Tag: Assam

  • ಈ ಫೋಟೋವನ್ನ ನೀವೂ ಶೇರ್ ಮಾಡಿದ್ರಾ? ಹಾಗಿದ್ರೆ ಈ ಸುದ್ದಿ ಓದಿ

    ಈ ಫೋಟೋವನ್ನ ನೀವೂ ಶೇರ್ ಮಾಡಿದ್ರಾ? ಹಾಗಿದ್ರೆ ಈ ಸುದ್ದಿ ಓದಿ

    ಗುವಾಹಾಟಿ: ಸ್ವಾತಂತ್ರ್ಯ ದಿನಾಚರಣೆಯಂದು ಪ್ರವಾಹ ಪೀಡಿತ ಅಸ್ಸಾಂನ ಸರ್ಕಾರಿ ಶಾಲೆಯೊಂದರಲ್ಲಿ ಮೊಣಕಾಲುದ್ದ ನೀರು ನಿಂತಿದ್ದರೂ ಅದರ ಮಧ್ಯೆ ನಿಂತು ಧ್ವಜಾರೋಹಣ ಮಾಡಿದ್ದರು. ಶಿಕ್ಷಕರು ಹಾಗೂ ಮಕ್ಕಳು ನೀರಿನ ಮಧ್ಯೆ ನಿಂತು ತ್ರಿವರ್ಣ ಧ್ವಜಕ್ಕೆ ಸೆಲ್ಯೂಟ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ ಈ ಬಗ್ಗೆ ರಾಷ್ಟ್ರೀಯ ಹಾಗೂ ಕೆಲವು ಅಂತಾರಾಷ್ಟ್ರೀಯ ವೆಬ್‍ಸೈಟ್‍ಗಳಲ್ಲೂ ವರದಿಯಾಗಿತ್ತು. ಇದೀಗ ಈ ಫೋಟೋ ತೆಗೆದಿದ್ದು ಯಾಕೆ ಎಂಬ ಸತ್ಯ ಬಯಲಾಗಿದೆ.

    ರಾಜ್ಯದ ನಿಯಮದ ಪ್ರಕಾರ ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನ ಫೋಟೋಗಳ ಸಮೇತ ದಾಖಲು ಮಾಡಬೇಕು. ಹಾಗೇ ಈ ಫೋಟೋವನ್ನ ಗುವಾಹಾಟಿಯ ರಾಜ್ಯ ಶಿಕ್ಷಣ ಇಲಾಖೆಗೆ ಕಳುಹಿಸುವ ಸಲುವಾಗಿ ತೆಗೆಯಲಾಗಿತ್ತು. ಫೋಟೋದಲ್ಲಿ ಕಾಣುವ ಇಬ್ಬರು ವಿದ್ಯಾರ್ಥಿಗಳಿಗೆ ಈಜು ಬರುತ್ತಿದ್ದ ಕಾರಣ ಅವರನ್ನ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ನಾಲ್ವರು ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಗೂ ವಂದೇಮಾತರಂ ಹಾಡಿದ್ದು, ಉಳಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಯ ಹೊರಗೆ ನಿಂತು ವೀಕ್ಷಿಸಿದ್ರು ಎಂದು ವರದಿಯಾಗಿದೆ.

    ಇಲ್ಲಿನ ಧುಬ್ರಿ ಜಿಲ್ಲೆಯ ದಿ ನಸ್ಕಾರಾ ಲೋವರ್ ಪ್ರೈಮರಿ ಸ್ಕೂಲ್ ನ ಮುಖ್ಯ ಶಿಕ್ಷಕ ತಝೀಮ್ ಸಿಕ್ದರ್ ಹಾಗೂ ಸಹೋದ್ಯೋಗಿಗಳಾದ ಸ್ರಿಪೆನ್ ರಬಾ, ಜಾಯ್‍ದೇವ್ ರಾಯ್, ಮಿಜಾನುರ್ ರೆಹ್‍ಮಾನ್ ಪ್ರವಾಹದ ಮಧ್ಯೆಯೂ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲು ತೀರ್ಮಾನಿಸಿದ್ರು. ಇಬ್ಬರು ವಿದ್ಯಾರ್ಥಿಗಳಾದ ಜಿಯಾರುಲ್ ಸಲಿ ಖಾನ್ ಮತ್ತು ಹೈದರ್ ಸಲಿ ಖಾನ್‍ನನ್ನು ಫೋಟೋದಲ್ಲಿ ಕಾಣಬಹುದು. ಶಾಲೆಯ ಶಿಕ್ಷಕರಾದ ಮಿಜಾನುರ್ ರೆಹಮಾನ್ ಈ ಫೋಟೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿತ್ತು.

    ಎರಡು ದಿನಗಳ ನಂತರ ಅವರು ಮತ್ತೊಮ್ಮೆ ಈ ಬಗ್ಗೆ ಪೋಸ್ಟ್ ಮಾಡಿದ್ದು, ಈ ಭಾಗದ ಎಲ್ಲಾ ಜನರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಪ್ರವಾಹದ ನಡುವೆಯೂ ನೀವು ನಿಮ್ಮ ನಿಜವಾದ ದೇಶಭಕ್ತಿ ಹಾಗೂ ದೇಶದ ಮೇಲಿನ ಪ್ರೀತಿ ವ್ಯಕ್ತಪಡಿಸುವುದನ್ನ ಮರೆಯಲಿಲ್ಲ. ದೇಶದ ಮೇಲಿನ ಪ್ರೀತಿ ಹಾಗೂ ಬದ್ಧತೆಗೆ ಈ ಯಶಸ್ಸೇ ಪ್ರತಿಬಿಂಬ ಎಂದು ಅವರು ಪೋಸ್ಟ್ ಮಾಡಿದ್ದಾರೆ.

    ಆದ್ರೆ ಮತ್ತೊಂದು ವಿಷಾದಕರ ಸಂಗತಿಯೆಂದರೆ ರೆಹಮಾನ್ ಅವರು ಶಾಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಿದ ಕೆಲವೇ ಗಂಟೆಗಳಲ್ಲೇ ಅವರ 18 ವರ್ಷದ ಸಹೋದರ ಸಂಬಂಧಿ ರಶೀದುಲ್ ಇಸ್ಲಾಂ ಫಕೀರ್‍ಗಂಜ್‍ನಲ್ಲಿ ಮುಳುಗಿಹೋಗಿದ್ದರು. ಇಸ್ಲಾಂ ಅವರು ಶಾಲೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೂ ಈ ವೈರಲ್ ಫೋಟೋದಿಂದಾದ್ರೂ ಪ್ರಾವಹ ಪೀಡಿತ ಧುಬ್ರಿಯ 484 ಗ್ರಾಮಗಳತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಾರೆ ಎಂದು ರೆಹಮಾನ್ ಅವರ ಕುಟುಂಬ ನಂಬಿದೆ.

    https://www.facebook.com/mizanur.rahman.50552/videos/pcb.1789351124426262/1789349987759709/?type=3&theater

    https://www.facebook.com/mizanur.rahman.50552/videos/pcb.1789351124426262/1789354911092550/?type=3&theater

    https://www.facebook.com/photo.php?fbid=1790020037692704&set=a.436854836342571.115881.100000541760233&type=3&theater

    https://www.facebook.com/mizanur.rahman.50552/posts/1791323744229000

  • ಮೊಣಕಾಲುದ್ದದ ನೀರಿನ ಮಧ್ಯೆಯೂ ರಾಷ್ಟ್ರಧ್ವಜ ಹಾರಿಸಿದ ಶಿಕ್ಷಕರು

    ಮೊಣಕಾಲುದ್ದದ ನೀರಿನ ಮಧ್ಯೆಯೂ ರಾಷ್ಟ್ರಧ್ವಜ ಹಾರಿಸಿದ ಶಿಕ್ಷಕರು

    ದಿಸ್‍ಪುರ್: ಶಾಲೆಯ ಆವರಣ ನೀರಿನಿಂದ ಆವೃತವಾಗಿ ಮೊಣಕಾಲುದ್ದ ನೀರು ನಿಂತಿದ್ರೂ ಅದರ ಮಧ್ಯೆಯೂ ರಾಷ್ಟ್ರಧ್ವಜ ಹಾರಿಸಿ ಅದಕ್ಕೆ ಶಿಕ್ಷಕರು ಹಾಗೂ ಇಬ್ಬರು ಮಕ್ಕಳು ಸೆಲ್ಯೂಟ್ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಣಗಳಲ್ಲಿ ಹರಿದಾಡ್ತಿದೆ.

    ಪ್ರವಾಹ ಪೀಡಿತ ಅಸ್ಸಾಂನಲ್ಲಿ ಶಿಕ್ಷಕರು ಸ್ವಾತಂತ್ರ್ಯ ದಿನವಾದ ಇಂದು ರಾಷ್ಟ್ರಧ್ವಜ ಹಾರಿಸಿ ಜನ ಗಣ ಮನ ಹಾಡೋದನ್ನ ಮಾತ್ರ ಮರೆಯಲಿಲ್ಲ. ಕಳೆದ ಕೆಲವು ವಾರಗಳಿಂದ ಭಾರೀ ಮಳೆಯ ಕಾರಣ ಅಸ್ಸಾಂನ ಬಹುತೇಕ ಭಾಗಗಳು ಜಲಾವೃತವಾಗಿವೆ. ಶಿಕ್ಷಕರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಈ ಆರು ಜನ ಸ್ವಾತಂತ್ರೋತ್ಸವ ಆಚರಿಸಿದ ದಿ ನಸ್ಕಾರಾ ಲೋವರ್ ಪ್ರೈಮರಿ ಸ್ಕೂಲ್ ಆಗಸ್ಟ್ 13ರಿಂದಲೂ ಜಲಾವೃತವಾಗಿದೆ ಎಂದು ವರದಿಯಾಗಿದೆ.

    ಶಾಲೆಯ ಮುಖ್ಯ ಶಿಕ್ಷಕ ತಝೀಮ್ ಸಿಕ್ದರ್ ಹಾಗೂ ಸಹೋದ್ಯೋಗಿಗಳಾದ ಸ್ರಿಪೆನ್ ರಬಾ, ಜಾಯ್‍ದೇವ್ ರಾಯ್, ಮಿಝಾನುರ್ ರೆಹ್‍ಮಾನ್ ಸೇರಿದಂತೆ ಇಬ್ಬರು ವಿದ್ಯಾರ್ಥಿಗಳಾದ ಜಿಯಾರುಲ್ ಸಲಿ ಖಾನ್ ಮತ್ತು ಹೈದರ್ ಸಲಿ ಖಾನ್ ಸ್ವಾತಂತ್ರ ದಿನಾಚರಣೆಯನ್ನ ಆಚರಿಸಿದ್ದಾರೆ.

    ಸೋಮವಾರದ ಸಭೆಯಲ್ಲಿ ನಾವು ನಾಲ್ವರು ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದೆವು ಎಂದು ಶಾಲೆಯ ಸಹಾಯಕ ಶಿಕ್ಷಕ ರೆಹಮಾನ್ ಹೇಳಿದ್ದಾರೆ.

    ಪ್ರವಾಹದ ಕಾರಣ ನಾವು ಹೆಚ್ಚಿನದ್ದೇನೂ ಮಾಡಲಾಗಲಿಲ್ಲ. ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಹಾಡಿದೆವು. ಚಿಕ್ಕ ಮಕ್ಕಳು ಹೆಚ್ಚು ಹೊತ್ತು ನೀರಿನಲ್ಲಿ ಇರಬಾರದು ಎಂಬ ಕಾರಣಕ್ಕೆ ಬೇಗನೆ ಕಾರ್ಯಕ್ರಮವನ್ನ ಮುಗಿಸೆದೆವು ಅಂತ ಅವರು ಹೇಳಿದ್ದಾರೆ.

  • ಅಪ್ರಾಪ್ತ ವಿದ್ಯಾರ್ಥಿನಿಯರೊಂದಿಗಿನ ಅಶ್ಲೀಲ ಫೋಟೋ ಅಪ್‍ಲೋಡ್ ಮಾಡಿದ ಕಾಮುಕ ಶಿಕ್ಷಕ

    ಅಪ್ರಾಪ್ತ ವಿದ್ಯಾರ್ಥಿನಿಯರೊಂದಿಗಿನ ಅಶ್ಲೀಲ ಫೋಟೋ ಅಪ್‍ಲೋಡ್ ಮಾಡಿದ ಕಾಮುಕ ಶಿಕ್ಷಕ

    ಡಿಸ್ಪುರ: ಅಸ್ಸಾಂನ ಪುಟ್ಟ ಗ್ರಾಮವೊಂದರಲ್ಲಿ ಕಾಮುಕ ಶಿಕ್ಷಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯರೊಂದಿಗೆ ವಿವಿಧ ಭಂಗಿಯಲ್ಲಿ ಫೋಟೋ ತೆಗೆಸಿಕೊಂಡು ಅದನ್ನು ಆನ್‍ಲೈನ್‍ನಲ್ಲಿ ಹಂಚಿಕೊಂಡಿರುವ ಬಗ್ಗೆ ವರದಿಯಾಗಿದೆ.

    ಇಲ್ಲಿನ ಹೈಲಾಕಂಡಿ ಜಿಲ್ಲೆಯ ಕಟ್ಲಿಚೆರ್ರಾ ಎಂಬ ಪುಟ್ಟ ಗ್ರಾಮ ಈ ಘಟನೆಗೆ ಸಾಕ್ಷಿಯಾಗಿದೆ. ಶಿಕ್ಷಕನಾದ ಫೈಜುದ್ದಿನ್ ಲಸ್ಕರ್ ತನ್ನ ಅಪ್ರಾಪ್ತ ವಿದ್ಯಾರ್ಥಿನಿಯರೊಂದಿಗೆ ಅಶ್ಲೀಲವಾಗಿ ಫೋಟೋ ತೆಗೆಸಿಕೊಂಡಿದ್ದಲ್ಲದೆ ಅವುಗಳನ್ನ ಆನ್‍ಲೈನ್‍ನಲ್ಲಿ ಹಂಚಿಕೊಂಡಿದ್ದಾನೆ. ಈತ ಕಟ್ಲಿಚೆರಾದ ಮಾಡೆಲ್ ಹೈ ಸ್ಕೂಲ್‍ನಲ್ಲಿ ಕಲಸ ಮಾಡ್ತಿದ್ದು, ಈ ಹಿಂದೆಯೂ ಇಂತಹ ಸಾಕಷ್ಟು ಅಪರಾಧಗಳನ್ನ ಎಸಗಿದ್ದಾನೆ ಎಂದು ವರದಿಯಾಗಿದೆ.

    ಸ್ಥಳೀಯ ಮಾಧ್ಯಮವೊಂದರ ವರದಿಯ ಪ್ರಕಾರ ಈ ಹಿಂದೆ ಫೈಜುದ್ದೀನ್ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಸಿಕ್ಕಿಬಿದ್ದಾಗ ಜನರ ಗುಂಪು ಆತನ ಬೆರಳನ್ನೇ ಕತ್ತರಿಸಿದ್ರು ಎನ್ನಲಾಗಿದೆ.

    ಫೈಜುದ್ದಿನ್ ಈ ಫೋಟೋಗಳನ್ನ ಅಪ್ಲೋಡ್ ಮಾಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಆದ್ರೆ ಇಷ್ಟೆಲ್ಲಾ ಮಾಡಿದ್ರೂ ಪೊಲೀಸರು ಮಾತ್ರ ಶಿಕ್ಷಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

    ಫೋಟೋಗಳು ವೈರಲ್ ಆದ ಬಳಿಕ ಬಾಲಕಿಯಯೊಬ್ಬಳ ಪೋಷಕರು ಶಿಕ್ಷಕನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಆದ್ರೆ ಪೊಲೀಸರು ಶಿಕ್ಷಕನನ್ನು ಈ ಬಗ್ಗೆ ವಿಚಾರಣೆಗೊಳಪಡಿಸಿದ್ದಾರೆ ಹೊರತು ಬಂಧನ ಮಾಡಿಲ್ಲ.

  • ವಿಡಿಯೋ: ಆಡು ನುಂಗಿ ದೈತ್ಯ ಹೆಬ್ಬಾವು ಸುಸ್ತೋ ಸುಸ್ತು- ಹಗ್ಗ ಕಟ್ಟಿ, ಟೆಂಪೋದಲ್ಲಿ ಹಾಕ್ಕೊಂಡು ಕಾಡಿಗೆ ಬಿಟ್ಟ ಗ್ರಾಮಸ್ಥರು

    ವಿಡಿಯೋ: ಆಡು ನುಂಗಿ ದೈತ್ಯ ಹೆಬ್ಬಾವು ಸುಸ್ತೋ ಸುಸ್ತು- ಹಗ್ಗ ಕಟ್ಟಿ, ಟೆಂಪೋದಲ್ಲಿ ಹಾಕ್ಕೊಂಡು ಕಾಡಿಗೆ ಬಿಟ್ಟ ಗ್ರಾಮಸ್ಥರು

    ದಿಸ್ಪುರ್: ದೈತ್ಯ ಹೆಬ್ಬಾವೊಂದು ಆಡನ್ನು ನುಂಗಿ ಮುಂದೆಯೂ ಹೋಗಲಾರದೇ ಹಿಂದೆಯೂ ಹೋಗಲಾರದೇ ನರಳಾಡಿದ ವಿಡಿಯೋವೊಂದನ್ನ ಅಸ್ಸಾಂನಲ್ಲಿ ಸೆರೆಹಿಡಿಯಲಾಗಿದ್ದು ಇದೀಗ ವೈರಲ್ ಆಗಿದೆ.

    ಇದನ್ನೂ ಓದಿ: ತಲೆದಿಂಬಿನ ಕವರ್‍ನಲ್ಲೇ ದೈತ್ಯ ಹಾವು ಹಿಡಿದ ಮಹಿಳೆ!- ಮೈ ಜುಮ್ಮೆನಿಸೋ ವೈರಲ್ ವಿಡಿಯೋ ನೋಡಿ 

    ಇಲ್ಲಿನ ಬೈಹಾಟಾ ಚರಿಯಾಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಮಾರು 15 ಅಡಿ ಉದ್ದದ ದೈತ್ಯ ಹೆಬ್ಬಾವು ಚಲಿಸಲು ಆಗದೆ ನರಳಾಡುತ್ತಿತ್ತು. ಅದರ ಹೊಟ್ಟೆ ಊದಿಕೊಂಡಿತ್ತು. ಈ ಹಾವು ಹತ್ತಿರದ ಕಾಡಿನಿಂದ ಗ್ರಾಮಕ್ಕೆ ಬಂದು ಮೇಕೆಯೊಂದನ್ನ ನುಂಗಿದೆ ಎಂದು ಹೇಳಲಾಗಿದೆ. ನಂತರ ಹಾವು ಚಲಿಸಲು ಸಾಧ್ಯವಾಗದೇ ಅಲ್ಲೇ ನರಳಾಡಿದೆ.

    ಇದನ್ನೂ ಓದಿ:ಮೊಟ್ಟೆ ಎಂದು ತಿಳಿದು ಪೈಪನ್ನೇ ನುಂಗಿದ ನಾಗರಹಾವು! 

    ಇದನ್ನು ಕಂಡ ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ಬಳಿ ಕೊಂಡೊಯ್ಯಲು ಹಾವಿನ ಕುತ್ತಿಗೆಗೆ ಹಗ್ಗ ಕಟ್ಟಿದ್ದಾರೆ. ನಂತರ ಒಂದು ಟೆಂಪೋದಲ್ಲಿ ಹಾವನ್ನು ಹಾಕಿ ಕೊಂಡೊಯ್ದಿದ್ದಾರೆ. ಟೆಂಪೋಗೆ ಹಾವನ್ನು ಹಾಕಿದ ನಂತರ ಅದು ಒಮ್ಮೆಲೆ ಮೇಲೆದ್ದು ಬಾಯಿ ತೆರೆಯುವುದನ್ನ ನೋಡಿದ್ರೆ ಮೈ ಜುಮ್ಮೆನ್ನುತ್ತದೆ. ಈ ವಿಡಿಯೋ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆದ  ಒಂದೇ ದಿನದಲ್ಲಿ 68 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ

    ಆದ್ರೆ ಹಾವಿಗೆ ಹೀಗೆ ಹಗ್ಗ ಕಟ್ಟಿ ಹಿಂಸೆ ನೀಡಲಾಗಿದೆ ಎಂದು ಕೆಲ ಪ್ರಾಣಿಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಾರೆ.

    ಇದನ್ನೂ ಓದಿ: ಬಾಯಲ್ಲಿ ಇಲಿ ಹಿಡಿದು ಎಸಿಯಿಂದ ಕೆಳಗೆ ನೇತಾಡ್ತಿತ್ತು ಹಾವು- ವಿಡಿಯೋ ವೈರಲ್

    ಇದನ್ನೂ ಓದಿ: ಕಾಫಿ ತೋಟದಲ್ಲಿ ಕೇರೆ ಹಾವು ನುಂಗಿದ್ದ ಕಾಳಿಂಗ ಸರ್ಪ ಸೆರೆ- ವಿಡಿಯೋ ನೋಡಿ 

    ಇದನ್ನೂ ಓದಿ:  ವಿಷಕಾರಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಒಟ್ಟಿಗೆ ಸಾಯೋಣವೆಂದು ಹೆಂಡತಿಯನ್ನ ಕಚ್ಚಿದ!

    ಇದನ್ನೂ ಓದಿ:  ವಿಡಿಯೋ: ಕಾಲಿನ ಮೇಲೆ ಹರಿದು ಬಂದ ವಿಷಕಾರಿ ಹಾವಿನಿಂದ ಈತ ಪಾರಾಗೋದನ್ನ ನೋಡಿದ್ರೆ ಆಶ್ಚರ್ಯಪಡ್ತೀರ!

     

  • ಮೊದಲು ಕಾಳ್ ಧನ್, ಕಾಳ್ ಧನ್ ಅಂತಿದ್ರು, ಈಗ ಜನ್ ಧನ್, ಡಿಜಿ ಜನ್ ಅಂತಿದ್ದಾರೆ: ಮೋದಿ

    ಮೊದಲು ಕಾಳ್ ಧನ್, ಕಾಳ್ ಧನ್ ಅಂತಿದ್ರು, ಈಗ ಜನ್ ಧನ್, ಡಿಜಿ ಜನ್ ಅಂತಿದ್ದಾರೆ: ಮೋದಿ

    ಗುವಾಹಟಿ:“ಸರ್ಕಾರ ಇದೆಯೋ ಇಲ್ವೋ ಎನ್ನುವ ಕಾಲವೊಂದಿತ್ತು. ಆ ವೇಳೆ ಜನರು ಕಾಳ್ ಧನ್, ಕಾಳ್ ಧನ್ ಅನ್ನುತಿದ್ದರು. ಆದರೆ ಈಗ ಜನ ಜನ್ ಧನ್, ಡಿಜಿ ಧನ್ ಅನ್ನುತ್ತಿದ್ದಾರೆ”

    – ಪ್ರಧಾನಿ ಮೋದಿ ಅವರು ತಮ್ಮ ಮೂರು ವರ್ಷದ ಅವಧಿಯಲ್ಲಿ ಕಪ್ಪು ಹಣವನ್ನು ಮಟ್ಟ ಹಾಕಿ ಹೊಸ ಯೋಜನೆಗಳನ್ನು ಜನರು ಹೇಗೆ ಹೇಳುತ್ತಿದ್ದಾರೆ ಎನ್ನುವುದನ್ನು ವಿವರಿಸಲು ಹೇಳಿದ್ದು ಹೀಗೆ.

    ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ಜನರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

    ನಾವು ಬಹಳಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡೆವು. ಈ ಕಠಿಣ ನಿರ್ಧಾರವನ್ನು ವಿರೋಧಿಸದೇ ನೀವು ನಮ್ಮನ್ನು ಬೆಂಬಲಿಸಿದ್ದೀರಿ. ನಿಮ್ಮ ಈ ಬೆಂಬಲದಿಂದಾಗಿ ನಮಗೆ ಕೆಲಸ ಮಾಡಲು ಶಕ್ತಿ ಬಂದಿದೆ. ನನ್ನ ವಿಶ್ವಾಸಕ್ಕೆ ಹೊಸ ಬಲ ಕೊಟ್ಟಿದೆ ಎಂದರು.

    ದೇಶದ ಎಲ್ಲ ಭಾಗಗಳನ್ನು ನಾವು ಗಮನಿಸುತ್ತೇವೆ ಎನ್ನುವುದನ್ನು ತಿಳಿಸಲು, ದೇಶದ ಮೂಲೆ ಮೂಲೆಯೂ ನಮಗೆ ದೆಹಲಿ ಎಂದ ಪ್ರಧಾನಿ, ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ. ಸ್ವತಃ ಮಳೆರಾಯನೂ ನಮಗೆ ಆಶೀರ್ವದಿಸಿದ್ದಾನೆ ಎಂದರು.

    2022ರ ವೇಳೆಗೆ ಸಂಪದ ಯೋಜನೆಯ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ. ಹಿಂದುಳಿದ ವರ್ಗಗಳ ಕೆನೆಪದರ ಮಿತಿ 8 ಲಕ್ಷಕ್ಕೆ ಹೆಚ್ಚಿಸುತ್ತೇನೆ. ನಾನು ಸಣ್ಣ ವ್ಯಕ್ತಿ. 1 ಕೋಟಿಗೂ ಅಧಿಕ ಕುಟುಂಬಗಳು ಗ್ಯಾಸ್ ಸಬ್ಸಿಡಿ ತ್ಯಾಗ ಮಾಡಿದವು. ಸಂಕಷ್ಟಗಳ ನಡುವೆಯೇ ಹೆಗಲು ಕೊಟ್ಟಿದ್ದೀರಿ. ಪ್ರಾಮಾಣಿಕರಿಗೆ, ಬಡವರಿಗೆ ಬದುಕುವ ಸಮಯ ಬಂದಿದೆ ಎಂದು ಹೇಳಿದರು.

    3 ವರ್ಷದಲ್ಲಿ ಒಂದು ದಿನವೂ ಸುಮ್ಮನಿರಲಿಲ್ಲ ನಾನು ತಿಂಗಳುಗಟ್ಟಲೆ ಹೊಸ ಹೊಸ ಕೆಲಸಗಳ ಬಗ್ಗೆ ಮಾತನಾಡಬಲ್ಲೆ. ನಮಗೆ ಕೆಲಸ ಮಾಡುವ ವಿಶ್ವಾಸ ಹೆಚ್ಚುತ್ತಿದೆ. 2022ರಲ್ಲಿ ಭಾರತ 75ನೇ ವರ್ಷ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸಲಿದೆ. ಈ ವೇಳೆ ಭಾರತ ಬದಲಾಗಬೇಕು. ನವ ಭಾರತಕ್ಕಾಗಿ ನಾವೆಲ್ಲ ಒಂದಾಗಿ ಕೆಲಸ ಮಾಡೋಣ ಎಂದು ಜನರಲ್ಲಿ ಮೋದಿ ಮನವಿ ಮಾಡಿದರು.

    ಇದನ್ನೂ ಓದಿ: ದೇಶದ ಅತಿ ಉದ್ದವಾದ ಸೇತುವೆ ಉದ್ಘಾಟಿಸಿ, ಯುಪಿಎ ಸರ್ಕಾರಕ್ಕೆ ಮೋದಿ ಟಾಂಗ್ ನೀಡಿದ್ದು ಹೀಗೆ

  • ಸೈಕಲ್‍ನಲ್ಲೇ ತಮ್ಮನ ಶವ ಸಾಗಿಸಿದ ವ್ಯಕ್ತಿ!- ಬಿದಿರಿನ ಸೇತುವೆ ಕುಸಿದು ನದಿಗೆ ಬಿದ್ದ ತನಿಖಾ ತಂಡ

    ಸೈಕಲ್‍ನಲ್ಲೇ ತಮ್ಮನ ಶವ ಸಾಗಿಸಿದ ವ್ಯಕ್ತಿ!- ಬಿದಿರಿನ ಸೇತುವೆ ಕುಸಿದು ನದಿಗೆ ಬಿದ್ದ ತನಿಖಾ ತಂಡ

    ಗುವಾಹಾಟಿ: ಒಡಿಶಾದಲ್ಲಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸಿಗದ ಕಾರಣ ವ್ಯಕ್ತಿಯೊಬ್ಬರು ತನ್ನ ಹೆಂಡತಿಯ ಶವವನ್ನ ಹೆಗಲ ಮೇಲೆ ಹೊತ್ತು 10 ಕಿ.ಮೀ ದೂರ ನಡೆದ ಘಟನೆ ಮಾಸುವ ಮುನ್ನವೇ ಇದೀಗ ಅಂಥದ್ದೇ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಹೌದು. ಅಸ್ಸಾಂನಲ್ಲಿ ವ್ಯಕ್ತಿಯೊಬ್ಬರು ಗ್ರಾಮಕ್ಕೆ ವಾಹನ ಸಂಚರಿಸುವ ರಸ್ತೆ ಇಲ್ಲದ ಕಾರಣಕ್ಕೆ ತನ್ನ ತಮ್ಮನ ಶವವನ್ನ 8 ಕಿ.ಮಿ ದೂರ ಸೈಕಲ್‍ನಲ್ಲಿ ಕಟ್ಟಿ ಸಾಗಿಸಿದ್ದಾರೆ. ಈ ಘಟನೆ ಅಸ್ಸಾಂ ಸಿಎಂ ಸರ್ಬಾನಂದ ಸೋನೋವಾಲ್ ಅವರ ಸ್ವಕ್ಷೇತ್ರ ಮಂಜುಲಿ ಜಿಲ್ಲೆಯ ಬಲಿಜಾನ್ ಗ್ರಾಮದಲ್ಲಿ ಸೋಮವಾರದಂದು ನಡೆದಿದೆ.

    ಅನಾರೋಗ್ಯದಲ್ಲಿದ್ದ ಡಿಂಪಲ್ ದಾಸ್ ಎಂಬವರನ್ನ ಸೋಮವಾರ ಮಂಜುಲಿಯ ಗರಾಮುರ್‍ನ ಸರ್ಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಆಸ್ಪತ್ರೆ ವ್ಯಾನ್‍ನ ಡ್ರೈವರ್ ಬರುವ ಮೊದಲೇ ಮೃತ ಡಿಂಪಲ್ ದಾಸ್ ಶವವನ್ನ ಅವರ ಅಣ್ಣ ಆಸ್ಪತ್ರೆಯಿಂದ 8 ಕಿ.ಮೀ ದೂರದಲ್ಲಿರೋ ತನ್ನ ಮನೆಗೆ ಸೈಕಲ್‍ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಮುಖ್ಯರಸ್ತೆಯಿಂದ ಬಲಿಜಾನ್ ಗ್ರಾಮಕ್ಕೆ ತೆರಳಲು ವಾಹನ ಸಂಚರಿಸುವಂತಹ ರಸ್ತೆ ಇಲ್ಲ. ಬಿದಿರಿನ ಸೇತುವೆ ದಾಟಿ ಊರಿಗೆ ಹೋಗಬೇಕು. ಹೀಗಾಗಿ ಶವವನ್ನ ಸೈಕಲ್‍ನಲ್ಲೇ ಸಾಗಿಸಿದ್ದಾರೆ.

    ಈ ಬಗ್ಗೆ ಮಂಜುಲಿ ಜಿಲ್ಲಾಡಳಿತ ಈಗಾಗಲೇ ತನಿಖೆ ಆರಂಭಿಸಿದೆ. ಮೃತ ವ್ಯಕ್ತಿಯ ಕುಟುಂಬಸ್ಥರು 108 ಅಂಬುಲೆನ್ಸ್‍ಗೆ ಕರೆ ಮಾಡಿರುವುದು ನಿಜವೇ ಹಾಗೂ ವ್ಯಕ್ತಿ ಶವವನ್ನು ಆಸ್ಪತ್ರೆ ಆವರಣದಲ್ಲೇ ಸೈಕಲ್‍ಗೆ ಕಟ್ಟುತ್ತಿರೋದನ್ನು ಆಸ್ಪತ್ರೆಯ ಸಿಬ್ಬಂದಿ ಯಾರೂ ನೋಡಿದ್ದಾರೆಯೇ ಎಂಬುವುದರ ಬಗ್ಗೆ ತನಿಖೆ ಅರಂಭವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನದಿಗೆ ಬಿದ್ದ ತನಿಖಾ ತಂಡ: ಸಿಎಂ ಸೋನಾವಾಲಾ ಅವರ ಸೂಚನೆ ಮೇರೆಗೆ ಆರೋಗ್ಯ ಸೇವೆಗಳ ರಾಜ್ಯ ನಿರ್ದೇಶಕರ ನೇತೃತ್ವದಲ್ಲಿ ಮತ್ತೊಂದು ತಂಡ ಘಟನೆ ಬಗ್ಗೆ ತನಿಖೆ ಮಾಡಲು ಬುಧವಾರದಂದು ಆ ವ್ಯಕ್ತಿಯ ಗ್ರಾಮಕ್ಕೆ ಹೋಗುತ್ತಿತ್ತು. ಈ ವೇಳೆ ಬಿದಿರಿನ ಸೇತುವೆ ಮೇಲೆ ಭಾರ ಜಾಸ್ತಿಯಾಗಿ ಸೇತುವೆ ಕುಸಿದ ಕಾರಣ ತನಿಖಾ ತಂಡದ ಅಧಿಕಾರಿಗಳು ನದಿಗೆ ಬಿದ್ದಿದ್ದಾರೆ. ಸಹಾಯಕ ನಿರ್ದೇಶಕ ತಂಕೇಶ್ವರ್ ದಾಸ್ ಹಾಗೂ ಮಂಜುಲಿಯ ಸಹಾಯಕ ಉಪ ಆಯುಕ್ತರಾದ ನರೇನ್ ದಾಸ್ ಸೇರಿದಂತೆ ನಾಲ್ವರು ಅಧಿಕಾರಿಗಳು ನದಿಗೆ ಬಿದ್ದಿದ್ದಾರೆಂದು ವರದಿಯಾಗಿದೆ.

    https://youtu.be/3KcjfDB0THs

  • ಅಸ್ಸಾಂನಲ್ಲಿ ಎರಡಕ್ಕಿಂತ ಹೆಚ್ಚಿನ ಮಕ್ಕಳಿದ್ರೆ ಸರ್ಕಾರಿ ಕೆಲ್ಸ ಇಲ್ಲ: ವಿವಿವರೆಗಿನ ವಿದ್ಯಾರ್ಥಿನಿಯರ ಶಿಕ್ಷಣ ಫುಲ್ ಫ್ರೀ

    ಅಸ್ಸಾಂನಲ್ಲಿ ಎರಡಕ್ಕಿಂತ ಹೆಚ್ಚಿನ ಮಕ್ಕಳಿದ್ರೆ ಸರ್ಕಾರಿ ಕೆಲ್ಸ ಇಲ್ಲ: ವಿವಿವರೆಗಿನ ವಿದ್ಯಾರ್ಥಿನಿಯರ ಶಿಕ್ಷಣ ಫುಲ್ ಫ್ರೀ

    ದಿಸ್ಪುರ್: ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಅಭ್ಯರ್ಥಿಗಳಿಗೆ ಇನ್ನು ಮುಂದೆ ಸರ್ಕಾರಿ ಕೆಲಸ ನೀಡದೇ ಇರುವ ನಿರ್ಧಾರವನ್ನು ಅಸ್ಸಾಂ ಸರ್ಕಾರ ಕೈಗೊಂಡಿದೆ.

    ಅಸ್ಸಾಂ ಸರ್ಕಾರ ಜನಸಂಖ್ಯಾ ನಿಯಂತ್ರಣ ಕರಡು ಮಸೂದೆಯನ್ನು ಸಿದ್ಧಪಡಿಸಿದ್ದು, ಈ ಮಸೂದೆಯಲ್ಲಿ ಎರಡಕ್ಕಿತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಅಭ್ಯರ್ಥಿಗಳು ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅನರ್ಹರು ಎನ್ನುವ ಅಂಶವನ್ನು ಸೇರಿಸಿದೆ.

    ಜನಸಂಖ್ಯಾ ನಿಯಂತ್ರಣ ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಮಸೂದೆಯನ್ನು ಸಿದ್ಧಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

    ಮಸೂದೆಯಲ್ಲಿ ಏನಿದೆ?
    ಸರ್ಕಾರಿ ಕೆಲಸ ಅಲ್ಲದೇ, ಪಂಚಾಯತ್ ಮತ್ತು ನಗರಸಭೆ ಚುನಾವಣೆಯಲ್ಲಿ ನಿಲ್ಲುವ ಅಭ್ಯರ್ಥಿಗಳಿಗೂ ಈ ನಿಯಮ ಅನ್ವಯವಾಗಲಿದೆ. ಅಷ್ಟೇ ಅಲ್ಲದೇ ಮದುವೆಯಾಗಲಿರುವ ವರನ ವಯಸ್ಸನ್ನು 21ಕ್ಕೇ ಏರಿಸಬೇಕೆಂಬ ಅಂಶವು ಇದರಲ್ಲಿದೆ.

    ವಿಶ್ವವಿದ್ಯಾಲಯ ಶಿಕ್ಷಣದವರೆಗೆ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡುವುದಾಗಿ ಸರ್ಕಾರ ಹೇಳಿದೆ. ಶಿಕ್ಷಣ, ಬಸ್ ಪ್ರಯಾಣ, ಪುಸ್ತಕ ಮತ್ತು ಹಾಸ್ಟೇಲ್ ಸೌಲಭ್ಯವನ್ನು ಉಚಿತವಾಗಿ ನೀಡಲಾಗುವುದು. ಇದರಿಂದಾಗಿ ಅರ್ಧದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಇಳಿಕೆಯಾಗಲಿದೆ ಎಂದು ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

    ಬಾಲ್ಯವಿವಾಹ ಆದವರು ಸರ್ಕಾರಿ ಉದ್ಯೋಗ ಪಡೆಯಲು ಅನರ್ಹರು ಮತ್ತು ಸರ್ಕಾರಿ ಉದ್ಯೋಗ, ಚುನಾವಣೆಯಲ್ಲಿ ಶೇ.50 ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲು ಎನ್ನುವ ಅಂಶವು ಕರಡು ಮಸೂದೆಯಲ್ಲಿದೆ.

    ಮಸೂದೆಯಲ್ಲಿ ಪ್ರಸ್ತಾಪಗೊಂಡಿರುವ ಅಂಶಗಳ ಬಗ್ಗೆ ಜುಲೈವರೆಗೆ ಸಾರ್ವಜನಿಕರ ಅಭಿಪ್ರಾಯವನ್ನು ಪಡೆಯಲಾಗುತ್ತದೆ. ಇದಾದ ಬಳಿಕ ವಿಧಾಸಭೆಯಲ್ಲಿ ಚರ್ಚೆ ನಡೆಸಿ ಕಾಯ್ದೆಯನ್ನು ತರಲಾಗುವುದು. ಚುನಾವಣೆಯ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿತ್ತು. ಈಗ ಇದನ್ನು ಜಾರಿಗೆ ತರಲು ಸರ್ಕಾರ ಮುಂದಾಗುತ್ತಿದೆ ಎಂದು ಎಂದು ಹಿಮಂತ ಬಿಸ್ವಾ ಶರ್ಮಾ ತಿಳಿಸಿದರು.