Tag: Assam

  • ಜೀವದ ಹಂಗು ತೊರೆದು ಬ್ರಹ್ಮಪುತ್ರ ನದಿಗೆ ಹಾರಿ ತಾಯಿ ಸೇರಿ ಮೂವರನ್ನ ರಕ್ಷಿಸಿದ 11ರ ಪೋರ

    ಜೀವದ ಹಂಗು ತೊರೆದು ಬ್ರಹ್ಮಪುತ್ರ ನದಿಗೆ ಹಾರಿ ತಾಯಿ ಸೇರಿ ಮೂವರನ್ನ ರಕ್ಷಿಸಿದ 11ರ ಪೋರ

    ಡಿಸ್ಪುರ್: 11 ವರ್ಷದ ಬಾಲಕ ಜೀವದ ಹಂಗು ತೊರೆದು ಬ್ರಹ್ಮಪುತ್ರ ನದಿಗೆ ಹಾರಿ ತನ್ನ ತಾಯಿ ಸೇರಿದಂತೆ ಮೂವರನ್ನು ರಕ್ಷಿಸಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ.

    11 ವರ್ಷದ ಕಮಲ್ ಕಿಶೋರ್ ದಾಸ್ ಮೂವರನ್ನು ರಕ್ಷಿಸಿ ಶೌರ್ಯ ಮೆರೆದ ಬಾಲಕ. ಬುಧವಾರ ಕಮಲ್ ಕಿಶೋರ್ ದಾಸ್ ಕುಟುಂಬ ಉತ್ತರ ಗುವಾಹಟಿಯಿಂದ ತನ್ನ ಅಜ್ಜಿಯನ್ನು ಬಿಟ್ಟು ಮನೆಗೆ ವಾಪಸ್ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಇತ್ತೀಚೆಗೆ ಅಸ್ಸಾಂನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ಮಳೆಯಿಂದಾಗಿ ಬ್ರಹ್ಮಪುತ್ರ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ದೋಣಿ ಪಿಲ್ಲರ್ ಗೆ ಬಡಿದು ಮಗುಚಿದೆ.

    ಈ ವೇಳೆ ಕಮಲ್ ತಾಯಿ ಆತನನ್ನು ಈಜಿ ಪಿಲ್ಲರ್ ಹಿಡಿದುಕೊಳ್ಳುವಂತೆ ಹೇಳಿದ್ದಾರೆ. ಅದರಂತೆಯೇ ಕಮಲ್ ಈಜಿ ಪಿಲ್ಲರ್ ಅನ್ನು ಹಿಡಿದುಕೊಂಡಿದ್ದಾನೆ. ಬಳಿಕ ಕಮಲ್ ಹಿಂದೆ ತಿರುಗಿ ನೋಡಿದಾಗ ತನ್ನ ತಾಯಿ ಮತ್ತು ಚಿಕ್ಕಮ್ಮ ಈಜಲು ಸಾಧ್ಯವಾಗದೇ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಗಮನಿಸಿದ್ದಾನೆ. ಕೂಡಲೇ ಕಮಲ್ ಜೀವದ ಹಂಗು ತೊರೆದು ಉಕ್ಕಿ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಹಾರಿದ್ದಾನೆ. ಬಳಿಕ ತಾಯಿಯ ತಲೆ ಕೂದಲನ್ನು ಹಿಡಿದುಕೊಂಡು ಈಜಿ ಪಿಲ್ಲರ್ ಹಿಡಿದುಕೊಳ್ಳಲು ಸಹಾಯ ಮಾಡಿದ್ದಾನೆ. ನಂತರ ದೂರದಲ್ಲಿ ತನ್ನ ಚಿಕ್ಕಮ್ಮ ಸಹ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿ ಮತ್ತೆ ನೀದಿಗೆ ಹಾರಿ ಚಿಕ್ಕಮ್ಮ ನನ್ನು ರಕ್ಷಿಸಿದ್ದಾನೆ.

    “ದೋಣಿ ಪಿಲ್ಲರ್ ಗೆ ಬಡಿದಾಗ ನನ್ನ ತಾಯಿಯು ನನ್ನ ಶೂಗಳನ್ನು ತೆಗೆದುಕೊಂಡು ಈಜುವಂತೆ ಹೇಳಿದರು. ಅದರಂತೆಯೇ ನಾನು ಈಜಿ ತೀರಕ್ಕೆ ಸೇರಿದೆ. ಆದರೆ ನಾನು ತೀರಕ್ಕೆ ಬಂದಾಗ ನನ್ನ ತಾಯಿ ಮತ್ತು ಚಿಕ್ಕಮ್ಮ ಈಜುಕೊಂಡು ಬರಲು ಸಾಧ್ಯವಾಗಿಲ್ಲ. ಬಳಿಕ ನಾನು ನದಿಗೆ ಹಾರಿ ತಾಯಿಯ ಕೂದಲನ್ನು ಹಿಡಿದುಕೊಂಡು ಬಂದು ಪಿಲ್ಲರ್ ಹಿಡಿದುಕೊಳ್ಳುವಂತೆ ಮಾಡಿದೆ” ಎಂದು ಕಮಲ್ ಹೇಳಿದ್ದಾನೆ.

    ಬುರ್ಕಾ ಧರಿಸಿದ್ದ ಮಹಿಳೆ ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು ನದಿಯಲ್ಲಿ ತೇಲುವುದಕ್ಕೂ ಕಷ್ಟ ಪಡುತ್ತಿದ್ದರು. ಬಳಿಕ ನಾನು ಮತ್ತೆ ನದಿಗೆ ಜಿಗಿದು ಅವರನ್ನು ರಕ್ಷಿಸಿದೆ. ಆದರೆ ದುರದೃಷ್ಟವಶಾತ್ ಮಗು ತಾಯಿಯ ಕೈಯಿಂದ ಜಾರಿ ನೀರಿನೊಳಗೆ ಬಿದ್ದು ಮುಂದೆ ಹೋಯಿತು. ತಾಯಿಯೂ ಕೂಡ ಮಗುವನ್ನು ರಕ್ಷಿಸಲು ನದಿಗೆ ಜಿಗಿದರು. ಆದರೆ ಈ ವೇಳೆ ನಾನು ಏನು ಮಾಡಲು ಸಾಧ್ಯವಾಗಿಲ್ಲ ಎಂದು ಕಮಲ್ ಹೇಳಿದ್ದಾನೆ.

    ಕಮಲ್ ವಾರದಲ್ಲಿ ಎರಡು ಬಾರಿ ಬ್ರಹ್ಮಪುತ್ರ ನದಿಯಲ್ಲಿ ಈಜಾಡುವುದನ್ನು ಅಭ್ಯಾಸ ಮಾಡಲು ಹೋಗುತ್ತಿದ್ದನು. ಇದರಿಂದಲೇ ಆತ ಧೈರ್ಯ ಪ್ರದರ್ಶಿಸಿ ನಮ್ಮ ಜೀವ ಉಳಿಸಲು ಸಾಧ್ಯವಾಯಿತು ಎಂದು ಕಮಲ್ ತಾಯಿ ಜಿತುಮೋನಿ ದಾಸ್ ಹೇಳಿದ್ದಾರೆ.

    ಈ ದೋಣಿಯಲ್ಲಿ ಒಟ್ಟು 36 ಮಂದಿ ಪ್ರಯಾಣಿಸುತ್ತಿದ್ದು, ಜೊತೆಗೆ ಅಕ್ರಮವಾಗಿ 18 ಮೋಟಾರ್ ಬೈಕ್ ಗಳನ್ನು ಸಾಗಿಸಲಾಗುತ್ತಿತ್ತು. ಮೂವರನ್ನು ಕಮಲ್ ರಕ್ಷಿಸಿದ್ದು, 12 ಮಂದಿ ಈಜಿ ದಡ ಸೇರಿದ್ದಾರೆ. 10 ಮಂದಿ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಇನ್ನುಳಿದಂತೆ 11 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇವಮಾನವನ ಚುಂಬನಕ್ಕೆ ಮುಗಿಬೀಳ್ತಿದ್ದ ಮಹಿಳೆಯರು!- ಕೊನೆಗೂ ಕಿಸ್ಸಿಂಗ್ ಬಾಬಾ ಅರೆಸ್ಟ್

    ದೇವಮಾನವನ ಚುಂಬನಕ್ಕೆ ಮುಗಿಬೀಳ್ತಿದ್ದ ಮಹಿಳೆಯರು!- ಕೊನೆಗೂ ಕಿಸ್ಸಿಂಗ್ ಬಾಬಾ ಅರೆಸ್ಟ್

    ದಿಸ್ಪುರ್: ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿ, ಮಹಿಳೆಯರನ್ನು ತಬ್ಬಿಕೊಂಡು ಮುತ್ತಿಕ್ಕುತ್ತಿದ್ದ ಸ್ವಯಂಘೋಷಿತ ದೇವ ಮಾನವನೊಬ್ಬನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

    ರಾಮ್ ಪ್ರಕಾಶ್ ಚೌಹಾಣ್ ಬಂಧಿತ ಆರೋಪಿ. ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಭೂರಾಲ್ತುಪ್ ಗ್ರಾಮದಲ್ಲಿದ್ದ ರಾಮ್ ಪ್ರಕಾಶ್, ತನ್ ಬಳಿಕೆ ಸಮಸ್ಯೆ ಹೇಳಿಕೊಂಡು ಬರುತ್ತಿದ್ದ ಮಹಿಳೆಯರಿಗೆ ಮುತ್ತಿಕ್ಕುವುದು ಹಾಗೂ ತಬ್ಬಿಕೊಳ್ಳುವುದನ್ನು ಮಾಡುತ್ತಿದ್ದ ಎಂದು ವರದಿಯಾಗಿದೆ.

    ತನ್ನ ‘ಚಮತ್ಕಾರ ಚುಂಬನ’ದಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಪರಿಹಾರ ಸಿಗುತ್ತವೆ. ತನ್ನ ಚುಂಬನದಲ್ಲಿ ಅದ್ಭುತ ಶಕ್ತಿಯಿದೆ. ಈ ಶಕ್ತಿಯನ್ನು ಭಗವಾನ್ ವಿಷ್ಣುವಿನಿಂದ ವರದಿಂದ ಪಡೆದಿದ್ದಾಗಿ, ಸಹಾಯ ಬಯಸುವ ಮಹಿಳೆಯರಿಗೆ ಹಾಗೂ ವೈವಾಹಿಕ ಸಮಸ್ಯೆ ನಿವಾರಣೆಗೆ ತನ್ನ ಶಕ್ತಿಯನ್ನು ಬಳಸುತ್ತಿರುವುದಾಗಿ ರಾಮ್ ಪ್ರಕಾಶ್ ಹೇಳಿಕೊಂಡಿದ್ದನು. ಈತನ ಮಾತು ಕೇಳಿ ಪ್ರಭಾವಿತರಾಗುತ್ತಿದ್ದ ಮಹಿಳೆಯರು ಚುಂಬಿಸಲು ಅನುಮತಿ ನೀಡುತ್ತಿದ್ದರು.

    ರಾಮ್ ಪ್ರಸಾದ್ ಬಗ್ಗೆ ಪ್ರಚಾರ ಮಾಡಲು ಸ್ಥಳೀಯರು ಮುಂದಾಗಿದ್ದರು, ಆದರೆ ಆತ ಅದನ್ನು ತಿರಸ್ಕರಿಸಿದ್ದನು. ಅಲ್ಲದೆ ಆತನಿಗೆ ಮಾಂತ್ರಿಕ ಶಕ್ತಿಯಿದೆ ಎಂದು ನಂಬಿಸಲಾಗಿತ್ತು. ಆತನ ತಾಯಿ, ತಮ್ಮ ಮಗನ ಬಳಿ ಚಿಕಿತ್ಸಕ ಗುಣವಿದೆ ಎಂದು ತನಿಖೆಯ ವೇಳೆ ಹೇಳಿದ್ದಾಳೆ.

    ಮೊರಿಗಾಂವ್ ಜಿಲ್ಲೆಯ ಕೆಲವು ಭಾಗದಲ್ಲಿ ವಾಮಾಚಾರಿಗಳ ಸಂಖ್ಯೆ ಹೆಚ್ಚಾಗಿದ್ದು, ತಾವು ವಿಷ್ಣುವಿನ ಅನುಗ್ರಹ ಪಡೆದಿದ್ದಾಗಿ ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಷ್ಟ್ರೀಯ ನಾಗರಿಕ ನೋಂದಣಿ ಮಾಡಿಸಲು 40 ಲಕ್ಷ ಮಂದಿ ವಿಫಲ: ಏನಿದು ಎನ್‌ಆರ್‌ಸಿ? ಅಸ್ಸಾಂನಲ್ಲೇ ಮಾತ್ರ ಏಕೆ?

    ರಾಷ್ಟ್ರೀಯ ನಾಗರಿಕ ನೋಂದಣಿ ಮಾಡಿಸಲು 40 ಲಕ್ಷ ಮಂದಿ ವಿಫಲ: ಏನಿದು ಎನ್‌ಆರ್‌ಸಿ? ಅಸ್ಸಾಂನಲ್ಲೇ ಮಾತ್ರ ಏಕೆ?

    ನವದೆಹಲಿ: ಅಸ್ಸಾಂ ರಾಜ್ಯದಲ್ಲಿ ನಡೆದ `ರಾಷ್ಟ್ರೀಯ ನಾಗರಿಕ ನೋಂದಣಿ’ (ಎನ್‌ಆರ್‌ಸಿ) ಎರಡನೇ ಕರಡು ಪಟ್ಟಿ ಬಿಡುಗಡೆಯಾಗಿದ್ದು, 40.07 ಲಕ್ಷ ಮಂದಿ ಎನ್‌ಆರ್‌ಸಿ  ಮಾಡಿಕೊಳ್ಳಲು ವಿಫಲರಾಗಿದ್ದಾರೆ. 3.29 ಕೋಟಿ ನಿವಾಸಿಗಳ ಪೈಕಿ ಸೋಮವಾರ 2.9 ಕೋಟಿ ಜನರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    ಅಸ್ಸಾಂ ನಲ್ಲಿ ಮಾತ್ರ ಏಕೆ: ಅಸ್ಸಾಂ ರಾಜ್ಯವೂ ನೆರೆಯ ಮುಸ್ಲಿಂ ರಾಷ್ಟ್ರವಾದ ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿದೆ. ಹೀಗಾಗಿ ಇಲ್ಲಿ ಇಲ್ಲಿ ಬಾಂಗ್ಲಾದೇಶಿಯರ ಹಾವಳಿ ಹೆಚ್ಚಾಗಿದೆ. ಅಕ್ರಮ ವಲಸಿಗರಿಂದ ಇಲ್ಲಿ ಹೆಚ್ಚಿನ ಹಿಂಸಾಚಾರದ ಗಲಭೆಗಳು ನಡೆಯುತ್ತಿತ್ತು. ಇದರಿಂದ ರಾಜ್ಯದ ವಸ್ತುಸ್ಥಿತಿಯೇ ಬದಲಾಗಿತ್ತು. ಇದನ್ನು ಗಮನಿಸಿದ ಸರ್ಕಾರ ಸುಪ್ರೀಂ ಕೋರ್ಟ್ ನಿಗಾದಲ್ಲಿ ಅಸ್ಸಾಂನಲ್ಲಿ ಮಾತ್ರ ಎನ್‌ಆರ್‌ಸಿ ನೊಂದಣಿ ಕಾರ್ಯನಡೆಸಿತ್ತು. ಈಗಾಗಲೇ ಮೊದಲ ಬಾರಿಗೆ ಜನವರಿ 1 ರಂದು ಮೊದಲ ಕರಡು ಬಿಡುಗಡೆ ಮಾಡಲಾಗಿತ್ತು.

    ಅಂತಿಮ ಪಟ್ಟಿಯಲ್ಲ: ಸದ್ಯ ಬಿಡುಗಡೆಯಾಗಿರುವ ಪಟ್ಟಿ ಅಂತಿಮವಲ್ಲ ಎಂದು ಆಸ್ಸಾಂ ಸಿಎಂ ಸರ್ಬಾನಂದ ಸೋನೋವಲ್ ತಿಳಿಸಿದ್ದಾರೆ. 2ನೇ ಪಟ್ಟಿಯಲ್ಲಿ ಹೆಸರು ಇಲ್ಲದ ಮಂದಿ ಆಗಸ್ಟ್ 7 ರಿಂದ ಸೆಪ್ಟೆಂಬರ್ 28 ರವರೆಗೂ ನಡೆಯುವ ಅಂತಿಮ ನೋಂದಣಿ ಕಾರ್ಯದಲ್ಲಿ ಅರ್ಜಿ ಸಲ್ಲಿಸಿ ತಮ್ಮ ಹೆಸರು ಬಿಟ್ಟು ಹೋಗಿರುವ ಕಾರಣ ತಿಳಿಯಬಹುದು. ಬಳಿಕ ಅಧಿಕಾರಿಗಳ ಬಳಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 28 ವೇಳೆಗೆ ಸೂಕ್ತ ದಾಖಲೆ ನೀಡಿ ಮರು ನೋಂದಣಿ ಮಾಡಬಹುದಾಗಿದೆ. ಪಟ್ಟಿಯಲ್ಲಿ ಸ್ಥಾನ ಪಡೆದ ನಾಗರಿಕರಿಗೆ ಹೆಸರು, ವಿಳಾಸ ಹಾಗೂ ಫೋಟೋ ಹೊಂದಿರುವ ಗುರುತು ಪತ್ರ ನೀಡಲಾಗುತ್ತದೆ.

    ಹೆಚ್ಚಿನ ಭದ್ರತೆ: ಸದ್ಯ ಬಿಡುಗಡೆಯಾಗಿರುವ ಎನ್‌ಆರ್‌ಸಿ ಪಟ್ಟಿಯಲ್ಲಿ ನೋಂದಣಿಯಾಗದ ಜನರು ಅಸ್ಸಾಂ ನಲ್ಲಿ ಹಿಂಸಾಚಾರ ಸೃಷ್ಟಿಮಾಡುವ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರ 22 ಸಾವಿರ ಪ್ಯಾರಾ ಮಿಲಿಟರಿ ಯೋಧರನ್ನು ಹೆಚ್ಚಿನ ಭದ್ರತೆಗೆ ನಿಯೋಜಿಸಲಾಗಿದೆ.

    ಮಾರ್ಚ್ 25, 1971 ಯಾಕೆ?
    1971 ರಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದ ಆರಂಭವಾಗಿ ಹಿಂಸಾಚಾರ ಹೆಚ್ಚಾಗಿತ್ತು. ಇದರಿಂದ ಹೆದರಿದ ಬಾಂಗ್ಲಾ ಪ್ರಜೆಗಳು ಅಸ್ಸಾಂನತ್ತ ವಲಸೆ ಬಂದರು. 1971 ಮಾರ್ಚ್ 26 ರಂದು ಬಾಂಗ್ಲಾ ಸ್ವತಂತ್ರ ರಾಷ್ಟ್ರವಾಗಿ ಉದಯವಾಯಿತು. ಹೀಗಾಗಿ ಬಾಂಗ್ಲಾ ಸ್ವಾಂತಂತ್ರ್ಯ ಗಳಿಸಿದ ಒಂದು ದಿನದ ಮುಂಚಿತ ದಿನವಾದ ಮಾರ್ಚ್ 25ನ್ನು ಕಟಾಫ್ ದಿನಾಂಕ ಮಾಡಲಾಯಿತು. 1985 ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಅಸ್ಸಾಂ ಅಸೋಂ ಗಣ ಪರಿಷತ್ ಸರ್ಕಾರಗಳು ಕಟಾಫ್ ದಿನಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದ್ದವು. ಮಾರ್ಚ್ 25, 1971 ರ ಮೊದಲು ಅಸ್ಸಾಂನಲ್ಲಿ ವಾಸಿಸುವ ಎಲ್ಲ ನಾಗರಿಕರನ್ನು ಈ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಅಸ್ಸಾಂ ಸರ್ಕಾರ ಈ ಹಿಂದೆ ಹೇಳಿತ್ತು. 1951ರ ನಂತರ ದಾಖಲೆಗಳನ್ನು ಸಲ್ಲಿಸಿದರೆ ಈ ಪಟ್ಟಿಯಲ್ಲಿ ಸೇರಿಸಲಾಗುವುದು. ನಿಜವಾದ ಪ್ರಜೆಗಳು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿತ್ತು.

    ಪಟ್ಟಿಯಲ್ಲಿಲ್ಲದವರು ಗಡೀಪಾರು?
    ಎನ್‌ಆರ್‌ಸಿ ಪಟ್ಟಿಯಲ್ಲಿ ನೋಂದಣಿ ಮಾಡಿರದ ಮಂದಿಯನ್ನು ಗಡೀಪಾರು ಮಾಡುವ ಸಂಭವವಿದೆ. ಆದರೆ ಇದಕ್ಕೂ ಮುನ್ನ ಕೇಂದ್ರ ಸರ್ಕಾರ ಬಾಂಗ್ಲಾದೇಶದೊಂದಿಗೆ ಗಡಿಪಾರು ಒಪ್ಪಂದ ಮಾಡಿಕೊಳ್ಳಬೇಕಿದೆ. ಅಸ್ಸಾಂನಲ್ಲಿ ಕೇವಲ ಬಾಂಗ್ಲಾ ಅಕ್ರಮ ವಲಸಿಗರು ಮಾತ್ರವಲ್ಲದೇ ನೇಪಾಳದಿಂದ ಬಂದಿರುವ ಮಂದಿಯೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

    ಕಾಂಗ್ರೆಸ್, ಟಿಎಂಸಿ ಅಸಮಾಧಾನ: ಅಸ್ಸಾಂ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯ ಕುರಿತು ತೃಣಮೂಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿಯೇ 40 ಲಕ್ಷ ಮಂದಿ ಅಲ್ಪಸಂಖ್ಯಾತರ ಹೆಸರನ್ನು ಪಟ್ಟಿಯಿಂದ ಹೊರಗಿಟ್ಟಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಎಂದು ಟಿಎಂಸಿ ಪಕ್ಷದ ವಕ್ತಾರ ಎಸ್‍ಎಸ್ ರಾಯ್ ಆಗ್ರಹಿಸಿದ್ದಾರೆ.

    40 ಲಕ್ಷ ಮಂದಿ ಹೆಸರು ಪಟ್ಟಿಯಿಂದ ಹೊರಗಿಟ್ಟಿರುವುದು ಅಚ್ಚರಿ ತಂದಿದೆ. ಈ ವರದಿ ಸಿದ್ಧಪಡಿಸುವ ವೇಳೆ ಹಲವು ಅಕ್ರಮಗಳು ನಡೆದಿದೆ. ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿ ಚರ್ಚೆ ನಡೆಸಲಾಗುವುದು. ಈ ಹಿಂದೆ ಬಿಜೆಪಿಯ ರಾಜಕೀಯ ದುರುದ್ದೇಶ ಅಡಗಿದೆ ಎಂದು ಕಾಂಗ್ರೆಸ್ ಅಸ್ಸಾಂ ಮುಖ್ಯಸ್ಥ ರಿಪನ್ ಬೋರಾ ದೂರಿದ್ದಾರೆ.

    ಅಸ್ಸಾಂ ನಲ್ಲಿ ಬಿಡುಗಡೆಯಾಗಿರುವ ಎನ್‌ಆರ್‌ಸಿ ಪಟ್ಟಿಯ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವ ಜನರು ಆತಂಕ ಪಡುವ ಅಗತ್ಯವಿಲ್ಲ. ಯಾರ ಮೇಲೂ ಸರ್ಕಾರ ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಆದರೆ ಕೆಲ ಮಂದಿ ಉದ್ದೇಶ ಪೂರ್ವಕವಾಗಿ ಆತಂಕ ಸೃಷ್ಟಿ ಮಾಡುತ್ತಿದ್ದಾರೆ. ವರದಿ ನಿಷ್ಪಕ್ಷಪಾತವಾಗಿದೆ. ಅಲ್ಲದೇ ಇದು ಅಂತಿಮ ಪಟ್ಟಿಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಫೇಸ್‍ಬುಕ್‍ನಿಂದ ಎಚ್ಚರಿಕೆ ಸಂದೇಶ – ಆತ್ಮಹತ್ಯೆ ಪೋಸ್ಟ್ ಮಾಡಿದ್ದ ಅಪ್ರಾಪ್ತೆಯನ್ನು 30 ನಿಮಿಷದಲ್ಲಿ ರಕ್ಷಿಸಿದ ಪೊಲೀಸರು

    ಫೇಸ್‍ಬುಕ್‍ನಿಂದ ಎಚ್ಚರಿಕೆ ಸಂದೇಶ – ಆತ್ಮಹತ್ಯೆ ಪೋಸ್ಟ್ ಮಾಡಿದ್ದ ಅಪ್ರಾಪ್ತೆಯನ್ನು 30 ನಿಮಿಷದಲ್ಲಿ ರಕ್ಷಿಸಿದ ಪೊಲೀಸರು

    ಡಿಸ್‍ಪುರ: ಫೇಸ್‍ಬುಕ್ ಸ್ಟೇಟಸ್‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪೋಸ್ಟ್ ಮಾಡಿದ್ದ ಅಪ್ರಾಪ್ತ ಬಾಲಕಿಯನ್ನು ಪೊಲೀಸರು, 30 ನಿಮಿಷದೊಳಗೆ ರಕ್ಷಿಸಿದ ಘಟನೆ ಅಸ್ಸಾಂ ಗುವಾಹಟಿಯಲ್ಲಿ ನಡೆದಿದೆ.

    ಅಮೆರಿಕದ ಫೇಸ್‍ಬುಕ್ ಪ್ರಧಾನ ಕಚೇರಿಯಿಂದ ಎಚ್ಚರಿಕೆ ಸಂದೇಶ ಬಂದ ನಂತರ ಪೊಲೀಸರು ಅಪ್ರಾಪ್ತೆಯನ್ನು ಕಾಪಾಡಿದ್ದಾರೆ. ಬುಧವಾರ ರಾತ್ರಿ ಫೇಸ್‍ಬುಕ್ ನಲ್ಲಿ ಅಪ್ರಾಪ್ತೆ `ನಾನು ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಸ್ಟೇಟಸ್ ಹಾಕಿಕೊಂಡಿದ್ದಾಳೆ. ಇದನ್ನು ಗಮನಿಸಿದ ಫೇಸ್ ಬುಕ್ ಕಚೇರಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದೆ.

    ಫೇಸ್ ಬುಕ್ ಕಚೇರಿಯಿಂದ ಬಂದ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಪೊಲೀಸರು 30 ನಿಮಿಷದಲ್ಲಿ ಬಾಲಕಿಯನ್ನು ರಕ್ಷಿಸಿದ್ದಾರೆ. ಈ ಕುರಿತು ಬಾಲಕಿಯ ಕುಟುಂಬಕ್ಕೂ ಮಾಹಿತಿ ನೀಡಿದ್ದು, ಸದ್ಯ ಬಾಲಕಿ ಕುಟುಂಬಸ್ಥರ ಬಳಿ ಸುರಕ್ಷಿತವಾಗಿದ್ದಾಳೆ. ಬಾಲಕಿಯನ್ನು ರಕ್ಷಣೆ ಮಾಡಿದ ಬಳಿಕ ಫೇಸ್ ಬುಕ್ ಸ್ಟೇಟಸ್ ಅನ್ನು ಡಿಲೀಟ್ ಮಾಡಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

    ಘಟನೆ ಕುರಿತು ವಿವರಣೆ ನೀಡಿದ ಅಸ್ಸಾಂ ಎಜಿಡಿಪಿ ಹರ್ಮೀತ್ ಸಿಂಗ್, ಫೇಸ್ ಬುಕ್ ಕಚೇರಿಯಿಂದ ಕಳೆದ ರಾತ್ರಿ ನಮ್ಮ ನೋಡಲ್ ಅಧಿಕಾರಿಗೆ ಎಚ್ಚರಿಕೆ ಸಂದೇಶ ಬಂದಿದೆ. ಬಳಿಕ ನಮ್ಮ ಸಾಮಾಜಿಕ ಜಾಲತಾಣ ಕೇಂದ್ರದ ಸಹಾಯದಿಂದ ಬಾಲಕಿಯ ವಿಳಾಸ ಪತ್ತೆ ಮಾಡಿ, ರಕ್ಷಣೆ ಮಾಡಲಾಯಿತು. ಇದು ಸಾಮಾಜಿಕ ಜಾಲತಾಣದ ಬಹುದೊಡ್ಡ ಯಶಸ್ಸು ಎಂದು ಹೇಳಿದ್ದಾರೆ.

    ಮಕ್ಕಳ ಕಳ್ಳರ ವದಂತಿ ಸೇರಿದಂತೆ ಸುಳ್ಳು ಮಾಹಿತಿಯನ್ನು ರವಾನಿಸುವವರ ವಿರುದ್ಧ ಕ್ರಮಕೈಗೊಳ್ಳಲು ಅಸ್ಸಾಂ ಪೊಲೀಸರು ಸಾಮಾಜಿಕ ಜಾಲತಾಣಾದಲ್ಲಿ ಹರಿದಾಡುತ್ತಿರುವ ವದಂತಿ ವಿರೋಧಿ ಕೇಂದ್ರವನ್ನು ಸ್ಥಾಪಿಸಿದ್ದರು. ಕಳೆದ ತಿಂಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಂದ ವದಂತಿ ನಂಬಿ ಸಾರ್ವಜನಿಕರು ಇಬ್ಬರು ವ್ಯಕ್ತಿಗಳನ್ನು ಅಸ್ಸಾಂನ ಕಾರ್ಬಿ ಅಂಗ್ಲೋನ್ಗ ಜಿಲ್ಲೆಯಲ್ಲಿ ಕೊಲೆ ಮಾಡಿದ್ದರು. ಈ ಘಟನೆ ಬಳಿಕ ಅಸ್ಸಾಂ ಪೊಲೀಸರು ಸಾಮಾಜಿಕ ಜಾಲತಾಣ ಕೇಂದ್ರವನ್ನು ಪ್ರಾರಂಭಿಸಿದ್ದರು.

  • ವಿಶ್ವದಾಖಲೆ ಬರೆದ ಅಸ್ಸಾಂ ಚಹಾ: 1 ಕೆಜಿ ಎಲೆಗಳಿಗೆ 39 ಸಾವಿರ!

    ವಿಶ್ವದಾಖಲೆ ಬರೆದ ಅಸ್ಸಾಂ ಚಹಾ: 1 ಕೆಜಿ ಎಲೆಗಳಿಗೆ 39 ಸಾವಿರ!

    ಗುವಾಹಟಿ: ಅಸ್ಸಾಂನ ದಿಬ್ರುಗಡ್ ಜಿಲ್ಲೆಯ ಮನೋಹರಿ ಟೀ ಎಸ್ಟೇಟ್ ತನ್ನ ಚಹಾದ ಎಲೆಗಳ ಮಾರಾಟದಲ್ಲಿ ವಿಶ್ವದಾಖಲೆ ಬರೆದಿದೆ. ಇದೇ ಮೊದಲಿಗೆ ಪ್ರತಿ ಕೆ.ಜಿ ಗೆ 39,001 ರೂ. ಗೆ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಿ ಸುದ್ದಿಯಾಗಿದೆ.

    ರಾಷ್ಟ್ರಮಟ್ಟದಲ್ಲಿ ಚಹಾದ ಎಲೆಗಳ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಇದೇ ಮೊದಲಿಗೆ ಇಷ್ಟೊಂದು ಬೆಲೆಗೆ ಮಾರಾಟವಾಗಿದ್ದು, ಇತಿಹಾಸದ ದಾಖಲೆಯನ್ನೇ ಸೃಷ್ಟಿಸಿದೆ ಎಂದು ಗುವಾಹಟಿನ ಚಹಾದ ಹರಾಜು ಕೇಂದ್ರ ತಿಳಿಸಿದೆ.

    ವಿಶ್ವಾದ್ಯಂತ ಯಾವುದೇ ಹರಾಜು ಕೇಂದ್ರದಲ್ಲಿ ಚಹಾ ಈ ರೀತಿ ಹೆಚ್ಚಿನ ಬೆಲೆಗೆ ಮಾರಾಟವಾಗಿರಲಿಲ್ಲ. ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಹರಾಜಾಗಿದೆ. ಇದು ಹೆಮ್ಮೆ ಪಡುವಂತಹ ಕ್ಷಣವಾಗಿದೆ. ನಮ್ಮ ಸಂಸ್ಥೆ ವಿಶೇಷ ವೈವಿಧ್ಯತೆಗಳಿಗೆ ವೇದಿಕೆಯಾಗಿದ್ದು, ಇತರ ಚಹಾದ ಬೆಳೆಗಾರರಿಗೆ ಪ್ರೋತ್ಸಾಹದಾಯಕವಾಗಿದೆ. ಚಹಾದ ಎಲೆಗಳನ್ನು ದೆಹಲಿ ಮತ್ತು ಅಹಮದಾಬಾದ್‍ನಲ್ಲಿದ್ದ ಖರೀದಿಗಾರರಿಗೆ ಮಾರಲಾಯಿತು ಎಂದು ಗುವಾಹಟಿಯ ಚಹಾದ ಹರಾಜು ಕೇಂದ್ರದ ದಿನೇಶ್ ಬಿಹಾನಿರವರು ಹೇಳಿದರು.

    ಮನೋಹರಿ ಟೀ ಎಸ್ಟೇಟ್ ಮಾಲೀಕರಾದ ರಾಜನ್ ಲೋಹಿಯಾರವರ ಮಾರ್ಗದರ್ಶನದಲ್ಲಿ ಸಿ.ಕೆ. ಪರಾಶರವರು ಚಹಾವನ್ನು ಬೆಳೆಸುತ್ತಿದ್ದರು. ಅವರು ಬೆಳೆಯುವುದಕ್ಕೆ ಬೇಕಾದ ಎಲ್ಲಾ ಸೌಲಭ್ಯವನ್ನು ಒದಗಿಸುವ ಮೂಲಕ ಎಲೆಗಳ ಗುಣಮಟ್ಟ, ಸಾಕಷ್ಟು ಶ್ರಮವಹಿಸಿ ಬೆಳದಿದ್ದರಿಂದ ಈ ರೀತಿಯ ಬೆಲೆ ಪಡೆಯಲು ಸಾಧ್ಯವಾಯಿತು. ಚಹಾದ ಎಲೆಗಳು ನೋಡಲು 24 ಕ್ಯಾರೆಟ್ ಚಿನ್ನದ ಹಾಗೇ ಇವೆ ಎಂದು ಲೋಹಿಯ ಹೇಳಿದರು.

    ನಮ್ಮ ಗ್ರಾಹಕರು ಉತ್ತಮ ಗುಣಮಟ್ಟದ ಚಹಾವನ್ನು ಹೆಚ್ಚಾಗಿ ಬೇಡಿಕೆ ಇಡುತ್ತಾರೆ. ಹಾಗಾಗಿ ಕಳೆದ ವರ್ಷ ಡೋನಿ ಪ್ಲೋ ಟೀ ಎಸ್ಟೇಟ್‍ನ ಚಹಾದ ಎಲೆಗಳನ್ನು 18,801 ರೂ ಗೆ ಮಾರಾಟ ಮಾಡಲಾಗಿತ್ತು. ಗುವಾಹಟಿ ಚಹಾದ ಕೇಂದ್ರವೇ ಅತಿ ದೊಡ್ಡ ಹರಾಜು ಕೇಂದ್ರವಾಗಿದ್ದು, ಪ್ರತಿ ಬಾರಿ ದಾಖಲೆಯ ಬೆಲೆ ಪ್ರತಿ ಕೆ.ಜಿಗೆ 511 ರೂ ಮಾತ್ರವಿತ್ತು ಎಂದು ಸೌರಭ್ ಟೀ ಎಸ್ಟೇಟ್ ನ ಮಾಲೀಕ ಎಂ.ಎಲ್ ಮಹೇಶ್ವರಿರವರು ಹೇಳಿದರು.

  • ಅಸ್ಸಾಂನ ಕ್ರೀಡಾ ರಾಯಭಾರಿಯಾಗಿ ಹಿಮಾದಾಸ್ ಆಯ್ಕೆ

    ಅಸ್ಸಾಂನ ಕ್ರೀಡಾ ರಾಯಭಾರಿಯಾಗಿ ಹಿಮಾದಾಸ್ ಆಯ್ಕೆ

    ದಿಸ್ಪುರ್: ಭಾರತದ ಕ್ರೀಡಾಪಟು ಹಿಮಾದಾಸ್ ಅವರನ್ನು ರಾಜ್ಯಕ್ಕೆ ಮೊದಲ ಕ್ರೀಡಾ ರಾಯಭಾರಿ ಆಗಿ ಮುಖ್ಯಮಂತ್ರಿ ಸರಬಾನಂದ ಸೊನೋವಾಲ್ ರವರು ಆಯ್ಕೆ ಮಾಡಿದ್ದಾರೆ.

    ಇತ್ತೀಚೆಗೆ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮಾದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. ಈ ವೇಳೆ ಸಿಎಂ ಸೊನೋವಾಲ್ ರಾಜ್ಯದ ಕ್ರೀಡಾ ರಾಯಭಾರಿ ಎಂದು ಘೋಷಣೆಯನ್ನು ನೀಡಿದ್ದರು. ಇದೇ ಮೊದಲ ಬಾರಿಗೆ ಅಸ್ಸಾಂ ನಲ್ಲಿ ಕ್ರೀಡಾ ರಾಯಭಾರಿಯನ್ನು ಆಯ್ಕೆ ಮಾಡಿದ್ದಾರೆ.

    ಫ್ರಾನ್ಸ್ ನಲ್ಲಿ ಆಯೋಜಿಸಿದ ಮಹಿಳಾ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ 51.46 ಸೆಕೆಂಡ್ ಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಈ ಮೂಲಕ 18 ನೇ ವಯಸ್ಸಿನಲ್ಲಿಯೇ ಇತಿಹಾಸವನ್ನು ಸೃಷ್ಟಿಸುವಲ್ಲಿ ಹಿಮಾದಾಸ್ ಯಶಸ್ವಿಯಾದರು.

    ಈ ಮುಂಚಿನ ಓಟದ ಹಿಮಾದಾಸ್ ರವರ ಸಾಧನೆಗೆ ಸಿಎಂ ಅಭಿನಂದಿಸಿದ್ದು, ಹಿಮಾದಾಸ್‍ರವರ ಸ್ಫೂರ್ತಿಯಿಂದ, ಅವಕಾಶಗಳಿಂದ ಮತ್ತು ಸಾಧನೆಗಳಿಂದ ಅಸ್ಸಾಂನ ಬೆಳವಣಿಗೆಗೆ ಪೂರಕವಾಗಲಿವೆ ಎಂದರು.

    ಅಂದಹಾಗೇ ಹಿಮಾದಾಸ್ ಅವರು ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 51.46 ಸೆಕೆಂಡ್ ಗಳಲ್ಲಿ ಓಟವನ್ನು ಪೂರ್ಣಗೊಳಿಸಿದ್ದು, ಆದರೆ ಕಳೆದ ತಿಂಗಳು ಗುವಾಹತಿಯಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಕೇವಲ 51.13 ಸೆಕೆಂಡ್ ಗಳಲ್ಲಿ 400 ಮೀಟರ್ ದೂರವನ್ನು ಕ್ರಮಿಸಿದ್ದರು.

  • ಅನಾರೋಗ್ಯದಿಂದ ಚಿಕ್ಕೋಡಿಯ ಯೋಧ ನಿಧನ-ನಾಳೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

    ಅನಾರೋಗ್ಯದಿಂದ ಚಿಕ್ಕೋಡಿಯ ಯೋಧ ನಿಧನ-ನಾಳೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

    ಚಿಕ್ಕೋಡಿ: ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೇ ಹುಕ್ಕೇರಿ ತಾಲೂಕಿನ ಶಿರಢಾಣ ಗ್ರಾಮದ ಯೋಧರೊಬ್ಬರು ಅಸ್ಸಾಂನಲ್ಲಿ ಮೃತಪಟ್ಟಿದ್ದಾರೆ.

    ಸುನೀಲ್ ಕುಮಾರ್ ಶೆಟ್ಟಿಮನಿ (34) ಮೃತಪಟ್ಟ ಯೋಧ. ಅಸ್ಸಾಂನಲ್ಲಿ ಬಾರ್ಡರ್ ರೋಡ್ ಟಾಸ್ಕ್ ಫೋರ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸುನೀಲ್ ಕುಮಾರ್ ಒಂದು ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಯೋಧ ಸಾವನ್ನಪ್ಪಿದ್ದಾರೆ.

    ಕಳೆದ 15 ವರ್ಷದಿಂದ ಬಾರ್ಡರ್ ರೋಡ್ ಟಾಸ್ಕ್ ಫೋರ್ಸ್ ನಲ್ಲಿ ಯೋಧ ಸುನೀಲ್ ಕುಮಾರ್ ಸೇವೆ ಸಲ್ಲಿಸುತ್ತಿದ್ದರು. ಅರುಣಾಚಲ ಪ್ರದೇಶದಿಂದ ಸ್ವ ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ತರಲಾಗುತ್ತಿದ್ದು, ಮಂಗಳವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಗಳಿವೆ.

  • ಯುವ ಜೋಡಿಯ ಮೇಲೆ ನೈತಿಕ ಪೊಲೀಸ್ ಗಿರಿ- ದಾರಿ ಮಧ್ಯೆ ಅಡ್ಡಗಟ್ಟಿ ಮದುವೆ ಮಾಡಿಸಿದ್ರು!

    ಯುವ ಜೋಡಿಯ ಮೇಲೆ ನೈತಿಕ ಪೊಲೀಸ್ ಗಿರಿ- ದಾರಿ ಮಧ್ಯೆ ಅಡ್ಡಗಟ್ಟಿ ಮದುವೆ ಮಾಡಿಸಿದ್ರು!

    ಗುವಾಹಟಿ: ಯುವಕರ ಗುಂಪೊಂದು ದಾರಿ ಮಧ್ಯೆ ಯುವ ಜೋಡಿಯನ್ನು ತಡೆದು ಹಲ್ಲೆ ನಡೆಸಿ ನೈತಿಕ ಪೊಲೀಸ್  ಗಿರಿ ಪ್ರರ್ಶಿಸಿದ ಘಟನೆ ಮಂಗಳವಾರ ಅಸ್ಸಾಂ ನ ಗೋಲ್ಪಾರಾ ಜಿಲ್ಲೆಯಲ್ಲಿ ನಡೆದಿದೆ.

    ಅವಿವಾಹಿತ ಯುವಕ-ಯುವತಿ ಬೈಕ್‍ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಜನರ ಗುಂಪೊಂದು ರಸ್ತೆ ಅಡ್ಡಗಟ್ಟಿದೆ. ಬಳಿಕ ಬಲವಂತವಾಗಿ ಬೈಕ್‍ನಿಂದ ಇಳಿಯುವಂತೆ ಹೇಳಿದ್ದಾರೆ. ಇಳಿದ ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಜೋಡಿಯನ್ನು ಗ್ರಾಮಕ್ಕೆ ಕರೆದು ತಂದ ಯುವಕರ ಗುಂಪು, ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿಯ ಸಹೋದರ ಹೇಳಿದ್ದಾರೆ.

    ಸದ್ಯ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳನ್ನು ಸ್ಥಳದಲ್ಲಿದ್ದ ಕೆಲವರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೈಯಲ್ಲಿ ಕೋಲು ಹಿಡಿದು ಜೋಡಿಗೆ ಬೆದರಿಕೆ ಹಾಕಿ, ಯುವತಿಗೆ ಬಿದಿರು ಕೋಲಿನಿಂದ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಆಧರಿಸಿ ಘಟನೆಯಲ್ಲಿ ಜೋಡಿಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಉಳಿದವರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ ಅಂತ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಘಟನೆ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸರು, ಈ ಕುರಿತು ತಮಗೇ ಯಾವುದೇ ದೂರು ಬಂದಿಲ್ಲ. ಆದರೆ ವಿಡಿಯೋ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಒಬ್ಬ ಆರೋಪಿಯನ್ನು ಶುಕ್ರವಾರ ಹಾಗೂ ಮತ್ತೊಬ್ಬನನ್ನು ಶನಿವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಅಸ್ಸಾಂ ಡಿಜಿಪಿ ಕುಲಧರ್ ಸೈಕಿಯಾ ಹೇಳಿದ್ದಾರೆ.

    ಇದೇ ಪ್ರದೇಶದಲ್ಲಿ ಕಳೆದ ಮೂರು ದಿನಗಳ ಹಿಂದೆ ಕಾರಿನಲ್ಲಿ ಚಲಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ತೆಡೆದು ಮಕ್ಕಳ ಕಳ್ಳರು ಎಂದು ಹಲ್ಲೆ ನಡೆಸಿ ಕೊಲೆ ಮಾಡಿಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿ ಮದುವೆ ಮಾಡಿಸಿದ್ದಾರೆ.

  • ಕೋರ್ಟ್ ಆವರಣದಲ್ಲೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಅತ್ಯಾಚಾರ ಆರೋಪಿ

    ಕೋರ್ಟ್ ಆವರಣದಲ್ಲೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಅತ್ಯಾಚಾರ ಆರೋಪಿ

    ಗುವಾಹಟಿ: ಮಗಳ ಮೇಲೆ ಆತ್ಯಾಚಾರ ಆರೋಪಕ್ಕೊಳಗಾಗಿದ್ದ ಆರೋಪಿಯು ತನ್ನ ಪತ್ನಿಯನ್ನು ಕೋರ್ಟ್ ಆವರಣದಲ್ಲೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಅಸ್ಸಾಂನ ದಿಬ್ರುಗರ್ ಜಿಲ್ಲೆಯಲ್ಲಿ ನಡೆದಿದೆ.

    ಪತ್ನಿ ರೀಟಾ ನೇಹಾರ್ ದೇಕಾ ಕೊಲೆಯಾದ ದುರ್ದೈವಿ. ಆರೋಪಿ ಪತಿ ಪೂರ್ಣ ನೇಹಾರ್ ದೇಕಾನು ಇಂದು ಬೆಳಗ್ಗೆ 10.30ರಲ್ಲಿ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ 9 ತಿಂಗಳ ಹಿಂದೆ ಆರೋಪಿಯ ವಿರುದ್ಧ ಪತ್ನಿಯು ಮಗಳ ಮೇಲೆ ಅತ್ಯಾಚಾರ ಮಾಡಿದ ದೂರು ದಾಖಲಿಸಿದ್ದಳು. ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಆರೋಪಿಯು ಸೆರೆವಾಸ ಅನುಭವಿಸಿ, ಕೆಲವು ದಿನಗಳ ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ. ಪ್ರಕರಣ ಕುರಿತಂತೆ ಇಂದು ಕೋರ್ಟ್ ನಲ್ಲಿ ವಿಚಾರಣೆಗೆ ಇಬ್ಬರೂ ಆಗಮಿಸಿದ್ದಾರೆ. ದಂಪತಿ ಕೋರ್ಟ್ ಆವರಣದ ಬೆಂಚ್ ಮೇಲೆ ಕುಳಿತಿದ್ದಾಗ ಆರೋಪಿಯು ಏಕಾಏಕಿ ಹರಿತವಾದ ಆಯುಧಗಳಿಂದ ಪತ್ನಿಯ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸಿದೆಸ್ವರ್ ಬೋಹ್ರಾ ಹೇಳಿಕೆ ನೀಡಿದ್ದಾರೆ.

    ಕೂಡಲೇ ಮಹಿಳೆಯನ್ನು ದಿಬ್ರುಗರ್‍ನ ಅಸ್ಸಾಂ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗ ಮಧ್ಯೆಯೇ ಮೃತ ಪಟ್ಟಿದ್ದಾಳೆಂದು ವೈದ್ಯರು ದೃಢಪಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಆರೋಪಿ ಪೂರ್ಣ ನೇಹಾರ್ ದೇಕಾನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ಘಟನೆ ಕುರಿತು ಆರೋಪಿಯು ಮಾಧ್ಯಮಗಳ ಮುಂದೆ, ನಾನು ಅಮಾಯಕ, ಆಕೆ ನನ್ನ ವಿರುದ್ಧ ಮಗಳ ಮೇಲೆ ಅತ್ಯಾಚಾರ ಆರೋಪದ ಸುಳ್ಳು ದೂರು ದಾಖಲಿಸಿದ್ದಳು. ನಾನು ಜಾಮೀನು ಪಡೆದು ಮನೆಗೆ ಬಂದಾಗ ನನ್ನನ್ನು ಮನೆಯ ಒಳಗೆ ಸೇರಿಸಿಕೊಳ್ಳಲಿಲ್ಲ ಆದ್ದರಿಂದ ಆಕೆಯನ್ನು ಹತ್ಯೆ ಮಾಡಿದ್ದಾಗಿ ತಿಳಿಸಿದ್ದಾನೆ.

  • ಮೃತ ವ್ಯಕ್ತಿಯ ಶವಕ್ಕೆ ಹೆಗಲು ನೀಡಿದ ಶಾಸಕ!

    ಮೃತ ವ್ಯಕ್ತಿಯ ಶವಕ್ಕೆ ಹೆಗಲು ನೀಡಿದ ಶಾಸಕ!

    ಗುವಾಹಟಿ: ಕಾಂಗ್ರೆಸ್ ಶಾಸಕರೊಬ್ಬರು ತಮ್ಮ ಕ್ಷೇತ್ರದಲ್ಲಿ ಮೃತ ವ್ಯಕ್ತಿಯ ಶವ ಹೊತ್ತು ಶವಸಂಸ್ಕಾರ ನಡೆಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಅಸ್ಸಾಂ ರಾಜ್ಯದ ಜೋಹ್ರತಾ ಜಿಲ್ಲೆಯ ಮರಿಯಾನಿ ವಿಧಾನಸಭಾ ಕ್ಷೇತ್ರದ ಶಾಸಕ ರೂಪ್‍ಜ್ಯೋತಿ ಕುರ್ಮಿ ಮಾನವೀಯತೆ ಮೆರೆದ ಶಾಸಕ. ಮರಿಯಾನಿ ನಗರದ ನಿವಾಸಿ ದಿಲೀಪ್ ದವೆ ಎಂಬವರು ಸಾವನ್ನಪ್ಪಿದ್ದರು. ದಿಲೀಪ್ ಅವರಿಗೆ ಕೇವಲ ಒಬ್ಬ ಅಂಗವಿಕಲ ಮಾತ್ರ ಸಂಬಂಧಿ ಇದ್ದರು. ಸ್ಥಳೀಯರು ಯಾರು ದಿಲೀಪ್ ಅಂತ್ಯ ಸಂಸ್ಕಾರಕ್ಕೆ ಮುಂದಾಗಿರಲಿಲ್ಲ.

    ಈ ಹಿನ್ನೆಲೆಯಲ್ಲಿ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ರೂಪ್‍ಜ್ಯೋತಿ ಕುರ್ಮಿ, ಚಿತೆ ಸಿದ್ಧಪಡಿಸಲು ನೆರವಾಗಿದ್ದಲ್ಲದೇ ಅಂತ್ಯ ಸಂಸ್ಕಾರ ನಡೆಸಿಕೊಟ್ಟರು. ಇದಾದ 24 ಗಂಟೆಯ ಬಳಿಕ ಆಟೋ ರಿಕ್ಷಾ ಚಾಲಕರೊಬ್ಬರ ತಾಯಿಯ ಶವ ಸಂಸ್ಕಾರದಲ್ಲೂ ಭಾಗಿಯಾದ್ರು.

    ಮರಿಯಾನಿ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಶಾಸಕರಾಗಿ ರೂಪ್ ಜ್ಯೋತಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜುಲೈ 2017ರಂದು ನ್ಯಾಷನಲ್ ಪಾರ್ಕ್ ಕಾಜಿರಂಗದ ಪರಿಸರದಲ್ಲಿ ಅತಿವೃಷ್ಟಿ ಉಂಟಾದಾಗ ಖುದ್ದು ಶಾಸಕರೇ 50 ಕೆ.ಜಿ ತೂಕದ ಅಕ್ಕಿಯ ಮೂಟೆಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಪ್ರವಾಹ ಪೀಡಿತ ಸ್ಥಳಗಳಿಗೆ ತಲುಪಿಸಿದ್ದರು.

    ಈ ಮೊದಲು ಮರಿಯಾನಿ ವಿಧಾನಸಭಾ ಕ್ಷೇತ್ರವನ್ನು ರೂಪ್‍ಜ್ಯೋತಿ ಅವರ ತಾಯಿ ರೂಪಂ ಕುರ್ಮಿ ಪ್ರತಿನಿಧಿಸುತ್ತಿದ್ದರು. ರೂಪಂ ಕುರ್ಮಿ ಅಸ್ಸಾಂನ ಆದಿವಾಸಿ ಜನಾಂಗದ ಮೊದಲ ಪದವೀಧರ ಮಹಿಳೆ ಅಂತಾ ಅನ್ನಿಸಿಕೊಂಡಿದ್ದಾರೆ.