಟ್ ಮಾಡಿದ್ದ ಎಎಫ್‍ಐ ತನ್ನ ಟ್ವೀಟ್ ನಲ್ಲೇ ಅಕ್ಷರ ತಪ್ಪು ಮಾಡಿದ್ದು, ಇದನ್ನೂ ಕಂಡ ಹಲವರು ಮತ್ತಷ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಅಂದಹಾಗೇ 18 ನೇ ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್ ಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಹಿಮಾ ದಾಸ್ ಮೂಲತಃ ಅಸ್ಸಾಂನ ನಾಗೋನ್ ಜಿಲ್ಲೆಯವರಾಗಿದ್ದು, ಕೃಷಿ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಜನಿಸಿದ್ದರು.

    https://twitter.com/RoshanKrRai/status/1017667928131624961

    https://twitter.com/VinuLive/status/1017798309170122752

  • ವಿಶ್ವ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್ ಚಿರತೆಯ ಓಟದ ವಿಡಿಯೋ ನೋಡಿ

    ವಿಶ್ವ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್ ಚಿರತೆಯ ಓಟದ ವಿಡಿಯೋ ನೋಡಿ

    ನವದೆಹಲಿ: ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪರ ಮೊದಲ ಚಿನ್ನದ ಪದಕ ಗೆದ್ದ ಹಿಮಾ ದಾಸ್ ಇತಿಹಾಸ ಸೃಷ್ಟಿಸಿದ್ದಾರೆ.

    ಗುರುವಾರ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. 18 ನೇ ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್ ಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.

    ಸ್ಪರ್ಧೆಯಲ್ಲಿ ಗೆಲುವು ಪಡೆದ ಬಳಿಕ ಮಾತನಾಡಿರುವ ಹಿಮಾ ದಾಸ್, ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿರುವುದು ಸಂತಸ ತಂದಿದೆ. ನನಗೆ ಬೆಂಬಲ ನೀಡಿದ ಎಲ್ಲಾ ಭಾರತೀಯರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ.

    ಹೇಮಾ ದಾಸ್ ಚಿರತೆಯಂತೆ ಓಡಿದ ವಿಡಿಯೋವನ್ನು ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಸದ್ಯ ಹಿಮಾ ದಾಸ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವು ಗಣ್ಯರು ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

    ಅಂದಹಾಗೇ ಹಿಮಾದಾಸ್ ಅವರು ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 51.46 ಸೆಕೆಂಡ್ ಗಳಲ್ಲಿ ಓಟವನ್ನು ಪೂರ್ಣಗೊಳಿಸಿದ್ದು, ಆದರೆ ಕಳೆದ ತಿಂಗಳು ಗುವಾಹತಿಯಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಕೇವಲ 51.13 ಸೆಕೆಂಡ್ ಗಳಲ್ಲಿ 400 ಮೀಟರ್ ದೂರವನ್ನು ಕ್ರಮಿಸಿದ್ದರು.

     

  • ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿಯಿಂದ ಹಿಮಾದಾಸ್ ಗೆ ಅಭಿನಂದನೆ

    ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿಯಿಂದ ಹಿಮಾದಾಸ್ ಗೆ ಅಭಿನಂದನೆ

    ನವದೆಹಲಿ: ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪರ ಮೊದಲ ಚಿನ್ನದ ಪದಕ ಗೆದ್ದ ಭಾರತೀಯ ಮಹಿಳೆ ಹಿಮಾ ದಾಸ್ ಅವರನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

    ಕೋವಿಂದ್ ಮತ್ತು ಪ್ರಧಾನಿ ಮೋದಿ ಅವರು ಹಿಮಾದಾಸ್ ಗೆ ಟ್ವಿಟ್ಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇದು ಅಸ್ಸಾಂ ಮತ್ತು ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದು ಕೋವಿಂದ್ ಹೇಳಿದ್ದಾರೆ. ಇನ್ನು ದಾಸ್ ಗೆಲುವು ಮುಂದಿನ ವರ್ಷಗಳಲ್ಲಿ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

    ಅಷ್ಟೇ ಅಲ್ಲದೇ “ವಿಶ್ವ ಅಂಡರ್ -20 ಚಾಂಪಿಯನ್ ಶಿಪ್ ನಲ್ಲಿ 400 ಮೀಟರ್ ಚಿನ್ನದ ಪದಕ ಗೆದ್ದ ನಮ್ಮ ಸಂವೇದನೆಯ ಸ್ಪ್ರಿಂಟ್ ತಾರೆ ಹಿಮಾ ದಾಸ್ ಗೆ ಅಭಿನಂದನೆಗಳು. ಇದು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮೊಟ್ಟಮೊದಲ ಟ್ರ್ಯಾಕ್ ಚಿನ್ನವಾಗಿದೆ. ಇದು ಅಸ್ಸಾಂ ಮತ್ತು ಭಾರತ ಹೆಮ್ಮೆ ಪಡುವ ಸಂಗತಿಯಾಗಿದೆ. ಈಗ ಹಿಮಾ ಒಲಿಂಪಿಕ್ ವೇದಿಕೆಯ ಬೇಕಾನ್ಸ್ ಆಗಿದ್ದಾರೆ” ಎಂದು ಕೋವಿಂದ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

    “ವಿಶ್ವ ಯು20 ಚಾಂಪಿಯನ್ ಶಿಪ್ ನಲ್ಲಿ 400 ಮೀಟರ್ ನಲ್ಲಿ ಐತಿಹಾಸಿಕ ಚಿನ್ನವನ್ನು ಗೆದ್ದ ಕ್ರೀಡಾಪಟು ಹಿಮಾ ದಾಸ್ ಅವರಿಂದ ಭಾರತವು ಹೆಮ್ಮೆಯಿಂದ ಖುಷಿಪಟ್ಟಿದೆ. ಹಿಮಾ ದಾಸ್ ಅವರ ಈ ಸಾಧನೆಯು ಮುಂದಿನ ವರ್ಷಗಳಲ್ಲಿ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ. ಹಿಮಾ ದಾಸ್ ಗೆ ಅಭಿನಂದನೆಗಳು” ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.

    ಗುರುವಾರ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ 18 ನೇ ವಯಸ್ಸಿನಲ್ಲಿ ಹಿಮಾ ದಾಸ್ ಚಿನ್ನದ ಪದಕ ಗೆದ್ದು ದೇಶದ ಇತಿಹಾಸವನ್ನು ಬರೆದಿದ್ದಾರೆ. 400 ಮೀಟರ್ ಓಟದ ಸ್ಪರ್ಧೆಯಲ್ಲಿ ದಾಸ್ 51.46 ಸೆಕೆಂಡ್ ಗಳಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಕ ಅಗ್ರಸ್ಥಾನಗಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.