Tag: Arvind Kejriwal

  • ಕೇಂದ್ರದ ನಿರ್ಧಾರದಿಂದ ಜಮ್ಮು-ಕಾಶ್ಮೀರ ಅಭಿವೃದ್ಧಿ ಹೊಂದಲಿದೆ- ಕೇಜ್ರಿವಾಲ್

    ಕೇಂದ್ರದ ನಿರ್ಧಾರದಿಂದ ಜಮ್ಮು-ಕಾಶ್ಮೀರ ಅಭಿವೃದ್ಧಿ ಹೊಂದಲಿದೆ- ಕೇಜ್ರಿವಾಲ್

    ನವದೆಹಲಿ: ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದು ಪಡಿಸಿದ್ದಕ್ಕೆ, ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಆದರೆ, ಅಚ್ಚರಿ ಎಂಬಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

    ವಿರೋಧ ಪಕ್ಷಗಳಲ್ಲಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದವರ ಪೈಕಿ ಅರವಿಂದ್ ಕೇಜ್ರಿವಾಲ್ ಏಕೈಕರಾಗಿದ್ದಾರೆ.

    ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜಮ್ಮು ಮತ್ತು ಕಾಶ್ಮೀರದ ಕುರಿತು ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ಈ ನಿರ್ಧಾರದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಲಿದೆ. ಅಲ್ಲದೆ, ರಾಜ್ಯವು ಅಭಿವೃದ್ಧಿ ಹೊಂದಲಿದೆ ಎಂದು ತಿಳಿಸಿದ್ದಾರೆ.

    ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ರಾಜಕೀಯ ಪಯಣದಲ್ಲಿ ವಿವಿಧ ವಿಷಯಗಳ ಕುರಿತು, ವಿಶೇಷವಾಗಿ ದೆಹಲಿಯ ಸ್ವಾಯತ್ತತೆಗೆ ಸಂಬಂಧಿಸಿದಂತೆ ಈವರೆಗೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಲೇ ಬಂದಿದೆ. ವರ್ಷಗಳಿಂದ ಬಿಜೆಪಿ ವಿರುದ್ಧ ಕಿಡಿಕಾರುತ್ತಿದ್ದ ಅರವಿಂದ್ ಕೇಜ್ರಿವಾಲ್ ಅವರು, ಕೇಂದ್ರದ ಬಿಜೆಪಿ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ಮೂಲಕ ದೆಹಲಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ಚುನಾಯಿತ ಸ್ಥಳೀಯ ಸರ್ಕಾರವನ್ನು ಕಡೆಗಣಿಸುತ್ತಿದೆ ಎಂದು ಹಲವು ವರ್ಷಗಳಿಂದ ಆರೋಪಿಸುತ್ತಲೇ ಬಂದಿದ್ದಾರೆ.

    ಜಮ್ಮು ಕಾಶ್ಮೀರಕ್ಕೆ ಆರ್ಟಿಕಲ್ 370 ಹಾಗೂ 35ಎ ಅಡಿ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಕುರಿತ ವಿಧೇಯಕಕ್ಕೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಸಹಿ ಹಾಕಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಸಂಸತ್‍ನಲ್ಲಿ ಹೇಳಿದ್ದರು.

    370ನೇ ವಿಧಿಯನ್ನು ಸಂವಿಧಾನದಿಂದ ತೆಗೆದು ಹಾಕಲು ಒಂದು ಸೆಕೆಂಡ್ ಕೂಡ ತಡವಾಗಬಾರದು ಎಂದು ಗೃಹ ಸಚಿವ ಅಮಿತ್ ಶಾ ಅವರು ಸಂಸತ್‍ನಲ್ಲಿ ಘೋಷಿಸಿದರು. ಅಮಿತ್ ಶಾ ಘೋಷಿಸುತ್ತಿದ್ದಂತೆ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಲು ಪ್ರಾರಂಭಿಸಿದವು.

    ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ದೆಹಲಿಯಂತೆ ಶಾಸಕಾಂಗವನ್ನು ಹೊಂದಿರಲಿದೆ. ಲಡಾಕ್ ಶಾಸಕಾಂಗವಿಲ್ಲದೆ, ಕೇವಲ ಕೇಂದ್ರಾಡಳಿತ ಪ್ರದೇಶವಾಗಿರಲಿದೆ ಎಂದು ಸಂಸತ್‍ನಲ್ಲಿ ಅಮಿತ್ ಶಾ ತಿಳಿಸಿದ್ದಾರೆ.

  • ಅರವಿಂದ್ ಕೇಜ್ರಿವಾಲ್‍ರಿಂದ ದೆಹಲಿ ಜನತೆಗೆ ಉಚಿತ ವಿದ್ಯುತ್

    ಅರವಿಂದ್ ಕೇಜ್ರಿವಾಲ್‍ರಿಂದ ದೆಹಲಿ ಜನತೆಗೆ ಉಚಿತ ವಿದ್ಯುತ್

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ದೆಹಲಿ ಆಡಳಿತ ರೂಢ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಜನರಿಗೆ ಆಕರ್ಷಕ ಯೋಜನೆಗಳನ್ನು ಪ್ರಕಟಿಸುತ್ತಿದೆ. ಇದರಂತೆ ದೆಹಲಿಯಲ್ಲಿ ಮಾಸಿಕ 200 ಯೂನಿಟ್ ಬಳಸುವವರಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಪ್ರಕಟಿಸಿದೆ.

    ಈ ವಿಶೇಷ ಯೋಜನೆಯನ್ನು ಘೋಷಣೆ ಮಾಡಿರುವ ಕೇಜ್ರಿವಾಲ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 200 ಯೂನಿಟ್ ಬಳಸುವವರಿಗೆ ಉಚಿತ ವಿದ್ಯುತ್ ಪೂರೈಕೆಯಾದರೆ, 201 ರಿಂದ 400 ಯೂನಿಟ್ ಬಳಸುವವರ ಬಿಲ್ ನಲ್ಲಿ ಶೇ.50 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

    200 ಯೂನಿಟ್ ಬರುವವರಿಗೆ ಯಾವುದೇ ಬಿಲ್ ಬರುವುದಿಲ್ಲ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ ಎಂದರು. ಈ ಯೋಜನೆಯಿಂದ ದೆಹಲಿಯ ನಗರದ ಶೇ.33 ರಷ್ಟು ಮಂದಿ ಈ ಯೋಜನೆಯ ಫಲಾನುಭವಿಗಳುತ್ತಾರೆ ಎಂದಿದ್ದಾರೆ. ಚಳಿಗಾಲದಲ್ಲಿ ಈ ಸಂಖ್ಯೆ ಶೇ.70ರ ವರೆಗೂ ಹೆಚ್ಚಳವಾಗುತ್ತದೆ ಎಂದಿದ್ದಾರೆ. ಬುಧವಾರವಷ್ಟೇ ಈ ಕುರಿತು ಮಾಹಿತಿ ನೀಡಿದ್ದ ಅವರು, ಕಳೆದ ಐದು ವರ್ಷಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ವಿದ್ಯುತ್ ದರವನ್ನು ಏರಿಕೆ ಮಾಡಿಲ್ಲ. ದೇಶದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ವಿದ್ಯುತ್ ನೀಡುತ್ತಿದ್ದೇವೆ ಎಂದು ಹೇಳಿದ್ದರು.

    ಟ್ವೀಟ್ ಮಾಡಿ ಯೋಜನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಆಪ್ ಪಕ್ಷದ ನಾಯಕ ಮನೀಷ್ ಸಿಸೋಡಿಯಾ, ಶಿಕ್ಷಣ, ಆರೋಗ್ಯದೊಂದಿಗೆ ವಿದ್ಯುತ್ ಕೂಡ ಮೂಲಭೂತ ಅಗತ್ಯವಾಗಿದೆ ಎಂದಿದ್ದಾರೆ. ಈ ಯೋಜನೆಯನ್ನು ಟೀಕೆ ಮಾಡಿ ದೆಹಲಿ ಬಿಜೆಪಿ ಖಾರವಾಗಿ ಪ್ರತಿಕ್ರಿಯೆ ನೀಡಿದೆ. ದೆಹಲಿ ಜನತೆಯಿಂದ 7 ಸಾವಿರ ಕೋಟಿ ರೂ. ಲೂಟಿ ಮಾಡಿದ್ದೀರಿ, ಅದನ್ನು ಯಾವಾಗ ಹಿಂದಿರುಗಿಸುತ್ತೀರಿ ಎಂದು ಪ್ರಶ್ನಿಸಿದೆ. ಈ ಹಿಂದೆ ಸಿಎಂ ಕೇಜ್ರಿವಾಲ್ ಸರ್ಕಾರ ಸಾರ್ವಜನಿಕರ ಸಾರಿಗೆ ಮತ್ತು ವಿಶೇಷವಾಗಿ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನಡೆಸುವ ಅವಕಾಶ ನೀಡುವುದಾಗಿ ಘೋಷಣೆ ಮಾಡಿತ್ತು.

  • ಅರವಿಂದ್ ಕೇಜ್ರಿವಾಲ್ ವಿರುದ್ಧ ದೋಷ ನಿಗದಿ

    ಅರವಿಂದ್ ಕೇಜ್ರಿವಾಲ್ ವಿರುದ್ಧ ದೋಷ ನಿಗದಿ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ನಾಲ್ವರ ವಿರುದ್ಧ ದೆಹಲಿ ಕೋರ್ಟ್ ದೋಷರೋಪ ನಿಗದಿ ಮಾಡಿದೆ.

    2014 ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಿಷೇಧಾಜ್ಞೆಯ ಉಲ್ಲಂಘನೆ ಹಾಗೂ ಆಂದೋಲನದ ಸಂದರ್ಭದಲ್ಲಿ ಸರ್ಕಾರಿ ನೌಕರರನ್ನು ತಡೆದಿದ್ದಕ್ಕೆ ಪ್ರಕರಣ ನಡೆದಿತ್ತು. ಈ ಕುರಿತು ನ್ಯಾಯಾಲಯ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ರಾಖಿ ಬಿರ್ಲಾ ಹಾಗೂ ಸೋಮ್‍ನಾಥ್ ಭಾರತಿ ಅವರ ವಿರುದ್ಧ ದೋಷ ನಿಗದಿ ಮಾಡಿದೆ. ಈ ಪ್ರಕರಣದಿಂದ ಅಶುತೋಷ್ ಮತ್ತು ಸಂಜಯ್ ಸಿಂಗ್ ಅವರನ್ನು ಕೈ ಬಿಟ್ಟಿದೆ.

    ವಕೀಲರಾದ ರಿಷಿಕೇಶ್ ಕುಮಾರ್ ಮತ್ತು ಮೊಹದ್ ಇರ್ಷಾದ್ ಅವರು ಮುಖ್ಯಮಂತ್ರಿ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಸಂಜಯ್ ಸಿಂಗ್ ಅವರ ಪರ ವಾದ ಮಂಡಿಸಿದರು. ಅಶುತೋಷ್ ಹಾಗೂ ಸೋಮ್‍ನಾಥ್ ಭಾರತಿ ಅವರು ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

    ಎನಿದು ಪ್ರಕರಣ?
    2014ರ ಜನವರಿಯಲ್ಲಿ ದಕ್ಷಿಣ ದೆಹಲಿಯಲ್ಲಿ ನಡೆಯುತ್ತಿರುವ ಡ್ರಗ್ಸ್ ಹಾಗೂ ವೇಶ್ಯಾವಾಟಿಕೆ ದಂಧೆಯ ಅಡ್ಡೆ ಮೇಲೆ ದಾಳಿ ನಡೆಸುವುದನ್ನು ನಿರಾಕರಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈಲು ಭವನದ ಹೊರಗಡೆ ಧರಣಿ ನಡೆಸಿದ್ದರು. ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದು ಮತ್ತು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ ಪ್ರತಿಭಟಿಸಿದ್ದಾರೆ ಎಂದು ಆರೋಪಿಸಿ 6 ಮಂದಿಯ ವಿರುದ್ಧ ಪೊಲೀಸರು ಚಾರ್ಜ್‍ಶೀಟ್ ದಾಖಲಿಸಿದ್ದರು.

  • ಪ್ರಧಾನಿ ಮೋದಿ ಭೇಟಿ ಮಾಡಿ ಮನವಿ ಸಲ್ಲಿಸಿದ ಅರವಿಂದ್ ಕೇಜ್ರಿವಾಲ್

    ಪ್ರಧಾನಿ ಮೋದಿ ಭೇಟಿ ಮಾಡಿ ಮನವಿ ಸಲ್ಲಿಸಿದ ಅರವಿಂದ್ ಕೇಜ್ರಿವಾಲ್

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯನ್ನು ಟೀಕಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಲೋಕಸಭೆಯ ಕಹಿ ಘಟನೆಗಳು ಮರೆಮಾಚುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದೆಹಲಿಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

    ಹೊಸ ಎನ್‍ಡಿಎ ಸರ್ಕಾರ ರಚನೆಯಾದ ನಂತರ ಪ್ರಥಮ ಬಾರಿಗೆ ಪ್ರಧಾನಿ ಮೋದಿಯನ್ನು ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಿದ್ದು, ದೆಹಲಿಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ‘ನೀರು ಉಳಿಸಿ’ ಅಭಿಯಾನವನ್ನು ತಮ್ಮದೇ ಯೋಜನೆಯೊಂದಿಗೆ ಜಾರಿಗೊಳಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.

    ಪ್ರಧಾನಿ ಮೋದಿ ಭೇಟಿ ಕುರಿತು ತಮ್ಮ ಟ್ವಿಟ್ಟರ್‍ನಲ್ಲಿ ಮಾಹಿತಿ ಹಂಚಿಕೊಂಡಿರುವ ಅರವಿಂದ್ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಯ ವಿಜಯದ ಕುರಿತು ಶುಭಾಶಯ ಕೋರಿದೆ ಎಂದು ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ರಾಂಚಿಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಂತರ ಮರಳುವಾಗ ಕೇಜ್ರಿವಾಲ್ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

    ಯಮುನಾ ನದಿ ನೀರನ್ನು ಕೊಯ್ಲು ಮಾಡುವ ಯೋಜನೆ ಮೂಲಕ ರಾಜಧಾನಿಯಲ್ಲಿ ಹೆಚ್ಚುತ್ತಿರುವ ನೀರಿನ ಕೊರತೆಯನ್ನು ನೀಗಿಸಲು ಮುಂದಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ಮಳೆಗಾಲದಲ್ಲಿ ಯಮುನಾ ನದಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಸರ್ಕಾರದ ಉದ್ದೇಶವಾಗಿದ್ದು, ಒಂದು ಋತುಮಾನದ ನೀರಿನಿಂದ ದೆಹಲಿಯ ಒಂದು ವರ್ಷದ ನೀರಿನ ಕೊರತೆಯನ್ನು ನೀಗಿಸಬಹುದಾಗಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯನ್ನು ಪೂರೈಸಲು ಕೇಜ್ರಿವಾಲ್ ಕೇಂದ್ರ ಸರ್ಕಾರದ ನೆರವಿಗೆ ಮನವಿ ಮಾಡಿದ್ದಾರೆ. ದೆಹಲಿ ಹಾಗೂ ಕೇಂದ್ರ ಸರ್ಕಾರ ಜೊತೆಯಾಗಿ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ ಎಂದು ಕೇಜ್ರಿವಾಲ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಸಂಸತ್ ಜಂಟಿ ಅಧಿವೇಶನಲ್ಲಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಈ ಕುರಿತು ಭಾಷಣ ಮಾಡಿದ್ದು, ನೀರು ಉಳಿಸುವ ಕುರಿತು ರಾಷ್ಟ್ರವ್ಯಾಪಿ ಅಭಿಯಾನ ನಡೆಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬದ್ಧತೆಯನ್ನು ವಿವರಿಸಿದ್ದರು. ಇದು ಸರ್ಕಾರದ ಎರಡನೇ ಅವಧಿಯ ವಿಶೇಷ ಅಭಿಯಾನವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಸ್ವಚ್ಛ ಭಾರತ’ ಅಭಿಯಾನ ಜನಪ್ರಿಯವಾಗಿತ್ತು.

    ಅಭಿಯಾನದ ಭಾಗವಾಗಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ, ಗ್ರಾಮ ಪಂಚಾಯತ್‍ಗಳಿಗೆ ಪತ್ರ ಬರೆದು ಈ ಬಾರಿಯ ಮಳೆಗಾಲದಲ್ಲಿ ನೀರನ್ನು ಕೊಯ್ಲು ಮಾಡುವ ಮೂಲಕ ಅಭಿಯಾನಕ್ಕೆ ಕೈ ಜೋಡಿಸುವಂತೆ ಸೂಚಿಸಿದ್ದಾರೆ.

    ಅಲ್ಲದೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೊಹಲ್ಲಾ ಕ್ಲಿನಿಕ್ (ಸಣ್ಣ ಕ್ಲಿನಿಕ್) ಹಾಗೂ ಅಧುನೀಕರಣಗೊಳಿಸಿದ ದೆಹಲಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವಂತೆಯೂ ಇದೇ ವೇಳೆ ಮನವಿ ಮಾಡಿದ್ದಾರೆ. ಮೊಹಲ್ಲಾ ಕ್ಲಿನಿಕ್ ಸ್ಥಾಪನೆ ಹಾಗೂ ಸರ್ಕಾರಿ ಶಾಲೆಗಳನ್ನು ಅಧುನೀಕರಣಗೊಳಿಸುವ ಯೋಜನೆಗಳು ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾಗಿದ್ದು, ಈ ಕುರಿತು ಹೆಚ್ಚು ಪ್ರಶಂಸೆ ವ್ಯಕ್ತವಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮಹಿಳೆಯರಿಗೆ ಮೆಟ್ರೋ, ಬಸ್ ಸಂಚಾರ ಉಚಿತ – ಕೇಜ್ರಿವಾಲ್ ಘೋಷಣೆ

    ಮಹಿಳೆಯರಿಗೆ ಮೆಟ್ರೋ, ಬಸ್ ಸಂಚಾರ ಉಚಿತ – ಕೇಜ್ರಿವಾಲ್ ಘೋಷಣೆ

    ನವದೆಹಲಿ: ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಮಹಿಳೆಯರಿಗೆ ದೆಹಲಿ ಸರ್ಕಾರ ಬಂಪರ್ ಘೋಷಣೆ ಪ್ರಕಟಿಸಿದೆ. ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಮಹತ್ವದ ನಿರ್ಧಾರವನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.

    ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೆಹಲಿಯಲ್ಲಿ ಸಂಚಾರ ಮಾಡುವ ಮಹಿಳೆಯರಿಗೆ ಸುರಕ್ಷಿತ ಪ್ರಯಾಣದ ಅನುಭವ ಸಿಗಲಿ ಎಂದು ದೆಹಲಿಯ ಮೆಟ್ರೋ ಮತ್ತು ಬಸ್ ಸಂಚಾರವನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

    “ದೆಹಲಿಯ ಡಿಟಿಸಿ ಬಸ್, ಕ್ಲಸ್ಟರ್ ಬಸ್‍ಗಳು ಮತ್ತು ಮೆಟ್ರೋ ರೈಲುಗಳಲ್ಲಿ, ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶವಿದೆ. ಇದರಿಂದ ಅವರು ಸುರಕ್ಷಿತವಾಗಿ ಪ್ರಯಾಣ ಮಾಡಬಹುದು. ಹೆಚ್ಚಿನ ಬೆಲೆಯಿದೆ ಎಂಬ ಕಾರಣಕ್ಕೆ ಕೆಲ ಮಹಿಳೆಯರು ಕೆಲವು ಸಾರಿಗೆ ವಿಧಾನಗಳನ್ನು ಬಳಸುತ್ತಿಲ್ಲ. ಈ ಉಚಿತ ಯೋಜನೆಯಿಂದ ಅಂತಹ ಮಹಿಳೆಯರಿಗೆ ಅನುಕೂಲವಾಗುತ್ತೆದೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

    ಇದರಲ್ಲಿ ಯಾವುದೇ ತರಹದ ಸಹಾಯಧನವನ್ನು ವಿಧಿಸಿಲ್ಲ. ಈ ಉಚಿತ ಯೋಜನೆ ಐಚ್ಛಿಕವಾಗಿದ್ದು ನಾವು ಟಿಕೆಟ್ ಪಡೆದು ಸಂಚಾರ ಮಾಡುತ್ತೇವೆ ಎಂದು ಮಹಿಳೆಯರು ನಿರ್ಧರಿಸಿದರೆ ಹಣವನ್ನು ಪಾವತಿಸಿ ಸಂಚರಿಸಬಹುದು ಎಂದು ತಿಳಿಸಿದರು.

    ಈ ಯೋಜನೆಯನ್ನು ಈಗ ಪ್ರಸ್ತಾಪ ಮಾಡಿದ್ದೇವೆ ಹೊರತು ಆರಂಭಿಸಿಲ್ಲ. ಈ ಯೋಜನೆಯ ಸಂಬಂಧ ಡಿಟಿಸಿ ಮತ್ತು ಮೆಟ್ರೋ ಅಧಿಕಾರಿಗಳಿಗೆ ದೀರ್ಘವಾದ ಪ್ರಸ್ತಾವನೆ ಸಿದ್ಧಪಡಿಸಲು ಒಂದು ವಾರ ಸಮಯ ನೀಡಲಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

    ಪ್ರಸ್ತಾವನೆಗಳನ್ನು ಅಧ್ಯಯನ ಮಾಡಿದ ಬಳಿಕ 2-3 ತಿಂಗಳಲ್ಲಿ ಈ ಯೋಜನೆ ಕಾರ್ಯಗತವಾಗಲಿದೆ. ಈ ಸಂಬಂಧ ಜನರಿಂದಲೂ ನಾವು ಸಲಹೆಗಳನ್ನು ಕೇಳಿದ್ದೇವೆ ಎಂದು ತಿಳಿಸಿದರು.

  • ಪ್ರಚಾರದ ವೇಳೆ ಕೇಜ್ರಿವಾಲ್ ಹೇಳಿದ ಭವಿಷ್ಯ ನಿಜವಾಯ್ತು

    ಪ್ರಚಾರದ ವೇಳೆ ಕೇಜ್ರಿವಾಲ್ ಹೇಳಿದ ಭವಿಷ್ಯ ನಿಜವಾಯ್ತು

    ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ದೆಹಲಿಯ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ನುಡಿದಿದ್ದ ಭವಿಷ್ಯ ನಿಜವಾಗಿದೆ.

    ಎನ್‍ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಕೆಳಗೆ ಗೃಹ ಸಚಿವರಾಗಿ ಅಮಿತ್ ಶಾ ನೇಮಕವಾಗುತ್ತಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು ಅಮಿತ್ ಶಾ ಅವರಿಗೆ ಗೃಹ ಖಾತೆಯನ್ನು ನೀಡಲಾಗಿದೆ. ಇದನ್ನೂ ಓದಿ: ಅಮಿತ್ ಶಾಗೆ ಗೃಹ, ಸೀತಾರಾಮನ್‍ಗೆ ಹಣಕಾಸು – ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? 

    ದಕ್ಷಿಣ ಗೋವಾದ ಮರ್ಮಗೋವಾದಲ್ಲಿ ಏಪ್ರಿಲ್ 14ರಂದು ನಡೆದ ಆಪ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಅವರು, ದೇಶದಲ್ಲಿ ಭಯಾನಕ ಆಟ ನಡೆಯುತ್ತಿದೆ. ನೀವು ಮತದಾನ ಮಾಡುವಾಗ ಈ ವಿಚಾರ ನಿಮಗೆ ತಿಳಿದಿರಲಿ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೃಹ ಸಚಿವರಾಗುತ್ತಾರೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಒಂದು ವೇಳೆ ಅಮಿತ್ ಶಾ ಅವರು ಗೃಹ ಸಚಿವರಾದರೆ ದೇಶದಲ್ಲಿ ಏನೆಲ್ಲ ಆಗಬಹುದು ಎಂದು ನೀವೇ ಯೋಚನೆ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದರು.

    ಪಶ್ಚಿಮ ಬಂಗಾಳದ ರಾಯ್‍ಗಂಜ್‍ನಲ್ಲಿ ನಡೆದಿದ್ದ ಬಿಜೆಪಿ ಪ್ರಚಾರದ ವೇಳೆ ಮಾತನಾಡಿದ್ದ ಅಮಿತ್ ಶಾ ಅವರು, ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್ ಸಿ) ನಡೆಸಲಾಗುವುದು. ದೇಶದ ಒಳಗಡೆ ನುಸುಳಿರುವ ಪ್ರತಿಯೊಬ್ಬರನ್ನೂ ಹೊರಕ್ಕೆ ದಬ್ಬುತ್ತೇವೆ. ಆದರೆ ಪಶ್ಚಿಮ ಬಂಗಾಳದಲ್ಲಿರುವ ವಲಸಿಗರು ಚಿಂತಿಸಬೇಕಿಲ್ಲ. ಬೌದ್ಧರು, ಹಿಂದೂಗಳು ಮತ್ತು ಸಿಖ್ಖರನ್ನು ಬಿಟ್ಟು ಉಳಿದೆಲ್ಲ ವಲಸಿಗರನ್ನು ದೇಶದಿಂದ ಹೊರಗೆ ಹಾಕಲಾಗುವುದು ಎಂದು ಹೇಳಿದ್ದಾರೆ. ದೇಶದಲ್ಲಿ ವಾಸಿಸುವ ಕ್ರಿಶ್ಚಿಯನ್, ಮುಸ್ಲಿಂ, ಪಾರ್ಸಿ, ಜೈನ್ ಧರ್ಮದವರು ಭಾರತದ ಒಳಗೆ ನುಸುಳಿ ಬಂದವರು ಎಂದು ಅಮಿತ್ ಶಾ ಭಾವಿಸಿದ್ದಾರೆ. ಇದು ಭಾರೀ ಅಪಾಯಕಾರಿ ಹೇಳಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.

    ಗೋವಾದಲ್ಲಿ 15 ಲಕ್ಷ ಜನರು ಮತ್ತು ಸುಮಾರು ಶೇ.40 ರಷ್ಟು ಮಂದಿ ಅಲ್ಪಸಂಖ್ಯಾತರಿದ್ದಾರೆ. ಅಮಿತ್ ಶಾ ಅವರು ಗೋವಾದಲ್ಲಿ ಹೇಗೆ ರಾಷ್ಟ್ರೀಯ ಪೌರತ್ವ ನೋಂದಣಿ ಅಳವಡಿಸಿಕೊಳ್ಳುತ್ತಾರೆ? ಆರು ಲಕ್ಷ ಜನರು ಏನು ಮಾಡಬೇಕು? ನೋಂದಣಿ ಪ್ರಕ್ರಿಯೆಯಿಂದ ಅಮಿತ್ ಶಾ ಅವರು ಗಲಭೆ ಸೃಷ್ಟಿಸುತ್ತಾರಾ ಎಂದು ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದರು.

    ದೆಹಲಿಯಲ್ಲಿ ಗುಜರಾತ್ ಮಾಡೆಲ್ ರಿಪೀಟ್ ಆಗಿದ್ದು, ನಂಬರ್ 1 ಸ್ಥಾನದಲ್ಲಿ ಮೋದಿಯವರು ಇದ್ದರೆ, ನಂಬರ್ 2 ಸ್ಥಾನದಲ್ಲಿ ಅಮಿತ್ ಶಾ ಇದ್ದಾರೆ. ಈ ಮೂಲಕ 2002ರ ಗುಜರಾತ್ ಸೀನ್ 2019ಕ್ಕೆ ದೆಹಲಿಯಲ್ಲಿ ರಿಪೀಟ್ ಆಗಿದ್ದು ರಾಜನಾಥ್ ಸಿಂಗ್ ಅವರು 3ನೇ ಸ್ಥಾನ ಪಡೆದಿದ್ದಾರೆ.

    ಅಮಿತ್ ಶಾ ಅವರಿಗೆ ಗೃಹ ಖಾತೆಯನ್ನು ಮೋದಿ ನೀಡಿದ್ದಾರೆ. ಈ ಹಿಂದೆ ಮೋದಿಯವರು ಗುಜರಾತ್ ನಲ್ಲಿ ಸಿಎಂ ಆಗಿದ್ದಾಗ ಅಮಿತ್ ಶಾ ಗೃಹಸಚಿವರಾಗಿದ್ದರು. ಕರ್ನಾಟಕದಿಂದ ಮಂತ್ರಿಯಾದ ನಿರ್ಮಲಾ ಸೀತಾರಾಮನ್ ಅವರಿಗೆ ಬಂಪರ್ ಆಫರ್ ಸಿಕ್ಕಿದ್ದು, ಅರುಣ್ ಜೇಟ್ಲಿ ನಿರ್ವಹಿಸುತ್ತಿದ್ದ ಹಣಕಾಸು ಖಾತೆ ದೊರಕಿದೆ. ಸೀತಾರಾಮನ್ ಅವರು ನಿರ್ವಹಿಸುತ್ತಿದ್ದ ರಕ್ಷಣಾ ಖಾತೆ ಈ ಬಾರಿ ರಾಜನಾಥ್ ಸಿಂಗ್ ಪಾಲಾಗಿದೆ.

  • ಚುನಾವಣೆ ನಡೆದಿದ್ದು ಮೋದಿ-ರಾಹುಲ್ ನಡುವೆ-ದೆಹಲಿಯಲ್ಲಿ ನಮ್ಮದೇ ಸರ್ಕಾರ

    ಚುನಾವಣೆ ನಡೆದಿದ್ದು ಮೋದಿ-ರಾಹುಲ್ ನಡುವೆ-ದೆಹಲಿಯಲ್ಲಿ ನಮ್ಮದೇ ಸರ್ಕಾರ

    ನವದೆಹಲಿ: ಲೋಕಸಭಾ ಚುನಾವಣೆ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ನಡೆದಿತ್ತು. ಆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಇರಲಿಲ್ಲ. ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ. ದೆಹಲಿಯಲ್ಲಿ ನಮ್ಮದೇ ಸರ್ಕಾರ ಇರಲಿದೆ ಎಂದು ಆಪ್ ಮುಖ್ಯಸ್ಥ, ಸಿಎಂ ಅರವಿಂದ್ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಆಪ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ಲೋಕಸಭಾ ಚುನಾವಣೆಯ ಫಲಿತಾಂಶ ನೋಡಿ ಯಾರು ನಿರಾಶರಾಗಬೇಕಿಲ್ಲ. ದೆಹಲಿಯ ಜನತೆ ನಮ್ಮ ಸರ್ಕಾರದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಹಾಗಾಗಿ ಎಲ್ಲರೂ ನಿಮ್ಮ ಕಾಲರ್ ಮೇಲೆ ಮಾಡಿಕೊಳ್ಳಿ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

    ಚುನಾವಣೆ ಸಮಯದಲ್ಲಿ ಜನರು ಇದು ರಾಹುಲ್ ಗಾಂಧಿ ಮತ್ತು ಮೋದಿ ನಡುವಿನ ದೊಡ್ಡ ಚುನಾವಣೆ. ಹಾಗಾಗಿ ಮೋದಿ ಹೆಸರು ನೋಡಿ ಮತ ಹಾಕುತ್ತಿದ್ದೇವೆ. ವಿಧಾನಸಭಾ ಚುನಾವಣೆಯಲ್ಲಿ ಆಪ್ ಗೆ ನಮ್ಮ ಮತ ಎಂದು ಹೇಳುತ್ತಿದ್ದರು. ದೆಹಲಿಯ ಜನತೆ ನಿಮ್ಮನ್ನು ಹೊಗಳುತ್ತಿರುವ ಸಂದರ್ಭದಲ್ಲಿ ಆಪ್ ಕಾರ್ಯಕರ್ತರು ನಿರಾಶೆಗೆ ಒಳಗಾಗಬಾರದು. ದೊಡ್ಡ ಚುನಾವಣೆ ಮುಗಿದಿದ್ದು, ಸಣ್ಣ ಚುನಾವಣೆ ಬಂದಿದೆ. ಹೆಸರು ನೋಡಿ ಅಲ್ಲ, ಕೆಲಸ ನೋಡಿ ಮತ ಹಾಕಬೇಕೆಂದು ಜನತೆಯಲ್ಲಿ ಎಲ್ಲ ಕಾರ್ಯಕರ್ತರು ಮನವಿ ಮಾಡಿಕೊಳ್ಳಿ ಎಂದು ಸೂಚಿಸಿದರು.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ದೆಹಲಿಯ ಎಲ್ಲ ಬಿಜೆಪಿ ಅಭ್ಯರ್ಥಿಗಳು ಶೇ.50ಕ್ಕಿಂತ ಹೆಚ್ಚು ಮತಗಳನ್ನು ಪಡೆದುಕೊಂಡಿರುವುದು ಮತ್ತೊಂದು ವಿಶೇಷ. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಪ್ ಶೂನ್ಯ ಫಲಿತಾಂಶ ದಾಖಲಿಸಿವೆ. ಕಾಂಗ್ರೆಸ್‍ನಿಂದ ಈಶಾನ್ಯ ದೆಹಲಿಯ ಕ್ಷೇತ್ರದಿಂದ ಕಣಕ್ಕಿಳಿದ್ದ ಮಾಜಿ ಸಿಎಂ ಶೀಲಾ ದೀಕ್ಷಿತ್ ಸಹ ಸೋಲು ಕಂಡಿದ್ದಾರೆ.

    https://www.youtube.com/watch?v=HHAaag6olJg

  • ನನ್ನ ಹತ್ಯೆಯನ್ನು ಮೋದಿಜೀ ಬಯಸುತ್ತಿದ್ದಾರೆ: ಅರವಿಂದ್ ಕೇಜ್ರಿವಾಲ್

    ನನ್ನ ಹತ್ಯೆಯನ್ನು ಮೋದಿಜೀ ಬಯಸುತ್ತಿದ್ದಾರೆ: ಅರವಿಂದ್ ಕೇಜ್ರಿವಾಲ್

    ನವದೆಹಲಿ: ನರೇಂದ್ರ ಮೋದಿಜೀ ಅವರು ನನ್ನನ್ನು ಕೊಲ್ಲಬೇಕು ಎಂದುಕೊಂಡಿದ್ದಾರೆ ಎಂದು ನವದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.

    ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಂತೆ ಬಿಜೆಪಿ ನನ್ನನ್ನೂ ಕೊಲ್ಲಬಹುದು ಎಂದು ಶನಿವಾರ ಅರವಿಂದ್ ಕೇಜ್ರಿವಾಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕ ವಿಜಯ್ ಗೋಯಲ್, “ದೆಹಲಿ ಸಿಎಂಗೆ ತಮ್ಮ ಭದ್ರತಾ ಸಿಬ್ಬಂದಿ ಮೇಲೆ ನಂಬಿಕೆ ಇಲ್ಲದಿದ್ದರೆ ಅವರು ಸ್ವತಃ ತಮ್ಮ ರಕ್ಷಣಾ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳಲಿ” ಎಂದು ಟ್ವೀಟ್ ಮಾಡಿದ್ದರು.

    ಅರವಿಂದ್ ಕೇಜ್ರಿವಾಲ್ ಅವರೇ ನೀವು ನಿಮ್ಮ ರಕ್ಷಣಾ ಸಿಬ್ಬಂದಿ ಮೇಲೆ ಅನುಮಾನಪಟ್ಟು ಇಡೀ ದೆಹಲಿ ಪೊಲೀಸರನ್ನು ಹಾಳು ಮಾಡಿದ್ದೀರಾ. ನಿಮಗೆ ಇಷ್ಟವಾದವರನ್ನೇ ರಕ್ಷಣಾ ಸಿಬ್ಬಂದಿ ಆಗಿ ಇಟ್ಟುಕೊಳ್ಳಿ. ನಿಮಗೆ ನನ್ನಿಂದ ಸಹಾಯವಾಗಬೇಕು ಎಂದು ಹೇಳಿ ಮಾಡುತ್ತೇವೆ. ನಾವು ನಿಮ್ಮ ಸುದೀರ್ಘ ಜೀವನವನ್ನು ಬಯಸುತ್ತೇವೆ ಎಂದು ವಿಜಯ್ ಗೋಯಲ್ ಟ್ವೀಟ್ ಮಾಡಿದ್ದರು.

    ಈ ಟ್ವೀಟ್‍ಗೆ ಅರವಿಂದ್ ಕೇಜ್ರಿವಾಲ್, ನನ್ನ ಹತ್ಯೆಯನ್ನು ರಕ್ಷಣಾ ಸಿಬ್ಬಂದಿ ಅಲ್ಲ, ಮೋದಿಜೀ ಅವರು ನನ್ನ ಹತ್ಯೆ ಮಾಡಬೇಕು ಎಂದು ಬಯಸುತ್ತಿದ್ದಾರೆ ಎಂದು ರೀ-ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

    ಕೇಜ್ರಿವಾಲ್ ಹೇಳಿದ್ದೇನು?
    ನಾನು ಹತ್ಯೆಯಾಗುತ್ತೇನೆ ಎಂಬ ಭಯ ಕಾಡುತ್ತಿದೆ. ನನ್ನ ವಾಹನದ ಹಿಂದೆ, ಮುಂದೆ ಸಾಗುತ್ತಿರುವ ಪೊಲೀಸ್ ಸಿಬ್ಬಂದಿ ನಮ್ಮ ಕಾರ್ಯ ಚಟುವಟಿಕೆಯ ಕುರಿತಾದ ವರದಿಯನ್ನು ಪ್ರಧಾನಿ ಮೋದಿ ಅವರಿಗೆ ನೀಡುತ್ತಾರೆ. ಅಷ್ಟೇ ಅಲ್ಲದೆ ಅಂಗರಕ್ಷಕರೂ ಕೂಡ ಮೋದಿಗೆ ನನ್ನ ಎಲ್ಲ ಮಾಹಿತಿಯನ್ನು ನೀಡುತ್ತಾರೆ. ಈ ಮೂಲಕ ನನ್ನ ಜೀವನವು ಕೇವಲ ಎರಡೇ ನಿಮಿಷದಲ್ಲಿ ಮುಗಿದು ಹೋಗುತ್ತದೆ ಎಂದು ಆರೋಪಿಸಿದ್ದರು.

  • ಇಂದಿರಾ ಗಾಂಧಿಯಂತೆ ಬಿಜೆಪಿ ನನ್ನನ್ನೂ ಕೊಲ್ಲಬಹುದು: ಕೇಜ್ರಿವಾಲ್

    ಇಂದಿರಾ ಗಾಂಧಿಯಂತೆ ಬಿಜೆಪಿ ನನ್ನನ್ನೂ ಕೊಲ್ಲಬಹುದು: ಕೇಜ್ರಿವಾಲ್

    ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಂತೆ ಬಿಜೆಪಿ ನನ್ನನ್ನೂ ಕೊಲ್ಲಬಹುದು ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಅವರು, ನಾನು ಹತ್ಯೆಯಾಗುತ್ತೇನೆ ಎಂಬ ಭಯ ಕಾಡುತ್ತಿದೆ. ನನ್ನ ರಕ್ಷಣೆಗೆ ಇರುವ ಭದ್ರತಾ ಸಿಬ್ಬಂದಿ (ಪಿಎಸ್‍ಒ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ.

    ನನ್ನ ವಾಹನದ ಹಿಂದೆ, ಮುಂದೆ ಸಾಗುತ್ತಿರುವ ಪೊಲೀಸ್ ಸಿಬ್ಬಂದಿ ನಮ್ಮ ಕಾರ್ಯ ಚಟುವಟಿಕೆಯ ಕುರಿತಾದ ವರದಿಯನ್ನು ಪ್ರಧಾನಿ ಮೋದಿ ಅವರಿಗೆ ನೀಡುತ್ತಾರೆ. ಅಷ್ಟೇ ಅಲ್ಲದೆ ಅಂಗರಕ್ಷಕರೂ ಕೂಡ ಮೋದಿಗೆ ನನ್ನ ಎಲ್ಲ ಮಾಹಿತಿಯನ್ನು ನೀಡುತ್ತಾರೆ. ಈ ಮೂಲಕ ನನ್ನ ಜೀವನವು ಕೇವಲ ಎರಡೇ ನಿಮಿಷದಲ್ಲಿ ಮುಗಿದು ಹೋಗುತ್ತದೆ ಎಂದು ತಿಳಿಸಿದರು.

    ಲೋಕಸಭಾ ಚುನಾವಣೆ ಕೊನೆಯ ಹಂತದ ಮತದಾನ ನಾಳೆ ನಡೆಯಲಿದೆ. ಈ ನಡುವೆ ಅರವಿಂದ್ ಕೇಜ್ರಿವಾಲ್ ಅವರು ನೀಡಿದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ದೆಹಲಿ ಸಿಎಂ ಹೇಳಿಕೆಗೆ ಬಿಜೆಪಿ ಹಾಗೂ ಮೋದಿ ಅಭಿಮಾನಿಗಳು ಖಂಡನೆ ವ್ಯಕ್ತಪಡಿಸಿದ್ದಾರೆ.

  • ಎಂಪಿ ಟಿಕೆಟ್ ನೀಡಲು 6 ಕೋಟಿ ಪಡೆದ್ರು ಕೇಜ್ರಿವಾಲ್: ಆಪ್ ಅಭ್ಯರ್ಥಿ ಪುತ್ರನಿಂದ ಆರೋಪ

    ಎಂಪಿ ಟಿಕೆಟ್ ನೀಡಲು 6 ಕೋಟಿ ಪಡೆದ್ರು ಕೇಜ್ರಿವಾಲ್: ಆಪ್ ಅಭ್ಯರ್ಥಿ ಪುತ್ರನಿಂದ ಆರೋಪ

    ನವದೆಹಲಿ: ಪಶ್ಚಿಮ ದೆಹಲಿ ಲೋಕಸಭಾ ಟಿಕೆಟ್‍ಗಾಗಿ ನನ್ನ ತಂದೆ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿ (ಎಎಪಿ)ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ 6 ಕೋಟಿ ರೂ. ನೀಡಿದ್ದಾರೆ ಎಂದು ಎಎಪಿ ಅಭ್ಯರ್ಥಿ ಪುತ್ರ ದೂರಿದ್ದಾರೆ.

    ಈ ಆರೋಪವನ್ನು ಪಶ್ಚಿಮ ದೆಹಲಿ ಕ್ಷೇತ್ರದ ಎಎಪಿ ಅಭ್ಯರ್ಥಿ ಬಲ್‍ಬೀರ್ ಸಿಂಗ್ ಜಾಖರ್ ಅವರ ಪುತ್ರ ಉದಯ್ ಮಾಡಿದ್ದಾರೆ. ದೆಹಲಿ ಲೋಕಸಭಾ ಕ್ಷೇತ್ರಗಳ ಮತದಾನವು ಭಾನುವಾರ ನಡೆಯಲಿದೆ. ಚುನಾವಣಾ ಅಭ್ಯರ್ಥಿಯ ಪುತ್ರನೇ ಈ ಆರೋಪ ಮಾಡಿದ್ದು, ರಾಷ್ಟ್ರ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ನನ್ನ ತಂದೆ ಇತ್ತೀಚೆಗೆ ರಾಜಕೀಯ ಪ್ರವೇಶ ಮಾಡಿದ್ದಾರೆ. ಆಗ ಅರವಿಂದ್ ಕೇಜ್ರಿವಾಲ್ ಅವರಿಗೆ ನನ್ನ ತಂದೆ 6 ಕೋಟಿ ರೂ. ಪಾವತಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳು ನನ್ನ ಬಳಿ ಇವೆ ಎಂದು ಉದಯ್ ತಿಳಿಸಿದ್ದಾರೆ.

    ಹಣವನ್ನು ನೇರವಾಗಿ ಅರವಿಂದ್ ಕೇಜ್ರಿವಾಲ್ ಹಾಗೂ ಗೋಪಾಲ್ ರಾಯ್ ಅವರಿಗೆ ನೀಡಲಾಗಿದೆ. ಈ ವಿಚಾರ ಪ್ರಸಾರವಾದ ಬಳಿಕ ನನ್ನನ್ನು ಮನೆಯೊಳಗೆ ಇರುಲು ಬಿಡುತ್ತಾರೋ ಇಲ್ಲವೋ ಗೊತ್ತಿಲ್ಲ. ಈ ಮಾಹಿತಿಯನ್ನು ದೇಶದ ಜನರ ಮುಂದೆ ಹೇಳಿಕೊಳ್ಳಬೇಕಾಗಿರುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.

    ಲೋಕಸಭಾ ಚುನಾವಣಾ ಟಿಕೆಟ್ ಅಷ್ಟೇ ಅಲ್ಲ, ವಿವಿಧ ಚುನಾವಣೆ ವೇಳೆಯೂ ಅಭ್ಯರ್ಥಿಗಳಿಂದ ಹಣ ಪಡೆಯಲಾಗುತ್ತಿದೆ. ಭ್ರಷ್ಟಚಾರ ವಿರುದ್ಧ ಬಂದ ಪಕ್ಷವೇ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದರು.

    ಬಲ್‍ಬೀರ್ ಸಿಂಗ್ ಜಾಖರ್ ಅವರು ಪುತ್ರ ಉದಲ್ ಆರೋಪವನ್ನು ತಳ್ಳಿ ಹಾಕಿದ್ದಾರೆ. ಉದಯ್ ನನ್ನ ಜೊತೆಗೆ ವಾಸಿಸುತ್ತಿಲ್ಲ. ನಾನು ಅಭ್ಯರ್ಥಿಯಾಗುವ ಕುರಿತು ಯಾವತ್ತೂ ಆತನ ಜೊತೆಗೆ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.