Tag: Assembly Session

  • ಅಧಿವೇಶನದ ನಡುವೆಯೂ ಕಾಡಸಿದ್ದೇಶ್ವರ ಜಾತ್ರೆಯಲ್ಲಿ ಸಿಎಂ ಭಾಗಿ

    ಅಧಿವೇಶನದ ನಡುವೆಯೂ ಕಾಡಸಿದ್ದೇಶ್ವರ ಜಾತ್ರೆಯಲ್ಲಿ ಸಿಎಂ ಭಾಗಿ

    ತುಮಕೂರು: ವಿಧಾನಸಭಾ ಅಧಿವೇಶನದ ನಡುವೆಯೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಿಪಟೂರು ತಾಲೂಕಿನ ನೋಣವಿನಕೆರೆಯ ಕಾಡಸಿದ್ದೇಶ್ವರ ಮಠದ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡರು.

    ಹೆಲಿಕಾಪ್ಟರ್ ಮೂಲಕ ಬೆಳಗ್ಗೆ 9:30ಕ್ಕೆ ಮಠಕ್ಕೆ ಆಗಮಿಸಿದ ಸಿಎಂ, ಮೃತ್ಯುಂಜಯ ಹೋಮ, ರುದ್ರ ಹೋಮ, ಜಯಾದಿ ಹೋಮದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದರು. ಬಳಿಕ ಕಾಡಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗೇಶ್ವರ ಶ್ರೀಗಳ ಆಶೀರ್ವಾದ ಪಡೆದರು.

    ವೇದಿಕೆ ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಕಾಡಸಿದ್ದೇಶ್ವರ ಮಠದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸೇವೆಯ ಗುಣಗಾನ ಮಾಡಿದರು. ಅಲ್ಲದೆ ರಾಜ್ಯ ಸರ್ಕಾರದ ವತಿಯಿಂದ ಮಠದ ಅಭಿವೃದ್ಧಿಗೆ ಸಹಾಯ ಮಾಡಲಾಗುವುದು ಎಂದು ಭರವಸೆ ನಿಡಿದರು. ಅಧಿವೇಶನಕ್ಕೆ ವಿಳಂಬವಾಗುವ ಹಿನ್ನೆಲೆಯಲ್ಲಿ ಚುಟುಕಾಗಿ ಭಾಷಣ ಮುಗಿಸಿ ಜಾತ್ರೆಯಿಂದ ಸಿಎಂ ವಿಧಾನಸೌಧ ದತ್ತ ಪಯಣ ಬೆಳೆಸಿದರು.

  • ವಿಧಾನಸಭೆಯಲ್ಲಿ ಪೌರತ್ವ, ಮಂಗ್ಳೂರು ಗದ್ದಲ- ಕಾಂಗ್ರೆಸ್, ಬಿಜೆಪಿ ಮಧ್ಯೆ ತುಕ್ಡೇ ತುಕ್ಡೇ ಗ್ಯಾಂಗ್ ವಾರ್

    ವಿಧಾನಸಭೆಯಲ್ಲಿ ಪೌರತ್ವ, ಮಂಗ್ಳೂರು ಗದ್ದಲ- ಕಾಂಗ್ರೆಸ್, ಬಿಜೆಪಿ ಮಧ್ಯೆ ತುಕ್ಡೇ ತುಕ್ಡೇ ಗ್ಯಾಂಗ್ ವಾರ್

    – ಹೌದೋ ಹುಲಿಯಾ-ರಾಜಾಹುಲಿ ಮಧ್ಯೆ ಬಿಗ್ ಫೈಟ್

    ಬೆಂಗಳೂರು: ಇಂದಿನ ವಿಧಾನಸಭೆ ಕಲಾಪದಲ್ಲಿ ನಿರೀಕ್ಷೆಯಂತೆಯೇ ಸಿಎಎ ವಿಚಾರ ಪ್ರತಿಧ್ವನಿಸಿತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ಮಂಡಿಸಿದರು. ಮಂಗಳೂರು ಗೋಲಿಬಾರ್ ಪ್ರಕರಣ, ಬೀದರ್‍ನ ಶಾಹೀನ್ ಪ್ರಕರಣ, ಮೈಸೂರಿನ ನಳಿನಿ ಪ್ರಕರಣ ಪ್ರಸ್ತಾಪಿಸಿದರು. ನೌಶೀನ್, ಜಲೀಲ್‍ನನ್ನು ಕೊಂದಿದ್ದು ಏಕೆ ಎಂದು ಪ್ರಶ್ನೆ ಮಾಡಿದರು.

    ಸಿಎಎ ವಿರೋಧಿಸಿದವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ, ಎಫ್‍ಐಆರ್ ದಾಖಲಿಸಲಾಗುತ್ತದೆ. ಪೊಲೀಸರು ಸರ್ಕಾರದ ಕೈಗೊಂಬೆ ಆಗಿದ್ದಾರೆ. ಸಿಎಎ ಸಂವಿಧಾನ ವಿರೋಧಿಯಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಇದಕ್ಕೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನದ ವಿರುದ್ಧ ನಡೆದುಕೊಂಡವರು ನೀವು ಎಂದು ಗೃಹ ಸಚಿವ ಬೊಮ್ಮಾಯಿ ತಿರುಗೇಟು ನೀಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಅಂತ ಆರೋಪಿಸಿದರು.

    ಮೇಲ್ಮನೆಯಲ್ಲೂ ಮಂಗಳೂರು ಗೋಲಿಬಾರ್ ಸಂಬಂಧ ಗದ್ದಲ ನಡೆಯಿತು. ಗೋಲಿಬಾರ್ ನಲ್ಲಿ ಸತ್ತವರ ಮನೆಗೆ ಯಾಕೆ ಹೋಗಿಲ್ಲ ಎಂಬ ಐವಾನ್ ಡಿಸೋಜಾ ಪ್ರಶ್ನೆಗೆ ಉಗ್ರರ ಮನೆಗೆ ಹೋಗುವುಕ್ಕೆ ಆಗುತ್ತಾ ಅಂತ ರವಿಕುಮಾರ್ ಕೇಳಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಆಕ್ರೋಶ ಹೊರಹಾಕಿದರು. ಕ್ಷಮೆಗೆ ಪಟ್ಟು ಹಿಡಿದರು. ಇದಕ್ಕೆ ಮಣಿದ ರವಿಕುಮಾರ್, ನಾನು ಉಗ್ರ ಅಂದಿಲ್ಲ ಆದ್ರೂ ಕ್ಷಮೆ ಕೇಳ್ತೀನಿ ಎಂದರು.

    ತುಕ್ಡೇ ಗ್ಯಾಂಗ್:
    ಕಲಾಪದಲ್ಲಿ ಆಡಳಿತ-ವಿಪಕ್ಷಗಳ ನಡುವೆ ತುಕ್ಡೇ ತುಕ್ಡೇ ಫೈಟ್ ಸಖತ್ ಜೋರಾಗಿತ್ತು. ಸಿದ್ದರಾಮಯ್ಯ ಮಾತನಾಡುತ್ತಾ, ಭಾರತ ಮಾತೆಯನ್ನು ಬಿಜೆಪಿಯವರಿಗೆ ಗುತ್ತಿಗೆ ಕೊಟ್ಟಿಲ್ಲ. ದೇಶದ 135 ಕೋಟಿ ಜನ ಭಾರತ ಮಾತೆಯ ಮಕ್ಕಳು ಎಂದರು. ಇದಕ್ಕೆ ಕೂಡ್ಲೇ ತಿರುಗೇಟು ನೀಡಿದ ಸಚಿವ ಬಸವರಾಜ ಬೊಮ್ಮಾಯಿ, ನೀವು ತುಕ್ಡೇ ಗ್ಯಾಂಗ್ ಮಾಲೀಕರು ಎಂದು ಜರೆದರು. ಇದರಿಂದ ಸಿಟ್ಟಾದ ಕಾಂಗ್ರೆಸ್‍ನ ಪ್ರಿಯಾಂಕ್ ಖರ್ಗೆ, ನಾವ್ ತುಕ್ಡೇ ಗ್ಯಾಂಗ್ ಆಗಿದ್ದರೆ ನಮ್ಮನ್ನು ಬಂಧಿಸಿ ಅಂತ ಸವಾಲು ಹಾಕಿದರು. ಆಡಳಿತ ಮಾಡಿ ಅಂದ್ರೆ ಪಾಕಿಸ್ತಾನ ಅಂತೀರಿ. ನಿಮ್ಮ ಪ್ರಧಾನಿ ಪಾಕಿಸ್ತಾನದಲ್ಲಿ ಪುಗ್ಸಟ್ಟೆ ಬಿರಿಯಾನಿ ತಿಂದು ಬಂದವರು ಅಂತ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಸಹ ಸಿಟ್ಟಾದರು. ಮಸೂದ್ ಅಜರ್‍ನನ್ನು ಕಂದಹಾರ್‍ಗೆ ಬಿಟ್ಟು ಬಂದವರು ನೀವು. ನಿಮ್ಮಿಂದ ನಾವು ದೇಶ ಪ್ರೇಮದ ಪಾಠ ಕಲಿಯಬೇಕಾಗಿಲ್ಲ ಅಂತ ತಿವಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸ್ಪೀಕರ್ ಕಾಗೇರಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

    ಸದನದಲ್ಲಿ ಹುಲಿಯಾ-ರಾಜಾಹುಲಿ ನಡುವಿನ ವಾಕ್ಸಮರ ಜೋರಾಗಿತ್ತು. ಕಾನೂನು ಸುವ್ಯವಸ್ಥೆ ಕುರಿತ ನಿಲುವಳಿ ಸೂಚನೆ ಮೇಲೆ ಚರ್ಚೆಗೆ ಈಗಲೇ ಅವಕಾಶ ಮಾಡಿಕೊಡಿ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಆದರೆ ನಾಳೆ ಮಧ್ಯಾಹ್ಮ 3 ಗಂಟೆಗೆ ನಿಯಮ 69ರ ಅಡಿ ಚರ್ಚೆ ನಡೆಸಲು ಸ್ಪೀಕರ್ ಅವಕಾಶ ನೀಡುವುದಾಗಿ ತಿಳಿಸಿದರು. ಇದಕ್ಕೆ ಸಿದ್ದರಾಮಯ್ಯ ಅವರು ಒಪ್ಪದೇ ಈ ರೀತಿಯಾದರೆ ನಾವು ಸದನಕ್ಕೆ ಯಾಕೆ ಬರ್ಬೇಕು. ನಿಮಗೆ ಇಷ್ಟ ಬಂದ ಹಾಗೆ ಮಾಡಿಕೊಳ್ಳಿ. ನಮ್ಮನ್ನು ಕರೆಯಲೇಬೇಡಿ ಅಂತ ಕೋಪದಿಂದ ನುಡಿದರು.

    ಈ ವೇಳೆ ಸಿಎಂ ಯಡಿಯೂರಪ್ಪ ಫುಲ್ ಗರಂ ಆದರು. ಸ್ಪೀಕರ್ ಕಾಗೇರಿ ಅವರಿಗೆ ನೀವು ಹೀಗೆ ಆದೇಶ ನೀಡಿ ಎಂದು ಸೂಚಿಸವಂತಿಲ್ಲ ಎಂದರು. ಇದೇ ವಿಚಾರವಾಗಿ ಅರ್ಧ ಗಂಟೆಕಾಲ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಜಟಾಪಟಿ ನಡೆಯಿತು. ಆದರೆ ಚರ್ಚೆ ನಡೆಸಲು ಸ್ಪೀಕರ್ ಅವಕಾಶ ನೀಡಲಿಲ್ಲ. ಹೀಗಾಗಿ ಕಾಂಗ್ರೆಸ್ ಶಾಸಕರು ಸಭಾತ್ಯಾಗ ಮಾಡಿದರು. ಮಧ್ಯಾಹ್ನದ ಬಳಿಕ ಸ್ಪೀಕರ್ ಕೊಠಡಿಯಲ್ಲಿ ಸಂಧಾನ ನಡೆಯಿತು. ಬಳಿಕ ಕಲಾಪದಲ್ಲಿ ಕಾಂಗ್ರೆಸ್ ಶಾಸಕರು ಪಾಲ್ಗೊಂಡರು.

    ಬಳ್ಳಾರಿಯ ಮರಿಯಮ್ಮನ ಬಳಿ ನಡೆದ ಅಪಘಾತ ಪ್ರಕರಣ ಮೇಲ್ಮನೆಯಲ್ಲಿ ಸದ್ದು ಮಾಡಿದೆ. ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಎಸ್‍ಆರ್ ಪಾಟೀಲ್, ನಲ್ಪಾಡ್ ಕಾರು ಅಪಘಾತ ಪ್ರಕರಣದಲ್ಲಿ ಯಾವುದೇ ಜೀವ ಹಾನಿ ಆಗದಿದ್ರೂ, ಅದನ್ನು ವೈಭವೀಕರಣ ಮಾಡಲಾಯ್ತು. ಆದ್ರೆ, ಮಂತ್ರಿ ಮಗನೊಬ್ಬ ಅಪಘಾತ ಮಾಡಿ 2 ಸಾವುಗಳಿಗೆ ಕಾರಣನಾಗಿದ್ದಾನೆ. ಆದ್ರೂ ಮಂತ್ರಿಮಗನ ವಿರುದ್ಧ ಕೇಸ್ ದಾಖಲಿಸಿಲ್ಲ. ಇದು ದಪ್ಪ ಚರ್ಮದ ಸರ್ಕಾರ. ಇಂತಹ ಭಂಡ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

  • ಸದನಕ್ಕೆ ಚಕ್ಕರ್, ಉಪ್ಪು ಹುಳಿ ಖಾರಕ್ಕೆ ಅಂಬರೀಶ್ ಹಾಜರ್

    ಸದನಕ್ಕೆ ಚಕ್ಕರ್, ಉಪ್ಪು ಹುಳಿ ಖಾರಕ್ಕೆ ಅಂಬರೀಶ್ ಹಾಜರ್

    ಬೆಂಗಳೂರು: ಬೆಳಗಾವಿಯಲ್ಲಿ ಆಯೋಜನೆಗೊಂಡಿರುವ ವಿಶೇಷ ಅಧಿವೇಶನಕ್ಕೆ ಚಕ್ಕರ್ ಹಾಕಿ ಉಪ್ಪು ಹುಳಿ ಖಾರ ಸಿನಿಮಾದ ಕಾರ್ಯಕ್ರಮಕ್ಕೆ ಮಾಜಿ ವಸತಿ ಸಚಿವ ಅಂಬರೀಶ್ ಹಾಜರಾಗಿದ್ದು ಟೀಕೆಗೆ ಗುರಿಯಾಗಿದೆ.

    ಸೋಮವಾರದಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಆದರೆ ನಟ ಅಂಬರೀಶ್ `ಉಪ್ಪು ಹುಳಿ ಖಾರ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.

    ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ `ಉಪ್ಪು ಹುಳಿ ಖಾರ’ ಚಿತ್ರದ ಟೀಸರ್ ಲಾಂಚ್ ಮಾಡಲು ಅಂಬರೀಶ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ  ಟೀಸರ್ ಲಾಂಚ್ ಮಾಡಿದ ಅಂಬರೀಶ್ ಉಪ್ಪು ಹುಳಿ ಖಾರ ಚಿತ್ರದ ರೋಮಿಯೋ ಹಾಡಿಗೆ ಸ್ಜೇಜ್ ಮೇಲೆ ಸ್ಟೆಪ್ ಹಾಕಿದರು. ಮಾಲಾಶ್ರೀ ಅಂಬರೀಶ್‍ಗೆ ಲವ್ ಯು ಅಂದ್ರು ಅದಕ್ಕೆ ಅಂಬರೀಶ್ ಮೀಟು ಲವ್ ಎಂದು ಹೇಳಿ ಸ್ಜೇಜ್ ಮೇಲೆ ಮನೋರಂಜನೆ ನೀಡಿದರು.

    ವಿಧಾನಸಭಾ ಸಚಿವಾಲಯದಿಂದ ಸಿಕ್ಕಿದ ಮಾಹಿತಿ ಪ್ರಕಾರ ಸಚಿವ ಸ್ಥಾನ ಕಳೆದುಕೊಂಡ ಮೇಲೆ ಕೇವಲ ನಾಲ್ಕು ದಿನ ಮಾತ್ರ ಕಲಾಪಕ್ಕೆ ಅಂಬರೀಶ್ ಹಾಜರಾಗಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅಂಬರೀಶ್ ಮೇ 2013ರಿಂದ 2016ರ ಜೂನ್ ವರೆಗೆ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿ ಬಳಿಕ ರಾಜೀನಾಮೆ ನೀಡಿದ್ದರು.

    ಉತ್ತರ ಕರ್ನಾಟಕದ ಸಮಸ್ಯೆ ಪರಿಹಾರಕ್ಕಾಗಿ ಬೆಳಗಾವಿಯಲ್ಲಿ ಅಧಿವೇಶನ ಕರೆಯಲಾಗಿದೆ. ಒಟ್ಟು 225 ಶಾಸಕರ ಪೈಕಿ ಮೊದಲ ದಿನ ಬೆಳಗ್ಗೆ 11 ಗಂಟೆಗೆ ಹಾಜರಾಗಿದ್ದು ಕೇವಲ 20 ಮಂದಿ ಮಾತ್ರ.

    ಕೊನೇ ಪಕ್ಷದ ಇದು ವರ್ಷದ ಕೊನೇ ಅಧಿವೇಶನ. ಚುನಾವಣೆ ಹತ್ತಿರ ಇದೆ. ಜನ ನಮ್ಮ ನೋಡುತ್ತಿರುತ್ತಾರೆ. ಈ ಬಾರಿಯಾದ್ರೂ ನಾವು ಸದನದಲ್ಲಿ ಕಾಣಿಸಿಕೊಳ್ಳೋಣ ಎನ್ನುವ ಭಯವೂ ಶಾಸಕರಿಗೆ ಇಲ್ಲ. ಜವಾಬ್ದಾರಿ ಮೊದಲೇ ಇಲ್ಲದಂತೆ ವರ್ತಿಸಿದ್ದಾರೆ. ಶಾಸಕರ ಹಾಜರಾತಿ ಕಡಿಮೆ ಇದ್ದ ಕಾರಣ ಒಂದೇ ನಿಮಿಷಕ್ಕೆ ಸ್ಪೀಕರ್ ಕೋಳಿವಾಡ ಕಲಾಪವನ್ನು ಮುಂದೂಡಿದ್ದರು.

    10 ದಿನಗಳ ಅಧಿವೇಶನಕ್ಕೆ ಬರೋಬ್ಬರಿ 28 ರಿಂದ 30 ಕೋಟಿ ರೂ. ಖರ್ಚು ಆದರೆ ದಿನಕ್ಕೆ ಎರಡೂವರೆಯಿಂದ ಮೂರು ಕೋಟಿ ರೂ. ವೆಚ್ಚವಾಗುತ್ತದೆ. ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ 2,500 ರೂ. ಸಾರಿಗೆ ಭತ್ಯೆ ನೀಡಿದರೆ, ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ 5 ಸಾವಿರ ರೂ.ಸಾರಿಗೆ ಭತ್ಯೆ ನೀಡಲಾಗುತ್ತದೆ.