Tag: Assets

  • ಪ್ರಧಾನಿ ಮೋದಿ ಆಸ್ತಿ ಏರಿಕೆ, ಅಮಿತ್‌ ಶಾ ಆಸ್ತಿ ಮೌಲ್ಯ ಇಳಿಕೆ

    ಪ್ರಧಾನಿ ಮೋದಿ ಆಸ್ತಿ ಏರಿಕೆ, ಅಮಿತ್‌ ಶಾ ಆಸ್ತಿ ಮೌಲ್ಯ ಇಳಿಕೆ

    ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿಯವರ ಆಸ್ತಿ ಮೌಲ್ಯದಲ್ಲಿ ಹೆಚ್ಚಳವಾದರೆ ಗೃಹ ಸಚಿವ ಅಮಿತ್‌ ಶಾ ಆಸ್ತಿ ಮೌಲ್ಯ ಇಳಿಕೆಯಾಗಿದೆ.

    ಕಳೆದ ವರ್ಷ 32.3 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರೆ ಈ ವರ್ಷ ಮೌಲ್ಯ 28.6 ಕೋಟಿ ರೂ.ಗೆ ಇಳಿಕೆಯಾಗಿದೆ.

    ಅಮಿತ್‌ ಶಾ ಗುಜರಾತಿನಲ್ಲಿ 10 ಕಡೆ ಆಸ್ತಿಯನ್ನು ಹೊಂದಿದ್ದಾರೆ. ತಾಯಿಯಿಂದ ಬಂದಿರುವ ಆಸ್ತಿ ಮತ್ತು ಅವರು ಸಂಪಾದಿಸಿದ ಈ ಆಸ್ತಿ ಮೌಲ್ಯ 13.56 ಕೋಟಿ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಆಸ್ತಿ ಮೌಲ್ಯದಲ್ಲಿ 36 ಲಕ್ಷ ರೂ. ಹೆಚ್ಚಳ – ಮೋದಿ ಬಳಿ ಈಗ ಎಷ್ಟು ಆಸ್ತಿ ಇದೆ?

    ಅಮಿತ್‌ ಶಾ ಬಳಿ 15,814 ರೂ. ನಗದು ಇದ್ದು, 1.04 ಕೋಟಿ ರೂ. ಹಣ ಬ್ಯಾಂಕ್‌ ಖಾತೆಯಲ್ಲಿದೆ. 13.47 ಲಕ್ಷ ವಿಮೆ ಮತ್ತು ಪಿಂಚಣಿ ಪಾಲಿಸಿ ಹೊಂದಿದ್ದು, 2.79 ಲಕ್ಷ ರೂ. ನಿಶ್ಚಿತ ಠೇವಣಿ, 44.47 ಲಕ್ಷ ರೂ. ಮೌಲ್ಯದ ಜುವೆಲ್ಲರಿಯನ್ನು ಹೊಂದಿದ್ದಾರೆ.

    ಕಳೆದ ವರ್ಷ ಅಮಿತ್‌ ಶಾ ಪತ್ನಿ ಸೋನಲ್‌ ಅವರ ಆಸ್ತಿ ಮೌಲ್ಯ 9 ಕೋಟಿ ರೂ. ಇತ್ತು. ಈ ವರ್ಷ ಇದು 8.53 ಕೋಟಿ ರೂ.ಗೆ ಇಳಿಕೆಯಾಗಿದೆ.

    ಷೇರು ಮಾರುಕಟ್ಟೆಯಲ್ಲಿ ಅಮಿತ್‌ ಶಾ ಹೂಡಿದ ಕಂಪನಿಗಳ ಷೇರುಗಳ ಮೌಲ್ಯ ಕುಸಿದ ಕಾರಣ ಅಮಿತ್‌ ಶಾ ಆಸ್ತಿ ಇಳಿಕೆಯಾಗಿದೆ.

  • ಆಸ್ತಿ ಮೌಲ್ಯದಲ್ಲಿ 36 ಲಕ್ಷ ರೂ. ಹೆಚ್ಚಳ – ಮೋದಿ ಬಳಿ ಈಗ ಎಷ್ಟು ಆಸ್ತಿ ಇದೆ?

    ಆಸ್ತಿ ಮೌಲ್ಯದಲ್ಲಿ 36 ಲಕ್ಷ ರೂ. ಹೆಚ್ಚಳ – ಮೋದಿ ಬಳಿ ಈಗ ಎಷ್ಟು ಆಸ್ತಿ ಇದೆ?

    ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯ ಮೌಲ್ಯದಲ್ಲಿ 36 ಲಕ್ಷ ರೂ. ಹೆಚ್ಚಳವಾಗಿದೆ.

    ನರೇಂದ್ರ ಮೋದಿ ಅವರ ವಾರ್ಷಿಕ ಆಸ್ತಿ ವಿವರವನ್ನು ಪ್ರತಿ ವರ್ಷದಂತೆ ಪ್ರಧಾನಿ ಕಾರ್ಯಾಲಯ ಸ್ವಯಂ ಪ್ರೇರಣೆಯಿಂದ ಪ್ರಕಟಿಸಿದ್ದು, ಇದರಲ್ಲಿ 2020ರ ಜೂನ್‌ 30ರ ವರೆಗಿನ ಮಾಹಿತಿಯನ್ನು ನೀಡಲಾಗಿದೆ.

    ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿರುವುದು ಮತ್ತು ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸಿಕ್ಕಿರುವ ಕಾರಣ ಆಸ್ತಿಯ ಮೌಲ್ಯ ಏರಿಕೆಯಾಗಿದೆ. ಪ್ರಧಾನಿ ಮೋದಿಯವರು ಸಾಲವನ್ನು ತೆಗೆದುಕೊಂಡಿಲ್ಲ ಮತ್ತು ಅವರ ಹೆಸರಿನಲ್ಲಿ ಯಾವುದೇ ವಾಹನ ಇಲ್ಲ.

    ಆಸ್ತಿ ಎಷ್ಟಿದೆ?
    ನಗದು : 2020ರ ಜೂನ್‌ 30ರ ವೇಳೆಗೆ ಪ್ರಧಾನಿ ಮೋದಿಯವರ ಬಳಿ 31,450 ರೂ. ಇತ್ತು.

    ಬ್ಯಾಂಕ್‌ ಖಾತೆಗಳ ಮಾಹಿತಿ: ಎಸ್‌ಬಿಐ ಗಾಂಧಿನಗರ ಬ್ರಾಂಚ್‌ನಲ್ಲಿರುವ ಉಳಿತಾಯ ಖಾತೆಯಲ್ಲಿ 3,38,173 ರೂ. ಹಣ ಇದೆ. ಕಳೆದ ವರ್ಷ ಇದು 4,143 ರೂ. ಇತ್ತು. ಈ ಬ್ಯಾಂಕಿನಲ್ಲಿ ಎಫ್‌ಡಿಆರ್‌ ಮತ್ತು ಎಂಒಡಿ ಬ್ಯಾಲೆನ್ಸ್‌ 1,60,28,039 ರೂ. ಇದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದು 1,27,81,574 ರೂ. ಇತ್ತು. 2019 ರ ಲೋಕಸಭಾ ಚುನಾವಣೆಯ ಅಫಿಡವಿಟ್‌ನಲ್ಲಿ ಅವರು ಇದನ್ನು ಘೋಷಿಸಿದ್ದರು.

    ಬಾಂಡ್‌ ಹೂಡಿಕೆ:  ಪ್ರಧಾನಮಂತ್ರಿಯವರು ಎಲ್ ಅಂಡ್ ಟಿ ಇನ್‍ಫ್ರಾಸ್ಟ್ರಕ್ಚರ್ ನಲ್ಲಿ ರೂ. 20,000 ಹೂಡಿಕೆ ಮಾಡಿದ್ದಾರೆ. 2012ರಲ್ಲಿ ಈ ಹೂಡಿಕೆ ಮಾಡಲಾಗಿತ್ತು.

    ಎನ್‌ಎಸ್‌ಎಸ್‌, ವಿಮೆ: ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಅಡಿ 5,18,235 ರೂ. ಹೂಡಿಕೆ ಮಾಡಿದ್ದಾರೆ. ಇದರ ಜೊತೆಗೆ 1,59,281 ರೂ. ಮೌಲ್ಯದ ಎಲ್‍ಐಸಿ ಪ್ರೀಮಿಯಂ ಕಟ್ಟಿದ್ದಾರೆ.

    ಚಿನ್ನ: ಮೋದಿಯವರು ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ. ಈ ಉಂಗುರಗಳು 45 ಗ್ರಾಂ ತೂಕವನ್ನು ಹೊಂದಿದ್ದು ಇವುಗಳ ಮೌಲ್ಯ 1,51,875 ರೂ. ಆಗಿದೆ.

    ಭೂಮಿ: ಗಾಂಧಿನಗರಲ್ಲಿ ಮೋದಿ ಅವರು 2002ರ ಅಕ್ಟೋಬರ್‌ 25 ರಂದು ನಾಲ್ಕನೇ ಒಂದರಷ್ಟು ಷೇರು (1,30,488 ರೂ.) ನೀಡಿ, ವಸತಿ ಕಟ್ಟಡವೊಂದನ್ನು ಖರೀದಿಸಿದ್ದರು. ಈ ಭೂಮಿಯ ಮೇಲೆ 2,47,208 ರೂ.ಗಳ ಹೂಡಿಕೆಯನ್ನು ಮಾಡಲಾಗಿದೆ. ಸದ್ಯ ಈ ಜಾಗದ ಮಾರುಕಟ್ಟೆ ಬೆಲೆ 1,10,00,000 ರೂ. ಎಂದು ಅಂದಾಜಿಸಲಾಗಿದೆ.

  • ಆರ್‌ಆರ್‌ ನಗರ, ಶಿರಾ ಉಪಚುನಾವಣೆ – ಅಭ್ಯರ್ಥಿಗಳ ಆಸ್ತಿ ಎಷ್ಟಿದೆ?

    ಆರ್‌ಆರ್‌ ನಗರ, ಶಿರಾ ಉಪಚುನಾವಣೆ – ಅಭ್ಯರ್ಥಿಗಳ ಆಸ್ತಿ ಎಷ್ಟಿದೆ?

    ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ತುಮಕೂರಿನ ಶಿರಾ ಕ್ಷೇತ್ರಗಳ ಉಪ ಚುನಾವಣಾ ಅಖಾಡ ಇಂದಿನಿಂದ ಮತ್ತಷ್ಟು ಕಾವೇರಿದೆ. ಆರ್ಆರ್ ನಗರದ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಮುನಿರತ್ನ ಇಂದು ನಾಮಪತ್ರ ಸಲ್ಲಿಸಿದರು.

    ಬಿಜೆಪಿ ನಾಯಕರಾದ ಡಿಸಿಎಂ ಅಶ್ವಥ್ ನಾರಾಯಣ, ಸಚಿವ ಅಶೋಕ್ ಜೊತೆಯಲ್ಲಿ ತೆರಳಿದ ಮುನಿರತ್ನ, ಚುನಾವಣಾಧಿಕಾರಿ ಹೆಚ್.ಎಲ್. ನಾಗರಾಜ್‍ಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಎಲ್ಲಾ ದಾಖಲೆಗಳು ಸರಿಯಾಗಿ ಸಲ್ಲಿಕೆಯಾದ್ದೇಯಾ ಅಂತ ಮುನಿರತ್ನ ಮಾಹಿತಿ ಪಡೆದರು. ಆರ್‌ ಆರ್‌ ನಗರದ ಜಂಟಿ ಆಯುಕ್ತರ ಕಚೇರಿವರೆಗೆ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್ ಕೂಡ ಸಾಥ್ ನೀಡಿದ್ದರು.

    ಈ ವೇಳೆ ಮಾತನಾಡಿದ ಮುನಿರತ್ನ, ಎಲ್ಲಾ ಒಳ್ಳೇ ರೀತಿಯಲ್ಲಿ ನಡೆದಿದೆ. ಕ್ಷೇತ್ರದ ಜನತೆಯ ಋಣ ನನ್ನ ಮೇಲಿದೆ ಅದನ್ನ ತೀರಿಸ್ತೇನೆ. ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಒಟ್ಟಾಗಿ ಚುನಾವಣೆ ಎದುರಿಸ್ತೇವೆ ಅಂತ ಹೇಳಿದ್ರು.

    ಸಚಿವ ಅಶೋಕ್ ಪ್ರತಿಕ್ರಿಯಿಸಿ, ಮುನಿರತ್ನ ಅವರು 40-50 ಸಾವಿರ ಲೀಡ್‍ನಲ್ಲಿ ಗೆಲ್ತಾರೆ. ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನಗೆ ಎದುರಾಳಿಯೇ ಇಲ್ಲ. ಸಚಿವರು, ಶಾಸಕರ ಸಹಕಾರದಿಂದ ಎಲ್ಲಾ ದೃಷ್ಟಿಯಿಂದ ನಮಗೆ ಜಯ ಖಚಿತ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.

    ಕುಸುಮಾ ನಾಮಪತ್ರ ಸಲ್ಲಿಕೆ: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತಪ್ಪ ಸಹ ಉಮೇದುವಾರಿಕೆ ಸಲ್ಲಿಸಿದ್ರು. ಕುಸುಮಾ ನಾಮಪತ್ರ ಸಲ್ಲಿಕೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ರು.

    ನಾಮಪತ್ರ ಸಲ್ಲಿಕೆಗೂ ಮುನ್ನ ಆಂಜನೇಯ ದೇಗುಲಕ್ಕೆ ಭೇಟಿ ನೀಡಿದ ಕುಸುಮಾ, ಇಂದು ನನ್ನ ಪಾಲಿಗೆ ಅತ್ಯಂತ ಮಹತ್ವದ ದಿನ. ನನ್ನ ಇಷ್ಟದ ದೇವರು ಆಂಜನೇಯನ ದರ್ಶನ ಮಾಡಿರುವುದರಿಂದ ಹೊಸ ಶಕ್ತಿ ಬಂದಿದೆ ಎಂದ್ರು. ಸಿದ್ದರಾಮಯ್ಯ ಮಾತನಾಡಿ, ನಾನು ಅಹಿಂದ ರಾಮಯ್ಯನೇ. ಯಾವಾಗಲು ಅಹಿಂದ ವರ್ಗದ ಪರ ಇದ್ದೇನೆ ಅಂದ್ರು. ಡಿಕೆಶಿಯಂತೂ ನೊಣವಿನಕೆರೆ ಅಜ್ಜಯ್ಯನ ಆಶೀರ್ವಾದ ಪಡೆದ ಬಳಿಕವೇ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಹಾಜರಾಗಿದ್ರು. ನಾಮಪತ್ರ ಸಲ್ಲಿಕೆ ಬಳಿಕ ಚುನಾವಣಾ ರಣತಂತ್ರದ ಬಗ್ಗೆ ಸಭೆ ನಡೆಸಿದ್ರು.

    ಜೆಡಿಎಸ್‌ ನಾಮಪತ್ರ ಸಲ್ಲಿಕೆ: ಆರ್.ಆರ್.ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಕೂಡ ನಾಮಿನೇಷನ್ ಫೈಲ್ ಮಾಡಿದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಮ್ಮ ಅಭ್ಯರ್ಥಿಗೆ ಸಾಥ್ ನೀಡಿದ್ರು. ನಾಮಪತ್ರ ಸಲ್ಲಿಕೆ ಬಳಿಕ ಕೃಷ್ಣಮೂರ್ತಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ರು.

    ಆರ್.ಆರ್.ನಗರದಲ್ಲಿ ನಿಜಕ್ಕೂ ಕುಮಾರಸ್ವಾಮಿ ಅವರೇ ಅಭ್ಯರ್ಥಿ. ಕಾಂಗ್ರೆಸ್-ಬಿಜೆಪಿಯಲ್ಲಿ ಪ್ರಬಲ ಅಭ್ಯರ್ಥಿಗಳೇ ಇಲ್ಲ. ಜಾತಿ ರಾಜಕಾರಣ ಮಾಡಲ್ಲ. ನಾನು ಮನೆ ಮಗ. ಜನ ಅಭಿವೃದ್ಧಿಗೆ ಮತ ಕೊಡ್ಬೇಕು. ಈ ಬಾರಿ ಜನ ಜೆಡಿಎಸ್ ಕೈ ಹಿಡಿಯುತ್ತಾರೆ ಎಂದು ಕೃಷ್ಣಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ರು.

    ಯಾವ ಅಭ್ಯರ್ಥಿಯ ಆಸ್ತಿ ಎಷ್ಟು?

    > ಮುನಿರತ್ನ (ಬಿಜೆಪಿ) ಆರ್.ಆರ್.ನಗರ
    ಒಟ್ಟು ಆಸ್ತಿ – 89 ಕೋಟಿ 13 ಲಕ್ಷದ 47 ಸಾವಿರದ 877 ರೂ.
    ಸಾಲ – 46 ಕೋಟಿ 41 ಲಕ್ಷದ 61 ಸಾವಿರದ 785 ರೂ.

    > ಕುಸುಮಾ (ಕಾಂಗ್ರೆಸ್) ಆರ್.ಆರ್.ನಗರ
    ಚರಾಸ್ತಿ – 1 ಕೋಟಿ 13 ಲಕ್ಷದ 2 ಸಾವಿರದ 197.38 ರೂ.
    ಚಿನ್ನ,ಬೆಳ್ಳಿ – 45 ಲಕ್ಷ ರೂ. ( ಮೌಲ್ಯದ 1,100 ಗ್ರಾಂ)

    > ಟಿ.ಬಿ. ಜಯಚಂದ್ರ (ಕಾಂಗ್ರೆಸ್) ಶಿರಾ
    ಸ್ಥಿರಾಸ್ತಿ – 13.10 ಕೋಟಿ ರೂ.
    ಚರಾಸ್ತಿ – 1ಕೋಟಿ 33 ಲಕ್ಷದ 81 ಸಾವಿರದ 409.41 ರೂ.

    > ಅಮ್ಮಾಜಮ್ಮ (ಜೆಡಿಎಸ್) ಶಿರಾ
    ಒಟ್ಟು ಆಸ್ತಿ – 2.32 ಕೋಟಿ ರೂ.
    ಚಿನ್ನ,ಬೆಳ್ಳಿ – 60 ಲಕ್ಷ ರೂ. (60 ಲಕ್ಷ ಮೌಲ್ಯದ 1200 ಗ್ರಾಂ ಚಿನ್ನಾಭರಣ – 7 ಕೆಜಿ ಬೆಳ್ಳಿ)

     

  • ಆರ್‌.ಆರ್‌.ನಗರ ಉಪಚುನಾವಣೆ – ಕೋಟ್ಯಧೀಶೆ, ಸಾಲಗಾರ್ತಿ ಆಗಿದ್ದಾರೆ ಕುಸುಮಾ

    ಆರ್‌.ಆರ್‌.ನಗರ ಉಪಚುನಾವಣೆ – ಕೋಟ್ಯಧೀಶೆ, ಸಾಲಗಾರ್ತಿ ಆಗಿದ್ದಾರೆ ಕುಸುಮಾ

    ಬೆಂಗಳೂರು: ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕೋಟ್ಯಧೀಶೆ ಮತ್ತು ಸಾಲಗಾರ್ತಿ ಆಗಿದ್ದಾರೆ.

    ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ತಮ್ಮ ಬಳಿ ಇರುವ ಆಸ್ತಿ ವಿವರಗಳನ್ನು ಕುಸುಮಾ ಸಲ್ಲಿಸಿದ್ದಾರೆ. ಪತಿ ಹಾಗೂ ಕುಟುಂಬಸ್ಥರ ಹೆಸರನ್ನು ಕುಸುಮಾ ಅಫಿಡವಿಟ್‌ನಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ.

    1,100 ಗ್ರಾಂ ಚಿನ್ನಾಭರಣ ಹೊಂದಿರುವ ಕುಸುಮಾ 1 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯ ಒಡತಿ ಆಗಿದ್ದಾರೆ. ನಗದು ರೂಪದಲ್ಲಿ 1,41,050 ರೂ. ಹೊಂದಿರುವ ಅವರು ನಾಲ್ಕು ಬ್ಯಾಂಕ್ ಅಕೌಂಟ್ ಗಳಲ್ಲಿ ಸುಮಾರು 6 ಲಕ್ಷ ಹಣ ಹೊಂದಿದ್ದಾರೆ. 1,13,02,197.38 ರೂ. ಮೌಲ್ಯದ ಚರಾಸ್ತಿ ಹೊಂದಿರುವ ಇರುವ ನನ್ನ ಬಳಿ ಯಾವುದೇ ಕೃಷಿ ಭೂಮಿ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುನಿರತ್ನಗೆ ಬಿಗ್‌ ರಿಲೀಫ್‌ ನೀಡಿದ ಸುಪ್ರೀಂ ತೀರ್ಪಿನಲ್ಲಿ ಏನಿದೆ?

    ಸುಮಾರು 2,45,000 ರೂ. ಗಳನ್ನು ವಿವಿಧ ಬಾಂಡ್, ಶೇರುಗಳಲ್ಲಿ ಹೂಡಿಕೆ ಮಾಡಿರುವ ಕುಸುಮಾ ಬಳಿ ಯಾವುದೇ ಸ್ವಂತ ವಾಹನ ಹೊಂದಿಲ್ಲ. ಅನಿಲ್ ಗೌಡ ಎಚ್ ಅವರಿಂದ 2,05,000 ರೂ.ಮತ್ತು ಎ ಬಿಎಚ್ ಇನ್ಫ್ರಾಸ್ಟ್ರಕ್ಚರ್ಸ್ ನಿಂದ 56, 58, 316 ರೂ. ಸಾಲ ಪಡೆದಿದ್ದಾರೆ. 45,00,000 ರೂ. ಮೌಲ್ಯದ 1,100 ಗ್ರಾಂ ಚಿನ್ನ, ಬೆಳ್ಳಿ ಆಭರಣಗಳು ತನ್ನ ಬಳಿ ಇದೆ ಎಂದು ಉಲ್ಲೇಖಿಸಿದ್ದಾರೆ.

    ಬಿಬಿಎಂಪಿ ವಾರ್ಡ್ 40 ರಲ್ಲಿ 1500 ಚದರ ಅಡಿ ಹಾಗೂ 2380 ಚದರಡಿ ವಿಸ್ತೀರ್ಣದ ಎರಡು ನಿವೇಶನ ಇದ್ದು, ಇದರ ಸದ್ಯದ ಮಾರುಕಟ್ಟೆ ಮೌಲ್ಯ ಒಟ್ಟು 1,37, 10,000 ರೂ. ಆಗಿದೆ ಎಂದು ವಿವರಿಸಿದ್ದಾರೆ.

  • ಆರ್ಥಿಕ ಸಂಕಷ್ಟ – ತಿರುಪತಿ ದೇವಾಲಯದ 500 ಕೋಟಿ ಸ್ಥಿರಾಸ್ತಿ ಮಾರಾಟ?

    ಆರ್ಥಿಕ ಸಂಕಷ್ಟ – ತಿರುಪತಿ ದೇವಾಲಯದ 500 ಕೋಟಿ ಸ್ಥಿರಾಸ್ತಿ ಮಾರಾಟ?

    – ಬ್ಯಾಂಕುಗಳಲ್ಲಿದೆ 14 ಸಾವಿರ ಕೋಟಿ ನಗದು
    – 8 ಸಾವಿರ ಕೆಜಿ ಚಿನ್ನ, ವಾರ್ಷಿಕ 750 ಕೋಟಿ ರೂ. ಬಡ್ಡಿ

    ಹೈದರಾಬಾದ್: ಕೋವಿಡ್ 19 ಲಾಕ್‍ಡೌನ್ ನಿಂದ ಸೃಷ್ಟಿಯಾಗಿರುವ ಹಣಕಾಸು ಸಮಸ್ಯೆಯನ್ನು ಪರಿಹಾರ ಮಾಡಲು ತನ್ನ ಕೆಲ ಸ್ಥಿರಾಸ್ತಿಗಳನ್ನು ಮಾರಾಟ ಮಾಡಲು ತಿರುಪತಿ ತಿರುಮಲ ದೇಗುಲ (ಟಿಟಿಡಿ)ದ ಆಡಳಿತ ಮಂಡಳಿ ಚಿಂತನೆ ನಡೆಸಿದೆ.

    ಹೌದು. ಮಾರ್ಚ್ ಮೂರನೇ ವಾರದಲ್ಲಿ ತಿರುಪತಿ ದೇಗುಲದ ಬಾಗಿಲು ಮುಚ್ಚಿದ್ದು, ಜೂನ್ ತಿಂಗಳಿನಲ್ಲಿ ಬಾಗಿಲು ತೆರೆಯಲು ತೆರೆಯಲು ಅನುಮತಿ ಸಿಗುತ್ತದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ. ಒಂದು ವೇಳೆ ಜೂನ್ ತಿಂಗಳಿನಲ್ಲೂ ದೇವಾಲಯದ ಬಾಗಿಲು ತೆರೆಯದಿದ್ದರೆ ಭಕ್ತರು ದೇಣಿಗೆ ರೂಪದಲ್ಲಿ ನೀಡಿದ್ದ ಕೆಲ ಸ್ಥಿರಾಸ್ತಿಯನ್ನು ಮಾರಾಟ ಮಾಡಲು ಟಿಟಿಡಿ ಮುಂದಾಗಿದೆ.

    ಚೆನ್ನೈ, ಮುಂಬೈ, ಸೇರಿದಂತೆ ಕೆಲ ಮಹಾನಗರಗಳಲ್ಲಿ ಭಕ್ತರು ಆಸ್ತಿ ನೀಡಿದ್ದು, ಆ ಸ್ಥಿರಾಸ್ತಿಗಳು ದಶಕಗಳಿಂದ ನಿರುಪಯುಕ್ತ ಸ್ಥಿತಿಯಲ್ಲಿದೆ. ಇವುಗಳ ಪೈಕಿ 500 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿ ಹಣ ತುಂಬಿಸಲು ಚಿಂತನೆ ನಡೆಸಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಟಿಟಿಡಿಯಲ್ಲಿ ಖಾಯಂ ಮತ್ತು ಗುತ್ತಿಗೆ ರೂಪದಲ್ಲಿ ಒಟ್ಟು 22 ಸಾವಿರ ಸಿಬ್ಬಂದಿ ಇದ್ದು, ಇವರ ತಿಂಗಳ ವೇತನ ಪಾವತಿಗೆ 115 ಕೋಟಿ ರೂ. ಬೇಕಾಗುತ್ತದೆ. ಆದಾಯ ಸಮಸ್ಯೆಯಾದ ಹಿನ್ನೆಲೆಯಲ್ಲಿ 7 ಸಾವಿರ ರೂ. ಕಾಯಂ ಸಿಬ್ಬಂದಿಗೆ ಅರ್ಧ ಸಂಬಳ ಪಾವತಿಸಲಾಗುತ್ತಿದೆ. ಜೂನ್ ತಿಂಗಳಿನಲ್ಲಿ ದೇವಾಲಯ ತೆರೆಯದಿದ್ದರೆ ಭಾರೀ ಕಷ್ಟವಾಗುವ ಸಾಧ್ಯತೆಯಿದೆ. ಈ ಕಾರಣಕ್ಕೆ ಮೇ 28ಕ್ಕೆ ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ ಸ್ಥಿರಾಸ್ತಿ ಮಾರಾಟದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.

    2020-21ನೇ ಸಾಲಿನಲ್ಲಿ ಹುಂಡಿ ಮೂಲಕ 1,350 ಕೋಟಿ ರೂ., ಲಡ್ಡು, ವಿಶೇಷ ದರ್ಶನ ಟಿಕೆಟ್ ಮೂಲಕ 900 ಕೋಟಿ ರೂ. ಸಂಗ್ರಹವಾಗಬಹುದು ಎಂದು ಟಿಟಿಡಿ ಅಂದಾಜಿಸಿತ್ತು. ಆದರೆ ಲಾಕ್‍ಡೌನ್ ನಿಂದಾಗಿ ದೇವಾಲ ಮುಚ್ಚಿದ್ದು, ಪ್ರತಿ ತಿಂಗಳು 115 ಕೋಟಿ ರೂ. ಆದಾಯ ನಷ್ಟವಾಗುತ್ತಿದೆ.

    ವಿವಿಧ ಬ್ಯಾಂಕ್‍ಗಳಲ್ಲಿ 14 ಸಾವಿರ ಕೋಟಿ ನಗದು, ಮತ್ತು 8 ಸಾವಿರ ಕೆಜಿ ಚಿನ್ನವನ್ನು ಟಿಟಿಡಿ ಇಟ್ಟಿದ್ದು, ಇದರಿಂದ ಒಟ್ಟು ವರ್ಷಕ್ಕೆ 750 ಕೋಟಿ ರೂ. ಬಡ್ಡಿ ಬರುತ್ತದೆ. ಈ ಆಸ್ತಿಯನ್ನು ಮಾರಾಟ ಮಾಡುವುದಿಲ್ಲ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.

  • ಎಂಟಿಬಿ ನಾಗರಾಜ್ ಒಟ್ಟು ಆಸ್ತಿ ಮೌಲ್ಯ 1,195 ಕೋಟಿ ರೂ.

    ಎಂಟಿಬಿ ನಾಗರಾಜ್ ಒಟ್ಟು ಆಸ್ತಿ ಮೌಲ್ಯ 1,195 ಕೋಟಿ ರೂ.

    – ಒಂದೇ ವರ್ಷದಲ್ಲಿ 180 ಕೋಟಿ ರೂ. ಏರಿಕೆ
    – ಪತ್ನಿಗೆ 1.57 ಕೋಟಿ ರೂ. ಸಾಲ ಕೊಟ್ಟ ಎಂಟಿಬಿ
    – ಎಂಟಿಬಿ ಬಳಿ ಇದೆ 193 ಬ್ಯಾಂಕ್ ಖಾತೆಗಳು

    ಬೆಂಗಳೂರು: ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ಒಟ್ಟು 1,195 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

    ಉಪ ಚುನಾವಣೆಯ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್ ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿದ್ದ ಚರಾಸ್ತಿ, ಸ್ಥಿರಾಸ್ತಿಯನ್ನು ಘೋಷಿಕೊಂಡಿದ್ದಾರೆ. ಅಫಿಡವಿಟ್ ಪ್ರಕಾರ ಎಂಟಿಬಿ ನಾಗರಾಜ್, 419,28,63,731 ರೂ. ಮೌಲ್ಯದ ಚರಾಸ್ತಿ, 2.54 ಕೋಟಿ ರೂ. ಮೌಲ್ಯದ ಕಾರುಗಳು ಸೇರಿದಂತೆ ಒಟ್ಟು 1,195 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಕೇವಲ ಒಂದೇ ವರ್ಷದಲ್ಲಿ ಎಂಟಿಬಿ ನಾಗರಾಜ್ ಅವರ ಆಸ್ತಿ ಮೌಲ್ಯದಲ್ಲಿ 180 ಕೋಟಿ ರೂ. ಏರಿಕೆಯಾಗಿದೆ. ಇದನ್ನೂ ಓದಿ:  ವಿಶ್ವದ ದುಬಾರಿ ಕಾರಿನ ಒಡೆಯನಾದ ಎಂಟಿಬಿ – ಬೆಲೆ ಎಷ್ಟು? ವಿಶೇಷತೆ ಏನು? ಮೈಲೇಜ್ ಎಷ್ಟು?

    ಕರ್ನಾಟಕದ ಅತ್ಯಂತ ಶ್ರೀಮಂತ ರಾಜಕಾರಣಿ ಎಂಟಿಬಿ ನಾಗರಾಜ್ 29.90 ಕೋಟಿ ಸಾಲ ಹೊಂದಿದ್ದು, ಸ್ವತಃ ಪತ್ನಿಗೆ 1.57 ಕೋಟಿ ಸಾಲ ಕೊಟ್ಟಿದ್ದಾರೆ. ಒಟ್ಟು 193 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ.

    ಸಮ್ಮಿಶ್ರ ಸರ್ಕಾರದ ವಿರುದ್ಧ ಅನರ್ಹ ಶಾಸಕರು ಆಗಸ್ಟ್ ತಿಂಗಳಿನಲ್ಲಿ ಬಂಡಾಯ ಎದಿದ್ದರು. ಈ ಅವಧಿಯಲ್ಲೇ ಅಂದ್ರೆ ಆಗಸ್ಟ್ 2ರಿಂದ 7ರ ನಡುವೆ ಎಂಟಿಬಿ ನಾಗರಾಜ್ ವಿವಿಧ ಬ್ಯಾಂಕ್ ಖಾತೆಗಳಲ್ಲಿ 53 ಠೇವಣಿಗಳನ್ನು ಇರಿಸಿದ್ದಾರೆ. ಪ್ರತಿ ಠೇವಣಿ 90 ಲಕ್ಷ ರೂಪಾಯಿಗಿಂದ ಅಧಿಕವಾಗಿದೆ. ಎಲ್ಲಾ ಠೇವಣಿಯ ಒಟ್ಟು ಮೊತ್ತವು 48.76 ಕೋಟಿ ರೂಪಾಯಿ ಆಗುತ್ತದೆ. ಅಷ್ಟೇ ಅಲ್ಲದೆ ಜುಲೈ ತಿಂಗಳಲ್ಲಿ 1.06 ಕೋಟಿ ರೂ. ಠೇವಣಿ ಮಾಡಿಸಿದ್ದಾರೆ.

    ಎಂಟಿಬಿ ನಾಗರಾಜ್ ಅವರ ಚರಾಸ್ತಿ 419.28 ಕೋಟಿ ರೂ., ಅದರಲ್ಲಿ ಸ್ವಯಾರ್ಜಿತ ಸ್ಥಿರಾಸ್ತಿಯ ಮೌಲ್ಯ 417.11 ಕೋಟಿ ಇದ್ದು, ಪಿತ್ರಾರ್ಜಿತ ಆಸ್ತಿಯ ಮೌಲ್ಯ 2.64 ಕೋಟಿ ರೂ. ಆಗಿದೆ. ಅವರ ಪತ್ನಿಯ ಆಸ್ತಿ ಮೌಲ್ಯ 167.34 ಕೋಟಿ ರೂ., ಸ್ವಯಾರ್ಜಿತ ಆಸ್ತಿ ಮೌಲ್ಯ 189.14 ಕೋಟಿ ರೂ ಹಾಗೂ ಪಿತ್ರಾರ್ಜಿತ ಆಸ್ತಿಯ ಮೌಲ್ಯ 27.50 ಲಕ್ಷ ರೂ. ಇದೆ.

    ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು 2018ರ ವಿಧಾನಸಭಾ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್‍ನಲ್ಲಿ 1,015 ಕೋಟಿ ಘೋಷಣೆಗೊಂಡಿದ್ದರು. ಎಂಟಿಬಿ ನಾಗರಾಜ್ ಹೆಸರಿನಲ್ಲಿ ಚರಾಸ್ತಿ 314,75,54,785 ರೂ., ಸ್ಥಿರಾಸ್ತಿ 394,63,53,309 ರೂ., ವಾರ್ಷಿಕ ಆದಾಯ 102 ಕೋಟಿ ರೂ. ಹಾಗೂ 27, 70,31,565 ರೂ. ಸಾಲ ಹೊಂದಿರುವುದಾಗಿ ಮಾಹಿತಿ ನೀಡಿದ್ದರು. ಎಂಟಿಬಿ ನಾಗರಾಜ್ ಅವರು 8ನೇ ತರಗತಿ ವರೆಗೆ ವಿದ್ಯಾಭ್ಯಾಸ ಪಡೆದಿದ್ದಾರೆ.

    ಎಂಟಿಬಿ ನಾಗರಾಜ್ ಪತ್ನಿ ಶಾಂತಕುಮಾರಿ ಹೆಸರಿನಲ್ಲಿ 122,40,09,258 ರೂ. ಚರಾಸ್ತಿ, 184,01,120 ರೂ. ಸ್ಥಿರಾಸ್ತಿ ಹಾಗೂ ಅವರ ವಾರ್ಷಿಕ ಆದಾಯ 52 ಕೋಟಿ ರೂ. ಸೇರಿದಂತೆ 25 ಲಕ್ಷ ರೂ. ಸಾಲ ಹೊಂದಿರುವುದಾಗಿ ಮಾಹಿತಿ ನೀಡಿದ್ದರು. 2013ರ ಚುನಾವಣೆ ವೇಳೆ 470,13,52,248 ರೂ. ಆಸ್ತಿಯನ್ನು ಎಂಟಿಬಿ ನಾಗರಾಜ್ ಘೋಷಿಸಿಕೊಂಡಿದ್ದರು.