Tag: ashwath narayana

  • ಡಿಸಿಎಂ ಅಶ್ವತ್ಥನಾರಾಯಣ ಸಿಎಂ ಆಗಲಿ – ಡಿವಿಎಸ್‌

    ಡಿಸಿಎಂ ಅಶ್ವತ್ಥನಾರಾಯಣ ಸಿಎಂ ಆಗಲಿ – ಡಿವಿಎಸ್‌

    ಬೆಂಗಳೂರು: ಅತ್ಯುತ್ತಮ ಕರ್ತವ್ಯ ಪ್ರಜ್ಞೆ ಹಾಗೂ ಸದ್ದಿಲ್ಲದೆ ತಮ್ಮ ಪಾಡಿಗೆ ತಾವು ನಿಷ್ಠೆಯಿಂದ ಕೆಲಸ ಮಾಡಿಕೊಂಡು ಹೋಗುತ್ತಿರುವ ಡಾ.ಸಿ.ಎನ್‌.ಅಶ್ವತ್ಥನಾರಾಯಣರ ಪದವಿ ಮುಂದಿರುವ ʼಉಪʼ ಹೋಗಿ ಆದಷ್ಟು ಬೇಗ ʼಮುಖ್ಯಮಂತ್ರಿʼ ಎಂಬ ಪದನಾಮ ಬರುವಂತಾಗಲಿ. ಅದಕ್ಕೆ ಬೇಕಾದ ಎಲ್ಲ ಕೃಪೆ-ಚೈತನ್ಯವನ್ನು ಆ ಪರಮಶಿವ ನೀಡಲಿ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಶುಭ ಹಾರೈಸಿದರು.

    ಬೆಂಗಳೂರಿನ ಮಲ್ಲೇಶ್ವರದಲ್ಲಿ ಗುರುವಾರ ರಾತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಫೌಂಡೇಷನ್‌ ಆಯೋಜಿಸಿದ್ದ ಮಹಾ ಶಿವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಅಶ್ವತ್ಥನಾರಾಯಣ ಕೇವಲ ಮಾತನಾಡುತ್ತಲೇ ಕೆಲಸ ಮಾಡುವ ವ್ಯಕ್ತಿಯಲ್ಲ. ಅಬ್ಬರ ಇಲ್ಲ, ಆಡಂಬರ ಇಲ್ಲದ ವ್ಯಕ್ತಿ. ಅವರು ಮಾಡುತ್ತಿರುವ ಉತ್ತಮ ಕೆಲಸಗಳೇ ಅವರ ಬಗ್ಗೆ ಮಾತನಾಡುತ್ತಿವೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಬಿಡುವಿಲ್ಲದ ಕೆಲಸಗಳಲ್ಲಿ ತೊಡಗಿಬಿಡುತ್ತಾರೆಂದು ಸದಾನಂದಗೌಡರು ಮಾರ್ಮಿಕವಾಗಿ ನುಡಿದರು.

    ನಮ್ಮ ನಡುವಿನ ರಾಜಕಾರಣಿಗಳಲ್ಲಿ ಮಾತನಾಡುವವರೇ ಜಾಸ್ತಿ. ಇದಕ್ಕೆ ಅಶ್ವತ್ಥನಾರಾಯಣ ಅಪವಾದ. ಅವರದ್ದು ಮಾತು ಕನಿಷ್ಠ, ಕೆಲಸ ಗರಿಷ್ಠ ಎನ್ನುವ ನೀತಿ. ಈ ಪರಿಶ್ರಮವೇ ಅವರನ್ನು ಮುಂದೊಂದು ದಿನ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿದೆ ಎಂದು ಗೌಡರು ಹೇಳಿದರು.

    ಮಲ್ಲೇಶ್ವರ ಕ್ಷೇತ್ರದಲ್ಲಿ ಅದೆಷ್ಟೋ ಮಹಾನುಭಾವರು ಇದ್ದಾರೆ. ಕವಿಗಳು, ವಿಜ್ಞಾನಿಗಳು, ಪಂಡಿತರು, ಪದ್ಮಗಳು- ಭಾರತ ರತ್ನಗಳು ಇದ್ದಾರೆ. ಮುಂದಿನ ದಿನಗಳಲ್ಲಿ ಇದೇ ಕ್ಷೇತ್ರದಿಂದ ಒಬ್ಬ ಮುಖ್ಯಮಂತ್ರಿಯೂ ಹೊರಹೊಮ್ಮಲಿ ಎಂದು ಸದಾನಂದ ಗೌಡರು ಹೇಳಿದರು.

    ಮಲ್ಲೇಶ್ವರದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ನೃತ್ಯ, ಹಾಸ್ಯ, ಸಂಗೀತ ಮೇಳೈಸಿದ ಸಾಂಸ್ಕೃತಿಕ ಜಾಗರಣೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಅತಿಥಿಗಳನ್ನು ಸ್ವಾಗತಿಸಿದರು.

    ಸಂಗೀತ ಮತ್ತು ನೃತ್ಯದ ಮೂಲಕ ಶಿವಸ್ಮರಣೆ ಮಾಡಿಕೊಂಡು ಭಕ್ತರಿಗೆ ಮುದವುಂಟು ಮಾಡುವುದರ ಜತೆಗೆ, ಜಾಗತಿಕವಾಗಿ ಹೆಸರು ಮಾಡಿರುವ ಅನೇಕ ಖ್ಯಾತ ಕಲಾವಿದರು ಉತ್ಸವದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದರು. ವೈವಿಧ್ಯಮಯ ಕಾರ್ಯಕ್ರಮಗಳು ಇಡೀ ರಾತ್ರಿ ಪ್ರೇಕ್ಷಕರ ಮನಸೂರೆಗೊಂಡವು.

    ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ವೆಂಕಟೇಶ್‌, ನಿವೃತ್ತ ಪೋಲೀಸ್ ಅಧಿಕಾರಿ ಬಿ.ಕೆ.ಶಿವರಾಮ್‌ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು

  • ವಿಮಾನ ನಿಲ್ದಾಣದಲ್ಲಿ ಹಳೇ ರನ್‌ ವೇ ಪುನರ್‌ ನಿರ್ಮಾಣ ತಿಂಗಳಾಂತ್ಯಕ್ಕೆ ಪೂರ್ಣ: ಡಿಸಿಎಂ

    ವಿಮಾನ ನಿಲ್ದಾಣದಲ್ಲಿ ಹಳೇ ರನ್‌ ವೇ ಪುನರ್‌ ನಿರ್ಮಾಣ ತಿಂಗಳಾಂತ್ಯಕ್ಕೆ ಪೂರ್ಣ: ಡಿಸಿಎಂ

    – ಕಾಮಗಾರಿ ಪರಿಶೀಲನೆ ಮಾಡಿದ ಉಪ ಮುಖ್ಯಮಂತ್ರಿ

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಳೇ (ಮೊದಲಿನ) ರನ್‌ ವೇ ಪುನರ್‌ ನಿರ್ಮಾಣದ ಕಾಮಗಾರಿ ಈ ತಿಂಗಳಾಂತ್ಯಕ್ಕೆ ಮುಗಿಯಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದರು.

    ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಅವರು ಪ್ರಸ್ತುತ ಕಾಮಗಾರಿ ಬಹುತೇಕ ಮುಗಿಯುತ್ತಾ ಬಂದಿದ್ದು, ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ ಎಂದರು.

    ಸದ್ಯ ಹೊಸ ರನ್‌ ವೇ‌ನಲ್ಲಿಯೇ‌ ವಿಮಾನಗಳ ಸಂಚಾರ‌ ನಡೆಯುತ್ತಿದ್ದು, ಮುಂದಿನ ತಿಂಗಳ ಅಂತ್ಯದಿಂದ ಪುನರ್ ನಿರ್ಮಾಣವಾದ ಹಳೆಯ ರನ್ ವೇನಲ್ಲೂ ವಿಮಾನ ಸಂಚಾರ ಆರಂಭವಾಗಲಿದೆ. ಮುಂಬೈನ ಎಐಸಿ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆ ಈ ಯೋಜನೆಯನ್ನು 260 ಕೋಟಿ ರೂ. ವೆಚ್ಚದಲ್ಲಿ ದಾಖಲೆಯ ಕಡಿಮೆ ಅವಧಿಯಲ್ಲಿ ನಿರ್ಮಿಸಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    ರನ್ ವೇ ಉದ್ದ 4 ಕಿ.ಮೀ ದೂರವಿದ್ದು, ರನ್ ವೇ ಮಧ್ಯದಲ್ಲೂ ಈಗ ಲೈಟ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ವಿಮಾನಗಳ ಸಂಚಾರಕ್ಕೆ ಹೆಚ್ಚು ಅನುಕೂಲ ಆಗುತ್ತದೆ. ಜತೆಗೆ, ಟ್ಯಾಕ್ಸಿ ವೇಯನ್ನು ಹಾಗೂ ಒಳಚರಂಡಿ, ಏರ್‌ಫೀಲ್ಡ್ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಅವರು ಹೇಳಿದರು.

    ಈ ರನ್‌ ವೇ ಕಾರ್ಯಾರಂಭವಾದ ಮೇಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಒಟ್ಟು ಎರಡೂ ರನ್‌ ವೇಗಳ ಮೂಲಕ ವರ್ಷಕ್ಕೆ 60 ರಿಂದ 75 ದಶಲಕ್ಷ ಪ್ರಯಾಣಿಕರನ್ನು ನಿಭಾಯಿಸಬಲ್ಲದು. ಇದರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಉತ್ತಮ ಲಾಭವಾಗಲಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

    ಕೋವಿಡ್‌ ಸಂಕಷ್ಟವು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಅಪಾರ ನಷ್ಟವನ್ನೇ ಉಂಟು ಮಾಡಿದೆ. . ಕೋವಿಡ್‌ಗೂ ಮೊದಲು ವಾರ್ಷಿಕ 33 ದಶಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬಳಿಕ ಆ ಪ್ರಮಾಣ 12 ದಶಲಕ್ಷಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಹೆಚ್ಚಳವನ್ನು ನಿರೀಕ್ಷೆ ಮಾಡಬಹುದಾಗಿದೆ ಎಂದರು ಅವರು. ಈ ವೇಳೆ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಜರಿದ್ದರು.

  • ಸಿಎಸ್‍ಆರ್ ನಿಧಿಯನ್ನು ಶಾಲಾ ಪೂರ್ವ ಶಿಕ್ಷಣಕ್ಕೆ ಬಳಸಿದರೆ ಉತ್ತಮ: ಡಾ.ಅಶ್ವತ್ಥನಾರಾಯಣ

    ಸಿಎಸ್‍ಆರ್ ನಿಧಿಯನ್ನು ಶಾಲಾ ಪೂರ್ವ ಶಿಕ್ಷಣಕ್ಕೆ ಬಳಸಿದರೆ ಉತ್ತಮ: ಡಾ.ಅಶ್ವತ್ಥನಾರಾಯಣ

    ಬೆಂಗಳೂರು: ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‍ಆರ್)ಯನ್ನು ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಬಳಸಿದರೆ ಉತ್ತಮ. ಈ ನಿಟ್ಟಿನಲ್ಲಿ ಕಂಪನಿಗಳು ಕೈಗೊಳ್ಳುವ ಎಲ್ಲ ಯೋಜನೆಗಳಿಗೆ ಸರ್ಕಾರದ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯ ಬಳಕೆಯ ಪರಿಣಾಮಗಳ ಕುರಿತು ಅಮೆರಿಕ ಚೇಂಬರ್ ಆಫ್ ಕಾರ್ಮರ್ಸ್ ನಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಬದುಕಿನಲ್ಲಿ ಕಲಿಯುವ ಪ್ರತಿ ಕೌಶಲ, ಜ್ಞಾನ ಸಮಾಜದ ಒಳಿತಿಗೆ ಬಳಕೆಯಾಗಬೇಕು. ನಮ್ಮ ಕಲಿಕೆ ಸಮಾಜದ ಒಳಿತಿಗೆ ಬಳಕೆಯಾಗದಿದ್ದರೆ ಅಂಥ ಕಲಿಕೆ ವ್ಯರ್ಥ. ಸಿಎಸ್‍ಆರ್ ಒಳ್ಳೆಯ ಕೆಲಸ ಮಾಡುತ್ತಿದೆ. ಸಮಾಜ ಹಾಗೂ ಸರ್ಕಾರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ. ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಇಂಥ ಸಂಸ್ಥೆಗಳು ಕೈಗೊಳ್ಳುವ ಎಲ್ಲ ಯೋಜನೆಗಳಿಗೆ ಸರ್ಕಾರದ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು.

    ಸಾಮಾನ್ಯವಾಗಿ ಸರ್ಕಾರಗಳು ತತ್‍ಕ್ಷಣದ ಫಲಿತಾಂಶಕ್ಕೆ ಹೆಚ್ಚು ಒತ್ತು ನೀಡಲು ಪ್ರಯತ್ನಿಸುತ್ತವೆ. ನರ್ಸರಿ ಶಾಲೆಗಳಿದ್ದರೂ, ಅವುಗಳ ಕಾರ್ಯವೈಖರಿ, ಇನ್ನೂ ಸುಧಾರಿಸಬೇಕಿದೆ. ಈ ಕೊರತೆಯನ್ನು ನೀಗಿಸುವಲ್ಲಿ ಸಿಎಸ್‍ಆರ್ ಪಾತ್ರ ದೊಡ್ಡದು. ಶಿಕ್ಷಣದಲ್ಲಿ ಮೊದಲ ಆದ್ಯತೆ ನರ್ಸರಿ ಶಿಕ್ಷಣಕ್ಕೆ ಸಿಗಬೇಕು. ಈ ನಿಟ್ಟಿನಲ್ಲಿ ಕಾರ್ಪೊರೇಟ್ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿ ಉತ್ತಮ ರೀತಿಯಲ್ಲಿ ಬಳಕೆಯಾಗಬೇಕು ಎಂದರು.

    ಸೂಕ್ತ ಶಿಕ್ಷಣ ಒದಗಿಸುವ ಮೂಲಕ ಸಮಾಜದ ಬಹುತೇಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರಚನಾತ್ಮಕ ಬದಲಾವಣೆಗಳನ್ನು ಒಳಗೊಂಡಿದ್ದು, ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಿದೆ. ಸಾಮಾಜಿಕ ಬದ್ಧತೆ, ಕ್ರೀಡೆ, ಸಂಸ್ಕೃತಿಯನ್ನೊಳಗೊಂಡಂತೆ ಶಿಕ್ಷಣ ನೀತಿ ಬಹಳ ಮುಖ್ಯ. ಸರಿಯಾದ ರೀತಿಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳದಿದ್ದರೆ ಸಮಸ್ಯೆಗಳು ಎದುರಾಗುತ್ತವೆ. ಹೊಸ ನೀತಿಗಳನ್ನು ತರುವುದರ ಜೊತೆಗೆ ಅವುಗಳ ಅನುಷ್ಠಾನಕ್ಕೂ ಆದ್ಯತೆ ನೀಡಬೇಕು. ಅಲ್ಲದೆ ಸುಸ್ಥಿರ ಅಭಿವೃದ್ಧಿ ಸಾಧಿಸುವುದು ಸಹ ಬಹಳ ಮುಖ್ಯ ಎಂದರು.

    ಶಿಕ್ಷಣ ಕ್ಷೇತ್ರದ ಬಹು ದೊಡ್ಡ ಸಮಸ್ಯೆ ಎಂದರೆ ಸೂಕ್ತ ಸಂವಹನ ಇಲ್ಲದಿರುವುದು. ಯಾವ ಸೌಲಭ್ಯಗಳಿವೆ ಎಂಬ ಮಾಹಿತಿ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಾರೆ. ಈ ಗೊಂದಲವನ್ನು ಪರಿಹರಿಸಲು ಎಲ್ಲವನ್ನೂ ಡಿಜಿಟಲೀಕರಣಗೊಳಿಸುವ ಕೆಲಸ ಆಗುತ್ತಿದೆ. ಉದ್ದಿಮೆಗಳು ಹಾಗೂ ಶೈಕ್ಷಣಿಕ ಮಾರ್ಗದರ್ಶಕರ ಪಟ್ಟಿ ಇರುವ ಆನ್‍ಲೈನ್ ವೇದಿಕೆ ಸೃಷ್ಟಿಸಲಾಗುವುದು. ಎಲ್ಲೆಲ್ಲಿ ಇಂಟರ್ನ್‍ಶಿಪ್, ಪ್ರಾಜೆಕ್ಟ್ ಮಾಡಲು ಅವಕಾಶ ಇದೆ, ಉದ್ಯೋಗಾವಕಾಶಗಳು ಎಲ್ಲಿವೆ ಎಂಬ ಮಾಹಿತಿ ಈ ಆನ್‍ಲೈನ್ ವೇದಿಕೆಯಲ್ಲಿ ಲಭ್ಯ. ಈ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದರು.

    ಕಾರ್ಯಕ್ರಮದಲ್ಲಿ ಅಮೆರಿಕ ಚೇಂಬರ್ ಆಫ್ ಕಾರ್ಮರ್ಸ್ ಸಿಇಓ ರಂಜನಾ ಖನ್ನಾ ಹಾಗೂ ಅಮೆರಿಕ ಮೂಲದ ಹಲವು ಕಂಪನಿಗಳ ಮುಖ್ಯಸ್ಥರು ಭಾಗಿಯಾಗಿದ್ದರು.

  • ಟ್ರಂಪ್ ಕಾರ್ಯಕ್ರಮಕ್ಕೆ 100 ಕೋಟಿ ರೂ. ಮಾತ್ರ ಖರ್ಚಾಗಿದೆ: ಡಿಸಿಎಂ

    ಟ್ರಂಪ್ ಕಾರ್ಯಕ್ರಮಕ್ಕೆ 100 ಕೋಟಿ ರೂ. ಮಾತ್ರ ಖರ್ಚಾಗಿದೆ: ಡಿಸಿಎಂ

    – 3 ಸಾವಿರ ಕೋಟಿ ರೂ. ವೆಚ್ಚವಾಗಿಲ್ಲ

    ರಾಯಚೂರು: ಟ್ರಂಪ್ ಕಾರ್ಯಕ್ರಮಕ್ಕೆ 100 ಕೋಟಿ ರೂ. ಮಾತ್ರ ಖರ್ಚಾಗಿದೆ 3 ಸಾವಿರ ಕೋಟಿ ಅನ್ನೋದು ಸುಳ್ಳು, ಇಂತಹ ಭವ್ಯ ಸ್ವಾಗತ ಕೊಡುವ ಸಾಮಥ್ರ್ಯ ಯಾರ ಹತ್ತಿರವೂ ಇರಲಿಲ್ಲ ಮೋದಿ ಮಾಡಿದ್ದಾರೆ ಎಂದು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ ಜೊತೆಗೆ ಇತರ ರಾಷ್ಟಗಳೊಂದಿಗೂ ಸಂಬಂಧ ಬೆಸೆಯುವ ಕೆಲಸ ಆಗಿದೆ. ಇತರ ದೇಶಗಳೊಂದಿಗಿನ ಬಾಂಧವ್ಯ ಮುಖ್ಯ. ಅಮೇರಿಕಕ್ಕೆ ಹೋದರೆ ಅಲ್ಲಿಯೂ ಸಮಸ್ಯೆ ಇರುತ್ತೆ. ಸಮಸ್ಯೆ ಮುಚ್ಚಿಟ್ಟುಕೊಳ್ಳುವ ಪ್ರಶ್ನೆಯಿಲ್ಲ, ಎಲ್ಲ ಸಮಸ್ಯೆ ಒಂದೇ ಬಾರಿಗೆ ಬಗೆಹರಿಯುವುದಿಲ್ಲ. ದೇಶದ ಅಭಿವೃದ್ಧಿಗೆ ಉತ್ತಮ ಕಾರ್ಯ ನಿರ್ವಹಿಸಬೇಕು. ಅಲ್ಲದೆ ಪಾಕಿಸ್ತಾನವನ್ನು ಕೈಬಿಟ್ಟರೆ ಪೂರ್ಣ ಕೈತಪ್ಪುತ್ತದೆ ಎಂದು ಅಮೆರಿಕ ಜೊತೆಗಿಟ್ಟುಕೊಂಡಿದೆ. ದೇಶದ ಹಿತಾಸಕ್ತಿ ಕಾಪಾಡಲು ನಮ್ಮ ನಾಯಕರು ಇದ್ದಾರೆ ಎಂದರು.

    30 ಜನ ಬಿಜೆಪಿ ಶಾಸಕರು ರಾಜಿನಾಮೆ ನೀಡುತ್ತಾರೆ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ, ನಾವು ಒಗ್ಗಟ್ಟಾಗೇ ಇದ್ದೇವೆ ಎಂದು ತಿರುಗೇಟು ನೀಡಿದರು.

    ರಾಯಚೂರು ವಿಶ್ವವಿದ್ಯಾಲಯ, ಐಐಐಟಿ ಸ್ಥಳ ವಿಕ್ಷಣೆ, ಮಹಿಳಾ ಪದವಿ ಕಾಲೇಜು ಕಟ್ಟಡ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಡಿಸಿಎಂ ಅಶ್ವತ್ ನಾರಾಯಣ ಭಾಗವಹಿಸಿದರು.

  • ಅಧಿಕಾರಕ್ಕಾಗಿ ಧರ್ಮಗಳನ್ನು ಒಡೆದವ್ರು ಮೋದಿ, ನಾನಲ್ಲ: ಹೆಚ್‍ಡಿಕೆ ಕಿಡಿ ನುಡಿ

    ಅಧಿಕಾರಕ್ಕಾಗಿ ಧರ್ಮಗಳನ್ನು ಒಡೆದವ್ರು ಮೋದಿ, ನಾನಲ್ಲ: ಹೆಚ್‍ಡಿಕೆ ಕಿಡಿ ನುಡಿ

    ಬೆಂಗಳೂರು: ಅಧಿಕಾರಕ್ಕಾಗಿ ಧರ್ಮಗಳನ್ನು ಒಡೆದವರು ಮೋದಿ, ನಾನಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವಿಟ್ಟರ್ ಬರೆದುಕೊಂಡಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿರುವ ಸಿಎಂ, ನೇರವಾಗಿ ಡಿಸಿಎಂ, ಸಿಎಂ ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ.

    ‘ಒಕ್ಕಲಿಗ ಎಂಬ ಹೆಸರನ್ನು ಕುಮಾರಸ್ವಾಮಿ ಬಳಸಬಾರದು. ಸಮಾಜವನ್ನು ಒಡೆಯುವ, ಕೆಲಸವನ್ನು ಹೆಚ್‍ಡಿಕೆ ಮಾಡುತ್ತಿದ್ದಾರೆ’ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ. ಒಂದು ಸಮುದಾಯದ ನಾಯಕನನ್ನು ಟೀಕಿಸಲು ಅದೇ ಸಮುದಾಯದ ವ್ಯಕ್ತಿಯನ್ನು ಬಳಸಿಕೊಳ್ಳುವುದು ಬಿಜೆಪಿಯ ಸೋಂಕು. ಬಿಜೆಪಿ ನಾಯಕರೇ, ನಾನು ಒಕ್ಕಲಿಗ ಅಸ್ಮಿತೆಯ ಬಗ್ಗೆ ಮಾತನಾಡಿದ್ದೇನೆ. ಬಿಎಸ್‍ವೈ ಅವರಂತೆ ಚುನಾವಣಾ ವೇದಿಕೆಯಲ್ಲಿ ನಿಂತು ‘ನನ್ನ ಜಾತಿಯ ಒಂದು ವೋಟೂ ಬೇರೆ ಪಕ್ಷಕ್ಕೆ ಹೋಗಬಾರದು’ ಎಂದು ಆಜ್ಞೆ ಮಾಡಿಲ್ಲವಲ್ಲ? ಮತಕ್ಕಾಗಿ ಜಾತಿಯನ್ನು ದುಡಿಸಿಕೊಂಡವರು ಬಿಎಸ್ವೈ. ಅಧಿಕಾರಕ್ಕಾಗಿ ಧರ್ಮಗಳನ್ನು ಒಡೆದವರು ಮೋದಿ. ನಾನಲ್ಲ.

    ಒಕ್ಕಲಿಗರು ಅಧಿಕಾರಕ್ಕೆ ಬರುವುದನ್ನು, ಹೋರಾಟ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ. ಒಕ್ಕಲಿಗ ನಾಯಕತ್ವವನ್ನು ಅಭದ್ರಗೊಳಿಸುವ ಪ್ರಯತ್ನ ಮಾಡುವ ಬಿಜೆಪಿ ‘ಪಾಕಿಸ್ತಾನಿ’ ಎನ್ನುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಮಾಡಿದ್ದ ಅಪಮಾನವನ್ನು ಉಲ್ಲೇಖಿಸಿದ್ದೆ. ಒಕ್ಕಲಿಗರ ಜೀನ್ ಈ ಮಣ್ಣಿನಲ್ಲಿದೆ ಎಂಬುದನ್ನು ತಿಳಿಸಿದ್ದೆ ಅಷ್ಟೇ. ಒಕ್ಕಲಿಗರ ಜೀನ್ ಕರ್ನಾಟಕದ ಮಣ್ಣಿನಲ್ಲಿದೆ ಎಂದು ಹೇಳಿದರೆ ಆಶ್ವತ್ಥ ನಾರಾಯಣ + ಬಿಜೆಪಿಗೆ ಏಕೆ ಕಣ್ಣು ಉರಿ? ನಿಮ್ಮ ಜೀನ್ ಪಾಕಿಸ್ತಾನದಲ್ಲಿದೆ ಎಂಬ ಮರುಕವೇ? ನಿಮ್ಮ ಸಿದ್ಧಾಂತ ಪ್ರತಿಪಾದಕರ ಜೀನ್ ‘ನಾಜಿ’ ಮೂಲದ್ದು ಎಂಬ ಬೇಸರವೇ? ಈ ಮಣ್ಣಿನವರಾದ ‘ನಾವು’ ನಮ್ಮ ಅಸ್ಮಿತೆ ಬಗ್ಗೆ ಮಾತಾಡುತ್ತೇವೆ. ತಡೆಯಲು ಬಿಜೆಪಿಗೆ ಸಾಧ್ಯವೇ?

    ತನ್ನ ಧರ್ಮ, ಸಮಾಜದ ಬಗ್ಗೆ ಅಪಾರ ಗೌರವ ಇಟ್ಟುಕೊಂಡೂ ಇತರ ಧರ್ಮ, ಸಮಾಜಗಳ ಮೇಲೆ ಅಷ್ಟೇ ಗೌರವ ಹೊಂದುವುದು ನಾನು ನಂಬಿದ ಜಾತ್ಯತೀತತೆ. ಇದರಲ್ಲಿ ಒಕ್ಕಲಿಗ ಅಸ್ಮಿತೆಯೂ ಇದೆ, ಇತರ ಸಮಾಜದ ಮೇಲಿನ ಗೌರವವೂ ಇದೆ. ನಿತ್ಯ ಅನ್ಯಧರ್ಮಗಳ ಮೇಲೆ ದಾಳಿ ಮಾಡುವ, ಜಾತಿಗಳನ್ನು ಮತಕ್ಕಾಗಿ ಬಳಸಿಕೊಳ್ಳುವ ನಿಮ್ಮ ಪಕ್ಷದವರಿಂದ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸಮಾಜಘಾತುಕ ಶಕ್ತಿಗಳ ಬಲ ಹೆಚ್ಚಾಗಲು ಹಿಂದಿನ ಸರ್ಕಾರ ಕಾರಣ: ಡಿಸಿಎಂ ಅಶ್ವಥ್

    ಸಮಾಜಘಾತುಕ ಶಕ್ತಿಗಳ ಬಲ ಹೆಚ್ಚಾಗಲು ಹಿಂದಿನ ಸರ್ಕಾರ ಕಾರಣ: ಡಿಸಿಎಂ ಅಶ್ವಥ್

    – ಕನಕಪುರಕ್ಕೆ ಸದ್ಯಕ್ಕೆ ಮೆಡಿಕಲ್ ಕಾಲೇಜಿಲ್ಲ

    ಮೈಸೂರು: ರಾಜ್ಯದಲ್ಲಿ ಬಾಂಬ್ ಪತ್ತೆಯಂತಹ ಪ್ರಕರಣಗಳಿಗೆ ಹಿಂದಿನ ಸರ್ಕಾರಗಳೇ ಕಾರಣ. ಸಮಾಜಘಾತುಕ ಶಕ್ತಿಗೆ ಕಡಿವಾಣ ಹಾಕೋದು ಬಿಟ್ಟು ಪ್ರೋತ್ಸಾಹ ಕೊಟ್ಟ ಪರಿಣಾಮ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಆರೋಪಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಡಿಸಿಎಂ, ಹಿಂದಿನ ಸರ್ಕಾರ ಸಮಾಜಘಾತುಕ ಕೆಲಸ ಮಾಡುತ್ತಿದ್ದವರ ಮೇಲಿನ ಕೇಸ್‍ಗಳನ್ನ ವಾಪಸ್ ತೆಗೆದುಕೊಂಡಿದ್ದಾರೆ. ಅದಕ್ಕೆ ಅವರೆಲ್ಲಾ ಕಾನೂನು ಮೀರಿ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಇಂದು ಈ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದರು.

    ನಮ್ಮ ಸರ್ಕಾರ ಎಲ್ಲವನ್ನು ನಿಯಂತ್ರಣ ಮಾಡುವ ಪ್ರಯತ್ನ ಮಾಡಿದೆ. ಆದಷ್ಟು ಘಟನೆಗಳು ನಡೆಯುವ ಮುನ್ನವೇ ತಡೆಹಿಡಿಯಲಾಗಿದೆ. ಬಾಂಬ್ ತಯಾರಿಕೆಯ ಕೆಲ ವಸ್ತುಗಳು ಕಾರ್ಖಾನೆ ಉಪಯೋಗಕ್ಕೆ ಸಿಗುತ್ತೆ. ಅವುಗಳನ್ನ ಬಳಸಿಕೊಂಡು ಈ ಕೃತ್ಯ ಎಸಗುತ್ತಿದ್ದಾರೆ. ಇಂತಹ ವಸ್ತುಗಳನ್ನು ಅವರ ಕೈಗೆ ಸಿಗದಂತೆ ನೋಡಿಕೊಳ್ಳುತ್ತೇವೆ ಎಂದರು.

    ಸದ್ಯಕ್ಕೆ ಕನಕಪುರಕ್ಕೆ ಮೆಡಿಕಲ್ ಕಾಲೇಜಿಲ್ಲ ಎಂದು ಅಶ್ವಥ್ ನಾರಾಯಣ್ ಪರೋಕ್ಷವಾಗಿ ಹೇಳಿದ್ದಾರೆ. ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಮಾಡುತ್ತಿದ್ದೇವೆ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಜೊತೆ ಹೆಲ್ತಿ ಸಿಟಿ ಮಾಡಲಾಗುತ್ತೆ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಮಾಡುತ್ತಿರುವುದರಿಂದ ತಾಲೂಕು ಕೇಂದ್ರದಲ್ಲಿ ಮೆಡಿಕಲ್ ಕಾಲೇಜಿನ ಅಗತ್ಯ ಇರಲ್ಲ ಎಂದರು. ರಾಜ್ಯದಲ್ಲಿ ಮಂಜೂರಾಗಿರುವ ನಾಲ್ಕು ಮೆಡಿಕಲ್ ಕಾಲೇಜಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

  • ಉನ್ನತ ಶಿಕ್ಷಣ ಇಲಾಖೆಯಲ್ಲಿ ಇನ್ಮುಂದೆ ಸಂದರ್ಶನ ಇಲ್ಲ

    ಉನ್ನತ ಶಿಕ್ಷಣ ಇಲಾಖೆಯಲ್ಲಿ ಇನ್ಮುಂದೆ ಸಂದರ್ಶನ ಇಲ್ಲ

    ಬೆಂಗಳೂರು: ಅ ಹುದ್ದೆಗೆ ಅಷ್ಟು ಕೊಡಬೇಕು, ಈ ಹುದ್ದೆಗೆ ಇಷ್ಟು ಕೊಡಬೇಕು. ಇಂಟರ್ ವ್ಯೂನಲ್ಲಿ  ಅಂಕ ಕಡಿತ ಮಾಡುತ್ತಾರೆ ಎನ್ನುವ  ಆತಂಕವನ್ನು ಇನ್ನುಂದೆ ಬಿಟ್ಟು ಬಿಡಿ. ಉನ್ನತ ಶಿಕ್ಷಣ ಇಲಾಖೆಯ ಇಂತಹ ಸಂದರ್ಶನ ಪದ್ದತಿಗೆ ತಿಲಾಂಜಲಿ ಇಡಲು ಮುಂದಾಗಿದೆ.

    ಇನ್ನುಂದೆ ಇಲಾಖೆಯಲ್ಲಿ ನೇಮಕವಾಗೋ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ನೋ ಇಂಟರ್ ವ್ಯೂ. ನೇರವಾಗಿ ಎಕ್ಸಾಂ ಬರೆದು ಅರ್ಹ ಅಂಕ ಪಡೆದ್ರೆ ಅ ಅಭ್ಯರ್ಥಿಗೆ ಹುದ್ದೆ ಫಿಕ್ಸ್ ಆಗಲಿದೆ.

    ಉನ್ನತ ಶಿಕ್ಷಣ ಇಲಾಖೆಯಲ್ಲಿ ಇಂಟರ್ ವ್ಯೂ ಪದ್ದತಿ ಹೆಚ್ಚು ವಿವಾದಕ್ಕೆ ಕಾರಣವಾಗಿತ್ತು. ಪರೀಕ್ಷೆ ಬರೆದು ಹೆಚ್ಚು ಅಂಕ ಪಡೆದ್ರೂ ಸಂದರ್ಶನ ಸಮಯದಲ್ಲಿ ಅಂಕಗಳು ಕಡಿಮೆ ಆಗುತಿತ್ತು. ಇದು ಭ್ರಷ್ಟಾಚಾರಕ್ಕೆ ಕಾರಣವೂ ಆಗುತಿತ್ತು.

    ನೂತನ ಸಚಿವರಾದ ಡಾ.ಅಶ್ವಥ್ ನಾರಾಯಣ ಇಲಾಖೆಯ ಅಧಿಕಾರವಹಿಸಿಕೊಂಡ ಮೇಲೆ ಮಹತ್ತರ ಬದಲಾವಣೆ ತಂದಿದ್ದಾರೆ. ಇನ್ನು ಮುಂದೆ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಇಂಟರ್ ವ್ಯೂ ಪದ್ದತಿ ಬೇಡ ಎಂಬ ನಿಯಮ ಜಾರಿಗೆ ತಂದಿದ್ದಾರೆ.

    ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆಗಳು ನಡೆಯಲಿದ್ದು, ಹೆಚ್ಚು ಅಂಕ ಪಡೆದವರು ಕೆಲಸ ಪಡೆಯಬಹುದು. ಸಚಿವರ ಈ ಹೊಸ ಹೆಜ್ಜೆ ಉನ್ನತ ಶಿಕ್ಷಣ ಇಲಾಖೆಯನ್ನ ಭ್ರಷ್ಟಾಚಾರ ಮುಕ್ತ ಇಲಾಖೆ ಮಾಡುತ್ತಾ ಕಾದು ನೋಡಬೇಕಿದೆ.

  • ಡಿಸಿಎಂ ಜೊತೆಗಿನ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್‍ನಲ್ಲಿ ಬ್ಯುಸಿ

    ಡಿಸಿಎಂ ಜೊತೆಗಿನ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್‍ನಲ್ಲಿ ಬ್ಯುಸಿ

    ರಾಮನಗರ: ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರ ನೇತೃತ್ವದಲ್ಲಿ ನಡೆದ ರಾಮನಗರ ಜಿಲ್ಲಾ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್ ನಲ್ಲಿ ತಲ್ಲೀನರಾಗಿದ್ದಾರೆ. ಡಿಸಿಎಂ ಸಭೆಯಲಿಬ್ಯುಸಿಯಾಗಿದ್ದರೆ, ಅಧಿಕಾರಿಗಳು ಮೊಬೈಲ್‍ನಲ್ಲಿ ಯೂಟ್ಯೂಬ್ ನೋಡುವುದರಲ್ಲಿ ಅವರಿಗಿಂತ ಬ್ಯುಸಿಯಾಗಿದ್ದರು.

    ಇಂದು ರಾಮನಗರದ ಜಿ.ಪಂ ಭವನದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಕೆಡಿಪಿ ನಡೆದಿದ್ದು, ಸಭೆಯಲ್ಲಿ ಚರ್ಚೆ ನಡೆಯುತ್ತಿರುವ ವೇಳೆಯೇ ಡಿಸಿಎಂ ಭಾಗವಹಿಸಿದ್ದಾರೆ ಎನ್ನವುದನ್ನೂ ಮರೆತು ಅಧಿಕಾರಿಗಳು ಮೊಬೈಲ್‍ನಲ್ಲಿ ತಲ್ಲೀನರಾಗಿದ್ದರು.

    ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ನಗರಸಭೆ ಆಯುಕ್ತರು ಸೇರಿದಂತೆ ಬಹುತೇಕ ಅಧಿಕಾರಿಗಳು ಮೊಬೈಲ್‍ನಲ್ಲಿ ತಲ್ಲೀನರಾಗಿದ್ದರು. ವಾಟ್ಸಪ್ ಚಾಟಿಂಗ್, ವಾಟ್ಸಪ್ ಸ್ಟೇಟಸ್ ನ ಡ್ಯಾನ್ಸ್ ವಿಡಿಯೋಗಳು, ಯೂಟ್ಯೂಬ್ ನೋಡುವುದರಲ್ಲಿ ನಿರತರಾಗಿದ್ದರು. ಅಧಿಕಾರಿಗಳು ಮೊಬೈಲ್ ನೋಡುವುದರಿಂದ ಬೇಸತ್ತು ಸಭೆ ಬಳಿಕ ಉಪಮುಖ್ಯಮಂತ್ರಿ ಕಾರ್ಯದರ್ಶಿಯವರು ಅಶ್ವತ್ಥ ನಾರಾಯಣ ಗಮನಕ್ಕೆ ತಂದಿದ್ದಾರೆ.

  • ಡಿಸಿಎಂ ಕಾರ್ಯಕ್ರಮದಲ್ಲಿ ಡಿಕೆಶಿ ಪರ ಘೋಷಣೆ

    ಡಿಸಿಎಂ ಕಾರ್ಯಕ್ರಮದಲ್ಲಿ ಡಿಕೆಶಿ ಪರ ಘೋಷಣೆ

    ತುಮಕೂರು: ಡಿಸಿಎಂ ಅಶ್ವಥ್ ನಾರಾಯಣ ಭಾಗಹಿಸಿದ್ದ ಕಾರ್ಯಕ್ರಮದಲ್ಲಿ ಕೆಲವರು ಇಡಿ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪರ ಘೋಷಣೆ ಕೂಗಿದರು. ಇಂದು ಜಿಲ್ಲೆಯ ನೊಣವಿನಕೆರೆಯಲ್ಲಿ ಆದಿಚುಂಚನಗಿರಿ ಸಮುದಾಯ ಭವನದ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಡಿಸಿಎಂ ಅಶ್ವಥ್ ನಾರಾಯಣ ಮುಜುಗರಕ್ಕೊಳಗಾದರು.

    ಕಾರ್ಯಕ್ರಮದ ಉದ್ಘಾಟನೆಗೆ ಅಶ್ವಥ್ ನಾರಾಯಣ ಆಗಮಿಸುತ್ತಿದ್ದಂತೆ ನೆರೆದಿದ್ದ ಜನಸ್ತೋಮ ಡಿಕೆ ಎಂದು ಘೋಷಣೆ ಕೂಗಲಾರಂಭಿಸಿದರು. ಸಮುದಾಯದ ಭವನದೊಳಗೆ ದೇವತಾ ಕಾರ್ಯಗಳು ನಡೆಯುತ್ತಿದ್ದರೂ ಸುಮಾರು 20 ನಿಮಿಷಗಳ ಕಾಲ ಡಿ.ಕೆ.ಶಿವಕುಮಾರ್ ಘೋಷಣೆ ಕೂಗಿದರು. ಇದೇ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಹ ಭಾಗಿಯಾಗಿದ್ದರು.

    ಕಾರ್ಯಕ್ರಮ ಬಳಿಕ ಮಾತನಾಡಿದ ಅಶ್ವಥ್ ನಾರಾಯಣ, ಜನರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಕಾನೂನುಗಳನ್ನು ಪಾಲನೆ ಮಾಡೋದು ನಮ್ಮ ಕರ್ತವ್ಯ. ರಮಾನಾಥ್ ರೈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ಅಖಂಡ ಭಾರತ ನಮ್ಮ ಗುರಿ. ಅಫ್ಘಾನಿಸ್ತಾನದವರೆಗೂ ಭಾರತ ಇತ್ತು. ಹಾಗಾಗಿ ಎಲ್ಲರನ್ನು ಒಟ್ಟುಗೂಡಿಸುವ ಕೆಲಸವನ್ನ ಮಾಡಲಿದ್ದೇವೆ ಎಂದರು.

  • ಪ್ರಧಾನಿಗೆ ನಮಿಸಿದ್ದ ಡಿಸಿಎಂ- ವೈರಲ್ ವಿಡಿಯೋಗೆ ಅಶ್ವಥ್ ನಾರಾಯಣ ಸ್ಪಷ್ಟನೆ

    ಪ್ರಧಾನಿಗೆ ನಮಿಸಿದ್ದ ಡಿಸಿಎಂ- ವೈರಲ್ ವಿಡಿಯೋಗೆ ಅಶ್ವಥ್ ನಾರಾಯಣ ಸ್ಪಷ್ಟನೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಗರಕ್ಕೆ ಬಂದಾಗ ನಾನು ಅವರಿಗೆ ನಮಿಸಿದ್ದೆ. ಆಗ ಅವರು ನನಗೆ ಅಮೂಲ್ಯವಾದ ಸಲಹೆ ನೀಡಿದರು ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

    ವೈರಲ್ ವಿಡಿಯೋ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಸ್ಪಷ್ಟನೆ ನೀಡಿದ ಡಿಸಿಎಂ, ಪ್ರಧಾನಿಯವರು ನಗರಕ್ಕೆ ಬಂದಾಗ ನಾನು ಅವರಿಗೆ ನಮಿಸಿದ್ದೆ. ಆಗ ಪ್ರಧಾನಿಗಳು ತಲೆ ಬಗ್ಗಿಸುವಂಥದ್ದೇನೂ ಬೇಡ, ನೀವೆಲ್ಲ ಯಾವಾಗಲೂ ತಲೆ ಎತ್ತಿಟ್ಟುಕೊಳ್ಳಬೇಕು ಎಂದು ಅಮೂಲ್ಯ ಸಲಹೆ ಕೊಟ್ಟಿರುವುದಾಗಿ ತಿಳಿಸಿದರು.

    ಈ ಮೂಲಕ ಪ್ರಧಾನಿಯವರು ಒಳ್ಳೆಯ ಮಾತನ್ನು ಹೇಳಿದ್ದಾರೆ. ಹೀಗಾಗಿ ಹಿರಿಯರಾದ ಪ್ರಧಾನಿಯವರ ಕಿವಿ ಮಾತು ಪಾಲಿಸುತ್ತೇನೆ. ಇದರಲ್ಲಿ ವೈರಲ್ ಆಗುವಂಥದ್ದು ಏನಿಲ್ಲ ಎಂದು ಸ್ಪಷ್ಟನೆ ನೀಡಿದರು.

    ವೈರಲ್ ವಿಡಿಯೋದಲ್ಲೇನಿದೆ?
    ಚಂದ್ರಯಾನ 2 ಲ್ಯಾಂಡಿಂಗ್ ವೀಕ್ಷಿಸಲೆಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದು ಇಸ್ರೋಗೆ ತೆರಳುವವರಿದ್ದರು. ಹೀಗಾಗಿ ಅವರನ್ನು ನಗರಕ್ಕೆ ಬರಮಾಡಿಕೊಳ್ಳಲು ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡಿಸಿಎಂ ಅಶ್ವಥ್ ನಾರಾಯಣ ಮೊದಲಾದ ನಾಯಕರು ಬಂದಿದ್ದರು. ಮೋದಿಯವರು ಯಲಹಂಕ ವಾಯುನೆಲೆಗೆ ಬರುತ್ತಿದ್ದಂತೆಯೇ ಸಿಎಂ ಅವರು ಹೂಗುಚ್ಛ ನೀಡಿ ಬರಮಾಡಿಕೊಂಡರು. ಹೀಗೆ ಸ್ವಾಗತಿಸುವ ವೇಳೆ ಅಶ್ವಥ್ ನಾರಾಯಣ ಅವರು ಪ್ರಧಾನಿಯವರ ಕಾಲು ಮುಟ್ಟಿ ನಮಸ್ಕರಿಸಿದ್ದರು. ಈ ವೇಳೆ ಪ್ರಧಾನಿಯವರು ಕೆಲ ಹೊತ್ತು ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.