Tag: Asha Health Activist

  • ವಿವಿಧ ಬೇಡಿಕೆ ಈಡೇರಿಕೆಗೆ ಆಶಾ ಕಾರ್ಯಕರ್ತರ ಆಗ್ರಹ- ಮೌರ್ಯ ಸರ್ಕಲ್‍ನಲ್ಲಿ ಪ್ರತಿಭಟನೆ

    ವಿವಿಧ ಬೇಡಿಕೆ ಈಡೇರಿಕೆಗೆ ಆಶಾ ಕಾರ್ಯಕರ್ತರ ಆಗ್ರಹ- ಮೌರ್ಯ ಸರ್ಕಲ್‍ನಲ್ಲಿ ಪ್ರತಿಭಟನೆ

    ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಕಳೆದ 20 ದಿನಗಳಿಂದ ಹೋರಾಟ ಮಾಡುತ್ತಿದ್ದು, ಇಂದು ನಗರದ ಮೌರ್ಯ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಮಾಸಿಕ ವೇತನ 12 ಸಾವಿರ ನಿಗದಿ ಹಾಗೂ ಕೊರೊನಾ ಸರ್ವೆ ಕೆಲಸ ಮಾಡುವ ಸಂದರ್ಭದಲ್ಲಿ ಸೂಕ್ತ ರಕ್ಷಣಾ ಸಾಮಾಗ್ರಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರ, ಹೊಸಕೋಟೆ, ದೊಡ್ಡಬಳ್ಳಾಪುರ, ನೆಲಮಂಗಲ ಸೇರಿದಂತೆ ಹಲವು ಭಾಗಗಳಿಂದ ಆಶಾ ಕಾರ್ಯಕರ್ತೆಯರು ಆಗಮಿಸಿದ್ದಾರೆ.

    ಸರ್ಕಾರ ಈಗ ನೀಡುತ್ತಿರುವ ಗೌರವ ಧನ ಸರಿಯಾಗಿ ಸಿಗುತ್ತಿಲ್ಲ. ಕೇವಲ 6 ಸಾವಿರ ರೂ ಗೌರವ ಧನ ಮಾತ್ರ ನೀಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ಹಣ ನಿಗಧಿಯಾಗಬೇಕು. ಕೊರೊನಾದಿಂದ ರಕ್ಷಣೆ ಮಾಡಿಕೊಳ್ಳಲು ಸುರಕ್ಷಿತ ಸಾಮಾಗ್ರಿಗಳನ್ನೂ ಮೊದಲು ಕೊಡಬೇಕು. ತಕ್ಷಣವೇ ಈ ಬೇಡಿಕೆಗಳನ್ನು ಈಡೇರಿಸುವಂತೆ ಆಶಾ ಕಾರ್ಯಕರ್ತೆಯರು ಒತ್ತಾಯ ಮಾಡಿದ್ದಾರೆ.

    ಬೆಂಗಳೂರು ಮಾತ್ರವಲ್ಲದೇ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಸಿಎಂ ಮನೆಗೆ ಮುತ್ತಿಗೆ ಹಾಕುವುದಾಗಿಯೂ ಆಶಾ ಕಾರ್ಯಕರ್ತರು ತಿಳಿಸಿದ್ದಾರೆ. ಕಳೆದ 20 ದಿನಗಳಿಂದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಅವರೊಂದಿಗೆ ಚರ್ಚೆ ನಡೆಸಿಲ್ಲ.

  • ಆಶಾ ಕಾರ್ಯಕರ್ತೆಯ ಕಾರ್ಯಕ್ಕೆ ರಾಷ್ಟ್ರೀಯ ಆರೋಗ್ಯ ಮಿಷನ್‍ನಿಂದ ಪ್ರಶಂಸೆ

    ಆಶಾ ಕಾರ್ಯಕರ್ತೆಯ ಕಾರ್ಯಕ್ಕೆ ರಾಷ್ಟ್ರೀಯ ಆರೋಗ್ಯ ಮಿಷನ್‍ನಿಂದ ಪ್ರಶಂಸೆ

    ಶಿವಮೊಗ್ಗ: ಕೊರೊನಾ ಸೋಂಕಿನಿಂದ ಸ್ನೇಹಿತರು, ಆಪ್ತರು ಹಾಗೂ ಸಂಬಂಧಿಕರೇ ದೂರ ಸರಿಯುತ್ತಿರುವ ಸಮಯದಲ್ಲಿ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ರಾಜ್ಯದ ದಿಟ್ಟ ಮಹಿಳೆಯೊಬ್ಬರಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಅತ್ಯುತ್ತಮ ಆಶಾ ಕಾರ್ಯಕರ್ತೆ ಎಂದು ಪ್ರಶಂಸೆ ವ್ಯಕ್ತಪಡಿಸಿದೆ.

    ಶಿವಮೊಗ್ಗದ ತುಂಗಾನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಮೂರು ವರ್ಷದಿಂದ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಅನ್ನಪೂರ್ಣ ಅವರ ಸೇವೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಪ್ರಶಂಸೆ ವ್ಯಕ್ತಪಡಿಸಿದೆ. ಕೊರೊನಾ ಸಮಯದಲ್ಲಿ ಕಂಟೈನ್ಮೆಂಟ್ ಝೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದು ಸವಾಲಿನ ಕೆಲಸವಾಗಿರುತ್ತದೆ. ಕೆಲವೊಮ್ಮೆ ತಮ್ಮ ಪ್ರದೇಶಗಳನ್ನು ಸೀಲ್‍ಡೌನ್ ಮಾಡಿದ ಕಾರಣಕ್ಕೆ ಸ್ಥಳೀಯರು ಪ್ರತಿಭಟನೆ ಮಾಡುತ್ತಾರೆ. ಆದರೆ ಇಂತಹ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆ ಅನ್ನಪೂರ್ಣ ಅವರು ಸ್ಥಳೀಯರನ್ನು ಮನವೊಲಿಸಿ ಕೊರೊನಾ ಬಗ್ಗೆ ತಿಳಿ ಹೇಳಿದ್ದಾರೆ.

    ಬಡಾವಣೆಗೆ ಹೊರಗಿನಿಂದ ಯಾರಾದರೂ ಬಂದರೆ ಕ್ವಾರಂಟೈನ್ ಮಾಡಲು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಇವರ ಕಾರ್ಯವನ್ನು ಗುರುತಿಸಿದ ರಾಷ್ಟ್ರೀಯ ಆರೋಗ್ಯ ಮಿಷನ್ ಆಶಾ ಕಾರ್ಯಕರ್ತೆ ಅನ್ನಪೂರ್ಣ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದೆ. ಕೊಳಚೆ ಪ್ರದೇಶದಲ್ಲಿ 3,000 ಜನರು ವಾಸವಿದ್ದು, ಇಲ್ಲಿ 10 ಕಂಟೈನ್ಮೆಂಟ್ ಝೋನ್‍ಗಳಿವೆ. ಕೊರೊನಾ ಟಾಸ್ಕನ್ನು ಅನ್ನಪೂರ್ಣ ಅವರು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಯಾರೇ ಬಂದರೂ ಕೂಡಲೇ ಅಲ್ಲಿಗೆ ತೆರಳುವ ಅನ್ನಪೂರ್ಣ ಮಾಹಿತಿ ಕಲೆ ಹಾಕುತ್ತಾರೆ. ಲಕ್ಷಣಗಳ ಕುರಿತು ಪರಿಶೀಲನೆ ನಡೆಸಿ ಕ್ವಾರಂಟೈನ್‍ಗೆ ಕಳುಹಿಸುವ ಕಾರ್ಯ ಮಾಡುತ್ತಾರೆ.

    ಇದರೊಂದಿಗೆ ಅನ್ನಪೂರ್ಣ ಅವರು ಕಾರ್ಯ ನಿರ್ವಹಿಸುವ ವೇಳೆ ಬಾಲ್ಯ ವಿವಾಹವೊಂದನ್ನೂ ಕೂಡ ತಡೆದಿದ್ದರು. ಬಾಲಕಿಯೊಬ್ಬಳಿಗೆ ವಿವಾಹ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಅನ್ನಪೂರ್ಣ ಅವರು ಎರಡೂ ಕುಟುಂಬಗಳ ಮನವೊಲಿಸಿ ವಿವಾಹ ನಿಲ್ಲಿಸಿದ್ದರು. ಕೊರೊನಾ ವೈರಸ್ ರಾಜ್ಯಕ್ಕೆ ಕಾಲಿಡುವುದಕ್ಕೂ ಮುನ್ನವೂ ಅನ್ನಪೂರ್ಣ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನುತ್ತಾರೆ ಆರೋಗ್ಯ ಸಿಬ್ಬಂದಿ.

    ಒಬ್ಬ ಆಶಾ ಕಾರ್ಯಕರ್ತೆಯ ಸೇವೆಯನ್ನು ಇದೇ ಮೊದಲ ಬಾರಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಗುರುತಿಸಿರುವುದಕ್ಕೆ ಇತರೆ ಆಶಾ ಕಾರ್ಯಕರ್ತೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಶಾ ಕಾರ್ಯಕರ್ತೆ ಅನ್ನಪೂರ್ಣ ಅವರ ಸೇವೆಯಿಂದ ನಾವು ಕೆಲಸ ನಿರ್ವಹಿಸಲು ಸ್ಫೂರ್ತಿ ಬಂದಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.