Tag: assembly election result

  • ಸಿಕ್ಕಿಂ ಅಸೆಂಬ್ಲಿಯಲ್ಲಿ SKM ಸುನಾಮಿ- ಚಾಮ್ಲಿಂಗ್ ಪಕ್ಷ ಧೂಳೀಪಟ!

    ಸಿಕ್ಕಿಂ ಅಸೆಂಬ್ಲಿಯಲ್ಲಿ SKM ಸುನಾಮಿ- ಚಾಮ್ಲಿಂಗ್ ಪಕ್ಷ ಧೂಳೀಪಟ!

    ಗ್ಯಾಂಗ್ಟಾಕ್: ಲೋಕಸಭಾ ಚುನಾವಣೆ ಫಲಿತಾಂಶ ಬರುವ ಮುನ್ನವೇ ಇಂದು ಸಿಕ್ಕಿಂ (Sikkim) ಮತ್ತು ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣಾ ಫಲಿತಾಂಶ (Assembly Election Result 2024) ಹೊರಬಿದ್ದಿದೆ.

    ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM) ಕ್ಲೀನ್ ಸ್ವೀಪ್ ಮಾಡಿದೆ. 32 ಸ್ಥಾನಗಳ ಪೈಕಿ ಬರೋಬ್ಬರಿ 31ರಲ್ಲಿ ಗೆದ್ದು ದಿಗ್ವಿಜಯ ಸಾಧಿಸಿದೆ. ಎಸ್‌ಡಿಎಫ್ ಪಕ್ಷ ಕೇವಲ ಒಂದು ಸ್ಥಾನಕ್ಕೆ ಸೀಮಿತವಾಗಿದೆ. ಸಿಕ್ಕಿಂನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು ಆದರೆ ಈ  ಎರಡೂ ಪಕ್ಷಗಳು ಖಾತೆಯನ್ನೇ ತೆರೆದಿಲ್ಲ.

    ಸಿಕ್ಕಿಂನಲ್ಲಿ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಎಸ್‍ಕೆಎಂ ಮತ್ತು ಮಾಜಿ ಸಿಎಂ  ಪವನ್ ಕುಮಾರ್ ಚಾಮ್ಲಿಂಗ್ (Pawan Kumar Chamling)  ನೇತೃತ್ವದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (SDF) ನಡುವೆ ಸ್ಪರ್ಧೆ ಏರ್ಪಟ್ಟಿತ್ತು. 146 ಅಭ್ಯರ್ಥಿಗಳ ಪೈಕಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ಅವರ ಪತ್ನಿ ಕೃಷ್ಣ ಕುಮಾರಿ ರೈ, ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್, ಮಾಜಿ ಭಾರತೀಯ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ ಮತ್ತು ಬಿಜೆಪಿಯ ನರೇಂದ್ರ ಕುಮಾರ್ ಸುಬ್ಬಾ ಪ್ರಮುಖ ಅಭ್ಯರ್ಥಿಗಳಾಗಿದ್ದರು. ಬೈಚುಂಗ್ ಭುಟಿಯಾ ಚುನಾವಣೆಯಲ್ಲಿ ಸೋತಿದ್ದಾರೆ. 2019 ರಲ್ಲಿ ಪ್ರೇಮ್ ಸಿಂಗ್ ತಮಾಂಗ್ (Prem Singh Tamang)  ನೇತೃತ್ವದ ಎಸ್‍ಕೆಎಂ 17 ಸ್ಥಾನಗಳನ್ನು ಗೆದ್ದರೆ, ಎಸ್‍ಡಿಎಫ್ 15 ಸ್ಥಾನಗಳನ್ನು ಗೆದ್ದಿತ್ತು. ಇದನ್ನೂ ಓದಿ: ವಿಧಾನಸಭಾ ಚುನಾವಣೆ 2024- ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಜಯ

    ಇತ್ತ ಅರುಣಾಚಲದಲ್ಲಿ (Arunachalpradesh) ಬಿಜೆಪಿ ಮತ್ತದರ ಮಿತ್ರಪಕ್ಷ ಕಾನ್ರಡ್ ಸಂಗ್ಮಾ ನೇತೃತ್ವದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ 42ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯ ಪೆಮಾಖಂಡು ಮೂರನೇ ಬಾರಿ ಸಿಎಂ ಆಗೋದು ಖಚಿತವಾಗಿದೆ. 60 ಸ್ಥಾನಗಳ ಸದಸ್ಯ ಬಲದ ಅರುಣಾಚಲದಲ್ಲಿ 10 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ರು.

  • ಜೆಡಿಎಸ್ ಸೋಲಿಗೆ ಕಾರಣ ಏನು?

    ಜೆಡಿಎಸ್ ಸೋಲಿಗೆ ಕಾರಣ ಏನು?

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ (Karnataka Election Result) ಬಹುತೇಕ ಖಚಿತವಾಗಿದೆ. ಸ್ಪಷ್ಟ ಬಹುಮತ ಕಾಂಗ್ರೆಸ್‌ಗೆ (Congress) ಬಂದಿದ್ದು, ಅಧಿಕಾರ ಹಿಡಿಯಲು ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದೆ.

    ಈ ನಡುವೆ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಹೀನಾಯ ಸೋಲು ಅನುಭವಿಸಿದೆ. ಕೇವಲ 20 ಸೀಟುಗಳನ್ನು ಗೆದ್ದಿರುವ ಜೆಡಿಎಸ್ ಎಡವಿರುವುದಕ್ಕೆ ಕೆಲವು ಕಾರಣಗಳು ಇಲ್ಲಿವೆ.

    * ಹಳೆ ಮೈಸೂರು ಭಾಗದಲ್ಲಿ ಬಿಟ್ಟು ಉಳಿದ ಭಾಗದಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆ.
    * ಹಳೆ ಮೈಸೂರು ಭಾಗದಲ್ಲಿ ಕಳೆದ ಬಾರಿ ಹೆಚ್ಚು ಸ್ಥಾನ ಕೊಟ್ಟರೂ ಕ್ಷೇತ್ರಗಳ ಅಭಿವೃದ್ಧಿ ಅಗಿಲ್ಲ ಅನ್ನೋ ಆರೋಪ.
    * ಕುಮಾರಸ್ವಾಮಿ ಒಬ್ಬರೇ ಇಡೀ ರಾಜ್ಯ ಸುತ್ತಿ ಓಡಾಡಿದ್ದು. ಮತ ತರುವ ಪರ್ಯಾಯ ನಾಯಕರು ಇಲ್ಲದೆ ಇರೋದು.
    * ಬಿಜೆಪಿ-ಕಾಂಗ್ರೆಸ್‌ನಷ್ಟು ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಇಲ್ಲದೆ ಇರೋದು.
    * ದೇವೇಗೌಡರ ಅನಾರೋಗ್ಯದಿಂದ ಹೆಚ್ಚು ಪ್ರಚಾರ ಮಾಡದೇ ಇರೋದು.
    * ಕಾಂಗ್ರೆಸ್-ಬಿಜೆಪಿಯಂತೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಪಡೆ ಇಲ್ಲದೆ ಇರೋದು.
    * ಬಿಜೆಪಿ-ಕಾಂಗ್ರೆಸ್‌ನಂತೆ ಜೆಡಿಎಸ್‌ನಲ್ಲಿ 2ನೇ ಹಂತದ ನಾಯಕರು ಇಲ್ಲದೆ ಇರೋದು.
    * ಸಮ್ಮಿಶ್ರ ಸರ್ಕಾರ ಬಂದರೆ ಮತ್ತೆ ಅನ್ಯ ಪಕ್ಷಗಳ ಜೊತೆ ಕೈ ಜೋಡಿಸಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ಗೆ ಹಳೆ ಮೈಸೂರು ಭಾಗದಲ್ಲಿ ಮತದಾರ ಮತ ಹಾಕಿರೋದು.
    * ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದಾಗ ಕಾರ್ಯಕರ್ತರಿಗೆ ಅಧಿಕಾರ ನೀಡದೇ ಇರೋದು.
    * ಸಿಎಂ ಆಗಿದ್ದಾಗ ಜನರಿಗೆ ಸಿಗದೇ ಐಶಾರಾಮಿ ಹೋಟೆಲ್‌ನಲ್ಲೆ ಹೆಚ್ಚು ಇದ್ದರು ಎಂಬ ಆರೋಪ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 135, ಬಿಜೆಪಿ 65, ಜೆಡಿಎಸ್‌ 20 ಮುನ್ನಡೆ LIVE Updates

  • ಮತ ಎಣಿಕೆ ಆರಂಭಕ್ಕೂ ಮುನ್ನ ನಾಡದೇವತೆ ಮೊರೆ ಹೋದ ಸೋಮಣ್ಣ

    ಮತ ಎಣಿಕೆ ಆರಂಭಕ್ಕೂ ಮುನ್ನ ನಾಡದೇವತೆ ಮೊರೆ ಹೋದ ಸೋಮಣ್ಣ

    ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ (Assembly Election Result) ಆರಂಭಕ್ಕೂ ಮುನ್ನ ಬೆಳ್ಳಂಬೆಳಗ್ಗೆ ಚಾಮರಾಜನಗರ (Chamarajanagar)  ಹಾಗೂ ವರುಣ (Varuna) ಕ್ಷೇತ್ರದ ಅಭ್ಯರ್ಥಿ ವಿ. ಸೋಮಣ್ಣ (V Somanna) ನಾಡದೇವತೆ ಮೊರೆ ಹೋಗಿದ್ದಾರೆ.

    ಮೈಸೂರಿನ (Mysuru) ಚಾಮುಂಡಿ ಬೆಟ್ಟಕ್ಕೆ (Chamundi Hill) ಭೇಟಿ ನೀಡಿದ ಸೋಮಣ್ಣ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಿಯ ಮೊದಲ ಪೂಜೆ ಕಾರ್ಯದಲ್ಲೇ ಸೋಮಣ್ಣ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಕಾಲಿಗೆ ಮೊಬೈಲ್‌ ಕಟ್ಟಿಕೊಂಡು, ಕೇಸರಿ ಶಾಲು ಹಾಕ್ಕೊಂಡು ಮತ ಎಣಿಕೆಗೆ ಬಂದಿದ್ದ ಏಜೆಂಟ್‌ ವಾಪಸ್‌

    ವರುಣ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿದ್ದು, ಚಾಮರಾಜನಗರದ ಜೊತೆಗೆ ವರುಣ ಕ್ಷೇತ್ರವನ್ನೂ ಸೋಮಣ್ಣ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇದೀಗ ಮತ ಎಣಿಕೆ ಪ್ರಕ್ರಿಯೆಗೂ ಮುನ್ನ ನಾಡದೇವತೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: Karnataka Election 2023 Result – ರಾಜ್ಯಾದ್ಯಂತ ಮತ ಎಣಿಕೆ ಆರಂಭ LIVE Updates

  • ಕಾಂಗ್ರೆಸ್ ಮುಕ್ತ ಭಾರತ ಮಾಡುವಲ್ಲಿ ಬಿಜೆಪಿ ವಿಫಲ – ಆತ್ಮವಿಶ್ವಾಸದಲ್ಲಿ ಸೋಲು ಕಂಡ ಕಮಲ

    ಕಾಂಗ್ರೆಸ್ ಮುಕ್ತ ಭಾರತ ಮಾಡುವಲ್ಲಿ ಬಿಜೆಪಿ ವಿಫಲ – ಆತ್ಮವಿಶ್ವಾಸದಲ್ಲಿ ಸೋಲು ಕಂಡ ಕಮಲ

    ಬೆಂಗಳೂರು: ಬಹಳ ನಿರೀಕ್ಷೆ ಹಾಗೂ ಹಲವಾರು ಕಾರಣಗಳಿಗೆ ಕುತೂಹಲ ಮೂಡಿಸಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಮೋದಿ ಸರ್ಕಾರಕ್ಕೆ ಮತದಾರ ಸ್ಪಷ್ಟ ಸಂದೇಶ ರವಾನಿಸಿದ್ದಾನೆ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದ್ದ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಕಾಂಗ್ರೆಸ್‍ಗೆ ಸಿಹಿ ನೀಡಿದ್ದರೆ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಬಿಜೆಪಿ ತಾನು ಅಧಿಕಾರದಲ್ಲಿದ್ದ ಪ್ರಮುಖ ಮೂರು ರಾಜ್ಯಗಳಾದ ರಾಜಸ್ಥಾನ, ಛತ್ತೀಸ್‍ಗಡ ಹಾಗೂ ಮಧ್ಯಪ್ರದೇಶವನ್ನು ಕೈ ಚೆಲ್ಲಿ ಸೋಲನುಭವಿಸಿದೆ.

    ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಸೋಲಲು ಮುಖ್ಯ ಕಾರಣ ಇಲ್ಲಿನ ಬಂಡಾಯ ಎಂದೇ ಹೇಳಲಾಗುತ್ತಿದೆ. ಯುವ ನಾಯಕ ಸಚಿನ್ ಪೈಲಟ್ ಮೇಲಿನ ಮತದಾರರ ಒಲವು ರಾಜಸ್ಥಾನದಲ್ಲಿ ಕಾಂಗ್ರೆಸ್‍ಗೆ ವರ್ಕೌಟ್ ಆಗಿದೆ. ಜೊತೆಗೆ ಈ ರಾಜ್ಯಗಳಲ್ಲಿ ಬಿಎಸ್ ಪಿ ಸಹ ಪ್ರಬಲವಾಗಿದ್ದು ಬಿಜೆಪಿಗೆ ಹೊಡೆತ ನೀಡಿದೆ. ಇನ್ನು ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ನಿರೀಕ್ಷೆ ಹೊಂದಿರದಿದ್ದರೂ ಒಂದಷ್ಟು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಇರಾದೆ ಹೊಂದಿತ್ತು. ಆದರೆ ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಪ್ರಬಲ ಪೈಪೋಟಿ ಬಿಜೆಪಿಯನ್ನು ಶೋಚನೀಯ ಸೋಲಿಗೆ ತಳ್ಳಿದೆ.

    ಬಿಜೆಪಿ ಅತಿಯಾದ ಆತ್ಮವಿಶ್ವಾಸವೂ ಈ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬೇರೆ ರಾಜ್ಯಗಳ ಮತದಾರರನ್ನು ಬಿಜೆಪಿಯತ್ತ ಸೆಳೆಯುವುದು ಫಲ ಕೊಟ್ಟಿಲ್ಲ.

    ಬಿಜೆಪಿ ಸೋಲಿಗೆ ಕಾರಣ..?
    * ರಫೇಲ್ ಡೀಲ್‍ನ ಕಾಂಗ್ರೆಸ್ ಆರೋಪಕ್ಕೆ ಸರಿಯಾದ ಉತ್ತರ ಕೊಡದಿರುವುದು
    * ರಾಹುಲ್ ಆಕ್ರಮಣಕಾರಿ ಪ್ರಚಾರ ಶೈಲಿ ಎದುರಿಸಲು ಮೋದಿ ವಿಫಲ
    * ಕಾಂಗ್ರೆಸ್‍ನ ಮೃದು ಹಿಂದುತ್ವಕ್ಕೆ ಪೆಟ್ಟು ಕೊಡಲು ಹೋಗಿ ಕೈ ಸುಟ್ಟುಕೊಂಡ್ರಾ..?
    * ನೋಟ್ ಬ್ಯಾನ್ ವೈಫಲ್ಯ, ನಿರಂತರ ಏರಿಕೆಯಾದ ಪೆಟ್ರೋಲ್ ಡೀಸೆಲ್ ದರ
    * ಸಿಬಿಐ-ಆರ್‍ಬಿಐ ವಿವಾದ, ರೂಪಾಯಿ ಮೌಲ್ಯದಲ್ಲಾದ ನಿರಂತರ ಇಳಿಕೆ
    * ರಾಹುಲ್ ಗಾಂಧಿ ಅವರನ್ನ ನಿರ್ಲಕ್ಷ್ಯ ಮಾಡಿದ್ದು

    ರಫೇಲ್ ಡೀಲ್‍ನ ಕಾಂಗ್ರೆಸ್ ಆರೋಪಕ್ಕೆ ಸರಿಯಾದ ಉತ್ತರ ಕೊಡದಿರುವುದು. ರಾಹುಲ್ ಗಾಂಧಿ ಆಕ್ರಮಣಾಕಾರಿ ಪ್ರಚಾರ ಶೈಲಿಯನ್ನ ಎದುರಿಸಲು ಮೋದಿ ವಿಫಲರಾದ್ರಾ ಎನ್ನುವ ಚರ್ಚೆಗಳು ಸೃಷ್ಟಿಯಾಗಿವೆ. ಕಾಂಗ್ರೆಸ್‍ನ ಮೃದು ಹಿಂದುತ್ವಕ್ಕೆ ಪೆಟ್ಟು ಕೊಡಲು ಹೋಗಿ ಈ ರೀತಿ ಆಯ್ತಾ ಅನ್ನೋ ಅನುಮಾನಗಳು ಹುಟ್ಟಿಕೊಂಡಿವೆ. ಅತಿಯಾದ ಆತ್ಮವಿಶ್ವಾಸ, ನೋಟ್‍ಬ್ಯಾನ್ ವೈಫಲ್ಯ, ನಿರಂತರ ಏರಿಕೆಯಾದ ಪೆಟ್ರೋಲ್ ಡೀಸೆಲ್ ದರ, ಸಿಬಿಐ – ಆರ್ ಬಿಐ ವಿವಾದ, ರೂಪಾಯಿ ಮೌಲ್ಯದಲ್ಲಿ ಆದ ನಿರಂತರ ಇಳಿಕೆ ಇವೆಲ್ಲ ಕೇಂದ್ರ ಸರ್ಕಾರಕ್ಕೆ ಹೊಡೆತ ನೀಡಿರುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಹುಲ್ ಗಾಂಧಿ ಅವರನ್ನ ಅಂಡರ್ ಎಸ್ಟಿಮೇಟ್ ಮಾಡಿದ್ದು, ಅವರ ಸವಾಲುಗಳಿಗೆ ಸರಿಯಾದ ಪ್ರತಿ ಸವಾಲು ಕೊಡದೇ ಇದ್ದದ್ದು, ದೇಶದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಬಿಜೆಪಿಗೆ ಮುಳುವಾದವು ಎಂಬ ಮಾತುಗಳು ಕೇಳಿ ಬರುತ್ತಿವೆ.

    ಒಟ್ಟಿನಲ್ಲಿ ಲೋಕಸಭಾ ಚುನಾವಣೆಯ ಸಮಿಫೈನಲ್ ಎಂತಲೇ ಬಿಂಬಿತವಾಗಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ಮೋದಿಗೆ ದೊಡ್ಡ ಆಘಾತ ನೀಡಿದೆ. ಯಾರೊಬ್ಬರನ್ನ ಕಡೆಗಣಿಸಬೇಕಾದರೆ ಯೋಚಿಸಬೇಕಾದ ಅನಿವಾರ್ಯತೆಯನ್ನ ಪಂಚ ರಾಜ್ಯಗಳ ಚುನಾವಣೆ ಕಲಿಸಿದೆ. ದೇಶಾದ್ಯಂತ ಹೆಚ್ಚುತ್ತಿರುವ ಜನರ ಅಸಹನೆಯನ್ನ ಮೋದಿ ಪರಿಗಣಿಸಬೇಕಿದೆ. ಚಾಣಕ್ಯನ ನೀತಿ ಕೈಕೊಡುತ್ತಿರುವುದು ಮೋದಿ ಅವರನ್ನ ಚಿಂತೆಗೆ ಹಚ್ಚಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv