ಸಸ್ಪೆನ್ಸ್ ಥ್ರಿಲ್ಲರ್ ಕಥಾ ವಸ್ತು ಹೊಂದಿರುವ ಚಿತ್ರ `ಖನನ’ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಎಸ್ ನಲಿಗೆ ಪ್ರೊಡಕ್ಷನ್ ಅಡಿಯಲ್ಲಿ ಶ್ರೀನಿವಾಸ ರಾವ್ ಪ್ರಥಮ ನಿರ್ಮಿಸಿ, ರಾಧ ಅವರ ನಿರ್ದೇಶನದ ಮೊದಲ ಚಿತ್ರವಾದ ಖನನಕ್ಕೆ ನಿರ್ದೇಶಕರೇ ಚಿತ್ರಕಥೆ ಹಾಗೂ ಸಂಭಾಷಣೆ ಸಹ ಬರೆದಿದ್ದಾರೆ. ರವಿಕಾಂತ್ ಜಿ ಅವರು ಈ ಚಿತ್ರಕ್ಕೆ ಕಥೆ ರಚಿಸಿದ್ದಾರೆ. ನಿರ್ಮಾಪಕ ಶ್ರೀನಿವಾಸ ರಾವ್ ಅವರು ಬಹಳ ವರ್ಷಗಳಿಂದ ಕನ್ನಡ ಚಿತ್ರಗಳ ಚಿತ್ರೀಕರಣ ಉಪಕರಣಗಳನ್ನು ಒದಗಿಸುತ್ತಾ ಬಂದಿರುವ ಉದ್ಯಮಿ.
ಪ್ರೀತಿ, ವಿಶ್ವಾಸ, ನಂಬಿಕೆ, ಸ್ವಾತಂತ್ರ್ಯದ ವಿಚಾರಗಳನ್ನು ಹೊಂದಿರುವ ಐದು ವಿಭಿನ್ನ ಶೇಡ್‍ಗಳಲ್ಲಿ ನಟಿಸುವ ಮೂಲಕ ಆರ್ಯವರ್ಧನ ನಾಯಕನಟನಾಗಿ ಪರಿಚಯವಾಗುತ್ತಿದ್ದಾರೆ. ಈ ಹಿಂದೆ ಇವರು `ಮಾರ್ಚ್ 22′ ಸಿನಿಮಾದಲ್ಲಿ ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಏನೋ ಹೇಳ ಹೊರಟಿದ್ದಾರೆ ಖನನ ಹೀರೋ!
ಆರ್ಯವರ್ಧನ ಜೊತೆ ನಾಯಕಿ ಆಗಿ ಕರಿಷ್ಮ ಬರುಹಾ, ಈ ಚಿತ್ರದಲ್ಲಿ ನಾಯಿಯೊಂದು ಪ್ರಮುಖ ಪಾತ್ರ ವಹಿಸಿದೆ. ಖಳ ನಟನಾಗಿ ಯುವ ಕಿಶೋರ್ ಪರಿಚಯ ಆಗುತ್ತಿದ್ದಾರೆ. ಅವಿನಾಶ್, ಓಂ ಪ್ರಕಾಷ್ ರಾವ್, ಬ್ಯಾಂಕ್ ಜನಾರ್ಧನ್, ಶ್ರೀನಿವಾಸ ರಾವ್, ವಿನಯಾ ಪ್ರಕಾಶ್, ಮೋಹ ಜುನೇಜ, ಮಹೇಶ್ ಸಿದ್ದು, ಹೊನ್ನವಳ್ಳಿ ಕೃಷ್ಣ, ಕೆಂಪೇಗೌಡ, ಆಶಿಶ್ ಜಾ ಹಾಗೂ ಇತರರು ತಾರಗಣದಲ್ಲಿದ್ದಾರೆ. ಇದನ್ನೂ ಓದಿ: ಖನನ ಮೂಲಕ ನಿರ್ದೇಶಕರಾಗಿ ಬಂದ್ರು ರಾಯಚೂರಿನ ರಾಧಾ!
ಬೆಂಗಳೂರು: ಇದೀಗ ಖನನ ಎಂಬ ವಿಶಿಷ್ಟವಾದ ಟೈಟಲ್ ಹೊಂದಿರೋ ಚಿತ್ರವೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. ಹೆಸರು ಕೇಳಿದಾಕ್ಷಣವೇ ಇದು ಯಾವ ಬಗೆಯ ಚಿತ್ರ, ಆರ್ಟ್ ಮೂವಿಯಾ ಅಂತೆಲ್ಲ ನಾನಾ ಪ್ರಶ್ನೆಗಳಿಗೆ ಕಾರಣವಾಗೋ ಖನನ ಅಪ್ಪಟ ಕಮರ್ಶಿಯಲ್ ಸೂತ್ರಗಳೊಂದಿಗೆ ಬಿಡುಗಡೆಗೆ ಸಜ್ಜಾಗಿರೋ ಚಿತ್ರ. ಇದೇ ಮೇ ತಿಂಗಳಲ್ಲಿ ರಿಲೀಸ್ ಆಗಲಿರುವ ಖನನ ತನ್ನೊಳಗೆ ಅನೇಕ ನಿಗೂಢಗಳನ್ನು ಬಚ್ಚಿಟ್ಟುಕೊಂಡಿದೆ.
ರಾಧಾ ನಿರ್ದೇಶನ ಮಾಡಿರೋ ಖನನ ಮೂಲಕ ಹೀರೋ ಆಗಿ ಎಂಟ್ರಿ ಕೊಡಲು ಆರ್ಯವರ್ಧನ್ ಸಜ್ಜಾಗಿದ್ದಾರೆ. ಈಗಾಗಲೇ ಮಾರ್ಚ್ 22 ಚಿತ್ರದ ಸಲ್ಮಾನ್ ಎಂಬ ಪಾತ್ರದ ಮೂಲಕ ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡಿರೋ ಆರ್ಯವರ್ಧನ್ ಪಾಲಿಗೆ ಹೀರೋ ಆಗಿ ಇದು ಮೊದಲ ಚಿತ್ರ. ತಾನು ಹೀರೋ ಆಗಿ ಲಾಂಚ್ ಆಗೋ ಚಿತ್ರ ವಿಶೇಷ ಕಥೆ ಹೊಂದಿರಬೇಕು ಮತ್ತು ಅದು ಸಂದೇಶವನ್ನೂ ಕೂಡಾ ರವಾನಿಸುವಂತಿರಬೇಕು ಅನ್ನೋದು ಆರ್ಯವರ್ಧನ್ ಅವರ ಆಳದ ಕನಸು. ಅದಕ್ಕೆ ತಕ್ಕುದಾದ ಕಥೆಯನ್ನು ಖನನ ಒಳಗೊಂಡಿದೆಯಂತೆ.
ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ನೋಡಿದವರನ್ನೆಲ್ಲ ಅಚ್ಚರಿಗೀಡು ಮಾಡಲಿರೋ ಇದರಲ್ಲಿ ಆರ್ಯವರ್ಧನ್ ಹಲವಾರು ಶೇಡುಗಳಿರೋ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರವೇ ಎಲ್ಲರಿಗೂ ಬದುಕಿನ ಕೆಲ ಗುಟ್ಟುಗಳನ್ನು ಹೇಳುವಂತಿದೆ. ಪ್ರತಿಕ್ಷಣವೂ ಕುತೂಹಲ ಆಚೀಚೆ ಆಗದಂತೆ ಬಿಚ್ಚಿಕೊಳ್ಳುತ್ತಾ ಸಾಗಲಿರೋ ಈ ಚಿತ್ರದಲ್ಲಿ ಹೀರೋ ಪ್ರೇಕ್ಷಕರೊಂದಿಗೆ ನೇರಾ ನೇರ ಕನೆಕ್ಟ್ ಆಗುತ್ತಾನೆ. ಅದೇ ಹೊತ್ತಲ್ಲಿ ಪ್ರೇಕ್ಷಕರಿಗೇನೋ ಹೇಳಲಿದ್ದಾನೆ. ಆ ರೋಚಕ ವಿಚಾರವೇನು ಅನ್ನೋದು ಇದೇ ಮೇ 10ರಂದು ಜಾಹೀರಾಗಲಿದೆ.
ಬೆಂಗಳೂರು: ಹೊಸಬರ ಚಿತ್ರ ಎಂದರೆ ಒಂದು ಭಾಷೆಯಲ್ಲಿ ತೆರೆ ಕಾಣಲು ಹತ್ತಾರು ಸವಾಲುಗಳೆದುರಾಗುತ್ತವೆ. ಅಂಥಾದ್ದರಲ್ಲಿ ಹೊಸಾ ಹೀರೋ ಎಂಟ್ರಿ ಕೊಡುತ್ತಿರೋ ಚಿತ್ರವೊಂದು ಏಕಕಾಲದಲ್ಲಿಯೇ ಮೂರು ಭಾಷೆಗಳಲ್ಲಿ ತಯಾರಾಗಿದೆ ಅಂದರೆ ಅಚ್ಚರಿಯಾಗದಿರಲು ಸಾಧ್ಯವೇ ಇಲ್ಲ. ಸದ್ಯ ಬಿಡುಗಡೆಗೆ ತಯಾರಾಗಿರುವ ಖನನ ಚಿತ್ರವೂ ಅದೇ ಥರದ ಅಚ್ಚರಿಗೆ ಕಾರಣವಾಗಿದೆ.
ಶ್ರೀನಿವಾಸ್ ನಿರ್ಮಾಣ ಮಾಡಿರುವ ಖನನ ಚಿತ್ರದ ಮೂಲಕ ಆರ್ಯವರ್ಧನ್ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಬಗ್ಗೆ ಎಲ್ಲೆಡೆ ಪಾಸಿಟಿವ್ ಟಾಕ್‍ಗಳೇ ಕೇಳಿ ಬರಲಾರಂಭಿದೆ. ಚಿತ್ರರಂಗ ಪಾಲಿಗೆ ತೀರಾ ಹೊಸತಾದ ಕಥೆಯೂ ಸೇರಿದಂತೆ ಖನನ ಪ್ರೇಕ್ಷಕರಿಗೆ ಹತ್ತಿರಾಗಿರೋದರ ಹಿಂದೆ ನಾನಾ ಕಾರಣಗಳಿವೆ. ಅದರಲ್ಲಿ ಈ ಚಿತ್ರ ರೂಪುಗೊಂಡಿರೋ ಅದ್ದೂರಿತನದ್ದು ಪ್ರಧಾನ ಪಾತ್ರ.
ರಾಧಾ ನಿರ್ದೇಶನ ಮಾಡಿರುವ ಈ ಚಿತ್ರ ಏಕ ಕಾಲದಲ್ಲಿಯೇ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ತಯಾರಾಗಿದೆ. ಹೊಸ ಹೀರೋ ಎಂಟ್ರಿ ಕೊಡುತ್ತಿರೋ ಚಿತ್ರವೊಂದನ್ನು ಈ ರೀತಿ ಮೂರು ಭಾಷೆಗಳಲ್ಲಿ ನಿರ್ಮಾಣ ಮಾಡಲು ಧೈರ್ಯ ಬೇಕಾಗುತ್ತದೆ. ಆದರೆ ನಿರ್ಮಾಪಕರು ಈ ಕಥೆಯನ್ನು ಮೆಚ್ಚಿಕೊಂಡು ಅಂಥಾದ್ದೊಂದು ಧೈರ್ಯ ಮಾಡಿದ್ದಾರೆ.
ಖನನ ಮೂಲಕ ಹೀರೋ ಆಗುತ್ತಿರುವ ಆರ್ಯವರ್ಧನ್ ನಿರ್ಮಾಪಕರ ಪುತ್ರ. ಆದ್ದರಿಂದಲೇ ತಮ್ಮ ಪುತ್ರನನ್ನು ಮೂರು ಭಾಷೆಗಳಲ್ಲಿ ಭರ್ಜರಿಯಾಗಿಯೇ ಲಾಂಚ್ ಮಾಡಲು ನಿರ್ಮಾಪಕ ಶ್ರೀನಿವಾಸ್ ಅವರು ಮುಂದಾಗಿದ್ದಾರೆ.
ಕನ್ನಡದ ಮಟ್ಟಿಗೆ ಹೊಸಾ ಹೀರೋ ಎಂಟ್ರಿ ಕೊಡುವ ಚಿತ್ರವೊಂದು ಈ ಪಾಟಿ ದೊಡ್ಡ ಮೊತ್ತದ ಬಜೆಟ್ಟಿನಲ್ಲಿ ನಿರ್ಮಾಣಗೊಂಡಿದ್ದು ಅಪರೂಪ. ನುರಿತ, ಕ್ರಿಯಾಶೀಲ ತಾಂತ್ರಿಕ ವರ್ಗ, ಎಲ್ಲದರಲ್ಲಿಯೂ ಅಚ್ಚುಕಟ್ಟುತನ ಹೊಂದಿರೋ ಈ ಚಿತ್ರ ತುಸು ತಡವಾದರೂ ಅದ್ಧೂರಿಯಾಗಿಯೇ ರೆಡಿಯಾಗಿ ಬಿಡುಗಡೆಗೆ ತಯಾರಾಗಿದೆ. ಖನನ ಇದೇ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.
ಬೆಂಗಳೂರು: ವಿಶಿಷ್ಟವಾದ ಟೈಟಲ್ ನಿಂದಲೇ ಸಖತ್ ಸೌಂಡ್ ಮಾಡೋ ಚಿತ್ರಗಳ ಜಮಾನ ಶುರುವಾಗಿ ಒಂದಷ್ಟು ಕಾಲವೇ ಕಳೆದಿದೆ. ಅದೇ ಸಾಲಿನಲ್ಲಿ ಮೂಡಿ ಬಂದು ಬಿಡುಗಡೆಗೆ ತಯಾರಾಗಿರುವ ಚಿತ್ರ ಖನನ. ಶೀರ್ಷಿಕೆಯೇ ಇಷ್ಟು ವಿಶಿಷ್ಟವಾಗಿರುವಾಗ ಅಂಥಾದ್ದೇ ವಿಶೇಷವಾದ ಕಥೆಯನ್ನೂ ಈ ಚಿತ್ರ ಹೊಂದಿದೆ ಅಂತ ಯಾರಿಗಾದರೂ ಅನ್ನಿಸದಿರೋದಿಲ್ಲ. ನಿಜಕ್ಕೂ ಖನನ ಕನ್ನಡ ಚಿತ್ರರಂಗಕ್ಕೆ ಮೈಲಿಗಲ್ಲಾಗುವಂಥಾ ಕಥೆ, ಹೊಸತನದ ನಿರೂಪಣೆಯನ್ನ ಹೊಂದಿದೆ. ಏಕಕಕಾಲದಲ್ಲಿಯೇ ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ತಯಾರಾಗಿರೋ ಈ ಚಿತ್ರದ ಮೂಲಕವೇ ಆರ್ಯವರ್ಧನ್ ನಾಯಕ ನಟನಾಗಿ ಎಂಟ್ರಿ ಕೊಡಲು ತಯಾರಾಗಿದ್ದಾರೆ.
ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಆರ್ಯವರ್ಧನ್ ಪಾಲಿಗೆ ಖನನ ಎಂಬುದು ಬಹುದಿನದ ಕನಸೊಂದನ್ನು ನನಸು ಮಾಡಿದ ಚಿತ್ರ. ನಟಿಸೋ ಚಿತ್ರಗಳ ಸಂಖ್ಯೆ ಕಡಿಮೆಯಾದರೂ ಪರವಾಗಿಲ್ಲ ಆದರೆ ವಿಶಿಷ್ಟ ಕಥೆಗಳಲ್ಲಿಯೇ ಪಾತ್ರವಾಗಬೇಕೆಂಬಂಥಾ ತುಡಿತ ಹೊಂದಿರುವವರು ಆರ್ಯವರ್ಧನ್. ಈ ಚಿತ್ರದ ನಿರ್ಮಾಪಕರಾದ ಶ್ರೀನಿವಾಸ್ ರಾವ್ ಅವರ ಪುತ್ರರಾದ ಆರ್ಯ, ಸಾಕಷ್ಟು ಸೈಕಲ್ಲು ಹೊಡೆದೇ ಇಲ್ಲಿವರೆಗೆ ಸಾಗಿ ಬಂದಿದ್ದಾರೆ.
ತಂದೆಯೇ ಚಿತ್ರ ನಿರ್ಮಾಣ ಮಾಡೋ ಶಕ್ತಿ ಹೊಂದಿರುವಾಗ ಹೀರೋ ಆಗೋದು ಸಲೀಸು ಅಂತ ಯಾರಾದರೂ ಅಂದುಕೊಂಡರೆ ಅದು ನಿಜಕ್ಕೂ ಸುಳ್ಳು. ಯಾಕೆಂದರೆ, ಈಗ ನಿರ್ಮಾಪಕರಾಗಿ ಮಗನ ಕನಸಿಗೆ ಸಾಥ್ ನೀಡಿರೋ ತಂದೆ ಶ್ರೀನಿವಾಸ್ ರಾವ್ ಅವರೂ ಬಣ್ಣದ ಕನಸು ಕಟ್ಟಿಕೊಂಡು ಸಾಕಷ್ಟು ಶ್ರಮ ವಹಿಸಿದ್ದಾರೆ. ಅದೇ ಹಾದಿಯಲ್ಲಿ ಆರ್ಯವರ್ಧನ್ ಕೂಡಾ ಪರಿಶ್ರಮದಿಂದಲೇ ಹೀರೋ ಆಗಿದ್ದಾರೆ.
ವರ್ಷಗಳ ಹಿಂದೆ ಮಾರ್ಚ್ 22 ಎಂಬ ಚಿತ್ರವೊಂದು ತೆರೆ ಕಂಡಿತ್ತಲ್ಲಾ? ಎಲ್ಲರ ಮೆಚ್ಚುಗೆ ಗಳಿಸಿಕೊಂಡು ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಆ ಚಿತ್ರದಲ್ಲಿ ಸಲ್ಮಾನ್ ಎಂಬ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಚಿತ್ರ ನೋಡಿದವರ್ಯಾರೂ ಆ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ಆ ಪಾತ್ರಕ್ಕೆ ಅಷ್ಟೊಂದು ಪರಿಣಾಮಕಾರಿಯಾಗಿ ಜೀವ ತುಂಬಿದ್ದವರು ಆರ್ಯವರ್ಧನ್. ಇದಕ್ಕಾಗಿ ಅವರಿಗೆ ಎಲ್ಲ ದಿಕ್ಕುಗಳಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಇದರಿಂದ ಉತ್ತೇಜಿತರಾದ ಆರ್ಯವರ್ಧನ್ ಆ ನಂತರ ಚಿಟ್ಟೆ ಎಂಬ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದರು. ಆ ಹೊತ್ತಿಗೆಲ್ಲಾ ಆರ್ಯವರ್ಧನ್ ಅವರಿಗೆ ತಮ್ಮ ಗುರಿ ಮತ್ತು ದಾರಿಗಳೆಲ್ಲವೂ ಸ್ಪಷ್ಟವಾಗಿತ್ತು.
ಒಂದೊಳ್ಳೆ ಕಥೆಯ ಮೂಲಕ ಹೀರೋ ಆಗಿ ಎಂಟ್ರಿ ಕೊಡಬೇಕೆಂದು ತಯಾರಿ ಆರಂಭಿಸಿದ್ದ ಆರ್ಯವರ್ಧನ್ ಅವರಿಗೆ ತಂದೆ ಶ್ರೀನಿವಾಸ ರಾವ್ ಸಾಥ್ ಕೊಟ್ಟಿದ್ದರು. ತಮ್ಮ ಎಸ್. ನಲಿಗೆ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿಯೇ ನಿರ್ಮಾಣ ಮಾಡೋದಾಗಿ ಹಸಿರು ನಿಶಾನೆಯನ್ನೂ ತೋರಿಸಿದ್ದರು. ಅದಕ್ಕೆ ತಕ್ಕುದಾಗಿಯೇ ನಿರ್ದೇಶಕ ರಾಧಾ ಅವರು ವಿಶಿಷ್ಟವಾದೊಂದು ಕಥೆ ಹೇಳೋದರ ಮೂಲಕ ವಿಧ್ಯುಕ್ತ ಚಾಲನೆ ಪಡೆದುಕೊಂಡಿದ್ದ ಖನನ ಚಿತ್ರವೀಗ ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ತಯಾರಾಗಿ ಬಿಡುಗಡೆಗೆ ಸಜ್ಜುಗೊಂಡಿದೆ.
ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಆರ್ಯವರ್ಧನ್ ಪಾಲಿಗೆ ಸಿನಿಮಾ ಕನಸು ಚಿಗುರಿಕೊಳ್ಳಲು ಕಾರಣವಾಗಿದ್ದೇ ತಂದೆ ಶ್ರೀನಿವಾಸ ರಾವ್ ಅವರಲ್ಲಿದ್ದ ಸಿನಿಮಾ ಪ್ರೇಮ. ಶ್ರೀನಿವಾಸ ರಾವ್ ಎಪ್ಪತ್ತರ ದಶಕದಲ್ಲಿಯೇ ನಾಯಕನಾಗಬೇಕೆಂಬ ಕನಸು ಕಂಡಿದ್ದವರು.
ಕಾಲೇಜು ದಿನಗಳಲ್ಲಿಯೇ ನಟನಾಗೋ ಹಂಬಲದಿಂದ ನಾನಾ ಸಾಹಸ ಮಾಡಿ ಭ್ರಮನಿರಸನ ಹೊಂದಿದ್ದ ಅವರು ಆ ನಂತರದಲ್ಲಿ ತಮ್ಮದೇ ವಹಿವಾಟಿನಲ್ಲಿ ಕಳೆದು ಹೋಗಿದ್ದವರು. ಆದರೆ ತಮ್ಮೆಲ್ಲ ಕನಸು ತನ್ನ ಮಗನ ಮೂಲಕ ನನಸಾಗಲೆಂಬ ಕಾರಣದಿಂದಲೇ ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಹೀಗೆ ತಂದೆಯ ಉತ್ತೇಜನದೊಂದಿಗೇ ಬೆಳೆದು ಬಂದ ಆರ್ಯವರ್ಧನ್ ಓದಿಕೊಂಡಿದ್ದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್. ಹದಿಮೂರು ವರ್ಷಗಳ ಕಾಲ ಬಹು ಪ್ರತಿಷ್ಠಿತ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದ ಅವರು ಈಗಲೂ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದಾರೆ. ಓದಿಗೆ ಮೋಸ ಮಾಡಬಾರದೆಂಬ ಕಾರಣದಿಂದ ಅಲ್ಲಿಯೇ ತೊಡಗಿಸಿಕೊಂಡಿರೋ ಆರ್ಯವರ್ಧನ್ ಅದರ ನಡುವೆಯೂ ಸಿನಿಮಾ ನಟನೆಯತ್ತ ಆಕರ್ಷಣೆ ಹೊಂದಿದ್ದವರು. ಈ ಚಿತ್ರ ಒಪ್ಪಿಕೊಂಡ ಮೇಲೂ ರಾತ್ರಿಯೆಲ್ಲ ಕೆಲಸ ಮಾಡಿ ಬೆಳಗೆ ಸೀದಾ ಬಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೂ ಇದೆ.
ಸಂಪೂರ್ಣ ತರಬೇತಿ ಪಡೆದುಕೊಂಡೇ ನಾಯಕನಾಗಿ ಅಖಾಡಕ್ಕಿಳಿದಿರುವ ಅವರು ಯಾವುದನ್ನೇ ಆದರೆ ಒಂದು ಸಲ ಹಿಡಿದರೆ ಬಿಡುವ ಜಾಯಮಾನದವರಲ್ಲ. ಮೊದಲ ಚಿತ್ರದಲ್ಲಿಯೇ ಇವರ ಸಮರ್ಪಣಾ ಭಾವ ಕಂಡು ನಿರ್ದೇಶಕರು ಸೇರಿದಂತೆ ಇಡೀ ಚಿತ್ರತಂಡದಲ್ಲೊಂದು ಮೆಚ್ಚುಗೆಯಿದೆ.
ಶಾಲಾ ಕಾಲೇಜು ದಿನಗಳಲ್ಲಿಯೇ ಕಲೆ ಮತ್ತು ಸಾಹಿತ್ಯದತ್ತ ಅಪಾರ ಒಲವು ಹೊಂದಿದ್ದ ಆರ್ಯವರ್ಧನ್ ಅವರಿಗೆ ಆ ಕಾರಣದಿಂದಲೇ ಸಿನಿಮಾ ಆಸಕ್ತಿಯೂ ರೂಪುಗೊಂಡಿದೆ. ತಾನಿಂಥಾದ್ದೇ ಚಿತ್ರ ಮಾಡಬೇಕೆಂಬ ಸ್ಪಷ್ಟತೆ ಹುಟ್ಟಿಕೊಂಡಿದ್ದು, ಕಥೆಯ ಆಯ್ಕೆಯಲ್ಲಿ ಪ್ರೌಢಿಮೆ ಸಾಧ್ಯವಾದದ್ದರ ಹಿಂದೆ ಓದಿನ ಪಾತ್ರವಿದೆ ಅನ್ನೋದು ಆರ್ಯ ಅಭಿಪ್ರಾಯ.
ತಾನು ಯಾವ ಚಿತ್ರವನ್ನೇ ಮಾಡಿದರೂ ಅದರಲ್ಲಿ ಸಮಾಜಕ್ಕೇನಾದರೂ ಸಂದೇಶ ಇರಬೇಕೆಂಬ ಕಾಳಜಿ ಹೊಂದಿರುವ ಅವರ ಪಾಲಿಗೆ ಖನನ ಮೂಲಕ ಅಂಥಾದ್ದೇ ಕಥೆ ಸಿಕ್ಕಿದೆ. ಕನ್ನಡದ ಮಟ್ಟಿಗೆ ಅತ್ಯಂತ ಅಪರೂಪದ ಈ ಚಿತ್ರದ ಮೂಲಕ ತಮಗೆ ಗ್ರ್ಯಾಂಡ್ ಓಪನಿಂಗ್ ಸಿಗಲಿದೆ ಎಂಬ ಭರವಸೆಯೂ ಅವರಲ್ಲಿದೆ.
ಖನನ ಎಂಬುದು ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ. ಚೆಂದದ ಕಥೆ ಹೇಳುತ್ತಲೇ ಬದುಕಿನ ವಾಸ್ತವ ದಿಗ್ದರ್ಶನ ಮಾಡಿಸುವಂಥಾ ಈ ಚಿತ್ರದಲ್ಲಿ ಸಾಹಸ, ಪ್ರೀತಿ ಪ್ರೇಮ ಸೇರಿದಂತೆ ಎಲ್ಲ ಅಂಶಗಳೂ ಇವೆ. ಪಕ್ಕಾ ಕಮರ್ಶಿಯಲ್ ಜಾನರಿನಲ್ಲಿಯೇ ಹಲವಾರು ಪ್ರಯೋಗಗಳು ಮತ್ತು ತಾಂತ್ರಿಕ ಶ್ರೀಮಂತಿಕೆಯಿಂದ ಖನನ ಮೂಡಿ ಬಂದಿದೆಯಂತೆ. ಈ ಹಿಂದೆ ಮಾರ್ಚ್ 22 ಚಿತ್ರದ ಮೂಲಕವೇ ಆರ್ಯವರ್ಧನ್ ಒಳ್ಳೆ ನಟ ಎಂಬುದು ಸಾಬೀತಾಗಿತ್ತು. ಖನನ ಚಿತ್ರದ ಮೂಲಕ ಅವರು ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಗೆಂದ ಮೇಲೆ ನಿರೀಕ್ಷೆಗಳು ಇದ್ದೇ ಇರುತ್ತವೆ. ಈ ಚಿತ್ರ ಇದೇ ತಿಂಗಳು ತೆರೆ ಕಾಣಲಿದೆ.
ಬೆಂಗಳೂರು: ಅಚ್ಚುಕಟ್ಟಾದ ಕಂಟೆಂಟ್ ಹೊಂದಿರುವ ಹೊಸತನದ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರು ಯಾವತ್ತಿದ್ದರೂ ಗೆಲ್ಲಿಸಿಯೇ ತೀರುತ್ತಾರೆ. ಅದರಲ್ಲಿಯೂ ಹೊಸಾ ಪ್ರಯೋಗಗಳಿಗಂತೂ ಪ್ರೇಕ್ಷಕರ ಪ್ರೋತ್ಸಾಹ ಸದಾ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ನೋಡ ಹೋದರೆ ಆರ್ಯವರ್ಧನ್ ನಾಯಕರಾಗಿ ನಟಿಸಿರುವ ಖನನ ಚಿತ್ರದ ಗೆಲುವು ನಿಚ್ಚಳವಾಗಿದೆ!
ಶೀರ್ಷಿಕೆಯ ಬಗ್ಗೆಯೇ ಪ್ರೇಕ್ಷಕರು ಆಕರ್ಷಿತರಾಗಿ ತಲೆ ಕೆಡಿಸಿಕೊಳ್ಳುವಂತೆ ಮಾಡುವಂಥಾ ಟ್ರೆಂಡ್ ಇತ್ತೀಚೆಗೆ ಶುರುವಾಗಿದೆ. ಹುಡುಕಿದರೆ ಬಹಳಷ್ಟು ಅರ್ಥವತ್ತಾದ ವಿಚಾರಗಳನ್ನು ಹೊಮ್ಮಿಸುವಂಥಾ ಶೀರ್ಷಿಕೆಗಳೂ ಹಲವಾರಿವೆ. ಖನನ ಕೂಡಾ ಅದೇ ಥರದ ಸಮ್ಮೋಹಕ ಶೀರ್ಷಿಕೆ ಹೊಂದಿರುವ ಚಿತ್ರ.
ಖನನ ಎಂಬುದು ಸಂಸ್ಕೃತ ಪದ. ಇದರ ಅರ್ಥಕ್ಕೆ ತಕ್ಕುದಾದ ಕಥೆಯನ್ನೂ ಈ ಚಿತ್ರ ಹೊಂದಿದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಖನನ ಪಕ್ಕಾ ಕಮರ್ಶಿಯಲ್ ಮಾದರಿಯಲ್ಲಿಯೇ ತಯಾರಾಗಿದೆ. ನಿರ್ದೇಶಕ ರಾಧಾ ಹೇಳಿ ಕೇಳಿ ತೆಲುಗು ಚಿತ್ರರಂಗದಲ್ಲಿ ಪಳಗಿಕೊಂಡಿರುವವರು. ಭಾರೀ ಬಜೆಟ್ಟಿನ ಸೂಪರ್ ಹಿಟ್ ಚಿತ್ರಗಳಿಗೂ ಕೆಲಸ ಮಾಡಿರುವವರು. ಆದ್ದರಿಂದಲೇ ಕನ್ನಡಕ್ಕೆ ತುಂಬಾ ಅಪರೂಪವಾಗಿರೋ ಖನನ ಕಥೆಯನ್ನವರು ಕಮರ್ಶಿಯಲ್ ರೂಪದಲ್ಲಿಯೇ ಕಟ್ಟಿ ಕೊಟ್ಟಿದ್ದಾರಂತೆ.
ಇಲ್ಲಿಯ ಕಥೆ ಬರೀ ಕಲ್ಪನೆಯ ಮೂಸೆಯಲ್ಲಿ ಅರಳಿಕೊಂಡಿರೋದಲ್ಲ. ಬದುಕಿಗೆ ಹತ್ತಿರವಾದ, ಗೊಂದಲದ ಸಿಕ್ಕು ಬಿಡಿಸುತ್ತಲೇ ಥರ ಥರದ ಸಾಕ್ಷಾತ್ಕಾರ ಮಾಡಿಸುವಂಥಾ ತಿರುಳನ್ನು ಹೊಂದಿದೆಯಂತೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ಈ ಕಥೆ ಥೇಟರಿನಿಂದ ಹೊರಬಂದ ನಂತರವೂ ಪ್ರೇಕ್ಷಕರನ್ನು ಬಿಟ್ಟೂ ಬಿಡದಂತೆ ಕಾಡುವಂತಿದೆಯಂತೆ.
ಖನನ ಚಿತ್ರದಲ್ಲಿ ಅಂಥಾದ್ದೇನಿದೆ ಅನ್ನೋದು ಮುಂದಿನ ತಿಂಗಳು ಖಂಡಿತಾ ಜಾಹೀರಾಗಲಿದೆ. ಯಾಕೆಂದರೆ ಮೇ ತಿಂಗಳಲ್ಲಿ ಈ ಚಿತ್ರ ಕನ್ನಡವೂ ಸೇರಿದಂತೆ ಮೂರು ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.