Tag: asha workers

  • ಮಾಸಿಕ ಪ್ರೋತ್ಸಾಹಧನ ಹೆಚ್ಚಳಕ್ಕೆ ಆಗ್ರಹ – ಆಶಾ ಕಾರ್ಯಕರ್ತೆಯರಿಂದ ರಾಜ್ಯವ್ಯಾಪಿ ಹೋರಾಟ

    ಮಾಸಿಕ ಪ್ರೋತ್ಸಾಹಧನ ಹೆಚ್ಚಳಕ್ಕೆ ಆಗ್ರಹ – ಆಶಾ ಕಾರ್ಯಕರ್ತೆಯರಿಂದ ರಾಜ್ಯವ್ಯಾಪಿ ಹೋರಾಟ

    ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ (ASHA workers) 10 ಸಾವಿರ ರೂ. ಗೌರವ ಧನ ನೀಡುವ ಆದೇಶವನ್ನು ತಕ್ಷಣ ಜಾರಿಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಇಂದಿನಿಂದ ರಾಜ್ಯವ್ಯಾಪಿ ಹೋರಾಟ ಆರಂಭಿಸಿದೆ.

    ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿಯೂ ಆಶಾ ಕಾರ್ಯಕರ್ತೆಯರು ʻಮುಖ್ಯಮಂತ್ರಿಗಳೇ, ನಿಮ್ಮ ಮಾತು ಉಳಿಸಿರಿʼ ಎಂಬ ಘೋಷಣೆಯೊಂದಿಗೆ ಇಂದಿನಿಂದ ರಾಜ್ಯವ್ಯಾಪಿ ಹೋರಾಟ ಶುರು ಮಾಡಿದ್ದಾರೆ. ಆಗಸ್ಟ್‌ 14ರ ವರೆಗೂ ಹೋರಾಟ ಮುಂದುವರಿಯಲಿದೆ. ಮಳೆ, ಚಳಿಯನ್ನೂ ಲೆಕ್ಕಿಸದೇ, ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡು ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದಿದ್ದಾರೆ.

    ಈ ವರ್ಷದ ಮೊದಲಿನಲ್ಲಿ ಮುಖ್ಯಮಂತ್ರಿಗಳು ಅವರ ಬೇಡಿಕೆಗಳನ್ನು ಒಪ್ಪಿಕೊಂಡು, 2025ರ ಏಪ್ರಿಲ್‌ನಿಂದಲೇ 10,000 ರೂ. ಗೌರವಧನ ನೀಡುವುದಾಗಿ ಘೋಷಿಸಿದ್ದರು. ಆದ್ರೆ, ಇದುವರೆಗೆ ಸರ್ಕಾರ ಘೋಷಣೆಯನ್ನ ಜಾರಿಗೊಳಿಸದ ಹಿನ್ನೆಲೆ ಆಶಾ ಕಾರ್ಯಕರ್ತೆಯರು ಹೋರಾಟಕ್ಕಿಳಿದಿದ್ದಾರೆ. ಈ ನಡುವೆ ಕಾರ್ಯಕ್ರಮ ನಿರ್ದೇಶಕ ಪ್ರಭುಗೌಡ ಅವರು ಎನ್‌ಎಚ್‌ಎಮ್ ಪರವಾಗಿ ಆಶಾ ಕಾರ್ಯಕರ್ತೆಯರ ಬೇಡಿಕೆ ಪತ್ರವನ್ನು ಸ್ವೀಕರಿಸಿ, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.

    ಮೈಸೂರು, ಗದಗ, ದಾವಣಗೆರೆ, ಚಿತ್ರದುರ್ಗ, ಕಾರವಾರ ಮತ್ತು ವಿಜಯಪುರ ಮುಂತಾದ ಮಳೆಯಾದ ಪ್ರದೇಶಗಳಲ್ಲಿಯೂ ಆಶಾ ಕಾರ್ಯಕರ್ತೆಯರು ಧರಣಿ ಮುಂದುವರಿಸಿದ್ದಾರೆ.

    ಆಶಾ ಕಾರ್ಯಕರ್ತೆಯರ ಬೇಡಿಕೆಗಳೇನು?
    * 2025ರ ಏಪ್ರಿಲ್‌ನಿಂದ ರಾಜ್ಯ ಸರ್ಕಾರದ ಗೌರವಧನ ಹಾಗೂ ಕೇಂದ್ರ ಸರ್ಕಾರದ ಪ್ರೋತ್ಸಾಹಧನವನ್ನು ಒಳಗೊಂಡಂತೆ 10,000 ರೂ. ನೀಡಬೇಕು.
    * ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಇತರ ಯೋಜನಾ ಕಾರ್ಮಿಕರಿಗೆ ನೀಡಿದಂತೆ, ಆಶಾ ಕಾರ್ಯಕರ್ತೆಯರಿಗೂ 1,000 ರೂ. ಹೆಚ್ಚಳ ನೀಡಬೇಕು.
    * ‘ರೇಷನಲೈಸೇಶನ್’ ಎಂಬ ಹೆಸರಿನಲ್ಲಿ ಯಾರನ್ನೂ ಕೆಲಸದಿಂದ ತೆಗೆದು ಹಾಕಬಾರದು.
    * ಕಾರ್ಯಕ್ಷಮತೆ ಆಧಾರಿತ ಮೌಲ್ಯಮಾಪನ ನೀತಿಯನ್ನು ಹಿಂತೆಗೆದುಕೊಳ್ಳಬೇಕು.
    * ಆಶಾ ಫೆಸಿಲಿಟೇಟರ್ ವ್ಯವಸ್ಥೆಯನ್ನು ಮುಂದುವರಿಸಿ, ಅವರಿಗೆ ಸೂಕ್ತ ವೇತನ ನೀಡಬೇಕು.
    * ನಗರ/ಪಟ್ಟಣಗಳ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಜೀವನಾವಶ್ಯಕ ವೆಚ್ಚಕ್ಕೆ ಅನುಗುಣವಾಗಿ 2,000 ರೂ. ಹೆಚ್ಚಿಸಬೇಕು.
    * ನಿವೃತ್ತರಾದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಒಮ್ಮೆ ನಿವೃತ್ತಿ ಭತ್ಯೆ ನೀಡಬೇಕು.
    * 2025ರ ಜೂನ್–ಜುಲೈನಲ್ಲಿ ಕೇಂದ್ರ ಸರ್ಕಾರ ನೀಡಿದ ಹೆಚ್ಚುವರಿ ಮೊತ್ತವನ್ನು ರಾಜ್ಯದಲ್ಲಿ ಜಾರಿಗೆ ತರಬೇಕು.

  • ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ರೂ. ಗೌರವಧನ ನೀಡಲು ಸರ್ಕಾರ ಒಪ್ಪಿಗೆ

    ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ರೂ. ಗೌರವಧನ ನೀಡಲು ಸರ್ಕಾರ ಒಪ್ಪಿಗೆ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಇಂದು ಆಶಾ ಕಾರ್ಯಕರ್ತೆಯರ ಸಂಧಾನ ಯಶಸ್ವಿಯಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ರೂ. ಗೌರವಧನವನ್ನು ಏ.1ರಿಂದ ಅನ್ವಯವಾಗುವಂತೆ ನೀಡಲು ಸರ್ಕಾರ ಒಪ್ಪಿದೆ.

    ರಾಜ್ಯ ಸರ್ಕಾರದಿಂದ ಪ್ರತಿ ಮಾಹೆ 5000 ರೂ. ಹಾಗೂ ಕೇಂದ್ರ ಸರ್ಕಾರದ 34 ಸೇವೆಗಳಿಗೆ ನೀಡುವ ಗೌರವಧನ ಸೇರಿ ಒಟ್ಟು 10 ಸಾವಿರ ರೂ.ಗಳನ್ನು ತಿಂಗಳಿಗೆ ನೀಡಲಾಗುವುದು.

    ಪೋರ್ಟಲ್ ಸುಧಾರಣೆಗೆ ಸೂಚನೆ: ಮಾಹಿತಿಯನ್ನು ಪೋರ್ಟಲ್‌ನಲ್ಲಿ ನಮೂದು ಮಾಡುವುದು ಕಷ್ಟ ಸಾಧ್ಯವಾಗಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆದಾಗ ಪೋರ್ಟಲ್ ಸುಧಾರಣೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

    ಗೌರವಧನ ನಿಲ್ಲಿಸದೆ ರಜೆ: ಆಶಾ ಕಾರ್ಯಕರ್ತೆಯರ ಆರೋಗ್ಯ ಕೆಟ್ಟರೆ, ಪ್ರತಿ ತಿಂಗಳು ಸಿಗುವ ರಜೆ ಕ್ರೋಢೀಕರಿಸಿ, ಗರಿಷ್ಠ ಮೂರು ತಿಂಗಳವರೆಗೆ ಗೌರವ ಧನ ನಿಲ್ಲಿಸದೆ ರಜೆ ಮಂಜೂರು ಮಾಡಲು ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ತಿಳಿಸಿದರು.

    ಆಯವ್ಯಯ ಪೂರ್ವಭಾವಿ ಸಭೆ ನಡೆಸುವಾಗ ಆಶಾ ಕಾರ್ಯಕರ್ತೆಯರೊಂದಿಗೂ ಸಭೆ ನಡೆಸಲಾಗುವುದು. ಸರ್ಕಾರ ನಿಮ್ಮೊಂದಿಗಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಪ್ರಜಾಸತ್ತಾತ್ಮಕ ಹೋರಾಟಗಳನ್ನು ಸರ್ಕಾರ ಹತ್ತಿಕ್ಕುವುದಿಲ್ಲ. ಹೋರಾಟ ಮಾಡುವುದು ಸಂವಿಧಾನ ಬದ್ಧ ಹಕ್ಕು. ಪ್ರಜಾಸತ್ತಾತ್ಮಕ ಹೋರಾಟಗಳನ್ನು ಸರ್ಕಾರ ಹತ್ತಿಕ್ಕುವುದಿಲ್ಲ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.

  • ಸರ್ಕಾರದ ಸಂಧಾನ ವಿಫಲ – ಕೊರೆಯುವ ಚಳಿ ಮಧ್ಯೆಯೂ ಕದಲದ ಆಶಾ ಕಾರ್ಯಕರ್ತೆಯರು

    ಸರ್ಕಾರದ ಸಂಧಾನ ವಿಫಲ – ಕೊರೆಯುವ ಚಳಿ ಮಧ್ಯೆಯೂ ಕದಲದ ಆಶಾ ಕಾರ್ಯಕರ್ತೆಯರು

    ಬೆಂಗಳೂರು: ಆರೋಗ್ಯ ಸಚಿವರ ಸಂಧಾನ ವಿಫಲವಾಗಿದ್ದು ಕೊರೆಯುವ ಚಳಿಯಲ್ಲೂ ಪುಟ್ಟ ಮಕ್ಕಳನ್ನು ಹಿಡಿದುಕೊಂಡು ಆಶಾ ಕಾರ್ಯಕರ್ತೆಯರು (ASHA workers) ನಡೆಸುತ್ತಿರುವ ಪ್ರತಿಭಟನೆ (Protest) ಮೂರನೇ ದಿನಕ್ಕೆ ಕಾಲಿಟ್ಟಿದೆ.

    ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರದ ವಿರುದ್ದ ಆಶಾ ಕಾರ್ಯಕರ್ತೆಯರು ಫ್ರೀಡಂಪಾರ್ಕ್‌ನಲ್ಲಿ (Freedom Park) ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಬುಧವಾರ ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಾಸಿಕ 8 ಸಾವಿರ ರೂ. ಬದಲಿಗೆ 9,500 ರೂಪಾಯಿ ನೀಡುವ ಭರವಸೆ ನೀಡಿದ್ದರು. ಆದರೆ ಸಚಿವರ ಭರವಸೆ ಒಪ್ಪದ ಕಾರ್ಯಕರ್ತರು ಕನಿಷ್ಠ 15 ಸಾವಿರ ರೂ. ಗೌರವಧನ ನೀಡುವಂತೆ ಪಟ್ಟು ಹಿಡಿದಿದ್ದಾರೆ.  ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣಿಗೆ ಶರಣು – ಪತಿ ಆತ್ಮಹತ್ಯೆಗೆ ಯತ್ನ

    ಆಶಾ ಕಾರ್ಯಕರ್ತೆಯರ ಬೇಡಿಕೆಗಳು
    1. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಶಾ ಕಾರ್ಯಕರ್ತೆಯರಿಗೆ ಇರುವ ಗೌರವಧನ ಮತ್ತು ಪ್ರೋತ್ಸಾಹಧನ ಸೇರಿಸಿ ಒಟ್ಟು 15,000 ಮಾಸಿಕ ಗೌರವಧನ ನೀಡಬೇಕು.
    2. ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ 2 ಸಾವಿರ ರೂಪಾಯಿ ಗೌರವಧನವನ್ನು ಹೆಚ್ಚಿಸಬೇಕು

    3. ಆಶಾ ಕಾರ್ಯಕರ್ತೆಯರು ಸ್ಮಾರ್ಟ್ ಫೋನ್ ಬಳಕೆ ಬಗ್ಗೆ ಹೊರಡಿಸಿದ ಅಧಿಕೃತ ಜ್ಞಾಪನಾ ಪತ್ರ ಕೂಡಲೇ ಹಿಂತೆಗೆದುಕೊಳ್ಳಬೇಕು.
    4. ಅಧಿಕೃತವಾಗಿ ಆಶಾಗಳದಲ್ಲದ ಕೆಲಸವನ್ನು ಮಾಡಲು ಹೇಳಿರುವ ಆದೇಶ ವಾಪಸ್‌ ಪಡೆಯಬೇಕು.
    5. ಮೊಬೈಲ್ ಕೆಲಸಗಳನ್ನು ಒತ್ತಾಯ ಪೂರ್ವಕವಾಗಿ ಮಾಡಿಸಿಕೊಳ್ಳುತ್ತಿರುವುದನ್ನು ಕೈಬಿಡಿ. ಅಥವಾ ಮೊಬೈಲ್ ಡಾಟಾ ಒದಗಿಸಿ, ಮೊಬೈಲ್ ಕೆಲಸಗಳಿಗೆ ಪ್ರೋತ್ಸಾಹಧನ ನಿಗದಿ ಮಾಡಿ, ಯಾರಿಗೆ ಮೊಬೈಲ್ ಕೆಲಸ ಮಾಡಲು ಆಗುವುದಿಲ್ಲವೊ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿ.
    6. ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ 5 ಲಕ್ಷ ರೂ.ಗೆ ಹೆಚ್ಚಿಸುವುದು.

    7. ತೀವ್ರವಾದ ಅನಾರೋಗ್ಯ, ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳುಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ರುಟೀನ್ ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನ ನೀಡಬೇಕು.
    8. ಆಶಾ ಸೇವೆಯಲ್ಲಿ ಇದ್ದಾಗ ಆಗುವ ಆನಾಹುತಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಳ್ಳಬೇಕು.
    9. ಎಲ್ಲ ಆಶಾ ಕಾರ್ಯಕರ್ತೆಯರ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಬೇಕು. ತ್ರೀವ್ರ ಕಾಯಿ ಇದ್ದಲ್ಲಿ ಕೂಡಲೇ ಉಚಿತ ಚಿಕಿತ್ಸೆ ಮಾಡಬೇಕು.
    10. ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಕನಿಷ್ಠ ವೇತನ, ಗ್ರಾಜ್ಯುಟಿ, ಪಿಎಫ್-ಇಎಸ್ ಐ ಸೌಲಭ್ಯ ಒದಗಿಸಬೇಕು.

  • ನಾವು ದಲಿತರೆಂದು ಮನೆಯ ಒಳಗೆ ಸೇರಿಸಲ್ಲ – ತಹಶೀಲ್ದಾರ್ ಮುಂದೆಯೇ ಆಶಾ ಕಾರ್ಯಕರ್ತೆ ಕಣ್ಣೀರು

    ನಾವು ದಲಿತರೆಂದು ಮನೆಯ ಒಳಗೆ ಸೇರಿಸಲ್ಲ – ತಹಶೀಲ್ದಾರ್ ಮುಂದೆಯೇ ಆಶಾ ಕಾರ್ಯಕರ್ತೆ ಕಣ್ಣೀರು

    ದಾವಣಗೆರೆ: ಗ್ರಾಮಗಳಲ್ಲಿ ನಾವು ದಲಿತರೆಂದು ಮನೆಯ ಒಳಗೆ ಸೇರಿಸುವುದಿಲ್ಲ ಎಂದು ಆಶಾ ಕಾರ್ಯಕರ್ತೆಯೊಬ್ಬರು ತಹಶೀಲ್ದಾರರ ಮುಂದೆ ಕಣ್ಣೀರು ಹಾಕಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗ್ರಾಪಂ ವ್ಯಾಪ್ತಿಯ ಕಾನನಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮಗಳಲ್ಲಿ ಸಮೀಕ್ಷಾ ಕಾರ್ಯ ಮಾಡಲು ಪ್ರತಿ ಮನೆಗೆ ತೆರಳಿದರೆ ನಾವು ದಲಿತರೆನ್ನುವ ಕಾರಣಕ್ಕೆ ಒಳಗೆ ಪ್ರವೇಶ ನೀಡದೆ ಹೊರಗೇ ನಿಲ್ಲಿಸುತ್ತಾರೆ. ಹೀಗಿರುವಾಗ ಹೇಗೆ ಕೆಲಸ ಮಾಡಲಿ ಸರ್? ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: 819 ಕೋಟಿ ವಂಚಿಸಿದ್ರಾ ಮಾಜಿ ಸಚಿವ..? – ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ್ ಗಂಭೀರ ಆರೋಪ

    ಕಾನನಕಟ್ಟೆ ಗ್ರಾಮದ ಗ್ರಾಮಸ್ಥರು ನಿಗೂಢ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಪತಿ, ತಾಲೂಕು ಆರೋಗ್ಯಾಧಿಕಾರಿ ನಾಗರಾಜ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪೂಜಾರ ಸಿದ್ದಪ್ಪ ಕಾನನಕಟ್ಟೆಗೆ ಭೇಟಿ ನೀಡಿದ್ದರು. ಈ ವೇಳೆ ಆಶಾ ಕಾರ್ಯಕರ್ತೆ ತಮ್ಮ ನೋವು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಜರಿಗಾಗಿ ಸುನೀಲ್ ಶೆಟ್ಟಿ ಪುತ್ರಿ ಜೊತೆ ಜರ್ಮನಿಗೆ ಹಾರಿದ ಕ್ರಿಕೆಟಿಗ ಕೆ.ಎಲ್ ರಾಹುಲ್

    ಅಧಿಕಾರಿಗಳು ಕೆಲಸ ಮಾಡಿ ಎಂದು ಹೇಳುತ್ತಾರೆ. ಆದರೆ ನಾವು ಎಸ್ಸಿ ಜನಾಂಗದವರೆಂದು ಸವರ್ಣಿಯರು ಮನೆಯೊಳಗೆ ಪ್ರವೇಶ ನೀಡುತ್ತಿಲ್ಲ. ಇದರಿಂದ ನೀರು ಸಂಗ್ರಹಿಸುವ ತೊಟ್ಟಿಗಳನ್ನು ಪರಿಶೀಲನೆ ನಡೆಸಲು ಸಾಧ್ಯವಿಲ್ಲ. ಸಮೀಕ್ಷೆ ಮಾಡಿ ವರದಿ ನೀಡಲೂ ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಬಳಿಕ ತಾಪಂ ಇಓ ಲಕ್ಷ್ಮೀಪತಿ ಸಮಾಧಾನಪಡಿಸಿ ಸಮೀಕ್ಷೆ ಕಾರ್ಯ ನಡೆಸುವಂತೆ ಸಲಹೆ ನೀಡಿದ್ದಾರೆ.

    Live Tv

  • ಆಶಾ ಕಾರ್ಯಕರ್ತೆಯರಿಗೆ ಬಾಗಿನ, ಚಿನ್ನದ ಮೂಗುತಿ ಗಿಫ್ಟ್ ಕೊಟ್ಟ ಯುವಕ

    ಆಶಾ ಕಾರ್ಯಕರ್ತೆಯರಿಗೆ ಬಾಗಿನ, ಚಿನ್ನದ ಮೂಗುತಿ ಗಿಫ್ಟ್ ಕೊಟ್ಟ ಯುವಕ

    ಚಿಕ್ಕಬಳ್ಳಾಪುರ: ಹಗಲು, ರಾತ್ರಿ ಕೊರೊನಾ ಸಂಕಷ್ಟ ಕಾಲದಲ್ಲಿ ಕಷ್ಟಪಟ್ಟು ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಯುವಕನೊರ್ವ ಚಿನ್ನದ ಉಡುಗೊರೆ ನೀಡಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚನಬಲೆ ಗ್ರಾಮದ ಸದಾಶಿವ್ ಆಶಾಕಾರ್ಯಕತೆಯರಿಗೆ ಬಾಗಿನ ಅರ್ಪಿಸಿ ಚಿನ್ನದ ಮೂಗುತಿಯನ್ನ ಉಡುಗೊರೆಯಾಗಿ ನೀಡಿದ್ದಾರೆ. ದಿಬ್ಬೂರು ಪ್ರಾಥಮಿಕ ಅರೋಗ್ಯ ಕೇಂದ್ರ ವ್ಯಾಪ್ತಿಯ 24 ಮಂದಿ ಆಶಾ ಕಾರ್ಯಕರ್ತೆಯರಿಗೆ ಚಿನ್ನದ ಮೂಗುತಿ, ಸೀರೆ, ಬಳೆ ಅರಿಶಿನ-ಕುಂಕುಮ ಹಾಗೂ ದಿನಸಿ ಪದಾರ್ಥಗಳ ಕಿಟ್ ನೀಡಿ ಗೌರವಿಸುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ.

    ನಾನು ಆರ್ಥಿಕವಾಗಿ ತುಂಬಾ ಸಿರಿವಂತ, ಸ್ಥಿತಿವಂತನಲ್ಲದಿದ್ರೂ ಕೊರೊನಾ ಸಂಕಷ್ಟದ ಸಮಯದಲ್ಲಿ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್​​ಗೆ ಗೌರವ ಸಲ್ಲಿಸುವುದು ನಮ್ಮ ಹೊಣೆ, ಜವಾಬ್ದಾರಿ ಕರ್ತವ್ಯ ಹೀಗಾಗಿ ತನ್ನ ಕೈಲಾದ ಸೇವೆಯನ್ನ  ಮಾಡುತ್ತಿದ್ದೆನೆ. ಈ ಹಿಂದೆ ಸಹ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್, ಬಸ್ ಪಾಸ್ ಕೊಡುತ್ತಿದ್ದೆ. ಕೊರೊನಾ ಬಂದ ನಂತರ ಕಳೆದ ಬಾರಿ ಪುಡ್ ಕಿಟ್ ಕೊಟ್ಟಿದ್ದೆ, ಈ ಬಾರಿ ಬಾಗಿನ ಅರ್ಪಿಸುತ್ತಿದ್ದೇನೆ ಅಂತ ಹೇಳಿದ್ದಾರೆ.

  • ಮಂಗಳೂರಿನ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯಿಂದ ಕೊರೊನಾ ಸಂತ್ರಸ್ತರಿಗೆ ದಿನಸಿ ಸಾಮಾಗ್ರಿ ಕಿಟ್

    ಮಂಗಳೂರಿನ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯಿಂದ ಕೊರೊನಾ ಸಂತ್ರಸ್ತರಿಗೆ ದಿನಸಿ ಸಾಮಾಗ್ರಿ ಕಿಟ್

    – ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ಸಂರಕ್ಷಣಾ ಸಲಕರಣೆ ವಿತರಣೆ

    ಮಂಗಳೂರು: ಬೆಂಗಳೂರಿನಲ್ಲಿ 100 ಆಮ್ಲಜನಕಯುಕ್ತ ಬೆಡ್ ಗಳು (ಎಚ್‍ಡಿಯುನೊಂದಿಗೆ) ಮತ್ತು ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ಕೊರೊನಾ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿರುವ ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷ ನ್ ಮಂಗಳೂರಿನ ನೀರುಮಾರ್ಗದ ಕೆಲರಾಯಿ ನಲ್ಲಿರುವ ತಮ್ಮ ಅಂಗ ಸಂಸ್ಥೆ ಯಾದ ಪ್ರೆಸಿಡೆನ್ಸಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ವತಿಯಿಂದ ನೀರುಮಾರ್ಗ ಪಂಚಾಯತ್ ಸಹಯೋಗ ದೊಂದಿಗೆ ನೀರುಮಾರ್ಗ ಗ್ರಾಮ ಪಂಚಾಯತ್‍ನ 100 ಕೊರೋನಾ ಸಂತ್ರಸ್ತರಿಗೆ ದಿನಸಿ ಸಾಮಾಗ್ರಿಗಳ ಕಿಟ್ ಹಾಗೂ 11ಆಶಾ ಕಾರ್ಯಕರ್ತೆಯರಿಗೆ ಪಿಪಿಇ ಕಿಟ್, ಆಕ್ಸಿಮೀಟರ್ ಗಳನ್ನು ಶಾಲಾ ವಠಾರದಲ್ಲಿಂದು ವಿತರಿಸಲಾಯಿತು.

    ಪ್ರೆಸಿಡೆನ್ಸಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಸ್ಥಳೀಯ ಗ್ರಾಮ ಪಂಚಾಯತ್ ಸಹಯೋಗ ದೊಂದಿಗೆ ಅಗತ್ಯವಿರುವವರಿಗೆ ಆಕ್ಸಿಮೀಟರ್, ರೇಷನ್ ಕಿಟ್ ಮತ್ತು ಪಿಪಿಇ ಕಿಟ್‍ಗಳನ್ನು ವಿತರಿಸುವ ಮೂಲಕ ಕೊರೋನಾ ನಿಯಂತ್ರಣ ಹೋರಾಟದಲ್ಲಿ ಬೆಂಬಲವನ್ನು ನೀಡುತ್ತಿದೆ.ಇದು ಇತರರಿಗೂ ಪ್ರೇರಣೆ ನೀಡುವಂತಾಗಲಿ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಮಧುಲಿಕ ತಿಳಿಸಿದ್ದಾರೆ. ನೀರುಮಾರ್ಗ ಗ್ರಾಮ ಪಂಚಾಯತ್ ಅಧ್ಯಕ್ಷೆ ಧನವಂತಿ ಮತ್ತು ಸದಸ್ಯ ಶ್ರೀಧರ ಮತ್ತು ಪಂಚಾಯತ್ ಪಿಡಿಒ ಸುಧೀರ್ ಕೋವಿಡ್ ಸಂತ್ರಸ್ತರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನೆರವು ನೀಡಲು ಮುಂದೆ ಬಂದ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

    ಸಮಾರಂಭದಲ್ಲಿ ಬೊಂಡಂತಿಲ ಗ್ರಾಮದ ಕೊರೋನಾ ಕಾರ್ಯಪಡೆಯ ಸದಸ್ಯ ಅಬ್ದುಲ್ ಹಮೀದ್, ನೀರುಮಾರ್ಗ ಗ್ರಾಮ ಪಂಚಾಯತ್ ಕೋವಿಡ್ 19 ಟಾಸ್ಕ್ ಫೋರ್ಸ್ ನ ಸದಸ್ಯ ಭಾಸ್ಕರ ಜೆ ಉಪಸ್ಥಿತರಿದ್ದರು. ರಮಾನಾಥ ಕಾರ್ಯಕ್ರಮ ನಿರೂಪಿಸಿದರು.

  • ಸಾರ್ವಜನಿಕರಿಗೆ ಕೊರೊನಾ ವ್ಯಾಕ್ಸಿನ್ – ಮಾಹಿತಿ ನೀಡಲು ಜನ ಹಿಂದೇಟು

    ಸಾರ್ವಜನಿಕರಿಗೆ ಕೊರೊನಾ ವ್ಯಾಕ್ಸಿನ್ – ಮಾಹಿತಿ ನೀಡಲು ಜನ ಹಿಂದೇಟು

    – ಮಾಹಿತಿ ಸಿಗದೇ ಆಶಾ, ಹೆಲ್ತ್ ವರ್ಕರ್ಸ್ ಪರದಾಟ

    ಬೆಂಗಳೂರು: ಎರಡನೇ ಅಲೆ ಆತಂಕದ ಮಧ್ಯೆ ಸಾರ್ವಜನಿಕರಿಗೆ ವ್ಯಾಕ್ಸಿನ್ ವಿತರಿಸಲು ಸಿದ್ಧತೆ ನಡೆದಿದೆ. ಹೈ ರಿಸ್ಕ್ ಕೇಸ್ ಮತ್ತೆ 50 ವರ್ಷ ಮೇಲ್ಪಟ್ಟವರ ಪಟ್ಟಿ ಸಿದ್ಧತೆಗೆ ಆರೋಗ್ಯ ಇಲಾಖೆ ಹರಸಾಹಸ ಪಡ್ತಿದೆ. ಮನೆ ಮನೆ ಸರ್ವೇ ವೇಳೆ ವ್ಯಾಕ್ಸಿನ್ ಡೇಟಾ ಎಂಟ್ರಿಗೆ ಸಾರ್ವಜನಿಕರು ಮಾಹಿತಿ ಕೊಡಲು ಹಿಂದೇಟು ಹಾಕುತ್ತಿದ್ದು, ಮಾಹಿತಿ ಸಿಗದೇ ಆಶಾ ಕಾರ್ಯಕರ್ತೆಯರು ಆರೋಗ್ಯಾಧಿಕಾರಿಗಳ ಪರದಾಟ ಪಬ್ಲಿಕ್ ರಿಯಾಲಿಟಿ ಚೆಕ್ ನಲ್ಲಿ ಬಯಲಾಗಿದೆ.

    ಮಾರ್ಚ್ 1 ರಿಂದ ಸಾರ್ವಜನಿಕರಿಗೆ ಕೊರೊನಾ ಲಸಿಕೆ ವಿತರಣೆ ಮಾಡಲು ಆರೋಗ್ಯ ಇಲಾಖೆ ಸಜ್ಜಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಮತ್ತು ನಾನಾ ಕಾಯಿಲೆಗಳಿಂದ ಬಳಲುತ್ತಾ ಇರೋ 45 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಲು ನಿರ್ಧಾರ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಹೈರಿಸ್ಕ್ ಜನ, 50 ವರ್ಷ ಮೇಲ್ಪಟ್ಟವರು ಮತ್ತು ಬಹು ಕಾಯಿಲೆಯಿಂದ ಬಳಲುತ್ತಾ ಇರೋರು ಎಷ್ಟು ಜನ ಇದ್ದಾರೆ? ಎಷ್ಟು ವ್ಯಾಕ್ಸಿನ್ ಕೊಡಬೇಕು? ಫಲಾನುಭವಿಗಳು ಎಷ್ಟು ಆಗ್ತಾರೆ ಅಂತಾ ತಿಳಿಯಲು ಸರ್ಕಾರ ಸರ್ವೇ ನಡೆಸುತ್ತಿದೆ. ಈ ಸರ್ವೇಯನ್ನ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಮತ್ತು ಸ್ವಯಂ ಸೇವಕರು ನಡೆಸುತ್ತಿದ್ದಾರೆ. ಆದರೆ ಈ ಸರ್ವೇ ವೇಳೆ ಸಾರ್ವಜನಿಕರು ಸರಿಯಾಗಿ ನೀಡುತ್ತಿಲ್ಲ. ಸ್ವತಃ ಪಬ್ಲಿಕ್ ಟಿವಿ ಆರೋಗ್ಯ ಸಿಬ್ಬಂದಿ ಜೊತೆ ಸರ್ವೇಗೆ ಇಳಿದಾಗ ಅಲ್ಲಿನ ರಿಯಾಲಿಟಿ ಬಯಲಾಗಿದೆ.

    ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಜೊತೆ ಸರ್ಬೇಗೆ ಪಬ್ಲಿಕ್ ಟಿವಿ ಇಳಿಯಿತು. ಪ್ಯಾಲೇಸ್ ಗುಟ್ಟಹಳ್ಳಿಯ ಜಟಕಾಸ್ಟಾಂಡ್ ವಸತಿ ಗೃಹದ ಸಂಕೀರ್ಣದ ಬಳಿ ಸರ್ವೇಗೆ ಇಳಿದಾಗ ಅಲ್ಲಿನ ಮನೆ ಅವರು ಸ್ಪಂದಿಸಿದ್ರು. ಆರೋಗ್ಯ ಸಿಬ್ಬಂದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ರು. ವ್ಯಾಕ್ಸಿನ್ ತೆಗೆದುಕೊಳ್ಳೋದು ಉತ್ತಮ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದರು.

    ಬಾಂಧವ್ಯ ನಗರದಲ್ಲಿ ಸರ್ವೆಗೆ ಅಂತಾ ಒಂದು ಮನೆಗೆ ತೆರಳಿದೆವು. ಅಲ್ಲಿನ ನಿವಾಸಿ ನಿಮಗೆ ಎಷ್ಟು ವಯಸ್ಸು ಅಂದರೆ ಒಂದು ಬಾರಿ 49 ವರ್ಷ ಅಂತಾರೆ. ಒಂದು ಬಾರಿ 51 ವರ್ಷ ಅಂತಾರೆ. ಮನೆಯಲ್ಲಿಯೇ ಇದ್ದು ಆಧಾರ್ ಕಾರ್ಡ್ ವೋಟರ್ ಐಡಿ ಕೇಳಿದ್ರೆ ಇಲ್ಲ ಅಂತಾರೆ. ವ್ಯಾಕ್ಸಿನ್ ಮಾತ್ರ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಕೆಲವರು ನಾವು ಆರೋಗ್ಯವಾಗಿದ್ದು, ಲಸಿಕೆ ಬೇಡ ಅಂತ ಹೇಳುತ್ತಾರೆ.

    ಪಬ್ಲಿಕ್ ಟಿವಿ ದಿವಾನರ ಪಾಳ್ಯದಲ್ಲೂ ಈ ಬಗ್ಗೆ ರಿಯಾಲಿಟಿ ಚೆಕ್ ನಡೆಸಿತ್ತು. ದಿವಾನರ ಪಾಳ್ಯದಲ್ಲಿ ಮತ್ತಿಕೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯಕರ್ತರು, ಮನೆ ಮನೆಗೆ ಹೋಗಿ ಸರ್ವೇ ನಡೆಸಿದರು. ಆದರೆ ವಾರ್ಡ್ ನ ಮನೆ ಮನೆಗೆ ಹೋದಾಗ ಅಲ್ಲಿಯ ಬಹುತೇಕ ನಿವಾಸಿಗಳು ಆರೋಗ್ಯ ಸಿಬ್ಬಂದಿಗಳಿಗೆ ಸ್ಪಂದಿಸಲಿಲ್ಲ. ಇದರಿಂದ ಆರೋಗ್ಯ ಕಾರ್ಯಕರ್ತರು ಹಾಗೂ ಬಿಬಿಎಂಪಿ ಅಧಿಕಾರಿಗಳು ಹೈರಾಣಾದರು.

  • ಮಳೆಯಿಂದ 3 ದಿನ ಗೈರಾಗಿದ್ದಕ್ಕೆ ತಿಂಗಳ ಸಂಬಳ ಕಟ್- ಆಶಾ ಕಾರ್ಯಕರ್ತೆಯರ ಗೋಳು

    ಮಳೆಯಿಂದ 3 ದಿನ ಗೈರಾಗಿದ್ದಕ್ಕೆ ತಿಂಗಳ ಸಂಬಳ ಕಟ್- ಆಶಾ ಕಾರ್ಯಕರ್ತೆಯರ ಗೋಳು

    ಚಿಕ್ಕಮಗಳೂರು: ಮೂರು ದಿನಕ್ಕೆ ಕೆಲಸಕ್ಕೆ ಗೈರಾಗಿದ್ದಕ್ಕೆ ಆಶಾ ಕಾರ್ಯಕರ್ತೆಯರ ಸಂಬಳ ತಡೆ ಹಿಡಿಯಲಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಎಂಟು ಆಶಾ ಕಾರ್ಯಕರ್ತೆಯರು ಮಳೆಯಿಂದಾಗಿ ಬಸ್ ಸೌಕರ್ಯವಿಲ್ಲದೇ ಮೂರು ದಿನಕ್ಕೆ ಕೆಲಸಕ್ಕೆ ಗೈರಾಗಿದ್ದರು. ಇದೇ ಕಾರಣ ನೀಡಿ ಆರೋಗ್ಯಾಧಿಕಾರಿ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ.

    ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಾರಿಗೆ ಸೌಲಭ್ಯ ಇಲ್ಲದ ಕಾರಣ ಕೆಲಸಕ್ಕೆ ಬರಲು ಸಾಧ್ಯವಾಗಿಲ್ಲ. ಗೈರಾಗಿದ್ದಕ್ಕೆ ವಿಷಾದ ಪತ್ರವನ್ನ ನೀಡಿದ್ರೂ ವೈದ್ಯಾಧಿಕಾರಿ ಮನೋಜ್ ತಮ್ಮ ಸಂಬಳ ತಡೆ ಹಿಡಿದಿದ್ದಾರೆ. ನೀವು ಕೆಲಸವನ್ನೇ ಮಾಡಿಲ್ಲ ನಿಮಗೇಕೆ ಸಂಬಳ ನೀಡಬೇಕು ಎಂದು ಹೇಳುತ್ತಾರೆ. ವೈದ್ಯರು ಸಹಿ ಹಾಕಿದ್ರೆ, ನರ್ಸ್ ಗಳು ಹಾಕಲ್ಲ, ನರ್ಸ್ ಗಳು ಸಹಿ ಹಾಕಿದ್ರೆ ವೈದ್ಯರು ಹಾಕಲ್ಲ ಎಂದು ಆಶಾ ಕಾರ್ಯಕರ್ತೆ ರತ್ನ ಹೇಳುತ್ತಾರೆ.

    ಕೊರೊನಾ ಸಮಯದಲ್ಲಿ ಸಂಬಳ ಆಗೋದು ತಡವಾದ್ರೂ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಾಗಿದೆ. ಕೇವಲ ಮೂರು ದಿನ ಗೈರಾಗಿದ್ದಕ್ಕೆ ತಿಂಗಳ ಸಂಬಳ ತಡೆ ಹಿಡಿಯೋದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

  • ಸರ್ಕಾರದಲ್ಲಿ ಗೊಂದಲಗಳಿಲ್ಲ, 18ರ ಯುವಕರಂತೆ ಸಿಎಂ ಕೆಲ್ಸ ಮಾಡ್ತಿದಾರೆ: ಸಚಿವ ಸೋಮಶೇಖರ್

    ಸರ್ಕಾರದಲ್ಲಿ ಗೊಂದಲಗಳಿಲ್ಲ, 18ರ ಯುವಕರಂತೆ ಸಿಎಂ ಕೆಲ್ಸ ಮಾಡ್ತಿದಾರೆ: ಸಚಿವ ಸೋಮಶೇಖರ್

    ಚಿಕ್ಕೋಡಿ: ಲಾಕ್‍ಡೌನ್ ವಿಚಾರದಲ್ಲಿ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ಹಾಗೂ ಸಹಕಾರಿ ಇಲಾಖೆ ವತಿಯಿಂದ ಆಶಾ ಕಾರ್ಯಕರ್ತರಿಗೆ ಚೆಕ್ ವಿತರಣೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಮಾಡುವ ನಿರ್ಧಾರ ಕೈಗೊಳ್ಳಲು ಆಯಾ ಜಿಲ್ಲಾಡಿಳತಕ್ಕೆ ಬಿಡಲಾಗಿದೆ. ಬೆಂಗಳೂರಿನಲ್ಲಿ ಜನರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಲಾಕ್‍ಡೌನ್ ಮಾಡಲಾಗಿದೆ ಎಂದರು.

    ಬೆಂಗಳೂರು ಲಾಕ್‍ಡೌನ್ ಮಾಡುವದರ ಬಗ್ಗೆ ಸಿಎಂ ನಿರ್ಣಯ ತೆಗೆದುಕೊಂಡಿದ್ದಾರೆ. ಸಿಎಂ ಯಡಿಯೂರಪ್ಪನವರು ಕೋವಿಡ್-19 ಸಂದರ್ಭದಲ್ಲಿ 18ರ ಯುವಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ನಿದ್ದೆಯಿಲ್ಲದೆ ಮುಖ್ಯಮಂತ್ರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಕಾರ್ಯ ವೈಖರಿ ಬಗ್ಗೆ ಯಾರೂ ಮಾತನಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದರು. ಅಲ್ಲದೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣಾ ವಿಚಾರದಲ್ಲಿ ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಇದಕ್ಕೂ ಮೊದಲು ಜೊಲ್ಲೆ ಉದ್ಯೋಗ ಸಮೂಗ ಸಂಸ್ಥೆಯ ಬಿರೇಶ್ವರ ಸಹಕಾರಿ ಬ್ಯಾಂಕ್ ಹಾಗೂ ಸಹಕಾರಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ 1485 ಆಶಾ ಕಾರ್ಯಕರ್ತರಿಗೆ ಒಬ್ಬರಿಗೆ 3 ಸಾವಿರ ರೂ.ಗಳಂತೆ 44.40 ಲಕ್ಷ ರೂ.ಗಳ ಚೆಕ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಇದ್ದರು.

  • ಜೀವ ಲೆಕ್ಕಿಸದೆ ರಭಸದಿಂದ ಹರಿಯುವ ನದಿ ದಾಟಿ ಸೇವೆ ಸಲ್ಲಿಸ್ತಿದ್ದಾರೆ ಆಶಾ ಕಾರ್ಯಕರ್ತೆಯರು

    ಜೀವ ಲೆಕ್ಕಿಸದೆ ರಭಸದಿಂದ ಹರಿಯುವ ನದಿ ದಾಟಿ ಸೇವೆ ಸಲ್ಲಿಸ್ತಿದ್ದಾರೆ ಆಶಾ ಕಾರ್ಯಕರ್ತೆಯರು

    ಮಂಗಳೂರು: ಕೊರೊನಾ ಮಹಾಸಂಕಷ್ಟದ ಕಾಲದಲ್ಲಿ ಆಶಾ ಕಾರ್ಯಕರ್ತೆಯರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಪ್ರತಿನಿತ್ಯ ನೂರಾರು ಅಡೆತಡೆಗಳನ್ನು ಎದುರಿಸಿ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಕುಗ್ರಾಮಗಳಿಗೆ ಭೇಟಿ ನೀಡಿ ಕೆಲಸ ಮಾಡುತ್ತಿದ್ದಾರೆ.

    ಬೆಳ್ತಂಗಡಿ ತಾಲೂಕಿನ ನಕ್ಸಲ್ ಪೀಡಿತ ಗ್ರಾಮ ಸುಲ್ಕೇರಿಯ ಕೊರಗ ಕಾಲೋನಿಗೆ ಆಶಾ ಕಾರ್ಯಕರ್ತೆಯರು ತೆರಳುವುದೇ ಮಹಾ ಸವಾಲು. ರಭಸದಿಂದ ಹರಿಯುವ ನದಿ ಒಂದೆಡೆಯಾದರೆ ಕೊರೊನಾ ಭೀತಿ ಇನ್ನೊಂದೆಡೆ. ಇಷ್ಟಾದರೂ ಜೀವ ಕೈಯಲ್ಲಿ ಹಿಡಿದು ಕಾಲು ಸೇತುವೆಯಲ್ಲಿ ನದಿ ದಾಟಿ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ.

    ಕೊರಗ ಕಾಲೋನಿಯಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಕೆಲ ಕುಟುಂಬಗಳಿಗೆ ಡೆಂಗ್ಯೂ ಸೇರಿದಂತೆ ಜ್ವರದ ಲಕ್ಷಣಗಳೂ ಕಾಣಿಸಿಕೊಂಡಿದೆ. ಮಳೆಯ ನಡುವೆ ರಭಸದಿಂದ ಹರಿಯುವ ನದಿಯನ್ನು ದಾಟಿ ಚಿಕಿತ್ಸೆಗೆ ಹೋಗೋದು ಅಸಾಧ್ಯವಾಗಿರುವುದರಿಂದ ಆಶಾ ಕಾರ್ಯಕರ್ತೆಯರು ಪ್ರತಿದಿನ ಆ ಭಾಗಗಕ್ಕೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಆಶಾ ಕಾರ್ಯಕರ್ತಯರ ನಿಸ್ವಾರ್ಥ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.