Tag: Asian Games

  • ಟೀ ಮಾರುತ್ತಿದ್ದಾರೆ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ!

    ಟೀ ಮಾರುತ್ತಿದ್ದಾರೆ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ!

    ನವದೆಹಲಿ: ಭಾರತದ ಪರ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿ ಕಂಚು ಪದಕ ಪಡೆದಿದ್ದ ಹರೀಶ್ ಕುಮಾರ್ ಹೊಟ್ಟೆ ಪಾಡಿಗಾಗಿ ಟೀ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ.

    ಈ ಕುರಿತು ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಹರೀಶ್, ನಮ್ಮದು ದೊಡ್ಡ ಕುಟುಂಬವಾಗಿದ್ದು, ಮನೆಯ ಆದಾಯ ಪ್ರಮಾಣ ಕಡಿಮೆ ಇದೆ. ಅದ್ದರಿಂದ ತಂದೆಗೆ ಸಹಾಯವಾಗಲು ಪ್ರತಿನಿತ್ಯ ಟೀ ಹೋಟೆಲ್‍ನಲ್ಲಿ ಕೆಲಸ ಮಾಡುತ್ತೇನೆ. ಇದನ್ನು ಹೊರತು ಪಡಿಸಿ ನಿತ್ಯ 2 ರಿಂದ 6 ಗಂಟೆಗಳ ಕಾಲ ತರಬೇತಿ ಪಡೆಯಲು ಶ್ರಮವಹಿಸುತ್ತೇನೆ. ಮುಂದಿನ ದಿನಗಳಲ್ಲಿ ಉತ್ತಮ ಉದ್ಯೋಗ ಪಡೆದು ಕುಟುಂಬಕ್ಕೆ ಆಸರೆಯಾಗುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

    2018 ರ ಏಷ್ಯನ್ ಗೇಮ್ಸ್ ನ ಕಾಲಿನ ಮೂಲಕ ಚೆಂಡನ್ನು ಕಳುಹಿಸುವ ಸೆಪಕ್ ಟಕ್ರಾವ್(ಕಿಕ್ ವಾಲಿಬಾಲ್) ಹರೀಶ್ ತಂಡದ ಸದಸ್ಯರಾಗಿದ್ದರು. 2011 ರಲ್ಲಿ ತಾನು ಕ್ರೀಡಾ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಕೋಚ್ ಹೇಮ್ರಾಜ್ ಅವರು ನನ್ನನ್ನು ಈ ಕ್ರೀಡೆಗೆ ಪರಿಚಯಿಸಿದರು. ಬಳಿಕ ಭಾರತೀಯ ಕ್ರೀಡಾ ಪ್ರಾಧಿಕಾರ ಬೆಂಬಲ ನೀಡಿದೆ. ಈ ಕ್ರೀಡೆಯಲ್ಲಿ ದೇಶಕ್ಕಾಗಿ ಉತ್ತಮ ಹೆಸರು ತರಲು ಶ್ರಮವಹಿಸುತ್ತಿದ್ದೇನೆ ಎಂದರು.

    ಹರೀಶ್ ಅವರ ಈ ಸಾಧನೆಗೆ ಕುಟುಂಬಸ್ಥರ ಬೆಂಬಲವೂ ಇದ್ದು ಮಗನ ಸಾಧನೆಯನ್ನು ಗುರುತಿಸಿದ ಕೋಚ್‍ಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ದೇಶಕ್ಕಾಗಿ ಏನಾದರೂ ಸಾಧನೆ ಮಾಡಬೇಕೆಂಬ ಕನಸು ಹೊಂದಿರುವ ತಮ್ಮ ಮಗನಿಗೆ ಸರ್ಕಾರ ಊಟ ಹಾಗೂ ವಸತಿ ನೀಡಿದೆ ಎಂದು ತಿಳಿಸಿದ್ದಾರೆ. ಅಂದಹಾಗೇ ವೃತ್ತಿಯಲ್ಲಿ ಹರೀಶ್ ಅವರ ತಂದೆ ಆಟೋ ಚಾಲಕರಾಗಿದ್ದು, ದೆಹಲಿಯಲ್ಲಿ ಸಣ್ಣ ಟೀ ಅಂಗಡಿ ಹೊಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಷ್ಯನ್ ಗೇಮ್ಸ್‌ನಲ್ಲಿ  ಭಾರತದ ಸಾರ್ವಕಾಲಿಕಾ ದಾಖಲೆ!

    ಏಷ್ಯನ್ ಗೇಮ್ಸ್‌ನಲ್ಲಿ  ಭಾರತದ ಸಾರ್ವಕಾಲಿಕಾ ದಾಖಲೆ!

    ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಇತಿಹಾಸದಲ್ಲೇ ಅತಿಹೆಚ್ಚು ಪದಕಗಳನ್ನು ಗೆದ್ದಿದ್ದಾರೆ.

    ಕೊನೆಯ ದಿನವಾದ ಶನಿವಾರ ಪುರುಷರ ಹಾಕಿ ತಂಡ ಪಾಕಿಸ್ತಾನವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ಪಡೆಯಿತು. ಮಹಿಳೆಯರ ಸ್ಕ್ವಾಶ್ ತಂಡ ಬೆಳ್ಳಿ ಪದಕ ಗೆದ್ದರೆ ಬಾಕ್ಸಿಂಗ್ ನಲ್ಲಿ ಅಮಿತ್ ಪಾಂಗಲ್ ಮತ್ತು ಬ್ರಿಡ್ಜ್ ಗೇಮ್(ಇಸ್ಪೀಟ್) ನಲ್ಲಿ ಪುರುಷರ ತಂಡ ಚಿನ್ನವನ್ನು ಗೆದ್ದುಕೊಂಡಿದೆ.

    2010ರಲ್ಲಿ ಚೀನಾದಲ್ಲಿ ನಡೆದಿದ್ದ 16ನೇ ಏಷ್ಯನ್  ಗೇಮ್ಸ್‌ನಲ್ಲಿ 65 ಪದಕಗಳನ್ನು ಗೆದ್ದಿದ್ದೇ ಭಾರತದ ಇವರೆಗಿನ ದಾಖಲೆಯಾಗಿತ್ತು. ಆದರೆ ಈ ಬಾರಿ 15 ಚಿನ್ನ, 24 ಬೆಳ್ಳಿ, 30 ಕಂಚು ಜಯಿಸುವ ಮೂಲಕ ಒಟ್ಟು 69 ಪದಕಗಳನ್ನು ಸ್ಪರ್ಧಿಗಳು ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: ಚಿನ್ನ ಗೆದ್ದ 16ರ ಹರೆಯದ ಶೂಟರ್ ಹಿಂದಿದೆ ಖೇಲೋ ಇಂಡಿಯಾ! ಏನಿದು ಯೋಜನೆ?

    2014ರ ಇಂಚಾನ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 11 ಚಿನ್ನ, 10 ಬೆಳ್ಳಿ, 36 ಕಂಚು ಸೇರಿ 57 ಪದಕ ಜಯಿಸಿತ್ತು. 1982ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕೂಟದಲ್ಲೂ ಭಾರತ ಕ್ರೀಡಾಪಟುಗಳು 57 ಪದಕ ಜಯಿಸಿದ್ದರೂ, ಗೆದ್ದ ಚಿನ್ನದ ಪದಕಗಳ ಸಂಖ್ಯೆ 13 ಆಗಿತ್ತು. 2006ರ ದೋಹಾದಲ್ಲಿ ನಡೆದ ಕ್ರೀಡಾಕೂಟದಲ್ಲಿ 53 ಹಾಗೂ 1962ರ ಜರ್ಕಾತದಲ್ಲಿ 52 ಪದಕಗಳನ್ನು ಗೆದ್ದುಕೊಂಡಿತ್ತು.  ಇದನ್ನೂ ಓದಿ: ಹೆಪ್ಟಾಥ್ಲಾನ್ ಚಿನ್ನದ ಹುಡುಗಿ ಸ್ವಪ್ನಾ ತಾಯಿಯ ಆನಂದಭಾಷ್ಪ ವಿಡಿಯೋ ವೈರಲ್

    ಭಾರತದ ಅಥ್ಲೆಟ್ ಗಳು ಈ ಬಾರಿ ವಿಶೇಷ ಸಾಧನೆ ಮಾಡಿದ್ದು ಒಟ್ಟು 7 ಚಿನ್ನ, 10 ಬೆಳ್ಳಿ, 2 ಕಂಚನ್ನು ಗೆಲ್ಲುವ ಮೂಲಕ ಒಟ್ಟು 19 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಅಥ್ಲೆಟಿಕ್ಸ್ ನಲ್ಲಿ ಮೂರನೇ ಸ್ಥಾನ ಸಂಪಾದಿಸಿದ್ದಾರೆ. ಶೂಟಿಂಗ್ ನಲ್ಲಿ 2 ಚಿನ್ನ ಸೇರಿ ಒಟ್ಟು 9 ಪದಕ ಗೆದ್ದಿದ್ದರೆ, ಕುಸ್ತಿಯಲ್ಲ 2 ಚಿನ್ನ ಸೇರಿ ಒಟ್ಟು 3 ಪದಕವನ್ನು ಗೆದ್ದುಕೊಂಡಿದೆ.

    ಚಿನ್ನ ನಿರೀಕ್ಷಿಸಿದ್ದ ಕಬಡ್ಡಿ, ಹಾಕಿ, ಬಾಕ್ಸಿಂಗ್ ನಲ್ಲಿ ಕಂಚು, ಬೆಳ್ಳಿ ಪದಕ ಸಿಕ್ಕಿದ್ದರೆ, ಟೇಬಲ್ ಟೆನಿಸ್, ಸೈಲಿಂಗ್ (ಹಾಯಿದೋಣಿ) ಬ್ರಿಡ್ಜ್ (ಇಸ್ಪೀಟ್), ಈಕ್ವೇಸ್ಟ್ರಿಯನ್ (ಕುದುರೆ ಸವಾರಿ), ಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆದ್ದಿರುವುದು ವಿಶೇಷ.  ಇದನ್ನೂ ಓದಿ:ಚಿನ್ನ ಗೆದ್ದ ಸ್ವಪ್ನಾ ಸಾಧನೆಯ ಹಿಂದಿದೆ ದ್ರಾವಿಡ್ ಸಹಾಯಹಸ್ತ!

     289 ಪದಕ ಪಡೆಯುವ ಮೂಲಕ ಚೀನಾ ಮೊದಲ ಸ್ಥಾನ ಪಡೆದರೆ ಸಿರಿಯಾ ಕೊನೆಯ 37ನೇ ಸ್ಥಾನ ಪಡೆದಿದೆ. 4 ಕಂಚಿನ ಪದಕ ಗೆದ್ದಿರುವ ಪಾಕಿಸ್ತಾನ ಪಟ್ಟಿಯಲ್ಲಿ 34ನೇ ಸ್ಥಾನ ಪಡೆದಿದೆ.

     

     

  • ಚಿನ್ನ ಗೆದ್ದ ಸ್ವಪ್ನಾ ಸಾಧನೆಯ ಹಿಂದಿದೆ ದ್ರಾವಿಡ್ ಸಹಾಯಹಸ್ತ!

    ಚಿನ್ನ ಗೆದ್ದ ಸ್ವಪ್ನಾ ಸಾಧನೆಯ ಹಿಂದಿದೆ ದ್ರಾವಿಡ್ ಸಹಾಯಹಸ್ತ!

    ನವದೆಹಲಿ: ವಿಶ್ವ ಕ್ರಿಕೆಟ್ ಅಲ್ ಟೈಮ್ ಗ್ರೇಟ್ ಕ್ರಿಕೆಟರ್ ಎಂಬ ಹೆಗ್ಗಳಿಕೆ ಪಡೆದಿರುವ ರಾಹುಲ್ ದ್ರಾವಿಡ್ ಕ್ರಿಕೆಟ್ ಅಲ್ಲದೇ ಇತರೇ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತಿದ್ದಾರೆ.

    ಭಾರತದ ಗ್ರಾಮೀಣ ಯುವ ಸಮೂಹದಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸಹಾಯ ಮಾಡಲು ಗೋ ಸ್ಪೋರ್ಟ್ಸ್ ಮತ್ತು ದ್ರಾವಿಡ್ ಅಥ್ಲೀಟ್ ಮೆಂಟರ್ ಶಿಪ್ ಪ್ರೋಗ್ರಾಮ್ ಮೂಲಕ ಆರ್ಥಿಕ ಸಹಾಯ ನೀಡುತ್ತಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೆ ಇತರೆ ಕ್ರೀಡೆಗಳಿಗೂ ರಾಹುಲ್ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ.

    ಹೆಪ್ಟಾಥ್ಲಾನ್‍ನಲ್ಲಿ ಚಿನ್ನದ ಪದಕ ಗೆದ್ದ ಸ್ವಪ್ನಾ ಬರ್ಮನ್ ಅವರ ಸಾಧನೆಯ ಹಿಂದೆಯೂ ರಾಹುಲ್ ಯೋಜನೆಯ ಆರ್ಥಿಕ ಸಹಾಯ ಮಾಡಿದ್ದು, 2017-18 ರಲ್ಲಿ 19 ಕ್ರೀಡಾಪಟುಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಏಷ್ಯನ್ ಗೇಮ್ಸ್‍ನ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತ ಮಹಿಳೆ ಎಂಬ ಐತಿಹಾಸಿಕ ದಾಖಲೆಯನ್ನು ಸ್ವಪ್ನಾ ಪಡೆದಿದ್ದು, ರಾಹುಲ್ ಅಥ್ಲೀಟ್ ಯೋಜನೆಯ ಕುರಿತು ಮಾಧ್ಯಮವೊಂದು ವರದಿ ಮಾಡಿದೆ.

    ಕ್ರಿಕೆಟ್ ವೃತಿ ಜೀವನದಿಂದ ನಿವೃತ್ತಿ ಪಡೆದ ಬಳಿಕ ರಾಹುಲ್ ದ್ರಾವಿಡ್ ಅಂಡರ್ 19 ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ಟೀಂ ಇಂಡಿಯಾ `ಎ’ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಇವರ ಗರಡಿಯಲ್ಲಿ ಪಳಗಿದ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಸದ್ಯ ಇಂಗ್ಲೆಂಡ್ ಟೆಸ್ಟ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.

    ಉಳಿದಂತೆ ಟೀಂ ಇಂಡಿಯಾ ಸಾಕಷ್ಟು ಯುವ ಆಟಗಾರರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯವನ್ನು ರಾಹುಲ್ ಮಾಡುತ್ತಿದ್ದು, ಹಲವು ಆಟಗಾರರು ಬಹಿರಂಗವಾಗಿ ರಾಹುಲ್‍ರ ವ್ಯಕ್ತಿತ್ವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2020ರ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿರುವ ಕ್ರೀಡಾಪಟುಗಳಿಗೂ ರಾಹುಲ್ ಮುಂದಾಳತ್ವದಲ್ಲಿ ನೆರವು ನೀಡಲಾಗುತ್ತಿದೆ. ಇದನ್ನು ಓದಿ: ಹೆಪ್ಟಾಥ್ಲಾನ್ ಚಿನ್ನದ ಹುಡುಗಿ ಸ್ವಪ್ನಾ ತಾಯಿಯ ಆನಂದಭಾಷ್ಪ ವಿಡಿಯೋ ವೈರಲ್

    ಸದ್ಯ ಏಷ್ಯನ್ ಗೇಮ್ಸ್ ಹೆಪ್ಟಾಥ್ಲಾನ್‍ನಲ್ಲಿ ಚಿನ್ನದ ಪದಕ ಗೆದ್ದ ಸ್ವಪ್ನಾ ಬರ್ಮನ್ ಅವರಿಗೆ ಪಶ್ಚಿಮ ಬಂಗಾಳ ಸರ್ಕಾರ 10 ಲಕ್ಷ ರೂ. ಬಹುಮಾನ ಹಾಗೂ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದೆ.  

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಷ್ಯನ್ ಗೇಮ್ಸ್: ಪೂವಮ್ಮ ಟೀಂಗೆ ರಿಲೇಯಲ್ಲಿ ಚಿನ್ನ

    ಏಷ್ಯನ್ ಗೇಮ್ಸ್: ಪೂವಮ್ಮ ಟೀಂಗೆ ರಿಲೇಯಲ್ಲಿ ಚಿನ್ನ

    ಜಕಾರ್ತ: ಏಷ್ಯನ್ ಕ್ರೀಡಾಕೂಟದ ಮಹಿಳೆಯರ 4*400 ಮೀಟರ್ ರಿಲೇಯಲ್ಲಿ ಭಾರತ ಚಿನ್ನವನ್ನು ಗೆದ್ದುಕೊಂಡಿದೆ. ಈ ಮೂಲಕ ಸತತ 5ನೇ ಬಾರಿ ಭಾರತ ತಂಡ ಚಿನ್ನ ಜಯಿಸಿದೆ.

    ಕರ್ನಾಟಕದ ಪೂವಮ್ಮ, ಹಿಮಾದಾಸ್, ಲಕ್ಷ್ಮಿಬಾಯ್ ಗಾಯಕ್ವಾಡ್, ವಿಸ್ಮಯ ತಂಡ 3.28.72 ಸೆಕೆಂಡಿನಲ್ಲಿ ಗುರಿಯನ್ನು ಕ್ರಮಿಸಿ ಚಿನ್ನವನ್ನು ಗೆದ್ದುಕೊಂಡಿದ್ದಾರೆ.  ಬಹರೈನ್ ಎರಡನೇ ಸ್ಥಾನವನ್ನು ಪಡೆದರೆ ವಿಯೆಟ್ನಾಂ ಮೂರನೇ ಸ್ಥಾನವನ್ನು ಪಡೆಯಿತು.

    ಪುರುಷರ 4*400 ಮೀಟರ್ ರಿಲೇಯಲ್ಲಿ ಭಾರತ ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ. ಕತಾರ್ ತಂಡ ಮೊದಲ ಸ್ಥಾನ ಪಡೆದರೆ ಜಪಾನ್ ಮೂರನೇ ಸ್ಥಾನ ಪಡೆದುಕೊಂಡಿದೆ.

    ಪುರುಷರ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಜಿನ್ಸನ್ ಜಾನ್ಸನ್ ಚಿನ್ನ ಗೆದ್ದಿದ್ದಾರೆ. 3.44.72 ಸೆಕೆಂಡಿನಲ್ಲಿ ಓಡಿ ಗುರಿ ತಲುಪಿದರು.

     

  • 400 ಮೀಟರ್ ರೇಸ್: ಹಿಮಾದಾಸ್, ಅನಾಸ್‍ಗೆ ಬೆಳ್ಳಿ

    400 ಮೀಟರ್ ರೇಸ್: ಹಿಮಾದಾಸ್, ಅನಾಸ್‍ಗೆ ಬೆಳ್ಳಿ

    ಜಕರ್ತಾ: ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ 400 ಮೀಟರ್ ಓಟದಲ್ಲಿ ಭಾರತದ ಹಿಮದಾಸ್ ಮತ್ತು ಮೊಹಮ್ಮದ್ ಅನಾಸ್ ಬೆಳ್ಳಿ ಪದಕ ಪಡೆದು ಮಿಂಚಿದ್ದಾರೆ.

    ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಹಿಮಾ ದಾಸ್ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದರು.

    ಹಿಮಾ ದಾಸ್ 50.79 ಸೆಕೆಂಡ್ ನಲ್ಲಿ ಗುರಿ ಮುಟ್ಟಿದರೆ, ಮೊಹಮ್ಮದ್ ಅನಾಸ್ 45.69 ಸೆಕೆಂಡ್ ನಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಗೆದ್ದಿದ್ದಾರೆ.

    ಶನಿವಾರ ನಡೆದ ಅರ್ಹತಾ ಸುತ್ತಿನ 400 ಮೀ ಓಟದ ಸ್ಪರ್ಧೆಯ ಹಿಮಾ ದಾಸ್ ರವರು 51.00 ಸೆಕೆಂಡುಗಳಲ್ಲಿ ಗುರಿ ತಲುಪಿ ಭಾರತದ ಪರ ದಾಖಲೆ ಬರೆದಿದ್ದರು. ಫೈನಲ್ ನಲ್ಲಿ ತಮ್ಮದೇ ದಾಖಲೆಯನ್ನು ಮುರಿದು 50.79 ಸೆಕೆಂಡಿನಲ್ಲಿ ಗುರಿ ಮುಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/col_banshtu/status/1033692823118213121

  • ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಭಾರತಕ್ಕೆ ಆಘಾತ!

    ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಭಾರತಕ್ಕೆ ಆಘಾತ!

    ಜಕಾರ್ತ: ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗ್ಯಾರಂಟಿ ಎಂದು ನಿರೀಕ್ಷೆಯಲ್ಲಿದ್ದ ಭಾರತದ ಪುರುಷರ ಕಬಡ್ಡಿ ತಂಡ ಸೆಮಿಫೈನಲ್ ನಲ್ಲಿ ಸೋತಿದೆ.

    ಏಷ್ಯನ್ ಗೇಮ್ಸ್ ನ 18 ನೇ ಆವೃತ್ತಿಯ 5ನೇ ದಿನವಾದ ಇಂದು ನಡೆದ ಕಬಡ್ಡಿ ಸೆಮಿಫೈನಲ್ ನಲ್ಲಿ ಇರಾನ್ ಭಾರತವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. 27-18 ಅಂತರದಿಂದ ಇರಾನ್ ಏಷ್ಯನ್ ಗೇಮ್ಸ್ ನಲ್ಲಿ 7 ಬಾರಿ ಚಿನ್ನದ ಪದಕ ಗೆದ್ದಿದ್ದ ತಂಡವನ್ನು ಮಣಿಸಿದೆ.

    ಭಾರತ 1990 ರಲ್ಲಿ ಏಷ್ಯನ್ ಗೇಮ್ಸ್ ಆರಂಭಗೊಂಡ ಬಳಿಕ ಭಾರತ ಕಬಡ್ಡಿಯಲ್ಲಿ ಪ್ರಾಬಲ್ಯ ಮೆರೆದಿತ್ತು. ಆದರೆ ಈಗ ಇರಾನ್ ವಿರುದ್ಧ ಸೋತಿದ್ದು, ಕಂಚಿನ ಪದಕಕ್ಕಾಗಿ ಪಾಕ್ ಜೊತೆ ಹೋರಾಟ ಮಾಡಬೇಕಿದೆ. ಪಾಕಿಸ್ತಾನ 24-27 ಅಂತರದಿಂದ ಕೊರಿಯಾ ವಿರುದ್ಧ ಸೋತಿದೆ.

    ಭಾರತ ಸೋತಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದು, ಪ್ರೀಮಿಯರ್ ಲೀಗ್ ಗೆ ಹೆಚ್ಚು ಆಸಕ್ತಿ ನೀಡಿದ ಪರಿಣಾಮ ಭಾರತ ಸೋತಿದೆ. ಫ್ರಾಂಚೈಸಿಗಳ ಪರ ಆಡಿ ಈಗ ದೇಶದ ಪರ ಆಡಲು ವಿಫಲರಾಗಿದ್ದಾರೆ ಎಂದು ಜನ ಕಮೆಂಟ್ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಚಿನ್ನ ಗೆದ್ದ 16ರ ಹರೆಯದ ಶೂಟರ್ ಹಿಂದಿದೆ ಖೇಲೋ ಇಂಡಿಯಾ! ಏನಿದು ಯೋಜನೆ?

    ಚಿನ್ನ ಗೆದ್ದ 16ರ ಹರೆಯದ ಶೂಟರ್ ಹಿಂದಿದೆ ಖೇಲೋ ಇಂಡಿಯಾ! ಏನಿದು ಯೋಜನೆ?

    ನವದೆದಲಿ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಏರ್ ಪಿಸ್ತೂಲ್‍ನಲ್ಲಿ 16ನೇ ವರ್ಷದ ಸೌರಭ್ ಚೌಧರಿ ಚಿನ್ನ ಪದಕ ಜಯಿಸಿ ದೇಶದ ಜನರ ಮನ ಗೆದ್ದಿದ್ದಾರೆ.

    ಕ್ರೀಡಾಕೂಟದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸೌರಭ್ ಚೌಧರಿ ಚಿನ್ನ ಪದಕ ಗೆದಿದ್ದಾರೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸದ್ಯ ಭಾರತ 4 ಚಿನ್ನ, 3 ಬೆಳ್ಳಿ ಮತ್ತು 4 ಕಂಚು ಗೆಲ್ಲುವ ಮೂಲಕ 6ನೇ ಸ್ಥಾನ ಗಳಿಸಿದೆ.

    ಖೇಲೋ ಇಂಡಿಯಾ ಪ್ರತಿಭೆ: ಸೌರಭ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಖೇಲೋ ಇಂಡಿಯಾ ಮೂಲಕ ಬೆಳಕಿಗೆ ಬಂದವರು. ಫೆಬ್ರವರಿಯಲ್ಲಿ ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಶಾಲಾ ಕ್ರೀಡಾಕೂಟದಲ್ಲಿ ಭಾಗಹಿಸಿ ಪದಕ ಗೆದ್ದಿದ್ದರು. ಬಳಿಕ ತರಬೇತಿ ಪಡೆದು ಜುಲೈನಲ್ಲಿ ಜರ್ಮನಿಯಲ್ಲಿ ನಡೆದಿದ್ದ ಕಿರಿಯರ ವಿಶ್ವಕಪ್ ನಲ್ಲಿ 243.7 ಅಂಕ ಪಡೆದು ದಾಖಲೆ ನಿರ್ಮಿಸಿ ಚಿನ್ನದ ಪದಕ ಗೆದ್ದಿದ್ದರು. ಅಲ್ಲದೆ ಅರ್ಜೆಂಟೀನಾದಲ್ಲಿ ನಡೆಯಲಿರುವ ಕಿರಿಯರ ಒಲಿಂಪಿಕ್ಸ್ ಗೂ ಆರ್ಹತೆ ಪಡೆದಿದ್ದರು. ಉತ್ತರ ಪ್ರದೇಶದ ಪ್ರತಿಭೆಯಾಗಿರುವ ಸೌರಭ್ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಶೂಟಿಂಗ್ ಕ್ರೀಡೆ ಆಯ್ಕೆ ಮಾಡಿಕೊಂಡಿದ್ದರು. 2016 ರಲ್ಲಿ ತೆಹ್ರಾನ್ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಮೊದಲ ಬಾರಿಗೆ ಪ್ರತಿನಿಧಿಸಿದ್ದರು.

    ಖೇಲೋ ಇಂಡಿಯಾ: ಗ್ರಾಮೀಣ ಹಾಗೂ ತೆರೆಮರೆಯಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆ `ಖೇಲೋ ಇಂಡಿಯಾ’. ಇದರ ಮೊದಲ ಚೊಚ್ಚಲ ಆವೃತ್ತಿ ಫೆಬ್ರವರಿಯಲ್ಲಿ 8 ದಿನಗಳ ಕಾಲ ದೆಹಲಿಯಲ್ಲಿ ನಡೆದಿತ್ತು.

    ಪ್ರತಿಭಾವಂತರ ಆಯ್ಕೆ: ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಆಟಗಾರರಿಗೆ ಪದಕ ಗೆಲ್ಲುವ ಅವಕಾಶವಿರುತ್ತದೆ. ಈ ಯೋಜನೆಯ ಅನ್ವಯ ಒಟ್ಟು 1 ಸಾವಿರ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಅವರಿಗೆ ವಿಶ್ವದರ್ಜೆಯ ತರಬೇತಿ ಕಲ್ಪಿಸಲಾಗುತ್ತದೆ. ಕ್ರೀಡಾಕೂಟದಲ್ಲಿ 18 ಕ್ರೀಡೆಗಳಲ್ಲಿ ವಿವಿಧ ರಾಜ್ಯಗಳ ಸುಮಾರು 5 ಸಾವಿರ ಕ್ರೀಡಾಪಟುಗಳು ಭಾವಹಿಸಿದ್ದರು.

    ಸೌಲಭ್ಯ ಏನು?
    ಖೇಲೋ ಇಂಡಿಯಾ ಕ್ರೀಡಾಪಟುದಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ 8 ವರ್ಷಗಳ ಕಾಲ ವಾರ್ಷಿಕ 5 ಲಕ್ಷ ರೂ. ಆರ್ಥಿಕ ನೆರವು ನೀಡಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಕ್ರೀಡಾಪಟುಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡುಲಾಗುತ್ತದೆ.

    16 ಕ್ರೀಡೆಗಳು: ಶೂಟಿಂಗ್, ವೇಟ್ ಲಿಫ್ಟಿಂಗ್, ಜುಡೋ, ಕುಸ್ತಿ, ಬಾಸ್ಕೆಟ್ ಬಾಲ್, ಫುಟ್ಬಾಲ್, ಹಾಕಿ, ಕಬಡ್ಡಿ, ಖೋ-ಖೋ, ವಾಲಿಬಾಲ್, ಜಿಮ್ನಾಸ್ಟಿಕ್ಸ್, ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಈಜು.

    ಫೆಬ್ರವರಿಯಲ್ಲಿ ಒಂದು ವಾರದ ಕಾಲ ನಡೆದ ಕ್ರೀಡಾಕೂಟಕ್ಕೆ ಅಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ವೇಳೆ ಕ್ರೀಡಾಕೂಟದಲ್ಲಿ ಮುಂದಿನ ವರ್ಷದಿಂದ ಮತ್ತಷ್ಟು ಕ್ರೀಡೆಗಳನ್ನು ಖೇಲೋ ಇಂಡಿಯಾ ಯೋಜನೆಯಡಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಘೋಷಿಸಿದ್ದರು. ಅಲ್ಲದೇ ಭವಿಷ್ಯದ ಚಾಂಪಿಯನ್ ಕ್ರೀಡಾಪಟುಗಳನ್ನು ಗುರುತಿಸುವ ಅವರಿಗೆ ಉತ್ತಮ ಬೆಂಬಲ ನೀಡುವ ಉದ್ದೇಶ ಯೋಜೆನೆಯ ಹಿಂದಿದೆ ಎಂದು ತಿಳಿಸಿದ್ದರು. ಖೇಲೋ ಇಂಡಿಯಾ ಯೋಜನೆಯೂ ಈ ಹಿಂದೆ ಜಾರಿಗೆ ಮಾಡಲಾಗಿದ್ದ ರಾಜೀವ್ ಗಾಂಧಿ ಖೇಲ್ ಅಭಿಯಾನ್, ರಾಷ್ಟ್ರೀಯ ಕ್ರೀಡಾ ಪ್ರತಿಭಾನ್ವೇಷಣೆ ಯೋಜನೆ, ನಗರ ಕ್ರೀಡಾ ಸೌಕರ್ಯ ಯೋಜನೆಗಳ ವಿಲೀನ ರೂಪ ಇದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಷ್ಯನ್ ಗೇಮ್ಸ್ – ಭಾರತಕ್ಕೆ ಮೊದಲ ಪದಕ ತಂದ ಶೂಟರ್ಸ್

    ಏಷ್ಯನ್ ಗೇಮ್ಸ್ – ಭಾರತಕ್ಕೆ ಮೊದಲ ಪದಕ ತಂದ ಶೂಟರ್ಸ್

    ಜರ್ಕಾತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಖಾತೆ ತೆರೆದಿದ್ದು, ಶೂಟರ್ ಅಪೂರ್ವಿ ಚಾಂಡೇಲಾ, ರವಿ ಕುಮಾರ್ ಕಂಚಿನ ಪದಕ ಗಳಿಸಿದ್ದಾರೆ.

    ಮಿಶ್ರ ಶೂಟಿಂಗ್ ವಿಭಾಗದ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾಗವಹಿಸಿದ್ದ ಅಪೂರ್ವಿ ಚಾಂಡೇಲಾ, ರವಿ ಕುಮಾರ್ ಜೋಡಿ ಕಂಚಿನ ಪದಕ ಜಯಿಸಿದೆ. ಇಬ್ಬರ ಜೋಡಿ 429.9 ಅಂಕ ಗಳಿಸುವ ಮೂಲಕ ಮೂರನೇ ಸ್ಥಾನ ಪಡೆದು ಫೈನಲ್ ತಲುಪಲು ವಿಫಲವಾದರು. ಉಳಿದಂತೆ ಸ್ಪರ್ಧೆಯಲ್ಲಿ 494 ಅಂಕ ಪಡೆದ ಚೀನಾ-ತೈಪೆ ತಂಡ ಮೊದಲ ಸ್ಥಾನ ಪಡೆಯಿತು.

    ಪಟ್ಟಿಯಲ್ಲಿ ದಕ್ಷಿಣ ಕೊರಿಯಾ ಪ್ರಥಮ ಸ್ಥಾನದಲ್ಲಿದ್ದರೆ, ಚೀನಾ ದ್ವಿತೀಯ ಸ್ಥಾನದಲ್ಲಿದ್ದು ಭಾರತ 9ನೇ ಸ್ಥಾನದಲ್ಲಿದೆ. ಉಳಿದಂತೆ ಇಂದು ಭಾರತ ಮಹಿಳಾ ಹಾಕಿ ತಂಡ ಇಂಡೋನೇಷ್ಯಾ ತಂಡವನ್ನು ಎದುರಿಸಲಿದ್ದು, ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv