Tag: atal bihari vajapayee

  • ಅಟಲ್ ಬಿಹಾರಿ ವಾಜಪೇಯಿ ಪುಣ್ಯತಿಥಿ – ಗಣ್ಯರಿಂದ ಗೌರವ ಸಮರ್ಪಣೆ

    ಅಟಲ್ ಬಿಹಾರಿ ವಾಜಪೇಯಿ ಪುಣ್ಯತಿಥಿ – ಗಣ್ಯರಿಂದ ಗೌರವ ಸಮರ್ಪಣೆ

    ನವದೆಹಲಿ: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಪುಣ್ಯತಿಥಿ ಪ್ರಯುಕ್ತ ದೇಶಾದ್ಯಂತ `ಸದೈವ ಅಟಲ್’ (Sadaiv Atal) ಕಾರ್ಯಕ್ರಮದಡಿ ಗೌರವ ಸಲ್ಲಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu), ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ (Amit Shah), ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಸೇರಿದಂತೆ ಹಲವು ಗಣ್ಯರು ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

    ರಾಷ್ಟ್ರಪತಿ ಮುರ್ಮು ಅವರು ದೆಹಲಿಯ `ಸದೈವ ಅಟಲ್’ ಸ್ಮಾರಕಕ್ಕೆ ಭೇಟಿ ನೀಡಿ, ವಾಜಪೇಯಿ ಅವರ ದೂರದೃಷ್ಟಿಯ ಆಡಳಿತ ಮತ್ತು ರಾಷ್ಟ್ರೀಯತೆಗೆ ಮಾಡಿದ ಕೊಡುಗೆಗಳನ್ನು ಸ್ಮರಿಸಿದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್, ದೆಹಲಿ ಸಿಎಂ ರೇಖಾ ಗುಪ್ತಾ ಮತ್ತು ಇತರ ಹಿರಿಯ ನಾಯಕರು, ಅಟಲ್ ಬಿಹಾರಿ ವಾಜಪೇಯಿ ಅವರ ದತ್ತು ಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ ಕೂಡ ವಾಜಪೇಯಿ ಅವರಿಗೆ ಗೌರವ ಸಲ್ಲಿಸಿದರು. ಇದನ್ನೂ ಓದಿ: ಡಿ ಗ್ಯಾಂಗ್‌ಗೆ ಮತ್ತಷ್ಟು ಢವಢವ – ಫಾಸ್ಟ್‌ ಟ್ರ್ಯಾಕ್ ಕೋರ್ಟ್‌ಗೆ ಮನವಿ ಸಲ್ಲಿಸಲು ಪೊಲೀಸರ ತಯಾರಿ

    ಪ್ರಧಾನಿ ಮೋದಿ ಅವರು ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೊಸ್ಟ್ ಮಾಡಿದ್ದು, ವಾಜಪೇಯಿ ಅವರ ಆದರ್ಶಗಳು ಭಾರತದ ಪ್ರಗತಿಯ ದಾರಿದೀಪವಾಗಿವೆ. ಅವರ ನಾಯಕತ್ವದಲ್ಲಿ ದೇಶ ಆರ್ಥಿಕ, ರಕ್ಷಣೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಟ್ಟಿತು ಎಂದು ಹೇಳಿದರು.

    ಗೃಹ ಸಚಿವ ಅಮಿತ್ ಶಾ ಅವರು, ವಾಜಪೇಯಿ ಅವರ ಸರಳತೆ ಮತ್ತು ರಾಷ್ಟ್ರಕ್ಕಾಗಿ ಮಾಡಿದ ಸಮರ್ಪಣೆಯನ್ನು ಕೊಂಡಾಡಿದರು. ಅವರು ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸಿದರು ಎಂದು ತಿಳಿಸಿದರು. ಇದನ್ನೂ ಓದಿ: ಮುಂಬೈನಲ್ಲಿ ಭಾರೀ ಮಳೆಯಿಂದ ಭೂಕುಸಿತ – ಇಬ್ಬರು ಸಾವು, ಇಂದು ರೆಡ್ ಅಲರ್ಟ್ ಘೋಷಣೆ

    ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ವಾಜಪೇಯಿ ಅವರ ಆಡಳಿತದಲ್ಲಿ ದೇಶದ ರಕ್ಷಣಾ ಕ್ಷೇತ್ರದಲ್ಲಿ ಸಾಧಿಸಿದ ಮೈಲಿಗಲ್ಲುಗಳನ್ನು, ವಿಶೇಷವಾಗಿ ಪೋಖ್ರಾನ್ ಪರಮಾಣು ಪರೀಕ್ಷೆಯನ್ನು ನೆನಪಿಸಿಕೊಂಡರು. ಇದನ್ನೂ ಓದಿ: `ಗ್ರೀನ್ ಗರ್ಲ್’ಗೆ ಸಿಕ್ತು ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯ ಸಾಥ್

    ದೇಶದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸೆಮಿನಾರ್‌ಗಳು ಮತ್ತು ಶ್ರದ್ಧಾಂಜಲಿ ಸಭೆಗಳನ್ನು ಆಯೋಜಿಸಲಾಗಿದೆ. ವಾಜಪೇಯಿ ಅವರ ಕವಿತೆಗಳು, ಭಾಷಣಗಳು ಮತ್ತು ರಾಷ್ಟ್ರೀಯ ದೃಷ್ಟಿಕೋನವನ್ನು ಯುವ ಜನತೆಗೆ ತಿಳಿಸುವ ಕಾರ್ಯಕ್ರಮಗಳು ನಡೆಯಲಿದೆ.

    ಈ ಸಂದರ್ಭದಲ್ಲಿ, ವಾಜಪೇಯಿ ಅವರ ಜೀವನ ಮತ್ತು ಸಾಧನೆಗಳನ್ನು ಒಳಗೊಂಡ ಡಾಕ್ಯುಮೆಂಟರಿಗಳು ಮತ್ತು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ದೇಶದೆಲ್ಲೆಡೆ ರಾಜಕೀಯ ನಾಯಕರು, ಕಾರ್ಯಕರ್ತರು ‘ಸದೈವ ಅಟಲ್’ ಸ್ಮಾರಕದಲ್ಲಿ ಗೌರವ ಸಲ್ಲಿಸಿದರು.

  • ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್‌ನಲ್ಲಿ ಪಂಕಜ್ ತ್ರಿಪಾಠಿ

    ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್‌ನಲ್ಲಿ ಪಂಕಜ್ ತ್ರಿಪಾಠಿ

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ಬರಲಿದೆ ಅಂತಾ ಈ ಹಿಂದೆ ಅನೌನ್ಸ್ ಆಗಿತ್ತು. ಅಟಲ್ ಬಿಹಾರಿ ವಾಜಿಪೇಯಿ ಪಾತ್ರದಲ್ಲಿ ಯಾರು ನಟಿಸಬಹುದು ಅಂತಾ ಮೊದಲಿನಿಂದಲೂ ಸಿಕ್ಕಾಪಟ್ಟೆ ಕುತೂಹಲ ಹುಟ್ಟು ಹಾಕಿತ್ತು. ಮಾಜಿ ಪ್ರಧಾನಿಯಾಗಿ ನಟಿಸಲು ಸೂಕ್ತ ನಟ ಸಿಕ್ಕಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರಕ್ಕೆ ಪಂಕಜ್ ತ್ರಿಪಾಠಿ ಅವರನ್ನ ಫೈನಲ್ ಮಾಡಲಾಗಿದೆ.

    ಚಿತ್ರರಂಗದಲ್ಲಿ ಈಗ ಜೀವನಾಧಾರಿತ ಕಥೆ ಸಿನಿಮಾ ರೂಪದಲ್ಲಿ ತರಲು ಹೆಚ್ಚಿನ ಆದ್ಯತೆ ಕೊಡಲಾಗಿದೆ. ಈಗಾಗಲೇ ಕ್ರಿಕೆಟ್, ಹಿರಿಯ ಕಲಾವಿದರ, ರಾಜಕೀಯರಂಗದಲ್ಲಿ ಸಾಧನೆ ಮಾಡಿರುವವರ ಜೀವನ ಚರಿತ್ರೆಯನ್ನ ಸಿನಿಮಾ ಮಾಡಿ, ಸೈ ಎನಿಸಿಕೊಂಡಿದ್ದು ಆಗಿದೆ. ಹೀಗಿರುವಾಗ ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ. ಜತೆಗೆ ಅವರ ಪಾತ್ರಕ್ಕೆ ಜೀವ ತುಂಬಲು ಪ್ರತಿಭಾನ್ವಿತ ನಟನನ್ನೇ ಆಯ್ಕೆ ಮಾಡಿದ್ದಾರೆ. ಇದನ್ನೂ ಓದಿ:ಪೂಲನ್ ದೇವಿ ಬದುಕಿಗೆ ನಿರ್ದೇಶಕ ರಾಜಗುರು ಅವರ ಹೊಸ ಸ್ಪರ್ಶ

    ಅಟಲ್ ಬಿಹಾರಿ ವಾಜಪೇಯಿ ಅವರ ಸಾಧನೆಯನ್ನ ಎಳೆ ಎಳೆಯಾಗಿ ತೆರೆಯ ಮೇಲೆ ತೋರಿಸಲಿದ್ದಾರೆ. ಮಾಜಿ ಪ್ರಧಾನಿ ಅವರ ಬಯೋಪಿಕ್ ಅಂದ ಕೂಡಲೇ ಖುಷಿಯಿಂದ ಈ ಚಿತ್ರಕ್ಕೆ ನಟ ಪಂಕಜ್ ತ್ರಿಪಾಠಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಿನೋದ್ ಭಾನುಶಾಲಿ ನಿರ್ಮಾಣದಲ್ಲಿ ಮೂಡಿ ಬರಲಿರುವ ಈ ಚಿತ್ರ 2023ಕ್ಕೆ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ವಾಜಪೇಯಿಗೆ ಶ್ರದ್ಧಾಂಜಲಿ ಸಲ್ಲಿಸಲು 14 ದಿನದಲ್ಲಿ 6,500 ಕಿ.ಮೀ ಬೈಕ್ ರೈಡ್ ಮಾಡಿದ ವೃದ್ಧ!

    ವಾಜಪೇಯಿಗೆ ಶ್ರದ್ಧಾಂಜಲಿ ಸಲ್ಲಿಸಲು 14 ದಿನದಲ್ಲಿ 6,500 ಕಿ.ಮೀ ಬೈಕ್ ರೈಡ್ ಮಾಡಿದ ವೃದ್ಧ!

    ಹುಬ್ಬಳ್ಳಿ: 65ನೇ ವಯಸ್ಸಿನ ವೃದ್ಧರೊಬ್ಬರು ಬೈಕಿನಲ್ಲೇ ದೇಶದ 6,500 ಕಿ.ಮೀ ಪ್ರದೇಶದಲ್ಲಿ ಸುತ್ತಾಡಿ ಯುವಕರ ಹುಬ್ಬೇರುವಂತೆ ಮಾಡಿದ್ದಾರೆ.

    ಹುಬ್ಬಳ್ಳಿಯ ಶಂಕರ ದೊಡ್ಡಮನಿ ಎಂಬವರು 14 ದಿನಕ್ಕೆ 6,500 ಕಿ.ಮೀ. ಬೈಕ್ ರೈಡ್ ಮಾಡುವ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುವಂತೆ ಮಾಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಾಗೂ ಚತುಷ್ಕೋನ ರಸ್ತೆಯ ಪರ್ಯಟನೆಯ ಉದ್ದೇಶದಿಂದ ಬೈಕ್ ರೈಡ್ ಹಮ್ಮಿಕೊಳ್ಳಲಾಗಿತ್ತು.

    ಡಿಸೆಂಬರ್ 20ರಂದು ಇವರು ತಮ್ಮ ರೈಡ್ ಪ್ರಾರಂಭ ಮಾಡಿದ್ದರು. ಈ ಕಾರ್ಯಕ್ಕೆ ಚೆನ್ನಮ್ಮ ಸರ್ಕಲ್‍ನಲ್ಲಿ ಎಸಿಪಿ ವಿನೋದ್ ಮುಕ್ತೆದಾರ ಚಾಲನೆ ನೀಡಿದ್ದರು. ನಿನ್ನೆಗೆ ಈ ಬೈಕ್ ರೈಡ್ ಮುಕ್ತಾಯಗೊಂಡಿದೆ. ಶಂಕರ ದೊಡ್ಡಮನಿ ಹುಬ್ಬಳ್ಳಿಯಿಂದ ರಾಯಲ್ ಎನ್‍ಫೀಲ್ಡ್ ಬೈಕ್ ಮೂಲಕ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ, ಯುಪಿ, ಬಿಹಾರ, ಝಾರ್ಖಂಡ್, ಪಶ್ಚಿಮಬಂಗಾಳ?, ಕೋಲ್ಕತ್ತಾ, ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು ಹೀಗೆ ದೇಶಾದ್ಯಂತ 14 ದಿನಗಳಲ್ಲಿ 6,500 ಕಿಲೋ ಮೀಟರ್ ಕ್ರಮಿಸಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ನೀಡಿದ ಕೊರೊನಾ ಡೆತ್ ಪರಿಹಾರ ಚೆಕ್‍ನಲ್ಲಿ ಸಮಸ್ಯೆ- ಬ್ಯಾಂಕ್‍ಗೆ ಅಲೆದು ನೊಂದ ಜನರು

    ಇವರ ಈ ಕಾರ್ಯಕ್ಕೆ ಕುಟುಂಬಸ್ಥರು, ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಇಳಿವಯಸ್ಸಿನಲ್ಲೂ ಇಷ್ಟೊಂದು ಉತ್ಸಾಹಭರಿತರಾಗಿರುವ ಇವರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದ್ದು, ಹುಬ್ಬಳ್ಳಿಯ ಜನರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.

  • ವಾಜಪೇಯಿ ಜನ್ಮದಿನಾಚರಣೆ – ಗೋಪಾಲಕನಾಗಿ ಪ್ರತಾಪ್‍ಸಿಂಹ ವಿಶೇಷ ಗೌರವ

    ವಾಜಪೇಯಿ ಜನ್ಮದಿನಾಚರಣೆ – ಗೋಪಾಲಕನಾಗಿ ಪ್ರತಾಪ್‍ಸಿಂಹ ವಿಶೇಷ ಗೌರವ

    – ಸಿದ್ದರಾಮಯ್ಯ ವಿರುದ್ಧ ಕಿಡಿ
    – ಪೊಲೀಸರಲ್ಲಿ ಸಂಸದ ಮನವಿ

    ಮೈಸೂರು: ಇಂದು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಅಜಾತಶ್ರುವಿನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.

    ಮೈಸೂರಿನ ಪಿಂಜರಾಪೋಲ್ ಗೋಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಗೋಶಾಲೆಯಲ್ಲಿ ಸಗಣಿ ಬಾಚಿ ಗೋಪಾಲಕನಾಗಿ ಸೇವೆ ಸಲ್ಲಿಸಿದ್ದಾರೆ. ಗೋಪೂಜೆಗಾಗಿ ತಾನೇ ಹಸುವಿನ ಮೈತೊಳೆದು ಮೇವು ತಿನ್ನಿಸಿ ಆರೈಕೆ ಮಾಡಿ. ಗೋಶಾಲೆಯಲ್ಲಿ ಶ್ರಮದಾನ ಮಾಡುವ ಮೂಲಕ ವಿಭಿನ್ನವಾಗಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಿದ್ದಾರೆ.

    ನಂತರ ಸುದ್ದಿಗಾರರೊಂದಿಗೆ ಮಾತಾನಾಡುತ್ತಾ ಸಿದ್ದರಾಮಯ್ಯನವರ ಕೊಡವರು ಗೋಮಾಂಸ ತಿನ್ನುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ನಿಮ್ಮ ಅಕ್ಕ-ಪಕ್ಕದಲ್ಲಿರುವ ಕೊಡವರು ಯಾರೋ ಗೋಮಾಂಸ ತಿನ್ನಬಹುದು. ಆದರೆ ಆ ಕಾರಣಕ್ಕೆ ಇಡೀ ಕೊಡವರನ್ನು ಗೋಮಾಂಸ ತಿನ್ನುತ್ತಾರೆ ಎಂದರೆ ಹೇಗೆ.? ನೀವು ಗೋಮಾಂಸ ತಿನ್ನುತ್ತೀರಿ ಅಂತ ಇಡೀ ಕುರುಬ ಸಮಾಜ ಬೀಫ್ ತಿನ್ನುತ್ತಾರೆ ಎಂದರೆ ಅದೂ ಸರಿಯೇ ಎಂದು ಸಿದ್ದರಾಮಯ್ಯ ಅವರನ್ನು ಸಂಸದ ಪ್ರತಾಪ್‍ಸಿಂಹ ಪ್ರಶ್ನಿಸಿದರು.

    ಸಿದ್ದರಾಮಯ್ಯ ವಿವೇಚನೆ ಇಲ್ಲದೆ ಯಾಕೇ ಮಾತನಾಡಿದ್ದಾರೆ ಅನ್ನೋದೆ ನನಗೆ ಅರ್ಥ ಆಗುತ್ತಿಲ್ಲ. ಆತ್ಮದ್ರೋಹದ ಮಾತುಗಳನ್ನ ಕಾಂಗ್ರೆಸ್ಸಿನವರು ಮಾತ್ರ ಮಾತನಾಡೋಕೆ ಸಾಧ್ಯ. ಕೊಡವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಮಾಜಿ ಸಿಎಂಗೆ ಸಂಸದ ಎಚ್ಚರಿಕೆ ನೀಡಿದರು.

    ಕೊಡವರು ಗೋಮಾತೆಯನ್ನು ಎರಡನೆ ತಾಯಿಯಾಗಿ ನೋಡುತ್ತಾರೆ. ನಿಮ್ಮ ಹೇಳಿಕೆಯಿಂದ ಕೋಟ್ಯಂತರ ಜನರ ಭಾವನೆಗೆ ಧಕ್ಕೆಯಾಗಿದೆ. ನಿಮ್ಮ ತಪ್ಪಿನ ಅರಿವಾಗಿ ಅದನ್ನ ತಪ್ಪಾಗಿ ಅರ್ಥೈಸಲಾಗಿದೆ ಅಂತ ಹೇಳಿದ್ದೀರಾ. ಆದರೆ ಇನ್ನು ಮುಂದೆ ಕೊಡವರಿಗೆ ನೋವಾಗುವಂತೆ ಮಾತನಾಡಬೇಡಿ ಎಂದರು.

    ಕೊರೊನಾ ಮತ್ತು ಮಾಸ್ಕ್ ವಿಚಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಸಂಸದರು, ಜನರನ್ನು ಇನ್ನೆಷ್ಟು ದಿನ ಮನೆಯಲ್ಲಿ ಕೂರಿಸಲು ಸಾಧ್ಯ. ಕಳೆದ ಮಾರ್ಚ್‍ನಿಂದಲೂ ಜನರು ನಿರ್ಬಂಧದ ವ್ಯವಸ್ಥೆಯಲ್ಲೆ ಇದ್ದಾರೆ. ಇನ್ನಾದರೂ ಜನರನ್ನು ಓಡಾಡಲು ಬಿಡಿ. ಮಾಸ್ಕ್ ಹೆಸರಿನಲ್ಲಿ ಜನರಿಗೆ ಕಾರು, ಬೈಕ್ ನಿಲ್ಲಿಸಿ ಅನಗತ್ಯ ತೊಂದರೆ ಕೊಡಬೇಡಿ ಎಂದು ಪೊಲೀಸರೊಂದಿಗೆ ಮನವಿ ಮಾಡಿಕೊಂಡರು.

    ನಾನು ದೆಹಲಿ ಸೇರಿದಂತೆ ಹಲವು ಪ್ರದೇಶಗಳಿಗೆ ಹೋಗಿ ಬಂದಿದ್ದೇನೆ. ಎಲ್ಲ ಕಡೆ ಕೊರೊನಾ ರೂಪಾಂತರದ ಬಗ್ಗೆ ಚರ್ಚೆ ಇದೆ. ಆದರೆ ಜನರನ್ನು ಹೆಚ್ಚು ದಿನ ನಿರ್ಬಂಧ ಮಾಡೋಕೆ ಸಾಧ್ಯವಿಲ್ಲ. ಹಾಗಾಗಿ ಉದ್ಯಮ ಹಾಗೂ ಅವರ ದೈನಂದಿನ ಚಟುವಟಿಕೆಗಳಿಗೆ ಅವಕಾಶ ಕೊಡಬೇಕು. ಮಾಸ್ಕ್ ಕಡ್ಡಾಯ ಮಾಡಲಿ ಎಂದು ಪ್ರತಾಪ್ ಸಿಂಹ ಹೇಳಿದರು.

  • ಇಂದು ಅಜಾತಶತ್ರು ವಾಜಪೇಯಿ ಹುಟ್ಟುಹಬ್ಬ- ಸಮಾಧಿಗೆ ಗಣ್ಯರಿಂದ ನಮನ

    ಇಂದು ಅಜಾತಶತ್ರು ವಾಜಪೇಯಿ ಹುಟ್ಟುಹಬ್ಬ- ಸಮಾಧಿಗೆ ಗಣ್ಯರಿಂದ ನಮನ

    ನವದೆಹಲಿ: ಇಂದು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 96 ನೇ ಜನ್ಮದಿನಾಚರಣೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಸೇರಿದಂತೆ ಗಣ್ಯರು ವಾಜಪೇಯಿ ಅವರಿಗೆ ಗೌರವ ಸಲ್ಲಿಸಿದರು.

    ದೆಹಲಿಯ ರಾಷ್ಟ್ರೀಯ ಸ್ಮøತಿ ಸ್ಥಳದ ಬಳಿ ನಿರ್ಮಾಣ ಮಾಡಿರುವ ಸದೈವ್ ಅಟಲ್ ಸ್ಮಾರಕಕ್ಕೆ ಮೋದಿ ಸಹಿತ ಗಣ್ಯರು ತೆರಳಿ ವಾಜಪೇಯಿ ಸಮಾಧಿಗೆ ಪೂಜೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ವಾಜಪೇಯಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ರೈತರ ದಿನಾಚರಣೆಯನನು ಹಮ್ಮಿಕೊಂಡಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 12 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ಕರ್ನಾಟಕದ 58 ಲಕ್ಷ ರೈತರು ಸೇರಿದಂತೆ ದೇಶದ 9.50 ಕೋಟಿ ರೈತರ ಬ್ಯಾಂಕ್ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ತಲಾ 2000 ರೂ, ಆನ್‍ಲೈನ್ ಮೂಲಕ ಜಮಾ ಮಾಡಲಿದ್ದಾರೆ.

    ದೀರ್ಘಕಾಲದ ಅನಾರೋಗ್ಯಂದಿಂದ ಬಳಲುತ್ತಿದ್ದ ವಾಜಪೇಯಿ ಅವರು 2018ರ ಆಗಸ್ಟ್ 16ರಂದು ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದರು.

  • ಅಟಲ್ ಸುರಂಗ ಮಾರ್ಗ ಲೋಕಾರ್ಪಣೆ ಮಾಡಿದ್ರು ಪ್ರಧಾನಿ ಮೋದಿ

    ಅಟಲ್ ಸುರಂಗ ಮಾರ್ಗ ಲೋಕಾರ್ಪಣೆ ಮಾಡಿದ್ರು ಪ್ರಧಾನಿ ಮೋದಿ

    ಶಿಮ್ಲಾ: ವಿಶ್ವದ ಅತೀ ಎತ್ತರ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ 9.2 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ.

    ಇಂದು ಬೆಳಗ್ಗೆ ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಯವರು, ಬೆಳಗ್ಗೆ 10.15ರ ಸುಮಾರಿಗೆ ಹಿಮಾಚಲಪ್ರದೇಶದ ರೋಹ್ಟಂಗ್ ನಲ್ಲಿರುವ ಸುರಂಗ ಮಾರ್ಗವನ್ನು ಉದ್ಘಾಟನೆ ಮಾಡಿದರು. ಪ್ರಧಾನಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತಿತರ ಗಣ್ಯರು ಈ ವೇಳೆ ಸಾಥ್ ನೀಡಿದರು. ಮನಾಲಿ- ಲೇಹ್ ನಡುವೆ ಈ ಸುರಂಗ ಮಾರ್ಗ ಇದಾಗಿದ್ದು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೊರೊನಾ ಮುನ್ನೆಚ್ಚರಿಕೆಯಾಗಿ ವೇದಿಕೆಯ ಸುತ್ತಮುತ್ತ ಸ್ಯಾನಿಟೈಸ್ ಮಾಡಲಾಗಿತ್ತು. ಅಲ್ಲದೆ ಸ್ಥಳದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

    ಮನಾಲಿಯ ದಕ್ಷಿಣ ತುದಿಯಲ್ಲಿರುವ ಈ ಅಟಲ್ ಸುರಂಗ ಹೆದ್ದಾರಿಯೂ ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿ ಮಾರ್ಗವಾಗಿದ್ದು, 9.02 ಕಿ.ಮೀ ಉದ್ದದ ಈ ಸುರಂಗ ಮನಾಲಿಯಿಂದ ಲಹೌಲ್ ಸ್ಪಿತಿ ಕಣಿಯನ್ನು ವರ್ಷವಿಡೀ ಸಂಪರ್ಕಿಸಲಿದೆ. ಇದಕ್ಕೂ ಮುನ್ನ ಭಾರೀ ಹಿಮಪಾತದ ಕಾರಣ 6 ತಿಂಗಳುಗಳ ಕಾಲ ಮಾತ್ರ ಕಣಿವೆಯ ಸಂಪರ್ಕ ಕಡಿತವಾಗುತ್ತಿತ್ತು. ಈ ಸುರಂಗ ಮಾರ್ಗವು ಮನಾಲಿ ಮತ್ತು ಲೆಹ್ ನಡುವಿನ ಅಂತರವನ್ನು 46 ಕಿ.ಮೀ. ತಗ್ಗಿಸಲಿದ್ದು, 4ರಿಂದ 5 ಗಂಟೆಗಳ ಸಮಯ ಉಳಿತಾಯವಾಗಲಿದೆ.

    ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಅತ್ಯಾಧುನಿಕ ವಿಶೇಷಣ (ಅಲ್ಟ್ರಾ ಮಾಡರ್ನ್ ಸ್ಪೆಸಿಫಿಕೇಷನ್ಸ್) ಗಳೊಂದಿಗೆ ನಿರ್ಮಿಸಲಾಗಿದ್ದು, ಇದನ್ನು ಸಮುದ್ರ ಮಟ್ಟದಿಂದ ಸರಾಸರಿ 3,000 ಮೀಟರ್ (10,000 ಅಡಿ) ಎತ್ತರದಲ್ಲಿ ನಿರ್ಮಿಸಲಾಗಿದೆ. ಅಟಲ್ ಸುರಂಗದ ದಕ್ಷಿಣ ಭಾಗದಲ್ಲಿ ಮನಾಲಿಯಿಂದ 25 ಕಿ.ಮೀ. ದೂರದಲ್ಲಿ, 3,060 ಮೀಟರ್ ಎತ್ತರದಲ್ಲಿದೆ. ಉತ್ತರದ ಭಾಗದ ಸುರಂಗವು ಲಹೌಲ್ ಕಣಿವೆಯ ಸಿಸ್ಸು, ತೆಲಿಂಗ್ ಗ್ರಾಮದ ಬಳಿಯಿದ್ದು, 3,071 ಮೀಟರ್ ಎತ್ತರದಲ್ಲಿದೆ. ಇದು ಕುದುರೆಯ ಲಾಳದ ಆಕಾರದಲ್ಲಿರುವ, ದ್ವಿಪಥ ಮಾರ್ಗದ ಸುರಂಗವಾಗಿದ್ದು, 8 ಮೀಟರ್ ರಸ್ತೆ ಮಾರ್ಗವನ್ನು ಒಳಗೊಂಡಿದೆ.

    ಸುರಂಗದಲ್ಲಿ 5.525 ಮೀಟರ್ ಎತ್ತರದವರೆಗಿನ ವಾಹನಗಳ ಓಡಾಟಕ್ಕೆ ಅವಕಾಶವಿದೆ. ಸುರಂಗ 10.5 ಮೀಟರ್ ಅಗಲವಿದ್ದು, ಮುಖ್ಯ ಸುರಂಗದಲ್ಲಿ 3.6 x 2.25 ಮೀಟರ್ ಅಗ್ನಿನಿರೋಧಕ ತುರ್ತು ನಿರ್ಗಮನದ ಸುರಂಗವನ್ನೂ ಒಳಗೊಂಡಿದೆ. ಈ ಮಾರ್ಗದಲ್ಲಿ ನಿತ್ಯ 3,000 ಕಾರುಗಳು ಮತ್ತು 1,500 ಟ್ರಕ್ ಗಳು ಗರಿಷ್ಠ ಗಂಟೆಗೆ 80 ಕಿ.ಮೀ. ವೇಗದಲ್ಲಿ ಸಂಚಾರ ನಡೆಸಲು ಅವಕಾಶವಿರುವಂತೆ ನಿರ್ಮಾಣ ಮಾಡಲಾಗಿದೆ.

    ಸುರಂಗ ಮಾರ್ಗವೂ ಸುಸಜ್ಜಿತ ಎಲೆಕ್ಟ್ರೋ ಮೆಕ್ಯಾನಿಕಲ್ ವ್ಯವಸ್ಥೆ ಹೊಂದಿದ್ದು, ಇದರಲ್ಲಿ ಸೆಮಿ ಟ್ರಾನ್ಸ್ ವರ್ಸ್ ವಾತಾಯಣ ವ್ಯವಸ್ಥೆ, ಎಸ್.ಸಿ.ಎ.ಡಿ.ಎ. ನಿಯಂತ್ರಿತ ಅಗ್ನಿಶಾಮಕ ಹೋರಾಟ ವ್ಯವಸ್ಥೆ, ಪ್ರಕಾಶಮಾನ ಬೆಳಕು ಮತ್ತು ಸಿಸಿಟಿವಿ ನಿಗಾ ವ್ಯವಸ್ಥೆಯೂ ಸೇರಿದೆ.

    ಅಟಲ್ ಸುರಂಗ ವೈಶಿಷ್ಟ್ಯಗಳು:
    ಸುರಂಗದ ಎರಡೂ ಬದಿಗಳಲ್ಲಿ ಪ್ರವೇಶ ನಿರ್ಬಂಧ. ತುರ್ತು ಸಂವಹನಕ್ಕಾಗಿ ಪ್ರತಿ 150 ಮೀಟರಿಗೊಂದರಂತೆ ದೂರವಾಣಿ ಸಂಪರ್ಕ ಸೇವೆ. ಪ್ರತಿ 60 ಮೀಟರಿಗೊಂದರಂತೆ ಅಗ್ನಿಶಾಮಕ ವ್ಯವಸ್ಥೆ. ಪ್ರತಿ 250 ಮೀಟರ್ ಗೆ ಒಂದರಂತೆ ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಘಟನೆಯ ಸ್ವಯಂ ಪತ್ತೆ ವ್ಯವಸ್ಥೆ. ಪ್ರತಿ 1 ಕಿ.ಮೀನಲ್ಲಿ ವಾಯು ಗುಣಮಟ್ಟದ ನಿಗಾ. ಪ್ರತಿ 25 ಮೀಟರ್ ನಲ್ಲಿ ಸ್ಥಳಾಂತರಿಸಬಹುದಾದ ದೀಪ/ನಿರ್ಗಮನ ಚಿಹ್ನೆಗಳು. ಸುರಂಗದುದ್ದಕ್ಕೂ ಬೆಳಕಿನ ವ್ಯವಸ್ಥೆ. ಪ್ರತಿ 50 ಮೀಟರ್ ನಲ್ಲಿ ಫೈರ್ ರೇಟೆಡ್ ಡ್ಯಾಂಪರ್ ಗಳು. ಪ್ರತಿ 60 ಮೀಟರ್ ಗೆ ಒಂದು ಕ್ಯಾಮೆರಾ ಹೊಂದಿದೆ.

    2000ರ ಜೂನ್ 03 ರಂದು ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಸುರಂಗ ಮಾರ್ಗ ನಿರ್ಮಿಸುವ ಯೋಜನೆ ಮಾಡಲಾಗಿತ್ತು. ಇದರಂತೆ 2002ರ ಮೇ 26ರಂದು ಸುರಂಗದ ದಕ್ಷಿಣ ಭಾಗದ ಪ್ರವೇಶ ರಸ್ತೆಗೆ ಅಡಿಪಾಯ ಹಾಕಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ 2019ರ ಡಿಸೆಂಬರ್ 24ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರೋಹ್ಟಂಗ್ ಸುರಂಗಕ್ಕೆ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಹೆಸರು ನೀಡಿ ಅವರಿಗೆ ಗೌರವ ಸಲ್ಲಿಸಲು ನಿರ್ಧರಿಸಲಾಯಿತು.

  • ವಾಜಪೇಯಿ ಪುಣ್ಯಸ್ಮರಣೆ – ಪ್ರಧಾನಿ ಮೋದಿ ಶ್ರದ್ಧಾಂಜಲಿ

    ವಾಜಪೇಯಿ ಪುಣ್ಯಸ್ಮರಣೆ – ಪ್ರಧಾನಿ ಮೋದಿ ಶ್ರದ್ಧಾಂಜಲಿ

    ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಎರಡನೇ ಪುಣ್ಯಸ್ಮರಣೆ ದಿನವಾದ ಇಂದು ಪಿಎಂ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಟ್ವಿಟ್ಟರ್ ನಲ್ಲಿ ವಿಶೇಷ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

    ಪ್ರೀತಿಯ ಅಟಲ್ ಜೀ ಪುಣ್ಯಸ್ಮರಣೆಯ ದಿನವಾದ ಇಂದು ನನ್ನ ಶ್ರದ್ಧಾಂಜಲಿ. ಭಾರತ ನಿಮ್ಮ ಉತ್ಕøಷ್ಟ ಸೇವೆ ಮತ್ತು ರಾಷ್ಟ್ರ ಪ್ರಗತಿಗಾಗಿ ನಿಮ್ಮ ಪ್ರಯತ್ನವನ್ನ ಮರೆಯುವುದಿಲ್ಲ ಎಂದು ಬರೆದು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. ಮೊದಲಿಗೆ ಅಟಲ್ ಅವರ ‘ಕಾಲ್ ಕೆ ಕಪಾಲ್ ಪರ್ ಕಲಿಖ್ತಾ ಹೂಂ ಮಿಟ್ತಾ ಹೂಂ’ ಕವಿತೆಯ ಸಾಲುಗಳು ಕೇಳಿಸುತ್ತದೆ. ನಂತರ ಪ್ರಧಾನಿ ಮೋದಿಯವರ ಧ್ವನಿ ಆರಂಭವಾಗುತ್ತದೆ. ಈ ದೇಶ ಅಟಲ್ ಜೀಯವರ ಯೋಗದಾನ ಎಂದಿಗೂ ಮರೆಯಲ್ಲ. ಅವರ ನೇತೃತ್ವದಲ್ಲಿ ಪರಮಾಣು ಶಕ್ತಿಯಲ್ಲಿ ದೇಶ ಉಚ್ಛ ಸ್ಥಾನದಲ್ಲಿದೆ. ಪಕ್ಷದ ನಾಯಕ, ಸಂಸದ, ಮಂತ್ರಿ/ ಪ್ರಧಾನ ಮಂತ್ರಿ ಹೀಗೆ ಪ್ರತಿಯೊಂದು ವಿಷಯದಲ್ಲಿ ಅಟಲ್ ಜೀ ಪ್ರತ್ಯೇಕವಾಗಿ ನಿಲ್ಲುತ್ತಾರೆ ಎಂದು ಹೇಳಲಾಗಿದೆ.

    ಎರಡನೇಯ ಪುಣ್ಯಸ್ಮರಣೆ ದಿನವಾದ ಇಂದು ವಾಜಪೇಯಿಯ ಅವರ ಸಮಾಧಿ ಸ್ಥಳ ‘ಸೈದವ ಅಟಲ್’ಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಮಾನಾಥ್ ಕೋವಿಂಡ್ ಮತ್ತು ಮಾಜಿ ಪ್ರಧಾನಿಗಳು ಸೇರಿದಂತೆ ಹಲವು ಮುಖಂಡರು ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.

  • ನನ್ನ ತಂದಯನ್ನೇ ಕಳೆದುಕೊಂಡಂತಾಗಿದೆ: ಅಟಲ್ ಜಿ ಅಗಲಿಕೆಯಿಂದ ಭಾವುಕರಾದ ಲತಾ ಮಂಗೇಶ್ಕರ್

    ನನ್ನ ತಂದಯನ್ನೇ ಕಳೆದುಕೊಂಡಂತಾಗಿದೆ: ಅಟಲ್ ಜಿ ಅಗಲಿಕೆಯಿಂದ ಭಾವುಕರಾದ ಲತಾ ಮಂಗೇಶ್ಕರ್

    ಮುಂಬೈ: ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಅಗಲಿಕೆಯಿಂದ ನನ್ನ ತಂದೆಯನ್ನೇ ಕಳೆದುಕೊಂಡಂತಾಗಿದೆ ಎಂದು ಖ್ಯಾತ ಹಿನ್ನೆಲೆ ಗಾಯಕಿ ಹಾಗೂ ಭಾರತದ ನೈಟಿಂಗೇಲ್ ಎಂದೇ ಹೆಸರು ಪಡೆದಿರುವ ಲತಾ ಮಂಗೇಶ್ಕರ್ ತಿಳಿಸಿದ್ದಾರೆ.

    ಅಟಲ್ ಜಿಯವರ ಅಗಲಿಕೆಗೆ ಕಂಬನಿ ಮಿಡಿದ ಅವರು, ಅವರೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ. ಅಟಲ್ ಜೀಯವರು ನನ್ನನ್ನು ಯಾವಾಗಲೂ ಭೇಟಿ ಎಂದೇ ಕರೆಯುತ್ತಿದ್ದರು. ನಾನೂ ಕೂಡ ಅವರನ್ನು ದಾದಾ ಎಂದೇ ಕರೆಯುತ್ತಿದ್ದೆ. ಅವರ ಅಗಲಿಕೆಯಿಂದ ನನ್ನ ತಂದೆಯನ್ನೇ ಮತ್ತೊಮ್ಮೆ ಕಳೆದುಕೊಂಡ ರೀತಿ ನನಗೆ ನೋವುಂಟಾಗಿದೆ ಎಂದು ಭಾವುಕರಾದ್ರು.

    ನಮ್ಮ ತಂದೆ ಪಂಡಿತ್ ದಿನನಾಥ್ ಮಂಗೇಶ್ಕರ್ ರೊಂದಿಗೆ ಅವರು ಹೆಚ್ಚಿನ ಒಡನಾಟವನ್ನು ಹೊಂದಿದ್ದರು. ಅಟಲ್ ಜಿ ನಮ್ಮ ಮನೆಗೆ ಹಲವು ಬಾರಿ ಬಂದಿದ್ದರು. ಆವಾಗಿನಿಂದಲೂ ನಾನು ಅವರಿಗೆ ಹೆಚ್ಚು ಹತ್ತಿರದಲ್ಲಿದ್ದೆನೆ. ಪೂಣೆಯಲ್ಲಿ ದಿನನಾತ್ ಮಂಗೇಶ್ವರ್ ಹೆಸರಿನಲ್ಲಿ ನಿರ್ಮಿಸಿದ್ದ ಆಸ್ಪತ್ರೆಯನ್ನು ಉದ್ಘಾಟನೆಗೆ ಕರೆದಾಗ ಅವರು ಆತ್ಮೀಯವಾಗಿ ಬಂದು ಉದ್ಘಾಟನೆಯನ್ನು ನೆರವೇರಿಸಿದ್ದರು.

    2014 ರಲ್ಲಿ ಅವರು ಬರೆದ ಎಲ್ಲಾ ಕವಿತೆಗಳನ್ನು ಅಂತರ್ನಾದ್ ಎಂಬ ಶೀರ್ಷಿಕೆಯಲ್ಲಿ ಸಂಗೀತದ ಆಲ್ಬಂ ಆಗಿ ಸಿದ್ಧಪಡಿಸಿದ್ದೆವು. ಅದನ್ನು ನವದೆಹಲಿಯಲ್ಲಿರುವ ಅವರ ಮನೆಯಲ್ಲಿ ಬಿಡುಗಡೆ ಮಾಡಿದ್ದೆವು. ಅದಕ್ಕೆ ಅವರು ಅಪಾರ ಸಂತೋಷವನ್ನು ವ್ಯಕ್ತಪಡಿಸಿದ್ದರು ಎಂದು ಅಟಲ್‍ಜಿ ಯವರ ಒಡನಾಟವನ್ನು ನೆನಪಿಸಿಕೊಂಡರು.

    ದೇಶ ಭಾರತ ರತ್ನಕ್ಕಿಂತಲೂ ಹೆಚ್ಚಿರುವ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡು ದುಃಖ ಸಾಗರದಲ್ಲಿ ಮುಳುಗಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿವಾಸಕ್ಕೆ ವಿಶೇಷ ಭದ್ರತೆ

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿವಾಸಕ್ಕೆ ವಿಶೇಷ ಭದ್ರತೆ

    – ಸಂಜೆ ಮತ್ತೊಂದು ಹೆಲ್ತ್ ಬುಲೆಟಿನ್

    ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಮತ್ತಷ್ಟು ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ವಿಶೇಷ ಭದ್ರತಾ ತಂಡ ನಿಯೋಜನೆ ಮಾಡಲಾಗಿದೆ.

    ವಾಜಪೇಯಿ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಬುಧವಾರ ಅವರ ಸ್ಥಿತಿ ಹೇಗಿತ್ತೋ ಹಾಗಿಯೇ ಇಂದು ಕೂಡ ಮುಂದುವರಿದಿದೆ ಅಂತ ಏಮ್ಸ್ ಆಸ್ಪತ್ರೆ ಈಗಾಗಲೇ ತಿಳಿಸಿದ್ದು, ಇಂದು ಸಂಜೆ ಮತ್ತೊಂದು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

    ಮಧ್ಯಪ್ರದೇಶದಲ್ಲಿ ನಡೆಯುವ ಬಿಜೆಪಿಯ ಎಲ್ಲಾ ಚುನಾವಣಾ ಯಾತ್ರೆಗಳನ್ನು ರದ್ದು ಮಾಡಲಾಗಿದೆ. ಅಲ್ಲದೇ ಇಂದಿನ ಎಲ್ಲಾ ಬಿಜೆಪಿ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ಪ್ರಧಾನಿ ಕಾರ್ಯಾಲಯ ಈಗಾಗಲೇ ಪ್ರಕರಟಣೆ ಹೊರಡಿಸಿದೆ.

    ಗ್ವಾಲಿಯರ್ ಮತ್ತು ಆಗ್ರಾದಲ್ಲಿರುವ ವಾಜಪೇಯಿ ಸಂಬಂಧಿಕರು ಶೀಘ್ರವೇ ಆಸ್ಪತ್ರೆಗೆ ಬರುವಂತೆ ಏಮ್ಸ್ ಸೂಚನೆ ನೀಡಿದೆ. ಈಗಾಗಲೇ ಆಸ್ಪತ್ರೆಗೆ ಆರೋಗ್ಯ ಸಚಿವ ಜೆ.ಪಿ ನಡ್ವಾ, ಎಲ್ ಕೆ ಅಡ್ವಾಣಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಅಮಿತ್ ಶಾ, ರಾಹುಲ್ ಗಾಂಧಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಆಸ್ಪತ್ರೆಯಲ್ಲಿ ವಾಜಪೇಯಿ ಕುಟುಂಬಸ್ಥರು ಈಗಾಗಲೇ ಜಮಾಯಿಸಿದ್ದು, ಕಣ್ಣೀರು ಹಾಕುತ್ತಿದ್ದಾರೆ.

    ಆಸ್ಪತ್ರೆ ಬಳಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಬಿಜೆಪಿ ನಾಯಕರ ದಂಡೇ ಆಸ್ಪತ್ರೆಗೆ ಹರಿದುಬರುತ್ತಿದೆ. ಮಧುಮೇಹ, ಮೂತ್ರದ ಸೋಂಕು ಸೇರಿ ವಿವಿಧ ರೀತಿಯ ಅನಾರೋಗ್ಯದ ಕಾರಣ ಕಳೆದ ಜೂನ್ 11ರಂದು ವಾಜಪೇಯಿ ಏಮ್ಸ್ ಗೆ ದಾಖಲಾಗಿದ್ದರು. ವಾಜಪೇಯಿ ಆರೋಗ್ಯ ಇನ್ನಷ್ಟು ಕ್ಷೀಣಿಸಿದ್ದು, ಆಮ್ಲಜನಕದ ಬೆಂಬಲ ನೀಡಲಾಗುತ್ತಿದೆ ಎಂದು ಬುಧವಾರ ಏಮ್ಸ್ ಆಸ್ಪತ್ರೆ ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಮಾಜಿ ಪ್ರಧಾನಿ ಆರೋಗ್ಯ ಮತ್ತಷ್ಟು ಗಂಭೀರ- ಆಸ್ಪತ್ರೆಗೆ ಬರುವಂತೆ ಸಂಬಂಧಿಕರಿಗೆ ಬುಲಾವ್

    ಮಾಜಿ ಪ್ರಧಾನಿ ಆರೋಗ್ಯ ಮತ್ತಷ್ಟು ಗಂಭೀರ- ಆಸ್ಪತ್ರೆಗೆ ಬರುವಂತೆ ಸಂಬಂಧಿಕರಿಗೆ ಬುಲಾವ್

    ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಇಂದು ಮತ್ತಷ್ಟು ಗಂಭೀರವಾಗಿದ್ದು, ಸಂಬಂಧಿಕರು ಬುರುವಂತೆ ಆಸ್ಪತ್ರೆಯಿಂದ ಬುಲಾವ್ ನೀಡಲಾಗಿದೆ.

    ಈಗಾಗಲೇ ಆಸ್ಪತ್ರೆಗೆ ಎಲ್ ಕೆ ಅಡ್ವಾಣಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಅಮಿತ್ ಶಾ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಆಸ್ಪತ್ರೆಯಲ್ಲಿ ವಾಜಪೇಯಿ ಕುಟುಂಬಸ್ಥರು ಈಗಾಗಲೇ ಜಮಾಯಿಸಿದ್ದು, ಕಣ್ಣೀರು ಹಾಕುತ್ತಿದ್ದಾರೆ. ಆಸ್ಪತ್ರೆ ಬಳಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದೆ. ಆರೋಗ್ಯ ಸಚಿವ ಜೆ.ಪಿ ನಡ್ವಾ ಭೇಟಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಕೂಡ ಭೇಟಿ ನೀಡಿ ಆರೋಗ್ಯ ವಿಚಾರಿಸಲಿದ್ದಾರೆ.

    ಇಂದು ದೇಶಾದ್ಯಂತ ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಪ್ರಧಾನಿ ಕಾರ್ಯಾಲಯ ಪ್ರಕಟಣೆ ಹೊರಡಿಸಿದೆ.

    ಮಧುಮೇಹ, ಮೂತ್ರದ ಸೋಂಕು ಸೇರಿ ವಿವಿಧ ರೀತಿಯ ಅನಾರೋಗ್ಯದ ಕಾರಣ ಕಳೆದ ಜೂನ್ 11ರಂದು ವಾಜಪೇಯಿ ಏಮ್ಸ್ ಗೆ ದಾಖಲಾಗಿದ್ದರು. ವಾಜಪೇಯಿ ಆರೋಗ್ಯ ಇನ್ನಷ್ಟು ಕ್ಷೀಣಿಸಿದ್ದು, ಆಮ್ಲಜನಕದ ಬೆಂಬಲ ನೀಡಲಾಗುತ್ತಿದೆ ಎಂದು ಬುಧವಾರ ಏಮ್ಸ್ ಆಸ್ಪತ್ರೆ ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv