ನವದೆಹಲಿ: ಮಥುರಾದಲ್ಲಿ ಕೃಷ್ಣ ದೇವಸ್ಥಾನವನ್ನು (Krishna Janmabhoomi in Mathura) ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮಾಹಿತಿ ನೀಡಿದೆ.
ಉತ್ತರ ಪ್ರದೇಶದ ಮೈನ್‌ಪುರಿ ನಿವಾಸಿ ಅಜಯ್ ಪ್ರತಾಪ್ ಸಿಂಗ್ ಅವರು ಮಾಹಿತಿ ಹಕ್ಕು ಕಾಯ್ದೆ (RTI) ಅಡಿ ಕೇಳಿದ ಪ್ರಶ್ನೆಗೆ ಎಎಸ್‌ಐ ಉತ್ತರ ನೀಡಿದೆ.
ಪ್ರಶ್ನೆ ಏನಿತ್ತು?
1670ರಲ್ಲಿ ಕೇಶವದೇವ ದೇವಸ್ಥಾನವನ್ನು ಕೆಡವಿ ಶಾಹಿ ಈದ್ಗಾ ನಿರ್ಮಾಣವಾದ ಬಗ್ಗೆ 1920ರ ನವೆಂಬರ್‌ನಲ್ಲಿ ಬ್ರಿಟಿಷರು (British) ನಡೆಸಿದ ಸರ್ವೆ ಮಾಹಿತಿ ನೀಡುವಂತೆ ಪ್ರಶ್ನೆ ಕೇಳಲಾಗಿತ್ತು.

ಎಎಸ್‌ಐ ಉತ್ತರ ಏನಿತ್ತು?
1920 ರಲ್ಲಿ ಅಲಹಾಬಾದ್‌ನಿಂದ ಬ್ರಿಟಿಷರು ಪ್ರಕಟಿಸಿದ ಗೆಜೆಟ್‌ನಲ್ಲಿ (ರಾಜ್ಯಪತ್ರ) ಲೋಕೋಪಯೋಗಿ ಇಲಾಖೆಯು ಉತ್ತರ ಪ್ರದೇಶದ (Uttar Pradesh) ವಿವಿಧೆಡೆ 39 ಸ್ಮಾರಕಗಳ ಪಟ್ಟಿಯನ್ನು ನೀಡಿದೆ. ಈ ಪಟ್ಟಿಯಲ್ಲಿ ಕತ್ರಾ ಕೇಶವ ದೇವ್ ಭೂಮಿಯಲ್ಲಿರುವ ಶ್ರೀ ಕೃಷ್ಣ ಭೂಮಿಯನ್ನು 37ನೇ ಸ್ಥಾನದಲ್ಲಿ ಉಲ್ಲೇಖಿಸಲಾಗಿದೆ. ಹಿಂದೆ ಕತ್ರಾ ದಿಬ್ಬದ ಮೇಲೆ ಕೇಶವದೇವ್ ದೇವಸ್ಥಾನವಿತ್ತು. ಅದನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಉತ್ತರ ನೀಡಿದೆ.

ಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸ್ ಅಧ್ಯಕ್ಷ ವಕೀಲ ಮಹೇಂದ್ರ ಪ್ರತಾಪ್ ಪ್ರತಿಕ್ರಿಯಿಸಿ, ರಾಜ್ಯಪತ್ರದಲ್ಲಿ ಉಲ್ಲೇಖವಾದ ಹಾಗೂ ಈಗ ಆರ್‌ಟಿಐ ಅಡಿ ನೀಡಿದ ಪ್ರಶ್ನೆಗೆ ಎಎಸ್‌ಐ ನೀಡಿದ ಮಾಹಿತಿಯನ್ನೇ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ಸಾಕ್ಷ್ಯವಾಗಿ ಸೇರಿಸುತ್ತೇವೆ ಎಂದು ಹೇಳಿದ್ದಾರೆ.
ಮಥುರಾದ ಕೇಶವದೇವ ದೇವಾಲಯವನ್ನು ಸುಮಾರು 5000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾಗುತ್ತಿದೆ. ಮಥುರಾ ಶ್ರೀಕೃಷ್ಣನ ಜನ್ಮಸ್ಥಳ. ಶ್ರೀಕೃಷ್ಣನ ಮೊಮ್ಮಕ್ಕಳಾದ ವ್ರಜ ಮತ್ತು ವ್ರಜನಾಭ ರಾಜ ಪರೀಕ್ಷಿತನ ಸಹಾಯದಿಂದ ಮಥುರಾದಲ್ಲಿ ಕೇಶದೇವ ದೇವಾಲಯವನ್ನು ನಿರ್ಮಿಸಿದರು ಎಂಬ ಕಥೆಯಿದೆ.
ಮೊಘಲ್ ರಾಜ ಔರಂಗಜೇಬ್ (Aurangzeb) 1670ರಲ್ಲಿ ಕೇಶವದೇವನ ದೇವಾಲಯವನ್ನು ಕೆಡವಲು ಆದೇಶಿಸಿದ್ದ. ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ನಂತರ ನಿರ್ಮಿಸಲಾದ ಮಸೀದಿಯಲ್ಲಿ ಔರಂಗಜೇಬ ಸ್ವತಃ ನಮಾಜ್ ಮಾಡಿದ್ದ.

ಏನಿದು ವಿವಾದ?
ಮಥುರಾದ ವಿವಾದವು 13.37 ಎಕರೆ ಭೂಮಿಯ ಮಾಲೀಕತ್ವದ ಹಕ್ಕುಗಳಿಗೆ ಸಂಬಂಧಿಸಿದೆ. ಶ್ರೀ ಕೃಷ್ಣ ಜನ್ಮಭೂಮಿ 10.9 ಎಕರೆ ಜಮೀನು ಹೊಂದಿದ್ದರೆ, ಶಾಹಿ ಈದ್ಗಾ ಮಸೀದಿ ಎರಡೂವರೆ ಎಕರೆ ಜಮೀನು ಹೊಂದಿದೆ. ಪ್ರಸ್ತುತ ಈಗ ಇರುವ ಶಾಹಿ ಈದ್ಗಾ ಮಸೀದಿಯನ್ನು ಅಕ್ರಮ ಎಂದು ಘೋಷಿಸಿ ಅದನ್ನು ನೆಲಸಮಗೊಳಿಸಬೇಕು ಮತ್ತು 13.37 ಎಕರೆ ಸಂಪೂರ್ಣ ಭೂಮಿಯನ್ನು ಡಿ-ಫಾಕ್ಟೋ ಮಾಲೀಕ ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ಹಸ್ತಾಂತರಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.
ವಕೀಲರಾದ ರಂಜನಾ ಅಗ್ನಿಹೋತ್ರಿ ಸೇರಿ ಇತರ ಆರು ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಇನ್ನೂ ಅನೇಕ ಮಂದಿ ಅರ್ಜಿ ಸಲ್ಲಿಸಿದ್ದರು. ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್, ಶಾಹಿ ಈದ್ಗಾ ಮಸೀದಿ, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಮತ್ತು ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನವನ್ನು ಪ್ರಕರಣದಲ್ಲಿ ಭಾಗಿ ಮಾಡಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ತ್ತರ ಪ್ರದೇಶದ ಮಥುರಾ ನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು.
ಅರ್ಜಿಯಲ್ಲಿ ಏನಿತ್ತು?
ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1669-70ರಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕತ್ರಾ ಕೇಶವ್ ದೇವ್ ದೇವಸ್ಥಾನದ ಬಳಿ ನಿರ್ಮಿಸಲಾಗಿದೆ. 13.37 ಎಕರೆ ಜಾಗದಲ್ಲಿ ಹರಡಿರುವ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಜಾಗದ ಸಂಪೂರ್ಣ ಹಕ್ಕು ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ನೀಡಬೇಕು. ಹೀಗಾಗಿ ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡಿ ಮಂದಿರಕ್ಕೆ ಭೂಮಿಯನ್ನು ವಾಪಸ್ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.


















