Tag: Asia Cup 2022

  • ಲಂಕನ್ನರಿಗೆ ಲಗಾಮು ಹಾಕಿ 7ನೇ ಬಾರಿ ಏಷ್ಯಾಕಪ್ ಗೆದ್ದ ಭಾರತ

    ಲಂಕನ್ನರಿಗೆ ಲಗಾಮು ಹಾಕಿ 7ನೇ ಬಾರಿ ಏಷ್ಯಾಕಪ್ ಗೆದ್ದ ಭಾರತ

    ಢಾಕಾ: ಏಷ್ಯಾಕಪ್ ಫೈನಲ್ (Asia Cup)  ಪಂದ್ಯದಲ್ಲಿ ಭಾರತದ (India) ಮಹಿಳಾ ಆಟಗಾರ್ತಿಯರ ಸೂಪರ್ ಡೂಪರ್ ಆಟಕ್ಕೆ ಶ್ರೀಲಂಕಾ (Sri Lanka)  ಮಂಕಾಗಿ ಸೋಲುಂಡಿದೆ. ಭಾರತ 8 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ 7ನೇ ಬಾರಿ ಏಷ್ಯಾಕಪ್ ಮುಡಿಗೇರಿಸಿಕೊಂಡಿದೆ.

    ಶ್ರೀಲಂಕಾ ನೀಡಿದ 66 ರನ್‍ಗಳ ಅಲ್ಪ ಮೊತ್ತದ ಗುರಿಪಡೆದ ಭಾರತ ಈ ಮೊತ್ತವನ್ನು 8.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 71 ರನ್ ಚಚ್ಚಿ ಗೆದ್ದು ಬೀಗಿದೆ. ಇತ್ತ 7ನೇ ಬಾರಿ ಭಾರತ ಪ್ರಶಸ್ತಿ ಗೆದ್ದು ಸಂಭ್ರಮಿಸಿದರೆ, ಶ್ರೀಲಂಕಾ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಅವಕಾಶ ಕಳೆದುಕೊಂಡಿತು. ಇದನ್ನೂ ಓದಿ: ಬಿಸಿಸಿಐಗೆ ಜಿಎಸ್‍ಟಿ ಬರೆ – 2023ರ ವಿಶ್ವಕಪ್‍ಗೂ ಮುನ್ನ 955 ಕೋಟಿ ರೂ. ನಷ್ಟದ ಭೀತಿ

    ಲಂಕಾ ನೀಡಿದ ಅಲ್ಪಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಸ್ಮೃತಿ ಮಂಧಾನ ಬ್ಯಾಟಿಂಗ್‍ನಲ್ಲಿ ನೆರವಾದರು. ಆರಂಭಿಕರಾಗಿ ಮಂಧಾನ ಜೊತೆ ಕಣಕ್ಕಿಳಿದ ಶಿಫಾಲಿ ವರ್ಮಾ 5 ರನ್‍ಗಳಿಗೆ ವಿಕೆಟ್ ಕೈಚೆಲ್ಲಿಕೊಂಡರು. ಆದರೆ ಇತ್ತ ಮಂಧಾನ ಬಿರುಸಿನ ಬ್ಯಾಟಿಂಗ್ ಮೂಲಕ ಲಂಕಾದ ಅಲ್ಪಮೊತ್ತವನ್ನು ಪುಟಿಗಟ್ಟಿದರು. ಅಂತಿಮವಾಗಿ ಮಂಧಾನ ಅಜೇಯ 51 ರನ್ 25 ಎಸೆತ, 6 ಬೌಂಡರಿ, 3 ಸಿಕ್ಸ್) ಚಚ್ಚಿ ಗೆಲುವಿನ ರೂವಾರಿಯಾದರು.

    ಮಂಧಾನಗೆ ಉತ್ತಮ ಸಾಥ್ ನೀಡಿದ ಹರ್ಮನ್‍ಪ್ರೀತ್ ಕೌರ್ ಅಜೇಯ 11 ರನ್ (14 ಎಸೆತ, 1 ಬೌಂಡರಿ) ಸಿಡಿಸಿ 8.3 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 71 ರನ್ ಬಾರಿಸಿ ಗೆಲ್ಲಿಸಿದರು. ಇದನ್ನೂ ಓದಿ: ಸೂಪರ್ ಟೆನ್ ಲೀಗ್‍ನಲ್ಲಿ ಗೇಲ್ ಜೊತೆ ಬ್ಯಾಟ್‍ ಬೀಸಲಿದ್ದಾರೆ ಕಿಚ್ಚ ಸುದೀಪ್

    ಈ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡ ಭಾರತದ ಬೌಲಿಂಗ್ ಪಡೆಯನ್ನು ಎದುರಿಸಲಾಗದೆ ನಾ ಮುಂದು ತಾ ಮುಂದು ಎಂದು ವಿಕೆಟ್ ಕಳೆದುಕೊಂಡು ಪರದಾಡಿತು. ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಸ್ನೇಹ ರಾಣಾ ಸೇರಿಕೊಂಡು ಲಂಕಾವನ್ನು ಕಟ್ಟಿಹಾಕಿದರು. ಭಾರತದ ಬೌಲರ್‌ಗಳ ದಾಳಿ ಪತರುಗುಟ್ಟಿದ ಶ್ರೀಲಂಕಾ ಬ್ಯಾಟರ್‌ಗಳು 8 ಮಂದಿ ಒಂದಂಕಿಗೆ ವಿಕೆಟ್ ಒಪ್ಪಿಸಿ ಹೊರನಡೆದರು.

    ಲಂಕಾ ಪರ ಇನೋಕಾ ರಣವೀರ 18 ರನ್ (22 ಎಸೆತ, 2 ಬೌಂಡರಿ) ಸಿಡಿಸಿದ್ದು ಹೆಚ್ಚಿನ ಗಳಿಕೆಯಾಗಿದೆ. ಅಂತಿಮವಾಗಿ 20 ಓವರ್‌ಗಳ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 65 ರನ್ ಪೇರಿಸಲಷ್ಟೇ ಶಕ್ತವಾಯಿತು. ರೇಣುಕಾ ಸಿಂಗ್ 3 ವಿಕೆಟ್, ರಾಜೇಶ್ವರ ಗಾಯಕ್ವಾಡ್ ಮತ್ತು ಸ್ನೇಹ ರಾಣಾ ತಲಾ 2 ವಿಕೆಟ್ ಕಿತ್ತು ಮಿಂಚುಹರಿಸಿದರು.

    Live Tv
    [brid partner=56869869 player=32851 video=960834 autoplay=true]

  • ಪಾಕ್ ವಿರುದ್ಧ ಪಂದ್ಯದ ಗೆಲುವಿಗೆ ಧೋನಿ, ಸಿಎಸ್‌ಕೆ ಸ್ಫೂರ್ತಿ: ದಸುನ್ ಶನಕ

    ಪಾಕ್ ವಿರುದ್ಧ ಪಂದ್ಯದ ಗೆಲುವಿಗೆ ಧೋನಿ, ಸಿಎಸ್‌ಕೆ ಸ್ಫೂರ್ತಿ: ದಸುನ್ ಶನಕ

    ದುಬೈ: ಭಾನುವಾರ ದುಬೈನಲ್ಲಿ(Dubai) ನಡೆದ ಏಷ್ಯಾ ಕಪ್ 2022ರ(Asia Cup 2022) ಫೈನಲ್‌ನಲ್ಲಿ ಶ್ರೀಲಂಕಾ(Sri Lanka) ತಂಡ ಪಾಕಿಸ್ತಾನವನ್ನು ಸೋಲಿಸಿತು. ಈ ಗೆಲುವಿಗೆ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ(MS Dhoni) ಹಾಗೂ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದ 2021ರ ಐಪಿಎಲ್ ಗೆಲುವೇ ಸ್ಫೂರ್ತಿ ಎಂದು ಶ್ರೀಲಂಕಾ ತಂಡದ ನಾಯಕ ದಸುನ್ ಶನಕ(Dasun Shanaka) ತಿಳಿಸಿದ್ದಾರೆ.

    ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 2021ರ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದನ್ನು ನೋಡಿ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದು ಶನಕ ಬಹಿರಂಗಪಡಿಸಿದ್ದಾರೆ. ಇದೀಗ ನಾವು ಏಷ್ಯಾಕಪ್ ಗೆದ್ದಿದ್ದೇವೆ. ನಮ್ಮ ಈ ಗೆಲುವನ್ನು ನಮ್ಮ ದೇಶಕ್ಕೆ ಅರ್ಪಿಸಲು ಬಯಸುತ್ತೇವೆ ಎಂದು ಶನಕ ಪಂದ್ಯದ ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸೋಲು – ಸ್ಟೇಡಿಯಂನಲ್ಲಿ ಕಣ್ಣೀರಿಟ್ಟ ಕೊಹ್ಲಿಯ ಪಾಕ್ ಅಭಿಮಾನಿ

    ಭಾನುವಾರ ಪಾಕಿಸ್ತಾನ ಹಾಗೂ ಶ್ರೀಲಂಕಾದ ನಡುವಿನ 15ನೇ ಆವೃತ್ತಿಯ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ 23 ರನ್‌ಗಳ ಭರ್ಜರಿ ಜಯದೊಂದಿಗೆ 6ನೇ ಬಾರಿ ಏಷ್ಯಾಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.

    ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಯಾರೂ ನಿರೀಕ್ಷೆ ಮಾಡಿರದಂತಹ ಆಟವನ್ನು ಆಡಿ ಕ್ರಿಕೆಟ್ ಪ್ರಿಯರ ಮನಗೆದ್ದಿತು. ಶ್ರೀಲಂಕಾ ನೀಡಿದ 172 ರನ್‌ಗಳ ಟಾರ್ಗೆಟ್ ಅನ್ನು ಹಿಂದಿಕ್ಕಲಾಗದೇ 147 ರನ್‌ಗಳ ಮೂಲಕ ಪಾಕಿಸ್ತಾನ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಏಷ್ಯಾಕಪ್ ಫೈನಲ್ ರಂಗೇರಿಸಿದ ಹಸರಂಗ – 6ನೇ ಬಾರಿ ಸಿಂಹಳೀಯರಿಗೆ ಕಿರೀಟ

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನಕ್ಕೆ ಸೋಲು – ಸ್ಟೇಡಿಯಂನಲ್ಲಿ ಕಣ್ಣೀರಿಟ್ಟ ಕೊಹ್ಲಿಯ ಪಾಕ್ ಅಭಿಮಾನಿ

    ಪಾಕಿಸ್ತಾನಕ್ಕೆ ಸೋಲು – ಸ್ಟೇಡಿಯಂನಲ್ಲಿ ಕಣ್ಣೀರಿಟ್ಟ ಕೊಹ್ಲಿಯ ಪಾಕ್ ಅಭಿಮಾನಿ

    ದುಬೈ: 15ನೇ ಆವೃತ್ತಿ ಏಷ್ಯಾಕಪ್ (Asia Cup 2022) ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ (Pakistan) ವಿರುದ್ಧ ಶ್ರೀಲಂಕಾ (Sri Lanka) ಗೆದ್ದು ಪ್ರಶಸ್ತಿಗೆ ಮುತ್ತಿಕ್ಕುತ್ತಿದ್ದಂತೆ, ಇತ್ತ ಪಾಕ್ ಅಭಿಮಾನಿಗಳು ಸ್ಟೇಡಿಯಂನಲ್ಲೇ ಕಣ್ಣೀರಿಟ್ಟಿದ್ದಾರೆ.

    ರೋಚಕ ಫೈನಲ್ ಪಂದ್ಯದಲ್ಲಿ ಯಾರೂ ನಿರೀಕ್ಷೆ ಮಾಡದಂತ ಆಟದ ಮೂಲಕ ಶ್ರೀಲಂಕಾ ಕ್ರಿಕೆಟ್ ಪ್ರಿಯರ ಮನಗೆದ್ದಿತು. ಶ್ರೀಲಂಕಾ ನೀಡಿದ 172 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಹಸರಂಗ ಮತ್ತು ಲಂಕಾ ಬೌಲರ್‌ಗಳ ದಾಳಿಗೆ ನಲುಗಿ 147 ರನ್‍ಗಳಿಗೆ ಸರ್ವಪತನ ಕಂಡಿತು. ಇತ್ತ ಶ್ರೀಲಂಕಾ 23 ರನ್‍ಗಳ ಭರ್ಜರಿ ಜಯದೊಂದಿಗೆ 6ನೇ ಬಾರಿ ಪ್ರಶಸ್ತಿ ಗೆದ್ದಿತು. ಇದನ್ನೂ ಓದಿ: ಏಷ್ಯಾಕಪ್ ಫೈನಲ್ ರಂಗೇರಿಸಿದ ಹಸರಂಗ – 6ನೇ ಬಾರಿ ಸಿಂಹಳೀಯರಿಗೆ ಕಿರೀಟ

    ಪಾಕ್ ಸೋಲುತ್ತಿದ್ದಂತೆ ಮೈದಾನದಲ್ಲಿದ್ದ ಪಾಕ್ ಅಭಿಮಾನಿ ಒಬ್ಬಾಕೆ ಬಿಕ್ಕಿಬಿಕ್ಕಿ ಅತ್ತಿದ್ದಾಳೆ. ಈಕೆ ಕೆಲದಿನಗಳ ಹಿಂದೆ ನಾನು ಪಾಕಿಸ್ತಾನದವಳು ಆದರೆ ನನಗೆ ಭಾರತದ ವಿರಾಟ್ ಕೊಹ್ಲಿ (Virat Kohli)  ತುಂಬಾ ಇಷ್ಟ. ಅವರ ಆಟ ನೋಡಲು ಮೈದಾನಕ್ಕೆ ಬಂದಿದ್ದೇನೆ ಎಂದು ಹೇಳಿಕೆ ನೀಡಿ ವೈರಲ್ ಆಗಿದ್ದಳು. ಆ ಬಳಿಕ ಫೈನಲ್ ಪಂದ್ಯದಲ್ಲೂ ಈಕೆ ಕಾಣಿಸಿಕೊಂಡಿದ್ದು, ಶ್ರೀಲಂಕಾ ವಿರುದ್ಧ ಪಾಕ್ ಸೋಲುತ್ತಿದ್ದಂತೆ ಮೈದಾನದಲ್ಲಿ ಕಣ್ಣೀರಿಟ್ಟು ತನ್ನ ಜೊತೆ ಇದ್ದ ಶ್ರೀಲಂಕಾ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾಳೆ. ಇದನ್ನೂ ಓದಿ: ಶೀಘ್ರವೇ ಹಸೆಮಣೆ ಏರಲಿದ್ದಾರೆ ಟೀಂ ಇಂಡಿಯಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

     

    View this post on Instagram

     

    A post shared by Love Khaani (@lovekhaani)

    ಇದೀಗ ಈಕೆ ಶುಭಹಾರೈಸಿರುವ ವೀಡಿಯೋ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಇದರಲ್ಲಿ ಪಾಕಿಸ್ತಾನ ಗೆಲ್ಲಲು ಸಾಧ್ಯವಾಗದಿದ್ದರೆ ಭಾರತ ಗೆಲ್ಲಬೇಕಿತ್ತು. ಅದು ತನಗೆ ಸಂತಸ ತರಿಸುತ್ತಿತ್ತು ಎಂದು ಹೇಳಿಕೊಂಡಿದ್ದಾಳೆ.

    ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ಕೆಚ್ಚೆದೆಯ ಹೋರಾಟ ಕ್ರಿಕೆಟ್ ಪ್ರಿಯರ ಮನಗೆದ್ದಿದೆ. ತನ್ನ ದೇಶದ ಆರ್ಥಿಕ ಪರಿಸ್ಥಿತಿ ಒಂದೆಡೆ ಹದಗೆಟ್ಟು ಜನ ದಂಗೆ ಎದ್ದು ಹೀನಾಯ ಪರಿಸ್ಥಿತಿಯಲ್ಲಿತ್ತು. ಇದೀಗ ಮತ್ತೆ ದೇಶ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ಶ್ರೀಲಂಕಾಗೆ ಏಷ್ಯಾಕಪ್ ಗೆಲುವು ಹೊಸ ಚೈತನ್ಯ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಏಷ್ಯಾಕಪ್ ಫೈನಲ್ ರಂಗೇರಿಸಿದ ಹಸರಂಗ – 6ನೇ ಬಾರಿ ಸಿಂಹಳೀಯರಿಗೆ ಕಿರೀಟ

    ಏಷ್ಯಾಕಪ್ ಫೈನಲ್ ರಂಗೇರಿಸಿದ ಹಸರಂಗ – 6ನೇ ಬಾರಿ ಸಿಂಹಳೀಯರಿಗೆ ಕಿರೀಟ

    ದುಬೈ: ಹಸರಂಗ (Wanindu Hasarang) ಆಲ್‍ರೌಂಡರ್ ಆಟಕ್ಕೆ ಪಾಕಿಸ್ತಾನ (Pakistan) ತಲೆಬಾಗಿದೆ. 15ನೇ ಆವೃತ್ತಿ ಏಷ್ಯಾಕಪ್ ಫೈನಲ್‍ನಲ್ಲಿ (Asia Cup 2022) ಶ್ರೀಲಂಕಾ (Sri Lanka)  23 ರನ್‍ಗಳ ಭರ್ಜರಿ ಜಯದೊಂದಿಗೆ 6ನೇ ಬಾರಿ ಏಷ್ಯಾಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.

    ರೋಚಕ ಫೈನಲ್ ಪಂದ್ಯದಲ್ಲಿ ಯಾರೂ ನಿರೀಕ್ಷೆ ಮಾಡದಂತ ಆಟದ ಮೂಲಕ ಶ್ರೀಲಂಕಾ ಕ್ರಿಕೆಟ್ ಪ್ರಿಯರ ಮನಗೆದ್ದಿದೆ. ಶ್ರೀಲಂಕಾ ನೀಡಿದ 172 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಹಸರಂಗ ಮತ್ತು ಲಂಕಾ ಬೌಲರ್‌ಗಳ ದಾಳಿಗೆ ನಲುಗಿ 147 ರನ್‍ಗಳಿಗೆ ಸರ್ವಪತನ ಕಂಡಿತು. ಇತ್ತ ಶ್ರೀಲಂಕಾ 23 ರನ್‍ಗಳ ಭರ್ಜರಿ ಜಯದ ನಗೆ ಬೀರಿತು.

    ಆರಂಭದಲ್ಲಿ ಪಾಕಿಸ್ತಾನ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ಬಾಬರ್ ಅಜಾಮ್ ಮತ್ತೆ ವಿಫಲತೆ ಕಂಡರೆ, ಫಖರ್ ಝಮಾನ್ ಶೂನ್ಯ ಸುತ್ತಿದರು. ಆದರೆ ಇನ್ನೊಂದೆಡೆ ಮೊಹಮ್ಮದ್ ರಿಜ್ವಾನ್ ಮತ್ತೆ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದರು. ಇವರಿಗೆ ಕೆಲ ಕಾಲ ಇಫ್ತಿಕರ್ ಅಹಮದ್ ಸಾಥ್ ನೀಡಿದರು. ಆದರೆ ಇಫ್ತಿಕರ್ ಆಟ 32 ರನ್ ( 31 ಎಸೆತ, 2 ಬೌಂಡರಿ, 1 ಸಿಕ್ಸ್) ಕೊನೆಗೊಂಡಿತು.

    ಹಸರಂಗ ಸೂಪರ್ ಸ್ಪೆಲ್:
    ಒಂದುಕಡೆ ರಿಜ್ವಾನ್ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ಹಳಿಗೆ ತರಲು ಯತ್ನಿಸಿದರೆ, ಇನ್ನೊಂದೆಡೆ ಹಸರಂಗ ವಿಕೆಟ್ ಬೇಟೆ ಆರಂಭಿಸಿದರು. ತನ್ನ ಕೋಟದ ಕೊನೆಯ ಓವರ್‌ನಲ್ಲಿ ಡೇಂಜರಸ್ ಬ್ಯಾಟ್ಸ್‌ಮ್ಯಾನ್‌ಗಳಾದ ಖುಷ್ದಿಲ್ ಶಾ ಮತ್ತು ಆಸಿಫ್ ಅಲಿ ವಿಕೆಟ್ ಕಿತ್ತು ಶ್ರೀಲಂಕಾವನ್ನು ಜಯದ ಹೊಸ್ತಿಗೆ ತಂದು ನಿಲ್ಲಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 147 ರನ್‍ಗಳಿಗೆ ಆಲೌಟ್ ಆಯಿತು.

    ಪಾಕ್‍ಗೆ ಶಾಕ್ ನೀಡಿದ ಲಂಕನರು 6ನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದರೆ, ಪ್ರಶಸ್ತಿ ಗೆಲ್ಲುವ ಖುಷಿಯಲ್ಲಿದ್ದ ಪಾಕ್ ಅಭಿಮಾನಿಗಳಿಗೆ ನಿರಾಸೆ ಉಂಟಾಯಿತು.

    ಈ ಮೊದಲು ಟಾಸ್ ಗೆದ್ದ ಪಾಕಿಸ್ತಾನ ನಾಯಕ ಎದುರಾಳಿ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಇತ್ತ ಆರಂಭದಲ್ಲೇ ನಸೀಮ್ ಶಾ, ಶ್ರೀಲಂಕಾ ಬ್ಯಾಟ್ಸ್‌ಮ್ಯಾನ್‌ಗಳಿಗೆ ತನ್ನ ಘಾತಕ ವೇಗದ ಮೂಲಕ ನಡುಕ ಹುಟ್ಟಿಸಿದರು. ಶ್ರೀಲಂಕಾದ ಟಾಪ್ ಆಡರ್ ಬ್ಯಾಟ್ಸ್‌ಮ್ಯಾನ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಕೇವಲ 36 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಶ್ರೀಲಂಕಾಗೆ ಧನಂಜಯ ಡಿ ಸಿಲ್ವ ಆಸರೆಯಾಗುವ ಸೂಚನೆ ನೀಡಿದರೂ ಅವರ ಆಟ 28 ರನ್‍ಗೆ (21 ಎಸೆತ, 4 ಬೌಂಡರಿ) ಅಂತ್ಯವಾಯಿತು.

    ಆ ಬಳಿಕ ಬಂದ ದನುಷ್ಕ ಗುಣತಿಲಕ ಮತ್ತು ನಾಯಕ ದಾಸುನ್ ಶನಕ ಕೂಡ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಈ ವೇಳೆ ಶ್ರೀಲಂಕಾ 8.5 ಓವರ್‌ಗಳಲ್ಲಿ 58 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿತು.

    ಅಸಲಿ ಆಟ ಆರಂಭಿಸಿದ ಹಸರಂಗ, ರಾಜಪಕ್ಸೆ:
    ಬಳಿಕ ಒಂದಾದ ಭಾನುಕಾ ರಾಜಪಕ್ಸೆ ಮತ್ತು ವಾನಿಂದು ಹಸರಂಗ ಪಾಕ್ ಬೌಲರ್‌ಗಳನ್ನು ದಂಡಿಸಲು ಮುಂದಾದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಮೂಲಕ ಬಾಲ್‍ಗೆ ಅಷ್ಟ ದಿಕ್ಕುಗಳನ್ನು ಪರಿಚಯಿಸಿದ ಈ ಜೋಡಿ ಪಾಕ್ ಬೌಲರ್‌ಗಳ ಬೆವರಿಳಿಸಿತು. ಈ ವೇಳೆ ದಾಳಿಗಿಳಿದ ಹ್ಯಾರಿಸ್ ರೌಫ್ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಹಸರಂಗ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಹಸರಂಗ 36 ರನ್ (21 ಎಸೆತ, 5 ಬೌಂಡರಿ, 1 ಸಿಕ್ಸ್) ಹೊಡೆದು ವಿಕೆಟ್ ಕಳೆದುಕೊಂಡರು. ಈ ಮೊದಲು ರಾಜಪಕ್ಸೆ ಜೊತೆ 6ನೇ ವಿಕೆಟ್ 58 ರನ್ (36 ಎಸೆತ) ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.

    ಹಸರಂಗ ವಿಕೆಟ್ ಕಳೆದುಕೊಂಡ ಬಳಿಕ ಸ್ಲಾಗ್ ಓವರ್‌ಗಳಲ್ಲಿ ಮತ್ತಷ್ಟು ವೈಲೆಂಟ್ ಆದ ರಾಜಪಕ್ಸೆ ಸಿಡಿಲಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಇವರಿಗೆ ಕರುಣಾರತ್ನೆ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ರಾಜಪಕ್ಸೆ ಅಜೇಯ 71 ರನ್ (45 ಎಸೆತ, 6 ಬೌಂಡರಿ, 3 ಸಿಕ್ಸ್) ಮತ್ತು ಕರುಣಾರತ್ನೆ 14 ರನ್ (14 ಎಸೆತ, 1 ಸಿಕ್ಸ್) ಚಚ್ಚಿದ ಪರಿಣಾಮ 7ನೇ ವಿಕೆಟ್‍ಗೆ ಮುರಿಯದ 54 ರನ್ (31 ಎಸೆತ) ಜೊತೆಯಾಟ ಕಾಣಸಿಕ್ಕಿತು. ಜೊತೆಗೆ ತಂಡದ ಮೊತ್ತ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 170 ಬಂತು.

    ಕೊನೆಯ 10 ಓವರ್‌ಗಳಲ್ಲಿ ಶ್ರೀಲಂಕಾ ನೂರಕ್ಕೂ ಹೆಚ್ಚು ರನ್ ಹೊಡೆದು ಮಿಂಚಿತು. ಕೊನೆಯ 5 ಓವರ್‌ಗಳಲ್ಲಿ ಶ್ರೀಲಂಕಾ 53 ಚಚ್ಚಿತು. ಮೊದಲ 10 ಓವರ್‌ಗಳಲ್ಲಿ ಪಾಕಿಸ್ತಾನ ಬೌಲರ್‌ಗಳು ಮೇಲುಗೈ ಸಾಧಿಸಿದರು. ಪಾಕ್ ಬೌಲರ್‌ಗಳ ಪೈಕಿ ಹ್ಯಾರಿಸ್ ರೌಫ್ 3 ವಿಕೆಟ್ ಪಡೆದು ಮಿಂಚಿದರೆ, ನಸೀಮ್ ಶಾ, ಶಾದಾಬ್ ಖಾನ್ ಮತ್ತು ಇಫ್ತಿಕರ್ ಅಹಮದ್ ತಲಾ 1 ಪಡೆದರು.

    Live Tv
    [brid partner=56869869 player=32851 video=960834 autoplay=true]

  • ಈ ಶತಕವನ್ನ ಪತ್ನಿ ಅನುಷ್ಕಾಗೆ ಅರ್ಪಿಸುವೆ – ಕಿಂಗ್ ಕೊಹ್ಲಿ ಭಾವುಕ

    ಈ ಶತಕವನ್ನ ಪತ್ನಿ ಅನುಷ್ಕಾಗೆ ಅರ್ಪಿಸುವೆ – ಕಿಂಗ್ ಕೊಹ್ಲಿ ಭಾವುಕ

    ದುಬೈ: ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅಪ್ಘಾನಿಸ್ತಾನದ (Afghanistan) ವಿರುದ್ಧ ನಡೆದ ಏಷ್ಯಾಕಪ್ ಅಂತಿಮ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಬಳಿಕ ಭಾವುಕರಾಗಿ ಮಾತನಾಡಿದ ವಿರಾಟ್ ಕೊಹ್ಲಿ, ಈ ಶತಕವನ್ನು ನನ್ನ ಪತ್ನಿ ಅನುಷ್ಕಾ (anushka sharma) ಹಾಗೂ ಪುತ್ರಿ ವಾಮಿಕಾಗೆ ಅರ್ಪಿಸುವೆ ಎಂದು ನುಡಿದಿದ್ದಾರೆ.

    ಕ್ರಿಕೆಟ್ ಕಳೆದ ಎರಡೂವರೆ ವರ್ಷ ನನಗೆ ಹಲವು ಪಾಠಗಳನ್ನು ಕಲಿಸಿದೆ. ಟಿ20ಯಲ್ಲಿ ನನ್ನ ಶತಕದ ಬರ ನೀಗಲಿದೆ ಎಂದು ಭಾವಿಸಿರಲಿಲ್ಲ. ಕಠಿಣ ಸಮಯದಲ್ಲೂ ನನ್ನೊಂದಿಗೆ ನನ್ನ ತಂಡ ಸಹಕಾರಿಯಾಗಿ ನಿಂತಿದೆ. ಶತಕ ಬಾರಿಸುತ್ತಿಲ್ಲ ಎನ್ನುವ ಬಗ್ಗೆ ಹೊರಗೆ ಸಾಕಷ್ಟು ಚರ್ಚೆಯಾಗುತ್ತಿತ್ತು ಎಂದು ನನಗೆ ಗೊತ್ತು. ನಾನಿಲ್ಲಿ ಇಂದು ನಿಂತಿದ್ದೇನೆ ಎಂದರೆ ಅದಕ್ಕೆ ಒಬ್ಬ ವ್ಯಕ್ತಿ ಪ್ರಮುಖ ಕಾರಣ. ಅದು ನನ್ನ ಪತ್ನಿ ಅನುಷ್ಕಾ. ಈ ಶತಕ ಆಕೆ ಹಾಗೂ ನಮ್ಮ ಪುತ್ರಿ ವಾಮಿಕಾಗೆ ಅರ್ಪಿಸುತ್ತೇನೆ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಅನುಷ್ಕಾ ನನ್ನ ಜೊತೆಗಿದ್ದಾಳೆ. ಆಕೆಯಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ ಎಂದು ಕೊಹ್ಲಿ ಭಾವುಕರಾಗಿದ್ದಾರೆ. ಇದನ್ನೂ ಓದಿ: ಬೌಲರ್‌ಗೆ ಬ್ಯಾಟ್‍ನಲ್ಲಿ ಹೊಡೆಯಲು ಮುಂದಾದ ಆಸಿಫ್ ಅಲಿ – ಜೋರಾದ #BanAsifAli ಕೂಗು

    ಕಿಂಗ್ ಕೊಹ್ಲಿ ಈಗ ಸಿಕ್ಸರ್ ವೀರ: 1,021 ದಿನಗಳ ಬಳಿಕ ಶತಕ ಸಿಡಿಸಿದ ವಿರಾಟ್ ಕೊಹ್ಲಿ 20 ಅಂತಾರಾಷ್ಟ್ರೀಯ ಕ್ರಿಕೆಟ್ ಮಾದರಿಯಲ್ಲಿ ಸಿಕ್ಸರ್‌ಗಳ ಶತಕ ಬಾರಿಸಿದ ಸಾಧನೆಗೂ ಹೆಸರಾಗಿದ್ದಾರೆ. ಈ ಮೂಲಕ ಟ್ವೆಂಟಿ-20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಸಿಡಿಸಿದ ಭಾರತದ 2ನೇ ಹಾಗೂ ವಿಶ್ವದ ಟಾಪ್-10 ಆಟಗಾರರಲ್ಲಿ ಒಬ್ಬರಾಗಿದ್ದಾರೆ.

    ಉತ್ತಮ ಬ್ಯಾಟಿಂಗ್ ಲಯಕ್ಕೆ ಮರಳಿರುವ ಕಿಂಗ್ ಕೊಹ್ಲಿ 104 ಪಂದ್ಯಗಳಲ್ಲಿ (96 ಇನ್ನಿಂಗ್ಸ್) 104 ಸಿಕ್ಸರ್ ಸಿಡಿಸಿದ್ದಾರೆ. ಇದನ್ನೂ ಓದಿ: 2 ವರ್ಷ 9 ತಿಂಗಳು 16 ದಿನಗಳ ಬಳಿಕ ಕೊಹ್ಲಿ ಶತಕ – ಟಿ20ಯಲ್ಲಿ ಚೊಚ್ಚಲ 100

    ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಗಳಿಸಿರುವ ಬ್ಯಾಟರ್ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಮುಂಚೂಣಿಯಲ್ಲಿದ್ದಾರೆ. ಗಪ್ಟಿಲ್ ಒಟ್ಟು 121 ಪಂದ್ಯ (117 ಇನ್ನಿಂಗ್ಸ್)ಗಳಲ್ಲಿ 172 ಸಿಕ್ಸರ್ ಸಿಡಿಸಿದ್ದಾರೆ.

    ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohith Shrama) 136 ಪಂದ್ಯಗಳಲ್ಲಿ (128 ಇನ್ನಿಂಗ್ಸ್) 171 ಸಿಕ್ಸರ್ ಸಿಡಿಸಿ ವಿಶ್ವದ ಟಾಪ್ 2 ಹಾಗೂ ಭಾರತದ ಮೊದಲ ಆಟಗಾರರಾಗಿದ್ದಾರೆ. ನಂತರದಲ್ಲಿ ಕ್ರಿಸ್ ಗೇಲ್ 124 ಸಿಕ್ಸರ್, ಇಯಾನ್ ಮಾರ್ಗನ್ 120, ಆರನ್ ಫಿಂಚ್ 117, ಪಾಲ್ ಸ್ಟಿರ್ಲಿಂಗ್ 111, ಎವಿನ್ ಲೆವಿಸ್ 110, ಕಾಲಿನ್ ಮನ್ರೊ 107 ಸಿಕ್ಸರ್ ಸಿಡಿಸಿದ್ದಾರೆ. 104 ಪಂದ್ಯಗಳಲ್ಲಿ 104 ಸಿಕ್ಸರ್ ಸಿಡಿಸಿರುವ ವಿರಾಟ್ ಕೊಹ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪೈಕಿ ಭಾರತದ 2ನೇ ಹಾಗೂ ವಿಶ್ವದ 9ನೇ ಸ್ಥಾನದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ಭಾರತದ ರೋಷವೇಶ – ಭರ್ಜರಿ ಗೆಲುವಿನೊಂದಿಗೆ ಟೂರ್ನಿಗೆ ಗುಡ್ ಬೈ

    ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ಭಾರತದ ರೋಷವೇಶ – ಭರ್ಜರಿ ಗೆಲುವಿನೊಂದಿಗೆ ಟೂರ್ನಿಗೆ ಗುಡ್ ಬೈ

    ದುಬೈ: ಏಷ್ಯಾಕಪ್‍ನ (Asia Cup 2022) ಸೂಪರ್ ಫೋರ್ ಹಂತದ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ (Virat Kohli)  ಭರ್ಜರಿ ಶತಕ ಮತ್ತು ಭುವನೇಶ್ವರ್ ಕುಮಾರ್ ಮಾರಕ ದಾಳಿಯ ಪರಿಣಾಮವಾಗಿ ಅಘ್ಘಾನಿಸ್ತಾನ (Afghanistan) ವಿರುದ್ಧ ಭಾರತ (India) 101 ರನ್‍ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಗೆ ಗುಡ್ ಬೈ ಹೇಳಿದೆ.


    ಭಾರತ ನೀಡಿದ 213 ರನ್‍ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಲಾಗದೆ ಬೆದರಿ ಬೆಂಡಾದ ಅಘ್ಘಾನಿಸ್ತಾನ ಕೇವಲ 111 ರನ್ ಸಿಡಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಇತ್ತ 101 ರನ್‍ಗಳ ಈ ಭರ್ಜರಿ ಗೆಲುವಿನೊಂದಿಗೆ ಭಾರತ ಟೂರ್ನಿಗೆ ಅಂತ್ಯ ಹಾಡಿದೆ. ಇದನ್ನೂ ಓದಿ: 2 ವರ್ಷ 9 ತಿಂಗಳು 16 ದಿನಗಳ ಬಳಿಕ ಕೊಹ್ಲಿ ಶತಕ – ಟಿ20ಯಲ್ಲಿ ಚೊಚ್ಚಲ 100

    ಬುಸುಗುಟ್ಟಿದ ಭುವಿ:
    ಕಳೆದೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾದ ವಿಲನ್ ಆಗಿ ಬಿಂಬಿತರಾಗಿದ್ದ ಭುವನೇಶ್ವರ್ ಕುಮಾರ್ ಇಂದಿನ ಪಂದ್ಯದಲ್ಲಿ ಮಾರಕ ಬೌಲಿಂಗ್‍ನಿಂದ ಅಘ್ಘಾನಿಸ್ತಾನ ತಂಡಕ್ಕೆ ನೀರು ಕುಡಿಸಿದರು. ಆರಂಭದ ಓವರ್‌ನಿಂದಲೇ ಅಘ್ಘಾನಿಸ್ತಾನಕ್ಕೆ ಕಾಟ ಕೊಟ್ಟ ಭುವಿ ಮೊದಲ ಓವರ್‌ನಲ್ಲಿ ಎರಡು ವಿಕೆಟ್ ಬೇಟೆಯಾಡಿದರು. ಆರಂಭಿಕರಿಬ್ಬರು ಶೂನ್ಯ ಸುತ್ತಿದರೆ, ಆ ಬಳಿಕ ಬಂದ 3 ಜನ ಒಂದಂಕಿ ಮೊತ್ತಕ್ಕೆ ಸುಸ್ತಾದರು. ಇತ್ತ ಭುವಿ 4 ಓವರ್ ಎಸೆದು 4 ರನ್ ನೀಡಿ 5 ವಿಕೆಟ್ ಕಿತ್ತು ಮಿಂಚಿದರು.

    ಅಘ್ಘಾನಿಸ್ತಾನ ಪರ ರಶೀದ್ ಖಾನ್ 15 ರನ್ (19 ಎಸೆತ, 2 ಬೌಂಡರಿ) ಬಾರಿಸಿ ವಿಕೆಟ್ ಕಳೆದುಕೊಂಡರು. ಇತ್ತ ಇಬ್ರಾಹಿಂ ಜದ್ರಾನ್ 64 ರನ್ ( 59 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ನಿಗದಿತ ಓವರ್‌ಗಳಲ್ಲಿ ಅಘ್ಘಾನಿಸ್ತಾನ 8 ವಿಕೆಟ್ ನಷ್ಟಕ್ಕೆ 111 ರನ್ ಸಿಡಿಸಿತು. ಇದನ್ನೂ ಓದಿ: ಬೌಲರ್‌ಗೆ ಬ್ಯಾಟ್‍ನಲ್ಲಿ ಹೊಡೆಯಲು ಮುಂದಾದ ಆಸಿಫ್ ಅಲಿ – ಜೋರಾದ #BanAsifAli ಕೂಗು

    ಭಾರತದ ಪರ ಭುವನೇಶ್ವರ್ ಕುಮಾರ್ 5 ವಿಕೆಟ್ ಕಿತ್ತು ಮಿಂಚಿದರೆ, ಅರ್ಶ್‍ದೀಪ್ ಸಿಂಗ್, ಆರ್. ಅಶ್ವಿನ್ ಮತ್ತು ದೀಪಕ್ ಹೂಡಾ ತಲಾ 1 ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿಗೆ ಸಹಕಾರಿಯಾದರು.

    ಈ ಮೊದಲು ಟಾಸ್ ಗೆದ್ದ ಅಘ್ಘಾನಿಸ್ತಾನ ಭಾರತಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು. ಇದನ್ನು ಸರಿಯಾಗಿ ಬಳಸಿಕೊಂಡ ರಾಹುಲ್ ಪಡೆ ಆರಂಭದಲ್ಲೇ ಅಘ್ಘಾನಿಸ್ತಾನ ಬೌಲರ್‌ಗಳ ಬೆವರಿಳಿಸಿತು. ಆರಂಭಿಕರಾಗಿ ಬಂದ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಮನ ಬಂದಂತೆ ಬ್ಯಾಟ್‍ಬೀಸಿದರು. ಇದನ್ನೂ ಓದಿ: ಏಷ್ಯಾಕಪ್ ಸೋಲು, ರೊಚ್ಚಿಗೆದ್ದ ಅಭಿಮಾನಿಗಳು – #BoycottIPL ಟ್ರೆಂಡ್

    ನಾ ಮುಂದು ತಾ ಮುಂದು ಎಂಬಂತೆ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿದ ಇಬ್ಬರೂ ಕೂಡ ನೋಡ ನೋಡುತ್ತಿದ್ದಂತೆ ಅರ್ಧಶತಕದ ಗಡಿ ದಾಟಿದರು. ಒಂದು ಕಡೆ ಇನ್ನಷ್ಟು ಬಿರುಸಿನ ಬ್ಯಾಟಿಂಗ್‍ಗೆ ಮುಂದಾದ ರಾಹುಲ್ 62 ರನ್ (41 ಎಸೆತ, 6 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ಈ ಮೊದಲು ಕೊಹ್ಲಿ ಜೊತೆ ಮೊದಲ ವಿಕೆಟ್‍ಗೆ 199 ರನ್ (76 ಎಸೆತ) ಜೊತೆಯಾಟವಾಡಿದರು. ಆ ಬಳಿಕ ಬಂದ ಸೂರ್ಯಕುಮಾರ್ ಒಂದು ಸಿಕ್ಸ್‌ಗೆ ಸುಸ್ತಾಗಿ ವಿಕೆಟ್ ಕಳೆದುಕೊಂಡರು.

    ಕೊಹ್ಲಿ ಚೊಚ್ಚಲ ಟಿ20 ಶತಕ:
    ಒಂದು ಕಡೆ ಪಟಪಟನೇ ಎರಡು ವಿಕೆಟ್ ಬಿದ್ದರೆ, ಇತ್ತ ಕೊಹ್ಲಿ ಪಟಾಕಿಯಂತೆ ಸಿಡಿಯಲಾರಂಭಿಸಿದರು. ಸಿಕ್ಕಸಿಕ್ಕ ಎಸೆತಗಳಿಗೆ ರೊಚ್ಚಿಗೆದ್ದು ಹೊಡೆಯಲಾರಂಭಿಸಿದ ಕೊಹ್ಲಿ ನೋಡನೋಡುತ್ತಿದ್ದಂತೆ 2 ವರ್ಷ 9 ತಿಂಗಳ ಶತಕದ ಬರ ನೀಗಿಸಿಕೊಂಡರು. ಭರ್ಜರಿ ಶತಕದ ಬಳಿಕವೂ ಆಡಿ ಭರ್ತಿ 20 ಓವರ್‌ಗಳ ಬಳಿಕ ಅಜೇಯ 122 ರನ್ (61 ಎಸೆತ, 12 ಬೌಂಡರಿ, 6 ಸಿಕ್ಸ್) ಚಚ್ಚಿ ಬಿಸಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ಪಂತ್ 20 ರನ್ (16 ಎಸೆತ, 3 ಬೌಂಡರಿ) ಬಾರಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ 20 ಓವರ್‌ಗಳಲ್ಲಿ ಭಾರತ 2 ವಿಕೆಟ್‍ನಷ್ಟಕ್ಕೆ 212 ರನ್‍ಗಳ ಬೃಹತ್ ಮೊತ್ತ ಪೇರಿಸಿತು.

    ರನ್ ಏರಿದ್ದು ಹೇಗೆ:
    35 ಎಸೆತ 50 ರನ್
    68 ಎಸೆತ 100 ರನ್
    99 ಎಸೆತ 150 ರನ್
    115 ಎಸೆತ 200 ರನ್
    120 ಎಸೆತ 212 ರನ್

    Live Tv
    [brid partner=56869869 player=32851 video=960834 autoplay=true]

  • 2 ವರ್ಷ 9 ತಿಂಗಳು 16 ದಿನಗಳ ಬಳಿಕ ಕೊಹ್ಲಿ ಶತಕ – ಟಿ20ಯಲ್ಲಿ ಚೊಚ್ಚಲ 100

    2 ವರ್ಷ 9 ತಿಂಗಳು 16 ದಿನಗಳ ಬಳಿಕ ಕೊಹ್ಲಿ ಶತಕ – ಟಿ20ಯಲ್ಲಿ ಚೊಚ್ಚಲ 100

    ದುಬೈ: ಟೀಂ ಇಂಡಿಯಾದ ರನ್ ಮಿಷಿನ್ ಖ್ಯಾತಿಯ ವಿರಾಟ್ ಕೊಹ್ಲಿ (Virat Kohli)  ಬ್ಯಾಟ್ ಮತ್ತೆ ಘರ್ಜಿಸಿದೆ. ಏಷ್ಯಾಕಪ್‍ನ (Asia Cup 2022) ಸೂಪರ್‌ ಫೋರ್‌ ಹಂತದ ಅಘ್ಘಾನಿಸ್ತಾನ (Afghanistan) ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಭರ್ಜರಿ ಬ್ಯಾಟಿಂಗ್‌ ಮೂಲಕ ಟಿ20 ಕ್ರಿಕೆಟ್‍ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದರು.

    ಟಿ20 ಕ್ರಿಕೆಟ್‍ನಲ್ಲಿ ಚೊಚ್ಚಲ ಶತಕ ಸಿಡಿಸಿದ ಕೊಹ್ಲಿ ಈ ಶತಕದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 2 ವರ್ಷ, 9 ತಿಂಗಳು, 16 ದಿನಗಳ ಬಳಿಕ ಶತಕ ಸಿಡಿಸಿದರು. 1,021 ದಿನಗಳ ಬಳಿಕ ಕೊಹ್ಲಿ ಬ್ಯಾಟ್‍ನಿಂದ ಶತಕದ ವೈಭವ ಕಂಡುಬಂತು. ಈ ಶತಕ ಕೊಹ್ಲಿಯ 71ನೇ ಅಂತಾರಾಷ್ಟ್ರೀಯ ಶತಕವಾಗಿದೆ. ಇದನ್ನೂ ಓದಿ: ಬೌಲರ್‌ಗೆ ಬ್ಯಾಟ್‍ನಲ್ಲಿ ಹೊಡೆಯಲು ಮುಂದಾದ ಆಸಿಫ್ ಅಲಿ – ಜೋರಾದ #BanAsifAli ಕೂಗು

    ಪಂದ್ಯದಲ್ಲಿ ಕೊಹ್ಲಿ ಅಜೇಯ 122 ರನ್ (61 ಎಸೆತ, 12 ಬೌಂಡರಿ, 6 ಸಿಕ್ಸ್) ಚಚ್ಚಿ ಮಿಂಚಿದರು. ಈ ಮೂಲಕ ಭಾರತ ತಂಡ ಅಘ್ಘಾನಿಸ್ತಾನ ವಿರುದ್ಧ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್‍ಗಳ ಬೃಹತ್ ಮೊತ್ತ ಪೇರಿಸಿದೆ. ಇದನ್ನೂ ಓದಿ: ಸೋತಿದ್ದಕ್ಕೆ ಕ್ರೀಡಾಂಗಣದಲ್ಲಿ ಅಫ್ಘಾನ್‌ ಅಭಿಮಾನಿಗಳ ಹುಚ್ಚಾಟ – ಚಯರ್‌ನಲ್ಲೇ ಪಾಕಿಗಳ ಮೇಲೆ ಹಲ್ಲೆ

    Live Tv
    [brid partner=56869869 player=32851 video=960834 autoplay=true]

  • ಬೌಲರ್‌ಗೆ ಬ್ಯಾಟ್‍ನಲ್ಲಿ ಹೊಡೆಯಲು ಮುಂದಾದ ಆಸಿಫ್ ಅಲಿ – ಜೋರಾದ #BanAsifAli ಕೂಗು

    ಬೌಲರ್‌ಗೆ ಬ್ಯಾಟ್‍ನಲ್ಲಿ ಹೊಡೆಯಲು ಮುಂದಾದ ಆಸಿಫ್ ಅಲಿ – ಜೋರಾದ #BanAsifAli ಕೂಗು

    ದುಬೈ: ಏಷ್ಯಾಕಪ್‍ನ (Asia Cup 2022) ಸೂಪರ್ ಫೋರ್ ಹಂತದ ಪಾಕಿಸ್ತಾನ (Pakistan) ಮತ್ತು ಅಫ್ಘಾನಿಸ್ತಾನ (Afghanistan) ನಡುವಿನ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟ್ಸ್‌ಮ್ಯಾನ್‌ ಆಸಿಫ್ ಅಲಿ (Asif Ali)  ಮತ್ತು ಅಫ್ಘಾನಿಸ್ತಾನ ಬೌಲರ್ ಅಹ್ಮದ್ ಮಲಿಕ್  (Ahmad Malik) ನಡುವಿನ ಗುದ್ದಾಟ ಇದೀಗ ಬಾರಿ ಚರ್ಚೆ ಆಗುತ್ತಿದೆ.

    ತೀವ್ರ ರೋಚಕ ಪಂದ್ಯದಲ್ಲಿ ಅಹ್ಮದ್ ಮಲಿಕ್ ಪಾಕಿಸ್ತಾನದ ಫಿನಿಶರ್ ಆಸಿಫ್ ಅಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈ ವೇಳೆ ಅಹ್ಮದ್ ಮಲಿಕ್ ವಿಕೆಟ್ ಪಡೆದ ಸಂಭ್ರಮಾಚರಣೆಯನ್ನು ಆಸಿಫ್ ಅಲಿ ಮುಂದೆ ತೋರ್ಪಡಿಸಿದರು. ಇದರಿಂದ ರೊಚ್ಚಿಗೆದ್ದ ಆಸಿಫ್ ಅಲಿ ಕೈಯಲ್ಲಿದ್ದ ಬ್ಯಾಟ್ ಮೇಲೆತ್ತಿ ಹೊಡೆಯಲು ಮುಂದಾದರು. ಬಳಿಕ ಇತರ ಆಟಗಾರರ ಮಧ್ಯಪ್ರವೇಶದೊಂದಿಗೆ ಪರಿಸ್ಥಿತಿ ತಿಳಿಗೊಂಡಿತು. ಇದನ್ನೂ ಓದಿ: ಸೋತಿದ್ದಕ್ಕೆ ಕ್ರೀಡಾಂಗಣದಲ್ಲಿ ಅಫ್ಘಾನ್‌ ಅಭಿಮಾನಿಗಳ ಹುಚ್ಚಾಟ – ಚಯರ್‌ನಲ್ಲೇ ಪಾಕಿಗಳ ಮೇಲೆ ಹಲ್ಲೆ

    ಇದೀಗ ಇವರಿಬ್ಬರ ಮುಸುಕಿನ ಗುದ್ದಾಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆಸಿಫ್ ಅಲಿಯನ್ನು ಟೂರ್ನಿಯ ಮುಂದಿನ ಪಂದ್ಯಗಳಿಂದ ಬ್ಯಾನ್ ಮಾಡುವಂತೆ ಅಭಿಮಾನಿಗಳ ಕೂಗು ಜೋರಾಗುತ್ತಿದೆ. ಇದನ್ನೂ ಓದಿ: ಏಷ್ಯಾಕಪ್ ಸೋಲು, ರೊಚ್ಚಿಗೆದ್ದ ಅಭಿಮಾನಿಗಳು – #BoycottIPL ಟ್ರೆಂಡ್

    https://twitter.com/thakurabhi112/status/1567568114514280450

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 6 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತು. ಪಾಕಿಸ್ತಾನ 19.2 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ರೋಚಕ ಜಯಗಳಿಸಿತು. ಈ ಮೂಲಕ ಭಾನುವಾರ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಫೈನಲ್ ಪಂದ್ಯವಾಡಲಿದೆ.

    Live Tv
    [brid partner=56869869 player=32851 video=960834 autoplay=true]

  • ಏಷ್ಯಾಕಪ್ ಸೋಲು, ರೊಚ್ಚಿಗೆದ್ದ ಅಭಿಮಾನಿಗಳು – #BoycottIPL ಟ್ರೆಂಡ್

    ಏಷ್ಯಾಕಪ್ ಸೋಲು, ರೊಚ್ಚಿಗೆದ್ದ ಅಭಿಮಾನಿಗಳು – #BoycottIPL ಟ್ರೆಂಡ್

    ದುಬೈ: ಏಷ್ಯಾಕಪ್‍ನ (Asia Cup 2022) ಸೂಪರ್ ಫೋರ್ ಹಂತದಲ್ಲಿ ಭಾರತ, ಶ್ರೀಲಂಕಾ ವಿರುದ್ಧ ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಇದರಿಂದಾಗಿ ರೊಚ್ಚಿಗೆದ್ದ ಅಭಿಮಾನಿಗಳು #BoycottIPL ಅಭಿಯಾನ ಆರಂಭಿಸಿದ್ದಾರೆ.

    ಇದೀಗ #BoycottIPL ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ. ಟೀಂ ಇಂಡಿಯಾ (Team India) ಆಟಗಾರರು ಐಪಿಎಲ್‍ನಲ್ಲಿ (IPL) ತೋರ್ಪಡಿಸುವ ಆಟದ ವೈಕರಿ ರಾಷ್ಟ್ರೀಯ ತಂಡದ ಪರ ಕಾಣುತ್ತಿಲ್ಲ. ಐಪಿಎಲ್‍ನಲ್ಲಿ ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಮಿಂಚುವ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಕಳಪೆ ಆಟದ ಮೂಲಕ ತಂಡದ ಸೋಲಿಗೆ ಕಾರಣರಾಗುತ್ತಿದ್ದಾರೆ. ಹಾಗಾಗಿ ಐಪಿಎಲ್‍ನ್ನು ಬಾಯ್‍ಕಾಟ್ (BoycottIPL) ಮಾಡಿ ಎಂದು ಅಭಿಮಾನಿಗಳು ಅಭಿಯಾನ ಆರಂಭಿಸಿದ್ದಾರೆ. ಇದನ್ನೂ ಓದಿ: ಭಾರತದ ಖೇಲ್ ಖತಂ: ಏಷ್ಯಾ ಕಪ್‌ನಿಂದ ಬಹುತೇಕ ಔಟ್‌

    ನಿನ್ನೆ ಶ್ರೀಲಂಕಾ ವಿರುದ್ಧ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭಾರತ ಸೋತು ಮುಖಭಂಗ ಅನುಭವಿಸಿದೆ. ಭಾರತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ, 174 ರನ್‍ಗಳ ಗುರಿ ನೀಡಿತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಶ್ರೀಲಂಕಾ 19.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್‍ಗಳಿಸಿ ರೋಚಕ ಜಯ ಸಾಧಿಸಿ ಫೈನಲ್ ಟಿಕೆಟ್ ಖಾತ್ರಿ ಪಡಿಸಿಕೊಂಡಿದೆ. ಈ ಸೋಲಿನೊಂದಿಗೆ ಭಾರತದ ಏಷ್ಯಾಕಪ್ ಫೈನಲ್ ಹಾದಿ ಬಹುತೇಕ ಮುಚ್ಚಿಕೊಂಡಿದೆ. ಹಾಗಾಗಿ ಅಭಿಮಾನಿಗಳು ಟೀಂ ಇಂಡಿಯಾದ ಆಟಗಾರರ ಪ್ರದರ್ಶನದ ಕುರಿತಾಗಿ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್‌ನ ಆ ಆಟ ಅಗತ್ಯವಿರಲಿಲ್ಲ – ಗೌತಮ್ ಗಂಭೀರ್ ಅಸಮಾಧಾನ

    https://twitter.com/LumbhaniOm/status/1567392614424481792

    ಗೆಲ್ಲಬಹುದಾದ ಪಂದ್ಯವನ್ನು ಕೈಚೆಲ್ಲಿ ಮಹತ್ವದ ಟೂರ್ನಿಗಳಲ್ಲಿ ಭಾರತ ನಿರಾಸೆ ಅನುಭವಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಐಪಿಎಲ್ ಎಂದು ಕಿಡಿಕಾರುತ್ತಿದ್ದಾರೆ. ಒಂದು ಕಡೆ ಐಪಿಎಲ್ ಕುರಿತಾಗಿ ಟೀಕೆ ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಐಪಿಎಲ್‍ನಿಂದಾಗಿ ಅದೆಷ್ಟೋ ಯುವ ಆಟಗಾರರು ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದಾರೆ. ಒಂದು ಕಡೆ ಐಪಿಎಲ್‍ನಿಂದಾಗಿ ಲಾಭವಾದರೆ, ಇನ್ನೊಂದು ಕಡೆ ನಷ್ಟವೂ ಆಗುತ್ತಿದೆ. ಹಾಗಾಗಿ ಐಪಿಎಲ್ ಕುರಿತಾಗಿ ಇದೀಗ ಚರ್ಚೆ ಜೋರಾಗಿದೆ.

    https://twitter.com/DilbarRaghav/status/1567397980365541377

    Live Tv
    [brid partner=56869869 player=32851 video=960834 autoplay=true]

  • ಭಾರತದ ಖೇಲ್ ಖತಂ: ಏಷ್ಯಾ ಕಪ್‌ನಿಂದ ಬಹುತೇಕ ಔಟ್‌

    ಭಾರತದ ಖೇಲ್ ಖತಂ: ಏಷ್ಯಾ ಕಪ್‌ನಿಂದ ಬಹುತೇಕ ಔಟ್‌

    ದುಬೈ: ಶ್ರೀಲಂಕಾ ರೋಚಕ 6 ವಿಕೆಟ್ ಗಳ ಜಯ ಸಾಧಿಸಿದ್ದು, ಏಷ್ಯಾ ಕಪ್ ನಿಂದ ಭಾರತ ಬಹುತೇಕ ಹೊರಬಿದ್ದಿದೆ‌. ಬಾಕಿ ಇರುವ ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬಂದರೆ ಮಾತ್ರ ಭಾರತ ಫೈನಲ್‌ಗೆ ಏರುವ ಸಾಧ್ಯತೆಯಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ, 174 ರನ್‌ಗಳ ಗುರಿ ನೀಡಿತು. ಸಾಧಾರಣ ಮೊತ್ತದ ರನ್‌ ಗುರಿ ಬೆನ್ನತ್ತಿದ ಶ್ರೀಲಂಕಾ 19.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ174 ರನ್‌ಗಳಿಸಿ ರೋಚಕ ಜಯ ಸಾಧಿಸಿದೆ

    ನಿಧಾನಗತಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದ ಲಂಕಾ ಮೊದಲ 4 ಓವರ್‌ಗಳಿಗೆ 22 ರನ್‌ಗಳನ್ನಷ್ಟೇ ಗಳಿಸಿತ್ತು. ನಂತರದಲ್ಲಿ ಬಿರುಸಿನ ಬ್ಯಾಟಿಂಗ್‌ನಿಂದ ಪವರ್‌ ಪ್ಲೇ ಮುಗಿಯುವ ವೇಳೆಗೆ 50 ರನ್‌ಗಳ ಗಡಿದಾಟಿತು. ಆರಂಭಿಕರಾಗಿ ಕಣಕ್ಕಿಳಿದ ಪಾತುಂ ನಿಸ್ಸಾಂಕ ಹಾಗೂ ಕುಸಲ್ ಮೆಂಡಿಸ್ 67 ಎಸೆತೆಗಳಲ್ಲಿ 97 ರನ್‌ ಸಿಡಿಸಿ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. ಪಾತುಂ ನಿಸ್ಸಾಂಕ ಹಾಗೂ ಕುಸಲ್ ಮೆಂಡಿಸ್ ಭಾರತದ ಬೌಲರ್‌ಗಳ ಬೆವರಿಳಿಸಿದರು. ಪಾತುಂ ನಿಸ್ಸಾಂಕ 37 ಎಸೆತಗಳಲ್ಲಿ 2 ಸಿಕ್ಸರ್‌ 4 ಬೌಂಡರಿಯೊಂದಿಗೆ 52 ರನ್‌ ಸಿಡಿಸಿದರೆ, ಕುಸಾಲ್ ಮೆಂಡಿಸ್ 37 ಎಸೆತಗಳಲ್ಲಿ 57 ರನ್‌ (4 ಬೌಂಡರಿ, 3 ಸಿಕ್ಸರ್‌) ಸಿಡಿಸಿ ಪೆವಿಲಿಯನ್‌ ಸೇರಿದರು.

    ಇದಾದ ಬಳಿಕ ಲಂಕಾ ಸತತ ನಾಲ್ಕು ವಿಕೆಟ್‌ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಮೆಂಡಿಸ್‌ ನಂತರ ಕಣಕ್ಕಿಳಿದ ಚರಿತ್ ಅಸಲಂಕಾ ಡಕೌಟ್‌ ಆದರು. ಈ ಬೆನ್ನಲ್ಲೇ 7 ಎಸೆತಗಳನ್ನು ಎದುರಿಸಿದ ದನುಷ್ಕ ಗುಣತಿಲಕ 1 ರನ್‌ಗಳಿಸಿ ಔಟಾದರು.

    ನಂತರ ಬಂದ ಭಾನುಕಾ ರಾಜಪಕ್ಸೆ ಹಾಗೂ ದಾಸುನ್ ಶನಕ ಉತ್ತಮ ಜೊತೆಯಾಟವಾಡಿದರು. 18 ಓವರ್‌ಗಳಲ್ಲಿ 153 ರನ್‌ಗಳಿಸಿದ ಲಂಕಾ ತಂಡಕ್ಕೆ ಕೊನೆಯ 2 ಓವರ್‌ಗಳಲ್ಲಿ 21 ರನ್‌ಗಳ ಅವಶ್ಯಕತೆಯಿತ್ತು. 19ನೇ ಓವರ್‌ನಲ್ಲಿ ಬೌಲಿಂಗ್‌ ಮಾಡಿದ ಭುವನೇಶ್ವರ್‌ ಕುಮಾರ್‌ ಮೊದಲ 2 ಎಸೆತಗಳಲ್ಲಿ ಒಂದೊಂದೇ ರನ್‌ ನೀಡಿ, ಸತತ 2 ವೈಡ್‌ ಎಸೆದು, 3ನೇ ಎಸೆತದಲ್ಲಿ 4 ರನ್‌ ಚಚ್ಚಿಸಿಕೊಂಡರು. ತಮ್ಮ ಕೊನೆಯ ಓವರ್‌ನಲ್ಲಿ 14 ರನ್‌ ನೀಡಿದ್ದು, ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣವಾಯಿತು.

    ಕೊನೆಯ ಓವರ್‌ನಲ್ಲಿ ಅರ್ಶ್‌ದೀಪ್‌ ಸಿಂಗ್‌ಗೆ 6 ಎಸೆತಗಳಲ್ಲಿ 7 ರನ್‌ಗಳನ್ನು ಕಂಟ್ರೋಲ್‌ ಮಾಡುವ ಸವಾಲು ಎದುರಾಗಿತ್ತು. ಮೊದಲ 2 ಎಸೆತಗಳಲ್ಲಿ ಒಂದೊಂದು ರನ್‌ ನೀಡಿದ ಅರ್ಶ್‌ದೀಪ್‌, 3ನೇ ಎಸೆತದಲ್ಲಿ 2 ರನ್‌ ನೀಡಿ ಉತ್ತಮ ಹಿಡಿದ ಸಾಧಿಸಿದ್ದರು.  ಕೊನೆಯ 2 ಎಸೆತಗಳಲ್ಲಿ 2 ರನ್‌ ಬೇಕಿದ್ದ ಲಂಕಾಗೆ 5ನೇ ಎಸೆತವನ್ನು ಬೀಟ್ ಮಾಡಿದರೂ, ರನೌಟ್‌ ಮಾಡುವ ಪ್ರಯತ್ನದಲ್ಲಿ ರಿಷಣ್‌ ಪಂತ್‌ 2 ರನ್‌ ಉಚಿತವಾಗಿಯೇ ನೀಡಿದ್ದರಿಂದ ಜಯ ಭಾರತದ ಕೈಚೆಲ್ಲಿತು. ಉತ್ತಮ ಜೊತೆಯಾಟವಾಡಿದ ಭಾನುಕಾ ರಾಜಪಕ್ಸೆ 17 ಎಸೆತಗಳಲ್ಲಿ 25 ರನ್‌ ಗಳಿಸಿದರೆ ಹಾಗೂ ದಾಸುನ್ ಶನಕ  18 ಎಸೆತಗಳಲ್ಲಿ 33 ರನ್‌ ಪೇರಿಸಿ ಲಂಕಾ ತಂಡಕ್ಕೆ ಜಯ ತಂದುಕೊಟ್ಟರು.

    ಚಾಹಲ್‌ ಕಮಾಲ್‌: ಮೊದಲ 10 ಓವರ್‌ಗಳ ವರೆಗೂ ಟೀಂ ಇಂಡಿಯಾ ಯಾವುದೇ ವಿಕೆಟ್‌ ಪಡೆದಿರಲಿಲ್ಲ. ನಂತರ ತಮ್ಮ ಬೌಲಿಂಗ್‌ ಕಮಾಲ್‌ ಮಾಡಿದ ಯಜುವೇಂದ್ರ ಚಾಹಲ್‌ 4 ಓವರ್‌ಗಳಲ್ಲಿ 34 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. ಈ ಬೆನ್ನಲ್ಲೇ ರವಿಚಂದ್ರನ್‌ ಅಶ್ವಿನ್‌ 1 ವಿಕೆಟ್‌ ಪಡೆದರು. ಇದರಿಂದ ಟೀಂ ಇಂಡಿಯಾ ಮತ್ತೆ ಗೆಲುವಿನ ಭರವಸೆ ಕಂಡುಕೊಂಡಿತ್ತು.

    ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಿಧಾನಗತಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾ ಪವರ್‌ ಪ್ಲೇ ಮುಗಿಯುವಷ್ಟರಲ್ಲೇ 2 ವಿಕೆಟ್‌ಗಳನ್ನು ಕಳೆದುಕೊಂಡಿತು. 3ನೇ ಓವರ್‌ನಲ್ಲಿ 11 ರನ್‌ಗಳಾಗಿದ್ದಾಗಲೇ 6 ರನ್ ಗಳಿಸಿ ಆಡುತ್ತಿದ್ದ ಕೆ.ಎಲ್.ರಾಹುಲ್ ಎಲ್‌ಬಿ ಬಲೆಗೆ ಬಿದ್ದರು. ನಂತರ ಬಂದ ಕಿಂಗ್‌ ಕೊಹ್ಲಿ ಯಾವುದೇ ರನ್‌ಗಳಿಸದೇ ಶೂನ್ಯಕ್ಕೆ ಔಟಾದರು.

    ಈ ವೇಳೆ ಭಾರತ 13 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ನಾಯಕ ರೋಹಿತ್ ಶರ್ಮಾ 41 ಎಸೆತಗಳಲ್ಲಿ 70 ರನ್ ಕಲೆಹಾಕಿ ಉತ್ತಮ ಇನ್ನಿಗ್ಸ್‌ ಕಟ್ಟಿದ್ದರು. ಇದಕ್ಕೆ ಸೂರ್ಯಕುಮಾರ್ ಯಾದವ್ ಜೊತೆಯಾದರು. ಇಬ್ಬರ ಸಾಂಘಿಕ ಬ್ಯಾಟಿಂಗ್‌ ಪ್ರದರ್ಶನದಿಂದ 97 ರನ್‌ಗಳು ಟೀಂ ಇಂಡಿಯಾ ಬತ್ತಳಿಕೆ ಸೇರಿತು. ಈ ವೇಳೆ ರೋಹಿತ್‌ ಶರ್ಮಾ 41 ಎಸೆತಗಳಲ್ಲಿ 72 ರನ್‌ (5 ಬೌಂಡರಿ, 4 ಸಿಕ್ಸರ್‌) ಸಿಡಿಸಿದರೆ, ಸೂರ್ಯಕುಮಾರ್‌ ಯಾದವ್‌ 29 ಎಸೆತಗಳಲ್ಲಿ 34 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಮಧ್ಯಮ ಕ್ರಮಾಂಕದ ನಂತರ ಕ್ರೀಸ್‌ಗಿಳಿದ ಯಾರೊಬ್ಬರು ಸ್ಥಿರವಾಗಿ ನಿಲ್ಲಲಿಲ್ಲ. ಹಾರ್ದಿಕ್ ಪಾಂಡ್ಯ 17 ರನ್, ರಿಷಭ್ ಪಂತ್ 17 ರನ್‌, ದೀಪಕ್‌ ಹೂಡಾ 3 ರನ್‌ ಗಳಿಸಿದರು. ಕೊನೆಯಲ್ಲಿ ಬಂದ ಅಶ್ವಿನ್‌ 7 ಎಸೆತಗಳಲ್ಲಿ 15 ರನ್‌ ಗಳಿಸಿದರು. ಇದು ಟೀಂ ಇಂಡಿಯಾ 170 ರನ್‌ಗಳ ಗಡಿ ದಾಟಲು ನೆರವಾಯಿತು.

    ಬೌಲಿಂಗ್‌ನಲ್ಲಿ ಶ್ರೀಲಂಕಾ ತಂಡದ ಪರ ದಿಲ್ಶನ್ ಮಧುಶಂಕ 4 ಓವರ್‌ಗಳಲ್ಲಿ 24 ರನ್ ನೀಡಿ 3 ವಿಕೆಟ್ ಗಳಿಸಿದರು. ಚಮಿಕಾ ಕರುಣಾರತ್ನೆ 4 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದರು. ನಾಯಕ ದಸುನ್ ಶನಕ 2 ಓವರ್‌ಗಳಲ್ಲಿ 26 ನೀಡಿ 2 ವಿಕೆಟ್ ಪಡೆದರು. ಮಹೀಶ್ ತೀಕ್ಷಣ ಒಂದು ವಿಕೆಟ್ ಪಡೆದುಕೊಂಡರು.

    Live Tv
    [brid partner=56869869 player=32851 video=960834 autoplay=true]