Tag: Athani

  • ಗೋಕಾಕ್ ಅಖಾಡಕ್ಕೆ ಡಿಕೆಶಿ ಎಂಟ್ರಿ ಆಗ್ತಾರಾ? ಹೆಬ್ಬಾಳ್ಕರ್ ಉತ್ತರ

    ಗೋಕಾಕ್ ಅಖಾಡಕ್ಕೆ ಡಿಕೆಶಿ ಎಂಟ್ರಿ ಆಗ್ತಾರಾ? ಹೆಬ್ಬಾಳ್ಕರ್ ಉತ್ತರ

    ಬೆಳಗಾವಿ: ಉಪಚುನಾವಣೆ ಕಾವು ಜೋರಾಗಿದ್ದು, ಗೋಕಾಕ್ ಅಖಾಡಕ್ಕೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಯಾಕೆ ಎಂಟ್ರಿ ಕೊಟ್ಟಿಲ್ಲ ಎನ್ನುವ ಪ್ರಶ್ನೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೋ ಕಮೆಂಟ್ಸ್ ಎಂದು ಜಾರಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕಿ ಏನೇ ಪ್ರಶ್ನೆ ಕೇಳಿದರೂ ನಾನು ಈ ಬಗ್ಗೆ ಈಗ ಪ್ರತಿಕ್ರಿಯಿಸಲ್ಲ, ಮುಂದೆ ಮಾತನಾಡಬಹುದು, ಈಗ ಚುನಾವಣೆ ಸಮಯ ಹೀಗಾಗಿ ನಾನು ಮಾತನಾಡಲು ಇಷ್ಟಪಡಲ್ಲ ಎಂದು ಜಾಣತನದ ಉತ್ತರ ಕೊಟ್ಟಿದ್ದಾರೆ. ನಾವು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಶಿಸ್ತಿನ ಸಿಪಾಯಿಗಳ ರೀತಿ ಪಕ್ಷದ ಮಾತನ್ನು ಕೇಳಬೇಕು ಎಂದಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಎಂದು ಪಣತೊಟ್ಟಿ ನಿಂತಿದ್ದ ನೀವು ಗೋಕಾಕ್ ಬಿಟ್ಟು ಅಥಣಿಯಲ್ಲಿ ಯಾಕೆ ಪ್ರಚಾರ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಕ್ಕೆ, ನನಗೆ ಪಕ್ಷ ಇಲ್ಲಿ ಪ್ರಚಾರ ನಡೆಸಲು ಜವಾಬ್ದಾರಿ ನೀಡಿದೆ. ಹೀಗಾಗಿ ಅಥಣಿಗೆ ಬಂದಿದ್ದೇನೆ ಎಂದು ಪ್ರತಿಕ್ರಿಯಿಸಿದರು.

    ಗೋಕಾಕ್‍ನಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸಬೇಕು ಎಂದು ಕಾಂಗ್ರೆಸ್ ಪಣತೊಟ್ಟಿದೆ. ಆದ್ರೆ ಯಾಕೆ ಡಿಕೆಶಿ ಅವರು ಇನ್ನೂ ಗೋಕಾಕ್ ಕಣಕ್ಕೆ ಬಂದಿಲ್ಲ ಎಂದು ಕೇಳಿದಾಗ, ಈ ಬಗ್ಗೆ ನೀವು ಡಿಕೆಶಿ ಅವರನ್ನೇ ಕೇಳಿದರೆ ಉತ್ತಮ. ನಾನು ಅವರ ಪಿಆರ್‍ಓ ಅಲ್ಲ ಎಂದು ಹೇಳಿದ್ದಾರೆ. ಜೊತೆಗೆ ಜಾರಕಿಹೊಳಿ ಬ್ರದರ್ಸ್ ಹೊಂದಾಣಿಕೆ ಪಾಲಿಟಿಕ್ಸ್ ಬಗ್ಗೆ ಮಾತನಾಡಿ, ಸದ್ಯಕ್ಕೆ ನೋ ಕಮೆಂಟ್ಸ್. ಮುಂದೆ ನಾನು ಈ ಬಗ್ಗೆ ಮಾತನಾಡಬಹುದು. ಆದ್ರೆ ಚುನಾವಣೆ ಸಮಯವಾಗಿರುವುದರಿಂದ ಈ ಬಗ್ಗೆ ನಾನು ಪ್ರತಿಕ್ರಿಯಿಸಲು ಇಷ್ಟಪಡಲ್ಲ ಎಂದು ಹೇಳಿದರು.

    ಗೋಕಾಕ್ ಬಗ್ಗೆ ಹೆಚ್ಚು ಆಸಕ್ತಿ ಇತ್ತಾ ಎಂದು ಕೇಳಿದಾಗಲೂ ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ ಎಂದು ಕಾಲಾಯ ತಸ್ಮೈ ನಮಃ ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ. ಎಷ್ಟು ಲೀಡ್‍ನಲ್ಲಿ, ಎಷ್ಟು ಸ್ಥಾನ ಗೆಲ್ಲುತ್ತೇವೆ ಎಂದು ನಾನು ಭವಿಷ್ಯ ಹೇಳಲ್ಲ. ನಾನು ಭವಿಷ್ಯಗಾರ್ತಿ ಅಲ್ಲ ಎನ್ನುವ ಮೂಲಕ ಚುನಾವಣೆ ಇರುವುದಕ್ಕೆ ಸದ್ಯ ನಾನು ಮೌನವಾಗಿರುತ್ತೇನೆ ಯಾವುದಕ್ಕೂ ಪ್ರತಿಕ್ರಿಯಿಸಲ್ಲ ಎನ್ನುವ ಹಾಗೆ ಲಕ್ಷ್ಮೀ ಅವರು ಎಲ್ಲದಕ್ಕೂ ನೋ ಕಮೆಂಟ್ಸ್ ಎಂದು ಪ್ರಚಾರದಲ್ಲಿ ತೊಡಗಿದ್ದಾರೆ.

  • ಅನರ್ಹರ ಆರೋಗ್ಯ ಸರಿಯಿಲ್ಲ, ಒಳ್ಳೆ ತಲೆ ಡಾಕ್ಟರ್‌ಗೆ ತೋರಿಸಿ: ರಮೇಶ್ ಕುಮಾರ್

    ಅನರ್ಹರ ಆರೋಗ್ಯ ಸರಿಯಿಲ್ಲ, ಒಳ್ಳೆ ತಲೆ ಡಾಕ್ಟರ್‌ಗೆ ತೋರಿಸಿ: ರಮೇಶ್ ಕುಮಾರ್

    ಬೆಳಗಾವಿ: ಅನರ್ಹರ ಆರೋಗ್ಯ ಸರಿಯಿಲ್ಲ, ಅವರನ್ನು ತಲೆಗೆ ಸಂಬಂಧಿಸಿದ ವೈದ್ಯರ ಬಳಿ ತೋರಿಸೋದು ಒಳ್ಳೆದು ಎಂದು ಅಥಣಿಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹರಿಗೆ ಟಾಂಗ್ ಕೊಟ್ಟಿದ್ದಾರೆ.

    ಅಥಣಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನರ್ಹಗೊಂಡ ನಂತರವೂ ಶಾಸಕರು ತಾವು ಅರ್ಹರು ಎಂದು ಹೇಳಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸುಪ್ರೀಂ ಕೋರ್ಟಿನಲ್ಲೂ ಅನರ್ಹಗೊಂಡ ನಂತರ ಅರ್ಹರು ಎಂದು ಹೇಳಿಕೊಳ್ಳುತ್ತಿದ್ದಾರೆ. ಅನರ್ಹರ ಆರೋಗ್ಯ ಸರಿಯಿಲ್ಲ, ಒಳ್ಳೆಯ ತಲೆ ಸಂಬಂಧಿಸಿದ ವೈದ್ಯರಿಗೆ ತೋರಿಸಿ ಎಂದು ಕಾಲೆಳೆದಿದ್ದಾರೆ.

    ನಾನು ಯಾರನ್ನೂ ವ್ಯಕ್ತಿಗತವಾಗಿ ಅನರ್ಹಗೊಳಿಸಿಲ್ಲ. ಸಂವಿಧಾನಾತ್ಮಕವಾಗಿ ಅವರನ್ನು ಅನರ್ಹರು ಅಂತ ಘೋಷಣೆ ಮಾಡಿದ್ದೆ. ಸುಪ್ರೀಂ ಕೋರ್ಟ್ ಸಹ ನನ್ನ ಆದೇಶ ಎತ್ತಿ ಹಿಡಿದಿದೆ. ನಾನು ಕೊಟ್ಟ ತೀರ್ಪು ಸರಿಯೇ ಎಂದು ಪರಿಶೀಲಿಸಿದ್ದೇನೆ. ಜನರು ಕೂಡ ನೀವು ಮಾಡಿದ್ದು ಸರಿಯಾಗಿದೆ ಎಂದಿದ್ದಾರೆ. ಆದರೆ ಕೋರ್ಟ್ ಅನರ್ಹರಿಗೆ ಉಪಚುನಾವಣೆಗೆ ನಿಲ್ಲಲು ಅವಕಾಶ ನೀಡಿದೆ. ಕೋರ್ಟಿನ ತೀರ್ಪನ್ನು ನಾನು ಗೌರವಿಸುತ್ತೇನೆ. ಉಪಚುನಾವಣೆಯಲ್ಲಿ ಜನರು ಅನರ್ಹರಿಗೆ ಉತ್ತರ ನೀಡುತ್ತಾರೆ ಎಂದು ಕಿಡಿಕಾರಿದರು.

    ನಾನು ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಒಂದು ವೇಳೆ ಪಕ್ಷದಲ್ಲಿ ನೀನು ಕಸ ಗುಡಿಸಬೇಕು ಎಂದರೆ ನಾನು ಗುಡಿಸಬೇಕು, ಅದು ಪಕ್ಷದ ಶಿಸ್ತು. ಹಿಂದೆ ಸಮ್ಮಿಶ್ರ ಸರ್ಕಾರವಿದ್ದಾಗ ಯಾರೂ ಹೆಚ್ಚು ಉತ್ಸಾಹ ತೋರಲಿಲ್ಲ. ಪಕ್ಷದ ನಾಯಕ ವೇಣುಗೋಪಾಲ್ ಅವರು ನೀವು ಸ್ಪೀಕರ್ ಆಗಬೇಕು ಎಂದು ಹೇಳಿದಾಗ, ಪಕ್ಷ ಏನೇ ಜವಾಬ್ದಾರಿ ನೀಡಿದರೂ ನಾನು ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಜನರ ಮನಸ್ಸಲ್ಲಿ ಗೌರವಾನ್ವಿತ ಸ್ಥಾನ ಸಿಕ್ಕಾಗ ಅದಕ್ಕೆ ಮಿಗಿಲಾದದ್ದು ಯಾವ ಸ್ಥಾನವೂ ಇಲ್ಲ ಎಂದು ರಮೇಶ್ ಕುಮಾರ್ ಹೇಳಿದರು.

  • ಇರೋಕೆ ಮನೆ ಇಲ್ಲ, ಸತ್ತರೆ ಹೂಳಲು ಸ್ಮಶಾನ ಇಲ್ಲ: ಮತ ಕೇಳಲು ಬಂದವರಿಗೆ ಮಹಿಳೆಯರ ಕ್ಲಾಸ್

    ಇರೋಕೆ ಮನೆ ಇಲ್ಲ, ಸತ್ತರೆ ಹೂಳಲು ಸ್ಮಶಾನ ಇಲ್ಲ: ಮತ ಕೇಳಲು ಬಂದವರಿಗೆ ಮಹಿಳೆಯರ ಕ್ಲಾಸ್

    -ಪ್ರವಾಹ ಬಂದಾಗ ಬರದವರು, ಈಗ ಯಾಕ್ ಬಂದ್ರಿ?

    ಬೆಳಗಾವಿ: ಮತ ಕೇಳಲು ಬಂದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಮತ್ತು ಡಿಸಿಎಂ ಲಕ್ಷ್ಮಣ ಸವದಿಗೆ ಅಥಣಿ ತಾಲೂಕಿನ ನದಿ ಇಂಗಳಗಾಂವ್ ಗ್ರಾಮದ ಮಹಿಳೆಯರು ತರಾಟೆ ತೆಗೆದುಕೊಂಡಿದ್ದಾರೆ.

    ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಮಹೇಶ್ ಕುಮಟಳ್ಳಿ ಮತ್ತು ಲಕ್ಷ್ಮಣ ಸವದಿ ಅಪಾರ ಬೆಂಬಲಿಗರೊಂದಿಗೆ ಇಂಗಳಗಾಂವ್ ಗ್ರಾಮಕ್ಕೆ ಭೇಟಿ ನೀಡಿದ್ದರು. ಮತಯಾಚನೆ ವೇಳೆ ಬಂದ ಸ್ಥಳೀಯ ಮಹಿಳೆಯರು, ಇರಲು ಮನೆ ಇಲ್ಲ. ಸತ್ತರೆ ಹೂಳಲು ಸ್ಮಶಾನವಿಲ್ಲ. ಪ್ರವಾಹ ಬಂದಾಗ ಕಷ್ಟ ಕೇಳಲು ನೀವು ಯಾರು ಬಂದಿಲ್ಲ. ಈಗ ಯಾಕೆ ನಮ್ಮೂರಿಗೆ ಬಂದಿದ್ದೀರಿ ಎಂದು ತರಾಟೆ ತೆಗೆದುಕೊಂಡು ಕಷ್ಟ ಹೇಳಿ ಕಣ್ಣೀರು ಹಾಕಿದರು.

    ಸತತ ಮಳೆಯಿಂದಾಗಿ ಬೆಳೆ ಸಹ ಹಾಳಾಯ್ತು. ನಾವು ಹೇಗಿದ್ದೇವೆ, ನಮ್ಮ ಮನೆ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಬಂದು ನೋಡಿದ್ರೆ ನಿಮಗೆ ನಾವೆಲ್ಲ ಕಷ್ಟ ಗೊತ್ತಾಗುತ್ತದೆ. ಚುನಾವಣೆ ಬಂದಾಗ 15-20 ಜನರ ಗುಂಪು ಕಟ್ಟಿಕೊಂಡು ಬಂದರೆ ನಮ್ಮ ಸಮಸ್ಯೆ ಬಗೆಹರಿಯಲ್ಲ. ಪ್ರವಾಹದಿಂದಾಗಿ ಗ್ರಾಮವೇ ಸಂಪೂರ್ಣ ಜಲಾವೃತಗೊಂಡಿತ್ತು. ಬದುಕು ಇನ್ನು ಮೊದಲಿನ ಸ್ಥಿತಿಗೆ ಬಂದಿಲ್ಲ. ನಮಗೆ ಇರಲು ಸೂಕ್ತ ಜಾಗ ಕೊಡಿಸಿ ಎಂದು ಲಕ್ಷ್ಮಣ ಸವದಿ ಬಳಿ ನೆರೆ ಸಂತ್ರಸ್ತರು ಮನವಿ ಮಾಡಿಕೊಂಡರು.

  • ಲಕ್ಷ್ಮೀ ಹೆಬ್ಬಾಳ್ಕರ್ ನಮ್ಮ ಸಹೋದರಿ, ಪಕ್ಷಕ್ಕೆ ಬಂದರೆ ಸ್ವಾಗತ: ಲಕ್ಷ್ಮಣ್ ಸವದಿ

    ಲಕ್ಷ್ಮೀ ಹೆಬ್ಬಾಳ್ಕರ್ ನಮ್ಮ ಸಹೋದರಿ, ಪಕ್ಷಕ್ಕೆ ಬಂದರೆ ಸ್ವಾಗತ: ಲಕ್ಷ್ಮಣ್ ಸವದಿ

    ವಿಜಯಪುರ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಮ್ಮ ಸಹೋದರಿ, ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ ಎಂದು ಅಥಣಿಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿಕೆ ಕೊಟ್ಟಿದ್ದಾರೆ.

    ಬೆಳಗಾವಿ ರಾಜಕೀಯ ಬದಲಿಸಬಲ್ಲೇ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರುವ ವಿಚಾರದಲ್ಲಿ ಹಾಗೆ ಹೇಳಿರಬಹುದು. ಅವರು ಸಿಕ್ಕರೆ ಈ ಬಗ್ಗೆ ಮಾತನಾಡುತ್ತೇನೆ. ರಾಜಕೀಯ ದೃವೀಕರಣ ಹಿನ್ನೆಲೆ ಅವರು ತಮ್ಮ ಪಕ್ಷ ಬಿಟ್ಟು ನಮ್ಮಲ್ಲಿ ಬರಬಹುದು. ಅವರು ನಮ್ಮ ಸಹೋದರಿ, ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ:ಬೆಳಗಾವಿ ರಾಜಕೀಯ ಬದಲಿಸ್ತೀನಿ- ಲಕ್ಷ್ಮೀ ಹೆಬ್ಬಾಳ್ಕರ್

    ಉಪಚುನಾವಣೆ ಬಳಿಕ ಇನ್ನಷ್ಟು ಜನ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬರಬಹುದು. ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಬಹುತೇಕರಿಗೆ ಮನವರಿಕೆ ಆಗಿದೆ. ಅಲ್ಲಿನ ವಾತಾವರಣ ನೋಡಿ ಬಿಜೆಪಿಗೆ ಬಂದರೆ ಒಳ್ಳೆ ಭವಿಷ್ಯ ಇದೆ ಎಂದು ಅನೇಕರು ತಿಳಿದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಬಹಳಷ್ಟು ಜನ ಬಿಜೆಪಿಗೆ ಬರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಶನಿವಾರ ಸಿಎಂ ಯಡಿಯೂರಪ್ಪ ನನ್ನ ಭಾಷಣದ ಬಳಿಕ ಭಾವುಕರಾಗಿದ್ದಾರೆ. ನಾನೇ ಅಭ್ಯರ್ಥಿ ಆಗಬೇಕು ಎಂದು ಕಾರ್ಯಕರ್ತರು ಬಯಸಿದ್ದರು. ಹೀಗಾಗಿ ಕಾರ್ಯಕರ್ತರಲ್ಲಿ ಗೊಂದಲಗಳಿದ್ದವು. ಶನಿವಾರ ಸಿಎಂ ಬಂದ ಮೇಲೆ ಆ ಗೊಂದಲಗಳಿಗೆಲ್ಲಾ ತೆರೆ ಬಿದ್ದಿದೆ. ನಾನು ಬಿಚ್ಚು ಮನಸ್ಸಿನಿಂದ ಎಲೆಕ್ಷನ್ ಮಾಡ್ತೇನೋ ಇಲ್ಲೋ ಅನ್ನೋ ಸಂಶಯ ಯಡಿಯೂರಪ್ಪ ಅವರಿಗೆ ಇತ್ತು. ಆದರೆ ಶನಿವಾರ ಅವರಿಗೆ ಎಲ್ಲವೂ ಸ್ಪಷ್ಟವಾಗಿ ಭಾವುಕರಾಗಿದ್ದರು ಎಂದು ಸಿಎಂ ಬಗ್ಗೆ ಮಾತನಾಡಿದರು.

    ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?
    ಶನಿವಾರ ರಾತ್ರಿ ಅಥಣಿ ಕ್ಷೇತ್ರದ ಕಕಮರಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಡೆದ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ನಾನು ಬೆಳಗಾವಿ ರಾಜಕಾರಣ ಬದಲು ಮಾಡಬಲ್ಲೆ. ಕೊಟ್ಟ ಕುದುರೆ ಏರಲು ಆಗದವನು ಇನ್ನೊಂದು ಕುದುರೆ ಏರುತ್ತೇನೆ ಅನ್ನೋನು ವೀರನೂ ಅಲ್ಲ ಶೂರನೂ ಅಲ್ಲ ಎಂದು ಅನರ್ಹರ ವಿರುದ್ಧ ಗುಡುಗಿದ್ದರು.

  • ನಾಮಪತ್ರ ವಾಪಸ್ ಪಡೆದ ಅಥಣಿ, ಹಿರೇಕೆರೂರು ಜೆಡಿಎಸ್ ಅಭ್ಯರ್ಥಿಗಳು

    ನಾಮಪತ್ರ ವಾಪಸ್ ಪಡೆದ ಅಥಣಿ, ಹಿರೇಕೆರೂರು ಜೆಡಿಎಸ್ ಅಭ್ಯರ್ಥಿಗಳು

    ಬೆಳಗಾವಿ/ಹಾವೇರಿ: ಅಥಣಿ ಮತ್ತು ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಇಬ್ಬರನ್ನು ಕಣಕ್ಕಿಳಿಸಿ ಬಿಜೆಪಿಗೆ ಮಾಜಿ ಸಿಎಂ ಕುಮಾರಸ್ವಾಮಿ ಶಾಕ್ ನೀಡಿದ್ದರು. ಇಂದು ಬಿಜೆಪಿ ಕೊನೆಯ ಹಂತದ ತಂತ್ರ ಫಲಿಸಿದ್ದು, ಅಭ್ಯರ್ಥಿಗಳು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.

    ಹಿರೇಕೆರೂರು ಜೆಡಿಎಸ್ ಅಭ್ಯರ್ಥಿ ಶಿವಾಚಾರ್ಯ ಸ್ವಾಮೀಜಿ ಮತ್ತು ಅಥಣಿಯಲ್ಲಿ ಗುರು ದಾಶ್ಯಾಳ್ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಇದೀಗ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಇನ್ನು ಹೊಸಕೋಟೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಪಕ್ಷೇತರ ಶರತ್ ಬಚ್ಚೇಗೌಡರಿಗೆ ಬೆಂಬಲ ಸೂಚಿಸಿದೆ. 15ರಲ್ಲಿ 12 ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಅಭ್ಯರ್ಥಿಗಳು ಚುನವಣಾ ಕಣದಲ್ಲಿದ್ದಾರೆ.

    ಹಿರೇಕೆರೂರಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಸ್ವಾಮೀಜಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಥಣಿಯಲ್ಲಿ ಬಿಜೆಪಿ ವಿರುದ್ಧ ಬಂಡಾಯ ಸಾರಿ ಜೆಡಿಎಸ್ ಸೇರ್ಪಡೆಗೊಂಡು ಗುರು ದಾಶ್ಯಾಳ ನಾಮಪತ್ರ ಸಲ್ಲಿದಿದ್ದರು. ಡಿಸಿಎಂ ಲಕ್ಷ್ಮಣ ಸವದಿ ಅವರ ಆಪ್ತ ವಲಯದಲ್ಲಿ ಗುರು ದಾಶ್ಯಾಳ ಗುರುತಿಸಿಕೊಂಡಿದ್ದಾರೆ.

  • ಜಾರಕಿಹೊಳಿ ಬದರ್ಸ್ ಫೈಟ್‍ನಿಂದ ಹಿಂದೆ ಸರಿದು ಅಥಣಿ ರಣಕಣಕ್ಕೆ ಹೆಬ್ಬಾಳ್ಕರ್ ಎಂಟ್ರಿ

    ಜಾರಕಿಹೊಳಿ ಬದರ್ಸ್ ಫೈಟ್‍ನಿಂದ ಹಿಂದೆ ಸರಿದು ಅಥಣಿ ರಣಕಣಕ್ಕೆ ಹೆಬ್ಬಾಳ್ಕರ್ ಎಂಟ್ರಿ

    ಬೆಳಗಾವಿ: ಅಥಣಿ ಉಪ ಚುನಾವಣಾ ರಣಕಣದಲ್ಲಿ ಪ್ರಚಾರದ ಬಿಸಿ ಜೋರಾಗಿದ್ದು, ಮಹತ್ವದ ಬೆಳವಣಿಗೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

    ಕಾಂಗ್ರೆಸ್‍ನ ಪವರ್ ಫುಲ್ ಶಾಸಕಿಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೋಕಾಕ್ ಬದಲಿಗೆ ಅಥಣಿ ಚುನಾವಣೆ ಪ್ರಚಾರಕ್ಕೆ ಕಾಲಿಟ್ಟಿದ್ದಾರೆ. ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ಹಾಗೂ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಸಹೋದರರ ಸಮರದಿಂದ ದೂರ ಉಳಿಯುವ ಉದ್ದೇಶದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಗೋಕಾಕ್ ಕ್ಷೇತ್ರದ ಪ್ರಚಾರ ಜವಾಬ್ದಾರಿಯಿಂದ ಮುಕ್ತರಾಗಿದ್ದಾರೆ. ಹೀಗಾಗಿ ಅಥಣಿ ಕ್ಷೇತ್ರಕ್ಕೆ ಬಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಆದರೆ ಊಹಾಪೋಹಗಳನ್ನು ತಳ್ಳಿಹಾಕಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಅಥಣಿ ಚುನಾವಣಾ ಉಸ್ತುವಾರಿ, ಮಾಜಿ ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕರು ಅಥಣಿಗೆ ಬರುವಂತೆ ತಿಳಿಸಿದ್ದರು. ಹೀಗಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಗೋಕಾಕ್ ರಾಜಕೀಯದ ಬಗ್ಗೆ ಮಾತಾಡಲು ನಾನು ಚಿಕ್ಕವಳು. ಅಲ್ಲಿನ ರಾಜಕಾರಣವೇ ಬೇರೆ. ಅದರ ಬಗ್ಗೆ ಪಕ್ಷದ ಮುಖಂಡರು ಮಾತನಾಡುತ್ತಾರೆ ಎಂದು ಹೇಳಿದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಈ ಹೇಳಿಕೆ ನೋಡಿದರೆ, ಜಾರಕಿಹೊಳಿ ಬ್ರದರ್ಸ್ ಗೆ ಅವರು ಹೆದರಿದ್ರಾ ಎನ್ನುವ ಅನುಮಾನಗಳು ಮೂಡುತ್ತಿದೆ.

    ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಥಣಿಗೆ ಎಂಟ್ರಿ ಕೊಡುತ್ತಿದ್ದಂತೆ ಪಟ್ಟಣದ ಹೊರವಲಯದಲ್ಲಿರುವ ಕಾಂಗ್ರೆಸ್ ಮುಖಂಡ ಅನಿಲ ಸುಣಧೋಳಿ ನಿವಾಸದಲ್ಲಿ ಪ್ರಚಾರ ಕಾರ್ಯತಂತ್ರ ರೂಪಿಸುವ ಸಭೆಯಲ್ಲಿ ಪಾಲ್ಗೊಂಡರು. ಈ ಮೂಲಕ ಯಾವ ರೀತಿಯ ಪ್ರಚಾರ ಮಾಡಬೇಕು ಎನ್ನುವ ಕುರಿತು ಸುಮಾರು ಒಂದೂವರೆ ಗಂಟೆ ಸಭೆ ನಡೆಸಿದರು.

  • ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ

    ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ

    ಬೆಂಗಳೂರು: ಉಪಚುನಾವಣೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಾಗಿದೆ. ಮೂವರು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದು, ಒಬ್ಬರು ಜೆಡಿಎಸ್ ನಿಂದ ಟಿಕೆಟ್ ಪಡೆದು ಕಣಕ್ಕಿಳಿದಿದ್ದಾರೆ.

    1. ಹೊಸಕೋಟೆ: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಬಂಡಾಯದ ಬಾವುಟ ಹಿಡಿದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಶರತ್ ಬಚ್ಚೇಗೌಡರಿಗೆ ಬೆಂಬಲ ಸೂಚಿಸಿರುವ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಕಾಂಗ್ರೆಸ್‍ನಿಂದ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಸುರೇಶ್ ಸ್ಪರ್ಧೆಯಲ್ಲಿದ್ದಾರೆ. ಹಾಗಾಗಿ ಹೊಸಕೋಟೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರಿಂದ ಶರತ್ ಬಚ್ಚೇಗೌಡರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದೆ.

    2. ಗೋಕಾಕ್: ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ವಿರುದ್ಧ ಬಂಡಾಯ ಸಾರಿ ಅಶೋಕ್ ಪೂಜಾರಿ ಜೆಡಿಎಸ್ ಸೇರ್ಪಡೆಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಅಶೋಕ್ ಪೂಜಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಇಲ್ಲಿ ಕಾಂಗ್ರೆಸ್‍ನಿಂದ ಲಖನ್ ಜಾರಕಿಹೊಳಿ ಚುನಾವಣಾ ರಣಕಣದಲ್ಲಿದ್ದಾರೆ.

    3. ವಿಜಯನಗರ: ಆನಂದ್ ಸಿಂಗ್ ಅವರಿಗೆ ಟಿಕೆಟ್ ನೀಡಿದ್ದರಿಂದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕವಿರಾಜ್ ಅರಸ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಭಾನುವಾರ ಮಾಧ್ಯಮಗಳ ಮುಂದೆಯೇ ಆನಂದ್ ಸಿಂಗ್ ಕಾಲಿಗೆ ಎರಗಿ ಕ್ಷೇತ್ರ ಬಿಟ್ಟುಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಇಂದು ಆನಂದ್ ಸಿಂಗ್ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಇದನ್ನೂ ಓದಿ: ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತ್ಯ – ಕಣದಲ್ಲಿರುವ ಕದನಕಲಿಗಳ ಪಟ್ಟಿ

    4. ಅಥಣಿ: ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ನೀಡಿದ್ದರಿಂದ ಡಿಸಿಎಂ ಲಕ್ಷ್ಮಣ ಸವದಿ ಆರಂಭದಲ್ಲಿ ಬೇಸರಗೊಂಡಿದ್ದರು. ಲಕ್ಷ್ಮಣ ಸವದಿಯವರನ್ನು ಮನವೊಲಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಕೊನೆ ಕ್ಷಣದಲ್ಲಿ ಲಕ್ಷ್ಮಣ ಸವದಿ ಅವರ ಆಪ್ತ, ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಗುರು ದಾಶ್ಯಾಳ ಜೆಡಿಎಸ್ ಸೇರ್ಪಡೆಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

  • ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸೂರ್ಯ-ಚಂದ್ರರಷ್ಟೇ ಸತ್ಯ: ಸವದಿ

    ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸೂರ್ಯ-ಚಂದ್ರರಷ್ಟೇ ಸತ್ಯ: ಸವದಿ

    ಬೆಳಗಾವಿ: ಸೂರ್ಯ-ಚಂದ್ರ ಹುಟ್ಟುವುದು ಎಷ್ಟು ಸತ್ಯವೊ ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಕೂಡ ಅಷ್ಟೇ ಸತ್ಯ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

    ಅಥಣಿಯಲ್ಲಿ ಮಾತನಾಡಿದ ಡಿಸಿಎಂ, ಉಪ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ಕಾಗವಾಡ ಕ್ಷೇತ್ರದಿಂದ ಶ್ರೀಮಂತ ಪಾಟೀಲ್ ಗೆಲುವು ಖಚಿತ. ನಮ್ಮ ಕಾರ್ಯಕರ್ತರಲ್ಲಿ ಸ್ವಲ್ಪಮಟ್ಟಿಗೆ ಗೊಂದಲ ಇರುವುದು ಸತ್ಯ. ಅದನ್ನು ಮೂರು ದಿನಗಳಲ್ಲಿ ಸರಿ ಮಾಡುತ್ತೇನೆ. ಹೊಸ ಸೋಸೆ ಮನೆಗೆ ಬಂದಾಗ ಪ್ರಾರಂಭದಲ್ಲಿ ವ್ಯತ್ಯಾಸ ಇದ್ದೆ ಇರುತ್ತೆ. ಇದನ್ನ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.

    ನನಗೆ ಯಾವುದೆ ರೀತಿಯ ಮುನಿಸಿಲ್ಲ. ಹಾಗೊಂದು ವೇಳೆ ಮುನಿಸಿದ್ದರೆ ಇಲ್ಲಿಗೆ ಬರುತ್ತಿರಲಿಲ್ಲ. ನಾನು ಯಾವಾಗಲೂ ನೇರ ಮತ್ತು ಸ್ಪಷ್ಟ ಇದ್ದೇನೆ. ಬಿಜೆಪಿಯ ಯಾವುದೇ ಕಾರ್ಯಕರ್ತರು ಪಕ್ಷದ ಹುದ್ದೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಿಲ್ಲ. ಎಲ್ಲರೂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರೆ. ನೂರಕ್ಕೆ ನೂರರಷ್ಟು ನಾವೇ ಮತ ಹಾಕಿಸಿ ಮಹೇಶ್ ಕುಮಟಳ್ಳಿ ಅವರನ್ನು ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

    ಇದಕ್ಕೂ ಮುನ್ನ ಅಥಣಿ ಮತಕ್ಷೇತ್ರದ ಚುನಾವಣೆ ಹಿನ್ನೆಲೆ ಪಟ್ಟಣದ ಆರ್.ಎಸ್.ಎಚ್ ಕುಲಕರ್ಣಿ ಸಭಾಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಆದರೆ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗ ಬೇಕಿದ್ದ ಸಭೆ ಬರೋಬ್ಬರಿ 3 ಗಂಟೆ ತಡವಾಗಿ ಪ್ರಾರಂಭವಾಯಿತು. ಲಕ್ಷ್ಮಣ ಸವದಿ ಕಾರ್ಯಕ್ರಮಕ್ಕೆ ಬರುತ್ತಾರಾ ಅಥವಾ ಇಲ್ಲವಾ ಎನ್ನುವುದೇ ಭಾರೀ ಗೊಂದಲ ಮೂಡಿಸಿತ್ತು. ಈ ಮಧ್ಯೆ ಸಭೆಗೆ ಹೋಗದಂತೆ ಲಕ್ಷ್ಮಣ ಸವದಿ ಅವರನ್ನು ಅಭಿಮಾನಿಗಳು, ಕೆಲ ಬಿಜೆಪಿ ಕಾರ್ಯಕರ್ತರು ತಡೆದರು. ನಂತರ ಮಾಜಿ ಸಿಎಂ ಜಗದೀಶ ಶೆಟ್ಟರ್, ಕುಡಚಿ ಶಾಸಕ ಪಿ.ರಾಜು, ಮಹೇಶ ಕುಮಟಳ್ಳಿ ಸೇರಿದಂತೆ ಬಿಜೆಪಿ ನಾಯಕರು ಲಕ್ಷ್ಮಣ ಸವದಿ ಅವರ ಮನೆಗೆ ತೆರಳಿ ಸಭೆಗೆ ಕರೆತರಲು ತೆರಳಿದ್ದರು. ಆಗ ಡಿಸಿಎಂ ಮನೆ ಮುಂದೆ ಹೈಡ್ರಾಮಾನೇ ನಡೆಯಿತು.

    ಜಗದೀಶ್ ಶೆಟ್ಟರ್ ಕಾರಿಗೆ ಲಕ್ಷ್ಮಣ ಸವದಿ ಅಭಿಮಾನಿಗಳು ಅಡ್ಡಬಿದ್ದು ತಡೆದರು. ಅಲ್ಲದೆ ಜಗದೀಶ್ ಶೆಟ್ಟರ್ ಅವರನ್ನ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡರು. ಕುಡಚಿ ಶಾಸಕ ರಾಜು ಅವರಿಗೂ ಸವದಿ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡರು. ನಂತರ ಹರಸಾಹಸ ಪಟ್ಟು ಬಿಜೆಪಿ ನಾಯಕರು ಲಕ್ಷ್ಮಣ ಸವದಿ ಅವರನ್ನ ಸಭೆಗೆ ಕರೆದುಕೊಂಡು ಬಂದರು. ಆದರೆ ಅಲ್ಲೂ ಕೂಡ ಸವದಿ ಅಭಿಮಾನಿಗಳು ಯಾರನ್ನು ಕೇಳಿ ಸಭೆ ಕರೆದಿದ್ದೀರಿ ಎಂದು ಗಲಾಟೆ ಮಾಡಿದರು.ನಂತರ ಲಕ್ಷ್ಮಣ ಸವದಿ ಖುದ್ದಾಗಿ ಬಂದು ಅಭಿಮಾನಿಗಳಿಗೆ ಕೈ ಮುಗಿದು, ಕಾಲು ಬಿದ್ದು ಗಲಾಟೆ ಮಾಡದೆ ಇಲ್ಲಿಂದ ತೆರಳಿ ಎಂದು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿದ್ದ ಲಕ್ಷ್ಮಣ ಸವದಿ ಅವರು ಅಭಿಮಾನಿಗಳು ಜಗದೀಶ್ ಶೆಟ್ಟರ್, ಮಹೇಶ್ ಕುಮಠಳ್ಳಿ ಭಾಷಣದ ವೇಳೆ ತಮ್ಮ ನಾಯಕನ ಪರ ಜೈಕಾರ ಹಾಕಿ ಭಾಷಣಕ್ಕೆ ಅಡ್ಡಿ ಪಡಿಸಿದರು.

    https://www.youtube.com/watch?v=fk_vASHUtJU

  • ಲಕ್ಷ್ಮಣ ಸವದಿ ಶಾಂತ, ಆಪರೇಷನ್ ಡಿಸಿಎಂ ಕೈ ಬಿಟ್ಟ ಕಾಂಗ್ರೆಸ್

    ಲಕ್ಷ್ಮಣ ಸವದಿ ಶಾಂತ, ಆಪರೇಷನ್ ಡಿಸಿಎಂ ಕೈ ಬಿಟ್ಟ ಕಾಂಗ್ರೆಸ್

    ಬೆಂಗಳೂರು: ಅಥಣಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಾಗಿ ಆಪರೇಷನ್ ಡಿಸಿಎಂಗೆ ಮುಂದಾಗಿದ್ದ ಕಾಂಗ್ರೆಸ್, ಸದ್ಯ ಎಲ್ಲ ಕಾರ್ಯಾಚರಣೆಯನ್ನು ಕೈ ಬಿಟ್ಟಿದೆ.

    ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಅಥಣಿ ಕ್ಷೇತ್ರದಿಂದ ತಮ್ಮ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಸಲು ಕಾಂಗ್ರೆಸ್ ಪ್ಲ್ಯಾನ್ ರೂಪಿಸಿತ್ತು. ಆದರೆ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಲಕ್ಷ್ಮಣ ಸವದಿ ಸದ್ಯ ಶಾಂತರಾಗಿದ್ದಾರೆ. ಹೀಗಾಗಿ ಕೊನೆ ಗಳಿಗೆಯಲ್ಲಿ  ಲಕ್ಷ್ಮಣ ಸವದಿ ಅವರು ಪಕ್ಷಕ್ಕೆ ಬರದಿದ್ದರೆ ಹೇಗೆ ಎಂಬ ಯೋಚನೆ ಕಾಂಗ್ರೆಸ್ ವಲಯದಲ್ಲಿ ಶುರುವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಉಪಚುನಾವಣೆ ರಣಕಣ – ಯಾರ ವಿರುದ್ಧ ಯಾರು ಸ್ಪರ್ಧೆ? ಇಲ್ಲಿದೆ ಪೂರ್ಣ ಪಟ್ಟಿ

    ಈ ಎಲ್ಲ ಬೆಳವಣಿಗೆಯಿಂದಾಗಿ ಲಕ್ಷ್ಮಣ ಸವದಿ ಅವರನ್ನು ಸೆಳೆಯುವ ಯತ್ನವನ್ನು ಕಾಂಗ್ರೆಸ್ ಪಡೆ ಕೈ ಬಿಟ್ಟಿದೆ. ಜೊತೆಗೆ ಅಥಣಿ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಗಜಾನನ ಮನಸೂಳಿ, ಸದಾಶಿವ ಬೂತಾಳಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇದನ್ನೂ ಓದಿ:  ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ತ್ರಿಸದಸ್ಯ ಸಮಿತಿ ರಚನೆ

    ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಪಕ್ಷಕ್ಕೆ ಸೆಳೆಯುವ ತಂತ್ರವನ್ನು ಬೆಳಗಾವಿ ಕಾಂಗ್ರೆಸ್ ನಾಯಕರು ರೂಪಿಸಿದ್ದರು. ಈ ಸಂಬಂಧ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮುಂದೆ ಪ್ರಸಾಪಿಸಿದ್ದರು. ಈ ನಿಟ್ಟಿನಲ್ಲಿ ಲಕ್ಷ್ಮಣ ಸವದಿ ಜೊತೆಗೆ ಮಾತುಕತೆ ನಡೆಸಲು ಬೆಳಗಾವಿ ನಾಯಕರು ಮೆಗಾ ಪ್ಲ್ಯಾನ್ ರೂಪಿಸಿದ್ದರು.

    ಆಪರೇಷನ್ ಹಸ್ತದ ಸುದ್ದಿ ತಿಳಿದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೈ ಅಲರ್ಟ್ ಆಗಿದ್ದರು. ಲಕ್ಷ್ಮಣ ಸವದಿ ಅವರ ಮನವೊಲಿಸಲು ಮುಂದಾಗಿದ್ದ ಸಿಎಂ, ತುರ್ತಾಗಿ ಸವದಿ ಅವರಿಗೆ ಬುಲಾವ್ ಕೊಟ್ಟಿದ್ದರು. ಹೀಗಾಗಿ ಗುರುವಾರ ತಡರಾತ್ರಿ ಧವಳಗಿರಿಯ ಸಿಎಂ ನಿವಾಸದಕ್ಕೆ ಡಿಸಿಎಂ ಬಸರಾಜ್ ಬೊಮ್ಮಾಯಿ ಅವರೊಂದಿಗೆ ಲಕ್ಷ್ಮಣ ಸವದಿ ಆಗಮಿಸಿದ್ದರು. ಮಾತುಕತೆ ಬಳಿಕ ಅಲ್ಲಿಂದ ತೆರಳಿದ್ದ ಲಕ್ಷ್ಮಣ ಸವದಿ ಇಂದು ಕೂಡ ಸಿಎಂ ನಿವಾಸಕ್ಕೆ ಆಗಮಿಸಿದ್ದಾರೆ. ಈ ಮೂಲಕ ರೆಬಲ್ ಲಕ್ಷ್ಮಣ ಸವದಿ ಶಾಂತರಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.

  • ಬಿಎಸ್‍ವೈ ಟಿಕೆಟ್ ಕೊಡಲ್ಲ, ನನ್ನ ದಾರಿ ನನಗೆ: ರಾಜು ಕಾಗೆ

    ಬಿಎಸ್‍ವೈ ಟಿಕೆಟ್ ಕೊಡಲ್ಲ, ನನ್ನ ದಾರಿ ನನಗೆ: ರಾಜು ಕಾಗೆ

    – ಕಾಂಗ್ರೆಸ್ ನಾಯಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ

    ಬೆಳಗಾವಿ(ಚಿಕ್ಕೋಡಿ): ಕಾಗವಾಡ ಮತ್ತು ಅಥಣಿ ಎರಡು ಮತಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಬಿಜೆಪಿಯ ಹಿರಿಯ ಮುಖಂಡ ರಾಜು ಕಾಗೆ ಅವರು ನೇರವಾಗಿಯೇ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿದ್ದಾರೆ. ಸಿಎಂ ಯಡಿಯೂರಪ್ಪನವರು ನನಗೆ ಟಿಕೆಟ್ ಕೊಡುವದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಹೀಗಾಗಿ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದರು.

    ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಬಿಎಸ್‍ವೈ ನನಗೆ ಬಿಜೆಪಿ ಟಿಕೆಟ್ ಕೊಡಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ನನ್ನ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ತೀರ್ಪನ್ನು ಗಮನದಲ್ಲಿಟ್ಟುಕೊಂಡು ನಾನು ಮುಂದುವರಿಯುತ್ತೇನೆ. ಕೋರ್ಟ್ ತೀರ್ಪು ಅನರ್ಹರ ಪರವಾಗಿ ಬಂದರೆ, ನಾನು ಅಥಣಿಗೆ ಹೋಗಿ ಸ್ಪರ್ಧೆ ಮಾಡುತ್ತೇನೆ. ಅವರ ವಿರೋಧವಾಗಿ ಬಂದರೆ ನಾನು ಕಾಗವಾಡದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ರಾಜು ಕಾಗೆ ತಿಳಿಸಿದರು.

    ಡಿಸಿಎಂ ಲಕ್ಷ್ಮಣ ಸವದಿಯವರು ನಿಮಗೆ ಅಥಣಿ ಪ್ರವೇಶಕ್ಕೆ ಅವಕಾಶ ನೀಡ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜು ಕಾಗೆ, ರಾಜಕಾರಣದಲ್ಲಿ ಸ್ನೇಹಿತ, ಅಣ್ಣ, ತಮ್ಮ, ಮಾವ, ಅಳಿಯ ಯಾವುದು ಲೆಕ್ಕಕ್ಕೆ ಬರೋದಿಲ್ಲ. ನನ್ನ ಸ್ವಂತ ಸಹೋದರನೇ ನನ್ನ ವಿರುದ್ಧ ಒಂದು ಬಾರಿ ಚುಣಾವಣೆಯಲ್ಲಿ ಕೆಲಸ ಮಾಡಿದ್ದನು. ಹೀಗಾಗಿ ರಾಜಕಾರಣದಲ್ಲಿ ಯಾವುದೇ ಸಂಬಂಧ ಲೆಕ್ಕಕ್ಕೆ ಬರೋದಿಲ್ಲ. ಹೀಗಾಗಿ ಶ್ರೀಮಂತ ಪಾಟೀಲ್ ಅನರ್ಹರಾದರೆ ಕಾಗವಾಡದಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದರು.