Tag: Ashwattha Narayana

  • ಲಸಿಕೀಕರಣ ಮುಗಿಯುತ್ತಿದ್ದಂತೆ ಕಾಲೇಜು ಆರಂಭ ಕುರಿತು ನಿರ್ಧಾರ: ಡಿಸಿಎಂ

    ಲಸಿಕೀಕರಣ ಮುಗಿಯುತ್ತಿದ್ದಂತೆ ಕಾಲೇಜು ಆರಂಭ ಕುರಿತು ನಿರ್ಧಾರ: ಡಿಸಿಎಂ

    ಬೆಂಗಳೂರು: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಿಬ್ಬಂದಿಯ ಲಸಿಕೀಕರಣ ಕಾರ್ಯಕ್ರಮವನ್ನು ಚುರುಕುಗೊಳಿಸಬೇಕು. ಸಾಧ್ಯವಾದಷ್ಟು ಇದೇ 7ರೊಳಗೆ ಮುಗಿಸಲು ಆದ್ಯತೆ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಎಲ್ಲ ವಿವಿಗಳ ಕುಲಪತಿಗಳಿಗೆ ನಿರ್ದೇಶನ ನೀಡಿದರು.

    ಕೋವಿಡ್ ಲಸಿಕೆಯನ್ನು ಹೆಚ್ಚು ತ್ವರಿತವಾಗಿ ಕೊಡಿಸುವ ಸಂಬಂಧ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ಗುರುವಾರ ವೀಡಿಯೋ ಸಂವಾದ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ರಾಜ್ಯದಲ್ಲಿ ಇನ್ನೆರಡು ತಿಂಗಳ ಒಳಗಾಗಿ ಒಟ್ಟು ಜನಸಂಖ್ಯೆಯಲ್ಲಿ ಶೇ.50ರಷ್ಟು ಜನರಿಗೆ ಲಸಿಕೆ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಭೌತಿಕ ತರಗತಿಗಳು ಆರಂಭಕ್ಕೆ ಮುನ್ನವೇ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕು ಹಾಗೂ ನಿತ್ಯವೂ ಪೂರೈಕೆಯಾಗುವ ಲಸಿಕೆಯನ್ನು ಸಂಬಂಧಿಸಿದ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿಕೊಂಡು ಪಡೆದುಕೊಳ್ಳಬೇಕು ಎಂದರು.

    ಯಾವುದೇ ಕಾರಣಕ್ಕೂ ಶೈಕ್ಷಣಿಕ ಚಟುವಟಿಕೆ ನಿಲ್ಲಬಾರದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಬಾರದು. ಈ ಹಿನ್ನೆಲೆಯಲ್ಲಿ ಲಸಿಕೆಯೇ ಪರಿಹಾರ. ಇದನ್ನು ಎಲ್ಲ ಕುಲಪತಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಡಿಸಿಎಂ ಹೇಳಿದರು. ಎಲ್ಲ ವಿವಿಗಳಲ್ಲಿ ಲಸಿಕೀಕರಣ ಮುಗಿದ ನಂತರ ನೇರ ತರಗತಿಗಳನ್ನು ಆರಂಭ ಮಾಡುವ ಕುರಿತು ನಿರ್ದರಿಸಲಾಗುವುದು., ಈಗ ನಡೆಯುತ್ತಿರುವ ಆನ್‍ಲೈನ್ ತರಗತಿಗಳು ಅಬಾಧಿತ ಎಂದರು.

    ಪದವಿ ವಿದ್ಯಾರ್ಥಿಗಳಿಗೆ ಹೆಲ್ಪ್ ಲೈನ್
    ವಿದ್ಯಾರ್ಥಿಗಳಿಗೆ ಈಗಾಗಲೇ ಡಿಜಿಟಲ್ ವೇದಿಕೆಗಳ ಮೂಲಕ ಎಲ್ಲ ಮಾಹಿತಿ ಸಿಗುತ್ತಿದ್ದಾಗ್ಯೂ ಅವರ ಮತ್ತಷ್ಟು ಅನುಕೂಲಕ್ಕಾಗಿ ಹೆಲ್ಪ್ ಲೈನ್ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಈ ಸಂದರ್ಭದಲ್ಲಿ ಡಿಸಿಎಂ ಹೇಳಿದರು. ಇದನ್ನೂ ಓದಿ: ಗಾಜಿಪುರ ಗಡಿಯಲ್ಲಿ ಧರಣಿ ನಿರತ ರೈತರು, ಬಿಜೆಪಿ ಕಾರ್ಯಕರ್ತ ನಡುವೆ ಸಂಘರ್ಷ

    ಹೆಲ್ಪ್‍ಲೈನ್ ವ್ಯವಸ್ಥೆಯನ್ನು ಆಯಾ ವಿವಿ ವ್ಯಾಪ್ತಿಯಲ್ಲಿ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ಸಂಪೂರ್ಣ ಸಹಕಾರವನ್ನು ಸರ್ಕಾರ ನೀಡುತ್ತದೆ. ಕಾಲ್ ಸೆಂಟರ್ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಾಯ ಆಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಇದೊಂದು ಅತ್ಯುತ್ತಮ ಉಪಕ್ರಮ ಆಗಲಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು. ಇದನ್ನೂ ಓದಿ: ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು: ಸುಧಾಕರ್ ಕಿಡಿ

    ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಡಾ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪ್ರೊ.ಕರಿಸಿದ್ದಪ್ಪ ಸೇರಿದಂತೆ ಮೈಸೂರು, ಮಂಗಳೂರು, ಬೆಳಗಾವಿ, ಶಿವಮೊಗ್ಗ ಮುಂತಾದ ವಿವಿಗಳ ಕುಲಪತಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಬಿಸಿಯೂಟ ಆಹಾರ ಧಾನ್ಯಕ್ಕೆ ಕಳ್ಳರ ಕಾಟ – ಶಾಲೆಯಲ್ಲಿಯೇ ವಾಸ್ತವ್ಯ ಮಾಡಿ ರೇಷನ್ ಕಾಪಾಡಿದ ಹೆಡ್ ಮಾಸ್ಟರ್

  • 80 ಆಮ್ಲಜನಕ ಸಾಂದ್ರಕಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಿದ ಗಿವ್ ಇಂಡಿಯಾ

    80 ಆಮ್ಲಜನಕ ಸಾಂದ್ರಕಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಿದ ಗಿವ್ ಇಂಡಿಯಾ

    – 2,000 ಸಾಂದ್ರಕ ಕೊಡುವ ಭರವಸೆ
    – ಯಲಹಂಕದಲ್ಲಿ ಬೋಯಿಂಗ್‍ನಿಂದ 450 ಬೆಡ್ ಆಕ್ಸಿಜನ್ ಘಟಕ

    ಬೆಂಗಳೂರು: ಗಿವ್ ಇಂಡಿಯಾ ಸಂಸ್ಥೆಯು ಜಿಕೆವಿಕೆ ಕ್ಯಾಂಪಸ್ಸಿನಲ್ಲಿರುವ ಕೋವಿಡ್ ಕೇರ್ ಸೆಂಟರ್‍ಗೆ 80 ಆಮ್ಲಜನಕ ಸಾಂದ್ರಕ (oxygen concentrator) ಗಳನ್ನು ಶನಿವಾರ ಹಸ್ತಾಂತರ ಮಾಡಿದೆ.

    ಸಂಸ್ಥೆಯ ಸಿಇಒ ಅಥುತ್ ಸಟೇಜಾ ಅವರು ಆಮ್ಲಜನಕ ಸಾಂದ್ರಕಗಳನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಜಿಕೆವಿಕೆ ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ಹಸ್ತಾಂತರ ಮಾಡಿದರು.

    ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವತ್ಥನಾರಾಯಣ, ಮುಂದಿನ ದಿನಗಳಲ್ಲಿ ಗಿವ್ ಇಂಡಿಯಾ ಸಂಸ್ಥೆ ಇನ್ನೂ 2000 ಆಮ್ಲಜನಕ ಸಾಂದ್ರಕಗಳನ್ನು ನೀಡಲಿದೆ. ಅವುಗಳನ್ನು ರಾಜ್ಯಾದ್ಯಂತ ಸ್ಥಾಪನೆ ಮಾಡಲಾಗುವ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಅಳವಡಿಸಲಾಗುವುದು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಖಾಸಗಿ ಕ್ಷೇತ್ರವೂ ಹೆಗಲು ಕೊಡುತ್ತಿರುವುದು ಅತ್ಯಂತ ಸಂತಸದ ಸಂಗತಿ. ಈ ನಿಟ್ಟಿನಲ್ಲಿ ಗಿವ್ ಇಂಡಿಯಾದ ಕೊಡುಗೆ ಸ್ಮರಣೀಯವಾಗಿದೆ. ಜಿಕೆವಿಕೆಯ ಕೋವಿಡ್ ಕೇರ್ ಸೆಂಟರ್ ಅತ್ಯುತ್ತಮವಾಗಿದ್ದು, ಯಾರೇ ಸೋಂಕಿತರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯಬಹುದಾಗಿದೆ. ಇಲ್ಲಿಗೆ ಬಂದವರಿಗೆ ನಿಸ್ಸಂಶಯವಾಗಿ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎಂದು ಹೇಳಿದರು.

    ಬೋಯಿಂಗ್‍ನಿಂದ 450 ಬೆಡ್:
    ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಡೆಸಿದ ಮಾತುಕತೆ ಫಲವಾಗಿ ಯಲಹಂಕ ಭಾಗದಲ್ಲಿ 200 ಆಕ್ಸಿಜನ್ ಬೆಡ್‍ಗಳ ಚಿಕಿತ್ಸಾ ಘಟಕವನ್ನು ಬೋಯಿಂಗ್ ಸಂಸ್ಥೆ ಸ್ಥಾಪಿಸಿದ್ದು, ಅದು ಲೋಕಾರ್ಪಣೆಗೆ ಸಿದ್ಧವಾಗಿದೆ. ಇನ್ನೂ 250 ಬೆಡ್‍ಗಳನ್ನು ಮಾಡಿಕೊಡಲು ಅದೇ ಸಂಸ್ಥೆ ಮುಂದೆ ಬಂದಿದೆ. ಅದು ಕೂಡ ಬೇಗ ಕಾರ್ಯಾರಂಭ ಆಗಲಿದೆ ಎಂದು ಡಾ.ಅಶ್ವತ್ಥನಾರಾಯಣ ಅವರು ಮಾಧ್ಯಮಗಳಿಗೆ ತಿಳಿಸಿದರು.

    ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಕರಕುಶಲ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ, ಬಿಬಿಎಂಪಿ ಸಿಎಸ್‍ಆರ್ ಸಲಹೆಗಾರ ಕೆ.ವಿ.ಮಹೇಶ್, ಯಲಹಂಕ ವಲಯದ ಪಾಲಿಕೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.