Tag: asi

  • ಹೆಲ್ಮೆಟ್ ಹಾಕದ ಎಎಸ್‍ಐ- ಫೈನ್ ಹಾಕಲು ಸೂಚಿಸಿದ ಎಸ್‍ಪಿ

    ಹೆಲ್ಮೆಟ್ ಹಾಕದ ಎಎಸ್‍ಐ- ಫೈನ್ ಹಾಕಲು ಸೂಚಿಸಿದ ಎಸ್‍ಪಿ

    ಹಾಸನ: ಸಂಚಾರಿ ನಿಯಮ ಮಾಲಿಸುವ ಕುರಿತು ಅರಿವು ಮೂಡಿಸಬೇಕಾದ ಪೊಲೀಸರೇ ಹೆಲ್ಮೆಟ್ ಹಾಕದಿದ್ದರೆ ಹೇಗೆ ಅಲ್ಲವೆ, ಹೀಗಾಗಿ ಹಾಸನ ಎಸ್‍ಪಿ ಶ್ರೀನಿವಾಸ್‍ಗೌಡ ಅವರು ಎಎಸ್‍ಐಗೆ ತಕ್ಕ ಪಾಠ ಕಲಿಸಿದ್ದು, ಹೆಲ್ಮೆಟ್ ಧರಿಸದ್ದಕ್ಕೆ ಅವರಿಗೂ ಫೈನ್ ಹಾಕುವಂತೆ ಸೂಚಿಸಿದ್ದಾರೆ.

    ಹಾಸನದ ಸಂತೆ ಪೇಟೆ ಸರ್ಕಲ್ ಬಳಿ ಅನವಶ್ಯಕವಾಗಿ ಓಡಾಡುತ್ತಿದ್ದ ವಾಹನಗಳನ್ನು ಎಸ್‍ಪಿ ಶ್ರೀನಿವಾಸಗೌಡ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಎಎಸ್‍ಐ ಹೆಲ್ಮೆಟ್ ಇಲ್ಲದೆ ಸ್ಕೂಟರ್‍ನಲ್ಲಿ ಆಗಮಿಸುತ್ತಿದ್ದ ರು. ಇದನ್ನು ಗಮನಿಸಿದ ಎಸ್‍ಪಿ, ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಹೆಲ್ಮೆಟ್ ಹಾಕದ್ದನ್ನು ಕಂಡು ಇವರಿಗೆ ದಂಡ ವಿಧಿಸಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಈ ಮೂಲಕ ಪೊಲೀಸರು ಸಹ ಬೇಕಾಬಿಟ್ಟಿಯಾಗಿ ಓಡಾಡದೆ, ಸಂಚಾರಿ ನಿಯಮಗಳನ್ನು ಪಾಲಿಸಿ ಶಿಸ್ತು ಕಾಪಾಡಬೇಕು ಎಂದು ತಿಳಿಸಿದ್ದಾರೆ.

    ಮಂಗಳವಾರ ಈ ಘಟನೆ ನಡೆದಿದ್ದು, ನಮ್ಮ ಇಲಾಖೆಯವರು ಇತರರಿಗೆ ಮಾದರಿಯಾಗಬೇಕು. ಹೀಗಾಗಿ ಯಾರನ್ನೂ ಬಿಡುವುದಿಲ್ಲ. ಇವರಿಗೆ ಫೈನ್ ಹಾಕಿ ಎಂದು ಸೂಚಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

  • ಕೆಲಸಕ್ಕೆ ಹೊರಟಿದ್ದ ಎಎಸ್‍ಐ ಹೃದಯಾಘಾತದಿಂದ ಸಾವು

    ಕೆಲಸಕ್ಕೆ ಹೊರಟಿದ್ದ ಎಎಸ್‍ಐ ಹೃದಯಾಘಾತದಿಂದ ಸಾವು

    ಮಡಿಕೇರಿ: ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದ ಎಎಸ್‍ಐಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಕೊಡಗಿನ ಮಡಿಕೇರಿಯಲ್ಲಿ ನಡೆದಿದೆ.

    ಮಡಿಕೇರಿಯಲ್ಲಿ ಟ್ರಾಫಿಕ್ ವಿಭಾಗದಲ್ಲಿ ಎಎಸ್‍ಐ ಆಗಿದ್ದ ವೆಂಕಟೇಶ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದ ವೇಳೆ ಹೃದಯಾಘಾತವಾಗಿದ್ದು, ತಕ್ಷಣವೇ ಚಿಕಿತ್ಸೆಗಾಗಿ ಅವರನ್ನು ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಅವರ ಸ್ಥಿತಿ ಗಂಭೀರವಾಗಿದ್ದ ಕಾರಣಕ್ಕೆ ಅವರನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ತಲುಪುವ ಮಾರ್ಗ ಮಧ್ಯವೇ ವೆಂಕಟೇಶ್ ಅವರು ಮೃತಪಟ್ಟಿದ್ದಾರೆ.

  • ಕರ್ಫ್ಯೂ ಪಾಸ್ ತೋರಿಸು ಎಂದಿದ್ದಕ್ಕೆ ಎಎಸ್‍ಐ ಕೈ ಕತ್ತರಿಸಿದ ಗುಂಪು

    ಕರ್ಫ್ಯೂ ಪಾಸ್ ತೋರಿಸು ಎಂದಿದ್ದಕ್ಕೆ ಎಎಸ್‍ಐ ಕೈ ಕತ್ತರಿಸಿದ ಗುಂಪು

    – ಗುರುದ್ವಾರದಲ್ಲಿ ಬಚ್ಚಿಟ್ಟುಕೊಂಡಿದ್ದ 9 ಮಂದಿ ಅರೆಸ್ಟ್
    – ಪಿಸ್ತೂಲ್, ಸೇಬರ್, ಪೆಟ್ರೋಲ್ ಬಾಂಬ್, 7 ಚೀಲ ಗಾಂಜಾ ವಶ

    ಪಟಿಯಾಲ: ಕರ್ಫ್ಯೂ ಪಾಸ್ ತೋರಿಸುವಂತೆ ಒತ್ತಾಯಿಸಿದ್ದಕ್ಕೆ ನಿಹಾಂಗ್ ಸಿಖ್ಖರ ಗುಂಪೊಂದು ಪೊಲೀಸರ ಮೇಲೆ ಹಲ್ಲೆ ನಡೆಸಿ, ಓರ್ವ ಅಧಿಕಾರಿಯ ಕೈ ಕತ್ತರಿಸಿದ ಘಟನೆ ಪಂಜಾಬ್‍ನ ಪಟಿಯಾಲ ಜಿಲ್ಲೆಯಲ್ಲಿ ನಡೆದಿದೆ.

    ನಿಹಾಂಗ್‍ನ ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈಯನ್ನು ವ್ಯಕ್ತಿಯೊಬ್ಬ ಕತ್ತರಿಸಿದ್ದಾನೆ. ಅಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದ ಹರ್ಜಿತ್ ಸಿಂಗ್ ಜೇಬಿನಿಂದ ಕರವಸ್ತ್ರವನ್ನು ತೆಗೆದುಕೊಂಡು ಅವರ ಕೈಗೆ ಕಟ್ಟಿದ್ದರು. ಗಾಯವಾಗಿದ್ದರೂ ಹರ್ಜಿತ್ ಸಿಂಗ್ ದೀರ್ಘಕಾಲ ಸ್ಥಳದಲ್ಲಿಯೇ ಇದ್ದರು. ಸ್ವಲ್ಪ ಸಮಯದ ನಂತರ ಓರ್ವ ಕತ್ತರಿಸಿ ಬಿದ್ದಿದ್ದ ಕೈಯನ್ನು ಅವರಿಗೆ ಕೊಟ್ಟನು. ಆಗ ಹರ್ಜಿತ್ ಸಿಂಗ್ ಅವರು ಮತ್ತೊಂದು ಕೈಯಲ್ಲಿ ಹಿಡಿದುಕೊಂಡು ದ್ವಿಚಕ್ರದಲ್ಲಿ ಆಸ್ಪತ್ರೆಗೆ ಹೋದರು ಎಂದು ವರದಿಯಾಗಿದೆ.

    ಎಎಸ್‍ಐ ಹರ್ಜಿತ್ ಸಿಂಗ್ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಪಟಿಯಾಲದಿಂದ ಚಂಡೀಗಢ ಆಸ್ಪತ್ರೆಗೆ ದಾಖಲಿಸಿಲಾಗಿದೆ. ನಿಹಾಂಗ್ ಸಿಖ್ಖರು ನಡೆಸಿದ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಬಿಕರ್ ಸಿಂಗ್ ಮತ್ತು ಓರ್ವ ಪೇದೆ ಸಹ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ 9 ಜನರನ್ನು ಬಂಧಿಸಲಾಗಿದೆ.

    ಈ ಕುರಿತು ಮಾಹಿತಿ ನೀಡಿರುವ ಎಸ್‍ಪಿ ಮಂದೀಪ್ ಸಿಂಗ್ ಸಿಧು, ಮಂಡಿ ಬೋರ್ಡ್ ಠಾಣೆಯ ಪೊಲೀಸರು ಪಟಿಯಾಲದ ತರಕಾರಿ ಮಾರುಕಟ್ಟೆಯ ಬಳಿ ನಿಯೋಜನೆಗೊಂಡಿದ್ದರು. ಈ ವೇಳೆ ಇಂದು ಬೆಳಗ್ಗೆ ಆರು ಗಂಟೆಗೆ ಐವರಿಂದ ಆರು ಜನರಿದ್ದ ವಾಹನವನ್ನು ಅವರು ತಡೆದು ಲಾಕ್‍ಡೌನ್ ಪಾಸ್ ತೋರಿಸುವಂತೆ ಒತ್ತಾಯಿಸಿದ್ದರು. ಆಗ ಗುಂಪು ತರಕಾರಿ ಮಾರುಕಟ್ಟೆಯ ಸಿಬ್ಬಂದಿಯೊಂದಿಗೆ ಜಗಳ ಆರಂಭಿಸಿತ್ತು. ಅಷ್ಟೇ ಅಲ್ಲದೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಬ್ಯಾರಿಕೇಡ್ ಅನ್ನು ಮುರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಈ ವೇಳೆ ಅಲ್ಲಿ ನಿಂತಿದ್ದ ಪೊಲೀಸರು ವಾಹವನ್ನು ಸುತ್ತುವರಿದರು. ಪೊಲೀಸರು ವಾಹನವನ್ನು ನಿಲ್ಲಿಸಿದ ಕೂಡಲೇ ಕತ್ತಿ, ಮಾರಕಾಸ್ತ್ರಗಳನ್ನು ಎತ್ತಿಕೊಂಡ ಗುಂಪು ದಾಳಿ ನಡೆಸಿ, ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈ ಕತ್ತರಿಸಿ ಪರಾರಿಯಾಗಿತ್ತು ಎಂದು ತಿಳಿಸಿದ್ದಾರೆ.

    ನಿಹಾಂಗ್ ಬಾಲ್‍ಬರಾ ಪ್ರದೇಶದ ಗುರುದ್ವಾರದಲ್ಲಿ ಆರೋಪಿಗಳು ಅಡಗಿಕೊಂಡಿದ್ದರು. ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬೆನ್ನಟ್ಟುವ ಮೂಲಕ ಗುರುದ್ವಾರವನ್ನು ತಲುಪಿದರು. ಪಟಿಯಾಲ ವಲಯದ ಐ.ಜಿ.ಜತೀಂದರ್ ಸಿಂಗ್ ಅವರು ನಿಹಾಂಗ್‍ಗಳನ್ನು ಶರಣಾಗುವಂತೆ ಎಚ್ಚರಿಸಿದರು. ಆದರೆ ಅವರು ಗುರುದ್ವಾರದ ಒಳಗಿನಿಂದ ಪೊಲೀಸರಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ಅವರು ಒಳಗಿನಿಂದಲೂ ಗುಂಡು ಹಾರಿಸಿದರು. ನಂತರ ಕಮಾಂಡೋ ತಂಡವನ್ನು ಗುರುದ್ವಾರದೊಳಗೆ ಕಳುಹಿಸಲಾಯಿತು.

    ಗುರುದ್ವಾರದ ಒಳಗೆ ಸ್ಥಳೀಯ ಪಿಸ್ತೂಲ್, ಸೇಬರ್, ಪೆಟ್ರೋಲ್ ಬಾಂಬ್, 7 ಚೀಲ ಗಾಂಜಾ ಮತ್ತು ದೊಡ್ಡ ಪ್ರಮಾಣದ ರಾಸಾಯನಿಕ ತರಹದ ದ್ರವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು 9 ಜನರನ್ನು ಬಂಧಿಸಲಾಗಿದೆ ಎಂದು ಎಸ್‍ಪಿ ಮಂದೀಪ್ ಸಿಂಗ್ ಸಿಧು ಹೇಳಿದ್ದಾರೆ. ಶಸ್ತ್ರಾಸ್ತ್ರಗಳಲ್ಲದೆ, ಅವರಿಂದಲೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈವರೆಗೆ 35 ಲಕ್ಷ ರೂ.ಗಳು ಸಿಕ್ಕಿದ್ದು, ಇನ್ನೂ ಕಾರ್ಯಾಚರಣೆ ನಡೆದಿದೆ.

    ಪಟಿಯಾಲದಲ್ಲಿ ನಡೆದ ಘಟನೆ ದುರದೃಷ್ಟಕರ ಎಂದು ಪಂಜಾಬ್ ಡಿಜಿಪಿ ದಿನಕರ್ ಗುಪ್ತಾ ಹೇಳಿದ್ದಾರೆ. ಗಾಯಗೊಂಡ ಎಎಸ್‍ಐಗೆ ಚಿಕಿತ್ಸೆ ನೀಡಲು ಪಿಜಿಐಎಂಆರ್ ನ ಉನ್ನತ ಪ್ಲಾಸ್ಟಿಕ್ ಸರ್ಜನ್ ಅವರನ್ನು ನೇಮಿಸಲಾಗಿದೆ.

  • 1 ಸಾವಿರ ಹಣ ಪಡೆದು, 500 ರೂ. ರಸೀದಿ ಕೊಟ್ಟ ಎಎಸ್‍ಐ

    1 ಸಾವಿರ ಹಣ ಪಡೆದು, 500 ರೂ. ರಸೀದಿ ಕೊಟ್ಟ ಎಎಸ್‍ಐ

    – ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಎಎಸ್‍ಐ ಕಿರಿಕ್

    ಹಾವೇರಿ: ಕೊರೊನಾ ಚೆಕ್ ಪೋಸ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕನಿಗೆ ಸಂಚಾರಿ ಠಾಣೆ ಎಎಸ್‍ಐ ಒಬ್ಬರು ಅವಾಚ್ಯ ಪದಗಳಿಂದ ನಿಂದಿಸಿ, ದಂಡ ಹಾಕಿದ ಘಟನೆ ಹಾವೇರಿ ನಗರದ ಚನ್ನಮ್ಮ ವೃತ್ತದಲ್ಲಿ ನಡೆದಿದೆ.

    ಹಿರಿಯ ಆರೋಗ್ಯ ಸಹಾಯಕ ಮಂಜುನಾಥ ಹೊನ್ನಾರಗರ ಅವರು ಸೋಮವಾರ ಸಂಜೆ ನಗರದ ಆರ್‌ಟಿಓ ಕಚೇರಿ ಬಳಿ ಇರುವ ಕೊರೊನಾ ಚೆಕ್ ಪೋಸ್ಟ್‌ನಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಆಗುತ್ತಿದ್ದರು. ಈ ವೇಳೆ ಸಂಚಾರಿ ಠಾಣೆ ಎಎಸ್‍ಐ ರಾಜೇಶ್ ಸಂಗೊಳ್ಳಿ ಎಂಬವರು ಆರೋಗ್ಯ ಇಲಾಖೆ ಸಿಬ್ಬಂದಿ ಮಂಜುನಾಥ ಬೈಕ್ ತಡೆದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.

    ಅಷ್ಟಕ್ಕೆ ಸುಮ್ಮನಾಗದ ರಾಜೇಶ್ ಸಂಗೊಳ್ಳಿ ಅವರು ಧಮ್ಕಿ ಹಾಕಿ ಒಂದು ಸಾವಿರ ರೂ. ಪಡೆದು ಕೇವಲ 500 ರೂ. ರಸೀದಿ ಕೊಟ್ಟು ಕಳಿಸಿದ್ದಾರಂತೆ. ಇದರಿಂದ ನೊಂದ ಆರೋಗ್ಯ ಇಲಾಖೆ ಸಿಬ್ಬಂದಿ ಮಂಜುನಾಥ, ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದ ಮೂಲಕ ಎಎಸ್‍ಐ ಸಂಗೊಳ್ಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಅಪರ ಜಿಲ್ಲಾಧಿಕಾರಿ ಯೋಗೇಶ್ವರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

  • ಎಎಸ್‍ಐ ಕಾರನ್ನೇ ಕದ್ದ ಕಳ್ಳರು

    ಎಎಸ್‍ಐ ಕಾರನ್ನೇ ಕದ್ದ ಕಳ್ಳರು

    ಮೈಸೂರು: ಮನೆ ಮುಂದೆ ನಿಲ್ಲಿಸಿದ್ದ ಎಎಸ್‍ಐ ಕಾರ್ ನ್ನು ಕಳ್ಳರು ಕದ್ದಿದ್ದಾರೆ.

    ಮೈಸೂರು ಸಿಸಿಬಿ ವಿಭಾಗದಲ್ಲಿ ಎಎಸ್‍ಐ ಆಗಿರುವ ಅಲೆಕ್ಸ್ ಅವರಿಗೆ ಸೇರಿದ ಸ್ಕ್ರಾರ್ಪಿಯೋ ಕಾರ್ ಕಳ್ಳತನವಾಗಿದೆ. ಮೈಸೂರಿನ ಎನ್.ಆರ್.ಮೋಹಲ್ಲ ನಿವಾಸಿಯಾಗಿರುವ ಅಲೆಕ್ಸ್ ತಮ್ಮ ಮನೆ ಮುಂದೆ ಕೆಎ-05 ಎಂಎಫ್ -1972 ನಂಬರ್ ನ ಕಪ್ಪುಬಣ್ಣದ ಕಾರು ನಿಲ್ಲಿಸಿದ್ದರು. ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ವೇಳೆ ಕಳ್ಳರು ಕಾರು ಕದ್ದೊಯ್ದಿದ್ದಾರೆ.

    ಈ ಸಂಬಂಧ ಅಲೆಕ್ಸ್ ಎನ್.ಆರ್.ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತಮ್ಮದೇ ಸಿಬ್ಬಂದಿಯ ಕಾರು ಹುಡುಕಲು ಕಾರ್ಯಚರಣೆ ಆರಂಭಿಸಿದ್ದಾರೆ.

  • ಖಾಸಗಿ ಬಸ್ ಡಿಕ್ಕಿ- ಕಾಲು ಕಟ್ ಆಗಿ ಎಎಸ್‍ಐ ದುರ್ಮರಣ

    ಖಾಸಗಿ ಬಸ್ ಡಿಕ್ಕಿ- ಕಾಲು ಕಟ್ ಆಗಿ ಎಎಸ್‍ಐ ದುರ್ಮರಣ

    ರಾಮನಗರ: ಕರ್ತವ್ಯ ನಿರ್ವಹಿಸಲು ಪೊಲೀಸ್ ಠಾಣೆಗೆ ತೆರಳುತ್ತಿದ್ದ ಎಎಸ್‍ಐ ಅವರ ಹೋಂಡಾ ಆಕ್ಟೀವ್‍ಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಕಾಲು ಕಟ್ ಆಗಿ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಎಸ್‍ಐ ಮಲ್ಲೇಶಯ್ಯ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

    ಚನ್ನಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್‍ಐ ಆಗಿದ್ದ ಮಲ್ಲೇಶಯ್ಯ ಕಳೆದ 3 ರಂದು ರಾತ್ರಿ ಕರ್ತವ್ಯಕ್ಕೆಂದು ಠಾಣೆಗೆ ತಮ್ಮ ಹೋಂಡಾ ಆಕ್ಟೀವ್ ಗಾಡಿಯಲ್ಲಿ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಉದಯರಂಗ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು ಘಟನೆಯಲ್ಲಿ ಎಡಗಾಲು ಮಂಡಿಯಿಂದ ಕೆಳಗೆ ಕಟ್ ಆಗಿ ತೀವ್ರ ರಕ್ತಸ್ರಾವವಾಗಿತ್ತು. ಕಾಲು ಕಟ್ ಆಗಿ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದ ಎಎಸ್‍ಐ ಮಲ್ಲೇಶಯ್ಯರನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಮೂಲತಃ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದ ರಾಯರದೊಡ್ಡಿ ನಿವಾಸಿಯಾಗಿರುವ ಮಲ್ಲೇಶಯ್ಯ ರಾಮನಗರದಲ್ಲಿಯೇ ವಾಸವಾಗಿದ್ದರು. ಸದ್ಯ ಅವರು ಮೂವರು ಪುತ್ರಿಯರು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಎಎಸ್‍ಐ ಮಲ್ಲೇಶಯ್ಯ ಸಾವಿನಿಂದಾಗಿ ಕುಟುಂಬದ ರೋಧನ ಮುಗಿಲು ಮುಟ್ಟುವಂತಿತ್ತು.

    ಘಟನೆ ಸಂಬಂಧ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಮಹಿಳಾ ಆರೋಪಿಗೆ ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ ಎಎಸ್‍ಐ

    ಮಹಿಳಾ ಆರೋಪಿಗೆ ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ ಎಎಸ್‍ಐ

    ದಾವಣಗೆರೆ: ಆರೋಪಿಗಳಿಗೆ ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ನೀಡಬಾರದೆಂದು ಕಾನೂನೇ ಇದೆ. ಆದರೆ ದಾವಣಗೆರೆಯಲ್ಲಿ ಮಹಿಳಾ ಎಎಸ್‍ಐ ಒಬ್ಬರು ಮಹಿಳಾ ಆರೋಪಿಗೆ ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ್ದಾರೆ.

    ದಾವಣಗೆರೆಯ ಆಜಾಧ್ ನಗರ ಪೊಲೀಸ್ ಠಾಣೆಯ ಮಹಿಳಾ ಎಎಸ್‍ಐ ಸಮೀಮ್ ಬಾನು ಥರ್ಡ್ ಡಿಗ್ರಿ ನೀಡಿದ ಎಎಸ್‍ಐ ಆಗಿದ್ದು, ಕಳ್ಳತನದ ಆರೋಪದಲ್ಲಿ ಸಿಕ್ಕಿಬಿದ್ದ ರೇಷ್ಮಾಗೆ ಥಳಿಸಿದ್ದಾರೆ. ಪೊಲೀಸರ ಥಳಿತದಿಂದ ಆಘಾತಕ್ಕೊಳಗಾಗಿ ತೀವ್ರ ಗಾಯಗೊಂಡಿರುವ ರೇಷ್ಮಾ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾಳೆ.

    ರೇಷ್ಮಾ ಕಳೆದ ಎಂಟು ವರ್ಷಗಳಿಂದ ದಾವಣಗೆರೆಯ ಅಹಮ್ಮದ ನಗರದ ಅಸದುಲ್ಲಾ ಸಾಬ್ ಎಂಬುವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ಅಸುದುಲ್ಲಾ ಅವರ ಮನೆಯಲ್ಲಿ ಶುಕ್ರವಾರ ಚಿನ್ನಾಭರಣ ಕಳುವಾಗಿತ್ತು. ಅವರು ಈ ಬಗ್ಗೆ ಅಜಾದ್‍ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ತನಿಖೆ ಆರಂಭಿಸಿದ್ದ ಎಎಸ್‍ಐ ಸಮೀಮ್ ಬಾನು ವಿಚಾರಣೆಗೆಂದು ಕರೆದುಕೊಂಡು ರೇಷ್ಮಾಳನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಸಮೀಮ್ ಅವರು ರೇಷ್ಮಾಗೆ ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ನೀಡಿದ್ದಾರೆ.

    ಆರೋಪಿ ರೇಷ್ಮಾ ಪರಿಪರಿಯಾಗಿ ಬೇಡಿಕೊಂಡರೂ ಬಿಡದೇ, ಟಾರ್ಚರ್ ನೀಡಿದ್ದಾರೆ. ರೇಷ್ಮಾಳ ಕಾಲು, ತೊಡೆ, ದೇಹದ ವಿವಿಧ ಭಾಗಗಳಲ್ಲಿ ಬಾಸುಂಡೆಗಳು ಮೂಡಿವೆ. ಲಾಠಿ ಹೊಡೆತಕ್ಕೆ ರೇಷ್ಮಾಳ ಚರ್ಮ ಹಪ್ಪುಗಟ್ಟಿದಂತಾಗಿದೆ. ಮಹಿಳಾ ಎಎಸ್‍ಐ ಆರೋಪಿ ಮಹಿಳೆಯನ್ನು ಮನಬಂದಂತೆ ಥಳಿಸಿದ್ದು ಅಮಾನವೀಯ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.

    ವಿಚಾರಣೆ ಬಳಿಕ ಇಂದು ಹೊರ ಬಂದ ರೇಷ್ಮಾ ಪೊಲೀಸ್ ದೌರ್ಜನ್ಯದಿಂದ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿಹೋಗಿದ್ದಾಳೆ. ನೋವು ತಡೆಯಲಾರದೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಷ್ಟೇ ಅಲ್ಲದೆ ಈ ವಿಷಯವನ್ನು ಬಹಿರಂಗಪಡಿಸಿದರೆ ಮತ್ತೆ ಹೊಡೆಯುತ್ತೇವೆ ಎಂದು ಪೊಲೀಸು ಬೆದರಿಕೆ ಹಾಕಿದ್ದಾರೆ ಎಂದು ರೇಷ್ಮಾ ಸಂಬಂಧಿ ಆರೋಪಿಸಿದ್ದಾರೆ. ಪೊಲೀಸರ ಈ ದೌರ್ಜನ್ಯದ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವುದಾಗಿ ರೇಷ್ಮಾ ಸಂಬಂಧಿಕರು ಎಚ್ಚರಿಸಿದ್ದಾರೆ.

  • ವರ್ಗಾವಣೆಗೆ ಹೆದರಿ ಬೆಂಕಿ ಹಚ್ಚಿಕೊಂಡ ಎಎಸ್‍ಐ

    ವರ್ಗಾವಣೆಗೆ ಹೆದರಿ ಬೆಂಕಿ ಹಚ್ಚಿಕೊಂಡ ಎಎಸ್‍ಐ

    – ಮಾಮೂಲು ವಸೂಲಿಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನ
    – ಇನ್ಸ್‌ಪೆಕ್ಟರ್ ಕಿರುಕುಳದಿಂದ ಬೇಸತ್ತಿದ್ದ ಎಎಸ್‍ಐ

    ಹೈದರಾಬಾದ್: ವರ್ಗಾವಣೆಗೆ ಹೆದರಿ ಸಹಾಯಕ ಸಬ್ ಇನ್ಸ್‌ಪೆಕ್ಟರ್(ಎಎಸ್‍ಐ) ಬೃಹತ್ ಟ್ಯಾಂಕ್ ಹತ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಎಎಸ್‍ಐ ನರಸಿಂಹ ಆತ್ಮಹತ್ಯೆಗೆ ಯತ್ನಿಸಿದ್ದು, ಬದಂಗ್‍ಪೇಟೆ ನಿವಾಸಿಯಾಗಿದ್ದಾರೆ. ಪ್ರಸ್ತುತ ಬಾಲಾಪುರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಗಾವಣೆ ಮಾಡಿರುವ ಸುದ್ದಿ ತಿಳಿಯುತ್ತಿದ್ದಂತೆ ಬೃಹತ್ ನೀರಿನ ಟ್ಯಾಂಕ್ ಮೇಲೆ ಏರಿ ಬೆಂಕಿ ಹಚ್ಚಿಕೊಂಡಿದ್ದಾರೆ. ಘಟನೆ ಕುರಿತು ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿ, ನರಸಿಂಹ ಅವರನ್ನು ಅಪೊಲೊ ಡಿಆರ್ ಡಿಓ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪರಿಸ್ಥಿತಿ ಗಂಭೀರವಾಗಿದೆ.

    ರಾಚಕೊಂಡ ಪೊಲೀಸ್ ಆಯುಕ್ತರ ವ್ಯಾಪ್ತಿಯ ಬಾಲಾಪುರ ಪೊಲೀಸ್ ಠಾಣೆಯಲ್ಲಿ ನರಸಿಂಹ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಇದ್ದಕ್ಕಿದ್ದಂತೆ ಅವರನ್ನು ಸೈಬರಾಬಾದ್ ಕಮಿಷನರೇಟ್ ವ್ಯಾಪ್ತಿಯ ಮಂಡಲ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.

    ವರ್ಗಾವಣೆಗೆ ಸಂಬಂಧಿಸಿದಂತೆ ನರಸಿಂಹ ಅವರ ಕುಟುಂಬ ಮೇಲಾಧಿಕಾರಿಯನ್ನು ಆರೋಪಿಸಿದ್ದು, ಇನ್ಸ್‌ಪೆಕ್ಟರ್ ಸೈದುಲು ಅವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೈದುಲು ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ನನ್ನ ತಂದೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ನರಸಿಂಹ ಅವರ ಮಗ ಆರೋಪಿಸಿದ್ದಾರೆ. ಇದನ್ನೂ ಓದಿ: ವರ್ಗಾವಣೆ ಖಂಡಿಸಿ 40 ಕಿಮೀ ಓಡಿದ ಪೊಲೀಸ್

    ಸೈದುಲು ಹಾಗೂ ಇತರ ಹಿರಿಯ ಅಧಿಕಾರಿಗಳು ಅವರ ಇಚ್ಛೆಗೆ ವಿರುದ್ಧವಾಗಿ ಮಾಮೂಲು ಸಂಗ್ರಹಿಸುವಂತೆ ಪೀಡಿಸುತ್ತಿದ್ದರು ಎಂದು ನರಸಿಂಹ ಅವರ ಮಗ ಆರೋಪಿಸಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ಪೊಲೀಸರು ಹೇಳಿಕೆ ನೀಡಿದ್ದು, ನರಸಿಂಹ ಅವರು ಬೇಜಾವಾಬ್ದಾರಿಯಿಂದಾಗಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ನವೆಂಬರ್ 15ರಂದು ಫಂಕ್ಷನ್ ಹಾಲ್‍ನಲ್ಲಿ ವಿಪರೀತ ಶಬ್ದ ಬರುತ್ತಿರುವ ಬಗ್ಗೆ ದೂರು ಬಂತು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ, ನರಸಿಂಹ ಅವರು ಗಲಾಟೆ ಮಾಡುತ್ತಿದ್ದರು. ಅಲ್ಲದೆ ನರಸಿಂಹ ಗಸ್ತು ಸಿಬ್ಬಂದಿಯನ್ನು ನಿಂದಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ಮದ್ಯದ ಅಮಲಿನಲ್ಲಿದ್ದರು. ಈ ಘಟನೆ ನಂತರ ನರಸಿಂಹ ಅವರನ್ನು ವರ್ಗಾಯಿಸಲು ಹಿರಿಯ ಅಧಿಕಾರಿಗಳು ನಿರ್ಧರಿಸಿದರು ಎಂದು ಆರೋಪಿ ಪೊಲೀಸರು ವಿವರಿಸಿದರು.

    ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಈ ಕುರಿತು ಮಾತನಾಡಿ, ಆರೋಪಿ ಪೊಲೀಸ್ ಸಿಬ್ಬಂದಿಯನ್ನು ಪ್ರಧಾನ ಕಚೇರಿಗೆ ಕರೆಸಿಕೊಳ್ಳುತ್ತೇನೆ. ನರಸಿಂಹ ಅವರ ಕುಟುಂಬದವರ ಜೊತೆ ನಾನು ಮಾತನಾಡಿದ್ದೇನೆ. ಚಿಕಿತ್ಸೆ ವೆಚ್ಚವನ್ನು ನಾವು ನೋಡಿಕೊಳ್ಳುತ್ತೇವೆ. ವರದಿ ಸಲ್ಲಿಸಿದ ನಂತರ ಆರೋಪಗಳ ಕುರಿತು ಪರಿಶೀಲಿಸಲಾಗುವುದು. ಮುಂದಿನ ಕ್ರಮ ಕೈಗೊಳ್ಳುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದರು.

  • ಮಹಿಳಾ ಎಸ್‍ಐ ಕತ್ತಿನ ಪಟ್ಟಿ ಹಿಡಿದು ಎಳೆದಾಡಿ ಎಎಸ್‍ಐ ಹಲ್ಲೆ

    ಮಹಿಳಾ ಎಸ್‍ಐ ಕತ್ತಿನ ಪಟ್ಟಿ ಹಿಡಿದು ಎಳೆದಾಡಿ ಎಎಸ್‍ಐ ಹಲ್ಲೆ

    ಮಂಡ್ಯ: ರಾತ್ರಿ ಗಸ್ತಿಗೆ ಪೊಲೀಸರನ್ನ ನಿಯೋಜಿಸುವ ವಿಚಾರದಲ್ಲಿ ಮಹಿಳಾ ಎಸ್‍ಐ ಮೇಲೆ ಎಎಸ್‍ಐ ಹಲ್ಲೆ ನಡೆಸಿದ್ದಾರೆ.

    ಮಂಡ್ಯ ತಾಲೂಕಿನ ಬಸರಾಳು ಠಾಣೆಯ ಎಸ್‍ಐ ಜಯಗೌರಿ ಮೇಲೆ ಎಎಸ್‍ಐ ಶಿವನಂಜೇಗೌಡ ಹಲ್ಲೆ ನಡೆಸಿದ್ದಾರೆ. ಶನಿವಾರ ಮುಖ್ಯಮಂತ್ರಿಗಳ ಕಾರ್ಯಕ್ರಮದ ಬಂದೋಬಸ್ತ್ ಮುಗಿಸಿ ಸಂಜೆ 4 ಗಂಟೆ ಸುಮಾರಿಗೆ ಎಸ್‍ಐ ಜಯಗೌರಿ ಠಾಣೆಗೆ ವಾಪಸ್ಸಾಗಿದ್ದರು. ಈ ವೇಳೆ ಪೊಲೀಸರನ್ನು ರಾತ್ರಿ ಗಸ್ತಿಗೆ ನಿಯೋಜನೆ ಮಾಡುವ ಸಂಬಂಧ ಇಬ್ಬರ ನಡುವೆ ಗಲಾಟೆ ನಡೆದಿತ್ತು.

    ಈ ವೇಳೆ ಜಯಗೌರಿ ಬಳಿ ಸಿಬ್ಬಂದಿ ಇಲ್ಲವೆಂದು ಎಎಸ್‍ಐ ಶಿವನಂಜೇಗೌಡ ಹೇಳಿದರು. ಈಗ ನೀವು ಮನೆಗೆ ಹೋಗಿ ವಿಶ್ರಾಂತಿ ಪಡೆದು ರಾತ್ರಿ ಗಸ್ತಿಗೆ ಬನ್ನಿ ಅಂತ ಎಸ್‍ಐ ಜಯಗೌರಿ ಹೇಳಿರು. ಇದರಿಂದ ಮತ್ತೆ ಸಿಟ್ಟುಗೊಂಡ ಎಎಸ್‍ಐ ಬೆಳಗ್ಗೆಯಿಂದ ಕರ್ತವ್ಯ ನಿರ್ವಹಿಸಿದ್ದೀನಿ. ರಾತ್ರಿ ಗಸ್ತಿಗೆ ನಾನ್ಯಾಕೆ ಹೋಗಲಿ ಅಂತ ಜಯಗೌರಿ ಜೊತೆಗೆ ಜಗಳಕ್ಕಿಳಿದಿದ್ರು.

    ಇದಾದ ಬಳಿಕ ರೈಟರ್ ಕೊಠಡಿಯಲ್ಲಿ ಯೂನಿಫಾರ್ಮ್‍ಗೆ ಕೈ ಹಾಕಿ ಕತ್ತಿನ ಪಟ್ಟಿ ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಅಂತ ಜಯಗೌರಿ ಆರೋಪಿಸಿದ್ದಾರೆ ಈ ಹಿನ್ನೆಲೆಯಲ್ಲಿ ಎಎಸ್‍ಐ ಶಿವನಂಜೇಗೌಡ ವಿರುದ್ಧ ಐಪಿಸಿ ಸೆಕ್ಷನ್ 323(ಹಲ್ಲೆ), 354(ಕಿರುಕುಳ), 504(ಅವಾಚ್ಯ ನಿಂದನೆ), 506(ಕೊಲೆ ಬೆದರಿಕೆ) ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

  • ಆಲ್ಕೋಮೀಟರ್ ಪರೀಕ್ಷೆಗೊಳಗಾಗಿ ಮುಜುಗರಕ್ಕೀಡಾದ ಪೊಲೀಸಪ್ಪ

    ಆಲ್ಕೋಮೀಟರ್ ಪರೀಕ್ಷೆಗೊಳಗಾಗಿ ಮುಜುಗರಕ್ಕೀಡಾದ ಪೊಲೀಸಪ್ಪ

    ತುಮಕೂರು: ಕರ್ತವ್ಯನಿರತ ಎಎಸ್‍ಐ ನಡುರಸ್ತೆಯಲ್ಲೇ ಆಲ್ಕೋಹಾಲಿಕ್ ಪರೀಕ್ಷೆಗೊಳಗಾಗಿ ಮುಜುಗರಕ್ಕಿಡಾದ ಘಟನೆ ತುಮಕೂರಿನಲ್ಲಿ ನಡೆದಿದೆ.

    ತುಮಕೂರು ಸಂಚಾರಿ ಠಾಣೆಯ ಎಎಸ್‍ಐ ಕಾಂತರಾಜು ಆಲ್ಕೋಹಾಲ್ ಪರೀಕ್ಷೆಗೊಳಗಾದವರು. ಮಧ್ಯಾಹ್ನವೇ ಬೈಕ್ ಸವಾರರನ್ನು ಅಡ್ಡಗಟ್ಟಿ ಎನ್, ಎಷ್ಟು ಕುಡಿದಿದ್ಯಾ ಎಂದು ಎಎಸ್‍ಐ ಕಾಂತರಾಜು ಸುಖಾಸುಮ್ಮನೆ ಕಿರಿಕ್ ಮಾಡುತ್ತಿದ್ದರು ಎನ್ನಲಾಗಿದೆ. ಅದೇ ರೀತಿ ಚಿಕನವಜ್ರ ಗ್ರಾಮದ ಲೋಕೇಶ್ ಎನ್ನುವ ವ್ಯಕ್ತಿಗೂ ಕಿರಿಕ್ ಮಾಡಿದ್ದಾರೆ. ಕಿರುಕುಳ ಸಹಿಸದ ಲೋಕೇಶ್ ನಾನಲ್ಲ. ನೀವು ಕುಡಿದಿದ್ದೀರಾ ಎಂದು ಪ್ರತ್ಯುತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘಿಸಿದ ಪೊಲೀಸ್ರಿಗೂ ಬಿತ್ತು ದಂಡ

    ಹೌದು. ನಾನು 10 ಬಾಟಲ್ ಕುಡಿದಿದ್ದೀನಿ. ಏನಿವಾಗ, ಏನ್ ಮಾಡ್ಕೋತಿಯಾ ಎಂದು ಕಾಂತರಾಜು ದರ್ಪ ತೋರಿದ್ದಾರೆ. ಎಎಸ್‍ಐ ಏರುಧ್ವನಿಯಲ್ಲಿ ಮಾತನಾಡುತ್ತಿರುವುದನ್ನು ಕಂಡು ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದರು. ಬಳಿಕ ಎಎಸ್‍ಐಗೂ ಆಲ್ಕೋಹಾಲ್ ಪರೀಕ್ಷೆ ಮಾಡುವಂತೆ ಎಸ್‍ಪಿಗೆ ಫೋನ್ ಮಾಡಿ ತಿಳಿಸಿದರು. ತಕ್ಷಣ ಸ್ಥಳಕ್ಕೆ ಬಂದ ಸಂಚಾರಿ ಠಾಣಾ ಪಿಎಸ್‍ಐ ಮಂಗಳಮ್ಮ ಎಎಸ್‍ಐ ಕಾಂತರಾಜುಗೆ ಆಲ್ಕೋಮೀಟರ್ ಮೂಲಕ ಪರೀಕ್ಷೆ ಮಾಡಿದ್ದಾರೆ. ಆಲ್ಕೋ ಮೀಟರ್ ಊದುವಲ್ಲೂ ಕಾಂತರಾಜು ಸರಿಯಾಗಿ ಊದದೇ ಸಾರ್ವಜನಿಕರಿಂದ ತರಾಟೆಗೊಳಪಟ್ಟಿದ್ದಾರೆ.

    ಐದಾರು ಬಾರಿ ಊದಿದರೂ ಎರರ್ ಎಂದು ತೋರಿಸುತಿತ್ತು. ಬೈಕ್ ಸವಾರ ಲೋಕೇಶ್ ಹಾಗೂ ಎಎಸ್‍ಐ ಕಾಂತರಾಜು ಇಬ್ಬರಿಗೂ ಪರೀಕ್ಷೆ ನಡೆಸಿ ಇಬ್ಬರೂ ಮದ್ಯ ಕುಡಿದಿಲ್ಲ ಎಂದು ಖಾತ್ರಿಯಾದಾಗ ಪ್ರಕರಣ ಸುಖಾಂತ್ಯಗೊಂಡಿದೆ. ಆದರೆ ನಡುರಸ್ತೆಯಲ್ಲಿ ಪೊಲೀಸ್ ಅಧಿಕಾರಿ ಆಲ್ಕೋಹಾಲ್ ಪರೀಕ್ಷೆಗೊಳಪಟ್ಟು ಮುಜುಗರಕ್ಕೋಳಗಾಗಿದ್ದನ್ನು ಕಂಡು ಸಾರ್ವಜನಿಕರು ನಕ್ಕಿದ್ದಾರೆ.