Tag: Arvind limbavali

  • ಕೋರ್ಟ್ ಮೊರೆ ಹೋದ 6 ಮಂದಿ ಸಚಿವರು – ಲಿಂಬಾವಳಿಯಿಂದ ನಡ್ಡಾ ಮಾಹಿತಿ ಸಂಗ್ರಹ

    ಕೋರ್ಟ್ ಮೊರೆ ಹೋದ 6 ಮಂದಿ ಸಚಿವರು – ಲಿಂಬಾವಳಿಯಿಂದ ನಡ್ಡಾ ಮಾಹಿತಿ ಸಂಗ್ರಹ

    – ಲಿಂಬಾವಳಿಗೆ ನಡ್ಡಾ ಪ್ರಶ್ನೆಗಳ ಮೇಲೆ ಪ್ರಶ್ನೆ

    ನವದೆಹಲಿ: ಮಾಜಿ ಸಚಿವರೊಬ್ಬರ ರಾಸಲೀಲೆ ಸಿಡಿ ಹೊರ ಬರುತ್ತಿದ್ದಂತೆಯೇ ಆರು ಮಂದಿ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಬೆನ್ನಲ್ಲೇ ಕೆಲಸದ ನಿಮಿತ್ತ ದೆಹಲಿಗೆ ಆಗಮಿಸಿರುವ ಸಚಿವ ಅರವಿಂದ ಲಿಂಬಾವಳಿಯಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಾಹಿತಿ ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. 6 ಮಂದಿ ಸಚಿವರು ಕೋರ್ಟ್ ಮೆಟ್ಟಿರುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ್ದ ಅರವಿಂದ ಲಿಂಬಾವಳಿ ಬಳಿಯಿಂದ ಜೆ.ಪಿ. ನಡ್ಡಾ ಇಂಚಿಂಚೂ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

    ಪಶ್ಚಿಮ ಬಂಗಾಳ ಚುನಾವಣೆಯ ಹಿನ್ನೆಲೆಯಲ್ಲಿ ಅರವಿಂದ ಲಿಂಬಾವಳಿ ದೆಹಲಿಗೆ ಆಗಮಿಸಿದ್ದಾರೆ. ಹೀಗೆ ಭೇಟಿ ವೇಳೆ ಜೆ.ಪಿ ನಡ್ಡಾ ಭೇಟಿ ಮಾಡಿ ಸಿಡಿ ಬಗ್ಗೆ ಚರ್ಚೆ ಮಾಡಿದ್ದಾರೆ. ಕೋರ್ಟ್ ಮೆಟ್ಟಿಲೇರಿ ತಾವೇ ತಪ್ಪಿತಸ್ಥರು ಎಂದು ಒಪ್ಪಿಕೊಂಡಂತಲ್ಲವೇ ಎಂದು ಲಿಂಬಾವಳಿಯನ್ನು ನಡ್ಡಾ ಪ್ರಶ್ನಿಸಿದ್ದಾರೆ. ಅಲ್ಲದೆ ಕೋರ್ಟಿಗೆ ಹೋಗುವ ಮುನ್ನ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿದ್ದರಾ…? ಮುಂದಿನ ನಡೆಗಳು ಏನು ಅನ್ನೊ ಬಗ್ಗೆ ಲಿಂಬಾವಳಿ ಬಳೀ ನಡ್ಡಾ ಸಮಾಲೋಚನೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಕೋರ್ಟ್ ಮೊರೆ ಹೋಗಿರುವ ಸಚಿವರು:
    ತಮ್ಮ ವಿರುದ್ಧ ಮಾಧ್ಯಮಗಳು ವರದಿ ಪ್ರಸಾರ ಮಾಡಬಾರದು ಎಂದು 6 ಮಂದಿ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್, ನಾರಾಯಣಗೌಡ, ಭೈರತಿ ಬಸವರಾಜ್ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕೆಂದು ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಆರು ಸಚಿವರಿಗೆ ಭೀತಿ ಹುಟ್ಟಿರುವುದು ಏಕೆ? ಇದ್ದಕ್ಕಿಂದ್ದಂತೆ ಯಾಕೆ ಕೋರ್ಟ್ ಮೊರೆ ಹೋಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

  • ಅರಣ್ಯ ಇಲಾಖೆಗೆ ಒಳಪಟ್ಟಿರುವ 6.5 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಕಂದಾಯ ಇಲಾಖೆಗೆ ಹಸ್ತಾಂತರ: ಲಿಂಬಾವಳಿ

    ಅರಣ್ಯ ಇಲಾಖೆಗೆ ಒಳಪಟ್ಟಿರುವ 6.5 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಕಂದಾಯ ಇಲಾಖೆಗೆ ಹಸ್ತಾಂತರ: ಲಿಂಬಾವಳಿ

    ಬೆಂಗಳೂರು: ಅರಣ್ಯ ಇಲಾಖೆಗೆ ಒಳಪಟ್ಟಿರುವ 6.5 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿದ್ದೇವೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಬೆಳಗ್ಗೆಯಿಂದಲೇ ಮಲೆನಾಡು ಭಾಗದ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರು, ಮಲೆನಾಡು ಭಾಗದ ಶಾಸಕರ ಸಭೆ ಕರೆದಿದ್ದೆ. ಮಲೆನಾಡು ಭಾಗದ ಅರಣ್ಯಕ್ಕೆ ಸಂಬಂಧಿಸಿದ ಸಭೆ ಕರೆಯುತ್ತೇನೆ ಎಂದು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಭರವಸೆ ಕೊಟ್ಟಿದ್ದೆ. ಅದರಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಜೆಡಿಎಸ್ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಸೇರಿದಂತೆ ಮಲೆನಾಡು ಹಾಗೂ ಕರಾವಳಿ ಭಾಗದ ಇಪ್ಪತ್ತು ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

    ಮಲೆನಾಡಿನ ಕೆಲವು ಭಾಗಗಳಲ್ಲಿ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಡೆತಡೆ ಕೂಡಾ ಇದೆ. ರಾಷ್ಟ್ರೀಯ ಅರಣ್ಯಕ್ಕೆ ಒಳಪಟ್ಟಿದ್ದರೆ ಕೇಂದ್ರದ ಅನುಮತಿ ಪಡೆಯಬೇಕು. ಇದು ರಾಜ್ಯದ ಪ್ರದೇಶವಾಗಿದ್ದರೆ ನಮ್ಮ ಅರಣ್ಯಾಧಿಕಾರಿಗೆ ಇದರ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇದೆ ಎಂದರು.

    ಹಕ್ಕು ಪತ್ರ ವಿತರಣೆ : ಅರಣ್ಯ ವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡುವ ವ್ಯವಸ್ಥೆ ಯನ್ನು ಕಂದಾಯ ಇಲಾಖೆ ಜೊತೆಗೂಡಿ ಮಾಡುತ್ತೇವೆ ಎಂದು ತಿಳಿಸಿದರು. ಉತ್ತರ ಕನ್ನಡ ಭಾಗದಲ್ಲಿ ಈ ಸಮಸ್ಯೆ ಸ್ವಲ್ಪ ಹೆಚ್ಚಾಗಿದೆ. ಕೆಲವು ಅರಣ್ಯ ಗಳಲ್ಲಿ ಇರುವ ಗ್ರಾಮಗಳು ಕಾಡಿನಿಂದ ಹೊರಗೆ ಸ್ಥಳಾಂತರಿಸಲು ಹಣಕಾಸಿನ ಕೊರತೆ ಇದೆ ಎಂದ ಸಚಿವರು, ಸ್ಥಳಾಂತರಕ್ಕೆ ಅರಣ್ಯ ಗ್ರಾಮ ವಾಸಿಗಳು ಒಪ್ಪಿದ್ದಾರೆ. ಮುಂದಿನ ಬಜೆಟ್ ನಲ್ಲಿ ಹಣ ಮಂಜೂರಾದರೆ ಈ ಕಾರ್ಯವನ್ನು ಪೂರ್ಣ ಗೊಳಿಸಲಾಗುವುದು ಎಂದು ಹೇಳಿದರು.

    ಆನೆ ಕಾರಿಡಾರ್ : ಆನೆ ಮತ್ತು ಮಾನವ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ. ಸಾಕಷ್ಟು ಮಂದಿ ಇದರಿಂದ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಆನೆ ಕಾರಿಡಾರ್ ಸುತ್ತ ರೈಲು ಕಂಬಿಗಳನ್ನು ಅಳವಡಿಸಲಾಗಿದೆ. ಪ್ರಾಯೋಗಿಕವಾಗಿ ಯಶಸ್ಸು ಕಂಡಿದ್ದೇವೆ. ಇದನ್ನು ಸಂಪೂರ್ಣವಾಗಿ ಮುಗಿಸುವ ನಿಟ್ಟಿನಲ್ಲಿ ಕೇಂದ್ರ ಅರಣ್ಯ ಸಚಿವ ಮತ್ತು ರೈಲ್ವೆ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.

    ವರದಿಯನ್ನು ಒಪ್ಪಿಲ್ಲ : ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಇನ್ನೂ ಒಪ್ಪಿಕೊಂಡಿಲ್ಲ. ಹಾಗಾಗಿ, ಅದರ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ಆಗಿಲ್ಲ ಎಂದು ಸಚಿವ ಲಿಂಬಾವಳಿ ಸ್ಪಷ್ಟಪಡಿಸಿದರು.

  • ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಅರವಿಂದ ಲಿಂಬಾವಳಿ ರಾಜೀನಾಮೆ

    ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಅರವಿಂದ ಲಿಂಬಾವಳಿ ರಾಜೀನಾಮೆ

    ಬೆಂಗಳೂರು: ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಭಾರತೀಯ ಜನತಾ ಪಕ್ಷದ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    ಪಕ್ಷದ `ಒಬ್ಬ ವ್ಯಕ್ತಿ, ಒಂದು ಹುದ್ದೆ’ ಎನ್ನುವ ಸಿದ್ಧಾಂತದ ಅನ್ವಯ ತಾವು ಸಚಿವ ಸ್ಥಾನ ಅಲಂಕರಿಸಿರುವುದರಿಂದ, ಪಕ್ಷದ ರಾಜ್ಯ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರಿಗೆ ಸಲ್ಲಿಸಿರುವ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

    ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸಿದ ಅಧಿಯಲ್ಲಿ ತಮಗೆ ಸಲಹೆ ಸಹಕಾರ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

  • 2023ಕ್ಕೆ ನಾವು ಏನು ಅಂತ ತೋರಿಸ್ತೇವೆ: ರೇವಣ್ಣ

    2023ಕ್ಕೆ ನಾವು ಏನು ಅಂತ ತೋರಿಸ್ತೇವೆ: ರೇವಣ್ಣ

    – ಅರವಿಂದ್ ಲಿಂಬಾವಳಿ ಥರ್ಡ್ ಕ್ಲಾಸ್

    ಹಾಸನ: ಬಿಜೆಪಿ ಉಪಾಧ್ಯಕ್ಷ ಇದಾನಲ್ಲ ಅವನು ಥರ್ಡ್ ಕ್ಲಾಸ್. ಆತ ಬಿಜೆಪಿ ಉಪಾಧ್ಯಕ್ಷ ಆಗಲಿಕ್ಕೆ ಅನ್ ಫಿಟ್ ಎಂದು ಅರವಿಂದಲಿಂಬಾವಳಿ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಜೆಡಿಎಸ್ ಮತ್ತು ಬಿಜೆಪಿ ವಿಲೀನ ಆಗುವ ಪ್ರಶ್ನೆಯೇ ಇಲ್ಲ. ದೇವೇಗೌಡರು ಬದುಕಿರುವವರೆಗೆ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ. ರಾಷ್ಟ್ರೀಯ ಪಕ್ಷಕ್ಕೆ ಹೀಗೆ ಹೇಳಿಕೆ ಶೋಭೆ ತರುವಂತಹದ್ದಲ್ಲ. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿವೆ ಹೊರತು ಬೇರೆ ಇನ್ಯಾವುದಕ್ಕೂ ಅಲ್ಲ. ಇಂತಹ ಹೇಳಿಕೆಗಳಿಂದ ಜೆಡಿಎಸ್ ಹೆದರುವುದಿಲ್ಲ ಎಂದರು.

    ಜನವರಿಯ ನಂತರ ಪಕ್ಷ ಎಂದರೇನು ಎಂದು ತೋರಿಸುತ್ತೇವೆ. ಕುಮಾರಸ್ವಾಮಿ ಮತ್ತು ದೇವೇಗೌಡರ ಜೊತೆ ಮಾತನಾಡಿದ್ದೇನೆ. ಯಾವುದೇ ಸರ್ಕಾರ ಬಂದರೂ ದೇವೇಗೌಡರ ಕುಟುಂಬಕ್ಕೆ ಕಿರುಕುಳ ನೀಡೋದು ಹೊಸತೇನಲ್ಲ. ಆದರೆ ನಾವು ಸರ್ಕಾರಕ್ಕೆ ತೊಂದರೆ ಯಾಕೆ ಕೊಡಬೇಕೆಂದು ಸುಮ್ಮನಾಗಿದ್ದೆವು ಅಷ್ಟೆ. 2023ಕ್ಕೆ ನಾವು ಏನು ಅಂತ ತೋರಿಸುತ್ತೇವೆ. ಹೆದರಿಕೊಂಡು ಎಲ್ಲಿಗೂ ಹೋಗುವುದಿಲ್ಲ. ನಮ್ಮ ಕಾರ್ಯಕರ್ತರು ಇನ್ನೂ ರಾಜ್ಯದಲ್ಲಿದ್ದಾರೆ. ದ್ವೇಷದ ರಾಜಕಾರಣದಿಂದ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಜನ ಪಾಠ ಕಲಿಸಲಿದ್ದಾರೆ ಎಂದರು.

  • ಮುಂದೆ ರಾಜಕೀಯ ಧ್ರುವೀಕರಣ, ಒಂದು ಪಕ್ಷವೇ ವಿಲೀನವಾಗಬಹುದು – ಲಿಂಬಾವಳಿ

    ಮುಂದೆ ರಾಜಕೀಯ ಧ್ರುವೀಕರಣ, ಒಂದು ಪಕ್ಷವೇ ವಿಲೀನವಾಗಬಹುದು – ಲಿಂಬಾವಳಿ

    ಬೆಂಗಳೂರು: ಮುಂದಿನ ದಿನದಲ್ಲಿ ರಾಜಕೀಯ ಧ್ರುವೀಕರಣ ನಡೆಯಲಿದೆ ಎಂದು ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಮತ್ತು ವಕ್ತಾರ ಅರವಿಂದ ಲಿಂಬಾವಳಿ ಸ್ಫೋಟಕ ಹೇಳಿಕೆ ಹೇಳಿದ್ದಾರೆ.

    ರಾಜಕಿಯ ಧ್ರುವೀಕರಣ ಯಾವ ಥರ ಆಗುತ್ತೆ ಅಂತ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಭದ್ರವಾಗಲಿದೆ. ಪತ್ರಿಕೆಯವರ ಮೂಲಕ ಒಂದು ರಾಜಕೀಯ ಪಕ್ಷವೇ ವಿಲೀನವಾಗುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ.

    ಮೋದಿ ಅಲೆ, ಬಿಜೆಪಿ ಅಲೆ ದೇಶದಲ್ಲಿ ಇದೆ. ಸಮ್ಮಿಶ್ರ ಸರ್ಕಾರದಲ್ಲಿದ್ದವರೇ ಈಗ ಕಿತ್ತಾಡುತ್ತಿದ್ದಾರೆ. ದೇಶ, ರಾಜ್ಯದಲ್ಲಿ ಆಡಳಿತ ಸುಭದ್ರವಾಗಿದೆ ಎನ್ನುವುದರ ಸಂಕೇತವಿದು. ನಮ್ಮ ವರದಿ ಪ್ರಕಾರ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ನಮ್ಮ ಪಕ್ಷದ ಶೇ.70 ರಿಂದ 80 ರಷ್ಟು ಕಾರ್ಯಕರ್ತರು ಜಯ ಸಾಧಿಸುತ್ತಾರೆ ಎಂದು ತಿಳಿಸಿದರು.

    ಗ್ರಾಮ ಪಂಚಾಯತ್‌ ಚುನಾವಣೆ ಪಕ್ಷಾತೀತ ಚುನಾವಣೆಯಾಗಿದ್ದು, ಈ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಸಹ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿಗೆ ಗ್ರಾಮ ಪಂಚಾಯತ್ ಚುನಾವಣೆ ಮಹತ್ವದ್ದ. ದೊಡ್ಡ ಸಂಖ್ಯೆಯಲ್ಲಿ ಗ್ರಾಮಕ್ಕೆ ಅನುಕೂಲ ಮಾಡುವವರು ಗೆದ್ದು ಬರಬೇಕು. ನಮ್ಮ ಪಕ್ಷದ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಆಯ್ಕೆಯಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್‌ನಲ್ಲಿ ಒಳ ಜಗಳ ಪ್ರಾರಂಭವಾಗಿದೆ. ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಎಚ್ ಸಿ ಮಹಾದೇವಪ್ಪ ದನಿಗೂಡಿಸಿದ್ದಾರೆ. ಮೈತ್ರಿ ಸರ್ಕಾರದ ವೈಖರಿ ಖಂಡಿಸಿ 18 ಜನ ರಾಜೀನಾಮೆ ಕೊಟ್ಟರು. ಈಗ ರಾಜ್ಯದಲ್ಲಿ ಸ್ಥಿರ ಸರ್ಕಾರ ಇದೆ. ಸಿದ್ದರಾಮಯ್ಯ ಮೈತ್ರಿ ಸರ್ಕಾರದ ವಿರುದ್ಧವೂ ಮಾತಾಡಿದ್ದಾರೆ. ಇದಕ್ಕೆ ಎಚ್ಡಿಕೆ ಸಹ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದು ಹೇಳಿದರು.

    ಜನವರಿ 2, 3 ರಂದು ಶಿವಮೊಗ್ಗದಲ್ಲಿ ಕೋರ್ ಕಮಿಟಿ ಸಭೆ ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯಲಿದೆ. ಜನಪ್ರತಿನಿಧಿಗಳ ಸಮಾವೇಶ ಜನವರಿ 8 ರಿಂದ 11 ರವರೆಗೆ ನಡೆಯಲಿದೆ ಎಂದು ತಿಳಿಸಿದರು.

    ಡಿ.25 ರಂದು ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವಾಗಿದ್ದು ಆ ದಿನವನ್ನು ಬಿಜೆಪಿ ರೈತರ ದಿನ ಎಂದು ಆಚರಿಸಲಿದೆ. ಆ ದಿನ ಹಲವು ಕಡೆ ರೈತರ ಸಮಾವೇಶಗಳು ಆಯೋಜನೆ ಆಗಲಿದೆ. ಕೃಷಿ ಕಾಯ್ದೆಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಆ ದಿನ ಮಾಡ್ತೇವೆ. ಆ ದಿನ ಮಧ್ಯಾಹ್ನ 12 ಗಂಟೆಗೆ ಪ್ರಧಾನಿಯವರು ರೈತರನ್ನುದ್ದೇಶಿಸಿ ಮಾತಾಡ್ತಾರೆ. ಪ್ರಧಾನಿಯವರ ಭಾಷಣವನ್ನು ಜನರ ಬಳಿ ತಲುಪಿಸಲು ಅಲ್ಲಲ್ಲಿ ಟಿವಿ ಸ್ಕ್ರೀನ್ ಗಳನ್ನು ಹಾಕುತ್ತೇವೆ ಎಂದು ವಿವರಿಸಿದರು.

    ಬಿಜೆಪಿ ಮೇಲೆ ಜೆಡಿಎಸ್ ಸಾಫ್ಟ್ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಿಂಬಾವಳಿ, ಜೆಡಿಎಸ್ ಬಿ ಟೀಂ ಎಂಬ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಜೆಡಿಎಸ್ ನಮ್ಮ ಬಿ ಟೀಂ ಆಗಿದ್ದಿದ್ರೆ, ವಿಧಾನಸಭೆ ಚುನಾವಣೆ ಬಳಿಕ ಸಿ ಟೀಂ ಜತೆ ಯಾಕೆ ಹೋದರು? ವಿಧಾನ ಪರಿಷತ್ ನಲ್ಲಿ ನಮಗೆ ಬಹುಮತ ಇಲ್ಲ. ಹಾಗಾಗಿ ಗೋಹತ್ಯೆ ಮಸೂದೆ ಮಂಡನೆ ಆಗಲಿಲ್ಲ. ಜೆಡಿಎಸ್ ಅನೇಕ ವಿಚಾರಗಳಲ್ಲಿ ನಮ್ಮ ವಿರೋಧವೂ ಮಾಡಬಹುದು. ವಿಷಾಯಾಧಾರಿತವಾಗಿ ಜೆಡಿಎಸ್ ನಡೆದುಕೊಳ್ಳುತ್ತದೆ ಎಂದು ಉತ್ತರಿಸಿದರು.

  • ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರಿಗೆ ಲಿಂಬಾವಳಿ ಕಾವಲು?

    ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರಿಗೆ ಲಿಂಬಾವಳಿ ಕಾವಲು?

    ಬೆಂಗಳೂರು: ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿರುವ 10 ಜನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನಲ್ಲಿ ಇರಿಸಲಾಗಿದ್ದು, ಅವರ ಜವಾಬ್ದಾರಿಯನ್ನು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ವಹಿಸಿಕೊಂಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ಆಪರೇಷನ್ ಕಮಲಕ್ಕೆ ಒಳಗಾಗಿ ಬಂಡಾಯ ಎದ್ದಿರುವ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಮಧ್ಯಪ್ರದೇಶ ಸಿಎಂ ಕಮಲ್‍ನಾಥ್ ಹೇಳಿದ್ದು, ಬಂಡಾಯ ಶಮನ ಮಾಡುವ ಯತ್ನ ನಡೆಸುತ್ತಿದ್ದಾರೆ. ಜೊತೆಗೆ ಬಿಜೆಪಿಯ ರೆಬೆಲ್ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ಕಮಲ್‍ನಾಥ್ ಸರ್ಕಾರ ಮಾಡುತ್ತಿದೆ. ಇದನ್ನೂ ಓದಿ: ಆಪರೇಷನ್ ಮಧ್ಯಪ್ರದೇಶಕ್ಕೆ ಕರ್ನಾಟಕವೇ ಹೆಡ್ ಆಫೀಸ್

    ಬೆಂಗಳೂರಿನ ಸರ್ಜಾಪುರ ರಸ್ತೆಯ ಓಕ್‍ವುಡ್ ಹೋಟೆಲ್‍ನಲ್ಲಿ ಮಧ್ಯಪ್ರದೇಶದ ಸುಮಾರು 10 ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಇರಿಸಿದೆ ಎಂದು ಹೇಳಲಾಗುತ್ತಿದೆ. ಇವರ ಜವಾಬ್ದಾರಿಯನ್ನು ಅರವಿಂದ ಲಿಂಬಾವಳಿ ವಹಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್‍ನ ದಿನೇಶ್ ಗುಂಡೂರಾವ್ ಅವರು ಮಾತ್ರ ಬೆಂಗಳೂರಿಗೆ ಬಂದಿದ್ದ ಶಾಸಕರು ಭೋಪಾಲ್‍ಗೆ ವಾಪಸ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.

    ಮಧ್ಯಪ್ರದೇಶದ ಕಾಂಗ್ರೆಸ್‍ನ ರೆಬಲ್ ಶಾಸಕ ಹರ್ದೀಪ್ ಸಿಂಗ್ ನಿನ್ನೆಯಷ್ಟೇ ಪತ್ರದ ಮೂಲಕ ಸ್ಪೀಕರ್ ಪ್ರಜಾಪತಿ ಅವರಿಗೆ ಪತ್ರದ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ. ‘ಎರಡನೇ ಬಾರಿ ಜನರಿಂದ ಆಯ್ಕೆಯಾದರೂ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ. ಪ್ರತಿಯೊಬ್ಬ ಸಚಿವರೂ ತಾವು ಭ್ರಷ್ಟಾಚಾರದ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಹರ್ದೀಪ್ ಸಿಂಗ್ ಪತ್ರದಲ್ಲಿ ತಿಳಿಸಿದ್ದರು.

  • ಗರ್ಭದಲ್ಲಿರೋ ಕಂದಮ್ಮನಿಗೂ ಕಾಡ್ತಿದೆ ‘ಗುಂಡಿಭೂತ’ದ ಭಯ

    ಗರ್ಭದಲ್ಲಿರೋ ಕಂದಮ್ಮನಿಗೂ ಕಾಡ್ತಿದೆ ‘ಗುಂಡಿಭೂತ’ದ ಭಯ

    – ಗುಂಡಿಗೆ ಹೆದರಿ ಮನೆಯಲ್ಲಿ ಕೂತ ಗರ್ಭಿಣಿ

    ಬೆಂಗಳೂರು: ಸಿಲಿಕಾನ್ ಸಿಟಿಯ ದೊಡ್ಡನಕುಂದಿಯ ಕುಂದೇನಹಳ್ಳಿ ರಸ್ತೆಯಲ್ಲಿ ಯಮರೂಪಿ ಗುಂಡಿಗಳು ಗರ್ಭಿಣಿಯರನ್ನು ರಸ್ತೆಗೆ ಬಾರದಂತೆ ಹೆದರಿಸಿದೆ. ಈ ರಸ್ತೆಯಲ್ಲಿ ಸಂಚರಿಸಿದರೆ ಗರ್ಭಪಾತವಾಗುವುದು ಎಂದು ವೈದ್ಯರ ಎಚ್ಚರಿಕೆ ನೀಡಿದ್ದಾರೆ.

    ಮಗು ಪ್ರತಿ ತಾಯಿ ಕನಸು. ಮಗುವಿಗೆ ಕೊಂಚ ನೋವಾದರು ತಾಯಿ ಜೀವ ಸಹಿಸಲ್ಲ. ಅದರಲ್ಲೂ ಹೊಟ್ಟೆಯಲ್ಲಿರುವ ಮಗುವನ್ನ ತಾಯಿ ಕಣ್ಣಿನ ರೆಪ್ಪೆಯಂತೆ ಕಾಯ್ತಾಳೆ. ಹೀಗಿರುವಾಗ ಮಾರತಹಳ್ಳಿ ಸಮೀಪದ ದೊಡ್ಡನೆಕುಂದಿ ವಾರ್ಡ್‍ನ ಕುಂದೇನಹಳ್ಳಿ ಗೇಟ್ ಬಳಿ ರಸ್ತೆಯಲ್ಲಿ ಓಡಾಡಿದರೆ ನಿಮ್ಮ ಮಗು ಶಾಶ್ವತವಾಗಿ ಕಣ್ಣು ಬಿಡಲ್ಲ ಎಂದು ವೈದ್ಯರು ಬ್ಯಾಂಕ್ ಉದ್ಯೋಗಿ ಕಲ್ಯಾಣಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಗರ್ಭದಲ್ಲಿರೋ ಕಂದಮ್ಮನಿಗಾಗಿ ತಾಯಿ ಈಗ ಈ ರಸ್ತೆಯಲ್ಲಿ ಓಡಾಡುವುದನ್ನೇ ಬಿಟ್ಟು ಮನೆಯಲ್ಲಿಯೇ ಇದ್ದಾರೆ. ಇದನ್ನೂ ಓದಿ:ನಿಮ್ಮ ಬೇಜವಾಬ್ದಾರಿಯಿಂದ ಒಂದು ಹೆಣ್ಣುಮಗಳ ಪ್ರಾಣ ಹೋಯ್ತು – ಸಿಟಿ ರವಿಗೆ ಜನಸಾಮಾನ್ಯರ ತರಾಟೆ

    ಕಲ್ಯಾಣಿ ಅವರು ಸದ್ಯ 7 ತಿಂಗಳ ಗರ್ಭಿಣಿ. ಇವರಿಗೆ 2 ತಿಂಗಳು ಇರುವಾಗ ಈ ರಸ್ತೆಯಲ್ಲಿ ಓಡಾಡಿದ್ದರು. ಸಂಚರಿಸುವಾಗ ಗುಂಡಿಯಲ್ಲಿ ವಾಹನ ಇಳಿದಿದ್ದರಿಂದ ತೀವ್ರ ರಕ್ತಸ್ರಾವವಾಗಿತ್ತು. ವೈದ್ಯರ ಬಳಿ ಹೋದಾಗ ಇಂಥ ಗುಂಡಿಯಲ್ಲಿ ವಾಹನ ಇಳಿಸಿದ್ದರಿಂದಲೇ ಈ ಅನಾಹುತವಾಗಿದೆ. ಮಗುವಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಅಂತ ಕೈಚೆಲ್ಲಿದ್ದರು. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರಿಂದ ಮಗು ಬದುಕಿದೆ. ಅಂದಿನಿಂದ ಈ ರಸ್ತೆಯಲ್ಲಿ ಕಲ್ಯಾಣಿ ಅವರು ಓಡಾಡೋದನ್ನೇ ಬಿಟ್ಟಿದ್ದಾರೆ. ಇದನ್ನೂ ಓದಿ:ಇನ್ನಾದ್ರೂ ರಸ್ತೆ ಸರಿ ಮಾಡ್ರಪ್ಪ – ಹದಗೆಟ್ಟ ರಸ್ತೆ ದುಸ್ಥಿತಿ ಬಗ್ಗೆ ದಂಪತಿ, ಮಗನ ಫೋಟೋಶೂಟ್

    ಈ ರಸ್ತೆಯಲ್ಲಿ 2 ಸಾವಿರ ಅರ್ಪಾರ್ಟ್ ಮೆಂಟ್ ನಿವಾಸಿಗಳಿದ್ದು, 2 ಖಾಸಗಿ ಶಾಲೆಗಳಿವೆ. ಈ ರಸ್ತೆಗೆ ಪರ್ಯಾಯ ವ್ಯವಸ್ಥೆಯೇ ಇಲ್ಲ. ಆದರೆ ಸ್ಥಳೀಯ ಶಾಸಕ ಅರವಿಂದ್ ಲಿಂಬಾವಳಿ, ಕಾರ್ಪೋರೇಟರ್ ಶ್ವೇತಾ ವಿಜಯಕುಮಾರ್ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಲ್ಲದೆ ಈ ರಸ್ತೆಯ ಒಂದು ಭಾಗ ಖಾಸಗಿಯವರಿಗೆ ಸೇರಿರುವುದರಿಂದ ಈ ರೀತಿ ರಸ್ತೆ ಸರಿಪಡಿಸಲು ಬಿಬಿಎಂಪಿ ವಿಳಂಬನೀತಿ ಮಾಡುತ್ತಿದೆ ಅನ್ನೋದು ಸ್ಥಳೀಯರ ಆಕ್ರೋಶವಾಗಿದೆ. ಇದನ್ನೂ ಓದಿ: ಕಿತ್ತುಹೋಗಿರುವ ರಸ್ತೆ, ಪ್ರತಿನಿತ್ಯ ಅಪಘಾತ- ರಾಷ್ಟ್ರೀಯ ಹೆದ್ದಾರಿ ದುಸ್ಥಿತಿಗೆ ಸವಾರರು ಸುಸ್ತು

    ಖಾಸಗಿ ಹಾಗೂ ಸರ್ಕಾರಿ ಸಿಬ್ಬಂದಿಯ ಕಿತ್ತಾಟದ ಮಧ್ಯೆ ಜನ ಈ ಗುಂಡಿಗೆ ಭಯಬಿದ್ದು ಬದುಕು ಸಾಗಿಸುವಂತಾಗಿದೆ. ಹೊಟ್ಟೆಯೊಳಗಿನ ಕಂದಮ್ಮನಿಗೆ ಯಮನಂತೆ ಕಾಡುವ ಈ ಗುಂಡಿಗೆ ಬಿಬಿಎಂಪಿ ಇನ್ನಾದರೂ ಮುಕ್ತಿ ಕೊಡುತ್ತಾ ನೋಡಬೇಕಿದೆ.

  • ನಿಗದಿತ ಅವಧಿಯಲ್ಲಿ ಉಪಚುನಾವಣೆ ನಡೆದ್ರೆ ಬಿಜೆಪಿಯವರೇ ಅಭ್ಯರ್ಥಿಗಳು: ಅರವಿಂದ್ ಲಿಂಬಾವಳಿ

    ನಿಗದಿತ ಅವಧಿಯಲ್ಲಿ ಉಪಚುನಾವಣೆ ನಡೆದ್ರೆ ಬಿಜೆಪಿಯವರೇ ಅಭ್ಯರ್ಥಿಗಳು: ಅರವಿಂದ್ ಲಿಂಬಾವಳಿ

    – ಕೋರ್ ಕಮಿಟಿ ಸಭೆ ಬಳಿಕ ಮಾಜಿ ಸಚಿವರ ಹೇಳಿಕೆ
    – ಅನರ್ಹರಿಗೆ ಶಾಕ್ ಕೊಟ್ಟ ‘ಕಮಲ ಪಡೆ’

    ಬೆಂಗಳೂರು: ನಿಗದಿತ ಅವಧಿಯಲ್ಲಿ ಉಪ ಚುನಾವಣೆ ನಡೆದರೆ ಬಿಜೆಪಿಯವರೇ ಅಭ್ಯರ್ಥಿಗಳಾಗಿ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂದು ಮಾಜಿ ಸಚಿವ ಅರವಿಂದ್ ಲಿಂಬಾವಳಿ ಹೇಳಿದ್ದಾರೆ.

    ಅನರ್ಹ ಶಾಸಕರಿಗೆ ಉಪ ಚುನಾವಣೆಯ ಟಿಕೆಟ್ ನೀಡುವ ವಿಚಾರವಾಗಿ ಪಕ್ಷದೊಳಗೆ ವಿರೋಧ ಎದ್ದಿದೆ. ಈ ಹಿನ್ನೆಲೆಯಲ್ಲಿ ಬಂಡಾಯ ಶಮನಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ತುರ್ತು ಕೋರ್ ಕಮಿಟಿ ಸಭೆ ಕರೆದ್ದರು. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ಸಚಿವ ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವರಾದ ಆರ್.ಅಶೋಕ್, ಸಿ.ಟಿ.ರವಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದರು.

    ಸಭೆಯ ಬಳಿಕ ಮಾತನಾಡಿದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅರವಿಂದ್ ಲಿಂಬಾವಳಿ, ಉಪ ಚುನಾವಣೆ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಆಗಿದೆ. ನಮ್ಮ ಸಂಘಟನೆಯಿಂದ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ಅನರ್ಹ ಶಾಸಕರ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಅವರ ಪರ ವಕೀಲರು ಚುನಾವಣೆ ಮುಂದೂಡುವಂತೆ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಉಪ ಚುನಾವಣೆ ಬಗ್ಗೆ ಅಂತಿಮ ನಿರ್ಧಾರಕ್ಕೆ ಪಕ್ಷ ಬಂದಿಲ್ಲ ಎಂದು ತಿಳಿಸಿದರು.

    2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳ ವಿರೋಧದ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವರು, ಈಗಾಗಲೇ ಕೋರ್ಟಿನಲ್ಲಿ ಉಪ ಚುನಾವಣೆ ಮುಂದೂಡಲು ಮನವಿ ಮಾಡಿದ್ದಾರೆ. ಹಾಗಾಗಿ ನಾವು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಮಾಡಿಲ್ಲ. ಒಂದು ವೇಳೆ ನಿಗದಿತ ಸಮಯದಲ್ಲಿ ಚುನಾವಣೆ ಬಂದರೆ ನಮ್ಮ ಪಕ್ಷದ ಅಭ್ಯರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

    ಉಪ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸನ್ನದ್ಧಗೊಳಿಸಲು ಸೆಪ್ಟೆಂಬರ್ 27ರಂದು ಬೆಂಗಳೂರಿನಲ್ಲಿ ದಕ್ಷಿಣ ಕರ್ನಾಟಕದ ಉಪ ಚುನಾವಣಾ ಕ್ಷೇತ್ರಗಳ ಕಾರ್ಯಕರ್ತರ ಸಭೆ ನಡೆಸಲಾಗುತ್ತದೆ. ಬಳಿಕ ಸೆಪ್ಟೆಂಬರ್ 29ರಂದು ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕದ ಕ್ಷೇತ್ರಗಳ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಈ ವಿಚಾರವನ್ನು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

  • ಆಪರೇಷನ್ ಕಮಲದ ಕ್ಯಾಪ್ಟನ್ ಚೇಂಜ್- ಸಿದ್ಧವಾಗ್ತಿದೆಯಾ ಹೊಸ ಟೀಂ?

    ಆಪರೇಷನ್ ಕಮಲದ ಕ್ಯಾಪ್ಟನ್ ಚೇಂಜ್- ಸಿದ್ಧವಾಗ್ತಿದೆಯಾ ಹೊಸ ಟೀಂ?

    ಬೆಂಗಳೂರು: ಕಳೆದ ಒಂದು ವರ್ಷದಿಂದ ಆಪರೇಷನ್ ಕಮಲದ ಮಾತುಗಳು ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿವೆ. ಇಷ್ಟು ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲೇ ಆಪರೇಷನ್ ಕಮಲ ನಡೆಯುತ್ತಿದೆ ಎನ್ನಲಾಗಿತ್ತು. ಯಡಿಯೂರಪ್ಪನವರು ಆಪರೇಷನ್ ಕಮಲದಲ್ಲಿ ಹಿನ್ನಡೆ ಕಾಣುತ್ತಿರುವ ಪರಿಣಾಮ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೊಸ ಕ್ಯಾಪ್ಟನ್ ನೇಮಕಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ರಾಜ್ಯ ಬಿಜೆಪಿ ಅಂಗಳದಲ್ಲಿ ಕೇಳಿ ಬರುತ್ತಿವೆ.

    ಯಾರು ಹೊಸ ಕ್ಯಾಪ್ಟನ್?
    ಶಾಸಕ ಅರವಿಂದ್ ಲಿಂಬಾವಳಿ ಅವರನ್ನ ಆಪರೇಷನ್ ಕಮಲದ ನಾಯಕರನ್ನಾಗಿ ಮಾಡಲು ಅಮಿತ್ ಶಾ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟಿಯಲ್ಲಿಯೂ ಅರವಿಂದ್ ಲಿಂಬಾವಳಿ ಅವರ ಹೆಸರು ಮುಂಚೂಣಿಯಲ್ಲಿದೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿರುವ ಅರವಿಂದ್ ಲಿಂಬಾವಳಿ ಅವರು ಆಪರೇಷನ್ ಕಮಲದ ಕುರಿತು ಅಮಿತ್ ಶಾ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

    ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಮತ್ತು ವಿಪಕ್ಷ ನಾಯಕರಾಗಿ ಬಿ.ಎಸ್.ಯಡಿಯೂರಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ರಾಜ್ಯಾಧ್ಯಕ್ಷ ಬದಲಾವಣೆಯ ಕುರಿತು ಮಾತುಗಳು ಬಿಜೆಪಿ ಅಂಗಳದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಅರವಿಂದ್ ಲಿಂಬಾವಳಿ ಅವರ ಹೆಸರನ್ನು ಯಡಿಯೂರಪ್ಪ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಡಿಸಿಎಂ ಆರ್ ಅಶೋಕ್ ಮತ್ತು ಶಾಸಕ ಸಿ.ಟಿ ರವಿ ಅವರ ಹೆಸರನ್ನು ಆರ್‍ಎಸ್‍ಎಸ್ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್ ಸಂತೋಷ್ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

  • ಯುಪಿಎ ಸರ್ಕಾರ ಉಗ್ರರಿಗೆ ಬಿರಿಯಾನಿ ಕಳುಹಿಸಿಕೊಟ್ಟಿತ್ತು: ಅರವಿಂದ ಲಿಂಬಾವಳಿ

    ಯುಪಿಎ ಸರ್ಕಾರ ಉಗ್ರರಿಗೆ ಬಿರಿಯಾನಿ ಕಳುಹಿಸಿಕೊಟ್ಟಿತ್ತು: ಅರವಿಂದ ಲಿಂಬಾವಳಿ

    – ಏಕವಚನದಲ್ಲಿ ಮಾತನಾಡಿದ್ದ ಸಿಎಂಗೆ ಆರ್.ಅಶೋಕ್ ತಿರುಗೇಟು

    ಬೆಂಗಳೂರು: ಕಾಶ್ಮೀರದ ಹಜರತ್ ಬಾಲ್ ದರ್ಗಾದಲ್ಲಿ ಉಗ್ರರು ಅಡಗಿಕೊಂಡಿದ್ದಾಗ ಅಂದಿನ ಯುಪಿಎ ಸರ್ಕಾರ ಉಗ್ರರಿಗೆ ಬಿರಿಯಾನಿ ಕಳುಹಿಸಿಕೊಟ್ಟಿತ್ತು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಲೋಕಸಭಾ ಚುನಾವಣಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಯುಪಿಎ ಕಾಶ್ಮೀರದ ಪ್ರತ್ಯೇಕವಾದಿ ನಾಯಕರಿಗೆ ಗನ್ ಮ್ಯಾನ್‍ಗಳಿಂದ ಭದ್ರತೆ ಒದಗಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯೇಕವಾದಿ ನಾಯಕರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದಿದ್ದಾರೆ. ಅಷ್ಟೇ ಅಲ್ಲದೇ ಉಗ್ರರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.

    ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಜನರನ್ನು ದೇಶದಿಂದ ಹೊರಹಾಕಲು ಕೇಂದ್ರ ಸರ್ಕಾರ ಆದೇಶಿಸಿದೆ. ಆದರೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವು ಅಕ್ರಮ ಬಾಂಗ್ಲಾ ವಲಸಿಗರಿಗೆ ಚುನಾವಣಾ ಗುರುತಿನ ಚೀಟಿ ಕೊಟ್ಟು, ಮತದಾರ ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ ಎಂದು ದೂರಿದರು.

    ಬಿಜೆಪಿ ಮುಖಂಡ ಆರ್.ಅಶೋಕ್ ಅವರು ಮಾತನಾಡಿ, ಸಿಎಂ ಕುಮಾರಸ್ವಾಮಿ ಅವರು ಮಂಡಿಸಿರುವ ಎರಡು ಬಜೆಟ್‍ಗಳು ಹಾಸನ ಜಿಲ್ಲೆಯ ಹೊಳೆನರಸೀಪುರದ ಸುತ್ತಲೇ ಗಿರಗಿಟ್ಲೆ ಹೊಡೆಯುತ್ತಿವೆ. ಕರ್ನಾಟಕ ಅಂದ್ರೆ ರಾಮನಗರ ಮತ್ತು ಹೊಳೆನರಸೀಪುರ ಮಾತ್ರ ಎಂದೇ ಸಿಎಂ ಭಾವಿಸಿದ್ದಾರೆ. ತಾವು ಅಧಿಕಾರಕ್ಕೆ ಬರಲು ರಾಜ್ಯದ ಕಾರಣರಲ್ಲ. ನಮ್ಮ ತಂದೆ ಎಚ್.ಡಿ.ದೇವೇಗೌಡ ಅವರು ಮಾಡಿದ ಪೂಜೆ-ಪುನಸ್ಕಾರ, ಮಾಟ-ಮಂತ್ರಗಳೇ ಕಾರಣವೆಂದು ಕುಮಾರಸ್ವಾಮಿ ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

    ಕಾಂಗ್ರೆಸ್ ಹಿರಿಯ ಮುಖಂಡ ಶರದ್ ಪವಾರ್ ಅವರ ಮೊಮ್ಮಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ. ಹೀಗಾಗಿ ಅವರು ಚುನಾವಣಾ ಕಣದಿಂದಲೇ ಹಿಂದೆ ಸರಿದರು. ಇಂತಹ ಆಲೋಚನೆ ದೇವೇಗೌಡ ಅವರಿಗೆ ಬರಲೇ ಇಲ್ಲ. ದೇವೇಗೌಡರ ಕುಟುಂಬ ಕಣ್ಣೀರಿಗೆ ಬ್ರಾಂಡ್ ಆಗಿದೆ. ದೇವೇಗೌಡ ಅವರು ಮಕ್ಕಳು, ಮೊಮ್ಮಕ್ಕಳ ವಿಷಯಕ್ಕೆ ಮಾತ್ರ ಕಣ್ಣೀರು ಹರಿಸುತ್ತಾರೆ. ಆದರೆ ಬೇರೆಯವರ ನೋವಿಗೆ ಯಾಕೆ ಅಳುವುದಿಲ್ಲ ಎಂದು ಕಿಡಿಕಾರಿದರು.

    ನಮ್ಮ ಕ್ಯಾಪ್ಟನ್, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂದು ಫಿಕ್ಸ್ ಆಗಿದೆ. ಆದರೆ ಪ್ರತಿಪಕ್ಷಗಳಿಂದ ಪ್ರಧಾನಿ ಅಭ್ಯರ್ಥಿ ಯಾರು? ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಬಿಎಸ್‍ಪಿ ನಾಯಕಿ ಮಾಯಾವತಿ ಇಲ್ಲವೇ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಅಭ್ಯರ್ಥಿಯೇ? ಇದೇ ತಮ್ಮ ಕೊನೆಯ ಚುನಾವಣೆ ಎಂದು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿರುವ ದೇವೇಗೌಡ ಅವರೇ? ಎಂದು ಮಹಾಮೈತ್ರಿ ನಾಯಕರನ್ನು ಆರ್.ಅಶೋಕ್ ಕುಟುಕಿದರು.

    ಏಕವಚನದಲ್ಲಿಯೇ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದ ಆರ್.ಅಶೋಕ್ ಅವರು, ನಾವು ಕುಮಾರಸ್ವಾಮಿ ಅವರಿಂದ ಪಾಠ ಕಲಿಯಬೇಕಿಲ್ಲ. ಮೈತ್ರಿ ಸರ್ಕಾರ ಇದ್ದು ಸತ್ತಂತಾಗಿದೆ. ಆತ್ಮಹತ್ಯೆಗೆ ಶರಣಾಗಿದ್ದ ಮಂಡ್ಯ, ಕೋಲಾರ ರೈತರ ಮನೆಗೆ ನಾವು ಮೊದಲು ಹೋಗಿದ್ದವು. ಮೃತ ರೈತರಿಗೆ ಸಾಂತ್ವನ ಹೇಳಿದ ಬಂದ ಬಳಿಕ ಸಿಎಂ ಕುಮಾರಸ್ವಾಮಿ ಹೋಗಿ ಬಂದರು. ಸಿಎಂಗೆ ಅಧಿಕಾರದ ಮದವಿದೆ. ಹೀಗಾಗಿ ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ತಿರುಗೇಟು ನೀಡಿದರು.

    ಬೆಂಗಳೂರು ಲೋಕಸಭಾ ಕ್ಷೇತ್ರಕ್ಕೆ ದೇವೇಗೌಡ ಅವರು ಯಾಕೆ ಬರುತ್ತಾರೆ ಎಂದು ಆಶ್ಚರ್ಯವಾಗುತ್ತಿದೆ. ಬಿಜೆಪಿ ಸರ್ಕಾರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ಯೋಜನೆ ನೀಡಿದೆ. ಆದರೆ ಎಚ್.ಡಿ.ದೇವೇಗೌಡ ಅವರು ಬೆಂಗಳೂರಿಗೆ ಏನೂ ಮಾಡಿಲ್ಲ. ಹೀಗಾಗಿ ಬೆಂಗಳೂರಿನ ಮೂರಕ್ಕೆ ಮೂರೂ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಇದರಿಂದಾಗಿ ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲ್ಲವೆಂದು ಅನಿಸುತ್ತದೆ ಎಂದು ಹೇಳಿದರು.

    ಮಂಡ್ಯ ಹೈ ವೋಲ್ಟೇಜ್ ಕ್ಷೇತ್ರವಾಗಿದೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬೇಸರ ತಂದಿದೆ. ಜೆಡಿಎಸ್‍ಗೆ ಒಬ್ಬ ಸ್ಥಳೀಯ ಕಾರ್ಯಕರ್ತ ಸಿಗಲಿಲ್ವಾ ಎನ್ನುವಂತಾಗಿದೆ. ಮತ್ತೊಂದೆಡೆ ಸುಮಲತಾ ಅವರು ಜನರ ಅಭಿಪ್ರಾಯದ ಮೇಲೆ ಸ್ಪರ್ಧೆ ಮಾಡುತ್ತಿದ್ದಾರೆ. ಕಾವೇರಿ ನೀರಿಗಾಗಿ ಅಂಬರೀಶ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸುಮಲತಾ ಈಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರೆ. ಈ ಕುರಿತು ಅವರ ಜೊತೆಗೆ ನಾನು ಚರ್ಚೆ ಮಾಡಿದ್ದೇನೆ. ಅಷ್ಟೇ ಅಲ್ಲದೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಜೊತೆಗೆ ಚರ್ಚೆ ಮಾಡಿ, ನಮ್ಮ ಪಕ್ಷದ ನಿರ್ಧಾರ ಪ್ರಕಟಿಸುತ್ತದೆ ಎಂದರು.

    ಹಾಸನ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ಅಯ್ಕೆ ವಿಚಾರವಾಗಿ ಮಾತನಾಡಿದ ಆರ್.ಅಶೋಕ ಅವರು, ಮಾಜಿ ಸಚಿವ ಎ.ಮಂಜು ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಸ್ಥಳೀಯರಿಗೆ ಕೊಡಬೇಕು ಎಂಬ ಆಗ್ರಹವೂ ಇದೆ. ಈ ಸಂಬಂಧ ಎರಡು ಮೂರು ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv