Tag: Ashwaththa Narayana

  • ಮಾಧ್ಯಮ, ಕೇಬಲ್ ಸಿಬ್ಬಂದಿಗೆ ವ್ಯಾಕ್ಸಿನ್ ಅಭಿಯಾನಕ್ಕೆ ಡಿಸಿಎಂ ಚಾಲನೆ

    ಮಾಧ್ಯಮ, ಕೇಬಲ್ ಸಿಬ್ಬಂದಿಗೆ ವ್ಯಾಕ್ಸಿನ್ ಅಭಿಯಾನಕ್ಕೆ ಡಿಸಿಎಂ ಚಾಲನೆ

    ಬೆಂಗಳೂರು: ಎಲ್ಲ ಬಗೆಯ ಮಾಧ್ಯಮಗಳ ಪ್ರತಿನಿಧಿಗಳು, ಪತ್ರಿಕೆಗಳ ವಿತರಕರು, ಕೇಬಲ್ ಆಪರೇಟರ್ ಗಳು ಸೇರಿ ವಿವಿಧ ವರ್ಗಗಳ ಮುಂಚೂಣಿ ಕಾರ್ಯಕರ್ತರು-ಆದ್ಯತಾ ಗುಂಪಿನ ಜನರಿಗೆ ವ್ಯಾಕ್ಸಿನ್ ನೀಡುವ ಅಭಿಯಾನಕ್ಕೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರು ಚಾಲನೆ ನೀಡಿದರು.

    ನಗರದ ಮಲ್ಲೇಶ್ವರ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಈ ಲಸಿಕೆ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಈಗಾಗಲೇ ಫ್ರಂಟ್ ಲೈನ್ ಕಾರ್ಯಕರ್ತರಿಗೆ ಅದರಲ್ಲೂ ಮುಖ್ಯವಾಗಿ ಟೆಲಿಕಾಂ, ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಸಿಬ್ಬಂದಿಯ ಜೊತೆಗೆ ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಸಿಬ್ಬಂದಿಗೆ ಕೇಂದ್ರದ ಮಾರ್ಗಸೂಚಿಯಂತೆ ಈ ಲಸಿಕೆ ಕೊಡಲಾಗುತ್ತಿದೆ ಎಂದರು.

    ಇವರೆಲ್ಲರೂ ಜನರ ಸಂಪರ್ಕದಲ್ಲಿ ಹೆಚ್ಚು ಇರುತ್ತಾರೆ. ಹೀಗಾಗಿ ಇವರಿಗೆ ಸೋಂಕಿನ ಅಪಾಯ ಹೆಚ್ಚು. ಆದ್ದರಿಂದ ಆದ್ಯತೆಯ ಮೇಲೆ ಇವರೆಲ್ಲರಿಗೂ ಲಸಿಕೆ ಕೊಡಲಾಗುತ್ತಿದೆ. ರಾಜ್ಯಾದ್ಯಂತ ಈ ಗುಂಪಿಗೆ ಲಸಿಕಾ ಅಭಿಯಾನ ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದರು.  ಇದನ್ನು ಓದಿ: ರಾಯಚೂರಿನಲ್ಲಿ 20 ಕೆ.ಎಲ್ ಆಮ್ಲಜನಕ ಪ್ಲಾಂಟ್ ಆರಂಭ: ಡಿಸಿಎಂ ಚಾಲನೆ

    ಈ ವೇಳೆ ಶಾಸಕ ರವಿಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಾಂದ ತಗಡೂರು, ಕೇಬಲ್ ಆಪರೇಟರ್ಸ್ ಸಂಘದ ರಾಮ ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.

  • ಫಲಿತಾಂಶದಿಂದ ಎದೆಗುಂದಿಲ್ಲ, 5 ವರ್ಷಗಳ ನಂತರ ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಡಿಸಿಎಂ ವಿಶ್ವಾಸ

    ಫಲಿತಾಂಶದಿಂದ ಎದೆಗುಂದಿಲ್ಲ, 5 ವರ್ಷಗಳ ನಂತರ ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಡಿಸಿಎಂ ವಿಶ್ವಾಸ

    ಬೆಂಗಳೂರು: ಕೇರಳದ ವಿಧಾನಸಭೆ ಚುನಾವಣೆ ಫಲಿತಾಂಶದಿಂದ ಬಿಜೆಪಿ ನಿರಾಶೆಗೊಂಡಿಲ್ಲ. 2024ರ ಲೋಕಸಭೆ ಹಾಗೂ 2026ರ ವಿಧಾನಸಭೆ ಚುನಾವಣೆಯಲ್ಲಿ ಆ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡುತ್ತೇವೆ ಎಂದು ಕೇರಳ ಬಿಜೆಪಿಯ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥನಾರಾಯಣ ಅಚಲ ವಿಶ್ವಾಸ ವ್ಯಕ್ತಪಡಿಸಿದರು.

    ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಂದಿನ ಐದು ವರ್ಷಗಳ ನಂತರ ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಈ ಮಾತನ್ನು ಇವತ್ತು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ. ಅದಕ್ಕೆ ಅಗತ್ಯವಾದ ಎಲ್ಲ ರೀತಿಯಲ್ಲೂ ಪಕ್ಷವನ್ನು ಬಲಪಡಿಸಲಾಗುವುದು ಎಂದರು.

    ಕೇರಳದಲ್ಲಿ ಕೆಲ ಕಾರಣಗಳಿಂದ ಪಿಣರಾಯಿ ವಿಜಯನ್ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಾರೆ. ಹಾಗೇ ನೋಡಿದರೆ ದೇಶದಲ್ಲಿ ಕಮ್ಯುನಿಸ್ಟ್ ಪಕ್ಷಗಳ ಕಾಲ ಮುಗಿದಿದೆ. ಪಶ್ಚಿಮ ಬಂಗಾಳದಲ್ಲಿ ಆ ಪಕ್ಷ ಕಣ್ಮರೆಯಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೂಡ ಕೊನೆಗಾಲದಲ್ಲಿದೆ. ಮುಂದಿನ ಚುನಾವಣೆ ಹೊತ್ತಿಗೆ ಬಿಜೆಪಿಯನ್ನು ಬಲಪಡಿಸಿ ಅಧಿಕಾರಕ್ಕೆ ತರುವ ಎಲ್ಲ ಕೆಲಸಗಳನ್ನು ಮಾಡಲಾಗುವುದು ಎಂದು ಡಿಸಿಎಂ ಹೇಳಿದರು.

    ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಾಗಲಿಲ್ಲ ಎನ್ನುವುದಕ್ಕಿಂತ ಕೇರಳ ಜನತೆ ಕೊಟ್ಟ ಜನಾದೇಶವನ್ನು ನಾವು ಗೌರವಿಸುತ್ತೇವೆ. ಆ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಚುನಾವಣೆ ಅಖಾಡಕ್ಕೆ ಇಳಿದಿತ್ತು. ನಮ್ಮ ಪಕ್ಷದ ಶಕ್ತಿಯ ಜೊತೆಗೆ, ಇತರೆ ಪಕ್ಷಗಳ ಶಕ್ತಿ-ದೌರ್ಬಲ್ಯಗಳನ್ನು ನಾವು ಅರಿತುಕೊಂಡಿದ್ದೇವೆ. ಮುಂದಿನ ಚುನಾವಣೆಗೆ ಬಿಜೆಪಿ ಸರ್ವ ಸನ್ನದ್ಧವಾಗಲಿದೆ ಎಂದು ತಿಳಿಸಿದರು.

    ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿದೆ. ಕಳೆದ ಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲಿ ಗೆದ್ದಿತ್ತು. 2021ನೇ ಚುನಾವಣೆಯಲ್ಲಿ 75 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ. ಎಲ್ಲಿಯ 3 ಕ್ಷೇತ್ರ, ಎಲ್ಲಿಯ 75 ಒಂದಂಕಿಯಿಂದ ಎರಡಂಕಿ ಸಾಧನೆ ಚಿಕ್ಕದೇನಲ್ಲ. 2026ರ ಚುನಾವಣೆಗೆ ಇದು ಅತ್ಯುತ್ತಮ ಮುನ್ನಡಿಯಾಗಿದೆ ಎಂದರು.

    ಅಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ತಮಿಳುನಾಡಿನಲ್ಲಿ ನಾವು ಕಳೆದ ಚುನಾವಣೆಯಲ್ಲಿ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ. ಆದರೆ, ಪ್ರಸಕ್ತ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ಪುದುಚೇರಿಯಲ್ಲೂ ಪಕ್ಷ ಅತ್ಯುತ್ತಮ ಸಾಧನೆ ಮಾಡಿದೆ ಎಂದು ತಿಳಿಸಿದರು.

    ಕಾಂಗ್ರೆಸ್ ಸ್ಥಾನ ಬಿಜೆಪಿಗೆ ಸಿಕ್ಕಿದೆ: ವಿಧಾನಸಭೆ ಉಪ ಚುನಾವಣೆ ನಡೆದ ಎರಡು ಕ್ಷೇತ್ರಗಳ ಪೈಕಿ ಬಸವ ಕಲ್ಯಾಣದಲ್ಲಿ ಬಿಜೆಪಿ ಗೆದ್ದಿದೆ. ಮಸ್ಕಿಯಲ್ಲಿ ಸೋತಿರುವುದಕ್ಕೆ ನಿರಾಶೆ ಇಲ್ಲ. ಯಾಕೆಂದರೆ, ಇವೆರಡೂ ಕ್ಷೇತ್ರಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದವು ಎಂದ ಅವರು, ಮಸ್ಕಿ ಸೋಲು ಒಬ್ಬರ (ಬಿ.ವೈ.ವಿಜಯೇಂದ್ರ) ತಲೆಗೆ ಕಟ್ಟುವ ಅಗತ್ಯವಿಲ್ಲ. ನಮ್ಮ ಪಕ್ಷದಲ್ಲಿ ಹಾಗೆ ಮಾಡುವುದಿಲ್ಲ. ಚುನಾವಣೆಯಲ್ಲಿ ಇಡೀ ಸಂಘಟನೆ ತೊಡಗಿಸಿಕೊಳ್ಳುತ್ತದೆ. ಸೋಲು ಗೆಲುವು ಎನ್ನುವುದು ಎಲ್ಲರಿಗೂ ಸಂಬಂಧಿಸಿದ್ದು, ಅದಕ್ಕೆ ಎಲ್ಲರೂ ಹೊಣೆಗಾರರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಕೋವಿಡ್‍ಗೂ ಫಲಿತಾಂಶಕ್ಕೂ ಸಂಬಂಧ ಇಲ್ಲ: ಮಸ್ಕಿ ಸೋಲು ಹಾಗೂ ಸರಕಾರದ ಕೋವಿಡ್ ನಿರ್ವಹಣೆಗೆ ಸಂಬಂಧ ಇಲ್ಲ. ರಾಜ್ಯಕ್ಕೆ ಮಾತ್ರ ಸೋಂಕು ಬಂದಿಲ್ಲ. ಇಡೀ ಜಗತ್ತಿಗೇ ಸೋಂಕು ಬಂದಿದೆ. ಎಲ್ಲೆಡೆ ಈ ಮಹಾಮಾರಿಯನ್ನು ನಿರ್ವಹಣೆ ಮಾಡಲು ಹೆಣಗಾಡಲಾಗುತ್ತಿದೆ. ಹೀಗಾಗಿ ಕೋವಿಡ್‍ಗೂ ಚುನಾವಣೆಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದು ಡಿಸಿಎಂ ಅಭಿಪ್ರಾಯಪಟ್ಟರು.

  • ಇಂಗ್ಲೆಂಡ್‍ನ ವಿಶ್ವ ಒಕ್ಕಲಿಗರ ಪರಿಷತ್‍ಗೆ ಡಿಸಿಎಂ ಚಾಲನೆ

    ಇಂಗ್ಲೆಂಡ್‍ನ ವಿಶ್ವ ಒಕ್ಕಲಿಗರ ಪರಿಷತ್‍ಗೆ ಡಿಸಿಎಂ ಚಾಲನೆ

    ಬೆಂಗಳೂರು/ಲಂಡನ್: ಇಂಗ್ಲೆಂಡ್‍ನಲ್ಲಿ ನೆಲೆಸಿರುವ ಒಕ್ಕಲಿಗ ಸಮುದಾಯದವರು ಸ್ಥಾಪನೆ ಮಾಡಿರುವ ವಿಶ್ವ ಒಕ್ಕಲಿಗರ ಪರಿಷತ್ತನ್ನು ಶನಿವಾರ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಉದ್ಘಾಟಿಸಿದರು.

    ವರ್ಚುಯಲ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದಲೇ ಪಾಲ್ಗೊಂಡ ಅವರು, ಉದ್ಘಾಟನಾ ಸಮಾರಂಭದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಉತ್ಸವಕ್ಕೂ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, ಇಂಗ್ಲೆಂಡ್ ಸೇರಿದಂತೆ ಜಗತ್ತಿನ ನಾನಾ ದೇಶಗಳಲ್ಲಿ ನೆಲೆಸಿರುವ ಒಕ್ಕಲಿಗ ಬಂಧುಗಳ ಸಾಧನೆಯಿಂದ ಸ್ವದೇಶದಲ್ಲಿರುವ ನಮಗೆಲ್ಲರಿಗೂ ಹೆಮ್ಮೆಯಾಗಿದೆ. ಹುಟ್ಟಿದ ನೆಲದಲ್ಲಿ ಉದ್ಯಮ ಸ್ಥಾಪಿಸುವುದೋ ಅಥವಾ ಯಾವುದಾದರೂ ಉಪಯುಕ್ತ ಯೋಜನೆ ಹಾಕಿಕೊಂಡರೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

    ಕೃಷಿ ಮೂಲಕ ಅನ್ನ ನೀಡುವ ಒಕ್ಕಲಿಗರು ಎಲ್ಲರಿಗೂ ಆದರ್ಶವಾಗಿದ್ದಾರೆ. ಇಂಥ ಸಮುದಾಯದಲ್ಲೂ ಕಷ್ಟದಲ್ಲಿರುವವರು ಇದ್ದಾರೆ. ಅಂಥವರ ನೆರೆವಿಗೆ ತಾವು ಧಾವಿಸಬೇಕು. ಸಮುದಾಯವನ್ನು ಎಲ್ಲ ರೀತಿಯಲ್ಲೂ ಸಬಲೀಕರಣ ಮಾಡಬೇಕಿದೆ. ಅದಕ್ಕಾಗಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ ಎಂದು ಅನಿವಾಸಿ ಒಕ್ಕಲಿಗರಿಗೆ ಕರೆ ನೀಡಿದರು.

    ಲಂಡನ್‍ನಲ್ಲಿ ವಿಶ್ವ ಒಕ್ಕಲಿಗರ ಪರಿಷತ್ತು ಸ್ಥಾಪನೆ ಅತ್ಯಂತ ಅರ್ಥಪೂರ್ಣ ಕೆಲಸವಾಗಿದೆ. ಈ ಮೂಲಕ ಭವಿಷ್ಯ ಅರಸಿಕೊಂಡು ಇಂಗ್ಲೆಂಡ್‍ಗೆ ಬರುವ ತಾಯ್ನಾಡಿನ ಪ್ರತಿಭೆಗಳಿಗೆ ಪರಿಷತ್ತು ನೆರವಾಗಲಿ ಎಂಬ ಆಶಯ ನನ್ನದು ಎಂದರು. ಬಿಜೆಪಿ ಮುಖಂಡರಾದ ಅಶ್ವತ್ಥ ನಾರಾಯಣ ಹಾಜರಿದ್ದರು.

  • ಡಿಜಿಟಲ್ ಕಲಿಕೆಗೆ ಪ್ರೋತ್ಸಾಹ – ಆರು ತಿಂಗಳಲ್ಲಿ 8,000 ಸ್ಮಾರ್ಟ್‍ಕ್ಲಾಸ್ ರೂಮ್

    ಡಿಜಿಟಲ್ ಕಲಿಕೆಗೆ ಪ್ರೋತ್ಸಾಹ – ಆರು ತಿಂಗಳಲ್ಲಿ 8,000 ಸ್ಮಾರ್ಟ್‍ಕ್ಲಾಸ್ ರೂಮ್

    ಬೆಂಗಳೂರು: ಕೋವಿಡೋತ್ತರ ಕಾಲದಲ್ಲಿ ಡಿಜಿಟಲ್ ಕಲಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇನ್ನೂ ಎರಡು ತಿಂಗಳಲ್ಲಿ ರಾಜ್ಯದ ಉನ್ನತ ಶಿಕ್ಷಣ ವ್ಯಾಪ್ತಿಯಲ್ಲಿ ಶಿಕ್ಷಣ ಸಂಸ್ಥೆಗಳ 2,500 ತರಗತಿ ಕೊಠಡಿಗಳನ್ನು ಸ್ಮಾರ್ಟ್‍ಕ್ಲಾಸ್ ರೂಮ್‍ಗಳನ್ನಾಗಿ ಪರಿವರ್ತನೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದ್ದಾರೆ.

    ಬೆಂಗಳೂರು ಕಲಾ ಕಾಲೇಜ್‍ನಲ್ಲಿ ಗುರುವಾರ ನೂತನ ಜಿಮ್ ಹೌಸ್ ಹಾಗೂ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಕೋವಿಡ್ ಕಾರಣಕ್ಕೆ ಕಲಿಕೆಯ ಮಾದರಿಗಳೇ ಬದಲಾಗಿವೆ. ಹೀಗಾಗಿ ಸರಕಾರ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಲಾರ್ಟ್‍ಕ್ಲಾಸ್ ರೂಮ್ ಪರಿಕಲ್ಪನೆಯನ್ನು ರೂಪಿಸಲಾಗಿದೆ. 2,500 ತರಗತಿ ಕೊಠಡಿಗಳು ಸ್ಮಾರ್ಟ್ ಕ್ಲಾಸ್‍ಗಳಾದ ನಂತರ ಮುಂಬರುವ 6 ತಿಂಗಳಲ್ಲಿ 5,500 ತರಗತಿ ಕೊಠಡಿಗಳನ್ನು ಸ್ಮಾರ್ಟ್‍ಕ್ಲಾಸ್ ರೂಮ್‍ಗಳಾಗಿ ರೂಪಿಸಲಾಗುವುದು ಎಂದರು.

    ಹೈಸ್ಪೀಡ್ ಇಂಟರ್‍ನೆಟ್, ಅತ್ಯಾಧುನಿಕ ಗುಣಮಟ್ಟದ ಟ್ಯಾಬ್ ನೀಡುವುದು ಹಾಗೂ ಸಮಗ್ರ ಕಲಿಕಾ ವ್ಯವಸ್ಥೆ (ಎಲ್‍ಎಂಎಸ್)ಯನ್ನು ಜಾರಿ ಮಾಡುವ ಮೂಲಕ ಸ್ಮಾರ್ಟ್‍ಕ್ಲಾಸ್ ರೂಮ್ ವ್ಯವಸ್ಥೆಯನ್ನು ಪರಿಪೂರ್ಣಗೊಳಿಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಕಲಿಕೆಯ ಗತಿಯೇ ಬದಲಾಗುತ್ತದೆ. ಗುಣಮಟ್ಟದ ಕಲಿಕೆಯ ಕನಸು ಈ ಮೂಲಕ ಸಾಕಾರವಾಗುತ್ತದೆ ಎಂದು ತಿಳಿಸಿದರು.

    ಸಮಗ್ರ ಕಲಿಕಾ ವ್ಯವಸ್ಥೆ (ಎಲ್‍ಎಂಎಸ್): ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿ ಮಾಡಲಾಗಿರುವ ಸಮಗ್ರ ಕಲಿಕಾ ವ್ಯವಸ್ಥೆಯು ಕ್ರಾಂತಿಕಾರಕ. ಇಡೀ ದೇಶದಲ್ಲಿ ಇಂಥ ವ್ಯವಸ್ಥೆ ಯಾವುದೇ ರಾಜ್ಯದಲ್ಲೂ ಇಲ್ಲ. ನಮ್ಮದೇ ಮಾನವ ಸಂಪನ್ಮೂಲ ಬಳಸಿಕೊಂಡು ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ಎಲ್ಲೇ ಇದ್ದರೂ ಟ್ಯಾಬ್ ಮತ್ತು ಇಂಟರ್‍ನೆಟ್ ಇದ್ದರೆ ಕಲಿಯಬಹುದು. ಜತೆಗೆ, ವಿದ್ಯಾರ್ಥಿ ಕಲಿಕೆಯ ಮಟ್ಟವನ್ನೂ ಬೋಧಕರು ಟ್ರ್ಯಾಕ್ ಮಾಡಬಹುದು. ಈ ಎಲ್ಲ ಉಪಕ್ರಮಗಳ ಮೂಲಕ ಸರಕಾರಿ ಕಾಲೇಜುಗಳು ಖಾಸಗಿ ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಜತೆ ಮಾತ್ರವಲ್ಲ, ಜಾಗತಿಕ ಶಿಕ್ಷಣ ಸಂಸ್ಥೆಗಳ ಜತೆಗೂ ಪೈಪೋಟಿ ನಡೆಸಲು ಸಜ್ಜಾಗುತ್ತಿವೆ. ಅದಕ್ಕೆ ಅಗತ್ಯವಾದ ಎಲ್ಲ ಉಪ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ ಎಂದು ಹೇಳಿದರು.

    ಪಠ್ಯ ಆಯ್ಕೆಯಲ್ಲಿ ಸ್ವಾತಂತ್ರ್ಯ: ಪ್ರಸಕ್ತ ಸಾಲಿನಿಂದಲೇ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದೆ. ತದ ನಂತರ ವಿದ್ಯಾರ್ಥಿಗಳು ಪೂರ್ವ ನಿಗದಿ ಮಾಡಿದ ಪಠ್ಯ ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಇರುವುದಿಲ್ಲ. ಅಂದರೆ ವಿದ್ಯಾರ್ಥಿಗಳ ಮೇಲೆ ಪಠ್ಯವನ್ನು ಹೇರುವ ವ್ಯವಸ್ಥೆ ಅಳಿಯಲಿದೆ. ಬದಲಿಗೆ ವಿದ್ಯಾರ್ಥಿಗಳೇ ತಮಗೆ ಆಸಕ್ತಿ ಇರುವ ಪಠ್ಯವನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡುವ ವ್ಯವಸ್ಥೆ ಬರಲಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಸರಕಾರ ಮಾಡಿಕೊಂಡಿದೆ ಎಂದು ಡಿಸಿಎಂ ಪ್ರಕಟಿಸಿದರು.

    ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ನಂ.1: ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ನಗರ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೇವಲ ಔಷಧ ಕ್ಷೇತ್ರವೊಂದರಲ್ಲೇ ಪ್ರತಿ ವರ್ಷ 5 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ. ಭವಿಷ್ಯ ನಿಧಿ ಖಾತೆಗಳಲ್ಲಿ ವರ್ಷಕ್ಕೆ 5 ಲಕ್ಷ ಜನ ನೋಂದಣಿ ಆಗುತ್ತಿದ್ದಾರೆ. ಜೊತೆಗೆ ಇತರೆ ಕ್ಷೇತ್ರಗಳಲ್ಲಿ ಎರಡು ಲಕ್ಷದಷ್ಟು ಉದ್ಯೋಗ ಸೃಷ್ಟಿ ಆಗುತ್ತಿದೆ. ವರ್ಷಕ್ಕೆ ಒಟ್ಟು 7 ಲಕ್ಷ ಉದ್ಯೋಗ ಸೃಷ್ಟಿ ನಮ್ಮ ಬೆಂಗಳೂರಿನಲ್ಲಿ ಆಗುತ್ತಿದೆ. ಬೆಂಗಳೂರು ನಾಲೆಜ್ ಸಿಟಿ ಮಾತ್ರವಲ್ಲದೆ ಆವಿಷ್ಕಾರಕ್ಕೂ ಹೆಚ್ಚು ಒತ್ತಾಸೆ ನೀಡುತ್ತಿರುವುದರಿಂದ ಇದು ಸಾಧ್ಯವಾಗಿದೆ ಎಂದರು.

    ಅಲ್ಲದೆ ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಹತ್ತು ದಶಲಕ್ಷ ಉದ್ಯೋಗಳನ್ನು ಸೃಷ್ಟಿ ಮಾಡಲು ಗುರಿ ಹೊಂದಲಾಗಿದೆ. ಅದಕ್ಕೆ ಪೂರಕವಾಗಿ ದಿನದ 24 ಗಂಟೆ ವಿದ್ಯುತ್ ಹಾಗೂ ಎಲ್ಲ ಜಾಗದಲ್ಲೂ ಹೈಸ್ಪೀಡ್ ಇಂಟರ್‍ನೆಟ್ ಸಿಗುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

    ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಈ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಹಾಗೂ ಉದ್ಯಮಶೀಲತೆಯ ವಾತಾವರಣವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಆದರೆ ಬೆಂಗಳೂರಿಗೆ ಮಾತ್ರ ಇದು ಸಾಧ್ಯವಾಗುತ್ತಿದೆ. ನಮ್ಮ ರಾಜ್ಯದಲ್ಲಿ ಅತ್ಯುತ್ತಮ ಪ್ರತಿಭೆಗಳು ಹೊರ ಹೊಮ್ಮುತ್ತಿರುವ ಜೊತೆಗೆ ಹೊರ ರಾಜ್ಯಗಳಿಂದ ಪ್ರತಿಭಾವಂತ ಯುವಕರು ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ನುಡಿದರು.

    ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಬಾಲಚಂದ್ರ, ಸರಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಟಿ.ಎಂ.ಮಂಜುನಾಥ, ಕಾಲೇಜಿನ ಪ್ರಾಂಶುಪಾಲ ಪ್ರೊ.ಕೋಡದ ರಾಜಶೇಖರಪ್ಪ, ಡಾ.ಶಶಿಕಲಾ ಮುಂತಾದವರು ಭಾಗಿಯಾಗಿದ್ದರು.

  • ನಮ್ಮ ಪಕ್ಷದಲ್ಲಿ ಇಲ್ಲದವರು ಟಿಪ್ಪು ಜಯಂತಿ ಆಚರಿಸುತ್ತಾರೆ- ಬಚ್ಚೇಗೌಡ ಪುತ್ರನಿಗೆ ಡಿಸಿಎಂ ತಿರುಗೇಟು

    ನಮ್ಮ ಪಕ್ಷದಲ್ಲಿ ಇಲ್ಲದವರು ಟಿಪ್ಪು ಜಯಂತಿ ಆಚರಿಸುತ್ತಾರೆ- ಬಚ್ಚೇಗೌಡ ಪುತ್ರನಿಗೆ ಡಿಸಿಎಂ ತಿರುಗೇಟು

    – ಬಿಜೆಪಿಯಲ್ಲಿದ್ದು ಶರತ್ ಟಿಪ್ಪು ಜಯಂತಿ ಆಚರಿಸಲ್ಲ
    – ಸರ್ಕಾರವನ್ನೇ ಉಳಿಸಿಕೊಳ್ಳದವರು ಉಪಚುನಾವಣೆ ಗೆಲ್ತಾರಾ?

    ಉಡುಪಿ: ನಮ್ಮ ಪಕ್ಷದ ಯಾವುದೇ ನಾಯಕರು, ಕಾರ್ಯಕರ್ತರು ನಾವು ಟಿಪ್ಪು ಜಯಂತಿಯನ್ನು ಆಚರಿಸುವುದಿಲ್ಲ. ನಮ್ಮ ಪಕ್ಷದವರಲ್ಲದವರು ಮಾತ್ರ ಟಿಪ್ಪು ಜಯಂತಿ ಆಚರಿಸಲು ಸಾಧ್ಯ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಅವರಿಗೆ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ತಿರುಗೇಟು ನೀಡಿದ್ದಾರೆ.

    ತುಮಕೂರು ಬಿಜೆಪಿ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಅವರ ಟಿಪ್ಪು ಜಯಂತಿ ಆಚರಿಸುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಟಿಪ್ಪು ಜಯಂತಿ ಆಚರಿಸಲ್ಲ. ನಮ್ಮ ಪಕ್ಷದಲ್ಲಿ ಇಲ್ಲದವರು ಟಿಪ್ಪು ಜಯಂತಿ ಆಚರಿಸ್ತಾರೆ. ಈ ಬಗ್ಗೆ ಬಿಜೆಪಿಗೆ ಸ್ಪಷ್ಟತೆ ಇದೆ. ನಮ್ಮ ಪಕ್ಷದ ಯಾವುದೇ ನಾಯಕರು, ಕಾರ್ಯಕರ್ತರು ನಾವು ಟಿಪ್ಪು ಜಯಂತಿಯನ್ನು ಆಚರಿಸಲ್ಲ. ನಮ್ಮ ಪಕ್ಷದವರಲ್ಲದವರು ಮಾತ್ರ ಟಿಪ್ಪು ಜಯಂತಿ ಆಚರಿಸಲು ಸಾಧ್ಯ ಎಂದರು.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜಾಮೀನಿನ ಮೇಲೆ ಹೊರಗಡೆ ಬಂದಿರುವುದಕ್ಕೂ ಉಪಚುನಾವಣೆಗೂ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ. ಅವರು ಇದ್ದ ಸರ್ಕಾರವನ್ನೇ ಉಳಿಸಿಕೊಂಡಿಲ್ಲ. ಈಗ ಉಪಚುನಾವಣೆಯಲ್ಲಿ ಗೆಲ್ಲಲು ಕಾರಣರಾಗುತ್ತಾರಾ ಎಂದು ಅಶ್ವಥ್ ನಾರಾಯಣ ಟಾಂಗ್ ಕೊಟ್ಟರು.

    ಇಲಿ ಬಂದರೆ ಹುಲಿ ಬಂತು ಅನ್ನಲಾಗುತ್ತಿದೆ. ಅವರ ಬಿಡುಗಡೆಗೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ. ಎಲ್ಲೂ ಸಲ್ಲದವರು ಈಗ ಉಪಚುನಾವಣೆಯಲ್ಲಿ ಸಲ್ಲುತ್ತಾರಾ? ಎಂದು ಕುಟುಕಿದರು. ಒಕ್ಕಲಿಗ ಸಮಾಜಕ್ಕೆ ಭ್ರಷ್ಟಾಚಾರ ರಹಿತ ಆಡಳಿತ ಬೇಕು. ಭ್ರಷ್ಟಾಚಾರ ಪೂರಕ ಸಮಾಜ ಕಟ್ಟವುದು ಅಸಾಧ್ಯ. ಜಾತಿಯ ಹಿನ್ನೆಲೆಯಲ್ಲಿ ರಕ್ಷಣೆ ಪಡೆಯುವುದು ಸರಿಯಲ್ಲ. ವ್ಯಕ್ತಿಗತ ರಾಜಕೀಯಕ್ಕೆ ನಾವು ಒತ್ತು ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಒಂದು ಕಡೆ ಡಿಸಿಎಂ ಲಕ್ಷ್ಮಣ ಸವದಿ ಅನರ್ಹ ಶಾಸಕರಿಗೂ-ಬಿಜೆಪಿಗೂ ಸಂಬಂಧವೇ ಇಲ್ಲ ಎಂದು ಹೇಳಿದರೆ ಇನ್ನೊಂದೆಡೆ ಡಿಸಿಎಂ ಅಶ್ವತ್ಥ ನಾರಾಯಣ ಕೆಟ್ಟ ಸಮ್ಮಿಶ್ರ ಸರಕಾರ ಪತನಗೊಂಡಿದ್ದು ಅನರ್ಹ ಶಾಸಕರ ಕೃಪೆಯಿಂದ ಆ ಶಾಸಕರಿಗೆ ಮಾನ್ಯತೆ ಸಿಗದೆ ಮತ್ಯಾರಿಗೆ ಸಿಗಬೇಕು ಎಂದು ಹೇಳಿದರು.

    ಅನರ್ಹ ಶಾಸಕರು ಸಮಾಜದ ರಕ್ಷಣೆಗೆ ಬಂದವರು. ಅವರು ಸತ್ಕಾರ್ಯ ಮಾಡಿದವರು. ಈವರೆಗೆ ಬಿಜೆಪಿ ಪಕ್ಷ ಸೇರಿಲ್ಲ, ಸೇರ್ಪಡೆ ನಂತರ ಯಾರಿಗೆ ಟಿಕೆಟ್ ಕೊಡಬೇಕು ಅಂತ ಪಕ್ಷ ನಿರ್ಧರಿಸಲಾಗುವುದು. ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಸಂಪೂರ್ಣ ಅಸ್ಥಿತ್ವ ಕಳೆದುಕೊಂಡಿವೆ. ಇವರ ಒಳಜಗಳ, ಸಮಾಜ ಒಡೆಯುವ ಕಾರ್ಯಕ್ಕೆ ಜನ ಬೇಸತ್ತಿದ್ದಾರೆ. ಬಲಿಷ್ಠ ವಿಪಕ್ಷವಾಗಿ ಕೆಲಸ ಮಾಡುತ್ತಿಲ್ಲ ಹೀಗಾಗಿ ಉಪಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಉಡುಪಿ ಪ್ರವಾಸದಲ್ಲಿದ್ದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಕೃಷ್ಣಮಠಕ್ಕೆ ಭೇಟಿ ನೀಡಿದರು. ಈ ವೇಳೆ ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದರು. ಕೆಲ ಹೊತ್ತು ಮಠದಲ್ಲೇ ಕಳೆದ ಅವರು ಗರ್ಭಗುಡಿಯ ಚಿನ್ನದ ಹೊದಿಕೆಯನ್ನು ವೀಕ್ಷಿಸಿದರು. ನಂತರ ಪರ್ಯಾಯ ಪಲಿಮಾರು ವಿದ್ಯಾಧೀಶತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿದರು. ಇದೇ ಸಂದರ್ಭದಲ್ಲಿ ಡಿಸಿಎಂ ಬಳಿ ಪರ್ಯಾಯ ಪಲಿಮಾರು ಶ್ರೀಗಳು ಸಂಸ್ಕೃತ ಕಾಲೇಜಿನ ಬೇಡಿಕೆಯಿಟ್ಟರು. ಈ ವೇಳೆ ಕಾಪು ಶಾಸಕ ಲಾಲಾಜೀ ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್ ಇದ್ದರು.

  • ಅಳುವ ಮೂಲಕ ಡಿಕೆಶಿ ಅನುಕಂಪ ಗಿಟ್ಟಿಸುವ ಕೆಲಸ ಮಾಡ್ತಿದ್ದಾರೆ- ಅಶ್ವಥ್ ನಾರಾಯಣ

    ಅಳುವ ಮೂಲಕ ಡಿಕೆಶಿ ಅನುಕಂಪ ಗಿಟ್ಟಿಸುವ ಕೆಲಸ ಮಾಡ್ತಿದ್ದಾರೆ- ಅಶ್ವಥ್ ನಾರಾಯಣ

    ಬೆಂಗಳೂರು: ಭಾವನಾತ್ಮಕವಾಗಿ ಅಳುವ ಮೂಲಕ ಅನುಕಂಪ ಗಿಟ್ಟಿಸುವ ಕೆಲಸವನ್ನು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹರಿಹಾಯ್ದಿದ್ದಾರೆ.

    ಸದಾಶಿವನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮನೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ರಾಜಕೀಯ ಮಾಡುವುದನ್ನು ಬಿಡಬೇಕು. ಯಾವುದೇ ಪಕ್ಷವನ್ನು ದೂಷಿಸುವ ಕೆಲಸ ಮಾಡಬಾರದು. ಅವರು ನಡೆದುಕೊಂಡು ಬಂದಿರುವ ರೀತಿ, ಕಾನೂನು ಉಲ್ಲಂಘನೆ, ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವುದು ಇಡೀ ಸಮಾಜಕ್ಕೆ ಗೊತ್ತಿದೆ. ಕಾನೂನಿನ ರೀತಿ ಏನಾಗಬೇಕೋ ಅದು ಆಗುತ್ತದೆ ಎಂದು ತಿರುಗೇಟು ನೀಡಿದರು.

    ಕಾನೂನಿನ ಚೌಕಟ್ಟಿನಲ್ಲಿ ಅವರು ಮಾಡಿರುವ ಕೆಲಸ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ಪರಿಶೀಲಿಸಬೇಕು. ಅದನ್ನು ಇಡಿ ಅಧಿಕಾರಿಗಳು ಮಾಡುತ್ತಿದ್ದಾರೆ. ಅವರು ಮಾಡಿರುವ ಕರ್ಮಗಳಿಗೆ ಎಲ್ಲವೂ ಕಾಂಪ್ರಮೈಸ್ ಆದಲ್ಲಿ ಜನ ಎಲ್ಲಿಗೆ ಹೋಗಬೇಕು. ರಾಜಕಾರಣಿಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ, ಉದ್ಯಮಿಗಳ ವಿರುದ್ಧ ತನಿಖೆ ಮಾಡುತ್ತಿಲ್ಲ ಎಂಬ ಆರೋಪದ ಕುರಿತು ಉತ್ತರಿಸಿದ ಅವರು, ಹಾಗಾದರೆ ನೀವು ರಾಜಕೀಯ ಯಾಕೆ ಮಾಡುತ್ತೀರಾ, ನೀವು ವ್ಯಾಪಾರಿಗಳಾಗಿರಿ ಎಂದು ತಿರುಗೇಟು ನೀಡಿದರು.

    ಈಗ ಅತ್ತು ಕರೆದು ಮಾಡಿದರೆ, ಏನೂ ಪ್ರಯೋಜನವಿಲ್ಲ. ಕಾನೂನಿನ ಅಡಿಯಲ್ಲಿ ಏನಾಗಬೇಕೋ ಅದು ಆಗುತ್ತಿದೆ. ಯಾರೇ ಉಪ್ಪು ತಿಂದವರು ನೀರು ಕುಡಿಯಲೇಬೇಕು, ಕುಡೀತಾ ಇದ್ದಾರೆ. ಕಳ್ಳಂಗೆ ಪಿಳ್ಳೆ ನೆಪ ಅನ್ನೋ ಹಾಗೆ ಮಾತಾಡುತ್ತಿದ್ದಾರೆ. ಇವರ ಭ್ರಷ್ಟಾಚಾರ, ಇಡೀ ಸಮಾಜಕ್ಕೆ ಗೊತ್ತಿದೆ. ಅದನ್ನು ನನ್ನ ಬಾಯಲ್ಲಿ ಯಾಕೆ ಹೇಳಿಸುತ್ತೀರಾ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.

    ಮೂರನೇ ದಿನವಾದ ಇಂದು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವ ಮುನ್ನ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಕಣ್ಣೀರು ಹಾಕಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಕಣ್ಣಲ್ಲಿ ನೀರು ಹಾಕುತ್ತಿರೋದು ನಮ್ಮ ತಂದೆಗೆ ಪೂಜೆ ಮಾಡುವ ಅವಕಾಶವನ್ನು ನನ್ನ ಬಿಜೆಪಿ ಸ್ನೇಹಿತರು ಅಧಿಕಾರದ ಮುಖಾಂತರ ಕೊಟ್ಟಿಲ್ಲ. ನನಗೆ ದುಃಖ ಯಾಕೆ ಆಗುತ್ತಿದೆ ಎಂದರೆ ಇವತ್ತು ತಂದೆ ಹಾಗೂ ಹಿರಿಯರಿಗೆ ನಾನು, ನನ್ನ ತಮ್ಮ ಪೂಜೆ ಮಾಡಬೇಕಿತ್ತು. ಆದರೆ ಅವರಿಗೆ ಎಡೆ ಇಡಲು ಕೂಡ ಇವರು ನನಗೆ ಕೊಟ್ಟಿಲ್ಲ. ಪರವಾಗಿಲ್ಲ, ಇಡಿ ಕಚೇರಿಯಲ್ಲೇ ಎಲ್ಲರನ್ನೂ ಸ್ಮರಿಸಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸುತ್ತೇನೆ ಎಂದು ಡಿಕೆಶಿ ಕಣ್ಣೀರಿಟ್ಟಿದ್ದರು.

    ಉಪ್ಪು ತಿಂದವರು ನೀರು ಕುಡಿಬೇಕು ಎಂದು ನನ್ನ ಸ್ನೇಹಿತರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೋಸ್ಕರ, ನಮ್ಮ ನಾಯಕರಿಗೋಸ್ಕರ, ನನ್ನನ್ನು ನಂಬಿದ ಜನಕ್ಕೋಸ್ಕರ ಹೋರಾಟ ಮಾಡಿಕೊಂಡು ನಾನು ಬಂದಿದ್ದೇನೆ. ಇಂದು ನಮ್ಮ ಅನೇಕ ಸ್ನೇಹಿತರು, ಕಾರ್ಯಕರ್ತರು, ನಾಯಕರು ಪಕ್ಷ ಬೆಳೆಸಿರುವುದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ಇದನ್ನೆಲ್ಲಾ ಎದುರಿಸುವಂತಹ ಶಕ್ತಿ ದೇವರು ನನಗೆ ಕೊಟ್ಟಿದ್ದಾನೆ. ನಾನು ಯಾರಿಗೂ ಮೋಸ ಮಾಡಿಲ್ಲ, ಕಳ್ಳತನ ಮಾಡಿಲ್ಲ, ಜಮೀನನ್ನು ಒತ್ತುವರಿ ಮಾಡಿಕೊಂಡಿಲ್ಲ, ಲಂಚದ ಆರೋಪವಿಲ್ಲ, ಅಧಿಕಾರ, ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿಲ್ಲ. ನೇರವಾಗಿ ನುಡಿದಂತೆ ನಡೆದಿದ್ದೇನೆ ಎಂದು ಕಿಡಿ ಕಾರಿದ್ದರು.