Tag: Arvind Kejriwal

  • ಪ್ರಿಯಾಂಕ ಗಾಂಧಿಯಿಂದ ಸಮಯ ವ್ಯರ್ಥ: ಕೇಜ್ರಿವಾಲ್ ಟೀಕೆ

    ಪ್ರಿಯಾಂಕ ಗಾಂಧಿಯಿಂದ ಸಮಯ ವ್ಯರ್ಥ: ಕೇಜ್ರಿವಾಲ್ ಟೀಕೆ

    ದೆಹಲಿ: ಉತ್ತರ ಪ್ರದೇಶ ಪೂರ್ವದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಚುನಾವಣಾ ಪ್ರಚಾರ ನಡೆಸುವ ಮೂಲಕ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ.

    ದೆಹಲಿ ಎಎಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಿಯಾಂಕ ಗಾಂಧಿ ಅವರು ಯಾಕೆ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಪ್ರಚಾರ ಮಾಡುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ), ಸಮಾಜವಾದಿ ಪಕ್ಷ (ಎಸ್‍ಪಿ) ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ದೆಹಲಿಯಲ್ಲಿ ನಮ್ಮ ವಿರುದ್ಧವೇ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಸುಮ್ಮನೆ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಗುಡುಗಿದರು.

    ಪ್ರಿಯಾಂಕ ಗಾಂಧಿ ಹಾಗೂ ಸಹೋದರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೇರವಾಗಿ ಬಿಜೆಪಿ ವಿರುದ್ಧ ಸ್ಪರ್ಧೆ ಮಾಡುತ್ತಿರುವ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿಲ್ಲ ಎಂದು ದೂರಿದರು.

    ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಮಧ್ಯಪ್ರದೇಶದ ಭೋಪಾಲ್, ಸಾಗರ್ ಸೇರಿದಂತೆ 8 ಲೋಕಸಭಾ ಕ್ಷೇತ್ರಗಳ ಮತದಾನ ಮೇ 19ರಂದು ನಡೆಯಲಿದೆ. ಉಜೈನಿ, ಧಾರ್, ಇಂದೋರ್ ಸೇರಿದಿಂತೆ 8 ಕ್ಷೇತ್ರಗಳ ಮತದಾನ ಮೇ 19ರಂದು ನಡೆಯಲಿದೆ.

    ದೆಹಲಿಯಲ್ಲಿ ಒಟ್ಟು 7 ಲೋಕಸಭಾ ಕ್ಷೇತ್ರಗಳಿದ್ದು, ಎಲ್ಲ ಕ್ಷೇತ್ರಗಳ ಮತದಾನ ಮೇ 19ರಂದು ನಡೆಯಲಿದ್ದು, ಫಲಿತಾಂಶ ಮೇ 23ರಂದು ಹೊರ ಬೀಳಲಿದೆ.

  • ಆಪ್ ಶಾಸಕರನ್ನು ಖರೀದಿಸುವುದು ಸುಲಭವಲ್ಲ: ಮೋದಿ ವಿರುದ್ಧ ಕೇಜ್ರಿವಾಲ್ ಗುಡುಗು

    ಆಪ್ ಶಾಸಕರನ್ನು ಖರೀದಿಸುವುದು ಸುಲಭವಲ್ಲ: ಮೋದಿ ವಿರುದ್ಧ ಕೇಜ್ರಿವಾಲ್ ಗುಡುಗು

    ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕರನ್ನು ಖರೀದಿಸುವುದು ಸುಲಭವಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುಡುಗಿದ್ದಾರೆ.

    ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಜಿ, ರಾಜ್ಯಗಳಲ್ಲಿ ವಿರೋಧ ಪಕ್ಷದ ಶಾಸಕರನ್ನು ಖರೀದಿಸುವ ಮೂಲಕ ನೀವು ಸರ್ಕಾರವನ್ನು ಉರುಳಿಸುತ್ತೀರಾ? ಇದು ನಿಮ್ಮ ಪ್ರಜಾಪ್ರಭುತ್ವದ ವ್ಯಾಖ್ಯಾನವೇ? ಶಾಸಕರು ಖರೀದಿಸಲು ಇಷ್ಟೊಂದು ಹಣವನ್ನು ಎಲ್ಲಿಂದ ತರುತ್ತಿರುವಿರಿ ಎಂದು ಪ್ರಶ್ನಿಸಿದ್ದಾರೆ.

    ನೀವು ಈ ಹಿಂದೆ ಅನೇಕ ಬಾರಿ ನಮ್ಮ ಪಕ್ಷದ ಶಾಸಕರನ್ನು ಖರೀದಿಸಲು ಯತ್ನಿಸಿದ್ದೀರಿ. ಆದರೆ ಇದು ಖರೀದಿಸುವುದು ಸುಲಭದ ಮಾತಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ಅರವಿಂದ್ ಕೇಜ್ರಿವಾಲ್ ಚುನಾವಣಾ ಪ್ರಚಾರದ ವೇಳೆ ಈ ಹಿಂದೆಯೂ ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಮುಖಂಡ ವಿಜಯ್ ಗೋಯಲ್ ಅವರು, ಎಎಪಿಯ ಯಾವುದೇ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ನಾವು ಮಾಡಿಲ್ಲ. ಆದರೆ ಎಎಪಿ ತನ್ನ ಮೂಲ ಉದ್ದೇಶವನ್ನೇ ಮರೆತಿದೆ. ಹೀಗಾಗಿ 14 ಎಎಪಿ ಶಾಸಕರು ಪಕ್ಷ ತೊರೆಯಲು ಮುಂದಾಗಿದ್ದಾರೆ ಎಂದು ಹೇಳಿದ್ದರು.

    ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಶಾಜಿಯಾ ಇಮ್ಲಿ ಸೇರಿದಂತೆ ಅನೇಕರು ಈಗಾಗಲೇ ಎಎಪಿ ಪಕ್ಷದಿಂದ ಹೊರ ಬಂದಿದ್ದಾರೆ. ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ಹೇಳಿಕೊಂಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಅಧಿಕಾರಕ್ಕೆ ಬಂದ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಿಜಯ್ ಗೋಯಲ್ ಆರೋಪಿಸಿದ್ದರು.

    ದೆಹಲಿಯಲ್ಲಿ ಒಟ್ಟು 7 ಲೋಕಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್ ಹಾಗೂ ಎಎಪಿಗಳು ಏಕಾಂಗಿಯಾಗಿ ಸ್ಪರ್ಧಿಸುತ್ತಿವೆ. ಈ ಏಳು ಕ್ಷೇತ್ರಗಳ ಮತದಾನವು ಮೇ 12ರಂದು ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

  • ಮೋದಿ ಮತ್ತೆ ಅಧಿಕಾರಕ್ಕೆ ಬಂದ್ರೆ ರಾಹುಲ್ ಗಾಂಧಿಯೇ ಹೊಣೆ: ಕೇಜ್ರಿವಾಲ್ ಕಿಡಿ

    ಮೋದಿ ಮತ್ತೆ ಅಧಿಕಾರಕ್ಕೆ ಬಂದ್ರೆ ರಾಹುಲ್ ಗಾಂಧಿಯೇ ಹೊಣೆ: ಕೇಜ್ರಿವಾಲ್ ಕಿಡಿ

    – ಪ್ರಧಾನಿ ಸ್ಥಾನದಿಂದ ಮೋದಿಯನ್ನ ಕೆಳಗಿಳಿಸುವುದೇ ನಮ್ಮ ಉದ್ದೇಶ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಹೊಣೆ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ.

    ದೆಹಲಿಯಲ್ಲಿ ಇಂದು ಆಮ್ ಆದ್ಮಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆಯು ದೇಶ ಹಾಗೂ ಸಂವಿಧಾನ ರಕ್ಷಿಸಲು ಇದೆ. ನಾವು ಮೊದಲು ಭಾರತೀಯರು, ನಂತರ ಹಿಂದೂ ಹಾಗೂ ಮುಸ್ಲಿಂ ಎಂದು ಹೇಳಿದರು.

    ನಮ್ಮ ಗುರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಸ್ಥಾನದಿಂದ ಹಾಗೂ ಅಮಿತ್ ಶಾರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸುವುದಾಗಿದೆ. ಈ ನಿಟ್ಟಿನಲ್ಲಿ ನಾವು ಏನು ಬೇಕಾದರೂ ಮಾಡಲು ಸಿದ್ಧರಿದ್ದೇವೆ. ಯಾವುದೇ ಮಹಾಮೈತ್ರಿ ಇದ್ದರೂ ಅದಕ್ಕೆ ನಮ್ಮ ಬೆಂಬಲ ಇರುತ್ತದೆ. ಬಿಜೆಪಿಯು ಅಲ್ಪಸಂಖ್ಯಾತರ ವಿರುದ್ಧವಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಹಾಗೂ ಎಎಪಿ ಮೈತ್ರಿ ವಿಫಲವಾಗಿದ್ದಕ್ಕೆ ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಟ್ವಿಟ್ಟರ್ ನಲ್ಲಿ ಯಾವ ಮೈತ್ರಿಯ ಬಗ್ಗೆ ಚರ್ಚೆಯಾಗಿತ್ತು ಅಂತ ರಾಹುಲ್ ಗಾಂಧಿ ಅವರಿಗೆ ಕೇಳ ಬಯಸುತ್ತೇನೆ ಎಂದು ಅಸಮಾಧಾನ ಹೊರ ಹಾಕಿದರು.

    ಎಎಪಿಯು ಕಾಂಗ್ರೆಸ್ ಜೊತೆಗೆ ಮೈತ್ರಿ ಸಾಧಿಸಲು ಮುಂದಾಗಿತ್ತು. ಆದರೆ ಇದನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಲಿಲ್ಲ. ಕೊನೆಯ ಕ್ಷಣದಲ್ಲಿ ಮೈತ್ರಿ ಮಾತುಕತೆ ಮುರಿದು ಬಿತ್ತು ಎಂದು ಹೇಳಿ ಕೇಜ್ರಿವಾಲ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

  • ಮೋದಿ ಮತ್ತೆ ಅಧಿಕಾರಕ್ಕೆ ಬಂದ್ರೆ ಶಾ ಗೃಹ ಸಚಿವ ಆಗ್ತಾರೆ: ಅರವಿಂದ್ ಕೇಜ್ರಿವಾಲ್

    ಮೋದಿ ಮತ್ತೆ ಅಧಿಕಾರಕ್ಕೆ ಬಂದ್ರೆ ಶಾ ಗೃಹ ಸಚಿವ ಆಗ್ತಾರೆ: ಅರವಿಂದ್ ಕೇಜ್ರಿವಾಲ್

    ಪಣಜಿ: ಎನ್‍ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಕೆಳಗೆ ಗೃಹ ಸಚಿವರಾಗಿ ಅಮಿತ್ ಶಾ ನೇಮಕವಾಗುತ್ತಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ.

    ದಕ್ಷಿಣ ಗೋವಾದ ಮರ್ಮಗೋವಾದಲ್ಲಿ ನಡೆದ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಭಯಾನಕ ಆಟ ನಡೆಯುತ್ತಿದೆ. ನೀವು ಮತದಾನ ಮಾಡುವಾಗ ಈ ವಿಚಾರ ನಿಮಗೆ ತಿಳಿದಿರಲಿ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೃಹ ಸಚಿವರಾಗುತ್ತಾರೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಒಂದು ವೇಳೆ ಅಮಿತ್ ಶಾ ಅವರು ಗೃಹ ಸಚಿವರಾದರೆ ದೇಶದಲ್ಲಿ ಏನೆಲ್ಲ ಆಗಬಹುದು ಎಂದು ನೀವೇ ಯೋಚನೆ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದರು.

    ಪಶ್ಚಿಮ ಬಂಗಾಳದ ರಾಯ್‍ಗಂಜ್‍ನಲ್ಲಿ ನಡೆದಿದ್ದ ಬಿಜೆಪಿ ಪ್ರಚಾರದ ವೇಳೆ ಮಾತನಾಡಿದ್ದ ಅಮಿತ್ ಶಾ ಅವರು, ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ ಸಿ) ನಡೆಸಲಾಗುವುದು. ದೇಶದ ಒಳಗಡೆ ನುಸುಳಿರುವ ಪ್ರತಿಯೊಬ್ಬರನ್ನೂ ಹೊರಕ್ಕೆ ದಬ್ಬಲಾಗುವುದು. ಆದರೆ ಪಶ್ಚಿಮ ಬಂಗಾಳದಲ್ಲಿರುವ ವಲಸಿಗರು ಚಿಂತಿಸಬೇಕಿಲ್ಲ. ಬೌದ್ಧರು, ಹಿಂದೂಗಳು ಮತ್ತು ಸಿಖ್ಖರನ್ನು ಬಿಟ್ಟು ಉಳಿದೆಲ್ಲ ವಲಸಿಗರನ್ನು ದೇಶದಿಂದ ಹೊರಗೆ ಹಾಕಲಾಗುವುದು ಎಂದು ಹೇಳಿದ್ದಾರೆ. ದೇಶದಲ್ಲಿ ವಾಸಿಸುವ ಕ್ರಿಶ್ಚಿಯನ್, ಮುಸ್ಲಿಂ, ಪಾರ್ಸಿ, ಜೈನ್ ಧರ್ಮದವರು ಭಾರತದ ಒಳಗೆ ನುಸುಳಿ ಬಂದವರು ಎಂದು ಅಮಿತ್ ಶಾ ಭಾವಿಸಿದ್ದಾರೆ. ಇದು ಭಾರೀ ಅಪಾಯಕಾರಿ ಹೇಳಿಕೆಯಾಗಿದೆ ಎಂದು ತಿಳಿಸಿದರು.

    ಗೋವಾದಲ್ಲಿ 15 ಲಕ್ಷ ಜನರು ಮತ್ತು ಸುಮಾರು ಶೇ.40 ರಷ್ಟು ಮಂದಿ ಅಲ್ಪಸಂಖ್ಯಾತರಾಗಿದ್ದಾರೆ. ಅಮಿತ್ ಶಾ ಅವರು ಗೋವಾದಲ್ಲಿ ಹೇಗೆ ರಾಷ್ಟ್ರೀಯ ಪೌರತ್ವ ನೋಂದಣಿ ಅಳವಡಿಸಿಕೊಳ್ಳುತ್ತಾರೆ? ಆರು ಲಕ್ಷ ಜನರು ಏನು ಮಾಡಬೇಕು? ನೋಂದಣಿ ಪ್ರಕ್ರಿಯೆಯಿಂದ ಅಮಿತ್ ಶಾ ಅವರು ಗಲಭೆ ಸೃಷ್ಟಿಸುತ್ತಾರಾ ಎಂದು ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದರು.

    ಅಮಿತ್ ಶಾ ಅವರು ಗುಜರಾತ್‍ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಭೀಷ್ಮ, ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಹೀಗಾಗಿ ಎಲ್.ಕೆ.ಅಡ್ವಾಣಿ ಅವರ ಕ್ಷೇತ್ರದಿಂದ ಅಮಿತ್ ಶಾ ಕಣಕ್ಕೆ ಇಳಿದಿದ್ದಾರೆ. ಗಾಂಧಿನಗರ ಲೋಕಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದ್ದು, ಅಮಿತ್ ಶಾ ಜಯಗಳಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

  • ಚುನಾವಣೆ ಗೆಲ್ಲಲು ಇಮ್ರಾನ್, ಮೋದಿ ಮಧ್ಯೆ ರಹಸ್ಯ ಒಪ್ಪಂದ: ಕೇಜ್ರಿವಾಲ್

    ಚುನಾವಣೆ ಗೆಲ್ಲಲು ಇಮ್ರಾನ್, ಮೋದಿ ಮಧ್ಯೆ ರಹಸ್ಯ ಒಪ್ಪಂದ: ಕೇಜ್ರಿವಾಲ್

    ನವದೆಹಲಿ: ನಮೋ ಚಾನೆಲ್‍ಗೆ ಪಾಕಿಸ್ತಾನ ಹಣ ಹೂಡಿದ್ಯಾ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

    ದೆಹಲಿ ಶಾಸಕ ಕಪಿಲ್ ಮಿಶ್ರಾ ಅವರು, ನಮೋ ಚಾನೆಲ್‍ಗೆ ಯಾರು ಮಾಲೀಕರೇ ಇಲ್ಲ. ಭಾರತದ ಮೇಲೆ ದಾಳಿ ಮತ್ತಷ್ಟು ಮಾಡಿ ಹಾನಿಗೊಳಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರಲು ಪಾಕಿಸ್ತಾನವೇ ನಮೋ ಚಾನೆಲ್‍ಗೆ ಹಣಕಾಸು ಸಹಾಯ ನೀಡುತ್ತಿದೆ ಎಂದು ಟ್ವೀಟ್ ಮೂಲಕ ಆರೋಪಿಸಿದ್ದಾರೆ. ಇದನ್ನು ಅರವಿಂದ್ ಕೇಜ್ರಿವಾಲ್ ಅವರು ರೀ ಟ್ವೀಟ್ ಮಾಡಿದ್ದು, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್ ಅವರು, ಪಾಕಿಸ್ತಾನ ಹಾಗೂ ಇಮ್ರಾನ್ ಖಾನ್ ಬಹಿರಂಗವಾಗಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಈ ಮೂಲಕ ಪಾಕ್ ಮತ್ತು ಮೋದಿ ಮಧ್ಯೆ ರಹಸ್ಯ ಒಪ್ಪಂದವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ದೂರಿದ್ದಾರೆ.

    ಪ್ರಧಾನಿ ಮೋದಿ ಅವರಿಗೆ ಸಹಾಯ ಮಾಡಲು ಪಾಕಿಸ್ತಾನವು ಪುಲ್ವಾಮಾದಲ್ಲಿ 40 ಜನ ಭಾರತೀಯ ಯೋಧರನ್ನು ಹತ್ಯೆ ಮಾಡಿದ್ಯಾ ಅಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಗಂಭೀರವಾಗಿ ಆರೋಪಿಸಿದ್ದಾರೆ.

    ಪಾಕಿಸ್ತಾನಕ್ಕೆ ಮೋದಿ ಅವರೇ ಯಾಕೆ ಗೆಲ್ಲಬೇಕು? ನಿಮ್ಮ ಹಾಗೂ ಪಾಕಿಸ್ತಾನದ ಮಧ್ಯೆ ಇರುವ ಸಂಬಂಧ ಎಷ್ಟು ಆಳವಾಗಿದೆ ಎಂಬುದನ್ನು ದೇಶ ಜನರ ಮುಂದಿಡಿ. ನರೇಂದ್ರ ಮೋದಿ ಜಯ ಸಾಧಿಸಿದರೆ ಪಾಕಿಸ್ತಾನದಲ್ಲಿ ಪಟಾಕಿಗಳು ಸಿಡಿಯುತ್ತವೆ ಎಂಬುದನ್ನು ಪ್ರತಿ ಭಾರತೀಯರು ತಿಳಿಯಬೇಕು ಎಂದು ಹೇಳಿದ್ದಾರೆ.

    ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಕೂಡ ಟ್ವೀಟ್ ಮಾಡಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯಿಂದಾಗಿ ಮೋದಿ ಭಕ್ತರು ತಲೆ ಕೆರೆದುಕೊಳ್ಳುತ್ತಿದ್ದಾರೆ. ಈ ಹೇಳಿಕೆ ನೀಡಿದ ಅವರನ್ನು ಹೊಗಳಬೇಕೋ ಅಥವಾ ಬೇಡವೋ ಎನ್ನುವ ಕುರಿತು ಗೊಂದಲಕ್ಕೀಡಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

    ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸಿಂಗ್ ಸುರ್ಜೇವಾಲ ಅವರು ಕೂಡ ಟ್ವೀಟ್ ಮಾಡಿದ್ದು, ಪಾಕಿಸ್ತಾನವು ಅಧಿಕೃತವಾಗಿ ಮೋದಿ ಅವರರೊಂದಿಗೆ ಮೈತ್ರಿ ಮಾಡಿಕೊಂಡಿದೆ. ಪ್ರಧಾನಿ ಮೋದಿ ಅವರಿಗೆ ಮತ ನೀಡಿದರೆ ಅದು ಪಾಕಿಸ್ತಾನಕ್ಕೆ ಮತ ನೀಡಿದಂತೆ. ಅವರಿಗೆ ಈ ಮೊದಲು ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಸ್ನೇಹಿತರಾಗಿದ್ದರು. ಈಗ ಇಮ್ರಾನ್ ಖಾನ್ ಸ್ನೇಹಿತರಾಗಿದ್ದಾರೆ. ಅವರ ಈಗ ರಹಸ್ಯ ಹೊರಬಿದ್ದಿದೆ ಎಂದು ಆರೋಪಿಸಿದ್ದಾರೆ.

    ಇಮ್ರಾನ್ ಖಾನ್ ಹೇಳಿದ್ದೇನು?:
    ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಸಿಗುತ್ತದೆ. ಲೋಕಸಭಾ ಚುನಾವಣೆ ಬಳಿಕ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಪಾಕಿಸ್ತಾನದ ಜೊತೆಗಿರುವ ಕಾಶ್ಮೀರದ ಸಮಸ್ಯೆ ಬಗೆಹರಿಸಲು ಸ್ವಲ್ಪ ಭಯಪಡುವ ಸಾಧ್ಯತೆಯಿದೆ. ಒಂದು ವೇಳೆ ಬಲಪಂಥೀಯ ಪಕ್ಷವಾದ ಬಿಜೆಪಿಯು ಅಧಿಕಾರಕ್ಕೆ ಬಂದರೆ ಸಮಸ್ಯೆಗೆ ಕೆಲವು ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

  • ಈ ಬಾರಿ ಮೋದಿಯನ್ನು ಸೋಲಿಸದೇ ಇದ್ರೆ ಅವ್ರೇ ಅಜೀವ ಪ್ರಧಾನಿ: ಕೇಜ್ರಿವಾಲ್

    ಈ ಬಾರಿ ಮೋದಿಯನ್ನು ಸೋಲಿಸದೇ ಇದ್ರೆ ಅವ್ರೇ ಅಜೀವ ಪ್ರಧಾನಿ: ಕೇಜ್ರಿವಾಲ್

    ನವದೆಹಲಿ: ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸದೇ ಇದ್ದರೆ ಅವರು ಅಜೀವ ಪ್ರಧಾನಿಯಾಗಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

    ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ವೇಳೆ ಮೋದಿ ಪ್ರಧಾನಿಯಾದರೆ 2019ರ ಬಳಿಕ ದೇಶದಲ್ಲಿ ಚುನಾವಣೆ ನಡೆಯುವುದಿಲ್ಲ. ಮೋದಿ ಸರ್ಕಾರ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅನುಸರಿಸಿದ್ದ ತಂತ್ರವನ್ನು ಬಳಸಿಕೊಳ್ಳುತ್ತಿದೆ ಎಂದು ದೂರಿದರು.

    ಪ್ರಜಾಪ್ರಭುತ್ವ ನಾಶವಾಗುವ ಅಪಾಯದಲ್ಲಿದೆ. ಹೀಗಾಗಿ ಎಲ್ಲ ದೇಶ ಪ್ರೇಮಿಗಳು ಮೋದಿಯನ್ನು ಸೋಲಿಸಲು ಒಂದಾಗಬೇಕು. ಈ ನಿಟ್ಟಿನಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯಲು ಎಲ್ಲರು ಒಂದೇ ಉದ್ದೇಶವನ್ನು ಹೊಂದಿರಬೇಕು. ಒಂದು ವೇಳೆ ಮತ್ತೆ ಮೋದಿ ಪ್ರಧಾನಿಯಾದರೆ ಅವರು ಅಜೀವ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.

    ಇಂದು ಯಾರಾದರೂ ಮೋದಿ ಸರ್ಕಾರವನ್ನು ಪ್ರಶ್ನೆ ಮಾಡಿದರೆ ಅವರಿಗೆ ರಾಷ್ಟ್ರ ವಿರೋಧಿಗಳು ಎನ್ನುವ ಹಣೆಪಟ್ಟೆಯನ್ನು ನೀಡಲಾಗುತ್ತದೆ ಎಂದು ಆರೋಪಿಸಿದರು.

    ಹಿಟ್ಲರ್ ನ ಗುಂಡಾ ವ್ಯಕ್ತಿಗಳು ಮುಗ್ಧ ವ್ಯಕ್ತಿಗಳನ್ನು ಹೊಡೆದು ಕೊಲ್ಲುತ್ತಿದ್ದರು. ನಂತರ ಪೊಲೀಸರು ಸಂತಸ್ತರ ಮೇಲೆ ಕೇಸ್ ಹಾಕುತ್ತಿದ್ದರು. ಮೋದಿಯವರು ಸಹ ಅದನ್ನೇ ಇಲ್ಲಿ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಹಿಟ್ಲರ್ ತಂತ್ರವನ್ನು ಅನುಸರಿಸುತ್ತಿದ್ದಾರೆ. ಮೋದಿಯ ಅಭಿಮಾನಿಗಳಿಗೆ ಭಾರತ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ.

  • ನೋಟ್ ಬ್ಯಾನ್ ದೊಡ್ಡ ಹಗರಣ- ಅರವಿಂದ್ ಕೇಜ್ರಿವಾಲ್

    ನೋಟ್ ಬ್ಯಾನ್ ದೊಡ್ಡ ಹಗರಣ- ಅರವಿಂದ್ ಕೇಜ್ರಿವಾಲ್

    ನವದೆಹಲಿ: ನೋಟು ಅಮಾನೀಕರಣ ವಿಚಾರವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಗುಡುಗಿದ್ದಾರೆ.

    ಸ್ವಾತಂತ್ರ್ಯನಂತರ ಹಿಂದೆಂದೂ ಕಾಣದಂತಹ ನಿರುದ್ಯೋಗ ಸಮಸ್ಯೆ ಈಗ ದೇಶದಲ್ಲಿ ಸೃಷ್ಟಿಯಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಗುಡುಗಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?:
    ನೋಟ್ ಬ್ಯಾನ್ ದುರಂತವಲ್ಲ. ಅದೊಂದು ದೊಡ್ಡ ಹಗರಣ. ನೋಟ್ ಬ್ಯಾನ್ ದೇಶದ ಆರ್ಥಿಕತೆಯನ್ನೇ ಹಾಳು ಮಾಡಿದೆ. ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಎಂಬ ಎನ್‍ಎಸ್‍ಎಸ್‍ಒ ಅಂಕಿ ಸಂಖ್ಯೆ ಮಾಹಿತಿಯನ್ನು ಮುಚ್ಚಿಹಾಕಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಯತ್ನಿಸುತ್ತಿದೆ. ದೇಶದಲ್ಲಿ 1947ರ ಬಳಿಕ ಕಾಣದಂತಹ ನಿರುದ್ಯೋಗ ಸಮಸ್ಯೆ ಈಗ ಹೆಚ್ಚಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

    ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕ ರಮೇಶ್ ಅವರು ನೀವು ನೋಟ್ ಬ್ಯಾನ್‍ಗೂ ಮುನ್ನ ಹೀಗೆ ಇದ್ದೀರಿ. ನೋಟು ಅಮಾನೀಕರಣಗೊಂಡ ಬಳಿಕ ಹೀಗೆ ಆಗಿದ್ದೀರಾ ಎಂದು ಫೋಟೋ ಹಾಕಿ ವ್ಯಂಗ್ಯವಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾವು 2016ರ ನವೆಂಬರ್ ನಲ್ಲಿ 500ರೂ. ಹಾಗೂ 1,000 ರೂ. ಮುಖಬೆಲೆಯ ನೋಟು ನಿಷೇಧವನ್ನು ಮಾಡಿತ್ತು. ಬಳಿಕ 500 ರೂ. ಹೊಸ ನೋಟು ಹಾಗೂ 2,000 ರೂ. ಮುಖಬೆಲೆಯ ನೋಟನ್ನು ಜಾರಿಗೆ ತಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಾಂಗ್ರೆಸ್‍ಗೆ ನಿನ್ನೆ ಬೆಲ್ಲ ಕೊಟ್ಟು, ಇಂದು ಬೇವು ಕೊಟ್ಟ ಆಪ್!

    ಕಾಂಗ್ರೆಸ್‍ಗೆ ನಿನ್ನೆ ಬೆಲ್ಲ ಕೊಟ್ಟು, ಇಂದು ಬೇವು ಕೊಟ್ಟ ಆಪ್!

    ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ‘ಮಹಾಘಟಬಂಧನ್’ ಮೂಲಕ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದೆ. ಮಹಾಘಟಬಂಧನ್ ಗೆ ಕರ್ನಾಟಕದಲ್ಲಿಯೇ ಮುನ್ನುಡಿ ಬರೆದಿದ್ದು, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಿದ್ದಾರೆ. ಬುಧವಾರ ಅಪ್ ಮುಖಂಡರೊಬ್ಬರು ಮಹಾಘಟಬಂಧನ್ ಸೇರುವ ಇಂಗಿತ ವ್ಯಕ್ತಪಡಿಸಿ ಕಾಂಗ್ರೆಸ್‍ಗೆ ಸಿಹಿ ಸುದ್ದಿ ನೀಡಿದ್ದರು. ಆದ್ರೆ ಇಂದು ಮತ್ತೋರ್ವ ಮುಖಂಡ ಕಹಿ ಸುದ್ದಿ ನೀಡಿದ್ದಾರೆ.

    ದೆಹಲಿಯಲ್ಲಿ ಅಧಿಕಾರ ಹಿಡಿದಿರುವ ಆಪ್ ಮಹಾಘಟಬಂಧನ್ ದಿಂದ ದೂರ ಉಳಿಯುವುದಾಗಿ ಘೋಷಿಸಿಕೊಂಡಿದೆ. ಈ ಕುರಿತು ಆಪ್ ಪಕ್ಷದ ನಾಯಕ ಸಂಜಯ್ ಸಿಂಗ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಪಕ್ಷ ಏಕಾಂಗಿಯೇ ಎದುರಿಸಲಿದೆ. ಯಾರೊಂದಿಗೆ ಮೈತ್ರಿ ಮಾಡಿಕೊಳ್ಳದೇ ನಮ್ಮ ಸಾಮರ್ಥ್ಯದಿಂದಲೇ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ತಿಳಿಸಿದ್ದಾರೆ.

    ದೆಹಲಿಯಲ್ಲಿ ನಡೆದ ಪಕ್ಷದ ಸಭೆಯ ಬಳಿಕ ಮಾತನಾಡಿದ ಸಂಜಯ್ ಸಿಂಗ್, ಪಂಜಾಬ್, ಗೋವಾ, ದೆಹಲಿ, ಮತ್ತು ಹರಿಯಾಣಗಳಲ್ಲಿ ಆಪ್ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಯಾವುದೇ ಘಟಬಂಧನ್ ಜೊತೆ ಸೇರಿಕೊಳ್ಳುವ ಮೂಲಕ ಪಕ್ಷದ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದಕ್ಕೆ ನಾವು ಇಷ್ಟಪಡಲ್ಲ. ಫೆಬ್ರವರಿ 15ರ ನಂತರ ಎಲ್ಲ ರಾಜ್ಯಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಿಕೊಳ್ಳಲಾಗುವುದು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಮ್ಮೊಂದಿಗೆ ಇರುತ್ತಾರೆ ಅಂತಾ ಹೇಳಿದರು.

    ಬುಧವಾರ ಆಪ್ ಪಕ್ಷದ ಮುಖಂಡ ಗೋಪಾಲ್ ರಾಯ್ ಎಂಬವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಯಾರ ಜೊತೆಯಲ್ಲಾದ್ರೂ ಮೈತ್ರಿ ಮಾಡಿಕೊಳ್ಳಲು ನಾವು ಸಿದ್ಧ ಎಂದು ಹೇಳುವ ಮೂಲಕ ಮಹಾಘಟಬಂಧನ್ ಸೇರುವ ಮುನ್ಸೂಚನೆ ಕೊಟ್ಟಿದ್ದರು. ಆದ್ರೆ ಇಂದು ಸಂಜಯ್ ಸಿಂಗ್ ಏಕಾಂಗಿ ಸ್ಪರ್ಧೆ ಮಾಡೋದು ಖಚಿತ ಎಂದು ಹೇಳುವ ಮೂಲಕ ಕಾಂಗ್ರೆಸ್ ಗೆ ಶಾಕ್ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಭೆಯಲ್ಲಿ ಒಟ್ಟಾಗಿ ಕೆಮ್ಮಿ ಸಿಎಂ ಕೇಜ್ರಿವಾಲ್‍ಗೆ ಅಣಕಿಸಿದ ಸಭಿಕರು – ವಿಡಿಯೋ ನೋಡಿ

    ಸಭೆಯಲ್ಲಿ ಒಟ್ಟಾಗಿ ಕೆಮ್ಮಿ ಸಿಎಂ ಕೇಜ್ರಿವಾಲ್‍ಗೆ ಅಣಕಿಸಿದ ಸಭಿಕರು – ವಿಡಿಯೋ ನೋಡಿ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭಾಷಣದ ವೇಳೆ ಸಭಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಒಟ್ಟಿಗೆ ಕೆಮ್ಮುವ ಮೂಲಕ ಅಣಕಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಕ್ಲೀನ್ ಗಂಗಾ ಮಿಷನ್ ಹಾಗೂ ದೆಹಲಿಯ ಜಲ ಬೋರ್ಡ್ ಸಹಯೋಗದಲ್ಲಿ ಯಮುನಾ ನದಿ ಸ್ವಚ್ಛಗೊಳಿಸುವ ಯೋಜನೆಗೆ ಗುರುವಾರ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಅರವಿಂದ್ ಕೇಜ್ರಿವಾಲ್, ಸಚಿವ ನಿತಿನ್ ಗಡ್ಕರಿ, ಬಿಜೆಪಿ ಕಾರ್ಯಕರ್ತರು, ಅಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

    ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಸಿಎಂ ಕೇಜ್ರಿವಾಲ್ ಮಾತನಾಡಲು ಆರಂಭಿಸುತ್ತಿದ್ದಂತೆ, ಸಭಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಕೆಮ್ಮುವ ಮೂಲಕ ಅಣಕಿಸಲು ಆರಂಭಿಸಿದರು. ಇದರಿಂದ ಮುಜುಗರಕ್ಕೆ ಒಳಗಾಗದ ಸಿಎಂ ಸುಮ್ಮನಿರಿ ಅಂತ ಮನವಿ ಮಾಡಿಕೊಂಡರೂ ಸಭಿಕರು ಮಾತ್ರ ಒಬ್ಬರ ನಂತರ ಒಬ್ಬರು ಕೆಮ್ಮುತ್ತಲೇ ಇದ್ದರು. ಹೀಗಾಗಿ ವೇದಿಕೆಯ ಮೇಲಿದ್ದ ಗಣ್ಯರತ್ತ ಕೇಜ್ರಿವಾಲ್ ಅವರು ದೃಷ್ಟಿ ಹರಿಸಿದರು.

    ಈ ಬೆಳವಣಿಗೆಯಿಂದ ಮಧ್ಯ ಪ್ರವೇಶಿಸಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಮುಖ್ಯಮಂತ್ರಿಗಳ ಭಾಷಣಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಅರವಿಂದ್ ಕೇಜ್ರಿವಾಲ್, ನಿತಿನ್ ಗಡ್ಕರಿ ಅವರು ನಮ್ಮನ್ನು ಪ್ರತಿ ಸ್ಪರ್ಧಿ ಪಕ್ಷ ಅಂತ ಭಾವಿಸಲಿಲ್ಲ. ಆದರೆ ಉಳಿದವರ ಬಗ್ಗೆ ನನಗೆ ಗೊತ್ತಿಲ್ಲ. ಅವರ ಈ ವರ್ತನೆ ನಮ್ಮ ಮೇಲಿರುವ ಪ್ರೀತಿಯನ್ನು ತೋರಿಸುತ್ತಿದೆ. ಬಿಜೆಪಿಯವರು ನನ್ನ ಮೇಲೆ ಇಷ್ಟು ಕಾಳಜಿ ಇಟ್ಟಿದ್ದಾರೆ ಎನ್ನುವುದು ನನಗೆ ತಿಳಿದಿರಲಿಲ್ಲ ಎಂದು ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಡಿಮೆ ಅವಧಿಯಲ್ಲಿಯೇ ಪ್ರಧಾನಿ ಮೋದಿಗಿಂತ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದೇವೆ: ಕೇಜ್ರಿವಾಲ್

    ಕಡಿಮೆ ಅವಧಿಯಲ್ಲಿಯೇ ಪ್ರಧಾನಿ ಮೋದಿಗಿಂತ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದೇವೆ: ಕೇಜ್ರಿವಾಲ್

    ನವದೆಹಲಿ: ಕಡಿಮೆ ಅವಧಿಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.

    ಆಮ್ ಆದ್ಮಿ ಪಕ್ಷದ ಆರನೇ ವರ್ಷಾಚರಣೆಯಲ್ಲಿ ಮಾತನಾಡಿದ ಸಿಎಂ ಕೇಜ್ರಿವಾಲ್ ಅವರು, ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ 12 ವರ್ಷಗಳ ಕಾಲ ಆಡಳಿತ ಮಾಡಿದ್ದಾರೆ. ಆಗ ಅವರು ಮಾಡಿರುವ ಅಭಿವೃದ್ಧಿ ಕೆಲಸಕ್ಕಿಂತ ಹೆಚ್ಚು ಆಪ್ ಸರ್ಕಾರ ದೆಹಲಿಯಲ್ಲಿ ಮಾಡಿದೆ ಎಂದು ಅವರು, ಸರ್ಕಾರದ ಸಾಧನೆಗೆ ಶ್ರಮಿಸಿದ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಅಭಿನಂದನೆ ಸಲ್ಲಿಸಿದರು.

    ನಮ್ಮ ಆಡಳಿತಕ್ಕೆ ದೆಹಲಿಯ ಪ್ರಜೆಗಳು, ನಾವು ಪ್ರಾಮಾಣಿಕ ಮುಖ್ಯಮಂತ್ರಿಯನ್ನು ಹೊಂದಿದ್ದೇವೆ ಅಂತ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈಗ ಹೇಳಿ ನಿಮ್ಮ ಪ್ರಧಾನಿ ನರೇಂದ್ರ ಮೋದಿ ಪ್ರಾಮಾಣಿಕರೇ ಎಂದು ಕೇಜ್ರಿವಾಲ್, ದೇಶದ ಜನತೆಯನ್ನು ಪ್ರಶ್ನಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು, ರಫೇಲ್ ಹಗರಣ ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರ ಆಡಳಿತ ಅವಧಿಯಲ್ಲಿ ಉದ್ಯಮಿ ವಿಜಯ್ ಮಲ್ಯ ಹಾಗೂ ವಜ್ರ ವ್ಯಾಪಾರಿ ನೀರವ್ ಮೋದಿ ಬ್ಯಾಂಕ್ ಸಾಲ ಮರುಪಾವತಿಸದೆ ವಿದೇಶಕ್ಕೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.

    ಆಮ್ ಆದ್ಮಿ ಪಕ್ಷ ಆಡಳಿತಕ್ಕೆ ಬಂದು ಆರು ವರ್ಷ ಕಳೆದಿದೆ. ದೇಶದಲ್ಲಿ ರಾಜಕೀಯ ಭ್ರಷ್ಟಾಚಾರ ಹಾಗೂ ಕೋಮುವಾದದ ವಿರುದ್ಧ ಹೋರಾಟ ಮುಂದುವರಿಸಲಿದೆ ಎಂದು ಟ್ವೀಟ್ ಕೂಡ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv