Tag: ATF

  • ವಿಮಾನದ ಇಂಧನಕ್ಕಿಂತಲೂ ದುಬಾರಿ ಆಯ್ತು ಪೆಟ್ರೋಲ್‌ ಬೆಲೆ

    ವಿಮಾನದ ಇಂಧನಕ್ಕಿಂತಲೂ ದುಬಾರಿ ಆಯ್ತು ಪೆಟ್ರೋಲ್‌ ಬೆಲೆ

    ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ದರ ಈಗ ವಿಮಾನಗಳ ಇಂಧನ ದರಕ್ಕಿಂತಲೂ ಹೆಚ್ಚಾಗಿದೆ.

    ಒಂದು ಲೀಟರ್‌ ಏವಿಯೇಷನ್‌ ಟರ್ಬೈನ್‌ ಇಂಧನ (ಎಟಿಎಫ್‌) ಬೆಲೆ 79 ರೂ. ಇದ್ದರೆ, ದೇಶಾದ್ಯಂತ ಪೆಟ್ರೋಲ್‌ ದರ 100ರ ಗಡಿ ದಾಟಿ 110ರ ಅಸುಪಾಸಿನಲ್ಲಿದೆ. ಪೆಟ್ರೋಲ್‌ ದರವು ವೈಮಾ​ನಿಕ ಇಂಧ​ನ​ಕ್ಕಿಂತಲೂ ಶೇ.33ರಷ್ಟು ಹೆಚ್ಚು ದುಬಾ​ರಿಯಾಗಿದೆ.

    ಸೋಮವಾರ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಾಗಿಲ್ಲ. ಭಾನುವಾರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು 35 ಪೈಸೆ ಏರಿಕೆ ಮಾಡಿತ್ತು.  ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅರೆಸ್ಟ್‌, ಬಿಡುಗಡೆ 

    ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 109.53 ರೂ. ಇದ್ದರೆ ಡೀಸೆಲ್‌ ದರ 100.37 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್‌ಗೆ 105.84 ರೂ. ಮತ್ತು ಡೀಸೆಲ್‌ಗೆ 94.57 ರೂ. ಇದೆ. ಮುಂಬೈನಲ್ಲಿ ಪೆಟ್ರೋಲ್‌ 111.77 ರೂ. ಡೀಸೆಲ್‌ 102.52 ರೂ.ಗೆ ಏರಿದೆ.

    ದೇಶ​ದಲ್ಲೇ ಅತಿ ದುಬಾರಿ ದರ ರಾಜಸ್ಥಾನದ ಗಂಗಾನಗರದಲ್ಲಿದೆ. ಇಲ್ಲಿ ಪೆಟ್ರೋಲ್‌ 117.86 ರೂ. ಮತ್ತು ಡೀಸೆಲ್‌ಗೆ 105.95 ರೂ. ಇದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ 7 ವರ್ಷದ ಬಳಿಕ ಭಾರೀ ಏರಿಕೆಯಾಗಿದೆ. ಒಂದು ತಿಂಗಳ ಹಿಂದೆ ಒಂದು ಬ್ಯಾರೆಲ್‌ (158 ಲೀಟರ್‌) ಬ್ರೆಂಟ್‌ ತೈಲದ ಬೆಲೆ 73.51 ಡಾಲರ್‌(5,533 ರೂ.) ಇದ್ದರೆ ಈಗ ಇದು 84.8 ಡಾಲರ್‌ಗೆ 6,329 ರೂ.)  ಏರಿಕೆಯಾಗಿದೆ. ವಿಶ್ವದಲ್ಲಿ ಕೋವಿಡ್‌ ಕಡಿಮೆಯಾಗಿ ಆರ್ಥಿಕ ಚಟುವಟಿಕೆಗಳು ಆರಂಭಗೊಂಡಿದ್ದರೂ ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆ ಹೆಚ್ಚಿಸದ ಪರಿಣಾಮ ಬೇಡಿಕೆ ಜಾಸ್ತಿಯಾಗಿ ಬೆಲೆ ಏರಿಕೆಯಾಗುತ್ತಿದೆ.  ಇದನ್ನೂ ಓದಿ: ಮುದ್ದೆಯಲ್ಲಿ ವಿಷ ಹಾಕಿದ ಬಾಲಕಿ – ತಂದೆ, ತಾಯಿ ಸೇರಿ ನಾಲ್ವರ ಹತ್ಯೆ

    ಒಂದು ಲೀಟರ್‌ ಪೆಟ್ರೋಲ್‌ ಮೇಲೆ 1 ವರ್ಷದ ಹಿಂದೆ 19.98 ರೂ. ಇದ್ದ ಅಬಕಾರಿ ಸುಂಕ 32.90 ರೂ.ಗೆ ಏರಿಕೆಯಾಗಿದೆ. ಡೀಸೆಲ್‌ ಮೇಲಿದ್ದ 15.83 ರೂ. ಅಬಕಾರಿ ಸುಂಕ 31.8 ರೂ.ಗೆ ಹೆಚ್ಚಳವಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಈ ಹಿಂದೆ ತಿಳಿಸಿದ್ದರು.

  • ಪೆಟ್ರೋಲ್‍ಗಿಂತ ವೈಮಾನಿಕ ಇಂಧನ ಬೆಲೆ ಈಗ ಅಗ್ಗ!

    ಪೆಟ್ರೋಲ್‍ಗಿಂತ ವೈಮಾನಿಕ ಇಂಧನ ಬೆಲೆ ಈಗ ಅಗ್ಗ!

    ನವದೆಹಲಿ: ಸಾಧಾರಣವಾಗಿ ವಿಮಾನಗಳಲ್ಲಿ ಬಳಸುವ ಇಂಧನ ದರ ಜಾಸ್ತಿ ಎನ್ನುವ ಅಭಿಪ್ರಾಯವಿದೆ. ಆದರೆ ಈಗ ಪೆಟ್ರೋಲ್ ಬೆಲೆಗೆ ಹೋಲಿಸಿದರೆ ವೈಮಾನಿಕ ಇಂಧನದ ದರ ಕಡಿಮೆಯಿದೆ.

    ಹೌದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ವೈಮಾನಿಕ ಇಂಧನ ದರವನ್ನು ಶೇ.14.7 ರಷ್ಟು ಕಡಿತಗೊಳಿಸಿವೆ.

    9,990 ರೂ. ಕಡಿತಗೊಂಡ ಪರಿಣಾಮ ಒಂದು ಸಾವಿರ ಲೀಟರ್(1 ಕಿಲೋ ಲೀಟರ್) ಏವಿಯೇಷನ್ ಟರ್ಬೈನ್ ಫ್ಯುಯೆಲ್(ಎಟಿಎಫ್) ಬೆಲೆ ಈಗ 58,060.97 ರೂ.ಗೆ ಇಳಿಕೆಯಾಗಿದೆ. ಅಂದರೆ ಒಂದು ಲೀಟರ್ ಗೆ 58.6 ರೂ. ಆಗಿದೆ.

    ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿನಿತ್ಯ ಪರಿಷ್ಕರಿಸುತ್ತಿದ್ದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಮತ್ತು ಡಾಲರ್, ರೂಪಾಯಿ ಮೌಲ್ಯವನ್ನು ಪರಿಗಣಿಸಿ ಪ್ರತಿ ತಿಂಗಳ ಮೊದಲ ದಿನದಂದು ಎಟಿಎಫ್ ಬೆಲೆ ಪರಿಷ್ಕರಿಸಲಾಗುತ್ತದೆ.

    ಡಿಸೆಂಬರ್ 1 ರಂದು ವೈಮಾನಿಕ ಇಂಧನ ದರ ಶೇ.10.9 ರಷ್ಟು ಕಡಿಮೆಯಾದ ಪರಿಣಾಮ ಒಂದು ಕಿಲೋಲೀಟರ್ ಎಟಿಎಫ್ ಬೆಲೆ 8,327.83 ರೂ. ಇಳಿಕೆಯಾಗಿತ್ತು.

    ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 69.21 ರೂ. ಇದ್ದರೆ ಡೀಸೆಲ್ ಬೆಲೆ 63.01 ರೂ. ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv