Tag: ashrama

  • ದೀನಬಂಧು ಆಶ್ರಮದ 30 ಮಕ್ಕಳಿಗೆ ಕೊರೊನಾ ಪಾಸಿಟಿವ್

    ದೀನಬಂಧು ಆಶ್ರಮದ 30 ಮಕ್ಕಳಿಗೆ ಕೊರೊನಾ ಪಾಸಿಟಿವ್

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಪುತ್ರ ಜಿ.ಎಸ್.ಜಯದೇವ್ ಅವರು ನಡೆಸುತ್ತಿರುವ ದೀನಬಂಧು ಆಶ್ರಮದ 30 ಮಕ್ಕಳಿಗೆ ಕೊರೊನಾ ದೃಢಪಟ್ಟಿದೆ.

    ದೀನಬಂಧು ಶಾಲೆಯನ್ನು ಈಗಾಗಲೇ ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದ್ದು, ಪಾಸಿಟಿವ್ ಬಂದಿರುವ ಮಕ್ಕಳಲ್ಲಿ ಎ ಸಿಂಪ್ಟಮ್ಯಾಟಿಕ್ ಲಕ್ಷಣಗಳು ಕಾಣಿಸಿಕೊಂಡಿದೆ. ಆಶ್ರಮದಲ್ಲಿ ಒಟ್ಟು 70 ಮಕ್ಕಳಿದ್ದು, 30 ಮಂದಿಗೆ ಪಾಸಿಟಿವ್ ಆಗಿದೆ. ಪಾಸಿಟಿವ್ ಬಂದ ಮಕ್ಕಳನ್ನು ದೀನಬಂಧು ಶಾಲೆಗೆ ಶಿಪ್ಟ್ ಮಾಡಲಾಗಿದೆ.

    ಉಳಿದ 40 ಮಕ್ಕಳು ದೀನಬಂಧು ಆಶ್ರಮದಲ್ಲೇ ಕ್ವಾರಂಟೈನ್ ಮಾಡಲಾಗಿದೆ. ದೀನ ಬಂಧು ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ಮಕ್ಕಳಿಗೆ ಆರೈಕೆ ಮಾಡಲಾಗುತ್ತಿದ್ದು, ಸಂಸ್ಥೆಯಿಂದ ನರ್ಸ್ ಗಳ ನೇಮಕಾತಿ ಕೂಡ ನಡೆಸಲಾಗಿದೆ. ಸರ್ಕಾರಿ, ಖಾಸಗಿ ವೈದ್ಯರಿಂದ ಮಕ್ಕಳಿಗೆ ಚಿಕಿತ್ಸೆ ಕೊಡುವ, ನಿಗಾವಹಿಸುವ ಕೆಲಸ ನಡೆದಿದೆ. ಆಶ್ರಮದಲ್ಲಿದ್ದ ಎಲ್ಲಾ ಮಕ್ಕಳಿಗೂ ಕೂಡ ಕೊರೊನಾ ಟೆಸ್ಟ್ ನಡೆಸಲು ಸಂಸ್ಥೆ ನಿರ್ಧರಿಸಿದೆ.

  • ಸಮಸ್ಯೆಗೆ ಪರಿಹಾರ ಕೇಳಲು ಬಂದ ಮೂವರು ಮಹಿಳೆಯರ ಮೇಲೆ ಅತ್ಯಾಚಾರ

    ಸಮಸ್ಯೆಗೆ ಪರಿಹಾರ ಕೇಳಲು ಬಂದ ಮೂವರು ಮಹಿಳೆಯರ ಮೇಲೆ ಅತ್ಯಾಚಾರ

    – ಆಶ್ರಮದಲ್ಲಿ ಪತ್ತೆಯಾದ ಸಿಡಿಯಲ್ಲಿ ಸೆಕ್ಸ್ ವಿಡಿಯೋ

    ಭೋಪಾಲ್: ಮಾಂತ್ರಿಕ ಶಕ್ತಿಗಳ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ವ್ಯಕ್ತಿಯೊಬ್ಬ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ನರಸಿಂಗ್‍ಪುರ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಯನ್ನು ಧರ್ಮೇಂದ್ರ ದಾಸ್ ಅಲಿಯಾಸ್ ಧರ್ಮೇಂದ್ರ ದುಬೆ (35) ಎಂದು ಗುರುತಿಸಲಾಗಿದೆ. ಈತನನ್ನು ಈಗಾಗಲೇ ಬೇರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಬಂಧಿಸಿದ ನಂತರ ಮೂವರು ಮಹಿಳೆಯರು ಪೊಲೀಸ್ ಠಾಣೆಗೆ ಬಂದು ದುಬೆ ವಿರುದ್ಧ ದೂರು ದಾಖಲಿಸಿದ್ದಾರೆ.

    ಆರೋಪಿ ಮಾಂತ್ರಿಕ ಶಕ್ತಿಗಳ ಮೂಲಕ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತೇನೆ ಎಂದು ನಂಬಿಸಿ ನಮ್ಮ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇಬ್ಬರು ಅಪ್ರಾಪ್ತ ಸಹೋದರಿಗೂ ಸಹ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಒಟ್ಟು ನಾಲ್ಕು ಎಫ್‍ಐಆರ್ ದಾಖಲಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ದುಬೆ ಮದುವೆಯಾಗಿದ್ದು, ಮಗು ಕೂಡ ಇದೆ. ಈತ ತನ್ನ ಮನೆಯ ಆವರಣದಲ್ಲಿ ಒಂದು ಸಣ್ಣ ಆಶ್ರಮವನ್ನು ನಿರ್ಮಿಸಿಕೊಂಡಿದ್ದು, ಸ್ವಯಂ ದೇವಮಾನವ ಎಂದು ಘೋಷಿಸಿಕೊಂಡಿದ್ದನು. ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಲ್ಲಿಗೆ ಬರುತ್ತಿದ್ದರು. ಕಳೆದ ವಾರ ಆತ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ನಮಗೆ ಸಿಕ್ಕಿತ್ತು. ತಕ್ಷಣ ಪೊಲೀಸರು ಆತನ ಮನೆಯಲ್ಲಿ ದಾಳಿ ನಡೆಸಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಈ ವೇಳೆ ಆರೋಪಿ ದುಬೆ ಆಶ್ರಮದಲ್ಲಿ ಎರಡು ಕಿಲೋಗ್ರಾಂಗಳಷ್ಟು ಗಾಂಜಾ ಪತ್ತೆಯಾಗಿದೆ. ಅಲ್ಲದೇ ಸಿಡಿಗಳು, ಫೋಟೋಗಳು ಪತ್ತೆಯಾಗಿದ್ದು, ಎಲ್ಲವನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಆರೋಪಿ ದುಬೆ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳುಹಿಸಲಾಗಿದೆ. ಆದರೆ ಬಂಧಿಸಿದ ನಂತರ ಮೂವರು ಮಹಿಳೆಯರು ಆತನ ವಿರುದ್ಧ ಅತ್ಯಾಚಾರ ಮತ್ತು ಕಿರುಕುಳದ ದೂರುಗಳನ್ನು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮೊಹಂತಿ ಮರವಿ ತಿಳಿಸಿದರು.

    ಕಳೆದ ಐದು ವರ್ಷಗಳಿಂದ ದುಬೆ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ. ಆಶ್ರಮದಿಂದ ವಶಪಡಿಸಿಕೊಂಡ ಸಿಡಿಗಳಲ್ಲಿ ಮಹಿಳೆಯೊಂದಿಗೆ ಸೆಕ್ಸ್ ಮಾಡಿದ್ದ ವಿಡಿಯೋಗಳು ಪತ್ತೆಯಾಗಿವೆ. ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಅನೇಕ ತಿಂಗಳುಗಳಿಂದ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದನು. ಆದರೆ ಮಹಿಳೆಯರು ಭಯದಿಂದ ದೂರು ನೀಡಿರಲಿಲ್ಲ. ಸದ್ಯಕ್ಕೆ ವಿಡಿಯೋ ಮೂಲಕ ಸಂತ್ರಸ್ತೆಯರ ಕುಟುಂಬಗಳನ್ನು ಸಂಪರ್ಕಿಸಿ ದೂರು ನೀಡುವಂತೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಶಿವರಾತ್ರಿ ಪ್ರಸಾದ ತಿಂದ ಬಳಿಕ 1500 ಮಂದಿ ಅಸ್ವಸ್ಥ

    ಶಿವರಾತ್ರಿ ಪ್ರಸಾದ ತಿಂದ ಬಳಿಕ 1500 ಮಂದಿ ಅಸ್ವಸ್ಥ

    ಭೋಪಾಲ್: ಶಿವರಾತ್ರಿ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಿಚಡಿ ಪ್ರಸಾದವನ್ನ ತಿಂದು ಬರೋಬ್ಬರಿ 1500 ಜನ ಅಸ್ವಸ್ಥಗೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಇಲ್ಲಿನ ಬರ್ವಾನಿ ಜಿಲ್ಲೆಯ ಆಶ್ರಮವೊಂದರಲ್ಲಿ ಪ್ರಸಾದ ಹಂಚಲಾಗಿತ್ತು. ಪ್ರಸಾದ ಸೇವಿಸಿದ ಬಳಿಕ ಗ್ರಾಮಸ್ಥರಿಗೆ ವಾಂತಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ಸುಮಾರು 7 ಹಳ್ಳಿಗಳ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ 300 ಜನರನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಸಾಕಷ್ಟು ಮಂದಿ ಅಸ್ವಸ್ಥಗೊಂಡಿದ್ದರಿಂದ ಟ್ರ್ಯಾಕ್ಟರ್ ಟ್ರಾಲಿ, ಪಿಕಪ್ ವಾಹನ ಹಾಗೂ ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ರವಾನಿಸಬೇಕಾಯಿತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಅಸ್ವಸ್ಥಗೊಂಡವರನ್ನ ಗುರುತಿಸಿ ಜಿಲ್ಲಾಸ್ಪತ್ರೆಗೆ ಕರೆತರಲು ತಂಡವನ್ನ ನಿಯೋಜಿಸಲಾಗಿದೆ. ಮತ್ತೆರಡು ಖಾಸಗಿ ಆಸ್ಪತ್ರೆಗಳು ಕೂಡ ನೆರವು ನೀಡಿದ್ದು, ಹಲವರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ತೇಜಸ್ವಿ ಎಸ್ ನಾಯ್ಕ್ ಹೇಳಿದ್ದಾರೆ.

    ಘಟನೆಗೆ ಕಾರಣವೇನೆಂಬುದನ್ನ ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.