Tag: ashwath narayana

  • ರೈತರ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡ್ತಿದೆ, ಬಿಜೆಪಿ ರೈತರ ಪರವಿದೆ: ಅಶ್ವತ್ಥ ನಾರಾಯಣ

    ರೈತರ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡ್ತಿದೆ, ಬಿಜೆಪಿ ರೈತರ ಪರವಿದೆ: ಅಶ್ವತ್ಥ ನಾರಾಯಣ

    ಹುಬ್ಬಳ್ಳಿ: ಕಾಂಗ್ರೆಸ್ ರೈತರ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಬಿಜೆಪಿ ಯಾವಾಗಲೂ ರೈತರ ಪರವಿದೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಉತ್ತರ ಪ್ರದೇಶದ ಘಟನೆ ಬಗ್ಗೆ ಅಲ್ಲಿನ ಸರ್ಕಾರ ಸೂಕ್ತ ಕ್ರಮ ವಹಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದೆ. ಘಟನೆ ನಡೆಯಬಾರದಿತ್ತು, ಆದರೀಗ ಸರ್ಕಾರ ಎಲ್ಲ ಕ್ರಮವಹಿಸಿ ಎಲ್ಲವನ್ನು ತಿಳಿಗೊಳಿಸುವ ಕಾರ್ಯ ಮಾಡುತ್ತಿದೆ ಎಂದರು. ಇದನ್ನೂ ಓದಿ:  ನಿರ್ಭೀತ, ನೈಜ ಕಾಂಗ್ರೆಸ್ಸಿಗಳು ಪ್ರಿಯಾಂಕಾ ಗಾಂಧಿ: ರಾಗಾ

    ರೈತರು ಸಬಲೀಕರಣ ಆಗಬಾರದು, ಅವರು ಉನ್ನತಿ ಹೊಂದಬಾರದು, ಬಲಿಷ್ಠರಾಗಬಾರದು, ಅಸಹಾಯಕಾರಾಗಬೇಕು ಎನ್ನುವುದು ಕಾಂಗ್ರೆಸ್ ಅವರ ಕಲ್ಪನೆ. ಅವರು ಕಲ್ಪನೆ ಇಟ್ಟು ರಾಜಕೀಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ನಾವೆಲ್ಲ ಅನ್ನದಾತರ ಕುಟುಂಬಕ್ಕೆ ಸೇರಿದವರು, ಅವರ ಶಕ್ತಿ ಹೆಚ್ಚಿಸಲು ಸುಧಾರಣೆಗಳು ರೈತರ ಪೂರಕವಾಗಿವೆ. ಇದೇಲ್ಲಾ ಕುತಂತ್ರ, ತಂತ್ರಗಾರಿಕೆಯನ್ನು, ದಾರಿ ತಪ್ಪಿಸುವ ಪ್ರಯತ್ನವನ್ನು ಪ್ರತಿಪಕ್ಷ ಮತ್ತು ಕೆಲವು ಸಂಘಟನೆಗಳು ಮಾಡುತ್ತಿದ್ದಾರೆ ಎಂದು ಕುಟುಕಿದರು. ಇದನ್ನೂ ಓದಿ:  ಗೆದ್ದು ಬೀಗಿದ ಲೂಸ್ ಮಾದ ಯೋಗಿಯ ‘ಲಂಕೆ’ ಸಿನಿಮಾ – 25 ದಿನದ ಸಂಭ್ರಮದಲ್ಲಿ ಚಿತ್ರತಂಡ

    ವಿಜಯೇಂದ್ರರನ್ನು ತಡವಾಗಿ ಉಪಚುನಾವಣೆ ಪಟ್ಟಿಗೆ ಸೇರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಪಕ್ಷದವರೇ ಪ್ರತ್ಯೇಕವಾಗಿ, ವಿಶೇಷವಾಗಿ ಬೆಳಕನ್ನು ಚೆಲ್ಲುವುದು ಅಷ್ಟು ಸೂಕ್ತವಲ್ಲ. ಎಲ್ಲರಿಗೂ ಪಕ್ಷದಲ್ಲಿ ಸ್ಥಾನಮಾನವಿದೆ. ಎಲ್ಲರಿಗೂ ಜವಾಬ್ದಾರಿ ಇದೆ. ರಾಜಕೀಯದಲ್ಲಿ ಎಲ್ಲರಿಗೂ ಅವಕಾಶ ಇದ್ದೆ ಇರುತ್ತದೆ. ಅವಕಾಶ ಸಿಕ್ಕೆ ಸಿಗುತ್ತದೆ. ಇದಕ್ಕೆ ವಿಶೇಷ ಬಣ್ಣ, ವ್ಯತ್ಯಾಸವನ್ನು ನಿರ್ಮಾಣ ಮಾಡುವ ಯಾವುದೇ ಅಗತ್ಯ ಇಲ್ಲ ಎಂದರು.

    ಇದೇ ವೇಳೆ ಸಿದ್ದರಾಮಯ್ಯ ಸರ್ಕಾರ ಹಾಗೂ ಜಾತಿಗಣತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ಅಧಿಕಾರಕ್ಕೆ ಬರಲ್ಲ, ಕನಸು ಮನಸಲ್ಲು ಅವರು ಬರಲ್ಲ. ಅವರ ಪಕ್ಷ ಈಗಾಗಲೇ ಹರಿದು ಹಂಚಿಹೋಗಿದೆ. ಸಿಎಂ ನಾನಾಗಬೇಕು ಅಂತ ಅವರ ಅವರಲ್ಲೇ ಜಗಳ ಶುರುವಾಗಿದೆ. ಅವರಿಗೆ ಅಧಿಕಾರ ಯಾವಾಗ ಮಾಡಬೇಕೆನ್ನುವುದು ರಾಜಕೀಯವಾಗಿದೆ. ಕೇವಲ ಗೊಂದಲ ನಿರ್ಮಾಣ ಮಾಡಬೇಕು, ಸಮಾಜ ಒಡೆಯಬೇಕು ಇಂತ ಯೋಚನೆಗಳು ಅವರಲ್ಲಿದೆ. ಉತ್ತಮ ಆಡಳಿತ, ಉತ್ತಮ ಸೇವೆ ಕೊಡಬೇಕು ಎನ್ನುವ ಕಲ್ಪನೆ ಇಲ್ಲದ ಪಕ್ಷ ಮತ್ತು ನಾಯಕರಾಗಿದ್ದಾರೆ. ಅವರ ಕಾಲದಲ್ಲಿ ವರದಿ ಬಂದಾಗ ಯಾಕೆ ಸಹಿ ಮಾಡದೇ ಕೂತಿದ್ದರು ಅಂತ ಅವರನ್ನೇ ಕೇಳಬೇಕು. ರಾಜಕೀಯ ಹೀಗೆ ಮಾಡಿಕೊಂಡು ಬಂದಿದ್ದಾರೆ. ಬಣ್ಣ ಬಳೆದುಕೊಂಡು ಕತೆ ಹೇಳಿಕೊಂಡು, ಸುಳ್ಳು ಹೇಳಿಕೊಂಡು, ಮನೆಗೆ ಬೆಂಕಿ ಹಚ್ಚಿ ಅಡುಗೆ ಮಾಡುವವರು ಅವರು ಎಂದು ಕಿಡಿಕಾರಿದರು. ಇದನ್ನೂ ಓದಿ:  ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದಿದ್ದು ನಿಜವಾದ್ರೆ ರಾಜೀನಾಮೆ ನೀಡುತ್ತೇನೆ: ಅಜಯ್ ಮಿಶ್ರಾ

    ಎಲ್ಲವೂ ಬೆಲೆ ನಿಯಂತ್ರಣದಲ್ಲಿದೆ. ಬೈ ಎಲೆಕ್ಷನ್ ನಲ್ಲಿ ನಾವು ಎರಡು ಕ್ಷೇತ್ರವನ್ನು ಗೆಲ್ಲುತ್ತೇವೆ. ಈಗಾಗಲೇ ಎಲ್ಲೆಲ್ಲಿ ಬೈ ಎಲೆಕ್ಷನ್ ನಡೆದಿದೆ, ಅಲ್ಲಲ್ಲಿ ನಾವು ಗೆದ್ದಿದ್ದೇವೆ ಎಂದರು.

  • ಎಂಜಿನಿಯರಿಂಗ್ ಸೀಟು ಶುಲ್ಕ ಹೆಚ್ಚಳ ನಿರ್ಧಾರ ಆಗಿಲ್ಲ: ಅಶ್ವಥ್ ನಾರಾಯಣ

    ಎಂಜಿನಿಯರಿಂಗ್ ಸೀಟು ಶುಲ್ಕ ಹೆಚ್ಚಳ ನಿರ್ಧಾರ ಆಗಿಲ್ಲ: ಅಶ್ವಥ್ ನಾರಾಯಣ

    ಬೆಂಗಳೂರು: ಎಂಜಿನಿಯರಿಂಗ್ ಕಾಲೇಜು ಶುಲ್ಕ ಹೆಚ್ಚಳ ವಿಚಾರವಾಗಿ ಸರ್ಕಾರ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳ ವಿಚಾರವಾಗಿ ಇನ್ನು ಯಾವುದೇ ತೀರ್ಮಾನ ಸರ್ಕಾರ ಮಾಡಿಲ್ಲ. ವಿಟಿಯು ವಿಸಿ ನೇತೃತ್ವದಲ್ಲಿ ಈಗಾಗಲೇ ಕಮಿಟಿ ರಚನೆ ಮಾಡಲಾಗಿದೆ. ಮ್ಯಾನೆಜ್‍ಮೆಂಟ್ ಕಾಲೇಜುಗಳ ಜೊತೆಯೂ ಸಭೆ ಮಾಡಿ ಅಂತಿಮ ತೀರ್ಮಾನ ಮಾಡಲಾಗುವುದು. ಸಭೆ ಮಾಡುವವರೆಗೂ ಶುಲ್ಕ ಹೆಚ್ಚಳದ ಬಗ್ಗೆ ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

    ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಪ್ರತಿ ವರ್ಷ ಸರ್ಕಾರಕ್ಕೆ ಶುಲ್ಕ ಹೆಚ್ಚಳಕ್ಕೆ ಬೇಡಿಕೆ ಇಡುತ್ತವೆ. ಸರ್ಕಾರ ಖಾಸಗಿ ಸಂಸ್ಥೆಗಳ ಜೊತೆ ಸಭೆ ನಡೆಸಿ ಶುಲ್ಕ ಹೆಚ್ಚಳದ ನಿರ್ಧಾರ ಮಾಡುತ್ತದೆ.

    ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಹೀಗಾಗಿ ಈ ವರ್ಷ ಶೇ.30ರಷ್ಟು ಶುಲ್ಕ ಹೆಚ್ಚಳಕ್ಕೆ ಖಾಸಗಿ ಕಾಲೇಜುಗಳಿ ಬೇಡಿಕೆ ಇಟ್ಟಿವೆ ಎಂದು ಮೂಲಗಳು ಹೇಳಿವೆ.  ಇದನ್ನೂ ಓದಿ: ಹೋದಲ್ಲಿ, ಬಂದಲ್ಲಿ ಶುಭಕೋರಿ ಕಟೌಟ್ ಹಾಕಬೇಡಿ: ಸಿಎಂ ಬೊಮ್ಮಾಯಿ

    ಪ್ರತಿ ವರ್ಷ ಶೇ.10 ರಿಂದ ಶೇ.15 ಶುಲ್ಕ ಹೆಚ್ಚಳಕ್ಕೆ ಸರ್ಕಾರ ಅನುಮತಿ ಕೊಡುತ್ತಿತ್ತು. ಆದರೆ ಸರ್ಕಾರ ಈ ವರ್ಷ ಎಷ್ಟು ಹೆಚ್ಚಳಕ್ಕೆ ಅವಕಾಶ ಕೊಡುತ್ತದೆ ಕಾದು ನೋಡಬೇಕಿದೆ.

  • ‘ಊರುಕೇರಿ’ ತೊರೆದು ಹೋದ ಸಿದ್ದಲಿಂಗಯ್ಯ

    ‘ಊರುಕೇರಿ’ ತೊರೆದು ಹೋದ ಸಿದ್ದಲಿಂಗಯ್ಯ

    ಬೆಂಗಳೂರು: ಕನ್ನಡ ಸಾಹಿತ್ಯದ ಅಗ್ರಗಣ್ಯ ಲೇಖಕ, ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರು ಕರುಣೆ ಇಲ್ಲದ ಕರೋನಾ ಕೈಗೆ ಸಿಕ್ಕು, ‘ಊರು ಕೇರಿ’ ತೊರೆದು ಹೋಗಿದ್ದಾರೆ. ಇದು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ಆಘಾತ ಎಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

    ಶೋಕ ಸಂದೇಶದಲ್ಲಿ ಏನಿದೆ?
    ಡಾ.ಸಿದ್ದಲಿಂಗಯ್ಯ ನನ್ನ ಅತ್ಯಂತ ಆತ್ಮೀಯ ಮಿತ್ರರಾಗಿದ್ದರು, ಸಾವಿರಾರು ಶಿಷ್ಯರ ಪಾಲಿಗೆ ಪ್ರೀತಿಯ ಮೇಷ್ಟ್ರು, ಅತ್ಯಂತ ಸರಳ, ನೇರ ನಡೆ, ಸದಾ ಹಾಸ್ಯಭರಿತ ಮಾತುಗಳಿಂದಲೇ ಎದುರಿಗಿದ್ದವರನ್ನು ಮೋಡಿ ಮಾಡುವ ಮಾತುಗಾರ, ಅವರ ಪಿ ಹೆಚ್ ಡಿ ಪ್ರಬಂಧ ಗ್ರಾಮದೇವತೆಗಳು ಮೂಲಕವೇ ಕನ್ನಡ ಸಾಹಿತ್ಯಾಸಕ್ತರ ಮನ ಗೆದ್ದವರು ಸಿದ್ದಲಿಂಗಯ್ಯ. ಅತ್ಯಂತ ಸಣ್ಣ ಗ್ರಾಮ ಒಂದರಿಂದ ಬಂದವರು ವಿದ್ಯೆ ವಂಚಿತ ಜನಾಂಗದ ಮೂಲಕ ಎಲ್ಲ ಜನಾಂಗಕ್ಕೂ ವಿದ್ಯೆ ಹಂಚುವ ಕೆಲಸಕ್ಕೆ ಅವರು ತೊಡಗಿಸಿಕೊಂಡಿದ್ದೆ ಒಂದು ಅದ್ಭುತ.

    ಕೇವಲ 34 ವರ್ಷದವರಾಗಿದ್ದಾಗಲೇ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದರು. ಸದನದಲ್ಲಿ ಅವರು ಮಂಡಿಸಿದ ವಿಷಯಗಳು ವೈವಿಧ್ಯಪೂರ್ಣವಾಗಿದ್ದವು ಜೊತೆಗೆ ಅತ್ಯಂತ ವಿಚಾರಪೂರ್ಣ ವಾಗಿದ್ದವು. ಅಲ್ಲಿ ಅವರು ವಿಷಯ ಮಂಡಿಸುತ್ತಿದ್ದ ರೀತಿ ಇಡೀ ಸದನವನ್ನು ಆಕರ್ಷಿಸಿ ಬಿಡುತ್ತಿತ್ತು.

    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಕನ್ನಡ ಕಟ್ಟಲು ಮಾಡಿದ ಕೆಲಸ ಅದ್ಭುತವಾದದ್ದು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಅವರು ಮಾಡಿದ ಕೆಲಸ, ಆನಂತರ ಸಿಂಡಿಕೇಟ್ ಸದಸ್ಯರಾಗಿ ಅವರು ಮಾಡಿದ ಕೆಲಸ ಗಮನಾರ್ಹವಾದದ್ದು.

    https://twitter.com/ArvindLBJP/status/1403337280383635460

    ದಲಿತ ಕವಿ ಎಂದೇ ಪ್ರಸಿದ್ಧರಾಗಿ ಕೆಳವರ್ಗಗಳ ನೋವಿಗೆ ದನಿಯಾಗಿ ಮಿಡಿದ ಸಿದ್ದಲಿಂಗಯ್ಯ ಈಗ ನಮ್ಮನ್ನು ಅಗಲಿರುವುದು ದುರಾದೃಷ್ಟಕರ. ಗ್ರಾಮದೇವತೆಗಳು,  ಹೊಲೆಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಮುಂತಾದ ಕವನ ಸಂಕಲನಗಳು ಕನ್ನಡ ಸಾಹಿತ್ಯಕ್ಕೆ ಅವರು ಕೊಟ್ಟ ಅನನ್ಯ ಕೊಡುಗೆಗಳಾಗಿವೆ. ಅವರ ಆತ್ಮಕಥನ ಊರುಕೇರಿ ಯಿಂದ ಸ್ಪೂರ್ತಿಗೊಂಡವರು ಓದಿ ಆನಂದಿಸಿದವರು ಅಸಂಖ್ಯಾತ ಮಂದಿ.

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಗೌರವ,ಸತ್ಯಕಾಮ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅಸಂಖ್ಯಾತ ಪ್ರಶಸ್ತಿ-ಪುರಸ್ಕಾರಗಳು ಅವರಿಗೆ ಸಂದಿವೆ.

    ಸಿದ್ದಲಿಂಗಯ್ಯ ಅವರ ಅಗಲಿಕೆ ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಅದನ್ನು ತುಂಬುವುದು ಸುಲಭವಲ್ಲ. ಸಿದ್ದಲಿಂಗಯ್ಯ ಅವರ ಕುಟುಂಬಕ್ಕೆ ಅವರ ಅಭಿಮಾನಿಗಳಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಡಿಸಿಎಂ ಕಂಬನಿ
    ಸಿದ್ದಲಿಂಗಯ್ಯ ಅವರು ಕನ್ನಡದ ಅಗ್ರ ಲೇಖಕರಲ್ಲೊಬ್ಬರು. ‘ದಲಿತ ಕವಿ’ ಎಂದೇ ಪ್ರಸಿದ್ಧರು. ಸಾಮಾಜಿಕ ಸಮಾನತೆಯ ಆಶಯದೊಂದಿಗೆ ಅವರು ರಚಿಸಿದ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಆಧುನಿಕ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನ ಹೊಂದಿವೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಗುಣಗಾನ ಮಾಡಿದ್ದಾರೆ.

    ಮೂಲತಃ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನಿಸಿದ ಅವರು ನೆಲದ ಸೊಗಡನ್ನೂ ತಮ್ಮ ಸಾಹಿತ್ಯದಲ್ಲಿ ಸೊಗಸಾಗಿ ಕಟ್ಟಿಕೊಟ್ಟವರು. ಅಪ್ರತಿಮ ಭಾಷಣಕಾರರು ಆಗಿದ್ದ ಸಿದ್ದಲಿಂಗಯ್ಯ ಅವರು ವಿಧಾನ ಪರಿಷತ್ ಸದಸ್ಯರಾಗಿಯೂ ಚಿರಸ್ಮರಣೀಯ ಸೇವೆ ಮಾಡಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ, ಬಂಧುಗಳಿಗೆ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಡಿಸಿಎಂ ಪ್ರಾರ್ಥನೆ ಮಾಡಿದ್ದಾರೆ.

    ಶೆಟ್ಟರ್ ಸಂತಾಪ
    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿ ಜನಪ್ರತಿನಿಧಿಯಾಗಿ ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿ ಕನ್ನಡ ನಾಡು ನುಡಿಯ ರಕ್ಷಣೆ ಮಾಡುವ ಕೆಲಸ ಮಾಡಿದ್ದರು. ನಾಡೋಜ ಡಾ ಸಿದ್ದಲಿಂಗಯ್ಯ ಅವರ ಅಗಲಿಕೆ ರಾಜ್ಯದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಅವರ ಅಗಲಿಕೆ ಯ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬ ವರ್ಗದವರಿಗೂ ಹಾಗೂ ಅಭಿಮಾನಿಗಳಿಗೂ ನೀಡಲಿ ಎಂದು ಭಗವಂತನ ನಲ್ಲಿ ಪ್ರಾರ್ಥಿಸುವುದಾಗಿ ತಮ್ಮ ಶೋಕ ಸಂದೇಶ ದಲ್ಲಿ ತಿಳಿಸಿದ್ದಾರೆ.

  • ಡಿಸಿಎಂ ಜೊತೆ 30ಕ್ಕೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳಿಂದ ಚರ್ಚೆ

    ಡಿಸಿಎಂ ಜೊತೆ 30ಕ್ಕೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳಿಂದ ಚರ್ಚೆ

    ಬೆಂಗಳೂರು: ವಿವಿಧ ಜಿಲ್ಲೆಗಳ ವಿವಿಧ ಮಠಗಳ ಮೂವತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

    ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಡಿಸಿಎಂ ನಿವಾಸಕ್ಕೆ ಆಗಮಿಸಿದ ರಾಮನಗರ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಶ್ರೀಗಳು ಮಾಗಡಿ ತಾಲೂಕಿನಲ್ಲಿರುವ ಸಂಸ್ಕೃತ ವಿಶ್ವವಿದ್ಯಾಲಯವನ್ನು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಮಾಡುವುದೂ ಸೇರಿ ಕೆಲವಾರು ವಿಷಯಗಳ ಕುರಿತು ಡಿಸಿಎಂ ಅವರ ಚರ್ಚೆ ನಡೆಸಿದರು. ಇದನ್ನೂ ಓದಿ: ವಿಜಯೇಂದ್ರ ಮಠಗಳ ಯಾತ್ರೆ: ಬಿಎಸ್‍ವೈಗೆ ಮಠಾಧೀಶರ ಶ್ರೀರಕ್ಷೆ ಎಂದು ಅಭಿಮಾನಿಗಳಿಂದ ಪೋಸ್ಟರ್ 

    ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಕನ್ನಡಿಗರನ್ನೇ ನೇಮಕ ಮಾಡುವುದು ಹಾಗೂ ಸಂಸ್ಕೃತ ಪ್ರಸರಣೆಗೆ ಸೂಕ್ತ ಪ್ರೋತ್ಸಾಹ ಹಾಗೂ ಬಯಲುಸೀಮೆಯ ಈ ಜಿಲ್ಲೆಗಳಿಗೆ ನೀರಾವರಿ ಒದಗಿಸುವ ಬಗ್ಗೆ ಸ್ವಾಮೀಜಿಗಳು ಡಿಸಿಎಂ ಜತೆ ಮಾತುಕತೆ ನಡೆಸಿದರು.

    ಅಖಿಲ ಭಾರತ ಸನಾತನ ಮಠಾಧಿಪತಿಗಳ ಒಕ್ಕೂಟದ ಸೇವಾ ಟ್ರಸ್ಟ್ ವತಿಯಿಂದ ಕೊಳದ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ತುಮಕೂರು ಹಿರೇಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಸೋಲೂರು ಚಿಲುಮ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಭದ್ರಗಿರಿ ಮಠದ ಶ್ರೀ ವೀರಭದ್ರ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ತಮ್ಮಿಡಿಹಳ್ಳಿ ಮಠದ ಶ್ರೀ ಸಿದ್ದಲಿಂಗ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಅನೇಕ ಶ್ರೀಗಳು ಆಗಮಿಸಿದ್ದರು.

    ಸ್ವಾಮೀಜಿ ನೀಡಿದ ಮನವಿ ಪತ್ರ ಸ್ವೀಕರಿಸಿದ ಡಿಸಿಎಂ ಅವರು, ಅತಿ ಶೀಘ್ರದಲ್ಲೇ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ನಮ್ಮ ಸರ್ಕಾರ ನೀರಾವರಿ ಯೋಜನೆಗಳ ಅನುಷ್ಠಾಕ್ಕೆ ಆದ್ಯತೆ ನೀಡಲಿದೆ ಎಂದು ಡಿಸಿಎಂ ಅವರು ಸ್ವಾಮೀಜಿಗಳಿಗೆ ಭರವಸೆ ನೀಡಿದರು.

  • ಕೈಗಾರಿಕಾಭಿವೃದ್ಧಿಗೆ ಪೂರಕವಾದ ರಾಷ್ಟ್ರೀಯ ಶಿಕ್ಷಣ ನೀತಿ ಈ ವರ್ಷದಿಂದಲೇ ಜಾರಿ: ಡಿಸಿಎಂ

    ಕೈಗಾರಿಕಾಭಿವೃದ್ಧಿಗೆ ಪೂರಕವಾದ ರಾಷ್ಟ್ರೀಯ ಶಿಕ್ಷಣ ನೀತಿ ಈ ವರ್ಷದಿಂದಲೇ ಜಾರಿ: ಡಿಸಿಎಂ

    – ಕೈಗಾರಿಕೆಗಳ ಜತೆ ಒಡಂಬಡಿಕೆಗೆ ಶಿಕ್ಷಣ ಸಂಸ್ಥೆಗಳಿಗೆ ಮುಕ್ತ ಅವಕಾಶ
    – ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿ ಸಮಾವೇಶ

    ಬೆಂಗಳೂರು: ಕೋವಿಡ್ ಸವಾಲಿನ ನಡುವೆಯೂ ಈ ವರ್ಷದಿಂದಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತಿದ್ದು, ಕೈಗಾರಿಕಾಭಿವೃದ್ಧಿಗೆ ಬಹಳಷ್ಟು ಪೂರಕವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ತುಮಕೂರಿನ ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿ ಸೋಮವಾರ ಹಮ್ಮಿಕೊಂಡಿದ್ದ ‘ಶಿಕ್ಷಣ ಮತ್ತು ಕೈಗಾರಿಕೆ’ ಕುರಿತ ಅಂತಾರಾಷ್ಟ್ರೀಯ ಮಟ್ಟದ ವರ್ಚುಯಲ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದೇಶದ ಶೈಕ್ಷಣಿಕ ವ್ಯವಸ್ಥೆ, ವಿದ್ಯಾರ್ಥಿಗಳು ಮತ್ತು ಪೋಷಕರು ಎದುರಿಸುವ ಎಲ್ಲ ಸಮಸ್ಯೆಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉತ್ತರವಿದೆ ಎಂದರು.

    ನೂತನ ನೀತಿಯ ಪ್ರಕಾರ ಇಡೀ ಸಮಾಜವನ್ನು ಶಿಕ್ಷಣ ಸಂಸ್ಥೆಗಳು ಮುನ್ನಡೆಸುತ್ತವೆ ಹಾಗೂ ಅದೇ ಸಂಸ್ಥೆಗಳನ್ನು ಕೈಗಾರಿಕೆಗಳು ಹಿಂಬಾಲಿಸಬೇಕಾಗುತ್ತದೆ. ಏಕೆಂದರೆ, ಕೈಗಾರಿಕೆಗಳಿಗೆ ಅತ್ಯಗತ್ಯವಾದ ಕುಶಲತೆಯುಳ್ಳ ಮಾನವ ಸಂಪನ್ಮೂಲವು ಶಿಕ್ಷಣ ಸಂಸ್ಥೆಗಳಿಂದಲೇ ಬರಬೇಕಾಗುತ್ತದೆ ಎಂದು ಡಿಸಿಎಂ ಪ್ರತಿಪಾದಿಸಿದರು.

    ಇದೇ ನಿಟ್ಟಿನಲ್ಲಿ, ಈಗಾಗಲೇ ಶಿಕ್ಷಣ ನೀತಿ ಜಾರಿಗೆ ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಲಾಗಿದ್ದು, ಕೋವಿಡ್ ಕಾರಣದಿಂದ ಕೊಂಚ ವಿಳಂಬವಾಗಿದೆ. ಗುಣಮಟ್ಟದ ಬೋಧನೆ ಮತ್ತು ಗುಣಮಟ್ಟದ ಕಲಿಕೆಗೆ ನೀತಿ ಪೂರಕ ಹಾಗೂ ಬಹು ವಿಷಯಗಳ ಕಲಿಕೆಗೆ ಮುಕ್ತ ಅವಕಾಶ ನೀಡುತ್ತದೆ ಎಂದು ಅವರು ಹೇಳಿದರು.

    ಮೂಲಸೌಕರ್ಯ ಒಡಂಬಡಿಕೆಗೆ ಅವಕಾಶ:
    ಶೈಕ್ಷಣಿಕ ಸಂಸ್ಥೆಗಳು ಜಾಗತಿಕ ಗುಣಮಟ್ಟದ ಮೂಲಸೌಕರ್ಯಗಳನ್ನು ಹೊಂದಿರಬೇಕು ಎಂಬುದೇನೋ ನಿಜ. ಆದರೆ, ಈ ಬಗ್ಗೆ ಸರ್ಕಾರ ಉದಾರವಾಗಿದೆ. ಎಲ್ಲ ಸೌಲಭ್ಯಗಳನ್ನು ಶಿಕ್ಷಣ ಸಂಸ್ಥೆಗಳೇ ಮಾಡಿಕೊಳ್ಳಬೇಕೆಂದು ತಾಕೀತು ಮಾಡಲಾಗುತ್ತಿಲ್ಲ. ಬದಲಿಗೆ ಸೌಕರ್ಯಗಳನ್ನು ಅಭಿವೃದ್ಧಿ ಮಾಡಿಕೊಳ್ಳಲು ಕೈಗಾರಿಕಾ ಸಂಸ್ಥೆಗಳು ಅಥವಾ ಯಾವುದೇ ಜಾಗತಿಕ ಶಿಕ್ಷಣ ಸಂಸ್ಥೆ ಜತೆ ಒಡಂಬಡಿಕೆ ಮಾಡಿಕೊಳ್ಳಲು ಸರಕಾರ ಮುಕ್ತ ಅವಕಾಶ ನೀಡಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. ಇದನ್ನೂ ಓದಿ ಎಕ್ಸಾಂ ಹಾಲ್‍ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಸೂಪರ್ ಸ್ಮಾರ್ಟ್ ನಕಲು

    ಒಂದು ವರ್ಷ ಇಂಟರ್ನ್‍ಶಿಪ್:
    ಕೈಗಾರಿಕೆಗಳಿಗೆ ಗುಣಮಟ್ಟದ ಮಾನವ ಸಂಪನ್ಮೂಲ ಸಿಗಬೇಕೆಂಬ ಕಾರಣಕ್ಕೆ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‍ಗಳಲ್ಲಿ ಓದುವ ವಿದ್ಯಾರ್ಥಿಗಳ ಇಂಟರ್ನ್‍ಶಿಪ್ ಅವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ. ಇದಕ್ಕೆ ನ್ಯಾಸ್ಕಾಂ ಸೇರಿದಂತೆ ಎಲ್ಲ ಕೈಗಾರಿಕಾ ಪ್ರಾತಿನಿಧಿಕ ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬಂದಿವೆ ಎಂದು ಡಿಸಿಎಂ ನುಡಿದರು.

    ಡಿಪ್ಲೋಮಾ  ಪಠ್ಯ ಪರಿಷ್ಕರಣೆ:
    ಎಐಸಿಟಿ ಮಾನದಂಡದ ಪ್ರಕಾರ ಈಗಾಗಲೇ ಐಟಿಐ, ಜಿಟಿಟಿಸಿ, ಡಿಪ್ಲೋಮಾ ಪಠ್ಯವನ್ನು ಸಂಪೂರ್ಣವಾಗಿ ಪರಿಷ್ಕರಣೆ ಮಾಡಲಾಗಿದೆ. ಈಗಾಗಲೇ ಹೊಸ ಪಠ್ಯದಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆಂದು ಡಿಸಿಎಂ ಹೇಳಿದರು.

    ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿಯ ಕುಲಪತಿ ಡಾ.ಜಿ.ಪರಮೇಶ್ವರ, ಉಪ ಕುಲಪತಿ ಡಾ.ಬಾಲಶೆಟ್ಟಿ, ಸಿದ್ಧಾರ್ಥ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್ ಮುಂತಾದವರು ಸಮಾವೇಶದಲ್ಲಿ ಭಾಗಿಯಾಗಿದ್ದರು.

  • ರಾಜ್ಯಪಾಲರನ್ನು ಭೇಟಿಯಾಗಿ ಕೋವಿಡ್ ಪರಿಸ್ಥಿತಿ ಬಗ್ಗೆ ವಿವರಿಸಿದ ಡಿಸಿಎಂ

    ರಾಜ್ಯಪಾಲರನ್ನು ಭೇಟಿಯಾಗಿ ಕೋವಿಡ್ ಪರಿಸ್ಥಿತಿ ಬಗ್ಗೆ ವಿವರಿಸಿದ ಡಿಸಿಎಂ

    ಬೆಂಗಳೂರು: ರಾಜ್ಯದ ಕೋವಿಡ್ ಪರಿಸ್ಥಿತಿ ಹಾಗೂ ನಿರ್ವಹಣೆ ಬಗ್ಗೆ ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಗುರುವಾರ ರಾಜ್ಯಪಾಲರನ್ನು ಭೇಟಿಯಾಗಿ ವಿವರಣೆ ನೀಡಿದರು.

    ಕೋವಿಡ್ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಹಾಗೂ ಇನ್ನೊಬ್ಬ ಉಪ ಮುಖ್ಯಮಂತ್ರಿ  ಗೋವಿಂದ ಕಾರಜೋಳ ಅವರೊಂದಿಗೆ 1:30ಕ್ಕೆ ರಾಜಭವನಕ್ಕೆ ತೆರಳಿದ  ಡಾ.ಅಶ್ವತ್ಥನಾರಾಯಣ, ಈವರೆಗೂ ಸೋಂಕು ತಡೆಗಟ್ಟಲು ಲಾಕ್‍ಡೌನ್, ಲಸಿಕೆ ಅಭಿಯಾನ, ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿ, ಸಿಬ್ಬಂದಿ ನೇಮಕ ಸೇರಿದಂತೆ ಸರಕಾರ ಕೈಗೊಂಡಿರುವ ಎಲ್ಲ ಕ್ರಮಗಳ ಬಗ್ಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಸಮಗ್ರ  ಮಾಹಿತಿ ನೀಡಿದರು.

    ಲಾಕ್‍ಡೌನ್ ನಂತರ ರಾಜ್ಯದಲ್ಲಿ ಸೋಂಕಿನ ಪಾಸಿಟಿವಿಟಿ ದರವೂ ಕಡಿಮೆಯಾಗಿ ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ಇದರ ಜತೆಯಲ್ಲೇ 45 ವರ್ಷ ಮೀರಿದ ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿಗೆ ಲಸಿಕೆ ನೀಡವ ಕೆಲಸ ನಡೆಯುತ್ತಿದೆ. ಇಡೀ ರಾಜ್ಯಾದ್ಯಂತ ಆಮ್ಲಜನಕ, ಔಷಧಿ, ರೆಮಿಡಿಸಿವಿರ್ ಕೊರತೆಯನ್ನು ನೀಗಿಸಲಾಗಿದೆ ಎಂದು ಡಿಸಿಎಂ ಅವರು ಅಂಕಿ- ಅಂಶಗಳ ಸಮೇತ ರಾಜ್ಯಪಾಲರಿಗೆ ವಿವರಣೆ ಸಲ್ಲಿಸಿದರು. ಇದನ್ನೂ ಓದಿ : ಮಕ್ಕಳಿಗೆ ಕೊರೊನಾ ಲಸಿಕೆ ಯಾವಾಗ? – ಕೇಂದ್ರದಿಂದ ಸಿಕ್ತು ಸ್ಪಷ್ಟನೆ

    ಬ್ಲ್ಯಾಕ್ ಫಂಗಸ್ ಬಗ್ಗೆಯೂ ರಾಜ್ಯಪಾಲರಿಗೆ ಮಾಹಿತಿ ನೀಡಿದ ಡಿಸಿಎಂ ಅವರು, ಈ ಕಾಯಿಲೆಗೆ ಸಂಬಂಧಿಸಿದ ಔಷಧಿಗಳ ಕೊರತೆ ನಿವಾರಣೆಗೆ ಎಲ್ಲ ಪ್ರಯತ್ನ ನಡೆದಿದೆ. ನಿರಂತರವಾಗಿ ಕೇಂದ್ರ ಸರಕಾರದ ಜತೆ ಸಂಪರ್ಕದಲ್ಲಿದ್ದು, ಇಡೀ ಸರಕಾರ ಒಂದು ತಂಡದ ರೂಪದಲ್ಲಿ ಕೆಲಸ ಮಾಡುತ್ತಿದೆ ಎಂದು ರಾಜ್ಯಪಾಲರಿಗೆ ತಿಳಿಸಿದರು.

  • ಬೆಂಗಳೂರಿನಲ್ಲಿ ಮನೆ ಪಕ್ಕದಲ್ಲೇ ಕೋವಿಡ್‌ ಕೇರ್; ಓಯೋ ಆರೈಕೆ ಕೇಂದ್ರ ಉದ್ಘಾಟಿಸಿದ ಡಿಸಿಎಂ

    ಬೆಂಗಳೂರಿನಲ್ಲಿ ಮನೆ ಪಕ್ಕದಲ್ಲೇ ಕೋವಿಡ್‌ ಕೇರ್; ಓಯೋ ಆರೈಕೆ ಕೇಂದ್ರ ಉದ್ಘಾಟಿಸಿದ ಡಿಸಿಎಂ

    ಗಿವ್‌ ಇಂಡಿಯಾ, ಅಜೀಂ ಪ್ರೇಂ ಜೀ ಪ್ರತಿಷ್ಠಾನದ ಡಾಕ್ಸರ್ಸ್‌ ಫಾರ್‌ ಯು ಸಹಯೋಗ

    ಬೆಂಗಳೂರು: ನಗರದ ತಮ್ಮ ಮನೆಯ ಅಕ್ಕಪಕ್ಕದಲ್ಲೇ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲು ಹೋಟೆಲ್ ನಲ್ಲಿ  ಆರಂಭಿಸಲಾಗಿರುವ ʼಓಯೋ ಕೋವಿಡ್‌ ಕೇರ್‌ ಸೆಂಟರ್‌ʼಗೆ ರಾಜ್ಯ ಕೋವಿಡ್‌ ಕಾರ್ಯಪಡೆ ಮುಖ್ಯಸ್ಥರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಮಂಗಳವಾರ  ಉದ್ಘಾಟನೆ ಮಾಡಿದರು.

    ಬಳಿಕ ಮಾತನಾಡಿದ ಡಿಸಿಎಂ ಅವರು, “ಗಿವ್‌ ಇಂಡಿಯಾ, ಅಜೀಂ ಪ್ರೇಂ ಜೀ ಪ್ರತಿಷ್ಠಾನದ ಡಾಕ್ಸರ್ಸ್‌ ಫಾರ್‌ ಯುವರ್ಸ್‌ ಮತ್ತು ಒಯೋ ಹೋಟೆಲ್ಸ್‌ನವರು ಸೇರಿ ಸಂಯುಕ್ತವಾಗಿ ಮಾಡಿರುವ ಈ ವ್ಯವಸ್ಥೆಯೂ ಪ್ರಾಯೋಗಿಕವಾಗಿ ನಗರದ ಕಲ್ಯಾಣನಗರದಲ್ಲಿ ಆರಂಭವಾಗಿದ್ದು, ಇದು ಯಶಸ್ವಿಯಾದರೆ ಓಯೋ ಹೋಟೆಲ್ಸ್‌ನವರ ಜತೆ ಒಡಂಬಡಿಕೆ ಮಾಡಿಕೊಂಡು ಅವರು ಎಲ್ಲೆಲ್ಲಿ ಹೋಟೆಲ್‌ ಚೈನ್‌ ಹೊಂದಿದ್ದಾರೆಯೋ ಅಲ್ಲೆಲ್ಲ ಕೋವಿಡ್‌ ಕೇಂದ್ರಗಳನ್ನು ತೆರೆಯಲಾಗುವುದು. ಗ್ರಾಮೀಣ ಭಾಗದ ಹೋಟೆಲ್ ಗಳಲ್ಲಿ ಯೂ ಈ ರೀತಿಯ ಕೇಂದ್ರಗಳನ್ನು ತೆರೆಯಲಾಗುವುದು” ಎಂದರು.

     

    ಹೋಟೆಲ್ ಅನ್ನು ಓಯೋನವರು ಕೊಟ್ಟರೆ, ಕೋವಿಡ್‌ ಕೇರ್‌ಗೆ ಅಗತ್ಯ ಆರ್ಥಿಕ ಸಂಪನ್ಮೂಲವನ್ನು ಗಿವ್‌ ಇಂಡಿಯಾ ಒದಗಿಸುತ್ತದೆ. ಉಳಿದಂತೆ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ಅಜೀಂ ಪ್ರೇಂ ಜೀ ಪ್ರತಿಷ್ಠಾನದ ಡಾಕ್ಸರ್ಸ್‌ ಫಾರ್‌ ಯು ಒದಗಿಸುತ್ತದೆ. ಒಂದು ಖಾಸಗಿ ವ್ಯವಸ್ಥೆ ಅದೆಷ್ಟು ಪರಿಣಾಮಕಾರಿಯಾಗಿ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಡಾ.ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.

    ಸದ್ಯಕ್ಕೆ ಕಲ್ಯಾಣನಗರದ  ಕೋವಿಡ್‌ ಕೇರ್‌ನಲ್ಲಿ 20 ಬೆಡ್‌ಗಳಿದ್ದು, ಅಕ್ಕಪಕ್ಕದಲ್ಲಿ ಯಾರಾದರೂ ಸೋಂಕಿತರಿದ್ದರೆ ಇಲ್ಲಿ ಬಂದು ಚಿಕಿತ್ಸೆ ಪಡೆಯಬಹುದು. ಇದು ಒಂದು ರೀತಿ ಹೋಮ್ ಹೈಸೋಲೇಷನ್ ರೀತಿ ಇರುತ್ತದೆ. ಇಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ, ಆರೈಕೆ ಹಾಗೂ ಊಟೋಪಚಾರವೂ ಇರುತ್ತದೆ. ಕೊಠಡಿಗಳು ಸ್ಟಾರ್ ಹೋಟೆಲ್ ಕೊಠಡಿಗಳ ಹಾಗೆ ಇವೆ. ಅಕ್ಸಿಜನ್‌ ಒದಗಿಸಲು ಆಮ್ಲಜನಕ ಸಾಂದ್ರಕಗಳ ಸೌಲಭ್ಯ ಕೂಡ ಇದೆ ಎಂದು ಅವರು‌ ಹೇಳಿದರು.

    ಈ ಸಂದರ್ಭದಲ್ಲಿ ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ರಾಘವೇಂದ್ರ ಬೇಲೂರು, ಗಿವ್‌ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ವಿನೋದ್‌, ಸರ್ಕಾರಕ್ಕೆ ಸಿಎಸ್ ಆರ್ ನಿಧಿ ಬಗ್ಗೆ ಸಲಹೆ‌  ನೀಡುವ‌ ಕೆ.ವಿ.ಮಹೇಶ, ಡಾಕ್ಟರ್ಸ್ ಫಾರ್ ಯು ಸಂಸ್ಥೆಯ ಆರೋಗ್ಯ ಮತ್ತು ಪೌಷ್ಟಿಕ ವಿಭಾಗದ ನಿರ್ದೇಶಕಿ ಡಾ.ವೈಶಾಲಿ ವೇಣು ಇದ್ದರು.

  • ಕೋಲಾರದ ಮಾಲೂರಿನಲ್ಲಿ ಕೊವ್ಯಾಕ್ಸಿನ್ ಲಸಿಕೆ ತಯಾರಿಕಾ ಘಟಕ: ಡಿಸಿಎಂ

    ಕೋಲಾರದ ಮಾಲೂರಿನಲ್ಲಿ ಕೊವ್ಯಾಕ್ಸಿನ್ ಲಸಿಕೆ ತಯಾರಿಕಾ ಘಟಕ: ಡಿಸಿಎಂ

    – ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಸ್ಥಾಪನೆಗೆ ಕ್ರಮ

    ಬೆಂಗಳೂರು: ನೆರೆಯ ಕೋಲಾರ ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಭಾರತ್ ಬಯೋಟೆಕ್, ಕೊವ್ಯಾಕ್ಸಿನ್ ಲಸಿಕೆ ತಯಾರಿಕಾ ಘಟಕ ಸ್ಥಾಪನೆಯಾಗುತ್ತಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

    ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜಧಾನಿಗೆ ಹತ್ತಿರದಲ್ಲೇ ಇರುವ ಮಾಲೂರಿನಲ್ಲಿ ಕೋವ್ಯಾಕ್ಸಿನ್ ಘಟಕ ಬರುತ್ತಿದೆ. ಅಲ್ಲಿಗೆ ರೈಲು ಸೇರಿದಂತೆ ಉತ್ತಮ ಸಂಪರ್ಕ ವ್ಯವಸ್ಥೆ ಇದೆ. ಅಲ್ಲಿಯೂ ಲಸಿಕೆ ತಯಾರಾಗಲಿದೆ. ಈಗಾಗಲೇ ಸರಕಾರ ಎಲ್ಲ ಒಪ್ಪಿಗೆ ನೀಡಿದೆ. ಆಡಳಿತಾತ್ಮಕ ಕೆಲಸಗಳನ್ನು ಕಂಪನಿ ಪೂರ್ಣ ಮಾಡುತ್ತಿದ್ದು, ಸಿವಿಲ್ ಕಾಮಗಾರಿಗಳು ಶುರುವಾಗಿವೆ. ಅವು ತ್ವರಿತವಾಗಿ ಮುಗಿದು ಆದಷ್ಟು ಬೇಗ ಲಸಿಕೆ ತಯಾರಿಕೆ ಆರಂಭವಾಗುತ್ತದೆ ಎಂದರು.

    ಈಗಾಗಲೇ ಕೋವಿಶೀಲ್ಡ್ ತಯಾರಿಸುವ ಸೀರಂ ಮಾತ್ರವಲ್ಲದೆ, ಯಾವುದೇ ಲಸಿಕೆ ತಯಾರಿಕೆ ಕಂಪನಿ ರಾಜ್ಯಕ್ಕೆ ಬಂದು ಘಟಕ ಸ್ಥಾಪಿಸಲು ಮುಂದಾದರೆ ಅಗತ್ಯವಾದ ಎಲ್ಲ ಸಹಕಾರ ನೀಡಲಾಗುವುದು. ಅತ್ಯಂತ ಕ್ಷಿಪ್ರಗತಿಯಲ್ಲಿ ಎಲ್ಲ ಅನುಮತಿಗಳನ್ನು ನೀಡಲಾಗುವುದು ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    100 ಹಾಸಿಗೆಗಳ ಆಸ್ಪತ್ರೆ:
    ಎರಡನೇ ಅಲೆ ಹಾಗೂ ಸಂಭನೀಯ ಮೂರನೇ ಅಲೆ ಎದುರಿಸಲು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯುತ್ತಮ ವೈದ್ಯಕೀಯ ಮೂಲಸೌಕರ್ಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಕನಿಷ್ಠ 100 ಹಾಸಿಗೆಗಳ ಆಸ್ಪತ್ರೆ ಇರಲೇಬೇಕು. ಅದರಲ್ಲಿ ಆಕ್ಸಿಜನ್ ಮತ್ತು  ಐಸಿಯು ಬೆಡ್’ಗಳೂ ಇರಬೇಕು. ಈ ಬಗ್ಗೆ ಕ್ರಮ ವಹಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    40 ಕೋಟಿ ಡೋಸ್ ಉತ್ಪಾದನೆ:
    ನೀತಿ ಆಯೋಗ ಈಗಾಗಲೇ ತಿಳಿಸಿರುವಂತೆ ಅಗಸ್ಟ್ ತಿಂಗಳಲ್ಲಿ 40 ಕೋಟಿ ಡೋಸ್ ಲಸಿಕೆ ದೇಶದಲ್ಲಿ ಉತ್ಪಾದನೆ ಆಗಲಿದೆ. ಇದು ಆಶಾದಾಯಕ ಬೆಳವಣಿಗೆ. ಜೂನ್-ಜುಲೈ ತಿಂಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ತಯಾರಾಗಲಿದೆ. ಇದುವರೆಗೂ ದೇಶದಲ್ಲಿ 19 ಕೋಟಿ ಡೋಸ್ ವ್ಯಾಕ್ಸಿನ್ ಕೊಡಲಾಗಿದೆ. ಜತೆಗೆ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ಈವರೆಗೆ ಎಲ್ಲ ಮೂಲಗಳಿಂದ ಬಂದಿರುವ ನೆರವಿನ ಪ್ರಮಾಣವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದರು. ಕೇಂದ್ರವು ಲಸಿಕೆ ತಯಾರಿಕೆ ಕಂಪನಿಗಳಿಗೆ ಸಾಕಷ್ಟು ಉತ್ತೇಜನ ಕೊಡುತ್ತಿದೆ. ಜಾಗತಿಕ ಮಟ್ಟದಲ್ಲಿ ಲಸಿಕೆಗಳ ಮೇಲಿರುವ ಪೇಟೆಂಗ್ ವಿನಾಯಿತಿ ಬಗ್ಗೆಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ದೇಶಗಳ ನಾಯಕರ ಜತೆ ಈಗಾಗಲೇ ಯಶಸ್ವಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಇನ್ನಷ್ಟು ಲಸಿಕೆ ತಯಾರಿಕೆ ಘಟಕಗಳು ರಾಜ್ಯಕ್ಕೆ ಬರಲಿವೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಸಿಎಸ್‍ಆರ್ ನೆರವು:
    ಕಾರ್ಪೋರೇಟ್ ವಲಯದಿಂದ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಸಿಎಸ್‍ಆರ್ ನೆರವು ಬರುತ್ತಿದೆ. ಹಣದ ರೂಪದಲ್ಲಿ ಮತ್ತು ಸಾಮಗ್ರಿ ರೂಪದಲ್ಲಿ ನೆರವು ಹರಿದುಬರುತ್ತಿದೆ. ಜತೆಗೆ, ಮುಖ್ಯಮಂತ್ರಿ ಪರಿಹಾರ ನಿಧಿಗೂ ಹಣ ಸಂದಾಯವಾಗುತ್ತಿದೆ. ಕೇಂದ್ರ ಸರಕಾರದಿಂದಲೂ ಸಾಕಷ್ಟು ನೆರವು ಸಿಗುತ್ತಿದೆ. ಈಗಾಗಲೇ ಈ ಬಗ್ಗೆ ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ ಎಂದ ಅವರು, ಅಂತಾರಾಷ್ಟ್ರೀಯ ಮಟ್ಟದಿಂದಲೂ ರಾಜ್ಯಕ್ಕೆ ಸಾಕಷ್ಟು ನೆರವು ಬಂದಿದೆ. ಈ ವಿಭಾಗದಲ್ಲಿ ಹಿರಿಯ ಅಧಿಕಾರಿಗಳಾದ ಸೆಲ್ವಕುಮಾರ್ ಹಾಗೂ ಸಿಎಸ್‍ಆರ್ ಉಸ್ತುವಾರಿ ಅಧಿಕಾರಿ ಉಮಾ ಮಹಾದೇವನ್ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.

  • ಕೋವಿಡ್ ನಿರ್ವಹಣೆಯಲ್ಲಿ ಲೋಪವಾದರೆ ಜಿಲ್ಲಾಧಿಕಾರಿಗಳೇ ಸಂಪೂರ್ಣ ಹೊಣೆ

    ಕೋವಿಡ್ ನಿರ್ವಹಣೆಯಲ್ಲಿ ಲೋಪವಾದರೆ ಜಿಲ್ಲಾಧಿಕಾರಿಗಳೇ ಸಂಪೂರ್ಣ ಹೊಣೆ

    – ಬಳ್ಳಾರಿ ಜಿಲ್ಲೆ ಪರಿಸ್ಥಿತಿ ಅವಲೋಕನ ಮಾಡಿದ ಡಿಸಿಎಂ
    – ಸಚಿವ ಆನಂದ್ ಸಿಂಗ್‍ಗೆ ಪರಿಸ್ಥಿತಿಯ ತೀವ್ರತೆ ಮನವರಿಕೆ

    ಬೆಂಗಳೂರು: ಜಿಲ್ಲೆಗಳ ಕೋವಿಡ್ ಪರಿಸ್ಥಿತಿ ನಿಯಂತ್ರಣ ಹಾಗೂ ವ್ಯವಸ್ಥೆ ನಿರ್ವಹಣೆ ಸಂಪೂರ್ಣ, ನೇರ ಹೊಣೆಗಾರಿಕೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳದ್ದೇ ಆಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

    ವರ್ಚುವಲ್ ವೇದಿಕೆಯ ಮೂಲಕ ಬುಧವಾರ ಬೆಂಗಳೂರಿನಿಂದಲೇ ಬಳ್ಳಾರಿ ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ಅವಲೋಕನ ಮಾಡಿದ ವೇಳೆ ಮಾತನಾಡಿದ ಡಿಸಿಎಂ, ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಕಂಡುಬಂದಿರುವ ಲೋಪದೋಷಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

    ಬಳ್ಳಾರಿ ಜಿಲ್ಲಾ ಕೇಂದ್ರದಿಂದಲೇ ವರ್ಚುಯಲ್ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಎಲ್ಲ ತಾಲೂಕುಗಳ ತಹಸೀಲ್ದಾರ್‍ಗಳೊಂದಿಗೆ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಜತೆ ಮಾತನಾಡಿದ ಡಿಸಿಎಂ, ಕೋವಿಡ್ ನಿರ್ವಹಣೆ ಏನೇ ಲೋಪವಾದರೂ ಜಿಲ್ಲಾಧಿಕಾರಿಯೇ ಹೊಣೆ ಎಂದರು.

    ಪರೀಕ್ಷೆ-ಫಲಿತಾಂಶದ ಬಗ್ಗೆಯೂ ಅತೃಪ್ತಿ
    ನಿರೀಕ್ಷಿತ ಪ್ರಮಾಣದಲ್ಲಿ ಕೋವಿಡ್ ಪರೀಕ್ಷೆ ನಡೆಯುತ್ತಿಲ್ಲ. ಇದರಲ್ಲಿ ಬಹಳ ಲೋಪ ಕಂಡುಬರುತ್ತಿದೆ. ರಿಸಲ್ಟ್ ಕೂಡ ತುಂಬಾ ತಡವಾಗಿ ನೀಡಲಾಗುತ್ತಿದೆ. ರಿಸಲ್ಟ್ ಎಷ್ಟು ತಡವಾಗುತ್ತೋ ರೋಗವು ಅಷ್ಟು ಉಲ್ಬಣವಾಗುತ್ತದೆ. ಹೀಗಾಗಿ ಸಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದೆ ಎಂದು ಡಿಸಿಎಂ ಹೇಳಿದರಲ್ಲದೆ, ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿ ತಮ್ಮ ಕೈಯ್ಯಲ್ಲಿದ್ದ ಮಾಹಿತಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರಲ್ಲದೆ ಈ ಬಗ್ಗೆ ಕೂಡಲೇ ಎಚ್ಚರಿಕೆ ವಹಿಸದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎಂದು ಆನಂದ್ ಸಿಂಗ್ ಅವರಿಗೆ ವಿವರಿಸಿದರು.

    ಯಾವ ಕಾರಣಕ್ಕೂ ರೋಗ ಉಲ್ಬಣವಾಗುವ ಹಂತಕ್ಕೆ ಬಿಡಲೇಬಾರದು. ವ್ಯಕ್ತಿಯಿಂದ ಸ್ಯಾಂಪಲ್ ಸ್ವೀಕರಿಸಿದ 24 ಗಂಟೆಯೊಳಗೆ ಫಲಿತಾಂಶ ಕೊಡಬೇಕು. ಒಂದು ಫಲಿತಾಂಶ ಪಾಸಿಟೀವ್ ಬಂದರೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡುವುದೋ ಅಥವಾ ಅವರವ ಮನೆಯಲ್ಲೇ ಐಸೋಲೇಷನ್ ಮಾಡಿ ಸೂಕ್ತ ಔಷಧಗಳನ್ನು ಫೂರೈಕೆ ಮಾಡಬೇಕು. ಈ ಪ್ರಕ್ರಿಯೆ ಅತ್ಯಂತ ತ್ವರಿತವಾಗಿ ಆಗಬೇಕು ಹಾಗೂ ಸಮಯಕ್ಕೆ ಹೆಚ್ಚು ಮಹತ್ವ ನೀಡಬೇಕು. ರೋಗ ನಿರೋಧಕ ಚಿಕಿತ್ಸೆ ತ್ವರಿತವಾಗಿ ಆರಂಭಿಸದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎಂದು ಡಿಸಿಎಂ ಅವರು ಸಚಿವ ಆನಂದ ಸಿಂಗ್ ಹಾಗೂ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಟ್ಟಿ ಅವರಿಗೆ ತಿಳಿಸಿದರು.

    ಈಗ ಬಳ್ಳಾರಿ ಜಿಲ್ಲೆಯಲ್ಲಿ ತುರ್ತಾಗಿ ಆಗಬೇಕಿರುವ ಕೆಲಸವೆಂದರೆ, ರಿಸಲ್ಟ್ ಕೊಡುವ ಲ್ಯಾಬ್‍ಗಳನ್ನು ಹೆಚ್ಚಿಸಬೇಕು ಹಾಗೂ ಇರುವ ಲ್ಯಾಬ್‍ಗಳಿಗೆ ಶಕ್ತಿ ತುಂಬಬೇಕು. ಒಂದು ಸ್ಯಾಂಪಲ್‍ಗಳು ಹೋಗುತ್ತಿದ್ದರೆ, ಇನ್ನೊಂದೆಡೆ ರಿಸಲ್ಟ್ ಬರುತ್ತಿರಬೇಕು. ಅಗತ್ಯವಾದರೆ ರಿಸಲ್ಟ್ ನೀಡುವ ಎಕ್ಸ್‍ಟ್ರಾಕ್ಸಿನ್ ಯಂತ್ರವನ್ನು ಇನ್ನಷ್ಟು ಖರೀದಿ ಮಾಡಿ. ಈ ಬಗ್ಗೆ ಜಿಲ್ಲಾಧಿಕಾರಿ ಕೂಡಲೇ ಕ್ರಮ ಕೈಗೊಳ್ಳಬೇಕು. ಯಾವುದಕ್ಕೂ ಕೊರತೆ ಆಗಬಾರದು, ಬಳ್ಳಾರಿ ಮಾತ್ರವಲ್ಲ, ಎಲ್ಲ ಜಿಲ್ಲೆಗಳಿಗೂ ನಾನು ಇದೇ ಸಲಹೆಯನ್ನೇ ಮಾಡುತ್ತೇನೆಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ಔಷಧ ಕೊರತೆ ಆಗಬಾರದು
    ಇದೇ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ ವೈದ್ಯಾಧಿಕಾರಿಗಳ ಜತೆಯೂ ಸಂವಾದ ನಡೆಸಿದ ಡಿಸಿಎಂ ಅವರು, ರೋಗ ಲಕ್ಷಣ ಇರುವವರಿಗೆ ಯಾವ ಔಷಧ ನೀಡಬೇಕು ಎಂಬುದನ್ನು ತಿಳಿಸಿದರಲ್ಲದೆ ಯಾವುದೇ ಕಾರಣಕ್ಕೂ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಿ. ಎಲ್ಲಿಯೂ ಆಮ್ಲಜನಕ, ವೆಂಟಿಲೇಟರ್, ರೆಮಿಡಿಸವರ್ ಕೊರತೆ ಆಗದಂತೆ ಎಚ್ಚರ ವಹಿಸಿ. ಯಾವುದೇ ಸಮಸ್ಯೆ ಇದ್ದರೂ ಜಿಲ್ಲಾಧಿಕಾರಿ ಗಮನಕ್ಕೆ ತಂದು ಕೊರತೆ ಆಗದಂತೆ ನೋಡಿಕೊಳ್ಳಿ. ಸಮಸ್ಯೆ ಎದುರಾದಾಗ ಒದ್ದಾಡುವುದು ಬೇಡ ಎಂದು ಸೂಚಿಸಿದರು.

    ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ಪರಿಣಾಮಕಾರಿ ಸೌಲಭ್ಯಗಳ ಕೊರತೆ ಇದೆ ಎಂದು ಆನಂದ ಸಿಂಗ್ ಅವರ ಗಮನ ಸೆಳೆದ ಡಿಸಿಎಂ, ರೋಗ ಲಕ್ಷಣಗಳಿರುವ ಜನರಿಗೆ ತತ್‍ಕ್ಷಣದಿಂದಲೇ ಚಿಕಿತ್ಸೆ ಆಗತ್ಯವಿರುತ್ತದೆ ಎಂದು ಡಿಸಿಎಂ ಒತ್ತಿ ಹೇಳಿದರು.

    ಆನಂದ್ ಸಿಂಗ್ ಸ್ಪಂದನೆ
    ಡಿಸಿಎಂ ಸಲಹೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಆನಂದ್ ಸಿಂಗ್ ಅವರು, ತಮ್ಮ ಎಲ್ಲ ಸಲಹೆಗಳನ್ನು ಈ ಕೂಡಲೇ ಜಾರಿಗೆ ತರುತ್ತೇವೆ. ಈ ಸಭೆಯ ನಂತರ ಸಭೆ ನಡೆಸಿ ಎಲ್ಲ ಕೊರತೆಗಳನ್ನು ನೀಗಿಸಲಾಗುವುದು ಎಂದು ಭರವಸೆ ನೀಡಿದರು.

     

  • ಕೋವಿಡ್-19 ಕರ್ತವ್ಯ ಉಪೇಕ್ಷಿಸಿದರೆ ನಿರ್ದಾಕ್ಷಿಣ್ಯ ಕ್ರಮ; ಅಧಿಕಾರಿಗಳಿಗೆ ಡಿಸಿಎಂ ವಾರ್ನಿಂಗ್ 

    ಕೋವಿಡ್-19 ಕರ್ತವ್ಯ ಉಪೇಕ್ಷಿಸಿದರೆ ನಿರ್ದಾಕ್ಷಿಣ್ಯ ಕ್ರಮ; ಅಧಿಕಾರಿಗಳಿಗೆ ಡಿಸಿಎಂ ವಾರ್ನಿಂಗ್ 

    – ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳ ಜತೆ ಅಶ್ವತ್ಥನಾರಾಯಣ ಸಭೆ

    ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ ಕೋವಿಡ್-19 ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ ಇನ್ನೆರಡು ತಿಂಗಳು ಜಿಲ್ಲಾಡಳಿತ ಮೈಮರೆಯಬಾರದು. ಎಲ್ಲ ಅಧಿಕಾರಿಗಳು ಕೋವಿಡ್ ಕರ್ತವ್ಯ ತಪ್ಪಿಸಿಕೊಳ್ಳಬಾರದು. ಒಂದು ವೇಳೆ ಉಪೇಕ್ಷಿಸಿದರೆ ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಎಚ್ಚರಿಕೆ ನೀಡಿದರು.

    ಬೆಂಗಳೂರಿನಲ್ಲಿ ಶನಿವಾರ ಅವರು ರಾಮನಗರ ಜಿಲ್ಲೆಯ ಕೋವಿಡ್ ಪರಿಸ್ಥಿತಿಯ ಬಗ್ಗೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳು, ತಜ್ಞರ ಜತೆ ವರ್ಚುಯಲ್ ಮೂಲಕ ಸಭೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು.

    ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ಎಲ್ಲ ಕೋವಿಡ್ ವಾರಿಯರ್‍ಗಳಿಗೆ ಮೊದಲ ಹಂತದಲ್ಲೇ ಲಸಿಕೆ ನೀಡಲಾಗಿದೆ. ಹೀಗಾಗಿ ಜೀವಕ್ಕೆ ಅಪಾಯವಿಲ್ಲ ಎಂದ ಅವರು, ಈಗ ಜನರ ಜೀವಕ್ಕಿಂತ ದೊಡ್ಡ ವಿಷಯ ಬೇರೆ ಇಲ್ಲ ಎಂದರು.

    ಎಲ್ಲರೂ ಸೋಂಕು ಉಲ್ಬಣ ಆಗದ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಬೇಕು. ಇನ್ನೆರಡು ತಿಂಗಳ ಕಾಲ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳು, ಎಲ್ಲ ಇಲಾಖೆಗಳ ಅಧಿಕಾರಿಗಳೂ ಕೋವಿಡ್ ಕರ್ತವ್ಯದಲ್ಲೇ ತೊಡಗಿಸಿಕೊಳ್ಳಬೇಕು ಎಂದು ಡಿಸಿಎಂ ಸಲಹೆ ನೀಡಿದರು.

    ಸದಾ ಕಾಲ ಯಾರಿಂದಲೇ ಮೊಬೈಲ್ ಕರೆ ಬಂದರೆ ಸ್ವೀಕರಿಸಿ ಕ್ರಮ ಕೈಗೊಳ್ಳಬೇಕು. ಯಾರು ಕರೆ ಸ್ವೀಕರಿಸುವುದಿಲ್ಲವೋ ಅಂಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ಕೊಟ್ಟರು.

    ಬೆಡ್‍ಗಳ ಸಮಸ್ಯೆ ಇಲ್ಲ
    ಈಗ ರಾಮನಗರದಲ್ಲಿ 400 ಕೋವಿಡ್ ಹಾಸಿಗೆಗಳಿವೆ. ಜತೆಗೆ, ಪ್ರತಿ ತಾಲೂಕಿನಲ್ಲಿ ತಲಾ ನೂರು ಕೋವಿಡ್ ಕೇರ್ ಸೆಂಟರ್‍ಗಳಿವೆ. ಪ್ರತಿ ತಾಲೂಕು ಆಸ್ಪತ್ರೆಯಲ್ಲೂ ತಲಾ 100 ಹಾಸಿಗೆಗಳಿವೆ. ಜಿಲ್ಲಾ ಕೇಂದ್ರದ ಕೋವಿಡ್ ಆಸ್ಪತ್ರೆಯಲ್ಲಿ 200 ಹಾಸಿಗೆಗಳಿವೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ 600 ಬೆಡ್ ಇದೆ. ದಯಾನಂದ್ ಸಾಗರ್ ಆಸ್ಪತ್ರೆಯಲ್ಲಿ 100 ಬೆಡ್ ಕೊಟ್ಟಿದ್ದಾರೆ. ಅಲ್ಲಿ ಇನ್ನೂ 500 ಬೆಡ್ ಪಡೆಯುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಇನ್ನು ಹೆಚ್ಚು ಕೋವಿಡ್ ಕೇರ್ ಸೆಂಟರ್‍ಗಳನ್ನು ಮಾಡಲಾಗುತ್ತಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    ಬೇಗ ಪರೀಕ್ಷೆ, ಕ್ಷಿಪ್ರ ಫಲಿತಾಂಶ, ತಕ್ಷಣ ಚಿಕಿತ್ಸೆ
    ಪ್ರಾಥಮಿಕ ಹಂತದಲ್ಲಿಯೇ ಕೋವಿಡ್ ಅನ್ನು ಹತ್ತಿಕ್ಕಲು ಮೂರು ಸೂತ್ರಗಳನ್ನು ಪಾಲಿಸಲಾಗುತ್ತಿದೆ. ಯಾವುದೇ ರೋಗ ಲಕ್ಷಣ ಇದ್ದರೆ ತಡ ಮಾಡದೇ ಬೇಗ ಪರೀಕ್ಷೆ ಮಾಡಿಸಿಕೊಳ್ಳುವುದು, ಕ್ಷಿಪ್ರವಾಗಿ ಫಲಿತಾಂಶ ಕೊಡುವುದು ಹಾಗೂ ರಿಸಲ್ಟ್ ಬಂದ ಕೂಡಲೇ ಒಂದು ಕ್ಷಣವನ್ನೂ ವ್ಯರ್ಥ ಮಾಡದೇ ತಕ್ಷಣ ಚಿಕಿತ್ಸೆ ಆರಂಭಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.

    ಸೋಂಕಿಗೆ ಒಳಗಾದವರು ಸುಲಭವಾಗಿ, ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಸುಲಭ-ಸರಳವಾಗಿ ಸೋಂಕನ್ನು ತಡೆಗಟ್ಟಬಹುದು. ಉಲ್ಬಣವಾಗುವುದಕ್ಕೆ ಬಿಡಬಾರದು. ಚಿಕಿತ್ಸೆ ಪಡೆದುಕೊಂಡರೆ ವಾರದಲ್ಲೇ ಗುಣಮುಖರಾಗಬಹುದು. ಉಲ್ಬಣವಾದರೆ ಉಸಿರಾಟ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಆರಂಭಿಕ ಹಂತದಲ್ಲಿಯೇ ಆರಂಭಿಕ ಲಕ್ಷಣಗಳಿದ್ದಾಗಲೇ ರೋಗ ನಿರೋಧಕ ಚಿಕಿತ್ಸೆ ನೀಡಲೇಬೇಕು. ಇದನ್ನೇ ನಾನು ಜಿಲ್ಲಾಡಳಿತಕ್ಕೂ ಸೂಚಿಸಿದ್ದೇನೆ ಎಂದರು ಡಾ.ಅಶ್ವತ್ಥನಾರಾಯಣ.

    ಕೋವಿಡ್ ನಿರ್ವಹಣಾ ತಂಡಗಳು ಪ್ರತಿ ಮನೆಮನೆಗೂ ಭೇಟಿ ನೀಡಬೇಕು. ಕೆಮ್ಮು, ನೆಗಡಿ, ಶೀತ, ಜ್ವರ, ವಾಸನೆ ಗ್ರಹಿಕೆ ಮಾಡಲಗದಂಥ ಯಾವುದೇ ಲಕ್ಷಣ ಕಂದು ಬಂದರೆ ಅಂಥವರನ್ನು ಕೂಡಲೇ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಸೂಚಿಸಿದ್ದೇನೆ. ಒಂದೇ ದಿನದಲ್ಲಿ ಪರೀಕ್ಷೆ, ಫಲಿತಾಂಶ ನೀಡುವುದು, ಚಿಕಿತ್ಸೆ ಆರಂಭಿಸುವುದು ಅಗಬೇಕು ಎಂದರು ಅವರು.

    ಸಂಸದ ಡಿ.ಕೆ.ಸುರೇಶ್, ಶಾಸಕರಾದ ಅನಿತಾ ಕುಮಾರಸ್ವಾಮಿ, ರವಿ, ಅ.ದೇವೇಗೌಡ, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಡಿಎಚ್’ಒ ಡಾ.ನಿರಂಜನ, ಎಸ್ಪಿ ಗಿರೀಶ್ ಮುಂತಾದವರು ವರ್ಚುವಲ್ ಸಭೆಯಲ್ಲಿ ಭಾಗವಹಿಸಿ ಪರಿಸ್ಥಿತಿ ಬಗ್ಗೆ ವಿಚಾರ ವಿನಿಮಯ ಮಾಡಿದರು.