Tag: Ashwaththa Narayan

  • ಮಲ್ಲೇಶ್ವರದಲ್ಲಿ ದಲಿತರಿಗೆ ಲಸಿಕೆ ನಿರಾಕರಣೆ: ಹರಿಪ್ರಸಾದ್ ಆರೋಪ ಶುದ್ಧ ಸುಳ್ಳೆಂದ ಡಿಸಿಎಂ

    ಮಲ್ಲೇಶ್ವರದಲ್ಲಿ ದಲಿತರಿಗೆ ಲಸಿಕೆ ನಿರಾಕರಣೆ: ಹರಿಪ್ರಸಾದ್ ಆರೋಪ ಶುದ್ಧ ಸುಳ್ಳೆಂದ ಡಿಸಿಎಂ

    – ಲಸಿಕೆ ಅಭಿಯಾನ ಹಳಿತಪ್ಪಿಸುವುದೇ ಅವರ ದುರುದ್ದೇಶ

    ಬೆಂಗಳೂರು: ನಗರದ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಜಾತಿ ಆಧಾರದ ಮೇಲೆ ಲಸಿಕೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾಡಿರುವ ಆರೋಪವನ್ನು ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

    ಈ ಬಗ್ಗೆ ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇದೊಂದು ಬೇಜವಾಬ್ದಾರಿ ಹೇಳಿಕೆ. ಅವರಿಗೆ ಜಾತಿ- ಧರ್ಮದ ಹೆಸರೇಳದಿದ್ದರೆ ನಿದ್ದೆಯೂ ಬರಲ್ಲ. ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಲಸಿಕೆ ಅಭಿಯಾನವನ್ನು ಹೇಗಾದರೂ ಹಳಿತಪ್ಪಿಸಬೇಕು ಎಂಬ ಷಡ್ಯಂತ್ರ ಅವರು ಇಟ್ಟುಕೊಂಡಿರುವಂತಿದೆ ಎಂದು ತರಾಟೆಗೆ ತೆಗೆದುಕೊಂಡರು.

    ಲಸಿಕೆಯಲ್ಲಿ ಜಾತಿ ತರುವ ಕೆಲಸವನ್ನು ನಾನಾಗಲಿ ಅಥವಾ ನಮ್ಮ ಪಕ್ಷವಾಗಲಿ ಮಾಡಿಲ್ಲ. ಅಂಥ ಯಾವುದೇ ಘಟನೆ ಕ್ಷೇತ್ರದಲ್ಲಿ ನಡೆದಿಲ್ಲ. ಯಾರಿಗೂ ಲಸಿಕೆ ನಿರಾಕರಿಸಿಲ್ಲ” ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

    ಅಂಕಿ- ಅಂಶ ಕೊಟ್ಟ ಡಿಸಿಎಂ:
    ದಾನಿಗಳ ನೆರವಿನಿಂದ ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಖರೀದಿ ಮಾಡಿ ಕೊಳೆಗೇರಿಗಳಲ್ಲಿ ವಾಸಿಸುವ 1,000ಕ್ಕೂ ಹೆಚ್ಚು ಬಡವರಿಗೆ, ಆರ್ಥಿಕ ದುರ್ಬಲರಿಗೆ ಲಸಿಕೆ ಕೊಡಿಸಿದ್ದೇನೆ. ಅಲ್ಲದೆ 9,000 ಜನರಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ ಕ್ಷೇತ್ರದ 7 ಸ್ಲಂಗಳ ಜನರೇ ಹೆಚ್ಚು ಇದ್ದಾರೆ. ಸತ್ಯ ಅರ್ಥ ಮಾಡಿಕೊಳ್ಳದೆ ಸುಳ್ಳು ಆರೋಪ ಮಾಡುವುದು ಎಷ್ಟು ಸರಿ ಎಂದು ಡಾ.ಅಶ್ವತ್ಥನಾರಾಯಣ ಪ್ರಶ್ನೆ ಮಾಡಿದರು.

    ಮಲ್ಲೇಶ್ವರದ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ದಲಿತರಿಗೆ ಲಸಿಕೆ ನಿರಾಕರಿಸಲಾಗಿದೆ ಎಂದು ಹರಿಪ್ರಸಾದ್ ದೂರಿದ್ದಾರೆ. ಇದು ಶುದ್ಧ ಸುಳ್ಳು. ಅಂದು, ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿನ ಜನರೂ, ಅವರ ಆರೈಕೆ ಮಾಡುವವರಿಗೆ ಲಸಿಕೆ ನೀಡಲಾಗುತ್ತಿತ್ತು. ಸರ್ಕಾರ ಹೊರಡಿಸಿರುವ ಈ ಮಾರ್ಗಸೂಚಿ ಪ್ರಕಾರ ಯಾರೇ ಬಂದರೂ ಲಸಿಕೆ ಹಾಕಿ ಕಳಿಸಲಾಗುತ್ತಿದೆ. ಪ್ರತಿಯೊಬ್ಬರ ಆಧಾರ್ ಸಂಖ್ಯೆ ದಾಖಲಿಸಿಕೊಂಡು ವ್ಯಾಕ್ಸಿನ್ ನೀಡಲಾಗುತ್ತಿದೆ. ಇಷ್ಟಕ್ಕೂ ಆಧಾರ್ ಕಾರ್ಡ್ ಮೇಲೆ ಜಾತಿ ನಮೂದಾಗಿರುವುದಿಲ್ಲ ಎಂಬ ಅಂಶವನ್ನು ಹರಿಪ್ರಸಾದ್ ಗಮನಿಸಬೇಕು ಎಂದು ಉಪ ಮುಖ್ಯಮಂತ್ರಿ ತಿರುಗೇಟು ಕೊಟ್ಟರು.

    ವೈರಸ್‍ಗೆ ಜಾತಿ- ಧರ್ಮದ ಹಂಗಿಲ್ಲ. ಅದೇ ರೀತಿ ವ್ಯಾಕ್ಸಿನ್‍ಗೆ ಇರುವುದಿಲ್ಲ. ಇದನ್ನು ಹರಿಪ್ರಸಾದ್ ಅವರು ಅರ್ಥ ಮಾಡಿಕೊಳ್ಳಬೇಕು. ಸಂಕಷ್ಟದ ಸಮಯದಲ್ಲಿ ಅವರು ಸರಕಾರಕ್ಕೆ ಸಲಹೆಗಳನ್ನು ನೀಡಿ ಉತ್ತೇಜಿಸಬೇಕೆ ಹೊರತು ಆಗುತ್ತಿರುವ ಕೆಲಸದಲ್ಲಿ ಕಲ್ಲು ಹುಡುಕಿ ನೈತಿಕ ಸ್ಥೈರ್ಯ ಕುಗ್ಗಿಸಬಾರದು. ಇಂಥ ಸೂಕ್ಷ್ಮ ವಿಷಯಗಳಲ್ಲಿ ಜಾತಿ-ಧರ್ಮದಂಥ ಸೂಕ್ಷ್ಮ ಸಂಗತಿಗಳನ್ನು ತರಬಾರದು. ಇವರಿಗೆ ನಾಚಿಕೆಯಾಗಬೇಕು. ಜನ ಪಾಠ ಕಲಿಸಿದ್ದರೂ ಇವರಿಗೆ ಬುದ್ಧಿ ಬಂದಿಲ್ಲ. ಹಾಗಾದರೆ ಇವರ ಪ್ರಕಾರ ಅರ್ಚಕರಿಗೆ ಲಸಿಕೆ ಕೊಡುವ ಹಾಗಿಲ್ಲವೆ? ಎಂದು ಡಿಸಿಎಂ ತರಾಟೆಗೆ ತೆಗೆದುಕೊಂಡರು.

  • ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್: ಅಶ್ವತ್ಥನಾರಾಯಣ್

    ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್: ಅಶ್ವತ್ಥನಾರಾಯಣ್

    ಬೆಂಗಳೂರು: ವಿದೇಶದಲ್ಲಿ ಉದ್ಯೋಗ ಮಾಡುವ ಮತ್ತು ವ್ಯಾಸಂಗ ಮಾಡುತ್ತಿರುವವರಿಗೆ ಸಿಹಿ ಸುದ್ದಿ. ಆದ್ಯತಾ ಗುಂಪಿನ ಕೋಟಾದಲ್ಲಿ ಅವರಿಗೆ ಮಂಗಳವಾರದಿಂಲೇ ಲಸಿಕೆ ನೀಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

    ಬೆಂಗಳೂರಿನಲ್ಲಿ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ಬೆಂಗಳೂರು ನಗರ ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ ಮಂಗಳವಾರ 3 ಗಂಟೆಗೆ ಈ ವರ್ಗದವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗುವುದು. ಅವಶ್ಯಕತೆ ಇದ್ದವರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕೋರಿದರು.

    ಸದ್ಯದ ಸಂದರ್ಭದಲ್ಲಿ ವಿದೇಶಕ್ಕೆ ಹೋಗಬೇಕಾದರೆ ಲಸಿಕೆ ಪಡೆಯಲೇಬೇಕು ಹಾಗೂ ಆ ಕುರಿತ ‘ಪ್ರಮಾಣ ಪತ್ರ’ವನ್ನು ಕಡ್ಡಾಯವಾಗಿ ಹೊಂದಿರಲೇಬೇಕು. ಹೀಗಾಗಿ ವಿದೇಶದಲ್ಲಿ ಉದ್ಯೋಗ ಹಾಗೂ ವಿದ್ಯಾಭ್ಯಾಸದಲ್ಲಿ ನಿರತರಾಗಿರುವವರಿಂದ ಲಸಿಕೆ ಬೇಡಿಕೆ ಇತ್ತು. ಈಗ ಸರ್ಕಾರ ಅವರ ಬೇಡಿಕೆಯನ್ನು ಪರಿಗಣಿಸಿದ್ದು, ಎಲ್ಲರಿಗೂ ಕೋವಿಶೀಲ್ಡ್ ಕೊಡಲಾಗುವುದು ಎಂದು ಡಿಸಿಎಂ ತಿಳಿಸಿದರು.

    ಲಸಿಕೆ ಪಡೆಯಲು ಇಚ್ಛಿಸುವವರು ತಮ್ಮ ಆಧಾರ್ ಕಾರ್ಡ್, ಪಾಸ್‍ಪೋರ್ಟ್ ಹಾಗೂ ವಿದೇಶದಲ್ಲಿನ ತಮ್ಮ ಕೆಲಸ ಅಥವಾ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪೂರಕ ದಾಖಲೆಯನ್ನು ಹಾಜರುಪಡಿಸುವುದು ಕಡ್ಡಾಯ. ಅಲ್ಲದೆ, ಸದ್ಯಕ್ಕೆ ಕೋವಿಶೀಲ್ಡ್ ಮೊದಲ ಡೋಸ್ ಪಡೆದವರ ಎರಡನೇ ಡೋಸ್ ಅಂತರವನ್ನು ಇವರ ಅನುಕೂಲಕ್ಕಾಗಿ 12 ವಾರಗಳಿಂದ ಒಂದು ತಿಂಗಳಕ್ಕೆ ಕುಗ್ಗಿಸಲಾಗಿದೆ. ಇದು ಇವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

    ಮುಖ್ಯವಾಗಿ ವ್ಯಾಕ್ಸಿನ್ ನೀಡಿದ ಬಗ್ಗೆ ಇವರಿಗೆ ಸರಕಾರದಿಂದ ಪ್ರಮಾಣ ಪತ್ರ ಕೊಡಲಾಗುವುದು. ಅದು ಎರಡನೇ ಡೋಸ್ ಪಡೆದಾಕ್ಷಣ ನೀಡಲಾಗುತ್ತದೆ ಎಂದು ಡಿಸಿಎಂ ಹೇಳಿದರು.ಇದೇ ರೀತಿ ಆಯಾ ಜಿಲ್ಲೆಗಳಲ್ಲಿ ಕೂಡ ಈ ರೀತಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

  • ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ: ಡಿಸಿಎಂ ಅಶ್ವತ್ಥ ನಾರಾಯಣ್

    ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ: ಡಿಸಿಎಂ ಅಶ್ವತ್ಥ ನಾರಾಯಣ್

    ಬೆಂಗಳೂರು: ನಗರದ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದರು.

    ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 7ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಮಲ್ಲೇಶ್ವರ ಹಾಗೂ ದಾಸರಹಳ್ಳಿ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಆಯೋಜಿಸಿದ್ದ ಸೇವಾ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ದಾಸರಹಳ್ಳಿ ಕ್ಷೇತ್ರಕ್ಕೆ 5 ಆಮ್ಲಜನಕ ಸಾಂದ್ರಕಗಳನ್ನು ಹಸ್ತಾಂತರ ಮಾಡಿದ ನಂತರ ಡಿಸಿಎಂ ಅವರು ಮಾತನಾಡಿದರು.

    ಇದೊಂದು ಅತ್ಯುತ್ತಮ ಆಸ್ಪತ್ರೆಯಾಗಲಿದ್ದು ಐಸಿಯು, ವೆಂಟಿಲೇಟರ್ ಸೇರಿ ಪ್ರತ್ಯೇಕ ಆಕ್ಸಿಜನ್ ಜನರೇಟರ್ ಅನ್ನು ಅಳವಡಿಸಲಾಗುವುದು. ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಈ ಆಸ್ಪತ್ರೆಯನ್ನು ತ್ವರಿತವಾಗಿ ನಿರ್ಮಾಣ ಮಾಡಲಿದೆ ಎಂದು ಅವರು ಘೋಷಿಸಿದರು.

    ಆರೋಗ್ಯದ ಜತೆಗೆ ಶಿಕ್ಷಣಕ್ಕೂ ಸರಕಾರ ಆದ್ಯತೆ ನೀಡುತ್ತಿದೆ. ದಾಸರಹಳ್ಳಿ ಕ್ಷೇತ್ರಕ್ಕೆ ಆಸ್ಪತ್ರೆ ಜತೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಂಜೂರು ಮಾಡಲಾಗಿದೆ ಎಂದ ಅವರು, ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಕ್ಷೇತ್ರಕ್ಕೆ ಔಷಧಿ, ವೆಂಟಿಲೇಟರ್, ಆಕ್ಸಿಜನ್ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಇದುವರೆಗೂ ದೇಶದಲ್ಲಿ 23 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಡಿಸೆಂಬರ್ ಹೊತ್ತಿಗೆ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ಕೊಡಲಾಗುವುದು ಎಂದರು.

    ಡಿಸಿಎಂ ನಗರ ಸಂಚಾರ
    ಬೆಳಗ್ಗೆಯಿಂದಲೇ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರವೂ ಸೇರಿ ನಗರದ ವಿವಿಧೆಡೆ ಸಂಚರಿಸಿದ ಡಾ.ಅಶ್ವತ್ಥನಾರಾಯಣ ಅವರು ಪಕ್ಷದ ಕಾರ್ಯಕರ್ತರು, ಕೋವಿಡ್ ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿಯನ್ನು ಭೇಟಿ ಮಾಡಿದರು.

    ಮೊದಲಿಗೆ ಅರಮನೆ ನಗರ ವಾರ್ಡ್ ಆರ್‍ಎಂವಿ ಬಡಾವಣೆ ನಿವಾಸಿಗಳ ಸಂಘದ ಪಾರ್ಕ್‍ನಲ್ಲಿ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಪಾಲ್ಗೊಂಡ ಅವರು, ಅಲ್ಲಿ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ಗುಂಪಿನ ಜನಕ್ಕೆ ನೀಡಲಾಗುತ್ತಿದ್ದ ಲಸಿಕೆ ಮಾಹಿತಿಯನ್ನು ಪಡೆದುಕೊಂಡರು. ವೈದ್ಯರು, ಸಿಬ್ಬಂದಿ ಹಾಗೂ ಲಸಿಕೆ ಪಡೆಯಲು ಬಂದಿದ್ದ ಹಿರಿಯ ನಾಗರೀಕರ ಯೋಗಕ್ಷೇಮ ವಿಚಾರಿಸಿದರು, ಈ ಸಂದರ್ಭದಲ್ಲಿ ಎಲ್ಲ ಹಿರಿಯರು ಸರಕಾರದ ಕೋವಿಡ್ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಗುಟ್ಟಹಳ್ಳಿ ವಾರ್ಡ್ ನಲ್ಲಿ ಸೇವಾ ಹೀ ಸಂಘಟನೆ ಮೂಲಕ ಬಡವರು, ಮುಂಚೂಣಿ ಕಾರ್ಯಕರ್ತರಾದ ಪೌರ ಕಾರ್ಮಿಕರು, ಬೆಸ್ಕಾಂ ಮತ್ತು ಒಳಚರಂಡಿ & ಜಲಮಂಡಳಿ ಕಾರ್ಮಿಕರಿಗೆ ಆಹಾರ ದಾನ್ಯದ ಕಿಟ್?ಗಳನ್ನು ವಿತರಿಸಿದರು. ಬಳಿಕ ಕಾಡುಮಲ್ಲೇಶ್ವರ ವಾರ್ಡ್‍ನ ಸಮುದಾಯ ಭವನದಲ್ಲಿ ವ್ಯಾಕ್ಸಿನ್ ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು.

    ಸಿಹಿ, ಫುಡ್ ಕಿಟ್ ಹಂಚಿದ ಡಿಸಿಎಂ:
    ಮೋದಿ ಸರ್ಕಾರಕ್ಕೆ 7 ವರ್ಷ ತುಂಬಿದ ಕಾರಣ ಎಲ್ಲ ಕಡೆಗಳಲ್ಲೂ ಲಸಿಕೆ ಪಡೆಯಲು ಬಂದು ಸಾಲಿನಲ್ಲಿ ನಿಂತಿದ್ದ ಎಲ್ಲರಿಗೂ ಡಿಸಿಎಂ ಸ್ವತಃ ಸಿಹಿ ಹಂಚಿದರು. ಅದೇ ರೀತಿ ಎಂಎಸ್‍ಆರ್ ನಗರದಲ್ಲಿ ಕೋವಿಡ್ ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಆಹಾರ ಕಿಟ್‍ಗಳು ಮತ್ತು ಪ್ರೆಶರ್ ಕುಕ್ಕರ್‍ಗಳನ್ನು ವಿತರಣೆ ಮಾಡಿದರು. ಅಲ್ಲದೆ, ಪೌರ ಕಾರ್ಮಿಕರ ಕುಂದುಕೊರತೆಗಳನ್ನು ಆಲಿಸಿದರು. ಮಾಜಿ ಶಾಸಕ ಮುನಿರಾಜು ಅವರೊಂದಿಗೆ ದಾಸರಹಳ್ಳಿ ಪಿಎಚ್‍ಸಿಗೆ ಭೇಟಿ ನೀಡಿ, ಅಲ್ಲಿನ ಅರೆ ವೈದ್ಯ ಸಿಬ್ಬಂದಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು.

    ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
    ದಾಸರಹಳ್ಳಿ ಮಂಡಲ ವಿಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸೇರಿ ಎಲ್ಲ ಪ್ರತಿಪಕ್ಷಗಳು ಪಕ್ಷವೂ ಒಡೆದಾಳುವ ರಾಜಕೀ ಮಾಡಿಕೊಂಡು ದೇಶದ ಹಿತವನ್ನು ಕಡೆಗಣಿಸಿದವು. ಕೋವಿಡ್‍ನಂಥ ಸಂಕಷ್ಟ ಕಾಲದಲ್ಲಿ ಲಸಿಕೆ ಬಗ್ಗೆ ಅಪಪ್ರಚಾರ ನಡೆಸಿದವು ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಕಟುವಾಗಿ ಟೀಕಿಸಿದರು.

    ಮೋದಿ ನೇತೃತ್ವದಲ್ಲಿ ಇಡೀ ದೇಶ ಎಲ್ಲ ಕ್ಷೇತ್ರಗಳಲ್ಲಿಯೂ ಸರ್ವತೋಮುಖ ಅಭಿವೃದ್ಧಿ ಕಾಣುತ್ತಿದೆ. ದೇಶದ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಅವರು ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಓರ್ವ ಮಹಾಪುರುಷ, ಯುಗಪುರುಷ ನಮ್ಮ ದೇಶದ ಪ್ರಧಾನಿಯಾಗಿರುವುದು ಅದೃಷ್ಟದ ಸಂಗತಿ. ಇದನ್ನು ಪ್ರತಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ ಎಂದರು.

    ಮೋದಿ ಬರುವ ತನಕ ನಮ್ಮ ದೇಶದಲ್ಲಿ ಒಂದು ವೇಂಟಿಲೇಟರ್ ತಯಾರಾಗುತ್ತಿರಲಿಲ್ಲ. ಮಾಸ್ಕ್, ಸ್ಯಾನಿಟೈರ್, ಪಿಪಿಇ ಕಿಟ್ ಇರಲಿಲ್ಲ. ಪ್ರತಿಯೊಂದಕ್ಕೂ ಇನ್ನೊಂದು ದೇಶವನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇತ್ತು. ಈಗ ಕೇವಲ ಒಂದೇ ವರ್ಷದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿದ್ದೇವೆ. ಅಷ್ಟೇ ಏಕೆ? ಆಮ್ಲಜನಕ ಸಾಂದ್ರಕಗಳನ್ನೂ ಈಗ ಆತ್ಮನಿರ್ಭರ್ ಭಾರತ ಕಲ್ಪನೆಯಡಿ ನಮ್ಮಲ್ಲಿಯೇ ತಯಾರು ಮಾಡಿಕೊಳ್ಳುತ್ತಿದ್ದೇವೆ ಎಂದರೆ ಹುಡುಗಾಟಿಕೆ ಅಲ್ಲ ಎಂದು ಅವರು ನುಡಿದರು.

    ಇಡೀ ದಿನದ ಕಾರ್ಯಕ್ರಮಗಳಲ್ಲಿ ಮಾಜಿ ಶಾಸಕ ಮುನಿರಾಜು, ಪಕ್ಷದ ಮಂಡಲಾಧ್ಯಕ್ಷ ಲೊಕೇಶ್, ಅರಮನೆ ನಗರ ವಾರ್ಡಿನ ಬಿಬಿಎಂಪಿ ಮಾಜಿ ಸದಸ್ಯೆ ಸುಮಂಗಲ ಕೇಶವ್, ಮತ್ತೀಕೆರೆ ಬಿಬಿಎಂಪಿ ಮಾಜಿ ಸದಸ್ಯ ಜಯಪ್ರಕಾಶ್, ಅದೇ ವಾರ್ಡಿನ ಪಕ್ಷ ಅಧ್ಯಕ್ಷ ಪ್ರೇಮ್ ಕುಮಾರ್, ಪಕ್ಷದ ಕಾರ್ಯಕರ್ತರು ಡಿಸಿಎಂ ಜತೆಯಲ್ಲಿದ್ದರು.

  • ರಾಜ್ಯ ಕೋವಿಡ್ ವಾರ್ ರೂಂಗೆ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಭೇಟಿ

    ರಾಜ್ಯ ಕೋವಿಡ್ ವಾರ್ ರೂಂಗೆ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಭೇಟಿ

    – ಸಾಸ್ಟ್ ಪೋರ್ಟಲ್ ನಲ್ಲಿ ಆಮ್ಲಜನಕ, ರೆಮ್‍ಡೆಸಿವರ್, ಬೆಡ್ ಮಾಹಿತಿ
    – ಟೆಸ್ಟ್ ವರದಿ ತಡವಾದರೆ ಲ್ಯಾಬ್‍ಗಳಿಗೆ ದಂಡ

    ಬೆಂಗಳೂರು: ಆಮ್ಲಜನಕ, ರೆಮಿಡಿಸಿವಿರ್ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲಿರುವ ಸರ್ಕಾರಿ ಬೆಡ್‍ಗಳ ಮಾಹಿತಿಯನ್ನು ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್ ಪೋರ್ಟಲ್ ನಲ್ಲಿ ಸಿಗುವ ಹಾಗೆ ಮಾಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿ ಸೋಮವಾರ ರಾಜ್ಯ ಕೋವಿಡ್ ವಾರ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು. ಆಮ್ಲಜನಕ & ರೆಮಿಡಿಸಿವಿರ್ ಬೇಡಿಕೆ- ಪೂರೈಕೆಯಲ್ಲಿ ಪಾರದರ್ಶಕತೆ ಬಹಳ ಮುಖ್ಯ. ಎಷ್ಟು ಪೂರೈಕೆ ಆಗುತ್ತಿದೆ? ಎಷ್ಟು ಬಳಕೆಯಾಗುತ್ತಿದೆ? ಯಾರಿಗೆ ಕೊಡಲಾಗಿದೆ? ಎಂಬ ಸಮಗ್ರ ಮಾಹಿತಿಯನ್ನು ಇದೇ ಪೋರ್ಟಲ್ ನಲ್ಲಿ ಅಪ್‍ಲೋಡ್ ಮಾಡಲಾಗುವುದು. ಈಗ ಪ್ರತಿ ದಿನ 35,000 ರೆಮಿಡಿಸಿವಿರ್ ಡೋಸ್ ಬೇಕಿದೆ ಎಂದರು.

    ಇದರ ಜತೆಗೆ, ರಾಜ್ಯಾದ್ಯಂತ ಆಕ್ಸಿಜನ್ ಬೆಡ್‍ಗಳಿಗೆ ಭಾರೀ ಬೇಡಿಕೆ ಇದೆ. ಸರ್ಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಸರ್ಕಾರದ ಬೆಡ್‍ಗಳ ಮಾಹಿತಿಯನ್ನು ಕೂಡ ಈ ಪೋರ್ಟಲ್ ನಲ್ಲಿ ಹಾಕಲಾಗುವುದು. ಇದರಿಂದ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಬರುತ್ತದೆ. ಜತೆಗೆ ಸಾರ್ವಜನಿಕರಿಗೂ ವಾಸ್ತವ ಚಿತ್ರಣ ಸಿಗುವಂತಾಗಲಿದೆ ಎಂದರು.

    ಇನ್ನು ಎರಡು-ಮೂರು ದಿನಗಳಲ್ಲೇ ಸಾಸ್ಟ್ ಪೋರ್ಟಲ್ ಗೆ (http://arogya.karnataka.gov.in/) ಮೇಲೆ ತಿಳಿಸಿದ ಎಲ್ಲವನ್ನೂ ಲಿಂಕ್ ಮಾಡಲಾಗುವುದು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ತಿಳಿಸಿದರು.

    24 ಗಂಟೆ ಒಳಗೇ ರಿಸಲ್ಟ್ & ಬಿಯು ನಂಬರ್:
    ಬೆಂಗಳೂರಿನಲ್ಲಿ ಈಗ ಪರೀಕ್ಷೆಯಾದ 24 ಗಂಟೆ ಒಳಗೇ ಫಲಿತಾಂಶ ಬಂದು ಬಿಯು ನಂಬರ್ ಜನರೇಟ್ ಆಗುತ್ತದೆ. ರಾಜ್ಯದ ಉದ್ದಗಲಕ್ಕೂ ಹೀಗೆಯೇ ಆಗಬೇಕು. ರಾಜ್ಯದ ಸರಾಸರಿ ಪರಿಸ್ಥಿತಿ ನೋಡಿದರೆ ರಿಸಲ್ಟ್ ಬರಲು ನಾಲ್ಕೂವರೆ ದಿನದಿಂದ ಎರಡು ದಿನವಾಗುತ್ತಿದೆ. ಫಲಿತಾಂಶ ವಿಳಂಬದಿಂದ ಸೋಂಕು ಉಲ್ಬಣಿಸಿ ಹೆಚ್ಚು ಪ್ರಾಣನಷ್ಟ ಆಗುತ್ತಿದೆ ಎಂದು ಡಿಸಿಎಂ ಕಳವಳ ವ್ಯಕ್ತಪಡಿಸಿದರು.

    ಸ್ಯಾಂಪಲ್ ಕಲೆಕ್ಟ್ ಮಾಡಿದ ಒಂದು ದಿನದೊಳಗೆ ವರದಿ ಕೊಡುವುದಕ್ಕೆ ಇರುವ ಅಡ್ಡಿಗಳನ್ನು ನಿವಾರಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ. ತಡವಾಗಿ ರಿಸಲ್ಟ್ ಕೊಡುವ ಲ್ಯಾಬ್‍ಗಳಿಗೆ ಪ್ರತಿ ಟೆಸ್ಟ್‍ಗೆ 150 ರೂ. ದಂಡ ವಿಧಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    ಬೆಡ್‍ಗೆ ಬೇಡಿಕೆ ಹೆಚ್ಚಾಗಿದೆ:
    ಬೆಂಗಳೂರಿನಲ್ಲಿ ಈಗ ಬೆಡ್ ಖಾಲಿ ಆಗುತ್ತಿರುವುದು ದಿನಕ್ಕೆ 950 ಮಾತ್ರ. ಆದರೆ 7,000 ದಿಂದ 8,000 ಬೆಡ್‍ಗಳಿಗೆ ಡಿಮಾಂಡ್ ಬರುತ್ತಿದೆ. ಇಷ್ಟು ಸೋಂಕಿತರಲ್ಲಿ ಟ್ರಾಯಾಜ್ (ವೈದ್ಯರ ಪರಿಶೀಲನೆ) ಆದ ಮೇಲೆ ಆಸ್ಪತ್ರೆಗೆ ಸೇರಬೇಕಾದವರೇ 2,000ಕ್ಕೂ ಹೆಚ್ಚು ಜನ ಇದ್ದಾರೆಂದು ಡಿಸಿಎಂ ಮಾಹಿತಿ ನೀಡಿದರು.

    ಬೆಡ್ ಬೇಡಿಕೆ ನಿಭಾಯಿಸಲು ಸಮರ್ಪಕ ಟ್ರಾಯಾಜಿಂಗ್ ಮಾಡಬೇಕು. ಬೆಂಗಳೂರಿನಲ್ಲಿ ಎಲ್ಲ ವಾರ್ಡ್ ಮಟ್ಟದಲ್ಲಿಯೂ ಟ್ರಾಯಾಜಿಂಗ್ ಮಾಡಿ ಅರ್ಹರಿಗಷ್ಟೇ ಆಸ್ಪತ್ರೆಗೆ ಸೇರಿಸುವ ಅವಕಾಶ ಕಲ್ಪಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕೆಲ ಕಡೆ ವೈಯಕ್ತಿಕ ಟ್ರಾಯಾಜಿಂಗ್ ಆರಂಭವಾಗಿದೆ. ಒಂದೊಂದು ಕಡೆಯೂ ಐವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು ಡಾ.ಅಶ್ವತ್ಥನಾರಾಯಣ.

    ಗಂಭೀರ ಸೋಂಕಿತರಿಗೆ ಬೆಡ್ ಒದಗಿಸುವ ಉದ್ದೇಶದಿಂದ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಈ ಸ್ಟೆಪ್ ಡೌನ್ ಆಸ್ಪತ್ರೆ & ಕೋವಿಡ್ ಕೇರ್ ಕೇಂದ್ರಗಳಲ್ಲಿ ಟ್ರಾಯಾಜಿಂಗ್, ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಗಂಭೀರವಲ್ಲದ ಸೋಂಕಿತರಿಗೆ ಇಲ್ಲಿಯೇ ಚಿಕಿತ್ಸೆ ಕೋಡಲಾಗುವುದು ಎಂದು ಡಿಸಿಎಂ ತಿಳಿಸಿದರು.

    20,000 ಬೆಡ್ ಹೆಚ್ಚಳ:
    ರಾಜ್ಯಾದ್ಯಂತ ಐಸಿಯು & ಆಕ್ಸಿಜನ್ ಬೆಡ್‍ಗಳನ್ನು ಹೆಚ್ಚಿಸಲಾಗುತ್ತಿದೆ. ಬೆಂಗಳೂರಿನಲ್ಲಿ 4,000 ಬೆಡ್‍ಗಳೂ ಸೇರಿದಂತೆ ರಾಜ್ಯದ ಉದ್ದಗಲಕ್ಕೂ 20,000 ಬೆಡ್‍ಗಳನ್ನು ಹೆಚ್ಚಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ರಾಜ್ಯಕ್ಕೆ 1200 ಮೆ.ಟನ್ ಆಮ್ಲಜನಕ ಹಂಚಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಡಾ.ಅಶ್ವತ್ಥನಾರಾಯಣ ವಿವರಿಸಿದರು.

    ಹೆಚ್ಚು ದರ ಸುಲಿಗೆ ಮಾಡಿದರೆ ಕ್ರಮ:
    ಹೋಮ್ ಐಸೋಲೇಷನ್ ಪ್ರಮಾಣ ಹೆಚ್ಚುತ್ತಿರುವುದರಿಂದ ಪಲ್ಸಾಸ್ಕೋಮೀಟರ್‍ಗಳಿಗೆ ಡಿಮಾಂಡ್ ಜಾಸ್ತಿಯಾಗಿದೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಲಾಗುತ್ತಿದೆ ಎಂಬ ಸರಕಾರಕ್ಕೆ ಬಂದಿದೆ. ಮೆಡಿಕಲ್ ಸ್ಟೋರ್‍ಗಳು ಆಗಿರಲಿ ಅಥವಾ ಇನ್ನಾರೇ ಆಗಿರಲಿ ಎಂಆರ್‍ಪಿಗಿಂತ ಹೆಚ್ಚು ಬೆಲೆಗೆ ಮಾರಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದು ಪ್ರತಿ ರೆಮ್‍ಡೆಸಿವರ್ ಸೇರಿ ಪ್ರತಿಯೊಂದು ಔಷಧಕ್ಕೂ ಅನ್ವಯ ಆಗುತ್ತದೆ. ಜನರು 112 ಹೆಲ್ಪ್‍ಲೈನ್ ಕರೆ ಮಾಡಿದರೆ ಅಂಥ ತಪ್ಪಿತಸ್ಥರನ್ನೂ ಕೂಡಲೇ ಬಂಧಿಸಲಾಗುವುದು. ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಶಿಕ್ಷೆಗೊಳಪಡಿಸಲಾಗುವುದು ಎಂದು ಡಿಸಿಎಂ ಎಚ್ಚರಿಕೆ ನೀಡಿದರು.

    ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಪಲ್ಸಾಸ್ಕೋಮೀಟರ್‍ಗಳನ್ನು ಖರೀದಿ ಮಾಡುತ್ತಿದೆ. ಪ್ರತೀ ಒಂದರ 350 ರೂ.ನಂತೆ ಕೊಡಲಾಗುತ್ತಿದೆ. ಹೀಗಿದ್ದರೂ ಜನರ ಅಗತ್ಯಕ್ಕಾಗಿ ಸರ್ಕಾರ ಹೆಚ್ಚು ಪ್ರಮಾಣದಲ್ಲಿ ಕೊಳ್ಳುತ್ತಿದೆ ಎಂದರು.

    ಡಿಸಿಎಂ ವಾರ್ ರೂಂಗೆ ಭೇಟಿ ನೀಡಿದ ವೇಳೆ ಮುಖ್ಯಮಂತ್ರಿಗಳ ಕಾರ್ಯನೀತಿ ಸಲಹೆಗಾರ ಪ್ರಶಾಂತ್ ಪ್ರಕಾಶ್ ಇದ್ದರು.

    ಹಿರಿಯ ಐಎಎಸ್ ಅಧಿಕಾರಿಗಳಾದ ಪೊನ್ನುರಾಜ್, ಮೌನಿಷ್ ಮುದ್ಗಲ್, ಪ್ರದೀಪ್, ಅರುಂಧತಿ ಚಂದ್ರಶೇಖರ್, ಗಿರಿಗೌಡ, ಸಾಸ್ಟ್ ಪೋರ್ಟ್‍ಲ್ ಕಾರ್ಯನಿರ್ವಾಹಕ ನಿರ್ದೇಶಕಿ ಎನ್.ಟಿ. ಅಬ್ರು, ಕೆಎಎಸ್ ಅಧಿಕಾರಿ ರಾಜೇಂದ್ರ ಕುಮಾರ ಮತ್ತಿತರರು ಇದ್ದರು.