Tag: Assembly constituency

  • ಗೌರಿಬಿದನೂರು ಕ್ಷೇತ್ರದಲ್ಲಿ ಪಕ್ಷೇತರರದ್ದೇ ನಿರ್ಣಾಯಕ ಪಾತ್ರ – ಈ ಬಾರಿ ಶಿವಶಂಕರ ರೆಡ್ಡಿ ಗೆಲ್ತಾರಾ?

    ಗೌರಿಬಿದನೂರು ಕ್ಷೇತ್ರದಲ್ಲಿ ಪಕ್ಷೇತರರದ್ದೇ ನಿರ್ಣಾಯಕ ಪಾತ್ರ – ಈ ಬಾರಿ ಶಿವಶಂಕರ ರೆಡ್ಡಿ ಗೆಲ್ತಾರಾ?

    ಚಿಕ್ಕಬಳ್ಳಾಪುರ: ಗೌರಿಬಿದನೂರು ವಿಧಾನಸಭಾ ಕ್ಷೇತ್ರ (Gauribidanur Assembly Constituency) ಖಂಡಿತವಾಗಿ ಈ ಹಿಂದಿನಂತಿಲ್ಲ. ಪ್ರಬಲ ಮೂರು ಪಕ್ಷಗಳ ಅಭ್ಯರ್ಥಿಗಳ ಜೊತೆಗೆ ಪಕ್ಷೇತರ ಅಭ್ಯರ್ಥಿಗಳ ಪಾತ್ರವೇ ನಿರ್ಣಾಯಕವಾಗಲಿದ್ದು ಪ್ರಬಲ ಪೈಪೋಟಿ ನೀಡುವ ಸುಳಿವು ನೀಡಿದ್ದಾರೆ.

    ಕೆಎಚ್‌ಪಿ ಫೌಂಡೇಷನ್ ಮೂಲಕ ಉದ್ಯಮಿ ಪುಟ್ಟಸ್ವಾಮಿಗೌಡ (Puttaswamy Gowda) ಈ ಬಾರಿ ಪ್ರಬಲ ಪೈಪೋಟಿಯಲ್ಲಿದ್ದಾರೆ. ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಗೌರಿಬಿದನೂರಿಗೆ ಎಂಟ್ರಿ ಕೊಟ್ಟ ಉದ್ಯಮಿ ಪುಟ್ಟಸ್ವಾಮಿ ಗೌಡರಿಗೆ ಕಾರಣಾಂತರಗಳಿಂದ ರಾಜಕೀಯ ಇಚ್ಚೆ ಇಲ್ಲದಿದ್ದರೂ ಈಗ ಧುಮುಕಿದ್ದಾರೆ.

    ಸುತ್ತಲೂ ರೆಡ್ಡಿಗಳ ವಿರೋಧ ಬಣದವರನ್ನು ಜೊತೆಯಲ್ಲಿಟ್ಟುಕೊಂಡು ರಾಜಕಾರಣಕ್ಕೆ ಇಳಿದಿರುವ ಪುಟ್ಟಸ್ವಾಮಿಗೌಡ, ಶತಾಯಗತಾಯ ಈ ಬಾರಿ ಗೌರಿಬಿದನೂರಿನಲ್ಲೇ ತಾವೇ ಶಾಸಕರಾಗಬೇಕು ಅಂತ ಟೊಂಕ ಕಟ್ಟಿ ನಿಂತು ಹಗಲು ರಾತ್ರಿ ಅನ್ನದೇ ಚುನಾವಣಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ.

    ಕೊರೊನಾ ಕಾಲದಲ್ಲಿ ಪುಡ್ ಕಿಟ್, ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ, ಉಚಿತ ಬಸ್ ಪಾಸ್ ಸೌಲಭ್ಯ, ಸಾಮೂಹಿಕ ವಿವಾಹ ಕಾರ್ಯಕ್ರಮಗಳು, ಶ್ರೀನಿವಾಸ ಕಲ್ಯಾಣೋತ್ಸವ, ಗೌರಿ ಗಣೇಶ ಹಬ್ಬಕ್ಕೆ ಮನೆ ಮನೆಗೆ ಭೇಟಿ ನೀಡಿ ಸೀರೆ-ಪಂಚೆ- ಅಂತ ಉಡುಗೊರೆ, ಈಗ ಯುಗಾದಿ ಹಬ್ಬಕ್ಕೆ ಹಳ್ಳಿ ಹಳ್ಳಿಗೂ ಹೋಗಿ ಡೈನಿಂಗ್ ಪಾತ್ರೆ ಸೆಟ್ ಕೊಟ್ಟು ಮತಯಾಚನೆ ಮಾಡುತ್ತಿದ್ದಾರೆ.

    ಈ ನಡುವೆಯೇ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿರುವ ಕೆಂಪರಾಜು ಸಹ ನಾನೇನು ಕಡಿಮೆ ಇಲ್ಲ ಎಂಬಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಮನೆ ಮನೆಗೆ ತೆರಳಿ ಮತಯಾಚನೆ ಮಾಡ್ತಿದ್ದಾರೆ. ಕುಕ್ಕರ್ ಕೊಟ್ಟು ವೋಟ್ ಕೇಳ್ತಿದ್ದು, ಕೈ ಮುಗಿದು ಕಾಲಿಗೆ ಬಿದ್ದು ಈ ಬಾರಿ ನಾನೇ ಶಾಸಕ ಅಂತ ವಿಶ್ವಾಸದ ಮಾತಗಳನ್ನಾಡಿಕೊಳ್ತಿದ್ದಾರೆ.

    ಕಾಂಗ್ರೆಸ್‌ ಭದ್ರಕೋಟೆ:
    ಗೌರಿಬಿದನೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ (Congress) ಭದ್ರಕೋಟೆಯಾಗಿದ್ದು ಇದಕ್ಕೆ ಕಾರಣ ಶಿವಶಂಕರ ರೆಡ್ಡಿ. ತಮ್ಮ ರಾಜಕೀಯ ಗುರು ಅಶ್ವತ್ಥನಾರಾಯಣರೆಡ್ಡಿ ವಿರುದ್ದವೇ ಗುಡುಗಿ ಪಕ್ಷೇತರರಾಗಿ ಕಣಕ್ಕಿಳಿದ್ದು ಗೆದ್ದು ಬೀಗಿದ್ದ ಶಿವಶಂಕರ ರೆಡ್ಡಿ (Shivashnkar Reddy) ತದನಂತರ ಕಾಂಗ್ರೆಸ್ ಸೇರ್ಪಡೆಯಾಗಿ ಅಂದಿನಿಂದ ಇದುವರೆಗೂ ಸುದೀರ್ಘ 5 ಬಾರಿ 24 ವರ್ಷಗಳ ಕಾಲ ಶಾಸಕರಾಗಿ ಮುಂದುವರೆದಿದ್ದಾರೆ.

    ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಇವರು ಹಣದ ರಾಜಕಾರಣಕ್ಕಿಂತ ಅಭಿವೃದ್ದಿಯೇ ರಾಜಕಾರಣವೇ ಮುಖ್ಯ ಅಂತ ನಂಬಿಕೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಹಣ ಖರ್ಚು ಮಾಡದೇ ಗೆದ್ದು ಬೀಗುತ್ತಿದ್ದ ಶಿವಶಂಕರರೆಡ್ಡಿಯವರಿಗೆ ಈ ಬಾರಿ ಪಕ್ಷೇತರರ ಹಣದ ಹೊಳೆ ಮುಂದೆ ಎದುರಿಸೋದು ಸಹ ಚಿಂತೆಯಾಗಿ ಕಾಡಲು ಶುರುವಾಗಿದೆ.

    ಏನೇ ಖರ್ಚು ಮಾಡಿದರೂ ಎಷ್ಟೇ ಅಮಿಷ ಒಡ್ಡಿದರೂ ಹೊರಗಿನವರಿಗೆ ಕ್ಷೇತ್ರದ ಜನ ಮಣೆ ಹಾಕಲ್ಲ ಎಂಬ ಅತೀವ ನಂಬಿಕೆಯನ್ನು ಶಿವಶಂಕರ ರೆಡ್ಡಿ ಹೊಂದಿದ್ದಾರೆ. ಇವೆಲ್ಲದರ ನಡುವೆ ಕ್ಷೇತ್ರದ್ಯಂತ ಪಂಚಾಯತಿ ಮಟ್ಟದಲ್ಲಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಚುನಾವಣಾ ಪ್ರಚಾರ ಮಾಡುತ್ತಾ ಈ ಬಾರಿಯೂ ತಮ್ಮ ಮತ ತನಗೆ, ಕಾಂಗ್ರೆಸ್ ಗೆ ಕೊಡಬೇಕು ಅಂತ ಪ್ರಚಾರ ಸಭೆಗಳನ್ನ ಕೈಗೊಳ್ಳುತ್ತಿದ್ದಾರೆ. ಪಕ್ಷೇತರರ ಮತ ವಿಭಜನೆಯಿಂದ ಈ ಬಾರಿಯೂ ಸುಲಭವಾಗಿ ಗೆಲ್ಲಬಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ಜೆಡಿಎಸ್ ಅಭ್ಯರ್ಥಿ ಯಾರು?
    ಕ್ಷೇತ್ರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಹಾಗೂ ಜನತಾ ಪಾರ್ಟಿ ನಡುವೆಯೇ ರಾಜಕೀಯ ಸಂಘರ್ಷ. ಜನತಾ ಪಾರ್ಟಿಯಿಂದ 1983 ರಲ್ಲಿ ಲಕ್ಷ್ಮೀಪತಿ ಹಾಗೂ 1985ರಲ್ಲಿ ಕಲಾವಿದರಾದ ಮುಖ್ಯಮಂತ್ರಿ ಚಂದ್ರು ಅವರು ಸಹ ಇದೇ ಗೌರಿಬಿದನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಇತಿಹಾಸವಿದೆ.

    ತದನಂತರ ಜೆಡಿಎಸ್‌ (JDS) ನಿಂದ ರೆಡ್ಡಿಗಳ ಕುಟುಂಬದ ಹೆಣ್ಣು ಮಗಳು ಜ್ಯೋತಿರಡ್ಡಿ ಜೆಡಿಎಸ್‌ನಿಂದ ಶಾಸಕಿಯಾಗಿ ಆಯ್ಕೆಯಾದ ನಿದರ್ಶನವಿದೆ. ಹಾಗಾಗಿ ಕ್ಷೇತ್ರದಲ್ಲಿ ಜೆಡಿಎಸ್ ತನ್ನದೇ ಆದ ವೋಟ್ ಬ್ಯಾಂಕ್, ವರ್ಚಸ್ಸು, ಹಿಡಿತ ಹೊಂದಿದೆ. ಜೊತೆಗೆ ಸಾಧರು ಸಮುದಾಯದ ಅಭ್ಯರ್ಥಿ ಜೆಡ್ ಪಿ ನರಸಿಂಹಮೂರ್ತಿ ಅಂತಲೇ ಫೇಮಸ್ ಆಗಿರುವ ಮಾಜಿ ಸೈನಿಕ ಚಂದನದೂರು ಗ್ರಾಮದ ನರಸಿಂಹಮೂರ್ತಿಯೇ ಈ ಬಾರಿಯೂ ಜೆಡಿಎಸ್ ಅಭ್ಯರ್ಥಿ ಅಂತ ಪಂಚರತ್ನ ಯಾತ್ರೆ ವೇಳೆ ಎಚ್‌ಡಿಕೆ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಡಿನೋಟಿಫಿಕೇಶನ್‌ ಕೇಸ್‌ – ಅಧಿಕ ರಕ್ತದೊತ್ತಡ ಕಾರಣ ನೀಡಿ ಕೋರ್ಟ್‌ ವಿಚಾರಣೆಗೆ ಎಚ್‌ಡಿಕೆ ಗೈರು

    ಸಮುದಾಯದ ಮತ ಬ್ಯಾಂಕ್, ಕ್ಷೇತ್ರದ ಮೇಲಿನ ಹಿಡಿತ, ಹಳ್ಳಿ ಹಳ್ಳಿಯಲ್ಲೂ ಕಾರ್ಯಕರ್ತರ ಬೆಂಬಲಿತರ ಪಡೆ ಹೊಂದಿರುವ ನರಸಿಂಹಮೂರ್ತಿ ಕಳೆದ ಬಾರಿ ಶಿವಶಂಕರರೆಡ್ಡಿ ತಿರುಗಿ ನೋಡಿಕೊಳ್ಳುವಂತಹ ಫೈಟ್ ನೀಡಿದ್ದರು. 9,168 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದರು. ಸ್ವಲ್ಪ ದುಡ್ಡು ಖರ್ಚು ಮಾಡಿದರೆ ಗೆದ್ದುಬಿಡುತ್ತಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ಬಾರಿ ಅದೇ ಫೈಟ್ ಕೊಡ್ತಾರಾ ಎನ್ನುವುದು ಅನುಮಾನ ಮೂಡಿಸಿದೆ. ಕಾರಣ ಪಕ್ಷೇತರರ ಅಬ್ಬರದಿಂದ ಮತಗಳ ವಿಭಜನೆ, ಪ್ರಮುಖವಾಗಿ ಹಣ ಬಲ ಇಲ್ಲದೇ ಇರುವುದು ಜೆಡಿಎಸ್ ಅಭ್ಯರ್ಥಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

    ಬಿಜೆಪಿಯಲ್ಲಿ ಅಭ್ಯರ್ಥಿ ಯಾರು?
    ಗೌರಿಬಿದನೂರು ಕ್ಷೇತ್ರದಿಂದ ಬಿಜೆಪಿ (BJP) ಪಕ್ಷದಲ್ಲಿ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಒಂದು ಕಡೆ ಎಚ್.ವಿ.ಶಿವಶಂಕರ್ ಹಾಗೂ ಮತ್ತೊಂದು ಕಡೆ ಮಾನಸ ಸಮೂಹ ಆಸ್ಪತ್ರೆಗಳ ವೈದ್ಯರು ಡಾ.ಎಚ್.ಎಸ್.ಶಶಿಧರ್ ಕುಮಾರ್ ಅವರ ಹೆಸರು ರೇಸ್‍ನಲ್ಲಿದೆ. ಆದರೆ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದನ್ನು ಬಿಜೆಪಿ ಹೈಕಮಾಂಡ್ ನಿರ್ಧರಿಸಬೇಕಿದೆ. ಬಿಜೆಪಿಯಲ್ಲಿ ರೆಡ್ಡಿ ಕುಟುಂಬದ ರವಿನಾರಾಯಣರೆಡ್ಡಿ ಪ್ರಭಾವ ಇದ್ದು ಬಿಜೆಪಿ ತನ್ನದೇ ಆದ ಮತಬ್ಯಾಂಕ್‍ನ್ನು ಹೊಂದಿದ್ದು ಈ ಬಾರಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಭರ್ಜರಿ ಪೈಫೋಟಿ ನೀಡುವ ಯತ್ನ ನಡೆಸುತ್ತಿದೆ.

    ಈ ಬಾರಿಯೂ ಜೈಪಾಲ್ ರೆಡ್ಡಿ ಸ್ಪರ್ಧೆ
    ದಶಕಗಳಿಂದ ತಾನು ಕೂಡ ಶಾಸಕನಾಗಬೇಕು ಅಂತ ಹಾಲಿ ಪಕ್ಷೇತರರಿಗಿಂತ ಮೊದಲೇ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕೆ ಧುಮುಕಿದ್ದ ಜೈಪಾಲ್ ರೆಡ್ಡಿ ಹೆಸರು ಕ್ಷೇತ್ರದಲ್ಲಿ ಚಿರಪರಿಚಿತ. ಬರಗಾಲದ ಸಂದರ್ಭದಲ್ಲಿ ಟ್ಯಾಂಕರ್ ಗಳ ಮೂಲಕ ಉಚಿತವಾಗಿ ನೀರು, ಉಚಿತ ಅನ್ನದಾಸೋಹ ಹಲವು ಸಮಾಜಮುಖಿ ಸೇವೆಗಳ ಜೊತೆಗೆ ಯುವಕರ ಪಡೆ ಹೊಂದಿರುವ ಜೈಪಾಲ್ ರೆಡ್ಡಿ 2013 ರ ಚುನಾವಣೆಯಲ್ಲಿ ಶಿವಶಂಕರೆರಡ್ಡಿಯವರ ಎದುರು ಕೇವಲ 6,075 ಮತಗಳ ಅಂತರದಿಂದ ಸೋಲನುಭವಿಸಿದ್ದರು. ಆದರೆ ಸೋತ ನಂತರ ಕ್ಷೇತ್ರದಿಂದ ದೂರವಾಗಿರುವ ಜೈಪಾಲ್ ರೆಡಿ ಎಲೆಕ್ಷನ್ ಹತ್ತಿರ ಬಂದಾಗ ಮತ್ತೆ ಸಕ್ರಿಯವಾಗುತ್ತಾರೆ. ಅದೇ ರೀತಿ ಈ ಬಾರಿಯೂ ಕಳೆದ 2 ತಿಂಗಳ ಹಿಂದೆ ಎಂಟ್ರಿ ಕೊಟ್ಟು ಗೌರಿಬಿದನೂರು ನಗರದಲ್ಲಿ ಪ್ರತಿ ನಿತ್ಯ ನೂರಾರು ಮಂದಿಗೆ ಉಚಿತ ಊಟದ ವ್ಯವಸ್ಥೆ ಮಾಡಿರುವ ಜೈಪಾಲ್ ರೆಡ್ಡಿ ಚುನಾವಣಾ ಪ್ರಚಾರ ನಡೆಸುತ್ತಿಲ್ಲ. ಹಾಗಾಗಿ ಈ ಬಾರಿ ಸ್ಫರ್ಧೆ ಮಾಡುತ್ತಾರಾ ಇಲ್ಲವಾ ಎಂಬ ಗೊಂದಲ ಮನೆ ಮಾಡಿದ್ದು ಸ್ಪಷ್ಟತೆ ಇಲ್ಲವಾಗಿದೆ.

    ಗೌರಿಬಿದನೂರು ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ?
    ಒಟ್ಟು ಮತದಾರರು – 2,06,241
    ಪುರುಷರು – 1,02,062
    ಮಹಿಳೆಯರು – 1,04,179

    ಜಾತಿವಾರು ಲೆಕ್ಕಾಚಾರ
    ಎಸ್‌ಸಿ – 30 ಸಾವಿರ, ಎಸ್‌ಟಿ-40 ಸಾವಿರ , ಸಾಧರ ಗೌಡರು-20 ಸಾವಿರ, ರೆಡ್ಡಿ-ಒಕ್ಕಲಿಗ-18 ಸಾವಿರ, ಅಲ್ಪಸಂಖ್ಯಾತರು-8 ಸಾವಿರ, ಬಲಜಿಗರು-17 ಸಾವಿರ, ಕುರುಬರು-25 ಸಾವಿರ, ಇತರೆ 30 ಸಾವಿರ

    ಗೆಲುವಿನ ಅಂತರ ಎಷ್ಟು?
    2008 ಶಿವಶಂಕರರೆಡ್ಡಿ 11,168 ಮತಗಳಿಂದ ಬಿಜೆಪಿಯ ರವಿನಾರಾಯಣರೆಡ್ಡಿ ವಿರುದ್ಧ ಗೆದ್ದಿದ್ದರೆ 2013ರಲ್ಲಿ ಪಕ್ಷೇತರ ಅಭ್ಯರ್ಥಿ ಜೈಪಾಲ್‌ ರೆಡ್ಡಿ ವಿರುದ್ಧ 6,075 ಮತಗಳಿದ್ದ ಗೆದ್ದಿದ್ದರು. 2018ರಲ್ಲಿ ಜೆಡಿಎಸ್‌ನ ಸಿ.ಆರ್.ನರಸಿಂಹಮೂರ್ತಿ ವಿರುದ್ಧ 9,168 ಮತಗಳಿಂದ ಜಯಗಳಿಸಿದ್ದರು.

  • ಗುಜರಾತ್ ಗೆಲ್ಲಲು ‘ಯುವ’ ಸ್ಟ್ರಾಟರ್ಜಿ – ವಿದ್ಯಾವಂತ ಯುವಕರೇ ಬಿಜೆಪಿ ಅಭ್ಯರ್ಥಿಗಳು

    ಗುಜರಾತ್ ಗೆಲ್ಲಲು ‘ಯುವ’ ಸ್ಟ್ರಾಟರ್ಜಿ – ವಿದ್ಯಾವಂತ ಯುವಕರೇ ಬಿಜೆಪಿ ಅಭ್ಯರ್ಥಿಗಳು

    ಗಾಂಧೀನಗರ: ಏಳನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲು ಪ್ರಯತ್ನಿಸುತ್ತಿರುವ ಬಿಜೆಪಿ (BJP), ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಬಾರಿ ಲೆಕ್ಕಾಚಾರ ಹಾಕಿದೆ. ಇತ್ತೀಚೆಗೆ ಪ್ರಕಟಗೊಂಡ 160 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯಲ್ಲಿ ಯುವಕರಿಗೆ ಆದ್ಯತೆ ನೀಡುವ ಮೂಲಕ ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದೆ.

    182 ವಿಧಾನಸಭೆ ಕ್ಷೇತ್ರಗಳಲ್ಲಿ (Assembly Constituency) 160 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಪ್ರಕಟಗೊಂಡಿದ್ದು, ಇದರಲ್ಲಿ 11 ಮಂದಿ ಅಭ್ಯರ್ಥಿಗಳು 40 ವರ್ಷದೊಳಗೆ, 53 ಅಭ್ಯರ್ಥಿಗಳು 50 ವರ್ಷದೊಳಗಿನವರಾಗಿದ್ದಾರೆ. 2017ರ ಚುನಾವಣೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಬದಲಾವಣೆಯಾಗಿದ್ದು, ಕಳೆದ ಬಾರಿ 60 ವರ್ಷ ಚುನಾವಣೆಗೆ ವಯಸ್ಸಿನ ಮಾನದಂಡ ಇಡಲಾಗಿತ್ತು.

    ಆಡಳಿತ ವಿರೋಧಿ ಅಲೆಯನ್ನು ತಡೆಯಲು, ಶಾಸಕರ ಮೇಲಿನ ಅಸಮಾಧಾನದಿಂದ ಪಕ್ಷಕ್ಕೆ ಡ್ಯಾಮೇಜ್ ಆಗದ ಹಾಗೇ ನೋಡಿಕೊಳ್ಳುವ ದೃಷ್ಟಿಯಿಂದ ಯುವಕರಿಗೆ ಆದ್ಯತೆ ನೀಡಲಾಗುತ್ತಿದ್ದು, ಈ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಣಿ, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಚುನಾವಣೆಯಿಂದ ಹಿಂದೆ ಸರಿಯುವಂತೆ ಮಾಡಿದೆ. ಈ ಬಾರಿಯ ಚುನಾವಣೆ ಬಿಜೆಪಿ, ಕಾಂಗ್ರೆಸ್ ಮತ್ತು ಆಪ್ ನಡುವೆ ತ್ರಿಕೋನ ಸ್ಪರ್ಧೆಯಾಗಿದ್ದು, ಆಪ್ ಬಿಜೆಪಿ ಬಲಿಷ್ಠವಾಗಿರುವ ನಗರ ಪ್ರದೇಶಗಳಲ್ಲಿ ಯುವ ಮುಖಗಳಿಗೆ ಆದ್ಯತೆ ನೀಡುತ್ತಿದೆ. ಈ ಹಿನ್ನೆಲೆ ಬಿಜೆಪಿ ಕೂಡಾ ತನ್ನ ತಂತ್ರ ಬದಲಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.

    ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್ ನಂತಹ ಯುವ ಮತ್ತು ಸಮುದಾಯ ನಾಯಕರನ್ನು ಬಳಸಿಕೊಂಡು ಜಾತಿ ಸಮೀಕರಣದಲ್ಲೂ ಬಿಜೆಪಿ ಮತ ಗಳಿಸಲು ತಂತ್ರರೂಪಿಸಿದೆ. ಘೋಷಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ 49 ಒಬಿಸಿ ಮುಖಗಳಿದ್ದು, 17 ಕೋಲಿ ಮತ್ತು 14 ಠಾಕೋರ್‍ಗಳಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯಿಂದ 40 ಪಟೇಲ್ ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕಿಳಿದಿದ್ದು, 23 ಲೆಯುವಾ ಪಟೇಲ್ ಮತ್ತು 17 ಕಡ್ವಾ ಪಟೇಲ್‍ಗಳು ಕಣಕ್ಕಿಳಿದಿದ್ದಾರೆ. 37 ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳು, 14 ಮಹಿಳಾ ಅಭ್ಯರ್ಥಿಗಳು ಮತ್ತು 17 ಕ್ಷತ್ರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.

    ಆಡಳಿತವನ್ನು ಸುಧಾರಿಸಲು ಮತ್ತು ಯುವಕರಿಗೆ ಬಲವಾದ ಸಂದೇಶವನ್ನು ನೀಡಲು ಆಡಳಿತ ಪಕ್ಷವು ವಿದ್ಯಾವಂತ ವರ್ಗಕ್ಕೆ ಪ್ರಾಮುಖ್ಯತೆಯನ್ನು ನೀಡಿದೆ. ಬಿಜೆಪಿಯ ಅಭ್ಯರ್ಥಿಗಳ ಪೈಕಿ, 13 LLB, 1 LLM, 4 ವೈದ್ಯರು, 4 PHD, 11 ಇಂಜಿನಿಯರ್, 6 ಶಿಕ್ಷಕರು ಮತ್ತು 2 MBA ಪದವೀಧರರು ಒಳಗೊಂಡಿದ್ದಾರೆ.

    ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 89 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಎರಡನೇ ಹಂತದಲ್ಲಿ 93 ಸ್ಥಾನಗಳಿಗೆ ಮತದಾನ ನಡೆಯಲಿದೆ. 182 ಸದಸ್ಯರ ರಾಜ್ಯ ಅಸೆಂಬ್ಲಿಯ ಅವಧಿಯು 2023ರ ಫೆಬ್ರವರಿ 18 ರಂದು ಅಂತ್ಯವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸೋದು ಪಕ್ಕಾ – ಕಾಂಗ್ರೆಸ್ ಶಾಸಕರ ವಿಶ್ವಾಸ

    ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸೋದು ಪಕ್ಕಾ – ಕಾಂಗ್ರೆಸ್ ಶಾಸಕರ ವಿಶ್ವಾಸ

    ಕೋಲಾರ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Assembly Election) ಸಮಯ ಹತ್ತಿರವಾಗುತ್ತಿದ್ದಂತೆ ರಾಜ್ಯದ ಆ ಒಬ್ಬ ಪ್ರಭಾವಿ ಮುಖಂಡ ಈ ಬಾರಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋ ಕುತೂಹಲ ಮೂರು ಪಕ್ಷದವರನ್ನು ಕಾಡುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯ ಉತ್ತರ ಸಿಕ್ಕಿದ್ದು, ಆ ನಾಯಕ ಸ್ಪರ್ಧಿಸುವ ಕ್ಷೇತ್ರ ಬಹುತೇಕ ಫೈನಲ್ ಆಗಿದೆ. ಯಾರು ಆ ನಾಯಕ, ಯಾವುದು ಆಕ್ಷೇತ್ರ?

    ರಾಜ್ಯದ ಪ್ರಭಾವಿ ನಾಯಕರಲ್ಲಿ ಮಾಜಿ ಸಿಎಂ (ChiefMinister) ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೂಡಾ ಒಬ್ಬರು, ಇನ್ನೇನು ಮುಂದಿನ ವಿಧಾನಸಭೆ ಚುನಾವಣೆಗೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಅನ್ನೋ ಹಲವು ಪ್ರಶ್ನೆಗಳು ರಾಜ್ಯದ ಪ್ರಮುಖ ಮೂರು ಪಕ್ಷಗಳ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಕಾಡುತ್ತಲೇ ಇತ್ತು. ಕಳೆದ ಬಾರಿ ಬಾದಾಮಿ ಕ್ಷೇತ್ರದಿಂದ ಪ್ರಯಾಸದ ಗೆಲುವು ಸಾಧಿಸಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರ (chamundeshwari Constituency), ಹುಣಸೂರು, ಚಾಮರಾಜಪೇಟೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಈ ನಡುವೆ ಕೋಲಾರ (Kolara) ವಿಧಾನಸಭಾ ಕ್ಷೇತ್ರದಿಂದ ಸಿದ್ದು ಸ್ಪರ್ಧೆ ಮಾಡೋದು ಖಚಿತ ಎಂದು ಸಿದ್ದು ಆಪ್ತ ವಲಯದಿಂದ ಕೇಳಿಬಂದಿದೆ. ಅದಕ್ಕೆ ಪೂರಕ ಎಂಬಂತೆ ಈಗಾಗಲೇ ಕೋಲಾರ ಜಿಲ್ಲೆಯ ಶಾಸಕರು ಸಿದ್ದರಾಮಯ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ವಿವಿಧ ಸಮುದಾಯಗಳ ಜನರು ಸಿದ್ದರಾಮಯ್ಯರನ್ನ ಭೇಟಿ ಮಾಡಿ ಕೋಲಾರದಿಂದ ಸ್ಪರ್ಧಿಸಲು ಆಹ್ವಾನ ನೀಡಿದ್ದಾರೆ. ಈ ನಡುವೆ ಸಿದ್ದರಾಮಯ್ಯ (Siddaramaiah) ಕೂಡಾ ಬಹುತೇಕ ಸಮ್ಮತಿ ಸೂಚಿಸಿದ್ದಾರೆ ಅನ್ನೋದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಮಾತು.

    ಅಷ್ಟೇ ಅಲ್ಲದೆ ಕೋಲಾರ ಕ್ಷೇತ್ರ ಸಿದ್ದರಾಮಯ್ಯನವರ ಗೆಲುವಿಗೆ ಹೇಳಿ ಮಾಡಿಸಿದ ಕ್ಷೇತ್ರ. ಯಾಕಂದ್ರೆ ಹೆಚ್ಚಾಗಿ ಕುರುಬ ಸಮುದಾಯ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತಗಳಿರುವ ಕ್ಷೇತ್ರ. ಜೊತೆಗೆ ಸಿದ್ದು ಸಿಎಂ ಆಗಿದ್ದ ಅವಧಿಯಲ್ಲಿ ಕೆಸಿ ವ್ಯಾಲಿ ಯೋಜನೆಯನ್ನು ಕೊಡುಗೆಯಾಗಿ ನೀಡುವ ಮೂಲಕ ಕೋಲಾರ ಜನರ ಮನಸ್ಸು ಗೆದ್ದಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಅವರನ್ನು ವಿರೋಧಿಸುವ ಜನರೇ ಇಲ್ಲ ಅನ್ನೋದು ನಂಜೇಗೌಡರ ಮಾತು. ಅಲ್ಲದೇ ಈಗಾಗಲೇ ಸಿದ್ದರಾಮಯ್ಯ ಕೂಡಾ ಒಪ್ಪಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ ಎನ್ನಲಾಗುತ್ತಿದೆ.

    ಈ ಹಿಂದೆ ಸಿದ್ದರಾಮಯ್ಯನವರು ತಮ್ಮ ಬೆಂಬಲಿಗರೊಬ್ಬರ ಮನೆ ಗೃಹಪ್ರವೇಶ ಕಾರ್ಯಕ್ರಮಕ್ಕೆಂದು ಬಂದಾಗಲೂ ಕೂಡಾ ಕೋಲಾರದಿಂದ ಸ್ಪರ್ಧೆ ಮಾಡುವಂತೆ ಭೇಟಿ ಮಾಡಿ ಒತ್ತಾಯಿಸಲಾಗಿತ್ತು. ಆದರೆ ಸಿದ್ದರಾಮಯ್ಯ ಅವರು ನಾನಿನ್ನೂ ಯಾವುದೇ ತೀರ್ಮಾನ ಮಾಡಿಲ್ಲ ಎಂದಿದ್ದರು. ಈ ನಡುವೆ ಸಿಎಂ ಆಗಿದ್ದ ವೇಳೆಯಲ್ಲಿ ಕೋಲಾರ ಜಿಲ್ಲೆಗೆ ಕೊಟ್ಟ ಮೊದಲ ನೀರಾವರಿ ಯೋಜನೆ ಕೆ.ಸಿ.ವ್ಯಾಲಿ ಯೋಜನೆಯನ್ನು ಕೊಟ್ಟಿದ್ದು ಸಿದ್ದರಾಮಯ್ಯ. ಹಾಗಾಗಿ ಸಿದ್ದು ಅವರಿಗೂ ಕೋಲಾರಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧ ಇದೆ.

    ಸಿದ್ದರಾಮಯ್ಯ ಅವರಿಗೆ ಕೋಲಾರದ ಮೇಲೆ ವಿಶೇಷ ಕಾಳಜಿ ಇದೆ. ಅವರಿಂದ ಜಿಲ್ಲೆಯಲ್ಲಿ ನೀರಾವರಿ ಕ್ರಾಂತಿಯಾಗಿದೆ. ಇದರ ಜೊತೆಗೆ ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದೇ ಆದಲ್ಲಿ ಅವರಿಗಿಂತ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಮಗೆ ಹೆಚ್ಚು ಅನುಕೂಲ ಅನ್ನೋದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತು. ಹಾಗಾಗಿ ರಮೇಶ್ ಕುಮಾರ್ ನೇತೃತ್ವದ ಶಾಸಕರ ತಂಡ ಅವರ ಮೇಲೆ ಒತ್ತಡ ಹಾಕುತ್ತಿದ್ದೇವೆ ಎನ್ನುತ್ತಿದ್ದಾರೆ.

    ಸದ್ಯ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನೊಂದು ಬಾರಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಸಿದ್ದರಾಮಯ್ಯ ವಿರೋಧಿಗಳ ಸಂಖ್ಯೆ ಕೂಡಾ ಹೆಚ್ಚಾಗಿದ್ದು, ಗೆಲುವು ಅಷ್ಟು ಸುಲಭದ ಮಾತಲ್ಲ. ಹಾಗಾಗಿ ಅಳೆದು ತೂಗಿ ಕೋಲಾರ ಸೇಫ್ ಅಂದುಕೊಂಡಿರುವ ಸಿದ್ದರಾಮಯ್ಯ ಅಂತಿಮವಾಗಿ ಘೋಷಣೆ ಮಾಡೋದೊಂದೇ ಬಾಕಿ ಇದೆ.

    Live Tv
    [brid partner=56869869 player=32851 video=960834 autoplay=true]

  • ಯಡಿಯೂರಪ್ಪಗೆ ಬಹಳ ವಯಸ್ಸೇನು ಆಗಿಲ್ಲ – ದೈಹಿಕ, ಮಾನಸಿಕವಾಗಿ ಸದೃಢರಾಗಿದ್ದಾರೆ: ಸುಧಾಕರ್

    ಯಡಿಯೂರಪ್ಪಗೆ ಬಹಳ ವಯಸ್ಸೇನು ಆಗಿಲ್ಲ – ದೈಹಿಕ, ಮಾನಸಿಕವಾಗಿ ಸದೃಢರಾಗಿದ್ದಾರೆ: ಸುಧಾಕರ್

    ಚಿಕ್ಕಬಳ್ಳಾಪುರ: ರಾಜಕೀಯದಿಂದ ಮಾಜಿ ಸಿಎಂ ಯಡಿಯೂರಪ್ಪ ನಿವೃತ್ತಿ ಆಗೋದು ಸಾಧ್ಯವಿಲ್ಲ. ಯಡಿಯೂರಪ್ಪ ಅವರಿಗೆ ಬಹಳ ವಯಸ್ಸೇನು ಆಗಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಹೊಸೂರು ಗ್ರಾಮದಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿದರು.

    ಶಿಕಾರಿಪುರವನ್ನು ಯಡಿಯೂರಪ್ಪ ಅವರು ಮಗ ವಿಜಯೇಂದ್ರ ಅವರಿಗೆ ಬಿಟ್ಟು ಕೊಟ್ಟಿದ್ದಾರೆ. ಈ ಮೂಲಕ ಅವರು ರಾಜಕೀಯ ವಲಯದಿಂದ ನಿವೃತ್ತಿ ಹೊಂದಿದ್ರಾ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ಅವರಿಗೆ ಬಹಳ ವಯಸ್ಸೇನು ಆಗಿಲ್ಲ. ಅವರು ದೈಹಿಕವಾಗಿ ಮಾನಸಿಕವಾಗಿ ಈಗಲೂ ಸಾಕಷ್ಟು ಸದೃಢರಾಗಿದ್ದಾರೆ. ಅವರ ಮಾರ್ಗದರ್ಶನ ಕ್ರಿಯಾಶೀಲತೆ ಮುಂದುವರಿದರೆ ನಮಗೆ ಒಳ್ಳೆಯದು ಅಂತ ಇನ್ನೂ ಯಡಿಯೂರಪ್ಪ ಅವರು ಮೊನ್ನೆ ನಡೆದ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ:  ಯಡಿಯೂರಪ್ಪ ಡಿಕ್ಷನರಿಯಲ್ಲಿ ನಿವೃತ್ತಿ ಎನ್ನುವ ಪದವಿಲ್ಲ: ವಿಜಯೇಂದ್ರ 

    ಚುನಾವಣೆ ಹತ್ರ ಬರುತ್ತ ಇದೆ. ನಾವು ಜನರ ಬಳಿ ಹೋಗಬೇಕು. ದೊಡ್ಡ ಸಮಾವೇಶಗಳನ್ನ ಮಾಡಿ ಜನರಿಗೆ ನಮ್ಮ ಸರ್ಕಾರದ ಕೆಲಸಗಳನ್ನ ತಿಳಿಸಬೇಕು. ಹಿಂಗಂತ ಸಿಎಂ ಅವರಿಗೆ ಯಡಿಯೂರಪ್ಪ ಅವರೇ ಸಲಹೆ ನೀಡಿದ್ದಾರೆ. ಹಾಗಾಗಿ ಅವರು ರಾಜಕೀಯದಿಂದ ದೂರ ಉಳಿಯಲ್ಲ ಎಂದರು.

    ಬಿಜೆಪಿ ಸಾಧನ ಸಮಾವೇಶ ಯಶಸ್ವಿಗೊಳಿಸಲು ಸಚಿವ ಎಂಟಿಬಿ ನಾಗರಾಜ್ ಹಾಗೂ ಸುಧಾಕರ್ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಗೌರಿಬಿದನೂರು, ಅಲ್ಲೀಪುರ, ಹೊಸೂರು, ವಿದುರಾಶ್ವತ್ಥ, ಡಿ.ಪಾಳ್ಯದಲ್ಲಿ ಇಂದು ಸರಣಿ ಸಭೆಗಳನ್ನ ನಡೆಸಿದ್ದಾರೆ. ಇದನ್ನೂ ಓದಿ: ಬ್ಲ್ಯಾಕ್ ಏಲಿಯನ್‍ನಂತೆ ಬದಲಾದ ಇವನನ್ನು ನೋಡಿದವರು ಕೆಲಸವನ್ನೆ ಕೊಡುತ್ತಿಲ್ಲ – ಓದಿ ವಿಚಿತ್ರ ಕಥೆ 

    Live Tv
    [brid partner=56869869 player=32851 video=960834 autoplay=true]

  • ಮಸ್ಕಿ ಕ್ಷೇತ್ರವನ್ನು ಸ್ಪೆಷಲ್ ಆಗಿ ಪರಿಗಣಿಸಿ ರ‍್ಯಾಂಡಮ್ ಟೆಸ್ಟ್: ಜಿಲ್ಲಾಧಿಕಾರಿ

    ಮಸ್ಕಿ ಕ್ಷೇತ್ರವನ್ನು ಸ್ಪೆಷಲ್ ಆಗಿ ಪರಿಗಣಿಸಿ ರ‍್ಯಾಂಡಮ್ ಟೆಸ್ಟ್: ಜಿಲ್ಲಾಧಿಕಾರಿ

    ರಾಯಚೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಂಡಮ್ ಟೆಸ್ಟ್ ಗೆ ಪ್ಲಾನ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಹೇಳಿದ್ದಾರೆ.

    ಜಿಲ್ಲೆಯಾದ್ಯಂತ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಚುನಾವಣೆ ಬಳಿಕ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಂಡಮ್ ಟೆಸ್ಟ್ ಆರಂಭಿಸಲಾಗುತ್ತದೆ. ಮಸ್ಕಿ ಕ್ಷೇತ್ರವನ್ನು ಸ್ಪೆಷಲ್ ಆಗಿ ಪರಿಗಣಿಸಿ ಈ ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ ಎಂದರು.

    ಮಸ್ಕಿ ಕ್ಷೇತ್ರದಲ್ಲಿ ಅಧಿಕ ಜನರು ಸೇರಿದ ಭಾಗವಾಗಿ ನಿತ್ಯ 1000ಕ್ಕೂ ಅಧಿಕ ಜನರಿಗೆ ಟೆಸ್ಟ್ ಮಾಡಲು ಜಿಲ್ಲಾಡಳಿತ ಗುರಿ ಹೊಂದಿದೆ. ಮಸ್ಕಿ ಕ್ಷೇತ್ರದಲ್ಲಿ ರ‍್ಯಾಲಿ, ಸಮಾವೇಶ ನಡೆದ ಕಡೆಗಳಲ್ಲಿ ಕಡ್ಡಾಯವಾಗಿ ರ‍್ಯಾಂಡಮ್ ಟೆಸ್ಟ್ ನಡೆಸಲಾಗುತ್ತದೆ. ತುರ್ವಿಹಾಳ, ಬಳಗನೂರು, ಪಾಮನಕೆಲ್ಲೂರಿನಲ್ಲಿ ರ‍್ಯಾಂಡಮ್ ಟೆಸ್ಟ್ ಹಾಗೂ ಸಭೆ, ಸಮಾವೇಶ ನಡೆದ ಸ್ಥಳದಲ್ಲೇ ರ‍್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ ಎಂದು ಡಿಸಿ ವಿವರಿಸಿದರು.

  • ಸೋತು ಎರಡು ವರ್ಷದ ಬಳಿಕ ಕ್ಷೇತ್ರಕ್ಕೆ ಕಾಲಿಟ್ಟ ಸಂತೋಷ್ ಲಾಡ್

    ಸೋತು ಎರಡು ವರ್ಷದ ಬಳಿಕ ಕ್ಷೇತ್ರಕ್ಕೆ ಕಾಲಿಟ್ಟ ಸಂತೋಷ್ ಲಾಡ್

    ಹುಬ್ಬಳ್ಳಿ: ಕಲಘಟಗಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಆತ್ಮಾವಲೋಕನ ಮಾಡಿಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಿತ್ತು. ಹೀಗಾಗಿ ಎರಡು ವರ್ಷ ಬಂದಿರಲಿಲ್ಲ. ಆದರೆ ಈ ಕ್ಷೇತ್ರದ ಜನರನ್ನು ಯಾವತ್ತೂ ಮರೆತಿಲ್ಲ. ಮರೆಯೋದು ಇಲ್ಲ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.

    ತಾಲೂಕಿನ ಮಡಕಿಹೊನ್ನಿಹಳ್ಳಿಯ ತಮ್ಮ ಅಮೃತ ನಿವಾಸದಲ್ಲಿ ನಡೆದ ಕಾರ್ಯಕರ್ತ ಸಭೆ ಬಳಿಕ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸಿ ಈ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ನಾನು ಹಿಂದಿನ 10 ವರ್ಷಗಳ ಕಾಲ ತಾಲೂಕಿನಲ್ಲಿ ಬೇಡ್ತಿ ಹಳ್ಳದ ನೀರಾವರಿ ಯೋಜನೆ, ಡಿಪೋ ಕಾಮಗಾರಿ, ರೈತರಿಗೆ ಕೊಳವೆ ಬಾವಿ, ಹೊಸ ವಿದ್ಯುತ್ ತಂತಿ ಬದಲಾವಣೆ ಇನ್ನೂ ಹಲವಾರು ಜನಪರ ಯೋಜನೆ ಕೈಗೊಂಡಿದ್ದು, ನನಗೆ ತೃಪ್ತಿ ಇದೆ ಎಂದರು.

    ಸುಮಾರು 50 ಕೋಟಿ ರೂ. ಸ್ವಂತ ಹಣವನ್ನು ಕ್ಷೇತ್ರಕ್ಕೆ ಖರ್ಚು ಮಾಡಿದ್ದೇನೆ. ನಾನು ದುಡ್ಡು ಮಾಡಲು ರಾಜಕಾರಣಕ್ಕೆ ಬಂದಿಲ್ಲ, ಜನರ ಸೇವೆ ಮಾಡಲು ಬಂದವನು. ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ ರಾಜಕೀಯವಾಗಿ ಪುನರಜನ್ಮ ನೀಡಿದ ಕಲಘಟಗಿ ಕ್ಷೇತ್ರದ ಜನರ ಋಣವನ್ನ ಮರೆಯುವುದಿಲ್ಲ. ಕಲಘಟಗಿಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.

    ಕಾಂಗ್ರೆಸ್‍ನಲ್ಲಿ ನಾಗರಾಜ ಛಬ್ಬಿ ಬಣ ಹಾಗೂ ಲಾಡ್ ಎರಡು ಬಣಗಳಿವೆ ಎಂಬುದು ಸುಳ್ಳು. ಇರುವುದೊಂದೇ ಕಾಂಗ್ರೆಸ್. ನಾಗರಾಜ ಛಬ್ಬಿ ನನ್ನ ಆತ್ಮೀಯ ಸ್ನೇಹಿತ. ಆತನಿಗೂ ಶಾಸಕರಾಗುವ ಆಸೆ ಇದೆ, ಆತನಿಗೆ ಒಳ್ಳೆಯದಾಗಲಿ. ಪಕ್ಷದ ಸಂಘಟನೆಗೆ ಎಲ್ಲರೂ ಶ್ರಮಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ವಿನಯ್ ಕುಲಕರ್ಣಿ, ಶ್ರೀನಿವಾಸ್ ಮಾನೆ, ನಾಗರಾಜ ಛಬ್ಬಿ, ಇಸ್ಮಾಯಲ್ ತಮಟಗಾರ ಎಲ್ಲರೂ ಸೇರಿ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.

    ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ನನ್ನ ಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮಕ್ಕೆ ತೆರಳಿ ಪಕ್ಷ ಕಟ್ಟಿ ಬೆಳಸುವುದು ಅಷ್ಟೇ ಈಗಿರುವ ಉದ್ದೇಶ. ನಾನು ಇನ್ನು ಮುಂದೆ ಜನರು ಹಾಗೂ ಕಾರ್ಯಕರ್ತರನ್ನು ಭೇಟಿ ಕೊಡುತ್ತಾ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತೇನೆ. ಈಗಿರುವ ಶಾಸಕ ಸಿಎಂ ನಿಂಬಣ್ಣವರ್ ಬೇಗ ಗುಣಮುಖರಾಗಲಿ ಎಂದು ಆಶಿಸಿದರು. ನಂತರ ಶಾಸಕರ ಸಿಎಂ ನಿಂಬಣ್ಣವರ ಭೇಟಿ ಮಾಡಿ ಅವರ ಆರೋಗ್ಯ ಕೂಡ ವಿಚಾರಿಸಿದರು.

  • ನನ್ನ ಕ್ಷೇತ್ರದ ಶೇ.52ರಷ್ಟು ಭಾಗದಲ್ಲಿ ಪಾಕಿಸ್ತಾನವಿದೆ: ಬಿಜೆಪಿ ಶಾಸಕ

    ನನ್ನ ಕ್ಷೇತ್ರದ ಶೇ.52ರಷ್ಟು ಭಾಗದಲ್ಲಿ ಪಾಕಿಸ್ತಾನವಿದೆ: ಬಿಜೆಪಿ ಶಾಸಕ

    -ಶೇ.48ರಷ್ಟು ಮತಗಳಿಂದ ನನ್ನ ಜಯ

    ಡೆಹರಾಡೂನ್: ನನ್ನ ವಿಧಾನಸಭಾ ಕ್ಷೇತ್ರದ ಶೇ.52ರಷ್ಟು ಭಾಗದಲ್ಲಿ ಪಾಕಿಸ್ತಾನವಿದೆ. ನಾನು ಕೇವಲ ಶೇ.48ರಷ್ಟು ಮತಗಳನ್ನು ಪಡೆದು ಶಾಸಕನಾಗಿದ್ದೇನೆ ಎಂದು ಬಿಜೆಪಿ ಶಾಸಕ ಸುರೇಶ್ ರಾಠೋಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಹರಿದ್ವಾರ ಜಿಲ್ಲೆಯ ಜ್ವಾಲಾಪುರ ಕ್ಷೇತ್ರದ ಶಾಸಕ ಸುರೇಶ್ ರಾಠೋಡ ಹೇಳಿಕೆ ಉತ್ತರಾಖಂಡನಲ್ಲಿ ಸಂಚಲನ ಮೂಡಿಸಿದೆ. ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕರು, ಈ ರಸ್ತೆ 67 ಕಿ.ಮೀ. ಉದ್ದವಿದೆ. ನನ್ನ ಕ್ಷೇತ್ರವು 67 ಕಿ.ಮೀ. ಇದೆ. ಈ ರಸ್ತೆಯ ಒಟ್ಟಾರೆ ಶೇ.52 ರಷ್ಟು ಭಾಗ ಪಾಕಿಸ್ತಾನ ಇದೆ. ಈ ಏರಿಯಾ ಸಂಪೂರ್ಣವಾಗಿ ಪಾಕಿಸ್ತಾನದಂತಿದೆ. ಉಳಿದ ಶೇ.48ರಷ್ಟು ಭಾಗದಲ್ಲಿಯ ಜನರ ಮತಗಳಿಂದ ಶಾಸಕನಾಗಿದ್ದೇನೆ ಎಂದು ಹೇಳುವ ಮೂಲಕ ಮುಸ್ಲಿಂರು ತಮಗೆ ಮತ ನೀಡಿಲ್ಲ ಎಂದರು.

    ಶಾಸಕರು ಒಂದು ಸಮುದಾಯ ಜನರನ್ನು ಉದ್ದೇಶಿಸಿ ಮಾತನಾಡುವಾಗ ಈ ಹೇಳಿಕೆ ನೀಡುವ ಮೂಲಕ ಕ್ಷೇತ್ರವನ್ನು ವಿಭಜಿಸುವ ಹುನ್ನಾರ ನಡೆಸಿದ್ದಾರೆ. ಶಾಸಕರು ತಮ್ಮ ಈ ಮಾತುಗಳಿಂದ ಒಂದು ಸಮುದಾಯದ ಜನರನ್ನು ಒಲೈಸುವ ರಾಜಕಾರಣಕ್ಕೆ ಮುಂದಾಗಿರೋದು ದುರಂತ. ವಿವಾದಾತ್ಮಕ ಹೇಳಿಕೆ ಮೂಲಕ ಶಾಂತಿ ಕದಡಲು ಶಾಸಕರು ಮುಂದಾಗುತ್ತಿದ್ದಾರೆ ಎಂದು ಸ್ಥಳೀಯ ವಿಪಕ್ಷ ಮುಖಂಡರು ಆರೋಪಿಸಿದ್ದಾರೆ.

    ಜ್ವಾಲಾಪುರ ಕ್ಷೇತ್ರ ಹೆಚ್ಚು ಮುಸ್ಲಿಂ ಮತದಾರರನ್ನು ಹೊಂದಿದೆ. 2012ರಿಂದ ಜ್ವಾಲಾಪುರದಿಂದ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸುತ್ತಾ ಬಂದಿದ್ದಾರೆ. ಶಾಸಕರ ಹೇಳಿಕೆಗೆ ಉತ್ತರಾಖಂಡ ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಆರಂಭಗೊಂಡಿದೆ. ಇದುವರೆಗೂ ಶಾಸಕ ಸುರೇಶ್ ಮಾತ್ರ ಯಾವುದೇ ಸ್ಪಷ್ಟನೆ ನೀಡದೇ ಮೌನವಾಗಿದ್ದಾರೆ.

  • ಲೋಕ ಚುನಾವಣೆಯಲ್ಲಿ ವಿಶೇಷ ಸಾಧನೆ ನಿರ್ಮಿಸಿತು ಸುಳ್ಯ ವಿಧಾನಸಭಾ ಕ್ಷೇತ್ರ!

    ಲೋಕ ಚುನಾವಣೆಯಲ್ಲಿ ವಿಶೇಷ ಸಾಧನೆ ನಿರ್ಮಿಸಿತು ಸುಳ್ಯ ವಿಧಾನಸಭಾ ಕ್ಷೇತ್ರ!

    – ಡಿವಿ, ಶೋಭಾ, ನಳಿನ್ ಮೂವರೂ ಒಂದೇ ಕ್ಷೇತ್ರದವರು
    – ಬೇರೆ ಬೇರೆ ಕ್ಷೇತ್ರದ ಸಂಸದರು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರ ಅಪರೂಪದ ಸಾಧನೆ ಮಾಡಿದೆ. ಒಂದೇ ಕ್ಷೇತ್ರದ ವ್ಯಾಪ್ತಿಗೆ ಬರುವ ಮೂವರು ವ್ಯಕ್ತಿಗಳು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅಲ್ಲದೆ ಈ ಬಾರಿಯ ಲೋಕಸಭಾ ಚುನಾವಣೆಯ ಅಖಾಡದಲ್ಲಿಯೂ ಟಿಕೆಟ್ ಪಡೆದಿದ್ದು, ಮತ್ತೆ ಸಂಸದರಾಗುವ ನಿರೀಕ್ಷೆಯಲ್ಲಿದ್ದಾರೆ.

    ಹೌದು. ಸಚಿವ ಡಿ.ವಿ ಸದಾನಂದ ಗೌಡ, ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ನಳಿನ್ ಕುಮಾರ್ ಕಟೀಲ್ ಈ ಮೂವರು ಒಂದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಾರೆ. ವಿಶೇಷವೆಂದರೆ ಒಂದೇ ಕ್ಷೇತ್ರದವರಾದ ಇವರುಗಳು ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಬೇರೆ ಬೇರೆ ಕಡೆಯಿಂದ ಬಿಜೆಪಿಯಿಂದಲೇ ಅಖಾಡಕ್ಕೆ ಇಳಿದಿದ್ದಾರೆ.

    ಸದಾನಂದ ಗೌಡ:
    ಇವರು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದವರು. ಇವರು 1994 ರಿಂದ 2004 ರವರೆಗೆ ಎರಡು ಅವಧಿಗಳಲ್ಲಿ ಪುತ್ತೂರಿನಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ವೀರಪ್ಪ ಮೊಯ್ಲಿಯವರನ್ನು ಸೋಲಿಸಿ ಸಂಸದರಾದ್ರು. ಬಳಿಕ 2009ರಲ್ಲಿ ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗ್ಡೆಯವರನ್ನು ಸೋಲಿಸಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶ ಮಾಡಿದ್ರು.

    ಕಳೆದ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಿ. ನಾರಾಯಣ ಸ್ವಾಮಿಯವರನ್ನು ಸೋಲಿಸಿ ಸಂಸದರಾಗಿ ಆಯ್ಕೆಗೊಂಡಿದ್ದರು. ಅಲ್ಲದೆ ಕೇಂದ್ರ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಈ ಮಧ್ಯೆ 2011 ರಲ್ಲಿ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಹೆಮ್ಮೆ ಇವರಿಗಿದೆ. ಇದೀಗ ಈ ಬಾರಿ ಲೋಕಸಭಾ ಚುನಾವಣೆಯಲ್ಲಿಯೂ ಡಿವಿಯವರು ಬೆಂಗಳೂರು ಉತ್ತರದಿಂದ ಅಖಾಡಕ್ಕಿಳಿದಿದ್ದಾರೆ.

    ಶೋಭಾ ಕರಂದ್ಲಾಜೆ:
    ಚಾರ್ವಾಕ ಗ್ರಾಮ ಕರಂದ್ಲಾಜೆಯ ಶೋಭಾ ಅವರು 2004ರಲ್ಲಿ ವಿಧಾನಪರಿಷತ್ ಸದಸ್ಯರಾಗುವ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಮೊದಲು ಪುತ್ತೂರು ತಾಲೂಕಿಗೆ ಬರುತ್ತಿದ್ದ ಚಾರ್ವಾಕ ಗ್ರಾಮ ಇದೀಗ ಕಡಬ ತಾಲೂಕಿನ ಅಡಿಯಲ್ಲಿ ಬರುತ್ತದೆ. ಹೀಗಾಗಿ ಈ ಗ್ರಾಮ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ.

    ಶೋಭಾ ಅವರು 2008ರಲ್ಲಿ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ತದನಂತರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಪ್ರಕಾಶ್ ಹೆಗ್ಡೆಯವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾದರು. ಇದೀಗ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಇದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

    ನಳಿನ್ ಕುಮಾರ್ ಕಟೀಲ್:
    ಇವರು ಮೂಲತಃ ಪಾಲ್ತಾಡಿ ಗ್ರಾಮದ ಕುಂಜಾಡಿಯವರಾಗಿದ್ದು, ಮಂಗಳೂರಿನಲ್ಲಿ ನೆಲೆಸಿದ್ದಾರೆ. ಆದ್ರೆ ಇವರ ತಾಯಿ ಈಗಲೂ ಕುಂಜಾಡಿಯಲ್ಲೇ ಇದ್ದಾರೆ. ಹೀಗಾಗಿ ನಳಿನ್ ಇಲ್ಲಿಗೆ ಆಗಾಗ ಬರುತ್ತಿರುತ್ತಾರೆ.

    ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಬೆಳೆದ ಇವರು 2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಗೆಲುವು ತನ್ನದಾಗಿಸಿಕೊಂಡರು. 2014 ಚುನಾವಣೆಯಲ್ಲೂ ಜಯಗಳಿಸಿದ್ದರು. 2 ಬಾರಿಯೂ ಕಾಂಗ್ರೆಸ್‍ನ ಪ್ರಭಾವಿ ನಾಯಕ ಜನಾರ್ದನ ಪೂಜಾರಿಯವರನ್ನು ಸೋಲಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.

    ಒಟ್ಟಿನಲ್ಲಿ ಒಂದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮೂವರು ಸಂಸದರಾಗುವ ಮೂಲಕ ಈ ಕ್ಷೇತ್ರ ಸಾಧನೆ ಮಾಡಿದೆ. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿಯೂ ಇದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಈ ಮೂವರು ರಾಜ್ಯದ ವಿವಿಧ ಕಡೆಗಳಲ್ಲಿ ಸ್ಪರ್ಧಿಸುತ್ತಿರುವುದು ವಿಶೇಷವಾಗಿದೆ.

  • ಜಗ್ಗೇಶ್ ನಟನೆಯ ಚಿತ್ರ, ರಿಯಾಲಿಟಿ ಶೋಗಳಿಗೆ ಕಡಿವಾಣ ಹಾಕಿ-ಕಾಂಗ್ರೆಸ್ ಅಭ್ಯರ್ಥಿಯಿಂದ ದೂರು

    ಜಗ್ಗೇಶ್ ನಟನೆಯ ಚಿತ್ರ, ರಿಯಾಲಿಟಿ ಶೋಗಳಿಗೆ ಕಡಿವಾಣ ಹಾಕಿ-ಕಾಂಗ್ರೆಸ್ ಅಭ್ಯರ್ಥಿಯಿಂದ ದೂರು

    ಬೆಂಗಳೂರು: ನಗರದ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ನಟ ಜಗ್ಗೇಶ್ ಅವರು ನಟಿಸಿರುವ ರಿಯಾಲಿಟಿ ಶೋ, ಸಿನಿಮಾಗಳನ್ನು ಪ್ರಸಾರ ಮಾಡದಂತೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.

    ಯಶವಂತಪುರ ಕ್ಷೇತ್ರದಲ್ಲಿ ಜಗ್ಗೇಶ್ ಪ್ರತಿ ಸ್ಪರ್ಧಿಯಾಗಿರುವ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿರುವ ಎಸ್ ಟಿ ಸೋಮಶೇಖರ್ ಅವರು ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ತಮ್ಮ ದೂರಿನಲ್ಲಿ ಜಗ್ಗೇಶ್ ಅಭಿನಯ ಮಾಡಿರುವ ಚಿತ್ರಗಳು ಹಾಗೂ ಅವರ ರಿಯಾಲಿಟಿ ಶೋ ಗಳು ಮತದಾರರ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

    ಜಗ್ಗೇಶ್ ಅವರು ನಡೆಸಿಕೊಡುವ ರಿಯಾಲಿಟಿ ಶೋ ಗಳು ದೂರದರ್ಶನ, ಖಾಸಗಿ ವಾಹನಿ, ಸ್ಥಳೀಯ ಕೇಬಲ್ ನೆಟ್‍ವರ್ಕ್ ಮತ್ತು ಇತರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಇದು ಚುನಾವಣೆ ನೀತಿ ಸಂಹಿತೆ ವಿರುದ್ಧವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಇಂತಹ ಕಾರ್ಯಕ್ರಮಗಳು ಪ್ರಸಾರ ಆಗುವುದರಿಂದ ಮತದಾರರ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಸಾಧ್ಯತೆ ಇದ್ದು, ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವರೆಗೂ ಜಗ್ಗೇಶ್ ಅವರ ಕಾರ್ಯಕ್ರಮಗಳು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಬೇಕು ಎಂದು ಮನವಿ ಮಾಡಿದ್ದಾರೆ.