Tag: assembly election results

  • ಮಧ್ಯಪ್ರದೇಶದಲ್ಲಿ ದಿಗ್ವಿಜಯದ ಬೆಳ್ಳಿಗೆರೆ, ರಾಜಸ್ಥಾನದಲ್ಲಿ ಗೆಲುವಿನ ರಾಜಗೆರೆ, ಲೋಕ ಸಮರಕ್ಕೆ ಮುನ್ನುಡಿ: ವಿಜಯೇಂದ್ರ

    ಮಧ್ಯಪ್ರದೇಶದಲ್ಲಿ ದಿಗ್ವಿಜಯದ ಬೆಳ್ಳಿಗೆರೆ, ರಾಜಸ್ಥಾನದಲ್ಲಿ ಗೆಲುವಿನ ರಾಜಗೆರೆ, ಲೋಕ ಸಮರಕ್ಕೆ ಮುನ್ನುಡಿ: ವಿಜಯೇಂದ್ರ

    ಬೆಂಗಳೂರು: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ (Assembly Election Results) ಮೂರರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಇದರ ಬೆನ್ನಲ್ಲೇ ಬಿಜೆಪಿ (BJP) ರಾಜ್ಯಾಧ್ಯಕ್ಷ್ಯ ಬಿ.ವೈ ವಿಜಯೇಂದ್ರ (B.Y Vijayendra), ಮಧ್ಯಪ್ರದೇಶದಲ್ಲಿ ದಿಗ್ವಿಜಯದ ಬೆಳ್ಳಿಗೆರೆ, ರಾಜಸ್ಥಾನದಲ್ಲಿ ಗೆಲುವಿನ ರಾಜಗೆರೆ ಅಚ್ಚೊತ್ತಿರುವ ಮತದಾರರು ಛತ್ತೀಸ್‍ಗಢದಲ್ಲಿ ವಿರೋಚಿತ ಗೆಲುವಿಗೆ ಬೆಂಬಲ ನೀಡಿದ್ದಾರೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

    ಮತದಾರರು ಬರುವ 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಪರ ಅದ್ಭುತ ಮುನ್ನುಡಿ ಬರೆದಿದ್ದಾರೆ. ಜನ ದೇಶದ ರಕ್ಷಣೆಯ ಗ್ಯಾರಂಟಿ ಪರ ನಿಲ್ಲುತ್ತಾರೆ. ಆಮಿಷದ ಗ್ಯಾರಂಟಿಗಳ ಪರ ನಿಲ್ಲುವುದಿಲ್ಲ ಎಂಬ ಸಂದೇಶವನ್ನು ಸೈಮಿಫೈನಲ್ ಫಲಿತಾಂಶ ರವಾನಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Madhya Pradesh: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಸಿಎಂ ಅಭಿನಂದನೆ ಪೋಸ್ಟರ್‌ ಹಾಕಿದ ಕಾಂಗ್ರೆಸ್‌

    ಭಾರತಕ್ಕಾಗಿ ಲೋಕ ಸಮರ-ಮೋದಿಜೀಗಾಗಿ ಧರ್ಮ ವಿಜಯ ಎಂಬುದು ನಮ್ಮ ಮುಂದಿನ ಗುರಿಯಾಗಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದ ಮತದಾರ ಬಂಧುಗಳಿಗೆ ಕೃತಜ್ಞತಾ ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

    ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯೆ ನೀಡಿದ ಅವರು, ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂದು ಇಂಡಿಯಾ ಒಕ್ಕೂಟ ಹೇಳಿತ್ತು. ಈಗ ದೇಶದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವ ಬಯಕೆಯನ್ನು ಈ ಫಲಿತಾಂಶದ ಮೂಲಕ ನೀಡಿದ್ದಾರೆ. ಪಂಚರಾಜ್ಯಗಳ ಫಲಿತಾಂಶ ಸೆಮಿಫೈನಲ್ ಎನ್ನಲಾಗಿತ್ತು. ಈ ಪಂದ್ಯದಲ್ಲಿ ಬಿಜೆಪಿ ಪರ ಅಲೆ ಸುನಾಮಿ ರೀತಿಯಲ್ಲಿ ಎದ್ದಿರುವುದು ಕಾಣುತ್ತಿದೆ. ಈ ವಿಜಯ ಯಾತ್ರೆ ಇಲ್ಲಿಗೆ ನಿಲ್ಲುವುದಿಲ್ಲ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವವರೆಗೂ ಇರಲಿದೆ ಎಂದಿದ್ದಾರೆ.

    ತೆಲಂಗಾಣದಲ್ಲಿ ಬಹಳ ನಿರೀಕ್ಷೆ ಇರಲಿಲ್ಲ. ಕರ್ನಾಟಕ ಫಲಿತಾಂಶದಿಂದ ನಮಗೆ ಹಿನ್ನಡೆಯಾಗಿತ್ತು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೂ, ತೆಲಂಗಾಣದಲ್ಲಿ ಲೋಕಸಭೆಯಲ್ಲಿ ಬಿಜೆಪಿ ಗೆಲ್ಲಲಿದೆ. ಗ್ಯಾರಂಟಿ ಎಲ್ಲಾ ಕಡೆ ವರ್ಕ್ ಆಗಿಲ್ಲ. ಕರ್ನಾಟಕದಲ್ಲಿ ಮತದಾರರ ಕಣ್ಣಿಗೆ ಬೂದಿ ಎರಚಿದಂತೆ ತೆಲಂಗಾಣದಲ್ಲೂ ಬೂದಿ ಎರಚಿ ಗೆದ್ದಿದ್ದಾರೆ. ಬಿಆರ್‍ಎಸ್ ಆಡಳಿತ ವಿರೋಧಿ ಅಲೆ ನಮಗೆ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಆರೇ ತಿಂಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಕಾರ್ಯವೈಖರಿಯನ್ನು ನೋಡಿ ಬೇಸತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಲಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಛತ್ತೀಸ್‍ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಗೆಲುವಿನತ್ತ ಸಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ (Congress) ಮುನ್ನಡೆ ಸಾಧಿಸಿದೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

  • 5 ವರ್ಷ ಪೂರ್ಣಗೊಳಿಸಿ ಮತ್ತೆ ಅಧಿಕಾರಕ್ಕೇರಿದ ಮೊದಲ ಯುಪಿ ಸಿಎಂ ಯೋಗಿ

    5 ವರ್ಷ ಪೂರ್ಣಗೊಳಿಸಿ ಮತ್ತೆ ಅಧಿಕಾರಕ್ಕೇರಿದ ಮೊದಲ ಯುಪಿ ಸಿಎಂ ಯೋಗಿ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಜಯಗಳಿಸುವುದರ ಜೊತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯ ರಾಜಕೀಯದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಬಳಿಕ ಮತ್ತೆ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೇರಿದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ.

    ಈ ಹಿಂದೆ ಉತ್ತರ ಪ್ರದೇಶದಲ್ಲಿ ನಾಲ್ವರು ಮುಖ್ಯಮಂತ್ರಿಗಳು ಅಧಿಕಾರಕ್ಕೆ ಮರಳಿ ಪಡೆದಿದ್ದರು. ಆದರೆ ಅವರಲ್ಲಿ ಯಾರೂ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿರಲಿಲ್ಲ. 1985ರಲ್ಲಿ ನಾರಾಯಣ್ ದತ್ ತಿವಾರಿ ಅವರು ಸತತವಾಗಿ ಗೆದ್ದ ಉತ್ತರ ಪ್ರದೇಶದ (ಅವಿಭಜಿತ) ಕೊನೆಯ ಮುಖ್ಯಮಂತ್ರಿಯಾಗಿದ್ದರು. ಇದಾದ 37 ವರ್ಷಗಳ ನಂತರ ಯೋಗಿ ಆದಿತ್ಯನಾಥ್ 5 ವರ್ಷಗಳ ಅಧಿಕಾರವನ್ನು ಉಳಿಸಿಕೊಂಡ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಇದನ್ನೂ ಓದಿ: ಮಹಿಳೆಯರು ಬಿಜೆಪಿಗೆ, ಪುರುಷರು ಎಸ್‍ಪಿಗೆ ಮತಹಾಕಿರಬೇಕು: ಚಂದ್ರಕಾಂತ್ ಪಾಟೀಲ್

    1957 ರಲ್ಲಿ ಸಂಪೂರ್ಣಾನಂದ, 1962 ರಲ್ಲಿ ಚಂದ್ರಭಾನು ಗುಪ್ತಾ ಮತ್ತು 1974 ರಲ್ಲಿ ಹೇಮಾವತಿ ನಂದನ್ ಬಹುಗುಣ (ಲೋಕಸಭಾ ಸಂಸದೆ ರೀಟಾ ಬಹುಗುಣ ಜೋಶಿ ಅವರ ತಂದೆ) ಅನುಕ್ರಮವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿ 5 ವರ್ಷಗಳ ಕಾಲ ಪೂರೈಸಿದ್ದರು. ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆಯಲ್ಲಿ ವಿರೋಧ ಪಕ್ಷ ಧೂಳಿಪಟ: ಬೊಮ್ಮಾಯಿ

    ಇದೀಗ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಂಡು ಮತ್ತೆ ಅಧಿಕಾರವನ್ನು ಮರಳಿ ಪಡೆಯುತ್ತಿರುವ ಮೊದಲ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಐದು ವರ್ಷಗಳ ಪೂರ್ಣ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ರಾಜ್ಯದ ಮೂರನೇ ಮುಖ್ಯಮಂತ್ರಿಯಾಗಿದ್ದಾರೆ. ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ (2007-12) ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (2012-17) ಅವರು ಅಧಿಕಾರವನ್ನು ಪೂರ್ಣವಾಗೊಳಿಸಿದ್ದರು.

  • ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಹುತೇಕ ಖಚಿತ

    ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಹುತೇಕ ಖಚಿತ

    – ಸ್ವಂತ ಬಲದ ರಚನೆಗೆ ಬೇಕಿದೆ 1 ಕ್ಷೇತ್ರ
    – ಬಿಎಸ್‍ಪಿ ಬೆಂಬಲ ಸಾಧ್ಯತೆ

    ಭೋಪಾಲ್: ಮಧ್ಯಪ್ರದೇಶದಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು, ಕಾಂಗ್ರೆಸ್ ಸರ್ಕಾರ ರಚನೆ ಬಹುತೇಕ ಖಚಿತವಾಗಿದೆ.

    ಕಳೆದ 23 ಗಂಟೆಗಳಿಂದ ನಡೆಯುತ್ತಿರುವ ಹಾವು-ಏಣಿ ಆಟದಲ್ಲಿ ಕಾಂಗ್ರೆಸ್ 115 ಸ್ಥಾನಗಳನ್ನು ಪಡೆದಿದ್ದು, ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು 1 ಸ್ಥಾನದ ಕೊರತೆ ಇದೆ. ಬಿಜೆಪಿ 108 ಸ್ಥಾನ ಗಳಿಸಿ ಕಾಂಗ್ರೆಸ್ ಬಿಗ್ ಫೈಟ್ ನೀಡಿದೆ. ಬಿಎಸ್‍ಪಿ ಬೆಂಬಲ ನೀಡಿದರೆ ಕಾಂಗ್ರೆಸ್ ಅಧಿಕಾರ ರಚನೆ ಮಾಡುವದರಲ್ಲಿ ಸಂಶಯವಿಲ್ಲ. ಮಂಗಳವಾರ ರಾತ್ರಿಯೇ ರಾಜ್ಯಪಾಲರ ಭೇಟಿಗೆ ಕಾಂಗ್ರೆಸ್ ಅವಕಾಶ ಕೇಳಿತ್ತು. ಆದ್ರೆ ಮತ ಎಣಿಕೆ ಮುಗಿಯೋವರೆಗೂ ಯಾರಿಗೂ ಅವಕಾಶವಿಲ್ಲ ಎಂದು ರಾಜ್ಯಪಾಲರು ಸ್ಪಷ್ಟನೆ ನೀಡಿದ್ರು.

    ಒಟ್ಟಿನಲ್ಲಿ ಕ್ಷಣಕ್ಷಣಕ್ಕೂ ಬದಲಾದ ಫಲಿತಾಂಶ, ದೇಶದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಾಣದ ಪೈಪೋಟಿ, ನಿರೀಕ್ಷಿಸದ ಅಚ್ಚರಿ ಬೆಳವಣಿಗೆಗೆ ಮಧ್ಯಪ್ರದೇಶ ಮತ ಎಣಿಕೆ ಸಾಕ್ಷಿಯಾಗಿದೆ. ಸದ್ಯ ಆಪರೇಷನ್ ಕಮಲ ಸದ್ದು ಕೇಳಿಬಂದಿದ್ದು, ಕೇಂದ್ರ ಸಚಿವ ತೋಮರ್ ಭೋಪಾಲ್‍ನಲ್ಲಿ ಬಿಡಾರ ಹೂಡಿದ್ದಾರೆ. ಸರ್ಕಾರ ರಚನೆಗೆ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

    ಇದೇ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಎಲ್ಲ 230 ಕ್ಷೇತ್ರಗಳಲ್ಲಿ ಇವಿಎಂನಲ್ಲಿ ಬಿದ್ದ ಮತವನ್ನು ಖಾತರಿಗೊಳಿಸಲು ಬಳಸಲಾಗಿದ್ದ ವಿವಿಪ್ಯಾಟ್(ವೋಟರ್ ವೆರಿಫೈಡ್ ವೋಟರ್ ಟ್ರಯಲ್) ಬಳಕೆ ಮಾಡಲಾಗಿದೆ. ಹೀಗಾಗಿ ಪ್ರತಿ ಸುತ್ತಿನ ಎಣಿಕೆ ಮಾಡಿದ ಬಳಿಕ ವಿವಿಪ್ಯಾಟ್ ಪರಿಶೀಲನೆ ಮಾಡಲಾಗುತ್ತದೆ. ಪ್ರತಿ ಸುತ್ತಿನ ಎಣಿಕೆಯಾದ ಬಳಿಕ ಏಜೆಂಟರ ಸಹಿಯನ್ನು ಪಡೆದು ಮುಂದಿನ ಸುತ್ತಿನ ಎಣಿಕೆ ಮಾಡಲಾಗುತ್ತದೆ. ಈ ಸಮಯದಲ್ಲಿ ಆಕ್ಷೇಪಣೆಗಳು ಬಂದರೆ ಮತ್ತೊಮ್ಮೆ ಮತ ಎಣಿಕೆ ಮಾಡಲಾಗುತ್ತದೆ. ಹೀಗಾಗಿ ಫಲಿತಾಂಶ ಮಧ್ಯರಾತ್ರಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.

    ಮತ ಎಣಿಕೆ ವಿಳಂಬಕ್ಕೆ ಕಾರಣ:
    ಆಯಾ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರತಿ ಅಭ್ಯರ್ಥಿಯಿಂದ ಮತಗಳ ಪ್ರಮಾಣವನ್ನು ಲಿಖಿತವಾಗಿ ದೃಢೀಕರಿಸುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದ್ದರಿಂದ ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ವಿಳಂಬವಾಯಿತು. ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆದಿರುವ ಮತ ಎಣಿಕೆ ಪ್ರಕ್ರಿಯೆಯಲ್ಲಿ ಪ್ರತಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು, ಪ್ರತಿ ಸುತ್ತಿನಲ್ಲಿ ತಾವು ಪಡೆದ ಮತಗಳನ್ನು ದೃಢೀಕರಿಸುವ ಸಂಬಂಧ ಅರ್ಜಿ ನಮೂನೆ ಭರ್ತಿ ಮಾಡಿ, ಸಹಿ ಮಾಡಿ ಕೊಡಬೇಕಿತ್ತು. ಈ ಪ್ರಕ್ರಿಯೆಯಿಂದ ಫಲಿತಾಂಶ ವಿಳಂಭವಾಯ್ತು. ಅಲ್ಲದೆ, ಮಧ್ಯಪ್ರದೇಶದ 230 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆ ಪೈಕಿ ಶೇ.15 ರಷ್ಟು ಮತಗಟ್ಟೆಗಳಲ್ಲಿ ಬಳಸಿರುವ ಇವಿಎಂ ಯಂತ್ರಗಳೊಂದಿಗೆ ಅಳವಡಿಸಿದ್ದ ವಿವಿ ಪ್ಯಾಟ್‍ಗಳ ಮತಗಳನ್ನು ತಾಳೆ ಹಾಕುವುದನ್ನು ಕಡ್ಡಾಯಗೊಳಿಸಿದ್ದು ಮತ ಎಣಿಕೆಯ ವಿಳಂಬಕ್ಕೆ ಮತ್ತೊಂದು ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv