Tag: asha workers

  • ಹಾವೇರಿಯಲ್ಲಿ ವೈದ್ಯ, ಮೂವರು ಆಶಾ ಕಾರ್ಯಕರ್ತೆಯರು ಸೇರಿ 12 ಜನರಿಗೆ ಕೊರೊನಾ

    ಹಾವೇರಿಯಲ್ಲಿ ವೈದ್ಯ, ಮೂವರು ಆಶಾ ಕಾರ್ಯಕರ್ತೆಯರು ಸೇರಿ 12 ಜನರಿಗೆ ಕೊರೊನಾ

    – 69ಕ್ಕೆ ಏರಿದ ಸೋಂಕಿತರ ಸಂಖ್ಯೆ

    ಹಾವೇರಿ: ಜಿಲ್ಲೆಯಲ್ಲಿ ಇಂದು ಒಬ್ಬ ವೈದ್ಯ, ಮೂವರು ಆಶಾ ಕಾರ್ಯಕರ್ತೆಯರು ಸೇರಿ 12 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಜನರನ್ನು ಆಂತಕ್ಕೀಡು ಮಾಡಿದೆ.

     

    ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಾಸೂರಿನಲ್ಲಿ ವೈದ್ಯ ಸೇರಿ ಐವರಿಗೆ ಸೋಂಕು ಧೃಡಪಟ್ಟಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ರೋಗಿ ನಂ.9546 ಪ್ರಾಥಮಿಕ ಸಂಪರ್ಕದಿಂದ ಈ ಐವರಿಗೆ ಸೋಂಕು ತಗುಲಿದೆ.

    ಹಾನಗಲ್ ಪಟ್ಟಣದ ಮೂವರು ಆಶಾ ಕಾರ್ಯಕರ್ತೆಯರಿಗೆ ಕೊರೊನಾ ಸೋಂಕು ತಗುಲಿದ್ದು, ಆಶಾ ಕಾರ್ಯಕರ್ತೆಯರಿಗೆ ನಿಗದಿತ ತಪಾಸಣೆ ನಡೆಸಿದ್ದರಿಂದ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ ಸವಣೂರು ಪಟ್ಟಣದ ಕಂಟೈನ್ಮೆಂಟ್ ಝೋನ್‍ನ 23 ವರ್ಷದ ಗರ್ಭೀಣಿ ಮಹಿಳೆ ರೋಗಿ ನಂ.8699 ಸಂಪರ್ಕದಿಂದ ಇಬ್ಬರಿಗೆ ಸೋಂಕು ತಗುಲಿದೆ. ರಾಣೆಬೆನ್ನೂರು ನಗರದ ರೋಗಿ ನಂ.9411ರ ಪ್ರಾಥಮಿಕ ಸಂಪರ್ಕದಿಂದ ಐದು ವರ್ಷದ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದೆ.

    ಒಟ್ಟು 12 ಸೋಂಕಿತರನ್ನು ಜಿಲ್ಲಾಸ್ಪತ್ರೆಯ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರು ವಾಸವಿದ್ದ ಪ್ರದೇಶವನ್ನು ಜಿಲ್ಲಾಡಳಿತ ಸೀಲ್‍ಡೌನ್ ಮಾಡಿದೆ. ಇಂದು 12 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 69ಕ್ಕೆ ಏರಿದೆ.

  • 3 ತಿಂಗಳಾದ್ರೂ ಬಾರದ 3 ಸಾವಿರ ಪ್ರೋತ್ಸಾಹ ಧನ- ಆಶಾ ಕಾರ್ಯಕರ್ತೆಯರು ಆಕ್ರೋಶ

    3 ತಿಂಗಳಾದ್ರೂ ಬಾರದ 3 ಸಾವಿರ ಪ್ರೋತ್ಸಾಹ ಧನ- ಆಶಾ ಕಾರ್ಯಕರ್ತೆಯರು ಆಕ್ರೋಶ

    – ಸರ್ವೆ ವೇಳೆ ನೀರು ಕೇಳಿದ್ರೂ ಜನ ಕೊಡಲ್ಲ

    ಕಲಬುರಗಿ/ಚಿತ್ರದುರ್ಗ: ಕೊರೊನಾ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಜೀವ ಪಣಕಿಟ್ಟು ಸರ್ಕಾರ ನಿರ್ವಹಿಸಿದ ಕೆಲಸ ಮಾಡಿದ್ದಾರೆ. ಹೀಗಿದ್ದರು ಸಹ ರಾಜ್ಯ ಸರ್ಕಾರ ಘೋಷಿಸಿದ್ದ ಮೂರು ಸಾವಿರ ರೂಪಾಯಿ ಪ್ರೋತ್ಸಾಹ ಹಣ ಮಾತ್ರ ನೀಡಿಲ್ಲ ಎಂದು ಆಶಾ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸುಮಾರು 44-45 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ಇದ್ದರೂ ಮನೆ ಮನೆಗೆ ಹೋಗಿ ಸರ್ವೇ ಮಾಡಿದ್ದೆವೆ. ಮನೆಯಲ್ಲಿದವರಿಗೇ ಕ್ವಾರಂಟೈನ್ ಹಾಗೂ ಪಾಸಿಟಿವ್ ಬಂದವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಸಹ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಕೆಲಸ ಮಾಡುವಾಗ ಒಂದು ಗ್ಲಾಸ್ ನೀರು ಕೇಳಿದರೂ ಜನ ನಮಗೇ ಕೊರೊನಾ ಬಂದವರಂತೆ ನೋಡಿ ನೀರು ಸಹ ನೀಡುತ್ತಿಲ್ಲ. ಹೊರಗಡೆ ಖರೀದಿಸಬೇಕು ಅಂದ್ರು ಎಲ್ಲಾ ಅಂಗಡಿಗಳು ಬಂದ್ ಮಾಡಿದ ಹಿನ್ನೆಲೆಯಲ್ಲಿ ಸುಡು ಬಿಸಿಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ರು ಸರ್ಕಾರ ಪ್ರೋತ್ಸಾಹ ಹಣ ನೀಡಿಲ್ಲ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

    ಇತ್ತ ಚಿತ್ರದುರ್ಗದಲ್ಲಿ ಕೂಡ ಆಶಾ ಕಾರ್ಯಕರ್ತೆಯರು ಸರ್ಕಾರದ ನಡೆ ಬಗ್ಗೆ ಕಿಡಿಕಾರಿದ್ದಾರೆ. ಮನೆ ಮನೆಗೆ ಹೋಗಿ ಜೀವಭಯದಿಂದ ಸರ್ವೆ ಮಾಡುತ್ತೇವೆ. ಸರ್ವೆ ಮಾಡಲು ಹೋದಾಗ ಜನರು ನಮ್ಮನ್ನೇ ಕೊರೊನಾ ರೋಗಿಯಂತೆ ನೋಡುತ್ತಾರೆ ಎಂದು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನ ನೀಡುವ ಮಾತನ್ನ ಹೇಳಿತ್ತು. ಆದರೆ ಅದನ್ನ ಇನ್ನೂ ಕೊಟ್ಟಿಲ್ಲ. ತಮ್ಮ ಜೀವದ ಹಂಗನ್ನ ಮರೆತು ಕೊರೊನಾ ಸಂದರ್ಭದಲ್ಲಿ ಕೂಡ ಆಶಾ ಕಾರ್ಯಕರ್ತೆಯರು ಫೀಲ್ಡ್ ನಲ್ಲಿ ಕೆಲಸ ಮಾಡಿದ್ದಾರೆ. ಆದರೆ ಸರ್ಕಾರ ಅವರಿಗೆ ನೀಡುವ 4 ಸಾವಿರ ಸಂಬಳ ಮಾತ್ರ ನೀಡಿದೆ. ಜನರು ಮನೆಯಲ್ಲಿ ಕುಳಿತಿದ್ದರೆ ನಾವು ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ ಎಂದು ಆಶಾ ಕಾರ್ಯಕರ್ತೆಯರು ಹೇಳುತ್ತಾರೆ.

  • ಕೊರೊನಾ ವಾರಿಯರ್ಸ್‍ಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚ್ಯವನ್ ಪ್ರಾಶ್ ವಿತರಣೆ

    ಕೊರೊನಾ ವಾರಿಯರ್ಸ್‍ಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚ್ಯವನ್ ಪ್ರಾಶ್ ವಿತರಣೆ

    – ಮೈಸೂರು, ಕೊಳ್ಳೆಗಾಲ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹ

    ಚಾಮರಾಜನಗರ: ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಬೆನ್ನಲ್ಲೆ ಆಯುಷ್ಯ ಇಲಾಖೆಯಿಂದ ಮತ್ತೊಂದು ಕೊಡುಗೆ ನೀಡಲಾಗುತ್ತಿದೆ. ಇತ್ತ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಚ್ಯವನ್ ಪ್ರಾಶ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

    ರಾಜ್ಯದ 40 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದರ ಪ್ರಯೋಜನ ಪಡೆಯಲಿದ್ದಾರೆ. ಆಯುಷ್ಯ ಇಲಾಖೆಯಿಂದ ಚ್ಯವನ್ ಪ್ರಾಶ್ ಖರೀದಿಸಿ ಈಗಾಗಲೇ ಎಲ್ಲಾ ಜಿಲ್ಲೆಗಳಿಗು ಸರಬರಾಜು ಮಾಡಲಾಗಿದ್ದು, ಶೀಘ್ರದಲ್ಲೇ ಆಶಾ ಕಾರ್ಯಕರ್ತೆಯರಿಗೆ ವಿತರಣೆ ಆಗಲಿದೆ. ಗಡಿ ಜಿಲ್ಲೆ ಚಾಮರಾಜನಗರಕ್ಕೂ ಚ್ಯವನ್ ಪ್ರಾಶ್ ಸರಬರಾಜು ಮಾಡಲಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ಸದ್ಯದಲ್ಲೇ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಆಯುಷ್ಯ ಅಧಿಕಾರಿ ಡಾ.ರಾಚಯ್ಯ ತಿಳಿಸಿದ್ದಾರೆ.

    ಇತ್ತ ಮೈಸೂರು ಜಿಲ್ಲೆ ಕೊರೊನಾ ಮುಕ್ತವಾದ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಮೈಸೂರು ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಚಾಮರಾಜನಗರ ಕೂಡ ಗ್ರೀನ್ ಝೋನ್‍ನಲ್ಲಿದೆ, ಇದೀಗ ಮೈಸೂರು ಕೂಡ ಕೊರೊನಾ ಮುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೊಳ್ಳೆಗಾಲದ ಬಹುತೇಕ ವ್ಯವಹಾರ, ವ್ಯಾಪಾರ, ವಹಿವಾಟು ಮೈಸೂರನ್ನು ಅವಲಂಬಿಸಿದೆ. ಇದರಿಂದ ಮೈಸೂರು ಹಾಗೂ ಕೊಳ್ಳೆಗಾಲ ನಡುವಿನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸಿದ್ದಾರೆ.

    ಸಂಚಾರದ ಕುರಿತು ಸಚಿವ ಸುರೇಶ್ ಕುಮಾರ್ ಜೊತೆ ಮಾತನಾಡಿದ್ದೇನೆ. ಅವರು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಜೊತೆ ಚರ್ಚೆ ನಡೆಸಿ ಸಂಚಾರ ವ್ಯವಸ್ಥೆ ಕಲ್ಪಿಸುವ ಕುರಿತು ಮಾತನಾಡ್ತೀನಿ ಎಂದು ಹೇಳಿದ್ದಾರೆ. ಕೊಳ್ಳೆಗಾಲ ಹಾಗೂ ಮೈಸೂರು ಸಂಚಾರ ಆರಂಭವಾಗಲೇ ಬೇಕು, ಯಾಕಂದ್ರೆ ಬಹುತೇಕ ಜನರು ಮೈಸೂರಿನಿಂದ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿಕೊಂಡು ಕೊಳ್ಳೆಗಾಲಕ್ಕೆ ಬಂದು ಮಾರಾಟ ಮಾಡ್ತಾರೆ. ಇದರಿಂದ ಕೂಡಲೇ ಇತ್ತ ಸಚಿವರು ಗಮನಹರಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಶಾಸಕರು ಆಗ್ರಹಿಸಿದ್ದಾರೆ.

  • ರೈತರು, ಆಶಾಕಾರ್ಯಕರ್ತೆಯರಿಗೆ 512.5 ಕೋಟಿಯ ವಿಶೇಷ ಪ್ಯಾಕೇಜ್ ಫೋಷಿಸಿದ ಸಿಎಂ

    ರೈತರು, ಆಶಾಕಾರ್ಯಕರ್ತೆಯರಿಗೆ 512.5 ಕೋಟಿಯ ವಿಶೇಷ ಪ್ಯಾಕೇಜ್ ಫೋಷಿಸಿದ ಸಿಎಂ

    – ನನ್ನಿಂದ ಅನ್ನದಾತರಿಗೆ ಅನ್ಯಾಯ ಆಗಲ್ಲ ಎಂದ ಬಿಎಸ್‍ವೈ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಸುದ್ದಿಗೋಷ್ಠಿ ನಡೆಸಿದ್ದು, ರೈತರಿಗೆ ಹಾಗೂ ಆಶಾಕಾರ್ಯಕರ್ತೆಯರಿಗೆ ವಿಶೇಷ ಪ್ಯಾಕೇಜ್ ಫೋಷಿಸಿದ್ದಾರೆ.

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವಥನಾರಾಯಣ್, ಲಕ್ಷ್ಮಣ್ ಸವದಿ ಸೇರಿದಂತೆ ಹಲವು ಸಚಿವರ ದಂಡಿನೊಂದಿಗೆ ಸಿಎಂ ಸುದ್ದಿಗೋಷ್ಠಿ ನಡೆಸಿದರು. ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ತಪ್ಪು ಅಭಿಪ್ರಾಯಗಳು ಕೇಳಿ ಬರುತ್ತಿವೆ. ನಾನು ರೈತಪರ ಬಜೆಟ್ ಮಂಡಿಸಿದವನು. ಹಸಿರು ಶಾಲು ಹಾಕಿ ಪ್ರಮಾಣವಚನ ಸ್ವೀಕರಿಸಿದವನು. ನನ್ನಿಂದ ರೈತರಿಗೆ ಅನ್ಯಾಯ ಆಗಲ್ಲ. ರೈತರ ಉತ್ಪನ್ನಗಳು ದುಪ್ಪಟ್ಟು ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗಳನ್ನು ಮಾಡಿದ್ದಾರೆ. ಶಿಕಾರಿಪುರದಲ್ಲಿ 45 ವರ್ಷಗಳ ಹಿಂದೆ ಎಪಿಎಂಸಿ ಮುಂದೆ ರೈತರು ಬೆಳೆದ ಬೆಳೆಗೆ ನಾನು ಹೋರಾಟ ಮಾಡಿದ್ದೆ. ರೈತ ತನ್ನ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಅವಕಾಶ ಕಲ್ಪಿಸಿದ್ದೇವೆ. ಈ ಕಾಯ್ದೆಯಿಂದ ಎಪಿಎಂಸಿ ಸಮಿತಿಗಳಿಗೆ ಯಾವುದೇ ದಕ್ಕೆ ಆಗಲ್ಲ ಎಂದು ಸಿಎಂ ಭರವಸೆ ನೀಡಿದರು. ಇದನ್ನೂ ಓದಿ: ಹಣ್ಣು, ತರಕಾರಿ ಬೆಳೆಗಾರರಿಗೆ 15 ಸಾವಿರ ರೂ.- ಬಿಎಸ್‍ವೈಯಿಂದ ಮತ್ತೆ 162 ಕೋಟಿ ಪ್ಯಾಕೇಜ್ ಪ್ರಕಟ

    ರೈತರಿಗೆ ಪ್ಯಾಕೇಜ್:
    ಖಾಸಗಿ ಮಾರುಕಟ್ಟೆ 2007ರಲ್ಲೇ ಪ್ರಾರಂಭವಾಗಿದೆ. ಈಗಾಗಲೇ ಆನ್‍ಲೈನ್ ಮಾರುಕಟ್ಟೆ ಕೂಡ ಬಂದಿದೆ. ಎಲ್ಲಾ ಪ್ರತಿಪಕ್ಷಗಳ ಜತೆ ಮಾತನಾಡಿ ತಪ್ಪು ಗ್ರಹಿಕೆ ಮಾಡಬಾರದು ಎಂದು ಹೇಳಿದ್ದೇನೆ. ಹೀಗಾಗಿ ಮೂರನೇ ಪ್ಯಾಕೇಜ್ ಘೋಷಣೆ ಮಾಡಲಾಗುತ್ತಿದ್ದು, ಮೆಕ್ಕೆಜೋಳ ಬೆಳೆದ ರೈತನಿಗೆ ಬೆಂಬಲ ಬೆಲೆ ನೀಡಲಾಗುತ್ತದೆ. ರಾಜ್ಯದಲ್ಲಿ 10 ಲಕ್ಷ ಮೆಕ್ಕೆಜೋಳ ಬೆಳೆದ ರೈತರು ಇದ್ದಾರೆ. ಒಬ್ಬ ರೈತನಿಗೆ 5 ಸಾವಿರ ಎನ್ನುವಂತೆ ಒಟ್ಟು 500 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ ಹಾಗೆಯೇ ಅಪಘಾತ, ನೈಸರ್ಗಿಕ ವಿಕೋಪಕ್ಕೆ ತುತ್ತಾದ ಮೃತ ಪಟ್ಟ ಕುರಿ ಮೇಕೆಗಳಿಗೆ 5 ಸಾವಿರ ರೂಪಾಯಿ ನೀಡಲಾಗುತ್ತದೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಬೀದಿಬದಿ ವ್ಯಾಪಾರಿಗಳಿಗೆ ಸಾಲ – 5 ಸಾವಿರ ಕೋಟಿ ರೂ. ಪ್ಯಾಕೇಜ್ ಪ್ರಕಟ

    ಆಶಾ ಕಾರ್ಯಕರ್ತೆಯರಿಗೆ ಪ್ಯಾಕೇಜ್:
    40,250 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಎನ್ನುವಂತೆ 12.5 ಕೋಟಿಯ ಪ್ಯಾಕೇಜ್ ಘೋಷಿಸಲಾಗಿದೆ. ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂಪಾಯಿ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.

    ಕೊರೊನಾ ಲಾಕ್‍ಡೌನ್ ಬಳಿಕ ರಾಜ್ಯ ಸರ್ಕಾರದ ಈವರಗೆ ಮೂರು ಪ್ಯಾಕೇಜ್‍ಗಳನ್ನು ಘೋಷಿಸಿದೆ. ಒಟ್ಟು 2,274.5 ಕೋಟಿಯ ಪ್ಯಾಕೇಜ್ ಅನ್ನು ಘೋಷಿಸಿದೆ. ಮೊದಲ ಹಂತದ ಪ್ಯಾಕೇಜ್‍ನಲ್ಲಿ 1,610 ಕೋಟಿ ರೂಪಾಯಿ, ಎರಡನೇ ಹಂತದ ಪ್ಯಾಕೇಜ್‍ನಲ್ಲಿ 162 ಕೋಟಿ ರೂಪಾಯಿ, ಮೂರನೇ ಹಂತದಲ್ಲಿ 512.5 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ.

  • ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯಿಂದ ಆಶಾ ಕಾರ್ಯಕರ್ತೆ, ಪತಿ ಮೇಲೆ ಹಲ್ಲೆ

    ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯಿಂದ ಆಶಾ ಕಾರ್ಯಕರ್ತೆ, ಪತಿ ಮೇಲೆ ಹಲ್ಲೆ

    ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಆಶಾ ಕಾರ್ಯಕರ್ತೆ ಹಾಗೂ ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪೂಲಕುಂಟ್ಲಹಳ್ಳಿಯಲ್ಲಿ ನಡೆದಿದೆ.

    ಗಂಗಹಳ್ಳಿ ಗ್ರಾಮದ ಆಶಾಕಾರ್ಯಕರ್ತೆ ರವಣಮ್ಮ ಹಾಗೂ ಪತಿ ನರಸಿಂಹಮೂರ್ತಿ ಹಲ್ಲೆಗೊಳಗಾದವರು. ಸರ್ವೆ ಕಾರ್ಯ ಮುಗಿಸಿದ್ದ ಆಶಾಕಾರ್ಯಕರ್ತೆ ತನ್ನ ಸ್ನೇಹಿತೆ ಪೂಲಕುಂಟ್ಲಹಳ್ಳಿ ಗ್ರಾಮದ ಗಿರಿಜಮ್ಮ ಮನೆಗೆ ಬಂದಿದ್ರು. ಇತ್ತ ಪತ್ನಿ ರವಣಮ್ಮರನ್ನು ಕರೆದೊಯ್ಯಲು ಪತಿ ನರಸಿಂಹಮೂರ್ತಿ ಪೂಲಕುಂಟ್ಲಹಳ್ಳಿಗೆ ಬಂದಿದ್ದಾರೆ.

    ಈ ಸಂದರ್ಭದಲ್ಲಿ ಮದ್ಯ ಸೇವಿಸಿ ಅಮಲಿನಲ್ಲಿದ್ದ ಇದೇ ಗ್ರಾಮದ ಕೇಶವ ಎಂಬಾತ ಕ್ಷುಲ್ಲಕ ಕಾರಣಕ್ಕೆ ನರಸಿಂಹಮೂರ್ತಿ ಜೊತೆ ಗಲಾಟೆ ಮಾಡಿದ್ದಾನೆ. ಅಲ್ಲದೆ ಕಲ್ಲಿನಿಂದ ತಲೆಗೆ ಹೊಡೆದಿದ್ದು ರಕ್ತಸ್ರಾವವಾಗಿದೆ. ವಿಷಯ ತಿಳಿದು ಗಂಡನ ರಕ್ಷಣೆಗೆ ಬಂದ ಆಶಾಕಾರ್ಯಕರ್ತೆ ರವಣಮ್ಮನನ್ನು ಕೂಡ ತಳ್ಳಾಡಿ ನೂಕಾಡಿ ಹಲ್ಲೆ ನಡೆಸಿದ್ದಾರೆ ಅಂತ ದೂರು ನೀಡಲಾಗಿದೆ.

    ಈ ಸಂಬಂಧ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರ ಆರೋಪಿ ತಲೆಮರೆಸಿಕೊಂಡಿದ್ದಾನೆ. ಸದ್ಯ ಹಲ್ಲೆಗೊಳಗಾದವರು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

  • ಪ್ರತಿ ಮನೆಗೆ ತೆರಳಿ ಕೊರೊನಾ ಪರೀಕ್ಷೆ ನಡೆಸಿ: ಬಿ.ಸಿ.ಪಾಟೀಲ್

    ಪ್ರತಿ ಮನೆಗೆ ತೆರಳಿ ಕೊರೊನಾ ಪರೀಕ್ಷೆ ನಡೆಸಿ: ಬಿ.ಸಿ.ಪಾಟೀಲ್

    – ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ಯಾನರ್ ನೀಡಿ
    – 263 ಜನರ ಸ್ಯಾಂಪಲ್ ಪರೀಕ್ಷೆ, ಎಲ್ಲವೂ ನೆಗೆಟಿವ್
    – ಜಿಲ್ಲೆಯಲ್ಲಿ ಈ ವರೆಗೆ ಯಾವುದೇ ಕೊರೊನಾ ಪ್ರಕರಣವಿಲ್ಲ

    ಕೊಪ್ಪಳ: ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ಥರ್ಮಲ್ ಸ್ಕ್ಯಾನರ್ ಬಳಸಿ ಪ್ರತಿಯೊಬ್ಬರ ಆರೋಗ್ಯ ಪರೀಕ್ಷಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ವರೆಗೆ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿಲ್ಲ. ಆದರೂ ಸೋಂಕು ಪತ್ತೆ ಹಚ್ಚಲು ಎಲ್ಲರನ್ನೂ ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕೆಂದು ಸರ್ಕಾರ ಸೂಚಿಸಿದ್ದು, ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ಕುಟುಂಬ ಸದಸ್ಯರ ಆರೋಗ್ಯ ತಪಾಸಣೆ ಮಾಡಬೇಕು. ಅವರಿಗೆ ಅವಶ್ಯವಾಗಿ ಬೇಕಾದ ಥರ್ಮಲ್ ಸ್ಕ್ಯಾನರ್ ಗಳನ್ನು ಪ್ರತಿ ಪಂಚಾಯಿತಿಗೆ ಎರಡರಂತೆ ಒದಗಿಸಬೇಕು ಎಂದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಜಿಲ್ಲಾಸ್ಪತ್ರೆಯನ್ನು ಕೋವಿಡ್ 19 ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಹೀಗಾಗಿ ಸಾಮಾನ್ಯ ಖಾಯಿಲೆಗಳಿಗೆ ಚಿಕಿತ್ಸೆ ನೀಡಲು ಪರ್ಯಾಯವಾಗಿ ವ್ಯವಸ್ಥೆ ಮಾಡಲಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಿ. ಔಷಧ ಮತ್ತು ಇತರ ವೈದ್ಯಕೀಯ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಒದಗಿಸಿ. ಜಿಲ್ಲೆಯಲ್ಲಿನ ಸರ್ಕಾರಿ ವೈದ್ಯರನ್ನು ಕೋವಿಡ್ ಚಿಕಿತ್ಸೆಗೆಂದು ನಿಯೋಜಿಸಿರುವದರಿಂದ ಪರ್ಯಾಯ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಾಗಬಹುದು. ಆಸ್ಪತ್ರೆಗಳಲ್ಲಿ ಅಗತ್ಯ ಸಂಖ್ಯೆಯ ವೈದ್ಯರನ್ನು ಪಾಳಿ ಪ್ರಕಾರ ನಿಯೋಜಿಸಿ ರೋಗಿಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಿ. ಕೋವಿಡ್ ಸೋಂಕಿತರು ಪತ್ತೆಯಾದಲ್ಲಿ ಅವರ ಚಿಕಿತ್ಸೆಗೆ ಬೇಕಾದ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಅಗತ್ಯವಿದ್ದಲ್ಲಿ ವೈದ್ಯರನ್ನು ನೇಮಕ ಮಾಡಿಕೊಳ್ಳಿ. ಕೊರೊನಾ ಚಿಕಿತ್ಸೆಗೆ ತಜ್ಞರಿಂದ ವೈದ್ಯರಿಗೆ ಸೂಕ್ತ ತರಬೇತಿ ಕೊಡಿಸಿ. ವೆಂಟಿಲೇಟರ್‍ಗಳ ನಿರ್ವಹಣೆ ಕುರಿತು ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಿ ಚಿಕಿತ್ಸೆಗೆ ಸಿದ್ಧಗೊಳಿಸಿ. ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಚಿಕಿತ್ಸೆ ಹಾಗೂ ವೈದ್ಯರ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿ ಎಂದರು.

    ಜಿಲ್ಲೆಯ ತೋಟಗಾರಿಕೆ ಬೆಳೆಗಳನ್ನು ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ರಫ್ತು ಮಾಡಲು ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಿ. ಜಿಲ್ಲೆಯ ಗಡಿ ಭಾಗಗಳಲ್ಲಿ ಸ್ಯಾನಿಟೈಸರ್ ಟನಲ್‍ಗಳನ್ನು ಸ್ಥಾಪಿಸಿ ಬೇರೆ ಜಿಲ್ಲೆ, ರಾಜ್ಯಗಳಿಂದ ಬರುವ ಸರಕು ಸಾಗಣೆ ವಾಹನಗಳ ಚಾಲಕರು ಮತ್ತಿತರರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಿ. ಎಲ್ಲ ಚೆಕ್‍ಪೋಸ್ಟ್‍ಗಳಲ್ಲೂ ನಿಯಮ ಮೀರಿ ಯಾವ ವಾಹನಗಳನ್ನೂ ಬಿಡಬೇಡಿ. ವೈದ್ಯಕೀಯ ಚಿಕಿತ್ಸೆ ಸೇರಿದಂತೆ ತುರ್ತು ವಿಷಯಗಳಿಗಾಗಿ ಜಿಲ್ಲೆಯ ಗಡಿ ದಾಟಿ ಹೋಗಬೇಕಾದಾಗ ಅವರ ವಸ್ತು ಸ್ಥಿತಿಯನ್ನು ಪರಿಶೀಲಿಸಿ ಪಾಸ್ ನೀಡಿ ಎಂದು ತಿಳಿಸಿದರು.

    ಜಿಲ್ಲೆಯ ಶಾಸಕರು ಶಿಫಾರಸ್ಸು ಮಾಡಿರುವ ಪ್ರಕರಣಗಳಲ್ಲಿ ಅವಶ್ಯಕತೆಯನ್ನು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ (ಅತ್ಯಂತ ತುರ್ತು ಇರುವ ಪ್ರಕರಣಗಳಲ್ಲಿ) ಪಾಸ್‍ಗಳನ್ನು ಒದಗಿಸಿ. ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಮನೆ ಮನೆಗೆ ತೆರಳಿ ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ. ಅದರೊಂದಿಗೆ ದಿನಸಿ ಅಂಗಡಿಗಳನ್ನು ತೆರೆದಿಡುವ ಸಮಯವನ್ನು ವಿಸ್ತರಿಸಿ. ಅಗತ್ಯವಿದ್ದವರು ದಿನಸಿ ಅಂಗಡಿಗಳಿಂದಲೇ ಖರೀದಿಸಲಿ. ಈಗಾಗಲೇ ಪಡಿತರ ಚೀಟಿ ಹೊಂದಿರುವವರಿಗೆ ಹಾಗೂ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಸರ್ಕಾರದಿಂದ ಪಡಿತರ ನೀಡಲಾಗುತ್ತಿದೆ. ಪಡಿತರ ಚೀಟಿ ಇಲ್ಲದವರು ಹಾಗೂ ಅರ್ಜಿ ಸಲ್ಲಿಸದವರಿಗೆ ದಾನಿಗಳಿಂದ ಪಡೆದ ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಬೇರೆ ರಾಜ್ಯದ ವಲಸೆ ಕಾರ್ಮಿಕರಿಗೆ ಜಿಲ್ಲೆಯಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿ ವೈದ್ಯಕೀಯ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ನಿಡಲಾಗುತ್ತಿದೆ. ಏಪ್ರಿಲ್ 20ರ ನಂತರ ಲಾಕ್‍ಡೌನ್ ಕುರಿತು ಹೊಸ ನಿಯಮಾವಳಿಗಳು ಬರುವ ಸಾಧ್ಯತೆ ಇದ್ದು, ಅವುಗಳ ಆಧಾರದಲ್ಲಿ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಿಕೊಡುವ ಬಗ್ಗೆ, ಜಿಲ್ಲೆಯಲ್ಲಿ ಲಾಕ್‍ಡೌನ್ ನಿಯಮಗಳಲ್ಲಿ ಯಾವ ವಿಷಯಗಳಲ್ಲಿ ವಿನಾಯಿತಿ ನೀಡವ ಸಾಧ್ಯತೆ ಕುರಿತು ಪರಿಶೀಲಿಸಿ ನಿರ್ಧರಿಸೋಣ ಎಂದರು.

    ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮಾತನಾಡಿ, ಕೋವಿಡ್-19 ಸೋಂಕಿನ ಕುರಿತಂತೆ ಈ ವರೆಗೆ 263 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ 4 ಜನರು ವಿದೇಶ ಪ್ರಯಾಣದ ಹಿನ್ನೆಲೆಯುಳ್ಳವರು, 25 ಜನ ತಬ್ಲೀಘಿ ಜಮಾತ್‍ಗೆ ಸಂಬಂಧಿಸಿದವರು, ರಾಜಸ್ಥಾನಕ್ಕೆ ತೆರಳಿದ್ದ ಕಾರಟಗಿಯ 8 ಜನರ ಸ್ಯಾಂಪಲ್‍ಗಳು ಸೇರಿದಂತೆ 263 ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ಎಲ್ಲ ಸ್ಯಾಂಪಲ್‍ಗಳೂ ನೆಗೆಟಿವ್ ಎಂದು ವರದಿ ಬಂದಿವೆ. ಇನ್ನೂ ನಾಲ್ಕು ಸ್ಯಾಂಪಲ್‍ಗಳ ವರದಿ ಬರುವುದು ಬಾಕಿ ಇದೆ ಎಂದು ಮಾಹಿತಿ ನೀಡಿದರು.

    ಜಿಲ್ಲೆಯಲ್ಲಿ ಪ್ರತಿ ಒಂದು ಲಕ್ಷ ಜನರಿಗೆ 19 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿಲಾಗಿದೆ. ಸ್ಯಾಂಪಲ್‍ಗಳ ಪರೀಕ್ಷೆ ಪ್ರಮಾಣದಲ್ಲಿ ಜಿಲ್ಲೆಯು ರಾಜ್ಯದಲ್ಲಿ 13 ನೇ ಸ್ಥಾನದಲ್ಲಿದೆ. ಸರ್ಕಾರ ನೀಡಿದ ಸೂಚನೆಯಂತೆ ಏಪ್ರಿಲ್ 19 ರವರೆಗೆ ದಿನನಿತ್ಯ 100 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ನಂತರ ನಿತ್ಯ 50 ರಂತೆ ಸ್ಯಾಂಪಲ್‍ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ವಿವರಿಸಿದರು.

  • ಅಂಗನವಾಡಿ, ಆಶಾ ಕಾರ್ಯಕರ್ತರು, ನರ್ಸ್‍ಗಳು ನಿಜವಾದ ದೇಶ ಭಕ್ತರು: ರಾಹುಲ್ ಗಾಂಧಿ

    ಅಂಗನವಾಡಿ, ಆಶಾ ಕಾರ್ಯಕರ್ತರು, ನರ್ಸ್‍ಗಳು ನಿಜವಾದ ದೇಶ ಭಕ್ತರು: ರಾಹುಲ್ ಗಾಂಧಿ

    ನವದೆಹಲಿ: ದೇಶವನ್ನು ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ನರ್ಸ್‍ಗಳು ನಿಜವಾದ ದೇಶ ಭಕ್ತರು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ದೇಶ ಸಂಕಷ್ಟದಲ್ಲಿ ಇರುವಾಗ ನಿಸ್ವಾರ್ಥದಿಂದ ದುಡಿಯುವುದೇ ನಿಜವಾದ ದೇಶಭಕ್ತಿ. ಈ ಕಷ್ಟಕರ ಸಮಯದಲ್ಲೂ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರು, ನರ್ಸ್‍ಗಳು, ಅಂಗನವಾಡಿ ಕಾರ್ಯಕರ್ತರು ನಿಜವಾದ ದೇಶಭಕ್ತರು. ಇವರು ಮುಖ್ಯವಾಹಿನಿಯಿಂದ ದೂರವುಳಿದು ಸಾರ್ವಜನಿಕ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    ಕೊರೊನಾ ವೈರಸ್ ಮೇಲಿರುವ ಭಯ ಹಾಗೂ ತಪ್ಪು, ಸುಳ್ಳಿ ಮಾಹಿತಿಗಳು ವೈರಸ್‍ಗಿಂತ ಅಪಾಯಕಾರಿಯಾಗಿದೆ. ಈ ಪರಿಸ್ಥಿತಿಯಲ್ಲಿ ಸಮುದಾಯ ಕಾರ್ಯಕರ್ತರು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ದೇಶಕ್ಕಾಗಿ ಜನರ ಹಿತಕ್ಕಾಗಿ ದುಡಿಯುತ್ತಿದ್ದಾರೆ ಎಂದರು.

    ದೇಶವಾಸಿಗಳಾಗಿ ನಾವು ಅವರಿಗೆ ಆಭಾರಿಯಾಗಿದ್ದೇವೆ. ಈ ಕೊರೊನಾ ವೈರಸ್ ಬಿಕ್ಕಟ್ಟಿಗೆ ಮುಕ್ತಿ ಸಿಕ್ಕ ಬಳಿಕ ಆಶಾ ಕಾರ್ಯಕರ್ತರು, ನರ್ಸ್‍ಗಳು, ಅಂಗನವಾಡಿ ಕಾರ್ಯಕರ್ತರ ಅಪೂರ್ವ ಕೊಡುಗೆಯನ್ನು ಗುರುತಿಸಿ, ಅವರು ಕೆಲಸದ ಪರಿಸ್ಥಿತಿಗಳು ಸುಧಾರಣೆಯಾಗಲಿದೆ ಎಂಬ ವಿಶ್ವಾಸವನ್ನು ರಾಹುಲ್ ಗಾಂಧಿ ವ್ಯಕ್ತಪಡಿಸಿದರು.

  • ಮೇಲಾಧಿಕಾರಿಗಳ ಕಿರುಕುಳ- ಆಶಾ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನ

    ಮೇಲಾಧಿಕಾರಿಗಳ ಕಿರುಕುಳ- ಆಶಾ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನ

    ಮಂಡ್ಯ: ಮೇಲಾಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯನ ಕಿರುಕುಳದಿಂದ ಬೇಸತ್ತು ಆಶಾ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯ ತಾಲೂಕಿನ ಕಾಗೇಹಳ್ಳ ದೊಡ್ಡಿ ಗ್ರಾಮದಲ್ಲಿ ಜರುಗಿದೆ.

    ಕಾಗೇಹಳ್ಳ ದೊಡ್ಡಿ ಗ್ರಾಮದ ಅಂಗನವಾಡಿಯ ಆಶಾ ಕಾರ್ಯಕರ್ತೆ ಭಾಗ್ಯಮ್ಮ (45) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮತದಾರರ ಪಟ್ಟಿಗೆ ಹೆಸರು ಸೇರಿಸುವ ಮತ್ತು ಪರಿಷ್ಕರಿಸುವ ಕೆಲಸಕ್ಕೆ ಭಾಗ್ಯಮ್ಮ ಅವರನ್ನು ನಿಯೋಜನೆ ಮಾಡಲಾಗಿತ್ತು. ಈ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸುವಂತೆ ಒತ್ತಡ ಹೇರಿದ್ದರು. ಇದಕ್ಕೆ ಭಾಗ್ಯ ಅವರು ನಿರಾಕರಿಸಿದರು ಎನ್ನಲಾಗಿದೆ.

    ಬಳಿಕ ರಾಜಕೀಯ ಪ್ರಭಾವ ಬಳಸಿ ಭಾಗ್ಯಮ್ಮ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ವಿಚಾರದಲ್ಲಿ ಮೇಲಾಧಿಕಾರಿಗಳು ಶಾಮೀಲಾಗಿ ಕಿರುಕುಳ ನೀಡುತ್ತಿದ್ದರು ಎಂದು ಭಾಗ್ಯಮ್ಮ ಹೇಳಿಕೊಂಡಿದ್ದರು ಎನ್ನಲಾಗಿದೆ.

    ಕಿರುಕುಳದಿಂದ ಬೇಸತ್ತು ಭಾಗ್ಯಮ್ಮ ಮಂಗಳವಾರ ಅಂಗನಾಡಿಯಲ್ಲೇ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ಅಂಗನವಾಡಿಯ ಸಹಾಯಕಿ ಹಾಗೂ ಗ್ರಾಮಸ್ಥರು ಭಾಗ್ಯಮ್ಮರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಭಾಗ್ಯಮ್ಮ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪುಟ್ಟ ಕಂದಮ್ಮಗಳೊಂದಿಗೆ ಆಶಾ ಕಾರ್ಯಕರ್ತೆಯರ ಬದುಕು ಬೀದಿಯಲ್ಲಿ!

    ಪುಟ್ಟ ಕಂದಮ್ಮಗಳೊಂದಿಗೆ ಆಶಾ ಕಾರ್ಯಕರ್ತೆಯರ ಬದುಕು ಬೀದಿಯಲ್ಲಿ!

    ಬೆಂಗಳೂರು: ಆರೋಗ್ಯ ಇಲಾಖೆಯ ಆಧಾರಸ್ತಂಭ ಆಶಾ ಕಾರ್ಯಕರ್ತೆಯರು ಇಂದು ಪುಟಾಣಿ ಕಂದಮ್ಮಗಳನ್ನು ಮಡಿಲಲ್ಲಿ ಹಾಕಿಕೊಂಡು ಬೀದಿಯಲ್ಲಿ ಪರದಾಡುವಂತಾಯ್ತು. ವೇತನ ಪರಿಷ್ಕರಣೆ ಸೇರಿದಂತೆ ನಾನಾ ಬೇಡಿಕೆ ಮುಂದಿಟ್ಟು ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕಿಚ್ಚು ಹೆಚ್ಚಾಗಿದೆ.

    ದೂರದೂರಿನಿಂದ ಬಂದಿರುವ ಆಶಾ ಕಾರ್ಯಕರ್ತೆಯರು ಪುಟಾಣಿ ಕಂದಮ್ಮಗಳನ್ನು ಕರೆದುಕೊಂಡು ಬಂದು ಪ್ರತಿಭಟನೆ ಮಾಡಿದರು. ಮಡಿಲಲ್ಲಿ ಕಂದಮ್ಮಗಳನ್ನು ಇಟ್ಟಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕನಿಷ್ಟ ವೇತನ, ದುಡಿದ ದುಡ್ಡನ್ನು ಕೊಡೋದಕ್ಕೆ ಆಗದಷ್ಟು ರಾಜ್ಯ ಹಾಗೂ ಕೇಂದ್ರ ಸರ್ಕಾರ ಬರಗೆಟ್ಟಿದೆಯೇ? ಮೋದಿ ಬೆಂಗಳೂರಿನಲ್ಲಿ ಇದ್ದಾರೆ. ನಮ್ಮ ಬೇಡಿಕೆ ಅವರಿಗೆ ತಲುಪಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಕೆ.ಆರ್ ಸರ್ಕಲ್ ಮಾರ್ಗವಾಗಿ ತೆರಳುವವರಿಗೆ ಟ್ರಾಫಿಕ್ ಬಿಸಿ ಇಂದು ಕೊಂಚ ಜೋರಾಗಿಯೇ ತಟ್ಟಿದೆ. ಇಂದು ಎಲ್ಲೆಲ್ಲೂ ಗುಲಾಬಿ ರಂಗಿನ ಸೀರೆ ಧರಿಸಿ ಬಂದ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ಮಾಸಿಕ ವೇತನ 12 ಸಾವಿರ ರೂಪಾಯಿಗೆ ಆಗ್ರಹಿಸಿ ಹಾಗೂ ಹದಿನೈದು ತಿಂಗಳಿಂದ ಪ್ರೋತ್ಸಾಹ ಧನ ಬಾಕಿ ಬಿಡುಗಡೆಗೆ ಆಗ್ರಹಿಸಿ ರಾಜ್ಯಾದ್ಯಂತ ಇಂದು ಆಶಾ ಕಾರ್ಯಕರ್ತೆಯರು ಬೀದಿಗಿಳಿದಿದ್ದರು.

    ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೆ ಕಾಲ್ನಡಿಗೆಯಲ್ಲಿಯೇ ಸುಮಾರು ಹತ್ತು ಸಾವಿರ ಮಂದಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಇದರಿಂದ ಬೆಂಗಳೂರು ಟ್ರಾಫಿಕ್ ಜಾಮ್‍ಗೆ ಸಿಲುಕಿ ಹೈರಾಣಾಯ್ತು.

    ನೃಪತುಂಗ ರೋಡ್, ಆನಂದ್ ರಾವ್ ಸರ್ಕಲ್, ಶೇಷಾದ್ರಿಪುರಂ ರಸ್ತೆ, ಅರಮನೆ ಮೈದಾನದ ಮುಂಭಾಗದ ರಸ್ತೆ, ಕೆ.ಆರ್ ಸರ್ಕಲ್‍ನಲ್ಲಿ ವಾಹನ ಸವಾರರು ಭರ್ತಿ ಎರಡು ಮೂರು ಗಂಟೆಗಳ ಕಾಲ ಟ್ರಾಫಿಕ್‍ನಲ್ಲಿ ಸಿಲುಕಿಕೊಂಡರು. ಈ ಮಧ್ಯೆ ಅಂಬುಲೆನ್ಸ್ ಕೂಡ ಪರದಾಟ ಪಡುವಂತಾಯ್ತು.

    ಆಶಾ ಕಾರ್ಯಕರ್ತೆಯರು ಆಹೋರಾತ್ರಿ ಧರಣಿಗೆ ನಿರ್ಧರಿಸಿದ್ದು, ಇಡೀ ಬೆಂಗಳೂರು ಟ್ರಾಫಿಕ್ ಬಿಸಿ ಅನುಭವಿಸಿದರೂ ಸರ್ಕಾರ ಮಾತ್ರ ತಲೆಕೆಡಿಸಿಕೊಳ್ಳದೇ ಕನಿಷ್ಠ ಅಹವಾಲನ್ನು ಸ್ವೀಕರಿಸಲು ಕೂಡ ಪ್ರತಿಭಟನಾ ಸ್ಥಳಕ್ಕೆ ಬರಲಿಲ್ಲ. ರಾತ್ರಿ ಹಾಗೂ ನಾಳೆ ಬೆಳಗ್ಗೆ ಫ್ರೀಡಂ ಪಾರ್ಕ್ ಮುಂಭಾಗದ ರಸ್ತೆಯಲ್ಲಿ ಆಶಾ ಕಾರ್ಯಕರ್ತೆಯರು ವಾಸ್ತವ್ಯ ಮಾಡೋದರಿಂದ ಇನ್ನಷ್ಟು ಟ್ರಾಫಿಕ್ ಬಿಸಿ ವಾಹನ ಸವಾರರಿಗೆ ತಟ್ಟಲಿದೆ.

  • ಆರ್ಥಿಕ ಕಾರಣಗಳಿಂದ ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಿಸಲು ಸಾಧ್ಯವಿಲ್ಲ: ಸಚಿವ ಶ್ರೀರಾಮಲು

    ಆರ್ಥಿಕ ಕಾರಣಗಳಿಂದ ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಿಸಲು ಸಾಧ್ಯವಿಲ್ಲ: ಸಚಿವ ಶ್ರೀರಾಮಲು

    ನವದೆಹಲಿ: ಆರ್ಥಿಕ ಕಾರಣಗಳಿಂದ ಕೂಡಲೇ ಆಶಾ ಕಾರ್ಯಕರ್ತರ ಸಂಬಳ ಹೆಚ್ಚು ಮಾಡಲು ಸಾಧ್ಯವಿಲ್ಲ. ಸಿಎಂ ಯಡಿಯೂರಪ್ಪ ಅವರ ಜೊತೆಗೆ ಮಾತನಾಡಿ ಸಂಬಳ ಹೆಚ್ಚಿಸುವ ಬಗ್ಗೆ ಚರ್ಚಿಸುತ್ತೇನೆ ಎಂದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ

    ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತಯರು ಪ್ರತಿಭಟನೆ ಹಿನ್ನೆಲೆ ನವದೆಹಲಿಯಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತಯರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈ ಮೊದಲು 5500 ರೂ. ಸಂಬಳ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಬಂದ್ಮೇಲೆ ಅದನ್ನು 6,000 ರೂ. ಮಾಡಿದ್ದೇವೆ. ಸಿಎಂ ಜೊತೆಗೆ ಚರ್ಚಿಸಿ ಸಂಬಳವನ್ನು 7,000 ರೂ. ಮಾಡುವ ಪ್ರಯತ್ನ ಮಾಡುತ್ತೇನೆ. ಪಕ್ಕದ ಆಂಧ್ರ ಪ್ರದೇಶದಲ್ಲಿ 10,000 ರೂ. ನೀಡಲಾಗುತ್ತಿದೆ. ಸದ್ಯ ಆಶಾ ಕಾರ್ಯಕರ್ತೆಯರು 12,000 ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಇಷ್ಟು ಪ್ರಮಾಣದಲ್ಲಿ ಸಂಬಳ ನೀಡಲು ಸಾಧ್ಯವಿಲ್ಲ ಹಣಕಾಸು ಇಲಾಖೆಯ ಜೊತೆಗೂ ಸಭೆ ಮಾಡಬೇಕು ಎಂದರು.

    ಈ ಸಂಬಂಧ ಎರಡು ದಿನಗಳ ಹಿಂದೆ ಅಧಿಕಾರಿಗಳ ಹಂತದಲ್ಲಿ ಸಭೆ ನಡೆಸಲಾಗಿದೆ. ಪ್ರತಿಭಟನಾಕಾರರ ಮುಖಂಡರ ಜೊತೆಗೂ ಮಾತುಕತೆ ಮಾಡಿದೆ. ಅವರು ಹತ್ತು ಬೇಡಿಕೆಗಳ ಪೈಕಿ ಏಳು ಬೇಡಿಕೆಗೆ ಒಪ್ಪಿಗೆ ನೀಡಿದೆ. ಆಶಾ ಕಾರ್ಯಕರ್ತರ ಪ್ರತಿಭಟನೆ ಪೂರ್ವ ನಿಗದಿಯಾಗಿತ್ತು. ಹೀಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ರಾಜ್ಯದಲ್ಲಿ ಉತ್ತಮ ಕೆಲಸ ಮಾಡ್ತಿದ್ದಾರೆ. ಅವರು ನಮ್ಮ ತಾಯಂದಿರ ರೀತಿ, ಅವರ ಬೇಡಿಕೆಗೆ ನಾನು ನಮ್ಮ ಸರ್ಕಾರ ಸದಾ ಸ್ಪಂದಿಸಲು ಸಿದ್ಧವಾಗಿದೆ ಎಂದು ರಾಮುಲು ಭರವಸೆ ನೀಡಿದರು.

    ಆಯುಷ್ಮಾನ್ ಭಾರತ ಯೋಜನೆಯಡಿ ಬಿಪಿಎಲ್ ಕಾರ್ಡ್ ನೀಡಲು ಕೇಳಿದ್ದನ್ನು ಒಪ್ಪಿದ್ದೇವೆ. ಆಶಾ ಕಾರ್ಯಕರ್ತರಿಗೆ ಫೋರ್ಟಲ್ ನಲ್ಲಿ ಮಾಹಿತಿ ನೀಡಲು ಹೇಳಿದ್ದೇನೆ. ಎಎನ್‍ಎಂ ಗಳು ತಕ್ಷ ತಕ್ಷಣ ಮಾಹಿತಿ ನೀಡಲು ಸೂಚನೆ ನೀಡಿದ್ದೇನೆ. 6 ಸಾವಿರ ರೂ.ಗಳನ್ನು ಏಕಕಾಲಕ್ಕೆ ಸಂಬಳ ನೀಡಲು ಸೂಚನೆ ನೀಡಲಾಗಿದೆ. ಆಶಾ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸಲು ವಾಟ್ಸಪ್ ಗ್ರೂಪ್ ಕೂಡ ಮಾಡಲಾಗಿದೆ. ಇಡೀ ರಾಜ್ಯದ ಆಶಾ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸಲು ಸರ್ಕಾರ ಸಿದ್ಧವಿದೆ. ದಯಮಾಡಿ ಎಲ್ಲ ಆಶಾ ಕಾರ್ಯಕರ್ತರು, ತಾಯಂದಿರು ಪ್ರತಿಭಟನೆ ಹಿಂಪಡೆಯಬೇಕು ಎಂದು ಅವರು ಮನವಿ ಮಾಡಿದರು.