Tag: Ashwath Narayan

  • ನೈಸ್ ರಸ್ತೆ ಗುಂಡಿಮಯ- ವಾರದೊಳಗೆ ಗುಂಡಿ ಮುಚ್ಚುವಂತೆ ಖೇಣಿಗೆ ಡಿಸಿಎಂ ಅಶ್ವತ್ಥ ನಾರಾಯಣ ಗಡುವು

    ನೈಸ್ ರಸ್ತೆ ಗುಂಡಿಮಯ- ವಾರದೊಳಗೆ ಗುಂಡಿ ಮುಚ್ಚುವಂತೆ ಖೇಣಿಗೆ ಡಿಸಿಎಂ ಅಶ್ವತ್ಥ ನಾರಾಯಣ ಗಡುವು

    ಬೆಂಗಳೂರು: ನೈಸ್ ರಸ್ತೆ ಗುಂಡಿಮಯವಾಗಿದ್ದನ್ನು ಮನಗಂಡು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಇಂದು ನೈಸ್ ರಸ್ತೆಯಲ್ಲಿ ಸಂಚರಿಸಿ ವೀಕ್ಷಿಸಿದ್ದಾರೆ. ಇದೇ ವೇಳೆ ನೈಸ್ ರಸ್ತೆಯ ಮುಖ್ಯಸ್ಥ ಅಶೋಕ್ ಖೇಣಿ ಅವರಿಗೆ ವಾರದೊಳಗೆ ಗುಂಡಿ ಮುಚ್ಚುವಂತೆ ಗಡುವು ವಿಧಿಸಿದ್ದಾರೆ.

    ನೈಸ್ ರಸ್ತೆ ಪರಿಶೀಲನೆ ನಂತರ ಮಾತನಾಡಿದ ಡಿಸಿಎಂ, ನೈಸ್ ರಸ್ತೆಯ ವ್ಯವಸ್ಥೆ ನೋಡಲು ಬಂದಿದ್ದೆ, ನೈಸ್ ರಸ್ತೆಯಲ್ಲಿ ಗುಂಡಿಗಳು ಹೆಚ್ಚಿವೆ. ಗುಂಡಿಗಳನ್ನು ಮುಚ್ಚುವ ಕುರಿತು ಅಶೋಕ್ ಖೇಣಿ ಅವರಿಗೆ ತಿಳಿಸಿದ್ದೇವೆ. ಒಂದು ವಾರದಲ್ಲಿ ರಸ್ತೆ ಗುಂಡಿ ಮುಚ್ಚುವ ಭರವಸೆಯನ್ನು ನೀಡಿದ್ದಾರೆ. ಒಂದು ವಾರದ ಬಳಿಕ ಮತ್ತೆ ಇಲ್ಲಿಗೆ ಬಂದು ಪರಿಶೀಲನೆ ನಡೆಸುವ ಪ್ರಯತ್ನ ಮಾಡುತ್ತೇನೆ. ಇದರೊಂದಿಗೆ ಟೋಲ್‍ಗಳ ಪ್ರವೇಶ ಹಾಗೂ ನಿರ್ಗಮನದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದನ್ನು ಸಹ ಸರಿ ಮಾಡಲು ಅವರಿಗೆ ತಿಳಿಸಿದ್ದೇನೆ ಎಂದು ಮಾಹಿತಿ ನೀಡಿದರು.

    ನೈಸ್ ಸಂಸ್ಥೆ ಒಪ್ಪಂದ ಉಲ್ಲಂಘಿಸಿದೆ ಎಂದು ಡಿಸಿಎಂ ಒಪ್ಪಿಕೊಂಡಿದ್ದು, ಸಿಮೆಂಟ್ ರಸ್ತೆ ಮಾಡಿದ ಬಳಿಕವೇ ಸಂಚಾರಕ್ಕೆ ಮುಕ್ತಗೊಳೊಸಬೇಕಿತ್ತು. ಕಾಂಕ್ರೀಟ್ ರಸ್ತೆ ಮಾಡಬೇಕಿತ್ತು, ಆದರೆ ಮಾಡಿಲ್ಲ. ಯಾಕೆ ಕೆಲವು ಕಡೆ ಕಾಂಕ್ರೀಟ್ ರಸ್ತೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ತಾಂತ್ರಿಕ ಕಾರಣ ಇದೆ ಎಂದು ಖೇಣಿ ತಿಳಿಸಿದರು. ಈ ತಾಂತ್ರಿಕ ಕಾರಣ ಸರಿಪಡಿಸಿಕೊಂಡು ಕಾಂಕ್ರೀಟ್ ರಸ್ತೆ ಮಾಡಲು ಸೂಚಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

    ನೈಸ್ ಸದನ ಸಮಿತಿ ವರದಿ ಮಂಡನೆ ಕುರಿತು ಪ್ರತಿಕ್ರಿಯಿಸಿದ ಅವರು, ವರದಿ ಮಂಡನೆ ಮಾಡುವ ಪ್ರಸ್ತಾವ ಸರ್ಕಾರದ ಮುಂದಿದೆ. ಜಾರಿ ಮಾಡಲು ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಅಡೆತಡೆ ನಿವಾರಿಸಿಕೊಂಡು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

    ಇಂದು ಅಶೋಕ್ ಖೇಣಿ, ಡಿಸಿಎಂ ಅಶ್ವತ್ಥ ನಾರಾಯಣ, ಶಾಸಕ ಎಂ.ಕೃಷ್ಣಪ್ಪ ಗುಂಡಿಗಳ ವೀಕ್ಷಣೆ ಮಾಡಿದರು. ತುಮಕೂರು ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿಯ ವರೆಗೆ ನೈಸ್ ರೋಡ್ ಪೂರ್ತಿ ರೌಂಡ್ಸ್ ಹೊಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ನೈಸ್ ರೋಡ್ ಗುಂಡಿಮಯವಾಗಿತ್ತು. ಹೀಗಾಗಿ ಖುದ್ದು ಡಿಸಿಎಂ ಅಶ್ವತ್ಥ ನಾರಾಯಣ್ ಅವರೇ ರೌಂಡ್ಸ್‍ಗೆ ಬಂದಿದ್ದರು. ನೈಸ್ ರಸ್ತೆ ಸುಮಾರು 40 ಕಿ.ಮೀ. ಇದೆ. ಇದೇ ವೇಳೆ ಎಲೆಕ್ಟ್ರಾನಿಕ್ ಸಿಟಿ ಬಳಿಯಿರುವ ದೊಡ್ಡ ತೊಗುರ್ ಕೆರೆ ಅಭಿವೃದ್ಧಿ ಬಗ್ಗೆ ಒತ್ತು ನೀಡಲು ಚಿಂತನೆ ನಡೆಸಲಾಯಿತು.

    ತುಮಕೂರು ರಸ್ತೆಯಿಂದ ಕೆಂಗೇರಿ ನೈಸ್ ರಸ್ತೆವರೆಗೂ ಡಿಸಿಎಂ ಪರಿಶೀಲನೆ ಮಾಡಲಿಲ್ಲ. ಇದೇ ಭಾಗದಲ್ಲಿ ಹೆಚ್ಚು ಗುಂಡಿಗಳಿರುವುದು ಎಂದು ಸಾರ್ವಜನಿಕರು ದೂರಿದ್ದಾರೆ.

  • ಡಿಕೆಶಿ, ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಲು ಡಿಸಿಎಂ ನಕಾರ

    ಡಿಕೆಶಿ, ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಲು ಡಿಸಿಎಂ ನಕಾರ

    ಮೈಸೂರು: ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರು ಮೈಸೂರಿಗೆ ಭೇಟಿಕೊಟ್ಟಿದ್ದು, ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಹಾಗೂ ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

    ಡಿಕೆಶಿ ಅವರು ಕೆಲವು ತಪ್ಪುಗಳನ್ನು ಮಾಡಿರುವುದನ್ನು ತಮ್ಮ ಬಳಿ ಒಪ್ಪಿಕೊಂಡಿದ್ದಾರೆ ಎಂದು ಪರಮೇಶ್ವರ್ ಅವರು ಹೇಳಿಕೆ ಕೊಟ್ಟಿದ್ದರು. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಡಿಸಿಎಂ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಈ ಬಗ್ಗೆ ಹೇಳಿದರೆ ಅದು ಬೇರೆ ಅರ್ಥವನ್ನು ಕಲ್ಪಿಸುತ್ತದೆ. ಡಿಕೆಶಿ ಅವರ ವಿಚಾರ ಕಾನೂನಿನಲ್ಲಿ ಬೇರೆ ಬೇರೆ ಹಂತ ತಲುಪಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಇರುವ ಹಿನ್ನೆಲೆಯಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೊರಟು ಹೋದರು.

    ಇದೇ ವೇಳೆ ಕಾರ್ಯಕರ್ತರು ತಮ್ಮ ಫ್ಲೆಕ್ಸ್ ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಈ ಕೂಡಲೇ ಫ್ಲೆಕ್ಸ್ ತೆರವುಗೊಳಿಸಲು ಹೇಳಿದ್ದೇನೆ ಎಂದು ತಿಳಿಸಿದರು.

    ಹಾಗೆಯೇ ನೆರೆ ಪರಿಹಾರ ವಿಚಾರ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಮಾತನಾಡಿ, ಪ್ರತಿಪಕ್ಷದಿಂದ ರಾಜಕೀಯ ಮಾಡುವ ಯತ್ನವಾಗುತ್ತಿದೆ. ಈ ಹಿಂದಿನ ಸರ್ಕಾರ ಜನಪರ ಕೆಲಸ ಮಾಡಿಲ್ಲ. ಆದರೆ ನಾವು ಜನ ಪರ ಕೆಲಸ ಮಾಡುತ್ತಿದ್ದೇವೆ. ಪೂರ್ಣ ಪ್ರಮಾಣದ ಸಚಿವ ಸಂಪುಟ ಇದ್ದರೆ ಒಳ್ಳೆಯದು. ಆದರೆ ಇದರಿಂದ ಅಭಿವೃದ್ಧಿಗೆ ಯಾವುದೇ ಹಿನ್ನೆಡೆ ಆಗಿಲ್ಲ. ಆದಷ್ಟು ಬೇಗ ಪೂರ್ಣ ಪ್ರಮಾಣದ ಸಚಿವ ಸಂಪುಟ ಆಗಲಿದೆ ಎಂದು ಹೇಳಿದರು.

    ಬಳ್ಳಾರಿ ಪ್ರತ್ಯೇಕ ಜಿಲ್ಲೆ ಪರ ಅಶ್ವಥ್ ನಾರಾಯಣ್ ಬ್ಯಾಟಿಂಗ್ ಮಾಡಿದರು. ಇದರಿಂದ ಒಳ್ಳೆಯದಾಗುವುದಾರೆ ಆಗಲಿ. ಅಭಿವೃದ್ದಿ ದೃಷ್ಠಿಯಿಂದ ಬೆಳಗಾವಿ ಸೇರಿದಂತೆ ಯಾವುದೇ ಪ್ರತ್ಯೇಕ ಜಿಲ್ಲೆ ಆಗುವುದಾದರೆ ಆಗಲಿ. ಅಭಿವೃದ್ಧಿ ದೃಷ್ಟಿಯಿಂದ ಈ ಬಗ್ಗೆ ಮುಂದೆ ಸರ್ಕಾರ ನಿರ್ಧರಿಸುತ್ತದೆ ಎಂದರು.

  • ಅಧಿಕಾರದಲ್ಲಿರದ ಹತಾಶೆಯನ್ನು ಅಸಂಬದ್ಧ ಹೇಳಿಕೆಯಿಂದ ಹೊರಹಾಕ್ತಾರೆ: ಎಚ್‌ಡಿಕೆಗೆ ಡಿಸಿಎಂ ತಿರುಗೇಟು

    ಅಧಿಕಾರದಲ್ಲಿರದ ಹತಾಶೆಯನ್ನು ಅಸಂಬದ್ಧ ಹೇಳಿಕೆಯಿಂದ ಹೊರಹಾಕ್ತಾರೆ: ಎಚ್‌ಡಿಕೆಗೆ ಡಿಸಿಎಂ ತಿರುಗೇಟು

    ಬೆಂಗಳೂರು: ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ವರ್ಸಸ್ ಹಾಲಿ ಡಿಸಿಎಂ ಅಶ್ವಥ್ ನಾರಾಯಣ್ ನಡುವೆ ಟಾಕ್ ಫೈಟ್ ಮತ್ತಷ್ಟು ಜೋರಾಗಿದ್ದು, ಎಚ್‌ಡಿಕೆ ಹೇಳಿಕೆಗಳಿಗೆ ಡಿಸಿಎಂ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

    ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಅವರ ಅಜ್ಞಾನವನ್ನು ಪ್ರದರ್ಶಿಸಿದೆ. ಅವರು ಅಧಿಕಾರದಲ್ಲಿ ಇಲ್ಲದಿರುವ ಹತಾಶೆಯಿಂದ ಹೇಳಿಕೆ ನೀಡುತ್ತಿದ್ದಾರೆ ಎಂದು ಅಶ್ವಥ್ ನಾರಾಯಣ್ ಕಿಡಿಕಾರಿದ್ದಾರೆ.

    ಡಿ.ಕೆ ಶಿವಕುಮಾರ್ ಅವರ ಬಂಧನಕ್ಕೆ ಬಿಜೆಪಿಯೇ ಕಾರಣ. ಬಿಜೆಪಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಪ್ರಜಾಪ್ರಭುತ್ವತ ಕಗ್ಗೊಲೆ ಮಾಡುತ್ತಿದೆ ಎಂದು ಎಚ್‌ಡಿಕೆ ಆರೋಪಿಸಿದ್ದರು. ಜೊತೆಗೆ ಅಶ್ವಥ್ ನಾರಾಯಣ್ ಅವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ, ಕಾರ್ಪೊರೇಷನ್ ಕಡತಗಳ ಕಚೇರಿಗೆ ಬೆಂಕಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದರು. ಆದ್ದರಿಂದ ಡಿಸಿಎಂ ಟ್ವೀಟ್ ಮೂಲಕ ಎಚ್‌ಡಿಕೆ ಅವರ ವಿರುದ್ಧ ಹರಿಹಾಯ್ದಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಅವರ ಅಜ್ಞಾನವನ್ನು ಪ್ರದರ್ಶಿಸಿದೆ. ಯಾವುದೇ ಆರೋಪ ಮಾಡುವಾಗ ಒಬ್ಬ ಮಾಜಿ ಸಿಎಂ ವಾಸ್ತವ ತಿಳಿದುಕೊಳ್ಳದೇ ಹತಾಶರಾಗಿ, ಏನೇನೊ ಹೇಳಿ ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ಅಧಿಕಾರದಲ್ಲಿರದ ಹತಾಶೆಯನ್ನು ಅಸಂಬದ್ಧ ಹೇಳಿಕೆಯ ಮೂಲಕ ಹೊರಹಾಕುವುದು ನಿಮ್ಮ ಹಳೆಯ ಚಾಳಿಯಾಗಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಎಚ್‍ಡಿಕೆ ಹೇಳಿದ್ದೇನು?
    ಡಿಕೆಶಿ ಅವರ ಬಂಧನದ ಬಗ್ಗೆ ಮಾಧ್ಯಮಗಳ ಜೊತೆ ಎಚ್‌ಡಿಕೆ ಅವರು ಮಾತನಾಡುತ್ತಿದ್ದಾಗ, ದಿ ಗ್ರೇಟ್ ಲೀಡರ್ ಅಶ್ವಥ್ ನಾರಾಯಣ್ ಅವರು ನವ ಭಾರತ ನಿರ್ಮಾಣ ಮಾಡಲು ಹೊರಟಿದ್ದಾರೆ. ಮಲ್ಲೇಶ್ವರಂನಲ್ಲಿರುವ ಬೆಂಗಳೂರು ಕಾರ್ಪೊರೇಷನ್‍ನ ಕರ್ಮಕಾಂಡಗಳು, ಕಡತಗಳ ಕಚೇರಿಕೆ ಬೆಂಕಿಯಿಟ್ಟವರು. ಇವರೆಲ್ಲಾ ಮುಖ್ಯಸ್ಥರು. ಇವರು ಭ್ರಷ್ಟಾಚಾರ ನಿಲ್ಲುಸುತ್ತಾರಂತೆ, ನವ ಭಾರತ ನಿರ್ಮಾಣ ಮಾಡುತ್ತಾರಂತೆ. ನಾಚಿಕೆ, ಮಾನ ಮರ್ಯಾದೆ ಇದ್ದರೆ ಕಳೆದ 1 ವರ್ಷದಿಂದ ಯಾರ್ಯಾರ ಬಳಿ ಹಣ ತಂದಿದ್ದಾರೆ ಎಂದು ಬಿಜೆಪಿ ಹೇಳಲಿ. ಶಾಸಕರಿಗೆ 15-20 ಕೋಟಿ ಹಣ ನೀಡುವ ಆಮಿಷ ಒಡ್ಡಿದ್ದಾಗ ಈ ಇಡಿ, ಐಟಿ ಇಲಾಖೆ ಸತ್ತುಹೋಗಿತ್ತಾ? ಅಧಿಕಾರಿಗಳು ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.

    ಕಾಂಗ್ರೆಸ್ ಟ್ರಬಲ್ ಶೂಟರ್ ಆಗಿದ್ದ ಡಿಕೆಶಿ ಅವರು ಸದ್ಯ ಇಡಿ ಕಸ್ಟಡಿಯಲ್ಲಿದ್ದಾರೆ. ಆದ್ದರಿಂದ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಹಾಗೂ ನಾಯಕರು ಆಡಳಿತ ಪಕ್ಷ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅಧಿಕಾರ ಬಳಸಿಕೊಂಡು ಡಿಕೆಶಿ ವಿರುದ್ಧ ಇಡಿ ಅಸ್ತ್ರ ಬಳಸಿದೆ ಎಂದು ಆರೋಪಿಸಿ ಕಾಂಗ್ರೆಸ್ ರಾಜ್ಯದಲ್ಲಿ ಪ್ರತಿಭಟನೆ ನಡೆಸಿದೆ.

  • ಬೆಂ.ಗ್ರಾ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ತಡವಾಗಿದ್ದೇ ಸೋಲಿಗೆ ಕಾರಣ: ಅಶ್ವಥ್ ನಾರಾಯಣ್

    ಬೆಂ.ಗ್ರಾ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ತಡವಾಗಿದ್ದೇ ಸೋಲಿಗೆ ಕಾರಣ: ಅಶ್ವಥ್ ನಾರಾಯಣ್

    ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಭ್ಯರ್ಥಿಯ ಆಯ್ಕೆ ತಡವಾಗಿದ್ದರಿಂದಲೇ ನಮಗೆ ಸೋಲಾಗಿದೆ ಎಂದು ಪರಾಜಿತ ಅಭ್ಯರ್ಥಿ ಅಶ್ವಥ್ ನಾರಾಯಣ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಶಾಸಕರು, ಲೋಕಸಭಾ ಚುನಾವಣೆಯ ಎರಡು ತಿಂಗಳ ಮುನ್ನವೇ ಆಯ್ಕೆ ಮಾಡಬೇಕಿತ್ತು. ಆದರೆ ಆಯ್ಕೆ ಪ್ರಕ್ರಿಯೆ ವಿಳಂಬವಾಗಿ, ಅಂತಿಮವಾಗಿ ನನ್ನ ಹೆಸರನ್ನು ಘೋಷಣೆ ಮಾಡಿದರು. ಒಂದು ವೇಳೆ ಹೆಚ್ಚಿನ ಕಾಲಾವಕಾಶ ಸಿಕ್ಕಿದ್ದರೆ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬಹುದಿತ್ತು ಎಂದು ವ್ಯಂಗ್ಯವಾಡಿದರು.

    ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸಿದ್ದರೆ ನೂರಕ್ಕೆ ನೂರರಷ್ಟು ಜಯ ಸಾಧಿಸಿ, ಈಗ ಸಂಸದರಾಗಿರುತ್ತಿದ್ದರು. ಆದರೆ ಅದು ಅವರು ಮಾಡಿಕೊಂಡ ಎಡವಟ್ಟು. ನಾನು ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ, ಕೇಂದ್ರ ರಾಜಕಾರಣಕ್ಕೆ ಬರಲ್ಲ ಅಂತ ಮಾಚಿ ಸಚಿವರು ಹೇಳಿದ್ದೆ ಅಭ್ಯರ್ಥಿ ಆಯ್ಕೆಯ ವಿಳಂಬಕ್ಕೆ ಕಾರಣವಾಯಿತು ಎಂದು ತಿಳಿಸಿದರು.

    ನನ್ನ ಹೆಸರು ಘೋಷಣೆಯಾದಾಗ ಪ್ರಚಾರಕ್ಕೆ ಸಮಯ ಕಡಿಮೆ ಇತ್ತು. ಹೀಗಾಗಿ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಸಲು ಹಾಗೂ ಅವರ ಜೊತೆಗೆ ಬೆರೆತು ಪ್ರಚಾರ ನಡೆಸಲು ಸಾಧ್ಯವಾಗಲಿಲ್ಲ. ಆದರೆ ನಮ್ಮ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕತೆ, ಬದ್ಧತೆಯಿಂದ ಕೆಲಸ ಮಾಡಿದ್ದಕ್ಕೆ ಕ್ಷೇತ್ರದ ಮತದಾರರು ಈ ಬಾರಿ ಹೆಚ್ಚಿನ ಮತ ನೀಡಿದ್ದಾರೆ. ನಾವು ಸಾಂಕೇತಿಕವಾಗಿ ಅಂಕಿ-ಸಂಖ್ಯೆಗಳಲ್ಲಿ ಸೋತಿರಬಹುದು. ಈ ಸೋಲು ನಮಗೆ ಆತ್ಮಸ್ಥೈರ್ಯ ತುಂಬಿದೆ. ರಾಜ್ಯ ನಾಯಕರಿಗೆ ಅಭ್ಯರ್ಥಿಯನ್ನು ಮುಂಚಿತವಾಗಿ ಆಯ್ಕೆ ಮಾಡಬೇಕಿತ್ತು ಎಂಬ ತಪ್ಪು ಕೂಡ ಮನವರಿಕೆಯಾಗಿದೆ ಎಂದು ಹೇಳಿದರು.

    ಈ ಬಾರಿಯ ಚುನಾವವಣೆಯಲ್ಲಿ ಡಿಕೆ ಸುರೇಶ್ 2,07,229 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಡಿಕೆ ಸುರೇಶ್ 8,77,712 ಮತಗಳನ್ನು ಪಡೆದರೆ ಅಶ್ವಥ್ ನಾರಾಯಣ್ 6,70,483 ಮತಗಳನ್ನು ಪಡೆದಿದ್ದಾರೆ.

    2014ರ ಚುನಾವಣೆಯಲ್ಲಿ ಡಿಕೆ ಸುರೇಶ್ 2,31,480 ಮತಗಳ ಅಂತರದಿಂದ ಗೆದ್ದಿದ್ದರು. ಸುರೇಶ್ ಅವರಿಗೆ 6,52,723 ಮತಗಳು ಬಿದ್ದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಮುನಿರಾಜುಗೌಡ 4,21,243 ಮತಗಳನ್ನು ಪಡೆದಿದ್ದರೆ ಜೆಡಿಎಸ್‍ನಿಂದ ಕಣಕ್ಕೆ ಇಳಿದಿದ್ದ ಪ್ರಭಾಕರ ರೆಡ್ಡಿ 3,17,870 ಮತಗಳನ್ನು ಪಡೆದಿದ್ದರು

  • ಸುಮಲತಾ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ: ಅಶ್ವಥ್ ನಾರಾಯಣ್

    ಸುಮಲತಾ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ: ಅಶ್ವಥ್ ನಾರಾಯಣ್

    ಮಂಡ್ಯ: ಫಲಿತಾಂಶ ಬರುವುದಕ್ಕೂ ಮುನ್ನವೇ, ಸುಮಲತಾ ಅಂಬರೀಶ್ ಗೆಲುವಿಗೆ ಸಹಕರಿಸಿದ ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರಿಗೆ ಧನ್ಯವಾದಗಳು ಎಂದು ಮಾಜಿ ಎಂಎಲ್‍ಸಿ ಅಶ್ವಥ್ ನಾರಾಯಣ್ ಹೇಳಿದ್ದಾರೆ.

    ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯ ನಂತರ ಮಾತನಾಡಿದ ಅಶ್ವಥ್ ನಾರಾಯಣ್, ಸುಮಲತಾ ಈಗಾಗಲೇ ಗೆದ್ದಾಗಿದೆ. ಫಲಿತಾಂಶ ಬರುವುದೊಂದೆ ಬಾಕಿ ಉಳಿದಿದೆ. ನಾಗಮಂಗಲ ಮತ್ತು ಕೆ.ಆರ್ ಪೇಟೆಗೆ ತಾಲೂಕುಗಳಿಗೆ ಭೇಟಿ ನೀಡಿ ವರದಿ ಪಡೆದಿದ್ದೇನೆ. ಸುಮಲತಾ ಎಲ್ಲ ಕಡೆ ಲೀಡ್ ಪಡೆಯುತ್ತಾರೆ. ಹೀಗಾಗಿ ಅವರು ಗೆಲ್ಲುವುದು ನಿಶ್ಚಿತ ಎಂದು ಹೇಳಿ ಅಭಿನಂದನೆ ತಿಳಿಸಿದರು.

    ಕೆ.ಆರ್ ಪೇಟೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳೇ ಗೆದ್ದು ಅಧಿಕಾರಕ್ಕೆ ಬರುತ್ತಾರೆ ಎಂದು ಅಶ್ವಥ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ನಿಂದ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಅಖಾಡಕ್ಕೆ ಧುಮುಕಿದ್ದರು.
    ಏಪ್ರಿಲ್ 18 ರಂದು ಮಂಡ್ಯದಲ್ಲಿ ಎರಡನೇ ಹಂತದಲ್ಲಿ ಲೋಕಸಭಾ ಚುನಾವಣೆ ನಡೆದಿದ್ದು, ಮೇ 23 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

  • ಸರ್ಕಾರ ಬೀಳಿಸಲು ಬಂದಿದ್ದ ಶಾಸಕರನ್ನೇ ಬೀಳಿಸ್ತೀನಿ: ಅಶ್ವಥ್ ನಾರಾಯಣ್‍ಗೆ ಡಿಕೆಶಿ ಟಾಂಗ್

    ಸರ್ಕಾರ ಬೀಳಿಸಲು ಬಂದಿದ್ದ ಶಾಸಕರನ್ನೇ ಬೀಳಿಸ್ತೀನಿ: ಅಶ್ವಥ್ ನಾರಾಯಣ್‍ಗೆ ಡಿಕೆಶಿ ಟಾಂಗ್

    – ಬೆಂಗಳೂರಿಗೆ ಉತ್ತರ ಕ್ಷೇತ್ರಕ್ಕೆ ಸದಾನಂದಗೌಡರ ಕೊಡುಗೆ ಏನು?
    – ಬಿಜೆಪಿ ಅಭ್ಯರ್ಥಿ ಆರ್‌ಎಸ್‌ಎಸ್ ಟೆಂಟ್‍ಗೆ ಮರಳುವುದು ಗ್ಯಾರಂಟಿ
    – ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ಕಿಡಿ

    ಬೆಂಗಳೂರು: ಇಲ್ಲಿನ ಶಾಸಕರು ಮೈತ್ರಿ ಸರ್ಕಾರವನ್ನೇ ಬೀಳಿಸಲು ಪ್ರಯತ್ನ ಮಾಡುತ್ತಿದ್ದರು. ಈಗೇನೂ ಹೇಳಲ್ಲ, ಮುಂದಿನ ವಿಧಾನಸಭೆ ಚುನಾವಣೆಗೆ ಬರುತ್ತೇನೆ. ಆಗ ವಿಶೇಷ ಗಮನಹರಿಸಿ ಶಾಸಕರನ್ನೇ ಬದಲಾಯಿಸುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್, ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಮಲ್ಲೇಶ್ವರಂ ಕ್ಷೇತ್ರದ ಸುಬ್ರಮಣ್ಯಪುರದಲ್ಲಿನ ಅರಳಿಕಟ್ಟೆ ಮೈದಾನದಲ್ಲಿ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಕೋಡ ಮಾರಿ ಎಂದು ಹೇಳುತ್ತಾರೆ. ಕೇಂದ್ರ ಸಚಿವ ಸದಾನಂದಗೌಡ ಅವರು ಕೂಡ ಪಕೋಡ ಮಾರುವುದು ಒಂದು ಉದ್ಯೋಗ ಎನ್ನುತ್ತಾರೆ. ಇಂತಹ ನಾಯಕರು ಮತ್ತೇ ಸಂಸದರಾಗಬೇಕಾ ಎಂದು ಸಮಾವೇಶದಲ್ಲಿ ಸೇರಿದ್ದ ಜನರಿಗೆ ಪ್ರಶ್ನಿಸಿದರು.

    ಡಿ.ವಿ.ಸದಾನಂದಗೌಡ ಅವರು ಮಂಗಳೂರಿನಿಂದ ಬಂದವರು. ಮಂಗಳೂರಿನ ವಿಜಯಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಜೊತೆ ಸೇರಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಸದಾನಂದಗೌಡ ಸಹಿ ಮಾಡಿ ಕೊಟ್ಟಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತ, ಆದರೆ ಕಾಂಗ್ರೆಸ್‍ಗೆ ಮತ ಹಾಕುತ್ತೇನೆ. ಇದು ನಮ್ಮ ಸ್ವಾಭಿಮಾನದ ಪ್ರಶ್ನೆ ಎಂದು ಇಲ್ಲಿನ ಸ್ಥಳೀಯರು ನನಗೆ ಹೇಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

    ಏರ್ ಸ್ಟ್ರೈಕ್ ಮಾಡಿದ್ದರಿಂದ ನಾವು 22 ಸ್ಥಾನ ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಭಾರತೀಯ ಸೈನಿಕರ ಸಾಧನೆಯ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ರಾಜ್ಯದಲ್ಲಿ ಈ ಬಾರಿ 2 ಸೀಟು ಬಂದರೆ ಹೆಚ್ಚು. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಮಗ ರಾಘವೇಂದ್ರ ಗೆಲ್ಲುವುದಿಲ್ಲ. ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿಗೆ 13 ಸಾವಿರ ಕೋಟಿ ರೂ. ಅನುಧಾನ ಕೊಟ್ಟಿದ್ದರು. ಮೈತ್ರಿ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿಯವರು 23 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನ ಕೈಗೆತ್ತಿಕೊಂಡಿದ್ದಾರೆ. ಸಚಿವ ಕೃಷ್ಣಭೈರೇಗೌಡ ಅವರು ಬಹಳ ಸಜ್ಜನಿಕೆ ವ್ಯಕ್ತಿ. ಮಲ್ಲೇಶ್ವರಂ ಕ್ಷೇತ್ರದಲ್ಲಿ ಬದಲಾವಣೆ ತರಬೇಕು. ನಾವೆಲ್ಲಾ ಹಿಂದೂ, ನಾವು ಮುಂದು ಅಂತ ಬಿಜೆಪಿಯವರು ಹೇಳುತ್ತಾರೆ. ನಾವು ಬೇರೆಯವರಾ? ನಾವು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ಸ್ ಎಲ್ಲಾ ಒಂದು ಅಂತ ಹೇಳುತ್ತೇವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಬೆಂಗಳೂರಿಗೆ ಉತ್ತರ ಕ್ಷೇತ್ರಕ್ಕೆ ಸಚಿವ ಸದಾನಂದಗೌಡ ಅವರ ಕೊಡುಗೆ ಏನು? ಕೇಂದ್ರ ಸಚಿವರಾಗಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರನ್ನ ಬಿಟ್ಟು ಆರ್‌ಎಸ್‌ಎಸ್‌ನ ಒಬ್ಬ ವ್ಯಕ್ತಿಗೆ ಟಿಕೆಟ್ ಕೊಟ್ಟಿದ್ದಾರೆ. ಹೀಗಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹರಿಪ್ರಸಾದ್ ಸಂಸತ್ತಿಗೆ ಹೋಗುತ್ತಾರೆ. ಬಿಜೆಪಿ ಅಭ್ಯರ್ಥಿ ಆರ್‌ಎಸ್‌ಎಸ್‌ ಟೆಂಟ್‍ಗೆ ಮರಳುವುದು ಗ್ಯಾರಂಟಿ. ಈ ಮೂಲಕ ಬೆಂಗಳೂರಿನ ನಾಲ್ಕು ಕ್ಷೇತ್ರದಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳೇ ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಕ್ವಾರಿ, ಗಣಿಗಾರಿಕೆ ನಡೆಸೋರ ಮೇಲಿನ ದಾಳಿಗೆ ಸಿಎಂ ನಿಲುವೇನು: ಬಿಜೆಪಿ

    ಕ್ವಾರಿ, ಗಣಿಗಾರಿಕೆ ನಡೆಸೋರ ಮೇಲಿನ ದಾಳಿಗೆ ಸಿಎಂ ನಿಲುವೇನು: ಬಿಜೆಪಿ

    -ತನಿಖಾ ಏಜೆನ್ಸಿಗಳನ್ನ ಟೀಸಿಸುವುದು ಸಿಎಂಗೆ ಶೋಭೆ ತರಲ್ಲ

    ರಾಮನಗರ: ಕ್ವಾರಿ ಹಾಗೂ ಗಣಿಗಾರಿಕೆ ನಡೆಸೋರ ಮೇಲೆ ಐಟಿ ದಾಳಿ ನಡೆದ ಬಗ್ಗೆ ಸಿಎಂ ರಿಯಾಕ್ಟ್ ಮಾಡುತ್ತಾರೆ ಅಂದರೆ ಅವರ ನಿಲುವನ್ನ ಸಿಎಂ ಸ್ಪಷ್ಟಿಕರಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ್ ಆಗ್ರಹಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಪ್ರಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದ ಅವರು, ತನಿಖಾ ಏಜೆನ್ಸಿಗಳನ್ನ ಟೀಕೆ ಮಾಡುವುದು ಸಿಎಂ ಅವರಿಗೆ ಶೋಭೆ ತರಲ್ಲ. ಇದಕ್ಕೆ ಕ್ಷಮೆ ಕೋರಬೇಕು. ಐಟಿ ದಾಳಿ ವೇಳೆ ಸಿಕ್ಕ ಹಣದ ಬಗ್ಗೆ ಸಚಿವ ಡಿಕೆ ಶಿವಕುಮಾರ್ ಹವಾಲ ಹಣವನ್ನ ನಮ್ಮದಲ್ಲ ಎಂದರು. ನಿನ್ನೆ ಡಿಕೆ ಸುರೇಶ್ ಘೋಷಣೆ ಮಾಡಿ ಅದನ್ನ ನಮ್ಮದು ಎಂದು ಒಪ್ಪಿಕೊಂಡಿದ್ದಾರೆ. ಬೇಕಾದಾಗ ಒಂದು ರೀತಿ ಬೇಡವೆಂದಾಗ ಒಂದು ರೀತಿ ಹೇಳಿಕೆ ನೀಡುವುದಲ್ಲ ಎಂದರು.

    ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಸಿಪಿ ಯೋಗೇಶ್ವರ್, ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ತಮ್ಮ ಮಕ್ಕಳನ್ನ ಚುನಾವಣೆಗೆ ನಿಲ್ಲಿಸಿದ್ದು ಕಳೆದ ಒಂದುವರೆ ವರ್ಷದಿಂದ ಯಾರ್ಯಾರ ಬಳಿ ಏನೇನು ಕಲೆಕ್ಟ್ ಮಾಡಿದ್ದಾರೆ. ಆ ಹಣದ ಬಲದಿಂದ ತಮ್ಮ ಮಕ್ಕಳನ್ನ ಎಂಪಿ ಮಾಡಲಿಕ್ಕೆ ಹೊರಟಿದ್ದಾರೆ. ಆದ್ದರಿಂದಲೇ ಅವರಿಗೆ ಐಟಿ ಭಯ ಕಾಡುತ್ತಿದೆ ಎಂದರು.

    ಸಿಎಂ ಎಚ್‍ಡಿಕೆಯವರಿಗೆ ಈ ಚುನಾವಣೆಯನ್ನ ಎದುರಿಸೋಕೆ ಯಾವುದೇ ನೈತಿಕತೆಯಿಲ್ಲ. ಹಣ ಬಲದ ಮೇಲೆಯೇ ಈ ಚುನಾವಣೆ ಎದುರಿಸಬೇಕು. ಕಂಟ್ರಾಕ್ಟರ್‍ಗಳು, ಗುತ್ತಿಗೆದಾರರು, ಪಾಲುದಾರರು ಸರ್ಕಾರದಲ್ಲಿ ಬಂದ ಕಮಿಷನ್ ಹಣ. ಅಲ್ಲದೇ ಶಾಸಕಿ ಅನಿತಾ ಕುಮಾರಸ್ವಾಮಿ ವರ್ಗಾವಣೆ ದಂಧೆಯಲ್ಲಿ ಅಧಿಕಾರಿಗಳ ಹತ್ತಿರ, ಪೊಲೀಸರು, ಗುತ್ತಿಗೆದಾರರ ಹತ್ತಿರ ಹಣ ಕಲೆಕ್ಟ್ ಮಾಡಿದ್ದಾರೆ ಎಂಬುದು ಜಗಜ್ಜಾಹಿರಾಗಿದೆ. ಅವರು ಕಲೆಕ್ಟ್ ಮಾಡಿರುವ ಕಪ್ಪುಹಣದ ಮೇಲೆ ಐಟಿ ದಾಳಿ ಮಾಡಿರಬಹುದು ಅದರಲ್ಲಿ ತಪ್ಪೇನಿದೆ. ನಾವು ಕೂಡಾ ಐಟಿ ಇಲಾಖೆಗೆ ಸಾಕಷ್ಟು ಬಾರಿ ಇಲ್ಲಿ ಹಣದ ದಂಧೆ ನಡೆಯುತ್ತೆ, ಹಣ ಚೆಲ್ಲುತ್ತಾರೆ ಎಂದು ಮನವಿ ಮಾಡಿದ್ದೇವು. ಸಚಿವ ರೇವಣ್ಣ, ಸಿಎಂ ಕೂಡ ಬಹಳಷ್ಟು ಹಣ ಲೂಟಿ ಮಾಡಿದ್ದಾರೆ. ಡಿಕೆ ಬ್ರದರ್ಸ್ ರ ಹಣದ ಏರಿಕೆ ಪೈಪೋಟಿಯಂತಿದೆ ಎಂದು ವಾಗ್ದಾಳಿ ನಡೆಸಿದರು.