Tag: assembly election 2023

  • ‘ಬೆತ್ತಲೆಯಾದ ಚಕ್ರವರ್ತಿ’ ಎಂದು ಮೋದಿ, ಯೋಗಿ ಫೋಟೋ ಹಂಚಿಕೊಂಡ ಪ್ರಕಾಶ್ ರಾಜ್

    ‘ಬೆತ್ತಲೆಯಾದ ಚಕ್ರವರ್ತಿ’ ಎಂದು ಮೋದಿ, ಯೋಗಿ ಫೋಟೋ ಹಂಚಿಕೊಂಡ ಪ್ರಕಾಶ್ ರಾಜ್

    ಬಿಜೆಪಿ (BJP) ಸರಕಾರದ ವಿರುದ್ಧ ಟೀಕಿಸುತ್ತಲೇ ಬಂದಿರುವ ಗುಡುಗುವ ನಟ ಪ್ರಕಾಶ್ ರಾಜ್ (Prakash Raj), ವಿಧಾನಸಭೆ ಚುನಾವಣೆಯಲ್ಲಿ (Assembly Election 2023) ಈ ಬಾರಿ ಬಿಜೆಪಿ ಸೋತಿರುವುದಕ್ಕೆ ಭಿನ್ನ ರೀತಿಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಅಮಿತ್ ಶಾ ಎತ್ತಿನ ಬಂಡೆ ಓಡಿಸುತ್ತಿರುವ ಮತ್ತು ಎತ್ತಿನ ಬಂಡೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಯೋಗಿ ಆದಿತ್ಯನಾಥ್ (Yogi Adityanath) ಗಂಟುಮೂಟೆ ಕಟ್ಟಿಕೊಂಡು ಹೊರಡುವಂತಹ ಪೋಟೋ ಶೇರ್ ಮಾಡಿರುವ ಅವರು, ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಖಡಕ್ ಅಕ್ಷರಗಳಿಂದ ಅಲಂಕರಿಸಿದ್ದಾರೆ.

    ಬಿಜೆಪಿ ಬಾವುಟದಿಂದಲೇ ಗಂಟು ಮೂಟೆ ಕಟ್ಟಿಕೊಂಡು ಮೂವರು ಹೊರಡುವಂತಹ ಪೋಸ್ಟರ್ ಶೇರ್ ಮಾಡಿ, ‘ದ್ವೇಶ, ಬೂಟಾಟಿಕೆಯನ್ನು ಒದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳು. ಬೆತ್ತಲೆಯಾದ ಚಕ್ರವತಿ. ಜಸ್ಟ್ ಆಸ್ಕಿಂಕ್’ ಎಂದು ಬರೆದಿದ್ದಾರೆ. ಪ್ರಕಾಶ್ ರಾಜ್ ಮಾಡಿರುವ ಈ ಟ್ವೀಟ್ ಭಾರಿ ವೈರಲ್ ಕೂಡ ಆಗಿದೆ.

    ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಗೆ ಭಾರೀ ಪ್ರತಿಕ್ರಿಯೆ ಬಂದಿದ್ದು, ಮೋದಿ ಅಭಿಮಾನಿಗಳು ಪ್ರಕಾಶ್ ರಾಜ್ ಅವರನ್ನು ತರಾಟೆಗೆ ತಗೆದುಕೊಂಡಿದ್ದರೆ, ಪ್ರಕಾಶ್ ರಾಜ್ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ಸತ್ಯದ ಪರವಾಗಿ ಮಾತನಾಡಿದ್ದೀರಿ, ನಿಮಗೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.

    ಮೇ 11ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಟ್ಲರ್ ಫೋಟೋವನ್ನು ಶೇರ್ ಮಾಡಿದ್ದ ಪ್ರಕಾಶ್ ರಾಜ್ , ‘ಕರ್ನಾಟಕ ನೋಡಿದ್ದೇನು? ವಿದೂಶಕನ ವೇಷವನ್ನೇ.. ಅವನ ಬೆತ್ತಲೆತನವನ್ನೇ.. 13ರಂದು ಬಿಡುಗಡೆ’ ಎಂದು ಬರೆದಿದ್ದರು. ಅದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇಂದು ಮಾಡಿದ ಟ್ವೀಟ್ ಕೂಡ ಅಷ್ಟೇ ವಾದ ವಿವಾದಕ್ಕೆ ಕಾರಣವಾಗಿದೆ.

  • ಕಾಂಗ್ರೆಸ್ ಗೆದ್ದಿದ್ದು 136 ಅಲ್ಲ, 138 ಸೀಟು: ಸುರ್ಜೆವಾಲಾ

    ಕಾಂಗ್ರೆಸ್ ಗೆದ್ದಿದ್ದು 136 ಅಲ್ಲ, 138 ಸೀಟು: ಸುರ್ಜೆವಾಲಾ

    ಬಾರಿಯ ವಿಧಾನಸಭೆ ಚುನಾವಣೆಯಲ್ಲಿ (Assembly Election 2023) ಬಿಜೆಪಿ 65 ಸ್ಥಾನಗಳನ್ನು ಪಡೆದರೆ, ಜೆಡಿಎಸ್ 19 ಹಾಗೂ ಪಕ್ಷೇತರ ಅಭ್ಯರ್ಥಿಗಳು 4 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದ್ದರು. ಉಳಿದಂತೆ 136 ಸೀಟುಗಳನ್ನು ಕಾಂಗ್ರೆಸ್ (Congress) ಪಕ್ಷ ಗೆಲ್ಲುವ (Win) ಮೂಲಕ ಅಧಿಕಾರದ ಚುಕ್ಕಾಣೆ ಹಿಡಿದಿದೆ. ಆದರೆ, ಕಾಂಗ್ರೆಸ್ ಪಕ್ಷ ಗೆದ್ದಿದ್ದು ಕೇವಲ 136 ಸೀಟುಗಳಲ್ಲ, 138 ಸೀಟುಗಳು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ರಣದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala) ಹೇಳಿದರು.

    ಗೆಲುವಿನ ನಂತರ ಕೆಪಿಸಿಸಿ ಕಚೇರಿಯಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸುರ್ಜೆವಾಲಾ, ‘ಕಾಂಗ್ರೆಸ್ ಗೆದ್ದಿರುವುದು ಕೇವಲ 136 ಸ್ಥಾನಗಳು ಮಾತ್ರವಲ್ಲ, ಇನ್ನೂ ಎರಡು ಸ್ಥಾನಗಳಲ್ಲೂ ಅದು ಗೆದ್ದಿದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು. ಮುಂದುವರೆದು ಮಾತನಾಡಿದ ಅವರು, ಮೇಲುಕೋಟೆಯ ಸವೋರ್ದಯ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ, ಗೌರಿಬಿದನೂರಿನ ಪಕ್ಷೇತರ ಅಭ್ಯರ್ಥಿ ಕೆ.ಎಚ್. ಪುಟ್ಟಸ್ವಾಮಯ್ಯ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿರುವುದನ್ನು ತಿಳಿಸಿದರು. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ; ಸಿಎಂ ಸ್ಥಾನಕ್ಕೆ ಬೊಮ್ಮಾಯಿ ಇಂದು ರಾಜೀನಾಮೆ LIVE Updates

    ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್ ಬಲಾಬಲ ಇದೀಗ 138ಕ್ಕೆ ಏರಿದೆ. ಈ ಮೂಲಕ ರಾಜ್ಯದ ದೊಡ್ಡಪಕ್ಷವಾಗಿ ಹೊರಹೊಮ್ಮಿದೆ. ಈ ಮಾಧ್ಯಮ ಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.

  • ಶಿವಣ್ಣ ಪ್ರಚಾರ ಮಾಡಿದವರಲ್ಲಿ ಸೋತಿದ್ದು ಇಬ್ಬರೇ, ಗೆಲುವು ಹೆಚ್ಚು

    ಶಿವಣ್ಣ ಪ್ರಚಾರ ಮಾಡಿದವರಲ್ಲಿ ಸೋತಿದ್ದು ಇಬ್ಬರೇ, ಗೆಲುವು ಹೆಚ್ಚು

    ಬಾರಿಯ ಚುನಾವಣೆ (Assembly Election 2023) ಅಖಾಡಕ್ಕೆ ನಟ ಶಿವರಾಜ್ ಕುಮಾರ್ (Shivaraj Kumar) ಇಳಿದಿದ್ದರು. ಪತ್ನಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದರಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಶಿವಣ್ಣ ಪ್ರಚಾರ ಮಾಡಿದ್ದರು. ಬೀಗರಾದ ಮಧು ಬಂಗಾರಪ್ಪ ಸೇರಿದಂತೆ ಒಟ್ಟು ಏಳು ಜನ ಅಭ್ಯರ್ಥಿಗಳ ಪರವಾಗಿ ಅವರು ಪ್ರಚಾರ ಮಾಡಿದ್ದರು. ಅದರಲ್ಲಿ ಸೋಲಿಗಿಂತ ಗೆದ್ದವರ ಸಂಖ್ಯೆಯೇ ಹೆಚ್ಚಿದೆ.

    ಕಾಂಗ್ರೆಸ್ ಅಭ್ಯರ್ಥಿಗಳಾದ ಮಧು ಬಂಗಾರಪ್ಪ, ಸಿದ್ದರಾಮಯ್ಯ, ಕಿಮ್ಮನೆ ರತ್ನಾಕರ್, ಜಗದೀಶ್ ಶೆಟ್ಟರ್, ಲಕ್ಷ್ಮೀ ಹೆಬ್ಬಾಳ್ಕರ್, ಬೇಲೂರು ಗೋಪಾಲಕೃಷ್ಣ, ಭೀಮಣ್ಣ ನಾಯ್ಕ್  ಹೀಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಶಿವರಾಜ್ ಕುಮಾರ್ ರೋಡ್ ಶೋ ಮಾಡಿದರು. ಅಭ್ಯರ್ಥಿಗಳ ಪರವಾಗಿ ಮಾತನಾಡಿದರು. ಇದರಲ್ಲಿ ಇಬ್ಬರು ಮಾತ್ರ ಸೋತಿದ್ದು, ಉಳಿದವರ ಜಯಶಾಲಿಗಳಾಗಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ; ಸಿಎಂ ಸ್ಥಾನಕ್ಕೆ ಬೊಮ್ಮಾಯಿ ಇಂದು ರಾಜೀನಾಮೆ LIVE Updates

    ಸೊರಬ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಾಮೈದುನ ಮಧು ಬಂಗಾರಪ್ಪ ಗೆಲುವು ಸಾಧಿಸಿದ್ದರೆ, ಭೀಮಣ್ಣ ನಾಯ್ಕ್ ಶಿರಸಿ ಕ್ಷೇತ್ರ, ವರುಣಾದಲ್ಲಿ ಸಿದ್ಧರಾಮಯ್ಯ, ಬೆಳಗಾವಿ ಗ್ರಾಮಾಂತರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ಸಾಗರ ಕ್ಷೇತ್ರದಲ್ಲಿ ಬೇಲೂರು ಗೋಪಾಲಕೃಷ್ಣ ಗೆಲುವು ಸಾಧಿಸಿದ್ದಾರೆ. ಉಳಿದಂತೆ ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್, ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಗೆ ಸೋಲಾಗಿದೆ.

  • ಗೆದ್ದು ಬೀಗಿದ ಕಾಂಗ್ರೆಸ್ ಗೆ ವಿಶ್ ಮಾಡಿದ ಪಿಎಂ ನರೇಂದ್ರ ಮೋದಿ

    ಗೆದ್ದು ಬೀಗಿದ ಕಾಂಗ್ರೆಸ್ ಗೆ ವಿಶ್ ಮಾಡಿದ ಪಿಎಂ ನರೇಂದ್ರ ಮೋದಿ

    ನವದೆಹಲಿ : ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಶುಭಾಶಯ ತಿಳಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿರುವ ಕಾಂಗ್ರೆಸ್ (Congress) ನಾಯಕರಿಗೆ ಪ್ರಧಾನಿ ಶುಭ ಹಾರೈಸಿದ್ದು, ಅತ್ಯುತ್ತಮ ಆಡಳಿತ ನೀಡುವಂತೆ ಹಾರೈಸಿದ್ದಾರೆ.

    ಚುನಾವಣೆ ಗೆಲುವಿನ ಕುರಿತಾಗಿ ಟ್ವೀಟ್ ಮಾಡಿರುವ ನರೇಂದ್ರ ಮೋದಿ, ‘ಕರ್ನಾಟಕ ವಿಧಾನಸಭಾ (Assembly Election 2023) ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು. ಜನರ ಆಶೋತ್ತರಗಳನ್ನು ಅವರು ಈಡೇರಿಸಲಿ. ಅವರಿಗೆ ಹಾರೈಸುತ್ತೇನೆ’ ಎಂದು ಬರೆದಿದ್ದಾರೆ. ಆದರೆ, ಬಿಜೆಪಿ ಸೋಲಿನ ಬಗ್ಗೆ ಪ್ರಧಾನಿ ಒಂದಕ್ಷರ ಕೂಡ ಬರೆಯದೇ ಇರುವುದು ಅಚ್ಚರಿ ತಂದಿದೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ; ಸಿಎಂ ಸ್ಥಾನಕ್ಕೆ ಬೊಮ್ಮಾಯಿ ಇಂದು ರಾಜೀನಾಮೆ LIVE Updates

    ಈಗಾಗಲೇ ಬಿಜೆಪಿ ನಾಯಕರು ಮತ್ತು ಸ್ವತಃ ರಾಜ್ಯದ ಬಿಜೆಪಿ ಅಧ್ಯಕ್ಷರು ಸೋಲಿನ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಸೋಲಿನ ಬಗ್ಗೆ ವಿಮರ್ಶೆ ಮಾಡಿಕೊಂಡು, ಮುಂದಿನ ಲೋಕಸಭೆ ಚುನಾವಣೆಗೆ ತಯಾರಿ ಆಗುವುದಾಗಿ ಮಾತನಾಡಿದ್ದಾರೆ. ಅಲ್ಲದೇ, ಜನರ ಆದೇಶವನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ.

  • ಚುನಾವಣಾ ಅಖಾಡದಲ್ಲಿ ಅಪ್ಪ-ಮಕ್ಕಳು : ಗೆದ್ದೋರು ಯಾರು? ಸೋತವರು ಯಾರು?

    ಚುನಾವಣಾ ಅಖಾಡದಲ್ಲಿ ಅಪ್ಪ-ಮಕ್ಕಳು : ಗೆದ್ದೋರು ಯಾರು? ಸೋತವರು ಯಾರು?

    ಬೆಂಗಳೂರು : ಈ ಬಾರಿ ವಿಧಾನಸಭೆ ಚುನಾವಣೆ (Assembly Election 2023) ಹತ್ತು ಹಲವು ವಿಶೇಷಗಳಿಂದ ಕೂಡಿತ್ತು. ಕುಟುಂಬ ರಾಜಕಾರಣದ ಬಗ್ಗೆ ಬಹುತೇಕ ಪಕ್ಷಗಳು ಭಾಷಣ ಮಾಡಿದ್ದರೂ, ಗೆಲ್ಲುವ ಹಿತದೃಷ್ಟಿಯಿಂದ ಒಂದೇ ಕುಟುಂಬಕ್ಕೆ ಟಿಕೆಟ್ ನೀಡಿದ ಉದಾಹರಣೆಗಳು ಇವೆ. ಅದರಲ್ಲೂ ತಂದೆ (Dad) ಮಗ (Sons) ಅಥವಾ ತಂದೆ ಮಗಳಿಗೆ ಟಿಕೆಟ್ ನೀಡುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದವು ಆಯಾ ಪಕ್ಷಗಳು. ಈ ಬಾರಿ ಯಾವ ಕ್ಷೇತ್ರದಲ್ಲಿ ಯಾರೆಲ್ಲ ಅಪ್ಪ ಮಕ್ಕಳು ಅಭ್ಯರ್ಥಿಯಾಗಿದ್ದರು? ಯಾರು ಸೋತಿದ್ದಾರೆ, ಯಾರು ಗೆದ್ದಿದ್ದಾರೆ ಎನ್ನುವ ಲೆಕ್ಕಾಚಾರ ಇಲ್ಲಿದೆ.

    ಅರಕಲಗೂಡಿನಲ್ಲಿ ಜೆಡಿಎಸ್‌ (JDS) ನಿಂದ ಎ. ಮಂಜು ಜಯಗಳಿಸಿದ್ದರೆ, ಬಿಜೆಪಿಯ ಭದ್ರ ಕೋಟೆ ಎನಿಸಿದ್ದ ಮಡಿಕೇರಿಯಲ್ಲಿ ಅವರ ಮಗ ಕಾಂಗ್ರೆಸ್ (Congress) ನಿಂದ ಡಾ. ಮಂಥರ್ ಗೌಡ ಜಯಗಳಿಸಿದ್ದಾರೆ. ಇಬ್ಬರೂ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವುದು ವಿಶೇಷ.  ಜೆಡಿಎಸ್‌ ರಾಜಾಧ್ಯಕ್ಷ ಮಾಜಿ ಮುಖ್ಯಮಂತಿ ಹೆಚ್.ಡಿ. ಕುಮಾರ ಸ್ವಾಮಿ ಚನ್ನಪಟ್ಟಣದಲ್ಲಿ ಅತ್ಯಲ್ಪ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, ಮಗ ನಿಖಿಲ್ ಕುಮಾರ ಸ್ವಾಮಿ ಭಾರೀ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಎದುರು ಸೋಲು ಕಂಡಿದ್ದಾರೆ.

    ಈ ಹಿಂದೆ ಜೆಡಿಎಸ್‌ ರಾಜಾಧ್ಯಕ್ಷರಾಗಿದ್ದ ಹಾಗೂ ಹಾಲಿ ಶಾಸಕ ಜಿ.ಟಿ. ದೇವೇಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಜಯಗಳಿಸಿದರೆ, ಅವರ ಮಗ ಜಿ. ಡಿ. ಹರೀಶ್ ಗೌಡ ಅವರು ಜೆಡಿಎಸ್ ನಿಂದ ಹುಣಸೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.  ಬೆಂಗಳೂರಿನ ವಿಜಯನಗರ ಕ್ಷೇತ್ರದಿಂದ ಎಂ. ಕೃಷ್ಣ ಅವರು ಕಾಂಗ್ರೆಸ್‌ ನಿಂದ ಮತ್ತು ಅವರ ಮಗ ಪ್ರಿಯಾ ಕೃಷ್ಣ ಅವರು ಗೋವಿಂದರಾಜ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಇಬ್ಬರೂ  ಜಯ ಸಾಧಿಸಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅತೀ ಹಿರಿಯ ಸ್ಪರ್ಧಿ  91 ವರ್ಷದ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಮತ್ತು ದಾವಣಗೆರೆ ಉತ್ತರ ಕ್ಷೇತ್ರದಿಂದ ಅವರ ಮಗ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಜಯಗಳಿಸಿದ್ದಾರೆ. ಇಬ್ಬರೂ ಕೂಡ ಕಾಂಗ್ರೆಸ್‌ ನಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 135, ಬಿಜೆಪಿ 65, ಜೆಡಿಎಸ್‌ 20 ಮುನ್ನಡೆ LIVE Updates

    ಬೆಂಗಳೂರಿನ ಬಿಟಿಎಂ ಲೇಔಟ್‌ ನಿಂದ ರಾಮಲಿಂಗ ರೆಡ್ಡಿ ಅವರು ಕಾಂಗ್ರೆಸ್‌ ನಿಂದ ಜಯಗಳಿಸಿದ್ದರೆ ಅವರ ಮಗಳ ಸೌಮ್ಯ ರೆಡ್ಡಿ ಅವರು ಕಾಂಗ್ರೆಸ್‌ ನಿಂದ ಅತ್ಯಲ್ಪ 160 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ದೇವನಹಳ್ಳಿ ಕ್ಷೇತ್ರದಿಂದ ಮುನಿಯಪ್ಪ ಗೆಲುವಿನ ನಗೆ ಬೀರಿದಿದ್ದಾರೆ. ಅವರ ಪುತ್ರಿ ರೂಪಾ ಶಶಿಧರ್ ಕೆಜಿಎಫ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

  • ಸೋಲುಂಡು ಪಕ್ಷಕ್ಕೆ ಶಾಕ್ ಕೊಟ್ಟ ಬೊಮ್ಮಾಯಿ ಸಂಪುಟದ ಸಚಿವರು

    ಸೋಲುಂಡು ಪಕ್ಷಕ್ಕೆ ಶಾಕ್ ಕೊಟ್ಟ ಬೊಮ್ಮಾಯಿ ಸಂಪುಟದ ಸಚಿವರು

    ಬೆಂಗಳೂರು : ಸಾಮಾನ್ಯವಾಗಿ ಸಂಪುಟದ ಸಚಿವರನ್ನು ಗೆಲುವಿನ ಕುದುರೆಗೆ ಹೋಲಿಸುತ್ತಾರೆ. ಸೋಲರಿಯದ ಹಾಗೂ ಮತ್ತೆ ಗೆಲ್ಲುವಂತಹ ಅಭ್ಯರ್ಥಿಗಳೆಂದು ಪರಿಗಣಿಸಿ ಸಿಎಂ ಬೊಮ್ಮಾಯಿ (Basavaraja Bommai) ಸಂಪುಟದ ಅನೇಕ ಸಚಿವರಿಗೆ (Minister) ಈ ಬಾರಿ ಬಿಜೆಪಿ ಟಿಕೇಟ್ ನೀಡಲಾಗಿತ್ತು. ಆದರೆ, ಮತದಾರರ ವಿಶ್ವಾಸ ಗೆಲ್ಲುವಲ್ಲಿ ಅನೇಕ ಸಚಿವರು ವಿಫಲರಾಗಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿದ್ದ ಹಲವು ಹಾಲಿ ಸಚಿವರು ಸೋಲುಂಡು ಬಿಜೆಪಿಗೆ ಶಾಕ್ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಿದ್ದಾಜಿದ್ದಿ ಕಣವಾಗಿದ್ದ ಮುಧೋಳ ಕ್ಷೇತ್ರದಲ್ಲಿ ಮಾಜಿ ಡಿಸಿಎಂ, ಸಚಿವ ಗೋವಿಂದ ಕಾರಜೋಳ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆರ್.ಬಿ. ತಿಮ್ಮಾಪುರ 70,478 ಮತಗಳನ್ನು ಪಡೆಯುವುದರ ಮೂಲಕ ಕಾರಜೋಳ ಅವರನ್ನು ಸೋಲಿಸಿದ್ದಾರೆ. ಕಾರಜೋಳ ಈ ಬಾರಿ 54,082 ಮತಗಳನ್ನು ಪಡೆದಿದ್ದು, 16396 ಅಂತರದಲ್ಲಿ ಕಾರಜೋಳ ಸೋತಿದ್ದಾರೆ.

    ಚಿಕ್ಕಬಳ್ಳಾಪೂರ ಕ್ಷೇತ್ರವು ಜಿದ್ದಾಜಿದ್ದಿ ಕಣವಾಗಿ ಮಾರ್ಪಟ್ಟಿತ್ತು.  ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಿರುದ್ಧ ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ್ದ ಪ್ರದೀಪ್ ಈಶ್ವರ್ ಸ್ಪರ್ಧಿಸಿದ್ದರು. ಅಚ್ಚರಿ ಎನ್ನುವಂತೆ ಪ್ರದೀಪ್ ಗೆದ್ದು, ಸಚಿವರನ್ನೇ ಸೋಲಿಸಿದ್ದಾರೆ. ಪ್ರದೀಪ್ ಅವರು 85755 ಮತಗಳನ್ನು ಪಡೆದಿದ್ದರೆ, ಕೆ.ಸುಧಾಕರ್ 74068 ಮತಗಳನ್ನು ಪಡೆದು ಸೋಲನ್ನೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 135, ಬಿಜೆಪಿ 65, ಜೆಡಿಎಸ್‌ 20 ಮುನ್ನಡೆ LIVE Updates

    ಸಚಿವ ಹಾಲ್ಲಪ್ಪ ಆಚಾರ್ಯ ಯಲಬುರ್ಗ ಕ್ಷೇತ್ರದಿಂದ ಈ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಪ್ರಬಲ ಸ್ಪರ್ಧಿಯಾಗಿದ್ದ ಬಸವರಾಜ ರಾಯರೆಡ್ಡಿಯನ್ನು ಸೋಲಿಸುವ ಪಣತೊಟ್ಟಿದ್ದರು. ಆದರೆ, ಈ ಬಾರಿ ಮತದಾರ ರಾಯರೆಡ್ಡಿಗೆ ಮಣೆ ಹಾಕಿದ್ದಾನೆ. ಬಸವರಾಜ ರಾಯರೆಡ್ಡಿ 92508 ಮತಗಳನ್ನು ಪಡೆದಿದ್ದರೆ, ಹಾಲಪ್ಪ 75461 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

    ಕೆ.ಆರ್ ಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ ನಾರಾಯಣಗೌಡ ಕೂಡ ಅಚ್ಚರಿ ಎನ್ನುವಂತೆ ಸೋಲು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಿ.ಎಲ್. ದೇವರಾಜ್, ಜೆಡಿಎಸ್ ಪಕ್ಷದ ಎಚ್.ಟಿ. ಮಂಜು ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಮಂಜು 79844 ಮತ ಪಡೆದು ಗೆಲುವಿನ ಪತಾಕಿ ಹಾರಿಸಿದರೆ, 57939 ಮತಗಳನ್ನು ಪಡೆಯುವುದರ ಮೂಲಕ ದೇವರಾಜ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 37793 ಮತಗಳನ್ನು ಕೊಡುವ ಮೂಲಕ ನಾರಾಯಣಗೌಡ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ ಮತದಾರ.

    ಬಿಜೆಪಿ ಪಕ್ಷದ ಪ್ರಭಾವಿ ಸಚಿವರಾಗಿದ್ದ ಬಳ್ಳಾರಿ ಗ್ರಾಮಾಂತರ ಅಭ್ಯರ್ಥಿ ಬಿ.ಶ್ರೀರಾಮುಲು ಕೂಡ ಸೋಲುವ ಮೂಲಕ ಪಕ್ಷಕ್ಕೆ ಶಾಕ್ ನೀಡಿದ್ದಾರೆ. ಗೆಲ್ಲುವ ಕುದುರೆ ಎಂದೇ ಬಿಂಬಿತರಾಗಿದ್ದ ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ನಾಗೇಂದ್ರ 103030 ಮತಗಳನ್ನು ಪಡೆಯುವ ಮೂಲಕ ಸೋಲಿನ ರುಚಿ ಉಣಿಸಿದ್ದಾರೆ. ಶ್ರೀರಾಮುಲು 74031 ಮತಗಳನ್ನು ಪಡೆಯುವ ಮೂಲಕ ಸೋತಿದ್ದಾರೆ.

    ಅಲ್ಲದೇ ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ. ಪಾಟೀಲ್, ಹೊಸಕೋಟೆ ಕ್ಷೇತ್ರದ ಎಂಟಿಬಿ ನಾಗರಾಜ, ಚಾಮರಾಜನಗರ ಮತ್ತು ವರುಣಾ ಕ್ಷೇತ್ರದಲ್ಲಿ ವಿ.ಸೋಮಣ್ಣ, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಜೆ.ಸಿ ಮಾಧುಸ್ವಾಮಿ, ಬೀಳಗಿ ಕ್ಷೇತ್ರದಿಂದ ಮುರುಗೇಶ್ ನಿರಾಣಿ, ಕನಕಪುರ ಕ್ಷೇತ್ರದಿಂದ ಆರ್.ಅಶೋಕ್ ಸೋತಿದ್ದಾರೆ. ಆರ್. ಅಶೋಕ್ ಕನಕಪುರದಿಂದ ಸೋತರೆ, ಪದ್ಮನಾಭನಗರ ಮತಕ್ಷೇತ್ರದಿಂದ ಗೆದ್ದಿದ್ದಾರೆ.

    ಬೊಮ್ಮಾಯಿ ಸಂಪುಟದ ಸಚಿವರು

    ಗೋವಿಂದ ಕಾರಜೋಳ – ಜಲಸಂಪನ್ಮೂಲ ಖಾತೆ

    ಬಿ. ಶ್ರೀರಾಮುಲು – ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ

    ವಿ. ಸೋಮಣ್ಣ – ವಸತಿ, ಮೂಲಸೌಕರ್ಯ ಇಲಾಖೆ

    ಜೆಸಿ ಮಾಧುಸ್ವಾಮಿ – ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ

    ಮುರುಗೇಶ್ ನಿರಾಣಿ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ

    ಡಾ. ಕೆ. ಸುಧಾರಕರ್ – ರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ

    ಎಂಟಿಬಿ ನಾಗರಾಜು – ಪೌರಾಡಳಿತ, ಸಣ್ಣ ಪ್ರಮಾಣದ ಕೈಗಾರಿಕೆಗಳು,

    ನಾರಾಯಣ ಗೌಡ – ಯುವಜನ ಮತ್ತು ಕ್ರೀಡೆ, ರೇಷ್ಮೆ

    ಬಿಸಿ ಪಾಟೀಲ್- ಕೃಷಿ

    ಬಿ.ಸಿ. ನಾಗೇಶ್- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ

    ಹಾಲಪ್ಪ ಆಚಾರ್- ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

  • ಬಿಜೆಪಿ ಸೋಲಿನ ಹೊಣೆಹೊತ್ತ ರಾಜ್ಯಾಧ್ಯಕ್ಷ ಕಟೀಲ್

    ಬಿಜೆಪಿ ಸೋಲಿನ ಹೊಣೆಹೊತ್ತ ರಾಜ್ಯಾಧ್ಯಕ್ಷ ಕಟೀಲ್

    ಬಾರಿಯೂ ಅಧಿಕಾರದ ಗದ್ದುಗೆಯ ಕನಸು ಕಾಣುತ್ತಿದ್ದ ಬಿಜೆಪಿಗೆ ಕರ್ನಾಟಕ ಮತದಾರ ಶಾಕ್ ನೀಡಿದ್ದಾನೆ. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವ ಮೂಲಕ ಆಶೀರ್ವಾದ ನೀಡಿದ್ದಾನೆ. ಫಲಿತಾಂಶದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Naleen Kumar Kateel) ಮಾತನಾಡಿ, ಬಿಜೆಪಿ ಸೋಲಿನ ಹೊಣೆ ಹೊರುವುದಾಗಿ ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಕಟೀಲ್, ‘ಬಿಜೆಪಿ (BJP) ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದಕ್ಕೆ ಕರ್ನಾಟಕ ಜನತೆಗೆ ಧನ್ಯವಾದಗಳನ್ನು ಸಲ್ಲಿಸ್ತೇನೆ. ಗೆದ್ದ ಬಿಜೆಪಿ ಅಭ್ಯರ್ಥಿಗಳಿಗೆ ಹಾಗೂ ಕಾಂಗ್ರೆಸ್‌ಗೂ ಅಭಿನಂದನೆ ಸಲ್ಲಿಸ್ತೇನೆ. ಜನತಾ ಆಶೀರ್ವಾದ ಸ್ವಾಗತಿಸ್ತೇನೆ. ರಾಜ್ಯ ಒಳ್ಳೆಯ ಕಾರ್ಯಗಳಿಗೆ ಸ್ವಾಗತ ಕೊಟ್ಟಿದ್ದೇವೆ. ವಿರೋಧಕ್ಕೆ ವಿರೋಧ ಮಾಡಿದ್ದೇವೆ’ ಎಂದರು. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ; ಸಿಎಂ ಸ್ಥಾನಕ್ಕೆ ಬೊಮ್ಮಾಯಿ ಇಂದು ರಾಜೀನಾಮೆ LIVE Updates

    ಮುಂದುವರೆದು ಮಾತನಾಡಿದ ಅವರು, ‘ನಮ್ಮ ಕಾರ್ಯಕರ್ತರು ಹಗಲು, ರಾತ್ರಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ಉತ್ತಮ ಕೆಲಸ ಮಾಡಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರು ಕೆಲಸ ಮಾಡಿದ್ದಾರೆ. ಇಂದು ಬಂದಿರೋ ಫಲಿತಾಂಶವನ್ನು ನಾನು ಸ್ವಾಗತಿಸ್ತೇನೆ. ಸೋತಿರೋ ಕಡೆ ಯಾಕೆ ಸೋತಿದ್ದೇವೆ ಅಂತ ಪರಾಮರ್ಶೆ ಮಾಡ್ತೀವಿ. ಮುಂದಿನ ಲೋಕಸಭಾ ಚುನಾವಣೆಗೆ ಒಟ್ಟಾಗಿ ಕೆಲಸ ಮಾಡ್ತೀವಿ’ ಎಂದರು.

    ಮೋದಿ ರಾಲಿ ಕುರಿತು ಮಾತನಾಡಿ, ‘ಮೋದಿ ಅವರು ರೋಡ್ ಶೋ ಮಾಡಿದ್ದರಿಂದ ಕೆಲವೆಡೆ ಜನರು ಖುಷಿ ಆಗಿದ್ದಾರೆ. ತುಂಬಾ ಕಡೆ ಗೆದ್ದಿದ್ದೇವೆ. ದೊಡ್ಡ ಬಳ್ಳಾಪುರದಲ್ಲೂ ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ’ ಎಂದರು.

  • ಅಮ್ಮನ ತ್ಯಾಗಕ್ಕೆ ಮರುಗದ ಮತದಾರ: ನಿಖಿಲ್ ಕುಮಾರಸ್ವಾಮಿ ಸೋಲು

    ಅಮ್ಮನ ತ್ಯಾಗಕ್ಕೆ ಮರುಗದ ಮತದಾರ: ನಿಖಿಲ್ ಕುಮಾರಸ್ವಾಮಿ ಸೋಲು

    ಟ, ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಭಾರೀ ಅಂತರದಿಂದಲೇ ಗೆಲುವು ಸಾಧಿಸುತ್ತಾರೆ ಎಂದು ನಂಬಲಾಗಿತ್ತು. ಆದರೆ, ಆ ನಂಬಿಕೆಯನ್ನು ಹುಸಿಮಾಡಿದ್ದಾರೆ ರಾಮನಗರ (Ramanagara) ವಿಧಾನಸಭಾ ಮತದಾರರು. ಮಗನಿಗಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರವನ್ನೇ ತ್ಯಾಗ ಮಾಡಿದ್ದರು. ಆ ತ್ಯಾಗವೂ ಮಗನಿಗಾಗಿ ಫಲಿಸಲಿಲ್ಲ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ (Iqbal Hussain) ಗೆಲುವು ಸಾಧಿಸಿದ್ದಾರೆ.

    ಈ ಹಿಂದೆ ಲೋಕಸಭಾ ಚುನಾವಣೆಯಲ್ಲೂ ನಿಖಿಲ್ ಸ್ಪರ್ಧಿಸಿದ್ದರು. ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿದ್ದರು. ಅಲ್ಲಿಯೂ ನಿಖಲ್ ಸೋತಿದ್ದರು. ರಾಮನಗರದಲ್ಲಿ ಸತತವಾಗಿ ಗೆದ್ದಿದ್ದ ಜೆಡಿಎಸ್ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಈ ಮೂಲಕ ತಾಯಿಯ ಕ್ಷೇತ್ರವನ್ನೇ ನಿಖಿಲ್ ಕಾಂಗ್ರಸ್ ಗೆ ಬಿಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: Karnataka Election 2023 Result – ಬಿಜೆಪಿ ಭದ್ರಕೋಟೆ ಕೊಡಗು ಛಿದ್ರಗೊಳಿಸಿದ ಕಾಂಗ್ರೆಸ್‌ LIVE Updates

    2018ರಲ್ಲಿ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರದಲ್ಲೂ ಗೆದ್ದಿದ್ದರು. ರಾಮನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಚುನಾವಣೆಗೆ ಪತ್ನಿ ಅನಿತಾ ಕುಮಾರ್ ಸ್ವಾಮಿಗೆ ಟಿಕೆಟ್ ನೀಡಿದ್ದರು. ಅನಿತಾ ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾಗಿ, ಈ ಚುನಾವಣೆಯಲ್ಲಿ ಆ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಟ್ಟಿದ್ದರು.

    ಚುನಾವಣೆ ಆಯೋಗದ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವಂತೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ 85003 ಮತಗಳನ್ನು ಪಡೆದಿದ್ದರೆ, ನಿಖಿಲ್ ಕುಮಾರಸ್ವಾಮಿ 73910 ಮತಗಳನ್ನು ಪಡೆದಿದ್ದಾರೆ. ಗೆದ್ದ ಅಭ್ಯರ್ಥಿಗಿಂತ 11093 ಕಡಿಮೆ ಮತಗಳನ್ನು ನಿಖಿಲ್ ಪಡೆದುಕೊಳ್ಳುವ ಮೂಲಕ ಗೆಲುವಿನ ಹಾರವನ್ನು ಇಕ್ಬಾಲ್ ಕೊರಳಿಗೆ ಬೀಳುವಂತೆ ಮಾಡಿದ್ದಾರೆ.

  • ಮೋದಿ ವಿರುದ್ಧ ಮಾತನಾಡಲ್ಲ, ಇಲ್ಲಿಯೇ ಓಣಿ ಓಣಿ ತಿರುಗಿದ್ದು ಸರಿ ಅನಿಸಿಲ್ಲ:  ಖರ್ಗೆ

    ಮೋದಿ ವಿರುದ್ಧ ಮಾತನಾಡಲ್ಲ, ಇಲ್ಲಿಯೇ ಓಣಿ ಓಣಿ ತಿರುಗಿದ್ದು ಸರಿ ಅನಿಸಿಲ್ಲ: ಖರ್ಗೆ

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Assembly Election 2023) ಅತೀ ದೊಡ್ಡ ಗೆಲುವಿನ ಪಕ್ಷವಾಗಿ ಕಾಂಗ್ರೆಸ್ (Congress)ಹೊರಹೊಮ್ಮಿದೆ. ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟು ಮತದಾರ ಪಕ್ಷವನ್ನು ಕೈ ಹಿಡಿದಿದ್ದಾನೆ. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಕಾಂಗ್ರೆಸ್ ಗೆಲ್ಲಿಸಿದ್ದಕ್ಕೆ ಕರ್ನಾಟಕದ ಜನತೆಗೆ ಧನ್ಯವಾಗಳನ್ನು ತಿಳಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ‘ಜನರು ಒಳ್ಳೆ ಕೆಲಸ ಮಾಡಿದರೆ ಒಳ್ಳೆಯವರ ಕೈ ಹಿಡಿತಾರೆ. ಸೋಲಲಿ ಗೆಲ್ಲಲಿ ಜನರ ಮಧ್ಯೆ ಇರಬೇಕು. ಇದು ಕೇವಲ ಒಬ್ಬರ ಗೆಲುವಲ್ಲ, ಎಲ್ಲರೂ ಒಗ್ಗೂಡಿ ಕೆಲಸ ಮಾಡಿದ್ದಾರೆ. ಹಾಗಾಗಿ ಗೆದ್ದಿದ್ದೇವೆ. ಜೊತೆಗೆ ನಮ್ಮ ಗ್ಯಾರಂಟಿ ಕೂಡ ಕೆಲಸ ಮಾಡಿದೆ. ಗ್ಯಾರಂಟಿಗಳಿಗೆ ಜನ ಸ್ಪಂದಿಸಿದ್ದಾರೆ’ ಎಂದರು. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ; ಸಿಎಂ ಸ್ಥಾನಕ್ಕೆ ಬೊಮ್ಮಾಯಿ ಇಂದು ರಾಜೀನಾಮೆ LIVE Updates

    ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕುರಿತು ಮಾತನಾಡಿದ ಖರ್ಗೆ, ‘ಯಾವುದಕ್ಕೂ ವ್ಯಕ್ತಿಗತವಾಗಿ ಮೋದಿ ವಿರುದ್ದ ಮಾತನಾಡಲ್ಲ. ಆದರೆ ಮೋದಿಯವರು ಇಲ್ಲಿಯೇ ಓಣಿ ಓಣಿ ತಿರುಗಿದ್ದು ಸರಿ ಅನಿಸಿಲ್ಲ. ಅವರ ಕ್ಯಾಂಪೇನ್ ಮಾಡುವ ಅವರ ಸ್ಟೈಲ್ ಗೆ ನಾನು ಯಾವುದೇ ಟೀಕೆ ಮಾಡುವುದಿಲ್ಲ. ವಿಷ ಸರ್ಪದ ವಿಚಾರಗಳನ್ನೆಲ್ಲ ಈಗ ಬಿಟ್ಟುಬಿಡಿ, ನಾವೂ ಮಾತನಾಡಿದೆವು, ಅವರೂ ಮಾತನಾಡಿದರು. ಗೆದ್ದ ಮೇಲೆ ಎಲ್ಲರನ್ನೂ ತೆಗೆದುಕೊಂಡು ಹೋಗುವುದು ಈಗ ನಮ್ಮ ಕೆಲಸ’ ಎಂದರು.

  • ಮನೆಯಲ್ಲಿ ಅವಕಾಶ ಇದ್ರೂ ಮತಗಟ್ಟೆಗೆ ಬಂದೇ ವೋಟ್ ಮಾಡಿದ 103 ವರ್ಷದ ಅಜ್ಜಿ

    ಮನೆಯಲ್ಲಿ ಅವಕಾಶ ಇದ್ರೂ ಮತಗಟ್ಟೆಗೆ ಬಂದೇ ವೋಟ್ ಮಾಡಿದ 103 ವರ್ಷದ ಅಜ್ಜಿ

    ಬಳ್ಳಾರಿ: ರಾಜ್ಯದಲ್ಲಿ ಇಂದು ವಿಧಾನಸಭೆ (Assembly Election 2023) ಚುನಾವಣೆಗೆ ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಬೆಳ್ಳಂಬೆಳಗ್ಗೆಯೇ ಜನ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಅಂತೆಯೇ ಕಂಪ್ಲಿಯಲ್ಲಿ 103 ವರ್ಷದ ಅಜ್ಜಿಯೊಬ್ಬರು ಮತದಾನ ಮಾಡಿದ್ದಾರೆ.

    ಈ ಬಾರಿ ವಯಸ್ಸಾದವರಿಗೆ ಮನೆಯಿಂದಲೇ ಮತದಾನ (Vote) ಮಾಡುವ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಅಜ್ಜಿ ಮಾತ್ರ ಮತಗಟ್ಟೆಗೆ ಬಂದೇ ತಮ್ಮ ಮತ ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

    ನಾನು ಗಟ್ಟಿಮುಟ್ಟಾಗಿದ್ದೇನೆ. ಹೀಗಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ಮತದಾನ ಮಾಡಲು ನಿರ್ಲಕ್ಷ್ಯ ಮಾಡೋರಿಗೆ ಅಜ್ಜಿ ರೋಲ್ ಮಾಡೆಲ್ ಆಗಿದ್ದಾರೆ.