Tag: ashish mishra

  • ಲಖೀಂಪುರ ಖೇರಿ ಗಲಭೆ – ಆಶಿಶ್ ಮಿಶ್ರಾ ಜಾಮೀನು ರದ್ದು

    ಲಖೀಂಪುರ ಖೇರಿ ಗಲಭೆ – ಆಶಿಶ್ ಮಿಶ್ರಾ ಜಾಮೀನು ರದ್ದು

    ನವದಹಲಿ: ಲಖೀಂಪುರ ಖೇರಿ ಗಲಭೆ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾರವರ ಪುತ್ರ ಆಶಿಶ್ ಮಿಶ್ರಾ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಮತ್ತು ಒಂದು ವಾರದೊಳಗೆ ಶರಣಾಗುವಂತೆ ಆದೇಶಿಸಿದೆ.

    SUPREME COURT

    ಹೈಕೋರ್ಟ್ ಹಲವಾರು ಅಪ್ರಸ್ತುತ ಸಮಸ್ಯೆಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ. ಪ್ರಕರಣವನ್ನು ಮತ್ತೆ ವಿಚಾರಣೆ ನಡೆಸುವಂತೆ ಹೈಕೋರ್ಟ್‍ಗೆ ಸುಪ್ರೀಂ ಸೂಚನೆ ನೀಡಿದೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಶಿವಸೇನೆ ಶಾಸಕನ ಪತ್ನಿ ಶವ ಪತ್ತೆ

    ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ, ಕಳೆದ ವರ್ಷ ಅಕ್ಟೋಬರ್‍ನಲ್ಲಿ ಉತ್ತರ ಪ್ರದೇಶದ ಲಖೀಂಪುರ ಖೇರಿ ಪ್ರದೇಶದಲ್ಲಿ ನಡೆದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಅವರನ್ನು ಅಕ್ಟೋಬರ್ 9 ರಂದು ಬಂಧಿಸಲಾಗಿತ್ತು. ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು.  ಇದನ್ನೂ ಓದಿ: 8 ವರ್ಷದ ಮಗನನ್ನೇ ಕತ್ತು ಸೀಳಿ ಕೊಂದ ಕ್ರೂರಿ ತಾಯಿ

    ಕಳೆದ ವರ್ಷದ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಲಖೀಂಪುರಕ್ಕೆ ಭೇಟಿ ನೀಡುವ ವೇಳೆ ರೈತರ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನನಿರತ ನಾಲ್ವರು ರೈತರು ಸೇರಿದಂತೆ 8 ಮಂದಿ ಬಲಿಯಾಗಿದ್ದರು.

  • ಅಪರಾಧಿ ಹಾಗೂ ಬೆಂಬಲಿಗರ ಬಂಧನ: ಅಖಿಲೇಶ್ ಯಾದವ್

    ಅಪರಾಧಿ ಹಾಗೂ ಬೆಂಬಲಿಗರ ಬಂಧನ: ಅಖಿಲೇಶ್ ಯಾದವ್

    ಲಕ್ನೋ: ಲಖಿಂಪುರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನಿಗೆ ಜಾಮೀನು ನೀಡಿರುವುದನ್ನು ಖಂಡಿಸಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್ ಯಾದವ್ ಅವರು, ತಾವು ಅಧಿಕಾರಕ್ಕೆ ಬಂದರೆ ಅಪರಾಧಿಗಳನ್ನು ಹಾಗೂ ಅಪರಾಧಿಗಳ ರಕ್ಷಕರನ್ನು ಜೈಲಿಗೆ ಕಳಿಸುವುದಾಗಿ ಭರವಸೆ ನೀಡಿದರು.

    ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ರೈತರನ್ನು ತುಳಿದ ಸಚಿವರ ಮಗನಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ಸರ್ಕಾರವು ಪ್ರಕರಣದ ತನಿಖೆಯನ್ನು ಸರಿಯಾದ ರೀತಿಯಲ್ಲಿ ಮುಂದುವರಿಸಿಲ್ಲ. ಆದರೆ ನಮ್ಮ ಸರ್ಕಾರ ಬಂದಾಗ ರೈತರ ಜೀವವನ್ನು ತೆಗೆದುಕೊಂಡ ಆರೋಪಿಗಳಿಗೆ ಮಾತ್ರವಲ್ಲದೇ ಅವರನ್ನು ರಕ್ಷಿಸಿದವರನ್ನು ಬಂಧಿಸಲಾಗುವುದು. ಜೊತೆ ಪ್ರಕರಣದ ಕುರಿತು ಸರಿಯಾಗಿ ತನಿಖೆ ನಡೆಸಲಾಗುವುದು ಎಂದ ಅವರು, ಕಾನೂನನ್ನು ತಮ್ಮ ಕೈಯಲ್ಲಿ ತೆಗೆದುಕೊಳ್ಳಲು ಬಯಸುವವರು ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತ ಹಾಕುವ ಅಗತ್ಯವಿಲ್ಲ ಎಂದು ನುಡಿದರು.

    ನವ ಉತ್ತರಪ್ರದೇಶಕ್ಕೆ ಸಮಾಜವಾದಿ ಪಕ್ಷಕ್ಕೆ ಮತ ಕೇಳಿದ ಅವರು, ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನು ಮಾಡುವುದರ ಜೊತೆಗೆ ಇನ್ನೂ ಕೆಲವು ಪೊಲೀಸ್ ಹುದ್ದೇಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದರು. ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಯಂತೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಈಗಾಗಲೇ ಭರವಸೆ ನೀಡಿರುವ ಅವರು, ಉದ್ಯೋಗ ಪಡೆಯಲು ವಯೋಮಿತಿ ಸಡಿಲಿಸುವ ಭರವಸೆ ನೀಡಿ ನಿರುದ್ಯೋಗಿ ಯುವಕರನ್ನು ಓಲೈಸಲು ಯತ್ನಿಸಿದರು. ಇದನ್ನೂ ಓದಿ: ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!

    ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ ನಾಲ್ವರು ಲಖಿಂಪುರದ ಖೇರಿಯ ಎಂಟು ಜನರ ಸಾವಿಗೆ ಕಾರಣವಾದ ಆರೋಪಿಯಾಗಿದ್ದಾರೆ. ಆಶಿಶ್ ಮಿಶ್ರಾ ಅವರಿಗೆ ಇತ್ತೀಚೆಗೆ ಜಾಮೀನು ನೀಡಲಾಯಿತು ಮತ್ತು ಕಳೆದ ವರ್ಷ ಅಕ್ಟೋಬರ್‍ನಲ್ಲಿ ಅವರನ್ನು ಬಂಧಿಸಿದ ನಂತರ ಲಖಿಂಪುರ ಖೇರಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

  • ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣ – ಪ್ರಮುಖ ಆರೋಪಿ ಆಶಿಶ್ ಮಿಶ್ರಾ ನಾಳೆ ಬಿಡುಗಡೆ

    ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣ – ಪ್ರಮುಖ ಆರೋಪಿ ಆಶಿಶ್ ಮಿಶ್ರಾ ನಾಳೆ ಬಿಡುಗಡೆ

    ನವದೆಹಲಿ: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ನಾಳೆ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದ್ದು ಮಿಶ್ರಾ ನಾಳೆ ಜಾಮೀನಿನ ಮೇಲೆ ಆಚೆ ಬರಲಿದ್ದಾರೆ.

    ಪ್ರಕರಣ ಪ್ರಮುಖ ಆರೋಪಿಯಾಗಿದ್ದ ಹಿನ್ನೆಲೆ ಉತ್ತರ ಪ್ರದೇಶ ಪೊಲೀಸರು ಕೇಂದ್ರ ಗೃಹ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾರನ್ನು ಬಂಧಿಸಿ ಎಫ್‍ಐಆರ್ ದಾಖಲಿಸಲಾಗಿತ್ತು. ಕೆಳ ಹಂತದ ನ್ಯಾಯಲಯ ಜಾಮೀನು ತಿರಸ್ಕರಿಸಿದ ಬಳಿಕ ಅಲಹಾಬಾದ್ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದನ್ನೂ ಓದಿ: ಒಡಹುಟ್ಟಿದವರೇ ಕಾಂಗ್ರೆಸ್‌ ನಾಶ ಮಾಡ್ತಾರೆ, ಚಿಂತಿಸಬೇಡಿ: ಯೋಗಿ ಆದಿತ್ಯನಾಥ್‌

    ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಫೆಬ್ರವರಿ 10ರಂದೇ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನು ಮಂಜೂರು ಮಾಡುವ ವೇಳೆ ಸೆಕ್ಷನ್ 302 (ಕೊಲೆ) ಮತ್ತು 120 ಬಿ (ಅಪರಾಧದ ಪಿತೂರಿ)ಯನ್ನು ಹೈಕೋರ್ಟ್ ಪರಿಗಣಿಸಿರಲಿಲ್ಲ. ಇದಕ್ಕೆ ತಕರಾರು ವ್ಯಕ್ತವಾದ ಬಳಿಕ ಎರಡು ಸೆಕ್ಷನ್ ಸೇರಿಸಿ ಮರು ಅರ್ಜಿ ಸಲ್ಲಿಸಿ ಹೈಕೋರ್ಟ್ ಮೂಲಕ ಜಾಮೀನು ಪಡೆಯಲಾಗಿದೆ. ಇದನ್ನೂ ಓದಿ: ಲಖಿಂಪುರ ಗಲಭೆಯ ಮುಖ್ಯ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು

    ಲಿಖಿತ ರೂಪದಲ್ಲಿ ಆದೇಶವಾದ ಬೆನ್ನಲ್ಲೆ ಜಾಮೀನು ಪ್ರಕ್ರಿಯೆ ಆರಂಭವಾಗಲಿದ್ದು ನಾಳೆ ವೇಳೆಗೆ ಆಶಿಶ್ ಮಿಶ್ರಾ ಜೈಲಿನಿಂದ ಹೊರ ಬರಲಿದ್ದಾರೆ. ಫೆ 10 ರಂದೇ ಜಾಮೀನು ಪಡೆದರು ಕಾನೂನು ತೊಡಕುಗಳಿಂದಾಗಿ ನಾಲ್ಕು ದಿನಗಳ ಬಳಿಕ ಜೈಲಿನಿಂದ ಮುಕ್ತಿ ಸಿಗುವಂತಾಗಿದೆ.

  • ಪ್ರಧಾನಿಗೆ ತಮ್ಮದೇ ಆದ ನೈತಿಕ ಜವಾಬ್ದಾರಿ ಇದೆ: ಆಶಿಶ್ ಮಿಶ್ರಾ ಜಾಮೀನಿಗೆ ಪ್ರಿಯಾಂಕಾ ಕಿಡಿ

    ಪ್ರಧಾನಿಗೆ ತಮ್ಮದೇ ಆದ ನೈತಿಕ ಜವಾಬ್ದಾರಿ ಇದೆ: ಆಶಿಶ್ ಮಿಶ್ರಾ ಜಾಮೀನಿಗೆ ಪ್ರಿಯಾಂಕಾ ಕಿಡಿ

    ಲಕ್ನೋ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರನ ರಾಜೀನಾಮೆ ಕೇಳದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಾಗ್ದಾಳಿ ನಡೆಸಿದ್ದಾರೆ.

    ಕಳೆದ ವರ್ಷ ಅಕ್ಟೋಬರ್ 3 ರಂದು ನಡೆದ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಗುರುವಾರ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಲಖಿಂಪುರ ಗಲಭೆಯ ಮುಖ್ಯ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು

    ಈ ಕುರಿತಂತೆ ರಾಂಪುರ ಜಿಲ್ಲೆಯ ಬಿಲಾಸ್‍ಪುರ ನಗರದ ರ್‍ಯಾಲಿ ವೇಳೆ ಮಾತನಾಡಿದ ಅವರು, ಪ್ರಧಾನಿಯೊಬ್ಬರು ರಾಷ್ಟ್ರದ ಬಗ್ಗೆ ನೈತಿಕ ಹೊಣೆಗಾರಿಕೆ ಹೊಂದಿರುತ್ತಾರೆ ಮತ್ತು ಈ ಜವಾಬ್ದಾರಿಯನ್ನು ಪೂರೈಸುವುದು ಅವರ ಧರ್ಮವಾಗಿದೆ. ಈ ಧರ್ಮವು ಪ್ರತಿಯೊಂದು ಧರ್ಮಕ್ಕಿಂತ ಮೇಲಿನದ್ದಾಗಿದೆ. ಯಾವುದೇ ರಾಜಕಾರಣಿ, ಪ್ರಧಾನಿ ಅಥವಾ ಸರ್ಕಾರ ಇದನ್ನು ಮಾಡುವಲ್ಲಿ ವಿಫಲವಾಗಿದೆ ಮತ್ತು ನಿರ್ಲಕ್ಷಿಸಿದೆ ಎಂದು ಕಿಡಿಕಾರಿದ್ದಾರೆ.

    ನಿಮ್ಮನ್ನು ಕೆಣಕಿದ ಆ ವ್ಯಕ್ತಿಗೆ ಇಂದು ಜಾಮೀನು ಸಿಕ್ಕಿದೆ ಮತ್ತು ಶೀಘ್ರದಲ್ಲಿಯೇ ಅವನು ಎಲ್ಲರ ಮುಂದೆ ರಾಜಾರೋಷವಾಗಿ ತಿರುಗಾಡುತ್ತಾನೆ. ಹಾಗದರೆ ಸರ್ಕಾರ ಯಾರನ್ನು ಉಳಿಸಿತು? ಇದು ರೈತರನ್ನು ಉಳಿಸಿದಿಯೇ? ರೈತರ ಹತ್ಯೆಯಾದಾಗ ಪೊಲೀಸರು ಮತ್ತು ಆಡಳಿತ ಎಲ್ಲಿಗೆ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜನರನ್ನು ತಣ್ಣಗಾಗಿಸುವ ಬದಲು ಉದ್ಯೋಗವಕಾಶ ಹೆಚ್ಚಿಸಿ: ಯೋಗಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

    ಲಖಿಂಪುರ ಖೇರಿ ಘಟನೆ ನಡೆದಾಗ ಪೊಲೀಸರು ಎಲ್ಲೂ ಕಾಣಲಿಲ್ಲ. ಆದರೆ ಮೃತರ ಕುಟುಂಬಗಳನ್ನು ಭೇಟಿ ಮಾಡಲು ಯತ್ನಿಸಿದಾಗ ನಮ್ಮನ್ನು ತಡೆಯಲು ಬಂದಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಲಖಿಂಪುರ ಗಲಭೆಯ ಮುಖ್ಯ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು

    ಲಖಿಂಪುರ ಗಲಭೆಯ ಮುಖ್ಯ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು

    ಲಕ್ನೋ: ಕಳೆದ ವರ್ಷ ನಡೆದ ಲಖಿಂಪುರ ಗಲಾಟೆಯಲ್ಲಿ ಮುಖ್ಯ ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಅಲಹಾಬಾದ್ ಹೈಕೋರ್ಟ್‍ನ ಲಕ್ನೋ ಪೀಠ ಜಾಮೀನು ಮಂಜೂರು ಮಾಡಿದೆ.

    ಕಳೆದ ವರ್ಷ ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಆಶಿಶ್ ಮಿಶ್ರಾ ಎಂಬ ಆರೋಪಪಟ್ಟಿಯಲ್ಲಿ ಪ್ರಕರಣದ ಪ್ರಮುಖ ಆರೋಪಿ ಎಂದು ಹೆಸರಿಸಿತ್ತು. ಪ್ರತಿಭಟನಾನಿರತ ರೈತರ ಹತ್ಯೆಗೆ ಯೋಜಿತ ಸಂಚು ನಡೆದಿದೆ ಎಂದು ಹೇಳಿತ್ತು. 5,000 ಪುಟಗಳ ಚಾರ್ಜ್‍ಶೀಟ್‍ನಲ್ಲಿ, ಪ್ರಕರಣದ ಆರೋಪಿಗಳ ಸಂಖ್ಯೆಯನ್ನು 14ಕ್ಕೆ ಹೆಚ್ಚಿಸಲಾಗಿದೆ.

    ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಸಂದರ್ಭದಲ್ಲಿ 2021ರ ಅಕ್ಟೋಬರ್ 3ರಂದು ನಡೆದ ಲಖಿಂಪುರ ಖೇರಿ ಹಿಂಸಾಚಾರ ಘಟನೆಯಲ್ಲಿ ಎಂಟು ಜನರು ಸಾವನ್ನಪ್ಪಿದ್ದರು. ಘಟನೆ ಸಂಬಂಧ ಆಶಿಶ್ ಮಿಶ್ರಾ ಮತ್ತು ಕೇಂದ್ರದ ಮಾಜಿ ಸಚಿವ ಅಖಿಲೇಶ್ ದಾಸ್ ಅವರ ಸೋದರಳಿಯ ಅಂಕಿತ್ ದಾಸ್ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಅ.9ರಂದು ಮಿಶ್ರಾ ಅವರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಬಹುಮಾನ ಘೋಷಣೆ ಮಾಡಿದ ಸಂಘಟನೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು: ಯತ್ನಾಳ್

    ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಆರಂಭವಾದ ದಿನವೇ ಆಶಿಶ್ ಮಿಶ್ರಾಗೆ ಜಾಮೀನು ದೊರೆತಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರೈತ ಸಮುದಾಯದ ಪ್ರಾಬಲ್ಯವಿರುವ ಪಶ್ಚಿಮ ಉತ್ತರಪ್ರದೇಶದಲ್ಲಿ ಇಂದಿನಿಂದ ಮೊದಲನೇ ಹಂತದ ಮತದಾನ ಪ್ರಾಭವಾಗಿದೆ. ಇನ್ನೂ 6 ಹಂತದ ಮತದಾನ ಬಾಕಿಯಿದೆ. ಇದನ್ನೂ ಓದಿ: ಒಂಟಿ ಮಹಿಳೆ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್

  • ಲಖೀಂಪುರ ಖೇರಿ ಪ್ರಕರಣ – ಆಶಿಶ್ ಮಿಶ್ರಾ ಜಾಮೀನು ಅರ್ಜಿ ವಜಾ

    ಲಖೀಂಪುರ ಖೇರಿ ಪ್ರಕರಣ – ಆಶಿಶ್ ಮಿಶ್ರಾ ಜಾಮೀನು ಅರ್ಜಿ ವಜಾ

    ಲಕ್ನೋ: ಲಖೀಂಪುರ ಖೇರಿ ಪ್ರಕರಣಕ್ಕೆ ಸಂಬಂಧ ಕೇಂದ್ರ ಗೃಹ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು ಪುತ್ರ ಆಶಿಶ್ ಮಿಶ್ರಾಗೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮುಖೇಶ್ ಮಿಶ್ರಾ ಅವರು ಈ ಅದೇಶ ಹೊರಡಿಸಿದ್ದಾರೆ.

    ಪ್ರಕರಣ ತೀವ್ರ ಸ್ವರೂಪದಾಗಿದ್ದು, ಗಂಭೀರವಾಗಿದೆ. ಅಲ್ಲದೇ ತನಿಖೆ ಇನ್ನೂ ಚಾಲ್ತಿಯಲ್ಲಿದ್ದು ಈ ಹಂತದಲ್ಲಿ ಜಾಮೀನು ನೀಡದಂತೆ ಸರ್ಕಾರದ ಪರ ವಕೀಲ ಅರವಿಂದ್ ತ್ರಿಪಾಠಿ ವಾದ ಮಂಡಿಸಿದ್ದರು. ಕಳೆದ ತಿಂಗಳು ಮಿಶ್ರಾ ಅವರ ಜಾಮೀನು ಅರ್ಜಿಯನ್ನು ಲಖೀಂಪುರ ಖೇರಿಯಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ತಿರಸ್ಕರಿಸಿತ್ತು. ಪ್ರಕರಣ ತೀವ್ರತೆ ಅರಿತ ಕೋರ್ಟ್ ಆಶಿಶ್ ಮಿಶ್ರಾ ಸೇರಿ ಇತರೆ ಇಬ್ಬರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದೆ.

    ಕೇಂದ್ರ ಸರ್ಕಾರ ಜಾರಿ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಆಶಿಶ್ ಮಿಶ್ರಾಗೆ ಸಂಬಂಧಿಸಿದ ಕಾರನ್ನು ರೈತರು ಮೇಲೆ ಹರಿಸಲಾಗಿತ್ತು. ಪರಿಣಾಮ ಸ್ಥಳದಲ್ಲಿ 8 ಮಂದಿ ರೈತರು ಸಾವನ್ನಪ್ಪಿದ್ದರು. ಇದನ್ನೂ ಓದಿ: ನಾಥೂರಾಮ್ ಗೋಡ್ಸೆ ಪ್ರತಿಮೆ ಧ್ವಂಸಗೊಳಿಸಿದ ಕಾಂಗ್ರೆಸ್ಸಿಗರು!

    12 ಗಂಟೆಗಳ ವಿಚಾರಣೆಯ ಬಳಿಕ ವಿಶೇಷ ತನಿಖಾ ತಂಡ (ಎಸ್‍ಐಟಿ) ಅಕ್ಟೋಬರ್ 9 ರಂದು ಆಶಿಶ್ ಮಿಶ್ರಾರನ್ನ ಬಂಧಿಸಿತು ಮತ್ತು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು. ನವೆಂಬರ್ 15 ರಂದು ಸುಪ್ರೀಂಕೋರ್ಟ್ ಎಸ್‍ಐಟಿ ತನಿಖೆಯನ್ನು ಬೇರೆ ರಾಜ್ಯದ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ಮೇಲ್ವಿಚಾರಣೆ ಮಾಡಬೇಕೆಂದು ಹೇಳಿತ್ತು. ಪ್ರಕರಣ ಸಂಬಂಧ ಈವರೆಗೂ ಮಿಶ್ರಾ ಸೇರಿದಂತೆ ಇದುವರೆಗೆ 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

  • ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ ಆಶಿಶ್ ಮಿಶ್ರಾಗೆ ಡೆಂಗ್ಯೂ

    ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ ಆಶಿಶ್ ಮಿಶ್ರಾಗೆ ಡೆಂಗ್ಯೂ

    ಲಕ್ನೋ: ಹಿಂಸಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಅವರಿಗೆ ಡೆಂಗ್ಯೂ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಭಾನುವಾರ ಮಿಶ್ರಾ ಅವರಿಗೆ ಡೆಂಗ್ಯೂ ಇರುವುದು ಪತ್ತೆಯಾಗಿದೆ. ವೈದ್ಯರ ಸಲಹೆಯಂತೆ ಲಖಿಂಪುರ್ ಜೈಲಿನ ಅಧಿಕಾರಿಗಳು ಆಶಿಶ್ ಮಿಶ್ರಾ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಎರಡು ಬಾರಿ ರಕ್ತದ ಮಾದರಿ ಪರೀಕ್ಷೆ ನಡೆಸಿದಾಗಲೂ ಡೆಂಗ್ಯೂ ಇರುವುದು ದೃಢಪಟ್ಟಿದೆ.

    ಭದ್ರತೆ ದೃಷ್ಟಿಯಿಂದ ಆಸ್ಪತ್ರೆ ಹೊರಗಡೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಜಿಲ್ಲಾಸ್ಪತ್ರೆಯು ಮೂರನೇ ಬಾರಿಯ ರಕ್ತದ ಮಾದರಿ ಪರೀಕ್ಷೆ ವರದಿಗಾಗಿ ಕಾಯುತ್ತಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಲಖಿಂಪುರ್ ಖೇರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಶೈಲೇಶ್ ಭಾತ್‍ನಗರ್, ಆಶಿಶ್ ಮಿಶ್ರಾ ಅವರ ರಕ್ತದ ಮಾದರಿಯನ್ನು ಮೂರನೇ ಬಾರಿಗೆ ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ವರದಿ ಆಧರಿಸಿ ಹೆಚ್ಚಿನ ಚಿಕಿತ್ಸೆ ಅಗತ್ಯತೆ ಕುರಿತು ತಜ್ಞರು ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ.

    ಆಶಿಶ್ ಮಿಶ್ರಾ ಅವರ ವಕೀಲ ಅವದೀಶ್ ಕುಮಾರ್ ಸಿಂಗ್ ಮಾತನಾಡಿ, ಕಳೆದ ಮೂರು ದಿನಗಳಿಂದ ಮಿಶ್ರಾ ಅವರು ಜ್ವರದಿಂದ ಬಳಲುತ್ತಿದ್ದರು. ಭಾನುವಾರ ಪರೀಕ್ಷೆಗಾಗಿ ಅವರ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ವರದಿ ಸ್ವೀಕರಿಸಿದ ನಂತರ ಮಿಶ್ರಾ ಅವರನ್ನು ಮತ್ತೆ ಜೈಲಿಗೆ ಕಳುಹಿಸಲಾಗಿತ್ತು’ ಎಂದು ಹೇಳಿದ್ದಾರೆ. ಇದನ್ನೂ ಓದಿ:  ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

    ಲಖಿಂಪುರ್ ಖೇರಿ ಅ.3ರಂದು ಸಂಭವಿಸಿದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ ಎಂಟು ಮಂದಿ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ 13 ಮಂದಿಯನ್ನು ಈವರೆಗೆ ಬಂಧಿಸಲಾಗಿದೆ. ಇದನ್ನೂ ಓದಿ:  ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

  • ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ಲಕ್ನೋ: ಕಳೆದ ಕೆಲವು ದಿನಗಳ ಹಿಂದೆ ನಡೆದಿದ್ದ ಲಖೀಂಪುರ್ ಹಿಂಸಾಚಾರ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಪ್ರಕರಣದಲ್ಲಿ ನಿನ್ನೆ ಪೊಲೀಸರು ಬಂಧಿಸಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆಶಿಶ್ ಮಿಶ್ರಾನನ್ನು ಹೆಚ್ಚಿನ ತನಿಖೆಗೆ ತಮ್ಮ ವಶಕ್ಕೆ ನೀಡುವಂತೆ ಎಸ್‍ಐಟಿ ತಂಡ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಾಳೆ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

    ನಿನ್ನೆ ವಿಚಾರಣೆಗೆ ಹಾಜರಾಗಿದ್ದ ಆಶಿಶ್ ಮಿಶ್ರಾ ಆರಂಭದಲ್ಲಿ ತನ್ನದೇನೂ ತಪ್ಪೇ ಇಲ್ಲ. ತಾನು ಘಟನೆ ನಡೆದ ಸ್ಥಳದಲ್ಲಿ ಇರಲೇ ಇಲ್ಲ ಎಂದು ವಾದಿಸಿದ್ದ. ಆದರೆ ಎಸ್‍ಐಟಿ ತಂಡ ಸೂಕ್ತ ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ಸುದೀರ್ಘ 12 ತಾಸುಗಳ ವಿಚಾರಣೆ ನಡೆಸಿದ ಬಳಿಕ ಆತನನ್ನು ಬಂಧಿಸಿತು. ಕ್ರೈಂ ಬ್ರ್ಯಾಂಚ್ ಕಚೇರಿಯಲ್ಲಿ ಆಶಿಶ್ ಮಿಶ್ರಾ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಯಿತು. ನ್ಯಾಯಾಲಯ ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಎಸ್.ಪಿ ಯಾದವ್ ಹೇಳಿದ್ದಾರೆ. ಇದನ್ನೂ ಓದಿ: ಚಾಲಕನ ಮೇಲೆ ದಾಳಿಯಾದಾಗ ನಿಯಂತ್ರಣ ತಪ್ಪಿ ಕಾರು ರೈತರ ಮೇಲೆ ಹರಿದಿದೆ: ಮಿಶ್ರಾ

    ಕಳೆದ ಭಾನುವಾರ ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ಕೃತ್ಯ ನಡೆದಿದ್ದು, 8 ಜನ ಮೃತಪಟ್ಟಿದ್ದರು. ಸತ್ತವರಲ್ಲಿ ನಾಲ್ವರು ರೈತರಾಗಿದ್ದಾರೆ. ಮೂರು ಮಂದಿ ಬಿಜೆಪಿ ಕಾರ್ಯಕರ್ತರು ಮತ್ತು ಓರ್ವ ಪತ್ರಕರ್ತ ಸಾವನ್ನಪ್ಪಿದ್ದರು. ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಮಹೀಂದ್ರ ಜೀಪ್ ಹತ್ತಿಸಿದ್ದಾರೆ ಎನ್ನುವುದರ ವೀಡಿಯೋ ಹರಿದಾಡುತ್ತಿತ್ತು. ಇದನ್ನೂ ಓದಿ: ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದಿದ್ದು ನಿಜವಾದ್ರೆ ರಾಜೀನಾಮೆ ನೀಡುತ್ತೇನೆ: ಅಜಯ್ ಮಿಶ್ರಾ

    ಅತೀ ವೇಗದಲ್ಲಿದ್ದ ಮಹೀಂದ್ರ ಜೀಪನ್ನು ಕಪ್ಪು ಬಾವುಟ ಹಿಡಿದು ನಡೆದುಹೋಗ್ತಿದ್ದ ರೈತರ ಮೇಲೆ ಹತ್ತಿಸಲಾಗಿತ್ತು. ಆ ಜೀಪ್ ಹಿಂದೆ ಇನ್ನೊಂದು ಕಾರು ಕೂಡಾ ಅತೀ ವೇಗದಲ್ಲಿ ನುಗ್ಗಿದೆ. ಜೀಪ್ ಹತ್ತಿಸಿದ ಪರಿಣಾಮ ನಾಲ್ವರು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಆ ಜೀಪ್‍ನಿಂದ ಇಳಿದು ಓಡಿಹೋಗ್ತಿರುವ ದೃಶ್ಯವೂ ಲಭ್ಯ ಆಗಿತ್ತು. ಇದನ್ನೂ ಓದಿ: ಲಖೀಂಪುರದಲ್ಲಿ ನಾಲ್ವರು ರೈತರನ್ನು ಕೊಂದ ಪ್ರಕರಣ – ಇನ್ನೂ ಅರೆಸ್ಟ್ ಆಗಿಲ್ಲ ಮಂತ್ರಿ ಮಗ

    ಲಖೀಂಪುರ್ ಖೇರಿ ಹಿಂಸಾಚಾರದ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‍ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತ್ತು.

  • ಲಖಿಂಪುರ್ ಸಂತ್ರಸ್ತ ಕುಟುಂಬಗಳಿಗೆ ಹಣ ಬೇಕಿಲ್ಲ, ನ್ಯಾಯ ಬೇಕು: ಪ್ರಿಯಾಂಕಾ ಗಾಂಧಿ

    ಲಖಿಂಪುರ್ ಸಂತ್ರಸ್ತ ಕುಟುಂಬಗಳಿಗೆ ಹಣ ಬೇಕಿಲ್ಲ, ನ್ಯಾಯ ಬೇಕು: ಪ್ರಿಯಾಂಕಾ ಗಾಂಧಿ

    ಲಕ್ನೋ: ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರ ಸಂಘರ್ಷದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರದ ಹಣ ಬೇಕಿಲ್ಲ. ಆದರೆ ಅವರಿಗೆ ನ್ಯಾಯ ಬೇಕಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದಾರೆ.

     

    ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಆ ಕುಟುಂಬಗಳಿಗೆ ಭೇಟಿ ನೀಡಿದಾಗ ಅವರು ಸರ್ಕಾರದಿಂದ 45 ಲಕ್ಷ ರೂಪಾಯಿ ಪರಿಹಾರ ನೀಡಿರುವುದಾಗಿ ತಿಳಿಸಿದರು. ಆದರೆ ಅವರಿಗೆ ಬೇಕಾಗಿರುವುದು ಹಣವಲ್ಲ ನ್ಯಾಯ ಎಂದು ನುಡಿದಿದ್ದಾರೆ.

    ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ, ಆರೋಪಿ ಆಶಿಶ್ ಮಿಶ್ರಾ ಅವರ ತಂದೆ ಕ್ಯಾಬಿನೆಟ್‍ನಲ್ಲಿ ತಮ್ಮ ಸ್ಥಾನದಲ್ಲಿರುವವರೆಗೂ ನ್ಯಾಯಯುತವಾಗಿ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ಈ ಘಟನೆ ಕುರಿತಂತೆ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದು, ಗೃಹ ಸಚಿವರು ಕೂಡ ಅಲ್ಲಿಯೇ ಇರುವುದರಿಂದ ನ್ಯಾಯಯುತವಾಗಿ ತನಿಖೆ ನಡೆಸಲಾಗುತ್ತದೆ ಎಂಬುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಲಖಿಂಪುರ ಖೇರಿ ಹಿಂಸಾಚಾರ- ಯುಪಿ ಸರ್ಕಾರದಿಂದ 45 ಲಕ್ಷ ರೂ.ಪರಿಹಾರ ಘೋಷಣೆ

     

    ಇದೇ ವೇಳೆ ಆಶಿಶ್ ಮಿಶ್ರಾ ಬಂಧನ ವಿಳಂಬ ಕುರಿತಂತೆ ಮಾತನಾಡಿದ ಅವರು, ಪೊಲೀಸರು ಎರಡು ಬಾರಿ ಆತನಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ. ಕೊಲೆಗಾರನನ್ನು ಬಂಧಿಸುವ ಮೊದಲು ಆತನು ಚೇತರಿಸಿಕೊಳ್ಳಲು ಸಮಯ ನೀಡಲಾಗಿದೆಯೇ? ಪೊಲೀಸರು ಯಾಕೆ ಆತನನ್ನು ಇನ್ನೂ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಯವರು, ಮಗನ ವಿರುದ್ಧ ಕೊಲೆ ಆರೋಪ ಇರುವುದರಿಂದ ಅಜಯ್ ಮಿಶ್ರಾ ತೆನಿ ಅವರನ್ನು ಕೆಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹತ್ಯಾಕಾಂಡದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ: ರಾಹುಲ್ ಗಾಂಧಿ

    ಇತ್ತೀಚೆಗಷ್ಟೇ ಮೋದಿಯವರು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಕ್ನೋಗೆ ಭೇಟಿ ನೀಡಿ 3 ದಿನಗಳ ಕಾಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ದೇಶದ ಜನರಿಗೆ ನೀವು ಏನು ಸಂದೇಶ ನೀಡಿದ್ದೀರಾ ಎಂದು ಕೇಳಲು ಬಯಸುತ್ತೇನೆ. ನೀವು ಇಲ್ಲಿಗೆ ಬಂದಿದ್ದರೂ ಒಂದು ಮಾತು ಕೂಡ ಆಡಲಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗೆಸ್ಟ್ ಹೌಸ್‌ನಲ್ಲಿ ಕಸ ಗುಡಿಸುತ್ತಿರೋ ಪ್ರಿಯಾಂಕಾ ಗಾಂಧಿ ವೀಡಿಯೋ ವೈರಲ್

    ನೀವು ಸಾಮಾನ್ಯ ವ್ಯಕ್ತಿಯಾಗಿದ್ದರೆ, ದಲಿತ, ಬಡ ಮಹಿಳೆಯರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನೀವು ದೇಶಕ್ಕೆ ಸಂದೇಶ ಸಾರಲು ಬಯಸಿದರೆ, ನೀವು ಅಧಿಕಾದಲ್ಲಿದ್ದರೆ, ನೀವು ಹೃದಯ ಶ್ರೀಮಂತ ವ್ಯಕ್ತಿಯಾಗಿದ್ದರೆ ಅಥವಾ ನೀವು ಬಿಜೆಪಿ ನಾಯಕರೇ ಆಗಿದ್ದರೆ, ನಿಮಗೆ ನ್ಯಾಯ ದಕ್ಕಿಸಿಕೊಡಬಹುದಾದ ಶಕ್ತಿ ಇದೆ. ಒಂದು ವೇಳೆ ನೀವು ನ್ಯಾಯ ಒದಗಿಸಿ ಕೊಟ್ಟರೆ ದೇಶದ ಪ್ರಧಾನಿ ಯಾರಿಗೂ ಹೆದರುವುದಿಲ್ಲ ಎಂಬ ಸಂದೇಶ ನೀಡಿದಂತೆ ಆಗುತ್ತದೆ. ಸಚಿವರಿಗೆ ಯಾವುದೇ ರೀತಿಯ ಕಾನೂನು ಅನ್ವಯವಾಗುವುದಿಲ್ಲ ಮತ್ತು ತೊಂದರೆಯಾಗುವುದಿಲ್ಲ. ತನಿಖೆ ಮಾಡುವ ಅವಶ್ಯಕತೆ ಕೂಡ ಇರುವುದಿಲ್ಲ. ಆದರೆ ನ್ಯಾಯ ಒದಗಿಸದೇ ಇದ್ದಲ್ಲಿ ಇದು ಸಾರ್ವಜನಿಕರಿಗೆ ತಪ್ಪಾದ ಸಂದೇಶ ಸಾರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

  • ಚಾಲಕನ ಮೇಲೆ ದಾಳಿಯಾದಾಗ ನಿಯಂತ್ರಣ ತಪ್ಪಿ ಕಾರು ರೈತರ ಮೇಲೆ ಹರಿದಿದೆ: ಮಿಶ್ರಾ

    ಚಾಲಕನ ಮೇಲೆ ದಾಳಿಯಾದಾಗ ನಿಯಂತ್ರಣ ತಪ್ಪಿ ಕಾರು ರೈತರ ಮೇಲೆ ಹರಿದಿದೆ: ಮಿಶ್ರಾ

    – ಮಗನ ಪರ ಮತ್ತೆ ತಂದೆ ಬ್ಯಾಟಿಂಗ್

    ನವದೆಹಲಿ: ಚಾಲಕನ ಮೇಲೆ ದಾಳಿಯಾದಾಗ ನಿಯಂತ್ರಣ ತಪ್ಪಿದ ಕಾರು ಸ್ಥಳದಲ್ಲಿದ್ದ ರೈತರ ಮೇಲೆ ಹರಿದಿದೆ ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಸಮರ್ಥನೆ ಮಾಡಿಕೊಂಡಿದ್ದಾರೆ.

    ಲಖೀಂಪುರ ಖೇರಿ ಪ್ರಕರಣ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅವರು, ಮಗ ಆಶಿಶ್ ಮಿಶ್ರಾ ಪರ ಮತ್ತೆ ಹೇಳಿಕೆಯನ್ನು ನೀಡಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ನನ್ನ ಮಗ ಅಲ್ಲಿ ಇರಲಿಲ್ಲ ಎಂದು ಮತ್ತೆ ಪುನರುಚ್ಛರಿಸಿರುವ ಅಜಯ್ ಮಿಶ್ರಾ, ಕಾರು ಕಂಟ್ರೋಲ್ ತಪ್ಪಿದ್ದರಿಂದ ಈ ಅವಘಢ ಸಂಭವಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದಿದ್ದು ನಿಜವಾದ್ರೆ ರಾಜೀನಾಮೆ ನೀಡುತ್ತೇನೆ: ಅಜಯ್ ಮಿಶ್ರಾ

    ಪ್ರಕರಣ ಸಂಬಂಧ ಈ ಹಿಂದೆ ಮಾತನಾಡಿದ್ದ ಅಜಯ್ ಮಿಶ್ರಾ, ಘಟನೆ ನಡೆದ ವೇಳೆ ನನ್ನ ಮಗ ಕಾರಿನಲ್ಲಿ ಇರಲಿಲ್ಲ. ಒಂದು ವೇಳೆ ಆತ ಸ್ಥಳದಲ್ಲಿ ಇದ್ದಿದ್ದು ನಿಜವಾಗಿದ್ದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಇದೀಗ ಮತ್ತೆ ಹೇಳಿಕೆ ನೀಡುವ ಮೂಲಕ ಮಗನನ್ನು ಅಪ್ಪ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಲಖೀಂಪುರದಲ್ಲಿ ನಾಲ್ವರು ರೈತರನ್ನು ಕೊಂದ ಪ್ರಕರಣ – ಇನ್ನೂ ಅರೆಸ್ಟ್ ಆಗಿಲ್ಲ ಮಂತ್ರಿ ಮಗ

    ದುರ್ಘನೆ ನಡೆದ ಸಂದರ್ಭದಲ್ಲಿ ನನ್ನ ಮಗ ಕಾರಿನಲ್ಲಿ ಇರಲಿಲ್ಲ. ಪ್ರತಿಭಟನೆ ನಡೆಸುತ್ತಿದ್ದ ರೈತರು ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಚಾಲಕನಿಗೂ ಗಾಯಗಳಾಗಿತ್ತು. ಗಾಯಗೊಂಡಿದ್ದರಿಂದ ಚಾಲಕ ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಪರಿಣಾಮ ಸ್ಥಳದಲ್ಲಿದ್ದ ರೈತರ ಮೇಲೆ ಕಾರು ಹರಿದಿದೆ. ಅವಘಡದಲ್ಲಿ ಜೀವ ಕಳೆದುಕೊಂಡು ರೈತರ ಬಗ್ಗೆ ನನಗೂ ಮರುಕವಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲು ನಾನು ಒತ್ತಾಯಿಸುತ್ತೇನೆ ಎಂದು ಅಜಯ್ ಮಿಶ್ರಾ ಹೇಳಿದ್ದಾರೆ.

    ಒಟ್ಟಾರೆ ಪ್ರಕರಣ ಸಂಬಂಧ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ವಿರುದ್ಧ ಲಖೀಂಪುರ್ ಖೇರಿ ಠಾಣೆಯ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ ಇದುವರೆಗೆ ಆರೋಪಿಯ ಬಂಧನವಾಗಿಲ್ಲ. ಸದ್ಯ ಇದನ್ನು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ. ಇದನ್ನೂ ಓದಿ: ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR