Tag: Arvind Kejriwal

  • ಕಳ್ಳತನವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ

    ಕಳ್ಳತನವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ

    ನವದೆಹಲಿ: ಗುರುವಾರದಂದು ದೆಹಲಿ ಸಚಿವಾಲಯದ ಆವರಣದಿಂದ ಕಳ್ಳತನವಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೀಲಿ ಬಣ್ಣದ ವ್ಯಾಗನ್ ಆರ್ ಕಾರು ಪತ್ತೆಯಾಗಿದೆ.

    ಕಾರು ಗಜಿಯಾಬಾದ್ ಬಳಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಉತ್ತರಪ್ರದೇಶ ಪೊಲೀಸರು ಕಾರನ್ನು ಪತ್ತೆ ಮಾಡಿ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದ್ರೆ ಕಳ್ಳತನಕ್ಕೆ ಸಂಬಂಧಿಸಿದಂತೆ ಯಾವುದೇ ಬಂಧನವಾಗಿಲ್ಲ. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಕಳ್ಳನನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳನ ಮುಖ ಚಹರೆ ಕಾಣಿಸಿದ್ದು, ಆತನ ಫೋಟೋವನ್ನ ದೆಹಲಿಯ ವಿವಿಧ ಜಿಲ್ಲೆಗಳಲ್ಲಿ ಹಂಚಿದ್ದಾರೆ.

    ಕಾರ್ ಕಳ್ಳತನವಾಗಿದ್ದಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ಶುಕ್ರವಾರದಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರಿಗೆ ಪತ್ರ ಬರೆದಿದ್ದರು. ದೆಹಲಿ ಸಚಿವಾಲಯದ ಹೊರಗಡೆ ನನ್ನ ಕಾರು ಕಳ್ಳತನವಾಗಿದೆ. ನನ್ನ ಕಾರ್ ಕಳ್ಳತನವಾಗಿದೆ ಅನ್ನೋದು ಚಿಕ್ಕ ವಿಚಾರವೇ. ಆದ್ರೆ ದೆಹಲಿ ಸಚಿವಾಲಯದ ಹೊರಗಡೆ ಕಳ್ಳತನವಾಗಿದೆ ಅನ್ನೋದು ಕಾನೂನು ಸುವ್ಯವಸ್ಥೆ ತ್ವರಿತವಾಗಿ ಕ್ಷೀಣಿಸುತ್ತಿದೆ ಎಂಬುದನ್ನ ಸೂಚಿಸುತ್ತಿದೆ ಎಂದು ಕೇಜ್ರೀವಾಲ್ ಪತ್ರದಲ್ಲಿ ಹೇಳಿದ್ದರು.

    ಅಲ್ಲದೆ ದೆಹಲಿ ಪೊಲೀಸರನ್ನ ಕುರಿತು “ನಿಮ್ಮ ಗಮನ ಎಲ್ಲಿದೆ” ಎಂದು ಟ್ವೀಟ್ ಮಾಡಿದ್ದರು.

    ವಿದೇಶಿ ಸ್ನೇಹಿತರೊಬ್ಬರು ಕೇಜ್ರಿವಾಲ್ ಅವರಿಗೆ ಈ ಕಾರನ್ನು ಉಡುಗೊರೆಯಾಗಿ ನೀಡಿದ್ದರು. 2014ರಲ್ಲಿ  ಪೊಲೀಸರ ವಿರುದ್ಧ ನಡೆಸಿದ ಪ್ರತಿಭಟನೆ ವೇಳೆ ಈ ಕಾರಿನಲ್ಲೇ ಕೇಜ್ರಿವಾಲ್ ರಾತ್ರಿ ನಿದ್ದೆ ಮಾಡಿದ್ದರು. ಆರಂಭದಲ್ಲಿ ಆಪ್ ಪ್ರಚಾರ ಕಾರ್ಯದ ವೇಳೆ ಈ ಕಾರು ಮೂಲಕವೇ ಕೇಜ್ರಿವಾಲ್ ಪ್ರಚಾರಕ್ಕೆ ತೆರಳುತ್ತಿದ್ದರು.

  • ಕಮಲ್ ಭೇಟಿಯಾದ ಕೇಜ್ರಿವಾಲ್: ಇಬ್ಬರ ನಡುವೆ ಏನು ಮಾತುಕತೆ ನಡೆದಿದೆ?

    ಕಮಲ್ ಭೇಟಿಯಾದ ಕೇಜ್ರಿವಾಲ್: ಇಬ್ಬರ ನಡುವೆ ಏನು ಮಾತುಕತೆ ನಡೆದಿದೆ?

    ಚೆನ್ನೈ: ಸ್ವಂತ ಪಕ್ಷ ಸ್ಥಾಪಿಸುವ ಅಧಿಕೃತ ಸೂಚನೆಯನ್ನು ನೀಡಿರುವ ತಮಿಳು ನಟ ಕಮಲ್ ಹಾಸನ್‍ರ ರಾಜಕೀಯ ನಡೆಗಳು ಕುತೂಹಲವನ್ನು ಹುಟ್ಟಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಕಮಲ್ ಮನೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿದ್ದು ಹೊಸ ರಾಜಕೀಯ ಚಿಂತನೆಗಳಿಗೆ ಕಾರಣವಾಗಿದೆ.

    ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್‍ರನ್ನು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವತಃ ಕಮಲ್ ಹಿರಿಯ ಪುತ್ರಿ ಅಕ್ಷರ ಹಾಸನ್ ಸ್ವಾಗತಿಸಿದರು. ಕಳೆದ ಒಂಬತ್ತು ದಿನಗಳಿಂದ ಮಹಾರಾಷ್ಟ್ರದಲ್ಲಿ ಧ್ಯಾನವನ್ನು ಕೈಗೊಂಡಿದ್ದ ಕೇಜ್ರಿವಾಲ್ ಧ್ಯಾನದ ವಿರಾಮದಲ್ಲಿ ಚೆನ್ನೈಗೆ ಭೇಟಿ ನೀಡಿದ್ದರು.

    ನಾನು ಕಮಲ್ ಹಾಸನ್ ಅವರ ಉತ್ತಮ ಕಾರ್ಯಗಳ ಬಹುದೊಡ್ಡ ಅಭಿಮಾನಿಯಾಗಿದ್ದು, ಪ್ರಸ್ತುತ ದೇಶದಲ್ಲಿ ಹಲವು ಕೋಮು ಶಕ್ತಿಗಳು ಬಲ ಪಡೆದುಕೊಳ್ಳುತ್ತಿವೆ ಎಂಬ ಭಾವನೆಯನ್ನು ಜನರು ವ್ಯಕ್ತಪಡಿಸಿದ್ದಾರೆ. ನಮ್ಮಿಬ್ಬರ ಭೇಟಿಯಲ್ಲಿ ಉತ್ತಮ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಕೇಜ್ರಿವಾಲ್ ತಿಳಿಸಿದರು.

    ನಂತರ ಮಾತನಾಡಿದ ಕಮಲ್, ನನ್ನ ಮನೆ ಹಲವು ದಿನಗಳಿಂದ ರಾಜಕೀಯ ಚಟುಟಿಕೆಗಳ ತಾಣವಾಗಿದೆ. ನಮ್ಮ ತಂದೆಯ ಅವಧಿಯಲ್ಲಿಯೂ ಇದೇ ರೀತಿ ಇತ್ತು. ನಾನು ಅದನ್ನು ದೂರ ಮಾಡಿದ್ದೆ. ಆದರೆ ಇಂದು ರಾಜಕೀಯ ಪ್ರವೇಶವನ್ನು ಪಡೆಯುತ್ತಿರುವ ನನಗೆ ಕೆಲವು ಸಲಹೆಗಳನ್ನು ನೀಡಲು ಅರವಿಂದ್ ಕೇಜ್ರಿವಾಲ್ ಆಗಮಿಸಿದ್ದರು ಎಂದು ಹೇಳಿದರು.

    ಕಮಲ್ ರಾಜಕೀಯ ಪ್ರವೇಶ ಖಚಿತವಾದ ನಂತರ ಭೇಟಿ ಮಾಡುತ್ತಿರುವ ಎರಡನೇ ಮುಖ್ಯಮಂತ್ರಿ ಕೇಜ್ರಿವಾಲ್ ಆಗಿದ್ದು, ಈ ಮೊದಲು ಕೇರಳ ಸಿಎಂ ಪಿಣರಾಯಿ ವಿಜಯನ್‍ರನ್ನು ಭೇಟಿ ಮಾಡಿ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು. ಈ ಹಿಂದೆ ಕಮಲ್ ಹಾಗೂ ಕೇಜ್ರಿವಾಲ್ ಭೇಟಿ 2015 ರ ಸಿನಿಮಾ ಚಿತ್ರೀಕರಣ ಸಮಯದಲ್ಲಿ ನಡೆದಿತ್ತು.

    ಪ್ರಸ್ತುತ ಕಮಲ್ ತಮಿಳು ಅವತರಣಿಕೆಯ ಬಿಗ್‍ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಕಳೆದ ಕೆಲವು ತಿಂಗಳಿಂದ ತಮಿಳುನಾಡಿನ ರಾಜಕೀಯದಲ್ಲಿ ಕಾಣಿಸಿಕೊಂಡಿರುವ ಅಸ್ಥಿರತೆಯ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

    ಕೆಲ ದಿನಗಳ ಹಿಂದೆ ಮಾಧ್ಯಮಗಳು ಕಮಲ್ ರಾಜಕೀಯ ಪ್ರವೇಶದ ಕುರಿತು ಪ್ರಶ್ನಿಸಿದಾಗ, ನಾನು ಈ ಕುರಿತು ಮಹತ್ವದ ಚಿಂತನೆಗಳನ್ನು ನಡೆಸುತ್ತಿದ್ದು, ಯಾವುದಾದರು ರಾಜಕೀಯ ಪಕ್ಷವು ತನ್ನ ಚಿಂತನೆಗೆ ಸೂಕ್ತ ಎನಿಸುವ ವೇದಿಕೆಯನ್ನು ಒದಗಿಸಿಕೊಡುವ ಸಾಧ್ಯತೆಗಳಿವೆಯೇ ಎಂದು ಮಾಧ್ಯಮಗಳಿಗೆ ಮರು ಪ್ರಶ್ನಿಸಿದ್ದರು.

  • ಕೇಜ್ರಿವಾಲ್ 2 ಕೋಟಿ ಲಂಚ ತೆಗೆದುಕೊಂಡಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ: ಆಪ್ ಶಾಸಕ

    ಕೇಜ್ರಿವಾಲ್ 2 ಕೋಟಿ ಲಂಚ ತೆಗೆದುಕೊಂಡಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ: ಆಪ್ ಶಾಸಕ

    ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಮುಖ್ಯಮಂತ್ರಿ ಪಟ್ಟವನ್ನು ಏರಿದ್ದ ಕೇಜ್ರಿವಾಲ್ ವಿರುದ್ಧ 2 ಕೋಟಿ ಲಂಚ ತೆಗೆದುಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ.

    ಪ್ರವಾಸೋದ್ಯಮ ಸಚಿವ ಸ್ಥಾನದಿಂದ ವಜಾಗೊಂಡಿರುವ ಕಪಿಲ್ ಮಿಶ್ರಾ ಅವರು, ಕೇಜ್ರಿವಾಲ್ ಸತ್ಯೇಂದ್ರ ಜೈನ್ ರಿಂದ 2 ಕೋಟಿ ರೂ. ಲಂಚ ಪಡೆದಿದ್ದಾರೆ. ಲಂಚ ಪಡೆದಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ಹೇಳಿದ್ದಾರೆ.

    ಕುಮಾರ್ ವಿಶ್ವಾಸ್ ಅವರ ಜತೆಗೂಡಿ ಆಮ್ ಆದ್ಮಿ ಪಕ್ಷದ ನಾಯಕತ್ವದ ವಿರುದ್ಧವೇ ಸಡ್ಡು ಹೊಡೆದಿದ್ದ ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ.ಇದೇ ವೇಳೆ ನಾನು ಆಪ್‍ನ ಸ್ಥಾಪಕ ಸದಸ್ಯನಾಗಿದ್ದು, ಆಪ್ ನಲ್ಲೇ ಇರುತ್ತೇನೆ. ಬಿಜೆಪಿ ಪಕ್ಷವನ್ನು ಸೇರುವುದಿಲ್ಲ ಎಂದು ಹೇಳಿದರು.

    ಮಂತ್ರಿ ಸ್ಥಾನದಿಂದ ವಜಾ ಮಾಡುತ್ತಿದ್ದಂತೆ ಮಿಶ್ರಾ, ಹಗರಣದಲ್ಲಿ ತೊಡಗಿದ ಕೆಲ ಆಮ್ ಆದ್ಮಿ ಪಕ್ಷದ ನಾಯಕರ ಬಣ್ಣ ಬಯಲು ಮಾಡುತ್ತೇನೆಂದು ಎಂದು ಹೇಳಿದ್ದರು.

    ಭ್ರಷ್ಟಾಚಾರ ಆರೋಪವಿಲ್ಲದ, ಸಿಬಿಐ ವಿಚಾರಣೆ ಎದುರಿಸದ ಏಕೈಕ ಸಚಿವ ನಾನು. ನನಗೆ ಮಾಹಿತಿಯನ್ನೂ ನೀಡದೆ ನನ್ನನ್ನು ಸಂಪುಟದಿಂದ ಹೊರಹಾಕಲಾಗಿದೆ ಕೇಜ್ರಿವಾಲ್ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

  • ಮೋದಿ ಬಗ್ಗೆ ಟ್ವೀಟ್: ಅರವಿಂದ ಕೇಜ್ರಿವಾಲ್ ವಿರುದ್ಧ ಅರೆಸ್ಟ್ ವಾರೆಂಟ್

    ಮೋದಿ ಬಗ್ಗೆ ಟ್ವೀಟ್: ಅರವಿಂದ ಕೇಜ್ರಿವಾಲ್ ವಿರುದ್ಧ ಅರೆಸ್ಟ್ ವಾರೆಂಟ್

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಅಸ್ಸಾಂ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

    ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ಆರೋಪದ ಮೇಲೆ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಕೋರ್ಟ್‍ಗೆ ಹಾಜರಾಗದ ಕಾರಣ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.

    ಏನಂತ ಟ್ವೀಟ್ ಮಾಡಿದ್ರು?: ಮೋದಿಜಿ 12ನೇ ಕ್ಲಾಸ್ ಪಾಸ್ ಮಾಡಿರೋದು. ಅನಂತರದ ಡಿಗ್ರಿಗಳೆಲ್ಲ ನಕಲಿ ಎಂದು ಕೇಜ್ರಿವಾಲ್ ಈ ಹಿಂದೆ ಟ್ವೀಟ್ ಮಾಡಿದ್ದರು.

    ಪ್ರಧಾನಿ ಮೋದಿ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಮಾನನಷ್ಟ ಹೇಳಿಕೆ ನೀಡಿದ ಆರೋಪದ ಮೇಲೆ ಸುರ್ಜೋ ರಂಗ್‍ಫರ್ ಎಂಬವರು ಕೇಜ್ರಿವಾಲ್ ವಿರುದ್ಧ ದಿಪು ಕೋರ್ಟ್‍ನಲ್ಲಿ ದೂರು ದಾಖಲಿಸಿದ್ದರು. ಇವರ ದೂರಿನನ್ವಯ ಕೇಜ್ರಿವಾಲ್ ವಿರುದ್ಧ ಐಪಿಸಿ ಸೆಕ್ಷನ್ 499, 500 ಹಾಗೂ 501ರ ಅಡಿ ಪ್ರಕರಣ ದಾಖಲಾಗಿದೆ.

    ಅಸ್ಸಾಂನ ದಿಪು ಚೀಫ್ ಜುಡಿಸಿಯಲ್ ಮ್ಯಾಜಿಸ್ಟೇಟ್ ಕೋರ್ಟ್ ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್‍ಗೆ ಸಮನ್ಸ್ ಜಾರಿ ಮಾಡಿತ್ತು. ಆದ್ರೆ ಅವರು ಕೋರ್ಟ್‍ನಲ್ಲಿ ಹಾಜರಾಗಿರಲಿಲ್ಲ. ಈ ಕಾರಣಕ್ಕೆ ಇದೀಗ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.

  • ಅರಣ್ ಜೇಟ್ಲಿ ಹಾಕಿದ್ದ ಕೇಸ್‍ನಲ್ಲಿ ಕೇಜ್ರಿವಾಲ್ ವಿರುದ್ಧ ವಿಚಾರಣೆಗೆ ಕೋರ್ಟ್ ಆದೇಶ

    ಅರಣ್ ಜೇಟ್ಲಿ ಹಾಕಿದ್ದ ಕೇಸ್‍ನಲ್ಲಿ ಕೇಜ್ರಿವಾಲ್ ವಿರುದ್ಧ ವಿಚಾರಣೆಗೆ ಕೋರ್ಟ್ ಆದೇಶ

    ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಕಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕೇಸ್‍ನಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಆಪ್ ಮುಖಂಡರು ವಿಚಾರಣೆ ಎದುರಿಸಬೇಕಿದೆ.

    ಅರುಣ್ ಜೇಟ್ಲಿ ಅವರು 2000-12ರವರೆಗೆ ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾಗ ಭ್ರಷ್ಟಾಚಾರ ನಡೆದಿದೆ ಎಂದು ಆಪ್ ಮುಖಂಡರು ಆರೋಪ ಮಾಡಿದ್ದರು. ಇದರ ವಿರುದ್ಧ ಅರುಣ್ ಜೇಟ್ಲಿ, ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್, ಕುಮಾರ್ ವಿಶ್ವಾಸ್, ಸಂಜಯ್ ಸಿಂಗ್, ರಾಘವ್ ಚಡ್ಡಾ, ಅಶುತೋಶ್ ಹಾಗೂ ದೀಪಕ್ ಬಾಜ್ಪೈ ಅವರ ಮೇಲೆ ಸಿವಿಲ್ ಹಾಗೂ ಕ್ರಿಮಿನಲ್ ಸೇರಿದಂತೆ ಎರಡು ಮಾನನಷ್ಟ ಮೊಕದ್ದಮೆ ಹಾಕಿದ್ದರು. ಸುಳ್ಳು ಹೇಳಿಕೆ ನೀಡಿ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ 10 ಕೋಟಿ ರೂ. ನೀಡುವಂತೆ ಕೇಜ್ರಿವಾಲ್ ಹಾಗೂ ಇತರೆ ಮುಖಂಡರ ಮೇಲೆ ಜೇಟ್ಲಿ ಸಿವಿಲ್ ಕೇಸ್ ಹಾಕಿದ್ದರು.

    ಇಂದು ಅದರ ವಿಚಾರಣೆ ನಡೆಸಿದ ದೆಹಲಿ ಪಟಿಯಾಲ ಕೋರ್ಟ್, ಕೇಜ್ರಿವಾಲ್ ವಿರುದ್ಧ ವಿಚಾರಣೆಗೆ ಆದೇಶ ನೀಡಿದೆ. ಮೇ 20ರಿಂದ ವಿಚಾರಣೆ ಆರಂಭವಾಗಲಿದೆ.

     

  • ಆರೋಗ್ಯದಲ್ಲಿ ಚೇತರಿಕೆ: ಇಂದು ಸಂಜೆ ಕೇಜ್ರಿವಾಲ್ ದೆಹಲಿಗೆ

    ಆರೋಗ್ಯದಲ್ಲಿ ಚೇತರಿಕೆ: ಇಂದು ಸಂಜೆ ಕೇಜ್ರಿವಾಲ್ ದೆಹಲಿಗೆ

    ಬೆಂಗಳೂರು: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇಂದು ಸಂಜೆ ಅವರು ದೆಹಲಿಯತ್ತ ಪ್ರಯಾಣವನ್ನು ಬೆಳಸಲಿದ್ದಾರೆ.

    ಸಕ್ಕರೆ ಕಾಯಿಲೆ, ಕಫ, ಬೊಜ್ಜು ಸಮಸ್ಯೆ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಅವರು, ಪಂಜಾಬ್ ಚುನಾವಣೆಯ ನಂತರ ಫೆಬ್ರವರಿ 7 ರಂದು ನಗರದ ನೆಲಮಂಗಲದ ಚಿಕ್ಕ ಬಿದರಕಲ್ಲಿನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಚಿಕಿತ್ಸೆಗಾಗಿ ಆಗಮಿಸಿದ್ದರು.

    ಪ್ರತಿನಿತ್ಯ ಚಿಕಿತ್ಸೆ ವೇಳೆಯಲ್ಲಿ ಬೆಳಗ್ಗೆ ಬೇಗನೆ ಎದ್ದು ವ್ಯಾಯಾಮ, ಪ್ರಾಣಾಯಾಮ, ಯೋಗ, ವಿವಿಧ ಬಗೆಯ ಪ್ರಕೃತಿ ಚಿಕಿತ್ಸೆ, ಮಡ್ ತೆರಫಿ, ಮಡ್ ಪ್ಯಾಕ್, ವಾಟರ್ ತೆರಫಿ, ಯೋಗ ನಿದ್ರಾ, ಅಧಿಕ ವ್ಯಾಯಾಮ ಹಾಗೂ ವೈದ್ಯರ ಸಲಹೆಯಂತೆ ಇನ್ನಿತರ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು.

    2015 ರಲ್ಲಿ ಪ್ರಥಮ ಬಾರಿಗೆ ದೆಹಲಿ ಚುನಾವಣೆಯ ನಂತರ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು. 2016 ರ ಜನವರಿಯಲ್ಲಿ ಮತ್ತೊಮ್ಮೆ ಆಗಮಿಸಿ ತಪಾಸಣೆ ಮಾಡಿಸಿಕೊಂಡಿದ್ದರು. ಈ ಬಾರಿ ಒಟ್ಟು 15 ದಿನಗಳ ಕಾಲ ದೀರ್ಘಕಾಲ ಉಳಿದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಓರ್ವ ಮುಖ್ಯಮಂತ್ರಿಯಾಗಿದ್ದರೂ ಸಹ ಸಾಮಾನ್ಯ ರೋಗಿಯಾಗಿ ಚಿಕಿತ್ಸಗೆ ಸ್ಪಂದಿಸಿದ್ದಾರೆ ಎಂದು ಆಸ್ಪತ್ರೆಯ ವೈದ್ಯೆ ಡಾ.ಬಬಿನಾ ತಿಳಿಸಿದ್ದಾರೆ.