Tag: Asus

  • ಹುಬ್ಬಳ್ಳಿ, ಧಾರವಾಡದಲ್ಲಿ 5000 ಕೋಟಿ ಬಂಡವಾಳ ಹೂಡಿಕೆ – 20 ಸಾವಿರ ಉದ್ಯೋಗ ಸೃಷ್ಟಿ

    ಹುಬ್ಬಳ್ಳಿ, ಧಾರವಾಡದಲ್ಲಿ 5000 ಕೋಟಿ ಬಂಡವಾಳ ಹೂಡಿಕೆ – 20 ಸಾವಿರ ಉದ್ಯೋಗ ಸೃಷ್ಟಿ

    – 12 ಕೈಗಾರಿಕೆ ಸ್ಥಾಪನೆಗೆ ಹಣಕಾಸು ಇಲಾಖೆ ಅನುಮತಿ
    – ಸುದ್ದಿಗೋಷ್ಠಿ ನಡೆಸಿ ಸಚಿವ ಶೆಟ್ಟರ್ ವಿವರಣೆ

    ಹುಬ್ಬಳ್ಳಿ: ಧಾರವಾಡ – ಹುಬ್ಬಳ್ಳಿ ಮಹಾನಗರದಲ್ಲಿ ಏಕಸ್ ಹಾಗೂ ಯುಫ್ಲೇಕ್ಸ್ ಕಂಪನಿಗಳ ಸ್ಥಾಪನೆಗೆ ಹಣಕಾಸು ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯ ಸರ್ಕಾರ ಸಂಪೂರ್ಣ ಅನುಮತಿ ನೀಡಿದೆ. ಯೋಜನೆಗಳ ಸ್ಥಾಪನೆಗೆ ಅಗತ್ಯವಾದ ಭೂಮಿಯನ್ನು ಶೀಘ್ರವಾಗಿ ಕಂಪನಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ನೂತನ ಕೈಗಾರಿಕೆಗಳ ಸ್ಥಾಪನೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಸಚಿವ ಸಂಪುಟ ಉಪ ಸಮಿತಿಯಲ್ಲಿ ನೂತನ ಕೈಗಾರಿಕೆಗಳ ಸ್ಥಾಪನೆಯ ಕುರಿತು ಸುದೀರ್ಘ ಚರ್ಚೆ ನಡೆಸಿ ಅನುಮತಿ ನೀಡಲಾಗಿತ್ತು. ಜನವರಿ 12 ರಂದು ಕೈಗಾರಿಕೆಗಳ ಸ್ಥಾಪನೆಗೆ ಹಣಕಾಸು ಇಲಾಖೆಯ ಅನುಮತಿ ಲಭಿಸಿದ್ದು, ಶೀಘ್ರವಾಗಿ ಕಂಪನಿಗಳಿಗೆ ಅನುಮೋದನೆ ಪ್ರಮಾಣ ಪತ್ರಗಳನ್ನು ಸಹ ನೀಡಲಾಗುವುದು ಎಂದರು.

    20 ಸಾವಿರ ಉದ್ಯೋಗ ಸೃಷ್ಟಿ
    ಏಕಸ್ ಕಂಪನಿ 3524 ಕೋಟಿ ಬಂಡವಾಳ ಹೂಡಿಕೆಗೆ ಮುಂದೆ ಬಂದಿದೆ. ರಾಜ್ಯ ಸರ್ಕಾರದಿಂದ 358 ಎಕರೆ ಜಮೀನನ್ನು ಇಟಗಟ್ಟಿ ಹಾಗೂ ಗಾಮಗಟ್ಟಿ ಕೈಗಾರಿಕಾ ವಸಹಾತುಗಳಲ್ಲಿ ಕಂಪನಿಗೆ ಮಂಜೂರು ಮಾಡಲಾಗಿದೆ. ಮುಖ್ಯವಾಗಿ ದಿನನಿತ್ಯ ಉಪಯೋಗಿಸುವ ಗ್ರಾಹಕ ವಸ್ತುಗಳ ತಯಾರಿಕಾ ಘಟವನ್ನು ಕಂಪನಿ ಸ್ಥಾಪನೆ ಮಾಡಲಿದೆ. ಇದರಿಂದ ಉತ್ತರ ಕರ್ನಾಟಕ ಭಾಗದಲ್ಲಿ 20 ಸಾವಿರ ಉದ್ಯೋಗ ಅವಕಾಶಗಳು ಲಭಿಸಲಿವೆ. ಪೊಟ್ಟಣ ತಯಾರಿಕಾ ಉದ್ದಿಮೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಯುಫ್ಲೇಕ್ಸ್ ಕಂಪನಿ 1,464 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಧಾರವಾಡ ಮಮ್ಮಿಗಟ್ಟಿ ಬಳಿಗೆ 50 ಎಕರೆ ಜಮೀನು ಕಂಪನಿಗೆ ಮಂಜೂರು ಮಾಡಲಾಗಿದೆ. ಕಂಪನಿಯಿಂದ ನೇರವಾಗಿ ಒಂದು ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ

    ಕ್ಲಸ್ಟರ್ ಘೋಷಣೆ:
    ರಾಜ್ಯ ಸರ್ಕಾರ ಹುಬ್ಬಳ್ಳಿಯನ್ನು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ವಸ್ತುಗಳ(ಎಫ್‍ಎಂಸಿಜಿ) ಕ್ಲಸ್ಟರ್ ಎಂದು ಘೋಷಣೆ ಮಾಡಿದೆ. ಎಫ್‍ಎಂಸಿಜಿ ಕ್ಲಸ್ಟರ್ ಸ್ಥಾಪನೆಯಾದರೆ, ಹುಬ್ಬಳ್ಳಿ ದಕ್ಷಿಣ ಭಾರತದಲ್ಲಿ ಹಬ್ ಆಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಇದು ಕಾರಣೀಭೂತವಾಗಲಿದೆ. ಪ್ರತಿ ಹಂತದಲ್ಲಿ 2,500 ಕೋಟಿಯಂತೆ 3 ಹಂತಗಳಲ್ಲಿ 7,500 ಕೋಟಿ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಕ್ಲಸ್ಟರ್ ಸ್ಥಾಪನೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಕೈಗಾರಿಕೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಹಣಕಾಸು ಇಲಾಖೆಯೊಂದಿಗೆ ಸಮಾಲೋಚಿಸಿ, ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಉತ್ತರ ಭಾರತದ ಗುವಾಹಟಿಯಲ್ಲಿ ಸದ್ಯ ಎಫ್‍ಎಂಸಿಜಿ ಕ್ಲಸ್ಟರ್ ಇದ್ದು, ಕೇಂದ್ರ ಸರ್ಕಾರದ ಪ್ರೋತ್ಸಾಹದಿಂದ ಉದ್ದಿಮೆ ಬಲವಾಗಿ ಬೆಳದು ನಿಂತಿದೆ. ಅಲ್ಲಿನ ಉದ್ಯಮಿಗಳ ಮನ ಒಲಿಸಿ ಹುಬ್ಬಳ್ಳಿ ಕರೆ ತರಲು ಉದ್ದಮಿ ಉಲ್ಲಾಸ್ ಕಾಮತ್ ರ ನೇತೃತ್ವದಲ್ಲಿ ಪ್ರಯತ್ನ ನಡೆಸಲಾಗುತ್ತದೆ.

    ಉತ್ತರ ಕರ್ನಾಟಕ ಭಾಗದ ಕೈಗಾರಿಕಾ ಅಭಿವೃದ್ಧಿ
    ನೂತನ ಕೈಗಾರಿಕಾ ನೀತಿಯಲ್ಲಿ ಎರಡನೇ ಹಾಗೂ ಮೂರನೇ ಸ್ತರದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಲಾಗಿದೆ. ಕೊಪ್ಪಳದಲ್ಲಿ ಬಾಣಾವರ ಗ್ರಾಮದಲ್ಲಿ 400 ಎಕರೆ ಜಮೀನು ಖರೀದಿಸಿ ಎಸ್‍ಇಝಢ್ ಘೋಷಣೆ ಮಾಡಲಾಗಿದೆ. ಆಟಿಕೆ ತಯಾರಿಕಾ ಕ್ಲಸ್ಟರ್ ನಿರ್ಮಾಣ ಮಾಡಲಾಗುತ್ತಿದೆ. ಏಕಸ್ ಕಂಪನಿ 5000 ಕೋಟಿ ಬಂಡವಾಳ ಹೂಡಿಕೆ ಮಾಡಿ ಆಟಿಕೆ ತಯಾರಿಕೆ ಘಟಕ ಸ್ಥಾಪಿಸಲಿದೆ. ಇದರಿಂದ 20 ಸಾವಿರ ಉದ್ಯೋಗ ಸ್ಥಳೀಯ ಜನರಿಗೆ ಲಭಿಸಲಿದೆ. ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ 4000 ಎಕರೆ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗಾಗಿ ಅಭಿವೃದ್ಧಿ ಪಡಿಸಲಾಗಿದೆ. ಹೈದರಬಾದ್ ಮೂಲದ ಔಷಧ ತಯಾರಿಕಾ ಕಂಪನಿಗಳು ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಘಕಗಳನ್ನು ಸ್ಥಾಪಿಸಲು ಮುಂದೆ ಬಂದಿವೆ. ರಾಜ್ಯ ಮಟ್ಟದ ಸಮಿತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ಕೂಡ 55 ಔಷದ ಕಂಪನಿಗಳು ಸೇರಿದಂತೆ ಒಟ್ಟು 70 ಕಂಪನಿಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ. 2289 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. 11,000 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಅಭಿವೃದ್ದಿ ಪರ್ವ ಶುರುವಾಗಿದೆ ಎಂದರು.

    ಶೇ.100 ರಷ್ಟು ಉದ್ಯೋಗಗಳು ರಾಜ್ಯದವರಿಗೆ ಮೀಸಲು
    ಕೈಗಾರಿಕೆ ಸ್ಥಾಪನೆಗಳಿಗೆ ರಾಜ್ಯ ಸರ್ಕಾರದಿಂದ ಹಲವು ರಿಯಾತಿಗಳನ್ನು ನೀಡಲಾಗಿದೆ. ಹುಬ್ಬಳ್ಳಿಯಲ್ಲಿ ಏಕಸ್ ಹಾಗೂ ಯುಪ್ಲೇಕ್ಸ್ ಕಂಪನಿಗಳಿಗೆ ಅಭಿವೃದ್ಧಿ ಪಡಿಸದ ಭೂಮಿಯನ್ನು ನೀಡಲಿದ್ದೇವೆ. ಹಾಗಾಗಿ ದರ ಹಾಗೂ ಪಾವತಿಯಲ್ಲಿ ಸ್ವಲ್ಪ ವಿನಾಯಿತಿ ನೀಡಲಾಗಿದೆ. ಕಟ್ಟಡ, ಕ್ಲಸ್ಟರ್ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ, ಮೂಲ ಬಂಡವಾಳದ ಹೂಡಿಕೆಯಲ್ಲಿ ಶೇ.25 ರಷ್ಟು ವಿನಾಯಿತಿ ನೀಡಲಾಗಿದೆ. ಹೊಸದಾಗಿ ಸ್ಥಾಪನೆಯಾದ ಕಂಪನಿಗಳ ವಾರ್ಷಿಕ ವಹಿವಾಟಿನ ಮೇಲೆ ಶೇ.2 ರಷ್ಟು ಉತ್ತೇಜಕ ದರವನ್ನು ನೀಡಲಾಗುವುದು. ರಾಜ್ಯ ಸರ್ಕಾರದಿಂದ ಕೈಗಾರಿಕೆ ಸ್ಥಾಪನೆ ಮಾಡುವ ಕಂಪನಿಗಳಿಗೆ ಕಡ್ಡಾಯವಾಗಿ ಸ್ಥಳೀಯರು ಹಾಗೂ ರಾಜ್ಯದವರಿಗೆ ಶೇ.100 ರಷ್ಟು ಉದ್ಯೋಗ ಅವಕಾಶಗಳನ್ನು ನೀಡುವಂತೆ ನಿಯಮಗಳನ್ನು ವಿಧಿಸಲಾಗಿದೆ. ಕೆಲವೊಂದು ಪರಿಣಿತ ಹುದ್ದೆಗಳಿಗ ಹೊರ ರಾಜ್ಯ ಹಾಗೂ ರಾಷ್ಟ್ರವರನ್ನು ನೇಮಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಉದ್ದಿಮೆಗಳ ಅಗತ್ಯಕ್ಕೆ ತಕ್ಕಂತೆ ಕೌಶಲ್ಯಗಳ ತರಬೇತಿಗೆ ಟಾ.ಟಾ ಟೆಕ್ನಾಲಜೀಸ್ ನೊಂದಿಗೆ ತರಬೇತಿ ಕೇಂದ್ರವನ್ನು ತೆರೆಯಲಾಗುವುದು. ಐ.ಟಿ.ಐ ಕೇಂದ್ರಗಳಲ್ಲಿ ಕೂಡ ತರಬೇತಿ ನೀಡಲಾಗುವುದು. ಸ್ಥಳೀಯರಿಗೆ ಉದ್ಯೋಗ ನೀಡುವುದು ಕಂಪನಿಗಳಿಗೂ ಲಾಭದಾಯವಾಗಿದೆ. ಟೆಸ್ಲಾ ಕಾರು ತಯಾರಿಕಾ ಕಂಪನಿ ಬೆಂಗಳೂರಿನಲ್ಲಿ ಕಚೇರಿ ಸ್ಥಾಪನೆ ಮಾಡುವುದರ ಮೂಲಕ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಮುಂಬರುವ ದಿನಗಳಲ್ಲಿ ಕಂಪನಿ ಬಂಡವಾಳ ಹಾಗೂ ಕೈಗಾರಿಕಾ ಸ್ಥಾಪನೆ ಮುಂದೆ ಬಂದರೆ ರಾಜ್ಯದಲ್ಲಿ ಅವಕಾಶ ಮಾಡಿ ಕೊಡಲಾಗುವುದು ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಶಾಸಕ ಪ್ರದೀಪ್ ಶೆಟ್ಟರ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿ ಗೌರವ ಗುಪ್ತಾ, ಮುಂಡರಾದ ಮಲ್ಲಿಕಾರ್ಜುನ ಸವಕಾರ, ಸಂತೋಷ್ ಚವ್ಹಾಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.