Tag: Asha Activists

  • ಇವರುಗಳಿಗೆ ಹೆದರಿಕೊಂಡು ನಾನು ನನ್ನ ಕೆಲಸ ಬಿಡಲ್ಲ: ಆಶಾಕಾರ್ಯಕರ್ತೆ

    ಇವರುಗಳಿಗೆ ಹೆದರಿಕೊಂಡು ನಾನು ನನ್ನ ಕೆಲಸ ಬಿಡಲ್ಲ: ಆಶಾಕಾರ್ಯಕರ್ತೆ

    – ಮನೆಯವರು ಕೆಲಸ ಬಿಡು ಅಂತಿದ್ದಾರೆ
    – ಸಮಾಜಕ್ಕೋಸ್ಕರ ಮಾಡೋ ಸೇವೆ ಬಿಡಲ್ಲ

    ಮೈಸೂರು: ನನ್ನ ಮನೆಯವರು ಘಟನೆ ನಡೆದ ಬಳಿಕ ಕೆಲಸ ಬಿಡುವಂತೆ ಹೇಳುತ್ತಿದ್ದಾರೆ. ಆದರೆ ಇವರುಗಳಿಗೆ ಹೆದರಿಕೊಂಡು ನಾನು ಸಮಾಜಕ್ಕೋಸ್ಕರ ಮಾಡುವ ಕೆಲಸವನ್ನು ಬಿಡಲ್ಲ ಎಂದು ಆಶಾ ಕಾರ್ಯಕರ್ತೆ ಸುಮಯಾ ಫಿರ್ದೋಶ್ ತಿಳಿಸಿದ್ದಾರೆ.

    ಘಟನೆಯ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾವು ಕೋವಿಡ್ 19 ಸರ್ವೆ ಮಾಡುತ್ತಿದ್ದೇವೆ. ಯಾರಿಗೆ ಕೊರೊನಾ ಲಕ್ಷಣಗಳಿವೆ ಎಂಬುದರ ಬಗ್ಗೆ ಸರ್ವೆ ಮಾಡುತ್ತಿದ್ದೇವೆ. ಸರ್ವೆಯಲ್ಲಿ ಮನೆಯ ಯಜಮಾನನ ಹೆಸರು, ಅವರ ಕುಟುಂಬದಲ್ಲಿರುವ ಸದಸ್ಯರ ಹೆಸರು, ಅವರ ಕಾಂಟ್ಯಾಕ್ಟ್ ನಂಬರ್ ತೆಗೆದುಕೊಳ್ಳುತ್ತೇವೆ. ಹಾಗೆಯೇ 60 ವರ್ಷ ದಾಟಿದವರು ಅವರ ಕುಟುಂಬದಲ್ಲಿದ್ದವರಿಗೆ ಯಾವುದಾದರೂ ಕಾಯಿಲೆ ಇದೆಯಾ?, ಇನ್ನು ಅದರಲ್ಲಿ ಬಿಪಿ, ಶುಗರ್ ಇದ್ದವರಿದ್ದರೆ ಅವರ ನಂಬರ್ ಕೂಡ ತೆಗೆದುಕೊಳ್ಳುತ್ತೇವೆ ಎಂದರು.

    ನಮ್ಮ ಏರಿಯಾದಲ್ಲಿ ಜನ ತುಂಬಾನೇ ಸಹಕಾರ ನೀಡುತ್ತಾರೆ. ನನಗೆ ಆರು ವರ್ಷದ ಸರ್ವಿಸ್ ಇದೆ. ಆದರೆ ಇಂತಹ ಘಟನೆ ಯಾವತ್ತೂ ಆಗಿರಲಿಲ್ಲ. ಇದೇ ಮೊದಲ ಬಾರಿ ನನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ಸುಮಯಾ ತನ್ನ ಅಳಲು ತೋಡಿಕೊಂಡಿದ್ದಾರೆ.

    ಇಲ್ಲಿ ನನ್ನ ತಪ್ಪು ಏನಿಲ್ಲ. ನಾನು ಬರೀ ಮಾಸ್ಕ್ ಹಾಕಿಕೊಳ್ಳಿ ಹಾಗೆಯೇ ಅಂತರ ಕಾಯ್ದುಕೊಳ್ಳಿ ಅಂತ ಹೇಳಿದ ಅಷ್ಟೆ. ಅದನ್ನು ದೊಡ್ಡ ವಿಷಯವಾಗಿ ಮಾಡಿದ್ರು. ನನ್ನ ತಂದೆಯ ಬಳಿ ಹೋಗಿ ಗಲಾಟೆ ಮಾಡಿದ್ರು. ಈ ಹಿಂದೆಯೂ ಆರೋಪಿ ಖಲೀಲ್ ಎಂಬಾತ ನನ್ನ ಕೈಯಿಂದ ಫೋನ್ ಕಿತ್ಕೊಂಡು ಗಲಾಟೆ ಮಾಡಿದ್ದನು. ಆಗ ನಾನು ಯಾರಿಗೂ ಹೇಳಿರಲಿಲ್ಲ. ಇಂತಹ ಘಟನೆಗಳು ನಡೆಯುತ್ತಲೇ ಇವೆ ಎಂದು ಸುಮ್ಮನಾಗಿದ್ದೆ. ಆದರೆ ನಿನ್ನೆ ನಡೆದ ಘಟನೆಯಿಂದ ನನಗೆ ನಿದ್ದೆನೇ ಬಂದಿಲ್ಲ. ಇಷ್ಟೆಲ್ಲಾ ಆದರೂ ನಾನು ಕೆಲಸ ಬಿಟ್ಟಿಲ್ಲ. ಈಗಲೂ ನಾನು ಫೀಲ್ಡ್ ನಲ್ಲಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

    ಈ ಕಾಲದಲ್ಲಿ ಒಳ್ಳೆಯ ಕೆಲಸ ಮಾಡಿದಕ್ಕೋದ್ರೆ ಕೆಟ್ಟದು ಆಗುತ್ತೆ. ಇವರ ಆರೋಗ್ಯಕ್ಕೋಸ್ಕರ ನಾವು ಉರಿ ಬಿಸಿಲಲ್ಲಿ ಮನೆ ಮನೆ ಸುತ್ತುತ್ತಿದ್ದೇವೆ. ಆಗ ಇಂತಹ ಘಟನೆಗಳು ನಡೆದರೆ ಬೇಜಾರಾಗುತ್ತೆ, ಮನಸ್ಸಿಗೆ ನೋವಾಗುತ್ತದೆ. ಯಾವಾಗ ಜಿಲ್ಲೆಯಲ್ಲಿ ಹಕ್ಕಿ ಜ್ವರ ಬಂದಿದೆಯೋ ಅವತ್ತಿನಿಂದ ನಿರಂತರವಾಗಿ ನಾವು ಸರ್ವೆ ಕಾರ್ಯ ಮಾಡುತ್ತಲೇ ಇದ್ದೇವೆ. ಇಲ್ಲಿಯವರೆಗೆ ಸುಮಾರು 600 ಮನೆ ಸರ್ವೆ ಮಾಡಿದ್ದೇವೆ ಎಂದರು.

    ಈ ಘಟನೆಯ ನಂತರ ಮನೆಯವರು ಕೆಲಸ ಬಿಟ್ಟು ಬಿಡು, ಜೀವ ಹೋದರೆ ಏನು ಮಾಡೋದು ಅಂತ ಹೇಳಿದ್ರು. ಪ್ರಾಣ ಹೋದರೂ ಪರವಾಗಿಲ್ಲ. ಆದರೆ ನಾನು ಕೆಲಸ ಬಿಡಲ್ಲ. ಇವರುಗಳಿಗೆ ಹೆದರಿಕೊಂಡು ನಾನು ಯಾಕೆ ಕೆಲಸ ಬಿಡಲಿ. ನಾವು ಜನರ ಸೇವೆ ಮಾಡುತ್ತಿದ್ದೇವೆ. ಇಲ್ಲಿ ತುಂಬಾ ಬಡವರು ಕೂಡ ಇದ್ದಾರೆ. ಈ ಕೋವಿಡ್ 19 ಸರ್ವೆಯಲ್ಲಿ ಯಾರ ಮನೆಯಲ್ಲಿ ಕಷ್ಟ ಇದೆ ಅಂತ ಗೊತ್ತಾಗುತ್ತಿದೆ. ಕೆಲವರು ಪರಿಸ್ಥಿತಿ ಹೇಗಿದೆ ಅಂತ ಕೇಳಿದ ತಕ್ಷಣ ಅಳುತ್ತಾರೆ ಎಂದು ತಿಳಿಸಿದರು.

  • ಮತ್ತೆ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ

    ಮತ್ತೆ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ

    ಚಿಕ್ಕೋಡಿ: ಆರೋಗ್ಯ ಮಾಹಿತಿ ಕಲೆ ಹಾಕಲು ಹೋಗಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಮತ್ತೆ ಹಲ್ಲೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಆರೋಗ್ಯ ಮಾಹಿತಿ ಕಲೆ ಹಾಕಲು ಹೋಗಿದ್ದ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.

    ಪಟ್ಟಣದಲ್ಲಿ ನಾಲ್ಕು ಕೊರೊನಾ ಪಾಸಿಟಿವ್ ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮನೆ ಮನೆ ಆರೋಗ್ಯ ಸರ್ವೆ ಕಾರ್ಯಕ್ಕೆ ಮುಂದಾಗಿದೆ. ಇದೇ ಕೆಲಸ ನಿಮಿತ್ತವಾಗಿ ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ವಾರ್ಡ್ ಗಳಿಗೆ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ವಾರ್ಡ್ ನಂಬರ್ 3 ಹಾಗೂ 6ರಲ್ಲಿ ಮಾಹಿತಿ ಕಲೆ ಹಾಕಲು ಹೋದಾಗ ಕಿಡಿಗೇಡಿಗಳು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.

    ಹಲ್ಲೆ ನಡೆಯುತ್ತಿದ್ದಂತೆ ಆಶಾ ಕಾರ್ಯಕರ್ತೆಯರು ಕುಡಚಿ ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡು ತಮಗೆ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದಾರೆ. ಸ್ಥಳಕ್ಕೆ ರಾಯಬಾಗ ತಹಶೀಲ್ದಾರ್ ಹಾಗೂ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಸಾಧಿಕ್ ನಗರದಲ್ಲಿ ಮಾಹಿತಿ ಕಲೆಹಾಕಲು ಹೋದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಲಾಗಿತ್ತು.

    ಈ ಬಗ್ಗೆ ಚಿಕ್ಕೋಡಿಯಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಆಶಾ ಕಾರ್ಯಕರ್ತೆಯರಿಗೆ ಸಹಕಾರ ಕೊಡುವ ಕೆಲಸ ಪ್ರತಿಯೊಬ್ಬ ನಾಗರಿಕರು ಮಾಡಬೇಕು. ಕುಡಚಿ ಪಟ್ಟಣದಲ್ಲಿ ಮಾಹಿತಿ ಕೇಳಿದ್ದಕ್ಕೆ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಿರುವುದು ಗಮನಕ್ಕೆ ಬಂದಿದೆ. ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಸರ್ಕಾರದ ನಿರ್ದೇಶನ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ತೊಂದರೆ ಕೊಟ್ಟರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು.

  • ಹೂ ಚೆಲ್ಲಿ ಆಶಾ ಕಾರ್ಯಕರ್ತೆಯರನ್ನು ಸ್ವಾಗತಿಸಿದ ಜನ

    ಹೂ ಚೆಲ್ಲಿ ಆಶಾ ಕಾರ್ಯಕರ್ತೆಯರನ್ನು ಸ್ವಾಗತಿಸಿದ ಜನ

    – ಭಾವುಕರರಾದ ಆರೋಗ್ಯ ಯೋಧರು

    ಯಾದಗಿರಿ: ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಯಾದಗಿರಿಯ ಜನ ಹೂಮಳೆಯ ಸ್ವಾಗತ ಮಾಡಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸಕ್ಕೆ ಮುಂದಾಗಿದ್ದಾರೆ.

    ಇತ್ತೀಚೆಗಷ್ಟೇ ಆರೋಗ್ಯ ತಪಾಸಣೆಗೆ ತೆರಳಿದ್ದ ಆಶಾ ಕಾರ್ಯಕರ್ತರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆಸಿ ಕೆಲವರು ವಿಕೃತಿ ಮೆರೆದಿದ್ದರು. ಆದರೆ ಯಾದಗಿರಿ ಜಿಲ್ಲೆಯ ಬೆಳೆಗೇರಾ ಗ್ರಾಮದಲ್ಲಿ ಕೊರೊನಾ ಜಾಗೃತಿಗೆ ತೆರಳಿದ್ದ ಆಶಾ ಕಾರ್ಯಕರ್ತೆರಿಗೆ ಗ್ರಾಮದ ಎಲ್ಲಾ ಓಣಿಗಳಲ್ಲಿ ಕೈಯಲ್ಲಿ ಹೂ ಹಿಡಿದು ನಿಂತು ಅವರ ಮೇಲೆ ಗ್ರಾಮಸ್ಥರೆಲ್ಲರೂ ಹೂ ಚೆಲ್ಲಿ ಭರ್ಜರಿ ಸ್ವಾಗತ ಕೋರಿದ್ದಾರೆ.

    ಈ ವೇಳೆ ಭಾರತಾಂಭೆಗೆ ಜಯ ಘೋಷಣೆ ಕೂಗಿದ್ದ ಗ್ರಾಮಸ್ಥರು, ಆಶಾ ಕಾರ್ಯಕರ್ತೆ ಜೊತೆ ನಾವಿದ್ದೇವೆ ಎಂದು ಕೂಗಿ ಹೇಳಿದ್ದಾರೆ. ಇತ್ತ ಜನರ ಪ್ರೀತಿ ಕಂಡು ಆಶಾ ಕಾರ್ಯಕರ್ತೆಯರು ಭಾವುಕಗಿದ್ದಾರೆ.