Tag: ashwathamma

  • ಭಿಕ್ಷೆ ಬೇಡಿ ಸಿಕ್ಕ 1 ಲಕ್ಷ ರೂ.ವನ್ನು ಪೊಳಲಿ ದೇಗುಲಕ್ಕೆ ಹಸ್ತಾಂತರಿಸಿದ 80 ವರ್ಷದ ಅಜ್ಜಿ

    ಭಿಕ್ಷೆ ಬೇಡಿ ಸಿಕ್ಕ 1 ಲಕ್ಷ ರೂ.ವನ್ನು ಪೊಳಲಿ ದೇಗುಲಕ್ಕೆ ಹಸ್ತಾಂತರಿಸಿದ 80 ವರ್ಷದ ಅಜ್ಜಿ

    ಮಂಗಳೂರು: ಕೆಲವರು ತಿಂದುಂಡು ಮಲಗಿದರೂ ಕರಗದಷ್ಟು ಆಸ್ತಿ ಇದ್ದರೂ ಪುಕ್ಕಟೆ ದಾನವಂತೂ ಕೊಡುವುದಿಲ್ಲ. ಕೈಯಲ್ಲಿ ಸಾಕಷ್ಟು ಹಣ ಇದ್ದರೂ ಖರ್ಚು ಮಾಡದೆ ಕೂಡಿಡುವ ಮಂದಿಯೇ ಹೆಚ್ಚು. ಆದರೆ ಮಂಗಳೂರಿನಲ್ಲೊಬ್ಬರು ಅಜ್ಜಿ ತಾನು ಭಿಕ್ಷೆ ಬೇಡಿ ಗಳಿಸಿದ ದುಡ್ಡನ್ನೇ ಕೂಡಿಟ್ಟು ದೇವಸ್ಥಾನಗಳಿಗೆ ಹಂಚುತ್ತಿದ್ದಾರೆ. ಭಕ್ತರ ಅನ್ನದಾನಕ್ಕೆಂದು ತನ್ನ ಹೆಸರಲ್ಲಿ ಲಕ್ಷಾಂತರ ದುಡ್ಡನ್ನು ದೇವರಿಗೆ ಅರ್ಪಿಸುತ್ತಿದ್ದಾರೆ.

    ಎಂಬತ್ತರ ಇಳಿ ವಯಸ್ಸಿನ ಅಶ್ವತ್ಥಮ್ಮ ದೇವಾಲಯಗಳ ಹೊರಗೆ ಭಿಕ್ಷೆ ಬೇಡುತ್ತಾ ತನ್ನ ಜೀವನ ಸಾಗಿಸೋದರ ಜೊತೆಗೆ ತಾನು ಭಿಕ್ಷೆ ಬೇಡಿ ಸಂಗ್ರಹಿಸುವ ಲಕ್ಷಾಂತರ ರೂಪಾಯಿ ಹಣವನ್ನು ದೇವಸ್ಥಾನದ ಅನ್ನದಾನ ನಿಧಿಗೆ ನೀಡುತ್ತಿದ್ದಾರೆ. ಇವರ ಕುಟುಂಬದಲ್ಲಿ ಕಡೂ ಬಡತನವಿದ್ದರೂ ಈ ಅಜ್ಜಿಯಲ್ಲಿ ಮಾತ್ರ ಧಾರ್ಮಿಕ ಪ್ರಜ್ಞೆ, ಹೃದಯ ಶ್ರೀಮಂತಿಕೆಗೆ ಬರವಿಲ್ಲ. ದೇವಸ್ಥಾನದ ಬಾಗಿಲ ಮುಂದೆ ಕುಳಿತುಕೊಳ್ಳುವ ಈ ಅಜ್ಜಿ ಭಕ್ತರು ನೀಡುವ ಅಷ್ಟಿಷ್ಟು ಹಣವನ್ನು ಜೋಪಾನವಾಗಿ ತೆಗೆದಿಟ್ಟು ಯಾತ್ರೆಗೆ ಹೋಗುತ್ತಾರೆ. ಜೊತೆಗೆ ದೇವಸ್ಥಾನಕ್ಕೆ ಅನ್ನದಾನ ಸೇವೆಯನ್ನು ಸಹ ನೀಡುತ್ತಾರೆ.

    ಸದ್ಯ ಮಂಗಳೂರು ಹೊರವಲಯದ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿರುವ ಈ ಅಜ್ಜಿ ಅದೇ ದೇವಸ್ಥಾನಕ್ಕೆ 1 ಲಕ್ಷ ರೂಪಾಯಿಯನ್ನು ಅನ್ನದಾನದ ದೇಣಿಗೆಗೆ ಕೊಟ್ಟು ಗಮನ ಸೆಳೆದಿದ್ದಾರೆ. ಪೊಳಲಿ ದೇವಸ್ಥಾನಕ್ಕೆ ಈ ಹಿಂದೆ ಜೀರ್ಣೋದ್ದಾರ ಸಂದರ್ಭದಲ್ಲಿ ಒಂದೂವರೆ ಲಕ್ಷವನ್ನು ಈ ಅಜ್ಜಿ ದೇಣಿಗೆ ನೀಡಿದ್ದರು. ಮೂಲತಃ ಉಡುಪಿ ಜಿಲ್ಲೆಯ ತ್ರಾಸಿ ಸಮೀಪದ ಕಂಚುಗೋಡು ನಿವಾಸಿಯಾಗಿರುವ ಅಶ್ವತ್ಥಮ್ಮ ಕರಾವಳಿಯಲ್ಲಿ ಜಾತ್ರೆ, ವಿಶೇಷ ದಿನಗಳಲ್ಲಿ ದೇವಸ್ಥಾನಗಳಿಗೆ ತೆರಳುತ್ತಾರೆ. ಭಕ್ತರು ನೀಡಿದ ಭಿಕ್ಷೆಯನ್ನು ಆ ದೇವಸ್ಥಾನಗಳಿಗೆ ಅನ್ನದಾನ ಸೇವೆಗೆ ನೀಡುತ್ತಾರೆ.

    ಎರಡು ವರ್ಷಗಳ ಹಿಂದೆ ಸಾಲಿಗ್ರಾಮ ದೇವಸ್ಥಾನಕ್ಕೆ ಒಂದೂವರೆ ಲಕ್ಷ ದೇಣಿಗೆ ಕೊಟ್ಟಿದ್ದರು. ಕಂಚುಗೋಡು ದೇವಸ್ಥಾನಕ್ಕೂ ಒಂದೂವರೆ ಲಕ್ಷ ನೀಡಿದ್ದಾರೆ. ಅಯ್ಯಪ್ಪ ಸ್ವಾಮಿಯ ಭಕ್ತೆಯಾಗಿರುವ ಈ ಅಜ್ಜಿ ಶಬರಿಮಲೆಗೆ ಯಾತ್ರೆಗೆ ಹೋಗಿದ್ದಾಗ ಪಂಪಾ, ಎರಿಮಲೆಯಲ್ಲೂ ತಲಾ 50 ಸಾವಿರದಂತೆ ದೇಣಿಗೆ ನೀಡಿದ್ದಾರೆ. ಈವರೆಗೆ ಏಳು ದೇವಸ್ಥಾನಗಳಲ್ಲಿ ದೊಡ್ಡ ಮೊತ್ತದ ದೇಣಿಗೆ ನೀಡಿದ್ದು ಒಟ್ಟು 9 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ದೇವರ ಹೆಸರಲ್ಲಿ ಅರ್ಪಿಸಿದ್ದಾರೆ. ಇಂತಹ ಅಪರೂಪದ ಜನ ನಮ್ಮ ಮುಂದೆ ಇದ್ದಾರಲ್ಲ ಎಂದು ಸ್ಥಳೀಯರಾದ ನಾಗೇಶ್ ಪೊಳಲಿ ಸಂತಸ ವ್ಯಕ್ತಪಡಿಸಿದ್ದಾರೆ.

    ಅಶ್ವಥಮ್ಮ ಅವರ ಪತಿ ಹಾಗೂ ಮಕ್ಕಳು ಇಹಲೋಕ ತ್ಯಜಿಸಿದ್ದು, ಇಬ್ಬರು ಮೊಮ್ಮಕ್ಕಳು ತ್ರಾಸಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ.ಭಿಕ್ಷಾಟನೆಯಲ್ಲಿ ಸಂಗ್ರಹವಾದ ಹಣದಲ್ಲಿ ಸ್ವಲ್ಪ ಭಾಗವನ್ನು ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ಉಳಿದ ಹಣವನ್ನು ಕೂಡಿಟ್ಟು ದೇವಾಲಯಕ್ಕೆ ದೇಣಿಗೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಕೂತು ತಿನ್ನುವಷ್ಟಿದ್ದರೂ ಮತ್ತಷ್ಟು ಬೇಕು ಎನ್ನುವ ಮನಸ್ಥಿತಿಯವರು ಈ ಅಜ್ಜಿಯಿಂದ ಕಲಿಯೋದು ತುಂಬಾ ಇದೆ.